ದಲಿತ ಶೋಷಣೆಯ ಅಪಮಾನಕರ ಚಿತ್ರಗಳು

– ಅರುಣ್ ಜೋಳದಕೂಡ್ಲಿಗಿ

ರಾಜಕಾರಣದ ಸುದ್ದಿಯ ಗದ್ದಲದ ಕಾಲ್ತುಳಿತದಲ್ಲಿ ಕೆಲವು ದಲಿತ ಶೋಷಣೆಯ ಚಿತ್ರಗಳು ಮಸುಕಾಗುತ್ತವೆ. ಅವುಗಳು ಸ್ಥಳೀಯ ಸುದ್ದಿಯ ಕಾಲಮ್ಮಿನಲ್ಲಿ ಮುಚ್ಚಿಹೋಗುವ ಮೊದಲು, ಆ ಪುಟಗಳನ್ನು ತೆರೆದಿಡುವ ಅಗತ್ಯವಿದೆ. ಅಂತಹ ಮೂರು ಚಿತ್ರಗಳು ಹೀಗಿವೆ:

ಶೋಷಣೆ-1

ಹಾವೇರಿಯಿಂದ 8 ಕಿಲೋಮೀಟರ್ ದೂರದ ದೇವಿಹೊಸೂರು ಗ್ರಾಮದ ದಲಿತರಾದ ಗುಡ್ಡಪ್ಪ ಬಾಸೂರ, ಗಂಗವ್ವ ಕಾಳಿ ಅವರ ಕುಟುಂಬಕ್ಕೆ ಊರು ಬಹಿಷ್ಕಾರ ಹಾಕಿದೆ. ಕಾರಣ ಫೆಬ್ರವರಿಯಲ್ಲಿ ಗ್ರಾಮಪಂಚಾಯತಿ ಆಡಳಿತದಿಂದ ರಸ್ತೆ ನಿರ್ಮಾಣ ನಡೆಸಿತ್ತು. ಈ ಸಂದರ್ಭದಲ್ಲಿ ಗುಡ್ಡಪ್ಪ ಚಲವಾದಿ ಎರಡೂ ಬದಿಯಲ್ಲಿ ಸಮಾನವಾಗಿ ಭೂಮಿ ಪಡೆದು ರಸ್ತೆ ಮಾಡಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಊರಿನ ಸವರ್ಣೀಯರು ಕೋಪಗೊಂಡು ರಾತ್ರೋರಾತ್ರಿ ಗುಡ್ಡಪ್ಪನ ಮನೆ ಮುಂದಿನ ಹತ್ತಕ್ಕೂ ಹೆಚ್ಚಿನ ತೆಂಗು, ತೇಗ, ಚಿಕ್ಕು ಗಿಡಮರಗಳನ್ನು ಜೆ.ಸಿ .ಬಿ. ಯಿಂದ ಕಿತ್ತಿದ್ದಾರೆ. ಇದನ್ನು ವಿರೋಧಿಸಿದ ಗುದ್ಲೆಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಅದೀಗ ತಾರಕ್ಕೇರಿದೆ.

ಗುದ್ಲೆಪ್ಪನ ಈಗಿರುವ ಮನೆಯ ಜಾಗದಲ್ಲಿ ಮನೆಯೇ ಇಲ್ಲ ಎಂದು ಗ್ರಾಮಪಂಚಾಯ್ತಿ ನೋಟೀಸ್ ನೀಡಿದೆ. ಮನೆಗೆ ನೀರಿನ ಸಂಪರ್ಕವನ್ನು ನಿಲ್ಲಿಸಲಾಗಿದೆ. ಸತತ ಮೂರು ತಿಂಗಳು ನೀರಿಲ್ಲದಂತೆ ನೋಡಿಕೊಳ್ಳಲಾಗಿದೆ. ಕ್ಷೌರ ಮಾಡುವಂತಿಲ್ಲ, ಕೂಲಿಗೆ ಕರೆಯುವಂತಿಲ್ಲ ಮುಂತಾಗಿ ಊರವರಿಗೆ ತಾಕೀತು ಹಾಕಿದ್ದಾರೆ. ಈ ಬಗ್ಗೆ ಕೇಸ್ ದಾಖಲಿಸಲು ಪಿ.ಎಸ್.ಐ ಸಹಕರಿಸಿಲ್ಲ, ಬದಲಾಗಿ ಇವರನ್ನೆ ಬೆದರಿಸಿದ್ದಾಗಿ ಪಕ್ಕೀರವ್ವ ಅಳುಕಿನಿಂದಲೇ ಹೇಳಿದರು. ಇದು ಮಾದ್ಯಮಗಳಲ್ಲಿ ಸುದ್ದಿಯಾದ ನಂತರ ಎ.ಸಿ, ಡಿ.ಸಿ ಭೇಟಿ ನೀಡಿ ಪರಿಸ್ಥಿತಿಯನ್ನು ಸದ್ಯಕ್ಕೆ ಸುಧಾರಿಸಿದ್ದಾರೆ.

ಆದರೂ ಮುಸುಕಿನ ಗುದ್ದಾಟ ಮುಂದುವರಿದಿದೆ. ಬೈಗುಳ ನಿಂದನೆ ಇನ್ನೂ ನಡೆದಿದೆ, ಸರ್ಕಾರದೋರು ಎಷ್ಟು ದಿನ ನಿಮಿಗೆ ರಕ್ಷಣಿ ಕೋಡ್ತಾರ ನೋಡೋಣು ಎನ್ನುವಂತಹ ಬೆದರಿಕೆಯ ಮಾತುಗಳು ನಿಂತಿಲ್ಲ. ’ಬಾಳ ಕಷ್ಟ ಐತಿ ಸಾರ್ ಬದುಕೋದು’ ಎಂದು ಗುದ್ಲೆಪ್ಪ ಆತಂಕದಿಂದ ನನ್ನೊಂದಿಗೆ ಮಾತನಾಡಿದರು. ಅವರ ಕುಟುಂಬ ಈಗ ಭಯಭೀತವಾಗಿ ಅಲ್ಲಿ ಜೀವನ ನಡೆಸಿದೆ.

ಶೋಷಣೆ-2

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಬೈರಮಡ್ಡಿಯ ದಲಿತರಿಗೆ ಅಲ್ಲಿನ ಬಹುಸಂಖ್ಯಾತ ಸವರ್ಣೀಯರು ಬಹಿಷ್ಕಾರ ಹಾಕಿದ್ದಾರೆ. ದಲಿತರೊಂದಿಗೆ ಮಾತನಾಡುವಂತಿಲ್ಲ, ಕೂಲಿ ಕೆಲಸಕ್ಕೆ ಕರೆಯುವಂತಿಲ್ಲ, ಕಿರಾಣಿ ಅಂಗಡಿಯವರು ದಲಿತರೊಂದಿಗೆ ವ್ಯವಹರಿಸುವಂತಿಲ್ಲ, ಜಿನ್ನಿನಲ್ಲಿ ಕಾಳನ್ನು ಹಿಟ್ಟು ಮಾಡುವಂತಿಲ್ಲ, ಆಟೋದವರು ಹತ್ತಿಸಿಕೊಳ್ಳುವಂತಿಲ್ಲ ಎನ್ನುವ ವಿಧಿಯಿದೆ. ಇದನ್ನು ಮೀರಿದವರಿಗೆ 5000 ದಂಡ ವಿಧಿಸುವ ಬೆದರಿಕೆ ಇದೆ.

ತಿಂಗಳ ಹಿಂದೆ ಎರಡು ಕೋಮಿನ ಯುವಕರ ಮದ್ಯೆ ಜಗಳ ನಡೆದು, ದಲಿತ ಯುವಕನ ಕೈ ಮುರಿದಿತ್ತು. ಆ ಹೊತ್ತಿಗೆ ಬಹುಸಂಖ್ಯಾತ ಕೋಮಿನವರು ದೂರು ದಾಖಲಾಗದಂತೆ ಪ್ರಭಾವ ಬೀರಿದ್ದರು. ಹಾಗಾಗಿ ಎರಡು ಕೋಮಿನ ಮುಖಂಡರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಹೀಗಿರುವಾಗ, ಗ್ರಾಮದ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಅಡ್ಲಿಗಿ ತುಂಬಲು ಸವರ್ಣೀಯರು ದಲಿತರನ್ನು ಕರೆದಿದ್ದಾರೆ. ಆದರೆ ದಲಿತರು ನಾವು ಇನ್ನುಮುಂದೆ ಅಡ್ಲಗಿ ತುಂಬಲು ಬರುವುದಿಲ್ಲ ಎಂದಿದ್ದಾರೆ. ಈ ಕಾರಣಕ್ಕೆ ಬಹಿಷ್ಕಾರ ಹಾಕಲಾಗಿದೆ.

ಬೈರಮಡ್ಡಿಯ ದಲಿತ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದಾಗ ಈಗಲೂ ಬಹಿಷ್ಕಾರ ಮುಂದುವರೆದಿರುವ ಬಗ್ಗೆ ತಿಳಿಸಿದರು. ಡಿ.ವೈ.ಎಸ್.ಪಿ ಭೇಟಿ ನೀಡಿದ್ದು ಬಿಟ್ಟರೆ, ಜಿಲ್ಲಾಧಿಕಾರಿಗಳಾಗಲಿ, ತಹಶಿಲ್ದಾರರಾಗಲಿ ಊರಿಗೆ ಭೇಟಿ ನೀಡಿಲ್ಲ. ಈಗ ಪೋಲಿಸಿನವರ ಕಾವಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ಮೇಲೆ ಕೇಸಿದ್ದರೂ ಪೊಲೀಸ್ ಇಲಾಖೆ ಈತನಕ ಯಾವುದೇ ಕ್ರಮ ಜರುಗಿಸಿಲ್ಲವೆಂದು ತಿಳಿಯಿತು.

ಶೋಷಣೆ-3

ಜೀತ ಮುಕ್ತ ಕುಟುಂಬ ಪುನಃ ಜೀತಕ್ಕಿರುವ ಘಟನೆ ಗುಡಿಬಂಡೆ ತಾಲೂಕು ತಿರುಮಣಿ ಗ್ರಾಮ ಪಂಚಾಯತಿಗೆ ಸೇರಿದ ಬೋಗೆನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಕದಿರಪ್ಪ ಕುಟುಂಬದವರು ಕಳೆದ ವರ್ಷ ಚಿಕ್ಕಬಳ್ಳಾಪುರ ತಾಲೂಕು ಹೊಸಹುಡ್ಯ ಗ್ರಾಮದ ಸ್ಥಿತಿವಂತರೊಬ್ಬರಿಂದ 20 ಸಾವಿರ ಸಾಲ ಮಾಡಿದ್ದರು. ಅದರ ಬಡ್ಡಿ ತೀರಿಸಲು ಕುಟುಂಬದ ಒಂಬತ್ತು ಜನ ಜೀತದಾಳಾಗಿ ಆ ಮನೆಯಲ್ಲಿ ದುಡಿಯುತ್ತಿದ್ದರು. ಇದನ್ನು ಗುರುತಿಸಿ ಜೀತ ವಿಮುಕ್ತ ಕರ್ನಾಟಕ ಸಂಘಟನೆ ಮತ್ತು ಎ.ಸಿ ಅವರು ಈ ಕುಟುಂಬವನ್ನು ಜೀತ ಮುಕ್ತಗೊಳಿಸಿ ಒಂದು ಸಾವಿರ ಪರಿಹಾರ ಧನ ನೀಡಿದ್ದರು.

ಆನಂತರ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿ, ಜಿಲ್ಲಾ ಆಡಳಿತ ಈ ಜೀತ ಮುಕ್ತರಿಗೆ ಪುನರ್ ವಸತಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದ ಕಾರಣ ಆರು ತಿಂಗಳಿನಿಂದ ಗ್ರಾಮ ತೊರೆದು ಮತ್ತೆ ಜೀತದಾಳುಗಳಾಗಿ ಈ ಕುಟುಂಬ ಜೀವನ ನಡೆಸುತ್ತಿದೆ. ಇವರು ಮತ್ತೆ ಜೀತಪದ್ದತಿಗೆ ಮರಳಲು ಮುಖ್ಯವಾಗಿ ತಾಲೂಕು, ಜಿಲ್ಲಾಡಳಿತದ ನಿರ್ಲಕ್ಷವೇ ಕಾರಣವಾಗಿದೆ. ಈ ಭಾಗದ ಜೀ.ವಿ.ಕ ಸಂಘಟನೆಯ ಬೀಚಗಾನಹಳ್ಳಿಯ ನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿ ಮಾತನಾಡಿದಾಗ ಗುಡಿಬಂಡೆ, ಬಾಗೆಪಲ್ಲಿ ಒಳಗೊಂಡಂತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಈಗಲೂ ಜೀತ ಪದ್ದತಿ ಇರುವ ಬಗ್ಗೆ ಮಾಹಿತಿ ನೀಡಿದರು. ಇದನ್ನು ಕೇಳಿ ಆತಂಕವಾಯಿತು.

ಇದೇ ಹೊತ್ತಿಗೆ ಸುದ್ದಿಯಾಗದ ಹಲವು ದಲಿತ ಶೋಷಣೆಯ ಘಟನೆಗಳು ನಡೆದಿರಬಹುದು. ಆದರೆ ಮೇಲಿನವು ಮಾದ್ಯಮಗಳಲ್ಲಿ ಸುದ್ದಿಯಾದಂತವು. ಸುದ್ದಿಯಾದರೂ ದಲಿತರಿಗೆ ನ್ಯಾಯ ಸಿಗದೆ ಭಯದ ವಾತಾವರಣ ಮುಂದುವರಿದಿದೆ. ಇದನ್ನು ನೋಡಿದರೆ ದಲಿತ ಶೋಷಣೆಯ ಸ್ವರೂಪದ ಅರಿವಾಗುತ್ತದೆ. ಮುಖ್ಯವಾಗಿ ಊರಿನ ಬಹುಸಂಖ್ಯಾತರು ಅಲ್ಲಿನ ಪೊಲೀಸ್ ಇಲಾಖೆಯ ಮೇಲೆ ಪ್ರಭಾವ ಬೀರಿ ದಲಿತರ ಕೇಸು ದಾಖಲಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ನಗರಕ್ಕೆ ಸಂಪರ್ಕ ಕಲ್ಪಿಸುವ ಟೆಂಪೋಗಳಲ್ಲಿ ದಲಿತರನ್ನು ಹತ್ತಿಸಿಕೊಳ್ಳದೆ ತಾತ್ಕಾಲಿಕವಾಗಿ ನಗರದ ಸಂಪರ್ಕವನ್ನೂ ತಪ್ಪಿಸಲಾಗುತ್ತಿದೆ. ಕುಡಿವ ನೀರನ್ನು ನಿಷೇದಿಸಲಾಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯತಿಯಲ್ಲಿಯೂ ದಲಿತರ ಹತ್ತಿಕ್ಕುವ ರಾಜಕಾರಣ ನಡೆಯುತ್ತಿದೆ. ಇವುಗಳೆಲ್ಲಾ ನಿರಂತರವಾಗಿ ನಡೆಯುತ್ತಲೇ ಇವೆ.

***

ಈ ಮೇಲಿನ ಘಟನೆಗಳಿಗೆ ಸಂಬಂಧಿಸಿದ ರಾಜ್ಯಮಟ್ಟದ ಅಧಿಕಾರಿ ವರ್ಗ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ದಲಿತರ ಕೇಸುಗಳು ದಾಖಲು ಮಾಡಿಕೊಳ್ಳವ ಮತ್ತು ಮಾಡಿಕೊಳ್ಳದಿರುವ ಬಗ್ಗೆ ಕಠಿಣ ಕ್ರಮಗಳನ್ನು ಜರುಗಿಸುವ ಅಗತ್ಯವಿದೆ. ದಲಿತ, ದಲಿತಪರ ಸಂಘಟನೆಗಳು ಈ ಘಟನೆಗಳ ವಿರುದ್ಧ ರಾಜ್ಯವ್ಯಾಪಿ ಧ್ವನಿ ಎತ್ತಬೇಕಾಗಿದೆ.

9 thoughts on “ದಲಿತ ಶೋಷಣೆಯ ಅಪಮಾನಕರ ಚಿತ್ರಗಳು

  1. ದೊಡ್ಡಿಪಾಳ್ಯ ನರಸಿಂಹಮೂರ್ತಿ

    ಈ ಮೇಲಿನ ಉದಾಹರಣೆಗಳು ಕೇವಲ ಸಾಂಕೇತಿಕ ಮಾತ್ರ. ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಪ್ರತಿನಿತ್ಯ ಇಂಥಾ ಸಾವಿರಾರು ಅಮಾನವೀಯ ಪ್ರಕರಣಗಳು ನಡೆಯುತ್ತಲೇ ಇವೆ. ಇಂಥಾ ದುಷ್ಕೃತ್ಯಗಳ ವಿರುದ್ಧ ಹೋರಾಡಬೇಕಿದ್ದ ಸಂಘಟನೆಗಳು ಇಂದು ವಿಘಟಿತಗೊಂಡು, ರಾಜೀಕೋರ ಹಾದಿ ಹಿಡಿದಿರುವುದು ಈ ಕಾಲಘಟ್ಟದ ಒಂದು ದೊಡ್ಡ ಸಾಮಾಜಿಕ ದುರಂತ.

    ನಮ್ಮಲ್ಲಿ ನಿಜವಾದ ಪ್ರಜಾತಂತ್ರ ಆಚರಣೆಗೆ ಬರಲು, ನಮ್ಮದು ನಾಗರಿಕ ಸಮಾಜ ಎಂದು ಧೈರ್ಯವಾಗಿ ಹೇಳಿಕೊಳ್ಳುವಂತಾಗಲೂ ಇನ್ನೂ ಎಷ್ಟು ದಶಕಗಳು ಬೇಕಾಗಬಹುದು…?

    Reply
  2. nagraj harapanahalli

    ARUN….DEVIHOSURU, TIRUMANI,BYARAMADDI….e GRAMAGALIGE HOGI VASTVA ARITIDDIRALLA….DALITARA KASTAGALIGE MANAVEEYA MUKHA VITTU NODUVA RAJAKARANIGALU YAVAGA BARUTTAROO….GOTTILLA. DALITA SANGATANEGALU TULITAKKE OLAGADA DALITARA KASTAGALIGE SAPNDISABEKU….AVRU ENU MADUTTIDDARE ANTHA AVALOKANA MADIKOLLABEKIDE.

    Reply
  3. cheuvaraj A

    alla sir ade haveri jelleya ranebennuru talukina tirumala devarakoopa ennuva uralli kaleda november 26, 2011 ralli obba 18 varshada yuvakananna NARABALI kottidru adu gotta gelayare

    Reply
  4. channabasava hede

    yavattu idakkella koneyembudirutto devare balla. ondu kade intaha dardanak kathe nitya nirantaraviddare mattondu kade melerid bandhugala attahasave bereyagide…cheeee!

    Reply
  5. ಹರ್ಷಕುಮಾರ್ ಕುಗ್ವೆ

    ಹಾವೇರಿಯ ನರಬಲಿ ಘಟನೆಗೆ ಸಂಬಂಧಿಸಿದಂತೆ ದಲಿತ ಸಂಘಟನೆಗಳು ಯಾವ ಪ್ರಮಾಣದಲ್ಲಿ ಮಾತನಾಡಬೇಕಿತ್ತೋ ಆ ಪ್ರಮಾಣಕ್ಕೆ ದನಿ ಎತ್ತಲೂ ಇಲ್ಲ. ಬೆಂಗಳೂರು, ಚಿತ್ರದುರ್ಗಗಳಿಂದ ಸ್ವಾಭಿಮಾನಿ ದಲಿತ ಶಕ್ತಿ ಎನ್ನುವ ಸಂಘಟನೆಯ ಕೆಲವು ಸಂಘಟಕರು ಅಲ್ಲಿಗೆ ಹೋಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಿರುಗಾಡಿ ಜನರನ್ನು ಸಂಘಟಿಸಿ ಒಂದು ಪ್ರತಿಭಟನಾ ಮೆರವಣಿಗೆಯನ್ನು ಸಂಘಟಿಸಿದ್ದರು. ಮೊದಲಿಗೆ ಸರಿಆಗಿ ವರದಿ ಮಾಡಿದ್ದ ಟಿವಿ ಚಾನಲ್ ಗಳು ರಾತ್ರೋ ರಾತ್ರಿ ಪ್ಲೇಟ್ ಬದಲಾಯಿಸಿಬಿಟ್ಟವು. ಬೆಂಗಳೂರಿನ ಕೆಲವು ದಲಿತ ನಾಯಕರಿಗೆ ಸಂಪರ್ಕಿಸಿ ಈ ಕುರಿತು ದನಿ ಎತ್ತಲು ವಿನಂತಿಸಿಕೊಂಡವರಿಗೆ ನಿರಾಸೆ ಮತ್ತು ಹತಾಶೆ ಎರಡೂ ಆಗಿತ್ತು. ಈ ಕಾಲದ ದುರಂತಗಳು ಇವು.

    Reply
  6. g.mahanthesh.

    ಹಾವೇರಿಯ ನರಬಲಿ ಘಟನೆಗೆ ಸಂಬಂಧಿಸಿದಂತೆ ಟಿ.ವಿ.ಚಾನಲ್​ಗಳು ರಾತೋ ರಾತ್ರಿ ಪ್ಲೇಟ್​ ಬದಲಾಯಿಸಿದ್ದೇನೋ ಹೌದು. ಆದರೆ ಔಟ್​ಲುಕ್​ನಲ್ಲಿ ಸುಗತ ಶ್ರೀನಿವಾಸರಾಜು(ಈಗ ವಿಜಯ ಕರ್ನಾಟಕ ಸಂಪಾದಕರು) ವಿಸ್ತೃತ ವರದಿ ಬರೆದ ಮೇಲೆ ಜನಶ್ರೀ ತನಿಖೆ ಸಂಚಿಕೆ(ಅದು 50ನೇ ಸಂಚಿಕೆ)ಯಲ್ಲಿ ಹಾವೇರಿಯಲ್ಲಿ ನಡೆದಿದ್ದು ಸಹಜ ಕೊಲೆ ಅಲ್ಲ…ಬದಲಿಗೆ ಅದೊಂದು ನರ ಬಲಿ ಎಂದು ಮರಣೋತ್ತರ ಪರೀಕ್ಷೆ ದಾಖಲೆ ಮತ್ತು ಪೊಲೀಸರ ಅನುಮಾನಿತ ನಡವಳಿಕೆಗಳನ್ನಾಧರಿಸಿ ವರದಿ ಮಾಡಿತ್ತು. ಬಹುಶಃ ಹರ್ಷ ಅವರು ವರದಿಯನ್ನ ನೋಡಿಲ್ಲ ಎಂದೆನಿಸುತ್ತದೆ. ಸಾಧ್ಯ ಆದರೆ ಒಂದು ಕೊಲೆ ಸುತ್ತ ವರದಿಯನ್ನ ಒಮ್ಮೆ ನೋಡಲಿ.

    Reply
  7. ಹರ್ಷಕುಮಾರ್ ಕುಗ್ವೆ

    ಮಹಂತೇಶ್ ಜೀ.. ಈ ಕುರಿತು ಅದರಲ್ಲಿ ಬಂದಿದ್ದ ವರದಿ ನನಗೆ ತಿಳಿದಿರಲಿಲ್ಲ. ನೀವು ತಿಳಿಸಿದ್ದು ಒಳ್ಳೆಯದೇ ಆಯಿತು. ಸಿಕ್ಕಿದರೆ ನೋಡುತ್ತೇನೆ. ಇಂತಹ ಹಲವಾರು ವಿಷಯಗಳಲ್ಲಿ ಜನಶ್ರೀ ವಾಹಿನಿ ಖಂಡಿತಾ ಮಾದರಿಯಾಗಿದೆ.

    Reply

Leave a Reply to cheuvaraj A Cancel reply

Your email address will not be published. Required fields are marked *