Daily Archives: May 9, 2012

ದಲಿತರ ಪ್ರತ್ಯೇಕ ಮಾಧ್ಯಮ ಇಂದಿನ ಅಗತ್ಯ

– ಆನಂದ ಪ್ರಸಾದ್

ದಲಿತರು, ಹಿಂದುಳಿದವರಿಗೆ ಭಾರತದ ಮಾಧ್ಯಮಗಳಲ್ಲಿ ಪ್ರಾತಿನಿಧ್ಯ ಕಡಿಮೆ ಅಥವಾ ಇಲ್ಲವೆಂದರೂ ಸರಿಯೇನೋ. ಬಹುತೇಕ ಮಾಧ್ಯಮಗಳು ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಯ ಹಿಡಿತದಲ್ಲಿ ಇವೆ. ಹೀಗಾಗಿ ದಲಿತರ, ಹಿಂದುಳಿದವರ ಧ್ವನಿ ಮಾಧ್ಯಮ ಲೋಕದಲ್ಲಿ ಕೇಳಿಬರುವುದು ಕಡಿಮೆಯೇ. ಪುರೋಹಿತಶಾಹಿ ಮಾಧ್ಯಮಗಳನ್ನು ಸ್ಥಾಪಿಸಿ ನಡೆಸುವುದು ಕಡಿಮೆಯಾದರೂ ಬಂಡವಾಳಶಾಹಿಗಳು ಸ್ಥಾಪಿಸಿದ ಮಾಧ್ಯಮಗಳಲ್ಲಿ ಪುರೋಹಿತಶಾಹಿ ಮನಸ್ಸಿನ ವ್ಯಕ್ತಿಗಳು ಆಯಕಟ್ಟಿನ ನಿಯಂತ್ರಕ ಸ್ಥಾನವಾದ ಪ್ರಧಾನ ಸಂಪಾದಕ, ಸಂಪಾದಕ ಸ್ಥಾನದಲ್ಲಿ ಆಸೀನರಾಗಿರುವುದು ಭಾರತದಾದ್ಯಂತ ಕಂಡುಬರುವ ವಿದ್ಯಮಾನ. ಇದರಿಂದಾಗಿ ಭಾರತದ ಮಾಧ್ಯಮಗಳಲ್ಲಿ ವೈಚಾರಿಕತೆಗೆ, ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ದೊರಕಲೇ ಇಲ್ಲ ಮತ್ತು ದೊರಕುವ ಸಾಧ್ಯತೆಯೂ ಇಲ್ಲ. ಭಾರತದಲ್ಲಿ ವೈಚಾರಿಕತೆಗೆ, ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ದೊರಕಿದ್ದಿದ್ದರೆ ಭಾರತದ ಇಂದಿನ ಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿರುತ್ತಿತ್ತು.

ದಲಿತರು, ಹಿಂದುಳಿದವರಿಗೆ ಧ್ವನಿ ಸಿಗಬೇಕಾದರೆ ದಲಿತರು, ಹಿಂದುಳಿದರು ತಮ್ಮದೇ ಆದ ಮಾಧ್ಯಮಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ. ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಗಳ ಜಂಟಿ ನಿಯಂತ್ರಣದಲ್ಲಿ ಇರುವ ಪ್ರಸಕ್ತ ಮಾಧ್ಯಮಗಳಲ್ಲಿ ದಲಿತರಿಗೆ, ಹಿಂದುಳಿದವರಿಗೆ ಧ್ವನಿ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ ದಲಿತರು, ಹಿಂದುಳಿದವರು ತಮ್ಮದೇ ಆದ ಪ್ರತ್ಯೇಕ ಟಿವಿ ವಾಹಿನಿಗಳು ಹಾಗೂ ಮುಖ್ಯವಾಹಿನಿಯ ಪತ್ರಿಕೆಗಳನ್ನು ಕಟ್ಟಿಕೊಳ್ಳುವುದು ಅಗತ್ಯ. ಇಂಥ ಪ್ರಯತ್ನಗಳಿಗೆ ದಲಿತ, ಹಿಂದುಳಿದ ವರ್ಗದ ಉದ್ಯಮಿಗಳು ಹಾಗೂ ರಾಜಕಾರಣಿಗಳು ಮುಂದಾಗುವುದು ಅಗತ್ಯ.

ಇಂದು ದಲಿತ ಉದ್ಯಮಿಗಳು ತಮ್ಮದೇ ಆದ ’ದಲಿತ್ ಚೇಂಬರ್ ಆಫ್ ಇಂಡಸ್ಟ್ರಿ’ ಹಾಗೂ ದಲಿತ ಉದ್ಯಮಿಗಳಿಗೆ ಹಣಕಾಸು ನೆರವು ಒದಗಿಸಲು ತಮ್ಮದೇ ಆದ ಹಣಕಾಸು ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದು ಇದೇ ರೀತಿ ದಲಿತ ಟಿವಿ ವಾಹಿನಿಗಳು ಹಾಗೂ ಪತ್ರಿಕೆಗಳನ್ನೂ ಸ್ಥಾಪಿಸಿ ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಧ್ವನಿ ನೀಡಬೇಕಾದ ಅಗತ್ಯ ಹೆಚ್ಚಾಗಿದೆ. ದಲಿತರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದು ಹಾಗೂ ಪುರೋಹಿತಶಾಹಿ ಚಿಂತನೆಗಳಿಂದ ದಲಿತ, ಹಿಂದುಳಿದ ವರ್ಗಗಳನ್ನು ಬಿಡಿಸುವುದು ಈ ಮಾಧ್ಯಮಗಳ ಪ್ರಧಾನ ಗುರಿಯಾಗಿರಬೇಕು. ದಲಿತರು ಹೆಚ್ಚು ವೈಚಾರಿಕವಾದ ಮೂಲ ಬೌದ್ಧ ಧರ್ಮದೆಡೆಗೆ ಸಾಗುವಂತೆ ದೇಶಾದ್ಯಂತ ಜಾಗೃತಿ ಮೂಡಿಸುವ ಕೆಲಸ ಆ ಮಾಧ್ಯಮಗಳು ಮಾಡಬೇಕು. ಆಗ ಇಡೀ ಭಾರತದಲ್ಲಿ ವೈಚಾರಿಕ ಕ್ರಾಂತಿ ಸಾಧ್ಯವಾಗಬಹುದು.

ಮಾಯಾವತಿಯಂಥ ದಲಿತ ರಾಜಕಾರಣಿಗಳು ಉತ್ತರ ಪ್ರದೇಶದಂಥ ದೊಡ್ಡ ರಾಜ್ಯವೊಂದರ ಮುಖ್ಯಮಂತ್ರಿಯಾದರೂ ದಲಿತರ ಹಾಗೂ ಹಿಂದುಳಿದವರಿಗೆ ಧ್ವನಿ ನೀಡುವ ಹಾಗೂ ಅವರಲ್ಲಿ ಜಾಗೃತಿ, ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸಲು ನೆರವಾಗಬಲ್ಲಂಥ ರಾಷ್ಟ್ರ ಮಟ್ಟದ ಒಂದು ಟಿವಿ ವಾಹಿನಿ ಹಾಗೂ ಪತ್ರಿಕೆಯನ್ನು ಕಟ್ಟಲು ಸಾಧ್ಯವಿತ್ತು. ಇಂಥ ಒಂದು ರಚನಾತ್ಮಕ ಕೆಲಸ ಮಾಡುವ ಬದಲು ಮಾಯಾವತಿಯವರು ನಿರ್ಜೀವ ಕಲ್ಲು ಪ್ರತಿಮೆಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ವ್ಯಯಿಸಿರುವುದು ವ್ಯರ್ಥ. ಇದೇ ಕೋಟ್ಯಂತರ ರೂಪಾಯಿ ಹಣವನ್ನು ಒಂದು ದಲಿತ ಟಿವಿ ವಾಹಿನಿಯೋ, ಪತ್ರಿಕೆಯನ್ನೋ ಕಟ್ಟಲು ಬಳಸಿದ್ದರೆ ಎಷ್ಟೋ ಪ್ರಯೋಜನ ಆಗುತ್ತಿತ್ತು.

ದಲಿತ ರಾಜಕಾರಣಿಗಳಲ್ಲಿ ಚಿಂತನೆಯ ಕೊರತೆ ಮತ್ತು ಯಾವುದಕ್ಕೆ ಆದ್ಯತೆ ನೀಡಬೇಕು ಎಂಬ ವಿವೇಚನೆ ಇಲ್ಲದೆ ಇರುವುದನ್ನು ಇದು ತೋರಿಸುತ್ತದೆ. ಹೀಗಾಗಿ ಅಧಿಕಾರ ದೊರೆತರೂ ಅದನ್ನು ಬಳಸಿ ದಲಿತರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವ ಮೂಡಿಸಲು ದಲಿತ ರಾಜಕಾರಣಿಗಳು ಆದ್ಯತೆ ನೀಡದೆ ತಮ್ಮದೇ ಆದ ಪ್ರತಿಮೆಗಳ ಸ್ಥಾಪನೆ ಹಾಗೂ ಆಡಂಬರ, ಅಬ್ಬರದ ಜೀವನಶೈಲಿಗೆ ಮರುಳಾಗಿರುವುದು ಅಂಬೇಡ್ಕರ್ ಅವರ ಚಿಂತನೆಗಳಿಗೆ ವಿರುದ್ಧವಾದ ನಡವಳಿಕೆಯಾಗಿದೆ. ದಲಿತರಲ್ಲಿ, ಹಿಂದುಳಿದವರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸುವುದು ದಲಿತ ನಾಯಕರ ಪ್ರಧಾನ ಆದ್ಯತೆ ಆಗಿರಬೇಕಾಗಿತ್ತು. ಆದರೆ ಅಂಥ ಜಾಗೃತಿ ದಲಿತ ನಾಯಕರಲ್ಲಾಗಲಿ, ದಲಿತ ಉದ್ಯಮಿಗಳಲ್ಲಾಗಲಿ ಮೂಡಲೇ ಇಲ್ಲ. ದಲಿತರು ಮತ್ತು ಹಿಂದುಳಿದವರಲ್ಲಿ ವೈಚಾರಿಕ ಕ್ರಾಂತಿ ಮೂಡಿಸುವುದು ಅವರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲಗೊಳಿಸಲು ಅಗತ್ಯವಾದ ಭೂಮಿಕೆ ಆಗಿದೆ. ಈ ಕೆಲಸವನ್ನು ಮಾಡಲು ದಲಿತ ಹಾಗೂ ಹಿಂದುಳಿದ ವರ್ಗದ ನಾಯಕರು, ಉದ್ಯಮಿಗಳು ಪ್ರಧಾನ ಆದ್ಯತೆ ನೀಡಬೇಕಾದ ಅಗತ್ಯ ಇಂದು ಬಹಳಷ್ಟಿದೆ. ದಲಿತರು ಪುರೋಹಿತಶಾಹಿ ಚಿಂತನೆಗಳಿಂದ ಹೊರಬಂದು ತಮ್ಮದೇ ಆದ ಸ್ವತಂತ್ರ ಮನೋಭಾವ ಹಾಗೂ ಚಿಂತನೆಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ. ಹಾಗಾದರೆ ಭಾರತವು ಪುರೋಹಿತಶಾಹಿ ಚಿಂತನೆಗಳ ಕಬಂಧಬಾಹುಗಳಿಂದ ಸ್ವಲ್ಪವಾದರೂ ಮುಕ್ತಿ ಪಡೆಯಲು ಸಾಧ್ಯವಿದೆ.

ಶ್ರಮ ಸಂಸ್ಕೃತಿ ಮತ್ತು ಆರ್ಥಿಕ ಸ್ಥಿತ್ಯಂತರಗಳು


-ಡಾ.ಎಸ್.ಬಿ. ಜೋಗುರ


 

ಜಗತ್ತಿನ ಮುಕ್ಕಾಲು ಭಾಗ ಜನಸಮೂಹ ಒಂದಿಲ್ಲಾ ಒಂದು ಬಗೆಯ ಅಸಂತುಷ್ಟಿ ಹಾಗೂ ತಲ್ಲಣಗಳ ಮಧ್ಯೆ ಸುತ್ತಿ ಸುಳಿಯುವಾಗ, ಶ್ರಮ ಅಥವಾ ಕೆಲಸ ಎನ್ನುವುದು ಅದ್ಯಾವ ಬಗೆಯ ಸ್ವರೂಪ ಮತ್ತು ಅರ್ಥವಂತಿಕೆಯನ್ನು ಉಳಿಸಿಕೊಂಡಿದೆ ಎನ್ನುವುದೇ ಒಂದು ಬಹು ದೊಡ್ಡ ಜಿಜ್ಞಾಸೆ. ಸಣ್ಣ ಮೀನೊಂದು ದೊಡ್ಡ ಮೀನಿನ ಬಾಯಿಗೆ ತುತ್ತಾಗುವ ಕ್ರಿಯೆ ಸ್ವಾಭಾವಿಕ ಎನ್ನುವ ಮಟ್ಟದಲ್ಲಿಯೇ ಮನುಷ್ಯನಿಂದ ಮನುಷ್ಯನ ಶೋಷಣೆಯೂ ಸ್ವೀಕೃತ ಎನ್ನುವ ಹಂತದಲ್ಲಿರುವ ನಮಗೆ ನಿಸರ್ಗದ ಒಟ್ಟು ವ್ಯಾಪಾರವನ್ನು ಮನುಷ್ಯ ಶೋಷಿಸಿ, ಲೂಟಿ ಮಾಡಿ ಬದುಕಿದರೂ ಅದು ಸಹ್ಯವೇ ಎನ್ನುವ ಮನ:ಸ್ಥಿತಿಯ ಕಾಲಘಟ್ಟದಲ್ಲಿರುವ ಜನಸಮೂಹಕ್ಕೆ ಶ್ರಮ ಎನ್ನುವುದು ಸಂಸ್ಕೃತಿಯ ಮೂಲದಿಂದ ವಿಚಲಿತವಾಗಿ ಆರ್ಥಿಕ ಮೌಲ್ಯದ ಭಾಗವಾಗುವವರೆಗಿನ ಬೆಳವಣಿಗೆಯಾಗಿ ತೋರುವುದಿದೆ.

ಒಟ್ಟು ಜೀವಸಂಕುಲದ ತುತ್ತ ತುದಿಯ ಸ್ತರದಲ್ಲಿ ವಿರಾಜಮಾನನಾಗಿರುವ ಮನುಷ್ಯನ ಸಾಧನೆಯ ಹಿಂದೆ ಈ ಶ್ರಮ ಮಾಡುವ ಗುಣವೇ ಅಡಕವಾಗಿದೆ. ಈ ಶ್ರಮ ಎನ್ನುವುದು ಮನುಷ್ಯನ ಐಹಿಕ ಅಬ್ಯುದಯಕ್ಕೆ ನೆರವಾಗಿರುವ ಜೊತೆಗೆ ಆತನನ್ನು ಸೃಷ್ಟಿ ಕಾರ್ಯದಲ್ಲಿ ತೊಡಗಿಸಿ, ಅವನನ್ನು ಸಮಾಜ ಸ್ವೀಕೃತ ವ್ಯಕ್ತಿಯನ್ನಾಗಿ ಮಾರ್ಪಡಿಸುವಲ್ಲಿಯೂ ನೆರವಾಗಿರುವುದಿದೆ. ಮಾನವ ತನ್ನ ಬುದ್ಧಿಶಕ್ತಿಯ ಅಳವಡಿಕೆಯ ಮೂಲಕ ನಿಸರ್ಗದ ಎಲ್ಲ ಮಗ್ಗಲುಗಳನ್ನು ಶೋಷಿಸಿ, ಬಳಸಿ ಅದ್ಭುತವಾದ ನಾಗರಿಕತೆಯನ್ನು ಕಟ್ಟಿರುವುದಿದೆ. ಮನುಷ್ಯ ಮಾತ್ರ ಏಕೈಕ ಆರ್ಥಿಕ ಜಗತ್ತಿನ ಉದ್ಪಾತಕ ಜೀವಿ ಎನ್ನುವ ಹೆಗ್ಗಳಿಕೆಗೆ ಕಾರಣವಾಗಿರುವುದಿದೆ. ಪ್ರಾಚೀನ ಕಾಲದ ಸರಳ ಸಮಾಜದ ’ಒಲೆಗೆ ಸ್ತ್ರೀ ಹೊಲಕ್ಕೆ ಪುರುಷ’ ಎನ್ನುವ ಅತ್ಯಂತ ಪ್ರಾಥಮಿಕ ಹಂತದ ಶ್ರಮ ವಿಭಜನೆಯಿಂದ ಮೊದಲ್ಗೊಂಡು ಆಧುನಿಕ ಸಂದರ್ಭದ ಬೃಹತ್ ನೌಕರಶಾಹಿ ವ್ಯವಸ್ಥೆಯಲ್ಲಿಯ ಅತ್ಯಂತ ತೀಕ್ಷ್ಣವಾದ ಶ್ರಮದವರೆಗೂ ಆತ ಬಂದು ತಲುಪಿರುವುದಿದೆ. ಸರಳ ಬದುಕಿನ ಉತ್ತರವಾಗಿ ಆರಂಭವಾದ ಶ್ರಮ ಜೀವನ ನಂತರ ಅದು ಕಲೆ ಮತ್ತು ಸೌಂದರ್ಯೋಪಾಸನೆಗೂ ಎಡೆ ಮಾಡಿ ಕೊಟ್ಟಿರುವ ಬಗ್ಗೆ ವಿಶ್ವದ ಎಲ್ಲ ನಾಗರಿಕತೆಗಳು ತೋರಿಸಿಕೊಟ್ಟಿವೆ. ಗುಹೆಗಳಿರಬಹುದು, ಗೋಡೆಯ ಮೇಲಿನ ಚಿತ್ರಗಳಿರಬಹುದು, ಕಲ್ಲಿನ ಮೇಲಿನ ಕೆತ್ತನೆ, ಬಟ್ಟೆಯ ಮೇಲಿನ ವಿನ್ಯಾಸ, ದೇಗುಲಗಳ ನಿರ್ಮಾಣ, ಅಲ್ಲಿರುವ ಶಿಲ್ಪಗಳು ಮುಂತಾದ ಕಲಾಭಿವ್ಯಕ್ತಿಗಳು ಹೊಸ ಬಗೆಯ ಶ್ರಮ ಸಂಸ್ಕೃತಿಯ ಶಾಖೆಗಳಾಗಿ ಆವಿರ್ಭವಿಸಿದವು.

ಪಾಶ್ಚಾತ್ಯ ಸಾಂಸ್ಕೃತಿಕ ಪರಂಪರೆಯಲ್ಲಿ ಈ ಬಗೆಯ ಕಲಾಭಿವ್ಯಕ್ತಿ ಮತ್ತು ರಚನೆ ಶ್ರಮದ ಭಾಗವಾಗಿ ಒಂದು ಮೂರ್ತರೂಪದಲ್ಲಿ ಅತ್ಯಂತ ಉಚ್ಚ್ರಾಯ ಸ್ಥಿತಿಯನ್ನು ತಲುಪಿರುವ ಅವಧಿ 14 ನೇ ಶತಮಾನ. ಸಿ.ರೈಟ್ ಮಿಲ್ಸ್ ಹೆಳುವಂತೆ ’ಶ್ರಮ ಎನ್ನುವುದು ಆ ಸಂದರ್ಭದಲ್ಲಿ ಶ್ರಮಿಕನನ್ನು ಅವನ ಉತ್ಪಾದನೆಯಿಂದ ವಿಚಲಿತಗೊಳಿಸುವ, ಅವನನ್ನು ಅಸಂತುಷ್ಟಗೊಳಿಸುವ ಮಟ್ಟದಲ್ಲಿರದೇ ಶ್ರಮ ಮತ್ತು ಆತನ ಉತ್ಪಾದನೆ ಎರಡೂ ಬಿಡಿಸಲಾಗದ ಸಾರೂಪ್ಯಗಳಾಗಿದ್ದವು. ಆಗ ಒಬ್ಬ ಶ್ರಮಿಕ ತನ್ನ ಶ್ರಮವನ್ನು ಸ್ವಾಯತ್ತವಾಗಿ ನಿಯಂತ್ರಿಸುವ ಸಾಧ್ಯತೆಯಿತ್ತು. ತನ್ನ ಶ್ರಮದ ಜೊತೆ ಜೊತೆಗೆ ತನ್ನ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಎಲ್ಲ ಅವಕಾಶಗಳಿದ್ದವು’ ಎಂದಿರುವುದನ್ನು ನೋಡಿದರೆ ಆ ಹಂತದಲ್ಲಿ ಶ್ರಮ ಎನ್ನುವುದು ಸಂಸ್ಕೃತಿಯ ಬಹುಮುಖ್ಯವಾದ ಭಾಗವೇ ಆಗಿತ್ತು. ಅದೊಂದು ಹೊಟ್ಟೆಪಾಡಿನ ವೃತ್ತಿಯಾಗಿರದೇ ಒಂದು ಜೀವನ ಮಾರ್ಗವೇ ಆಗಿತ್ತು.

ಮಧ್ಯಯುಗದ ಶ್ರಮ ಸಂಸ್ಕೃತಿಯ ರಾಚನಿಕ ಚೌಕಟ್ಟು ಆಧುನಿಕ ಉತ್ಪಾದನಾ ವಿಧಾನಗಳ ಆಗಮನದೊಂದಿಗೆ ಬದಲಾವಣೆ ಹೊಂದಿ, ತನ್ನ ಮೂಲ ಅಸ್ಥಿತ್ವವನ್ನು ಇಲ್ಲವಾಗಿಸಿಕೊಂಡಿತು. ಮುಂಚಿನ ಶ್ರಮದ ಸ್ವರೂಪವೇ ಬದಲಾಯಿತು. ಈ ಹಂತದ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸಿದ ಮಾರ್ಕ್ಸ್ ಉತ್ಪಾದನಾ ವಿಧಾನಗಳು ಮತ್ತು ಉದ್ದಿಮೆ ಪ್ರಧಾನ ವ್ಯವಸ್ಥೆಯಲ್ಲಿ ಕಾರ್ಮಿಕರು ಶ್ರಮವಿಭಜನೆಯ ತೀವ್ರತೆಯನ್ನು ಅನುಭವಿಸುವ ಜೊತೆಗೆ ಒಂದು ಬಗೆಯ ಪರಕೀಯ ಪ್ರಜ್ಞೆಯನ್ನು ಅನುಭವಿಸುತ್ತಾರೆ. ಈ ಬಗೆಯ ಅತೃಪ್ತಿ ತಾನು ಉತ್ಪಾದಿಸುವ ವಸ್ತುಗಳಿಂದ, ಅಲ್ಲಿಯ ಪರಿಸರದಿಂದ ಉದ್ಭವವಾಗುವ ಬಗ್ಗೆ ಮಾರ್ಕ್ಸ್ ಮಾತನಾಡಿರುವುದಿದೆ.

ವರ್ಗ ಸಂಘರ್ಷಕ್ಕೆ ಈ ಬಗೆಯ ಸಂಕೀರ್ಣ ಶ್ರಮವಿಭಜನೆ ಕಾರಣವಾಗುವ ಜೊತೆಯಲ್ಲಿ ವರ್ಗ ರಹಿತ ಸಮಾಜದ ಸ್ಥಾಪನೆಯವರೆಗೂ ಅದು ಕ್ರಮಿಸುವ ಬಗ್ಗೆ ಆತ ಭವಿಷ್ಯವನ್ನೇ ನುಡಿದಿರುವುದಿತ್ತು. ದುಡಿಮೆಯನ್ನು ತನ್ನ ಬದುಕಿನ ಭಾಗ ಎಂದು ಸಂತೋಷದಿಂದ ತನ್ನನ್ನು ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದ ಕಾರ್ಮಿಕ ಆಧುನಿಕ ಶ್ರಮದ ಸಂದರ್ಭದಲ್ಲಿ ಶ್ರಮ ಸಂಸ್ಕೃತಿಯ ಜಾಗೆಯಲ್ಲಿ ಕರ್ತವ್ಯ ಪ್ರಜ್ಞೆ ಎನ್ನುವಂತಹ ಒಂದು ಔಪಚಾರಿಕ ಪರಿಕಲ್ಪನೆಯನ್ನೇ ಪರಿಚಯಿಸಿದ. ದುಡಿಮೆ ಎನ್ನುವುದು ಸಂಪತ್ತಿನ ಗಳಿಕೆಯ ಸಾಧನ ಎನ್ನುವ ಅರ್ಥಕ್ಕೆ ಸೀಮಿತವಾಗಿ ಉಳಿಯುವಂತಾಯಿತು. ಜರ್ಮನಿಯ ಚಿಂತಕ ಮ್ಯಾಕ್ಸ್ ವೆಬರ್ ಹೇಳುವಂತೆ ’ಆಧುನಿಕ ಸಂದರ್ಭದ ಶ್ರಮ ಮನುಷ್ಯನನ್ನು ಅಪಾರ ಜನಸಂದಣಿಯ ನಡುವೆಯೂ ಏಕಾಂಗಿಯಾಗಿರುವ ಮನ:ಸ್ಥಿತಿಯನ್ನು ತಂದುಕೊಟ್ಟಿತು’ ಎಂದಿರುವುದನ್ನು ನೋಡಿದರೆ ಆಧುನಿಕ ಶ್ರಮದ ಕಲ್ಪನೆ ಹುಟ್ಟುಹಾಕಿರುವ ಮಾನಸಿಕ ಸ್ತರಗಳ ಬಗ್ಗೆ ಯೋಚಿಸಬಹುದು.

ಆಧುನಿಕ ಸಂದರ್ಭದ ಶ್ರಮ ಎನ್ನುವುದು ಮಧ್ಯಮ ಮತ್ತು ಮೇಲ್ವರ್ಗದ ಜನಗಳ ಪಾಲಿಗೆ ಐಹಿಕ ಅಬ್ಯುದಯದ ಒಂದು ಸಾಧನವಾದರೆ, ಕೆಳ ವರ್ಗದ ಕಾರ್ಮಿಕನ ಪಾಲಿಗೆ ಮಾತ್ರ ಅದೊಂದು ಒತ್ತಾಯವಾದ ದುಡಿಮೆಯಾಗಿ, ಬದುಕಿನ ನಿರ್ವಹಣೆಗೆ ನಿರ್ವಾಹವಿಲ್ಲದ ಒಂದು ಮಾರ್ಗವಾಗಿ ಪರಿಣಮಿಸಿತು. ಆರಕ್ಕೇರದ ಮೂರಕ್ಕಿಳಿಯದ ಮಿತಿಯ ಮಧ್ಯೆ ತೊಳಲಾಡುವ ಸನ್ನಿವೇಶವನ್ನು ಕೆಳವರ್ಗದ ಕಾರ್ಮಿಕನ ಪಾಲಿಗೆ ಆಧುನಿಕ ಸಂದರ್ಭದ ಸಂಕೀರ್ಣ ಶ್ರಮವಿಭಜನೆ ತಂದಿಟ್ಟಿರುವುದು ಕಟು ವಾಸ್ತವ. ಹೀಗೆ ಸಂಸ್ಕೃತಿಯಾಗಿದ್ದ ಶ್ರಮ ಒತ್ತಡವಾಗಿ ಸ್ಥಿತ್ಯಂತರ ಹೊಂದಿದ್ದೇ ಒಂದು ದೊಡ್ದ ದುಡಿಯುವ ಜನಸಮೂಹ ಪರಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡದ್ದು ಕೂಡಾ ಸತ್ಯವೇ. ಇನ್ನೊಂದು ಬದಿ ಮೇಲವರ್ಗ ಮತ್ತು ಮಧ್ಯಮವರ್ಗಗಗಳು ಈ ಕೆಳಗಿನ ದುಡಿಯುವ ಜನಸಮೂಹವನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಯ ಈಡೇರಿಕೆಯಲ್ಲಿ ಮತದಾರನನ್ನು ಸದ್ಯದ ಸಂದರ್ಭದ ರಾಜಕಾರಣಿಗಳು ಬಳಸಿಕೊಳ್ಳುವಷ್ಟೇ ಯತಾರ್ಥವಾಗಿ ಕೆಳ ವರ್ಗಗಳ ಕಾರ್ಮಿಕರನ್ನು ಮೇಲಿನ ವರ್ಗಗಳು ಬಳಸಿಕೊಂಡು ಬೆಳೆದದ್ದು, ಬಲಿತದ್ದು ಸರ್ವ ವಿಧಿತವೇ.

ನಾವೀಗ ಬದುಕಿರುವ ಸಂದರ್ಭದಲ್ಲಂತೂ ಶ್ರಮ ಎನ್ನುವುದು ಇನ್ನಷ್ಟು ತೀಕ್ಷ್ಣವಾಗಿ ಕಾರ್ಮಿಕನನ್ನು ಯಂತ್ರದ ಬಿಡಿಭಾಗದಷ್ಟೇ ಗೌಣವಾಗಿ ಕಾಣುವ ಸ್ಥಿತಿ ಉದ್ಭವವಾಯಿತು. ಏನೋ ಒಂದರ ಉತ್ಪಾದನೆಗಾಗಿ ದಿನದ ಎಂಟು ಘಂಟೆಗಳ ಕಾಲ ಒಬ್ಬ ಶ್ರಮಿಕ ಅನಿವಾರ್ಯವಾಗಿ ದುಡಿಯಲೇಬೇಕಾದ ಒತ್ತಡವನ್ನು ತಂದಿಟ್ಟ ಕೊಡುಗೆ ಈ ಬೃಹತ್ ಗಾತ್ರದ ಯಂತ್ರಗಳಿಗೆ ಮತ್ತು ಅಲ್ಲಿ ಹೂಡಲಾದ ಬಂಡವಾಳಕ್ಕೆ ಸಲ್ಲುತ್ತದೆ. ತಾನೇ ಉತ್ಪಾದಿಸಿದ ವಸ್ತುವೊಂದು ತನ್ನಿಂದ ಯಾವುದೇ ರೀತಿಯ ನಿಯಂತ್ರಣಕ್ಕೊಳಪಡಲಾಗದ, ಸಂವೇದನಾರಹಿತ ಸ್ಥಿತಿ ಅದರ ಸೃಷ್ಟಿಕರ್ತನಲ್ಲಿ ಅತೃಪ್ತ ಮನೋಭಾವವನ್ನು ಬೆಳೆಸಿದ್ದು ಸ್ವಾಭಾವಿಕವೇ. ಶ್ರಮಿಕನೋರ್ವ ತನಗೆ ಇಷ್ಟವಿರುವ ಉತ್ಪಾದನೆಯ ಬದಲಾಗಿ ಸೂಚಿತ ಉತ್ಪಾದನೆಗಾಗಿರುವ ಯಂತ್ರವಾಗಿ ಮಾರ್ಪಟ್ಟಿರುವುದು ಕೂಡಾ ಆಧುನಿಕ ಸಂದರ್ಭದ ಅನಿವಾರ್ಯತೆಯೇ ಹೌದು. ಯಂತ್ರಗಳು ಮಾನವನನ್ನು ನಿಯಂತ್ರಿಸುವ, ಅವನ ಸಂವೇದನೆಗಳ ಮೇಲೆ ಸವಾರಿ ಮಾಡುವ ಕ್ರಿಯೆ ಆರಂಭವಾಯಿತು. ಯಂತ್ರಗಳಿಂದ ನಿರ್ವಹಿಸಲಾಗದ ಕಾರ್ಯಗಳಿಗಾಗಿ ಮಾತ್ರ ಮನುಷ್ಯ ಸೀಮಿತನಾಗಿ ಉಳಿದ. ಸದ್ಯದಲ್ಲಿ ಶ್ರಮ ಎನ್ನುವುದು ಹಣಕ್ಕೆ ಪರ್ಯಾಯವಾಗಿ ಮಾರಿಕೊಳ್ಳುವ ಒಂದು ದುಡಿಮೆಯಾಗಿ ಉಳಿಯಿತು. ಉದ್ದಿಮೆಗಳಲ್ಲಿ ಕೆಲಸ ಮಾಡುವವರಿಗಿಂತಲೂ ಉದ್ದಿಮೆ ಮುಖ್ಯವಾಗುವ ಸನ್ನಿವೇಶ ನಿರ್ಮಾಣವಾಯಿತು. ಈ ಬಗೆಯ ಪರಿವರ್ತನೆಗಳ ಹೊಡೆತಕ್ಕೆ ವಿಶ್ವದಲ್ಲಿ ಒಂದು ದೊಡ್ಡ ದುಡಿಯುವ ಜನಸಮೂಹ ಅಸಂತುಷ್ಟ ಸ್ಥಿತಿಯಲ್ಲಿಯೇ ಉಳಿಯಬೇಕಾಯಿತು.

ಪ್ರಸ್ತುತ ಸಂದರ್ಭದಲ್ಲಿ ಶ್ರಮ ತನ್ನ ತೀವ್ರತೆಯ ಮೂಲಕ ಎರಡು ಅತಿ ಮುಖ್ಯವಾದ ಪರಿಣಾಮಗಳನ್ನು ಸಮಷ್ಟಿಯ ಮೇಲೆ ಉಂಟು ಮಾಡಿರುವುದಿದೆ.

  1. ಬಳಕೆದಾರರಿಗೆ ಉತ್ಕೃಷ್ಟವಾದುದನ್ನು ಕೊಡಬೇಕು ಎಂದು ಪೈಪೋಟಿಗಿಳಿದ ಉದ್ದಿಮೆಗಳು ಪರೋಕ್ಷವಾಗಿ ಅವರನ್ನು ಆಲಸಿಗಳನ್ನಾಗಿ ಮಾಡುವ ಮೂಲಕ ಅವರಲ್ಲಿಯ ಕ್ರಿಯಾತ್ಮಕತೆಯನ್ನು ಕೊಲ್ಲತೊಡಗಿದವು. ನಮ್ಮ ಮನೆಗಳಲ್ಲಿಯ ಅಡುಗೆ ಸಾಧನಗಳನ್ನು ಗಮನಿಸಿದರೂ ಸಾಕು ಈ ಮಾತಿನ ತಾತ್ಪರ್ಯ ಮನದಟ್ಟಾಗುತ್ತದೆ. ಕೇವಲ ಐದೇ ನಿಮಿಷಗಳಲ್ಲಿ ಅಡುಗೆ ರೆಡಿ ಎನ್ನುವ ಜಾಹೀರಾತುಗಳು, ತರಹೇವಾರಿ ಉಪಕರಣಗಳು ಅಡುಗೆ ಮಾಡುವವರಲ್ಲಿಯ ಕೌಶಲ್ಯವನ್ನು ಕುಲಗೆಡಿಸಿ ಅವರನ್ನು ಕಿರುತೆರೆಯ ಮುಂದೆ ಕುಕ್ಕರು ಬಡಿದದ್ದು ಸುಳ್ಳಂತೂ ಅಲ್ಲ. ಕೇವಲ ಅಡುಗೆ ಮನೆಗೆ ಮಾತ್ರ ಇದು ಸೀಮಿತವಲ್ಲ.
  2. ಈ ಬಗೆಯ ತೀಕ್ಷ್ಣವಾದ ಶ್ರಮ ವಿಭಜನೆ ಮತ್ತು ಪೈಪೋಟಿಯಿರುವ ಔದ್ಯೋಗಿಕ ಪರಿಸರದಲ್ಲಿರುವ ಯಾರೂ ಆರೋಗ್ಯಕರ ಮನ:ಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ. ಮಾರುವವ, ಕೊಳ್ಳುವವ, ಶ್ರಮಿಕ, ಪ್ರತಿಸ್ಪರ್ಧೆ ಹೀಗೆ ಎಲ್ಲರೂ ಏನೋ ಒಂದನ್ನು ಕಳೆದುಕೊಂಡು ಚಡಪಡಿಕೆಯ ಹುಡುಕಾಟದಲ್ಲಿದ್ದವರಂತೆ ವ್ಯವಹರಿಸುತ್ತಾರೆ. ಈ ಬಗೆಯ ಇನ್ನೂ ಅನೇಕ ಬಗೆಯ ಧಾವಂತಗಳಿಗೆ ಕಾರಣವಾಗಿರುವ ಆಧುನಿಕ ಸಂದರ್ಭದ ಶ್ರಮಜೀವನ ಇಷ್ಟು ಮಾತ್ರಕ್ಕೆ ವಿರಮಿಸುತ್ತದೆ ಎಂದು ಹೇಳುವಂತಿಲ್ಲ. ಮುಂಬರುವ ದಿನಗಳಲ್ಲಿ ಇದರ ತೀಕ್ಷ್ಣತೆ ಇಡೀ ಸಮಾಜವನ್ನು ರೋಗಗ್ರಸ್ಥ ಸ್ಥಿತಿಗೆ ತಳ್ಳಿದರೂ ಅಚ್ಚರಿ ಬೇಡ.