ಗಂಡ-ಹೆಂಡಿರ ಜಗಳ ಉಂಡು ಮಲಗಿದ ಮೇಲೂ


-ಡಾ.ಎಸ್.ಬಿ. ಜೋಗುರ


 

ಸದ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಸಾಮಾಜೀಕರಣದ ಅತಿ ಮುಖ್ಯವಾದ ನಿಯೋಗಿಯಾಗಿ ಕೆಲಸ ಮಾಡಬೇಕಾದ ಕುಟುಂಬದ ಮನ:ಸ್ಥಿತಿಯೇ ರೋಗಗ್ರಸ್ಥವಾಗುತ್ತಿದೆ. ಮೌಲ್ಯಗಳ ಸಂಪೋಷಣಾ ಕೇಂದ್ರವೆಂದು ಕರೆಯಿಸಿಕೊಂಡಿದ್ದ ಸಮಾಜದ ಮೂಲಭೂತ ಘಟಕ ಈಗೀಗ ಆಯತಪ್ಪಿದ ರಾಚನಿಕ ಚೌಕಟ್ಟಿನೊಳಗೆ ಬದುಕಿ ಉಳಿಯುವಲ್ಲಿ ಹರಸಾಹಸ ಪಡಬೇಕಾದ ದಿನಗಳು ಬಂದಿವೆ. ಮೊದಲ ಪಾಠಶಾಲೆಯಾಗಬೇಕಾದ ಮನೆ ಇಂದು ಮಕ್ಕಳಲ್ಲಿ ಪಾಲಕರ ಬಗೆಗೆ ಇರುಸು ಮುರುಸು ಬೆಳೆಸುವಲ್ಲಿ ಕಾರಣವಾಗುತ್ತಿವೆ.

ಗಂಡ-ಹೆಂಡತಿಯ ಜಗಳ ಗಂಧ ತೀಡಿದಂಗೆ ಎನ್ನುವ ಮಾತು ಪೂರ್ಣವಾಗಿ ಅರ್ಥ ಕಳೆದುಕೊಂಡು ಪರಸ್ಪರ ಮೂದಲಿಕೆ ಮತ್ತು ಕೆಸರೆರಚುವಲ್ಲಿಯೇ ಸುಖ ಸುರಿಯುವ ವಿರಸಪೂರ್ಣ ಸಂಸಾರಗಳು ಹೆಚ್ಚಾಗುತ್ತಿವೆ. ಭೂಮಿಯ ಮೇಲೆ ತನ್ನ ಅಜನ್ಮ ವೈರಿ ಯಾರಾದರೂ ಇದ್ದರೆ ಅದು ತನ್ನ ಗಂಡ ಇಲ್ಲವೇ ಹೆಂಡತಿ ಎಂಬಂತೆ ಬದುಕುವ ಎಳಕು ದಂಪತಿಗಳ ಸಂಖ್ಯೆ ಮತ್ತು ಇಂಥವರನ್ನು ಪುಸಲಾಯಿಸುವ ಹೆತ್ತವರು ಹಾಗೂ ಸಂಬಂಧಿಗಳು ಅವರ ಕೌಟುಂಬಿಕ ಕಲಹಗಳು ಉಂಡು ಮಲಗುವವರೆಗೆ ಸೀಮಿತವಾಗಿ ಉಳಿಯಲಿಕ್ಕೆ ಬಿಡುತ್ತಿಲ್ಲ. ಬದಲಾಗಿ ಎರಡೂ ಕಡೆಯವರು ಅವರನ್ನು ಬೇರ್ಪಡಿಸುವ, ಮನೆಹಾಳುತನದ ಚಿಲ್ಲರೆ ಐಡಿಯಾಗಳನ್ನು ಕೊಡುವ ಮೂಲಕ ಕುಟುಂಬ ಭಂಜಕರಾಗುತ್ತಿದ್ದಾರೆ.

ಒಂದು ಕಾಲದಲ್ಲಿ ಕುಟುಂಬದ ವ್ಯಾಜ್ಯಗಳು ಗಂಡ-ಹೆಂಡತಿ ಉಂಡು ಮಲಗುವ ವೇಳೆಗಾಗಲೇ ತಿಳಿಗೊಳ್ಳುತ್ತಿದ್ದವು. ದೀರ್ಘಕಾಲದ ದಾಂಪತ್ಯದ ಗುಟ್ಟೇ ಅದಾಗಿತ್ತು. ಈಗ ಹಾಗಲ್ಲ. ತನಗೂ ಸ್ವಾತಂತ್ರ್ಯ ಬೇಕು ಎಂದು ರಚ್ಚೆ ಹಿಡಿದಂತೆ ’ಇಸಂ’ ಗಳ ಮೂಲಕ ಪಡೆದುಕೊಂಡು ಗಂಡನ ಮೇಲೆ ಸೇಡು ತೀರಿಸಿಕೊಳ್ಳಲಿಕ್ಕಾಗಿಯೇ ತನಗಿರುವ ಸ್ವಾಯತ್ತತೆ ಬಳಕೆಯಾಗಬೇಕು ಎನ್ನುವಂತೆ ಇಡೀ ಕುಟುಂಬದ ಮಾನಸಿಕ ನೆಮ್ಮದಿಯನ್ನು ಕಸಿಯುವ ಕ್ರಮ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಮಾತೆತ್ತಿದರೆ ತಾನು ಬಿಟ್ಟು ತೆರಳುತ್ತೇನೆ ಎನ್ನುವ ಬಾಲಿಶ ಬೆದರಿಕೆಗಳನ್ನು ಗಂಡ ಹೆಂಡತಿಗೆ, ಇಲ್ಲವೇ ಹೆಂಡತಿ ಗಂಡನಿಗೆ ಒಡ್ಡುವ ಮೂಲಕ ಸಂಸಾರವನ್ನು ನಿರ್ವಹಿಸಲಿಕ್ಕಾಗುವುದಿಲ್ಲ.

ಇನ್ನು ಇಂಥಾ ಎಳಕು ಮನಸಿನವರಿಗೆ ಇವರಿಗಿಂಥಾ ಎಳಕು ಬುದ್ಧಿಯ ಪಾಲಕರು ಇದ್ದರಂತೂ ಮುಗಿದೇ ಹೋಯಿತು. ಹಿಂದೆ ’ಗಂಜಿಯ ಕುಡಿದರೂ ಗಂಡನ ಮನೆ ಲೇಸು’ ಎಂದು ಕಲಹವಾಡಿ ಬಂದ ಮಗಳಿಗೆ ಬುದ್ಧಿವಾದ ಹೇಳಿ ಕಳುಹಿಸುವ ತಾಯಂದಿರಿದ್ದರು. ಈಗ ಆ ತಾಯಂದಿರು ಮಹಿಳಾವಾದದ ಕಡಾಯಿಯಲ್ಲಿ ಕೊತಕೊತನೇ ಕುದ್ದವರು. ಮಾತೆತ್ತಿದರೆ ಇದು ಹೆಣ್ಣಿನ ಶೋಷಣೆ ಎನ್ನುತ್ತ ಕೌಟುಂಬಿಕ ಭದ್ರತೆಯ ಬುಡವನ್ನು ಅಲ್ಲಾಡಿಸುವತ್ತ ತಮ್ಮ ಕೊಡುಗೆಯನ್ನು ಪರೋಕ್ಷವಾಗಿ ನೀಡತೊಡಗಿದರು. ನನ್ನ ತಂದೆ ತಾಯಿ ಇಬ್ಬರೂ ಓದು ಬರಹ ಅರಿಯದವರು. ನಮ್ಮ ಸಹೋದರಿಯರು ಯಾವಾಗಲಾದರೂ ತಮ್ಮ ಗಂಡಂದಿರೊಂದಿಗೆ ಕಲಹವಾಡಿ ಒಂದೊಮ್ಮೆ ತವರಿಗೆ ಬಂದರೆ ನಮ್ಮ ಅಪ್ಪ-ಅವ್ವ ಇಬ್ಬರೂ ’ಜಗಳಾಡಿ ಬರಲೇಬ್ಯಾಡ್ರಿ ನೀವು ಮಾಡಿದ್ದು ತಪ್ಪು’ ಎಂದು ಬುದ್ಧಿವಾದ ಹೇಳುತ್ತಿದ್ದರು. ಅಲ್ಲಿ ತಪ್ಪು ಯಾರದು ಎನ್ನುವ ಚೌಕಾಶಿ ಇರುತ್ತಿರಲಿಲ್ಲ. ಬದಲಾಗಿ ಹೀಗೆ ಕುಟುಂಬದಲ್ಲಿ ಕಲಹವಾಡಿ ಮತ್ತೆ ಮತ್ತೆ ತವರಿಗೆ ಬರಬಾರದು ಎನ್ನುವ ಸಂದೇಶವಿರುತ್ತಿತ್ತು.

ಈಗ ಗಂಡ-ಹೆಂಡತಿ ಇಬ್ಬರೂ ತೀರಾ ಸಣ್ಣ ಸಣ್ಣ ಕಾರಣಗಳಿಗಾಗಿ ಒಬ್ಬರನ್ನೊಬ್ಬರು ಬಿಟ್ಟು ಹೋಗುವ ತಂತ್ರವನ್ನೇ ಪರಿಣಾಮಕಾರಿ ಎಂದು ಪರಿಭಾವಿಸಿರುವ ಹಿನ್ನೆಲೆಯಲ್ಲಿ ಕೌಟುಂಬಿಕ ವಿಘಟನೆಗಳ ಪ್ರಮಾಣ ನಮ್ಮಲ್ಲಿ ಹೆಚ್ಚಾಗುತ್ತಿದೆ. ಯಾವುದೇ ಕುಟುಂಬವಿರಲಿ ಅಲ್ಲಿ ಉದ್ಭವವಾಗುವ ಕಲಹಕ್ಕೆ ಅತಿ ಮುಖ್ಯ ಕಾರಣ ಪರಸ್ಪರ ತಿಳುವಳಿಕೆಯ ಕೊರತೆ. ಗಂಡ-ಹೆಂಡತಿ ಪರಸ್ಪರರ ಬೇಕು ಬೇಡಗಳನ್ನು ತಿಳಿದುಕೊಂಡರೆ ಮುಗಿಯಿತು. ಕಲಹದ ಪ್ರಶ್ನೆಯೇ ಬರುವುದಿಲ್ಲ. ಪರಸ್ಪರರು ಭಾವಪರವಶರಾಗಬೇಕು. ಗಂಡನ ನಿರೀಕ್ಷೆ ಹೆಂಡತಿಯದಾಗಬೇಕು, ಹೆಂಡತಿಯ ನಿರೀಕ್ಷೆ ಗಂಡನದಾಗಬೇಕು. ಅಲ್ಲಿಗೆ ಎಲ್ಲ ವೈಮನಸುಗಳು ತಾನಾಗಿಯೇ ಮಗ್ಗಲು ಹೊರಳಿಸಿ ಮಕಾಡೇ ಮಲಗುತ್ತವೆ.

ಕೌಟುಂಬಿಕ ವಲಯದಲ್ಲಿ ತನಗೂ ಪುರುಷನ ಸಮ ಸಮ ಸ್ವಾತಂತ್ರ್ಯ ಬೇಕು ಎನ್ನುವ ಕೂಗಿಗೆ ಪ್ರೇರಣೆಯಾದದ್ದು ಖಂಡಿತಾ ಸ್ತ್ರೀವಾದದ ವಿಚಾರಗಳಂತೂ ಅಲ್ಲ. [ಯಾಕೆಂದರೆ ಸ್ತ್ರೀವಾದ ಇನ್ನೂ ಸಾಮಾನ್ಯ ಮಹಿಳೆಯರನ್ನು ಮುಟ್ಟಲಿಲ್ಲ] ಬದಲಾಗಿ ಧಾರವಾಹಿಗಳಲ್ಲಿ ಬರುವ ಸ್ತ್ರೀ ಪಾತ್ರಗಳು. ಕೆಲವು ಧಾರವಾಹಿಗಳಂತೂ ಸಾಮಾಜಿಕ ಸಂಬಂಧಗಳನ್ನು ಬಿಂಬಿಸುವ ರೀತಿಯನ್ನು ನೋಡಿದರೆ ಇನ್ನೊಂದೆರಡು ದಶಕಗಳಲ್ಲಿ ಇಡೀ ಕೌಟುಂಬಿಕ ವ್ಯವಸ್ಥೆಯ ಬೇರುಗಳನ್ನೇ ಸಡಿಲುಗೊಳಿಸುವ ಗುತ್ತಿಗೆ ಹಿಡಿದಂತೆ ಪಾತ್ರ ಪೋಷಣೆಗಳು ಅಲ್ಲಿ ತಳ ಊರುವುದನ್ನು ನೋಡಿದರೆ ತುಂಬಾ ವಿಷಾದವೆನಿಸುತ್ತದೆ. ಹುಷಾರು..! ಗೋಡೆಗೂ ಕಿವಿಗಳಿವೆ ಎನ್ನುವ ಕುಟುಂಬದಲ್ಲಿಯ ನಾಜೂಕಾದ ಎಚ್ಚರಿಕೆಯನ್ನು ಮೀರಿಯೂ ಇಂದು ಕೆಲ ಧಾರವಾಹಿಗಳು ಸಂಬಂಧಗಳಲ್ಲಿಯ ಬಿರುಕುಗಳನ್ನು, ವಿಚ್ಚೇದನಗಳನ್ನು, ವಿವಾಹಬಾಹಿರ ಸಂಬಂಧಗಳನ್ನು ಯತ್ಥೇಚ್ಚವಾಗಿ ತೋರಿಸುವುದರಿಂದ ಅಲ್ಲಿಯ ಸಂಭಾಷಣೆಗಳು, ವಾದಪ್ರತಿವಾದಗಳು ನಮ್ಮ ಸಾಂಪ್ರದಾಯಿಕ ಕೌಟುಂಬಿಕ ಬದುಕಿನಲ್ಲಿ ಅಂತರ್ಗತವಾಗುತ್ತಿರುವ ಪರಿಣಾಮವೂ ಗಂಡ-ಹೆಂಡತಿಯ ಸಂಬಂಧಗಳ ಸೊಗಸಿನಲ್ಲಿ ಬಿರುಕು ಮೂಡುವಂತಾಗಿದೆ.

ಸ್ವಾತಂತ್ರ್ಯ ಮತ್ತು ಸಮಾನತೆಗಳು ಭೌತಿಕವಾಗಿ ಅನ್ವಯವಾದರೆ ಸಾಲದು. ಗಂಡ ಎರಡು ಸಾವಿರ ರೂಪಾಯಿಯ ಶರ್ಟ್ ಒಂದನ್ನು ಖರೀದಿಸಿದರೆ ಹೆಂಡತಿಯೂ ಎರಡು ಸಾವಿರ ರೂಪಾಯಿಯ ಸೀರೆ ಬಯಸುವುದು, ಈಕೆ ಸ್ಟೋವ್ ಹಚ್ಚಿದರೆ ಆತ ಪಾತ್ರೆ ಇಡುವುದು, ಇವಳು ಹಾಲು ಸುರಿದರೆ ಆತ ಸಕ್ಕರೆ ಹಾಗೂ ಚಹಾ ಪುಡಿಯನ್ನು ಸುರಿಯುವ ಮೂಲಕ ನಾವಿಬ್ಬರೂ ತುಂಬಾ ಸ್ವಾತಂತ್ರ್ಯವನ್ನು ಅನುಭವಿಸುತ್ತೇವೆ ಎನ್ನುವುದು ಮುಠ್ಠಾಳತನವಾದೀತು. ಈ ಬಗೆಯ ಮೇಲ್‌ಮೇಲಿನ ಸ್ವಾತಂತ್ರ್ಯದ ಪರಿಕಲ್ಪನೆಯೇ ಇಂದಿನ ಕುಟುಂಬಗಳಿಗೆ ಬಹು ದೊಡ್ಡ ತೊಡಕಾಗಿದೆ. ಉದ್ಯೋಗ ಮಾಡುವ ಪುರುಷ ಮತ್ತು ಮಹಿಳೆ ಇಬ್ಬರಿಗೂ ಔದ್ಯೋಗಿಕ ವಲಯದ ಒತ್ತಡಗಳ ಬಗ್ಗೆ ತಿಳಿದಿದೆ. ಇಲ್ಲಿ ಪುರುಷರು ಅನುಭವಿಸುವ ಕಿರಿಕುಳ ಕಡಿಮೆ ಎನ್ನುವುದಾಗಲೀ ಮಹಿಳೆ ಅನುಭವಿಸುವದು ಹೆಚ್ಚು ಎನ್ನುವಂತೆ ಯಾವುದೋ ಒಂದು ಸ್ಕೇಲ್‌ನಲ್ಲಿ ಅಳೆದು ತೋರಿಸಲಾಗದು.

ಒಬ್ಬರಿಗೊಬ್ಬರು ಎನ್ನುವಂತೆ ಬದುಕಿದಾಗಲೇ ಅದು ಸಂಸಾರ ಹಾಗೂ ಸಸಾರ. ಸಣ್ಣ ಸಣ್ಣ ಕಾರಣಕ್ಕೂ ಕಲಹ, ವೈಮನಸ್ಸು ಇಡೀ ಕುಟುಂಬದ ನೆಮ್ಮದಿಯ ಹರಣದ ಜೊತೆಗೆ ಮಕ್ಕಳ ಮನಸಿನ ಮೇಲೆಯೂ ಕೆಟ್ಟ ಪರಿಣಾಮ ಬೀರುವ ಮೂಲಕ ಅನೂಹ್ಯವಾದ ಸಂಬಂಧವೊಂದನ್ನು ಅಸಹ್ಯವಾಗಿ ಮಾರ್ಪಡಿಸುವ ಮಳ್ಳತನದ ನಡುವಳಿಕೆಯಾಗುತ್ತದೆ. ಇತ್ತೀಚೆಗೆ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯಕ್ಕೆ ಬರೀ ವಿಚ್ಚೇದನಕ್ಕೆ ಅವಕಾಶ ಕೊಡದೇ ಅವರನ್ನು ಒಂದುಗೂಡಿಸುವತ್ತ ಪ್ರಯತ್ನಿಸಿ ಎಂದಿರುವ ಮಾತಿನ ಹಿಂದೆ ’ಕೂಡಿ ಬಾಳಿದರೆ ಸ್ವರ್ಗ ಸುಖ’ ಎನ್ನುವ ಮಾತಿನ ತಾತ್ಪರ್ಯ ಹಾಗೂ ಆಶಯ ಅಡಕವಾಗಿದೆ. ಇಡೀ ವಿಶ್ವದಲ್ಲಿ ನಮ್ಮ ಕೌಟುಂಬಿಕ ವ್ಯವಸ್ಥೆ ಒಂದು ಮಾದರಿ. ಆ ನಮ್ಮ ತನವನ್ನು ಕುಟುಂಬದ ಮೂಲಕ ಉಳಿಸಿಕೊಳ್ಳುವಲ್ಲಿ ಒಂದು ಅರ್ಥವಿದೆ.

Leave a Reply

Your email address will not be published. Required fields are marked *