ಸುಗತ, ನಿಮಗೆ ಸ್ವಾಗತ

– ವರ್ತಮಾನ ಬಳಗ

ಕನ್ನಡ ಪತ್ರಿಕೋದ್ಯಮಕ್ಕಿದು ಸಿಹಿ ಸುದ್ದಿ. ಸುಗತ ಶ್ರೀನಿವಾಸರಾಜು ಕನ್ನಡದ ಬಹುಮುಖ್ಯ ದಿನಪತ್ರಿಕೆ ವಿಜಯ ಕರ್ನಾಟಕದ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸುಗತ ವಿಕೆ ಸಂಪಾದಕ ಎಂದಾಕ್ಷಣ ನಾಡಿನ ಹಲವೆಡೆ ನೂರಾರು ಹುಬ್ಬುಗಳು ಆಕಾಶಕ್ಕೆ ಹಾರಿದ್ದು ಉಂಟು. ಔಟ್ ಲುಕ್ ಪತ್ರಿಕೆ ಸಹ ಸಂಪಾದಕ ಹುದ್ದೆಯನ್ನು ಬಿಟ್ಟು, ಮುಖ್ಯವಾಗಿ ಇದುವರೆಗೂ ತಾವು ತೊಡಗಿಸಿಕೊಂಡಿದ್ದ ಇಂಗ್ಲಿಷ್ ಪತ್ರಿಕೋದ್ಯಮದಿಂದ ಕನ್ನಡ ಪತ್ರಿಕೆಯೊಂದಕ್ಕೆ ಹಾರಿದ್ದಾರೆ. ಅವರ ಅನುಭವದ ಹರವು ದೊಡ್ಡದು. ಡೆಕ್ಕನ್ ಹೆರಾಲ್ಡ್, ಹಿಂದೂಸ್ಥಾನ್ ಟೈಮ್ಸ್, ಐರಿಷ್ ಟೈಮ್ಸ್, ಔಟ್ ಲುಕ್ ಪತ್ರಿಕೆಗಳಲ್ಲಿ ವರದಿಗಾರನಾಗಿ, ಸಂಪಾದಕೀಯ ಡೆಸ್ಕ್ ನಲ್ಲಿ ಕೆಲಸ ಮಾಡಿದ್ದಾರೆ.

ಸರಳವಾಗಿ ಹೇಳುವುದಾದರೆ ಸುಗತ ಒಬ್ಬ ಪಕ್ಕಾ ಪತ್ರಕರ್ತ ಮತ್ತು ಬರಹಗಾರ. ಸುದ್ದಿಯನ್ನು ಹುಡುಕಿ, ಹೆಕ್ಕಿ, ವಿಶ್ಲೀಷಿಸಿ ಚೆಂದಗೆ ಮಂಡಿಸುವ ಕಲೆ ಇದೆ. ಅವರದು ಕಾಳಜಿಗಳಿರುವ ವ್ಯಕ್ತಿತ್ವ. ಇತ್ತೀಚೆಗೆ ಹಾವೇರಿಯಲ್ಲಿ ನಡೆದ ನರ ಬಲಿ ಪ್ರಕರಣವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ವಿವರವಾಗಿ ಬರೆದದ್ದು ಸುಗತ. ಅವರ ವರದಿ ಪ್ರಕರಣದ ಆರೋಪಿಗಳು ಯಾರು ಎನ್ನುವುದನ್ನು ‘ಸ್ಪಷ್ಟವಾಗಿ’ ಹೇಳುತ್ತದೆ. ಒಬ್ಬ ದಲಿತ ಯುವಕ ಉಳ್ಳವರ ಮೂಢನಂಬಿಕೆಗೆ ಬಲಿಯಾದ ಘಟನೆಯನ್ನು ಎಲ್ಲಿಯೂ ಉತ್ಪ್ರೇಕ್ಷೆ ಇಲ್ಲದೆ ನಿರೂಸಿದ್ದರು. ಅಂತಹದೊಂದು ವರದಿ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಬರಲಿಲ್ಲ. ಸುಗತ ಕನ್ನಡದಲ್ಲಿ ಬಾಂಗ್ಲಾ ಭಾಷಾ ಹೋರಾಟ ಕುರಿತ ‘ಎಕೂಷೆ ಫೆಬ್ರವರಿ’ ಪುಸ್ತಕ ಹೊರತಂದಿದ್ದಾರೆ. ಅವರ ತಂದೆಯ ಮೂಕ ನಾಟಕಗಳನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಅವರ ಎರಡು ಇಂಗ್ಲಿಷ್ ಪುಸ್ತಕಗಳು Keeping Faith with the Mother Tongue – The Anxieties of a Local Culture ಮತ್ತು ಇತ್ತೀಚೆಗೆ ಬಿಡುಗಡೆಯಾದ Pickles from Home.

ಸುಗತ ವಿಕೆ ಮುಂದಾಳತ್ವ ವಹಿಸಿದ ನಂತರ ನಿರೀಕ್ಷೆಗಳು ನೂರಾರು. ಕಾರ್ಪೊರೆಟ್ ಸಂಸ್ಥೆಯಂತೆ ನಡೆಯುತ್ತಿರುವ ಸಂಸ್ಥೆಗೆ ಇವರು ಒಗ್ಗಿಕೊಳ್ಳುವುದು ಹೇಗೆ? ಇದುವರೆಗೆ ಅವರು ತನ್ನ ಪಾಡಿಗೆ, ತನಗೆ ಕಂಡಿದ್ದನ್ನು ಬರೆದುಕೊಂಡಿದ್ದವರು. ಈಗ ಹಾಗಿಲ್ಲ. ಕರ್ನಾಟಕದ ಯಾವುದೋ ಮೂಲೆಯಿಂದ ವರದಿಗಾರನೊಬ್ಬ ಫೋನ್ ಮಾಡಿ ಕೇಳಬಹುದು ‘ಸರ್ ನನಗೆ ಈ ಬಾರಿ ಇಂಕ್ರಿಮೆಂಟ್ ಇಲ್ಲ. ವಿಜಯವಾಣಿಯಿಂದ ಆಫರ್ ಇದೆ ಏನು ಮಾಡಲಿ?’ ಇದು ಸಣ್ಣ ಸ್ಯಾಂಪಲ್. ಇದು ಸುಗತರಿಗೆ ಗೊತ್ತಿಲ್ಲದ್ದೇನಲ್ಲ. ಈ ಎಲ್ಲಾ ಜಂಜಡಗಳು ಎದುರಾಗುತ್ತವೆ ಎನ್ನುವುದು ಗೊತ್ತಿದ್ದೇ ಅವರು ಈ ಜವಾಬ್ದಾರಿ ಒಪ್ಪಿಕೊಂಡಿರುತ್ತಾರೆ.

ಕನ್ನಡದಲ್ಲಿ ‘ಪೇಯ್ಡ್ ನ್ಯೂಸ್’ ನ್ನು ಢಾಳಾಗಿ ತಂದ ಖ್ಯಾತಿ ಟೈಮ್ಸ್ ಗ್ರೂಪ್ ಗಿದೆ. ಸುಗತ ಪೇಯ್ಡ್ ನ್ಯೂಸ್ ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವ ಕುತೂಹಲ ಇದೆ. ಜೊತೆಗೆ ಅವರು ಕನ್ನಡದ ಸಾಹಿತ್ಯಕ, ಸಾಂಸ್ಕೃತಿಕ ಲೋಕಕ್ಕೆ ಚೆನ್ನಾಗಿ ಪರಿಚಿತ. ಹಾಗಾಗಿ ಅವರ ಬಗ್ಗೆ ನಿರೀಕ್ಷೆಗಳು ಸಹಜವಾಗಿಯೇ ದೊಡ್ಡ ಸಂಖ್ಯೆಯಲ್ಲಿರುತ್ತವೆ. ಸುಗತ ನಿಮಗೆ ವಿಜಯ ಕರ್ನಾಟಕ ಓದುಗರ ಪರವಾಗಿ ಸ್ವಾಗತ. ನಿಮಗೆ ಶುಭವಾಗಲಿ.

One thought on “ಸುಗತ, ನಿಮಗೆ ಸ್ವಾಗತ

  1. Mahesha

    ಮೊದಲಿಗೆ ಸುಗತ ಶ್ರೀನಿವಾಸರಾಜು ಅವರಿಗೆ ಅಭಿನಂದನೆಗಳು,ಹಳೆಯ ಸವಕಲು ಪದಗಳನ್ನೇ ಬಳಸಿ ಜಡ್ಡು ಗಟ್ಟಿರುವ ಕನ್ನಡ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸುಗತ ರಂತಹ ಪ್ರತಿಭಾವಂತ ಪತ್ರಕರ್ತರ ಅವಶ್ಯಕತೆ ನಮಗೆ ಬೇಕಿದೆ.ಯಾವುದೇ ಒಂದು ಪತ್ರಿಕೆ ಜನ ಸಾಮಾನ್ಯರ ಬದುಕಿಗೆ ಪುಟ ತೆರೆದುಕೊಳ್ಳದಿದ್ದರೆ ಅದು ಅಲಂಕಾರ ಮಾಡಿದ ಶವದಂತಾಗುತ್ತದೆ.ಸುಗತರವರಿಗೆ ಇರುವ ಆಳವಾದ ಜ್ಙಾನ,ಪತ್ರಿಕೋದ್ಯಮದ ಅನುಭವ ಪತ್ರಿಕೆಯ ಓದುಗರಿಗೆ ಆಮ್ಲಜನಕದಂತೆ ಸಿಗುವಂತಾಗಲಿ..

    Reply

Leave a Reply

Your email address will not be published. Required fields are marked *