ಅಸ್ಪೃಶ್ಯತೆ, ಆರ್ಥಿಕತೆ ಮತ್ತು ಅಭಿವೃದ್ಧಿ

– ಡಾ.ಟಿ.ಆರ್. ಚಂದ್ರಶೇಖರ್

ಅಸ್ಪೃಶ್ಯತೆ ಆಚರಣೆಯನ್ನು ಸಾಮಾಜಿಕ ಪಿಡುಗು ಎಂಬ ರೀತಿಯಲ್ಲಿ ನೋಡಲಾಗುತ್ತಿದೆ. ಅದನ್ನು ಧಾರ್ಮಿಕ ಸಂಗತಿಯನ್ನಾಗಿಯೂ ನೋಡಲಾಗುತ್ತಿದೆ. ಮಡಿಮೈಲಿಗೆಗಳ ಹಿನ್ನೆಲೆಯಲ್ಲಿ ಅದನ್ನು ಪರಿಭಾವಿಸಿಕೊಳ್ಳುವ ಕ್ರಮವಿದೆ. ಇದೆಲ್ಲ ಸರಿ. ಅದರೆ ಅದನ್ನು ಅಭಿವೃದ್ಧಿಯ ಚೌಕಟ್ಟಿನಲ್ಲಿ ಪರಿಭಾವಿಸಿಕೊಳ್ಳುವ ಅಗತ್ಯವಿದೆ. ದೇಶದ ಅಭಿವೃದ್ಧಿಗೆ ಅದು ಕಂಟಕವಾಗಿದೆ ಎನ್ನುವ ನೆಲೆಯಲ್ಲಿ ಅದನ್ನು ಪರಿಭಾವಿಸಿಕೊಳ್ಳಬೇಕಾಗಿದೆ. ಅದನ್ನು ಕೇವಲ ಪರಿಶಿಷ್ಟರ ಸಮಸ್ಯೆಯನ್ನಾಗಿ ಸೀಮಿತಗೊಳಿಸುವುದಕ್ಕೆ ಪ್ರತಿಯಾಗಿ ಅದೊಂದು ದೇಶಕ್ಕೆ-ಸಮಾಜಕ್ಕೆ ಸಂಬಂಧಿಸಿದ ಸಮಸ್ಯೆಯನ್ನಾಗಿ ಪರಿಭಾವಿಸಿಕೊಳ್ಳುವ ಅಗತ್ಯವಿದೆ.

  1. ಇದರ ಆಚರಣೆಯಿಂದ ಇಡೀ ಸಮಾಜವು ಅಭಿವೃದ್ಧಿಯಿಂದ ವಂಚಿತವಾಗಿರುವ ಸಂಗತಿಯನ್ನು ಗುರುತಿಸಬೇಕಾಗಿದೆ. ದೇಶದ ಜನಸಂಖ್ಯೆಯ ಸರಿಸುಮಾರು ಶೇ.24 ರಷ್ಟಿರುವ ಪರಿಶಿಷ್ಟರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪೂರ್ಣವಾಗಿ ತೊಡಗುವುದು ಸಾಧ್ಯವಾಗಿಲ್ಲ. ಅವರ ಶ್ರಮಶಕ್ತಿ-ಬುದ್ಧಿಶಕ್ತಿ ಪೂರ್ಣವಾಗಿ ಅಭಿವೃದ್ಧಿಗೆ ಸಲ್ಲುತ್ತಿಲ್ಲ. ಪ್ರಸ್ತುತ ಪ್ರಬಂಧದಲ್ಲಿ ಅಸ್ಪೃಶ್ಯತೆಯನ್ನು ಅಭಿವೃದ್ಧಿಯ ಚೌಕಟ್ಟಿನಲ್ಲಿ ಪರಿಭಾವಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ಅಸ್ಪೃಶ್ಯತೆ ಮತ್ತು ಅಭಿವೃದ್ಧಿಗಳ ನಡುವಿನ ಸಂಬಂಧವನ್ನು ಕುರಿತಂತೆ ಚರ್ಚಿಸಲಾಗಿದೆ.
  2. ಭಾರತದ- ಕರ್ನಾಟಕದ ಅಭಿವೃದ್ಧಿಯ ಪರಿಶಿಷ್ಟ ಮತ್ತು ಶಿಷ್ಟ ನೆಲೆಗಳನ್ನು ಗುರುತಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.  ಇಲ್ಲಿ ಚರ್ಚೆಯನ್ನು ಹಾಗೂ ಅಂಕಿ-ಅಂಶಗಳನ್ನು ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳಲಾಗಿದೆ. ನಮ್ಮ ಸಮಾಜ ಸಂದರ್ಭದಲ್ಲಿ ಅಭಿವೃದ್ಧಿಯಿಂದ ವಂಚಿತವಾದ ಮತ್ತು ತೀವ್ರ ದುಸ್ಥಿತಿಯಲ್ಲಿರುವ ಜನ ಸಮುದಾಯವೆಂದರೆ ಪರಿಶಿಷ್ಟರು. ಆದ್ದರಿಂದ ಅಭಿವೃದ್ಧಿಯನ್ನು ಸಮಾಜದ ಅಂಚಿನಲ್ಲಿರುವ ವಂಚಿತರ ನೆಲೆಯಿಂದ ಪರಿಭಾವಿಸಿಕೊಳ್ಳಬೇಕಾದ ಅಗತ್ಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಅಭಿವೃದ್ಧಿಯ ಆರಂಭವು ಪರಿಶಿಷ್ಟರ ನೆಲೆಯಿಂದ ಆರಂಭವಾಗಬೇಕಾಗಿದೆ. ಪರಿಶಿಷ್ಟರ ಪದತಲದಿಂದ ಅಭಿವೃದ್ಧಿಯ ಆರಂಭವು ನಡೆಯಬೇಕು. ಸಾಮಾನ್ಯವಾಗಿ ಅಭಿವೃದ್ಧಿಯನ್ನು ಅಖಂಡ ನೆಲೆಯಲ್ಲಿ ಪರಿಭಾವಿಸಿಕೊಳ್ಳುವ ಪರಿಪಾಠವಿದೆ. ಅಭಿವೃದ್ಧಿಯ ಫಲಗಳು ಸಮಾಜದ ಎಲ್ಲರಿಗೂ ಕಾಲಾನುಕ್ರಮದಲ್ಲಿ ದೊರೆಯುತ್ತದೆ ಎಂಬುದು ಇಲ್ಲಿನ ಪ್ರಮೇಯವಾಗಿದೆ. ಅಭಿವೃದ್ಧಿಗೆ ಎಲ್ಲ ಜನರನ್ನು ಒಳಗೊಳ್ಳುವ ಗುಣವಿದೆಯೆಂದು ಹೇಳಲಾಗಿದೆ. ಆದರೆ ವಸ್ತುಸ್ಥಿತಿ ಹೀಗಿಲ್ಲ. ಅಭಿವೃದ್ಧಿಯ ಫಲಗಳು ಮೇಲಿನಿಂದ ಕೆಳಗೆ ಹರಿದು ಸಮಾಜದ ಕಟ್ಟಕಡೆಯ ಬಡವನನ್ನು ತಲುಪುತ್ತವೆ ಎಂಬುದು ಇದರ ಇನ್ನೊಂದು ಪ್ರಮೇಯವಾಗಿದೆ. ನಮ್ಮ ಸಮಾಜದ ಸಂದರ್ಭದಲ್ಲಿ ಅಭಿವೃದ್ಧಿಯು ಅಖಂಡವಾಗಿರಲು ಸಾಧ್ಯವಿಲ್ಲವೆಂಬುದನ್ನು ತೋರಿಸಲು ಪ್ರಸ್ತುತ ಪ್ರಬಂಧದಲ್ಲಿ ಪ್ರಯತ್ನಿಸಲಾಗಿದೆ. ಸಮಾಜದ ವಿವಿಧ ಜನಸಮುದಾಯಗಳು ಅಭಿವೃದ್ಧಿಯಲ್ಲಿ ಪಾಲನ್ನು ಹೇಗೆ ಪಡೆಯುತ್ತಿವೆ ಎಂಬುದನ್ನು ಗುರುತಿಸುವುದು ಕುತೂಹಲಕರ ಸಂ ಗತಿಯಾಗಿದೆ.

ಅಭಿವೃದ್ಧಿಯ ಪರಿಶಿಷ್ಟ ಮತ್ತು ಶಿಷ್ಟ ಸ್ವರೂಪಕ್ಕೆ ಲಿಂಗ ಸಂಬಂಧಿ ಆಯಾಮವಿರುವುದನ್ನು ಇಲ್ಲಿ ಚರ್ಚಿಸಲಾಗಿದೆ. ಈ ದೃಷ್ಟಿಯಿಂದಲೂ ಅಖಂಡವಾದ ವಿಶ್ಲೇಷಣೆ ಸಾಧ್ಯವಿಲ್ಲ. ವಾಸ್ತವವಾಗಿ ಅಭಿವೃದ್ಧಿಯಿಂದ ತೀವ್ರ ವಂಚಿತವಾಗಿರುವ ಹಾಗೂ ತೀವ್ರ ದುಸ್ಥಿತಿಯಲ್ಲಿರುವ ಗುಂಪೆಂದರೆ ಪರಿಶಿಷ್ಟ ಮಹಿಳೆಯರು. ಅಭಿವೃದ್ಧಿಯ ಲಿಂಗ ಸಂಬಂಧಿ ಆಯಾಮವನ್ನು ಅಲಕ್ಷಿಸಲು ಸಾಧ್ಯವಿಲ್ಲ. ಪ್ರಸ್ತುತ ಪ್ರಬಂಧದಲ್ಲಿ ಅಭಿವೃದ್ಧಿಯನ್ನು ವಿವಿಧ ಜನಸಮೂಹಗಳ ನೆಲೆಯಿಂದ ಪರಿಭಾವಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ಪರಿಶಿಷ್ಟರು ಅಭಿವೃದ್ಧಿಯಿಂದ ವಂಚಿತರಾಗಿದ್ದರೆ ಅದರ ಮೂಲದಲ್ಲಿ ಅಸ್ಪೃಶ್ಯತೆಯ ಆಚರಣೆ ಕ್ರಿಯಾಶೀಲವಾಗಿರುವುದನ್ನು ನಾವು ಗುರುತಿಸಬೇಕಾಗುತ್ತದೆ. ಪ್ರಸ್ತುತ ಪ್ರಬಂಧವನ್ನು 1991 ಮತ್ತು 2001 ರ ಜನಗಣತಿ ವರದಿಗಳಿಂದ ಪಡೆದ ಮಾಹಿತಿಯ ಮೇಲೆ ಕಟ್ಟಲಾಗಿದೆ. ಪ್ರಸ್ತಾವನೆಯನ್ನು ಸೇರಿಸಿಕೊಂಡು ಐದು ಭಾಗಗಳಲ್ಲಿ ಪ್ರಬಂಧವನ್ನು ಕಟ್ಟಲಾಗಿದೆ. ಎರಡನೆಯ ಭಾಗದಲ್ಲಿ ಅಕ್ಷರ ಸಂಸ್ಕೃತಿಯ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳನ್ನು ಕುರಿತಂತೆ ಚರ್ಚಿಸಲಾಗಿದೆ.

ಮೂರನೆಯ ಭಾಗದಲ್ಲಿ ದುಡಿಮೆಗಾರರ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳನ್ನು ಪರಿಶೋಧಿಸಲಾಗಿದೆ. ಅಸ್ಪೃಶ್ಯತೆಯ ಬದಲಾಗುತ್ತಿರುವ ಸ್ವರೂಪವನ್ನು ನಾಲ್ಕನೆಯ ಭಾಗದಲ್ಲಿ ಚರ್ಚಿಸಲಾಗಿದೆ. ಐದನೆಯ ಭಾಗದಲ್ಲಿ ಶಿಶುಮರಣ ಪ್ರಮಾಣಕ್ಕೆ ಸಂಬಂಧಿಸಿದ ಜಾತಿ ಸ್ವರೂಪವನ್ನು ಹಿಡಿದಿಡಲಾಗಿದೆ. ಇಡೀ ಚರ್ಚೆಯ ಸಾರಾಂಶವನ್ನು ಕೊನೆಯ ಭಾಗದಲ್ಲಿ ನೀಡಲಾಗಿದೆ. ಚರ್ಚೆಗೆ ಅಗತ್ಯವಾದ ಅಂಕಿ-ಅಂಶಗಳನ್ನು ಕೋಷ್ಟಕಗಳ ರೂಪದಲ್ಲಿ ನೀಡಲಾಗಿದ

ಅಕ್ಷರ ಸಂಸ್ಕೃತಿ ಮತ್ತು ಅಸ್ಪೃಶ್ಯತೆ

ಅಕ್ಷರ ಸಂಸ್ಕೃತಿಯನ್ನು ಅಖಂಡವಾದಿ ನೆಲೆಯಲ್ಲಿ ಚರ್ಚಿಸಿದರೆ ನಮಗೆ ಅದರ ಪರಿಶಿಷ್ಟ ಮತ್ತು ಶಿಷ್ಟ ಸ್ವರೂಪವು ಅರಿವಿಗೆ ಬರುವುದಿಲ್ಲ. ಅಖಂಡವಾದಿ ಚರ್ಚೆಗಳು ಅನೇಕ ಸೂಕ್ಷ್ಮ ಸಂಗತಿಗಳನ್ನು ಮುಚ್ಚಿಹಾಕಿಬಿಡುತ್ತವೆ. ಸಾಕ್ಷರತೆಗೆ ಸಂಬಂಧಿಸಿದಂತೆ ವಿವರಗಳು ಕೆಳಕಂಡಂತೆ ದೊರೆಯುತ್ತವೆ.

ಕೋಷ್ಟಕ 1.

ಸಾಕ್ಷರತೆ : ಜನಗಣತಿ ಮಾಹಿತಿ : 2001

ಕ್ರ.ಸಂ ವಿವರಗಳು ಒಟ್ಟು ಮಹಿಳೆಯರು  ಪುರುಷರು
1 ರಾಜ್ಯದ ಒಟ್ಟು ಜನಸಂಖ್ಯೆ  ಶೇ. 67.04    57.45  76.29
2 ಪರಿಶಿಷ್ಟ ಜಾತಿ  ಶೇ. 52.90 41.70 63.80
3 ಪರಿಶಿಷ್ಟ ವರ್ಗ ಶೇ. 48.30 36.60  59.70
4 ಅಂತರ : ಪ.ಜಾ (1-2)  -14.14  -15.75  -12.49
5 ಅಂತರ : ಪ.ಪಂ (1-3)  -18.74 -20.85 -16.59

ಈ ಬಗೆಯ ಮಾಪನದಲ್ಲಿ ಸಮಸ್ಯೆಯ ಪೂರ್ಣ ಚಿತ್ರವು ಅನಾವರಣವಾಗುವುದಿಲ್ಲ. ಪರಿಶಿಷ್ಟರ ಸಾಕ್ಷರತೆಯ ಮಟ್ಟವನ್ನೇನೋ ಇದು ಒದಗಿಸುತ್ತದೆ. ಆದರೆ ಶಿಷ್ಟರ ಸಾಕ್ಷರತೆಯ ವಿವರಗಳು ಇಲ್ಲಿ ದೊರೆಯುವುದಿಲ್ಲ. ಶಿಷ್ಟರನ್ನು ಇಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಸೇರಿಸಿಬಿಡಲಾಗಿದೆ. ಸಾಕ್ಷರತೆಗೆ ಸಂಬಂಧಿಸಿದ ಅಸಮಾನತೆಯನ್ನು ಇಂತಹ ಮಾಪನವು ಪೂರ್ಣವಾಗಿ ನೀಡಲು ಸಾಧ್ಯವಿಲ್ಲ.  ಆದ್ದರಿಂದ ಸಾಕ್ಷರತೆಯನ್ನು ಶಿಷ್ಟ ಮತ್ತು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಮಾಪನ ಮಾಡಿದಾಗ ಅದಕ್ಕೆ ಸಂಬಂಧಿಸಿದ ಅಸಮಾನತೆಯ ಆಳ-ಅಗಲಗಳ ಅರಿವು ನಮಗೆ ಉಂಟಾಗುತ್ತದೆ. ಇದನ್ನು ಕೆಳಗಿನ ಕೋಷ್ಟಕ-2 ರಲ್ಲಿ ತೋರಿಸಿದೆ.

ಕೋಷ್ಟಕ 2

ಸಾಕ್ಷರತೆ : ಶಿಷ್ಟ-ಪರಿಶಿಷ್ಟ ನೆಲೆಗಳು-2001

ವಿವರಗಳು.1 ರಾಜ್ಯದ ಒಟ್ಟು ಜನಸಂಖ್ಯೆ.2 ಪರಿಶಿಷ್ಟ ಜನಸಂಖ್ಯೆ ಶಿಷ್ಟಜನ ಸಂಖ್ಯೆ.3 ಶಿಷ್ಟಜನ ಸಂಖ್ಯೆ.4 ಸಾಕ್ಷರತಾ ಅಂತರ(4-3) ಶೇಕಡ ಅಂಶ.5
ಸಾಕ್ಷರತೆ:ಒಟ್ಟು ಶೇ 67.04 51.55 71.45 -19.90
ಶೇ 57.45 40.23 63.39 -23.16
ಪು. ಶೇ 76.29 62.58 80.18 -17.60

ಜನಗಣತಿ ವರದಿ ಪ್ರಕಾರ ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ ಸಾಕ್ಷರತಾ ಅಂತರ ಶೇ.14.14 ಅಂಶಗಳಷ್ಟಿದ್ದರೆ. ಪರಿಶಿಷ್ಟ ವರ್ಗಕ್ಕೆ ಸಂಬಂಧಿಸಿದಂತೆ ಅಂತರವು ಶೇ.18.74 ರಷ್ಟಿದೆ. ಇದನ್ನು ಶಿಷ್ಟ-ಪರಿಶಿಷ್ಟರಿಗೆ ಸಂಬಂಧಿಸಿದಂತೆ ಲೆಕ್ಕ ಹಾಕಿದಾಗ ಅಂತರವು ಅಧಿಕವಾಗಿರುವುದನ್ನು ಕೋಷ್ಟಕ-2ರಲ್ಲಿ ನೋಡಬಹುದು. ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಸಾಕ್ಷರತೆ ಶೇ.67.04 ಆದರೆ ಶಿಷ್ಟರ ಸಾಕ್ಷರತೆ ಶೇ.71.45 ಆದರೆ ಪರಿಶಿಷ್ಟ (ಪ.ಜಾ. + ಪ.ಪಂ) ಸಾಕ್ಷರತೆ ಶೇ.51.55 ಇಲ್ಲಿನ ಶಿಷ್ಟ-ಪರಿಶಿಷ್ಟರ ನಡುವಿನ ಸಾಕ್ಷರತಾ ಅಂತರ ಶೇ.19.90 ಅಂಶಗಳಷ್ಟಿದೆ. ಇದು ಕೋಷ್ಟಕ-1ರಲ್ಲಿ ಅಂತರಗಳಿಗಿಂತ ಇದು ಅಧಿಕವಾಗಿದೆ. ಸಾಕ್ಷರತೆಗೆ ಸಂಬಂಧಿಸಿದ ಶಿಷ್ಟ-ಪರಿಶಿಷ್ಟರ ನಡುವಿನ ಅಸಮಾನತೆ ಪ್ರಮಾಣವನ್ನು ಇನ್ನೊಂದು ರೀತಿಯಲ್ಲೂ ತೋರಿಸಬಹುದಾಗಿದೆ. ಇದನ್ನು ಕೋಷ್ಟಕ-3 ರಲ್ಲಿ ನೋಡಬಹುದು. ಅನೇಕ ದೃಷ್ಟಿಯಿಂದ ಸದರಿ ಕೋಷ್ಟಕವು ಮಹತ್ವದ್ದಾಗಿದೆ. ಮೊದಲನೆಯದಾಗಿ ಅಕ್ಷರ ಸಂಪತ್ತಿನಲ್ಲಿ ಪರಿಶಿಷ್ಟರ ಪಾಲು ಎಷ್ಟು ಎಂಬುದನ್ನು ಇಲ್ಲಿ ದೃಢಪಡಿಸಿಕೊಳ್ಳಬಹುದು. ಬಹಳ ಸ್ಪಷ್ಟವಾಗಿ ಕಂಡಬರುವ ಸಂಗತಿಯೆಂದರೆ ಪರಿಶಿಷ್ಟರು ಜನಸಂಖ್ಯೆಯಲ್ಲಿ ಎಷ್ಟು ಪಾಲು ಪಡೆದಿದ್ದಾರೋ ಅದಕ್ಕಿಂತ ಕಡಿಮೆ ಪಾಲನ್ನು ಅಕ್ಷರಸ್ಥರಿಗೆ ಸಂಬಂಧಿಸಿದಂತೆ ಪಡೆದಿದ್ದಾರೆ.

ಕೋಷ್ಟಕ 3

ಅಭಿವೃದ್ಧಿಯ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳು : ಸಾಕ್ಷರತೆ/ 1991 ಮತ್ತು 2001

ವಿವರಗಳು ರಾಜ್ಯದ ಒಟ್ಟು ಮೊತ್ತ ಪರಿಶಿಷ್ಟ / ದಲಿತರು ಶಿಷ್ಟ / ದಲಿತೇತರರು
1991 2001 1991 2001 1991 2001
1. ಜನಸಂಖ್ಯೆ   (ಲಕ್ಷಗಳಲ್ಲಿ) ಒಟ್ಟು 449.77 527.34 92.85 (20.64) 120.28 (22.81) 356.92 (79.36) 407.06 (77.19)
220.25 258.77 45.52 (20.66) 59.31 (22.92) 174.73 (79.34) 199.46 (77.08)
ಪು 229.51 268.56 47.33 (20.62) 60.95 (22.69) 182.18 (79.38) 207.60 (77.31)
 2. ಅಕ್ಷರಸ್ಥರು   (ಲಕ್ಷಗಳಲ್ಲಿ) ಒಟ್ಟು 210.23 307.75 28.22 (13.43) 52.49 (17.06) 182.01 (86.57) 255.26 (82.94)
81.14 129.57 9.35 (11.49) 20.23 (15.61) 71.79 (88.51) 109.34 (84.39)
ಪು 128.82 178.18 18.87 (14.65) 32.26 (18.10) 109.92 (85.35) 145.92 (81.89)
3. ಅನಕ್ಷಸ್ಥರು   (ಲಕ್ಷಗಳಲ್ಲಿ) ಒಟ್ಟು 164.85 151.33 46.87 (28.38) 49.33 (31.60) 118.07 (71.62) 101.99 (67.40)
102.22 95.96 27.40 (26.80) 30.60 (31.30) 74.82 (73.20) 65.92 (68.70)
ಪು 62.63 55.37 19.38 (30.99) 19.29 (34.84) 43.25 (69.01) 36.08 (65.16)

ಟಿಪ್ಪಣಿ : ಆವರಣದಲ್ಲಿರುವ ಅಂಕಿಗಳು ಒಟ್ಟು ಮೊತ್ತದ ಶೇಕಡ ಪ್ರಮಾಣವನ್ನು ಪ್ರತಿನಿಧಿಸುತ್ತವೆ.

ಆದರೆ ಅನಕ್ಷಸ್ಥರಿಗೆ ಸಂಬಂಧಿಸಿದಂತೆ ಮಾತ್ರ ಪರಿಶಿಷ್ಟರ ಪಾಲು ಅವರು ಜನಸಂಖ್ಯೆಯಲ್ಲಿ ಪಡೆದಿರುವುದಕ್ಕಿಂತ ಅಧಿಕವಾಗಿದೆ. ಇದು 1991 ಮತ್ತು 2001 ಎರಡೂ ಕಾಲಘಟ್ಟಗಳಿಗೆ ಅನ್ವಯವಾಗುತ್ತದೆ. ಜನಸಂಖ್ಯೆಯಲ್ಲಿ ಪರಿಶಿಷ್ಟರ ಪಾಲು 1991 ರಲ್ಲಿ ಶೇ 20.64ರಷ್ಟಿದ್ದರೆ 2001 ರಲ್ಲಿ ಅವರ ಪಾಲು ಶೇ 22.81ಕ್ಕೇರಿದೆ. ಆದರೆ ಅಕ್ಷರಸ್ಥರಲ್ಲಿ ಅವರ ಪಾಲು 1991 ರಲ್ಲಿ ಶೇ 13.43 ರಷ್ಟಿದ್ದರೆ 2001 ರಲ್ಲಿ ಅವರ ಪಾಲು ಶೇ 17.06 ಕ್ಕೇರಿದೆ. ಇದಕ್ಕೆ ಭಿನ್ನವಾಗಿ ಅನಕ್ಷರಸ್ಥರಲ್ಲಿ ಅವರ ಪಾಲು 1991 ರಲ್ಲಿ ಶೇ 28.38 ರಷ್ಟಿದ್ದರೆ 2001 ರಲ್ಲಿ ಅದು ಶೇ 32.60ಕ್ಕೇರಿದೆ. ಆದರೆ ಶಿಷ್ಟರಿಗೆ ಸಂಬಂಧಿಸಿದಂತೆ ಅನಕ್ಷರಸ್ಥರ ಪಾಲು 1991 ರಲ್ಲಿ ಶೇ 71.62 ರಷ್ಟಿದ್ದುದು 2001 ರಲ್ಲಿ ಶೇ 67.40 ಕ್ಕಿಳಿದಿದೆ. ಇದು ಕುತೂಹಲಕಾರಿ ಸಂಗತಿಯಾಗಿದೆ. ಅಕ್ಷರಸ್ಥರಿಗೆ ಸಂಬಂಧಿಸಿದಂತೆ ಶಿಷ್ಟರ ಪಾಲು ಅಧಿಕವಾಗುತ್ತಿದ್ದು ಪರಿಶಿಷ್ಟರ ಪಾಲು ಅಷ್ಟರಮಟ್ಟಿಗೆ ಕಡಿಮೆಯಾಗುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಆದರೆ ಅನಕ್ಷರಸ್ಥರಲ್ಲಿ ಶಿಷ್ಟರ ಪಾಲು ಕಡಿಮೆಯಾಗುತ್ತಿದ್ದು ಪರಿಶಿಷ್ಟರ ಪಾಲು ಅಧಿಕಗೊಳ್ಳುತ್ತಿದೆ. ಇದರ ಇಂಗಿತಾರ್ಥವೇನೆಂದರೆ ಶಿಷ್ಟರ ಸಾಕ್ಷರತೆಯು ಯಾವ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆಯೋ ಅದೇ ಪ್ರಮಾಣದಲ್ಲಿ ಪರಿಶಿಷ್ಟ ಅನಕ್ಷರತಾ ಪ್ರಮಾಣ ಕಡಿಮೆಯಾಗುತ್ತಿಲ್ಲ. ಈ ಸಂಗತಿಯ ಮತ್ತೊಂದು ಮಗ್ಗುಲನ್ನು ನಾವು ಪರಿಗಣಿಸಬೇಕಾಗುತ್ತದೆ. ಅದು ಸಾಕ್ಷರತೆಯ ಲಿಂಗ ಸಂಬಂಧಿ ಆಯಾಮ ಹಾಗೂ ಅದರ ಶಿಷ್ಟ-ಪರಿಶಿಷ್ಟ ಆಯಾಮ. ಕೋಷ್ಟಕ-1 ರಲ್ಲಿ ತೋರಿಸಿರುವಂತೆ ಕನಿಷ್ಟ ಸಾಕ್ಷರತೆ 2001 ರಲ್ಲಿ ಪರಿಶಿಷ್ಟ ವರ್ಗದ ಮಹಿಳೆಯರಲ್ಲಿ ಕಾಣಬಹುದು(ಶೇ.36.60). ಅದೇ ರೀತಿ ಕೋಷ್ಟಕ-2 ರಲ್ಲಿ ತೋರಿಸಿದಂತೆ ಶಿಷ್ಟ ಮತ್ತು ಪರಿಶಿಷ್ಟರ ನಡುವಿನ ಸಾಕ್ಷರತಾ ಅಂತರವು ಪುರುಷರಿಗೆ ಸಂಬಂಧಿಸಿದಂತೆ ಶೇ 17.60 ಅಂಶಗಳಷ್ಟಿದ್ದರೆ ಮಹಿಳೆಯರಿಗೆ ಸಂಬಂಧಿಸಿದಂತೆ ಅದು ಶೇ 23.16 ಅಂಶಗಳಷ್ಟಿದೆ.

ಶಿಷ್ಟ-ಪರಿಶಿಷ್ಟರಿಗೆ ಸಂಬಂಧಿಸಿದಂತೆ ಸಾಕ್ಷರತೆಯ ಮಟ್ಟ ಪರಿಶಿಷ್ಟರಲ್ಲಿ ಕಡಿಮೆಯಿದೆ. ಆದರೆ ಪರಿಶಿಷ್ಟರನ್ನು ತೆಗೆದುಕೊಂಡಾಗ ಕನಿಷ್ಟ ಸಾಕ್ಷರತೆಯು ಪರಿಶಿಷ್ಟ ಮಹಿಳೆಯರಲ್ಲಿದೆ. ಶಿಷ್ಟ ಮತ್ತು ಪರಿಶಿಷ್ಟರ ಸಂಬಂಧಗಳನ್ನು ಅಖಂಡವಾಗಿ ಪರಿಭಾವಿಸಿಕೊಂಡಾಗ ಪರಿಶಿಷ್ಟರ ಸ್ಥಾನ ಅಂಚಿನಲ್ಲಿರುತ್ತದೆ. ಆದರೆ ಅವುಗಳ ಸಂಬಂಧಗಳನ್ನು ಲಿಂಗಸ್ವರೂಪದ ನೆಲೆಯಿಂದ ಪರಿಭಾವಿಸಿಕೊಂಡಾಗ ಪರಿಶಿಷ್ಟ ಮಹಿಳೆಯರ ಸ್ಥಾನವು ಅತ್ಯಂತ ಕನಿಷ್ಟತಮವಿರುವುದು ಕಂಡುಬರುತ್ತದೆ.

ಸಾಕ್ಷರತೆಯನ್ನು ಅಭಿವೃದ್ಧಿಯ ಸೂಚಿಯನ್ನಾಗಿ ಮತ್ತು ಅನಕ್ಷರತೆಯನ್ನು ದುಸ್ಥಿತಿಯ ಸೂಚಿಯಾಗಿ ಪರಿಗಣಿಸಿದರೆ ಕರ್ನಾಟಕದಲ್ಲಿ ಪರಿಶಿಷ್ಟರು ತೀವ್ರ ತಾರತಮ್ಯದಿಂದ ದುಸ್ಥಿತಿಯಿಂದ ನರಳುತ್ತಿರುವುದು ಕಂಡುಬರುತ್ತದೆ. ಅಕ್ಷರ ಸಂಸ್ಕೃತಿಯನ್ನು ಶಿಷ್ಟರು ಸಾಪೇಕ್ಷವಾಗಿ ಗುತ್ತಿಗೆ ಹಿಡಿದುಕೊಂಡುಬಿಟ್ಟಿರುವುದು ತಿಳಿಯುತ್ತದೆ. ಅಕ್ಷರ ಸಂಸ್ಕೃತಿಯ ಮಹತ್ವವನ್ನು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಡಾ.ಬಿ.ಆರ್. ಅಂಬೇಡ್ಕರ್ ಸ್ಪಷ್ಟವಾಗಿ ಗುರುತಿಸಿದ್ದರು. ಲಿಖಿತ ಅಕ್ಷರವನ್ನು ಅವರು ಆರಾಧಿಸುತ್ತಿದ್ದರು. ತಮ್ಮ ಜೀವಮಾನದುದ್ದಕ್ಕೂ ಅವರು ಯಾವುದೇ ಸಮಿತಿ, ಆಯೋಗ ಅಥವಾ  ಸರ್ಕಾರದ ಮುಂದೆ ವಾದ ಮಂಡಿಸಬೇಕಾಗಿದ್ದರೆ ಅವರು ಲಿಖಿತ ರೂಪದಲ್ಲಿ ತಮ್ಮ ಅಭಿಪ್ರಾಯವನ್ನು ಸೂಚಿಸುತ್ತಿದ್ದರು. ಮೌಖಿಕ ಸಂಪ್ರದಾಯವನ್ನು ತಬ್ಬಿಕೊಂಡಿರುವ ಪರಿಶಿಷ್ಟರಿಗೆ ಸಮಾಜದಲ್ಲಿ, ಅದರಲ್ಲೂ ಪ್ರತಿಷ್ಠಿತ ಸಮಾಜದ ಎದುರಿಗೆ ಗೌರವವನ್ನು ದಕ್ಕಿಸಿಕೊಳ್ಳಬೇಕಾದರೆ ಪರಿಶಿಷ್ಟರು ಅಕ್ಷರ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕೆಂಬುದು ಅವರ ನಂಬಿಕೆಯಾಗಿತ್ತು. ಅಕ್ಷರ ಸಂಸ್ಕೃತಿಯ ಮೇಲೆ ಬಾಬಾಸಾಹೇಬ್ ಪ್ರಭುತ್ವವನ್ನು ಸಾಧಿಸಿಕೊಂಡಿದ್ದರಿಂದ ಭಾರತದ ಅಸ್ಪೃಶ್ಯ ಸಮಾಜದ ನೋವನ್ನು ಪ್ರಪಂಚಕ್ಕೆ ತಿಳಿಸುವುದು ಅವರಿಗೆ ಸಾಧ್ಯವಾಯಿತು. ಅಕ್ಷರವು ನೀಡಿದ ಅಧಿಕಾರದಿಂದ ಅವರು ಬ್ರಾಹ್ಮಣಶಾಹಿಯನ್ನು ಎದುರಿಸುವುದು ಸಾಧ್ಯವಾಯಿತು. ಅಕ್ಷರಕ್ಕೂ ಅಧಿಕಾರಕ್ಕೂ ನಡುವೆ ಇರುವ ಸಂಬಂಧವನ್ನು ಇಂದಿಗೂ ಅಲ್ಲಗಳೆಯುವುದು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಪರಿಶಿಷ್ಟರಿಗೆ ಅಕ್ಷರವು ತುಂಬಾ ಮಹತ್ವವಾದ ಸಂಗತಿಯಾಗಿದೆ. ಅಕ್ಷರ ಸಂಪತ್ತಿನಿಂದ ವಂಚಿತರಾದ ಪರಿಶಿಷ್ಟರ ಶಿಕ್ಷಣಕ್ಕೆ ವಿಶೇಷ ಗಮನ ನೀಡಬೇಕಾದ ಅಗತ್ಯವಿದೆ4. ಶಿಷ್ಟ ಮತ್ತು ಪರಿಶಿಷ್ಟಗಳ ನಡುವಿನ ಭಿನ್ನತೆಯನ್ನು ಸೂಚಿಸುವ ಬಹುಮುಖ್ಯ ಸಂಗತಿಯೆಂದರೆ ಅಕ್ಷರದ ಮೇಲಿನ ಅಧಿಕಾರವಾಗಿದೆ.

ಭಾಗ 3

ದುಡಿಮೆ : ಶಿಷ್ಟ-ಪರಿಶಿಷ್ಟ ನೆಲೆಗಳು

ಕರ್ನಾಟಕಕ್ಕೆ-ಭಾರತಕ್ಕೆ ಸಂಬಂಧಿಸಿದಂತೆ ದುಡಿಮೆಯ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಈ ಬಗೆಯಲ್ಲಿ ದುಡಿಮೆಯನ್ನು, ದುಡಿಮೆಗಾರರನ್ನು ಕುರಿತಂತೆ  ಚರ್ಚಿಸದಿದ್ದರೆ ನಮಗೆ ದುಡಿಮೆಗೆ ಸಂಬಂಧಿಸಿದ ಸೂಕ್ಷ್ಮ ಸಂಗತಿಗಳು ಗೋಚರವಾಗುವುದಿಲ್ಲ. ಬಂಡವಾಳ ಸಂಚಯನವು ಶಿಷ್ಟರಿಗೆ ಪೂರಕವಾಗಿರುವುದನ್ನು ಅರ್ಥವಾಡಿಕೊಳ್ಳಬೇಕಾದರೆ ನಾವು ದುಡಿಮೆಗೆ ಸಂಬಂಧಿಸಿದ ಶಿಷ್ಟ-ಪರಿಶಿಷ್ಟ ನೆಲೆಗಳನ್ನು ಕೂಲಂಕಷವಾಗಿ   ಚರ್ಚಿಸಬೇಕಾಗುತ್ತದೆ. ಈ ಬಗೆಯ ವಿಶ್ಲೇಷಣೆಯಿಂದ ಮಾತ್ರ ನಮ್ಮ ಸಮಾಜದ ಸಂದರ್ಭದಲ್ಲಿ ಅಭಿವೃದ್ಧಿಯು ಶಿಷ್ಟರಿಗೆ ಅಭಿಮುಖಿಯಾಗಿರುವ ಮತ್ತು ಪರಿಶಿಷ್ಟರಿಗೆ ವಿಮುಖಿಯಾಗಿರುವ ಸ್ವರೂಪವನ್ನು ಅರ್ಥಮಾಡಿಕೊಳ್ಳಬಹುದು. ದುಡಿಮೆಗೆ ಸಂಬಂಧಿಸಿದ ಒತ್ತಡವನ್ನು ಪರಿಶಿಷ್ಟರು ನಿರ್ವಹಿಸುತ್ತಿದ್ದರೆ, ಬಂಡವಾಳ ಸಂಚಯನದ ಅನುಕೂಲಗಳನ್ನು ಶಿಷ್ಟರು ಅನುಭವಿಸುತ್ತಿದ್ದಾರೆ. ಬಂಡವಾಳ ಸಂಚಯನ (ಕ್ಯಾಫಿಟಲ್ ಅಕ್ಯುಮುಲೇಶನ್) ಎಂಬುದನ್ನೇ ಅಭಿವೃದ್ಧಿಯೆಂದು ಕರೆಯುವುದಾದರೆ ಅದನ್ನು ಶಿಷ್ಟರು ಗುತ್ತಿಗೆ ಹಿಡಿದಿರುವುದನ್ನು ಗುರುತಿಸಬಹುದಾಗಿದೆ. ಪರಿಶಿಷ್ಟರು ಅಭಿವೃದ್ಧಿಯನ್ನು ಸಾಧಿಸಿಕೊಳ್ಳುವುದಿರಲಿ, ದುಸ್ಥಿತಿಯ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳುವುದರಲ್ಲಿ ವಿಫಲರಾಗುತ್ತಿದ್ದಾರೆ. ಪ್ರಸ್ತುತ ಪ್ರಬಂಧದ ಭಾಗ-2ರಲ್ಲಿ ಇದನ್ನು ಸಾಕ್ಷರತೆ-ಅಕ್ಷರ ಸಂಸ್ಕೃತಿಗೆ ಸಂಬಂಧಿಸಿದಂತೆ  ಚರ್ಚಿಸಲಾಗಿದೆ. ಈಗ ಭಾಗ-3ರಲ್ಲಿ ದುಡಿಮೆಗೆ ಸಂಬಂಧಿಸಿದ ಶಿಷ್ಟ-ಪರಿಶಿಷ್ಟ ನೆಲೆಗಳನ್ನು ಶೋಧಿಸಲು ಪ್ರಯತ್ನಿಸಲಾಗಿದೆ. ಅಭಿವೃದ್ಧಿ ಮತ್ತು ದುಡಿಮೆಗಳ ನಡುವಿನ ಸಂಬಂಧವನ್ನು ಒತ್ತಿ ಹೇಳುವ ಅಗತ್ಯವಿಲ್ಲ. ದುಡಿಮೆಯ ಶಿಷ್ಟ-ಪರಿಶಿಷ್ಟ ನೆಲೆಗಳನ್ನು ಕುರಿತಂತೆ ಚರ್ಚಿಸುವುದರ ಜೊತೆಗೆ ಇಲ್ಲಿ ಅದರ ಲಿಂಗ ಸಂಬಂಧಿ ಸ್ವರೂಪವನ್ನು ಹಿಡಿದಿಡಲಾಗಿದೆ. ಅಸ್ಪೃಶ್ಯತೆಯ ಆಚರಣೆಯಿಂದ ಹೆಚ್ಚು ದೌರ್ಜನ್ಯಕ್ಕೆ, ಹಿಂಸೆಗೆ ಪರಿಶಿಷ್ಟ ಮಹಿಳೆಯರು ಒಳಗಾಗಿದ್ದಾರೆ. ಭಾಗ-3ರಲ್ಲಿ ನಾಲ್ಕು ಉಪಭಾಗಗಳಿವೆ. ಮೊದಲನೆಯ ಉಪಭಾಗ (3.1)ದಲ್ಲಿ ದುಡಿಮೆಯ ರಾಚನಿಕ ಸ್ವರೂಪವನ್ನು ಶಿಷ್ಟ-ಪರಿಶಿಷ್ಟ ನೆಲೆಯಲ್ಲಿ ಪರಿಭಾವಿಸಿಕೊಳ್ಳಲಾಗಿದೆ. ದುಡಿಮೆಯ ರಾಚನಿಕ ಸ್ವರೂಪವನ್ನು ಗುರುತಿಸುವುದರ ಮೂಲಕ ನಮ್ಮ ಸಮಾಜದ ಸಂದರ್ಭದಲ್ಲಿ ಪರಿಶಿಷ್ಟರು ಕೃಷಿ, ಗಣಿಗಾರಿಕೆ, ಮೀನುಗಾರಿಕೆ, ಕಲ್ಲು ಒಡೆಯುವುದು ಮುಂತಾದ ಚಟುವಟಿಕೆಗಳನ್ನು ಒಳಗೊಂಡ ಪ್ರಾಥಮಿಕ ವಲಯದಲ್ಲಿ ಮುಗಿಬಿದ್ದಿರುವುದನ್ನು ಮತ್ತು ಶಿಷ್ಟರು ಹೆಚ್ಚು ವರಮಾನ ತರುವ, ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ದಿಮೆ ಮತ್ತು ಸೇವಾವಲಯಗಳಿಗೆ ಲಗ್ಗೆ ಹಾಕಿರುವುದನ್ನು ತೋರಿಸಲು ಪ್ರಯತ್ನಿಸಲಾಗಿದೆ. ಅಭಿವೃದ್ಧಿಯ ಮುಂಚೂಣಿಯಲ್ಲಿ ಶಿಷ್ಟರಿದ್ದರೆ ಪರಿಶಿಷ್ಟರು ಅದರಿಂದ ವಂಚಿತರಾಗಿ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ಭಾಗ-3.2ರಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಕೃಷಿ ಅವಲಂಬನೆಯ ಶಿಷ್ಟ-ಪರಿಶಿಷ್ಟ ನೆಲೆಗಳನ್ನು ಶೋಧಿಸಲು ಪ್ರಯತ್ನಿಸಲಾಗಿದೆ. ಕೃಷಿ ಅವಲಂಬನೆಯ ಸ್ವರೂಪವನ್ನು 1991 ಮತ್ತು 2001 ಎರಡು ಕಾಲಘಟ್ಟಗಳಿಗೆ ಸಂಬಂಧಿಸಿದಂತೆ ಗುರುತಿಸಲಾಗಿದೆ. ಭಾಗ 3.3ರಲ್ಲಿ ದಿನಗೂಲಿ ದುಡಿಮೆಗಾರರ ಪ್ರಮಾಣವನ್ನು ಶಿಷ್ಟರಿಗೆ ಮತ್ತು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಗುರುತಿಸಲಾಗಿದೆ. ಕೃಷಿ ಅವಲಂಬನೆಯು ಹಾಗೂ ದಿನಗೂಲಿ ದುಡಿಮೆಗಾರರ ಪ್ರಮಾಣ ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅಧಿಕವಾಗಿರುವುದನ್ನು ಮಾಪನ ಮಾಡುವುದರ ಮೂಲಕ ಪರಿಶಿಷ್ಟ ದುಡಿಮೆಗಾರರು ಯಾವ ಬಗೆಯ ಬಡತನವನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಸಾಧಿಸಲು ಪ್ರಯತ್ನಿಸಲಾಗಿದೆ. ಭಾಗ – 3.4 ರಲ್ಲಿ ದುಡಿಮೆಯ ಲಿಂಗ ಸಂಬಂಧಿ ನೆಲೆಗಳನ್ನು ವಿಶ್ಲೇಷಿಸಲಾಗಿದೆ. ಇದು ಪ್ರಸ್ತುತ ಪ್ರಬಂಧದ ಮಹತ್ವದ ಭಾಗವೆಂದು ಭಾವಿಸಲಾಗಿದೆ.

3.1 ದುಡಿಮೆಯ ರಾಚನಿಕ ಸ್ವರೂಪ: ಕೋಷ್ಟಕ-4 ರಲ್ಲಿ 1991 ಕ್ಕೆ ಸಂಬಂಧಿಸಿದ ದುಡಿಮೆಗಾರರ ರಾಚನಿಕ ಸ್ವರೂಪವನ್ನು ಮಂಡಿಸಲಾಗಿದೆ.

ಕೋಷ್ಟಕ 4

ಕರ್ನಾಟಕ : ದುಡಿಮೆಯ ರಾಚನಿಕ ಸ್ವರೂಪ : ಶಿಷ್ಟ-ಪರಿಶಿಷ್ಟ ನೆಲೆಗಳು 1991

(ಸಂಖ್ಯೆ : ಲಕ್ಷಗಳಲ್ಲಿ)

ವಿವರಗಳು  ಪ್ರಾಥಮಿಕ ವಲಯ ದ್ವಿತೀಯವಲಯ ತೃತೀಯ ವಲಯ ಒಟ್ಟು
 ಸಂಖ್ಯೆ ಶೇಕಡಾ ಸಂಖ್ಯೆ ಶೇಕಡಾ ಸಂಖ್ಯೆ ಶೇಕಡಾ ಸಂಖ್ಯೆ ಶೇಕಡಾ
ಪರಿಶಿಷ್ಟರು/ದಲಿತರು 31.15 80.22 3.73 9.58 3.96 10.20 38.83 100.00
ಶಿಷ್ಟರು 85.34 63.64 19.07 14.22 29.68 22.14 134.9 100.00
ಒಟ್ಟು 116.49 67.37 22.79 13.18 33.64 19.45 172.92 100.00

ಟಿಪ್ಪಣಿ : ಈ ವಿವರಗಳನ್ನು 1991 ಕ್ಕೆ ಸೀಮಿತಗೊಳಿಸಿಕೊಳ್ಳಲಾಗಿದೆ. ದುಡಿಮೆಗಾರರ ವಲಯವಾರು ಹಂಚಿಕೆಯ 2001 ರ ಜನಗಣತಿ ವಿವರಗಳು ಈ ಪ್ರಕಾರದಲ್ಲಿ ದೊರೆಯುತ್ತಿಲ್ಲ.

ಅರ್ಥಶಾಸ್ತ್ರ ಮತ್ತು ಅಭಿವೃದ್ಧಿ ಸಿದ್ಧಾಂತಗಳಲ್ಲಿ ಪ್ರತಿಪಾದಿತವಾಗುತ್ತಿರುವ ಪ್ರಮೇಯವೆಂದರೆ ಯಾವ ಆರ್ಥಿಕತೆಯಲ್ಲಿ ದುಡಿಮೆಗಾರ ವರ್ಗ ಅಧಿಕವಾಗಿ ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿರುವುದೋ ಅಲ್ಲಿ ಆರ್ಥಿಕ ದುಸ್ಥಿತಿ ತೀವ್ರವಾಗಿರುತ್ತದೆ ಎಂಬುದಾಗಿದೆ5. ಇಡೀ ಕರ್ನಾಟಕವನ್ನೇ ತೆಗೆದುಕೊಂಡರೆ ಪ್ರಾಥಮಿಕ ವಲಯದ ಅವಲಂಬನೆ ಅಗಾಧವಾಗಿದೆ. ಆದರೆ ಈ ಅವಲಂಬನೆಯ ಪ್ರಮಾಣವು ಶಿಷ್ಟರು ಮತ್ತು ಪರಿಶಿಷ್ಟರ ನಡುವೆ ಭಿನ್ನವಾಗಿದೆ. ಪರಿಶಿಷ್ಟರಿಗೆ ಸಂಬಂಧಿಸಿದಂತೆ ಪ್ರಾಥಮಿಕ ವಲಯದ ಅವಲಂಬನೆ ಶೇ.80.22 ರಷ್ಟಿದ್ದರೆ ದ್ವಿತೀಯ ಮತ್ತು ತೃತೀಯ ವಲಯಗಳ ಅವಲಂಬನೆ ಕೇವಲ ಶೇ 19.78. ಆದರೆ ಶಿಷ್ಟರಿಗೆ ಸಂಬಂಧಿಸಿದಂತೆ ದುಡಿಮೆಗಾರರು ಪ್ರಾಥಮಿಕ ವಲಯವನ್ನು ಬಿಟ್ಟು ದ್ವಿತೀಯ ಹಾಗೂ ತೃತೀಯ ವಲಯಗಳಿಗೆ ನುಗ್ಗುತ್ತಿದ್ದಾರೆ. ಇವರಲ್ಲಿ ಪ್ರಾಥಮಿಕೇತರ ವಲಯಗಳ ಅವಲಂಬನೆ ಶೇ 36.36.

ಸರ್ವೇಸಾಮಾನ್ಯವಾಗಿ ತಿಳಿದಿರುವಂತೆ ಪ್ರಾಥಮಿಕ ವಲಯದಲ್ಲಿ ತಲಾ ಉತ್ಪನ್ನದ ಪ್ರಮಾಣವು ಪ್ರಾಥಮಿಕೇತರ ವಲಯದಲ್ಲಿನ ತಲಾ ಪ್ರಮಾಣಕ್ಕಿಂತ ಕಡಿಮೆ ಇರುತ್ತದೆ6. ಈ ಕಾರಣದಿಂದಾಗಿ ಪ್ರಾಥಮಿಕ ವಲಯವನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರ ಜೀವನ ಮಟ್ಟವು ಪ್ರಾಥಮಿಕೇತರ ವಲಯಗಳನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರ ಜೀವನ ಮಟ್ಟಕ್ಕಿಂತ ಕಡಿಮೆಯಿರುತ್ತದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ 1995-96 ರಲ್ಲಿ ಪ್ರಾಥಮಿಕ ವಲಯದಲ್ಲಿನ ತಲಾ ಉತ್ಪನ್ನ (ಚಾಲ್ತಿ ಬೆಲೆಗಳಲ್ಲಿ)ರೂ 2700. ಆದರೆ ಪ್ರಾಥಮಿಕೇತರ ವಲಯದಲ್ಲಿನ ತಲಾ ಉತ್ಪನ್ನ ರೂ 10,247. ದುಡಿಮೆಯ ರಾಚನಿಕ ಸ್ವರೂಪದ ಶಿಷ್ಟ-ಪರಿಶಿಷ್ಟ ನೆಲೆಗಳನ್ನು ಗುರುತಿಸುವುದರ ಮೂಲಕ ಸಮಾಜದ ಯಾವ ವರ್ಗ ಪ್ರಾಥಮಿಕೇತರ ವಲಯವನ್ನು ಪ್ರವೇಶಿಸುತ್ತಿದೆ ಮತ್ತು ಅಧಿಕ ಪ್ರಮಾಣದ ತಲಾ ಉತ್ಪನ್ನವನ್ನು ಪಡೆಯುತ್ತಿದೆ ಎಂಬುದನ್ನು ಹಿಡಿದಿಡಬಹುದಾಗಿದೆ.

ಅಭಿವೃದ್ಧಿಯನ್ನು ಅಖಂಡವಾದಿ ನೆಲೆಯಲ್ಲಿ ಪರಿಭಾವಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಬಿಡಿ ಬಿಡಿಯಾಗಿ ಪೃಥಕ್ಕರಿಸಿದಾಗ ನಮಗೆ ಆರ್ಥಿಕತೆಯಲ್ಲಿನ ಅಸಮಾನತೆಯ ಸೂಕ್ಷ್ಮ ನೆಲೆಗಳ ದರ್ಶನವಾಗುತ್ತದೆ. ಅಸ್ಪೃಶ್ಯತೆ, ತಾರತಮ್ಯ, ಮಡಿ-ಮೈಲಿಗೆ, ಶೋಷಣೆಗಳಿಂದಾಗಿ ಪರಿಶಿಷ್ಟರು ಅಕ್ಷರ ಸಂಪತ್ತಿನಿಂದ ವಂಚಿತರಾಗಿದ್ದಾರೆ. ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಕಾರಣದಿಂದಾಗಿ ಪ್ರಾಥಮಿಕೇತರ ವಲಯವನ್ನು ಹೆಚ್ಚು ಹೆಚ್ಚಾಗಿ ಪ್ರವೇಶಿಸಲು ಅವರಿಗೆ ಸಾಧ್ಯವಿಲ್ಲವಾಗಿದೆ. ಜಾಗತೀಕರಣವು ಸಮಾಜದಲ್ಲಿ ಆಳವಾಗಿ ಬೇರೂರಿರುವ ತಾರತಮ್ಯ-ಅಸಮಾನತೆಗಳನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯನ್ನು ಇಲ್ಲಿ ಗುರುತಿಸಬಹುದಾಗಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ, ಉದ್ದಿಮೆಗೆ ಸಂಬಂಧಿಸಿದಂತೆ ಸರ್ಕಾರವು ಹಿಂದೆ ಸರಿಯುತ್ತಿರುವುದರಿಂದಾಗಿ ಮತ್ತು ಖಾಸಗಿ ವಲಯದ ವರ್ಧನೆಯಿಂದಾಗಿ, ಮಾರ್ಕೆಟೀಕರಣದಿಂದಾಗಿ ಪರಿಶಿಷ್ಟರು ಶಿಕ್ಷಣ ಪಡೆಯುವುದು ದುರ್ಲಭವಾಗುತ್ತಿದೆ. ಶಿಕ್ಷಣದಿಂದ ವಂಚಿತರಾದ ಪರಿಶಿಷ್ಟರು ತೀವ್ರಗತಿಯಲ್ಲಿ ವರ್ಧಿಸುತ್ತಿರುವ ಸೇವಾವಲಯವನ್ನು ಪ್ರವೇಶಿಸುವುದು ಕಷ್ಟವಾಗುತ್ತದೆ. ಜಾಗತೀಕರಣ, ಉದಾರವಾದ, ಖಾಸಗೀಕರಣಗಳು ಸಮಾಜದಲ್ಲಿ ಲಾಗಾಯ್ತಿನಿಂದ ಹರಿದುಕೊಂಡು ಬರುತ್ತಿರುವ ಅಸಮಾನತೆ-ತಾರತಮ್ಯಗಳನ್ನು ಗಟ್ಟಿಗೊಳಿಸುತ್ತವೆಯೇ ವಿನಾ ನಾಶಮಾಡುತ್ತಿಲ್ಲ.

ಅಭಿವೃದ್ಧಿಗೆ ಸಂಬಂಧಿಸಿದ ಪರಿಶಿಷ್ಟ ಮತ್ತು ಶಿಷ್ಟರ ನಡುವಿನ ಅಸಮಾನತೆಯನ್ನು ಅಮರ್ತ್ಯ್ ಸೆನ್  ‘ಅನೂಚಾನವಾಗಿ ಹರಿದುಕೊಂಡು ಬಂದ ಸಂಗತಿಗಳು’ ಎಂದು ಗುರುತಿಸುತ್ತಾರೆ(2002:356). ಅವರ ಪ್ರಕಾರ ಜನತಾಂತ್ರಿಕ ಸಂಸ್ಥೆಗಳ ಸಾಧನೆಯು ವಿಸ್ತೃತವಾದ ಸಾಮಾಜಿಕ ಸ್ಥಿತಿಗತಿಗಳನ್ನು ಅವಲಂಬಿಸಿದೆ. ಭಾರತದಲ್ಲಿನ ಪ್ರಜಾಪ್ರಭುತ್ವದ ವೈಫಲ್ಯಕ್ಕೂ ಮತ್ತು ಅನೂಚಾನವಾಗಿ ಹರಿದುಕೊಂಡು ಬಂದಿರುವ ಸಾಮಾಜಿಕ ಅಸಮಾನತೆಗಳಿಗೂ ನಡುವೆ ಸಂಬಂಧವಿದೆ7. ದುಡಿಮೆಯ ರಾಚನಿಕ ಸ್ವರೂಪದ ಶಿಷ್ಟ-ಪರಿಶಿಷ್ಟ ನೆಲೆಗಳನ್ನು ಗತಕಾಲದಿಂದ ಹರಿದುಕೊಂಡು ಬಂದಿರುವ ಸಾಮಾಜಿಕ ಅಸಮಾನತೆಯ ಪರಿಣಾಮವೆಂದು ನೋಡಬೇಕಾಗುತ್ತದೆ.

3.2 ಕೃಷಿ ಅವಲಂಬನೆ : ಶಿಷ್ಟ-ಪರಿಶಿಷ್ಟ ನೆಲೆಗಳು:

ಶ್ರಮ ಮತ್ತು ಭೂಮಿಗಳ ನಡುವಿನ ಸಂಬಂಧವನ್ನು ಗುರುತಿಸದೆ ಕೃಷಿ ಅಭಿವೃದ್ಧಿಯ ಶಿಷ್ಟ-ಪರಿಶಿಷ್ಟ ನೆಲೆಗಳನ್ನು ಹಿಡಿದಿಡುವುದು ಸಾಧ್ಯವಿಲ್ಲ. ದುಡಿಮೆಯ ಅವಕಾಶ ಬಹಳಷ್ಟು ಮಟ್ಟಿಗೆ ಭೂಮಾಲೀಕರ ಸಾಮರ್ಥ್ಯವನ್ನು ಅವಲಂಬಿಸಿದೆ. ಶ್ರಮಶಕ್ತಿಯ ಮೇಲಿನ ಭೂಮಾಲೀಕರ ಅಧಿಕಾರವು ಸಮಾಜದಲ್ಲಿನ ಜಾತಿ ಸಂಬಂಧಿ-ಜಾತಿ ತಾರತಮ್ಯಗಳನ್ನು ಅವಲಂಬಿಸಿದೆ. ದುಡಿಮೆಗಾರರ ಕೃಷಿ ಅವಲಂಬನೆಗೂ ಮತ್ತು ಅಸ್ಪೃಶ್ಯತೆಗೂ ಸಂಬಂಧವನ್ನು ಗುರುತಿಸಬಹುದಾಗಿದೆ. ಈ ಸಂಬಂಧದ ಮೂಲಕ ಬಂಡವಾಳ ಸಂಚಯನವು ಹೇಗೆ ಶಿಷ್ಟರ-ಭೂಮಾಲೀಕರ ಪರವಾಗಿ ರೂಪುಗೊಳ್ಳುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಕೋಷ್ಟಕ-5ರಲ್ಲಿ ದುಡಿಮೆಗಾರರ ಕೃಷಿ ಅವಲಂಬನೆಯ ಶಿಷ್ಟ-ಪರಿಶಿಷ್ಟ ನೆಲೆಗಳನ್ನು ಗುರುತಿಸಲಾಗಿದೆ.

ಕೋಷ್ಟಕ 5

ಅಭಿವೃದ್ಧಿಯ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳು : ದುಡಿಮೆಗಾರರ ಸ್ವರೂಪ 1991 ಮತ್ತು 2001ವಿವರಗಳು           

ವಿವರಗಳು ರಾಜ್ಯದ ಒಟ್ಟು ಮೊತ್ತ. ಪರಿಶಿಷ್ಟ/ದಲಿತರು ಶಿಷ್ಟ/ದಲಿತೇತರರು
1991 2001 1991 2001 1991 2001
1.ಒಟ್ಟು ಪ್ರಧಾನ ದುಡಿಮೆಗಾರರು ಒಟ್ಟು 172.92 193.57 38.83 44.41 134.09 149.16
50.07 54.13 13.97 15.21 36.10 |39.92
ಪು 122.85 139.44 24.86 249.20 93.99 110.24
2.ಕೃಷಿ ಅವಲಂಬನೆ(ಸಾಗುವಳಿದಾರರು+ದಿನಗೂಲಿ ಕೃಷಿ  ದುಡಿಮೆಗಾರರು) ಒಟ್ಟು 109.16 (63.13) 99.70 (51.51) 29.02 (74.74) 28.24 (63.59) 80.14 (55.77) 71.46 (47.91)
37.76  (75.41) 33.41 (61.72) 11.55 (82.68) 10.71 (70.41) 26.21 (72.60) 22.70 (58.32
ಪು 71.40  (58.12) 66.29 (47.54) 17.47 (70.27) 17.53 (60.03) 53.93 (55.04) 48.76 (44.23)

ಟಿಪ್ಪಣಿ : ಆವರಣದಲ್ಲಿ ಕೊಟ್ಟಿರುವ ಅಂಕಿಗಳು ಸಂಬಂಧಿಸಿದ ಒಟ್ಟು ಮೊತ್ತದ ಶೇಕಡ ಪ್ರಮಾಣವನ್ನು ಸೂಚಿಸುತ್ತವೆ.

ಈ ಕೋಷ್ಟಕದಲ್ಲಿ ದುಡಿಮೆಗಾರರ ಕೃಷಿ ಅವಲಂಬನೆ ಪ್ರಮಾಣವನ್ನು ತೋರಿಸಿದೆ. ಕೃಷಿ ಅವಲಂಬನೆಯನ್ನು ಕೋಷ್ಟಕದಲ್ಲಿ ಲಿಂಗವಾರು ಹಾಗೂ ಜಾತಿವಾರು ತೋರಿಸಲಾಗಿದೆ. ಈ ವಿವರಗಳನ್ನು ಎರಡು ಕಾಲಘಟ್ಟಗಳಿಗೆ (1991 ಮತ್ತು 2001) ಸಂಬಂಧಿಸಿದಂತೆ ನೀಡಲಾಗಿದೆ. ಈ ಕೋಷ್ಟಕದ ವಿವರಗಳನ್ನು ಹೀಗೆ ಸಂಕ್ಷಿಪ್ತವಾಗಿ ಸಂಗ್ರಹಿಸಬಹುದಾಗಿದೆ.

* ಕರ್ನಾಟಕದ ಒಟ್ಟು ಪ್ರಧಾನ ದುಡಿಮೆಗಾರರಲ್ಲಿ ಕೃಷಿ ಅವಲಂಬನೆಯು 1991ರಲ್ಲಿ ಶೇ 63.13 ಇದ್ದುದು 2001ರಲ್ಲಿ ಅದು ಶೇ 51.51 ಕ್ಕಿಳಿದಿದೆ. ಮಹಿಳೆಯರು ಮತ್ತು ಪುರುಷರಿಗೆ ಸಂಬಂಧಿಸಿದಂತೆಯೂ ಇದು ಕುಸಿದಿದೆ.

*  ಎರಡೂ ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಕೃಷಿ ಅವಲಂಬನೆಯ ಪ್ರಮಾಣವು ಸಾಪೇಕ್ಷವಾಗಿ ಅತ್ಯಧಿಕ ಮಟ್ಟದಲ್ಲಿದೆ.

*  ಶಿಷ್ಟ ದುಡಿಮೆಗಾರರ ಕೃಷಿ ಅವಲಂಬನೆಯು ಪರಿಶಿಷ್ಟರಿಗಿಂತ ಕಡಿಮೆಯಿದೆ.

*  ಶಿಷ್ಟರು ಮತ್ತು ಪರಿಶಿಷ್ಟರು-ಎರಡೂ ಗುಂಪುಗಳನ್ನು ತೆಗೆದುಕೊಂಡರೆ ಕೃಷಿ ಅವಲಂಬನೆಯು ಪುರುಷರಿಗಿಂತ ಮಹಿಳೆಯರಲ್ಲಿ ಅಧಿಕವಾಗಿದೆ. ಇತ್ತೀಚಿನ 2001ರ ಜನಗಣತಿಯಂತೆ ಕೃಷಿ ಅವಲಂಬನೆ ಅತ್ಯಧಿಕ ಶೇ 70.41 ಪರಿಶಿಷ್ಟ ಮಹಿಳೆಯರಲ್ಲಿದೆ. ಅತ್ಯಂತ ಕನಿಷ್ಟ ಕೃಷಿ ಅವಲಂಬನೆ 2001ರಲ್ಲಿ ಶೇ 44.23 ಶಿಷ್ಟ ಪುರುಷರಲ್ಲಿ ಕಂಡುಬರುತ್ತದೆ.

*  ಕೃಷಿ ಅವಲಂಬನೆ ಪ್ರಮಾಣವು ಶಿಷ್ಟ ಹಾಗೂ ಪರಿಶಿಷ್ಟ ಇಬ್ಬರಿಗೂ ಸಂಬಂಧಿಸಿದಂತೆ 1991ರಿಂದ 2001ರ ಕಾಲಾವಧಿಯಲ್ಲಿ ಕಡಿಮೆಯಾಗುತ್ತ ನಡೆದಿದೆ.

*  ಈ ಕೋಷ್ಟಕದಲ್ಲಿ (5) ಕೃಷಿ ಅವಲಂಬನೆಯನ್ನು ಸಾಗುವಳಿದಾರರು ಮತ್ತು ದಿನಗೂಲಿ ಕೃಷಿ ದುಡಿಮೆಗಾರರನ್ನು ಕೂಡಿಸಿ ಲೆಕ್ಕ ಹಾಕಲಾಗಿದೆ.

ಕೋಷ್ಟಕ-6ರಲ್ಲಿ ಕೃಷಿ ಅವಲಂಬನೆಯ ಶಿಷ್ಟ-ಪರಿಶಿಷ್ಟ ನೆಲೆಗಳನ್ನು ಬೇರೊಂದು ರೂಪದಲ್ಲಿ ನೀಡಲಾಗಿದೆ. ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಪರಿಶಿಷ್ಟರ ಹಾಗೂ ಶಿಷ್ಟ ದುಡಿಮೆಗಾರರ ಪ್ರಮಾಣವನ್ನು ಲೆಕ್ಕ ಹಾಕಲಾಗಿದೆ. ಕೃಷಿ ಅವಲಂಬನೆಯು ಶಿಷ್ಟರಿಗಿಂತ ಸಾಪೇಕ್ಷವಾಗಿ ಪರಿಶಿಷ್ಟರಲ್ಲಿ ಅಧಿಕವಾಗಿದೆ ಎಂಬುದನ್ನು ತೋರಿಸಲು ಪ್ರಸ್ತುತ ಕೋಷ್ಟಕವನ್ನು(5) ರೂಪಿಸಲಾಗಿದೆ. ಎರಡು ಕಾಲಘಟ್ಟಕ್ಕೆ ಸಂಬಂಧಿಸಿದಂತೆ (1991 ಮತ್ತು 2001) ಕೃಷಿಯನ್ನು ಅವಲಂಬಿಸಿರುವ ದುಡಿಮೆಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಶಿಷ್ಟರಲ್ಲೂ ಮತ್ತು ಪರಿಶಿಷ್ಟರಲ್ಲೂ ಕಂಡುಬರುತ್ತದೆ. ಕುತೂಹಲದ ಸಂಗತಿಯೆಂದರೆ ರಾಜ್ಯದ ಒಟ್ಟು ಕೃಷಿ ಅವಲಂಬಿತ ದುಡಿಮೆಗಾರರಲ್ಲಿ ಪರಿಶಿಷ್ಟರ ಶೇಕಡಾ ಪ್ರಮಾಣವು 1991 ರಿಂದ 2001ರ ಅವಧಿಯಲ್ಲಿ ಅಧಿಕಗೊಂಡಿದೆ. ಅದು 1991ರಲ್ಲಿ ಶೇ 26.58ರಷ್ಟಿದ್ದುದು 2001ರಲ್ಲಿ ಶೇ 28.32ಕ್ಕೇರಿದೆ. ಕೃಷಿಯನ್ನು ಅವಲಂಬಿಸಿಕೊಂಡಿರುವ ಪರಿಶಿಷ್ಟರ ಸಂಖ್ಯೆ 1991ರಲ್ಲಿ 29.02 ಲಕ್ಷವಿದ್ದುದು 2001ರಲ್ಲಿ 28.24 ಲಕ್ಷಕ್ಕೆ ಇಳಿದಿದೆ. ಆದರೆ ರಾಜ್ಯದ ಒಟ್ಟು ಅವಲಂಬಿತ ದುಡಿಮೆಗಾರರಲ್ಲಿ ಪರಿಶಿಷ್ಟರ ಪ್ರಮಾಣವು ಶೇ 26.58ರಿಂದ ಶೇ 28.32ಕ್ಕೇರಿದೆ. ಕೃಷಿಯನ್ನು ಅವಲಂಬಿಸಿಕೊಂಡಿರುವ ರಾಜ್ಯದ ಒಟ್ಟು ದುಡಿಮೆಗಾರರಲ್ಲಿ 1991 ರಿಂದ 2001ರ ಅವಧಿಯಲ್ಲಿ ಕಡಿಮೆಯಾದದ್ದು 9.46ಲಕ್ಷ. ಇದರಲ್ಲಿ ಪರಿಶಿಷ್ಟ ಪಾಲು ಕೇವಲ 0.78ಲಕ್ಷವಾದರೆ ಶಿಷ್ಟರ ಪಾಲು 8.68ಲಕ್ಷ. ಶಿಷ್ಟರಿಗೆ ಸಂಬಂಧಿಸಿದಂತೆ ಕೃಷಿ ಅವಲಂಬನೆಯಲ್ಲಿ ಕಡಿಮೆಯಾಗಿರುವ ಪ್ರಮಾಣವು ಪರಿಶಿಷ್ಟರಲ್ಲಿ ಕಡಿಮೆಯಾಗಿರುವ ಪ್ರಮಾಣಕ್ಕಿಂತ ತೀವ್ರ ಅಧಿಕವಾಗಿದೆ.

ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಪರಿಶಿಷ್ಟರ ಪ್ರಮಾಣ ಎರಡೂ ಕಾಲಘಟ್ಟಗಳಲ್ಲಿ ಸರಿಸುಮಾರು ಶೇ 23ರಷ್ಟಿದೆ. ಆದರೆ ಕೃಷಿಯನ್ನು ನಂಬಿಕೊಂಡಿರುವ ದುಡಿಮೆಗಾರರಲ್ಲಿ ಪರಿಶಿಷ್ಟರ ಪ್ರಮಾಣ 1991ರಲ್ಲಿ ಶೇ 26.58ರಷ್ಟಿದ್ದುದು 2001ರಲ್ಲಿ ಶೇ 28.32ರಷ್ಟಾಗಿದೆ. ಒಟ್ಟು ದುಡಿಮೆಗಾರರಲ್ಲಿ ಪರಿಶಿಷ್ಟರು ಪಡೆದಿರುವ ಪಾಲಿಗಿಂತ ಹೆಚ್ಚಿನ ಪಾಲನ್ನು ಅವರು ಕೃಷಿ ಅವಲಂನೆಗೆ ಸಂಬಂಧಿಸಿದಂತೆ ಪಡೆದಿದ್ದಾರೆ. ಇದು ಏನನ್ನು ಸೂಚಿಸುತ್ತದೆ?

ಕೋಷ್ಟಕ 6.

ಕೃಷಿ ಅವಲಂಬನೆ : ಏರಿಕೆಯಾಗುತ್ತಿರುವ ಪರಿಶಿಷ್ಟರ ಪ್ರಮಾಣ 1991 ಮತ್ತು 2001

ವಿವರಗಳು ರಾಜ್ಯದ ಒಟ್ಟು ಮೊತ್ತ  ಪರಿಶಿಷ್ಟ /ದಲಿತರು  ಶಿಷ್ಯ /ದಲಿತರು
1991 2001 1991 2001 1991 2001
ಕೃಷಿ ಅವಲಂಬನೆ ಒಟ್ಟು 109.16 99.70 29.02 (26.58) 28.24 (28.32) 80.14 (74.42) 71.46 (71.68)
(ಸಾಗುವಳಿದಾರರು+ದಿನಗೂಲಿ ಕೃಷಿ ದುಡಿಮೆಗಾರರ) 37.76 33.41 11.71 (30.59) 10.71 (32.06) 26.21 (69.41) 22.70 (67.94)
ಪು 71.40 66.29 17.53 (24.47) 17.53 (26.44) 53.93 (75.53) 48.76 (73.56)

 ಟಿಪ್ಪಣಿ : ಆವರಣದಲ್ಲಿ ಕೊಟ್ಟಿರುವ ಶೇಕಡ ಪ್ರಮಾಣವು ರಾಜ್ಯದ ಒಟ್ಟು ಮೊತ್ತದಲ್ಲಿನ ಪಾಲನ್ನು ಸೂಚಿಸುತ್ತದೆ.

ಕೋಷ್ಟಕ 5 ಮತ್ತು 6 ಕೃಷಿಯ ಅವಲಂಬನೆಯ ಒತ್ತಡ ಪರಿಶಿಷ್ಟರ ಮೇಲೆ ಅಧಿಕವಾಗಿರುವುದನ್ನು ತೋರಿಸಿವೆ. ಕೃಷಿ ಅವಲಂಬನೆಯು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅಧಿಕವಾಗಿರುವುದರ ಇಂಗಿತಾರ್ಥವೇನು? ಕೃಷಿ ಸಂಬಂಧಿಸಿದ ದುಡಿಮೆಯ ಸಂಕೋಲೆಯಲ್ಲಿ ಪರಿಶಿಷ್ಟರು ಮುಳುಗಿರುವುದನ್ನು ಇದು ತೋರಿಸುತ್ತಿದೆ.

ಪರಿಶಿಷ್ಟರ ಕೃಷಿ ಅವಲಂಬನೆಯು ಭೂಮಾಲೀಕತ್ವಕ್ಕಿಂತ ಭಿನ್ನವಾಗಿ ಕೂಲಿ, ಜೀತ ಮುಂತಾದ ರೂಪದಲ್ಲಿರಲು ಸಾಧ್ಯ. ಆದರೆ ಶಿಷ್ಟರಿಗೆ ಸಂಬಂಧಿಸಿದಂತೆ ಕೃಷಿ ಅವಲಂಬನೆಯು ಭೂಮಾಲೀಕತ್ವ ಸ್ವರೂಪದಲ್ಲಿರುತ್ತದೆ. ಕೃಷಿ ಕೂಲಿಯ ಅವಲಂಬನೆಯು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅಧಿಕವಾಗಿದೆ. ಏಕೆಂದರೆ ಪರಿಶಿಷ್ಟರಲ್ಲಿ ಕೃಷಿ ಅವಲಂಬಿಸಿಕೊಂಡಿರುವ ದುಡಿಮೆಗಾರರಲ್ಲಿ ಸಾಗುವಳಿದಾರರ ಅಥವಾ ಭೂಮಾಲೀಕರ ಪ್ರಮಾಣವು ಶೇ 43.27ರಷ್ಟಾದರೆ ಶಿಷ್ಟರಲ್ಲಿ ಭೂಮಾಲೀಕರ ಪ್ರಮಾಣ ಶೇ 69.48. ಈ ಚರ್ಚೆಯ ತಥ್ಯವೆಂದರೆ ಕೃಷಿಗೆ ಸಂಬಂಧಿಸಿದಂತೆ ಬೆವರು, ಕಣ್ಣೀರು ಮತ್ತು ರಕ್ತ ಹರಿಸಿ ದುಡಿಯುವ ಮಂದಿ ಪರಿಶಿಷ್ಟರಾದರೆ ಅದರ ಫಲವನ್ನು ಅಧಿಕವಾಗಿ ಶಿಷ್ಟರು ಅನುಭವಿಸುತ್ತಿದ್ದಾರೆ. ಮುಂದಿನ ಭಾಗದಲ್ಲಿ (3.3) ಬಡತನದ ತೀವ್ರತೆ ಹಾಗೂ ಒತ್ತಡವು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅಧಿಕವಾಗಿರುವುದನ್ನು ಕುರಿತಂತೆ ಚರ್ಚಿಸಲಾಗಿದೆ.

3.3. ದಿನಗೂಲಿ ದುಡಿಮೆಗಾರರು

ಕರ್ನಾಟಕದಲ್ಲಿ ಇಂದು ಸರಿಸುಮಾರು 38 ಲಕ್ಷ ದುಡಿಮೆಗಾರರ ಬದುಕು ದಿನಗೂಲಿಯ ಮೇಲೆ ನಿಂತಿದೆ. ಕೃಷಿಗೆ ಸಂಬಂಧಿಸಿದಂತೆ ದಿನಗೂಲಿಯ ಸ್ವರೂಪವು ಜೀತವಾಗಿರಲೂಬಹುದು. ಜೀತಪದ್ಧತಿಯನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಅದು ಬೇರೊಂದು ರೂಪದಲ್ಲಿ ದುಡಿಮೆಗಾರರನ್ನು ಕಾಡುತ್ತಿರಬಹುದು. ಈಗಾಗಲೆ ತಿಳಿಸಿರುವಂತೆ ಕೃಷಿಯನ್ನು ಅವಲಂಬಿಸಿಕೊಂಡಿರುವವರಲ್ಲಿ ಸಾಗುವಳಿಗಾರರ ಪ್ರಮಾಣವು ದಿನಗೂಲಿಗಳ ಪ್ರಮಾಣಕ್ಕಿಂತ ಶಿಷ್ಟರಲ್ಲಿ ಅಧಿಕವಾಗಿದ್ದರೆ, ಪರಿಶಿಷ್ಟರಲ್ಲಿ ದಿನಗೂಲಿಗಳ ಪ್ರಮಾಣವು ಸಾಗುವಳಿದಾರರ ಪ್ರಮಾಣಕ್ಕಿಂತ ಅಧಿಕವಾಗಿದೆ. ಕೃಷಿಯನ್ನು ಅವಲಂಬಿಸಿಕೊಂಡಿರುವ ಪರಿಶಿಷ್ಟರಲ್ಲಿ ದಿನಗೂಲಿಗಳ ಪ್ರಮಾಣ ಶೇ 56.73ರಷ್ಟಿದ್ದರೆ ಸಾಗುವಳಿದಾರರ ಪ್ರಮಾಣ ಕೇವಲ ಶೇ 43.27. ಆದರೆ ಕೃಷಿಯನ್ನು ಅವಲಂಬಿಸಿಕೊಂಡಿರುವ ಶಿಷ್ಟರಲ್ಲಿ ಸಾಗುವಳಿದಾರರ ಪ್ರಮಾಣ ಶೇ 69.48ರಷ್ಟಿದ್ದರೆ ದಿನಗೂಲಿಗಳ ಪ್ರಮಾಣ ಕೇವಲ ಶೇ30.52.

ಪರಿಶಿಷ್ಟರಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರಲ್ಲಿ ಸಾಗುವಳಿಗಾರರಿಗಿಂತ ದಿನಗೂಲಿಗಳ ಸಂಖ್ಯೆ ಅಧಿಕವಾಗಿರುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಾರದು. ದಿನಗೂಲಿಗಳ ಸಂಖ್ಯೆ ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅಧಿಕವಾಗಿರುವುದಕ್ಕೂ ಅಸ್ಪೃಶ್ಯತೆಗೂ ಸಂಬಂಧವಿದೆ. ಭೂಮಾಲೀಕತ್ವದಿಂದ ಪರಿಶಿಷ್ಟಜಾತಿಯ ಜನರನ್ನು ಬಹಿಷ್ಕರಿಸಲಾಗಿತ್ತು. ಗತಕಾಲದ ಆಚರಣೆಯ ಪರಿಣಾಮವನ್ನು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಇಂದಿಗೂ ಕಾಣಬಹುದಾಗಿದೆ. ಒಟ್ಟು ದುಡಿಮೆಗಾರರನ್ನು ತೆಗೆದುಕೊಂಡಾಗ ಮಹಿಳೆಯರ ಪ್ರಮಾಣವು ಕೇವಲ ಶೇ 27.76. ಆದರೆ ದಿನಗೂಲಿಗಳನ್ನು ತೆಗೆದುಕೊಂಡರೆ ಮಹಿಳೆಯರ ಪ್ರಮಾಣ ಶೇ 48.16. ದಿನಗೂಲಿ ಕೃಷಿ ದುಡಿಮೆಗಾರರ ಶಿಷ್ಟ-ಪರಿಶಿಷ್ಟ ನೆಲೆಗಳನ್ನು ಕೋಷ್ಟಕ -7 ರಲ್ಲಿ ನೋಡಬಹುದು.’

ಕೋಷ್ಟಕ -7

ದಿನ ಗೂಲಿ ದುಡಿಮೆಗಾರರು-ಶಿಷ್ಟ-ಪರಿಶಿಷ್ಟ ನೆಲೆಗಳು.1999 ಮತ್ತು 2001

ಕ್ರಮ ಸಂಖ್ಯೆ ವಿವರಗಳು ಒಟ್ಟು ಮಹಿಳೆಯರಯ ಪುರುಷರು
1991 2001 1991 2001 1991 2001
1. ಒಟ್ಟು ರಾಜ್ಯದ ದಿನಗೂಲಿದುಡಿಮೆಗಾರರು. 50.00 37.83 24.88 18.22 25.12 19.16
 2. ಪರಿಶಿಷ್ಟ ದಿನಗೂಲಿ ದುಡಿಮೆಗಾರರು. 18.79 (37.58) 16.02 (42.35) 9.25 (37.18) 7.63 (41.88) 9.54 (37.98) 8.39 (42.78)
 3. ಶಿಷ್ಟ ದಿನಗೂಲಿ ದುಡಿಮೆಗಾರರು. 31.21 (62.42) 21.81 (57.65) 15.63 (62.82) 10.59 (58.12) 15.58 (62.02) 11.22 (57.22)

ಟಿಪ್ಪಣಿ : ಆವರಣದಲ್ಲಿರುವ ಅಂಕಿಗಳು ಒಟ್ಟು ರಾಜ್ಯ ಮೊತ್ತದ ಶೇಕಡ ಪ್ರಮಾಣವನ್ನು ಸೂಚಿಸುತ್ತವೆ.

ಪರಿಶಿಷ್ಟರಿಗೆ ಸಂಬಂಧಿಸಿದಂತೆ ದಿನಗೂಲಿಗಳ ಪ್ರಮಾಣವು ಸಾಗುವಳಿದಾರರಿಗಿಂತ ಅಧಿಕವೆಂಬುದು ಸ್ಪಷ್ಟವಾಗಿದೆ. ಶಿಷ್ಟರಿಗೆ ಸಂಬಂಧಿಸಿದಂತೆ ಪ್ರತಿ ಸಾಗುವಳಿದಾರರಿಗೆ 0.44ರಷ್ಟು ದಿನಗೂಲಿಗಳಿದ್ದರೆ(2001)ಪರಿಶಿಷ್ಟರಲ್ಲಿ ಇದರ ಪ್ರಮಾಣ 1.32ರಷ್ಟಿದೆ. ಇದು ಪರಿಶಿಷ್ಟರ ಭೂಹೀನತೆಯನ್ನು ತೋರಿಸುತ್ತದೆ.

ಕೋಷ್ಟಕ-7 ಅನೇಕ ರೀತಿಯಿಂದ ಕುತೂಹಲಕಾರಿಯಾಗಿದೆ. ಕೋಷ್ಟಕದಲ್ಲಿ ಆವರಣದೊಳಗಿನ ಅಂಕಿಗಳು ಒಟ್ಟು ದಿನಗೂಲಿ ದುಡಿಮೆಗಾರರಲ್ಲಿ ಶಿಷ್ಟರ ಮತ್ತು ಪರಿಶಿಷ್ಟರ ಪಾಲನ್ನು ತೋರಿಸುತ್ತವೆ. ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟರು ಎಷ್ಟು ಪಾಲು ಪಡೆದಿದ್ದಾರೋ ಅದಕ್ಕಿಂತ ಅಧಿಕವಾದ ಪಾಲನ್ನು ದಿನಗೂಲಿಗಳಿಗೆ ಸಂಬಂಧಿಸಿದಂತೆ ಪಡೆದಿದ್ದಾರೆ. ಆದರೆ ಜನಸಂಖ್ಯೆಯಲ್ಲಿ (2001) ಶೇಕಡ 77.19ರಷ್ಟು ಪಾಲು ಪಡೆದಿರುವ ಶಿಷ್ಟರು ದಿನಗೂಲಿಗಳಲ್ಲಿ ಮಾತ್ರ ಶೇ 57.65ರಷ್ಟು ಪಾಲು ಪಡೆದಿದ್ದಾರೆ. ದಿನಗೂಲಿ ದುಡಿಮೆ ಮಾಡುವ ಪ್ರಮೇಯ ಶಿಷ್ಟರಿಗೆ ಸಂಬಂಧಿಸಿದಂತೆ ಅಧಿಕವಾಗಿಲ್ಲ. ಆದರೆ ಪರಿಶಿಷ್ಟರಿಗೆ ದಿನಗೂಲಿಯು ಅನಿವಾರ್ಯವಾಗಿದೆ. ಏಕೆಂದರೆ ದುಡಿಮೆಯ ವಿಕಲ್ಪಗಳು ಪರಿಶಿಷ್ಟರಿಗೆ ಕಡಿಮೆ.’

ದಿನಗೂಲಿಗಳಾಗಿ ದುಡಿಯುವ ಪರಿಶಿಷ್ಟರು ವರ್ಗ ಸಂಬಂಧದ ನೆಲೆಯಲ್ಲಿ ಸಂಘಟಿತರಾಗುವುದು ಸಾಧ್ಯವಾಗಿಲ್ಲ. ನಮ್ಮ ಸಮಾಜದ ಸಂದರ್ಭದಲ್ಲಿ ಅತ್ಯಂತ ಅಸಂಘಟಿತ ವರ್ಗವೆಂದರೆ ದಿನಗೂಲಿಗಳು. ಏಕೆಂದರೆ ದಿನಗೂಲಿಗಳು ಅನೇಕ ಸಂಗತಿಗಳ ಆಧಾರದ ಮೇಲೆ ವಿಘಟಿತರಾಗಿದ್ದಾರೆ. ಇಲ್ಲಿ ಕಂಡುಬರುತ್ತಿರುವ ಒಂದು ಆಶಾದಾಯಕ ಸಂಗತಿಯೆಂದರೆ ಜಾತಿಯ ಆಧಾರದ ಮೇಲೆ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳ ಜನರು ಸಂಘಟಿತವಾಗುತ್ತಿದ್ದಾರೆ. ಈ ಜಾತಿ ಆಧರಿತ ದುಡಿಯುವ ವರ್ಗದ ಸಂಘಟನೆಗಳನ್ನು ವರ್ಗಸಂಘರ್ಷಕ್ಕೆ ಪೂರಕವಲ್ಲವೆಂದು ತಳ್ಳಿ ಹಾಕಲು ಸಾಧ್ಯವಿಲ್ಲ. ಏಕೆಂದರೆ ಜಾತಿ ಪ್ರಜ್ಞೆ ಮತ್ತು ವರ್ಗ ಪ್ರಜ್ಞೆಗಳು ನಮ್ಮ ಸಮಾಜದ ಸಂದರ್ಭದಲ್ಲಿ ಪರಸ್ಪರ ಪೂಕರವಾಗಿರುವುದನ್ನು ಗುರುತಿಸಬಹುದಾಗಿದೆ. ಬಂಡವಾಳ ಮತ್ತು ಶ್ರಮ ಮಾರುಕಟ್ಟೆಯು ಜಾತಿ ಸಂಬಂಧದಿಂದ ಕೂಡಿರುವಾಗ, ದುಡಿಮೆಗಾರರು ಜಾತಿ ಆಧಾರದ ಮೇಲೆ ಸಂಘಟಿತರಾಗುವುದು ಹೋರಾಟಕ್ಕೆ ಅನಾನುಕೂಲಕರವೆನ್ನಲು ಸಾಧ್ಯವಿಲ್ಲ. ಪರಿಶಿಷ್ಟರಲ್ಲಿ ಕಂಡುಬರುತ್ತಿರುವ ಸಂಘಟನೆ, ರಾಜಕೀಯ ಪಕ್ಷಗಳಲ್ಲಿ ಸಹಭಾಗಿತ್ವ, ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗವಹಿಸುತ್ತಿರುವುದು ಮುಂತಾದ ಸಂಗತಿಗಳಿಂದಾಗಿ ಪರಿಶಿಷ್ಟರಿಗೆ ಅನೇಕ ಹಕ್ಕುಗಳು ದೊರೆಯುವಂತಾಗಿವೆ.

ದಿನಗೂಲಿಗಳು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಯೆಂದರೆ ಅಭದ್ರತೆ, ದಿನಗೂಲಿಗಳು ದಿನವೂ ದುಡಿಮೆಯನ್ನು ಎದುರು ನೋಡಬೇಕಾಗಿರುತ್ತದೆ. ದಿನಗೂಲಿಗಳಿಗೆ ಸಂಬಂಧಿಸಿದಂತೆ ತಾತ್ಕಾಲಿಕ ನಿರುದ್ಯೋಗ ಮತ್ತು ಉದ್ಯೋಗ ಎರಡೂ ಏಕಕಾಲದಲ್ಲಿ ಸಂಭವಿಸುತ್ತಿರುತ್ತವೆ. ಉದ್ಯಮಪತಿಗಳು ದುಡಿಮೆಗಾರರನ್ನು ಅಭದ್ರ ಸ್ಥಿತಿಯಲ್ಲಿಡಲು ಪ್ರಯತ್ನಿಸುತ್ತಾರೆ. ಇದರಿಂದ ಕೂಲಿಯನ್ನು ಅತ್ಯಂತ ಕೆಳಮಟ್ಟದಲ್ಲಿ ಕಾಯ್ದುಕೊಳ್ಳಬಹುದು8. ಗ್ರಾಮೀಣ ಕೃಷಿ ಕ್ಷೇತ್ರದಲ್ಲಿ ದುಡಿಮೆಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳೂ ಮೌಖಿಕವಾಗಿರುತ್ತವೆ. ಈ ಮೌಖಿಕ ಒಪ್ಪಂದಗಳು ಭೂಮಾಲೀಕರಿಗೆ ಅನುಕೂಲಕರವಾಗಿರುತ್ತವೆ ವಿನಾ ದಿನಗೂಲಿಗಳಿಗಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೃಷಿಗೆ ಸಂಬಂಧಿಸಿದ ದಿನಗೂಲಿಗಳಿಗೆ ಯಾವುದೇ ಬಗೆಯ ಕಾನೂನುಗಳ ರಕ್ಷಣೆಯಿಲ್ಲ. ಸಾಮಾಜಿಕ ಭದ್ರತೆ ಎಂಬುದಿಲ್ಲ. ದಣಿಗಳ/ಭೂಮಾಲೀಕರ ಕೃಪೆ ದೊರೆಯಬಹುದು. ಆದರೆ ಇಂತಹ ಕೃಪೆಯು ದಿನಗೂಲಿಗಳಿಗೆ ಸಂಕೋಲೆಯಾಗಿರುತ್ತದೆ ವಿನಾ ಅನುಕೂಲಕರವಾಗಿರುವುದಿಲ್ಲ.

3.4. ದುಡಿಮೆಯ ಲಿಂಗ ಸಂಬಂಧಿ ಸ್ವರೂಪ

ಮಹಿಳೆಯರ ಸಂತಾನೋತ್ಪತ್ತಿ ದುಡಿಮೆಯು ಶ್ರಮಶಕ್ತಿಯ ಪೂರೈಕೆಯ ಮೂಲವಾಗಿದೆ. ಬಡತನದ, ನಿರುದ್ಯೋಗದ, ಅಸ್ವಸ್ಥತೆಯ, ವೃದ್ಧಾಪ್ಯದ ಸಂದರ್ಭದಲ್ಲಿ ಮಹಿಳೆಯರ ಸಂಗೋಪನಾ ದುಡಿಮೆಯು ಪುರುಷ ಶ್ರಮಶಕ್ತಿಯ ಆರೈಕೆಯ ಮೂಲವಾಗಿದೆ. ಸಂತಾನೋತ್ಪತ್ತಿ ದುಡಿಮೆಯು ಪುರುಷ ಶ್ರಮಶಕ್ತಿಯ ಆರೈಕೆಯ ಮೂಲವಾಗಿದೆ. ಸಂತಾನೋತ್ಪತ್ತಿ ದುಡಿಮೆ ಹಾಗೂ ಸಂಗೋಪನೆ ದುಡಿಮೆಗಳನ್ನು ನಿರ್ವಹಿಸುತ್ತಿರುವ ಹಾಗೂ ಮನೆಯ ಹೊರಗಿನ ಉತ್ಪಾದನಾ ದುಡಿಮೆಗಳನ್ನು ನಿರ್ವಹಿಸುತ್ತಿರುವ ಮಹಿಳೆಯರಿಗೆ ಮನೆಯ ಒಳಗಿನ ಉತ್ಪಾದನಾ ದುಡಿಮೆಯಿಂದ ವಿನಾಯಿತಿಯೇನೂ ದೊರೆಯುವುದಿಲ್ಲ. ಈ ಮಾತು ಬಡ ಕುಟುಂಬಗಳು, ಪರಿಶಿಷ್ಟ ಕುಟುಂಬಗಳ ಮಹಿಳೆಯರಿಗೆ ಹೆಚ್ಚಾಗಿ ಅನ್ವಯವಾಗುತ್ತದೆ. ಮಹಿಳೆಯರು ನಿರ್ವಹಿಸುವ ಮೂರು ಬಗೆಯ ದುಡಿಮೆಗಳಲ್ಲಿ ಮೊದಲಿನ ಎರಡೂ ದುಡಿಮೆಗಳಿಗೆ ಯಾವುದೇ ಬಗೆಯ ಸಂಭಾವನೆಯಿರುವುದಿಲ್ಲ. ಸಂತಾನೋತ್ಪತ್ತಿ ದುಡಿಮೆ ಹಾಗೂ ಸಂಗೋಪನಾ ದುಡಿಮೆಗಳನ್ನು ಲಿಂಗ ನಿರ್ದಿಷ್ಟ ದುಡಿಮೆಗಳೆಂದು ವರ್ಗೀಕರಿಸಲಾಗಿದೆ. ಮಹಿಳೆಯರು ನಿರ್ವಹಿಸಬೇಕಾದ ದುಡಿಮೆ ಇವುಗಳಾಗಿವೆ. ಈ ಕಾರಣದಿಂದಾಗಿ ಉತ್ಪಾದನಾ ದುಡಿಮೆಯು ಮಹಿಳೆಯರಿಗೆ ಪೂರಕವಾದುದೆಂದು ಅದು ಬಿಡುವಿನ ವೇಳೆಯಲ್ಲಿ ನಡೆಸುವ ಶ್ರಮವೆಂದು ಪರಿಗಣಿಸಲಾಗಿದೆ. ಮಹಿಳೆಯರ ದುಡಿಮೆ ಮಾರುಕಟ್ಟೆಯು ಸಂಪೂರ್ಣವಾಗಿ ಅನೌಪಚಾರಿಕವಾಗಿದೆ ಮತ್ತು ವಿಘಟಿತವಾಗಿದೆ.

ಮಹಿಳೆಯರ ದುಡಿಮೆಯನ್ನು ಲಿಂಗ ಸಂಬಂಧಿ ಶ್ರಮ ವಿಭಜನೆಯ ನೆಲೆಯಲ್ಲಿ ಪರಿಭಾವಿಸಿಕೊಳ್ಳಬೇಕಾಗುತ್ತದೆ. ಮನೆಯ ಹೊರಗೆ ಉತ್ಪಾದನಾ ದುಡಿಮೆಯ ಲಿಂಗ ನಿರ್ದಿಷ್ಟತೆಯು ಸಡಿಲವಾಗುತ್ತಿದೆ. ಆದರೆ ಕುಟುಂಬದ ಚೌಕಟ್ಟಿನಲ್ಲಿ ಮಾತ್ರ ಅದು ಹೆಚ್ಚು ಗಟ್ಟಿಯಾಗಿ ಮುಂದುವರಿದಿದೆ. ಇದರಿಂದಾಗಿ ಮಹಿಳೆಯರ ಮನೆಯ ಹೊರಗಿನ ಉತ್ಪಾದನಾ ದುಡಿಮೆಯನ್ನು ಪ್ರಾಸಂಗಿಕವೆಂದೂ ತಿಳಿಯಲಾಗಿದೆ. ಮಹಿಳೆಯರು ಉತ್ಪಾದನಾ ದುಡಿಮೆಗೆ ಸಂಬಂಧಿಸಿದಂತೆ ಬೆವರು ಹರಿಸುತ್ತಿದ್ದಾರೆ. ಸಂಗೋಪನಾ ದುಡಿಮೆ ಅಥವಾ ಕೌಟುಂಬಿಕ ದುಡಿಮೆಗೆ ಸಂಬಂಧಿಸಿದಂತೆ ಕಣ್ಣೀರು ಹರಿಸುತ್ತಿದ್ದಾರೆ. ಸಂತಾನೋತ್ಪತ್ತಿ ದುಡಿಮೆಯಲ್ಲಿ ರಕ್ತ ಹರಿಸುತ್ತಿದ್ದಾರೆ9. ಆದರೆ ದುಡಿಮೆಗೆ ತಕ್ಕ ಪ್ರತಿಫಲ ಅವರಿಗೆ ದೊರೆಯುತ್ತಿಲ್ಲ. ಲಿಂಗಶಾಹಿ ವಿಚಾರ ಪ್ರಣಾಳಿಕೆಯಿಂದಾಗಿ ಅವರು ಹೆಚ್ಚಿನ ಶೋಷಣೆಗೆ ಒಳಗಾಗಿದ್ದಾರೆ.

ಪರಿಶಿಷ್ಟ ಮಹಿಳೆಯರ ದುಡಿಮೆ.

ದುಡಿಮೆಯ ಒತ್ತಡವು ಪರಿಶಿಷ್ಟ ಮಹಿಳೆಯರಿಗೆ ಅಧಿಕವಾಗಿದೆ. ಕರ್ನಾಟಕದ ಒಟ್ಟು ದುಡಿಮೆಗಾರರಲ್ಲಿ ಶಿಷ್ಟರಿಗೆ ಸಂಬಂಧಿಸಿದಂತೆ ಮಹಿಳಾ ದುಡಿಮೆಗಾರರ ಪ್ರಮಾಣ ಕೇವಲ ಶೇ.26.09. ಆದರೆ ಪರಿಶಿಷ್ಟರಲ್ಲಿ ಮಹಿಳಾ ದುಡಿಮೆಗಾರರ ಪ್ರಮಾಣ ಶೇ 34.25. ಈಗಾಗಲೇ ತಿಳಿಸಿರುವಂತೆ ಪರಿಶಿಷ್ಟರಿಗೆ ಸಂಬಂಧಿಸಿದಂತೆ ದುಡಿಮೆಯ ವ್ಯಾಪ್ತಿ ಸೀಮಿತವಾದುದು. ಅಲ್ಲಿ ವಿಕಲ್ಪಗಳು ತುಂಬಾ ಕಡಿಮೆ. ಪರಿಶಿಷ್ಟ ಮಹಿಳೆಯರ ದುಡಿಮೆ ಅವಕಾಶಗಳು ತುಂಬಾ ಸೀಮಿತವಾಗಿವೆ. ಲಿಂಗಶಾಹಿ ವಿಚಾರ ಪ್ರಣಾಳಿಕೆಯಿಂದಾಗಿ ಕೌಟುಂಬಿಕ ದುಡಿಮೆಯನ್ನು ಅವರು ನಿರ್ವಹಿಸಬೇಕಾಗಿದೆ. ಅಸ್ಪೃಶ್ಯತೆ ಮತ್ತು ಬಡತನದ ಕಾರಣವಾಗಿ ಅವರು ಮನೆಯ ಹೊರಗೆ ಕೂಲಿಯನ್ನು ಮಾಡಬೇಕಾಗಿದೆ. ಗ್ರಾಮೀಣ ಪ್ರದೇಶದ ಪರಿಶಿಷ್ಟ ಪುರುಷ ದುಡಿಮೆಗಾರರು ಇಂದು ದುಡಿಮೆಯನ್ನು ಅರಸಿಕೊಂಡು ನಗರ ಪ್ರದೇಶಕ್ಕೆ ವಲಸೆ ಹೋಗುವುದು ಕಂಡುಬರುತ್ತದೆ. ಸಂಚಾರ-ಸಂಚಲನೆಯೆಂಬುದು ಪುರುಷ ದುಡಿಮೆಗಾರರಿಗೆ ಸಮಸ್ಯೆಯಲ್ಲ. ಆದರೆ ಕೌಟುಂಬಿಕ ದುಡಿಮೆಯ ಜವಾಬ್ದಾರಿ ಹಾಗೂ ಮಕ್ಕಳ ಮತ್ತು ವೃದ್ಧರ ಪಾಲನೆಯ ಜವಾಬ್ದಾರಿಯು ಮಹಿಳೆಯರ ಮೇಲಿರುವುದರಿಂದ ಮಹಿಳಾ ದುಡಿಮೆಗಾರರು ವಲಸೆ ಹೋಗುವುದು ಸಾಧ್ಯವಾಗುವುದಿಲ್ಲ. ಇದಕ್ಕಿಂತ ಮುಖ್ಯವಾಗಿ ಸಂಚಾರ-ಸಂಚಲನೆಯು ಮಹಿಳಾ ದುಡಿಮೆಗಾರರಿಗೆ ಸುಲಭದ ಸಂಗತಿಯಲ್ಲ.

ಅಸ್ಪೃಶ್ಯತೆಯು ಮಹಿಳೆಯರ ಅಭಿವೃದ್ಧಿಗೆ ತುಂಬಾ ಮಾರಕವಾದ ಸಂಗತಿಯಾಗಿ ಬಿಟ್ಟಿದೆ. ಈ ಸಂಗತಿಯು ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಪ್ರಧಾನ ಸ್ಥಾನವನ್ನು ಪಡೆದುಕೊಂಡಿಲ್ಲ. ಪರಿಶಿಷ್ಟ ಮಹಿಳಾ ದುಡಿಮೆಗಾರರ ಅಭಿವೃದ್ಧಿಯನ್ನು ಸರ್ಕಾರವು ಪ್ರತ್ಯೇಕವಾಗಿ ವಿಶೇಷವಾಗಿ ನಿರ್ವಹಿಸುವ ಅಗತ್ಯವಿದೆ10. ಪುರುಷಶಾಹಿಯು ಪರಿಶಿಷ್ಟರಿಗೆ ಮತ್ತು ಶಿಷ್ಟರಿಗೆ ಸಮಾನವಾಗಿದೆ. ಆದರೆ ಇದರ ಪರಿಣಾಮಗಳು ಪರಿಶಿಷ್ಟ ಮಹಿಳೆಯರಿಗೆ ಹೆಚ್ಚು ಆಘಾತಕಾರಿಯಾಗಿವೆ. ಕೋಷ್ಠಕ 8ರಲ್ಲಿ ಮಹಿಳೆಯರ ದುಡಿಮೆಯ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳನ್ನು ತೋರಿಸಲಾಗಿದೆ. ದುಡಿಮೆಯ ಒತ್ತಡವು ಶಿಷ್ಟ ಮಹಿಳೆಯರಿಗಿಂತ ಪರಿಶಿಷ್ಟ ಮಹಿಳೆಯರಿಗೆ ಅಧಿಕವಾಗಿರುವುದನ್ನು ಅಲ್ಲಿ ನೋಡಬಹುದಾಗಿದೆ. ಶಿಷ್ಟ ಮಹಿಳೆಯರಿಗೆ ಸಂಬಂಧಿಸಿದಂತೆ ಭೂರಹಿತ ಕೃಷಿ ದಿನಗೂಲಿ ಮಹಿಳೆಯರ ಪ್ರಮಾಣವು ಪರಿಶಿಷ್ಟರಲ್ಲಿ ಶೇ.50.16ರಷ್ಟಿದ್ದರೆ ಶಿಷ್ಟ ಮಹಿಳೆಯರಲ್ಲಿ ಅದರ ಪ್ರಮಾಣ ಕೇವಲ ಶೇ.27.21. ಕೃಷಿ ಅವಲಂಬನೆಯ ಪ್ರಮಾಣದಲ್ಲೂ ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅದು ಅಧಿಕವಾಗಿದೆ. ಪರಿಶಿಷ್ಟ ಮಹಿಳಾ ದುಡಿಮೆಗಾರರಲ್ಲಿ (15.21ಲಕ್ಷ) ಸರಿಸುಮಾರು ಶೇ.70.41ರಷ್ಟು ಮಹಿಳಾ ದುಡಿಮೆಗಾರರು ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ. ಕೃಷಿ ಅವಲಂಬನೆ ಶಿಷ್ಟ ಮಹಿಳಾ ದುಡಿಮೆಗಾರರಿಗೆ ಸಂಬಂಧಿಸಿದಂತೆ ಶೇ.58.32ರಷ್ಟಿದೆ.

ಕೋಷ್ಟಕ 8

ಮಹಿಳಾ ದುಡಿಮೆಗಾರರ ಶಿಷ್ಟ-ಪರಿಶಿಷ್ಟ ಸ್ವರೂಪ : 1991 ಮತ್ತು 2001.

ಕ್ರಮ ಸಂಖ್ಯೆ ವಿವರಗಳು ಒಟ್ಟು ಪರಿಶಿಷ್ಟ /ದಲಿತರು ಶಿಷ್ಟರು /ದಲಿತೇತರರು
1991 2001 1991 2001 1991 2001
1. ಒಟ್ಟು ಮಹಿಳಾ ದುಡಿಮೆಗಾರರು 50.07 54.13 13.97 15.21 36.10 38.92
2. ಒಟ್ಟು ಮಹಿಳಾ  ಸಾಗುವಳಿದಾರರು 12.88 (25.72 16.19 (29.91) 2.30 (13.97) 3.08 (20.25) 10.58 (29.92) 12.11 (31.12)
3. ಒಟ್ಟು ಮಹಿಳಾ  ಭೂ ರಹಿತ ಕೃಷಿ ದಿನಗೂಲಿಗಳು  24.88 (49.69)  18.22 (33.66) 9.25 (66.21)  7.63 (50.16) 15.63 (43.30) 10.59 (27.21)
4. ಒಟ್ಟು ಕೃಷಿ  ಅವಲಂಬಿತ ದುಡಿಮೆಗಾರರು 37.76 (75.09) 33.41 (61.72 11.55 (82.68) 10.71 (70.41) 26.21 (72.60) 22.70 (58.32)

ಟಿಪ್ಪಣಿ : ಆವರಣದಲ್ಲಿನ ಅಂಕಿಗಳು ಒಟ್ಟು ಮೊತ್ತದ ಶೇಕಡ ಪ್ರಮಾಣವನ್ನು ಸೂಚಿಸುತ್ತವೆ.

ಇಲ್ಲಿನ ಚರ್ಚೆಯ ಮೂಲ ತಥ್ಯವೆಂದರೆ ಸಾಮಾಜಿಕ ಏಣಿಶ್ರೇಣಿಗಳಲ್ಲಿ ಅತ್ಯಂತ ಅಂಚಿಗೆ ದೂಡಲ್ಪಟ್ಟವರು ಹಾಗೂ ವಂಚಿತರು ಅಂದರೆ ಪರಿಶಿಷ್ಟ ಮಹಿಳೆಯರು ಎಂಬುದಾಗಿದೆ. ಆದ್ದರಿಂದ ಅಭಿವೃದ್ಧಿಯನ್ನು ಪರಿಶಿಷ್ಟ ಮಹಿಳೆಯರ ನೆಲೆಯಿಂದ ಪರಿಭಾವಿಸಿಕೊಳ್ಳಬೇಕಾಗುತ್ತದೆ. ಮತ್ತು ಅವರ ನೆಲೆಯಿಂದ ಅದನ್ನು ಕಟ್ಟಬೇಕಾಗುತ್ತದೆ. ಅಂತ್ಯೋದಯವೆನ್ನುವುದು ಇದನ್ನೇ ಸೂಚಿಸುತ್ತದೆ.

ಭಾಗ 4

ಅಸ್ಪೃಶ್ಯತೆ : ಅಭಿವೃದ್ಧಿಗೆ ತೊಡಿಸಿದ ಸಂಕೋಲೆ.

ಅಸ್ಪೃಶ್ಯತೆ ಕುರಿತಂತೆ  ನಾವು ಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ ನಮ್ಮ ಸಮಾಜದ ಸಂದರ್ಭದಲ್ಲಿ ಅದು ಯಾರ ಸಮಸ್ಯೆ ಎಂಬುದಾಗಿದೆ. ಅದು ಎಷ್ಟರಮಟ್ಟಿಗೆ ಪರಿಶಿಷ್ಟರ ಸಮಸ್ಯೆ? ಬಾಬಾಸಾಹೇಬ್ ಅಂಬೇಡ್ಕರ್ ಸರಿಯಾಗಿ ಗುರುತಿಸಿರುವಂತೆ ಶಿಷ್ಟರು ಪರಿಶಿಷ್ಟರನ್ನು ಅಸ್ಪೃಶ್ಯರೆಂದು ಪರಿಭಾವಿಸಿಕೊಂಡಿರುವುದರಿಂದ ಅಂತಹ ಸಮಸ್ಯೆ ನಮ್ಮ ಸಮಾಜದಲ್ಲಿದೆ. ಸಮಾಜ ಹಾಗೂ ಜನರಲ್ಲಿ ‘ತಾವು ಶ್ರೇಷ್ಠರು’ ಮತ್ತು ‘ತಮ್ಮ ಶ್ರೇಷ್ಠತೆ ಹುಟ್ಟಿನಿಂದ ಪ್ರಾಪ್ತವಾದುದು’ ಎಂಬ ನಂಬಿಕೆ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಅಸ್ಪೃಶ್ಯತೆ ಇರುತ್ತದೆ. ಅಸ್ಪೃಶ್ಯತೆಯೆಂಬ ಸಂಸ್ಥೆಯು ಅನೇಕ ರೂಪಗಳಲ್ಲಿ ಕಂಡುಬರುತ್ತದೆ. ಅದರ ಆಚರಣೆಯನ್ನು ಶಾಸನಗಳ ಮೂಲಕ ನಿಷೇಧಿಸಲಾಗಿದೆ. [ಅಸ್ಪೃಶ್ಯತಾ (ಅಪರಾಧಗಳು) ಶಾಸನ : 1955, ನಾಗರಿಕ ಹಕ್ಕುಗಳ ರಕ್ಷಣೆ (ತಿದ್ದುಪಡಿ ಶಾಸನ : 1976, ಪ.ಜಾ/ಪ.ವರ್ಗ ಮೇಲಿನ ದೌರ್ಜನ್ಯ ನಿವಾರಣಾ ಶಾಸನ : 1989 ಮುಂತಾದವು] ಶಾಸನಗಳಿಂದ – ಸಂವಿಧಾನದಿಂದ ಅಸ್ಪೃಶ್ಯತೆಯಂತಹ ಸಂಸ್ಥೆಯನ್ನು ನಾಶಮಾಡುವುದು ಸಾಧ್ಯವಿಲ್ಲ. ಅದನ್ನು ನೇರವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಎದುರಿಸಬೇಕಾಗುತ್ತದೆ.11.

ಸ್ವಾತಂತ್ರ್ಯನಂತರ ಭಾರತದಲ್ಲಿ ಬದಲಾವಣೆಗಳಾಗಿವೆ. ಖ್ಯಾತ ಸಮಾಜಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ್ ಅವರು ‘ಕ್ರಾಂತಿಯೊಂದರ ಪ್ರಕ್ರಿಯೆಯಲ್ಲಿ ನಾವು ಬದುಕುತ್ತಿದ್ದೇವೆ’ ಎಂದು ಉದ್ಗಾರ ತೆಗೆದಿದ್ದಾರೆ 1992-12. ಅನೂಚಾನವಾಗಿ ಹರಿದುಕೊಂಡು ಬರುತ್ತಿರುವ ಸಾಮಾಜಿಕ- ಆರ್ಥಿಕ  ಅಸಮಾನತೆಗಳು ಬದಲಾಗುತ್ತಿಲ್ಲವೆಂದು ಹೇಳುವುದು ಸಾಧ್ಯವಿಲ್ಲವೆಂದು ಅಮರ್ತ್ಯ್ ಸೆನ್ ಬರೆಯುತ್ತಾರೆ.(2002:356) ಈ ಬದಲಾವಣೆಯು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಅರ್ಥಪೂರ್ಣವಾಗಿಲ್ಲವೆಂಬುದನ್ನು ಮನೋಹರ್ ಯಾದವ್ ದಾಖಲಿಸುತ್ತಾರೆ(2003). ಅವರ ಪ್ರಕಾರ ಕ್ರಾಂತಿ ಪ್ರಕ್ರಿಯೆಯ ಫಲಗಳನ್ನು ಅಧಿಕವಾಗಿ ಉನ್ನತ ಜಾತಿಗಳು ಗುತ್ತಿಗೆ ಹಿಡಿದುಕೊಂಡುಬಿಟ್ಟಿವೆ. ಈ ಬಗ್ಗೆ ಅವರೊಂದು ಪ್ರಶ್ನೆಯನ್ನು ಕೇಳುತ್ತಾರೆ. ರಾಜ್ಯದ ಯಾವುದೇ ವಾಣಿಜ್ಯ, ವ್ಯಾಪಾರ, ಉದ್ದಿಮೆ ವಲಯಗಳಲ್ಲಿ ಯಾಕೆ ಅಸ್ಪೃಶ್ಯರು ಪ್ರವೇಶಿಸಿಲ್ಲ? ಜಾತಿಯ ಕಾರಣವಾಗಿ ಪರಿಶಿಷ್ಟರಿಗೆ ಕೃಷಿಯೇತರ ಕ್ಷೇತ್ರಗಳನ್ನು ಪ್ರವೇಶಿಸುವುದು ಕಷ್ಟವಾಗಿದೆ (ಬಾರ್ಬರಾ ಹ್ಯಾರಿಸ್ ವೈಟ್ (2004:31) ದುಡಿಮೆಯ ವ್ಯಾಪ್ತಿ ತುಂಬಾ ಸೀಮಿತವಾಗಿರುವುದರಿಂದಾಗಿ, ದುಡಿಮೆಗೆ ಸಂಬಂಧಿಸಿದಂತೆ ವಿಕಲ್ಪಗಳು ಕಡಿಮೆಯಿರುವುದರಿಂದಾಗಿ ಪರಿಶಿಷ್ಟರು ಕೃಷಿಯನ್ನು, ದಿನಗೂಲಿಯನ್ನು ಹೆಚ್ಚಾಗಿ ಅವಲಂಬಿಸಿಕೊಂಡಿದ್ದಾರೆ. ಕಸುಬು ಮತ್ತು ಜಾತಿಗಳ ನಡುವಿನ ಸಂಬಂಧ ಕುಸಿದುಬಿದ್ದಿದೆ ಎಂಬ ವಾದವನ್ನು ಎಂ.ಎನ್.ಶ್ರೀನಿವಾಸ್ ಮಾಡುತ್ತಾರೆ. ಆದರೆ ಇದನ್ನು ಪರಿಶಿಷ್ಟರಿಗೆ ಸಂಬಂಧಿಸಿದಂತೆ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಅಸ್ಪೃಶ್ಯರು ಸಮಾಜದಲ್ಲಿ ಶಿಷ್ಟರಿಗಿಂತ ಎರಡುಪಟ್ಟು ಅಧಿಕವಾಗಿ ಕೃಷಿಯನ್ನು, ಕೂಲಿಯನ್ನು ಅವಲಂಬಿಸಿಕೊಳ್ಳಬೇಕಾದ ಮತ್ತು ಬಡತನವನ್ನು ಅನುಭವಿಸಬೇಕಾದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅತ್ಯಂತ ಕನಿಷ್ಟ ಕೂಲಿಗೆ ಪರಿಶಿಷ್ಟ ಮಹಿಳೆಯರು ದುಡಿಯಬೇಕಾದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪರಿಶಿಷ್ಟ ದುಡಿಮೆಗಾರರಲ್ಲಿ ಮುಕ್ಕಾಲು ಪಾಲು ಜನರು ಬಡತನದ ರೇಖೆಯ ಕೆಳಗೆ ಜೀವನ ದೂಡುತ್ತಿದ್ದಾರೆ.

ಭಾಗ- 5

ಮರಣ ಪ್ರಮಾಣ : ಶಿಷ್ಟ ಪರಿಶಿಷ್ಟ – ನೆಲೆಗಳು.

ಜನಗಣತಿ ವರದಿಗಳಲ್ಲಿ ಮರಣ ಪ್ರಮಾಣಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ದೊರೆಯುತ್ತದೆ. ಇದನ್ನು ಅಮರ್ತ್ಯ್ ಸೆನ್ ಆರೋಗ್ಯ ಸೂಚಿಯನ್ನಾಗಿ ಬಳಸುತ್ತಾರೆ. ಮರಣ ಪ್ರಮಾಣ ಮತ್ತು ಜನರ ಜೀವನ ಮಟ್ಟಗಳ ನಡುವೆ ವಿಲೋಮ ಸಂಬಂಧವಿರುವುದನ್ನು ತಜ್ಞರು ಗುರುತಿಸಿದ್ದಾರೆ. ಆದರೆ ಮರಣ ಪ್ರಮಾಣಕ್ಕೆ ಸಂಬಂಧಿಸಿದ ಸಂಗತಿಗಳು ಜಾತಿ ರಚನೆಗೆ ಅನುಗುಣವಾಗಿ ಪ್ರಯುಕ್ತವಾಗುತ್ತಿರುವುದು ಕುತೂಹಲಕಾರಿ ಸಂಗತಿಯಾಗಿದೆ.

ಕೋಷ್ಟಕ-9

ಶಿಶು ಮರಣ, ಮಕ್ಕಳ ಮರಣ ಮತ್ತು ಐದುವರ್ಷದ ಮಕ್ಕಳ ಮರಣ ಪ್ರಮಾಣ : 1998-1999

ಕ್ರಮ ಸಂಖ್ಯೆ ಸಾಮಾಜಿಕ ಗುಂಪುಗಳು ಶಿಶುಮರಣ ಪ್ರಮಾಣ ಮಕ್ಕಳ ಮರಣ ಪ್ರಮಾಣ ಐದು ವರ್ಷದ ಮಕ್ಕಳ ಮರಣ ಪ್ರಮಾಣ
1. ಪರಿಶಿಷ್ಟ ಜಾತಿ 70 37 105
2. ಪರಿಶಿಷ್ಟ ಪಂಗಡ 85 39 121
3. ಹಿಂದುಳಿದ ವರ್ಗಗಳು  (ಒಬಿಸಿ) 61 19 78
4. ಇತರೆ 56 14 70

ಮೂಲ ಕರ್ನಾಟಕ: ಸರ್ಕಾರ 2004, ಆರ್ಥಿಕ ಸಮೀಕ್ಷೆ : 2003-2004 ಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಬೆಂಗಳೂರು ಪು. 162.

ಜನರ ಆರೋಗ್ಯಸೂಚಿಯಾದ ಮರಣ ಪ್ರಮಾಣವು ಜಾತಿ-ವರ್ಗಗಳ ನಡುವೆ ಭಿನ್ನವಾಗಿರುವುದನ್ನು ಕೋಷ್ಟಕ 8ರಲ್ಲಿ ತೋರಿಸಲಾಗಿದೆ. ಪರಿಶಿಷ್ಟ ಜನರ ಬದುಕಿನ ಗುಣಮಟ್ಟವು ಶಿಷ್ಟ ಜನರ ಬದುಕಿನ ಗುಣಮಟ್ಟಕ್ಕಿಂತ ಕೆಳಗಿರುವುದು ಇದರಿಂದ ಸ್ಪಷ್ಟವಾಗಿದೆ. ಮರಣ ಪ್ರಮಾಣಕ್ಕೆ ಸಂಬಂಧಿಸಿದ ಮೂರು ಸೂಚಿಗಳಲ್ಲೂ ಪರಿಶಿಷ್ಟರ ಸ್ಥಿತಿಯು ಉಳಿದೆರಡು ವರ್ಗಗಳಿಗಿಂತ ಕೆಳಗಿರುವುದು ಆತಂಕಕಾರಿಯಾಗಿದೆ. ಐದು ವರ್ಷದ ಮಕ್ಕಳ ಮರಣ ಪ್ರಮಾಣವು ಪರಿಶಿಷ್ಟರ ಎರಡು ಗುಂಪಿನಲ್ಲೂ ನೂರಕ್ಕಿಂತ ಅಧಿಕವಾಗಿರುವುದು ಆರೋಗ್ಯಕ್ಕೆ ಸಂಬಂಧಿಸಿದ ಜಾತಿ-ವರ್ಗಗಳ ನಡುವಿನ ಅಸಮಾನತೆಯನ್ನು ಸೂಚಿಸುತ್ತದೆ.

ಪರಿಶಿಷ್ಟರು ಆರೋಗ್ಯ ಭಾಗ್ಯದಿಂದ ವಂಚಿತರಾಗಿದ್ದಾರೆ. ಪ್ರತಿಷ್ಠಿತರು ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಸವಲತ್ತು-ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಅಭಿವೃದ್ಧಿ, ಸಾಕ್ಷರತೆ, ಆರೋಗ್ಯ ಮತ್ತು ದುಡಿಮೆಗೆ ಸಂಬಂಧಿಸಿದ ಸಂಗತಿಗಳು ಜಾತಿ ರಚನೆಗನುಗುಣವಾಗಿ ಸಂಭವಿಸುತ್ತಿರುವುದನ್ನು ಪ್ರಸ್ತುತ ಪ್ರಬಂಧದಲ್ಲಿ ಚರ್ಚಿಸಲಾಗಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಜಾತಿ ಸಂಬಂಧಿ ಏಣಿಶ್ರೇಣಿಗಳನ್ನು ಅಭಿವೃದ್ಧಿಯು ಗಟ್ಟಿಗೊಳಿಸುತ್ತಿರುವಂತೆ ಕಾಣುತ್ತದೆ. ಅಭಿವೃದ್ಧಿಯನ್ನು ಕುರಿತ ಸಿದ್ಧಾಂತಗಳು ಇಂತಹ ಸಾಮಾಜಿಕ ಸಂಗತಿಗಳ ಬಗ್ಗೆ ನಿರ್ಲಿಪ್ತವಾಗಿಬಿಟ್ಟರೆ ಅಸಮಾನತೆಗಳನ್ನು ತೊಡೆದು ಹಾಕುವುದು ಸಾಧ್ಯವಿಲ್ಲ. ಅಭಿವೃದ್ಧಿಯು ಏಣಿಶ್ರೇಣಿಯಲ್ಲಿ ಕೆಳಸ್ತರದಲ್ಲಿರುವ ಪರಿಶಿಷ್ಟರ ಬದುಕಿಗೆ ಅಭಿಮುಖವಾಗಿರಬೇಕಾಗುತ್ತದೆ. ಅಂತಹ ಅಭಿವೃದ್ಧಿ ಪ್ರಣಾಳಿಕೆಯನ್ನು ರೂಪಿಸುವ ಅಗತ್ಯವಿದೆ. ಬಡತನ, ಆಹಾರಭದ್ರತೆ, ಪೌಷ್ಟಿಕತೆ ಮುಂತಾದ ಸಂಗತಿಗಳಿಗೆ ಸಂಬಂಧಿಸಿದಂತೆಯೂ ನಮಗೆ ಮೇಲಿನದಕ್ಕಿಂತ ಭಿನ್ನವಾದ ಚಿತ್ರವೇನೂ ಕಂಡುಬರುವುದಿಲ್ಲ. ಇಂತಹ ಸಾಮಾಜಿಕ ಸಂಕೋಲೆಯಿಂದ (ಉದಾ : ಅಸ್ಪೃಶ್ಯತೆ) ಅಭಿವೃದ್ಧಿಯನ್ನು ಬಿಡುಗಡೆಗೊಳಿದಿದ್ದರೆ ಅದು ಅಂಚಿನಲ್ಲಿರುವವರನ್ನು ತಬ್ಬಿಕೊಳ್ಳುವುದು ಸಾಧ್ಯವಿಲ್ಲ.

ಸಾರಾಂಶ

ಇಡೀ ಪ್ರಬಂಧದಲ್ಲಿ ಅಭಿವೃದ್ಧಿ-ಬಂಡವಾಳ ಸಂಚಯನಗಳು ನಮ್ಮ ಸಮಾಜದ ಸಂದರ್ಭದಲ್ಲಿ ಪರಿಶಿಷ್ಟರಿಗೆ ವಿಮುಖವಾಗಿದ್ದರೆ ಶಿಷ್ಟರಿಗೆ ಅಭಿಮುಖವಾಗಿವೆ ಎಂಬುದನ್ನು ಕುರಿತಂತೆ ಚರ್ಚಿಸಲಾಗಿದೆ. ಯಾವುದನ್ನು ವಿದ್ವಾಂಸರು ಅನೂಚಾನವಾಗಿ ಹರಿದುಕೊಂಡು ಬರುತ್ತಿರುವ ಸಾಮಾಜಿಕ-ಆರ್ಥಿಕ ಅಸಮಾನತೆಗಳು ಎಂದು ಕರೆದಿದ್ದಾರೋ, ಆ ಅಸ್ಪೃಶ್ಯತೆಯ ಆಚರಣೆಯು ಪರಿಶಿಷ್ಟರ ಅಭಿವೃದ್ಧಿಗೆ ಕಂಟಕವಾಗಿ ಪರಿಣಮಿಸಿದೆ. ಈ ಕಂಟಕವನ್ನು ಅಭಿವೃದ್ಧಿಯಿಂದ, ಶಿಕ್ಷಣದಿಂದ, ಶಾಸನಗಳಿಂದ, ಉಪದೇಶದಿಂದ ಪರಿಹರಿಸಬಹುದೆಂದು ನಂಬಿಕೊಂಡು ಬರಲಾಗಿದೆ ಮತ್ತು ಅದೇ ನೆಲೆಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಅದು ತನ್ನಷ್ಟಕ್ಕೆ ತಾನೆ ಪರಿಹಾರವಾಗುವ ಸಂಗತಿಯಲ್ಲ. ಅದನ್ನು ನೇರವಾಗಿ ಎದುರಿಸಬೇಕಾಗುತ್ತದೆ. ಚರಿತ್ರೆಯ ಹುಳುಕುಗಳನ್ನು ಮರೆಮಾಡುವುದರಿಂದ ಪ್ರಯೋಜನವಿಲ್ಲ. ಅದರ ಬಗ್ಗೆ ಪ್ರಜ್ಞಾಪೂರ್ವಕವಾಗಿ ಅನುಸಂಧಾನ ನಡೆಸುವುದರ ಮೂಲಕ ಅದನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಅದರಿಂದ ಬಿಡಿಸಿಕೊಳ್ಳಬಹುದು. ಅದಿಲ್ಲವೆಂದುಕೊಂಡುಬಿಟ್ಟರೆ ಅದು ಇಲ್ಲವಾಗುವುದಿಲ್ಲ. ವಿದ್ವಾಂಸರು ಗುರುತಿಸಿರುವಂತೆ ಅಭಿವೃದ್ಧಿಯೆಂಬುದು, ಅದರ ಸೂಚಿಗಳಾದ ಅಕ್ಷರ, ಆಹಾರ, ಆರೋಗ್ಯ, ಆಶ್ರಯ, ಅಭಯಗಳೆಲ್ಲವೂ ಪರಿಶಿಷ್ಟರಿಗೆ ‘ಅಪರೂಪದ ಸರಕುಗಳಾಗಿ’ ಬಿಟ್ಟಿವೆ (ರೇರ್ ಗೂಡ್ಸ್). ಈ ಹಿನ್ನಲೆಯಲ್ಲಿ ಪ್ರಸ್ತುತ ಪ್ರಬಂಧದಲ್ಲಿ ಸಾಕ್ಷರತೆ ಹಾಗೂ ದುಡಿಮೆಗಳ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ.. ಇದನ್ನೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ‘ಲೈಫ್ ಆಫ್ ಕಾಂಟ್ರಡಿಕ್ಷನ್ಸ್’ ಎಂದು ಕರೆದಿದ್ದಾರೆ. ಅವರು ಜನವರಿ 26,1950ರಂದು ಸಂವಿಧಾನವನ್ನು ಭಾರತಕ್ಕೆ ಅರ್ಪಿಸುವ ಸಂದರ್ಭದಲ್ಲಿ ಗುರುತಿಸಿದ್ದ ಕಾಂಟ್ರಡಿಕ್ಷನ್ಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಅನೇಕ ವಿದ್ವಾಂಸರು ತಿಳಿದುಕೊಂಡಿರುವಂತೆ ಅವು ಪೂರ್ಣವಾಗಿ ಮಾಯವಾಗಿಲ್ಲ. ಈ ದಿಶೆಯಲ್ಲಿ ನಾವು ಮತ್ತಷ್ಟು ಚಿಂತಿಸುವ ಅಗತ್ಯವಿದೆ. ಸಮಾಜದ ಅಂಚಿನಲ್ಲಿರುವ ಪರಿಶಿಷ್ಟರ ನೆಲೆಯಿಂದ ಅಭಿವೃದ್ಧಿಯ ಆರಂಭವಾಗಬೇಕು.

ಟಿಪ್ಪಣಿಗಳು.

1.  ಅಸ್ಪೃಶ್ಯತೆ, ಅಂಬೇಡ್ಕರ್, ಸಂವಿಧಾನ, ಅಭಿವೃದ್ಧಿ ಮುಂತಾದ ವಿಷಯಗಳನ್ನು ಕುರಿತ ಚರ್ಚೆಗೆ ನೋಡಿ ವಲೇರಿಯನ್ ರೋಡ್ರಿಗಸ್(ಸಂ), ಬಿ.ಆರ್.ಅಂಬೇಡ್ಕರ್ ಅವರ ಸಾತ್ವಿಕ ಬರಹಗಳು 2002. ಇದರಲ್ಲಿನ ಸಂಪಾದಕರ ಪ್ರಸ್ತಾವನೆ ಭಾಗ ನೋಡಿ. ಮನೋಹರ್ ಯಾದವ್ 2003 ಇವರ ಕೃತಿಯಲ್ಲೂ ಇದರ ಬಗ್ಗೆ ಚರ್ಚೆಗಳಿವೆ.

2. ಪ್ರಸ್ತುತ ಪ್ರಬಂಧದಲ್ಲಿ ‘ಪರಿಶಿಷ್ಟ’ ಎಂಬುದನ್ನು ಎರಡು ನೆಲೆಗಳಲ್ಲಿ ಪರಿಭಾವಿಸಿಕೊಳ್ಳಲಾಗಿದೆ. ಮೊದಲನೆಯದಾಗಿ ಅದು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗಗಳ ಮೊತ್ತವಾಗಿ ಇಲ್ಲಿ ಬಳಸಲಾಗಿದೆ. ಎರಡನೆಯದಾಗಿ ಬಹಳ ಮುಖ್ಯವಾಗಿ ಅದನ್ನು ಸಾಮಾಜಿಕ ರಚನೆಯ ಅಡಿಪಾಯ, ತಳಮಟ್ಟ ‘ಬುಡ’ ಎಂಬ ಅರ್ಥದಲ್ಲಿ ಬಳಸಲಾಗಿದೆ.

3. ಕೋಷ್ಟಕ 1ರಲ್ಲಿ ಮೂರು ಗುಂಪುಗಳಿಗೆ ಸಂಬಂಧಿಸಿದಂತೆ ಸಾಕ್ಷರತೆ ಪ್ರಮಾಣವನ್ನು ನೀಡಲಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ ಎಂಬುದು ಪರಿಶಿಷ್ಟ (ಪ.ಜಾ+ಪ.ವ) ಮತ್ತು ಇತರೆ ಜನಸಮೂಹವನ್ನು ಒಳಗೊಂಡಿದೆ. ಅಂದರೆ ಅದು ಕರ್ನಾಟಕದ ಏಳುವರ್ಷಕ್ಕೆ ಮೇಲ್ಪಟ್ಟ ಜನಸಂಖ್ಯೆಯಾದ 459.08ಲಕ್ಷ ಹಾಗೂ ಅದರಲ್ಲಿನ ಅಕ್ಷರಸ್ಥರಾದ 307.75ಲಕ್ಷ ಜನರನ್ನು ಪ್ರತಿನಿಧಿಸುತ್ತದೆ. ಇದು ಪರಿಶಿಷ್ಟರನ್ನೂ ಒಳಗೊಂಡಿರುವುದರಿಂದ ಒಟ್ಟು ಸಾಕ್ಷರತೆ ಪ್ರಮಾಣ ಕೆಳಮಟ್ಟದಲ್ಲಿರುವುದು ಸಾಧ್ಯ. ಈ ವೈರುಧ್ಯವನ್ನು ನಿವಾರಿಸಲು ಪ್ರಸ್ತುತ ಪ್ರಬಂಧಕ್ಕಾಗಿಯೆ ಪರಿಶಿಷ್ಟರು ಮತ್ತು ಶಿಷ್ಟರಿಗೆ ಪ್ರತ್ಯೇಕವಾಗಿ ಸಾಕ್ಷರತೆಯನ್ನು ಕಂಡುಹಿಡಿಯಲಾಗಿದೆ (ಕೋಷ್ಟಕ 2). ಇದರ ಪ್ರಕಾರ ಶಿಷ್ಟರ ಒಟ್ಟು ಸಾಕ್ಷರತೆ ಶೇ 71.45 ಪರಿಶಿಷ್ಟರ ಸಾಕ್ಷರತೆ ಶೇ.51.55. ಇಲ್ಲಿ ಅಂತರ ಶೇ.19.90. ಅಂಶಗಳಷ್ಟಾಗಿದೆ. ಕೋಷ್ಟಕ 1 ರಲ್ಲಿ ತೋರಿಸಿರುವ ಅಂತರಕ್ಕಿಂತ ಕೋಷ್ಟಕ 2ರಲ್ಲಿ ತೋರಿಸಿರುವ ಅಂತರವು ಅಧಿಕವಾಗಿದೆ.

4. ಪರಿಶಿಷ್ಟರ ಅಗತ್ಯಗಳು, ಅಭಿವೃದ್ಧಿ, ಅಕ್ಷರ ಸಂಪಾದನೆ ಮುಂತಾದ ಸಂಗತಿಗಳ ಸ್ವರೂಪವು ಶಿಷ್ಟರ ಅಗತ್ಯಗಳು ಮತ್ತು ಅಭಿವೃದ್ಧಿ ಸ್ವರೂಪಕ್ಕಿಂತ ಭಿನ್ನವಾಗಿರುತ್ತದೆ. ಕರ್ನಾಟಕದ ಇಡೀ ಜನಸಮೂಹವನ್ನು ಒಂದು ಅಖಂಡ ವರ್ಗವಾಗಿ ಪರಿಭಾವಿಸಿಕೊಳ್ಳುವುದು ಅಭಿವೃದ್ಧಿಯ ದೃಷ್ಟಿಯಿಂದ ತುಂಬಾ ಉಪಯುಕ್ತವಾಗಲಾರದು. ಆದ್ದರಿಂದ ಪರಿಶಿಷ್ಟರ ಶಿಕ್ಷಣ, ಉದ್ಯೋಗ, ಆಹಾರ ಭದ್ರತೆ ಮುಂತಾದವುಗಳನ್ನು ವಿಶೇಷವಾಗಿ  ಸರ್ಕಾರವು ಪರಿಗಣಿಸುವ ಅಗತ್ಯವಿದೆ. ಈ ಜನವರ್ಗಕ್ಕೆ ಸಂಬಂಧಿಸಿದಂತೆ ಇಲ್ಲ. ಈ ಕಾರಣಕ್ಕೆ ಬಾಬಾಸಾಹೇಬ ಅಂಬೇಡ್ಕರ್ ಅವರು ಪರಿಶಿಷ್ಟರನ್ನು ಕುರಿತ ತಮ್ಮ ಪ್ರಸಿದ್ಧ ಪ್ರಬಂಧದಲ್ಲಿ ಅವರನ್ನು ‘ Outside the Fold’ ಅಂತ ಕರೆಯುತ್ತಾರೆ. ಅಸ್ಪೃಶ್ಯತೆಯ ವಿವಿಧ ಆಯಾಮಗಳನ್ನು ಅರ್ಥ ಮಾಡಿಕೊಳ್ಳಲು ಅಂಬೇಡ್ಕರ್ ಅವರ   ಔಟ್ ಸ್ಯೆಡ್ ದಿ ಫೋಲ್ಡ್ (ಪರಿಧಿಯಿಂದಾಚೆಗೆ) ಪ್ರಬಂಧವನ್ನು ಕಡ್ಡಾಯವಾಗಿ ಓದಬೇಕು (ನೋಡಿ: ವಲೇರಿಯನ್ ರೋಡ್ರಿಗಸ್(ಸಂ) 2002 : 322-332).

5.ಶ್ರಮಶಕ್ತಿಯ ಮತ್ತು ವರಮಾನ ಸಂರಚನೆಗಳಿಗೆ ಸಂಬಂಧಿಸಿದ ರಾಚನಿಕ ಪರಿವರ್ತನೆ ಕುರಿತಂತೆ ಅಭಿವೃದ್ಧಿ ಅಧ್ಯಯನದಲ್ಲಿ ವ್ಯಾಪಕ ಅಧ್ಯಯನಗಳಾಗಿವೆ. ಇದಕ್ಕೆ ಸಂಬಂಧಿಸಿದ ತಾತ್ವಿಕ ಹಾಗೂ ಪ್ರಾಯೋಗಿಕ ವಿವರಗಳಿಗೆ ನೋಡಿ ಶೇಷಾದ್ರಿ ಬಿ., 1991 : 25-26.

6.  ಅಭಿವೃದ್ಧಿಯ ಮಟ್ಟವು ಉನ್ನತಕ್ಕೇರಿದಂತೆ, ರಾಚನಿಕ ಬದಲಾವಣೆ ತೀವ್ರವಾದಂತೆ ಶ್ರಮಶಕ್ತಿಯು ಪ್ರಾಥಮಿಕ ವಲಯದಿಂದ ಪ್ರಾಥಮಿಕೇತರ ವಲಯಗಳಿಗೆ ವರ್ಗವಾಣೆಯಾಗಬೇಕಾಗುತ್ತದೆ. ಆದರೆ ನಮ್ಮ ಸಮಾಜದ ಸಂದರ್ಭದಲ್ಲಿ ಪ್ರಾಥಮಿಕ ವಲಯವು ಶ್ರಮಶಕ್ತಿಯ ಬಾಹುಳ್ಯದಿಂದ ಕೂಡಿದೆ. ಆದರೆ ಅದರಿಂದ ಹರಿದು ಬರುವ ವರಮಾನದ ಪ್ರಮಾಣ ಕಡಿಮೆಯಾಗುತ್ತಿದೆ. ಈ ಕಾರಣದಿಂದ ಪ್ರಾಥಮಿಕ ವಲಯದಲ್ಲಿ ತಲಾ ಉತ್ಪನ್ನವು ಕಡಿಮೆಯಿರುತ್ತದೆ.

7. ಪರಿಶಿಷ್ಟರು, ಕರ್ನಾಟಕದ ಸಂದರ್ಭದಲ್ಲಿ 120.28ಲಕ್ಷ ಜನವರ್ಗ ಸಮಾಜದ ಅಂಚಿನಲ್ಲಿ ನೆಲೆಗೊಂಡಿದೆ. ಇದನ್ನೇ ಅಂಬೇಡ್ಕರ್ ‘ ಔಟ್ ಸ್ಯೆಡ್ ದಿ ಫೋಲ್ಡ್’ ಎಂದು ಕರೆದಿದ್ದಾರೆ. ಈ ಜನಸಮೂಹವು ಅಕ್ಷರ ಸಂಸ್ಕೃತಿಯಿಂದ, ಆಹಾರ ಭದ್ರತೆಯಿಂದ, ಆರೋಗ್ಯ ಭಾಗ್ಯದಿಂದ ವಂಚಿತವಾಗಿದೆ. ಇವು ಪ್ರಜಾಪ್ರಭುತ್ವವು ಗಟ್ಟಿಯಾಗಿ ಸಮಾಜದಲ್ಲಿ ಬೇರೂರಲು ಸಾಧ್ಯವಾಗದಿರುವುದಕ್ಕೆ ಕಾರಣಗಳಾಗಿವೆ. ಈ ಕುರಿತ ಚರ್ಚೆ ನೋಡಿ ಜೀನ್ ಡ್ರೀಜ್ ಮತ್ತು ಅಮರ್ತ್ಯ್ ಸೆನ್:2002:356, ಮನೋಹರ್ ಯಾದವ್:2003:94

8.ಬದುಕನ್ನು ಉತ್ತಮಪಡಿಸಿಕೊಳ್ಳಲು ಲಭ್ಯವಿರುವ ಅವಕಾಶಗಳಲ್ಲಿ ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯ ಮತ್ತು ಸಾಮರ್ಥ್ಯ ಇಲ್ಲದಿರುವುದನ್ನು ದುಸ್ಥಿತಿ-ಬಡತನವೆಂದು ಕರೆಯಲಾಗಿದೆ. ದುಡಿಮೆ-ದಿನಗೂಲಿಯು ಪರಿಶಿಷ್ಟರಿಗೆ ಆಯ್ಕೆ ಆಗುವುದಕ್ಕೆ ಪ್ರತಿಯಾಗಿ ಅನಿವಾರ್ಯವಾಗಿದೆ. ಈ ಅನಿವಾರ್ಯತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಮಾಜದ ಶಿಷ್ಟರು-ಪ್ರತಿಷ್ಠಿತರು ಕೂಲಿ ಪ್ರಮಾಣವನ್ನು ಅತ್ಯಂತ ಕೆಳಮಟ್ಟದಲ್ಲಿರುವಂತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಪರಿಶಿಷ್ಟರು ಅನೇಕ ಬಗೆಯ ಅಭದ್ರತೆಗಳಿಂದ ನರಳುತ್ತಿದ್ದಾರೆ. ಉದಾ. ಆಹಾರ ಅಭದ್ರತೆ, ಆರೋಗ್ಯ ಅಭದ್ರತೆ, ಉದ್ಯೋಗದ ಅಭದ್ರತೆ ಇತ್ಯಾದಿ.

9. ಇದಕ್ಕೆ ಸಂಬಂಧಿಸಿದ ಚರ್ಚೆಗೆ ನೋಡಿ: ಚಂದ್ರಶೇಖರ ಟಿ.ಆರ್. 2000:102-103.

10.   ನೋಡಿ : ಟಿಪ್ಪಣಿ 4

11.  ನೋಡಿ: ಮನೋಹರ್ ಯಾದವ್:2003:98-100. ವಲೇರಿಯನ್ ರೋಡ್ರಿಗಸ್ (ಸಂ): 2002-27. ಪರಿಶಿಷ್ಟರ ಸಂಘಟನೆಯ ಅವಶ್ಯಕತೆಯನ್ನು, ಅವರು ಸ್ವ ಸಾಮರ್ಥ್ಯದಿಂದ ಅಸ್ಪೃಶ್ಯತೆ ವಿರುದ್ಧ ಹೋರಾಡಬೇಕಾದ ಅಗತ್ಯವನ್ನು ಕುರಿತಂತೆ ಅಲ್ಲಿ ಚರ್ಚೆಸಲಾಗಿದೆ.

12. ಅವರ ಒಂದು ಸಂಕಲನದ ಶೀರ್ಷಿಕೆಯೇ ‘ಆನ್ ಲಿವಿಂಗ್ ಇನ್ ಎ ರೆವಲ್ಯೂಷನ್’ (1992).

ಆಕರ ಸೂಚಿ

1. ಚಂದ್ರಶೇಖರ ಟಿ.ಆರ್.,2000, ಬೆವರು, ಕಣ್ಣೀರು, ರಕ್ತ ಮತ್ತು ಮಹಿಳಾ ದುಡಿಮೆ, ಕನ್ನಡ ಅಧ್ಯಯನ, ಸಂ.2, ಸಂ.1, ಪು.102-103.

2. ಜೀನ್ಡ್ರೀಜ್,  ಅಮರ್ತ್ಯ್ ಸೆನ್ 2002 ಇಂಡಿಯಾ : ಡೆವಲಪ್ ಮೆಂಟ್ ಅಂಡ್ ಪಾರ್ಟಿಸಿಪೇಶನ್, ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್, ನವದೆಹಲಿ, ಪು.347-380.

3. ಬಾರ್ಬರಾ ಹ್ಯಾರಿಸ್ ವೈಟ್, 2004, ಇಂಡಿಯಾ ವರ್ಕಿಂಗ್ -ಎಸ್ಸೆಸ್ ಆನ್ ಸೊಸೈಟಿ ಅಂಡ್ ಎಕಾನಮಿ, ಕೆಂಬ್ರಿಡ್ಜ್  ಯೂನಿವರ್ಸಿಟಿ ಪ್ರೆಸ್, ನವದೆಹಲಿ, ಪು.17-42(ಎರಡನೇ ಅಧ್ಯಾಯ).

4.ಮನೋಹರ್ ಯಾದವ್, 2003, ಸೋಶಿಯೋ ಎಕಾನಾಮಿಕ್ ಸರ್ವೆ ಆಫ್ ಶೆಡ್ಯೂಲ್ಡ್ ಕಾಸ್ಟ್  ಅಂಡ್  ಶೆಡ್ಯೂಲ್ಡ್ ಟ್ರೈಬ್ ಇನ್  ಕರ್ನಾಟಕ -ಎ ಕ್ರಿಟಿಕಲ್ ಅನಾಲಿಸಸ್, ಇನ್ಸಿಟ್ಯುಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್, ಬೆಂಗಳೂರು.

5. ವಲೇರಿಯನ್ ರೊಡ್ರಿಗಸ್ (ಸಂ), 2002, ದಿ ಎಸೆನ್ಸಿಯಲ್ ರೈಟಿಂಗ್ಸ್ ಆಫ್ ಬಿ.ಆರ್.ಅಂಬೇಡ್ಕರ್, ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್, ನವದೆಹಲಿ, ಪು.1-43(ಪ್ರಸ್ತಾವನೆ).

6. ಶ್ರೀನಿವಾಸ್ ಎಂ.ಎನ್. 1992, ಆನ್ ಲಿವಿಂಗ್ ಇನ್ ಎ ರೆವಲ್ಯೂಷನ್ ಆಂಡ್ ಅದರ್ ಎಸ್ಸೆಸ್, ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್, ನವದೆಹಲಿ.

7. ಶೇಷಾದ್ರಿ ಬಿ., 1991, ಇಂಡಸ್ಟ್ರಿಯಲೈಜೇಶನ್ ಆಂಡ್ ರೀಜನಲ್ ಡೆವಲಪ್ ಮೆಂಟ್ ಕಾನ್ಸೆಪ್ಟ್ ಪಬ್ಲಿಶಿಂಗ್ ಕಂಪನಿ, ನವದೆಹಲಿ.

8. ಸೆನ್ಸ್ಸ್ ಆಫ್ ಇಂಡಿಯಾ – 1991 ಸಿರೀಸ್-10 ಕರ್ನಾಟಕ – ಪಾರ್ಟ್ 11-ಬಿ(1) ಪ್ರೆಮರಿ ಸೆನ್ಸ್ ಸ್ ಅಬ್ ಸ್ಟ್ರಾಕ್ಟ್: ಜನರಲ್ ಪಾಪುಲೇಶನ್ ಡೈರಕ್ಟರ್ ಆಫ್ ಸೆನ್ಸ್ ಸ್ ಆಪರೇಶನ್ಸ್, ಕರ್ನಾಟಕ .

9. ಸೆನ್ಸ್ ಸ್ ಆಫ್ ಇಂಡಿಯಾ 1991, ಸಿರೀಸ್-11, ಕರ್ನಾಟಕ ಪಾರ್ಟ್ 11-ಬಿ(2) ಪ್ರೆಮರಿ ಸೆನ್ಸ್ ಸ್ ಅಬ್ ಸ್ಟ್ರಾಕ್ಟ್ :ಪ.ಜಾತಿ ಮತ್ತು ಪ.ಪಂ., ಡೈರಕ್ಟರೇಟ್ ಆಫ್ ಸೆನ್ಸ್ ಸ್ ಆಪರೇಶನ್ಸ್, ಕರ್ನಾಟಕ.

10. ಸೆನ್ಸ್ ಸ್ ಆಫ್ ಇಂಡಿಯಾ 2001, ಸಿರೀಸ್-30, ಕರ್ನಾಟಕ  ಪೇಪರ್ 3, 2001, ಪ್ರಾವಿಶನಲ್ ಪಾಪ್ಯುಲೇಶನ್ ಟೋಟಲ್ಸ್,  ಡಿಸ್ಟ್ರಿಬ್ಯುಶನ್ ಆಫ್ ವರ್ಕರ್ಸ್  ಮತ್ತು  ನಾಲ್ ವರ್ಕರ್ಸ್,  ಡೈರಕ್ಟರೇಟ್ ಆಫ್ ಸೆನ್ಸ್ ಸ್  ಆಪರೇಶನ್ಸ್, ಕರ್ನಾಟಕ.

11. ಸೆನ್ಸ್ ಸ್  ಆಫ್ ಇಂಡಿಯಾ 2001, ಸಿರೀಸ್-30, ಕರ್ನಾಟಕ  ಪ್ರಾವಿಶನಲ್ ಪಾಪ್ಯುಲೇಶನ್ ಟೋಟಲ್ಸ್, ಪೇಪರ್ 3, 2001, ಡಿಸ್ಟ್ರಿಬ್ಯುಶನ್  ಆಫ್  ವರ್ಕರ್ಸ್  ಮತ್ತು ನಾಲ್ ವರ್ಕರ್ಸ್ , ಡೈರಕ್ಟರೇಟ್ ಆಫ್ ಸೆನ್ಸ್ ಸ್   ಆಪರೇಶನ್ಸ್, ಕರ್ನಾಟಕ.

12. ಸೆನ್ಸಸ್ ಆಫ್ ಇಂಡಿಯಾ 2001, ಸಿರೀಸ್-30, ಕರ್ನಾಟಕ ಫೈನಲ್ ಪಾಪ್ಯುಲೇಶನ್ ಟೋಟಲ್ಸ್ ಪ.ಜಾತಿ ಮತ್ತು ಪ.ವರ್ಗ ಡೈರಕ್ಟರೇಟ್ ಆಫ್ ಸೆನ್ಸಸ್ ಆಪರೇಶನ್ಸ್, ಕರ್ನಾಟಕ.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

Leave a Reply

Your email address will not be published. Required fields are marked *