ಪ್ರಜಾವಾಣಿ ನಿಜಕ್ಕೂ ಬದಲಾಗುವುದೇ?


– ಪರಶುರಾಮ ಕಲಾಲ್  


 

ಪತ್ರಿಕೆಗಳ ವಿಶ್ವಾಸಾರ್ಹತೆಯು ಈಗ ದೊಡ್ಡ ಪ್ರಶ್ನೆಯಾಗಿದೆ. ಯಾವ ಪತ್ರಿಕೆಯನ್ನು ವಿಶ್ವಾಸಾರ್ಹ ಎನ್ನುವುದು? ಅತ್ಯಂತ ಜನಪ್ರಿಯ ದಿನಪತ್ರಿಕೆ ಎಂದು ಹಾಕಿಕೊಳ್ಳುತ್ತಿದ್ದ ಪ್ರಜಾವಾಣಿ, ವಿಜಯ ಕರ್ನಾಟಕ ಬಂದ ಮೇಲೆ ಅದನ್ನು ತೆಗೆದು ಹಾಕಿ ಆ ಜಾಗದಲ್ಲಿ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆ ಎಂದು ಹಾಕಿಕೊಂಡಿತು.

ಪ್ರಜಾವಾಣಿಯನ್ನು ನೆನೆದರೆ ದುಃಖ, ವಿಷಾದ ಎರಡೂ ಆಗುತ್ತದೆ. ಕೆ.ಎನ್.ಹರಿಕುಮಾರ್ ಇದ್ದಾಗ ಪ್ರಜಾವಾಣಿ ಹೇಗಿತ್ತು? ದಲಿತರ, ಹಿಂದುಳಿದ ವರ್ಗಗಳ ಪಾಲಿಗೆ ಎಲ್ಲಾ ಬಾಗಿಲು ತೆರೆದು ಪತ್ರಿಕೋದ್ಯಮದಲ್ಲಿ ಅವಕಾಶ ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹರಿಕುಮಾರ್ ಅವರಿಗಿದ್ದ ಬದ್ಧತೆ, ದೂರದೃಷ್ಠಿ, ಸಾಮಾಜಿಕ ನ್ಯಾಯದ ಕಲ್ಪನೆ ಅನುಕರಣೀಯವಾಗಿತ್ತು. ಇದು ಹರಿಕುಮಾರ್‌ರ ನಂತರದ ದಿನಗಳಲ್ಲಿ ಪ್ರಜಾವಾಣಿಯಲ್ಲಿ ಕಂಡು ಬರಲಿಲ್ಲ. ಸಂಪಾದಕೀಯ ಹೊಣೆ ಹೊತ್ತವರು ಅದನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿಲ್ಲ. ಇದು ನಮ್ಮ ಕೆಲಸ ಅಲ್ಲ ಎಂದುಕೊಂಡರು. ಹೀಗಾಗಿ ಪತ್ರಿಕೆ ಹೊಣೆ ಹೊತ್ತ ಸಂಪಾದಕರು ಮಾಲೀಕರ ಸಂಪ್ರೀತಿ ಗಳಿಸುವ ಕೆಲಸ ನಡೆಸಿದರು. ಈ ಲೋಪವೇ ಪ್ರಜಾವಾಣಿಯ ಇವತ್ತು ಈ ಸ್ಥಿತಿ ಮುಟ್ಟಲು ಕಾರಣವಾಗಿದೆ.

ಹರಿಕುಮಾರ್ ನಂತರ ಬಂದ ಕೆ.ಎನ್. ತಿಲಕ್‌ಕುಮಾರ್, ಶಾಂತಕುಮಾರ್ ಅವರು ಹರಿಕುಮಾರರಷ್ಟು ಬುದ್ಧಿವಂತರಲ್ಲ. ಅವರು ತುಂಬಾ ಒಳ್ಳೆಯವರು. ಅವರನ್ನು ದಾರಿ ತಪ್ಪಿಸುವ ಕೆಲಸವನ್ನು ಸಂಪಾದಕೀಯ ಬಳಗ ತನ್ನ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಾ ಬಂತು. ಇದರಿಂದಾಗಿಯೇ, ಅತ್ಯಂತ ಜನಪ್ರಿಯವಾಗಿದ್ದ ಪತ್ರಿಕೆಯೊಂದು ವಿಜಯ ಕರ್ನಾಟಕ ಬಂದ ಮೇಲೆ ತನ್ನ ಜನಪ್ರಿಯತೆಯನ್ನು ಕಳೆದುಕೊಂಡು ಅತ್ಯಂತ ವಿಶ್ವಾಸಾರ್ಹ ದಿನ ಪತ್ರಿಕೆ ಎಂದು ಕರೆದುಕೊಳ್ಳಬೇಕಾಯಿತು. ಈಗ ಆ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಅಂಬೇಡ್ಕರ್ ಜಯಂತಿಯಂದು ದೇವನೂರು ಮಹಾದೇವರ ಅತಿಥಿ ಸಂಪಾದಕತ್ವದಲ್ಲಿ ವಿಶೇಷ ಸಂಚಿಕೆ ರೂಪಿಸಿ ಸಾಂಸ್ಕೃತಿಕ ಲೋಕದವರಿಂದ ಭೇಷ್ ಅನ್ನಿಸಿಕೊಳ್ಳುತ್ತಿದೆ.

ಆದರೆ, ಇದೊಂದು ಸರ್ಕಸ್ ಎನ್ನುವುದು ಪ್ರಜಾವಾಣಿಯನ್ನು ಬಲ್ಲ ಎಲ್ಲರಿಗೂ ಗೊತ್ತು.

ಪ್ರಜಾವಾಣಿ ಮುಟ್ಟಿರುವ ದುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸ್ಥಳೀಯವಾಗಿ ಎರಡು ಅಥವಾ ಕೆಲವು ಕಡೆ ಮೂರು ಇರುವ ಸ್ಥಳೀಯ ಫೇಜ್‌ಗಳತ್ತ ಒಮ್ಮೆ ಕಣ್ಣಾಡಿಸಿದರೆ ಗೊತ್ತಾಗುತ್ತದೆ. ಅಲ್ಲಿಯ ಭಾಷಾ ಶೈಲಿ, ಸುದ್ದಿಗಳ ಸಾರ ಎಲ್ಲವನ್ನೂ ಗಮನಿಸಿದರೆ ಪ್ರಜಾವಾಣಿಯ ಬಣ್ಣ ಬಯಲಾಗುತ್ತದೆ. ಪ್ರಜಾವಾಣಿಯಲ್ಲಿರುವ ಸ್ಥಾಪಿತ ಹಿತಾಸಕ್ತಿಗಳು ಇದನ್ನು ಮಾಲೀಕರಿಗೆ ಅನಿವಾರ್ಯ ಎಂದು ನಂಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಬಂದಿವೆ. ಬರುತ್ತಿವೆ ಕೂಡಾ.

ಇಷ್ಟೆಲ್ಲದರ ನಡುವೆಯೂ ಪ್ರಜಾವಾಣಿ ರಾಜ್ಯಮಟ್ಟದಲ್ಲಿ ಇವತ್ತಿಗೂ ವಿಶ್ವಾಸಾರ್ಹ ಪತ್ರಿಕೆಯೇ. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ನಮ್ಮ ಆಯ್ಕೆ ಎನ್ನುವಂತಾಗಿದೆ.

ಪ್ರಜಾವಾಣಿಗೆ ಈಗಲೂ ಬದಲಾಗುವ ವಿಪುಲ ಅವಕಾಶಗಳಿವೆ. ಪ್ರಜಾವಾಣಿಯು ತನ್ನ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದರೆ ಕರ್ನಾಟಕದಲ್ಲಿ ಅದು ಮತ್ತೇ ನಂಬರ್ ವನ್ ಆಗಲಿದೆ. ಆದರೆ ಇದಕ್ಕಾಗಿ ಕೆ.ಎನ್. ಶಾಂತಕುಮಾರ್ ತಮ್ಮ ಸುತ್ತಮುತ್ತಲು ಇರುವ ಬಹುಪರಾಕ್ ಜನರಿಂದ ಹೊರ ಬರಬೇಕಿದೆ. ಅವರು ಪ್ರಜಾವಾಣಿಯ ಹಳೆಯ ದಿನಗಳನ್ನು ನೆನಪು ಮಾಡಿಕೊಂಡು ಸಹಜವಾಗಿ ಯೋಚಿಸಿದರೆ ಸಾಕು, ಸಾಕಷ್ಟು ಬದಲಾವಣೆಗಳು ಘಟಿಸುತ್ತವೆ. ಕರ್ನಾಟಕದ ಇವತ್ತಿನ ಪರಿಸ್ಥಿತಿಯಲ್ಲಿ ಪ್ರಜಾವಾಣಿಯು ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸುವ ಮೂಲಕ ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕು. ಇದು ವಿಶ್ವಾಸಾರ್ಹತೆ ಎನ್ನುವುದು ಕೇವಲ ಹೇಳಿಕೆಯಾಗಿ ಉಳಿಯಬಾರದು. ಮತ್ತು ಅದಕ್ಕಾಗಿ ಸರ್ಕಸ್ ಮಾಡಬೇಕಿಲ್ಲ. ಅದು ತಾನು ತಾನಾಗಿಯೆ ರೂಪಗೊಳ್ಳಬೇಕು.

ಪ್ರಜಾವಾಣಿಯ ಜೊತೆ ಗುರುತಿಸಿಕೊಂಡೆ ಬೆಳೆದಿರುವ ನಮ್ಮಂತವರ ಹಾರೈಕೆ ಇದು. ಪ್ರಜಾವಾಣಿ ನಿಜಕ್ಕೂ ಬದಲಾಗುವುದೇ ಎಂಬುದೇ ಇವತ್ತಿನ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿದೆ.

9 thoughts on “ಪ್ರಜಾವಾಣಿ ನಿಜಕ್ಕೂ ಬದಲಾಗುವುದೇ?

  1. Mallikarjun M.Kotabal

    ನಿಮ್ಮ ಲೇಖನದ ಕೊನೆಯ ಪ್ಯಾರಾ ಪೂರ್ಣ ಸತ್ಯ. ಒಂದು ಕಾಲದಲ್ಲಿ ಪ್ರಜಾವಾಣಿಯಲ್ಲಿ ಕಥೆ ಪ್ರಕಟಗೊಂಡರೆ ಅವರು ಕಥೆಗಾರರರೆಂದು, ಕವಿತೆ ಪ್ರಕಟವಾದರೆ ಅವರು ಕವಿಗಳೆಂದು, ಸಾಹಿತ್ಯ ಸಂವಾದದಲ್ಲಿ ಬರಹ ಪ್ರಕಟವಾದರೆ ಅವರೆಲ್ಲ ಅಧಿಕೃತ ಕಥೆಗಾರ, ಕವಿ, ಸಾಹಿತಿ ಎಂದು ಇಡೀ ಕರ್ನಾಟಕ ಸಾರಸ್ವತ ಲೋಕ ಮನ್ನಣೆ ನೀಡುವಂತ ಗುಣಮಟ್ಟ, ನಿಷ್ಠುರತೆ, ನ್ಯಾಯಪರತೆ ಹೊಂದಿದ್ದ ಪ್ರಜಾವಾಣಿ ಹೇಗಿದ್ದದ್ದು, ಹೇಗಾಗಿದೆ! ನೆನಪಿಸಿಕೊಂಡರೆ ಒಂದು ರೀತಿಯ ವ್ಯಕ್ತಪಡಿಸಲಾರದ ನೋವು ಕಾಡುತ್ತದೆ. ಹರಿಕುಮಾರರು ಪ್ರಜಾವಾಣಿಗೆ ಹರಿಕಾರರಾಗಿ ಹಾಕಿದ ಸೈದ್ಧಾಂತಿಕ, ಮೌಲಿಕ ವ್ಯವಸ್ಥೆಯನ್ನು ಈಗಿನ ಸಂಪಾದಕರು ರೂಢಿಸಿಕೊಳ್ಳಲಿ ಎಂದು ಆಶಿಸೋಣ, ಅಲ್ಲಲ್ಲ… ಪ್ರಜಾವಾಣಿಯೊಂದಿಗೆ ಗುರುತಿಸಿಕೊಂಡು ಬೆಳೆದ ಕೃತಜ್ಞತೆಗೆ ಆಗ್ರಹಿಸೋಣ.
    – ಮಲ್ಲಿಕಾರ್ಜುನ ಎಂ. ಕೊತಬಾಳ. System Admin/Graphic Designer,
    ದಿ ಪ್ಯಾರಾಮೌಂಟ್ ಪ್ರಿಂಟರ್ಸ್ & ಸರ್ವಿಸಸ್, ಗಂಗಾವತಿ-583227
    9481086029
    ಸಾ|| ಕೊಪ್ಪಳ

    Reply
  2. basavarajb

    ಪತ್ರಿಕೆಗಳು ನಿರಂತರವಾಗಿ ಓದುಗರ ಅಗತ್ಯತೆಯನ್ನು ಅರಿತುಕೊಂಡು ಬದಲಾಗುತ್ತಾ ಸಾಗಿದಲ್ಲಿ ಪತ್ರಿಕೆ ಪ್ರಸಾರದಲ್ಲಿ ಮುಂಚೂಣಿಯಲ್ಲಿರಲು ಸಾಧ್ಯ. ಇದಕ್ಕೆ ಸಂಪಾದಕೀಯ,ಪ್ರಸಾರಾಂಗ,ಜಾಹೀರಾತು,ಮುದ್ರಣ ಹಾಗೂ ಆಡಳಿತ(ಮಾನವ ಸಂಪನ್ಮೂಲ)ವಿಭಾಗದವರು ರಾಮ ರಾವಣನಂತೆ ನಡೆದುಕೊಳ್ಳದೇ, ರಾಮ ಲಕ್ಷ್ಮಣನಾಗಿ ಸಾಗಿದರೆ ನಂ ೧ ಸ್ಥಾನದಿಂದ ಕೆಳಗಿಳಿಯುವುದಿಲ್ಲ. ಪತ್ರಿಕೆ ಮಾಲೀಕರು ಸದಾ ತಮ್ಮ ಸುತ್ತಲಿರುವ ಕೇಲವೆ ವ್ಯಕ್ತಿಗಳ ಹೇಳಿಕೆಯ ಮಾತುಗಳನ್ನು ಕೇಳದೇ ದುಡಿಯುವ ಎಲ್ಲಾ ವರ್ಗದ ಜನರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಾ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ . ಬಿ.ಬಸವರಾಜ
    ಶ್ರೀನಂದಿ ನ್ಯೂಸ್ ಏಜೆನ್ಸೀಸ್, ಹೊಸಪೇಟೆ

    Reply
  3. Mahesha

    ಪ್ರಿಯ ಪರಶುರಾಮ್ ಕಲಾಲ್ ಅವರೆ,ಒಂದು ಕಾಲಕ್ಕೆ ಪ್ರಜಾವಾಣಿ ದಿನಪತ್ರಿಕೆ ಕನ್ನಡಿಗರ ಧ್ವನಿಯಾಗಿ,ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಟ್ಟ ಹೋರಾಟಗಾರನಾಗಿ ಕೆಲಸ ಮಾಡಿದದ್ದನ್ನ ಕನ್ನಡಿಗರು ಮರೆಯುವಂತಿಲ್ಲ.ಕನ್ನಡದ ಸಾರಸ್ವತ ಲೋಕಕ್ಕೆ ಪ್ರಜಾವಾಣಿ ಕೊಟ್ಟಿರುವ ಸಾಹಿತ್ಯ ರತ್ನಗಳು ಕನ್ನಡಾಂಬೆಯ ಸಾರಥಿಗಳಾಗಿ ದುಡಿದಿದ್ದಾರೆ,ಆದರೆ ಇತ್ತೀಚೆಗೆ ಪತ್ರಿಕೆಯ ಸಾಮಾಜಿಕ ಬದ್ಧತೆ ಕಡಿಮೆಯಾಗುತ್ತಿರುವುದಂತೂ ಸತ್ಯ..

    Reply
  4. ಬೇಳೂರು ಸುದರ್ಶನ

    ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ನಮ್ಮ ಆಯ್ಕೆ ಎನ್ನುವಂತಾಗಿದೆ. – ನಿಮ್ಮ ಈ ವಾಕ್ಯವು ಅಂಧರನ್ನು ಹೀಗಳೆಯುವುದಿಲ್ಲವೆ? ಕಣ್ಣಿಲ್ಲದವರು ಏನೂ ಮಾಡಲಾರರು ಎಂಬ ಸಂದೇಶ ಕೊಟ್ಟಂತಾಗುವುದಿಲ್ಲವೆ? ಇಂಥ ವಿಕಲಾಂಗ ಸಂಬಂಧಿ ಹೋಲಿಕೆಗಳನ್ನು ದಯವಿಟ್ಟು ನಿಮ್ಮ ಲೇಖನಗಳಲ್ಲಿ ಬಳಸಬೇಡಿ ಎಂದು ವಿನಂತಿಸಿಕೊಳ್ಳುವೆ. ವರ್ತಮಾನದಂಥ ಜವಾಬ್ದಾರಿಯುತ ಸಂಪಾದಕತ್ವದ ವೆಬ್‌ಸೈಟಿನಲ್ಲಿ ಇಂಥ ವಾಕ್ಯಗಳನ್ನು ನಾನು ಇಷ್ಟಪಡುವುದಿಲ್ಲ.

    Reply
    1. ಪರಶುರಾಮ ಕಲಾಲ್

      ಸಹಜವಾಗಿ ಮಾತನಾಡುವಾಗ ಹೀಗಾಗುತ್ತೆ. ಅದರೂ ಇಂತ ವಾಕ್ಯ ಬರೆಯುವುದಿಲ್ಲ. ಎಚ್ಚರ ವಹಿಸಲು ಬೇಳೂರು ಸುದರ್ಶನ ಅವರ ಸಲಹೆಯನ್ನು ನಾನು ಸ್ವೀಕರಿಸುತ್ತೇನೆ.

      Reply
  5. ಬೇಳೂರು ಸುದರ್ಶನ

    ಸಹಜವಾಗಿ ಮಾತನಾಡುವಾಗ ಹೀಗಾಗುತ್ತದೆ ಎಂದು ತಿಳಿಸಿದ್ದೀರಿ; ನಿಮ್ಮ ಸರಳ, ಪ್ರಾಮಾಣಿಕ ಪ್ರತಿಕ್ರಿಯೆಗೆ ವಂದನೆಗಳು.
    ನಾನು ಸೆನ್ಸಾರ್‌ ಬೋರ್ಡಿನ ಸದಸ್ಯನಾಗಿದ್ದಾಗ ಹಲವು ಕನ್ನಡ ಸಿನೆಮಾಗಳನ್ನು ನೋಡಿದೆ. ಹೆಚ್ಚುಕಡಿಮೆ ಎಲ್ಲ ಸಿನೆಮಾಗಳಲ್ಲೂ ಇಂಥ ಸಹಜವಾದ ಮಾತುಗಳು ಬರುತ್ತಿದ್ದವು; ಈಗಲೂ ಬರುತ್ತಿವೆ. ಕಿವುಡರನ್ನು, ಕುರುಡರನ್ನು, ಹಿಜಡಾಗಳನ್ನು ಕೀಳು ಜೋಕಿನ ಪಾತ್ರಗಳಾಗಿ ಬಿಂಬಿಸುವುದು ನಡೆದೇ ಇದೆ. ಇದನ್ನು ಪ್ರೇಕ್ಷಕರೂ ಜೋಕ್‌ ಎಂದು ಒಪ್ಪಿಕೊಂಡುಬಿಟ್ಟಿದ್ದಾರೆ. ಇದನ್ನು ತಡೆಯುವುದು ಹೇಗೆ? ನಿಜಕ್ಕೂ ಎಲ್ಲ ಪ್ರಜ್ಞಾವಂತರೂ ಯೋಚಿಸಿ ನಿರ್ಧರಿಸಬೇಕು. ಎರಡು ಕಣ್ಣು, ಕಿವಿ, ಒಂದು ಬಾಯಿ ಇದ್ದವರೆಲ್ಲ ಸಮಾಜದಲ್ಲಿ ಜವಾಬ್ದಾರಿಯಿಂದ ಬದುಕಿದ್ದಾರೆ – ಇಂಥವರು ಮಾತ್ರ ಕೀಳು ಬದುಕಿಗೇ ಯೋಗ್ಯ ಎಂಬ ಚಿತ್ರಣವನ್ನು ನೀಡುವ ವಾಕ್ಯಗಳಿಂದ, ಚಿಂತನೆಯಿಂದ ಹೊರಬರಬೇಕು.
    ೧) ಬರೆಯುವಾಗ ಹಾಕಿಕೊಳ್ಳುವ ಚೆಕ್‌ಲಿಸ್ಟ್‌ನಲ್ಲಿ ವಿಕಲಾಂಗತೆ ಬಗ್ಗೆ ಪದಗಳು ಬಂದಿದೆಯೆ ಎಂದು ಪರೀಕ್ಷಿಸುವ ಅಂಶವೂ ಇರಬೇಕು.
    ೨) ಅಂಧರು, ಕಿವುಡರು, ಅಂಗಾಂಗಗಳು ಊನವಾಗಿದ್ದವರು, ಉಗ್ಗುವವರು, ಹಿಜಡಾಗಳು, – ಇಂಥವರ ಬಗ್ಗೆ ವಾಕ್ಯಗಳು ಬಂದರೆ ಅವುಗಳನ್ನು ಮತ್ತೆ ಮತ್ತೆ ಓದಿ ವಿಭಿನ್ನ ಅರ್ಥ ಕೊಡುತ್ತದೆಯೇ ಎಂದು ಗಮನಿಸಬೇಕು.
    ೩) ಇಂಥ ವಿಶೇಷ ಸಬಲರು (ಇದು ಸಮಕಾಲೀನ ಪದ ಬಳಕೆ. ಕನ್ನಡದಲ್ಲಿ ಸರಿಯಾದ ಏಕಪದವಿಲ್ಲ, ಪರವಾಗಿಲ್ಲ) ಮಾಡುವ ಸಾಧನೆಗಳನ್ನು ವಿವರಿಸುವಾಗ ಹೊಗಳಿಕೆ ಸಹಜ; ಅದು ತಪ್ಪೇನೂ ಅಲ್ಲ. ಏಕೆಂದರೆ ಅವರು ವಿಶೇಷವಾಗಿ ಸಾಧಿಸಿರುತ್ತಾರೆ. ಅವರು ಕಡಿಮೆ ಸಾಮರ್ಥ್ಯ ಹೊಂದಿದ್ದರೂ ಏನೋ ಸಾಧಿಸಿದರು ಎಂದೇನಲ್ಲ.
    ಲೇಖನಕ್ಕೆ ಸಂಬಂಧಿಸಿರದ ಈ ಪ್ರತಿಕ್ರಿಯೆಯನ್ನು ಪ್ರಕಟಿಸಿದ್ದೀರಿ. ವಂದನೆಗಳು.

    Reply
    1. prasad raxidi

      ನಿಜ ಇದರೊಂದಿಗೆ, ಶ್ರೇಣಿಕೃತ- ಜಾತಿವ್ಯವಸ್ಥೆಯ, ಪಾಳೇಗಾರಿ ಸಮಾಜದ ಎಲ್ಲ ಅಂಶಗಳನ್ನು ಹೀರಿಕೊಂಡು ಬೆಳೆದು ಬಂದಿರುವ ನಮ್ಮ ಭಾಷೆಯಗಳಲ್ಲಿ ನಿತ್ಯ ನಾವು ಸಹಜವೆಂಬಂತೆ ಬಳಸುವುದನ್ನು ಕಾಣುವ ಅವಮಾನಕರವಾದ ಅಸಂಖ್ಯ ಪದ-ನುಡಿಕಟ್ಟುಗಳಿವೆ, ಉದಾ: ಊರಿಗೊಬ್ಬಳೆ… ಊರಿದ್ದಲ್ಲಿ…, ಹಾಗೇ ಹೆರಿಯೋರು.. ಸೊಡ್ಡು ಕೆತ್ತೋರು ಇತ್ಯಾದಿ.. ಪ್ರತಿಕ್ಷಣವೂ ಎಚ್ಚರ , ಸಂಯಮ ಅಗತ್ಯ..

      Reply
  6. nikil gowda

    ಪ್ರಜಾವಾಣಿಯಲ್ಲಿ ಎರಡು ತೆರನಾದ ಪತ್ರಕರ್ತರಿದ್ದಾರೆ. ಪ್ರಜಾವಾಣಿಯ ತತ್ತ್ವ ಸಿದ್ಧಾಂತ, ಅದರ ದೃಷ್ಟಿಕೋನ ನಂಬಿ ಬಂದಂಥವರು ಬಂದವರು ಒಂದು ತೆರನಾದವರಾಗಿದ್ದರೆ, ವ್ಯವಹಾರದ ಉದ್ದೇಶಕ್ಕಾಗಿ, ಲಾಭಕ್ಕಾಗಿ, ಲೈಫ್‌ಸೆಟಲ್‌ಗಾಗಿ ಬಂದಂಥವರು ಮತ್ತೊಂದು ಬಗೆ. ಹರಿಕುಮಾರ್‌ ಅವರು ಸಂಪಾದಕರಾಗಿ ಇರುವ ವರೆಗೆ ಮೊದಲ ಬಗೆಯ ಜನ ಹೆಚ್ಚಾಗಿ ಇದ್ದರು. ಆದರೆ, ನಂತರ ಸಂಪಾದಕೀಯದ ಹೊಣೆ ಹೊತ್ತವರೆಲ್ಲರೂ ಲಾಭವನ್ನು ಗನಮದಲ್ಲಿಟ್ಟುಕೊಂಡವರು. ಆನಂತರ ಬಂದವರೆಲ್ಲರೂ ಲಾಭದ ಸಂತತಿಯೇ ಆದರು. ಅದಕ್ಕಾಗಿಯೇ ಪ್ರಜಾವಾಣಿ ತನ್ನ ಹಿಂದಿನ ಹೊಳಪು, ನುಣುಪು, ಮೊನಚು ಕಳೆದುಕೊಂಡಿದೆ.

    Reply

Leave a Reply

Your email address will not be published. Required fields are marked *