Daily Archives: May 28, 2012

ಜಾತಿ ಮತ್ತು ಸ್ವಹಿತಾಸಕ್ತಿ ಮೀರಿದ ನ್ಯಾಯಪ್ರಜ್ಞೆ

– ರವಿ ಕೃಷ್ಣಾರೆಡ್ಡಿ

ನೆನ್ನೆ (27/5/12) ಸಂಜೆಗೆಲ್ಲ ಬಹುಶಃ ದೇಶದ ಬಹಳಷ್ಟು ಜನರಿಗೆ ಐಪಿಎಲ್ ‌ಫೈನಲ್ ಪಂದ್ಯದ ಸಾಂಕ್ರಾಮಿಕ ಜ್ವರ ಹಬ್ಬಿತ್ತು. ಆಟವೂ ಸಹ ಕೊನೆಯವರೆಗೂ ಕುತೂಹಲ ಕಾಯ್ದುಕೊಂಡಿತ್ತು. ಕೊನೆಯ ಚೆಂಡಿನ ತನಕವೂ ಹೋರಾಟ ಬಿಡದ ಧೋನಿ ಈ ಪಂದ್ಯದಲ್ಲೂ ಅಂತಹುದೇ ಅಂತ್ಯ ಕಾಣಿಸಬಹುದೇ ಎನ್ನುವುದು ಬಹುಶಃ ಬಹುತೇಕ ಎಲ್ಲರಲ್ಲೂ ಇದ್ದ ಕುತೂಹಲ. ಇನ್ನು, ಟಿವಿಯಲ್ಲಿ ಕಂಡ ಕೆಲವು ದೃಶ್ಯಗಳಂತೂ ಚಿತ್ರವಿಚಿತ್ರವಾಗಿದ್ದವು. ತಲೆಯ ಮೇಲೆ ಕೈಇಟ್ಟುಕೊಂಡಿದ್ದವರು ಹಲವರಾದರೆ ದೇವರಿಗೆ ಮೊರೆ ಇಡುತ್ತಿದ್ದವರೂ ಹಲವರಿದ್ದರು. ಭಾವನಾತ್ಮಕವಾಗಿ ಇದು ನಮ್ಮನ್ನು ಚಲಿಸಬೇಕು ಎನ್ನಲು ಇದು ದೇಶದೇಶಗಳ ನಡುವೆ ನಡೆದ ಪಂದ್ಯವಲ್ಲ. ದೇಶದೊಳಗಿನ ರಾಜ್ಯಗಳೊಳಗಿನ ಪಂದ್ಯ ಎನ್ನುವ ಹಾಗೂ ಇಲ್ಲ. ಬೆಂಗಳೂರಿನ ರಾಹುಲ್ ದ್ರಾವಿಡ್ ದೂರದ ರಾಜಸ್ಥಾನ ತಂಡದ ನಾಯಕ. ಕೊಲ್ಕತ್ತದ ಗಂಗೂಲಿ ಪುಣೆ ತಂಡದ ನಾಯಕ. ನೆನ್ನೆ ನಡೆದ ಪಂದ್ಯದಲ್ಲಿಯೇ ದೆಹಲಿಯ ಗೌತಮ್ ಗಂಭೀರ್ ಕೊಲ್ಕತ್ತ ತಂಡವನ್ನು ನಡೆಸಿದರೆ ಜಾರ್ಖಂಡ್‌ನ ಧೋನಿ ಚೆನ್ನೈ ತಂಡದ ನಾಯಕ. ಆಟಗಾರರ ಮತ್ತು ತಂಡದ ನಾಯಕರ ಒತ್ತಡವನ್ನು ಅರ್ಥ ಮಾಡಿಕೊಳ್ಳಬಹುದು. ಅವರಿಗೆ ಈ ಆಟಗಳು ಕೇವಲ ಆಟ ಎನ್ನುವುದಕ್ಕಿಂತ ಹೆಚ್ಚು ಮಹತ್ವದ್ದವು. ತಮ್ಮ ಭವಿಷ್ಯದ ಸ್ಥಾನ ಮತ್ತು ಹಣದ ಹರಿವಿನ ಯೋಚನೆಯೇ ಅವರಿಗೆ ಬಹುಶಃ ಎಲ್ಲಕ್ಕಿಂತ ಹೆಚ್ಚು ಇರುತ್ತದೆ. ಆದರೆ, ಅಲ್ಲಿದ್ದ ಪ್ರೇಕ್ಷಕರ ಕಾತರಗಳು ಮತ್ತು ದಿಗಂತದೆಡೆಗಿನ ಮೊರೆಗಳು ಅತಾರ್ಕಿಕವಾದವುಗಳು. ಆಟವನ್ನು ಸವಿಯಲಾರದ ಮೂಢರು. ಬದುಕು ತೀರಾ ವೈಯಕ್ತಿಕವಾಗುತ್ತಿದೆ ಮತ್ತು ಅಸಹ್ಯವಾಗುತ್ತಿದೆ.

ಆದರೂ, ಈ ಐಪಿಎಲ್ ಪಂದ್ಯಗಳ ಒಂದು ಸೊಗಸು ಎಂದರೆ ಅದು ಒಂದು ರೀತಿಯಲ್ಲಿ ಎರಡು ವಿಶ್ವತಂಡಗಳ ಆಟ. ಪ್ರಾಂತ್ಯಗಳ, ಭಾಷೆಗಳ, ದೇಶದ ಗಡಿ ದಾಟಿ ಈ ತಂಡಗಳು ರೂಪುಗೊಂಡಿವೆ. ಆಸ್ಟ್ರೇಲಿಯದ ಆಕ್ರಮಣಕಾರಿ ಆಟಗಾರನಿಗೆ ಜೊತೆಯಾಗಿ ನ್ಯೂಜಿಲೆಂಡ್‌ನ ಜಂಟಲ್‌ಮನ್, ವೆಸ್ಟ್ ಇಂಡೀಸ್‌ನ ದೈತ್ಯಶಕ್ತಿಯ ಕಪ್ಪು ಆಟಗಾರನಿಗೆ ಹೆಗಲುಕೊಟ್ಟು ಆಡುವ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಅಂತ್ಯದ ನಂತರ ಆಡಲು ಇಳಿದ ಬಿಳಿಯ ದೈತ್ಯ, ಈಗಾಗಲೆ ದಂತಕತೆಯಾಗಿರುವ ಶತಕೋಟ್ಯಾಧಿಪತಿ ಆಟಗಾರನೊಂದಿಗೆ ಭಾರತದ ಯಾವುದೊ ಮೂಲೆಯ ಚಿಕ್ಕ ಪಟ್ಟಣದಿಂದ ಬಂದ ಬಡಯುವಕ; ನಿಜಕ್ಕೂ ಇದೊಂದು ಒಳ್ಳೆಯ ಜಾಗತೀಕರಣದ ಸುಂದರ ಉದಾಹರಣೆ. ದೇಶ-ಪ್ರಾಂತ್ಯ-ಭಾಷೆ-ಜನಾಂಗಗಳ ಗಡಿ ಮೀರಿ ಏಕ-ತಂಡವಾಗಿ ಆಡುತ್ತಿರುವ ಬಹುಶಃ ವಿಶ್ವದ ಏಕೈಕ ಕ್ರೀಡಾಕೂಟ. (ಇದರ ಜೊತೆಗೆ ಈ ಕ್ರೀಡಾಕೂಟದಿಂದ ಸಾಧ್ಯವಾಗುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನೂ—ಗುಣಾತ್ಮಕವಾದವುಗಳನ್ನು, ನಿರಾಕರಿಸುವಂತಿಲ್ಲ.)

ದೇಶ ನೆನ್ನೆ ಈ ಆಟದ ಕುತೂಹಲದಲ್ಲಿ ಮತ್ತು ಭಾನುವಾರದ ಸಂಜೆಯ ರಜೆಯ ವಿರಾಮದಲ್ಲಿದ್ದಾಗ ಆಂಧ್ರಪ್ರದೇಶದಲ್ಲಿ ದೇಶದ ಪ್ರಜಾಪ್ರಭುತ್ವಕ್ಕೆ ಸಂಬಂಧಪಟ್ಟಂತೆ ಗಂಭೀರವಾದ ಘಟನೆ ಜರುಗಿತು. ಮೂರು ದಿನದಿಂದ ಪ್ರತಿದಿನವೂ ಜಗನ್‍ಮೋಹನ್ ರೆಡ್ಡಿಯನ್ನು ವಿಚಾರಣೆಗೊಳಪಡಿಸಿದ್ದ ಸಿಬಿಐ ಸಂಸ್ಥೆ ನೆನ್ನೆ ಸಂಜೆಗೆ ರೆಡ್ಡಿಯನ್ನು ಬಂಧಿಸುವ ನಿರ್ಧಾರ ತೆಗೆದುಕೊಂಡಿತು. ಈಗ ಜಗನ್‌ಮೋಹನ್ ರೆಡ್ಡಿ ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾರೆ.

ಕೆರಳ ಹೊರತುಪಡಿಸಿ ದಕ್ಷಿಣದ ಇತರ ಮೂರೂ ರಾಜ್ಯಗಳಲ್ಲಿ ಭ್ರಷ್ಟಾಚಾರ ಎನ್ನುವುದು ಕಳೆದ ಒಂದೂವರೆ ದಶಕದಿಂದ ಅತಿ ಸಾಮಾನ್ಯವಾಗಿ ಹೋಗಿದೆ. ತಮಿಳುನಾಡಿನ ಜಯಲಲಿತ ದಶಕದ ಹಿಂದೆಯೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಜೈಲಲ್ಲಿ ಕುಳಿತಿದ್ದರು. ಅವರ ನಂತರ ಬಂದ ಕರುಣಾನಿಧಿ ಸರ್ಕಾರದ ಭ್ರಷ್ಟತೆಯೂ ಕಮ್ಮಿ ಇರಲಿಲ್ಲ. ರಾಜ, ಕನಿಮೊಳಿಗಳು ದೆಹಲಿ ಮಟ್ಟದಲ್ಲಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಕರುಣಾನಿಧಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರು ಇಂದು ತಮಿಳುನಾಡಿನಲ್ಲಿ ಭ್ರಷ್ಟಾಚಾರದ ಕೇಸುಗಳಲ್ಲಿ ಬಂಧನಕ್ಕೊಳಗಾಗುತ್ತಿರುವುದು ಹೊರಗೆ ಹೆಚ್ಚಿಗೆ ಗೊತ್ತಾಗಿಲ್ಲ. ಸ್ಟ್ಯಾಲಿನ್ ಮತ್ತವರ ಮಗನ ಮೇಲೆಯೂ ಆಪಾದನೆಗಳಿವೆ. ಜಯಲಲಿತರಂತಹ ಜಯಲಲಿತರವರೇ ಇಂದು ತಮಿಳುನಾಡಿನಲ್ಲಿ ಸಂತಳಂತೆ ಕಾಣಿಸುತ್ತಿದ್ದಾರೆ ಎಂದರೆ ಕರುಣಾನಿಧಿಯವರ ಪಕ್ಷದ ಭ್ರಷ್ಟಾಚಾರ ಯಾವ ಹಂತಕ್ಕೆ ಹೋಗಿರಬಹುದು ಎನ್ನುವುದನ್ನು ಊಹಿಸಬಹುದು.

ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅವಧಿಯಲ್ಲಿ ಅವರ ಕುಟುಂಬ ಮಾಡಿದ ಆಸ್ತಿ ಮತ್ತು ದುಡ್ಡಿನ ಬಗ್ಗೆ ಅನೇಕ ಆರೋಪ ಮತ್ತು ಊಹಾಪೋಹಗಳಿವೆ. ನಾಯ್ಡು‌ರವರ ಪತ್ನಿಯ ಒಡೆತನದ ಹೆರಿಟೇಜ್ ಡೈರಿ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ರಾಜ್ಯದ ಕೆ‍ಎಂ‌ಎಫ್‌ಗೆ ಸೆಡ್ಡು ಹೊಡೆದಿತ್ತು. ಈ ಡೈರಿ ಆರಂಭವಾಗಿರುವುದೇ ಭ್ರಷ್ಟಾಚಾರದ ಹಣದಿಂದ ಎಂಬ ಆಪಾದನೆಗಳಿತ್ತು. ಸಾಮಾನ್ಯ ಬಡರೈತನ ಮಗ ಚಂದ್ರಬಾಬು ನಾಯ್ಡುರವರ ಕುಟುಂಬದ ಆಸ್ತಿ ಸಾವಿರಾರು ಕೋಟಿಗಳಲ್ಲಿ ಇದೆ ಎಂದು 2004ರಲ್ಲಿಯೇ ಅಲ್ಲಿಯ ಅವರ ರಾಜಕೀಯ ವಿರೋಧಿಗಳು ಆರೋಪಗಳನ್ನು ಮಾಡುತ್ತಿದ್ದರು. ಆದರೆ ಅವರ ನಂತರ ಬಂದ ವೈಎಸ್‌ಆರ್ ಆಡಳಿತ ಮತ್ತು ಅವರ ಮನೆಯವರ ಭ್ರಷ್ಟತೆ ಇಂದು ನಾಯ್ಡುರವರನ್ನು ಅಲ್ಲಿ ಸಂತನನ್ನಾಗಿ ಮಾಡಿದೆಯೇನೊ.

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇಂದು ಇಡೀ ದೇಶದಲ್ಲಿ ತಮ್ಮ ಕುಟುಂಬದ ರಾಜಕೀಯ ಅಧಿಕಾರ ದುರುಪಯೋಗಪಡಿಸಿಕೊಂಡು ಅತಿ ಹೆಚ್ಚು ಹಣ ಮತ್ತು ಬೇನಾಮಿ ಆಸ್ತಿ ಸಂಪಾದಿಸಿದ ರಾಜಕಾರಣಿ ಇದ್ದರೆ ಅದು ಜಗನ್‌ಮೋಹನ್ ರೆಡ್ಡಿ. ತನ್ನ ತಂದೆ ಮುಖ್ಯಮಂತ್ರಿಯಾಗಿದ್ದ ಕೇವಲ ಐದೂವರೆ ವರ್ಷಗಳಲ್ಲಿ ಈ ಮಟ್ಟದ ಅಕ್ರಮ ಆಸ್ತಿ ಮತ್ತು ರಾಜಕೀಯ ಬಲವನ್ನು ದೇಶದ ಇನ್ನೊಂದು ರಾಜಕೀಯ ಕುಟುಂಬ ಮಾಡಿರುವ ಸಾಧ್ಯತೆ ಕಮ್ಮಿ. ನಮ್ಮ ರಾಜ್ಯದ ಯಡ್ಡಯೂರಪ್ಪನವರಿಗಿಂತ ಹೆಚ್ಚಿನ ಮಟ್ಟದ ನಿರಂಕುಶತೆ ಮತ್ತು ಇನ್ನೂ ಹೆಚ್ಚಿನ ಸರ್ವಾಧಿಕಾರತ್ವ ಇದ್ದ ವ್ಯಕ್ತಿ ರಾಜಶೇಖರ ರೆಡ್ಡಿ. 2009ರಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಸೋತಿದ್ದರೆ ಅದಕ್ಕೆ ಕಾರಣ ಅಲ್ಲಿ  ಕಾಂಗ್ರೆಸ್‌ನ ಹಣಕಾಸು ಸಂಪನ್ಮೂಲಗಳನ್ನು ಸರಿಗಟ್ಟಲಾಗದೆ ಹೋದದ್ದು. ರಾಜಶೇಖರ ರೆಡ್ಡಿ ಬದುಕಿದ್ದರೆ ಅವರು ಇಂದು ಎದುರಿಸಬಹುದಿದ್ದ ಸ್ಥಿತಿ ಬಹುಶಃ ನಮ್ಮ ರಾಜ್ಯದಲ್ಲಿ ಇಂದು ಯಡ್ಡಯೂರಪ್ಪ ಎದುರಿಸುತ್ತಿರುವ ಸ್ಥಿತಿಗಿಂತ ಭಿನ್ನವಿರುತ್ತಿರಲಿಲ್ಲ. ಮಗನ ಸ್ಥಾನದಲ್ಲಿ ಅಪ್ಪ-ಮಗ ಇಬ್ಬರೂ ಇರುತ್ತಿದ್ದರು. (ಇದನ್ನು ಅಷ್ಟು ಖಚಿತವಾಗಿ ಹೇಳಲು ಆಗುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ಜನಾರ್ದನ ರೆಡ್ಡಿ, ರಾಜಶೇಖರ ರೆಡ್ಡಿ, ಜಗನ್‌ಮೋಹನ್ ರೆಡ್ಡಿ ಇವರ ಮೇಲೆಲ್ಲ ಸಿಬಿಐ ಈ ರೀತಿ ಎರಗಿ ಬೀಳುತ್ತಿತ್ತು ಎಂದು ಅಷ್ಟೇನೂ ಸ್ವಾಯತ್ತವಲ್ಲದ, ಕೇಂದ್ರದಲ್ಲಿ ಅಧಿಕಾರ ನಡೆಸುವ ಪಕ್ಷದ ಒಲವುಗಳನ್ನು ಅರಿತು ಕೆಲಸ ಮಾಡುವ ಸಿಬಿಐ ಸಂಸ್ಥೆಯ ಇತಿಹಾಸ ಅರಿತವರು ಹೇಳಲಾರರು. ಆದರೆ, ಸಿಬಿಐ ಇವೆಲ್ಲವನ್ನೂ ಮೀರಿ ಕಾರ್ಯ ನಿರ್ವಹಿಸಬೇಕಾದ ಸಂದರ್ಭಗಳು ಬರುತ್ತವೆ.  ಉದಾಹರಣೆಗೆ, ಸುಪ್ರೀಮ್‌ಕೋರ್ಟ್ ಆದೇಶದ ಮೇರೆಗೆ, ಮತ್ತು ನಮ್ಮ ನ್ಯಾಯಾಂಗ ಭ್ರಷ್ಟವಾಗಿಲ್ಲದ ಸಂದರ್ಭದಲ್ಲಿ.)

ಇನ್ನು ನಮ್ಮ ರಾಜ್ಯದಲ್ಲಿ 2000 ದಿಂದೀಚೆಗೆ ನಡೆದಿರುವ ಭ್ರಷ್ಟಾಚಾರ ಗೊತ್ತಿರುವುದೆ. ಪ್ರತಿ ಮಂತ್ರಿ-ಮುಖ್ಯಮಂತ್ರಿಯೂ ಹಿಂದಿನ ಮಂತ್ರಿ-ಮುಖ್ಯಮಂತ್ರಿಯನ್ನು ಮೀರಿಸುತ್ತ ಬಂದರು. ಈ ಸ್ವಚ್ಛಂದ ಭ್ರಷ್ಟಾಚಾರದ ಪ್ರಯುಕ್ತವಾಗಿಯೇ ಒಮ್ಮೆ ರಾಜ್ಯದ ಐದು ಜನ ಶಾಸಕರು ಜೈಲಿನಲ್ಲಿ ಇದ್ದರು. ರಾಜ್ಯದ ಪುಣ್ಯವೋ ಪಾಪವೋ ಈಗ ಎಲ್ಲರೂ ಹೊರಗಿದ್ದಾರೆ. (ಇನ್ನೂ ಒಳಗಿರುವವರ ಶಾಸಕತ್ವ ಈಗಾಗಲೆ ಮುಗಿದಿದೆ, ಇಲ್ಲವೆ ಕೆಲವೇ ದಿನಗಳಲ್ಲಿ ಮುಗಿಯಲಿದೆ.)

ಒಂದು ರೀತಿಯಲ್ಲಿ ತಮಿಳುನಾಡಿನ ಜನರಿಗಿಂತ ನಮ್ಮ ರಾಜ್ಯದ ಮತ್ತು ಆಂಧ್ರಪ್ರದೇಶದ ಜನ ಕಮ್ಮಿ ನ್ಯಾಯವಂತಿಕೆ ತೋರಿಸುತ್ತಿದ್ದಾರೆ. ಅವರ ನ್ಯಾಯಾನ್ಯಾಯ ವಿವೇಚನೆಗೆ ರೋಗ ಬಡಿದಿರುವುದು ಜಾತಿ ಎಂಬ ಕ್ಷುದ್ರ ಆಲೋಚನೆಯಿಂದ. ಆಂಧ್ರದಲ್ಲಿ ಕೇವಲ  ಐದಾರು ಪ್ರತಿಶತ ಇರುವ ರೆಡ್ಡಿ ಜಾತಿಯ “ಜಾತಿವಾದಿ” ಜನ ಜಗನ್‌ಮೋಹನ್ ರೆಡ್ಡಿಯ ಪರ ನಿಂತಿರುವ ಹಾಗಿದೆ. ಅವರಿಗೆ ಎಲ್ಲಕ್ಕಿಂತ ಜಾತಿ ಮುಖ್ಯವಾಗಿದೆ. ಜಗನ್ ಬಂಧನ ಮುಂದಿನ ದಿನಗಳಲ್ಲಿ ಆತನಿಗೆ ಇನ್ನೂ ಹೆಚ್ಚಿನ ರಾಜಕೀಯ ಮತ್ತು ಜಾತಿ ಬಲ ತಂದುಕೊಟ್ಟರೂ ಆಶ್ಚರ್ಯಪಡುವ ಹಾಗೆ ಇಲ್ಲ. ಇನ್ನು ಒಂದೆರಡು ವಾರದಲ್ಲಿ ಅಲ್ಲಿ ನಡೆಯಲಿರುವ 18 ವಿಧಾನಸಭೆ ಮತ್ತು ಒಂದು ಲೋಕಸಭೆ ಉಪಚುನಾವಣೆಯಲ್ಲಿ ಈ ಎಲ್ಲಾ ಸ್ಥಾನಗಳನ್ನು ಆತನ ವೈಕಾಪಾ (ವೈಎಸ್‍ಆರ್ ಕಾಂಗ್ರೆಸ್ ಪಾರ್ಟಿ) ಗೆದ್ದರೆ ಆಶ್ಚರ್ಯಪಡುವಂತಹುದ್ದೇನೂ ಇಲ್ಲ. ಕರ್ನಾಟಕದಲ್ಲೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಸುಮಾರು 14-15 ಪ್ರತಿಶತ ಇರುವ ಲಿಂಗಾಯತ ಜಾತಿಯ “ಜಾತಿವಾದಿ” ಜನ ಯಡ್ಡಯೂರಪ್ಪನವರ ಪರ ಇರುವಂತೆ ತೋರಿಸುತ್ತಿದ್ದಾರೆ. ಉಗಿಸಿಕೊಳ್ಳಲೂ ಯೋಗ್ಯರಲ್ಲದ, ಬಸವಣ್ಣನ ಹೆಸರು ಹೇಳಲೂ ಅರ್ಹರಲ್ಲದ ಕೆಲವು ಹೀನ ಮಠಾಧೀಶರಂತೂ ಈ ಸಮುದಾಯದ ಸಾಂಘಿಕ ಮತ್ತು ಸಮಷ್ಟಿ ನ್ಯಾಯಪ್ರಜ್ಞೆಯನ್ನೇ ಅವಮಾನ ಮಾಡುತ್ತಿದ್ದಾರೆ. ಕೆಲವು ನಿವೃತ್ತ ನ್ಯಾಯಾಧೀಶರೂ ಜಾತಿ ಕಾರಣಕ್ಕೆ ತಮ್ಮ ನ್ಯಾಯದ ಪರಿಕಲ್ಪನೆಯನ್ನೇ ಬದಲಾಯಿಸಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ರುಜುವಾತಾದರೂ ಹಲವು ಕ್ಷೇತ್ರಗಳಲ್ಲಿ ಯಡ್ಡಯೂರಪ್ಪ ಮತ್ತು ಅವರ ಬೆಂಬಲಿಗರನ್ನು ಜಾತಿವಾದಿಗಳು ಗೆಲ್ಲಿಸುವ ಮತ್ತು ಅವರ ವಿರೋಧಿಗಳನ್ನು ಸೋಲಿಸುವ ಎಲ್ಲಾ ಸಾಧ್ಯತೆಗಳೂ ಇವೆ.  ಜಾತಿವಾದಿಗಳಿಗೆ ತಮ್ಮ ಜಾತಿಯ ಮುಖಂಡನೊಬ್ಬ ಮಾಡಿದ ಭ್ರಷ್ಟಾಚಾರ ಭ್ರಷ್ಟಾಚಾರ ಅಲ್ಲವೇ ಅಲ್ಲ. ಬೇರೆ ಜಾತಿಯವನು ಮಾಡಿದರೆ ಮಾತ್ರ ಅದು ಭ್ರಷ್ಟಾಚಾರ.

ನೆನ್ನೆಯ ಬಂಧನ ನನ್ನನ್ನೂ ಒಳಗೊಂಡಂತೆ ದೇಶದ ಅನೇಕ ಪ್ರಜಾಪ್ರಭುತ್ವ ಪ್ರೇಮಿಗಳಲ್ಲಿ ಒಂದಿಷ್ಟು ಸಂತಸ ತಂದಿರಬಹುದು. ಆದರೆ, ಈಗಾಗಲೆ ಇಂತಹ ಹಲವಾರು ಬಂಧನಗಳು ಆಗಿಹೋಗಿವೆ. ಇವರು ಜೈಲಿನಿಂದ ಹೊರಗೆ ಬಂದಾಗ ಆರತಿ ಬೆಳಗಿ ವೀರೋಚಿತ ಸ್ವಾಗತಗಳು ಸಿಗುತ್ತವೆ. ಈ ನೆನಪು ಮತ್ತು ವಾಸ್ತವವೇ ನಮ್ಮೆಲ್ಲರನ್ನು ಒಂದೆಡೆಗೆ ಕಾರ್ಯೋನ್ಮುಖರಾಗಲು ಎಳೆಯಬೇಕು. ಆದರೆ ಎಲ್ಲಕ್ಕಿಂತ ಸುಲಭವಾಗಿ ಇದು ನಮ್ಮನ್ನು ಸಿನಿಕರನ್ನಾಗಿ ಮಾಡುತ್ತಿದೆ.

ಏನಾಗಬೇಕು ಎಂದು ಗೊತ್ತಿರುವವರು ಇಲ್ಲಿ ಅನೇಕರಿದ್ದಾರೆ. ಹೇಗೆ ಮಾಡಬೇಕು ಎಂದು ತೋರಿಸಲು ಮಾತ್ರ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ದೇಶದ ಪ್ರಜೆಗಳಲ್ಲಿ ಜಾತಿ ಮತ್ತು ಸ್ವಹಿತಾಸಕ್ತಿ ಮೀರಿದ ನ್ಯಾಯಪ್ರಜ್ಞೆ ಬೆಳೆಯದ ಹೊರತು ಇಲ್ಲಿ ಗುಣಾತ್ಮಕ ಪರಿಣಾಮಗಳು ಮತ್ತು ಬದಲಾವಣೆಗಳು ಸಾಧ್ಯವಾಗುವುದಿಲ್ಲ. ಅಂತಹ ಪರಿವರ್ತನೆಯನ್ನು ಸಾಧ್ಯವಾಗಿಸಿಕೊಳ್ಳುವುದು ಹೇಗೆ?

ದಲಿತ ಶೋಷಣೆಯ ಅಪಮಾನಕರ ಚಿತ್ರಗಳು

– ಅರುಣ್ ಜೋಳದಕೂಡ್ಲಿಗಿ

ರಾಜಕಾರಣದ ಸುದ್ದಿಯ ಗದ್ದಲದ ಕಾಲ್ತುಳಿತದಲ್ಲಿ ಕೆಲವು ದಲಿತ ಶೋಷಣೆಯ ಚಿತ್ರಗಳು ಮಸುಕಾಗುತ್ತವೆ. ಅವುಗಳು ಸ್ಥಳೀಯ ಸುದ್ದಿಯ ಕಾಲಮ್ಮಿನಲ್ಲಿ ಮುಚ್ಚಿಹೋಗುವ ಮೊದಲು, ಆ ಪುಟಗಳನ್ನು ತೆರೆದಿಡುವ ಅಗತ್ಯವಿದೆ. ಅಂತಹ ಮೂರು ಚಿತ್ರಗಳು ಹೀಗಿವೆ:

ಶೋಷಣೆ-1

ಹಾವೇರಿಯಿಂದ 8 ಕಿಲೋಮೀಟರ್ ದೂರದ ದೇವಿಹೊಸೂರು ಗ್ರಾಮದ ದಲಿತರಾದ ಗುಡ್ಡಪ್ಪ ಬಾಸೂರ, ಗಂಗವ್ವ ಕಾಳಿ ಅವರ ಕುಟುಂಬಕ್ಕೆ ಊರು ಬಹಿಷ್ಕಾರ ಹಾಕಿದೆ. ಕಾರಣ ಫೆಬ್ರವರಿಯಲ್ಲಿ ಗ್ರಾಮಪಂಚಾಯತಿ ಆಡಳಿತದಿಂದ ರಸ್ತೆ ನಿರ್ಮಾಣ ನಡೆಸಿತ್ತು. ಈ ಸಂದರ್ಭದಲ್ಲಿ ಗುಡ್ಡಪ್ಪ ಚಲವಾದಿ ಎರಡೂ ಬದಿಯಲ್ಲಿ ಸಮಾನವಾಗಿ ಭೂಮಿ ಪಡೆದು ರಸ್ತೆ ಮಾಡಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಊರಿನ ಸವರ್ಣೀಯರು ಕೋಪಗೊಂಡು ರಾತ್ರೋರಾತ್ರಿ ಗುಡ್ಡಪ್ಪನ ಮನೆ ಮುಂದಿನ ಹತ್ತಕ್ಕೂ ಹೆಚ್ಚಿನ ತೆಂಗು, ತೇಗ, ಚಿಕ್ಕು ಗಿಡಮರಗಳನ್ನು ಜೆ.ಸಿ .ಬಿ. ಯಿಂದ ಕಿತ್ತಿದ್ದಾರೆ. ಇದನ್ನು ವಿರೋಧಿಸಿದ ಗುದ್ಲೆಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಅದೀಗ ತಾರಕ್ಕೇರಿದೆ.

ಗುದ್ಲೆಪ್ಪನ ಈಗಿರುವ ಮನೆಯ ಜಾಗದಲ್ಲಿ ಮನೆಯೇ ಇಲ್ಲ ಎಂದು ಗ್ರಾಮಪಂಚಾಯ್ತಿ ನೋಟೀಸ್ ನೀಡಿದೆ. ಮನೆಗೆ ನೀರಿನ ಸಂಪರ್ಕವನ್ನು ನಿಲ್ಲಿಸಲಾಗಿದೆ. ಸತತ ಮೂರು ತಿಂಗಳು ನೀರಿಲ್ಲದಂತೆ ನೋಡಿಕೊಳ್ಳಲಾಗಿದೆ. ಕ್ಷೌರ ಮಾಡುವಂತಿಲ್ಲ, ಕೂಲಿಗೆ ಕರೆಯುವಂತಿಲ್ಲ ಮುಂತಾಗಿ ಊರವರಿಗೆ ತಾಕೀತು ಹಾಕಿದ್ದಾರೆ. ಈ ಬಗ್ಗೆ ಕೇಸ್ ದಾಖಲಿಸಲು ಪಿ.ಎಸ್.ಐ ಸಹಕರಿಸಿಲ್ಲ, ಬದಲಾಗಿ ಇವರನ್ನೆ ಬೆದರಿಸಿದ್ದಾಗಿ ಪಕ್ಕೀರವ್ವ ಅಳುಕಿನಿಂದಲೇ ಹೇಳಿದರು. ಇದು ಮಾದ್ಯಮಗಳಲ್ಲಿ ಸುದ್ದಿಯಾದ ನಂತರ ಎ.ಸಿ, ಡಿ.ಸಿ ಭೇಟಿ ನೀಡಿ ಪರಿಸ್ಥಿತಿಯನ್ನು ಸದ್ಯಕ್ಕೆ ಸುಧಾರಿಸಿದ್ದಾರೆ.

ಆದರೂ ಮುಸುಕಿನ ಗುದ್ದಾಟ ಮುಂದುವರಿದಿದೆ. ಬೈಗುಳ ನಿಂದನೆ ಇನ್ನೂ ನಡೆದಿದೆ, ಸರ್ಕಾರದೋರು ಎಷ್ಟು ದಿನ ನಿಮಿಗೆ ರಕ್ಷಣಿ ಕೋಡ್ತಾರ ನೋಡೋಣು ಎನ್ನುವಂತಹ ಬೆದರಿಕೆಯ ಮಾತುಗಳು ನಿಂತಿಲ್ಲ. ’ಬಾಳ ಕಷ್ಟ ಐತಿ ಸಾರ್ ಬದುಕೋದು’ ಎಂದು ಗುದ್ಲೆಪ್ಪ ಆತಂಕದಿಂದ ನನ್ನೊಂದಿಗೆ ಮಾತನಾಡಿದರು. ಅವರ ಕುಟುಂಬ ಈಗ ಭಯಭೀತವಾಗಿ ಅಲ್ಲಿ ಜೀವನ ನಡೆಸಿದೆ.

ಶೋಷಣೆ-2

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಬೈರಮಡ್ಡಿಯ ದಲಿತರಿಗೆ ಅಲ್ಲಿನ ಬಹುಸಂಖ್ಯಾತ ಸವರ್ಣೀಯರು ಬಹಿಷ್ಕಾರ ಹಾಕಿದ್ದಾರೆ. ದಲಿತರೊಂದಿಗೆ ಮಾತನಾಡುವಂತಿಲ್ಲ, ಕೂಲಿ ಕೆಲಸಕ್ಕೆ ಕರೆಯುವಂತಿಲ್ಲ, ಕಿರಾಣಿ ಅಂಗಡಿಯವರು ದಲಿತರೊಂದಿಗೆ ವ್ಯವಹರಿಸುವಂತಿಲ್ಲ, ಜಿನ್ನಿನಲ್ಲಿ ಕಾಳನ್ನು ಹಿಟ್ಟು ಮಾಡುವಂತಿಲ್ಲ, ಆಟೋದವರು ಹತ್ತಿಸಿಕೊಳ್ಳುವಂತಿಲ್ಲ ಎನ್ನುವ ವಿಧಿಯಿದೆ. ಇದನ್ನು ಮೀರಿದವರಿಗೆ 5000 ದಂಡ ವಿಧಿಸುವ ಬೆದರಿಕೆ ಇದೆ.

ತಿಂಗಳ ಹಿಂದೆ ಎರಡು ಕೋಮಿನ ಯುವಕರ ಮದ್ಯೆ ಜಗಳ ನಡೆದು, ದಲಿತ ಯುವಕನ ಕೈ ಮುರಿದಿತ್ತು. ಆ ಹೊತ್ತಿಗೆ ಬಹುಸಂಖ್ಯಾತ ಕೋಮಿನವರು ದೂರು ದಾಖಲಾಗದಂತೆ ಪ್ರಭಾವ ಬೀರಿದ್ದರು. ಹಾಗಾಗಿ ಎರಡು ಕೋಮಿನ ಮುಖಂಡರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಹೀಗಿರುವಾಗ, ಗ್ರಾಮದ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಅಡ್ಲಿಗಿ ತುಂಬಲು ಸವರ್ಣೀಯರು ದಲಿತರನ್ನು ಕರೆದಿದ್ದಾರೆ. ಆದರೆ ದಲಿತರು ನಾವು ಇನ್ನುಮುಂದೆ ಅಡ್ಲಗಿ ತುಂಬಲು ಬರುವುದಿಲ್ಲ ಎಂದಿದ್ದಾರೆ. ಈ ಕಾರಣಕ್ಕೆ ಬಹಿಷ್ಕಾರ ಹಾಕಲಾಗಿದೆ.

ಬೈರಮಡ್ಡಿಯ ದಲಿತ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದಾಗ ಈಗಲೂ ಬಹಿಷ್ಕಾರ ಮುಂದುವರೆದಿರುವ ಬಗ್ಗೆ ತಿಳಿಸಿದರು. ಡಿ.ವೈ.ಎಸ್.ಪಿ ಭೇಟಿ ನೀಡಿದ್ದು ಬಿಟ್ಟರೆ, ಜಿಲ್ಲಾಧಿಕಾರಿಗಳಾಗಲಿ, ತಹಶಿಲ್ದಾರರಾಗಲಿ ಊರಿಗೆ ಭೇಟಿ ನೀಡಿಲ್ಲ. ಈಗ ಪೋಲಿಸಿನವರ ಕಾವಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ಮೇಲೆ ಕೇಸಿದ್ದರೂ ಪೊಲೀಸ್ ಇಲಾಖೆ ಈತನಕ ಯಾವುದೇ ಕ್ರಮ ಜರುಗಿಸಿಲ್ಲವೆಂದು ತಿಳಿಯಿತು.

ಶೋಷಣೆ-3

ಜೀತ ಮುಕ್ತ ಕುಟುಂಬ ಪುನಃ ಜೀತಕ್ಕಿರುವ ಘಟನೆ ಗುಡಿಬಂಡೆ ತಾಲೂಕು ತಿರುಮಣಿ ಗ್ರಾಮ ಪಂಚಾಯತಿಗೆ ಸೇರಿದ ಬೋಗೆನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಕದಿರಪ್ಪ ಕುಟುಂಬದವರು ಕಳೆದ ವರ್ಷ ಚಿಕ್ಕಬಳ್ಳಾಪುರ ತಾಲೂಕು ಹೊಸಹುಡ್ಯ ಗ್ರಾಮದ ಸ್ಥಿತಿವಂತರೊಬ್ಬರಿಂದ 20 ಸಾವಿರ ಸಾಲ ಮಾಡಿದ್ದರು. ಅದರ ಬಡ್ಡಿ ತೀರಿಸಲು ಕುಟುಂಬದ ಒಂಬತ್ತು ಜನ ಜೀತದಾಳಾಗಿ ಆ ಮನೆಯಲ್ಲಿ ದುಡಿಯುತ್ತಿದ್ದರು. ಇದನ್ನು ಗುರುತಿಸಿ ಜೀತ ವಿಮುಕ್ತ ಕರ್ನಾಟಕ ಸಂಘಟನೆ ಮತ್ತು ಎ.ಸಿ ಅವರು ಈ ಕುಟುಂಬವನ್ನು ಜೀತ ಮುಕ್ತಗೊಳಿಸಿ ಒಂದು ಸಾವಿರ ಪರಿಹಾರ ಧನ ನೀಡಿದ್ದರು.

ಆನಂತರ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿ, ಜಿಲ್ಲಾ ಆಡಳಿತ ಈ ಜೀತ ಮುಕ್ತರಿಗೆ ಪುನರ್ ವಸತಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದ ಕಾರಣ ಆರು ತಿಂಗಳಿನಿಂದ ಗ್ರಾಮ ತೊರೆದು ಮತ್ತೆ ಜೀತದಾಳುಗಳಾಗಿ ಈ ಕುಟುಂಬ ಜೀವನ ನಡೆಸುತ್ತಿದೆ. ಇವರು ಮತ್ತೆ ಜೀತಪದ್ದತಿಗೆ ಮರಳಲು ಮುಖ್ಯವಾಗಿ ತಾಲೂಕು, ಜಿಲ್ಲಾಡಳಿತದ ನಿರ್ಲಕ್ಷವೇ ಕಾರಣವಾಗಿದೆ. ಈ ಭಾಗದ ಜೀ.ವಿ.ಕ ಸಂಘಟನೆಯ ಬೀಚಗಾನಹಳ್ಳಿಯ ನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿ ಮಾತನಾಡಿದಾಗ ಗುಡಿಬಂಡೆ, ಬಾಗೆಪಲ್ಲಿ ಒಳಗೊಂಡಂತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಈಗಲೂ ಜೀತ ಪದ್ದತಿ ಇರುವ ಬಗ್ಗೆ ಮಾಹಿತಿ ನೀಡಿದರು. ಇದನ್ನು ಕೇಳಿ ಆತಂಕವಾಯಿತು.

ಇದೇ ಹೊತ್ತಿಗೆ ಸುದ್ದಿಯಾಗದ ಹಲವು ದಲಿತ ಶೋಷಣೆಯ ಘಟನೆಗಳು ನಡೆದಿರಬಹುದು. ಆದರೆ ಮೇಲಿನವು ಮಾದ್ಯಮಗಳಲ್ಲಿ ಸುದ್ದಿಯಾದಂತವು. ಸುದ್ದಿಯಾದರೂ ದಲಿತರಿಗೆ ನ್ಯಾಯ ಸಿಗದೆ ಭಯದ ವಾತಾವರಣ ಮುಂದುವರಿದಿದೆ. ಇದನ್ನು ನೋಡಿದರೆ ದಲಿತ ಶೋಷಣೆಯ ಸ್ವರೂಪದ ಅರಿವಾಗುತ್ತದೆ. ಮುಖ್ಯವಾಗಿ ಊರಿನ ಬಹುಸಂಖ್ಯಾತರು ಅಲ್ಲಿನ ಪೊಲೀಸ್ ಇಲಾಖೆಯ ಮೇಲೆ ಪ್ರಭಾವ ಬೀರಿ ದಲಿತರ ಕೇಸು ದಾಖಲಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ನಗರಕ್ಕೆ ಸಂಪರ್ಕ ಕಲ್ಪಿಸುವ ಟೆಂಪೋಗಳಲ್ಲಿ ದಲಿತರನ್ನು ಹತ್ತಿಸಿಕೊಳ್ಳದೆ ತಾತ್ಕಾಲಿಕವಾಗಿ ನಗರದ ಸಂಪರ್ಕವನ್ನೂ ತಪ್ಪಿಸಲಾಗುತ್ತಿದೆ. ಕುಡಿವ ನೀರನ್ನು ನಿಷೇದಿಸಲಾಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯತಿಯಲ್ಲಿಯೂ ದಲಿತರ ಹತ್ತಿಕ್ಕುವ ರಾಜಕಾರಣ ನಡೆಯುತ್ತಿದೆ. ಇವುಗಳೆಲ್ಲಾ ನಿರಂತರವಾಗಿ ನಡೆಯುತ್ತಲೇ ಇವೆ.

***

ಈ ಮೇಲಿನ ಘಟನೆಗಳಿಗೆ ಸಂಬಂಧಿಸಿದ ರಾಜ್ಯಮಟ್ಟದ ಅಧಿಕಾರಿ ವರ್ಗ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ದಲಿತರ ಕೇಸುಗಳು ದಾಖಲು ಮಾಡಿಕೊಳ್ಳವ ಮತ್ತು ಮಾಡಿಕೊಳ್ಳದಿರುವ ಬಗ್ಗೆ ಕಠಿಣ ಕ್ರಮಗಳನ್ನು ಜರುಗಿಸುವ ಅಗತ್ಯವಿದೆ. ದಲಿತ, ದಲಿತಪರ ಸಂಘಟನೆಗಳು ಈ ಘಟನೆಗಳ ವಿರುದ್ಧ ರಾಜ್ಯವ್ಯಾಪಿ ಧ್ವನಿ ಎತ್ತಬೇಕಾಗಿದೆ.