ದಲಿತರ ಪ್ರತ್ಯೇಕ ಮಾಧ್ಯಮ ಇಂದಿನ ಅಗತ್ಯ

– ಆನಂದ ಪ್ರಸಾದ್

ದಲಿತರು, ಹಿಂದುಳಿದವರಿಗೆ ಭಾರತದ ಮಾಧ್ಯಮಗಳಲ್ಲಿ ಪ್ರಾತಿನಿಧ್ಯ ಕಡಿಮೆ ಅಥವಾ ಇಲ್ಲವೆಂದರೂ ಸರಿಯೇನೋ. ಬಹುತೇಕ ಮಾಧ್ಯಮಗಳು ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಯ ಹಿಡಿತದಲ್ಲಿ ಇವೆ. ಹೀಗಾಗಿ ದಲಿತರ, ಹಿಂದುಳಿದವರ ಧ್ವನಿ ಮಾಧ್ಯಮ ಲೋಕದಲ್ಲಿ ಕೇಳಿಬರುವುದು ಕಡಿಮೆಯೇ. ಪುರೋಹಿತಶಾಹಿ ಮಾಧ್ಯಮಗಳನ್ನು ಸ್ಥಾಪಿಸಿ ನಡೆಸುವುದು ಕಡಿಮೆಯಾದರೂ ಬಂಡವಾಳಶಾಹಿಗಳು ಸ್ಥಾಪಿಸಿದ ಮಾಧ್ಯಮಗಳಲ್ಲಿ ಪುರೋಹಿತಶಾಹಿ ಮನಸ್ಸಿನ ವ್ಯಕ್ತಿಗಳು ಆಯಕಟ್ಟಿನ ನಿಯಂತ್ರಕ ಸ್ಥಾನವಾದ ಪ್ರಧಾನ ಸಂಪಾದಕ, ಸಂಪಾದಕ ಸ್ಥಾನದಲ್ಲಿ ಆಸೀನರಾಗಿರುವುದು ಭಾರತದಾದ್ಯಂತ ಕಂಡುಬರುವ ವಿದ್ಯಮಾನ. ಇದರಿಂದಾಗಿ ಭಾರತದ ಮಾಧ್ಯಮಗಳಲ್ಲಿ ವೈಚಾರಿಕತೆಗೆ, ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ದೊರಕಲೇ ಇಲ್ಲ ಮತ್ತು ದೊರಕುವ ಸಾಧ್ಯತೆಯೂ ಇಲ್ಲ. ಭಾರತದಲ್ಲಿ ವೈಚಾರಿಕತೆಗೆ, ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ದೊರಕಿದ್ದಿದ್ದರೆ ಭಾರತದ ಇಂದಿನ ಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿರುತ್ತಿತ್ತು.

ದಲಿತರು, ಹಿಂದುಳಿದವರಿಗೆ ಧ್ವನಿ ಸಿಗಬೇಕಾದರೆ ದಲಿತರು, ಹಿಂದುಳಿದರು ತಮ್ಮದೇ ಆದ ಮಾಧ್ಯಮಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ. ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಗಳ ಜಂಟಿ ನಿಯಂತ್ರಣದಲ್ಲಿ ಇರುವ ಪ್ರಸಕ್ತ ಮಾಧ್ಯಮಗಳಲ್ಲಿ ದಲಿತರಿಗೆ, ಹಿಂದುಳಿದವರಿಗೆ ಧ್ವನಿ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ ದಲಿತರು, ಹಿಂದುಳಿದವರು ತಮ್ಮದೇ ಆದ ಪ್ರತ್ಯೇಕ ಟಿವಿ ವಾಹಿನಿಗಳು ಹಾಗೂ ಮುಖ್ಯವಾಹಿನಿಯ ಪತ್ರಿಕೆಗಳನ್ನು ಕಟ್ಟಿಕೊಳ್ಳುವುದು ಅಗತ್ಯ. ಇಂಥ ಪ್ರಯತ್ನಗಳಿಗೆ ದಲಿತ, ಹಿಂದುಳಿದ ವರ್ಗದ ಉದ್ಯಮಿಗಳು ಹಾಗೂ ರಾಜಕಾರಣಿಗಳು ಮುಂದಾಗುವುದು ಅಗತ್ಯ.

ಇಂದು ದಲಿತ ಉದ್ಯಮಿಗಳು ತಮ್ಮದೇ ಆದ ’ದಲಿತ್ ಚೇಂಬರ್ ಆಫ್ ಇಂಡಸ್ಟ್ರಿ’ ಹಾಗೂ ದಲಿತ ಉದ್ಯಮಿಗಳಿಗೆ ಹಣಕಾಸು ನೆರವು ಒದಗಿಸಲು ತಮ್ಮದೇ ಆದ ಹಣಕಾಸು ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದು ಇದೇ ರೀತಿ ದಲಿತ ಟಿವಿ ವಾಹಿನಿಗಳು ಹಾಗೂ ಪತ್ರಿಕೆಗಳನ್ನೂ ಸ್ಥಾಪಿಸಿ ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಧ್ವನಿ ನೀಡಬೇಕಾದ ಅಗತ್ಯ ಹೆಚ್ಚಾಗಿದೆ. ದಲಿತರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದು ಹಾಗೂ ಪುರೋಹಿತಶಾಹಿ ಚಿಂತನೆಗಳಿಂದ ದಲಿತ, ಹಿಂದುಳಿದ ವರ್ಗಗಳನ್ನು ಬಿಡಿಸುವುದು ಈ ಮಾಧ್ಯಮಗಳ ಪ್ರಧಾನ ಗುರಿಯಾಗಿರಬೇಕು. ದಲಿತರು ಹೆಚ್ಚು ವೈಚಾರಿಕವಾದ ಮೂಲ ಬೌದ್ಧ ಧರ್ಮದೆಡೆಗೆ ಸಾಗುವಂತೆ ದೇಶಾದ್ಯಂತ ಜಾಗೃತಿ ಮೂಡಿಸುವ ಕೆಲಸ ಆ ಮಾಧ್ಯಮಗಳು ಮಾಡಬೇಕು. ಆಗ ಇಡೀ ಭಾರತದಲ್ಲಿ ವೈಚಾರಿಕ ಕ್ರಾಂತಿ ಸಾಧ್ಯವಾಗಬಹುದು.

ಮಾಯಾವತಿಯಂಥ ದಲಿತ ರಾಜಕಾರಣಿಗಳು ಉತ್ತರ ಪ್ರದೇಶದಂಥ ದೊಡ್ಡ ರಾಜ್ಯವೊಂದರ ಮುಖ್ಯಮಂತ್ರಿಯಾದರೂ ದಲಿತರ ಹಾಗೂ ಹಿಂದುಳಿದವರಿಗೆ ಧ್ವನಿ ನೀಡುವ ಹಾಗೂ ಅವರಲ್ಲಿ ಜಾಗೃತಿ, ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸಲು ನೆರವಾಗಬಲ್ಲಂಥ ರಾಷ್ಟ್ರ ಮಟ್ಟದ ಒಂದು ಟಿವಿ ವಾಹಿನಿ ಹಾಗೂ ಪತ್ರಿಕೆಯನ್ನು ಕಟ್ಟಲು ಸಾಧ್ಯವಿತ್ತು. ಇಂಥ ಒಂದು ರಚನಾತ್ಮಕ ಕೆಲಸ ಮಾಡುವ ಬದಲು ಮಾಯಾವತಿಯವರು ನಿರ್ಜೀವ ಕಲ್ಲು ಪ್ರತಿಮೆಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ವ್ಯಯಿಸಿರುವುದು ವ್ಯರ್ಥ. ಇದೇ ಕೋಟ್ಯಂತರ ರೂಪಾಯಿ ಹಣವನ್ನು ಒಂದು ದಲಿತ ಟಿವಿ ವಾಹಿನಿಯೋ, ಪತ್ರಿಕೆಯನ್ನೋ ಕಟ್ಟಲು ಬಳಸಿದ್ದರೆ ಎಷ್ಟೋ ಪ್ರಯೋಜನ ಆಗುತ್ತಿತ್ತು.

ದಲಿತ ರಾಜಕಾರಣಿಗಳಲ್ಲಿ ಚಿಂತನೆಯ ಕೊರತೆ ಮತ್ತು ಯಾವುದಕ್ಕೆ ಆದ್ಯತೆ ನೀಡಬೇಕು ಎಂಬ ವಿವೇಚನೆ ಇಲ್ಲದೆ ಇರುವುದನ್ನು ಇದು ತೋರಿಸುತ್ತದೆ. ಹೀಗಾಗಿ ಅಧಿಕಾರ ದೊರೆತರೂ ಅದನ್ನು ಬಳಸಿ ದಲಿತರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವ ಮೂಡಿಸಲು ದಲಿತ ರಾಜಕಾರಣಿಗಳು ಆದ್ಯತೆ ನೀಡದೆ ತಮ್ಮದೇ ಆದ ಪ್ರತಿಮೆಗಳ ಸ್ಥಾಪನೆ ಹಾಗೂ ಆಡಂಬರ, ಅಬ್ಬರದ ಜೀವನಶೈಲಿಗೆ ಮರುಳಾಗಿರುವುದು ಅಂಬೇಡ್ಕರ್ ಅವರ ಚಿಂತನೆಗಳಿಗೆ ವಿರುದ್ಧವಾದ ನಡವಳಿಕೆಯಾಗಿದೆ. ದಲಿತರಲ್ಲಿ, ಹಿಂದುಳಿದವರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸುವುದು ದಲಿತ ನಾಯಕರ ಪ್ರಧಾನ ಆದ್ಯತೆ ಆಗಿರಬೇಕಾಗಿತ್ತು. ಆದರೆ ಅಂಥ ಜಾಗೃತಿ ದಲಿತ ನಾಯಕರಲ್ಲಾಗಲಿ, ದಲಿತ ಉದ್ಯಮಿಗಳಲ್ಲಾಗಲಿ ಮೂಡಲೇ ಇಲ್ಲ. ದಲಿತರು ಮತ್ತು ಹಿಂದುಳಿದವರಲ್ಲಿ ವೈಚಾರಿಕ ಕ್ರಾಂತಿ ಮೂಡಿಸುವುದು ಅವರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲಗೊಳಿಸಲು ಅಗತ್ಯವಾದ ಭೂಮಿಕೆ ಆಗಿದೆ. ಈ ಕೆಲಸವನ್ನು ಮಾಡಲು ದಲಿತ ಹಾಗೂ ಹಿಂದುಳಿದ ವರ್ಗದ ನಾಯಕರು, ಉದ್ಯಮಿಗಳು ಪ್ರಧಾನ ಆದ್ಯತೆ ನೀಡಬೇಕಾದ ಅಗತ್ಯ ಇಂದು ಬಹಳಷ್ಟಿದೆ. ದಲಿತರು ಪುರೋಹಿತಶಾಹಿ ಚಿಂತನೆಗಳಿಂದ ಹೊರಬಂದು ತಮ್ಮದೇ ಆದ ಸ್ವತಂತ್ರ ಮನೋಭಾವ ಹಾಗೂ ಚಿಂತನೆಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ. ಹಾಗಾದರೆ ಭಾರತವು ಪುರೋಹಿತಶಾಹಿ ಚಿಂತನೆಗಳ ಕಬಂಧಬಾಹುಗಳಿಂದ ಸ್ವಲ್ಪವಾದರೂ ಮುಕ್ತಿ ಪಡೆಯಲು ಸಾಧ್ಯವಿದೆ.

2 thoughts on “ದಲಿತರ ಪ್ರತ್ಯೇಕ ಮಾಧ್ಯಮ ಇಂದಿನ ಅಗತ್ಯ

  1. vageesh kumar g a

    ಆನಂದ ಪ್ರಸಾದ್ ಅವರೇ, ನೀವು ಹೇಳಿರುವುದೇನೋ ಸರಿ. ಆದ್ರೆ, ದಲಿತ ರಾಜಕಾರಣಿಗಳಾಗಲಿ, ಉನ್ನತ ಅಧಿಕಾರಿಗಳಾಗಲಿ, ತಮ್ಮ ಸಮುದಾಯಕ್ಕೆ ಒಳ್ಳೆಯದು ಮಾಡಿದ ಉದಾಹರಣೆ ಎಶ್ಟಿದೆ ಹೇಳಿ. ಎಸ್ ಸಿ ಮತ್ತು ಎಸ್ ಟಿಗಳಿಗೆ ಮೀಸಲಾದ ಕ್ಷೇತ್ರಗಳಲ್ಲಿ ಗೆದ್ದವರು ಅವರ ಕಮ್ಯುನಿಟಿಗೆ ಏನೂ ಮಾಡಲ್ಲ. ನೀವು ಹೇಳುವಂತೆ ಪ್ರತ್ಯೇಕ ಮಾಧ್ಯಮ ಮಾಡಿದ್ರೂ ಅದರ ಕಥೆ ಅಶ್ಟೇ. ಯಾಕೆಂದ್ರೆ, ಬಹುಸಂಖ್ಯಾತ ದಲಿತರಿಗೆ ದಿನಪತ್ರಿಕೆ ಪರ್ಚೇಸ್ ಮಾಡುವ ಶಕ್ತಿಯಿಲ್ಲ. ಇದ್ದರೂ ಅವರಿಗೆ ಓದು ಬರಹ ಬರಲ್ಲ. ದಿವಂಗತ ಬಂಗಾರಪ್ಪ ಅವರಲ್ಲಿ ಒಮ್ಮೆ ಸೊರಬದ ರಸ್ತೆಗಳನ್ನು ರಿಪೇರಿ ಮಾಡುವಂತೆ ಕೇಳಿಕೊಂಡ್ರಂತೆ. ಅದಕ್ಕೆ ಬಂಗಾರಪ್ಪ ಏನು ಹೇಳಿದ್ರು ಗೊತ್ತಾ ? ರಸ್ತೆ ಚೆನ್ನಾಗಿ ಮಾಡಿಸಿದ್ರೆ ಕಾರು ಇರುವ ಶ್ರೀಮಂತರು ವೇಗವಾಗಿ ಕಾರು ಓಡಿಸಿಕೊಂಡು ಹೋಗ್ತಾರೆ. ನಿಮ್ಮ ಎತ್ತಿನ ಗಾಡಿಗೆ ಆಗ ಕಶ್ಟ ಆಗುತ್ತೆ. ಹೀಗಾಗಿ ರೋಡ್ ರಿಪೇರಿ ಮಾಡಲ್ಲ ಅಂದ್ರಂತೆ. ಯಾಕೆ ಇದನ್ನು ಉದಾಹರಿಸಿದೆ ಅಂದ್ರೆ, ನಮ್ಮ ರಾಜಕಾರಣಿಗಳಿಗೆ ಅಥವಾ ದಲಿತ ಅಧಿಕಾರಿಗಳಿಗೆ ದಲಿತರ ಸ್ತಿತಿಗತಿ ಚೆನ್ನಾಗಿ ಆಗುವುದು ಬೇಕಾಗಿಲ್ಲ. ಯಾಕೆಂದ್ರೆ ಅವರು ಚೆನ್ನಾಗಿ ಅರ್ಥ ಮಾಡಿಕೊಂಡು ಸ್ವಂತಿಕೆ ಬೆಳೆಸಿಕೊಂಡ್ರೆ ಇವರ ಬುಡಕ್ಕೆ ನೀರು ಬರುತ್ತದೆ.

    Reply
  2. prasad raxidi

    ಕೆಲವು ವರ್ಷಗಳ ಹಿಂದೆ ಸರ್ಕಾರ ಸಿ ಮತ್ತು ಡಿ ವರ್ಗದ ಕಂದಾಯ ಜಮೀನನ್ನು ಅರಣ್ಯೀಕರಣಕ್ಕಾಗಿ ಅರಣ್ಯ ಇಲಾಖೆಗೆ ವರ್ಗಾಯಿಸಿತು. ಆಸಮಯದಲ್ಲಿ ನಮ್ಮಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿಗಳೊಬ್ಬರು (ದಲಿತರು) ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ಆರುನೂರಕ್ಕು ಹೆಚ್ಚು ಎಕರೆ ಜಮೀನನ್ನು ಸಿ ಮತ್ತು ಡಿ ಎಂದು ವರ್ಗೀಕರಿಸಿ ವರದಿ ಕೊಟ್ಟರು. ಅದರಲ್ಲಿ ಸುಮಾರು ಎಂಬತ್ತು ದಲಿತ ಕುಟುಂಬಗಳು ದರಕಾಸ್ತಿಗಾಗಿ ಅರ್ಜಿ ಸಲ್ಲಿಸಿದ್ದ ಮುನ್ನೂರು ಎಕರೆಗಳಷ್ಟು ಕೃಷಿಯೋಗ್ಯ ಭೂಮಿ ಇತ್ತು. ಅದೆಲ್ಲ ಅರಣ್ಯ ಇಲಾಖೆ ಪಾಲಾಯಿತು. ಹೀಗೇಕೆ ಮಾಡಿದಿರಿ ಎಂದು ಆ ಅಧಿಕಾರಿಯನ್ನು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರ ” ನಮ್ಮೋರಿಗೆ ಜಮೀನು ಕೊಟ್ರೆ ಮಾರಿಕೊಂಡು ತಿಂತಾರೆ.. ಅವರಿಗೆ ಜಮೀನು ಬೇಡ” ಇಂತ ಕೆಲವರು ಅಧಿಕಾರಿಗಳು ಅಂದೂ ಇದ್ದರು- ಇಂದೂ ಹಾಗೇ ಉಳಿದಿದ್ದಾರೆ

    Reply

Leave a Reply

Your email address will not be published. Required fields are marked *