ಮಹಾನಗರಗಳ ಮಾಲಾ ‘ಮಾಲ್’ ಸಂಸ್ಕೃತಿ


-ಡಾ.ಎಸ್.ಬಿ. ಜೋಗುರ


ಆ ರಿಕ್ಷಾದವನಿಗೆ ಅದೇನೋ ನನ್ನ ಬಗ್ಗೆ ಖಾಳಜಿ ಇದ್ದಂಗಿತ್ತು. ನನ್ನ ಮುಖದಲ್ಲಿ ಅವನಿಗೆ ಕಂಡ ಮುಗ್ದತೆಗೆ ನಾನು ಸಾಕ್ಷಿ ಇಲ್ಲವೇ ಕಾರಣವನ್ನೂ ಕೇಳಲು ಹೋಗಲಿಲ್ಲ. ಬದಲಾಗಿ ಆತನ ಎಚ್ಚರಿಕೆಯ ಮಾತುಗಳಿಗೆ ಹೌದೆ..? ಎನ್ನುವ ಪ್ರಶ್ನೆಯನ್ನು ಹಾಕುತ್ತಾ ಹೋದೆ. ನಾನು ಈಚೆಗೆ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದೆ. ಅಂದು ರವಿವಾರ ಮೆಜೆಸ್ಟಿಕ್‌ಗೆ ಹತ್ತಿರವಿರುವ ಮಾಲ್ ಒಂದಕ್ಕೆ ಭೇಟಿ ನೀಡಲು ತೆರಳುವಾಗ ಆ ರಿಕ್ಷಾದವನು ಹೀಗೆ ಉಪದೇಶಿಸಿದ್ದ. ‘ಸರ್ ಅಲ್ಲಿ ಏನೂ ಖರೀದಿ ಮಾಡಬೇಡಿ..! ತುಂಬಾ ಕಾಸ್ಟ್ಲೀ ಅಲ್ಲೇನಿದ್ದರೂ ಬರೀ ಒಂದು ಸುತ್ತು ಹಾಕಿ ಬರಬೇಕು ಅಷ್ಟೇ’ ಅಂದ. ನನ್ನಂಥ ಮಧ್ಯಮ ವರ್ಗದವನಿಗೆ ಈ ಮಾಲ್‌ಗಳು ಅಲ್ಲಿಯ ಜಿಗ್ ಜಾಗ್ ನಿಂದಾಗಿ ತುಂಬಾ ಕಮಾಲ್ ಆಗಿ ಕಂಡರೂ ಒಳಗೊಳಗೆ ಒಂದು ಸಣ್ಣ ಭಯ ಇದ್ದೇ ಇರುತ್ತದೆ. ಆ ಭಯದ ಹಿಂದೆ ಆ ರಿಕ್ಷಾದವನ ಎಚ್ಚರಿಕೆಯ ಮಾತುಗಳು ಕೂಡಾ ಅಡಕವಾಗಿರುತ್ತವೆ.

ರವಿವಾರದ ಆ ಜನಜಂಗುಳಿಯನ್ನು ಕಂಡು ಈ ಮಾಲ್‌ಗಳು ಸದ್ಯದ ಯುವಜನಾಂಗದವರಲ್ಲಿ ಅದು ಯಾವ ಬಗೆಯ ಕೊಳ್ಳುಬಾಕತನದ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿವೆ ಎನ್ನುವುದನ್ನು ಕಣ್ಣಾರೆ ಕಂಡು ಹೌಹಾರಿದೆ. ನನ್ನ ಮಗ ನೋಡಬೇಕೆಂದ ಇಂಗ್ಲಿಷ ಸಿನೇಮಾ ಒಂದರ ಟಿಕೆಟ್ ದರ ಕೇವಲ 520 ರೂಪಾಯಿ ಮಾತ್ರ..! ಅತ್ಯಂತ ಕಡುಬಡತನದಲ್ಲಿ ಬೆಳೆದ ನನಗೆ ಅವ್ವ ಸಾಸಿವೆ ಡಬ್ಬಿಯಲ್ಲಿ ಹುದುಗಿಸಿಡುತ್ತಿದ್ದ ಎಂಟಾಣೆ ನೆನಪಾಗಿ ಒಂದು ಬಾರಿ ಸಣ್ಣಗೆ ಕಂಪಿಸಿ ಹೋದೆ. ಹಣ ಈ ಮಟ್ಟಿಗೆ ಅಗ್ಗವಾಗಿದೆ ಎನ್ನುವುದರ ಪ್ರತ್ಯಕ್ಷ ನಿದರ್ಶನವನ್ನು ಈ ಮಾಲ್‌ನಲ್ಲಿ ನಾನು ಕಂಡೆ. ಬರ್ಫಿಗೆ ಬಣ್ಣ ಸುರಿದು, ಗೋಲಾ ಎಂದು ಮಕ್ಕಳ ಕೈಗಿಡುವ ಐಸ್‌ಗೆ 40 ರೂಪಾಯಿ. ಬದುಕು ಇಷ್ಟೊಂದು ದುಬಾರಿಯಾಯಿತಲ್ಲ..! ಎಂದುಕೊಳ್ಳುತ್ತಲೇ ಮಗನ ಸಣ್ಣ ಬಯಕೆಯನ್ನು ಈಡೇರಿಸಿ ಹಗುರಾಗಿದ್ದೆ.

ಬೆಂಗಳೂರಲ್ಲಿ ಈಗ ಮಾಲ್ ಕಲ್ಚರ್ ರಭಸದಿಂದ ಬೆಳೆಯುತ್ತಿದೆ ಎನ್ನುವುದನ್ನು ಒಬ್ಬ ಸಾಮಾನ್ಯ ರಿಕ್ಷಾ ಓಡಿಸುವಾತನೂ ಬಲ್ಲ. ನಿಜ. ಈ ಮಾಲ್‌ಗಳಿಗೊಂದು ವಿಶಿಷ್ಟ ಮತ್ತು ವಿಚಿತ್ರ ಬಗೆಯ ಸಂಸ್ಕೃತಿಯಿದೆ. ಈ ಬಗೆಯ ಜೀವನ ವಿಧಾನದಲ್ಲಿ ಒಂದು ಬಗೆಯ ಪರಕೀಯ ಪ್ರಜ್ಞೆ ನನ್ನಂಥವನನ್ನು ಕಾಡುವುದಿದೆ. ಇಲ್ಲಿಯ ಜನರ ಮಾತು, ವ್ಯವಹಾರ, ಖರ್ಚು ಮಾಡುವ ರೀತಿ, ಆಯ್ಕೆ, ವೇಷ ಭೂಷಣ ಇವೆಲ್ಲವುಗಳ ನಡುವೆ ನನ್ನಂಥಾ ಯಾರೇ ಆಗಲಿ ತುಸು ಹಿಂದುಳಿದವರಂತೆ ಭಾಸವಾಗುವುದು ಸಹಜವೇ.. ಅಲ್ಲಿಯ ಆಹಾರದ ಪದ್ಧತಿ ಪಕ್ಕಾ ಪರದೇಶಿಯದು ಅನ್ನುವಂತಹದು. ಎಳೆಯ ಗೋಧಿ ಹುಲ್ಲಿನ ಜ್ಯೂಸ್‌ನಿಂದ ಹಿಡಿದು ಗೋವಿನ ಜೋಳದ ಕಾಳಿನವರೆಗೂ ಅಲ್ಲಿ ಪಾಲಿಶ್ ಆಗಿ ಪರಕೀಯತೆಯ ಡೌಲಲ್ಲಿ ಮಾರಾಟವಾಗುತ್ತಿವೆ. ಸೀದಾ ಸಾದಾ ನಿಂಬೆ ಹಣ್ಣಿನ ರಸವೊಂದು ಹತ್ತಾರು ಬಣ್ಣಗಳಲ್ಲಿ ವಿಧ ವಿಧದ ನಾಮಧೇಯಗಳನ್ನು ಹೊತ್ತು  ಜ್ಯೂಸ್ ಹೆಸರಲ್ಲಿ ಬಯಲಾಗುತ್ತಿದೆ. ತಿನ್ನುವ ಆಹಾರದಿಂದ ಹಿಡಿದು ತೊಡುವ ಬಟ್ಟೆಯವರೆಗೂ ಎಲ್ಲವೂ ಗ್ಲಾಮರಸ್. ಬಹಳಷ್ಟು ಶಾಪಗಳಲ್ಲಿ ಸುತ್ತು ಹಾಕುವಾಗ ಗಮನಿಸಿದ ಒಂದು ಪ್ರಮುಖ ಸಂಗತಿಯೆಂದರೆ ಇಲ್ಲಿಯ ಬಹುತೇಕ ಶಾಪ್‌ಗಳಲ್ಲಿ ಕನ್ನಡ ಮಾತನಾಡುವವರು ತುಂಬಾ ವಿರಳ. ಎಲ್ಲವೂ ಇಂಗ್ಲಿಷಮಯ. ದಿಪಂಕರ್ ಗುಪ್ತಾ ಅವರು ತಮ್ಮ ‘ಮಿಸ್ಟೇಕನ್ ಮಾಡರ್ನಿಟಿ’ ಎನ್ನುವ ಕೃತಿಯಲ್ಲಿ ಬಳಸಿದ ‘ವೆಸ್ಟಾಕ್ಸಿಕೇಶನ್’ ಎನ್ನುವ ಪದದ ಅಂತರಂಗೀಕರಣ ಈ ಮಾಲ್‌ಗಳಲ್ಲಿ ಎದ್ದು ತೋರುತ್ತದೆ.

ನಮ್ಮ ಯುವಜನಾಂಗವನ್ನು ಈ ಮಾಲ್‌ಗಳು ಇನ್ನಷ್ಟು ಹೈಬ್ರಿಡ್ ಮಾಡುತ್ತಿವೆಯೇನೋ ಎನ್ನುವ ಅಳುಕು ಕೂಡಾ ಸಮಾಜಶಾಸ್ತ್ರದ ವಿದ್ಯಾರ್ಥಿಯಾದ ನನ್ನನ್ನು ಈ ಮಾಲ್ ಸಂಸ್ಕೃತಿ ಕಾಡಿರುವುದಿದೆ. ಜಾಗತೀಕರಣದ ಸಂದರ್ಭದಲ್ಲಿ ಈ ಮಾಲ್‌ಗಳು ಪಾಶ್ಚಾತ್ತೀಕರಣದ ಗುಂಗಿನಲ್ಲಿರುವವರಿಗೆ ಸಮಾಧಾನಕರ ಅಡ್ಡೆಗಳಾಗಿ ಕಂಡು ಬಂದರೆ, ಗ್ರಾಮೀಣ ಹಿನ್ನೆಲೆಯಿಂದ ಬಂದ ನನ್ನಂಥವರಿಗೆ ಗ್ರಾಮ-ನಗರಗಳ ಅಂತರದ ತೀವ್ರತೆಯ ಪ್ರತಿಮೆಗಳಾಗಿ ತೋರುವುದರಲ್ಲಿ ಒಂದು ಅರ್ಥವಿದೆ. ಅಂದು ರವಿವಾರವಾಗಿತ್ತಾದ್ದರಿಂದ ಮಾಲ್ ತುಂಬಿ ತುಳುಕುತ್ತಿತ್ತು. ಈ ಮಾಲ್‌ಗಳು ಬೆಂಗಳೂರಿನ ಮಾಲಾಮಾಲ್‌ಗಳೆಂದು ಪತ್ನಿಗೆ ಹೇಳಿದೆ. ಅವಳೂ ಕೂಡಾ ‘ದುಡ್ಡಿಗೆ ಬೆಲೆನೇ ಇಲ್ದಂಗ ಆಯ್ತಲ್ಲ..!’ ಎನ್ನುವ ಮಾತಿನೊಂದಿಗೆ ಅಲ್ಲಿಂದ ಹೊರನಡೆದಿದ್ದಳು. ಹೌದು ಇಲ್ಲಿ ಹಣವಿಲ್ಲದೇ ಇರುವವರು ತಮ್ಮ ಅಸ್ಥಿತ್ವವನ್ನೇ ಪ್ರಶ್ನಿಸುತ್ತಾ ಅಲೆಯಬೇಕು. ದೊಡ್ಡ ಪ್ರಮಾಣದ ಬಂಡವಾಳವನ್ನು ತೊಡಗಿಸಿ ಅತ್ಯಂತ ಗ್ಲಾಮರಸ್ ಆಗಿ ನಿರ್ಮಿಸಿರುವ ಈ ಮಾಲ್‌ಗಳ ಘನ ಉದ್ದೇಶ ಇಲ್ಲಿಯ ವ್ಯವಹಾರವನ್ನು ಮಾಲಾಮಾಲ್ ಮಾಡುವುದಾಗಿದೆ. ಯಾರೋ ನನ್ನಂಥಾ ಒಬ್ಬರೋ ಇಬ್ಬರೋ ಇಲ್ಲಿಯ ದರಗಳಿಗೆ ಹೆದರಿದರೆ ಮಾಲ್‌ಗಳ ವ್ಯವಹಾರ ಸೊರಗುವುದಿಲ್ಲ. ಅಷ್ಟಕ್ಕೂ ಈ ಮಾಲ್‌ಗಳಿಗೆ ನನ್ನಂಥವನು ಬೇಕಾಗಿಯೂ ಇಲ್ಲ.

ಈ ಮಾಲ್‌ಗಳು ಒಂದು ಹೊಸ ಬಗೆಯ ಆರ್ಥಿಕ ಸಂಸ್ಕೃತಿಯನ್ನು ಹುಟ್ಟು ಹಾಕುತ್ತಿವೆ. ಅದು ಹೈದರಾಬಾದ್, ಪೂನಾ, ಬೆಂಗಳೂರು, ದೆಹಲಿ, ಕೋಲ್ಕತ್ತಾ ದೇಶದ ಯಾವುದೇ ಮಹಾನಗರವಾದರೂ ಈ ಮಾಲ್‌ಗಳಲ್ಲಿಯ ಸಂಸ್ಕೃತಿ ಸಾರೂಪ್ಯತೆಯಿಂದ ಕೂಡಿದ್ದಾಗಿದೆ. ಇಲ್ಲಿಗೆ ಬರುವವರು ಒಳಬರುತ್ತಿರುವಂತೆ ಇಲ್ಲಿಯ ಆಹಾರ, ವಿಹಾರ, ನೋಟ, ನಡಿಗೆ, ಖರ್ಚು ಇವುಗಳಿಗೆ ತಕ್ಕುದಾದ ರೀತಿಯಲ್ಲಿಯೇ ಮಾನಸಿಕವಾಗಿ ಸಜ್ಜಾದವರು. ಮಾಲ್‌ಗಳು ತೀರಾ ಅಪರೂಪಕ್ಕೊಮ್ಮೆ ಬರು ಹೋಗುವ ನನ್ನಂಥವನನ್ನು ಅನ್ಯ ಲೋಕದ ಜೀವಿಯಂತೆಯೆ ಗ್ರಹಿಸುವುದರೊಂದಿಗೆ ಮಾಲ್ ಸಂಸ್ಕೃತಿಯಲ್ಲಿ ನನ್ನಂಥವರನ್ನು ಅರಗಿಸಿಕೊಳ್ಳುವುದಿಲ್ಲ. ನನ್ನಂಥವರು ಸಮುದ್ರದಲ್ಲಿಯ ಶವದಂತೆ ಅಲ್ಲಿ ಹೆಚ್ಚು ಹೊತ್ತು ದಕ್ಕದೇ ದಡಕ್ಕೆ ಬರುವುದು ಖಚಿತ.

ಈ ಮಾಲ್‌ಗೆ ಬರುವ ಮಂದಿಯ ಜೇಬುಗಳು ಮಾಲಾಮಾಲ್ ಆಗಿರುತ್ತವೆ ಎನ್ನುವ ದೃಢನಿಶ್ಚಯದಿಂದಲೇ ಮಾಲ್ ಎದುರಲ್ಲಿರುವ ರಿಕ್ಷಾದವನು ಕೂಡಾ ರವಿವಾರ ತನ್ನ ಆಟೊ ದರವನ್ನು ಹೈಕ್ ಮಾಡಿರುತ್ತಾನೆ. ನಾನು ಮಾಲ್‌ನಿಂದ ಮರಳಿ ಬರುವಾಗ ಇದೇನು ಮಾರಾಯಾ ನಿನ್ನ ರೇಟ್ ದುಪ್ಪಟ್ಟು..? ಅಂದಾಗ ಆತ ತೀರಾ ಸಹಜವಾಗಿಯೇ ನಗುತ್ತಾ ‘ಸರ್ ಇವತ್ತು ಸಂಡೆ ಅಲ್ಲವಾ..? ಇನ್ನೂ ಸ್ವಲ್ಪ ತಡ ಮಾಡಿದರೆ ನಿಮಗೆ ರಿಕ್ಷಾನೂ ಸಿಗೊಲ್ಲ’ ಅಂದಾಗ ಮರು ಮಾತಾಡದೇ ಹತ್ತಿ ಕುಳಿತಿದ್ದೆ. ಮಾಲ್ ಕಡೆಗೆ ತೆರಳುವವರ ದಟ್ಟತೆಯ ಪ್ರಮಾಣದಲ್ಲಿ ಮಾತ್ರ ಇಳಿಮುಖತೆ ಕಾಣಲಿಲ್ಲ.

Leave a Reply

Your email address will not be published. Required fields are marked *