“ಕರ್ನಾಟಕ ರತ್ನ” ಹಾಗೂ “ಬಸವಶ್ರೀ” ಪ್ರಶಸ್ತಿ ಎಸ್.ಆರ್. ಹಿರೇಮಠರಿಗೆ ಸಲ್ಲಬೇಕು

– ಆನಂದ ಪ್ರಸಾದ್

ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಅವರು ಕರ್ನಾಟಕದಲ್ಲಿ ನೈಸರ್ಗಿಕ ಸಂಪನ್ಮೂಲಗಳಾದ ಅದಿರಿನ ರಕ್ಷಣೆ ಹಾಗೂ ಗಣಿಗಾರಿಕೆಯ ಹಿಂದಿರುವ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಕಾನೂನು ಹೋರಾಟದಲ್ಲಿ ತೊಡಗಿ ಕರ್ನಾಟಕಕ್ಕೆ ನಿಸ್ವಾರ್ಥವಾಗಿ ಸಲ್ಲಿಸಿರುವ ಸೇವೆಗಾಗಿ ಕರ್ನಾಟಕ ರತ್ನ ಪ್ರಶಸ್ತಿಗೆ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದಾರೆ. ಇಂಥವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಯ ಘನತೆ ಹೆಚ್ಚಲಿದೆ. ಅಮೇರಿಕಾದಲ್ಲಿ ಕೈತುಂಬಾ ಸಂಬಳ ತರುತ್ತಿದ್ದ ಹುದ್ದೆಯನ್ನು ತೊರೆದು ರಾಜ್ಯಕ್ಕೆ ವಾಪಾಸಾಗಿ ಓರ್ವ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತ ನಾಡಿನ ಗಣಿ ಸಂಪತ್ತು ಹಾಗೂ ನೈಸರ್ಗಿಕ ಸಂಪನ್ಮೂಲದ ಉಳಿವಿಗಾಗಿ ಕಾನೂನು ಹೋರಾಟದಲ್ಲಿ ತೊಡಗಿರುವ ಹಿರೇಮಠರು ನಮಗೆ ಒಂದು ಆದರ್ಶವಾಗಬೇಕಾಗಿದೆ. ಬಸವಣ್ಣನವರ ಆದರ್ಶಗಳ ಸಾಕಾರ ರೂಪದಂತಿರುವ ಹಿರೇಮಠರು ಬಸವಶ್ರೀ ಪ್ರಶಸ್ತಿಗೆ ಕೂಡ ಅರ್ಹ ಸೂಕ್ತ ವ್ಯಕ್ತಿಯೆನ್ನಲು ಅಡ್ಡಿಯಿಲ್ಲ.

ಇಂದು ಭಾರತದಲ್ಲಿ ಭ್ರಷ್ಟಾಚಾರ, ಅನಾಚಾರ, ಅದಕ್ಷತೆ, ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಲೋಪಗಳು, ನ್ಯಾಯ ನಿರ್ಣಯದಲ್ಲಿ ನಡೆಯುತ್ತಿರುವ ವಿಳಂಬ, ಚುನಾವಣಾ ವ್ಯವಸ್ಥೆಯಲ್ಲಿರುವ  ಲೋಪಗಳು ಮೊದಲಾದವುಗಳಿಗೆ ಪರಿಹಾರ ಕಂಡುಕೊಳ್ಳಲು ವಿಫಲವಾಗಿರಲು ಪ್ರಧಾನ ಕಾರಣ ದೇಶದಲ್ಲಿ ನಾಯಕರ ಕೊರತೆಯಿರುವುದೇ ಆಗಿದೆ. ದೇಶದಲ್ಲಿ ಸಾರ್ವಜನಿಕ ವಿಚಾರಗಳ ಬಗ್ಗೆ ನಿಸ್ವಾರ್ಥವಾಗಿ ಕೆಲಸ ಮಾಡುವವರ ಕೊರತೆ ಇದೆ.  ಸಾರ್ವಜನಿಕ ಆಸಕ್ತಿಯ ವಿಚಾರಗಳನ್ನು ಎತ್ತಿಕೊಂಡು ಜನಜಾಗೃತಿ ಮಾಡುವುದು ಇಂದು ಬಹಳ ಕಠಿಣವಾದ ಕೆಲಸವಾಗಿದೆ. ಏಕೆಂದರೆ ಇಂದು  ಬಹುತೇಕ ಜನರಿಗೆ ರಾಷ್ಟ್ರದ ಅಥವಾ ರಾಜ್ಯದ ಆಗುಹೋಗುಗಳ ಬಗ್ಗೆ ನಿರ್ಲಕ್ಷ್ಯ ಮನೋಭಾವವೇ  ಇದೆ. ಅದೂ ಅಲ್ಲದೆ ಜನಸಾಮಾನ್ಯರಿಗೆ ತಮ್ಮ ಕುಟುಂಬ ಪಾಲನೆ, ಉದ್ಯೋಗ ಮೊದಲಾದ ಜವಾಬ್ದಾರಿಗಳೂ ಇರುವ ಕಾರಣ ಸಾರ್ವಜನಿಕ ಸಮಸ್ಯೆಗಳ ಬಗೆಗಾಗಲಿ, ದೇಶದ, ರಾಜ್ಯದ  ಸಮಸ್ಯೆಗಳ ಬಗೆಗಾಗಲಿ ಹೋರಾಟ ರೂಪಿಸುವುದಾಗಲಿ ಅಥವಾ ಅದರಲ್ಲಿ ಭಾಗವಹಿಸುವುದಾಗಲಿ ಅಸಾಧ್ಯ. ಹೀಗಾಗಿ ಒಂದು ಹಂತದವರೆಗೆ ತಮ್ಮ ಉದ್ಯೋಗ ಹಾಗೂ ಕುಟುಂಬದ ಜವಾಬ್ದಾರಿಯನ್ನು  ನಿಭಾಯಿಸಿ ನಿವೃತ್ತಿ ಆಗಿರುವವರು, ಅಂದರೆ ತಮ್ಮ ಮಕ್ಕಳ ಕಲಿಕೆಯನ್ನು ಪೂರೈಸಿ ಅವರು ಉದ್ಯೋಗ ಪಡೆದ ನಂತರ ದೇಶದ, ರಾಜ್ಯದ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ  ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದೆ ಬರಬೇಕಾದ ಅಗತ್ಯ ಇದೆ. ಸುಮಾರು ಅರುವತ್ತರ ವಯಸ್ಸಿನ ಆಸುಪಾಸಿನಲ್ಲಿ ವ್ಯಕ್ತಿಯೊಬ್ಬನ ಮಕ್ಕಳ ಕಲಿಕೆ ಮುಗಿದು ಅವರು ಉದ್ಯೋಗ ಪಡೆದು, ಅವರ ಮದುವೆ ಇತ್ಯಾದಿಗಳು ಮುಗಿದು ವ್ಯಕ್ತಿಯೊಬ್ಬನ ಪ್ರಮುಖ ಕೌಟುಂಬಿಕ ಜವಾಬ್ದಾರಿ ಮುಗಿದಿರುತ್ತದೆ. ಹೀಗಾಗಿ ದೇಶದಲ್ಲಿ ನಿವೃತ್ತರು ಅಥವಾ ಅರುವತ್ತರ ನಂತರದ ವಯಸ್ಸಿನವರು ಸಾರ್ವಜನಿಕ ಹಿತಾಸಕ್ತಿಯ ಹೋರಾಟದಲ್ಲಿ ತೊಡಗಲು ಮುಂದೆ ಬಂದರೆ ದೇಶದಲ್ಲಿ  ಬದಲಾವಣೆಯನ್ನು, ಸುಧಾರಣೆಗಳನ್ನು ತರಲು ಸಾಧ್ಯ.

ಸಾರ್ವಜನಿಕ ಜೀವನದ ಸಮಸ್ಯೆಗಳು ಅಥವಾ ದೇಶದ ಸಮಸ್ಯೆಗಳಾದ ಭ್ರಷ್ಟಾಚಾರ, ಸ್ವಜನ  ಪಕ್ಷಪಾತ, ಜಾತೀಯತೆ, ನ್ಯಾಯಾಂಗದ ನಿಧಾನ ಗತಿ, ಚುನಾವಣಾ ಸುಧಾರಣೆಗಳ ಅವಶ್ಯಕತೆ ಮುಂತಾದ ವಿಷಯಗಳ ಬಗ್ಗೆ ಹೋರಾಡುವವರು ಪಕ್ಷಾತೀತ ನಿಲುವನ್ನು ಹೊಂದಿರಬೇಕಾಗುತ್ತದೆ. ಒಂದು ಪಕ್ಷದ ಭ್ರಷ್ಟಾಚಾರವನ್ನು ಟೀಕಿಸಿ ಇನ್ನೊಂದು ಪಕ್ಷದ ಭ್ರಷ್ಟಾಚಾರದ ಬಗ್ಗೆ ಮೌನ ವಹಿಸುವುದು ಜನಬೆಂಬಲ ಕಳೆದುಕೊಳ್ಳಲು ಕಾರಣವಾಗುತ್ತದೆ.  ಇದಕ್ಕೆ ಸ್ಪಷ್ಟ ಉದಾಹರಣೆ ಅಣ್ಣಾ ಹಜಾರೆ ಹಾಗೂ ಯೋಗ ಗುರು ರಾಮದೇವ್ ಅವರ ಹೋರಾಟಗಳು. ಇಂಥ ಸ್ಥಗಿತ ಸ್ಥಿತಿಯಲ್ಲಿ ಎಸ್.ಆರ್. ಹಿರೇಮಠರಂಥ ನಿಷ್ಪಕ್ಷಪಾತ ಹಾಗೂ ಪ್ರಗತಿಶೀಲ ಮನಸಿನ ವ್ಯಕ್ತಿಗಳು ದೇಶದಲ್ಲಿ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇಂಥ ವ್ಯಕ್ತಿಗಳನ್ನು ಮಾಧ್ಯಮಗಳು ಮುಂಚೂಣಿಗೆ ತಂದು ಹೆಚ್ಚಿನ ಪ್ರಚಾರ ನೀಡಬೇಕಾದ ಅಗತ್ಯ ಇದೆ. ಅನಿವಾಸಿ ಭಾರತೀಯರು ಕೂಡ ಇಂಥ ಹೋರಾಟಗಳಿಗೆ ನೈತಿಕ ಹಾಗೂ ಹಣಕಾಸಿನ ಬೆಂಬಲವನ್ನು ನೀಡಲು ಮುಂದೆ ಬರಬೇಕಾದ ಅಗತ್ಯ ಇದೆ. ದೇಶದ ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಸಮಾನಮನಸ್ಕ, ಹೆಚ್ಚಿನ ಕೌಟುಂಬಿಕ ಜವಾಬ್ದಾರಿ ಇಲ್ಲದ ಮತ್ತು ಆರ್ಥಿಕವಾಗಿ ದೃಢ  ಸ್ಥಿತಿಯಲ್ಲಿ ಇರುವ ನಿವೃತ್ತರು ಹಾಗೂ ಇನ್ನಿತರರು ಹೋರಾಟ ಸಮಿತಿ ಹಾಗೂ ಸಂಘಟನೆಗಳನ್ನು ಮಾಡಿಕೊಂಡು ದೇಶವ್ಯಾಪಿ ಹೋರಾಟವನ್ನು ಕಟ್ಟಬೇಕಾದ ಅವಶ್ಯಕತೆ ಇದೆ.  ಬಾಲ್ಯ, ಯೌವನ, ಗೃಹಸ್ಥ ಅವಸ್ಥೆಗಳನ್ನು ಪೂರೈಸಿರುವ ನಿವೃತ್ತರು ಹಾಗೂ ಅರುವತ್ತರ ವಯಸ್ಸನ್ನು ಮೀರಿದವರು ವಾನಪ್ರಸ್ಥ  ಜೀವನಕ್ಕೆ ಅಂದರೆ ದೇಶದ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಜೀವನಕ್ಕೆ  ತಮ್ಮನ್ನು ತೊಡಗಿಸಿಕೊಳ್ಳುವುದು ದೇಶದ ಹಿತದೃಷ್ಟಿಯಿಂದ ಅಗತ್ಯವಿದೆ. ದೇಶದಲ್ಲಿ ಉದ್ಭವಿಸಿರುವ ನಾಯಕತ್ವದ ಕೊರತೆಯನ್ನು ನೀಗಿಸಲು ಇಂಥ ವಾನಪ್ರಸ್ಥ ಅವಸ್ಥೆಯ ಹಿರಿಯ ಜನಾಂಗದ ಅವಶ್ಯಕತೆ ಇದೆ.

ಯುವಕರು ಕಲಿಕೆಯ ಹಂತಗಳಲ್ಲಿ ಅಥವಾ ಉದ್ಯೋಗದ ಪ್ರಾರಂಭಾವಸ್ಥೆಯಲ್ಲಿ  ಇರುವುದರಿಂದ ಅವರು ಇಂಥ ಹೋರಾಟಗಳಲ್ಲಿ ತೊಡಗುವುದು ಅವರ ಕಲಿಕೆಯ ಮೇಲೆ ಅಥವಾ ಉದ್ಯೋಗದ ಮೇಲೆ ಪರಿಣಾಮ  ಬೀರುತ್ತದೆ.  ಹೀಗಾಗಿ ಅವರು ಇಂಥ ಹೋರಾಟಗಳಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗಲಾರದು. ಆದರೆ ಅವರು ಇಂಥ ಹೋರಾಟಗಳಿಗೆ ನೈತಿಕ ಬೆಂಬಲ ನೀಡಬಹುದು. ಭ್ರಷ್ಟಾಚಾರವು ನಮ್ಮ ದೇಶದಲ್ಲಿ ಮಿತಿಮೀರಿ ಬೆಳೆಯಲು ಕಾರಣ ಭ್ರಷ್ಟರಿಗೆ ಯಾವುದೇ ಶಿಕ್ಷೆ ಆಗದಿರುವುದು ಮತ್ತು ಅವರು ಅಕ್ರಮವಾಗಿ ಕೂಡಿಹಾಕಿದ ಆಸ್ತಿಪಾಸ್ತಿಗಳನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗದಿರುವುದೇ ಆಗಿದೆ. ಭ್ರಷ್ಟರಿಗೆ ಶೀಘ್ರವಾಗಿ ಶಿಕ್ಷೆಯಾಗಿ ಅವರು ಕಠಿಣ ಜೈಲು ಶಿಕ್ಷೆ ಅನುಭವಿಸುವಂತಾಗಿ ಅವರು ಕೂಡಿಹಾಕಿದ ಎಲ್ಲ ಆಸ್ತಿಪಾಸ್ತಿಗಳನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಂಡು ದೇಶದ ಅಭಿವೃದ್ಧಿಗೆ ಬಳಸುವಂತಾದರೆ ಮುಂದೆ ಭ್ರಷ್ಟಾಚಾರ ಮಾಡಲು ರಾಜಕಾರಣಿಗಳು ಹಾಗೂ ಉದ್ಯಮಿಗಳು ಹಿಂಜರಿಯುವ ಪರಿಸ್ಥಿತಿ ನಿರ್ಮಾಣ ಆಗಿಯೇ ಆಗುತ್ತದೆ. ಅದರಲ್ಲಿ ಸಂದೇಹವಿಲ್ಲ.

7 thoughts on ““ಕರ್ನಾಟಕ ರತ್ನ” ಹಾಗೂ “ಬಸವಶ್ರೀ” ಪ್ರಶಸ್ತಿ ಎಸ್.ಆರ್. ಹಿರೇಮಠರಿಗೆ ಸಲ್ಲಬೇಕು

  1. g.mahanthesh.

    ಎಸ್​.ಆರ್​.ಹಿರೇಮಠ್​ ಅವರಿಗೆ ಕರ್ನಾಟಕ ರತ್ನ ಮತ್ತು ಬಸವ ಪ್ರಶಸ್ತಿ ಕೊಡುವುದರ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಹಿರೇಮಠ್​ ಅವರಿಗೆ ಭ್ರಷ್ಟಾಚಾರಗಳ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆ ಬಳಸಿ ದಾಖಲೆಗಳನ್ನ ಹೆಕ್ಕಿ ಕೊಟ್ಟವರಿಗೂ ಗೌರವ ಸಿಗುವಂತಾಗಬೇಕು. ಯಾಕಂದರೆ ಡಿ.ಕೆ.ಶಿವಕುಮಾರ್​ ಅವರು ಭಾಗಿಯಾಗಿರುವ ಕನಕಪುರ ಸುತ್ತಮುತ್ತ ಕಲ್ಲು ಗಣಿಗಾರಿಕೆ ಪ್ರಕರಣ ಹಾಗೂ ಮೈಸೂರು ಮಿನರಲ್ಸ್​ ಲಿಮಿಟೆಡ್​ನಲ್ಲಿ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಅದಿರು ರಿಲೀಸ್​ ಮಾಡಿಸಿಕೊಂಡಿರುವ ಬಗ್ಗೆ ದಾಖಲೆಗಳನ್ನ ಹೆಕ್ಕಿ ಇವತ್ತಿಗೂ ಜೀವ ಭಯ ಎದುರಿಸುತ್ತಿರುವವರು ಅಚ್ಚಲು ಶಿವರಾಜ್​ ಎಂಬುವರು. ಅಚ್ಚಲು ಶಿವರಾಜ್​ ಒಬ್ಬರೇ ಎಲ್ಲಾ ದಾಖಲೆಗಳನ್ನ ತೆಗೆದುಕೊಂಡು ಹಿರೇಮಠ್​ ಅವರಿಗೆ ತಲುಪಿಸಿದಂಥೋರು ಅನ್ನುವುದನ್ನ ಯಾರೂ ಮರೆಯಬಾರದು. ಯಾಕೆಂದರೇ ಶಿವರಾಜ್​ ಮಾಹಿತಿ ಹಕ್ಕು ಹೋರಾಟಗಾರ.

    Reply
  2. Munirathnam

    People should elect him as a president of india, then we can see drastic changes in india’s system.

    ರಾಷ್ಟ್ರಪತಿಯಾಗಿ ಭಾರತ ಪರಿವರ್ತನೆ ಮಾಡಿದರೆ ಮುಂದಿನ ಪೀಳಿಗೆ ಇವರಿಗೆ ಚಿರಋಣಿ.

    Reply
  3. M.Lingaraju

    ದೇಶದ ವ್ಯವಸ್ಥೆಯ ಕುರಿತು ನಿಮ್ಮ ಅಭಿಪ್ರಾಯ ಸರಿ..
    ಆದರೆ, ಪ್ರಶಸ್ತಿ ನೀಡುವ, ಕೊಡಿಸುವ ಮತ್ತು ಆ ಕುರಿತು ಚಚರ್ಿಸುವ ಸಂದರ್ಭ ಇದಲ್ಲ.

    Reply
    1. Ananda Prasad

      ಎಸ್. ಆರ್. ಹಿರೇಮಠ ಅವರ ಬಗ್ಗೆ ವಿವರವಾದ ಮಾಹಿತಿ ಉಳ್ಳ ಕೊಂಡಿಯನ್ನು ಕೊಟ್ಟದ್ದಕ್ಕಾಗಿ ಧನ್ಯವಾದಗಳು. ಇಷ್ಟೆಲ್ಲಾ ಸಮಾಜಮುಖಿ ಕೆಲಸ ಮಾಡಿದರೂ ಇವರ ಬಗ್ಗೆ ನಮ್ಮ ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಇವರ ಬಗ್ಗೆ, ಇವರ ಕೆಲಸಗಳ ಬಗ್ಗೆ ಎಲ್ಲಿಯೂ ಸಂಪೂರ್ಣ ವಿವರ, ಪರಿಚಯ ಬಂದ ಹಾಗೆ ಕಾಣುವುದಿಲ್ಲ. ಇಂಥವರ ಬಗ್ಗೆ ಮುಖ್ಯ ವಾಹಿನಿಯ ಮಾಧ್ಯಮಗಳು ಹೆಚ್ಚಿನ ಗಮನ ಕೊಡಬೇಕಾದ ಅಗತ್ಯ ಇದೆ. ಇದು ಪ್ರಚಾರಕ್ಕೋಸ್ಕರ ಅಲ್ಲ. ಇಂಥ ಕೆಲಸದಿಂದ ಹಲವರಿಗೆ ಪ್ರೇರಣೆ ದೊರಕಬಹುದು ಎಂಬ ದೃಷ್ಟಿಯಿಂದ.

      Reply
  4. ಎಚ್. ಸುಂದರ ರಾವ್

    ಯಾರಿಗಾದರೂ ಪ್ರಶಸ್ತಿ ಬಂದರೆ, ಕೂಡಲೇ ಅವರ ವ್ಯಕ್ತಿತ್ವದ ಬಗ್ಗೆ ನನಗೆ ಅನುಮಾನ ಶುರುವಾಗುತ್ತದೆ!

    Reply
  5. sreedhar kallahalla

    ನಿಜಕ್ಕೂ ಹಿರೇಮಠ್ ಅವರಿಗೆ ನಮ್ಮ ರಾಜ್ಯದ ಕೃತಜ್ಜತೆ ಸಲ್ಲಲೇ ಬೇಕು. ಅವರು ಒಂದು ವಿಷಯವನ್ನು ಕೈಗೆತ್ತಿಕೊಂಡರೆಂದರೆ ಅದನ್ನು ತುದಿಗಾಣಿಸುವವರೆಗೂ ವಿಶ್ರಮಿಸುವುದಿಲ್ಲ. ಕ್ರಮಬದ್ದ ಹೋರಾಟ ಅವರದು. ಗಾಂಧಿಯಿಂದ, ಬಸವಣ್ಣನಿಂದ ಸ್ಪೂರ್ತಿ ಪಡೆದವರು. ತಿಳುವಳಿಕೆಯುಳ್ಳವರು. ನಮ್ಮಂಥ ದೇಶದ ಆಡಳಿತವ್ಯವಸ್ಥೆ, ಶಾಸಕಾಂಗ, ನ್ಯಾಯಾಂಗ ಹೇಗೆ ಕೆಲಸ ಮಾಡಬಲ್ಲದೆಂದು ತಿಳಿದು ಇಲ್ಲಿನ ಒಳ್ಳೆಯ ಸಾಧ್ಯತೆಗಳಿಗೆ ಚಾಲನೆ ನೀಡುವವರು,ಬಳಸುವ ಕಲೆ ತಿಳಿದವರು.
    ’ನಮಗೇನೂ ಮಾಡಲು ಸಾಧ್ಯವಿಲ್ಲ’ ಎಂದು ನಿರಾಶರಾಗುವ ಜನರಿಗೆ ಹೊರತಾಗಿ ’ ಇಲ್ಲ..ನಮ್ಮ ವ್ಯವಸ್ಥೆಯಲ್ಲಿ ಸಾಧ್ಯವಿದೆ’ ಎನ್ನುವ ಕಳಕಳಿ ಹೊಂದಿದವರು. ಜನತಂತ್ರದ ಯಶಸ್ಸಿಗೆ ಇಂಥಹವರ ಸ್ಪೂರ್ತಿ ಬೇಕೇ ಬೇಕು.

    Reply

Leave a Reply

Your email address will not be published. Required fields are marked *