Daily Archives: May 14, 2012

‘ರಕ್ಷಣೆ’ಗಾಗಿ ಸಹಾಯ ಹಸ್ತ ಬಯಸಿ…

– ಶಿವರಾಂ ಕೆಳಗೋಟೆ

ಹುಣ್ಣಿಮೆಯಂದು ಸಮುದ್ರದ ಅಲೆಗಳು ಉಕ್ಕೇರುವಂತೆ, ರಾಜ್ಯಕ್ಕೆ ಬರ ಅಥವಾ ನೆರೆ ಬಂದಾಗ ಬಿಜೆಪಿಯಲ್ಲಿನ ಭಿನ್ನಮತ ಉಲ್ಬಣಗೊಳ್ಳುತ್ತದೆ. ಈ ಬಾರಿ ಭಿನ್ನಮತದ ಅಲೆಗಳು ತಣ್ಣಗಾಗುವ ಲಕ್ಷಣಗಳಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಮುಂದಿನ ನಿರ್ಧಾರ ಅವರ ರಾಜಕೀಯ ವೃತ್ತಿ ಜೀವನದ ಪ್ರಮುಖ ಘಟ್ಟವಾಗಲಿದೆ. ಇಂದು (ಸೋಮವಾರ) ಬೆಳಗ್ಗೆ ತುಮಕೂರಿನಲ್ಲಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಯಡಿಯೂರಪ್ಪ ತನ್ನ ಮುಂದಿನ ನಿರ್ಧಾರವನ್ನು ಸಂಜೆ ಹೊತ್ತಿಗೆ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ. ಬಿಜೆಪಿಯಿಂದ ಹೊರ ನಡೆಯುವ ನಿರ್ಧಾರ ಪ್ರಕಟಿಸಿದರೂ ಅಚ್ಚರಿಯೇನಿಲ್ಲ.

ಹೊರನಡೆದರೆ ತನ್ನೊಂದಿಗೆ ಬರುವವರ ಸಂಖ್ಯೆ ಎಷ್ಟು ಎನ್ನುವುದಷ್ಟೇ ಅವರ ಮತ್ತು ಅವರ ಕಟ್ಟಾ ಬೆಂಬಲಿಗರ ಪ್ರಮುಖ ಪ್ರಶ್ನೆ. ಈಗಾಗಲೇ ಏಳೆಂಟು ಸಚಿವರು ತಮ್ಮ ರಾಜೀನಾಮೆ ಪತ್ರಗಳಿಗೆ ಸಹಿ ಹಾಕಿ ಯಡಿಯೂರಪ್ಪನವರಿಗೆ ಕೊಟ್ಟಿದ್ದಾರೆ. ಅದೇ ಹಾದಿಯಲ್ಲಿ ಕೆಲ ಶಾಸಕರೂ ಇದ್ದಾರೆ ಎನ್ನುವ ಮಾಹಿತಿ ಇದೆ. ಇನ್ನು ಒಂದು ವರ್ಷವಷ್ಟೇ ಬಾಕಿ ಇರುವಾಗ ರಾಜೀನಾಮೆ ಕೊಡಬೇಕೆ, ಬೇಡವೇ ಎನ್ನುವ ಜಿಜ್ಞಾಸೆಯಲ್ಲಿ ಹಲವರು ಇರಬಹುದು. ಮತ್ತೊಂದು ಅವಧಿಗೆ ಆಯ್ಕೆಯಾಗುವ ವಿಶ್ವಾಸ ಎಲ್ಲರಲ್ಲೂ (ಎಷ್ಟೇ ದೊಡ್ಡ ನಾಯಕರಾದರೂ) ಇಲ್ಲ. ಜನರ ಪ್ರತಿಕ್ರಿಯೆ ಹೇಗಿರುತ್ತೆ ಎನ್ನುವುದನ್ನು ಈಗಲೇ ಊಹಿಸುವ ತಂತ್ರಜ್ಞಾನ ಸದ್ಯಕ್ಕಂತೂ ಚಾಲ್ತಿಯಲ್ಲಿಲ್ಲವಲ್ಲ. ಕೆಲವು ಶಾಸಕರು ರಾಜಿನಾಮೆ ಕೊಟ್ಟಾರು. ಆದರೆ ಸಂಸಂದರು! ಅವರಿಗಿನ್ನೂ 2014ರ ವರೆಗೆ ಕಾಲಾವಕಾಶ ಇದೆ. ಈಗ ರಾಜೀನಾಮೆ ಕೊಟ್ಟರೆ ಗತಿ ಏನು? ತಾಂತ್ರಿಕವಾಗಿ ಬಿಜೆಪಿ ಜೊತೆ ಇದ್ದು ಮಾನಸಿಕವಾಗಿ ಯಡಿಯೂರಪ್ಪನವರ ಜೊತೆ ಇರಲು ಸಾಧ್ಯವೆ?

ಈಗಾಗಲೇ ಯಡಿಯೂರಪ್ಪನ ಬೆಂಬಲಿಗರು ಅಲ್ಲಲ್ಲಿ ಸೂಚನೆ ನೀಡಿರುವಂತೆ ಪಕ್ಷದಿಂದ ಹೊರನಡೆದು ಹೊಸ ಪಕ್ಷ ಕಟ್ಟುವ ಯೋಚನೆ ಅವರಲ್ಲಿದೆ. ಹಾಗೆ ಮಾಡಿದರೆ ‘ದೇಶದ ಒಳಿತಿಗೆ ರಾಷ್ಟ್ರೀಯ ಪಕ್ಷಗಳು ಮಾತ್ರ ಇರಬೇಕು’ ಎಂದು ಪದೇ ಪದೇ ಜೆಡಿಎಸ್ ಪಕ್ಷವನ್ನು ತಿವಿಯುತ್ತಿದ್ದ ಯಡಿಯೂರಪ್ಪನವರೇ ಒಂದು ಪ್ರಾದೇಶಿಕ ಪಕ್ಷ ಕಟ್ಟಿ ‘ದೇಶದ ಒಳಿತಿಗೆ’ ಕೊಡಲಿ ಪೆಟ್ಟು ಕೊಟ್ಟಂತಾಗುತ್ತದೆ. ಪ್ರಜಾವಾಣಿಯಲ್ಲಿ ದಿನೇಶ್ ಅಮಿನ್ ಮಟ್ಟು ಅವರು ತಮ್ಮ ಅಂಕಣದಲ್ಲಿ (ದಿನಾಂಕ ಮೇ.14 ರ ಅನಾವರಣ) ಬರೆದಿರುವಂತೆ ಸಿಬಿಐ ತೂಗುಗತ್ತಿಯ ಅಡಿ ಜೀವಿಸುವವರಿಗೆ ರಾಷ್ಟ್ರೀಯ ಪಕ್ಷಗಳು ಮಣೆ ಹಾಕುವುದು ದುಸ್ತರ ಎನ್ನುವುದನ್ನು ಮನಗಂಡು ಪ್ರಾದೇಶಿಕ ಪಕ್ಷದ ಕನಸು ಕಾಣುತ್ತಿರಬಹುದು. ಪ್ರಾದೇಶಿಕ ಪಕ್ಷ ಆದರೆ, ಅವರದೇ ಆಡಳಿತ. ಆಗ ರಾಜಕೀಯ ನೈಪುಣ್ಯ, ಜನಪ್ರಿಯತೆ ಯಾವುದರಲ್ಲೂ ಸರಿಸಮ ಅಲ್ಲದಿರುವ ನಿತಿನ್ ಗಡ್ಕರಿಯಂತಹವರ ಎದುರು ಕೈ ಕಟ್ಟಿ ಕುಳಿತುಕೊಳ್ಳುವುದಾಗಲಿ, ಆಗಾಗ ಕಪ್ಪ ಕೊಡುವ ಪ್ರಮೇಯ ಇರುವುದಿಲ್ಲ ನೋಡಿ.

ಆದರೆ ಅಂತಹದೊಂದು ಪ್ರಯತ್ನದ ಉದ್ದೇಶವೇನು? ಎಂತಹ ರಾಜಕೀಯ ಅನಕ್ಷರಸ್ಥನಿಗೂ ಅರ್ಥವಾಗುವ ಸತ್ಯವೆಂದರೆ ಜೆಡಿಎಸ್ ಸೇರಿದಂತೆ ರಾಜ್ಯದ ಯಾವುದೇ ಪ್ರಾದೇಶಿಕ ಪಕ್ಷ ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ. ಇದು ಯಡಿಯೂರಪ್ಪ ಮತ್ತು ಅವರ ಹಿಂಬಾಲಕರಿಗೆ ಸ್ಪಷ್ಟವಾಗಿ ಗೊತ್ತು. ಆದರೆ ಬಿಜೆಪಿ ಅಭ್ಯರ್ಥಿಗಳು ಬಹುಭಾಗದಲ್ಲಿ ಸೋಲಿಸುವಲ್ಲಿ ಪ್ರಾದೇಶಿಕ ಪಕ್ಷ ಯಶಸ್ವಿಯಾಗಬಹುದು. ಲಿಂಗಾಯುತರ ಪ್ರಾಬಲ್ಯ ಇರುವ ಉತ್ತರ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚಿ ಅಧಿಕಾರದ ಗದ್ದುಗೆಯಿಂದ ಬಹುದೂರ ಉಳಿಯಬಹುದು.

ಆದರೆ, ಯಡಿಯೂರಪ್ಪನವರ ಉದ್ದೇಶ ಅಷ್ಟಕ್ಕೇ ಸೀಮಿತವಾದಂತಿಲ್ಲ. ಬಿಜೆಪಿಯನ್ನು ಸೋಲಿಸುವುರ ಜೊತೆಗೆ ತಾನು ಮತ್ತು ತನ್ನನ್ನು ನಂಬಿ ಬಂದವರಿಗೆ ಅಧಿಕಾರ ಬೇಕಲ್ಲ. ಆ ಕಾರಣಕ್ಕಾಗಿಯೇ ಅವರು ಸೋನಿಯಾ ಗಾಂಧಿಯತ್ತ ಮುಖ ಮಾಡಿದ್ದಾರೆ. ನಿನ್ನೆಯ ಭಾಷಣದಲ್ಲಿ ಅವರು ಮಾತನಾಡುತ್ತ ಸೋನಿಯಾ ಗಾಂಧಿಯವರನ್ನು ‘ಆರೋಪ ರೂಪದ ಹೊಗಳಿಕೆ’ ಮಾಡಿದ್ದು ಇದೇ ಕಾರಣಕ್ಕೆ. ಯಡಿಯೂರಪ್ಪ ಹೇಳಿದ್ದು ‘ತಮ್ಮ ಪಕ್ಷದ ಯಾರ ಮೇಲಾದರೂ ಆರೋಪ ಬಂದರೆ, ಸೋನಿಯಾ ಗಾಂಧಿ ಮೊದಲು ಅವರ ರಕ್ಷಣೆ ಮಾಡುತ್ತಾರೆ. ಆದರೆ ನಮ್ಮಲ್ಲಿ ಹಾಗಲ್ಲ’. ಯಡಿಯೂರಪ್ಪನವರಿಂದ ಈ ಮಾತು ಕೇಳಿ ಕೆ.ಪಿ.ಸಿ.ಸಿ ಅಧ್ಯಕ್ಷ ಜಿ.ಪರಮೇಶ್ವರ ಕೂಡಾ ‘ಸದ್ಯ ಈಗಲಾದರೂ ಯಡಿಯೂರಪ್ಪನವರಿಗೆ ನಮ್ಮ ಪಕ್ಷದ ಮಹತ್ವ ಅರ್ಥವಾಯಿತಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಆರೋಪಿಗಳನ್ನು ರಕ್ಷಣೆ ಮಾಡುವುದು ಸ್ತುತ್ಯಾರ್ಹವೇ? ಪರಮೇಶ್ವರರು ಯಡಿಯೂರಪ್ಪನ ಮಾತನ್ನು ಒಪ್ಪಿಕೊಳ್ಳುತ್ತಾರೆಂದರೆ ಅವರ ಪಕ್ಷ ‘ಆರೋಪಿಗಳನ್ನು ರಕ್ಷಿಸುತ್ತದೆ’ ಎಂದು ಒಪ್ಪಿಕೊಂಡಂತೆ.

ಯಡಿಯೂರಪ್ಪನವರ ಈ ಮಾತಿನ ಹಿಂದೆ ಎರಡು ಉದ್ದೇಶಗಳಿರಬಹುದು. ಒಂದು: ಸೋನಿಯಾ ಗಾಂಧಿಯನ್ನು ಹೊಗಳುವ ಮೂಲಕ ತಾನೂ ಈಗಾಗಲೇ ಕಾಂಗ್ರೆಸ್ ಸಂಪರ್ಕದಲ್ಲಿದ್ದೇನೆ ಎಂದು ಬಿಜೆಪಿ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ಕೊಡುವುದು. ಎರಡನೆಯದು: ತನಗೆ ಸದ್ಯ ಬೇಕಿರುವುದು ರಕ್ಷಣೆ. ಅದು ಸೋನಿಯಾ ಗಾಂಧಿ ಪಕ್ಷದಲ್ಲಿ ದೊರಕುವುದೇ ಎಂದು ಕಾಂಗ್ರೆಸ್ ನೇತಾರರನ್ನು ಕೇಳುವುದು. ಮುಂದಿನ ದಿನಗಳಲ್ಲಿ ಈ ಸಂದೇಶಗಳು ಮತ್ತಷ್ಟು ಸ್ಪಷ್ಟವಾಗಲಿವೆ.

ಕಾಂಗ್ರೆಸ್ ಗೆ ಸದ್ಯ ಹಿಂದುಳಿದ ಮತ್ತು ದಲಿತರ ಬೆಂಬಲವಿದೆ. ಮುಂದುವರಿದ ಜಾತಿಗಳಲ್ಲಿ ಒಂದಾದ ಲಿಂಗಾಯುತರು ಕಾಂಗ್ರೆಸ್ ನಿಂದ ದೂರವಿದ್ದಾರೆ ಎನ್ನುವುದನ್ನು ಇತ್ತೀಚಿನ ಚುನಾವಣೆಗಳು ನಿರೂಪಿಸಿವೆ. ಈ ಕಾರಣ ಕಾಂಗ್ರೆಸ್ ಗೆ ಲಿಂಗಾಯುತ ಮತಗಳು ಯಡಿಯೂರಪ್ಪನ ಮೂಲಕ ಬಂದರೂ ಸರಿಯೆ. ಹಾಗಂತ ಅವರು ಈಗಲೇ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರನ್ನು ಪಕ್ಷದ ಒಳಗೆ ಕರೆತಂದು ಗೊಂದಲ ಸೃಷ್ಟಿಸುವುದಿಲ್ಲ. ಬದಲಿಗೆ, ಅವರ ಪಾಡಿಗೆ ಅವರು ಒಂದು ಪ್ರಾದೇಶಿಕ ಪಕ್ಷ ಕಟ್ಟಿ ತಮ್ಮ ಸಾಮರ್ಥ್ಯ ನಿರೂಪಿಸುವವರೆಗೂ ಕಾಯಬಹುದು. ಮುಂದೆ ಕಾಂಗ್ರೆಸ್ ಗೆ ಅಧಿಕಾರಕ್ಕೆ ಬರಲು ಒಂದಷ್ಟು ಸೀಟುಗಳ ಅಗತ್ಯ ಬಿದ್ದಾಗ ನೆರವಿಗೆ ಇರಲಿ ಎನ್ನುವುದೂ ಅವರ ದೂರಾಲೋಚನೆ ಇರಬಹುದಲ್ಲವೇ?

ಒಂದಂತೂ ಸತ್ಯ ರಾಜ್ಯದಲ್ಲಿ ಬರ ಇರಲಿ ನೆರೆ ಇರಲಿ ವ್ಯಥೆಪಡಬೇಕಾದವನು ಮತದಾರ ಮಾತ್ರ.

ಫೋಟೋ: indiavision.com