Daily Archives: May 21, 2012

ಹೊಸಪೇಟೆಯಲ್ಲಿ ಕಂಡ ಶ್ರೀರಾಮಲು ಪಾದಯಾತ್ರೆ


– ಪರಶುರಾಮ ಕಲಾಲ್


 

ಬಸವ ಕಲ್ಯಾಣದಿಂದ ಪಾದಯಾತ್ರೆ ನಡೆಸಿರುವ ಬಳ್ಳಾರಿ ಗ್ರಾಮೀಣ ಶಾಸಕ ಬಿ. ಶ್ರೀರಾಮಲು ಪಾದಯಾತ್ರೆಯ ಶನಿವಾರ (19/5/12) ಹೊಸಪೇಟೆಗೆ ಆಗಮಿಸಿ ಬಹಿರಂಗ ಸಭೆ ನಡೆಯಿತು.

ಶ್ರೀರಾಮಲು ಹಾಗೂ ಇತರೆ ಮುಖಂಡರ ಮಾತು ಕೇಳಿದ ಮೇಲೆ ಶ್ರೀರಾಮಲು ಸ್ಥಾಪಿಸಿರುವ ಬಿ.ಎಸ್.ಆರ್. ಪಕ್ಷ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಶ್ರೀರಾಮಲು ಮುಖ್ಯಮಂತ್ರಿಯಾಗುತ್ತಾರೆಂಬ ಅವರ ವಿಶ್ವಾಸ ನೋಡಿ ಆಶ್ಚರ್ಯವಾಯಿತು.

ಕೆಎಂಎಫ್ ಆಧ್ಯಕ್ಷ ಶಾಸಕ ಜಿ.ಸೋಮಶೇಖರ ರೆಡ್ಡಿಯವರ ಪ್ರಕಾರ ರಾಮಲುರನ್ನು ಮುಖ್ಯಮಂತ್ರಿ ಮಾಡುವ ಕನಸು ಈಗ ಜೈಲಿನಲ್ಲಿರುವ ಜಿ.ಜನಾರ್ಧನ ರೆಡ್ಡಿ ಗುರಿಯಾಗಿದೆಯಂತೆ, ಅವರು ಇದನ್ನು ನನಸು ಮಾಡುವವರಿಗೆ ಮಲಗುವುದಿಲ್ಲವಂತೆ. ಮೊದಲಿಂದಲೂ ಜನಾರ್ಧನ ರೆಡ್ಡಿ ಹಾಗೇ. ಅವರು ಜೈಲಿನಿಂದ ಹೊರ ಬರುತ್ತಾರೆ. ಬಂದು ಬಿಎಸ್ಆರ್ ಪಕ್ಷವನ್ನು ಬೆಳೆಸಿ, ರಾಮಲು ಮುಖ್ಯಮಂತ್ರಿ ಮಾಡುತ್ತಾರೆ. ಇದು ಶತಃಸಿದ್ಧ ಅನ್ನುವುದು ಅವರ ಅಂಬೋಣ.

“ಆಂಧ್ರ ಪ್ರದೇಶದಲ್ಲಿ ವೈಎಸ್ಆರ್ ಪಾದಯಾತ್ರೆ ನಡೆಸಿದ ನಂತರ ಮುಖ್ಯಮಂತ್ರಿಯಾದರು. ಹಾಗೇ ನಮ್ಮ ಬಿಎಸ್ಆರ್ ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮಲು ಮುಖ್ಯಮಂತ್ರಿಯಾಗುತ್ತಾರೆ. ಜನಾರ್ಧನ ರೆಡ್ಡಿ ಮಾತ್ರ ಆಕ್ರಮ ಗಣಿಗಾರಿಕೆ ನಡೆಸಿದ್ದಾರೆಯೇ? ಬಲ್ಡೋಟ ಕಂಪನಿ, ಆನಂದ್ ಸಿಂಗ್, ಸಂತೋಷ ಲಾಡ್, ಅನಿಲ್ ಲಾಡ್ ಆಕ್ರಮ ಗಣಿಗಾರಿಕೆ ನಡೆಸಿಲ್ಲವೇ,” ಎಂದು ಪ್ರಶ್ನಿಸುವ ಸೋಮಶೇಖರ ರೆಡ್ಡಿ, “ಚಿತಾವಣೆಯ ಮೂಲಕ ಜನಾರ್ಧನ ರೆಡ್ಡಿಯನ್ನು ಜೈಲಿಗಟ್ಟಲಾಗಿದೆ. ಬಿಜೆಪಿಯನ್ನು ಬೆಳೆಸಿದ್ದು ಜನಾರ್ಧನ ರೆಡ್ಡಿ. ಅವರ ಬೆಂಬಲದಿಂದ ಶಾಸಕರು ಆಯ್ಕೆಯಾದರು. ಇವರನ್ನು ಹೀಗೆ ಬಿಟ್ಟರೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಪರಿಶಿಷ್ಟ ಪಂಗಡದ ಬಿ.ಶ್ರೀರಾಮಲು ಅವರನ್ನು ಮಾಡಿ ಬಿಡುತ್ತಾರೆ ಎಂಬ ಭಯದಿಂದ ಅವರ ಮೇಲೆ ಗಣಿ ಆರೋಪ ಹೊರಿಸಿ ಜೈಲಿಗಟ್ಟಿದ್ದಾರೆ. ಅವರು ಹೊರ ಬರಲಿ ನೋಡಿ, ಶ್ರೀರಾಮಲುರನ್ನು ಮುಖ್ಯಮಂತ್ರಿ ಮಾಡಿಯೇ ಮಾಡುತ್ತಾರೆ;” ಹೀಗೆ ಸಾಗುತ್ತದೆ ಅವರ ಮಾತಿನ ವಾಗ್ಝರಿ.

ಇದು ಸೋಮಶೇಖರ ರೆಡ್ಡಿಯದು ಮಾತ್ರವಲ್ಲ. ಎಲ್ಲರ ಮಾತಿನ ವಾಗ್ಝರಿಯೇ. ಸ್ವತಃ ಶ್ರೀರಾಮಲು ಕೂಡಾ ಹೀಗೆಯೇ ಮಾತನಾಡುತ್ತಾರೆ. ಬಸವ ಕಲ್ಯಾಣದಿಂದ ಅವರು ಪಾದಯಾತ್ರೆ ಮಾಡಲು ಬಸವಣ್ಣ ನ ಹೋರಾಟ ಕಾರಣವಂತೆ. ಬಿಜ್ಜಳನ ರಾಜ್ಯದಲ್ಲಿ ಹಣಕಾಸು ಸಚಿವನಾಗಿದ್ದ ಬಸವಣ್ಣನ ಮೇಲೆ ಇತರೆ ಸಚಿವರು ಭೃಷ್ಠಾಚಾರದ ಆರೋಪ ಹೊರಿಸಿದ್ದರಿಂದ ಬಸವಣ್ಣ ತನ್ನ ಕಿರೀಟವನ್ನು ಬಿಜ್ಜಳನ ಮುಂದೆ ಇಟ್ಟು ಜನರ ಬಳಿ ಹೊರಟು ಜನಜಾಗೃತಿ ಮಾಡಿದನಂತೆ.

ಹಾಗೇ ಜನಜಾಗೃತಿ ಉಂಟು ಮಾಡಲು ಈ ಪಾದಯಾತ್ರೆ ನಡೆಸುತ್ತಿರುವೆ. ಬಿ.ಎಸ್.ಆರ್. ಪಕ್ಷ ಅಧಿಕಾರಕ್ಕೆ ಬಂದರೆ 2ರೂ.ಕೆಜಿ ಅಕ್ಕಿ ನೀಡುವೆ. ಹೀಗೆ ಅವರ ಪ್ರಣಾಳಿಕೆ ಬಿಚ್ಚುತ್ತಾ ಹೋಗುತ್ತದೆ.

ಕರ್ನಾಟಕದ ಜನರ ಬಗ್ಗೆ ಥೇಟ್ ತೆಲುಗು ಸಿನಿಮಾದ ಸ್ಟೈಲ್ ನಲ್ಲಿ ಮಾತನಾಡುವ ಇವರು, ರಾಜಕೀಯ ಅನ್ನುವುದು ಅಧಿಕಾರ ಪಡೆಯುವುದೇ ಎಂದು ಭಾವಿಸಿ ಬಿಟ್ಟಿದ್ದಾರೆ.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಯಾಕೆ ವಿಫಲವಾಗಿವೆ ಎಂಬ ಬಗ್ಗೆ ಇವರು ಕನಿಷ್ಟ ಯೋಚಿಸಿಲ್ಲ. ಅದು ಹೋಗಲಿ, ಕರ್ನಾಟಕ ವಿಭಿನ್ನ ಬಗೆಯ ಪ್ರಾದೇಶಿಕ,ತೆ ಹಲವು ಬಗೆಯ ಸಂಸ್ಕೃತಿಗಳನ್ನು ಹೊಂದಿರುವ ಪ್ರದೇಶ ಎನ್ನುವ ಸೂಕ್ಷ್ಮತೆ ಕೂಡಾ ಇಲ್ಲ.

ತುಂಬಾ ಬಾಲಿಶವಾದ ಮಾತುಗಳನ್ನು ವೇದಿಕೆಯಲ್ಲಿ ಆಡುವ ಇವರನ್ನು ಜನ ಸಹಿಸಿ ಚಪ್ಪಾಳೆ ತಟ್ಟುತ್ತಾ ಕೇಕೆ ಹಾಕುತ್ತಾರೆ. ಇದು ಮತ್ತೊಂದು ವಿಶೇಷ. ಎಲ್ಲರಲ್ಲೂ ಸೂಕ್ಷ್ಮತೆ ಮರೆಯಾಗುತ್ತಿದೆಯಾ? ಅಥವಾ ಜನರ ಜಾಣತನವೋ ಗೊತ್ತಾಗುತ್ತಿಲ್ಲ. ರಾಜಕೀಯ ಪಕ್ಷ ಅನ್ನುವುದು ಇಷ್ಟು ಅಸಡ್ಡೆಯಿಂದ ಕೂಡಿದರೆ ಹೇಗೆ?

ಇನ್ನು ಪಾದಯಾತ್ರೆಯಲ್ಲಿ ಒಂದು ಸುಸಜ್ಜಿತ ಬಸ್, ಭಾಗವಹಿಸುವ ಜನರಿಗೆ ಊಟ, ನೀರು ಕೊಡಲು ಗುತ್ತಿಗೆ ನೀಡಿರುವುದು, ಜೊತೆಯಲ್ಲಿ ಇರುವ ಜನಶ್ರೀ ಚಾನಲ್‌ನ ಓಬಿ ವ್ಯಾನ್; ಈ ಬಗ್ಗೆ ಬರೆದರೆ ಅದೇ ಮತ್ತೊಂದು ಅಧ್ಯಾಯವಾಗುತ್ತದೆ.