ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 20)


– ಡಾ.ಎನ್.ಜಗದೀಶ್ ಕೊಪ್ಪ


 

ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲೇ ತಂಗಿದ್ದ ಕಾರ್ಬೆಟ್ ಆ ದಿನ ರಾತ್ರಿ ನರಭಕ್ಷಕ ಮತ್ತೇ ಸುಳಿಯಬಹುದೆಂದು ಕಿಟಕಿಯ ಬಳಿ ಕಾದುಕುಳಿತರೂ ಏನು ಪ್ರಯೋಜನವಾಗಲಿಲ್ಲ, ನರಭಕ್ಷಕ ಚಿರತೆ ತನ್ನ ಮಾರ್ಗ ಬದಲಿಸಿ ಪಕ್ಕದ ಹಳ್ಳಿಯಲ್ಲಿ ಗರ್ಭಿಣಿ ಹೆಂಗಸೊಬ್ಬಳನ್ನು ಬಲಿತೆಗೆದುಕೊಂಡಿತ್ತು. ರಾತ್ರಿ ಊಟವಾದ ನಂತರ ಮನೆಯ ಹಿಂಬಾಗಿಲ ಬಳಿ ಪಾತ್ರೆ ತೊಳೆಯುತ್ತಿದ್ದ ಹೆಂಗಸಿನ ಮೇಲೆ ನರಭಕ್ಷಕ ದಾಳಿ ಮಾಡಿತು. ಆಕೆ ಕಿರುಚಿಕೊಳ್ಳುತ್ತಿದ್ದಂತೆ ಕುತ್ತಿಗೆಯನ್ನು ಬಾಯಲ್ಲಿ ಹಿಡಿದು ಆಕೆಯನ್ನು ಊರಿನ ಕಿರಿದಾದ ಓಣಿಯ ನಡುವೆ ಎಳೆದೊಯ್ದು ಹೊರವಲಯದ ಕಣಿವೆಯಲ್ಲಿ ಅರ್ಧ ತಿಂದು ಆಕೆಯ ಶವವನ್ನು ಅಲ್ಲಿಯೇ ಬಿಟ್ಟು ಹೋಗಿತ್ತು.

ಚಿರತೆಯ ಈ ಅನಿರೀಕ್ಷಿತ ದಾಳಿಗೆ ಬೆಚ್ಚಿದ ಗ್ರಾಮಸ್ಥರು ತಮ್ಮ ಮನೆಯ ಕಿಟಕಿ, ಬಾಗಿಲು ಮುಚ್ಚಿ ಹೊರಬರಲು ಹಿಂದೇಟು ಹಾಕಿದರು. ಮನೆಯೊಳಗೆ ಚುಟ್ಟಾ ಸೇದುತ್ತಾ ಕುಳಿತ್ತಿದ್ದ ಆಕೆಯ ಯಜಮಾನನಿಗೆ ನರಭಕ್ಷಕ ಚಿರತೆಯ ಆಕ್ರಮಣದ ಸಣ್ಣ ಸುಳಿವು ಸಿಕ್ಕಿರಲಿಲ್ಲ. ಪಾತ್ರೆ ತೊಳೆಯುತ್ತಿದ್ದ ಹೆಂಡತಿ ಕಿರುಚಿಕೊಂಡರೂ ಸಹ ಒಳಕ್ಕೆ ಬಾರದಿರುವುದರಿಂದ ಅನುಮಾನಗೊಂಡ ಅವನು ಮನೆಯ ಹಿಂಭಾಗಕ್ಕೆ ಬಂದಾಗ ನರಭಕ್ಷಕ ಆಕೆಯನ್ನು ಎಳೆದೊಯ್ಯುತ್ತಿರುವುದನ್ನು ಅಸಹಾಯಕನಾಗಿ ನೋಡುತ್ತಾ ನಿಲ್ಲಬೇಕಾಯಿತು. ಮಾರನೇ ದಿನ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ, ಪ್ರವಾಸಿ ಮಂದಿರದಿಂದ ಸುಮಾರು ನಾಲ್ಕು ಮೈಲಿ ದೂರದ ಪರ್ವತದ ಮೇಲಿದ್ದ ಹಳ್ಳಿಯ ಆಕೆಯ ಮನೆಗೆ ಬಂದ ಕಾರ್ಬೆಟ್ ಆಕೆಯ ರಕ್ತದ ಕಲೆಗಳ ಜಾಡು ಹಿಡಿದು ಚಿರತೆ ಸಾಗಿರುವ ದಾರಿಯನ್ನು ಹಿಂಬಾಲಿಸಿದ. ಅದು ಹೆಂಗಸಿನ ಶವದ ಜೊತೆ ನಾಲ್ಕು ಅಡಿ ಎತ್ತರದ ಗೋಡೆ ಹಾರಿ ಹೋಗಿರುವುದು ಅವನ ಗಮನಕ್ಕೆ ಬಂತು. ಇದು ಬಲಿಷ್ಟ ದೇಹದ ವಯಸ್ಸಾದ ನರಭಕ್ಷಕ ಎಂದು ಆ ಕೂಡಲೇ ಕಾರ್ಬೆಟ್ ನಿರ್ಧರಿಸಿದ.

ಊರಾಚೆಗಿನ ಕಣಿವೆಯೊಂದರ ಬಳಿ ಆ ಹೆಂಗಸಿನ ಶವವನ್ನು ಇಟ್ಟುಕೊಂಡು ಮುಕ್ಕಾಲು ಭಾಗ ತಿಂದು ಮುಗಿಸಿದ ನರಭಕ್ಷಕ ಉಳಿದ ಭಾಗವನ್ನು ಅಲ್ಲಿಯೇ ಉಳಿಸಿ ಹೋಗಿತ್ತು. ಮಹಿಳೆಯ ಶವವಿದ್ದ ಸುತ್ತ ಮುತ್ತಲಿನ ಜಾಗವನ್ನೊಮ್ಮೆ ಕಾರ್ಬೆಟ್ ಅವಲೋಕಿಸಿದ. ಶವವಿದ್ದ ಜಾಗದಿಂದ 40 ಅಡಿ ದೂರದಲ್ಲಿ ಇಳಿಜಾರಿನಲ್ಲಿ ಒಂದು ಮರವಿತ್ತು ಜೊತೆಗೆ ಮರದ ಸುತ್ತ ಕಟ್ಟೆಯಾಕಾರದಲ್ಲಿ ಎತ್ತರದಷ್ಟು ಕಲ್ಲುಗಳನ್ನು ಜೋಡಿಸಿ ಅದರ ಮೇಲೆ ಸುಮಾರು ಆರು ಅಡಿ ಉದ್ದ-ಅಗಲದ ಅಟ್ಟಣಿಗೆಯನ್ನು ನಿರ್ಮಿಸಲಾಗಿತ್ತು. ದನಕರು ಮೇಕೆ ಕಾಯುವ ಹಳ್ಳಿಗರು ಮರದ ನೆರಳಿನಲ್ಲಿ ಕೂರುವುದಕ್ಕೆ ಈ ವ್ಯವಸ್ಥೆ ಮಾಡಿಕೊಂಡಿದ್ದರು.ರಾತ್ರಿ ಮರದ ಮೇಲೆ ಕುಳಿತು ನರಭಕ್ಷಕ ಚಿರತೆಯನ್ನು ಬೇಟೆಯಾಡಲು ಇದು ಸೂಕ್ತವಾದ ಜಾಗ ಎಂದು ಕಾರ್ಬೆಟ್ ನಿರ್ಧರಿಸಿದ.

ಸಂಜೆಯಾಗುತ್ತಿದ್ದಂತೆ ತನ್ನ ಸೇವಕರು, ಗ್ರಾಮಸ್ಥರ ಜೊತೆ ಅಲ್ಲಿಗೆ ಬಂದ ಕಾರ್ಬೆಟ್ ಇದೇ ಮೊದಲ ಬಾರಿಗೆ ಚಿರತೆಯನ್ನು ಬೇಟೆಯಾಡಲು ವಿನೂತನ ಪ್ರಯೋಗಕ್ಕೆ ಮುಂದಾದ. ಬೆಳಿಗ್ಗೆ ಶವ ವೀಕ್ಷಣೆಗೆ ಬಂದಿದ್ದಾಗ ಚಿರತೆ ಶವವನ್ನು ತಿಂದು ಕಣಿವೆಯಲ್ಲಿದ್ದ ಕಾಲುದಾರಿಯಲ್ಲಿ ತೆರಳಿತ್ತು. ಮತ್ತೇ ಇದೇ ದಾರಿಯಲ್ಲಿ ಬರಬಹುದೆಂದು ಊಹಿಸಿದ ಕಾರ್ಬೆಟ್, ಗ್ರಾಮಸ್ಥರು ತಂದಿದ್ದ ಎರಡು ಬಿದರಿನ ಬೊಂಬುಗಳನ್ನು ಆ ಕಾಲುದಾರಿಯ ಎರಡು ಬದಿಗಳಲ್ಲಿ ನೆಡಸಿದ. ತಾನು ತಂದಿದ್ದ ಮೂರು ಬಂದೂಕಗಳ ಪೈಕಿ ಒಂದನ್ನು ಬೊಂಬಿಗೆ ಕಟ್ಟಿ ದಾರಿಗೆ ಅಡ್ಡಲಾಗಿ ಮೀನು ಶಿಕಾರಿಗೆ ಬಳಸುವ ಪ್ಲಾಸ್ಟಿಕ್ ದಾರವನ್ನು ಕಟ್ಟಿದ. ದಾರದ ಇನ್ನೊಂದು ತುದಿಯನ್ನು ಬಂದೂಕದ ಒತ್ತುಗುಂಡಿಗೆ ಕಟ್ಟಿದ. ನರಭಕ್ಷಕ ಕಾಲುದಾರಿಯಲ್ಲಿ ಬಂದು ದಾರವನ್ನು ಸೋಕಿಸಿದರೆ ಸಾಕು ಬಂದೂಕಿನಿಂದ ಗುಂಡು ಸಿಡಿಯುವಂತೆ ವ್ಯವಸ್ಥೆ ಮಾಡಿದ. ಇಂತಹದ್ದೇ ಇನ್ನೊಂದು ವ್ಯವಸ್ಥೆಯನ್ನು ಶವವಿದ್ದ ಹಿಂಬದಿಯ ಭಾಗದಲ್ಲೂ ನಿರ್ಮಿಸಿದ. ನರಭಕ್ಷಕ ಒಂದು ದಾರಿಯಲ್ಲಿ ತಪ್ಪಿಸಿಕೊಂಡರೆ, ಅದು ಇನ್ನೋಂದು ದಾರಿಯಲ್ಲಾದರೂ ಗುಂಡಿಗೆ ಬಲಿಯಾಗಬೇಕು ಇದು ಕಾರ್ಬೆಟ್‌ನ ಆಲೋಚನೆಯಾಗಿತ್ತು.

ಸ್ಥಳದಲ್ಲಿ ಕತ್ತಲು ಆವರಿಸುತ್ತಿದ್ದಂತೆ ಎಲ್ಲರನ್ನು ವಾಪಸ್ ಹಳ್ಳಿಗೆ ಕಳಿಸಿದ ಕಾರ್ಬೆಟ್, ತನ್ನ ಸಹಾಯಕರನ್ನು ಆ ರಾತ್ರಿ ಹಳ್ಳಿಯ ಮುಖಂಡನ ಮನೆಯಲ್ಲಿ ಮಲಗಲು ಹೇಳಿದ. ರಾತ್ರಿಯ ಶಿಕಾರಿಗಾಗಿ ತಾನು ತಂದಿದ್ದ, ಬಿಸ್ಕೇಟ್, ನೀರು, ಸಿಗರೇಟು, ಬಂದೂಕ, ಒಂದು ಪಿಸ್ತೂಲ್, ಚಾಕು, ಎಲ್ಲವನ್ನು ತೆಗೆದುಕೊಂಡು ಮರವೇರಿ ಕುಳಿತ. ಕತ್ತಲು ಆವರಿಸುವ ಸಮಯದಲ್ಲಿ ನಿರ್ಮಲವಾಗಿದ್ದ ಆಕಾಶದಲ್ಲಿ ನಕ್ಷತ್ರಗಳು ಗೋಚರಿಸುತ್ತಿದ್ದವು. ಕ್ರಮೇಣ ಮೋಡಗಳು ಆವರಿಸಿಕೊಂಡು ಕತ್ತಲು ಹೆಪ್ಪುಗಟ್ಟಿತು. ಮುಂಜ್ರಾಗತಾ ಕ್ರಮವಾಗಿ ಕಾರ್ಬೆಟ್ ಮಹಿಳೆಯ ಶವದ ಬಳಿ ಬಿಳಿಯ ಬಣ್ಣದ ಒಂದು ಬೆಣಚು ಕಲ್ಲನ್ನು ಇರಿಸಿದ್ದ. ಚಿರತೆ ಶವದ ಬಳಿ ಬಂದರೆ, ಕತ್ತಲೆಯಲ್ಲಿ ಗುರಿ ಇಡಲು ಬಿಳಿಯ ಬಣ್ಣದ ಕಲ್ಲು ಇರಲಿ ಎಂಬುದು ಅವನ ಮುಂದಾಲೋಚನೆಯಾಗಿತ್ತು. ರಾತ್ರಿ ಒಂಬತ್ತರ ಸಮಯಕ್ಕೆ ಸರಿಯಾಗಿ ಹಿಮ ಪರ್ವತದಿಂದ ಶೀತಗಾಳಿ ಬೀಸಲು ಪ್ರಾರಂಭಿಸುತ್ತಿದ್ದಂತೆ ಆಗಸದಿಂದ ದಪ್ಪನೆಯ ಮಳೆ ಹನಿ ಸಹ ಬೀಳತೊಡಗಿತು.

ಇದೇ ಸಮಯಕ್ಕೆ ಸರಿಯಾಗಿ ಕಣಿವೆಯ ಮೇಲ್ಭಾಗದಿಂದ ಕಲ್ಲುಗಳು ಕೆಳಕ್ಕೆ ಉರುಳತೊಡಗಿ ನರಭಕ್ಷಕನ ಆಗಮನದ ಸೂಚನೆ ನೀಡತೊಡಗಿದವು. ದೂರದಲ್ಲಿ ಜಿಂಕೆಗಳ ಚೀತ್ಕಾರ, ಮಂಗಗಳ ಕಿರುಚುವಿಕೆ, ಪಕ್ಷಿಗಳ ಅಸಹಜವಾದ ಧ್ವನಿ ಇವೆಲ್ಲವೂ ಚಿರತೆಯ ಆಗಮನವನ್ನು ಕಾರ್ಬೆಟ್‌ಗೆ ಧೃಡಪಡಿಸಿದವು. ಬಿರುಸಿನ ಮಳೆಯ ಶಬ್ಧದಿಂದಾಗಿ ಏನೂ ಕಾಣುವಂತಿರಲಿಲ್ಲ, ಕೇಳುವಂತಿರಲಿಲ್ಲ. ಮಳೆಯ ಆರ್ಭಟ ಕಡಿಮೆಯಾಗುತ್ತಿದ್ದಂತೆ ಕಾರ್ಬೆಟ್ ಕುಳಿತ್ತಿದ್ದ ಮರದ ಕೆಳಗಿನ ಚಪ್ಪರದ ಅಡಿಯಲ್ಲಿ ಶಬ್ದವಾದ ಹಾಗೆ ಭಾಸವಾಯ್ತು. ಕುತೂಹಲದಿಂದ ಗಮನಿಸಿದಾಗ, ಆ ನರಭಕ್ಷಕ ಚಿರತೆ ಮಳೆಯಿಂದ ತಪ್ಪಿಸಿಕೊಳ್ಳಲು ಚಪ್ಪರವನ್ನೇ ಆಶ್ರಯಿಸಿತ್ತು. ಚಪ್ಪರದ ಮೇಲೆ ಹುಲ್ಲನ್ನು ದಟ್ಟವಾಗಿ ಹಾಸಿದ್ದ ಪರಿಣಾಮ ಅದು ಅವನಿಗೆ ಕಾಣುವಂತೆ ಇರಲಿಲ್ಲ. ಹತ್ತಿರದಿಂದ ಹೊಡೆದು ಉರುಳಿಸುವ ಅವಕಾಶ ತಪ್ಪಿಹೋದುದಕ್ಕೆ ಕಾರ್ಬೆಟ್ ಕೈ ಕೈ ಹಿಸುಕಿಕೊಳ್ಳುವಂತಾಯಿತು. ಮಳೆ ನಿಂತ ನಂತರ agave ನಿಧಾನವಾಗಿ ಹೆಂಗಸಿನ ಶವವಿದ್ದ ಜಾಗದ ಕಡೆ ನಡೆದು ಹೋಗುತ್ತಿರುವುದು ನೆಲದಲ್ಲಿ ಹರಿಯುತ್ತಿದ್ದ ಮಳೆಯ ನೀರಿನಲ್ಲಿ ಅದರ ಹೆಜ್ಜೆಯ ಶಬ್ದದಿಂದ ಖಚಿತಪಡಿಸಿಕೊಂಡ. ತಾನು ಶವದ ಬಳಿ ಇಟ್ಟಿದ್ದ ಬಿಳಿಯ ಕಲ್ಲು ಕಾರ್ಬೆಟ್‌ಗೆ ಕಾಣದಾಯ್ತು. ಹೆಂಗಸಿನ ಶವದ ಕೆಳಗೆ ಮಳೆಯ ನೀರು ರಭಸದಿಂದ ಹರಿಯುತ್ತಿದ್ದ ಕಾರಣ ಚಿರತೆ ಶವವನ್ನು ಸ್ವಲ್ಪ ದೂರಕ್ಕೆ ಎಳೆದಿತ್ತು. ಇದರಿಂದಾಗಿ, ಕಲ್ಲು ಶವದ ಕೆಳಕ್ಕೆ ಸೇರಿಹೋದ ಕಾರಣ, ಕಾರ್ಬೆಟ್ ನರಭಕ್ಷಕನಿಗೆ ಗುರಿ ಇಡುವುದು ಕಷ್ಟವಾಯ್ತು.

ಆ ಕಗ್ಗತ್ತಲಿನಲ್ಲಿ ಅಂದಾಜಿನ ಮೇಲೆ ಚಿರತೆ ಶವದ ಮೂಳೆ ಅಗಿಯುವ ಶಬ್ಧವನ್ನು ಆಲಿಸುತ್ತಾ ದಿಕ್ಕನ್ನು ಗುರುತಿಸತೊಡಗಿದ. ಮತ್ತೇ ಮಳೆ ಹನಿ ಪ್ರಾರಂಭವಾದ ಹಿನ್ನಲೆಯಲ್ಲಿ ಅದು ಶವವನ್ನು ತಿನ್ನುವುದನ್ನು ನಿಲ್ಲಿಸಿ, ಪೊದೆಯಲ್ಲಿ ಅಡಗಿಕೊಂಡಿತು. ಹೀಗೆ ಸತತ ನಾಲ್ಕು ಗಂಟೆಗಳ ಕಾಲ, ಮಳೆಯ ಕಾರಣ, ಚಿರತೆ ಬರುವುದು, ಹೋಗುವುದು ಮಾಡುತ್ತಲೇ ಇತ್ತು. ಕಾರ್ಬೆಟ್ ಮರಕ್ಕೆ ಕಟ್ಟಿದ್ದ ಕೋವಿಯ ದಾರವನ್ನು ಸಹ ಅದು ತುಳಿಯಲೇ ಇಲ್ಲ. ಮಳೆ ನಿಂತ ಬಳಿಕ ಆಕಾಶ ಸ್ವಲ್ಪ ಮಟ್ಟಿಗೆ ಶುಭ್ರವಾಯಿತು. ಹೆಂಗಸಿನ ಶವದ ಬಳಿ ಇರಿಸಿದ್ದ ಕಲ್ಲು ಕಾರ್ಬೆಟ್ ಕಣ್ಣಿಗೆ ಅಸೃಷ್ಟವಾಗಿ ಗೋಚರಿಸತೊಡಗಿತು. ಮತ್ತೆ ನರಭಕ್ಷಕ ಶವದ ಬಳಿ ಆಗಮಿಸುತ್ತಿರುದನ್ನು ಗಮನಿಸಿದ ಅವನು ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎನಿಸಿ ಕಲ್ಲನ್ನು ಗುರಿಯಾಗಿರಿಸಿಕೊಂಡು ಗುಂಡು ಹಾರಿಸಿಬಿಟ್ಟ. ಅದರ ಪರಿಣಾಮವನ್ನು ತಿಳಿಯಬೇಕಾದರೆ, ಅವನು ಬೆಳಕು ಹರಿಯುವವರೆಗೆ ಕಾಯಲೇಬೇಕಿತ್ತು.

ಬೆಳಗಿನ ಜಾವ ಕಾರ್ಬೆಟ್ ಮರದಿಂದ ಕೆಳಕ್ಕೆ ಇಳಿದು ನೋಡಿದಾಗ ಅವನಿಗೆ ತೀವ್ರ ನಿರಾಶೆಯಾಯಿತು. ಕೂದಲೆಳೆಯ ಅಂತರದಲ್ಲಿ ನರಭಕ್ಷಕ ಗುಂಡಿನಿಂದ ತಪ್ಪಿಸಿಕೊಂಡಿತ್ತು. ಅದರ ಕುತ್ತಿಗೆಯನ್ನು ಸವರಿಕೊಂಡು ಹೋಗಿದ್ದ ಗುಂಡು ನೆಲಕ್ಕೆ ಬಡಿದಿತ್ತು. ಚಿರತೆಯ ಕುತ್ತಿಗೆ ಭಾಗದ ಕೂದಲುಗಳು ನೆಲದ ಮೇಲೆ ಹರಡಿದ್ದವು. ಕಾರ್ಬೆಟ್ ತೀವ್ರ ನಿರಾಶನಾಗಿ ಮರಕ್ಕೆ ಕಟ್ಟಿದ್ದ ಕೋವಿಗಳನ್ನು ಬಿಚ್ಚಿಕೊಂಡು ಪ್ರವಾಸಿ ಮಂದಿರದತ್ತ ಹೆಜ್ಜೆ ಹಾಕಿದನು. ಚಿರತೆಗೆ ಬಲಿಯಾದ ಹೆಂಗಸಿನ ಪತಿ ಆಕೆಯ ಅಳಿದುಳಿದ ಶವದ ಭಾಗಗಳನ್ನು ಅಂತಿಮ ಸಂಸ್ಕಾರಕ್ಕಾಗಿ ಆಯ್ದುಕೊಂಡನು. ಆ ಹಳ್ಳಿಯ ಜನಕ್ಕೆ ನಿರಾಶೆಯಾದರೂ ಕಾರ್ಬೆಟ್ ಬಗ್ಗೆ ಅಗಾಧ ಭರವಸೆ ಇತ್ತು. ಒಂದಲ್ಲ ಒಂದು ದಿನ ಈ ಬಿಳಿಯ ಸಾಹೇಬ ನರಭಕ್ಷಕನಿಂದ ನಮ್ಮನ್ನು ಕಾಪಾಡುತ್ತಾನೆ ಎಂದು ಅವರು ನಂಬಿದ್ದರು. ರಾತ್ರಿಯಲ್ಲಿ ಒಂಟಿಯಾಗಿ ಬಂದೂಕ ಹಿಡಿದು ತಿರುಗುವ ಕಾರ್ಬೆಟ್‌ಗೆ ಅಗೋಚರವಾದ ದೈವಿಶಕ್ತಿ ಇದೆ ಎಂದು ಅವರೆಲ್ಲಾ ನಂಬಿದ್ದರು. ಈ ಕಾರಣಕ್ಕಾಗಿ ಘರ್ವಾಲ್ ಪ್ರಾಂತ್ಯದ ಯಾವುದೇ ಹಳ್ಳಿಗೆ ಕಾರ್ಬೆಟ್ ಹೋದರೂ ಸಹ ಅವನನ್ನು ಅತ್ಯಂತ ಆದರದಿಂದ ಬರಮಾಡಿಕೊಂಡು ಗೌರವಿಸುತ್ತಿದ್ದರು. ಅಮಾಯಕ. ಮುಗ್ಧ ಹಳ್ಳಿಗರ ಪ್ರೀತಿಗೆ ಕಾರ್ಬೆಟ್ ಮನಸೋತ್ತಿದ್ದ. ಇವರ ಪ್ರೀತಿಗೆ ಕಾಣಿಕೆಯಾಗಿ, ನರಭಕ್ಷಕನನ್ನು ಬೇಟೆಯಾಡಲೇ ಬೇಕು ಎಂಬ ದೃಢ ನಿರ್ಧಾರವೊಂದು ಅವನ ಮನದಲ್ಲಿ ಮನೆ ಮಾಡಿತು.

 ( ಮುಂದುವರಿಯುವುದು)

Leave a Reply

Your email address will not be published. Required fields are marked *