Daily Archives: May 10, 2012

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-6)


– ಡಾ.ಎನ್. ಜಗದೀಶ್ ಕೊಪ್ಪ  


 

ಪ್ರಯೋಗ ಮತ್ತು ಸಿದ್ಧಾಂತ ಹಾಗೂ ಸಮಕಾಲೀನ ಸಮಸ್ಯೆಗಳ ವಿಶ್ಲೇಷಣೆ ಜೊತೆ ಜೊತೆಗೆ ಸ್ವಯಂ ವಿಮರ್ಶೆಯನ್ನು ಗುರಿಯಾಗಿಟ್ಟುಕೊಂಡು ರಚಿತವಾದ ನೂತನ ಪಕ್ಷವನ್ನು ಪಕ್ಷದ ಫೈರ್ ಬ್ರಾಂಡ್ ನಾಯಕನೆಂದೇ ಹೆಸರಾಗಿದ್ದ ಕನುಸನ್ಯಾಲ್ ನೇತೃತ್ವದಲ್ಲಿ ಘೋಷಿಸಲಾಯಿತು. ಪಕ್ಷದ ಕಾರ್ಯಕರ್ತರ ಮೊದಲ ರ್‍ಯಾಲಿಯನ್ನು 1969 ರ ಮೇ ಒಂದನೇ ತಾರೀಖು ಕೊಲ್ಕತ್ತ ನಗರದಲ್ಲಿ ಆಯೋಜಿಸಲಾಗಿತ್ತು. ಮಾವೋತ್ಸೆ ತುಂಗನ ವಿಚಾರಧಾರೆಗಳಿಂದ ಪ್ರಣೀತವಾಗಿದ್ದ ನೂತನ ಕಮ್ಯೂನಿಷ್ಟ್ ಪಕ್ಷ, ಇನ್ನು ಮುಂದೆ ಭಾರತದಲ್ಲಿ ಹೊಸ ಸೂರ್ಯ ಮತ್ತು ಚಂದ್ರ ಉದಯಿಸಲಿದ್ದಾರೆ ಎಂದು ಹೆಮ್ಮೆಯಿಂದ ಘೋಷಿಸಿಕೊಂಡಿತ್ತು. ದುರಂತವೆಂದರೆ, ಪಕ್ಷದ ಮೊದಲ ರ್‍ಯಾಲಿ ಗಲಭೆಯಲ್ಲಿ ಆರಂಭಗೊಂಡು, ಹಿಂಸಾಚಾರದ ನಡುವೆ ಮುಕ್ತಾಯಗೊಂಡಿತು. ಪಕ್ಷದ ಕಾರ್ಯಕರ್ತರು ಮತ್ತು ಆಡಳಿತಾರೂಢ ಪಕ್ಷಗಳಾದ ಕಾಂಗ್ರೇಸ್ ಮತ್ತು ಕಮ್ಯೂನಿಷ್ಟ್ ಪಕ್ಷಗಳ ಕಾರ್ಯಕರ್ತರು ರ್‍ಯಾಲಿಯ ಮೇಲೆ ಕಲ್ಲು ಇಟ್ಟಿಗೆ ಮತ್ತು ಪೆಟ್ರೊಲ್ ಬಾಂಬ್ ತೂರುವುದರ ಮೂಲಕ ಹೊಸ ಪಕ್ಷದ ರ್‍ಯಾಲಿಯನ್ನು ವಿಘ್ನಗೊಳಿಸಿದರು. ಗಲಭೆಯಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇವರಲ್ಲಿ ಐವತ್ತಕ್ಕೂ ಹೆಚ್ಚು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾದವು.

ಹೀಗೆ ಹಿಂಸೆಯಲ್ಲಿ ಆರಂಭಗೊಂಡ ನೂತನ ಕಮ್ಯೂನಿಷ್ಟ್ ಪಕ್ಷದ ನಾಯಕರ ನಡುವೆಯೂ ಹಲವು ಬಗೆಯ ಭಿನ್ನಾಭಿಪ್ರಾಯಗಳು ಆರಂಭದಿಂದಲೂ ಇದ್ದವು. ಇವೆಲ್ಲವೂ ಈ ಸಂದರ್ಭದಲ್ಲಿ ಸ್ಪೋಟಗೊಂಡವು. ಹಲವು ಟ್ರೇಡ್ ಯೂನಿಯನ್ ಸಂಘಟನೆಗಳ ನಾಯಕನಾಗಿದ್ದ ಪರಿಮಳ್‌ದಾಸ್ ಗುಪ್ತಾರವರನ್ನು ಯಾವೊಂದು ಸಂದರ್ಭದಲ್ಲೂ ಪಕ್ಷ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಗೆರಿಲ್ಲಾ ಯುದ್ದ ತಂತ್ರಕ್ಕೆ ದಾಸ್ ಗುಪ್ತಾ ಆಕ್ಷೇಪ ವ್ಯಕ್ತಪಡಿಸಿದರು. ಚೆಗೇವಾರನ ಈ ಗೆರಿಲ್ಲಾ ಯುದ್ಧ ತಂತ್ರ ಎಲ್ಲಾ ರಾಷ್ಡ್ರಗಳಿಗೆ ಅನ್ವಯವಾಗುವುದಿಲ್ಲ ಎಂಬುದು ಗುಪ್ತಾರವರ ನಿಲುವಾಗಿತ್ತು.  ಭಾರತದಂತಹ ಸಂದರ್ಭದಲ್ಲಿ ಗುಡ್ಡಗಾಡು ಇರುವ ಪ್ರದೇಶಗಳನ್ನು ಹೊರತು ಪಡಿಸಿದರೆ, ಬೇರೆಲ್ಲೂ ಇದು ಯಶಸ್ವಿಯಾಗುವುದಿಲ್ಲ ಎಂಬುದು ಹಲವು ನಾಯಕರ ನಂಬಿಕೆಯಾಗಿತ್ತು.

ಕೊಲ್ಕತ್ತ ನಗರದಲ್ಲಿ ನಡೆದ ರ್‍ಯಾಲಿಯ ಅಧ್ಯಕ್ಷತೆವಹಿಸಿದ್ದ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಅಸಿತ್‌ಸೇನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ಪಕ್ಷ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ನನ್ನನ್ನು ಸಂಪೂರ್ಣವಾಗಿ ಕತ್ತಲಲ್ಲಿ ಇಟ್ಟಿತು ಎಂದು ಆರೋಪಿಸಿದರು. ಹೀಗೆ ಹಲವು ಭಿನ್ನಾಭಿಪ್ರಾಯಗಳ ನಡುವೆ ತೀವ್ರಗಾಮಿ ಧೋರಣೆಗಳನ್ನು ಹೊಂದಿದ ನೂತನ ಪಕ್ಷ ಕೊನೆಗೂ ಅಸ್ತಿತ್ವ ತಾಳಿತು.

ಚಾರುಮುಜಂದಾರ್‌ನ ಬೆಂಕಿಯುಂಡೆಯಂತಹ ಮಾತುಗಳು ಪಕ್ಷಕ್ಕೆ ಹಲವಾರು ಬಿಸಿರಕ್ತದ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. 1971 ರ ವೇಳೆಗೆ ಈಶಾನ್ಯ ಭಾರತದ ರಾಜ್ಯಗಳು, ಗೋವಾ, ಪಾಂಡಿಚೇರಿ, ಅಂಡಮಾನ್ ನಿಕೋಬಾರ್, ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ. ದೇಶದ ಬಹುತೇಕ ರಾಜ್ಯಗಳಲ್ಲಿ ಮಾವೋವಾದಿ ಕಮ್ಯೂನಿಷ್ಟ್ ಪಕ್ಷ ನೆಲೆಯೂರಿತು. ವರ್ಗ ವ್ಯವಸ್ಥೆಯನ್ನು ಪೋಷಿಸಿಕೊಂಡು ಬರುತ್ತಿರುವ ಧನಧಾಹಿ ಶ್ರೀಮಂತರು ಮತ್ತು ಜಮೀನ್ದಾರರ ಬಿಸಿ ನೆತ್ತರಿನಲ್ಲಿ ಕೈ ಅದ್ದದೆ ಇರುವ ವ್ಯಕ್ತಿ ನಮ್ಮ ಪಕ್ಷದ ಕಾರ್ಯಕರ್ತನಾಗಿ ಇರಲು ಅನರ್ಹ ಎಂಬ ಚಾರು ಮುಜಂದಾರನ ವಿವಾದಾತ್ಮಕ ಹೇಳಿಕೆ ಹಲವು ಆಕ್ಷಪೇಣೆಗಳ ನಡುವೆಯೂ ಕಾರ್ಯಕರ್ತರಿಗೆ ಸ್ಪೂರ್ತಿಯ ಮಾತಾಗಿ ಪರಿಣಮಿಸಿತು.

ಆಂಧ್ರ, ಒರಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ  ಕೃಷಿಕರನ್ನು ಮತ್ತು ಕೂಲಿಗಾರರನ್ನು ಶೋಷಿಸಿಕೊಂಡು ಬಂದಿದ್ದ ಜಮೀನ್ದಾರರು, ಮಾವೋವಾದಿ ಕಮ್ಯೂನಿಷ್ಟರ ಹಿಂಸೆ ಮತ್ತು ಭಯಕ್ಕೆ ಹೆದರಿ ಇರುವ ಆಸ್ತಿಯನ್ನು ಬಿಟ್ಟು ನಗರಗಳಿಗೆ ಪಲಾಯನಗೈದರು. ಅವರ ಗೂಂಡಾಪಡೆ ಹೇಳಹೆಸರಿಲ್ಲದಂತೆ ನಾಶವಾಯಿತು. ಮಾವೋವಾದಿಗಳು ಶಾಖೆ ತೆರದ ಪ್ರದೇಶಗಳಲ್ಲಿ ಜಾತಿ ವ್ಯವಸ್ಥೆ, ವರ್ಗವ್ಯವಸ್ಥೆ, ಇದ್ದಕ್ಕಿದ್ದಂತೆ ಕರಗತೊಡಗಿತು. ಶತಮಾನಗಳ ಕಾಲ ವ್ಯವಸ್ಥೆಯ ಕಪಿಮುಷ್ಟಿಯ ಕೈಯಲ್ಲಿ ನಲುಗಿ ಹೋಗಿದ್ದ ಬಡವರು, ಶ್ರಮಿಕರು, ನೆಮ್ಮದಿಯ ಬದುಕು ಕಟ್ಟಿಕೊಂಡು ಬದುಕಲು ಸಾಧ್ಯವಾಯಿತು. ಇಂತಹ ವಾತಾವರಣ ಪರೋಕ್ಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಮಾವೋವಾದಿಗಳ ಬಗ್ಗೆ  ರೈತರು, ಕೂಲಿಕಾರ್ಮಿಕರು, ಆದಿವಾಸಿಗಳು, ಅನುಕಂಪ. ಪ್ರೀತಿ ಹುಟ್ಟಲು ಕಾರಣವಾಯಿತು.

ಹಳ್ಳಿಗಳಲ್ಲಿ ಅಧಿಕ ಬಡ್ಡಿಗೆ ಹಣ ನೀಡಿ, ಬಡವರನ್ನು ಶೋಷಿಸುತ್ತಿದ್ದ ಲೇವಾದೇವಿಗಾರರು, ಪೊಲೀಸ್ ಮಾಹಿತಿದಾರರನ್ನು  ಹಿಡಿದು ಗಲ್ಲಿಗೇರಿಸುವ ಮೂಲಕ ಒಂದು ರೀತಿಯಲ್ಲಿ ಭಯೋತ್ಪಾದನೆಯ ವಾತಾವರಣವನ್ನು ಮಾವೋವಾದಿಗಳು ನಿರ್ಮಿಸಿದರು. ಘೋಷಿತ ಯದ್ಧದಲ್ಲಿ ಶಾಸ್ತಸ್ತ್ರಗಳು ಅತ್ಯಗತ್ಯ ಎಂಬ ಮಾವೋನ ಮಾತುಗಳನ್ನು ಅಕ್ಷರಶಃ ಪ್ರಯೋಗಕ್ಕೆ ಇಳಿಸಿದರು. ಅಲ್ಲದೆ, ಬಿಲ್ಲು, ಬಾಣ, ಭರ್ಜಿ ಮುಂತಾದ ಸಾಂಪ್ರದಾಯಿಕ ಆಯುಧಗಳನ್ನು ತೈಜಿಸಿ, ಬಂದೂಕುಗಳನ್ನು ಕೈಗೆತ್ತಿಕೊಳ್ಳುವುದರ ಮೂಲಕ ಭಾರತ ಸರ್ಕಾರವೂ ಸೇರಿದಂತೆ ಹಲವು ರಾಜ್ಯ ಸರ್ಕಾರಗಳಿಗೆ ಇವರು ಹೊಸ ಸವಾಲೊಂದನ್ನು ಒಡ್ಡಿದರು.

ಚಾರು ಮುಜಂದಾರ್ ನೇತೃತ್ವದ ಹೋರಾಟವನ್ನು ಚೀನಾದ ಕಮ್ಯುನಿಷ್ಟ್ ಪಕ್ಷದ ಮುಖವಾಣಿ ಪತ್ರಿಕೆಯಾದ “ದ ಲಿಬರೇಷನ್” ಪತ್ರಿಕೆ ಮುಕ್ತ ಕಂಠದಿಂದ ಹೊಗಳುವುವುದರ ಮತ್ತಷ್ಟು ಹುರಿದುಂಬಿಸಿತು. ಚಾರು ಮುಜಂದಾರ್ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಗೆರಿಲ್ಲಾ ಯುದ್ಧತಂತ್ರಕ್ಕೆ ಕಾರ್ಯಕರ್ತರನ್ನು ಸಜ್ಜುಗೊಳಿಸಿದನು. ಭೂರಹಿತ ಬಡ ಗೇಣಿದಾರರು, ಕೃಷಿಕೂಲಿ ಕಾರ್ಮಿಕರನ್ನು ಗುರಿಯಾಗಿರಿಸಿಕೊಂಡು ಸಂಘಟನೆಗೆ ಚಾರು ಮತ್ತು ಅವನ ಸಂಗಡಿಗರು ಮುಂದಾದರು.

ಭೂಮಾಲೀಕರ ದಬ್ಬಾಳಿಕೆ ಅತಿಯಾಗಿದ್ದ ಪ್ರದೇಶಗಳಲ್ಲಿ ಪಕ್ಷದ ಸಂಘಟನೆಗೆ ನಿರೀಕ್ಷೆ ಮೀರಿ ಒಲವು ವ್ಯಕ್ತವಾಯಿತು. ಇದಕ್ಕಾಗಿ ನಾಲ್ಕು ಅಂಶದ ಕಾರ್ಯಕ್ರಮವನ್ನು ರೂಪಿಸಲಾಯಿತು. ಅವುಗಳೆಂದರೆ.

  1. ಭೂಮಾಲೀಕರ ಒಡೆತನ ಮತ್ತು ದಬ್ಬಾಳಿಕೆ ಇರುವ ಪ್ರದೇಶಗಳನ್ನು ಮುಕ್ತಗೊಳಿಸಿ, ಅವುಗಳನ್ನು ಸಣ್ಣ ಹಿಡುವಳಿದಾರರ ಸುಪರ್ದಿಗೆವಹಿಸುವುದು.
  2. ಕೆಂಪು ಭಯೋತ್ಪಾದನೆ ಮೂಲಕ (ಹಿಂಸೆ) ಜಮೀನ್ದಾರರನ್ನು ಮಣಿಸಿ, ನೆಮ್ಮದಿಯ ವಾತಾವರಣ ಸೃಷ್ಟಿ ಮಾಡುವುದು.
  3. ಗ್ರಾಮಾಂತರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಚಳವಳಿಯ ನಾಯಕತ್ವವನ್ನು ಮಾವೋವಾದಿ ಕಮ್ಯುನಿಷ್ಟ್ ಪಕ್ಷದ ನಾಯಕರಿಂದ ಸ್ಥಳೀಯ ರೈತರು ಮತ್ತು ಕೂಲಿ ಕಾರ್ಮಿಕರಿಗೆ ವರ್ಗಾಯಿಸುವುದು.
  4. ಜನಸಾಮಾನ್ಯನನ್ನು, ಜಮೀನ್ದಾರರು, ಬಡ್ಡಿ ವ್ಯಾಪಾರದ ಲೇವಾದೇವಿದಾರರು ಇವರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿ ಭಯದಿಂದ ಮುಕ್ತರಾಗಿ ಬದುಕುವಂತೆ ಪ್ರೇರೇಪಿಸುವುದು.

ಚಾರು ಮತ್ತು ಸಂಗಡಿಗರ ಈ ಕಾರ್ಯಚರಣೆ ಕೆಲವು ವರ್ಗಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತಾದರೂ, ಅದೊಂದು ಸಾಮಾಜಿಕ ಚಳವಳಿಯಾಗಿ ಎಲ್ಲ ವರ್ಗವನ್ನು ಒಳಗೊಳ್ಳುವಲ್ಲಿ ವಿಫಲವಾಯಿತು. ಒಂದು ವರ್ಷದ ನಂತರ ಸ್ವತಃ ಚಾರು ಮುಜಂದಾರ್ ಇದನ್ನು ಒಪ್ಪಿಕೊಂಡನು. ಮಾವೋತ್ಸೆ ತುಂಗನ ವಿಚಾರಗಳನ್ನು ಅನಕ್ಷರಸ್ತ ಕೂಲಿಕಾರ್ಮಿಕರಿಗೆ ಆದಿವಾಸಿಗಳಿಗೆ ತಲುಪಿಸುವಲ್ಲಿ ಪಕ್ಷ ಸೋತಿದೆ ಎಂದು ಸ್ವಷ್ಟೀಕರಣ ನೀಡಿದನು. 1970 ರ ಮೇ ತಿಂಗಳಿನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಾರತ ಸರ್ಕಾರದ ನೀತಿ ಹಾಗೂ ಧೋರಣೆಗಳನ್ನು ಖಂಡಿಸಿ, ಭಾರತವು ಗಳಿಸಿರುವುದು ನಾಚಿಕೆಗೇಡಿನ ಸ್ವಾತಂತ್ರ್ಯಎಂದು ಬಣ್ಣಿಸಿ. ಹೊಸ ಸ್ವಾತಂತ್ರ್ಯವನ್ನು ಗಳಿಸುವ ನಿಟ್ಟಿನಲ್ಲಿ ಪಕ್ಷಕ್ಕೆ ಹೊಸದಾಗಿ ಕೆಲವು ರಾಜಕೀಯ ಗುರಿಗಳನ್ನು ಸೇರಿಸಲಾಯಿತು. ಇದಕ್ಕಾಗಿ ಪ್ರಜಾಸಮರ (peoples War) ಯುದ್ಧ ಘೋಷಿಸಲಾಯಿತು. ಪಕ್ಷದ ಈ ತೀರ್ಮಾನ ಹಲವು ನಾಯಕರಿಗೆ ಒಪ್ಪಿಗೆಯಾಗಲಿಲ್ಲ. ಇವರುಗಳನ್ನು ಹಲವು ಗೊಡ್ಡು ವಿಚಾರಗಳಿಗೆ ಜೋತುಬಿದ್ದ ಕೇಂದ್ರೀಕೃತ ವ್ಯಕ್ತಿಗಳು ಎಂದು ಟೀಕಿಸಿದ ಚಾರು ಮುಜಂದಾರ್, ಸಮಾಜದಲ್ಲಿ ತಾಂಡವವಾಡುತ್ತಿರುವ ವರ್ಗವ್ಯವಸ್ಥೆಯ ವಿರುದ್ಧ ಹೋರಾಟವನ್ನು ಎಲ್ಲಾ ನೆಲೆಗಳಿಗೆ ವಿಸ್ತರಿಸಬೇಕೆಂದು ಕಾರ್ಯಕರ್ತರಿಗೆ ಕರೆನೀಡಿದ. ಅವನ ಸಂದೇಶ, ಮುಂದಿನ ದಿನಗಳಲ್ಲಿ  ಆಂಧ್ರ, ಶ್ರೀಕಾಕುಳಂ, ಪಶ್ಚಿಮ ಬಂಗಾಳದ, ದೇಬ್ರ ಮತ್ತು ಗೋಪಿಬಲ್ಲಬಪುರ ಜಿಲ್ಲೆ, ಬಿಹಾರದ ಮುರ್ಶರಾಯ್ ಜಿಲ್ಲೆ, ಉತ್ತರಪ್ರದೇಶದ ಲಕ್ಷ್ಮೀಪುರ ಜಿಲ್ಲೆಯ ಪುಲಿಯ ಎಂಬಲ್ಲಿ ಅಗ್ನಿಪರ್ವತದಂತೆ ಸ್ಪೋಟಗೊಂಡಿತು.

(ಮುಂದುವರೆಯುವುದು)