Daily Archives: May 15, 2012

ಸುಗತ, ನಿಮಗೆ ಸ್ವಾಗತ

– ವರ್ತಮಾನ ಬಳಗ

ಕನ್ನಡ ಪತ್ರಿಕೋದ್ಯಮಕ್ಕಿದು ಸಿಹಿ ಸುದ್ದಿ. ಸುಗತ ಶ್ರೀನಿವಾಸರಾಜು ಕನ್ನಡದ ಬಹುಮುಖ್ಯ ದಿನಪತ್ರಿಕೆ ವಿಜಯ ಕರ್ನಾಟಕದ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸುಗತ ವಿಕೆ ಸಂಪಾದಕ ಎಂದಾಕ್ಷಣ ನಾಡಿನ ಹಲವೆಡೆ ನೂರಾರು ಹುಬ್ಬುಗಳು ಆಕಾಶಕ್ಕೆ ಹಾರಿದ್ದು ಉಂಟು. ಔಟ್ ಲುಕ್ ಪತ್ರಿಕೆ ಸಹ ಸಂಪಾದಕ ಹುದ್ದೆಯನ್ನು ಬಿಟ್ಟು, ಮುಖ್ಯವಾಗಿ ಇದುವರೆಗೂ ತಾವು ತೊಡಗಿಸಿಕೊಂಡಿದ್ದ ಇಂಗ್ಲಿಷ್ ಪತ್ರಿಕೋದ್ಯಮದಿಂದ ಕನ್ನಡ ಪತ್ರಿಕೆಯೊಂದಕ್ಕೆ ಹಾರಿದ್ದಾರೆ. ಅವರ ಅನುಭವದ ಹರವು ದೊಡ್ಡದು. ಡೆಕ್ಕನ್ ಹೆರಾಲ್ಡ್, ಹಿಂದೂಸ್ಥಾನ್ ಟೈಮ್ಸ್, ಐರಿಷ್ ಟೈಮ್ಸ್, ಔಟ್ ಲುಕ್ ಪತ್ರಿಕೆಗಳಲ್ಲಿ ವರದಿಗಾರನಾಗಿ, ಸಂಪಾದಕೀಯ ಡೆಸ್ಕ್ ನಲ್ಲಿ ಕೆಲಸ ಮಾಡಿದ್ದಾರೆ.

ಸರಳವಾಗಿ ಹೇಳುವುದಾದರೆ ಸುಗತ ಒಬ್ಬ ಪಕ್ಕಾ ಪತ್ರಕರ್ತ ಮತ್ತು ಬರಹಗಾರ. ಸುದ್ದಿಯನ್ನು ಹುಡುಕಿ, ಹೆಕ್ಕಿ, ವಿಶ್ಲೀಷಿಸಿ ಚೆಂದಗೆ ಮಂಡಿಸುವ ಕಲೆ ಇದೆ. ಅವರದು ಕಾಳಜಿಗಳಿರುವ ವ್ಯಕ್ತಿತ್ವ. ಇತ್ತೀಚೆಗೆ ಹಾವೇರಿಯಲ್ಲಿ ನಡೆದ ನರ ಬಲಿ ಪ್ರಕರಣವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ವಿವರವಾಗಿ ಬರೆದದ್ದು ಸುಗತ. ಅವರ ವರದಿ ಪ್ರಕರಣದ ಆರೋಪಿಗಳು ಯಾರು ಎನ್ನುವುದನ್ನು ‘ಸ್ಪಷ್ಟವಾಗಿ’ ಹೇಳುತ್ತದೆ. ಒಬ್ಬ ದಲಿತ ಯುವಕ ಉಳ್ಳವರ ಮೂಢನಂಬಿಕೆಗೆ ಬಲಿಯಾದ ಘಟನೆಯನ್ನು ಎಲ್ಲಿಯೂ ಉತ್ಪ್ರೇಕ್ಷೆ ಇಲ್ಲದೆ ನಿರೂಸಿದ್ದರು. ಅಂತಹದೊಂದು ವರದಿ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಬರಲಿಲ್ಲ. ಸುಗತ ಕನ್ನಡದಲ್ಲಿ ಬಾಂಗ್ಲಾ ಭಾಷಾ ಹೋರಾಟ ಕುರಿತ ‘ಎಕೂಷೆ ಫೆಬ್ರವರಿ’ ಪುಸ್ತಕ ಹೊರತಂದಿದ್ದಾರೆ. ಅವರ ತಂದೆಯ ಮೂಕ ನಾಟಕಗಳನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಅವರ ಎರಡು ಇಂಗ್ಲಿಷ್ ಪುಸ್ತಕಗಳು Keeping Faith with the Mother Tongue – The Anxieties of a Local Culture ಮತ್ತು ಇತ್ತೀಚೆಗೆ ಬಿಡುಗಡೆಯಾದ Pickles from Home.

ಸುಗತ ವಿಕೆ ಮುಂದಾಳತ್ವ ವಹಿಸಿದ ನಂತರ ನಿರೀಕ್ಷೆಗಳು ನೂರಾರು. ಕಾರ್ಪೊರೆಟ್ ಸಂಸ್ಥೆಯಂತೆ ನಡೆಯುತ್ತಿರುವ ಸಂಸ್ಥೆಗೆ ಇವರು ಒಗ್ಗಿಕೊಳ್ಳುವುದು ಹೇಗೆ? ಇದುವರೆಗೆ ಅವರು ತನ್ನ ಪಾಡಿಗೆ, ತನಗೆ ಕಂಡಿದ್ದನ್ನು ಬರೆದುಕೊಂಡಿದ್ದವರು. ಈಗ ಹಾಗಿಲ್ಲ. ಕರ್ನಾಟಕದ ಯಾವುದೋ ಮೂಲೆಯಿಂದ ವರದಿಗಾರನೊಬ್ಬ ಫೋನ್ ಮಾಡಿ ಕೇಳಬಹುದು ‘ಸರ್ ನನಗೆ ಈ ಬಾರಿ ಇಂಕ್ರಿಮೆಂಟ್ ಇಲ್ಲ. ವಿಜಯವಾಣಿಯಿಂದ ಆಫರ್ ಇದೆ ಏನು ಮಾಡಲಿ?’ ಇದು ಸಣ್ಣ ಸ್ಯಾಂಪಲ್. ಇದು ಸುಗತರಿಗೆ ಗೊತ್ತಿಲ್ಲದ್ದೇನಲ್ಲ. ಈ ಎಲ್ಲಾ ಜಂಜಡಗಳು ಎದುರಾಗುತ್ತವೆ ಎನ್ನುವುದು ಗೊತ್ತಿದ್ದೇ ಅವರು ಈ ಜವಾಬ್ದಾರಿ ಒಪ್ಪಿಕೊಂಡಿರುತ್ತಾರೆ.

ಕನ್ನಡದಲ್ಲಿ ‘ಪೇಯ್ಡ್ ನ್ಯೂಸ್’ ನ್ನು ಢಾಳಾಗಿ ತಂದ ಖ್ಯಾತಿ ಟೈಮ್ಸ್ ಗ್ರೂಪ್ ಗಿದೆ. ಸುಗತ ಪೇಯ್ಡ್ ನ್ಯೂಸ್ ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವ ಕುತೂಹಲ ಇದೆ. ಜೊತೆಗೆ ಅವರು ಕನ್ನಡದ ಸಾಹಿತ್ಯಕ, ಸಾಂಸ್ಕೃತಿಕ ಲೋಕಕ್ಕೆ ಚೆನ್ನಾಗಿ ಪರಿಚಿತ. ಹಾಗಾಗಿ ಅವರ ಬಗ್ಗೆ ನಿರೀಕ್ಷೆಗಳು ಸಹಜವಾಗಿಯೇ ದೊಡ್ಡ ಸಂಖ್ಯೆಯಲ್ಲಿರುತ್ತವೆ. ಸುಗತ ನಿಮಗೆ ವಿಜಯ ಕರ್ನಾಟಕ ಓದುಗರ ಪರವಾಗಿ ಸ್ವಾಗತ. ನಿಮಗೆ ಶುಭವಾಗಲಿ.

ಬಹಿರಂಗವಾದ “ಲಂಚಾವತಾರಿ”ಯ ಜಾತಿ ಪ್ರೇಮ


– ಸೂರ್ಯ ಮುಕುಂದರಾಜ್


 

ತುಂಬಾ ದಿನಗಳಿಂದ ಲೋಕದ ಡೊಂಕನ್ನು ಅಪಹಾಸ್ಯ ಮಾಡುವ ಮೂಲಕ ಹಣ ಮಾಡಿಕೊಂಡಿದ್ದ ವ್ಯುಕ್ತಿಯೊಬ್ಬನ ನಿಜ ಮುಖದ ದರ್ಶನ ತಡವಾದರೂ ಬಹಿರಂಗವಾಗಿದೆ. ಮೇ 14 ನೇ ಸೋಮವಾರದ ಪ್ರಜಾವಾಣಿ ಪತ್ರಿಕೆಯ ವರದಿಯೊಂದರ ತಲೆ ಬರಹ ‘ಬ್ರಾಹ್ಮಣ ಸಾಹಿತಿಗಳ ಕಡೆಗಣನೆ’ ನೋಡಿದಾಗ ಪೇಜಾವರ ಸ್ವಾಮಿಯೋ, ಇಲ್ಲವೇ ಕೇಸರಿಕರಣದ ಪ್ರಭಾವದಿಂದ ಹೊಸದಾಗಿ ಉದಯಿಸಿದ ಬ್ರಾಹ್ಮಣ ಸಾಹಿತಿಯೊಬ್ಬನ ಗೋಳಿನ ನುಡಿಯಿರಬಹುದೆಂದುಕೊಂಡೆ. ವರದಿ ಓದುತ್ತಿದ್ದಂತೆ, ‘ಓ ನಮ್ಮ ಲಂಚಾವತರ, ಪಬ್ಲಿಕ್ ರೇಡರ್ ಮಾಸ್ಟರ್ ಹಿರಣ್ಣಯ್ಯ ಕೊಟ್ಟಿರೋ ಹೊಸಾ ಥಿಯರಿ,’ ಅಂತ ಗೊತ್ತಾಯಿತು. ಹಲವಾರು ವರ್ಷಗಳಿಂದ ವೃತ್ತಿರಂಗಭೂಮಿಯಲ್ಲಿ ದುಡಿದು ಕುಡುಕಾವತಾರ ತಳೆದು ಲಂಚಾವತಾರದ ಮೂಲಕ ಅಬ್ರಾಹ್ಮಣ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ವೇದಿಕೆ ಮೇಲೆ ಛೀ ಥೂ ಎನ್ನುವ ಮೂಲಕ ಬಹುಸಂಖ್ಯಾತ ಅಬ್ರಾಹ್ಮಣ ಪ್ರೇಕ್ಷಕರ ಹಣದಿಂದಲೇ ಹೆಸರು ಆಸ್ತಿ ಸಂಪಾದಿಸಿದ ಮಾಸ್ಟರ್ ಹಿರಣ್ಣಯ್ಯ ಇಂದು ಅವರಲ್ಲಡಗಿದ್ದ ಜಾತಿಭ್ರಷ್ಟನನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ.

ತಮ್ಮ ಭಾಷಣದಲ್ಲಿ ಲಂಚಾವತಾರಿ ಕುವೆಂಪು ಅವರಿಗೆ ನೀಡಿರುವಷ್ಟು ಪ್ರಾಶಸ್ತ್ಯವನ್ನು ಪುತಿನ, ಅನಕೃ, ಡಿವಿಜಿ ಅವರಿಗೆ ನೀಡದೇ ಬ್ರಾಹ್ಮಣ ಸಮುದಾಯವನ್ನು ಕಡೆಗಾಣಿಸಲಾಗಿದೆಯೆಂದು ಬೇಸರಪಟ್ಟುಕೊಂಡಿದ್ದಾರೆ. ಪಾಪ, ಹಿರಣ್ಣಯ್ಯನವರ ಜೀವಮಾನದಲ್ಲಿ ಅವರು ಆಡಿದ ನಾಟಕಕ್ಕೆ ಸ್ಕ್ರಿಪ್ಟ್ ಬರೆದವರೇ ಆಲ್ಲ, ಇನ್ನು ಕುವೆಂಪು ಸಾಹಿತ್ಯ ಓದಿರಲು ಹೇಗೆ ಸಾಧ್ಯ? ಹಾಗೇನಾದರೂ ಅವರು ಕುವೆಂಪು ಸಾಹಿತ್ಯವನ್ನು ಓದಿದ್ದರೆ ಬಹುಶಃ ಮಾಸ್ಟರ್ ಈ ರೀತಿ ಹೇಳುತ್ತಿರಲಿಲ್ಲವೇನೋ. ಹಾಗೆಯೇ ಅವರ ನಾಟಕದ ಕ್ವಾಲಿಟಿಯೂ ಆ ಕಾಲದಲ್ಲೇ ಸುಧಾರಿಸಿರುತ್ತಿತ್ತು.

ಬಸವಣ್ಣನ ನಂತರ ಆಧುನಿಕ ಕಾಲಘಟ್ಟದಲ್ಲಿ ಜಾತಿ-ಮತಗಳ ಎಲ್ಲೆ ಮೀರಿ ದೇಶವೇ ದೇವರೆಂದ ಕವಿ ಕುವೆಂಪು. ಪುರೋಹಿತ ಶಾಹಿಯ ಕರ್ಮಠತೆಯನ್ನು ಕತ್ತರಿಸಿ ಹಾಕಲು ಶೂದ್ರರಿಗೆ ಶಕ್ತಿ ತುಂಬಿದ್ದು ಕುವೆಂಪು ಅವರ ಸಾಹಿತ್ಯ. ತನ್ನ ಜಾತಿಯೊಳಗಿನ ಮೌಢ್ಯವನ್ನೇ ಖಂಡಿಸಿ ಅದ್ದೂರಿ ವಿವಾಹಗಳಿಗೆ ಬದಲಾಗಿ ಸರಳವಿವಾಹವನ್ನು ಜನಪ್ರಿಯಗೊಳಿಸಿದ ಕೀರ್ತಿ ಕುವೆಂಪು ಅವರದು. ಬಹುಜನರಿಗೆ ಅರ್ಥವಾಗದ ಮಂತ್ರಗಳನ್ನು ಹೇಳಿ ಮೌಢ್ಯಕ್ಕ ತಳ್ಳಿದ್ದ ಪುರೋಹಿತಶಾಹಿಗಳ ಆಟ ನಿಲ್ಲಲು ಮಂತ್ರಮಾಂಗಲ್ಯವನ್ನು ಪರಿಚಿಯಿಸಿದರು. ರೈತ, ದರಿದ್ರನಾರಾಯಣನಿಂದ ಹಿಡಿದು ಆರಕ್ಕೇರದ ಮೂರಕ್ಕಿಳಿಯದ ಮಧ್ಯಮವರ್ಗದ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ್ದು ಕುವೆಂಪು. ಕುವೆಂಪು ಕೇವಲ ಸಾಹಿತಿಯಷ್ಟೇ ಆಗಿರಲಿಲ್ಲ ಎನ್ನುವುದು ಕನ್ನಡದ ಜನತೆಗೆ ತಿಳಿದ ವಿಚಾರ. ಮತ್ತು ಕನ್ನಡದ ಜನತೆ ಅವರನ್ನೆಂದೂ ಜಾತಿಗೆ ಸೀಮಿತಗೊಳಿಸಿಲ್ಲ. ಒಕ್ಕಲಿಗರಲ್ಲಿರುವ ಕೆಲವು ಜಾತಿವಾದಿಗಳು ಮತ್ತು ಹಿರಣ್ಣಯ್ಯನವರಂತಹ ಒಕ್ಕಲಿಗೇತರ ಜಾತಿವಾದಿಗಳು ಮಾತ್ರ ಕುವೆಂಪುರವರನ್ನು ಜಾತಿಯ ದೃಷ್ಟಿಯಿಂದ ನೋಡಲು ವಿಫಲ ಪ್ರಯತ್ನ ನಡೆಸುತ್ತಿದ್ದಾರೆ. ಹಾಗೆಯೇ, ಹಿರಣ್ಣಯ್ಯನವರು ಕನ್ನಡಿಗರು ನಾನಾ ಕಾರಣಗಳಿಗೆ ಮೆಚ್ಚಿಕೊಂಡ, ಓದಿಕೊಂಡ ಪುತಿನ, ಅನಕೃ, ಡಿವಿಜಿಯವರನ್ನು ತಮ್ಮ ರೀತಿಯೇ ಜಾತಿಯ ಕಾಮಾಲೆ ಕಣ್ಣಿನಿಂದ ನೋಡುವಂತೆ ಪ್ರೇರೇಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಿಜಕ್ಕೂ ಈ ಹಿರಿಯರ ಬಗ್ಗೆ ಹಿರಣ್ಣಯ್ಯನವರಿಗೆ ಗೌರವ ಇದ್ದಿದ್ದೇ ಆದರೆ ಈ ರೀತಿ ಅವರನ್ನು ಜಾತಿ-ಮತಗಳ ಕ್ಷುದ್ರ ಪರಿಧಿಗೆ ಎಳೆಯುತ್ತಿರಲಿಲ್ಲ.

ಹಿರಣ್ಣಯ್ಯ ಮುಂದುವರೆದು ತಮ್ಮ ಹರಿತ ನಾಲಗೆಯಿಂದ, “ದೇವರ ಕೆಲಸಕ್ಕೆ ಹುಟ್ಟಿದ ನಮಗೆ ಯಾರೋ ಒಬ್ಬರು ತಪ್ಪು ಮಾಡಿದರು ಎಂದು ಇಡೀ ಸಮುದಾಯವನ್ನು ಕಡೆಗಣಿಸುವುದು ಎಷ್ಟರ ಮಟ್ಟಿಗೆ ಸರಿ,” ಎಂದು ಪ್ರಶ್ನಿಸುತ್ತಾರೆ. ಒಬ್ಬ ಪ್ರಬುದ್ಧ ರಂಗನಟನಾಗಿದ್ದರೆ ಈ ರೀತಿ ಕಂದಾಚಾರಿಯಂತೆ ಮಾತನಾಡುತ್ತಿರಲಿಲ್ಲವೇನೋ. ಹಿರಣ್ಣಯ್ಯ ಇನ್ನೂ ತನ್ನ ಸಮಾಜದ ಬಾಂಧವರು ದೇವರ ಕೆಲಸಕ್ಕೆ ಹುಟ್ಟಿದವರೆಂದು ಕರೆದುಕೊಳ್ಳುವುದೇ ಅಸಹ್ಯ ಅನ್ನಿಸದಿರುವುದು ಖೇದಕರ. ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ ಅನಂತಮೂರ್ತಿ ತಮ್ಮ ಜಾತಿಯೊಳಗಿನ ಕರ್ಮಠತೆಯನ್ನು ಟೀಕಿಸುವ ಮೂಲಕ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಪ್ರೊ.ಕಿ.ರಂ.ನಾಗರಾಜ ತಮ್ಮ ಬದುಕಿನ ಕಡೆಗಾಲದವರೆಗೂ ಕೂಡ ಬ್ರಾಹ್ಮಣರಂತೆ ಬಾಳಲಿಲ್ಲ. ನೂರಾರು ಶಿಷ್ಯರನ್ನು ಸಲುಹಿದ ಕಿ.ರಂ. ಎಂದಿಗೂ ತಮ್ಮ ಶಿಷ್ಯರ ಬೆನ್ನು ತಡವಿ ಜನಿವಾರವಿದೆಯೇ ಎಂದು ಪರೀಕ್ಷಿಸಿದವರಲ್ಲ. ಇವರೆಲ್ಲ ಬ್ರಾಹ್ಮಣ್ಯದ ಕರ್ಮಠತೆಯಿಂದ ಹೊರಗೆ ಬಂದವರು. ಆದರೆ ಹಿರಣ್ಣಯ್ಯ? ಜಗತ್ತಿಗೇ ಬುದ್ಧಿ ಹೇಳುವವರಂತೆ ನಟಿಸುವ ವ್ಯಕ್ತಿ ಈ ರೀತಿ ಒಬ್ಬ ಕಂದಾಚಾರಿಯಂತೆ “ದೇವರ ಸೇವೆಗೆ ಹುಟ್ಟಿದವರು ನಾವು” ಎಂದು ಹೇಳಿಕೊಳ್ಳಲು ಹಿಂಜರಿಯದಿರುವುದು ಅವರಲ್ಲಿನ ಜಾತಿಪ್ರೇಮ ಜೀವಂತವಾಗಿರುವುದರ ಪ್ರತೀಕ. ಕುವೆಂಪು ಜಗತ್ತಿಗೆ ವಿಶ್ವಮಾನವಧರ್ಮ ಸಾರಿದವರು. “ಮನುಷ್ಯ ಹುಟ್ಟುತ್ತಾ ವಿಶ್ವಮಾನವ, ಬೆಳೆಯುತ್ತಾ ಅಲ್ಪಮಾನವನಾಗುತ್ತಾನೆ,” ಎಂದೇಳಿದ್ದರು. ಹಾಗೇ ನೋಡಿದಾಗ ಹಿರಣ್ಣಯ್ಯ ಜಾತಿವಾದಿಯಾಗುವ ಮೂಲಕ ಅಲ್ಪಮಾನವನಾಗಿದ್ದಾರೆ ಎಂದರೆ ತಪ್ಪಾಗಲಾರದೇನೋ?

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 20)


– ಡಾ.ಎನ್.ಜಗದೀಶ್ ಕೊಪ್ಪ


 

ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲೇ ತಂಗಿದ್ದ ಕಾರ್ಬೆಟ್ ಆ ದಿನ ರಾತ್ರಿ ನರಭಕ್ಷಕ ಮತ್ತೇ ಸುಳಿಯಬಹುದೆಂದು ಕಿಟಕಿಯ ಬಳಿ ಕಾದುಕುಳಿತರೂ ಏನು ಪ್ರಯೋಜನವಾಗಲಿಲ್ಲ, ನರಭಕ್ಷಕ ಚಿರತೆ ತನ್ನ ಮಾರ್ಗ ಬದಲಿಸಿ ಪಕ್ಕದ ಹಳ್ಳಿಯಲ್ಲಿ ಗರ್ಭಿಣಿ ಹೆಂಗಸೊಬ್ಬಳನ್ನು ಬಲಿತೆಗೆದುಕೊಂಡಿತ್ತು. ರಾತ್ರಿ ಊಟವಾದ ನಂತರ ಮನೆಯ ಹಿಂಬಾಗಿಲ ಬಳಿ ಪಾತ್ರೆ ತೊಳೆಯುತ್ತಿದ್ದ ಹೆಂಗಸಿನ ಮೇಲೆ ನರಭಕ್ಷಕ ದಾಳಿ ಮಾಡಿತು. ಆಕೆ ಕಿರುಚಿಕೊಳ್ಳುತ್ತಿದ್ದಂತೆ ಕುತ್ತಿಗೆಯನ್ನು ಬಾಯಲ್ಲಿ ಹಿಡಿದು ಆಕೆಯನ್ನು ಊರಿನ ಕಿರಿದಾದ ಓಣಿಯ ನಡುವೆ ಎಳೆದೊಯ್ದು ಹೊರವಲಯದ ಕಣಿವೆಯಲ್ಲಿ ಅರ್ಧ ತಿಂದು ಆಕೆಯ ಶವವನ್ನು ಅಲ್ಲಿಯೇ ಬಿಟ್ಟು ಹೋಗಿತ್ತು.

ಚಿರತೆಯ ಈ ಅನಿರೀಕ್ಷಿತ ದಾಳಿಗೆ ಬೆಚ್ಚಿದ ಗ್ರಾಮಸ್ಥರು ತಮ್ಮ ಮನೆಯ ಕಿಟಕಿ, ಬಾಗಿಲು ಮುಚ್ಚಿ ಹೊರಬರಲು ಹಿಂದೇಟು ಹಾಕಿದರು. ಮನೆಯೊಳಗೆ ಚುಟ್ಟಾ ಸೇದುತ್ತಾ ಕುಳಿತ್ತಿದ್ದ ಆಕೆಯ ಯಜಮಾನನಿಗೆ ನರಭಕ್ಷಕ ಚಿರತೆಯ ಆಕ್ರಮಣದ ಸಣ್ಣ ಸುಳಿವು ಸಿಕ್ಕಿರಲಿಲ್ಲ. ಪಾತ್ರೆ ತೊಳೆಯುತ್ತಿದ್ದ ಹೆಂಡತಿ ಕಿರುಚಿಕೊಂಡರೂ ಸಹ ಒಳಕ್ಕೆ ಬಾರದಿರುವುದರಿಂದ ಅನುಮಾನಗೊಂಡ ಅವನು ಮನೆಯ ಹಿಂಭಾಗಕ್ಕೆ ಬಂದಾಗ ನರಭಕ್ಷಕ ಆಕೆಯನ್ನು ಎಳೆದೊಯ್ಯುತ್ತಿರುವುದನ್ನು ಅಸಹಾಯಕನಾಗಿ ನೋಡುತ್ತಾ ನಿಲ್ಲಬೇಕಾಯಿತು. ಮಾರನೇ ದಿನ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ, ಪ್ರವಾಸಿ ಮಂದಿರದಿಂದ ಸುಮಾರು ನಾಲ್ಕು ಮೈಲಿ ದೂರದ ಪರ್ವತದ ಮೇಲಿದ್ದ ಹಳ್ಳಿಯ ಆಕೆಯ ಮನೆಗೆ ಬಂದ ಕಾರ್ಬೆಟ್ ಆಕೆಯ ರಕ್ತದ ಕಲೆಗಳ ಜಾಡು ಹಿಡಿದು ಚಿರತೆ ಸಾಗಿರುವ ದಾರಿಯನ್ನು ಹಿಂಬಾಲಿಸಿದ. ಅದು ಹೆಂಗಸಿನ ಶವದ ಜೊತೆ ನಾಲ್ಕು ಅಡಿ ಎತ್ತರದ ಗೋಡೆ ಹಾರಿ ಹೋಗಿರುವುದು ಅವನ ಗಮನಕ್ಕೆ ಬಂತು. ಇದು ಬಲಿಷ್ಟ ದೇಹದ ವಯಸ್ಸಾದ ನರಭಕ್ಷಕ ಎಂದು ಆ ಕೂಡಲೇ ಕಾರ್ಬೆಟ್ ನಿರ್ಧರಿಸಿದ.

ಊರಾಚೆಗಿನ ಕಣಿವೆಯೊಂದರ ಬಳಿ ಆ ಹೆಂಗಸಿನ ಶವವನ್ನು ಇಟ್ಟುಕೊಂಡು ಮುಕ್ಕಾಲು ಭಾಗ ತಿಂದು ಮುಗಿಸಿದ ನರಭಕ್ಷಕ ಉಳಿದ ಭಾಗವನ್ನು ಅಲ್ಲಿಯೇ ಉಳಿಸಿ ಹೋಗಿತ್ತು. ಮಹಿಳೆಯ ಶವವಿದ್ದ ಸುತ್ತ ಮುತ್ತಲಿನ ಜಾಗವನ್ನೊಮ್ಮೆ ಕಾರ್ಬೆಟ್ ಅವಲೋಕಿಸಿದ. ಶವವಿದ್ದ ಜಾಗದಿಂದ 40 ಅಡಿ ದೂರದಲ್ಲಿ ಇಳಿಜಾರಿನಲ್ಲಿ ಒಂದು ಮರವಿತ್ತು ಜೊತೆಗೆ ಮರದ ಸುತ್ತ ಕಟ್ಟೆಯಾಕಾರದಲ್ಲಿ ಎತ್ತರದಷ್ಟು ಕಲ್ಲುಗಳನ್ನು ಜೋಡಿಸಿ ಅದರ ಮೇಲೆ ಸುಮಾರು ಆರು ಅಡಿ ಉದ್ದ-ಅಗಲದ ಅಟ್ಟಣಿಗೆಯನ್ನು ನಿರ್ಮಿಸಲಾಗಿತ್ತು. ದನಕರು ಮೇಕೆ ಕಾಯುವ ಹಳ್ಳಿಗರು ಮರದ ನೆರಳಿನಲ್ಲಿ ಕೂರುವುದಕ್ಕೆ ಈ ವ್ಯವಸ್ಥೆ ಮಾಡಿಕೊಂಡಿದ್ದರು.ರಾತ್ರಿ ಮರದ ಮೇಲೆ ಕುಳಿತು ನರಭಕ್ಷಕ ಚಿರತೆಯನ್ನು ಬೇಟೆಯಾಡಲು ಇದು ಸೂಕ್ತವಾದ ಜಾಗ ಎಂದು ಕಾರ್ಬೆಟ್ ನಿರ್ಧರಿಸಿದ.

ಸಂಜೆಯಾಗುತ್ತಿದ್ದಂತೆ ತನ್ನ ಸೇವಕರು, ಗ್ರಾಮಸ್ಥರ ಜೊತೆ ಅಲ್ಲಿಗೆ ಬಂದ ಕಾರ್ಬೆಟ್ ಇದೇ ಮೊದಲ ಬಾರಿಗೆ ಚಿರತೆಯನ್ನು ಬೇಟೆಯಾಡಲು ವಿನೂತನ ಪ್ರಯೋಗಕ್ಕೆ ಮುಂದಾದ. ಬೆಳಿಗ್ಗೆ ಶವ ವೀಕ್ಷಣೆಗೆ ಬಂದಿದ್ದಾಗ ಚಿರತೆ ಶವವನ್ನು ತಿಂದು ಕಣಿವೆಯಲ್ಲಿದ್ದ ಕಾಲುದಾರಿಯಲ್ಲಿ ತೆರಳಿತ್ತು. ಮತ್ತೇ ಇದೇ ದಾರಿಯಲ್ಲಿ ಬರಬಹುದೆಂದು ಊಹಿಸಿದ ಕಾರ್ಬೆಟ್, ಗ್ರಾಮಸ್ಥರು ತಂದಿದ್ದ ಎರಡು ಬಿದರಿನ ಬೊಂಬುಗಳನ್ನು ಆ ಕಾಲುದಾರಿಯ ಎರಡು ಬದಿಗಳಲ್ಲಿ ನೆಡಸಿದ. ತಾನು ತಂದಿದ್ದ ಮೂರು ಬಂದೂಕಗಳ ಪೈಕಿ ಒಂದನ್ನು ಬೊಂಬಿಗೆ ಕಟ್ಟಿ ದಾರಿಗೆ ಅಡ್ಡಲಾಗಿ ಮೀನು ಶಿಕಾರಿಗೆ ಬಳಸುವ ಪ್ಲಾಸ್ಟಿಕ್ ದಾರವನ್ನು ಕಟ್ಟಿದ. ದಾರದ ಇನ್ನೊಂದು ತುದಿಯನ್ನು ಬಂದೂಕದ ಒತ್ತುಗುಂಡಿಗೆ ಕಟ್ಟಿದ. ನರಭಕ್ಷಕ ಕಾಲುದಾರಿಯಲ್ಲಿ ಬಂದು ದಾರವನ್ನು ಸೋಕಿಸಿದರೆ ಸಾಕು ಬಂದೂಕಿನಿಂದ ಗುಂಡು ಸಿಡಿಯುವಂತೆ ವ್ಯವಸ್ಥೆ ಮಾಡಿದ. ಇಂತಹದ್ದೇ ಇನ್ನೊಂದು ವ್ಯವಸ್ಥೆಯನ್ನು ಶವವಿದ್ದ ಹಿಂಬದಿಯ ಭಾಗದಲ್ಲೂ ನಿರ್ಮಿಸಿದ. ನರಭಕ್ಷಕ ಒಂದು ದಾರಿಯಲ್ಲಿ ತಪ್ಪಿಸಿಕೊಂಡರೆ, ಅದು ಇನ್ನೋಂದು ದಾರಿಯಲ್ಲಾದರೂ ಗುಂಡಿಗೆ ಬಲಿಯಾಗಬೇಕು ಇದು ಕಾರ್ಬೆಟ್‌ನ ಆಲೋಚನೆಯಾಗಿತ್ತು.

ಸ್ಥಳದಲ್ಲಿ ಕತ್ತಲು ಆವರಿಸುತ್ತಿದ್ದಂತೆ ಎಲ್ಲರನ್ನು ವಾಪಸ್ ಹಳ್ಳಿಗೆ ಕಳಿಸಿದ ಕಾರ್ಬೆಟ್, ತನ್ನ ಸಹಾಯಕರನ್ನು ಆ ರಾತ್ರಿ ಹಳ್ಳಿಯ ಮುಖಂಡನ ಮನೆಯಲ್ಲಿ ಮಲಗಲು ಹೇಳಿದ. ರಾತ್ರಿಯ ಶಿಕಾರಿಗಾಗಿ ತಾನು ತಂದಿದ್ದ, ಬಿಸ್ಕೇಟ್, ನೀರು, ಸಿಗರೇಟು, ಬಂದೂಕ, ಒಂದು ಪಿಸ್ತೂಲ್, ಚಾಕು, ಎಲ್ಲವನ್ನು ತೆಗೆದುಕೊಂಡು ಮರವೇರಿ ಕುಳಿತ. ಕತ್ತಲು ಆವರಿಸುವ ಸಮಯದಲ್ಲಿ ನಿರ್ಮಲವಾಗಿದ್ದ ಆಕಾಶದಲ್ಲಿ ನಕ್ಷತ್ರಗಳು ಗೋಚರಿಸುತ್ತಿದ್ದವು. ಕ್ರಮೇಣ ಮೋಡಗಳು ಆವರಿಸಿಕೊಂಡು ಕತ್ತಲು ಹೆಪ್ಪುಗಟ್ಟಿತು. ಮುಂಜ್ರಾಗತಾ ಕ್ರಮವಾಗಿ ಕಾರ್ಬೆಟ್ ಮಹಿಳೆಯ ಶವದ ಬಳಿ ಬಿಳಿಯ ಬಣ್ಣದ ಒಂದು ಬೆಣಚು ಕಲ್ಲನ್ನು ಇರಿಸಿದ್ದ. ಚಿರತೆ ಶವದ ಬಳಿ ಬಂದರೆ, ಕತ್ತಲೆಯಲ್ಲಿ ಗುರಿ ಇಡಲು ಬಿಳಿಯ ಬಣ್ಣದ ಕಲ್ಲು ಇರಲಿ ಎಂಬುದು ಅವನ ಮುಂದಾಲೋಚನೆಯಾಗಿತ್ತು. ರಾತ್ರಿ ಒಂಬತ್ತರ ಸಮಯಕ್ಕೆ ಸರಿಯಾಗಿ ಹಿಮ ಪರ್ವತದಿಂದ ಶೀತಗಾಳಿ ಬೀಸಲು ಪ್ರಾರಂಭಿಸುತ್ತಿದ್ದಂತೆ ಆಗಸದಿಂದ ದಪ್ಪನೆಯ ಮಳೆ ಹನಿ ಸಹ ಬೀಳತೊಡಗಿತು.

ಇದೇ ಸಮಯಕ್ಕೆ ಸರಿಯಾಗಿ ಕಣಿವೆಯ ಮೇಲ್ಭಾಗದಿಂದ ಕಲ್ಲುಗಳು ಕೆಳಕ್ಕೆ ಉರುಳತೊಡಗಿ ನರಭಕ್ಷಕನ ಆಗಮನದ ಸೂಚನೆ ನೀಡತೊಡಗಿದವು. ದೂರದಲ್ಲಿ ಜಿಂಕೆಗಳ ಚೀತ್ಕಾರ, ಮಂಗಗಳ ಕಿರುಚುವಿಕೆ, ಪಕ್ಷಿಗಳ ಅಸಹಜವಾದ ಧ್ವನಿ ಇವೆಲ್ಲವೂ ಚಿರತೆಯ ಆಗಮನವನ್ನು ಕಾರ್ಬೆಟ್‌ಗೆ ಧೃಡಪಡಿಸಿದವು. ಬಿರುಸಿನ ಮಳೆಯ ಶಬ್ಧದಿಂದಾಗಿ ಏನೂ ಕಾಣುವಂತಿರಲಿಲ್ಲ, ಕೇಳುವಂತಿರಲಿಲ್ಲ. ಮಳೆಯ ಆರ್ಭಟ ಕಡಿಮೆಯಾಗುತ್ತಿದ್ದಂತೆ ಕಾರ್ಬೆಟ್ ಕುಳಿತ್ತಿದ್ದ ಮರದ ಕೆಳಗಿನ ಚಪ್ಪರದ ಅಡಿಯಲ್ಲಿ ಶಬ್ದವಾದ ಹಾಗೆ ಭಾಸವಾಯ್ತು. ಕುತೂಹಲದಿಂದ ಗಮನಿಸಿದಾಗ, ಆ ನರಭಕ್ಷಕ ಚಿರತೆ ಮಳೆಯಿಂದ ತಪ್ಪಿಸಿಕೊಳ್ಳಲು ಚಪ್ಪರವನ್ನೇ ಆಶ್ರಯಿಸಿತ್ತು. ಚಪ್ಪರದ ಮೇಲೆ ಹುಲ್ಲನ್ನು ದಟ್ಟವಾಗಿ ಹಾಸಿದ್ದ ಪರಿಣಾಮ ಅದು ಅವನಿಗೆ ಕಾಣುವಂತೆ ಇರಲಿಲ್ಲ. ಹತ್ತಿರದಿಂದ ಹೊಡೆದು ಉರುಳಿಸುವ ಅವಕಾಶ ತಪ್ಪಿಹೋದುದಕ್ಕೆ ಕಾರ್ಬೆಟ್ ಕೈ ಕೈ ಹಿಸುಕಿಕೊಳ್ಳುವಂತಾಯಿತು. ಮಳೆ ನಿಂತ ನಂತರ agave ನಿಧಾನವಾಗಿ ಹೆಂಗಸಿನ ಶವವಿದ್ದ ಜಾಗದ ಕಡೆ ನಡೆದು ಹೋಗುತ್ತಿರುವುದು ನೆಲದಲ್ಲಿ ಹರಿಯುತ್ತಿದ್ದ ಮಳೆಯ ನೀರಿನಲ್ಲಿ ಅದರ ಹೆಜ್ಜೆಯ ಶಬ್ದದಿಂದ ಖಚಿತಪಡಿಸಿಕೊಂಡ. ತಾನು ಶವದ ಬಳಿ ಇಟ್ಟಿದ್ದ ಬಿಳಿಯ ಕಲ್ಲು ಕಾರ್ಬೆಟ್‌ಗೆ ಕಾಣದಾಯ್ತು. ಹೆಂಗಸಿನ ಶವದ ಕೆಳಗೆ ಮಳೆಯ ನೀರು ರಭಸದಿಂದ ಹರಿಯುತ್ತಿದ್ದ ಕಾರಣ ಚಿರತೆ ಶವವನ್ನು ಸ್ವಲ್ಪ ದೂರಕ್ಕೆ ಎಳೆದಿತ್ತು. ಇದರಿಂದಾಗಿ, ಕಲ್ಲು ಶವದ ಕೆಳಕ್ಕೆ ಸೇರಿಹೋದ ಕಾರಣ, ಕಾರ್ಬೆಟ್ ನರಭಕ್ಷಕನಿಗೆ ಗುರಿ ಇಡುವುದು ಕಷ್ಟವಾಯ್ತು.

ಆ ಕಗ್ಗತ್ತಲಿನಲ್ಲಿ ಅಂದಾಜಿನ ಮೇಲೆ ಚಿರತೆ ಶವದ ಮೂಳೆ ಅಗಿಯುವ ಶಬ್ಧವನ್ನು ಆಲಿಸುತ್ತಾ ದಿಕ್ಕನ್ನು ಗುರುತಿಸತೊಡಗಿದ. ಮತ್ತೇ ಮಳೆ ಹನಿ ಪ್ರಾರಂಭವಾದ ಹಿನ್ನಲೆಯಲ್ಲಿ ಅದು ಶವವನ್ನು ತಿನ್ನುವುದನ್ನು ನಿಲ್ಲಿಸಿ, ಪೊದೆಯಲ್ಲಿ ಅಡಗಿಕೊಂಡಿತು. ಹೀಗೆ ಸತತ ನಾಲ್ಕು ಗಂಟೆಗಳ ಕಾಲ, ಮಳೆಯ ಕಾರಣ, ಚಿರತೆ ಬರುವುದು, ಹೋಗುವುದು ಮಾಡುತ್ತಲೇ ಇತ್ತು. ಕಾರ್ಬೆಟ್ ಮರಕ್ಕೆ ಕಟ್ಟಿದ್ದ ಕೋವಿಯ ದಾರವನ್ನು ಸಹ ಅದು ತುಳಿಯಲೇ ಇಲ್ಲ. ಮಳೆ ನಿಂತ ಬಳಿಕ ಆಕಾಶ ಸ್ವಲ್ಪ ಮಟ್ಟಿಗೆ ಶುಭ್ರವಾಯಿತು. ಹೆಂಗಸಿನ ಶವದ ಬಳಿ ಇರಿಸಿದ್ದ ಕಲ್ಲು ಕಾರ್ಬೆಟ್ ಕಣ್ಣಿಗೆ ಅಸೃಷ್ಟವಾಗಿ ಗೋಚರಿಸತೊಡಗಿತು. ಮತ್ತೆ ನರಭಕ್ಷಕ ಶವದ ಬಳಿ ಆಗಮಿಸುತ್ತಿರುದನ್ನು ಗಮನಿಸಿದ ಅವನು ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎನಿಸಿ ಕಲ್ಲನ್ನು ಗುರಿಯಾಗಿರಿಸಿಕೊಂಡು ಗುಂಡು ಹಾರಿಸಿಬಿಟ್ಟ. ಅದರ ಪರಿಣಾಮವನ್ನು ತಿಳಿಯಬೇಕಾದರೆ, ಅವನು ಬೆಳಕು ಹರಿಯುವವರೆಗೆ ಕಾಯಲೇಬೇಕಿತ್ತು.

ಬೆಳಗಿನ ಜಾವ ಕಾರ್ಬೆಟ್ ಮರದಿಂದ ಕೆಳಕ್ಕೆ ಇಳಿದು ನೋಡಿದಾಗ ಅವನಿಗೆ ತೀವ್ರ ನಿರಾಶೆಯಾಯಿತು. ಕೂದಲೆಳೆಯ ಅಂತರದಲ್ಲಿ ನರಭಕ್ಷಕ ಗುಂಡಿನಿಂದ ತಪ್ಪಿಸಿಕೊಂಡಿತ್ತು. ಅದರ ಕುತ್ತಿಗೆಯನ್ನು ಸವರಿಕೊಂಡು ಹೋಗಿದ್ದ ಗುಂಡು ನೆಲಕ್ಕೆ ಬಡಿದಿತ್ತು. ಚಿರತೆಯ ಕುತ್ತಿಗೆ ಭಾಗದ ಕೂದಲುಗಳು ನೆಲದ ಮೇಲೆ ಹರಡಿದ್ದವು. ಕಾರ್ಬೆಟ್ ತೀವ್ರ ನಿರಾಶನಾಗಿ ಮರಕ್ಕೆ ಕಟ್ಟಿದ್ದ ಕೋವಿಗಳನ್ನು ಬಿಚ್ಚಿಕೊಂಡು ಪ್ರವಾಸಿ ಮಂದಿರದತ್ತ ಹೆಜ್ಜೆ ಹಾಕಿದನು. ಚಿರತೆಗೆ ಬಲಿಯಾದ ಹೆಂಗಸಿನ ಪತಿ ಆಕೆಯ ಅಳಿದುಳಿದ ಶವದ ಭಾಗಗಳನ್ನು ಅಂತಿಮ ಸಂಸ್ಕಾರಕ್ಕಾಗಿ ಆಯ್ದುಕೊಂಡನು. ಆ ಹಳ್ಳಿಯ ಜನಕ್ಕೆ ನಿರಾಶೆಯಾದರೂ ಕಾರ್ಬೆಟ್ ಬಗ್ಗೆ ಅಗಾಧ ಭರವಸೆ ಇತ್ತು. ಒಂದಲ್ಲ ಒಂದು ದಿನ ಈ ಬಿಳಿಯ ಸಾಹೇಬ ನರಭಕ್ಷಕನಿಂದ ನಮ್ಮನ್ನು ಕಾಪಾಡುತ್ತಾನೆ ಎಂದು ಅವರು ನಂಬಿದ್ದರು. ರಾತ್ರಿಯಲ್ಲಿ ಒಂಟಿಯಾಗಿ ಬಂದೂಕ ಹಿಡಿದು ತಿರುಗುವ ಕಾರ್ಬೆಟ್‌ಗೆ ಅಗೋಚರವಾದ ದೈವಿಶಕ್ತಿ ಇದೆ ಎಂದು ಅವರೆಲ್ಲಾ ನಂಬಿದ್ದರು. ಈ ಕಾರಣಕ್ಕಾಗಿ ಘರ್ವಾಲ್ ಪ್ರಾಂತ್ಯದ ಯಾವುದೇ ಹಳ್ಳಿಗೆ ಕಾರ್ಬೆಟ್ ಹೋದರೂ ಸಹ ಅವನನ್ನು ಅತ್ಯಂತ ಆದರದಿಂದ ಬರಮಾಡಿಕೊಂಡು ಗೌರವಿಸುತ್ತಿದ್ದರು. ಅಮಾಯಕ. ಮುಗ್ಧ ಹಳ್ಳಿಗರ ಪ್ರೀತಿಗೆ ಕಾರ್ಬೆಟ್ ಮನಸೋತ್ತಿದ್ದ. ಇವರ ಪ್ರೀತಿಗೆ ಕಾಣಿಕೆಯಾಗಿ, ನರಭಕ್ಷಕನನ್ನು ಬೇಟೆಯಾಡಲೇ ಬೇಕು ಎಂಬ ದೃಢ ನಿರ್ಧಾರವೊಂದು ಅವನ ಮನದಲ್ಲಿ ಮನೆ ಮಾಡಿತು.

 ( ಮುಂದುವರಿಯುವುದು)