ಜಾತಿ ಮತ್ತು ಸ್ವಹಿತಾಸಕ್ತಿ ಮೀರಿದ ನ್ಯಾಯಪ್ರಜ್ಞೆ

– ರವಿ ಕೃಷ್ಣಾರೆಡ್ಡಿ

ನೆನ್ನೆ (27/5/12) ಸಂಜೆಗೆಲ್ಲ ಬಹುಶಃ ದೇಶದ ಬಹಳಷ್ಟು ಜನರಿಗೆ ಐಪಿಎಲ್ ‌ಫೈನಲ್ ಪಂದ್ಯದ ಸಾಂಕ್ರಾಮಿಕ ಜ್ವರ ಹಬ್ಬಿತ್ತು. ಆಟವೂ ಸಹ ಕೊನೆಯವರೆಗೂ ಕುತೂಹಲ ಕಾಯ್ದುಕೊಂಡಿತ್ತು. ಕೊನೆಯ ಚೆಂಡಿನ ತನಕವೂ ಹೋರಾಟ ಬಿಡದ ಧೋನಿ ಈ ಪಂದ್ಯದಲ್ಲೂ ಅಂತಹುದೇ ಅಂತ್ಯ ಕಾಣಿಸಬಹುದೇ ಎನ್ನುವುದು ಬಹುಶಃ ಬಹುತೇಕ ಎಲ್ಲರಲ್ಲೂ ಇದ್ದ ಕುತೂಹಲ. ಇನ್ನು, ಟಿವಿಯಲ್ಲಿ ಕಂಡ ಕೆಲವು ದೃಶ್ಯಗಳಂತೂ ಚಿತ್ರವಿಚಿತ್ರವಾಗಿದ್ದವು. ತಲೆಯ ಮೇಲೆ ಕೈಇಟ್ಟುಕೊಂಡಿದ್ದವರು ಹಲವರಾದರೆ ದೇವರಿಗೆ ಮೊರೆ ಇಡುತ್ತಿದ್ದವರೂ ಹಲವರಿದ್ದರು. ಭಾವನಾತ್ಮಕವಾಗಿ ಇದು ನಮ್ಮನ್ನು ಚಲಿಸಬೇಕು ಎನ್ನಲು ಇದು ದೇಶದೇಶಗಳ ನಡುವೆ ನಡೆದ ಪಂದ್ಯವಲ್ಲ. ದೇಶದೊಳಗಿನ ರಾಜ್ಯಗಳೊಳಗಿನ ಪಂದ್ಯ ಎನ್ನುವ ಹಾಗೂ ಇಲ್ಲ. ಬೆಂಗಳೂರಿನ ರಾಹುಲ್ ದ್ರಾವಿಡ್ ದೂರದ ರಾಜಸ್ಥಾನ ತಂಡದ ನಾಯಕ. ಕೊಲ್ಕತ್ತದ ಗಂಗೂಲಿ ಪುಣೆ ತಂಡದ ನಾಯಕ. ನೆನ್ನೆ ನಡೆದ ಪಂದ್ಯದಲ್ಲಿಯೇ ದೆಹಲಿಯ ಗೌತಮ್ ಗಂಭೀರ್ ಕೊಲ್ಕತ್ತ ತಂಡವನ್ನು ನಡೆಸಿದರೆ ಜಾರ್ಖಂಡ್‌ನ ಧೋನಿ ಚೆನ್ನೈ ತಂಡದ ನಾಯಕ. ಆಟಗಾರರ ಮತ್ತು ತಂಡದ ನಾಯಕರ ಒತ್ತಡವನ್ನು ಅರ್ಥ ಮಾಡಿಕೊಳ್ಳಬಹುದು. ಅವರಿಗೆ ಈ ಆಟಗಳು ಕೇವಲ ಆಟ ಎನ್ನುವುದಕ್ಕಿಂತ ಹೆಚ್ಚು ಮಹತ್ವದ್ದವು. ತಮ್ಮ ಭವಿಷ್ಯದ ಸ್ಥಾನ ಮತ್ತು ಹಣದ ಹರಿವಿನ ಯೋಚನೆಯೇ ಅವರಿಗೆ ಬಹುಶಃ ಎಲ್ಲಕ್ಕಿಂತ ಹೆಚ್ಚು ಇರುತ್ತದೆ. ಆದರೆ, ಅಲ್ಲಿದ್ದ ಪ್ರೇಕ್ಷಕರ ಕಾತರಗಳು ಮತ್ತು ದಿಗಂತದೆಡೆಗಿನ ಮೊರೆಗಳು ಅತಾರ್ಕಿಕವಾದವುಗಳು. ಆಟವನ್ನು ಸವಿಯಲಾರದ ಮೂಢರು. ಬದುಕು ತೀರಾ ವೈಯಕ್ತಿಕವಾಗುತ್ತಿದೆ ಮತ್ತು ಅಸಹ್ಯವಾಗುತ್ತಿದೆ.

ಆದರೂ, ಈ ಐಪಿಎಲ್ ಪಂದ್ಯಗಳ ಒಂದು ಸೊಗಸು ಎಂದರೆ ಅದು ಒಂದು ರೀತಿಯಲ್ಲಿ ಎರಡು ವಿಶ್ವತಂಡಗಳ ಆಟ. ಪ್ರಾಂತ್ಯಗಳ, ಭಾಷೆಗಳ, ದೇಶದ ಗಡಿ ದಾಟಿ ಈ ತಂಡಗಳು ರೂಪುಗೊಂಡಿವೆ. ಆಸ್ಟ್ರೇಲಿಯದ ಆಕ್ರಮಣಕಾರಿ ಆಟಗಾರನಿಗೆ ಜೊತೆಯಾಗಿ ನ್ಯೂಜಿಲೆಂಡ್‌ನ ಜಂಟಲ್‌ಮನ್, ವೆಸ್ಟ್ ಇಂಡೀಸ್‌ನ ದೈತ್ಯಶಕ್ತಿಯ ಕಪ್ಪು ಆಟಗಾರನಿಗೆ ಹೆಗಲುಕೊಟ್ಟು ಆಡುವ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಅಂತ್ಯದ ನಂತರ ಆಡಲು ಇಳಿದ ಬಿಳಿಯ ದೈತ್ಯ, ಈಗಾಗಲೆ ದಂತಕತೆಯಾಗಿರುವ ಶತಕೋಟ್ಯಾಧಿಪತಿ ಆಟಗಾರನೊಂದಿಗೆ ಭಾರತದ ಯಾವುದೊ ಮೂಲೆಯ ಚಿಕ್ಕ ಪಟ್ಟಣದಿಂದ ಬಂದ ಬಡಯುವಕ; ನಿಜಕ್ಕೂ ಇದೊಂದು ಒಳ್ಳೆಯ ಜಾಗತೀಕರಣದ ಸುಂದರ ಉದಾಹರಣೆ. ದೇಶ-ಪ್ರಾಂತ್ಯ-ಭಾಷೆ-ಜನಾಂಗಗಳ ಗಡಿ ಮೀರಿ ಏಕ-ತಂಡವಾಗಿ ಆಡುತ್ತಿರುವ ಬಹುಶಃ ವಿಶ್ವದ ಏಕೈಕ ಕ್ರೀಡಾಕೂಟ. (ಇದರ ಜೊತೆಗೆ ಈ ಕ್ರೀಡಾಕೂಟದಿಂದ ಸಾಧ್ಯವಾಗುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನೂ—ಗುಣಾತ್ಮಕವಾದವುಗಳನ್ನು, ನಿರಾಕರಿಸುವಂತಿಲ್ಲ.)

ದೇಶ ನೆನ್ನೆ ಈ ಆಟದ ಕುತೂಹಲದಲ್ಲಿ ಮತ್ತು ಭಾನುವಾರದ ಸಂಜೆಯ ರಜೆಯ ವಿರಾಮದಲ್ಲಿದ್ದಾಗ ಆಂಧ್ರಪ್ರದೇಶದಲ್ಲಿ ದೇಶದ ಪ್ರಜಾಪ್ರಭುತ್ವಕ್ಕೆ ಸಂಬಂಧಪಟ್ಟಂತೆ ಗಂಭೀರವಾದ ಘಟನೆ ಜರುಗಿತು. ಮೂರು ದಿನದಿಂದ ಪ್ರತಿದಿನವೂ ಜಗನ್‍ಮೋಹನ್ ರೆಡ್ಡಿಯನ್ನು ವಿಚಾರಣೆಗೊಳಪಡಿಸಿದ್ದ ಸಿಬಿಐ ಸಂಸ್ಥೆ ನೆನ್ನೆ ಸಂಜೆಗೆ ರೆಡ್ಡಿಯನ್ನು ಬಂಧಿಸುವ ನಿರ್ಧಾರ ತೆಗೆದುಕೊಂಡಿತು. ಈಗ ಜಗನ್‌ಮೋಹನ್ ರೆಡ್ಡಿ ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾರೆ.

ಕೆರಳ ಹೊರತುಪಡಿಸಿ ದಕ್ಷಿಣದ ಇತರ ಮೂರೂ ರಾಜ್ಯಗಳಲ್ಲಿ ಭ್ರಷ್ಟಾಚಾರ ಎನ್ನುವುದು ಕಳೆದ ಒಂದೂವರೆ ದಶಕದಿಂದ ಅತಿ ಸಾಮಾನ್ಯವಾಗಿ ಹೋಗಿದೆ. ತಮಿಳುನಾಡಿನ ಜಯಲಲಿತ ದಶಕದ ಹಿಂದೆಯೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಜೈಲಲ್ಲಿ ಕುಳಿತಿದ್ದರು. ಅವರ ನಂತರ ಬಂದ ಕರುಣಾನಿಧಿ ಸರ್ಕಾರದ ಭ್ರಷ್ಟತೆಯೂ ಕಮ್ಮಿ ಇರಲಿಲ್ಲ. ರಾಜ, ಕನಿಮೊಳಿಗಳು ದೆಹಲಿ ಮಟ್ಟದಲ್ಲಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಕರುಣಾನಿಧಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರು ಇಂದು ತಮಿಳುನಾಡಿನಲ್ಲಿ ಭ್ರಷ್ಟಾಚಾರದ ಕೇಸುಗಳಲ್ಲಿ ಬಂಧನಕ್ಕೊಳಗಾಗುತ್ತಿರುವುದು ಹೊರಗೆ ಹೆಚ್ಚಿಗೆ ಗೊತ್ತಾಗಿಲ್ಲ. ಸ್ಟ್ಯಾಲಿನ್ ಮತ್ತವರ ಮಗನ ಮೇಲೆಯೂ ಆಪಾದನೆಗಳಿವೆ. ಜಯಲಲಿತರಂತಹ ಜಯಲಲಿತರವರೇ ಇಂದು ತಮಿಳುನಾಡಿನಲ್ಲಿ ಸಂತಳಂತೆ ಕಾಣಿಸುತ್ತಿದ್ದಾರೆ ಎಂದರೆ ಕರುಣಾನಿಧಿಯವರ ಪಕ್ಷದ ಭ್ರಷ್ಟಾಚಾರ ಯಾವ ಹಂತಕ್ಕೆ ಹೋಗಿರಬಹುದು ಎನ್ನುವುದನ್ನು ಊಹಿಸಬಹುದು.

ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅವಧಿಯಲ್ಲಿ ಅವರ ಕುಟುಂಬ ಮಾಡಿದ ಆಸ್ತಿ ಮತ್ತು ದುಡ್ಡಿನ ಬಗ್ಗೆ ಅನೇಕ ಆರೋಪ ಮತ್ತು ಊಹಾಪೋಹಗಳಿವೆ. ನಾಯ್ಡು‌ರವರ ಪತ್ನಿಯ ಒಡೆತನದ ಹೆರಿಟೇಜ್ ಡೈರಿ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ರಾಜ್ಯದ ಕೆ‍ಎಂ‌ಎಫ್‌ಗೆ ಸೆಡ್ಡು ಹೊಡೆದಿತ್ತು. ಈ ಡೈರಿ ಆರಂಭವಾಗಿರುವುದೇ ಭ್ರಷ್ಟಾಚಾರದ ಹಣದಿಂದ ಎಂಬ ಆಪಾದನೆಗಳಿತ್ತು. ಸಾಮಾನ್ಯ ಬಡರೈತನ ಮಗ ಚಂದ್ರಬಾಬು ನಾಯ್ಡುರವರ ಕುಟುಂಬದ ಆಸ್ತಿ ಸಾವಿರಾರು ಕೋಟಿಗಳಲ್ಲಿ ಇದೆ ಎಂದು 2004ರಲ್ಲಿಯೇ ಅಲ್ಲಿಯ ಅವರ ರಾಜಕೀಯ ವಿರೋಧಿಗಳು ಆರೋಪಗಳನ್ನು ಮಾಡುತ್ತಿದ್ದರು. ಆದರೆ ಅವರ ನಂತರ ಬಂದ ವೈಎಸ್‌ಆರ್ ಆಡಳಿತ ಮತ್ತು ಅವರ ಮನೆಯವರ ಭ್ರಷ್ಟತೆ ಇಂದು ನಾಯ್ಡುರವರನ್ನು ಅಲ್ಲಿ ಸಂತನನ್ನಾಗಿ ಮಾಡಿದೆಯೇನೊ.

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇಂದು ಇಡೀ ದೇಶದಲ್ಲಿ ತಮ್ಮ ಕುಟುಂಬದ ರಾಜಕೀಯ ಅಧಿಕಾರ ದುರುಪಯೋಗಪಡಿಸಿಕೊಂಡು ಅತಿ ಹೆಚ್ಚು ಹಣ ಮತ್ತು ಬೇನಾಮಿ ಆಸ್ತಿ ಸಂಪಾದಿಸಿದ ರಾಜಕಾರಣಿ ಇದ್ದರೆ ಅದು ಜಗನ್‌ಮೋಹನ್ ರೆಡ್ಡಿ. ತನ್ನ ತಂದೆ ಮುಖ್ಯಮಂತ್ರಿಯಾಗಿದ್ದ ಕೇವಲ ಐದೂವರೆ ವರ್ಷಗಳಲ್ಲಿ ಈ ಮಟ್ಟದ ಅಕ್ರಮ ಆಸ್ತಿ ಮತ್ತು ರಾಜಕೀಯ ಬಲವನ್ನು ದೇಶದ ಇನ್ನೊಂದು ರಾಜಕೀಯ ಕುಟುಂಬ ಮಾಡಿರುವ ಸಾಧ್ಯತೆ ಕಮ್ಮಿ. ನಮ್ಮ ರಾಜ್ಯದ ಯಡ್ಡಯೂರಪ್ಪನವರಿಗಿಂತ ಹೆಚ್ಚಿನ ಮಟ್ಟದ ನಿರಂಕುಶತೆ ಮತ್ತು ಇನ್ನೂ ಹೆಚ್ಚಿನ ಸರ್ವಾಧಿಕಾರತ್ವ ಇದ್ದ ವ್ಯಕ್ತಿ ರಾಜಶೇಖರ ರೆಡ್ಡಿ. 2009ರಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಸೋತಿದ್ದರೆ ಅದಕ್ಕೆ ಕಾರಣ ಅಲ್ಲಿ  ಕಾಂಗ್ರೆಸ್‌ನ ಹಣಕಾಸು ಸಂಪನ್ಮೂಲಗಳನ್ನು ಸರಿಗಟ್ಟಲಾಗದೆ ಹೋದದ್ದು. ರಾಜಶೇಖರ ರೆಡ್ಡಿ ಬದುಕಿದ್ದರೆ ಅವರು ಇಂದು ಎದುರಿಸಬಹುದಿದ್ದ ಸ್ಥಿತಿ ಬಹುಶಃ ನಮ್ಮ ರಾಜ್ಯದಲ್ಲಿ ಇಂದು ಯಡ್ಡಯೂರಪ್ಪ ಎದುರಿಸುತ್ತಿರುವ ಸ್ಥಿತಿಗಿಂತ ಭಿನ್ನವಿರುತ್ತಿರಲಿಲ್ಲ. ಮಗನ ಸ್ಥಾನದಲ್ಲಿ ಅಪ್ಪ-ಮಗ ಇಬ್ಬರೂ ಇರುತ್ತಿದ್ದರು. (ಇದನ್ನು ಅಷ್ಟು ಖಚಿತವಾಗಿ ಹೇಳಲು ಆಗುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ಜನಾರ್ದನ ರೆಡ್ಡಿ, ರಾಜಶೇಖರ ರೆಡ್ಡಿ, ಜಗನ್‌ಮೋಹನ್ ರೆಡ್ಡಿ ಇವರ ಮೇಲೆಲ್ಲ ಸಿಬಿಐ ಈ ರೀತಿ ಎರಗಿ ಬೀಳುತ್ತಿತ್ತು ಎಂದು ಅಷ್ಟೇನೂ ಸ್ವಾಯತ್ತವಲ್ಲದ, ಕೇಂದ್ರದಲ್ಲಿ ಅಧಿಕಾರ ನಡೆಸುವ ಪಕ್ಷದ ಒಲವುಗಳನ್ನು ಅರಿತು ಕೆಲಸ ಮಾಡುವ ಸಿಬಿಐ ಸಂಸ್ಥೆಯ ಇತಿಹಾಸ ಅರಿತವರು ಹೇಳಲಾರರು. ಆದರೆ, ಸಿಬಿಐ ಇವೆಲ್ಲವನ್ನೂ ಮೀರಿ ಕಾರ್ಯ ನಿರ್ವಹಿಸಬೇಕಾದ ಸಂದರ್ಭಗಳು ಬರುತ್ತವೆ.  ಉದಾಹರಣೆಗೆ, ಸುಪ್ರೀಮ್‌ಕೋರ್ಟ್ ಆದೇಶದ ಮೇರೆಗೆ, ಮತ್ತು ನಮ್ಮ ನ್ಯಾಯಾಂಗ ಭ್ರಷ್ಟವಾಗಿಲ್ಲದ ಸಂದರ್ಭದಲ್ಲಿ.)

ಇನ್ನು ನಮ್ಮ ರಾಜ್ಯದಲ್ಲಿ 2000 ದಿಂದೀಚೆಗೆ ನಡೆದಿರುವ ಭ್ರಷ್ಟಾಚಾರ ಗೊತ್ತಿರುವುದೆ. ಪ್ರತಿ ಮಂತ್ರಿ-ಮುಖ್ಯಮಂತ್ರಿಯೂ ಹಿಂದಿನ ಮಂತ್ರಿ-ಮುಖ್ಯಮಂತ್ರಿಯನ್ನು ಮೀರಿಸುತ್ತ ಬಂದರು. ಈ ಸ್ವಚ್ಛಂದ ಭ್ರಷ್ಟಾಚಾರದ ಪ್ರಯುಕ್ತವಾಗಿಯೇ ಒಮ್ಮೆ ರಾಜ್ಯದ ಐದು ಜನ ಶಾಸಕರು ಜೈಲಿನಲ್ಲಿ ಇದ್ದರು. ರಾಜ್ಯದ ಪುಣ್ಯವೋ ಪಾಪವೋ ಈಗ ಎಲ್ಲರೂ ಹೊರಗಿದ್ದಾರೆ. (ಇನ್ನೂ ಒಳಗಿರುವವರ ಶಾಸಕತ್ವ ಈಗಾಗಲೆ ಮುಗಿದಿದೆ, ಇಲ್ಲವೆ ಕೆಲವೇ ದಿನಗಳಲ್ಲಿ ಮುಗಿಯಲಿದೆ.)

ಒಂದು ರೀತಿಯಲ್ಲಿ ತಮಿಳುನಾಡಿನ ಜನರಿಗಿಂತ ನಮ್ಮ ರಾಜ್ಯದ ಮತ್ತು ಆಂಧ್ರಪ್ರದೇಶದ ಜನ ಕಮ್ಮಿ ನ್ಯಾಯವಂತಿಕೆ ತೋರಿಸುತ್ತಿದ್ದಾರೆ. ಅವರ ನ್ಯಾಯಾನ್ಯಾಯ ವಿವೇಚನೆಗೆ ರೋಗ ಬಡಿದಿರುವುದು ಜಾತಿ ಎಂಬ ಕ್ಷುದ್ರ ಆಲೋಚನೆಯಿಂದ. ಆಂಧ್ರದಲ್ಲಿ ಕೇವಲ  ಐದಾರು ಪ್ರತಿಶತ ಇರುವ ರೆಡ್ಡಿ ಜಾತಿಯ “ಜಾತಿವಾದಿ” ಜನ ಜಗನ್‌ಮೋಹನ್ ರೆಡ್ಡಿಯ ಪರ ನಿಂತಿರುವ ಹಾಗಿದೆ. ಅವರಿಗೆ ಎಲ್ಲಕ್ಕಿಂತ ಜಾತಿ ಮುಖ್ಯವಾಗಿದೆ. ಜಗನ್ ಬಂಧನ ಮುಂದಿನ ದಿನಗಳಲ್ಲಿ ಆತನಿಗೆ ಇನ್ನೂ ಹೆಚ್ಚಿನ ರಾಜಕೀಯ ಮತ್ತು ಜಾತಿ ಬಲ ತಂದುಕೊಟ್ಟರೂ ಆಶ್ಚರ್ಯಪಡುವ ಹಾಗೆ ಇಲ್ಲ. ಇನ್ನು ಒಂದೆರಡು ವಾರದಲ್ಲಿ ಅಲ್ಲಿ ನಡೆಯಲಿರುವ 18 ವಿಧಾನಸಭೆ ಮತ್ತು ಒಂದು ಲೋಕಸಭೆ ಉಪಚುನಾವಣೆಯಲ್ಲಿ ಈ ಎಲ್ಲಾ ಸ್ಥಾನಗಳನ್ನು ಆತನ ವೈಕಾಪಾ (ವೈಎಸ್‍ಆರ್ ಕಾಂಗ್ರೆಸ್ ಪಾರ್ಟಿ) ಗೆದ್ದರೆ ಆಶ್ಚರ್ಯಪಡುವಂತಹುದ್ದೇನೂ ಇಲ್ಲ. ಕರ್ನಾಟಕದಲ್ಲೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಸುಮಾರು 14-15 ಪ್ರತಿಶತ ಇರುವ ಲಿಂಗಾಯತ ಜಾತಿಯ “ಜಾತಿವಾದಿ” ಜನ ಯಡ್ಡಯೂರಪ್ಪನವರ ಪರ ಇರುವಂತೆ ತೋರಿಸುತ್ತಿದ್ದಾರೆ. ಉಗಿಸಿಕೊಳ್ಳಲೂ ಯೋಗ್ಯರಲ್ಲದ, ಬಸವಣ್ಣನ ಹೆಸರು ಹೇಳಲೂ ಅರ್ಹರಲ್ಲದ ಕೆಲವು ಹೀನ ಮಠಾಧೀಶರಂತೂ ಈ ಸಮುದಾಯದ ಸಾಂಘಿಕ ಮತ್ತು ಸಮಷ್ಟಿ ನ್ಯಾಯಪ್ರಜ್ಞೆಯನ್ನೇ ಅವಮಾನ ಮಾಡುತ್ತಿದ್ದಾರೆ. ಕೆಲವು ನಿವೃತ್ತ ನ್ಯಾಯಾಧೀಶರೂ ಜಾತಿ ಕಾರಣಕ್ಕೆ ತಮ್ಮ ನ್ಯಾಯದ ಪರಿಕಲ್ಪನೆಯನ್ನೇ ಬದಲಾಯಿಸಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ರುಜುವಾತಾದರೂ ಹಲವು ಕ್ಷೇತ್ರಗಳಲ್ಲಿ ಯಡ್ಡಯೂರಪ್ಪ ಮತ್ತು ಅವರ ಬೆಂಬಲಿಗರನ್ನು ಜಾತಿವಾದಿಗಳು ಗೆಲ್ಲಿಸುವ ಮತ್ತು ಅವರ ವಿರೋಧಿಗಳನ್ನು ಸೋಲಿಸುವ ಎಲ್ಲಾ ಸಾಧ್ಯತೆಗಳೂ ಇವೆ.  ಜಾತಿವಾದಿಗಳಿಗೆ ತಮ್ಮ ಜಾತಿಯ ಮುಖಂಡನೊಬ್ಬ ಮಾಡಿದ ಭ್ರಷ್ಟಾಚಾರ ಭ್ರಷ್ಟಾಚಾರ ಅಲ್ಲವೇ ಅಲ್ಲ. ಬೇರೆ ಜಾತಿಯವನು ಮಾಡಿದರೆ ಮಾತ್ರ ಅದು ಭ್ರಷ್ಟಾಚಾರ.

ನೆನ್ನೆಯ ಬಂಧನ ನನ್ನನ್ನೂ ಒಳಗೊಂಡಂತೆ ದೇಶದ ಅನೇಕ ಪ್ರಜಾಪ್ರಭುತ್ವ ಪ್ರೇಮಿಗಳಲ್ಲಿ ಒಂದಿಷ್ಟು ಸಂತಸ ತಂದಿರಬಹುದು. ಆದರೆ, ಈಗಾಗಲೆ ಇಂತಹ ಹಲವಾರು ಬಂಧನಗಳು ಆಗಿಹೋಗಿವೆ. ಇವರು ಜೈಲಿನಿಂದ ಹೊರಗೆ ಬಂದಾಗ ಆರತಿ ಬೆಳಗಿ ವೀರೋಚಿತ ಸ್ವಾಗತಗಳು ಸಿಗುತ್ತವೆ. ಈ ನೆನಪು ಮತ್ತು ವಾಸ್ತವವೇ ನಮ್ಮೆಲ್ಲರನ್ನು ಒಂದೆಡೆಗೆ ಕಾರ್ಯೋನ್ಮುಖರಾಗಲು ಎಳೆಯಬೇಕು. ಆದರೆ ಎಲ್ಲಕ್ಕಿಂತ ಸುಲಭವಾಗಿ ಇದು ನಮ್ಮನ್ನು ಸಿನಿಕರನ್ನಾಗಿ ಮಾಡುತ್ತಿದೆ.

ಏನಾಗಬೇಕು ಎಂದು ಗೊತ್ತಿರುವವರು ಇಲ್ಲಿ ಅನೇಕರಿದ್ದಾರೆ. ಹೇಗೆ ಮಾಡಬೇಕು ಎಂದು ತೋರಿಸಲು ಮಾತ್ರ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ದೇಶದ ಪ್ರಜೆಗಳಲ್ಲಿ ಜಾತಿ ಮತ್ತು ಸ್ವಹಿತಾಸಕ್ತಿ ಮೀರಿದ ನ್ಯಾಯಪ್ರಜ್ಞೆ ಬೆಳೆಯದ ಹೊರತು ಇಲ್ಲಿ ಗುಣಾತ್ಮಕ ಪರಿಣಾಮಗಳು ಮತ್ತು ಬದಲಾವಣೆಗಳು ಸಾಧ್ಯವಾಗುವುದಿಲ್ಲ. ಅಂತಹ ಪರಿವರ್ತನೆಯನ್ನು ಸಾಧ್ಯವಾಗಿಸಿಕೊಳ್ಳುವುದು ಹೇಗೆ?

2 thoughts on “ಜಾತಿ ಮತ್ತು ಸ್ವಹಿತಾಸಕ್ತಿ ಮೀರಿದ ನ್ಯಾಯಪ್ರಜ್ಞೆ

  1. ವಿ.ಆರ್.ಕಾರ್ಪೆಂಟರ್

    ಇಡೀ ಭಾರತವನ್ನೇ ಈ ಲೇಖನದ ಮೂಲಕ ಬೆತ್ತಲಾಗಿಸಿದ್ದೀರಿ ಅನ್ನಿಸುತ್ತಿದೆ. ಕಾಲ ಮತ್ತೆ ಒಳ್ಳೆಯ ದಿಕ್ಕಿನೆಡೆಗೆ ಚಲಿಸುತ್ತಿರುವುದು ಈ ಮೂಲಕ ಗೊತ್ತಾಗುತ್ತಿದೆ. ಒಂದು ಜೆನ್ ಕಥೆ ಹೀಗಿದೆ: ಒಬ್ಬ ಗುರುವಿನ ಹೆಂಡತಿ ತೀರಿಕೊಂಡಿರುತ್ತಾಳೆ. ಆದರೆ ಆ ಗುರು ಮನೆಯ ಹೊರಗೆ ಆನಂದದಿಂದ ನೃತ್ಯ ಮಾಡುತ್ತಿರುತ್ತಾನೆ. ಎಲ್ಲರೂ ಆತಂಕ ಮತ್ತು ಅನುಮಾನದಿಂದ ವಿಚಾರಿಸಿದರೆ; ‘ಗಿಡ, ಬಳ್ಳಿ, ಮರಗಳು ಹಚ್ಚ ಹಸಿರನ್ನು ಪಡೆದುಕೊಳ್ಳುತ್ತಿವೆ. ಅದಕ್ಕಾದರೂ ಕುಣಿಯಲೇ ಬೇಕಲ್ಲವೇ? ಎಂದು ಪ್ರಶ್ನಿಸುತ್ತಾನೆ. ಇಂದಿನ ಈ ಪರಿಸ್ಥಿತಿಯನ್ನು ಸುಮ್ಮನೇ ನೋಡಿಕೊಂಡು ಇರಬೇಕು. ಇಲ್ಲವಾದರೆ ಇಂದು ಆಂಧ್ರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳು ಸ್ವಲ್ಪಮಟ್ಟಿಗಾದರೂ ಕಡಿಮೆಯಾಗುತ್ತವೆ. ಒಳ್ಳೆಯದಾಗುತ್ತದೆ.

    Reply
  2. Ananda Prasad

    ಜಾತೀಯತೆಯ ಮದ ಏರಿಸಿಕೊಂಡ ಮತದಾರರು ಭ್ರಷ್ಟರನ್ನು ಚುನಾವಣೆಗಳಲ್ಲಿ ಗೆಲ್ಲಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ದುರಂತ ನಮ್ಮ ದೇಶದ್ದು. ಭ್ರಷ್ಟರು ಅಕ್ರಮವಾಗಿ ಸಂಪಾದಿಸಿದ ಎಲ್ಲ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿ ಅವರಿಗೆ ಕನಿಷ್ಠ ಜೀವಾವಧಿ ಶಿಕ್ಷೆ ವಿಧಿಸುವ ವ್ಯವಸ್ಥೆ ನಮ್ಮ ದೇಶದಲ್ಲಿ ಆಗಬೇಕಾಗಿದೆ. ಇದಕ್ಕಾಗಿ ಸಂಪೂರ್ಣ ರಾಜಕೀಯ ಮುಕ್ತವಾದ ಸ್ವತಂತ್ರ ರಾಷ್ಟ್ರೀಯ ತನಿಖಾ ಸಂಸ್ಥೆ ಅಗತ್ಯ ಇದೆ ಮತ್ತು ನ್ಯಾಯಾಂಗ ಸುಧಾರಣೆಗಳು ನಡೆಯಬೇಕಾದ ಅಗತ್ಯ ಇದೆ. ವಿಚಾರಣೆಗಳನ್ನು ಶೀಘ್ರವಾಗಿ ಮುಗಿಸಿ ಗರಿಷ್ಟ ಒಂದು ವರ್ಷದೊಳರ್ಗೆ ಭ್ರಷ್ಟರಿಗೆ ಶಿಕ್ಷೆ ಆಗುವ ವ್ಯವಸ್ಥೆ ರೂಪಿಸದೆ ಹೋದರೆ ದೇಶಕ್ಕೆ ಭವಿಷ್ಯ ಇಲ್ಲ. ಭ್ರಷ್ಟರನ್ನು ಜನ ಪುನಃ ಚುನಾಯಿಸುವ ಮೂರ್ಖತನ ಮಾಡುತ್ತಿರುವುದಕ್ಕೆ ಏನು ಮದ್ದು ಎಂಬುದನ್ನು ಎಲ್ಲರೂ ಚಿಂತಿಸಿ ಪರಿಹಾರ ರೂಪಿಸಬೇಕಾಗಿದೆ. ಇದಕ್ಕೆ ಶಾಂತಿಯುತ ಪರಿಹಾರ ರೂಪಿಸದೆ ಹೋದರೆ ರೊಚ್ಚಿಗೆದ್ದ ಜನ ಭ್ರಷ್ಟರನ್ನು ತಾವಾಗಿಯೇ ಆಕ್ರಮಣ ನಡೆಸಿ ಕೊಲ್ಲುವ ತನ್ಮೂಲಕ ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗುವ ಸಾಧ್ಯತೆಯೂ ಇದೆ. ಅಂಥ ಅರಾಜಕತೆ ಬರದಂತೆ ತಡೆಯಬೇಕಾದರೆ ನ್ಯಾಯಾಲಯ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅತ್ಯಂತ ಕಠಿಣವಾಗಿ ವರ್ತಿಸಬೇಕಾದ ಅಗತ್ಯ ಇದೆ ಹಾಗೂ ಶೀಘ್ರವಾಗಿ ನ್ಯಾಯ ತೀರ್ಮಾನವನ್ನು ಕೈಗೊಳ್ಳುವ ವ್ಯವಸ್ಥೆ ರೂಪಿಸುವುದು ಒಂದೇ ಮಾರ್ಗ. ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಎಚ್ಚತ್ತುಕೊಳ್ಳದಿದ್ದರೆ ಮುಂದೆ ದೇಶಕ್ಕೆ ಗಂಡಾಂತರ ಎದುರಾಗಲಿರುವುದು ಖಚಿತ.

    Reply

Leave a Reply to ವಿ.ಆರ್.ಕಾರ್ಪೆಂಟರ್ Cancel reply

Your email address will not be published. Required fields are marked *