ಪಬ್ಲಿಕ್ ಟಿವಿಯ ಡಬ್ಬಿಂಗ್ ಚರ್ಚೆ, ಅನಕೃ, ಭೈರಪ್ಪ ಮತ್ತು ಸಂಸ್ಕೃತಿಯ ಹುಸಿರಕ್ಷಣೆ

– ಆನಂದ್ ಅಶ್ವಿನಿ

ಕಳೆದ ಭಾನುವಾರ ಪಬ್ಲಿಕ್ ಟಿವಿಯ “ಬೆಂಕಿ-ಬಿರುಗಾಳಿ” ಸಂವಾದ ಕಾರ್ಯಕ್ರಮದಲ್ಲಿ ನಡೆದ ಡಬ್ಬಿಂಗ್ ಪರ-ವಿರೋಧದ ಚರ್ಚೆ ಅಂದುಕೊಂಡ ಮಟ್ಟಿಗೆ ವಾದಮಂಡನೆಗೆ ಪರ ವಿರೋಧ ಎರಡೂ ನೆಲೆಯ ಕಟಕಟೆಯಲ್ಲಿ ನಿಂತಿದ್ದವರಿಗೆ ಸಾಧ್ಯವಾಗದೇ ಇದ್ದುದು ಬೇಸರದ ಸಂಗತಿ. ಪಬ್ಲಿಕ್ ಟಿವಿಯಲ್ಲಿ ನೇರಪ್ರಸಾರವಾದ ಈ ಸಂವಾದವನ್ನು ಟೀವಿಯಲ್ಲಿ ನೋಡಿದಮೇಲೆ ಒಂದು ಆರೋಗ್ಯಕರ ಚರ್ಚೆಯಲ್ಲಿ ಪಾಲ್ಗೊಳ್ಳಲೂ ಸಹ ಇವತ್ತಿನ ಸಿನಿಮಾಮಂದಿ ತಕ್ಕಷ್ಟು ತಯಾರಿಯಿಲ್ಲದೆ ಕನ್ನಡ, ಸಂಸ್ಕೃತಿ, ನಾಡು, ನೆಲ ಹೋರಾಟದಂತಹ ಎಮೋಷನಲ್ ಟ್ರಿಗರ್‌ಗಳನ್ನು ಒತ್ತಿಕೊಂಡು ಸಮಯ ವ್ಯರ್ಥ ಮಾಡಿದ್ದು, ದೊಡ್ಡ ಮಟ್ಟದಲ್ಲಿ ಕೂಗೆದ್ದಿರುವ ಡಬ್ಬಿಂಗ್ ಪರ ವಾದಮಂಡನೆಗಿಳಿದ ಪತ್ರಕರ್ತ ದಿನೇಶ್ ಕುಮಾರ್ ಮೇಲೆ ವೈಯಕ್ತಿಕ ವ್ಯಂಗ್ಯದಂತಹ ಮೊಂಡು ಬಾಣಗಳನ್ನು ಪ್ರಯೋಗಿಸುವಷ್ಟರ ಮಟ್ಟಿಗೆ ಸಿನಿಮಾಮಂದಿ ಹತಾಶರಾಗಿದ್ದುದು ಗೊಂದಲದ ಗೂಡಾಗಿದ್ದ ಕಾರ್ಯಕ್ರಮದಲ್ಲಿ ಎದ್ದು ಕಂಡು ಬಂತು.

ಡಬ್ಬಿಂಗ್ ವಿರೋಧಕ್ಕೆ ತಮ್ಮ ಸಮರ್ಥನೆಗಳನ್ನು ನೀಡಲು ಕನ್ನಡ ಸಿನಿಮಾಕ್ಷೇತ್ರದಿಂದ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್, ಡಾ, ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾರಾ. ಗೋವಿಂದ್, ನಾಯಕನಟ ಪ್ರೇಮ್ ಕಟಕಟೆಯಲ್ಲಿ ನಿಂತಿದ್ದರೆ ಇನ್ನೊಂದು ಬದಿಯಲ್ಲಿ ಡಬ್ಬಿಂಗ್ ಪರ ವಾದಮಂಡನೆಗೆ ಪತ್ರಕರ್ತ ದಿನೇಶ್ ಕುಮಾರ್ ತಮ್ಮ ಮೊನಚಾದ ಹಾಗೂ ತರ್ಕ ಆಧಾರಿತ ಮಂಡನೆಗಳ ಕೂರಂಬುಗಳನ್ನು ಒಬ್ಬೊಂಟಿಯಾಗಿಯೇ ಅವರತ್ತ ಬೀಸುತ್ತಿದ್ದುದು ಕಂಡು ಬಂತು. ಅಷ್ಟೋ ಇಷ್ಟೋ ಚರ್ಚೆಯಾದ ವಿಷಯದ ಸಂವಾದ ಕಾರ್ಯಕ್ರಮದಲ್ಲಿ ಡಬ್ಬಿಂಗ್ ಪರ ಕನ್ನಡ ಕಾರ್ಯಕರ್ತರು ಮತ್ತು ಡಬ್ಬಿಂಗ್ ವಿರೋಧಿ ಶಿವರಾಜಕುಮಾರ್ ಅಭಿಮಾನಿ ಸಂಘದ ಕಾರ್ಯಕರ್ತರ ನಡುವಿನ ಮಾತಿನ ಚಕಮಕಿಯ ರಭಸದಲ್ಲಿ ಚರ್ಚೆ ದಾರಿ ತಪ್ಪಿತು. ಬೌದ್ಧಿಕ ಸಂವಾದದ ಹೊಳಹುಗಳಲ್ಲಿ ಡಬ್ಬಿಂಗ್‌ನ ಅವಶ್ಯಕತೆ ಮತ್ತು ಅನವಶ್ಯಕತೆಗಳ ಬಗ್ಗೆ ಬೆಳಕು ಚೆಲ್ಲಬಹುದಾಗಿದ್ದ ಈ ಬೆಂಕಿ-ಬಿರುಗಾಳಿ ಕಾರ್ಯಕ್ರಮದ ಉದ್ದೇಶ ಸಫಲವಾಗಲಿಲ್ಲವಾದರೂ ಇಷ್ಟರವರೆಗೆ ತಾವು ಆಡಿದ್ದೇ ಮಾತು ಮಾಡಿದ್ದೇ ಸಿನಿಮಾ ಎಂಬಂತೆ ವರ್ತಿಸುತ್ತಿದ್ದ ಸಿನಿಮಾಮಂದಿಯ ಅಹಂಗೆ ಡಬ್ಬಿಂಗ್ ಪರ ಇರುವ ದನಿಗಳ ಅಗಾಧ ವಿಸ್ತಾರದ ಸಮಾನಮನಸ್ಕರು ಸರಿಯಾದ ಕೊಡಲಿಪೆಟ್ಟನ್ನೇ ನೀಡಿರುವುದು ಸ್ವಾಗತಾರ್ಹವಾದ ಸಂಗತಿ.

ಚಿತ್ರರಂಗದ ಪ್ರತಿನಿಧಿಗಳು ತಮ್ಮ ವಾದಮಂಡನೆಯಲ್ಲಿ ಬಳಸಿದ ಬಹಳಷ್ಟು ವಿಷಯಗಳು ಅವರ ವಿರುದ್ಧವೇ ತಿರುಗುಬಾಣವಾಗುವಷ್ಟು ಪೇಲವವೂ ತಳಹದಿಯಿಲ್ಲವೂ ಆಗಿದ್ದುದು ಸಿನಿಮಾಮಂದಿಯ ಯೋಚನಾಗಡಿಗೆ ಬಿದ್ದಿರುವ ಕಟ್ಟುಪಾಡುಗಳ ದ್ಯೋತಕ. ಇಲ್ಲಿ ಸಿನಿಮಾ ವಲಯದವರು ಎತ್ತಿದ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುವುದಾದರೆ ಮೊದಲಿಗೆ ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್ ವಾದ ಮಂಡಿಸುತ್ತ ಡಬ್ಬಿಂಗ್ ವಿರೋಧ ಅ.ನ.ಕೃಷ್ಣರಾಯರಂತಹ ಸಾಹಿತ್ಯಿಕ ಹಿರಿಯರ ಪ್ರತಿರೋಧಗಳನ್ನು, ಭೈರಪ್ಪನವರ ಇತ್ತೀಚೆಗಿನ ವಿರೋಧವನ್ನೂ ಮುಂದು ಮಾಡುತ್ತಾರೆ. ಸಂಸ್ಸೃತಿಗೆ ಆಗುವ ಧಕ್ಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ, ಆಗಿನ ಶೈಶವಾವಸ್ಥೆಯ ಚಿತ್ರರಂಗಕ್ಕೆ ಬೇಕಾದ ಫೀಡಿಂಗ್ ಬಾಟಲಿಯ ಪೋಷಣೆಯ ಅವಶ್ಯಕತೆಗೆ ಪೂರಕವಾಗಿ ಖಂಡಿತವಾಗಿಯೂ ಡಬ್ಬಿಂಗ್ ನಿಷೇಧ ಆ ಕಾಲಕ್ಕೆ ಒಪ್ಪಬೇಕಾದ ವಿಷಯವೇ ಸರಿ. ಮಗು ಬೆಳೆದು ದೊಡ್ಡದಾಗಿ 45ರ ವಯಸ್ಸಿನಲ್ಲಿರುವಾಗಲೂ ಅದೇ ಫೀಡಿಂಗ್ ಬಾಟಲಿಯನ್ನು ಬಾಯಲ್ಲಿಟ್ಟುಕೊಂಡು ಚೀಪುತ್ತ ತಿರುಗಬೇಕೆನ್ನುವ ವಾದ ನಗೆಪಾಟಲಿನ ಸಂಗತಿ ಎಂದು ದಿನೇಶ್ ಕುಮಾರ್ ಕುಟುಕಿದ್ದರಲ್ಲೂ ಅರ್ಥವಿತ್ತು.

ಇನ್ನೊಂದು ಸಂಗತಿ ಇಲ್ಲಿ ಸ್ಪಷ್ಟಪಡಿಸುವುದಾದರೆ ಇವತ್ತಿನ ಯಾವುದೇ ಕನ್ನಡ ಸಿನಿಮಾಪತ್ರಿಕೆಗಳನ್ನೋ, ಶುಕ್ರವಾರದ ಸಿನಿಮಾ ಪುರವಣಿಗಳನ್ನೋ, ಚಲನಚಿತ್ರ ಜಾಹಿರಾತುಗಳನ್ನೋ ನೋಡಿದರೆ ಅದರಲ್ಲಿ ಬಳಸಲಾದ ನಾಯಕಿಯರ ಮೈಮೇಲೆ ಒಂದೆಳೆಯ ಬಟ್ಟೆ ಮಾತ್ರವಿರುತ್ತದೆ. ಮನೆಮನಂದಿಯೆದುರು ಸಿನಿಮಾ ಪುರವಣಿಗಳನ್ನು ತೆರೆದು ನೋಡಲೇ ಮಜುಗರವೆನ್ನಿವಷ್ಟು ನಾಯಕಿಯರ ಅಂಗಾಂಗಪ್ರದರ್ಶನದ ಫೋಟೋಗಳು ಅದರೊಳಗೆ ತುಂಬಿ ತುಳುಕುತ್ತಿರುತ್ತವೆ, ಕನ್ನಡ ಚಿತ್ರಗಳಲ್ಲೂ ಬಿಕಿನಿ, ಟೂಪೀಸ್‌ಗಳ ಹಾಡುಗಳ ಪರಂಪರೆ ಶುರುವಾಗಿ ಯಾವುದೋ ಕಾಲವಾಗಿದೆ. ಅನಕೃ, ಭೈರಪ್ಪ, ಪ್ರೊ. ಜಿ.ಎಸ್.ಎಸ್ ಎಲ್ಲರೂ 40 ವರ್ಷಗಳಷ್ಟು ಹಿಂದೆಯೇ ಡಬ್ಬಿಂಗನ್ನು ವಿರೋಧಿಸಿ ಪ್ರತಿಪಾದಿಸಿದ್ದು ಬಿಕಿನಿ, ಟೂಪೀಸ್, ಅಂಗಾಂಗ ಪ್ರದರ್ಶನ, ಮಚ್ಚು ಲಾಂಗು, ಡವ್ವು, ಮಚ್ಚಾ, ಪೊಕರಿ ಥರದ ಸಂಸ್ಸೃತಿಯನ್ನಾ? ಎಂ.ಎಸ್. ರಮೇಶರೇ ಇತ್ತೀಚಿನ ತಮ್ಮ ಫ್ಲಾಪ್ ಚಿತ್ರ “ಶಂಕರ್ ಐ.ಪಿ.ಎಸ್”ನಲ್ಲಿ ನಾಯಕ ದುನಿಯಾ ವಿಜಯ್ ಗೆ ಬರಿಯ ಚಡ್ಡಿ ಹಾಕಿಸಿ, ನಟಿ ರಾಗಿಣಿಗೆ ಒಂದು ಶರ್ಟ್ ಮಾತ್ರ ತೊಡಿಸಿ ಮಾರಿಷಸ್ ಬೀಚಿನಲ್ಲಿ ಚಿತ್ರೀಕರಿಸಿದ ಕಾಮೋದ್ರೇಕಕಾರಿ ಹಾಡು ಕನ್ನಡ ಸಂಸ್ಕೃತಿಯೇ? ತಮಿಳಿನ ಬಿಚ್ಚುಗಾತಿಯೆಂದೇ ಹೆಸರಾದ ನಮಿತಾ ಎಂಬ ನಟಿಯ “ಬೆಂಕಿ ಬಿರುಗಾಳಿ” ಚಿತ್ರದ ಜಾಹಿರಾತಿನಲ್ಲಿ ಖ್ಯಾತ ನಿದೇಶಕರೊಬ್ಬರ ನಾಯಕಿಪುತ್ರಿಯೊಬ್ಬಾಕೆ ಮೈಮೇಲೆ ಒಂದೂ ನೂಲೂ ಇಲ್ಲದೆ ಮೈತುಂಬ ಕೆಸರು ಬಳಿದುಕೊಂಡು ಫೋಸು ಕೊಟ್ಟಿದ್ದರು. ಇದೇ ನಟಿಯ “ಕಂಠೀರವ” ಚಿತ್ರಕ್ಕೂ ಆಕೆ ಬಿಕಿನಿ ಉಡುಗೆ ತೊಟ್ಟಿದ್ದು, ಪೂಜಾಗಾಂಧಿಯೆಂಬ ಆಮದುನಟಿ ಸೊಂಟದಿಂದ ಮೇಲೆ ಬಟ್ಟೆ ಧರಿಸದೆ “ದಂಡುಪಾಳ್ಯ” ಚಿತ್ರದ ಜಾಹಿರಾತುಗಳಲ್ಲಿ ಫೋಸು ಕೊಟ್ಟಿದ್ದು… ಇತ್ತೀಚೆಗಿನ ಕಠಾರಿವೀರ ಚಿತ್ರವನ್ನು ಇಲ್ಲಿನ ಕಾರ್ಮಿಕರನ್ನು ಬಳಸದೆ ಸಂಪೂರ್ಣವಾಗಿ ಆಂಧ್ರಪ್ರದೇಶದಲ್ಲಿ ಚಿತ್ರೀಕರಿಸಿದ್ದು, ಇದನ್ನು ಮಾಡಿಕೊಂಡು ಕನ್ನಡ ಚಲನಚಿತ್ರರಂಗವನ್ನು ಉದ್ದಾರ ಮಾಡಿ ಎಂದು ಅನಕೃ, ಭೈರಪ್ಪ, ಪ್ರೊ.ಜಿಎಸ್ಸೆಸ್ ಏನಾದರೂ ಸಿನಿಮಾಮಂದಿಗೆ ಹೇಳಿದ್ದರೇ?

ಪರಭಾಷಾ ವ್ಯಾಮೋಹದ ಬಗ್ಗೆ ಪರಭಾಷೆಯ ನೆರೆರಾಜ್ಯಗಳ ಡಬ್ಬಿಂಗ್ ಆಕ್ರಮಣದ ಬಗ್ಗೆ ಭಾಷಣ ಹೊಡೆಯುವವರು ಡಬ್ಬಿಂಗ್ ಬೇಕು ಎನ್ನುವರು ಪರಭಾಷಾ ವ್ಯಾಮೋಹಿಗಳು ಎಂದು ಕಾರ್ಯಕ್ರಮದಲ್ಲಿ ಫರ್ಮಾನು ಹೊರಡಿಸಿದರು. ಪರಭಾಷೆಯ ವ್ಯಾಮೋಹವಿರುವುದು ಸಿನಿಮಾ ನೋಡುವ ಕನ್ನಡಿಗರಿಗೋ ಅಥವಾ ಕನ್ನಡ ಸಿನಿಮಾಮಂದಿಗೋ ಎಂಬ ಕುರಿತು ಇಲ್ಲೊಂದಿಷ್ಟು ಸಾಕ್ಷ್ಯಗಳಿವೆ. ನಿರ್ದೇಶಕರ ಸಂಘದ ಅಧ್ಯಕ್ಷ ಎಮ್.ಎಸ್. ರಮೇಶರ ಮೊದಲ ನಿರ್ದೇಶನದ ಫ್ಲಾಪ್ ಚಿತ್ರ “ಶ್ರೀರಾಂ” ತೆಲುಗಿನ “ಇಂದ್ರ” ಚಿತ್ರದ ಸ್ಫೂರ್ತಿಯಿಂದ ತೆಗೆದದ್ದು. ಚಿತ್ರದ ಇಬ್ಬರೂ ನಾಯಕಿಯರು ತಮಿಳಿನವರು, ಇದೇ ನಿರ್ದೇಶಕರು ನಿರ್ದೇಶಿಸಿದ ವಾಲ್ಮೀಕಿ ಚಿತ್ರದ ನಾಯಕಿ ಹಿಂದಿಯಾಕೆ, ಕಾರ್ಯಕ್ರಮದಲ್ಲಿ ತೋಳೇರಿಸಿಕೊಂಡು ಕನ್ನಡ ಸಂಸ್ಕೃತಿ, ಸಿನಿಮಾ ಬಗ್ಗೆ ಕೂಗಾಡುತ್ತಿದ್ದ ಗೀತರಚನೆಕಾರ ನಾಗೇಂದ್ರಪ್ರಸಾದ್ ನಿದೇಶಿಸಿದ ಮೊದಲ ಚಿತ್ರ “ನಲ್ಲ” ತಮಿಳಿನ “ಮೂನ್ರಾಂಪಿರೈ” ಸ್ಪೂರ್ತಿಯಿಂದ ತೆಗೆದದ್ದು, ಅದರ ನಾಯಕಿಯೂ ತಮಿಳಿನಾಕೆ. ಎರಡನೆಯ ಫ್ಲಾಫ್ ಚಿತ್ರ “ಮೇಘವೇ ಮೇಘವೇ” ಚಿತ್ರದ ನಾಯಕಿ ಹಿಂದಿಯಾಕೆ. ನಾಯಕ ಪ್ರೇಮ್ ರ ಮೊದಲ ಚಿತ್ರದ ನಾಯಕಿಯೇ ತಮಿಳಿನಾಕೆ, ಹೊಂಗನಸು ಚಿತ್ರದ ಇಬ್ಬರು ನಾಯಕಿಯರೂ ತಮಿಳಿನವರು, ರಾಜೇಂದ್ರಸಿಂಗ್ ಬಾಬುರವರು ತಮ್ಮ ಮಗನ ಮೊದಲ ಫ್ಲಾಪ್ ಚಿತ್ರ “ಲವ್” (ಶೀರ್ಷಿಕೆಯೇ ಆಂಗ್ಲ) ಸಂಗೀತ ನಿರ್ದೇಶನಕ್ಕಾಗಿ ಬಳಸಿದ್ದು ಹಿಂದಿಯ ಅನ್ನುಮಲ್ಲಿಕ್‌ರನ್ನು. ತನ್ಮಚಿತ್ರ ಪ್ರೊಡಕ್ಷನ್ನ ಮಾಲೀಕರಾದ ಸಾರಾ ಗೋವಿಂದು ಹಾಲಿವುಡ್‌ನ “ಡ್ಯೂಯಲ್”ನಿಂದ ಪ್ರೇರಿತವಾಗಿ ನಿರ್ಮಿಸಿದ ಫ್ಲಾಪ್ ಚಿತ್ರ “ಮಿಂಚಿನ ಓಟ” ಚಿತ್ರದ ಖಳನಾಯಕ ಹಿಂದಿಯವ. ಇನ್ನೊಂದು ಫ್ಲಾಪ್ ಚಿತ್ರ ಲಾಲಿಹಾಡು ಚಿತ್ರದ ನಾಯಕಿ ಮಲಯಾಳಂ ನಟಿ. ರವಿಚಂದ್ರನ್ ಹಾಕಿಕೊಂಡು ನಿರ್ಮಿಸಿದ “ಕನಸುಗಾರ” ತಮಿಳಿನ ರಿಮೇಕು, ಡಬ್ಬಿಂಗ್ ವಿರುದ್ಧ ತೊಡೆತಟ್ಟಿದ ಶಿವರಾಜಕುಮಾರ್‌ರವರ ಇತ್ತೀಚಿಗಿನ ಚಿತ್ರದ ಹೆಸರು “ಅಂದರ್ ಬಾಹರ್” (ಅಪ್ಪಟ ಕನ್ನಡ ಸೊಗಡಿನ ಶೀರ್ಷಿಕೆ!). ಹೀರೋಯಿನ್ ಮಲಯಾಳಂನಾಕೆ. ಇಲ್ಲಿ ಪರಭಾಷಾ ವ್ಯಾಮೋಹ, ಪರಭಾಷಾ ನಾಯಕಿಯರ ವ್ಯಾಮೋಹ ಯಾರದ್ದು? ಸಿನಿಮಾ ಮಂದಿಯದ್ದಾ? ಅಥವಾ ಕನ್ನಡ ಸಿನಿಮಾ ನೋಡುಗನದ್ದಾ ?

ಡಬ್ಬಿಂಗ್ ಸಿನಿಮಾಗಳು ಬಂದರೆ ಅಲ್ಲಿನ ಸಂಸ್ಕೃತಿ ಇಲ್ಲಿಗೆ ಒಗ್ಗುವುದಿಲ್ಲ ಎಂಬುದಕ್ಕೆ ಎಂ.ಎಸ್. ರಮೇಶರು ತಮಿಳುನಾಡಿನ ಗ್ರಾಮೀಣಭಾಗದ ಜಾತಿ ವೈಷಮ್ಯದ ನೈಜಕಥೆ ಆಧರಿಸಿದ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ತಮಿಳಿನ “ಪರುತ್ತಿ ವೀರನ್” ಚಿತ್ರದ ಕ್ಲೈಮಾಕ್ಸ್‌ನಲ್ಲಿನ ಅತ್ಯಾಚಾರದ ಸನ್ನಿವೇಶವನ್ನು ಉದಾಹರಿಸುತ್ತಾರೆ. “ಸಾಕು ಬಿಡ್ರೋ, ನೋಯ್ತಾ ಇದೆ ಕಣ್ರೋ” ಎನ್ನುವ ಪದಗಳನ್ನು ಇಲ್ಲಿ ನಾವು ಡೈಲಾಗ್ ರೈಟರುಗಳು ಬರೆಲಾಗುತ್ತದೆಯೇ? ಇಲ್ಲಿನ ನೆಲಕ್ಕೆ ಅದು ಸೂಕ್ತವೇ? ಎನ್ನುತ್ತಾರೆ. ತೆಲುಗಿನ ಇಂದ್ರ, ತಮಿಳಿನ ಮೂನ್ರಾಂಪಿರೈ, ಹಾಲಿವುಡ್ಡಿನ ಡ್ಯೂಯಲ್, ಇತ್ತೀಚೆಗೆ ತಾನೇ ತೆರೆಕಂಡು ಮಕಾಡೆಬಿದ್ದ ಈ ನೆಲದ ಕಾನೂನಿಗೆ ಸಂಬಂಧವೇ ಪಡದ ದಶಮುಖ ಚಿತ್ರಗಳಿಗೆ ಡೈಲಾಗು ಬರೆದವರು ಕನ್ನಡದ ಸಿನಿಮಾಮಂದಿಯೇ ಅಲ್ಲವೇ ರಮೇಶರೇ? ತಮಿಳು ಚಿತ್ರನಾಯಕರ ಮೀಸೆ ಗಡ್ಡ, ಪೇಟ-ಪಂಚೆ, ಸಾರೋಟು-ಕುದುರೆಗಳ ಬಣ್ಣಗಳ ಸಮೇತ ರಿಮೇಕು ಮಾಡಿದ ಕನ್ನಡ ಚಿತ್ರಗಳಿಗೆ ಡೈಲಾಗು ಬರೆಯುವಾಗ ಎಂ.ಎಸ್. ರಮೇಶರಿಗೆ ಈ ಪ್ರಜ್ಞೆ ಎಲ್ಲಿ ಮಾಯವಾಗಿತ್ತು? ಎಂಬ ಪ್ರಶ್ನೆಯನ್ನು ಇಲ್ಲಿ ಕೇಳಬೇಕಿದೆ.

ಡಬ್ಬಿಂಗ್ ಮದ್ಯಪಾನಕ್ಕೆ ಸಮ, ಅದರಿಂದ ಒಂದು ರಾಜ್ಯದ ಸಿನಿಮಾ ಕ್ಷೇತ್ರದ ಆರೋಗ್ಯ ಹದಗೆಡುತ್ತದೆ, ಡಬ್ಬಿಂಗ್ ಎನ್ನುವುದು ಪಿಶಾಚಿ ಅದು ಎಲ್ಲರನ್ನೂ ಹಾಳು ಮಾಡುತ್ತದೆ, ಕಾರ್ಮಿಕರಿಗೆ ಕೆಲಸ ಕಳೆಯುತ್ತದೆ, ಕನ್ನಡಭಾಷೆಯ ಒಟ್ಟಂದ ಹಾಳಾಗುತ್ತದೆ ಎಂದು ಡಬ್ಬಿಂಗಿನ ಕುರಿತು ಸಾಲುಸಾಲು ಆರೋಪಗಳನ್ನು ಕಾರ್ಯಕ್ರಮದಲ್ಲಿ ಡಬ್ಬಿಂಗ್ ಪರವಿದ್ದವರು ಮಾಡಿದರು. ಇವೆಲ್ಲವೂ ನಿಜವೇ, ಮತ್ತು ಡಬ್ಬಿಂಗ್ ಸಂಸ್ಕೃತಿ ಇನ್ನೊಂದು ನೆಲದ ಸಂಸ್ಕೃತಿಯನ್ನು ಕೊಂದು ಹಾಕುತ್ತದೆ ಎಂದಾದಲ್ಲಿ, ಕನ್ನಡದ ಉಪೇಂದ್ರ ನಟಿಸಿದ ಮಸ್ತಿ, ಸೂಪರ್ ಸೇರಿದಂತೆ ಬಹಳಷ್ಟು ನಟರ ಚಿತ್ರಗಳನ್ನು ತೆಲುಗು, ಮಲಯಾಳಂ, ಹಿಂದಿ, ತಮಿಳಿಗೆ ಈ ಮಂದಿಯೇಕೆ ಡಬ್ಬಿಂಗ್ ಮಾಡುತ್ತಿದ್ದಾರೆ? ಕನ್ನಡ ಚಿತ್ರರಂಗದವರು ತೆಲುಗು ತಮಿಳು ಮಲಯಾಳಂ ಚಿತ್ರರಂಗದ ಸಂಸ್ಕೃತಿಯನ್ನು ಕೊಲ್ಲಬಹುದೇ? ಅಲ್ಲಿನ ಕಾರ್ಮಿಕರ ಕೆಲಸವನ್ನು ಕಳೆಯಬಹುದೇ? ಅಲ್ಲಿನ ನೇಟಿವಿಟಿಗೆ ಅಪಾಯ ತಂದೊಡ್ಡಬಹುದೇ? ಡಬ್ಬಿಂಗ್ ಅನ್ನುವುದೇ ಹೆಂಡಕುಡಿಯುವುದಕ್ಕೆ ಸಮವೆಂದು ಹೇಳುವ ಮಂದಿಯೇ ಇತರೆ ರಾಜ್ಯಗಳಿಗೆ ತಮ್ಮ ಭಾಷೆಯ ಚಿತ್ರಗಳ ಡಬ್ಬಿಂಗ್ ಹೆಂಡವನ್ನು ಕುಡಿಸಬಹುದೇ? ಈ ಡಬಲ್ ಸ್ಟಾಂಡರ್ಡ್ ಯಾವ ರೀತಿ ಸಮರ್ಥನೀಯ? ಈ ಸಲದ ರಾಜ್ಯ ಪ್ರಶಸ್ತಿ ವಿಜೇತ ಚಿತ್ರ “ಸೂಪರ್”ನಲ್ಲಿ ನಟಿಸಿದ್ದ ಪರಭಾಷೆಯ ನಟನಟಿಯರ ಪಟ್ಟಿ ನೋಡಿದರೆ ಮಲಯಾಳಂನ ನಯನತಾರಾ ನಾಯಕಿ, ತೆಲುಗಿನ ಹಾಸ್ಯನಟರಾದ ಆಲಿ ಮತ್ತು ವೇಣು, ವಿಲನ್ ಆಗಿ ತಮಿಳಿನ ಕಾದಲ್‌ಸತ್ಯವೇಲು.. ಪಟ್ಟಿ ಮುಂದುವರೆಯುತ್ತದೆ.. ಯಾರ ಸಂಸ್ಕೃತಿಯನ್ನು ರಕ್ಷಣೆ ಮಾಡಲಿಕ್ಕೆ ತೆಲುಗು ಮಲಯಾಳಂ ಮಿಶ್ರಿತ ಈ ಸ್ಯಾಂಡ್ವಿಚ್ ತಾರಾಗಣ? ಜೇಮ್ಸ್ ಬಾಂಡ್, ಅರ್ನಾಲ್ಡ್ ಸ್ಕಾರ್ಜ್ನೆಗ್ಗರ್ ಬಾಯಲ್ಲಿ ಕನ್ನಡ ಹೇಳಲು ಹಾಸ್ಯಾಸ್ಪದವಾಗುತ್ತದೆ ಎನ್ನುವ ಕನ್ನಡ ಸಿನಿಮಾಮಂದಿಗೆ ತೆಲುಗಿನ ಹಾಸ್ಯನಟರಾದ ಆಲಿ ಮತ್ತು ವೇಣುರವರ ಬಾಯಲ್ಲಿ, ಪರಭಾಷಾ ನಾಯಕಿಯರ ಬಾಯಲ್ಲಿ ಮೊಳಗುವ ಕನ್ನಡದ ಕೆಟ್ಟ ಉಚ್ಛಾರ ಕರ್ಣಾನಂದಕರವೇ?

ಕೊನೆಯಲ್ಲಿ ನಾಯಕ ಪ್ರೇಮ್ ಅವರು ತೀವ್ರ ಹತಾಶರಾದವರಂತೆ ಕನ್ನಡ ಚಿತ್ರವೀಕ್ಷಕರಿಗೆ “ಡಬ್ಬಿಂಗ್ ಚಿತ್ರಗಳ ಮೂಲಕ ಪರಭಾಷಾ ನಾಯಕರು ಇಲ್ಲಿ ಜನಪ್ರಿಯರಾದರೆ ನಾವೆಲ್ಲಿಗೆ ಹೋಗಬೇಕು, ಏನು ಮಾಡಬೇಕು” ಎಂಬ ಬಹುಮುಖ್ಯ ಪ್ರಶ್ನೆಯನ್ನೆತ್ತಿದರು. ಡಬ್ಬಿಂಗ್ ವಿರೋಧಿಸುತ್ತಿರುವರ ಹಿಡನ್ ಭಯವೂ ಪ್ರೇಮ್ ಕೇಳಿದ ಪ್ರಶ್ನೆಯಲ್ಲಿದೆ, “ಗುಣಮಟ್ಟದ ಚಿತ್ರಗಳು ಪರಭಾಷೆಯಿಂದ ಕನ್ನಡದ ಮಾರುಕಟ್ಟೆಗೆ ಬಂದರೆ ಕಳಪೆ ಚಿತ್ರಗಳನ್ನು ಸುತ್ತುತ್ತಿರುವ ಇಲ್ಲಿನ ಸೋಕಾಲ್ಡ್ ಸಂಸ್ಕೃತಿ ರಕ್ಷಕರು ಮತ್ತು ಹೊಸ ಅಲೆಗೆ ಜಾಗವನ್ನೇ ಬಿಡದಂತೆ ತಳವೂರಿಕೊಂಡು ಕುಳಿತಿರುವ ನಿರ್ದೇಶಕರು ಮತ್ತು 50+ ವಯಸ್ಸಿನ ನಾಯಕರು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು” ಇದಷ್ಟೇ ಡಬ್ಬಿಂಗ್ ವಿರೋಧಿಸುತ್ತಿರುವವರ ಅಸಲು ಭಯ. ಜೊತೆಗೆ ಚಿತ್ರರಂಗದಲ್ಲಿ ಆದಿಕಾಲದಿಂದ ಝಾಂಡಾ ಊರಿಕೊಂಡು ಕುಳಿತಿರುವವರ ಬುಡಕ್ಕೇ ಬಿಸಿನೀರು ಬಿಟ್ಟಂತೆ ಡಬ್ಬಿಂಗ್ ಸಿನಿಮಾಗಳು ಈ ಪರಿ ದಿಗಿಲುಂಟುಮಾಡಿರುವುದು ಪಟ್ಟಭದ್ರರ ಪಾಳೇಗಾರಿಕೆಯ ಪಾಳೇಪಟ್ಟಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸತೊಡಗಿವೆ, ಸುಧಾ ಪತ್ರಿಕೆ ಡಬ್ಬಿಂಗ್ ವಿವಾದದ ಬಗ್ಗೆ ಮುಖಪುಟದ ವರದಿ ಪ್ರಕಟಿಸುತ್ತಿದೆ. ಈ ಹಿಂದಿನ ಡಬ್ಬಿಂಗ್ ತಿಕ್ಕಾಟಗಳು ಈ ಮಟ್ಟಕ್ಕೆ ಯಾವುದೂ ಹೋಗಿರಲಿಲ್ಲ, ಆದರೆ ಈ ಸಲದ ಡಬ್ಬಿಂಗ್ ಸಂಘರ್ಷಕ್ಕೆ ಫೇಸ್‌ಬುಕ್‌ನಂತಹ ಸಾಮಾಜಿಕ ತಾಣಗಳೂ, ಕನ್ನಡಪರ ಮನಸ್ಸುಗಳೂ, ಬರಹಗಾರರು, ಪತ್ರಕರ್ತರು ಮತ್ತು ದೊಡ್ಡಮಟ್ಟದ ಯುವ ಸಮೂಹ ದನಿ ತೆಗೆದಿದೆ. ಇದು ಸಿನಿಮಾ ನೋಡುಗ ಈಗ ಪ್ರಬುದ್ಧನಾಗಿರುವುದರ ಮತ್ತು “ಕೊಟ್ಟಿದ್ದನ್ನು ಮಾತ್ರ ನೋಡು” ಎಂಬ ಕನ್ನಡ ಸಿನಿಮಾಮಂದಿಯ ಕಟುಧೋರಣೆಗೆ ಬಿದ್ದ ಪರಿಣಾಮಕಾರಿ ಏಟಾಗಿರುವುದಂತೂ ಸತ್ಯ.

ಇವೆಲ್ಲದರ ನಡುವೆ.. ಡಬ್ಬಿಂಗ್ ಅವಶ್ಯಕತೆಯ ಬಗ್ಗೆ ದೊಡ್ಡಮಟ್ಟದ ಹುಯಿಲು ಏಳಲು ಕಾರಣವಾದ “ಸತ್ಯಮೇವ ಜಯತೆ” ಭಾನುವಾರ ಪ್ರಸಾರವಾಗಿದೆ. ಇಡೀ ಭಾರತೀಯ ಟಿವಿ ರಂಗದಲ್ಲಿ ಹಿಂದೆಂದೂ ನಿರ್ಮಾಣವಾಗದ ಮತ್ತು ಈ ವಲಯವು ಇಲ್ಲಿಯವರೆಗೂ ಮುಟ್ಟಲಿಕ್ಕೇ ಹೋಗದ 13 ಸಾಮಾಜಿಕ ಪಿಡುಗುಗಳ ಕುರಿತ ಸತ್ಯಮೇವ ಜಯತೆಯ ಮೊದಲಕಂತೇ ಹೃದಯಸ್ಪರ್ಶಿಯಾಗಿತ್ತು. ನೋಡಿದವರೆಲ್ಲರ ಕಣ್ಣಲ್ಲೂ ನೀರು ಜಿನುಗಿಸುವಲ್ಲಿ ಅಮೀರ್ ಖಾನ್‌ರ ಸಾಮಾಜಿಕ ಬದ್ದತೆ ಯಶಸ್ಸಾಗಿದೆ. ತನ್ನ ನಿರ್ಮಾಣದ ತಲಾಶ್ ಮತ್ತು ಧೂಮ್ 3 ಚಿತ್ರಗಳ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸ್ಥಗಿತಗೊಳಿಸಿ ಸತ್ಯಮೇವ ಜಯತೆಯ ಮೂಲಕ ದೇಶದಲ್ಲಿ ಸಾಮಾಜಿಕ ಪಿಡುಗುಗಳತ್ತ ದೊಡ್ಡಮಟ್ಟದ ಜಾಗೃತಿ ನಿರ್ಮಿಸಲು ಹೊರಟಿರುವ ಅಮೀರ್ ಖಾನ್ ನಿಜಕ್ಕೂ ಅಭಿನಂದನೆಗೆ ಅರ್ಹರು. ಇಂತಹದೊಂದು ಜನಪರ ಕಾಳಜಿಯ ಕಾರ್ಯಕ್ರಮವನ್ನು ನಿರ್ಮಿಸುವ ಒಳ್ಳೆಯ ಬುದ್ದಿ ಕರ್ನಾಟಕದ ಟಿವಿ ನಿರ್ಮಾಪಕರಿಗೂ, ಸಮಕಾಲೀನ ಸಾಮಾಜಿಕ ತಲ್ಲಣಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನಗಳನ್ನು ಮನರಂಜನಾತ್ಮಕ ಚಿತ್ರಗಳಲ್ಲೂ ಅಳವಡಿಸಿಕೊಳ್ಳುವ ಒಳ್ಳೆಯ ಬುದ್ದಿ ಕನ್ನಡ ಚಿತ್ರರಂಗದವರಿಗೂ ಆದಷ್ಟು ಬೇಗ ಬರಲಿ ಎಂಬ ಆಶಯವಷ್ಟೇ ಕನ್ನಡ ಸಿನಿಮಾ ನೋಡುಗರದ್ದು.

13 thoughts on “ಪಬ್ಲಿಕ್ ಟಿವಿಯ ಡಬ್ಬಿಂಗ್ ಚರ್ಚೆ, ಅನಕೃ, ಭೈರಪ್ಪ ಮತ್ತು ಸಂಸ್ಕೃತಿಯ ಹುಸಿರಕ್ಷಣೆ

 1. Prashanth

  “ಡಬ್ಬಿಂಗ್ ಮದ್ಯಪಾನಕ್ಕೆ ಸಮ, ಅದರಿಂದ ಒಂದು ರಾಜ್ಯದ ಸಿನಿಮಾ ಕ್ಷೇತ್ರದ ಆರೋಗ್ಯ ಹದಗೆಡುತ್ತದೆ, ಡಬ್ಬಿಂಗ್ ಎನ್ನುವುದು ಪಿಶಾಚಿ ಅದು ಎಲ್ಲರನ್ನೂ ಹಾಳು ಮಾಡುತ್ತದೆ, ಕಾರ್ಮಿಕರಿಗೆ ಕೆಲಸ ಕಳೆಯುತ್ತದೆ, ಕನ್ನಡಭಾಷೆಯ ಒಟ್ಟಂದ ಹಾಳಾಗುತ್ತದೆ ಎಂದು ಡಬ್ಬಿಂಗಿನ ಕುರಿತು ಸಾಲುಸಾಲು ಆರೋಪಗಳನ್ನು ಕಾರ್ಯಕ್ರಮದಲ್ಲಿ ಡಬ್ಬಿಂಗ್ ಪರವಿದ್ದವರು ಮಾಡಿದರು.”

  ಡಬ್ಬಿಂಗ್ ವಿರೋಧವಿದ್ದವರು ಅಂತ ಬದಲಾಗಬೇಕಿತ್ತು ಅನ್ಸುತ್ತೆ

  -ಪ್ರಶಾಂತ್

  ಡಬ್ಬಿಂಗ್ ನಮ್ಮ ಹಕ್ಕು, ನಮ್ಮ ಹಕ್ಕನ್ನ ಕಸಿಯೊ ಪ್ರಯತ್ನ ಬೇಡ, ಹಕ್ಕನ್ನ ಕಸಿಯೊ ಪ್ರಯತ್ನಪಟ್ಟಲ್ಲಿ ನಿಮ್ಮ ಅನ್ನ ಕಸಿಯೊಕ್ಕು ಹಿಂದೆಮುಂದೆ ನೋಡಲ್ಲ

  Reply
  1. ಸುಜಯೀಂದ್ರ

   ಕನ್ನಡ ವಿರೋಧಿ, ಕನ್ನಡ ಡಬ್ಬಿಂಗ್ ವಿರೋಧಿ ಜನಗಳು ಕನ್ನಡಿಗರ ಅನ್ನವನ್ನ ಕಸಿಯೋಕು ಹಿಂದೆ ಮುಂದೆ ನೋಡಲ್ಲ

   Reply
 2. Arun

  ಪ್ರಜಾಪ್ರಬುತ್ವ ವಿರೋದಿ ಡಬ್ಬಿಂಗ್ ನಿಶೇದಕ್ಕೆ ದಿಕ್ಕಾರವಿರಲಿ!

  Reply
 3. Sushrutha

  Namma sundaraanga, kannada rakshaka Shivaraj Kumar ge kannada maathaadoke naachike. Yaava TV channel nalle irali avara Sandarshana, English reply. Aaaha, Rajkumar hesaru heli beledadde. Appaaji, Appaaji anthe idee Karnataka ivara contract lli irodu anno thara maathaadthaarallaa, modalu thamma bhaashe yalli maathaadodu kaliyali. Innu Ramya, Prem, Rakshitha etc ondakkaadaroo kannada dalli reply kodoke baruthaa? Yogyathe illade ottoo maathaadodu. Modalu nettage kannada kalithu kannada dalle maathaadali. avaravara appaaji aathma kke alle sadgathi siguthe.
  Kannadigarige enu beku, enu beda annodannu heloke ivaryaava seeme paalegaararu?

  Reply
  1. nagabhushana

   Houdu Nimma maathu Noorakke nooru sari,
   Kannda Bhaashena kuttige patti hididu alladisida haage iratte avara kannada uchaarane.

   Reply
 4. Nag king

  ಕನ್ನಡ ಚಿತ್ರರಂಗ ದೊಡ್ಡದಾಗಿ 45ರ ವಯಸ್ಸಿನಲ್ಲಿರುವಾಗಲೂ ಅದೇ ಫೀಡಿಂಗ್ ಬಾಟಲಿಯನ್ನು ಬಾಯಲ್ಲಿಟ್ಟುಕೊಂಡು ಚೀಪುತ್ತ ಕೂತಿಲ್ಲ ಅನ್ನ ತಿನ್ನೋ ಶಕ್ತಿಯನ್ನ ಬೆಳೆಸಿಕೊಂಡಿದೆ … ಆದರೆ ತಿನ್ನುತ್ತ ಇರೋ ಅನ್ನಕ್ಕೆ ಕಲ್ಲು ಹಾಕಬೇಡಿ ಅನ್ನೋದೇ ಕನ್ನಡ ಚಿತ್ರರಂಗದ ವಾದ

  ಹೆತ್ತ ತಾಯಿ ಹರಕಲು ಸೀರೆ ಹಾಕೊಂಡಿದ್ದಾಳೆ ಅಂತ ಪಕ್ಕದ ಮನೇಲಿ ರೇಷ್ಮೆ ಸೀರೆ ಹಾಕೊಂಡಿರುವಾಕೆ ಹತ್ರ ಮಗನೆ ಅಂತ ಕರೆಸಿಕೊಳೋಕೆ ಕೆಲವರಿಗೆ ಚಪಲ …

  Reply
 5. ಶಾಮ

  @ Nag King: ಹೆತ್ತ ತಾಯಿ ಹರಕಲು ಸೀರೆ ಹಾಕೊಂಡಿದ್ದಾಳೆ ಅಂತ ಪಕ್ಕದ ಮನೇಲಿ ರೇಷ್ಮೆ ಸೀರೆ ಹಾಕೊಂಡಿರುವಾಕೆ ಹತ್ರ ಮಗನೆ ಅಂತ ಕರೆಸಿಕೊಳೋಕೆ ಕೆಲವರಿಗೆ ಚಪಲ …

  ಇಲ್ಲಿ ನಿಮ್ಮ ಹೋಲಿಕೆಯೇ ಸರಿಯಿಲ್ಲ, ಪಕ್ಕದ್ಮನೆಯಾಕೆಯ ಸೀರೆ ನೋಡಿ, ನಮ್ಮ ತಾಯಿಗೂ ಆ ತರಹದ್ದೇ ಸೀರೆ ಉಡಿಸುವದು ಡಬ್ಬಿಂಗ್. ಮೊದಲು ತಾಯಿ ಮುಖ್ಯವೇ ಅಥವಾ ಸೀರೆ ಮುಖ್ಯವೇ ಎನ್ನುವದು ನಿರ್ಧರಿಸಿಕೊಳ್ಳಿ..
  ಇಲ್ಲಿ ತಾಯಿ ಎಂದರೆ ಕನ್ನಡ ಭಾಷೆ …. ಸೀರೆ ಎನ್ನುವದು ಒಳ್ಳೆಯ ವಿಷಯದ, ಸಂದೇಶವುಳ್ಳ ಅಥವಾ ಮನರಂಜನೆಯುಳ್ಳ ಸಿನಿಮಾ….
  ಈಗ ಹೇಳಿ, ಪಕ್ಕದ ಮನೆಯವರಂತಹ ಸೀರೆಯನ್ನು ತಾಯಿಗೆ ತಂದು ಕೊಡುವದು ತಪ್ಪೇ? ಅಥವಾ ಅಂತಹುದೇ ಸೀರೆಯನ್ನು ನೇಯಲು ಬರಲಿ ಬಿಡಲಿ ಎಂಥದೋ ಅನುಕರಣೆ ಮಾಡಿದ ನಕಲಿ ಹಾಗೂ ಕಳಪೆ ಸೀರೆ ಉಡಿಸುವಿರೋ?, (ಸರಿಯಾಗಿಲ್ಲದಿದ್ದರೂ?)
  ಶಾಮ.

  Reply
 6. ವೆಂಕಟಲಕ್ಷ್ಮಿ

  ನಿಜವಾದ ಕಾಳಜಿ,ಸಮಗ್ರ ಮಾಹಿತಿ-ವಿಶ್ಲೇಷಣೆ,ಸಶಕ್ತ ವಾದಮಂಡನೆಗಳಿಂದ ಕೂಡಿದ,(ಪ್ರಶಾಂತ್ ತೋರಿಸಿಕೊಟ್ಟಿರುವ ಆ ಸಣ್ಣದೊಂದು ಲೋಪ ಹೊರತುಪಡಿಸಿ) ತುಂಬ ಚೆನ್ನಾಗಿ ಬರೆಯಲ್ಪಟ್ಟಿರುವ ಲೇಖನ!

  Reply
 7. prasad raxidi

  ಡಬ್ಬಿಂಗ್ ಬೇಡವೆನ್ನುವುದಕ್ಕೆ ಯಾವ ವೈಜ್ಞಾನಿಕ ಕಾರಣವೂ ಇಲ್ಲ. ಡಬ್ಬಿಂಗ್ ವಿರೋಧಿಗಳ ಕ್ರಮ ಸಂವಿಧಾನ ವಿರೋಧಿ ಕೂಡಾ.ಆದರೆ ಅವರಲ್ಲಿ ಕೆಲವು ಆತಂಕಗಳಿವೆ (ಸಿನಿಮಾ ರಂಗಕ್ಕಿಂತ ಕಿರುತೆರೆಯವರಿಗೆ) ಕನ್ನಡದ ಎಲ್ಲಾ ಛಾನಲ್ ಗಳು ಡಬ್ಬಿಂಗ್ ಧಾರಾವಾಹಿಗಳನ್ನೇ ಪ್ರಸಾರ ಮಾಡಿದರೆ,(ಹಾಗೆ ಮಾಡುವ ಸಾಧ್ಯತೆಯೂ ಇದೆ)ತಮ್ಮ ಗತಿಯೇನು ಎಂಬ ಭಯ. ಹಾಗೇಯೇ ದಬ್ಬಿಂಗ್ ಅವಕಾಶ ಸಿಕ್ಕಿದ ಕೂಡಲೇ ಒಳ್ಳೆದಕ್ಕಿಂತ ಕೆಟ್ಟ ವಿಷಯಗಳೇ ರಾಶಿರಾಶಿಯಾಗಿ ಡಬ್ ಆಗಿಬರುವ ಸಾಧ್ಯತೆಯೂ ಇದೆ. ಇದನ್ನು ಎಲ್ಲರು ಕುಳಿತ ಚರ್ಚಿಸಿ ಬಗೆಹರಿಸಿಕೊಳ್ಳಬೇಕು, ನಾನಂತೂ ದಬ್ಬಿಂಗ್ ಪರ..

  Reply
 8. shyam shetty

  namagu dubbing bekagirlilla adre yenu maadona namma chitraranga na murkharu, khali popadigalu aaltaa eddaralla.? evru film madoke alla kuri meyisoku yogyathe elladoru.Evaru mado third class film ninda kannadigara value kammi aagide che thu

  Reply
 9. shyam shetty

  hottepadige swalpa kasta pado bere kelsana nodkolli evaru , karnataka vishalawagide, kelsakke yenu korathe ella, adu bittu dabba film maadi kannadigRA MAANA haraju maadodu beda.

  Reply

Leave a Reply

Your email address will not be published.