ಡಿನೋಟಿಫಿಕೇಷನ್ ಹಗರಣದ ಸುಳಿಯಲ್ಲಿ ಪ್ರಜಾವಾಣಿ

– ರಮೇಶ್ ಅರಕಲಗೂಡು

ಪತ್ರಕರ್ತರು ಗಣಿ ಮಾಲೀಕರಿಂದ ಲಕ್ಷಗಟ್ಟಲೆ ಕಪ್ಪ ಪಡೆದದ್ದು ಬೆಳಕಿಗೆ ಬಂತು. ಅನೇಕ ಹಗರಣಗಳಲ್ಲಿ ಪತ್ರಕರ್ತರು ದಳ್ಳಾಳಿಗಳ ಕೆಲಸ ಮಾಡಿದ್ದೂ ಕಂಡುಬಂತು. ಪತ್ರಕರ್ತರು ಬರಿಯ ಪತ್ರಕರ್ತರಾಗಿ ಉಳಿಯದೆ ರಾಜಕಾರಣಿಗಳ ಅನೈತಿಕ ದಂಧೆಗಳಲ್ಲಿ ಪಾಲುದಾರರಾಗಿರುವುದು ಇವತ್ತಿನ ಕಹಿ ಸತ್ಯ. ಈಗ ಹೊರಬಂದಿದೆ ಕನ್ನಡದ ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿಯ ಮಾಲೀಕರು ಪಾಲ್ಗೊಂಡಿರುವ ಡಿನೋಟಿಫಿಕೇಷನ್ ಹಗರಣ. ಇದು ಅತ್ಯಂತ ಆಘಾತಕಾರಿ ಸುದ್ದಿ.

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಆಲಂ ಪಾಷ ಎಂಬುವವರು ಲೋಕಾಯುಕ್ತ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಖಾಸಗಿ ದಾವೆಯ ಕುರಿತು ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಈ ಪ್ರಕರಣದಲ್ಲಿ ನಿರಾಣಿಗೆ ಕ್ಲೀನ್ ಚಿಟ್ ನೀಡಿದ್ದರೂ, ಈ ದೂರಿನಲ್ಲಿ ಉಲ್ಲೇಖವಾಗಿದ್ದ ಇನ್ನೆರಡು ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ವರದಿ ನೀಡಿದ್ದಾರೆ.

ಲೋಕಾಯುಕ್ತ ನಗರ ಡಿವೈಎಸ್‌ಪಿ ಎಚ್.ಎಸ್.ಮಂಜುನಾಥ್ 77 ಪುಟಗಳ ತನಿಖಾ ವರದಿ ಹಾಗು 2000 ಪುಟಗಳ ದಾಖಲೆಯನ್ನು ಮೊನ್ನೆ (21/5/12) ಲೋಕಾಯುಕ್ತ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆರೋಪಪಟ್ಟಿಯನ್ನು ಸ್ವೀಕರಿಸುವ ಸಂಬಂಧ ಇದೇ ತಿಂಗಳ 31ರಂದು ತೀರ್ಪು ನೀಡುವುದಾಗಿ ನ್ಯಾಯಮೂರ್ತಿ ಎಚ್.ಎಸ್.ಸುಧೀಂದ್ರ ರಾವ್ ತಿಳಿಸಿ, ವಿಚಾರಣೆಯನ್ನು ಮುಂದೂಡಿದ್ದಾರೆ.

ತನಿಖಾಧಿಕಾರಿ ನೀಡಿರುವ ವರದಿಯ ಕೆಲವು ಅಂಶಗಳು ಹೀಗಿವೆ:

“ಬೆಂಗಳೂರು ಉತ್ತರ ತಾಲ್ಲೂಕು ಜಾಲಾ ಹೋಬಳಿ ಹೂವಿನಾಯಕನಹಳ್ಳಿ ಗ್ರಾಮದ ಸರ್ವೆ ನಂಬರುಗಳಾದ 124, 125, 126ರಲ್ಲಿ ಒಟ್ಟು 20 ಎಕರೆ ಜಮೀನಿಗೆ ಲೇಟ್ ಶ್ರೀ ಗುರುಸ್ವಾಮಿ ಕೆ.ಎನ್., ಲೇಟ್ ಶ್ರೀ ಕೆ.ಎನ್.ನೆಟ್ಟಕಲ್ಲಪ್ಪ, ಲೇಟ್ ಶ್ರೀಮತಿ ಜಾಂಬವತಿರವರುಗಳು ಪೌತಿ ಖಾತೆದಾರರಾಗಿರುತ್ತಾರೆ. ಶ್ರೀ ಕೆ.ಎನ್.ಹರಿಕುಮಾರ್, ಶ್ರೀ ಕೆ.ಎನ್.ತಿಲಕ್ ಕುಮಾರ್ ಮತ್ತು ಶ್ರೀ ಕೆ.ಎನ್.ಶಾಂತಕುಮಾರ್ ರವರುಗಳು ಶ್ರೀಮತಿ ಜಾಂಬವತಿ ಮತ್ತು ಶ್ರೀ ಕೆ.ಎನ್.ನೆಟ್ಟಕಲ್ಲಪ್ಪರವರುಗಳ ಮಕ್ಕಳಾಗಿದ್ದು, ಶ್ರೀ ಗುರುಸ್ವಾಮಿಯವರ ಮೊಮ್ಮಕ್ಕಳಾಗಿರುತ್ತಾರೆ ಮತ್ತು ಎಂ.ಆರ್.ಸಂಖ್ಯೆ 6/1996-97 ದಿ.6-3-2009ರ ಮೂಲಕ ಸದರಿ ಸ್ಥಿರಾಸ್ತಿಗೆ ಹಕ್ಕುದಾರರಾಗಿರುತ್ತಾರೆ. ದಿ. 26-12-2006ರಂದು ಸದರಿ ಜಮೀನನ್ನು ಸರ್ಕಾರವು ಹಾರ್ಡ್‌ವೇರ್ ಪಾರ್ಕ್ ಸ್ಥಾಪನೆಗಾಗಿ ಕೆಐಎಡಿ ಆಕ್ಟ್ 1966ರ ಕಲಂ 28(1) ಪ್ರಕಾರ ಅಧಿಸೂಚನೆ ಹೊರಡಿಸಿರುತ್ತದೆ. ದಿನಾಂಕ. 31-8-2007ರಂದು ಮೇಲ್ಕಂಡ ಖಾತೆದಾರರು ಸ್ವತಃ ತಮ್ಮ ಜಮೀನಿನಲ್ಲಿ ಕೈಗಾರಿಕೆ ಸ್ಥಾಪಿಸುವುದಾಗಿ ತಿಳಿಸಿ ತಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬಾರದೆಂದು ಆಕ್ಷೇಪಣೆ ವ್ಯಕ್ತಪಡಿಸಿರುತ್ತಾರೆ. ಆದರೂ ಸಹ ವಿಶೇಷ ಭೂಸ್ವಾಧೀನಾಧಿಕಾರಿಯು ಸದರಿ ಆಕ್ಷೇಪಣೆಗಳನ್ನು ಮಾನ್ಯ ಮಾಡದೇ ದಿ.4-3-2010ರಂದು ಕೆಐಎಡಿ ಆಕ್ಟ್ 1966ರ ಕಲಂ 28(4)ರ ಪ್ರಕಾರ ಅಂತಿಮ ಅಧಿಸೂಚನೆಗೆ ಒಳಪಡಿಸಿರುತ್ತಾರೆ. ತದನಂತರ ದಿನಾಂಕ 2-7-2008ರಂದು ಕೆಐಎಡಿ ಆಕ್ಟ್ 1966ರ ಕಲಂ 28(8)ರ ಪ್ರಕಾರ ಸದರಿ ಜಮೀನನ್ನು ಕೆಐಎಡಿಬಿಗೆ ಹಸ್ತಾಂತರಿಸುತ್ತದೆ. ಭೂಮಾಲೀಕರು ಸ್ವತಃ ಹೊಟೇಲ್ ಉದ್ದಿಮೆಯನ್ನು ಸ್ಥಾಪಿಸುವುದಾಗಿ ಸರ್ಕಾರಕ್ಕೆ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಿ, ತಮ್ಮ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಕೋರಿರುತ್ತಾರೆ.

“ಈ ಪ್ರಕರಣದ ತನಿಖಾ ಸಮಯದಲ್ಲಿ ವಿವಿಧ ಇಲಾಖೆಗಳಿಂದ ಪಡೆದುಕೊಂಡ ಕಡತಗಳ ಪರಿಶೀಲನೆಯಿಂದ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಬೆಂಗಳೂರು ಉತ್ತರ ತಾಲ್ಲೂಕು, ಜಾಲಾ ಹೋಬಳಿ, ಹೂವಿನಾಯ್ಕನಹಳ್ಳಿ ಸರ್ವೆ ನಂ. 124, 124 ಮತ್ತು 126ರಲ್ಲಿ ಒಟ್ಟು 20 ಎಕರೆ ಜಮೀನನ್ನು ಕಾನೂನುಬಾಹಿರವಾಗಿ ಡಿ-ನೋಟಿಫಿಕೇಷನ್ ಮಾಡಿರುವ ಬಗ್ಗೆ ದಾಖಲಾತಿಗಳಿಂದ ಸಾಬೀತಾಗುತ್ತದೆ. ಹೇಗೆಂದರೆ, ಸದರಿ ಜಮೀನು ಕೆಐಎಡಿ ಆಕ್ಟ್ 1966ರ ಕಲಂ 28(8)ರ ಪ್ರಕಾರ ಅಧಿಸೂಚನೆಯಾಗಿತ್ತು. ಆದ ಕಾರಣ ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಹಾಗು ಅಪರ ಕಾರ್ಯದರ್ಶಿಗಳು ಈ ಜಮೀನನ್ನು ಡಿನೋಟಿಫಿಕೇಷನ್ ಮಾಡಲು ಬರುವುದಿಲ್ಲವೆಂದು ಕಡತದ ಟಿಪ್ಪಣಿಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಶ್ರೀ ಬಿ.ಎಸ್.ಯಡಿಯೂರಪ್ಪ, ಹಿಂದಿನ ಮುಖ್ಯಮಂತ್ರಿಯವರು ಅಭಿವೃದ್ಧಿ ಶುಲ್ಕವನ್ನು ಪಾವತಿಸಿಕೊಂಡು ಕೆಐಎಡಿ ಆಕ್ಟ್ 1966ರ ಕಲಂ 4ರಡಿಯಲ್ಲಿ ಪ್ರಶ್ನಿತ ಜಮೀನನ್ನು ಭೂಸ್ವಾಧೀನದಿಂದ ಕೈಬಿಡಲು ಅನುಮೋದಿಸಿರುತ್ತಾರೆ. ಈ ಸಲಹೆಯನ್ನು ಆರೋಪಿ-1 ಶ್ರೀ ಮುರುಗೇಶ್ ರುದ್ರಪ್ಪ ನಿರಾಣಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಅನುಮೋದಿಸಿರುತ್ತಾರೆ. ಈ ಪ್ರಕಾರ ಅಧಿಕಾರಿಗಳು ಅಭಿವೃದ್ಧಿ ಶುಲ್ಕ ಮತ್ತು ಮಂಡಳಿಯ ಸೇವಾಶುಲ್ಕವನ್ನು ಲೆಕ್ಕಿಸಿ ಅಧಿಕಾರಿಗಳ ಮುಖಾಂತರ ಕಡತವು ಶ್ರೀ ಬಿ.ಎಸ್.ಯಡಿಯೂರಪ್ಪ ಹಿಂದಿನ ಮುಖ್ಯಮಂತ್ರಿಗಳಿಗೆ ಮಂಡನೆಯಾಗಿರುತ್ತದೆ. ಅಂದಿನ ಮುಖ್ಯಮಂತ್ರಿಗಳು ಇನ್ನೊಮ್ಮೆ ಚರ್ಚಿಸಲು ಸೂಚಿಸಿದಾಗ ಆಗ ಅಧಿಕಾರಿಗಳು ಅಭಿವೃದ್ಧಿ ಶುಲ್ಕವನ್ನಾಗಲೀ, ಮಂಡಳಿಯ ಸೇವಾ ಶುಲ್ಕವನ್ನಾಗಲೀ ಅಥವಾ ಭೂಮಾಲೀಕರು ತಮ್ಮ ಯೋಜನಾ ವರದಿಯನ್ನು ಎಸ್‌ಎಚ್‌ಎಲ್‌ಸಿಸಿಗೆ ಸಲ್ಲಿಸಿ ಅಲ್ಲಿಂದ ಮಂಜೂರಾತಿ ಪಡೆದರೆ ಮಾತ್ರ ಸದರಿ ಜಮೀನನ್ನು ಭೂಮಾಲೀಕರಿಗೆ ಮರುಹಂಚಿಕೆ ಮಾಡಬಹುದೆಂದು ಸಲಹೆ ನೀಡಿರುತ್ತಾರೆ. ಇದರಲ್ಲಿ ಅಂದಿನ ಮುಖ್ಯಮಂತ್ರಿಗಳು ಭೂಮಾಲೀಕರಿಂದ ತಮ್ಮ ಸ್ವಾರ್ಥಕ್ಕಾಗಿ ಯಾವುದೇ ರೀತಿಯಲ್ಲಿ ಲಂಚ ಪಡೆದ (ಪೆಕ್ಯೂನಿಯರಿ ಅಡ್ವಾಂಟೇಜ್) ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಿಲ್ಲದಿದ್ದರೂ ಸಹ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ತನ್ನ ನಿರಂಕುಶ ಹಾಗು ಸ್ವೇಚ್ಛಾನುಸಾರದ ನಿರ್ಣಯದೊಂದಿಗೆ ಭೂಮಾಲೀಕರಿಗೆ ಸಹಾಯ ಮಾಡುವ ದೃಷ್ಟಿಯಿಂದ ಈ 20 ಎಕರೆ ಜಮೀನನ್ನು ಕೆಐಎಡಿ ಕಾಯ್ದೆಯ ಉಪಬಂಧಗಳನ್ನು ವ್ಯತಿರಿಕ್ತಗೊಳಿಸಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ಸೇವಾಶುಲ್ಕ ರೂ. 2,64,00,000-00 ಅಥವಾ ಅಭಿವೃದ್ಧಿ ಶುಲ್ಕ 6 ಕೋಟಿ ರೂಗಳನ್ನು ಮನ್ನಾ ಮಾಡಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟುಮಾಡಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, 1988ರ ಕಲಂ 13(1)(ಡಿ) ಸಬ್ ಕ್ಲಾಸ್ 1 ಮತ್ತು 3 ಸಹವಾಚ 13(2)ರ ಪ್ರಕಾರ ಅಪರಾಧವೆಸಗಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುತ್ತದೆ……”

ತನ್ನ ಜಮೀನು ನೋಟಿಫಿಕೇಷನ್ ಆದಾಗ ಯಾವುದೇ ಭೂಮಾಲೀಕರು ಅದನ್ನು ಸಕಾರಣಗಳಿಗೆ ಡಿನೋಟಿಫಿಕೇಷನ್ ಮಾಡಲು ಅರ್ಜಿ ಸಲ್ಲಿಸುವುದು ತಪ್ಪೇನಲ್ಲ. ಅದು ಅನೈತಿಕವೂ ಅಲ್ಲ. ಆದರೆ ಸರ್ಕಾರದ ಮೇಲೆ ಯಾವ ಪ್ರಮಾಣದ ಒತ್ತಡ ಬಿದ್ದಿದೆಯೆಂಬುದನ್ನು ಗಮನಿಸಿ. ಸ್ವತಃ ಮುಖ್ಯಮಂತ್ರಿಗಳೇ ಅಭಿವೃದ್ಧಿ ಶುಲ್ಕ ಮತ್ತು ಸೇವಾಶುಲ್ಕ ಪಡೆದು ಇನ್ನೊಮ್ಮೆ ಚರ್ಚಿಸಲು ಸೂಚಿಸುತ್ತಾರೆ. ಅದರಂತೆ ಕಡತಗಳ ಮಂಡನೆಯೂ ಆಗುತ್ತದೆ. ಆದರೆ ಅಂತಿಮವಾಗಿ ಬಿಡಿಗಾಸೂ ಪಡೆಯದೆ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ನಷ್ಟವನ್ನುಂಟುಮಾಡಿ ಡಿನೋಟಿಫಿಕೇಷನ್ ಮಾಡಲಾಗುತ್ತದೆ.

ತನಿಖಾಧಿಕಾರಿ ಪೆಕ್ಯೂನಿಯರಿ ಅಡ್ವಾಂಟೇಜ್ ಎಂಬ ಪದಬಳಕೆ ಮಾಡಿದ್ದಾರೆ. ಆ ಥರ ಹಣದ ಕೈಬದಲು ವ್ಯವಹಾರ ನಡೆಯದೇ ಇರುವ ಸಾಧ್ಯತೆಯೂ ಇಲ್ಲದಿಲ್ಲ. ಆದರೆ ಗಾಬರಿ ಹುಟ್ಟಿಸುವ ಅಂಶವೆಂದರೆ ಅರ್ಜಿದಾರರು ಕರ್ನಾಟಕದ ಎರಡು ಅತ್ಯಂತ ಪ್ರಮುಖ ದಿನಪತ್ರಿಕೆಗಳ (ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್) ಮಾಲೀಕರುಗಳು. ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ ಯಡಿಯೂರಪ್ಪನವರು ಡಿನೋಟಿಫಿಕೇಷನ್ ಮಾಡಿರುವ ಉದ್ದೇಶದ ಹಿಂದೆ ಬೇರೆ ಅಡ್ವಾಂಟೇಜ್‌ಗಳು ಇರಬಹುದು ಎಂಬುದು ಸಾಮಾನ್ಯ ನಾಗರಿಕರೂ ಊಹಿಸಬಲ್ಲರು. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಮೀಡಿಯಾ ಮ್ಯಾನೇಜ್‌ಮೆಂಟ್ ಹೇಗೆ ಹೇಗೆ ಮಾಡಿದರು ಎಂಬುದು ಈ ಕ್ಷೇತ್ರದಲ್ಲಿರುವವರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಜನಮಾನಸದಲ್ಲಿ ಪ್ರಭಾವ ಬೀರಬಲ್ಲ ಪ್ರಜಾವಾಣಿಯಂಥ ಪತ್ರಿಕೆಯಿಂದ ಯಡಿಯೂರಪ್ಪ ಯಾವ ಸ್ವರೂಪದ ಲಾಭ ಪಡೆದಿರಬಹುದು? ಇದು ಸದ್ಯಕ್ಕೆ ಊಹೆಯ ವಿಷಯವಷ್ಟೆ. ಲೋಕಾಯುಕ್ತ ನ್ಯಾಯಾಲಯ ತೀರ್ಪಿಗೆ ಕಾದು ನೋಡಬೇಕು.

ವರ್ತಮಾನದಲ್ಲಿ ಇತ್ತೀಚಿಗೆ ಪ್ರಕಟಗೊಂಡ “ದಲಿತ ಸಂಚಿಕೆ: ಓದುಗರ ವಿಶ್ವಾಸವನ್ನು ‘ರಿಫ್ರೆಶ್’ ಮಾಡಿಕೊಳ್ಳುವ ಪ್ರಯತ್ನ” ಲೇಖನದಲ್ಲಿ ಒಂದು ವಿಷಯ ಪ್ರಸ್ತಾಪ ಮಾಡಲಾಗಿತ್ತು. ಯಡಿಯೂರಪ್ಪನವರ ಡಿನೋಟಿಫಿಕೇಷನ್ ಹಗರಣಗಳು ಒಂದರ ಮೇಲೊಂದರಂತೆ ಸರಣಿಯಾಗಿ ಪ್ರಕಟಗೊಳ್ಳುವ ಮೊದಲು ಈ ದಾಖಲೆಗಳು ಮೊದಲು ತಲುಪಿದ್ದೇ ಪ್ರಜಾವಾಣಿ ಕಚೇರಿಯನ್ನು. ಆದರೆ ಅವುಗಳನ್ನು ಸುದ್ದಿ ಮಾಡಲು ನಿರಾಕರಿಸಲಾಯ್ತು. ಸ್ವತಃ ಪತ್ರಿಕೆಯ ಮಾಲೀಕರುಗಳೇ ಡಿನೋಟಿಫಿಕೇಷನ್ ಹಗರಣವೊಂದರಲ್ಲಿ ಪಾಲ್ಗೊಂಡಿರುವಾಗ ಮುಖ್ಯಮಂತ್ರಿಗಳ ಇತರ ಹಗರಣಗಳನ್ನು ಹೇಗೆ ಬಯಲಿಗೆ ತರಲಾದೀತು?

ಪ್ರಜಾವಾಣಿ ದಶಕಗಳಿಂದ ಕನ್ನಡ ಜನರ ಅಂತಃಸಾಕ್ಷಿಯಂತೆ ಕೆಲಸ ಮಾಡಿದ ಪತ್ರಿಕೆ. ನೂರಾರು ಮಂದಿ ಜನಪರ ಪತ್ರಕರ್ತರು ಈ ಪತ್ರಿಕೆಯನ್ನು ಜನಮುಖಿಯಾಗಿ ರೂಪಿಸಿದ್ದಾರೆ. ವಿಶ್ವಾಸಾರ್ಹ ಪತ್ರಿಕೆಯೆಂಬ ಘೋಷಣೆಗೆ ಅನ್ವರ್ಥವಾಗುವಂತೆ ಪತ್ರಿಕೆ ನಡೆದುಕೊಂಡುಬಂದಿದೆ. ಆದರ್ಶಗಳಲ್ಲಿ, ಪ್ರಾಮಾಣಿಕತೆಯಲ್ಲಿ ನಂಬಿಕೆ ಇಟ್ಟವರು ಇವತ್ತಿಗೂ ನಂಬಬಹುದಾದ ಪತ್ರಿಕೆಯೆಂದರೆ ಅದು ಪ್ರಜಾವಾಣಿಯೇ ಹೌದು.

ಆದರೆ ಈಗ ಅಂಟಿರುವ ಕೆಸರು ಸಾಮಾನ್ಯದ್ದೇನೂ ಅಲ್ಲ. ಅಷ್ಟು ಸುಲಭವಾಗಿ ಕೊಡವಿಕೊಳ್ಳಬಹುದಾದ ಗಲೀಜೂ ಅದಲ್ಲ. ರಾಜಕಾರಣಿಗಳು ಮತ್ತು ಮಾಧ್ಯಮ ಸಂಸ್ಥೆಗಳ ಮಾಲೀಕರ ನಡುವೆ ಕೆಲ ಪತ್ರಕರ್ತರು ದಲ್ಲಾಳಿಗಳ ಕೆಲಸ ಮಾಡುತ್ತಿರುವುದು ಹೊಸದೇನೂ ಅಲ್ಲ. ಇಂಥ ದಲ್ಲಾಳಿಗಳಿಗೆ ಪ್ರಜಾವಾಣಿ ಮಾಲಿಕತ್ರಯರು ಬಲಿಯಾದರೆ?

ಯಡಿಯೂರಪ್ಪ, ನಿರಾಣಿ ಮೇಲಿರುವ ಆರೋಪಗಳಿಗೆ ಯಾರೂ ಆಘಾತಪಡುವುದೂ ಇಲ್ಲ, ಗಾಬರಿಯಾಗುವುದೂ ಇಲ್ಲ. ಆದರೆ ಪ್ರಜಾವಾಣಿಗೆ ಅಂಟಿಕೊಂಡ ಕಳಂಕ ನಿಜಕ್ಕೂ ಆಘಾತಕಾರಿ. ಸೀಜರನ ಹೆಂಡತಿ ಸಂಶಯಾತೀತಳಾಗಿರಬೇಕು ಎಂಬ ಮಾತು ಬಳಸಿ ಬಳಸಿ ಸವಕಲಾಗಿಹೋಗಿದೆ. ಕರ್ನಾಟಕದ ಹೊಸಪೀಳಿಗೆಯ ಯುವಕ-ಯುವತಿಯರಿಗೆ ಕಣ್ಣೆದುರು ಯಾವ ಆದರ್ಶವೂ ಇಲ್ಲದಂತಾಗುವುದು ಘೋರ. ಇನ್ನೂ ಏನೇನನ್ನು ನಾವು ಕಳೆದುಕೊಳ್ಳುವುದಕ್ಕಿದೆಯೋ? ಯಾರಿಗೆ ಗೊತ್ತು?

ಇದು ಇದೇ ವಿಷಯದ ಬಗ್ಗೆ ಹಿಂದು ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ:

 

8 thoughts on “ಡಿನೋಟಿಫಿಕೇಷನ್ ಹಗರಣದ ಸುಳಿಯಲ್ಲಿ ಪ್ರಜಾವಾಣಿ

  1. ವಿ.ಆರ್.ಕಾರ್ಪೆಂಟರ್

    ಪ್ರಿಯರೆ, ಕರ್ನಾಟಕಕ್ಕೆ ಈಗ ಸುಭಿಕ್ಷೆಯ ಕಾಲ, ಎಲ್ಲವೂ ಬಯಲಾಗುತ್ತಿದೆ.

    Reply
  2. g.mahanthesh.

    ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಭೂಸ್ವಾಧೀನ ಮತ್ತು ಭೂ ಸ್ವಾಧೀನ ರದ್ದು ಮಾಡಿರುವ ಪ್ರಕರಣಗಳಲ್ಲಿ ಲೋಪ ದೋಷಗಳ ಬಗ್ಗೆ ಇತ್ತೀಚೆಗಷ್ಟೇ ಪ್ರಕಟವಾಗಿರುವ ಸಿಎಜಿ ವರದಿ ನೋಡಿದರೆ ಇನ್ನಷ್ಟು ಸತ್ಯಾಂಶಗಳು ಹೊರ ಬೀಳಲಿವೆ. ಬೆಂಗಳೂರಿನ ಜನರ ಕುಡಿಯುವ ನೀರಿನ ಮೂಲಕ್ಕೆ(ತಿಪ್ಪಗೊಂಡನಹಳ್ಳಿ ಜಲಾಶಯ)ಕೈ ಹಾಕಿರುವುದು ಸೇರಿದಂತೆ ಇನ್ನಷ್ಟು ಗಾಬರಿ ಬೀಳಿಸುವ ಅಂಶಗಳೂ ವರದಿಯಲ್ಲಿವೆ. ಸಾಧ್ಯ ಆದರೆ ವರದಿಯನ್ನ ಒಮ್ಮೆ ತರಿಸಿ ಓದಿ ನೋಡಿ….
    ಜಿ.ಮಹಂತೇಶ್

    Reply
  3. Ananda Prasad

    ಇತ್ತೀಚೆಗಿನ ವರ್ಷಗಳಲ್ಲಿ ಪ್ರಜಾವಾಣಿ ಆಡಳಿತ ಪಕ್ಷದ ಬಗ್ಗೆ ಬಹಳ ಮೃದು ಧೋರಣೆ ಅನುಸರಿಸುತ್ತಿರುವುದು ಕಂಡು ಬರುತ್ತಿತ್ತು. ಇದು ಯಾಕಾಗಿರಬಹುದು ಎಂದು ಈಗ ಅರ್ಥವಾಗುತ್ತಿದೆ. ಯಡಿಯೂರಪ್ಪನವರ ಬ್ರಹ್ಮಾಂಡ ಭ್ರಷ್ಟಾಚಾರದ ಹೊರತಾಗಿಯೂ ಅವರೇ ಕರ್ನಾಟಕದ ಏಕೈಕ ಮಹಾನಾಯಕ, ಅವರನ್ನು ಬಿಟ್ಟರೆ ಇನ್ಯಾರೂ ಇಲ್ಲ ಎಂಬ ಭ್ರಮೆಯನ್ನು ಪ್ರಜಾವಾಣಿಯನ್ನೂ ಒಳಗೊಂದು ಮಾಧ್ಯಮಗಳು ಬಿತ್ತಲು ಯಾಕೆ ಹಾತೊರೆಯುತ್ತಿದ್ದವು ಎಂಬುದನ್ನು ಊಹಿಸಬಹುದಾಗಿದೆ. ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷ ಸ್ಥಾಪಿಸಿ ಗೆಲಿಸಬಲ್ಲ ಸಮರ್ಥ ಎಂಬರ್ಥದ ಲೇಖನಗಳು ಪ್ರಜಾವಾಣಿಯಲ್ಲಿ ಬರುತ್ತಿದ್ದದ್ದು ಬಹಳ ಅಚ್ಚರಿಯನ್ನು ಉಂಟು ಮಾಡುತ್ತಿದ್ದವು. ಇದರ ಹಿಂದಿನ ರಹಸ್ಯ ಏನು ಎಂಬುದು ಈಗ ಬಯಲಾಗಿದೆ.

    Reply
  4. ದೊಡ್ಡಿಪಾಳ್ಯ ನರಸಿಂಹಮೂರ್ತಿ

    ಮೌಲ್ಯಾಧಾರಿತ ಪತ್ರಿಕೆಯೆಂದು ಭರವಸೆ ಇಡಬಹುದಾದ ಪ್ರಜಾವಾಣಿಯೇ ಹೀಗಾದರೆ ಇನ್ನೂ ಅನ್ಯರ ಗತಿ ಏನಾಗಿರಬಹುದು ಎಂದು ಊಹಿಸುವುದು ಅಷ್ಟೇನೂ ಕಷ್ಟದ ಕೆಲಸವಲ್ಲ.
    ಮಾಧ್ಯಮ ಕ್ಷೇತ್ರದಲ್ಲಿರುವ ಪ್ರಾಮಾಣಿಕ ಹಾಗೂ ನೀತಿಬದ್ದ ಮನಸ್ಸುಗಳೆಲ್ಲಾ ಒಂದೆಡೆ ಕಲೆತು ಪರ್ಯಾಯ ಮಾರ್ಗಗಳನ್ನು ಹುಡುಕಲು ಇದು ಸಕಾಲ, ಈ ವಿಷಯದ ಬಗ್ಗೆ ಹಲವರು ಸಕಾರಾತ್ಮಕವಾಗಿ ಸ್ಪಂದಿಸುವ ಸಾಧ್ಯತೆಗಳಿವೆ. ಆದರೆ …..?
    ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬುದೇ ಈಗಿನ ಬಹು ದೊಡ್ಡ ಪ್ರಶ್ನೆ….!!

    ಕರ್ನಾಟಕದ ಮಾಧ್ಯಮ ಕ್ಷೇತ್ರದ ಅಂತಃಸ್ಸಾಕ್ಷಿ ವರ್ತಮಾನದ ಈ ಸವಾಲನ್ನು ಯಾವ ರೀತಿ ಸ್ವೀಕರಿಸಲಿದೆ..??

    Reply
  5. Pingback: ಡಿನೋಟಿಫಿಕೇಷನ್ ಹಗರಣದ ಸುಳಿಯಲ್ಲಿ ಪ್ರಜಾವಾಣಿ

Leave a Reply to ವಿ.ಆರ್.ಕಾರ್ಪೆಂಟರ್ Cancel reply

Your email address will not be published. Required fields are marked *