Deccan Herald - Mining Payments

ಬಿ.ಎಸ್.ವೈ. ಹಫ್ತಾ ಪಟ್ಟಿ? ಬೆವರುತ್ತಿರುವ ಪತ್ರಕರ್ತರು?

– ನವೀನ್ ಸೂರಿಂಜೆ

ಗಣಿ ಹಗರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆ ತೀವ್ರಗೊಂಡಿರುವಂತೆಯೇ ಯಡಿಯೂರಪ್ಪ ಬೆವರುವ ಬದಲಾಗಿ ಕರ್ನಾಟಕದ ಪತ್ರಕರ್ತರಲ್ಲಿ ನಡುಕ ಶುರುವಾಗಿದೆ. ಯಡಿಯೂರಪ್ಪರಿಂದ ತಿಂಗಳ ಲೆಕ್ಕದಲ್ಲಿ ಹಫ್ತಾ ಪಡೆಯುತ್ತಿದ್ದ ಪತ್ರಕರ್ತರ ಪಟ್ಟಿ ಯಡಿಯೂರಪ್ಪ ಡೈರಿಯಿಂದ ಸಿಬಿಐಗೆ ಸಿಕ್ಕಿದೆ ಎಂಬ ಸುದ್ದಿ ಕೆಲವೊಂದು ಪತ್ರಕರ್ತರ ನಿದ್ದೆಗೆಡಿಸಿದೆ. ಪಟ್ಟಿ ಈಗಾಗಲೇ ಬಯಲಾಗಿದ್ದು, ಪತ್ರಕರ್ತರ ವಲಯದಲ್ಲಿ ಒಂದು ದೊಡ್ಡ ಸುದ್ಧಿಯೇ ಆಗಿದೆ.

Deccan Herald - Mining Payments
Mining Payments listed in Lokayukta Report: courtesy:Deccan Herald (19/08/11)

ಸಿಬಿಐಗೆ ಯಡಿಯೂರಪ್ಪ ಮನೆಯಲ್ಲಿ ಸಿಕ್ಕಿದೆ ಎನ್ನಲಾದ ಪಟ್ಟಿ ನಮ್ಮ ಬಳಿಯೂ ಇದೆ. ರಾಜ್ಯದ ವಿವಿದ ಜಿಲ್ಲೆಗಳ ಪತ್ರಕರ್ತರ ಹೆಸರುಗಳು ಇದರಲ್ಲಿ ನಮೂದಾಗಿದೆ. ‘ಮೇ 16 ರಂದು ಸಿಬಿಐ ಅಧಿಕಾರಿಗಳು ಬೆಂಗಳೂರು, ಶಿವಮೊಗ್ಗ ನಗರದ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಸದಸ್ಯರ ನಿವಾಸದ ಮೇಲೆ ನಡೆಸಿದ ದಾಳಿಯ ವೇಳೆ ಮಹತ್ವದ ವಿಷಯಗಳನ್ನೊಳಗೊಂಡ ಯಡಿಯೂರಪ್ಪನವರ ಪರ್ಸನಲ್ ಡೈರಿ ಸಿಕ್ಕಿದೆ, ಅದರಲ್ಲಿ ಅವರಿಂದ ನಿಯಮಿತವಾಗಿ ಹಣ ಪಡೆಯುತ್ತಿದ್ದ ಪತ್ರಕರ್ತರ ಹೆಸರುಗಳ ಪ್ರಸ್ತಾಪವಿದೆ,’ ಎಂಬ ಸುದ್ದಿ ಪತ್ರಕರ್ತರ ವಲಯದಲ್ಲಿದೆ. ಮಂಗಳೂರಿನ ಕೆಲವೊಂದು ಪತ್ರಿಕೆಗಳು ಇದನ್ನು ಸುದ್ಧಿಯಾಗಿಯೂ ಪ್ರಕಟಿಸಿತ್ತು. ವಾಸ್ತವವಾಗಿ ಇದು ಸಿಬಿಐ ಯಡಿಯೂರಪ್ಪರಿಂದ ವಶಪಡಿಸಿಕೊಂಡ ಪಟ್ಟಿಯೇ ಅಲ್ಲ.

ಏನಿದು ಪತ್ರಕರ್ತರ ಪಟ್ಟಿ?

ಮೇ 16 ರಂದು ಯಡಿಯೂರಪ್ಪನವರ ಮನೆಯಿಂದ ಸಿಬಿಐ ಅಧಿಕಾರಿಗಳು ಪತ್ರಕರ್ತರ ಹೆಸರುಳ್ಳ ಡೈರಿಯನ್ನು ವಶಪಡಿಸಿಕೊಂಡರು ಎಂದು ಹೇಳಲಾಗುತ್ತದೆ. ಆದರೆ ನನಗೆ ಈ ಪಟ್ಟಿಯನ್ನು ಮೇ 16 ಕ್ಕೂ ಮೊದಲೇ ಬೆಂಗಳೂರಿನ ನನ್ನ ಆತ್ಮೀಯ ಪತ್ರಕರ್ತ ಮಿತ್ರ ಓದಿ ಹೇಳಿದ್ದ. ಅದೇ ಹೆಸರುಗಳುಳ್ಳ, ಅದರೆ ಕೆಲವೊಂದು ಹೆಸರುಗಳನ್ನು ಡಿಲೀಟ್ ಮಾಡಿದ ಒಂದು ಪಟ್ಟಿ ಮೇ 20 ರಂದು ನನ್ನ ಈಮೇಲ್‌ಗೆ ಬೇರೊಬ್ಬ ಪತ್ರಕರ್ತ ಮಿತ್ರ ರವಾನಿಸಿದ್ದ. ಅದೇ ಹೆಸರುಗಳು ಉಳ್ಳ ಪಟ್ಟಿ ಮೇ 16 ಕ್ಕೂ ಮೊದಲು ಬಹಿರಂಗಗೊಂಡಿತ್ತು. ಮತ್ತು ಅದು ಬಿಜೆಪಿ ಕಚೇರಿಯಿಂದ ಹೋಗುತ್ತಿದ್ದ ಹಫ್ತಾದ ಫಲಾನುಭವಿ ಪತ್ರಕರ್ತರ ಪಟ್ಟಿ ಎಂಬ ಸುದ್ಧಿ ಚಾಲ್ತಿಯಲ್ಲಿತ್ತು. ಯಾವಾಗ ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆ ಪ್ರಾರಂಭ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿತೋ ಆಗಲೇ “ಯಡಿಯೂರಪ್ಪ ಬಳಿ ಇದ್ದ ಪತ್ರಕರ್ತರ ಹಫ್ತಾ ಫಲಾನುಭವಿಗಳ ಪಟ್ಟಿ”ಯಾಗಿ ಮಾಪರ್ಾಡಾಗಿತ್ತು. ಇಷ್ಟಕ್ಕೂ ಸಿಬಿಐಗೆ ದೊರೆತ ದಾಖಲೆಯನ್ನು ಎರಡು ಮೂರು ದಿನದಲ್ಲಿ ಬಹಿರಂಗ ಮಾಡಲು ಅಥವಾ ತುರಾತುರಿಯಲ್ಲಿ ಪತ್ರಕರ್ತರಿಗೆ ನೀಡಲು ಅದೇನು ಅನ್ವರ್ ಮಾನಿಪ್ಪಾಡಿ ಆಧ್ಯಕ್ಷತೆಯ ಆಯೋಗವೇ?

ಪತ್ರಕರ್ತರ ಪಟ್ಟಿ ನಿಜವೇ?

ಗಣಿ ಹಪ್ತಾ ಪಡೆದುಕೊಂಡಿರುವ ಪತ್ರಕರ್ತರ ಪಟ್ಟಿ ಇರುವುದು ನಿಜ. ಗಣಿ ಹಗರಣ ತನಿಖೆಯ ಲೋಕಾಯುಕ್ತ ವರದಿಯಲ್ಲೂ ಪತ್ರಕರ್ತರ ಹೆಸರು ಉಲ್ಲೇಖವಾಗಿತ್ತು. ಆನಂತರ ಜನಾರ್ದನ ರೆಡ್ಡಿ ಪ್ರಕರಣದಲ್ಲಿ ಸಿಬಿಐ ಮಾಡಿದ ತನಿಖೆಯಲ್ಲಿ ಇನ್ನಷ್ಟೂ ಪತ್ರಕರ್ತರ ಹೆಸರು ಸಿಬಿಐಗೆ ಕಂಡು ಬಂದಿತ್ತು. ಇದು ಲೋಕಾಯುಕ್ತ ವರದಿಯಲ್ಲಿದ್ದ ಪತ್ರಕರ್ತರ ನಡುಕಕ್ಕೆ ಕಾರಣವಾಗಿತ್ತು. ಹಾಗೆಂದು ಪತ್ರಕರ್ತರನ್ನು ಅರೆಸ್ಟ್ ಮಾಡುತ್ತಾರೆ ಎಂದು ಅವರು ಹೆದರಿಕೊಂಡಿದ್ದಾರೆ ಎಂದರೆ ಬಾಲಿಶವಾಗುತ್ತದೆ. ಜನಾರ್ದನ ರೆಡ್ಡಿಯ ಸಿಬಿಐ ಪ್ರಕರಣಕ್ಕೂ ಯಡಿಯೂರಪ್ಪ ಸಿಬಿಐ ಪ್ರಕರಣಕ್ಕೂ ಸಂಬಂಧ ಇರುವುದರಿಂದ ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪವಾದ ಹೆಸರುಗಳು ಮತ್ತು ಜನಾರ್ದನ ರೆಡ್ಡಿ ತನಿಖೆಯಲ್ಲಿ ಪ್ರಸ್ತಾಪವಾದ ಹೆಸರುಗಳು ಮತ್ತೆ ಯಡಿಯೂರಪ್ಪ ವಿರುದ್ಧದ ಸಿಬಿಐ ವರದಿಯಲ್ಲಿ ಉಲ್ಲೇಖವಾಗುವ ಸಾಧ್ಯತೆ ಇದೆ. ಇದು ಕಾನೂನು ಸಮಸ್ಯೆಗಿಂತಲೂ ಪತ್ರಕರ್ತರ ಮಾನದ ಪ್ರಶ್ನೆಯಾಗಿರುತ್ತದೆ. ಇದನ್ನು ತಪ್ಪಿಸಲೆಂದೇ ಕೆಲವೊಂದು ಪ್ರಾಮಾಣಿಕರ ಹೆಸರನ್ನೂ ಸೇರಿಸಿ  ಪಟ್ಟಿಯನ್ನು  ಯಾರೋ ಸೃಷ್ಠಿಸಿ ಪಸರಿಸಿದ್ದಾರೆ.

ಪ್ರಾಮಾಣಿಕರ ಹೆಸರೂ ಯಡ್ಡಿ ಹಫ್ತಾ ಲಿಸ್ಟ್‌ನಲ್ಲಿ:

ರಾಜ್ಯದ ಕೆಲವೊಂದು ಪ್ರಾಮಾಣಿಕ ಪತ್ರಕರ್ತರ ಹೆಸರನ್ನೂ ಈಗ ಬಹಿರಂಗಗೊಂಡ ಪಟ್ಟಿಯಲ್ಲಿ ಸೇರಿಸಲಾಗಿದೆ. ಲೋಕಾಯುಕ್ತ ವರದಿ ಮತ್ತು ಜನಾರ್ದನ ರೆಡ್ಡಿ ವಿರುದ್ಧದ ತನಿಖಾ ವರದಿಯಲ್ಲಿ ಉಲ್ಲೇಖವಾದ ಪತ್ರಕರ್ತರ ಹೆಸರಿನ ಮಧ್ಯೆ ರಾಜ್ಯದ ಸಭ್ಯ ಪತ್ರಕರ್ತರ ಹೆಸರನ್ನೂ ಸೇರಿಸಿದರೆ ಒಂದೋ “ಆ ವರದಿಯೇ ಸುಳ್ಳು” ಎಂದು ಎಲ್ಲರೂ ವರದಿಯನ್ನು ತಳ್ಳಿ ಹಾಕಬಹುದು. ಅಥವಾ “ಎಲ್ಲಾ ಪತ್ರಕರ್ತರೂ ಹಣ ಮಾಡುವವರೇ. ಅವರು ಇವರು ಅಂತ ಯಾಕೆ ಒಬ್ಬೊಬ್ಬರನ್ನು ಟಾರ್ಗೆಟ್ ಮಾಡೋದು” ಅಂತ ಸುಮ್ಮನಿರಬಹುದು. ಈ ಎರಡೂ ಸಾಧ್ಯತೆಗಳು ಭ್ರಷ್ಠ ಪತ್ರಕರ್ತರಿಗೆ ವರದಾನವಾಗಿ ಪರಿಣಮಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಲೋಕಾಯುಕ್ತ ಪಟ್ಟಿಯಲ್ಲಿದ್ದ ಹಪ್ತಾ ಪಡೆಯುತ್ತಿದ್ದ ಪತ್ರಕರ್ತರು ಇಂತಹುದೊಂದು ಪಟ್ಟಿಯಲ್ಲಿ ತಮ್ಮ ಹೆಸರನ್ನು ಸಭ್ಯ ಪತ್ರಕರ್ತರ ಜೊತೆ ಸೇರಿಸಿ ಪಟ್ಟಿ ಮಾಡಿರಬಹುದು ಎನ್ನಲಾಗುತ್ತಿದೆ. ಲೋಕಾಯುಕ್ತ ಹೆಸರಿಸಿದ ಮತ್ತು ಪತ್ರಿಕಾ ಲೋಕಕ್ಕೆ ಗೊತ್ತಿರುವ ಭ್ರಷ್ಠ ಪತ್ರಕರ್ತರ ಹೆಸರಗಳು ಪಟ್ಟಿಯಲ್ಲಿ ಇರುವುದರ ಜೊತೆ ಪತ್ರಿಕಾ ಕ್ಷೇತ್ರ ಗುರುತಿಸಿದಂತಹ ಕೆಲವೊಂದು ಪ್ರಾಮಾಣಿಕರ ಹೆಸರನ್ನೂ ಪಟ್ಟಿ ಮಾಡಿರುವುದರಿಂದ ಇದು ಸಿಬಿಐ ಕೈಯಲ್ಲಿರುವ ಪಟ್ಟಿ ಅಲ್ಲ ಎನ್ನಬೇಕಾಗುತ್ತದೆ ಮತ್ತು ಅದು ಅಧಿಕೃತ ಎನ್ನುವುದಕ್ಕೆ ಯಾವ ದಾಖಲೆಗಳೂ ಇಲ್ಲವಾಗಿದೆ. ರಾಜ್ಯವನ್ನು ಲೂಟಿ ಹೊಡೆದಿರುವ ಭ್ರಷ್ಠ ರಾಜಕಾರಣಿಗಳ ಜೊತೆ ಕೈ ಜೋಡಿಸಿರೋ ಭ್ರಷ್ಠ ಪತ್ರಕರ್ತರು ಬಚಾವ್ ಆಗೊದಕ್ಕೆ ಏನೆಲ್ಲಾ ಕಸರತ್ತು ಮಾಡುತ್ತಿದ್ದಾರೆ ಎನ್ನುವುದಷ್ಟೆ ಈ ಉದಾಹರಣೆಗಳ ಮೂಲಕ ಗೊತ್ತಾಗುತ್ತದೆ.


[ಸ್ನೇಹಿತರೆ,  ನವೀ‌ನ್‌ರವರು ಮೇಲೆ ಹೇಳಿರುವಂತೆ ಈ ಪಟ್ಟಿ ಪತ್ರಕರ್ತರ ವಲಯದಲ್ಲಿ ಹರಿದಾಡುತ್ತಿದೆ ಮತ್ತು ಅದೇ ಸಮಯದಲ್ಲಿ ಅದು ಸಿಬಿಐ ವಶಪಡಿಸಿಕೊಂಡ ಡೈರಿಯ ಪ್ರತಿ ಎನ್ನುವುದಕ್ಕೆ ಅಧಿಕೃತ ದಾಖಲೆ ಇಲ್ಲವಾಗಿದೆ. ಹಾಗಾಗಿ ನಾವು ಪಟ್ಟಿ ಲಭ್ಯವಿದ್ದರೂ ಅದನ್ನು ಪ್ರಕಟಿಸುವುದು ಸಮಂಜಸವಲ್ಲ. ಆದರೆ ಹೀಗೊಂದು ಪಟ್ಟಿ ಇರುವುದು ನಿಜವೇ ಆಗಿದ್ದು ಮತ್ತು ಅದು ಅಧಿಕೃತವೆಂದು ಗೊತ್ತಾಗಿದ್ದೇ ಆದರೆ ಅದನ್ನು ವರ್ತಮಾನ.ಕಾಮ್‌ನಲ್ಲಿ ಖಂಡಿತ ಪ್ರಕಟಿಸುತ್ತೇವೆ. ರಾಜಕಾರಣಿಗಳ ಭ್ರಷ್ಟತೆಗಿಂತ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವವರ ಭ್ರಷ್ಟತೆ ನೀಚವೂ ಸಮಾಜಕ್ಕೆ ಹೆಚ್ಚು ಹಾನಿಕಾರಿಯಾಗಿಯೂ ಸಾಗುತ್ತಿದೆ. ಮತ್ತು ಈ ಭ್ರಷ್ಟರು ಸಿಕ್ಕಿಹಾಕಿಕೊಳ್ಳುವ ಹಾಗೂ ನ್ಯಾಯಾಲಯದಲ್ಲಾಗಲಿ, ಜನತಾ ನ್ಯಾಯಾಲಯದಲ್ಲಾಗಲಿ ಶಿಕ್ಷೆಗೆ ಒಳಗಾಗುವ ಸಾಧ್ಯತೆಯೂ ಇಲ್ಲವಾಗಿದೆ. ಹೀಗಿರುವಾಗ ಮಾಧ್ಯಮದ, ಅದರಲ್ಲೂ ಕನ್ನಡ ಮಾಧ್ಯಮಲೋಕದ ಭ್ರಷ್ಟತೆಯನ್ನು ತಡೆಯಲು ನಮ್ಮ ಕೈಲಾಗುವ ಎಲ್ಲವನ್ನೂ ನಾವು ಈ ಮೂಲಕ ಮುಂದುವರೆಸುತ್ತೇವೆ. – ರವಿ ಕೃಷ್ಣಾರೆಡ್ಡಿ]

3 thoughts on “ಬಿ.ಎಸ್.ವೈ. ಹಫ್ತಾ ಪಟ್ಟಿ? ಬೆವರುತ್ತಿರುವ ಪತ್ರಕರ್ತರು?

  1. Ananda Prasad

    ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಮಾಧ್ಯಮ ಕೆಟ್ಟಷ್ಟು ಹಿಂದೆಂದೂ ಮಾಧ್ಯಮಗಳು ಕೆಟ್ಟಿರಲಿಲ್ಲ. ಯಡಿಯೂರಪ್ಪನವರ ಹೆಸರು ಲೋಕಾಯುಕ್ತ ವರದಿಯಲ್ಲಿ ಕಾಣಿಸಿಕೊಂಡಾಗ, ಜೈಲಿಗೆ ಹೋದಾಗ, ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟು ಆದೇಶಿಸಿದಾಗ ಹೀಗೆ ಹಲವು ಸಂದರ್ಭಗಳಲ್ಲಿ ಮಾಧ್ಯಮಗಳು ಯಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅನುಕಂಪಪೂರಿತ ವರದಿ ಮಾಡುತ್ತ ಬರುತ್ತಿರುವುದನ್ನು ಕಾಣಬಹುದು. ಇಂಥ ಅನುಕಂಪಕ್ಕೆ ಮಾಧ್ಯಮದವರು ಯಡಿಯೂರಪ್ಪನವರ ಕೈಯಿಂದ ಎಂಜಲು ತಿನ್ನುತ್ತಿರುವುದೇ ಕಾರಣವಿರಬಹುದು. ಮಾಧ್ಯಮವನ್ನು ಕೆಡಿಸಿದರೆ ಇಡೀ ವ್ಯವಸ್ಥೆಯೇ ಕೆಟ್ಟು ಹೋಗುತ್ತದೆ. ಉದಾಹರಣೆಗೆ ಹಿಂದೆ ಕಮ್ಯುನಿಷ್ಟ್ ದೇಶಗಳಲ್ಲಿ ಸ್ವತಂತ್ರ ಮಾಧ್ಯಮವನ್ನು ಹತ್ತಿಕ್ಕಿದ ಕಾರಣ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿಹಿಡಿದು ಎಚ್ಚರಿಸುವವರು ಇಲ್ಲದೆ ಹೋದ ಕಾರಣ ಅಂತಿಮವಾಗಿ ಇಡೀ ಕಮ್ಯುನಿಷ್ಟ್ ವ್ಯವಸ್ಥೆಯೇ ಕುಸಿಯಿತು. ಮಾಧ್ಯಮಗಳನ್ನು ಭ್ರಷ್ಟಗೊಳಿಸಿದ ಕರ್ನಾಟಕದಲ್ಲಿ ಆಗುತ್ತಿರುವುದೂ ಇದೇ.

    Reply
  2. Mahesha

    ನಾಚಿಕೆಯಾಗಬೇಕು ರಾಜಕೀಯ ವ್ಯಕ್ತಿಗಳ ಎಂಜಲಿಗೆ ನಾಲಿಗೆ ಚಾಚಿ ಕೈ ಕೆಡಿಸಿಕೊಂಡ ಭ್ರಷ್ಟ ಫಲಾನುಭವಿ ಪತ್ರಕರ್ತರಿಗೆ,ವ್ಯವಸ್ಥೆಯ ಲೋಪ-ದೋಷಗಳಿಗೆ ಕನ್ನಡಿಯಾಗಬೇಕಾದ ಮಾಧ್ಯಮ ಮಿತ್ರರು ರಾಜ್ಯವಾಳುವ ನಾಯಕರ ಎದುರು ಜೋಳಿಗೆ ಒಡ್ಡಿ ಹೊಟ್ಟೆ ಹೊರೆದುಕೊಳ್ಳುವುದರಿಂದಲೇ ತಿಳಿಯುತ್ತದೆ ಇವರ ಸಾಚಾತನ ಎಂತಹುದು ಎಂದು.ಸಿ.ಬಿ.ಐ ಬಳಿ ಇದೆ ಎನ್ನಲಾದ ಫಲಾನುಭವಿ ಪತ್ರಕರ್ತರ ಪಟ್ಟಿ ಮೊದಲು ಹೊರಜಗತ್ತಿಗೆ ಬಹಿರಂಗವಾಗಬೇಕು.ಇದರಿಂದ ಮಾಧ್ಯಮಗಳ ನೆರಳಿನಡಿ ರಕ್ಷಣೆ ಪಡೆದು ಸಮಾಜದ ವಿಷಜಂತುಗಳಾಗಿರುವ ಉದರೋದ್ಧಾರಕ ಪತ್ರಕರ್ತರಿಗೆ ಶಿಕ್ಷೆಯ ಉಡುಗೋರೆ ನಿಡಬಹುದು.

    Reply

Leave a Reply to dinesh patwardhan Cancel reply

Your email address will not be published. Required fields are marked *