Daily Archives: May 17, 2012

ಗಂಡ-ಹೆಂಡಿರ ಜಗಳ ಉಂಡು ಮಲಗಿದ ಮೇಲೂ


-ಡಾ.ಎಸ್.ಬಿ. ಜೋಗುರ


 

ಸದ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಸಾಮಾಜೀಕರಣದ ಅತಿ ಮುಖ್ಯವಾದ ನಿಯೋಗಿಯಾಗಿ ಕೆಲಸ ಮಾಡಬೇಕಾದ ಕುಟುಂಬದ ಮನ:ಸ್ಥಿತಿಯೇ ರೋಗಗ್ರಸ್ಥವಾಗುತ್ತಿದೆ. ಮೌಲ್ಯಗಳ ಸಂಪೋಷಣಾ ಕೇಂದ್ರವೆಂದು ಕರೆಯಿಸಿಕೊಂಡಿದ್ದ ಸಮಾಜದ ಮೂಲಭೂತ ಘಟಕ ಈಗೀಗ ಆಯತಪ್ಪಿದ ರಾಚನಿಕ ಚೌಕಟ್ಟಿನೊಳಗೆ ಬದುಕಿ ಉಳಿಯುವಲ್ಲಿ ಹರಸಾಹಸ ಪಡಬೇಕಾದ ದಿನಗಳು ಬಂದಿವೆ. ಮೊದಲ ಪಾಠಶಾಲೆಯಾಗಬೇಕಾದ ಮನೆ ಇಂದು ಮಕ್ಕಳಲ್ಲಿ ಪಾಲಕರ ಬಗೆಗೆ ಇರುಸು ಮುರುಸು ಬೆಳೆಸುವಲ್ಲಿ ಕಾರಣವಾಗುತ್ತಿವೆ.

ಗಂಡ-ಹೆಂಡತಿಯ ಜಗಳ ಗಂಧ ತೀಡಿದಂಗೆ ಎನ್ನುವ ಮಾತು ಪೂರ್ಣವಾಗಿ ಅರ್ಥ ಕಳೆದುಕೊಂಡು ಪರಸ್ಪರ ಮೂದಲಿಕೆ ಮತ್ತು ಕೆಸರೆರಚುವಲ್ಲಿಯೇ ಸುಖ ಸುರಿಯುವ ವಿರಸಪೂರ್ಣ ಸಂಸಾರಗಳು ಹೆಚ್ಚಾಗುತ್ತಿವೆ. ಭೂಮಿಯ ಮೇಲೆ ತನ್ನ ಅಜನ್ಮ ವೈರಿ ಯಾರಾದರೂ ಇದ್ದರೆ ಅದು ತನ್ನ ಗಂಡ ಇಲ್ಲವೇ ಹೆಂಡತಿ ಎಂಬಂತೆ ಬದುಕುವ ಎಳಕು ದಂಪತಿಗಳ ಸಂಖ್ಯೆ ಮತ್ತು ಇಂಥವರನ್ನು ಪುಸಲಾಯಿಸುವ ಹೆತ್ತವರು ಹಾಗೂ ಸಂಬಂಧಿಗಳು ಅವರ ಕೌಟುಂಬಿಕ ಕಲಹಗಳು ಉಂಡು ಮಲಗುವವರೆಗೆ ಸೀಮಿತವಾಗಿ ಉಳಿಯಲಿಕ್ಕೆ ಬಿಡುತ್ತಿಲ್ಲ. ಬದಲಾಗಿ ಎರಡೂ ಕಡೆಯವರು ಅವರನ್ನು ಬೇರ್ಪಡಿಸುವ, ಮನೆಹಾಳುತನದ ಚಿಲ್ಲರೆ ಐಡಿಯಾಗಳನ್ನು ಕೊಡುವ ಮೂಲಕ ಕುಟುಂಬ ಭಂಜಕರಾಗುತ್ತಿದ್ದಾರೆ.

ಒಂದು ಕಾಲದಲ್ಲಿ ಕುಟುಂಬದ ವ್ಯಾಜ್ಯಗಳು ಗಂಡ-ಹೆಂಡತಿ ಉಂಡು ಮಲಗುವ ವೇಳೆಗಾಗಲೇ ತಿಳಿಗೊಳ್ಳುತ್ತಿದ್ದವು. ದೀರ್ಘಕಾಲದ ದಾಂಪತ್ಯದ ಗುಟ್ಟೇ ಅದಾಗಿತ್ತು. ಈಗ ಹಾಗಲ್ಲ. ತನಗೂ ಸ್ವಾತಂತ್ರ್ಯ ಬೇಕು ಎಂದು ರಚ್ಚೆ ಹಿಡಿದಂತೆ ’ಇಸಂ’ ಗಳ ಮೂಲಕ ಪಡೆದುಕೊಂಡು ಗಂಡನ ಮೇಲೆ ಸೇಡು ತೀರಿಸಿಕೊಳ್ಳಲಿಕ್ಕಾಗಿಯೇ ತನಗಿರುವ ಸ್ವಾಯತ್ತತೆ ಬಳಕೆಯಾಗಬೇಕು ಎನ್ನುವಂತೆ ಇಡೀ ಕುಟುಂಬದ ಮಾನಸಿಕ ನೆಮ್ಮದಿಯನ್ನು ಕಸಿಯುವ ಕ್ರಮ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಮಾತೆತ್ತಿದರೆ ತಾನು ಬಿಟ್ಟು ತೆರಳುತ್ತೇನೆ ಎನ್ನುವ ಬಾಲಿಶ ಬೆದರಿಕೆಗಳನ್ನು ಗಂಡ ಹೆಂಡತಿಗೆ, ಇಲ್ಲವೇ ಹೆಂಡತಿ ಗಂಡನಿಗೆ ಒಡ್ಡುವ ಮೂಲಕ ಸಂಸಾರವನ್ನು ನಿರ್ವಹಿಸಲಿಕ್ಕಾಗುವುದಿಲ್ಲ.

ಇನ್ನು ಇಂಥಾ ಎಳಕು ಮನಸಿನವರಿಗೆ ಇವರಿಗಿಂಥಾ ಎಳಕು ಬುದ್ಧಿಯ ಪಾಲಕರು ಇದ್ದರಂತೂ ಮುಗಿದೇ ಹೋಯಿತು. ಹಿಂದೆ ’ಗಂಜಿಯ ಕುಡಿದರೂ ಗಂಡನ ಮನೆ ಲೇಸು’ ಎಂದು ಕಲಹವಾಡಿ ಬಂದ ಮಗಳಿಗೆ ಬುದ್ಧಿವಾದ ಹೇಳಿ ಕಳುಹಿಸುವ ತಾಯಂದಿರಿದ್ದರು. ಈಗ ಆ ತಾಯಂದಿರು ಮಹಿಳಾವಾದದ ಕಡಾಯಿಯಲ್ಲಿ ಕೊತಕೊತನೇ ಕುದ್ದವರು. ಮಾತೆತ್ತಿದರೆ ಇದು ಹೆಣ್ಣಿನ ಶೋಷಣೆ ಎನ್ನುತ್ತ ಕೌಟುಂಬಿಕ ಭದ್ರತೆಯ ಬುಡವನ್ನು ಅಲ್ಲಾಡಿಸುವತ್ತ ತಮ್ಮ ಕೊಡುಗೆಯನ್ನು ಪರೋಕ್ಷವಾಗಿ ನೀಡತೊಡಗಿದರು. ನನ್ನ ತಂದೆ ತಾಯಿ ಇಬ್ಬರೂ ಓದು ಬರಹ ಅರಿಯದವರು. ನಮ್ಮ ಸಹೋದರಿಯರು ಯಾವಾಗಲಾದರೂ ತಮ್ಮ ಗಂಡಂದಿರೊಂದಿಗೆ ಕಲಹವಾಡಿ ಒಂದೊಮ್ಮೆ ತವರಿಗೆ ಬಂದರೆ ನಮ್ಮ ಅಪ್ಪ-ಅವ್ವ ಇಬ್ಬರೂ ’ಜಗಳಾಡಿ ಬರಲೇಬ್ಯಾಡ್ರಿ ನೀವು ಮಾಡಿದ್ದು ತಪ್ಪು’ ಎಂದು ಬುದ್ಧಿವಾದ ಹೇಳುತ್ತಿದ್ದರು. ಅಲ್ಲಿ ತಪ್ಪು ಯಾರದು ಎನ್ನುವ ಚೌಕಾಶಿ ಇರುತ್ತಿರಲಿಲ್ಲ. ಬದಲಾಗಿ ಹೀಗೆ ಕುಟುಂಬದಲ್ಲಿ ಕಲಹವಾಡಿ ಮತ್ತೆ ಮತ್ತೆ ತವರಿಗೆ ಬರಬಾರದು ಎನ್ನುವ ಸಂದೇಶವಿರುತ್ತಿತ್ತು.

ಈಗ ಗಂಡ-ಹೆಂಡತಿ ಇಬ್ಬರೂ ತೀರಾ ಸಣ್ಣ ಸಣ್ಣ ಕಾರಣಗಳಿಗಾಗಿ ಒಬ್ಬರನ್ನೊಬ್ಬರು ಬಿಟ್ಟು ಹೋಗುವ ತಂತ್ರವನ್ನೇ ಪರಿಣಾಮಕಾರಿ ಎಂದು ಪರಿಭಾವಿಸಿರುವ ಹಿನ್ನೆಲೆಯಲ್ಲಿ ಕೌಟುಂಬಿಕ ವಿಘಟನೆಗಳ ಪ್ರಮಾಣ ನಮ್ಮಲ್ಲಿ ಹೆಚ್ಚಾಗುತ್ತಿದೆ. ಯಾವುದೇ ಕುಟುಂಬವಿರಲಿ ಅಲ್ಲಿ ಉದ್ಭವವಾಗುವ ಕಲಹಕ್ಕೆ ಅತಿ ಮುಖ್ಯ ಕಾರಣ ಪರಸ್ಪರ ತಿಳುವಳಿಕೆಯ ಕೊರತೆ. ಗಂಡ-ಹೆಂಡತಿ ಪರಸ್ಪರರ ಬೇಕು ಬೇಡಗಳನ್ನು ತಿಳಿದುಕೊಂಡರೆ ಮುಗಿಯಿತು. ಕಲಹದ ಪ್ರಶ್ನೆಯೇ ಬರುವುದಿಲ್ಲ. ಪರಸ್ಪರರು ಭಾವಪರವಶರಾಗಬೇಕು. ಗಂಡನ ನಿರೀಕ್ಷೆ ಹೆಂಡತಿಯದಾಗಬೇಕು, ಹೆಂಡತಿಯ ನಿರೀಕ್ಷೆ ಗಂಡನದಾಗಬೇಕು. ಅಲ್ಲಿಗೆ ಎಲ್ಲ ವೈಮನಸುಗಳು ತಾನಾಗಿಯೇ ಮಗ್ಗಲು ಹೊರಳಿಸಿ ಮಕಾಡೇ ಮಲಗುತ್ತವೆ.

ಕೌಟುಂಬಿಕ ವಲಯದಲ್ಲಿ ತನಗೂ ಪುರುಷನ ಸಮ ಸಮ ಸ್ವಾತಂತ್ರ್ಯ ಬೇಕು ಎನ್ನುವ ಕೂಗಿಗೆ ಪ್ರೇರಣೆಯಾದದ್ದು ಖಂಡಿತಾ ಸ್ತ್ರೀವಾದದ ವಿಚಾರಗಳಂತೂ ಅಲ್ಲ. [ಯಾಕೆಂದರೆ ಸ್ತ್ರೀವಾದ ಇನ್ನೂ ಸಾಮಾನ್ಯ ಮಹಿಳೆಯರನ್ನು ಮುಟ್ಟಲಿಲ್ಲ] ಬದಲಾಗಿ ಧಾರವಾಹಿಗಳಲ್ಲಿ ಬರುವ ಸ್ತ್ರೀ ಪಾತ್ರಗಳು. ಕೆಲವು ಧಾರವಾಹಿಗಳಂತೂ ಸಾಮಾಜಿಕ ಸಂಬಂಧಗಳನ್ನು ಬಿಂಬಿಸುವ ರೀತಿಯನ್ನು ನೋಡಿದರೆ ಇನ್ನೊಂದೆರಡು ದಶಕಗಳಲ್ಲಿ ಇಡೀ ಕೌಟುಂಬಿಕ ವ್ಯವಸ್ಥೆಯ ಬೇರುಗಳನ್ನೇ ಸಡಿಲುಗೊಳಿಸುವ ಗುತ್ತಿಗೆ ಹಿಡಿದಂತೆ ಪಾತ್ರ ಪೋಷಣೆಗಳು ಅಲ್ಲಿ ತಳ ಊರುವುದನ್ನು ನೋಡಿದರೆ ತುಂಬಾ ವಿಷಾದವೆನಿಸುತ್ತದೆ. ಹುಷಾರು..! ಗೋಡೆಗೂ ಕಿವಿಗಳಿವೆ ಎನ್ನುವ ಕುಟುಂಬದಲ್ಲಿಯ ನಾಜೂಕಾದ ಎಚ್ಚರಿಕೆಯನ್ನು ಮೀರಿಯೂ ಇಂದು ಕೆಲ ಧಾರವಾಹಿಗಳು ಸಂಬಂಧಗಳಲ್ಲಿಯ ಬಿರುಕುಗಳನ್ನು, ವಿಚ್ಚೇದನಗಳನ್ನು, ವಿವಾಹಬಾಹಿರ ಸಂಬಂಧಗಳನ್ನು ಯತ್ಥೇಚ್ಚವಾಗಿ ತೋರಿಸುವುದರಿಂದ ಅಲ್ಲಿಯ ಸಂಭಾಷಣೆಗಳು, ವಾದಪ್ರತಿವಾದಗಳು ನಮ್ಮ ಸಾಂಪ್ರದಾಯಿಕ ಕೌಟುಂಬಿಕ ಬದುಕಿನಲ್ಲಿ ಅಂತರ್ಗತವಾಗುತ್ತಿರುವ ಪರಿಣಾಮವೂ ಗಂಡ-ಹೆಂಡತಿಯ ಸಂಬಂಧಗಳ ಸೊಗಸಿನಲ್ಲಿ ಬಿರುಕು ಮೂಡುವಂತಾಗಿದೆ.

ಸ್ವಾತಂತ್ರ್ಯ ಮತ್ತು ಸಮಾನತೆಗಳು ಭೌತಿಕವಾಗಿ ಅನ್ವಯವಾದರೆ ಸಾಲದು. ಗಂಡ ಎರಡು ಸಾವಿರ ರೂಪಾಯಿಯ ಶರ್ಟ್ ಒಂದನ್ನು ಖರೀದಿಸಿದರೆ ಹೆಂಡತಿಯೂ ಎರಡು ಸಾವಿರ ರೂಪಾಯಿಯ ಸೀರೆ ಬಯಸುವುದು, ಈಕೆ ಸ್ಟೋವ್ ಹಚ್ಚಿದರೆ ಆತ ಪಾತ್ರೆ ಇಡುವುದು, ಇವಳು ಹಾಲು ಸುರಿದರೆ ಆತ ಸಕ್ಕರೆ ಹಾಗೂ ಚಹಾ ಪುಡಿಯನ್ನು ಸುರಿಯುವ ಮೂಲಕ ನಾವಿಬ್ಬರೂ ತುಂಬಾ ಸ್ವಾತಂತ್ರ್ಯವನ್ನು ಅನುಭವಿಸುತ್ತೇವೆ ಎನ್ನುವುದು ಮುಠ್ಠಾಳತನವಾದೀತು. ಈ ಬಗೆಯ ಮೇಲ್‌ಮೇಲಿನ ಸ್ವಾತಂತ್ರ್ಯದ ಪರಿಕಲ್ಪನೆಯೇ ಇಂದಿನ ಕುಟುಂಬಗಳಿಗೆ ಬಹು ದೊಡ್ಡ ತೊಡಕಾಗಿದೆ. ಉದ್ಯೋಗ ಮಾಡುವ ಪುರುಷ ಮತ್ತು ಮಹಿಳೆ ಇಬ್ಬರಿಗೂ ಔದ್ಯೋಗಿಕ ವಲಯದ ಒತ್ತಡಗಳ ಬಗ್ಗೆ ತಿಳಿದಿದೆ. ಇಲ್ಲಿ ಪುರುಷರು ಅನುಭವಿಸುವ ಕಿರಿಕುಳ ಕಡಿಮೆ ಎನ್ನುವುದಾಗಲೀ ಮಹಿಳೆ ಅನುಭವಿಸುವದು ಹೆಚ್ಚು ಎನ್ನುವಂತೆ ಯಾವುದೋ ಒಂದು ಸ್ಕೇಲ್‌ನಲ್ಲಿ ಅಳೆದು ತೋರಿಸಲಾಗದು.

ಒಬ್ಬರಿಗೊಬ್ಬರು ಎನ್ನುವಂತೆ ಬದುಕಿದಾಗಲೇ ಅದು ಸಂಸಾರ ಹಾಗೂ ಸಸಾರ. ಸಣ್ಣ ಸಣ್ಣ ಕಾರಣಕ್ಕೂ ಕಲಹ, ವೈಮನಸ್ಸು ಇಡೀ ಕುಟುಂಬದ ನೆಮ್ಮದಿಯ ಹರಣದ ಜೊತೆಗೆ ಮಕ್ಕಳ ಮನಸಿನ ಮೇಲೆಯೂ ಕೆಟ್ಟ ಪರಿಣಾಮ ಬೀರುವ ಮೂಲಕ ಅನೂಹ್ಯವಾದ ಸಂಬಂಧವೊಂದನ್ನು ಅಸಹ್ಯವಾಗಿ ಮಾರ್ಪಡಿಸುವ ಮಳ್ಳತನದ ನಡುವಳಿಕೆಯಾಗುತ್ತದೆ. ಇತ್ತೀಚೆಗೆ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯಕ್ಕೆ ಬರೀ ವಿಚ್ಚೇದನಕ್ಕೆ ಅವಕಾಶ ಕೊಡದೇ ಅವರನ್ನು ಒಂದುಗೂಡಿಸುವತ್ತ ಪ್ರಯತ್ನಿಸಿ ಎಂದಿರುವ ಮಾತಿನ ಹಿಂದೆ ’ಕೂಡಿ ಬಾಳಿದರೆ ಸ್ವರ್ಗ ಸುಖ’ ಎನ್ನುವ ಮಾತಿನ ತಾತ್ಪರ್ಯ ಹಾಗೂ ಆಶಯ ಅಡಕವಾಗಿದೆ. ಇಡೀ ವಿಶ್ವದಲ್ಲಿ ನಮ್ಮ ಕೌಟುಂಬಿಕ ವ್ಯವಸ್ಥೆ ಒಂದು ಮಾದರಿ. ಆ ನಮ್ಮ ತನವನ್ನು ಕುಟುಂಬದ ಮೂಲಕ ಉಳಿಸಿಕೊಳ್ಳುವಲ್ಲಿ ಒಂದು ಅರ್ಥವಿದೆ.

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-7)


– ಡಾ.ಎನ್.ಜಗದೀಶ್ ಕೊಪ್ಪ


 

Dignitaries fell Wrapped in their togas of worm-eaten mud, nameless people shouldered spears, tumbled the walls, nailed the tyrant to his golden door.  – Pablo Neruda

“ಶ್ರೀಕಾಕುಳಂ” ಆಂಧ್ರ ಪ್ರದೇಶದ ಉತ್ತರ ಭಾಗದಲ್ಲಿ ಸಮೃದ್ಧ ಹಸಿರು, ಅರಣ್ಯ, ಮತ್ತು ಗುಡ್ಡಗಾಡುಗಳಿಂದ ಆವೃತ್ತವಾಗಿರುವ, ಪೂರ್ವ ಕರಾವಳಿಯ ಒಂದು ಜಿಲ್ಲೆ. ಶೇ. 60ಕ್ಕೂ ಹೆಚ್ಚು ಮಂದಿ ಅರಣ್ಯವಾಸಿಗಳಾದ (ಜಟಪು ಜನಾಂಗ) ಗಿರಿಜನರಿಂದ ಕೂಡಿರುವ ಈ ನೆಲ ಸ್ವಾತಂತ್ರ್ಯ ಪೂರ್ವದಿಂದಲೂ ಎಲ್ಲಾ ವಿಧವಾದ ಅಭಿವೃದ್ಧಿ ಮತ್ತು ಸವಲತ್ತುಗಳಿಂದ ವಂಚಿತವಾಗಿರುವ ನತದೃಷ್ಟರನಾಡು. ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದಿನಿಂದ 650 ಕಿಲೋಮೀಟರ್ ದೂರದಲ್ಲಿರುವ ಈ ಜಿಲ್ಲೆ, ತನ್ನ ಉತ್ತರಭಾಗದ ಈಶಾನ್ಯಕ್ಕೆ ಒರಿಸ್ಸಾ, ವಾಯುವ್ಯ ಭಾಗಕ್ಕೆ ಮಧ್ಯಪ್ರದೇಶ ಮತ್ತು ಛತ್ತೀಸ್‌ಘಡ, ಪಶ್ಚಿಮಕ್ಕೆ ಮಹರಾಷ್ಟ್ರ, ಪೂರ್ವಕ್ಕೆ ಕರಾವಳಿ ಪ್ರದೇಶವನ್ನು ಹೊಂದಿದ್ದು, ತನ್ನ ಒಡಲೊಳಗೆ ಸಮೃದ್ಧವಾದ ಖನಿಜ ಸಂಪತ್ತು, ಅರಣ್ಯ ಸಂಪತ್ತು, ಹೊಂದಿರುವಂತೆ, ತನ್ನ ಚರಿತ್ರೆಯ ಪುಟಗಳಲ್ಲಿ ರಕ್ತಸಿಕ್ತ ಅಧ್ಯಾಯಗಳನ್ನು ಸಹ ಹೊಂದಿದೆ.

“ಶ್ರೀಕಾಕುಳಂ” ಎಂದರೆ, ಚರಿತ್ರೆಯಲ್ಲಿ ಒಂದು ಅಳಿಸಲಾರದ ಹೆಸರು, ಭಾರತದ ಭವಿಷ್ಯದ ಚರಿತ್ರೆಯ ಸಂಪುಟ, ಕ್ರಾಂತಿಕಾರಿಗಳ ಉಕ್ಕಿನ ಕೋಟೆ ಎಂದೆಲ್ಲಾ ನಕ್ಸಲ್ ಚಳವಳಿಯ ಸಂಸ್ಥಾಪಕ ಚಾರು ಮುಜಂದಾರ್‌ನಿಂದ ಹೊಗಳಿಸಿಕೊಂಡ ಈ ಜಿಲ್ಲೆಯ ನೆಲದ ಇತಿಹಾಸ ತಿಳಿಯದೇ ಹೋದರೆ, ಅಲ್ಲಿನ ಹಿಂಸೆ ಮತ್ತು ಹೋರಾಟದ  ಐತಿಹಾಸಿಕ ಕಥನ ಅರ್ಥವಾಗುವುದು ಕಷ್ಟ. ವಿಶಾಖಪಟ್ಟಣದದಿಂದ 50 ಕಿ.ಮಿ. ದೂರದಲ್ಲಿರುವ ವಿಜಯನಗರಂ ಎಂಬ ರೈಲು ನಿಲ್ದಾಣದಿಂದ ಬೆಳಗಿನ ಜಾವ ರಾಜಮಂಡ್ರಿ ಗೆಳೆಯರಿಗೆ ವಿದಾಯ ಹೇಳಿ, ಶ್ರೀಕಾಕುಳಂ ಜಿಲ್ಲೆಯತ್ತ ನಾನು ಪ್ರಯಾಣ ಹೊರಟಾಗ ನನ್ನ ತಲೆಯಲ್ಲಿ ಕಲ್ಪನೆ ಇದ್ದದ್ದು, ಅದೊಂದು ನಮ್ಮ ರಾಜ್ಯದಲ್ಲಿ ವಂಚಿತವಾಗಿರುವ ಉತ್ತರ ಕರ್ನಾಟಕದ ಕಪ್ಪುಭೂಮಿ ಹಾಗೂ ಜಾಲಿ ಮರಗಳ ಒಣ ಪ್ರದೇಶದ ನೀರಿನಿಂದ ವಂಚಿತವಾಗಿರುವ ಜಿಲ್ಲೆಯಂತೆ ಇರಬಹುದಾದ ಜಿಲ್ಲೆ ಎಂದು ಅಲ್ಲಿಗೆ ಕಾಲಿಟ್ಟ ಕ್ಷಣ ನನಗೆ ಆಶ್ಚರ್ಯವಾಯಿತು. ನನ್ನ ನೆಲವಾದ ಅಲ್ಲಿಂದ ಒಂದೂವರೆ ಸಾವಿರ ಕಿ.ಮಿ. ದೂರದ ಮಂಡ್ಯದ ನೆಲದಲ್ಲೇ ನಾನು ಇದ್ದೀನಿ ಎಂಬ ಭಾವನೆ ಮೂಡತೊಡಗಿತು.

ಎಲ್ಲೆಲ್ಲೂ ಭತ್ತದ ಗದ್ದೆಗಳು, ತುಂಬಿ ಹರಿಯುವ ಕಾಲುವೆಗಳು, ಆಲೆಮನೆ ಮತ್ತು ಸಕ್ಕರೆ ಕಾರ್ಖಾನೆ ಸಾಗುತ್ತಿದ್ದ ಕಬ್ಬು ತುಂಬಿದ ಜೊಡೆತ್ತಿನ ಗಾಡಿಗಳು, ಬತ್ತದ ಗದ್ದೆಯಲ್ಲಿ ನಡುಬಗ್ಗಿಸಿ ಕಳೆ ಕೀಳುತ್ತಿದ್ದ, ನನ್ನಕ್ಕ ತಂಗಿಯರಂತಹ ಬಡ ಹೆಣ್ಣು ಮಕ್ಕಳು, ಅಲ್ಲಲ್ಲಿ ಹಸಿರು ಗುಡ್ಡ, ಚಿಕ್ಕದಾದರೂ, ಚೊಕ್ಕವಾದ ಬಾಳೆ ಮತ್ತು ತೆಂಗಿನ ಗಿಡಗಳಿಂದ ಕೂಡಿದ ತೋಟಗಳು ಇವೆಲ್ಲವೂ ನಾನು ಈ ನೆಲಕ್ಕೆ ಪರಕೀಯ ಎಂಬ ಭಾವನೆಯನ್ನು ಅಳಿಸಿ ಹಾಕಿದವು. ಆದರೆ, ಹಳ್ಳಗಳಿಗೆ ಕಾಲಿಟ್ಟ ತಕ್ಷಣ ಆಂಧ್ರ ಸಂಸ್ಕೃತಿ ಮತ್ತು ಅಲ್ಲಿನ ಗುಡ್ಡಗಾಡು ಜನರ ಜನರ ಸಂಸ್ಕೃತಿ ಎದ್ದು ಕಾಣುತ್ತದೆ. ಪ್ರತಿ ಊರಿನಲ್ಲೂ ನೆಲಬಾವಿಗಳು, ಅವುಗಳ ಸುತ್ತಾ ಕೆತ್ತಿದ ಕಲ್ಲಿನಲ್ಲಿ ಕಟ್ಟಿರುವ ಸುಂದರ ತಡೆಗೋಡೆಗಳು, ಜೊತೆಗೆ ನೆಲಕ್ಕೆ ಹಾಸಿರುವ ಕಲ್ಲು ಚಪ್ಪಡಿಯ ಹಾಸುಗೆಗಳು, ಅಲ್ಲಿಯೇ ಕುಳಿತು. ಬಾವಿಯಲ್ಲಿ ನೀರು ಸೇದಿಕೊಂಡು ಯಾವ ಸಂಕೋಚವಿಲ್ಲದೆ, ಸ್ನಾನ ಮಾಡುವ ಹೆಂಗಸರು, ಪ್ರತಿ ಊರಿನಲ್ಲಿ ಎದುರಾಗುವ ಆಂಜನೇಯನ ಗುಡಿಗಳು, ಅವುಗಳ ಮೇಲೆ ಆಳೆತ್ತರಕ್ಕೆ ಎದೆ ಸೀಳುತ್ತಾ ನಿಂತಿರುವ, ಸೀಮೆಂಟ್‌ನಿಂದ ತಯಾರಾದ ಆಂಜನೇಯನ ಮೂರ್ತಿಗಳು, ಅವುಗಳಿಗೆ ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಬಳಿದಿರುವ ಕಡುಬಣ್ಣ ಇವುಗಳು ಮಾತ್ರ ಪಕ್ಕಾ ಆಂಧ್ರ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡುವ ಅಂಶಗಳು.

ಭಾರತದ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಆಂಧ್ರಪ್ರದೇಶವನ್ನು ಅಲ್ಲಿನ  ಜನ ಹೆಮ್ಮೆಯಿಂದ ವಿಶಾಲಾಂಧ್ರವೆಂದು ಕರೆಯುತ್ತಾರೆ. ಆದರೆ, ವಾಸ್ತವವಾಗಿ ಅಲ್ಲಿ ಅಸ್ತಿತ್ವದಲ್ಲಿರುವುದು ಮೂರು ಆಂಧ್ರಗಳು. ಒಂದು, ಕಡಪ, ಅನಂತಪುರ, ನೆಲ್ಲೂರು, ಚಿತ್ತೂರು ಜಿಲ್ಲೆಗಳನ್ನು ಒಳಗೊಂಡ ರಾಯಲಸೀಮೆ, ಇದು ರೆಡ್ಡಿ ಜನಾಂಗದ ಪ್ರದೇಶ. ಎರಡನೇಯದು ತೆಲಂಗಾಣವೆಂದು ಕರೆಸಿಕೊಳ್ಳುವ ಮಧ್ಯಭಾಗದ ಆಂಧ್ರಪ್ರದೇಶವಾದ ಕಮ್ಮ ಜನಾಂಗ ಪ್ರಭಾವವಿರುವ, ಮೇಡಕ್, ಸಂಗರೆಡ್ಡಿ, ಕಮ್ಮಮಂ, ಕರೀಂನಗರ, ವಾರಂಗಲ್, ನಲ್ಗೊಂಡ, ಮುಂತಾದ ಜಿಲ್ಲೆಗಳು ಈ ಪ್ರಾಂತ್ಯಕ್ಕೆ ಸೇರುತ್ತವೆ. ಕೃಷ್ಣಾ ನದಿ ಮತ್ತು ಗೋದಾವರಿ ನದಿ ತೀರದ ಜಿಲ್ಲೆಗಳಾದ ವಿಜಯವಾಡ, ರಾಜಮಂಡ್ರಿ, ಅದಿಲಾಬಾದ್, ಇವುಗಳು ಕೂಡ ತೆಲಂಗಾಣ ಪ್ರಾಂತ್ಯಕ್ಕೆ ಸೇರುತ್ತವೆ. ಸಾಂಸ್ಕೃತಿಕವಾಗಿ ಮತ್ತು ರಾಜಕೀಯ ಹಾಗೂ ಸಾಮಾಜಿಕವಾಗಿ ಭಿನ್ನತೆ ಇರುವುದು, ಗೋದಾವರಿ ನದಿಯಾಚೆಗಿನ ಜಿಲ್ಲೆಗಳಲ್ಲಿ. ಅಂದರೆ, ವಿಶಾಖಪಟ್ಟಣ, ಪೂರ್ವಗೋದಾವರಿ ಜಿಲ್ಲೆ, ಶ್ರೀಕಾಕುಳಂ ಜಿಲ್ಲೆಗಳಲ್ಲಿ.

ಈ ಪ್ರದೇಶಗಳ ಗುಡ್ಡಗಾಡುಗಳಲ್ಲಿ ಅತ್ಯಧಿಕ ಮಂದಿ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗ ವಾಸಿಸುತ್ತಿದ್ದು, ಈ ನೆಲದ ಸಂಸ್ಕೃತಿಯನ್ನು ಇವತ್ತಿಗೂ ಜೀವಂತವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಇವರಲ್ಲಿ ಪ್ರಮುಖ ಜನಾಂಗಗಳೆಂದರೆ, ಗೊಂಡ, ಕೊಂಡರೆಡ್ಡಿ, ಚೆಂಚು, ಮರಿಯ, ಜಟಪು, ಸವರ, ತೋಲಂ, ಕೋಯ ಮುಖ್ಯವಾದವುಗಳು. ಇವರನ್ನು ಗುರುತಿಸಿ ಹೊರಜಗತ್ತಿಗೆ ಪರಿಚಯಿಸಿದ  ಕೀರ್ತಿ ಪ್ರಖ್ಯಾತ ಸಮಾಜಶಾಸ್ತ್ರಜ್ಙ ವೇರಿಯನ್‌ ಎಲ್ವಿನ್‌ಗೆ ಸಲ್ಲಬೇಕು. ಒಂದು ಕಾಲದಲ್ಲಿ ಮಳೆಯನ್ನು ಆಶ್ರಯಿಸಿಕೊಂಡು, ಒಣ ಭೂಮಿಯಾಗಿದ್ದ ಈ ನೆಲಕ್ಕೆ ನೀರುಣಿಸಿ, ಇಲ್ಲಿನ ಭೂಮಿಯನ್ನು ಹಸನುಗೊಳಿಸಿದವನು, ಬ್ರಿಟಿಷ್ ಸರ್ಕಾರದಲ್ಲಿ ಮುಖ್ಯಇಂಜೀಯರ್ ಆಗಿ ಮದ್ರಾಸ್ ಪ್ರಾಂತ್ಯಕ್ಕೆ ನೆರೆಯ ಬರ್ಮಾದಿಂದ 1821 ರಲ್ಲಿ ಬಂದ ಸರ್ ಅರ್ಥರ್‌ ಕಾಟನ್. ಅನಾವಶ್ಯಕವಾಗಿ ಕೃಷ್ಣ ಮತ್ತು ಗೋದಾವರಿ ನದಿಯ ನೀರು ಸಮುದ್ರ ಸೇರುತ್ತಿರುವುದನ್ನು ಗಮನಿಸಿ, ಈ ಎರಡು ನದಿಗಳಿಗೆ ಅಣೆಕಟ್ಟು ನಿರ್ಮಿಸಿದ ಮಹಾನುಭಾವ ಈತ. 1851 ರಿಂದ 1855 ರ ನಡುವೆ ಸ್ವತಃ ಹಲವಾರು ಬಾರಿ ಇಂಗ್ಲೆಂಡ್‌ಗೆ ತೆರಳಿ ಅಲ್ಲಿನ ರಾಣಿ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಮನವೊಲಿಸಿ, 12 ಸಾವಿರ ಪೌಂಡ್ ಹಣವನ್ನು ತಂದು, ನೀರಾವರಿ ಯೋಜನೆಗಳ ನೀಲನಕ್ಷೆ ತಯಾರಿಸಿ, ತಾನೇ ಸ್ವತಃ ನಿಂತು ಕೃಷ್ಣಾನದಿಗೆ ಮತ್ತು ಗೋದಾವರಿ ನದಿಗೆ ತಲಾ ಒಂದೊಂದು ಅಣೆಕಟ್ಟನ್ನು ನಿರ್ಮಿಸಿದ.

1860 ರಲ್ಲಿ ನಿವೃತ್ತಿಯ ನಂತರ ಕಾಟನ್ ಇಂಗ್ಲೆಂಡ್ ದೇಶಕ್ಕೆ ಹಿಂತಿರುಗಿ ಹೋದರೂ, ಇಲ್ಲಿ ಜನತೆ ಆತನನ್ನು ಮತ್ತು ಅವನ ಋಣವನ್ನು ಮರೆಯಲಿಲ್ಲ. 1900 ರಲ್ಲಿ ರಾಜಮಂಡ್ರಿ ಪಟ್ಟಣದ ಸಮೀಪ ಹರಿಯುವ ಗೋದಾವರಿ ನದಿಗೆ ನಿರ್ಮಿಸಲಾದ ಒಂದೂವರೆ ಕಿ.ಮಿ.ಉದ್ದದ ರೈಲ್ವೆ ಸೇತುವೆಗೆ ಅರ್ಥರ್‌ ಕಾಟನ್‌ನ ಹೆಸರನ್ನು ನಾಮಕರಣ ಮಾಡಿದರು. ಅದು ಶಿಥಿಲಗೊಂಡ ನಂತರ 1987 ರಲ್ಲಿ ಮತ್ತೊಂದು ಹೊಸ ಸೇತುವೆಯನ್ನು ಸಹ (ಕಮಾನು ಸೇತುವೆ) ನಿರ್ಮಿಸಲಾಗಿದೆ. ಇಲ್ಲಿನ ಜನತೆ ಅರ್ಥರ್‌ ಕಾಟನ್ ದೂರದೃಷ್ಟಿ ಯೋಜನೆಗಳಿಂದ ತಮ್ಮ ಭೂಮಿಗೆ ನೀರನ್ನು ಕಂಡರೂ ಸಹ ಹೈದರಾಬಾದ್‌ನ ನಿಜಾಮ ಮತ್ತು ಸ್ಥಳೀಯ ಪಾಳೇಗಾರರು, ಜಮೀನ್ದಾರರು ಇವರುಗಳ ಕಿರುಕುಳದ ಕಾರಣದಿಂದ ನೆಮ್ಮದಿಯ ಬದುಕನ್ನು ಕಟ್ಟಿಕೊಲ್ಲಲು ಸಾಧ್ಯವಾಗಲೇ ಇಲ್ಲ.

ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ  ಜಗತ್ತಿನ ಅತೀ ಶ್ರೀಮಂತರುಗಳ ಪೈಕಿ ಒಬ್ಬನಾಗಿದ್ದ ಹೈದರಾಬಾದಿನ ಏಳನೇ ನಿಜಾಮ ವಾರ್ಷಿಕವಾಗಿ 25 ಲಕ್ಷರೂಪಾಯಿಗಳನ್ನು ಪಾಳೇಗಾರರು ಮತ್ತು ಜಮೀನ್ದಾರರಿಂದ ಭೂಮಿಯ ಕಂದಾಯ ರೂಪದಲ್ಲಿ ಆದಾಯ ಪಡೆಯುತ್ತಿದ್ದ. ಬಿಟಿಷ್ ಸರ್ಕಾರ ವೇರಿಯರ್ ಎಲ್ವಿನ್ ನೀಡಿದ್ದ ವರದಿಗೆ ಸ್ಪಂದಿಸಿ, ಆದಿವಾಸಿಗಳಿಗೆ, ಅರಣ್ಯ ಭೂಮಿಯ ಹಕ್ಕನ್ನು ದಯಪಾಲಿಸಿತ್ತು. ಆದರೆ, ಅಕ್ಷರ ಲೋಕದಿಂದ ವಂಚಿತರಾಗಿದ್ದ ಬುಡಕಟ್ಟು ಜನಾಂಗಕ್ಕೆ ಭೂಮಿಯ ದಾಖಲೆ ಅಂದರೆ, ಏನು, ಹಕ್ಕು ಎಂದರೆ ಏನು ಎಂಬುದು ಅರ್ಥವಾಗುವುದರೊಳಗೆ  ಅವೆಲ್ಲವೂ ಪಟ್ಟಭದ್ರ ಹಿತಾಶಕ್ತಿಗಳ ಪಾಲಾಗಿದ್ದವು. ಅತ್ಯಂತ ಸ್ವಾರ್ಥ ಮತ್ತು ಕ್ರೂರಿಯಾಗಿದ್ದ ಈ ನಿಜಾಮ ಎಂದೂ ಸಹ ತನ್ನ ಅರಮನೆಗೆ ಯಾವುದೇ ಅತಿಥಿಗಳನ್ನು ಆಹ್ವಾನಿಸದ ವಿಚಿತ್ರ ವ್ಯಕ್ತಿತ್ವ ಹೊಂದಿದವನಾಗಿದ್ದ. ಅವನ ವೈಭೋಗದ ಬದುಕಿಗೆ ಈಗ ಹೈದರಾಬಾದ್ ನಗರದಲ್ಲಿರುವ ಸಾಲಾರ್ ಜಂಗ್ ಮ್ಯೂಸಿಯಂ ನೋಡಿದರೆ, ಸಾಕು. ಜಗತ್ತಿನ ಎಲ್ಲಾ ವಿಧವಾದ ಶ್ರೇಷ್ಠ ಕೃತಿಗಳು, ವಸ್ತುಗಳು ಅಲ್ಲಿ ಸಂಗ್ರಹವಾಗಿವೆ. ನಾಲ್ಕು ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಸಂಗ್ರಹವಾಗಿರುವ ಇವುಗಳನ್ನು ವೀಕ್ಷಿಸಲು ಕನಿಷ್ಟ ಒಂದು ದಿನವಾದರೂ ಬೇಕು.

ಇವತ್ತಿಗೂ ಭಾರತದಲ್ಲಿ ನಕ್ಸಲ್ ಚಳವಳಿ ಆರಂಭವಾದದ್ದು ಪಶ್ಚಿಮ ಬಂಗಾಳದ ನಕ್ಸಲ್‌ಬಾರಿ ಹಳ್ಳಿಯ ಮೂಲಕ ಎಂದು ಪ್ರತಿಬಿಂಬಿಸಿಕೊಂಡು ಬರಲಾಗುತ್ತಿದೆ. ಇದು ಅರ್ಧಸತ್ಯ ಮಾತ್ರ. ನಿಜವಾದ ನಕ್ಸಲ್ ಹೋರಾಟದ ಮೂಲ ಬೇರುಗಳು ಇರುವುದು ಆಂಧ್ರದ “ಶ್ರೀಕಾಕುಳಂ” ಜಿಲ್ಲೆಯಲ್ಲಿ. ಅದರಲ್ಲೂ ಪಾರ್ವತಿಪುರ ಎಂಬ ತಾಲೂಕು ಕೇಂದ್ರದಲ್ಲಿ. ಇದು ಪ್ರಪಥಮ ಬಾರಿಗೆ ಹೋರಾಟಕ್ಕೆ ನಾಂದಿ ಹಾಡಿದ ನೆಲ. ಸಿಲಿಗುರಿ ಪ್ರಾಂತ್ಯದ ನಕ್ಸಲ್ ಬಾರಿಯಲ್ಲಿ ಹೋರಾಟ ಆರಂಭಗೊಂಡಿದ್ದು 1967 ರಲ್ಲಿ ಆದರೆ, ಅದಕ್ಕೂ ಮುನ್ನ 1961 ರಲ್ಲಿ ಯಾವುದೇ ಕಮ್ಯೂನಿಷ್ಟ್ ಸಿದ್ಧಾಂತಗಳ ಹಂಗಿಲ್ಲದೆ ಇಲ್ಲಿನ ಗಿರಿಜನ ಜಮೀನ್ದಾರರ ವಿರುದ್ಧ ಹೋರಾಟ ಆರಂಭಿಸಿದ್ದರು. 1967 ರ ನಂತರ ಈ ಪ್ರದೇಶಕ್ಕೆ ಭೇಟಿ ನೀಡಿದ ಚಾರು ಮುಜಂದಾರ್, ಇಲ್ಲಿನ ಹೋರಾಟದ ಅಸ್ತಿಪಂಜರಕ್ಕೆ ಕಮ್ಯೂನಿಷ್ಟ್ ವಿಚಾರಗಳ, ಮಾಂಸ ಮತ್ತು ಮಜ್ಜೆಯನ್ನು ತುಂಬಿದ.

ಶ್ರೀಕಾಕುಳಂ ನೆಲದ ಕಪ್ಪು ಇತಿಹಾಸದಲ್ಲಿ ಹಲವಾರು ನೆತ್ತರಿನ ಅಧ್ಯಾಯಗಳಿವೆ. ಸಾಮ್ರಾಟ ಅಶೋಕ ಕಳಿಂಗ ಯುದ್ಧದಲ್ಲಿ ರಕ್ತದ ಕೋಡಿಯನ್ನು ಹರಿಸಿ, ನಂತರ ಹಿಂಸೆಯನ್ನು ತ್ಯಜಿಸಿ, ಆನಂತರ ಅಹಿಂಸೆಯ ಮಾರ್ಗ ಹಿಡಿದು ಬೌದ್ಧ ಧರ್ಮ ಸ್ವೀಕಾರ ಮಾಡಿದಾಗ ಆ ಘಟನೆಗೆ ಈ ನೆಲ ಸಾಕ್ಷಿಯಾಗಿತ್ತು. ಆಂಧ್ರದ ಗೋದಾವರಿ ನದಿಯಾಚೆಗಿನ ಪ್ರದೇಶ ಅಶೋಕನ ಅಧೀಪತ್ಯಕ್ಕೆ ಒಳಪಟ್ಟಿದ್ದರೆ, ಮಧ್ಯಭಾಗದ ಆಂಧ್ರದ ವಾರಂಗಲ್‌ನ ಕಾಕತೀಯ ಅರಸರ ವಂಶಸ್ಥರ ಆಳ್ವಿಕೆ ಒಳಪಟ್ಟಿತ್ತು. ಹೈದರಾಬಾದ್ ಪ್ರಾಂತ್ಯ ಹಾಗೂ ಸುತ್ತಮುತ್ತಲಿನ ಪ್ರದೇಶ ನೇರವಾಗಿ ಮೊಗಲರಿಂದ ನಿಜಾಮರ ಕೈ ಸೇರಿತ್ತು. ಇನ್ನು ದಕ್ಷಿಣ ಆಂದ್ರದ ಜಿಲ್ಲೆಗಳ ಪ್ರದೇಶ ವಿಜಯನಗರದ ಅರಸರ ಆಳ್ವಿಕೆ ಒಳಪಟ್ಟಿದ್ದ ಕಾರಣ ಈ ಪ್ರದೇಶವನ್ನು ರಾಯಲಸೀಮ (ಕೃಷ್ಣದೇವರಾಯ ಆಳಿದ ನಾಡು) ಎಂದು ಕರೆಯಲಾಗುತ್ತದೆ.

ಶ್ರೀಕಾಕುಳಂ ನಕ್ಸಲ್ ಇತಿಹಾಸ ಈವರೆಗೆ ಬೆಳಕಿಗೆ ಬಾರದೇ ಇತಿಹಾಸದ ಮಣ್ಣಲ್ಲಿ ಹುದುಗಿ ಹೋಗಿದೆ. ಇಲ್ಲಿನ ಬುಡಕಟ್ಟು ಜನಾಂಗ ಅನುಭವಿಸಿದ ಯಾತನೆಗಳು ಶಬ್ಧ ಮತ್ತು ಅಕ್ಷರಕ್ಕೆ ನಿಲುಕಲಾರದವು. ನಿತ್ಯಹರಿಧ್ವರ್ಣದ ಅರಣ್ಯ, ಅಪಾರ ಖನಿಜ ಸಂಪತ್ತಿನ ಒಡೆಯರಾಗಿದ್ದ ಈ ಜನರಿಗೆ, ಇವರ ಸಂಸ್ಕೃತಿಗೆ ಮತ್ತು ಬದುಕಿಗೆ ಭಂಗವನ್ನುಂಟು ಮಾಡಬಾರದೆಂದು ಅರಣ್ಯ ಭೂಮಿಯ ಹಕ್ಕನ್ನು ಬ್ರಿಟಿಷ್ ಸರ್ಕಾರ ದಯಪಾಲಿಸಿತ್ತು ಅಲ್ಲದೆ, ಇವರ ಭೂಮಿಯನ್ನು ಬುಡಕಟ್ಟು ಜನಾಂಗ ಹೊರತುಪಡಿಸಿ ಇತರರು ಕೊಳ್ಳದಂತೆ ಕಾಯ್ದೆಯನ್ನು ರೂಪಿಸಿಲಾಗಿತ್ತು. 1951 ರಲ್ಲಿ ಭಾರತ ಸರ್ಕಾರ ಕೂಡ ಈ ಕಾಯ್ದೆಗೆ ಹಲವು ತಿದ್ದುಪಡಿ ಮಾಡಿ (ಅರಣ್ಯ ಭೂಮಿಯಲ್ಲಿರುವ ಮರ ಮತ್ತು ಖನಿಜ ಸಂಪತ್ತು ಸರ್ಕಾರದ ಸ್ವತ್ತು) ಅನುಷ್ಠಾನಗೊಳಿಸಿತ್ತು. ಆಂಧ್ರದ ಪೂರ್ವ ಕರಾವಳಿಯ ಗುಡ್ಡಗಾಡಿನ ಬಹುತೇಕ ಅರಣ್ಯವಾಸಿಗಳು, ಪೋಡು ಎಂಬ ಪುಟ್ಟ ಗ್ರಾಮಗಳಲ್ಲಿ ವಾಸಿಸುತ್ತಾ, ಹೈನುಗಾರಿಕೆ, ಬೇಸಾಯ, ಅರಣ್ಯದ ಕಿರುಉತ್ಪನ್ನವನ್ನು ನಂಬಿ ಬದುಕಿದ್ದರು.

1950 ದಶಕದಲ್ಲಿ ಇಲ್ಲಿ ಆರಂಭವಾದ ಸರ್ಕಾರಿ ಸ್ವಾಮ್ಯದ ಸಿರ್ಪುರ್ ಪೇಪರ್‌ಮಿಲ್ (ಈಗಿನ ಆಂಧ್ರ ಪೇಪರ್ಸ್ ಮಿಲ್ ಲಿಮಿಟೆಡ್) ಹಾಗೂ ಕೇಂದ್ರ ಸರ್ಕಾರದ ಸಿಂಗರೇಣಿ ಕಲ್ಲಿದ್ದಲು ಗಣಿಗಾರಿಕೆ ಇವರ ನೈಜ ಸಾಂಸ್ಕೃತಿಕ ಬದುಕನ್ನು ಪಲ್ಲಟಗೊಳಿಸಿತು. ಪೇಪರ್ ಮಿಲ್‌ಗೆ ಬಿದಿರಿನ ಬೊಂಬುಗಳನ್ನು ಸರಬರಾಜು ಮಾಡಲು ಬಂದ ದಳ್ಳಾಳಿಗಳು ಕೆ.ಜಿ. ಗೆ 7 ಪೈಸೆಯಂತೆ ಕೊಳ್ಳಲು ಸಿದ್ದರಿದ್ದೇವೆ ಎಂದು ಅರಣ್ಯವಾಸಿಗಳಿಗೆ ಆಮಿಷ ಒಡ್ಡಿದರು. ಅದೇ ರೀತಿ ಅತ್ಯಂತ ಕಷ್ಟವಾದ ಕಲ್ಲಿದ್ದಲು ಗಣಿಗಾರಿಕೆಗೆ ತಿಂಗಳಿಗೆ 120 ರೂಪಾಯಿ ಸಂಬಳದ ಆಧಾರದ ಮೇಲೆ ಗುತ್ತಿಗೆದಾರರು ಇವರನ್ನು ನೇಮಕ ಮಾಡಿಕೊಳ್ಳತೊಡಗಿದರು. ಇವರ ಜೊತೆ ಕೇರಳದ ಮಾಪಿಳ್ಳೆಗಳು ಮರ ಕಡಿಯುವ ಗುತ್ತಿಗೆದಾರರಾಗಿ, ದಕ್ಷಿಣ ಆಂಧ್ರ ಕೊಮಟಿಗರು ಬಟ್ಟೆ ಮತ್ತು ದಿನಸಿ ವ್ಯಾಪಾರಿಗಳಾಗಿ ಈ ಪ್ರದೇಶಕ್ಕೆ ಕಾಲಿಟ್ಟರು. ವ್ಯವಹಾರ ಮತ್ತು ಆರ್ಥಿಕ ಚಟುವಟಿಕೆಯ ಲೋಕವೇ ಗೊತ್ತಿಲ್ಲದ ಮುಗ್ಧ ಜನರಿಗೆ ಸಾಲ ನೀಡಿ ಅದಕ್ಕೆ ಪ್ರತಿಯಾಗಿ ಖಾಲಿ ಬಿಳಿಯ ಕಾಗದದ ಮೇಲೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಳ್ಳುವ ಮೂಲಕ ಅರಣ್ಯವಾಸಿಗಳ ಜಮೀನುಗಳನ್ನು ಕಬಳಿಸಿದರು. ಇವರ ಈ ದುಷ್ಕೃತ್ಯಕ್ಕೆ ನೆರವಾದವರು, ಪಕ್ಕದ ಮಹಾರಾಷ್ಟ್ರದಿಂದ ವಲಸೆ ಬಂದ ಪಟ್ವಾರಿಗಳು. ಇವರು ಭೂದಾಖಲೆಗಳನ್ನು ನಿರ್ವಹಿಸುವುದನ್ನೇ ಕುಲ ಕಸುಬು ಮಾಡಿಕೊಂಡವರು. ಇಂತ ವೃತ್ತಿಯಲ್ಲಿದ್ದವರನ್ನು ನಮ್ಮ ಉತ್ತರ ಕರ್ನಾಟಕದಲ್ಲಿ ಕುಲಕರ್ಣಿಗಳೆಂದು, ದಕ್ಷಿಣ ಕರ್ನಾಟಕದಲ್ಲಿ ಶ್ಯಾನುಬೋಗರೆಂದು ಕರೆಯುತ್ತಿದ್ದರು.

ಈ ವಂಚನೆಯ ತಂಡ ಅರಣ್ಯವಾಸಿಗಳ ಭೂಮಿಯನ್ನು ಕಬಳಿಸಿ ನಂತರ ಇವುಗಳನ್ನು ಶ್ರೀಮಂತ ಜಮೀನ್ದಾರರಿಗೆ ಅಧಿಕ ಲಾಭಕ್ಕೆ ವರ್ಗಾವಣೆ ಮಾಡುತ್ತಿದ್ದರು. ತಮಗೆ ಅರಿವಿಲ್ಲದಂತೆ ಇಂತಹ ವಂಚನೆಯ ಜಾಲದಲ್ಲಿ ಸಿಲುಕಿದ ಅಮಾಯಕ ಗಿರಿಜನ, ಜಮೀನ್ದಾರರ ಗೂಂಡಾ ಪಡೆಗಳಿಗೆ ಹೆದರಿ, ತಮ್ಮ ಭೂಮಿಯಲ್ಲಿ ತಾವೇ ಬೆಳೆದ ಫಸಲನ್ನು ಭೂಮಾಲೀಕನಿಗೆ ನೀಡಿ ಇದಕ್ಕೆ ಪ್ರಫಲವಾಗಿ ಅವನು ಭಿಕ್ಷೆಯಂತೆ ಕೊಟ್ಟ ಅಲ್ಪ ಪ್ರಮಾಣದ ಫಸಲನ್ನು ಪಡೆದು ಮನೆಗೆ ಹಿಂತಿರುಗುತ್ತಿದ್ದರು. ನಾಗರೀಕ ಜಗತ್ತಿನ ವ್ಯವಹಾರದ ಅರಿವಿಲ್ಲದ ಈ ಜನ ಸಾಲ ಅಥವಾ ಬಡ್ಡಿ ಎಂದರೆ, ಏನು?, ಭೂ ದಾಖಲೆಗಳು ಎಂದರೆ ಏನು? ಎಂಬುದನ್ನು ಅರ್ಥ ಮಾಡಿಕೊಳ್ಳಲು ಬಹಳ ವರ್ಷಗಳೇ ಕಳೆದು ಹೋದವು. ಇವೆಲ್ಲಕ್ಕಿಂತ ಕ್ರೂರವಾದ ಅಮಾನುಷ ಕೃತ್ಯಗಳಿಗೆ ಇವರು ಬಲಿಯಾದರು. ಅರಣ್ಯದಲ್ಲಿ ಕಿರು ಉತ್ಪನ್ನ, ಇಲ್ಲವೆ ಸೌದೆ ಆರಿಸಲು ಹೋದ ಮಹಿಳೆಯರು, ನದಿಯಲ್ಲಿ ಸ್ನಾನಕ್ಕೆ ಹೋದ ಆದಿವಾಸಿ ಮಹಿಳೆಯರು ಈ ಹೃದಯಹೀನ ಜನರ ಅತ್ಯಾಚಾರಕ್ಕೆ ಒಳಗಾದರು. ಅಲ್ಲದೆ, ಕಪ್ಪು ವರ್ಣದ ಸುಂದರ ಮೈಕಟ್ಟಿನ ಆದಿವಾಸಿ ಜನಾಂಗದ ಹೆಂಗಸರು, ಹದಿ ಹರೆಯದ ಹುಡುಗಿಯರು, ತಮ್ಮ ಗಂಡಂದಿರ, ಅಪ್ಪಂದಿರ ಎದುರು ಜಮೀನ್ದಾರರ ಮನೆಗೆ ಅವರ ಕಾಮತೃಷೆ ನೀಗಿಸಲು ಪ್ರಾಣಿಗಳಂತೆ ಸಾಗಿಸಲ್ಪಟ್ಟರು. ಬಾಯಿಲ್ಲದ ಈ ಮೂಕ ಜನರಿಗೆ ನ್ಯಾಯ ದೊರಕಿಸಿಕೊಡಲು, ಅವರ ಹೋರಾಡಲು ಒಬ್ಬ ಅಪ್ಪಟ ಮನುಷ್ಯನಿಗಾಗಿ ಅಸಹಾಯಕ ಮತ್ತು ಅಮಾಯಕ ಗಿರಿಜನರ ಜಗತ್ತು ಎದುರು ನೋಡುತ್ತಿತ್ತು.

ಇಂತಹ ಸಮಯದಲ್ಲಿ ಇವರಿಗೆ ಬೆನ್ನೆಲುಬಾಗಿ ನಿಂತ ಹೃದಯವಂತ ವ್ಯಕ್ತಿ, ವೆಂಪಟಾಪು ಸತ್ಯನಾರಾಯಣ. ವೃತ್ತಿಯಲ್ಲಿ ಶಿಕ್ಷಕನಾಗಿದ್ದ ಈತ, ಬುಡಕಟ್ಟು ಜನಾಂಗದ ಮೇಲಿನ ಅನ್ಯಾಯ, ಅತ್ಯಾಚಾರವನ್ನು ಸಹಿಸಲಾಗದೆ, ತನ್ನ ವೃತ್ತಿಗೆ ತಿಲಾಂಜಲಿ ನೀಡಿ, ಗಿರಿಜನರನ್ನು ಸಂಘಟಿಸುವುದರ ಜೊತೆಗೆ ಭೂಮಾಲೀಕರ ಜೊತೆ ಸಂಘರ್ಷಕ್ಕೆ ನಾಂದಿ ಹಾಡಿದ. ಒಂದು ಅರ್ಥದಲ್ಲಿ ನಿಜವಾದ ನಕ್ಸಲ್ ಚಳವಳಿಯ ಪಿತಾಮಾಹನೆಂದರೆ, ಈ ಸತ್ಯನಾರಯಣ. ಆದರೆ, ಭಾರತದ ಎಡಪಂಥಿಯ ವಿಚಾರಧಾರೆಗಳ ಅಬ್ಬರದ ಪ್ರಚಾರದಲ್ಲಿ ಈ ಹುತಾತ್ಮ ಇವತ್ತಿಗೂ ಬೆಳಕಿಗೆ ಬಾರದೇ ಇತಿಹಾಸದ ಪುಟಗಳಲ್ಲಿ ಹುದುಗಿ ಹೋಗಿದ್ದಾನೆ.

 (ಮುಂದುವರಿಯುವುದು)