ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-9)


– ಡಾ.ಎನ್.ಜಗದೀಶ್ ಕೊಪ್ಪ


 

The greatest of evils and the worst of crimes is poverty. -Bernard Shaw

ಶ್ರೀಕಾಕುಳಂ ಜಿಲ್ಲೆಯನ್ನು ಬೆಂಕಿ ಮತ್ತು ಬಿರುಗಾಳಿಯಂತೆ ಆವರಿಸಿಕೊಂಡ ನಕ್ಸಲ್ ಹೋರಾಟ, ಹೇಳಲು ಬಾಯಿಲ್ಲದೆ, ಎದುರಿಸಲು ಆತ್ಮ ಸ್ಥೈರ್ಯವಿಲ್ಲದೆ, ನರಳಿದ್ದ ಬುಡಕಟ್ಟು ಜನಾಂಗದ ಪುರುಷರು ಹಾಗೂ  ಮಹಿಳೆಯರಿಗೆ ಅನಿರೀಕ್ಷಿತವಾಗಿ ಸ್ವಾಭಿಮಾನದ ಬದುಕನ್ನು ಅವರೆದುರು ಅನಾವರಣಗೊಳಿಸಿತ್ತು. ಅದೇ ರೀತಿ ಪಟ್ಟಭದ್ರ ಹಿತಾಶಕ್ತಿಗಳ ಬೇರುಗಳನ್ನು ಬುಡಸಮೇತ ಅಲುಗಾಡಿಸಿತು.
ಜನಸಾಮಾನ್ಯರು ನಡೆಸಿದ ಪಂಚಾಯಿತಿ ಸಭೆಯಲ್ಲಿ ಕೈಕಟ್ಟಿ ನಿಂತು ಅವರು ಒಮ್ಮತದಿಂದ ನೀಡುವ ತೀರ್ಪಿಗೆ ಭೂಮಾಲಿಕರು, ದಲ್ಲಾಳಿಗಳು, ಬಡ್ಡಿ ವ್ಯಾಪಾರದ ಸಾಹುಕಾರರು ಪ್ರತಿರೋಧವಿಲ್ಲದೆ ತಲೆಬಾಗಿದರು.

1969 ರ ಮೆ11 ರಂದು ಪತನಪಟ್ನಂ ತಾಲೂಕಿನ ಎತಮನಗುಡ ಎಂಬ ಹಳ್ಳಿಯ ಜಮೀನ್ದಾರನಾದ ಐವತ್ತು ವರ್ಷದ ಪಿ.ಜಮ್ಮುನಾಯ್ಡು ಎಂಬಾತನನ್ನು 200 ಮಂದಿ ಹೋರಾಟಗಾರರು ಅವನ ಮನೆಯಿಂದ ಅನಾಮತ್ತಾಗಿ ಎತ್ತಿ ಹಾಕಿಕೊಂಡು ಬಂದು, ಪಂಚಾಯಿತಿ ಸಭೆ ಮುಂದೆ ನಿಲ್ಲಿಸಿದರು. ಈತನಿಗೆ ಏಳು ಮಂದಿ ಪತ್ನಿಯರು ಅವರಲ್ಲಿ ಇವನು ಅಪಹರಿಸಿಕೊಂಡು ಹೋಗಿದ್ದ ಬುಡಕಟ್ಟು ಜನಾಂಗದ ನಾಲ್ವರು ಮಹಿಳೆಯರಿದ್ದರು. ಆ ನಾಲ್ವರಲ್ಲಿ ಇಬ್ಬರು, ಇನ್ನೂ ಅಪ್ರಾಪ್ತ ಬಾಲಕಿಯರು. ಈತ ಪೊಲೀಸರ ಬೆಂಬಲದಿಂದ ಆದಿವಾಸಿಗಳ 600 ಎಕರೆಗೂ ಹೆಚ್ಚು ಭೂಮಿಯನ್ನು ಕಬಳಿಸಿದ್ದ. ಸಭೆಯಲ್ಲಿ ಆತನಿಗೆ ಅವನ ಸಹೋದರರು ಮತ್ತು ಪತ್ನಿಯರ ಎದುರೇ, ಸಾವಿನ ಶಿಕ್ಷೆಯನ್ನು ವಿಧಿಸಲಾಯಿತು. ಜಮೀನ್ದಾರನ ರುಂಡ ಮುಂಡವನ್ನು ಎಲ್ಲರೆದುರು ಬೇರ್ಪಡಿಸಿ, ರುಂಡವನ್ನು ಊರಿನ ಮಧ್ಯಭಾಗದಲ್ಲಿ ಕೆಂಪು ಧ್ವಜದೊಂದಿಗೆ ನೇತು ಹಾಕಲಾಯಿತು.

ಮತ್ತೊಂದು ಘಟನೆಯಲ್ಲಿ ಬಡ್ಡಿ ವ್ಯಾಪಾರಿಯೊಬ್ಬನನ್ನು ಕರೆತಂದು ವಿಚಾರಣೆ ನಡೆಸಲಾಯಿತು. ಈತ ಆದಿವಾಸಿಗಳಿಗೆ ವರ್ಷವೊಂದಕ್ಕೆ ಒಂದು ರೂಪಾಯಿಗೆ ಪ್ರತಿಯಾಗಿ ಐದು ರೂಪಾಯಿ ಬಡ್ಡಿ ಹಣ ಕಲೆ ಹಾಕುತ್ತಿದ್ದ. ನೂರು ರೂಪಾಯಿ ಪಡೆದ ಬಡರೈತ ವರ್ಷ ತುಂಬಿದ ನಂತರ ಈತನಿಗೆ ಆರು ನೂರು ನೀಡಬೇಕಾಗಿತ್ತು. ಈ ಬಡ್ಡಿ ವ್ಯಾಪಾರಿ ಆದಿವಾಸಿ ರೈತರಿಂದ ಹಣದ ಬದಲು ಅವರು ಕಾಡಿನಲ್ಲಿ ಕಲೆ ಹಾಕುತ್ತಿದ್ದ ಹುಣಸೆ ಹಣ್ಣನ್ನು ಪಡೆಯುತ್ತಿದ್ದ. ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 1600 ರೂ. ಇದ್ದರೆ, ಈ ವ್ಯಾಪಾರಿ ಆದಿವಾಸಿ ರೈತರಿಂದ ಕೇವಲ 600 ರೂ. ಗಳಿಗೆ ಪಡೆಯುತ್ತಿದ್ದ. ಸಾಲದ ಸುಳಿಗೆ ಸಿಲುಕಿದ ಆದಿವಾಸಿಗಳು, ಅವನು ಕೇಳಿದ ಬೆಲೆಗೆ ಹುಣಸೆ ಹಣ್ಣನ್ನು ನೀಡಿ ಸಾಲದಿಂದ ವಿಮುಕ್ತಿಯಾಗುತ್ತಿದ್ದರು. ವಿಚಾರಣೆಯಲ್ಲಿ ತನ್ನೆಲ್ಲಾ ತಪ್ಪುಗಳನ್ನು ಒಪ್ಪಿಕೊಂಡು, ಬಡ್ಡಿ ಹಣವನ್ನು ಹಿಂತಿರುಗಿಸಲು ಒಪ್ಪಿ. ಪ್ರಾಣ ಭಿಕ್ಷೆಗೆ ಅಂಗಲಾಚಿದ ಫಲವಾಗಿ, ವ್ಯಾಪಾರಿಗೆ ದಂಡವಿಧಿಸಿ ಬಿಡುಗಡೆಗೊಳಿಸಲಾಯಿತು.

ಇಂತಹ ವಿವೇಚನೆಯ ತೀರ್ಮಾನಗಳ ನಡುವೆಯೂ, ಹೋರಾಟದ ಸಂಭ್ರಮದಲ್ಲಿ ಉದ್ರಿಕ್ತರಾಗಿದ್ದ ಆದಿವಾಸಿಗಳಿಗೆ ಎಲ್ಲಾ ರೀತಿಯ ವಿವೇಚನೆ ಹಾಗೂ ಮಾನವೀಯತೆಯ ಗುಣಗಳು ಮಾಯವಾಗಿದ್ದವು. ಸೇಡಿನ ಜ್ವಾಲೆ ಅವರ ಮುಖದಲ್ಲಿ ಹತ್ತಿ ಉರಿಯುತ್ತಿತ್ತು. ಸೂರ್ಯ ಚಂದ್ರ ಇರುವವರೆಗೂ ಪಟ್ಟಭದ್ರ ಹಿತಾಶಕ್ತಿಗಳು ನಮ್ಮ ತಂಟೆಗೆ ಬರಬಾರದು ಎಂಬ ಪಾಠವನ್ನು ಅವರಿಗೆ ಕಲಿಸುವ ಹಠಮಾರಿತನವಿತ್ತು. ಹಿಂಸೆಗೆ ಹಿಂಸೆಯೇ ಪ್ರತ್ತ್ಯುತ್ತರ ಎಂಬ ಕಟು ನಿರ್ಧಾರ ಸಹ ಅವರಲ್ಲಿ ಬೇರೂರಿತ್ತು.

ಶ್ರೀಕಾಕುಳಂ ಜಿಲ್ಲೆಯಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ ಅಗ್ನಿ ಪರ್ವತದ ಜ್ವಾಲೆಯಂತೆ ಭುಗಿಲೆದ್ದ ಆದಿವಾಸಿಗಳ ಪ್ರತಿಭಟನೆಗೆ ನಾಗರಿಕ ಜಗತ್ತು ಬೆಚ್ಚಿಬಿದ್ದಿತು. ಆಂಧ್ರ ಸರ್ಕಾರಕ್ಕೆ ಏನೂ ತೋಚದಂತಾಯಿತು. ಏಕೆಂದರೆ, ಹೋರಾಟಗಾರರು ನಡೆಸುತ್ತಿದ್ದ ನರಹತ್ಯೆಗೆ, ಸ್ವತಃ ಪೊಲೀಸರೇ ನಡುಗಿ ಹೋಗಿದ್ದರು. ಇದರಿಂದಾಗಿ ಹೋರಾಟದ ಜ್ವಾಲೆ ಕಾಡ್ಗಿಚ್ಚಿನಂತೆ ಆಂಧ್ರದ ಇತರೆ ಜಿಲ್ಲೆಗಳಾದ ಕಮ್ಮಮ್, ವಾರಂಗಲ್, ಅದಿಲಾಬಾದ್, ಕರೀಂನಗರದ ಪ್ರದೇಶಗಳಿಗೂ ಹರಡಿತು ಟಿ.ನಾಗಿರೆಡ್ಡಿ ಎಂಬ ನಾಯಕ ಈ ಜಿಲ್ಲೆಗಳಲ್ಲಿ ಹೋರಾಟದ ನೇತೃತ್ವ ವಹಿಸಿಕೊಂಡಿದ್ದ. ನಕ್ಸಲ್ ಚಳವಳಿ ಕೇವಲ ಐದು ತಿಂಗಳ ಅವಧಿಯಲ್ಲಿ ತೆಲಂಗಾಣ ಪ್ರಾಂತ್ಯದ 10 ಸಾವಿರ ಚದುರ ಕಿ.ಮಿ. ವ್ಯಾಪ್ತಿಯ ಹಳ್ಳಿಗಳಿಗೆ ಹರಡಿ, ನಾಲ್ಕು ಲಕ್ಷ ಜನ ಹೋರಾಟಕ್ಕೆ ಕೈ ಜೋಡಿಸಿದರು.

ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಅರಿತ ಆಂಧ್ರ ಸರ್ಕಾರ, ಹೋರಾಟಕ್ಕೆ ಸಂಬಂಧಿಸಿದಂತೆ 1969 ರ ಡಿಸಂಬರ್ ತಿಂಗಳಿನಲ್ಲಿ ನಾಗಿರೆಡ್ಡಿ ಸೇರಿದಂತೆ ಏಳು ಜನ ಪ್ರಮುಖ ನಾಯಕರನ್ನು ಬಂಧಿಸಿತು. ನಾಗಿರೆಡ್ಡಿಯ ಬಂಧನದ ನಂತರ ಅವನ ಅನುಪ ಸ್ಥಿತಿಯಲ್ಲಿ ಚಂದ್ರಪುಲ್ಲ ರೆಡ್ಡಿ ಹೋರಾಟವನ್ನು ಮುನ್ನಡೆಸಿದನು. ಹಿಂಸೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ 1969 ರ ಆಗಸ್ಟ್ ತಿಂಗಳ 12 ರಂದು. ಆಂಧ್ರ ಸರ್ಕಾರ ವಿಶಾಖಪಟ್ಟಣದಲ್ಲಿ, ನೆರೆಯ ಒರಿಸ್ಸಾ ಮತ್ತು ಮಧ್ಯಪ್ರದೇಶದ ಅಧಿಕಾರಿಗಳ ಜೊತೆ ಗುಪ್ತ ಸಮಾಲೋಚನೆ ನಡೆಸಿತು. ಅಲ್ಲದೇ, ನೇರ ಕಾರ್ಯಾಚರಣೆಗೆ ಮುಂದಾಯಿತು. ಈ ಕಾರ್ಯಾಚರಣೆಯ ಮುಖ್ಯ ಗುರಿ ನಕ್ಸಲ್ ಚಳವಳಿಯ ನಾಯಕರನ್ನು ಎನ್‌ಕೌಂಟರ್ ಹೆಸರಿನಲ್ಲಿ ಮುಗಿಸುವುದಾಗಿತ್ತು.

1969 ರ ಅಂತ್ಯದ ವೇಳೆಗೆ ತೆಲಂಗಾಣ ಮತ್ತು ಶ್ರೀಕಾಕುಳಂ ಜಿಲ್ಲೆಯಲ್ಲಿ ಪ್ರಮುಖ ನಾಯಕರಾದ ಭಾಸ್ಕರ ರಾವ್, ತಮ್ಮಡ ಗಣಪತಿ, ನಿರ್ಮಲ ಕೃಷ್ಣಮೂರ್ತಿ, ಸುಬ್ಬರಾವ್ ಪ್ರಾಣಿಗ್ರಹಿ, ರಮೇಶ್ಚಂದ್ರ ಸಾಹು ಇವರು ಆಂಧ್ರ ಪೊಲೀಸರ ಬಂಧನಕ್ಕೆ ಒಳಗಾಗಿ, ಪೊಲೀಸರ ಎನ್‌ಕೌಂಟರ್ ಎಂಬ ನರಹತ್ಯೆಗೆ ಪರ್ವತದ ನಿರ್ಜನ ಪ್ರದೇಶದಲ್ಲಿ ಬಲಿಯಾದರು. ಭಾರತದ ನಕ್ಸಲ್ ಹೋರಾಟದ ಇತಿಹಾಸದಲ್ಲಿ ಇದು ಪ್ರಥಮ ಎನ್‌ಕೌಂಟರ್ ಪ್ರಕರಣ. ಸಂಧಾನದ ಮೂಲಕ ಬಗೆ ಹರಿಯಬಹುದಾಗಿದ್ದ ಆದಿವಾಸಿಗಳ ನ್ಯಾಯಯುತವಾದ ಹೋರಾಟಕ್ಕೆ ಪ್ರತಿಯಾಗಿ ಆಂಧ್ರ ಸರ್ಕಾರ ಮತ್ತು ಅಲ್ಲಿನ ಪೊಲೀಸರು, ಹಿಂಸೆಯ ಹಾದಿ ತುಳಿದರು. ನಕ್ಸಲಿಯರನ್ನು ಶಾಶ್ವತವಾಗಿ ಹಿಂಸೆಯನ್ನು ತುಳಿಯುವಂತೆ ಮಾಡಿದರು.

ವರ್ತಮಾನದ ನಾಗರಿಕ ಸಮಾಜದಲ್ಲಿ ಹಿಂಸೆಯನ್ನು ಪ್ರತಿಪಾದಿಸುವುದು, ಅಥವಾ ಬೆಂಬಲಿಸುವುದು, ಅವಿವೇಕತನ. ಅಷ್ಟೇ ಅಲ್ಲ, ಅದೊಂದು ಅನಾಗರಿಕ ನಡುವಳಿಕೆ ಕೂಡ. ಆದರೆ, ನಕ್ಸಲಿಯರು, ವರ್ತಮಾನದ ಭಾರತದಲ್ಲಿ ದೇಶಾದ್ಯಂತ ಪೊಲೀಸರನ್ನ ಏಕೆ ಇಷ್ಟೊಂದು ನಿರ್ಧಯವಾಗಿ ಕೊಲ್ಲುತ್ತಿದ್ದಾರೆ ಎಂಬ ಪ್ರಶ್ನೆಗೆ ನಾವು ಉತ್ತರ ಹುಡುಕುತ್ತಾ ಹೊರಟರೆ, ಅದು ನಮ್ಮನ್ನು ಮೇಲ್ಕಂಡ ದುರಂತದ ಕಥನದ ಬಳಿ ಕರೆದು ತಂದು ನಿಲ್ಲಿಸುತ್ತದೆ.

ನಕ್ಸಲಿಯರು ಎಂಬ ಹಣೆಪಟ್ಟಿ ಕಟ್ಟಿಕೊಂಡ ಗುಡ್ಡಗಾಡಿನ ರೈತರು, ಕೃಷಿ ಕೂಲಿಕಾರ್ಮಿಕರು, ಆದಿವಾಸಿಗಳು, ಈ  ದೇಶದ ಭದ್ರತೆಗೆ, ಅಥವಾ ಆಂಧ್ರ ಸರ್ಕಾರದ ಪತನಕ್ಕೆ ಎಂದೂ ಒಳಸಂಚು ರೂಪಿಸಿದವರಲ್ಲ, ಮೇಲಾಗಿ ಅವರ್‍ಯಾರು ವಿದೇಶಿ ಆಕ್ರಮಣಕಾರರೂ ಆಗಿರಲಿಲ್ಲ. ಅವರ ಬೇಡಿಕೆಗಳು ಕೂಡ ಅತಿ ಸಾಮಾನ್ಯವಾಗಿದ್ದವು. ಅವರು ಬಯಸಿದ್ದು ಯಾವುದೇ ರೀತಿಯ ಕಿರುಕುಳವಿಲ್ಲದ ನೆಮ್ಮದಿಯ ಬದುಕನ್ನು ಮಾತ್ರ. ಆದರೆ, ಈ ನಮ್ಮ ಸರ್ಕಾರಗಳು, ಆಳುವ ಪ್ರತಿನಿಧಿಗಳು ಇವರುಗಳಿಗೆ ಮಾಡಿದ್ದಾದರೂ ಏನು? ಇವರ ಬದುಕನ್ನು ಶೋಷಿಸುವುದನ್ನೇ ವೃತ್ತಿ ಮಾಡಿಕೊಂಡ ಭೂಮಾಲೀಕರ ಕೈಗೆ ಒಪ್ಪಿಸಿ ಇಡೀ ವ್ಯವಸ್ಥೆ ಕಣ್ಣು ಮುಚ್ಚಿ ಕುಳಿತ್ತಿತು. ಅಸಮಾನತೆ, ಅತ್ಯಾಚಾರ, ಶೋಷಣೆಗಳೇ ತಾಂಡವಾಡುತ್ತಿದ್ದ ವ್ಯವಸ್ಥೆಯಲ್ಲಿ ಆದಿವಾಸಿಗಳು, ಪ್ರಾಣಿಗಳಂತೆ ಬದುಕಿ ಜಂಗಲ್‌ರಾಜ್ಯದ ಕಾನೂನಿಗೆ ತಮ್ಮಗಳ ಇಡೀ ಜೀವನವನ್ನೇ ಒತ್ತೆಯಿಡಬೇಕಾಯಿತು.

ಹೋರಾಟದ ಆರಂಭದ ದಿನಗಳಲ್ಲಿ ಈ ಆದಿವಾಸಿಗಳ ಬೇಡಿಕೆಗೆ ಸರ್ಕಾರ ಮುಕ್ತ ಮನಸ್ಸಿನಿಂದ ಸ್ಪಂದಿಸಿದ್ದರೆ, ನಕ್ಸಲಿಯರ ಹಿಂಸಾಚಾರದ ಇತಿಹಾಸ ಇಲ್ಲಿಯವರೆಗೂ ಮುಂದುವರಿಯುತ್ತಿತ್ತೆ? ಇದು ನಮ್ಮ ನಮ್ಮ ಆತ್ಮಸಾಕ್ಷಿಗೆ ನಾವು ಹಾಕಿಕೊಳ್ಳಬೇಕಾದ ಪ್ರಶ್ನೆ. ಅವರುಗಳು ಯಾವ ಸಾಮ್ರಾಜ್ಯದ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿರಲಿಲ್ಲ. ಈ ನೆಲದಲ್ಲಿ ಪ್ರಕೃತಿಯ ಮಕ್ಕಳಾಗಿ ಹುಟ್ಟಿ, ಇಲ್ಲಿನ ಸಮಾಜಕ್ಕೆ ಅಥವಾ ಪರಿಸರಕ್ಕೆ ಯಾವ ಕೇಡನ್ನೂ ಬಗೆದಿರಲಿಲ್ಲ. ಆಳುವ ಸರ್ಕಾರಗಳು ಜೀವ ಭಯದ ಮೂಲಕ ಚಳವಳಿಯ ಹುಟ್ಟಡಗಿಸಲು ಹೋಗಿ, ಸಣ್ಣದಾಗಿ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದವು. ಇದು ಎಂತಹ ಅವಿವೇಕತನದ ನಡುವಳಿಕೆ ಎಂದರೆ, ಬಾಯಾರಿ ನೀರಿಗಾಗಿ ಬೊಗಸೆಯೊಡ್ಡಿದವನ ಕೈಗೆ ಕುಡಿಯುವ ನೀರು ಸುರಿಯುವ ಬದಲು, ಮೂತ್ರ ವಿಸರ್ಜನೆ ಮಾಡಿದಂತೆ. ಇದನ್ನು ಜಾಣ್ಮೆಯ ನಡೆಎನ್ನಲಾಗದು. ಅಮಾನುಷ ಕ್ರಿಯೆ ಎಂದು ಕರೆಲಾಗುತ್ತದೆ. ನಕ್ಸಲ್ ಹೋರಾಟದ ಇತಿಹಾಸದುದ್ದಕ್ಕೂ ಸರ್ಕಾರಗಳು ಇಂತಹ ಅವಿವೇಕತನಗಳನ್ನು ಮಾಡಿಕೊಂಡು ಬಂದಿವೆ. ಈ ನೆಲದಲ್ಲಿ ಮುಕ್ತವಾದ ಮಾತುಕತೆ ಅಥವಾ ಸಂಧಾನದ ಮೂಲಕ ಬಗೆ ಹರಿಯದ ಸಮಸ್ಯೆಗಳು ಯಾವುವೂ ಇಲ್ಲ ಎಂಬ ಕಟು ಸತ್ಯವನ್ನು ನಮ್ಮ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಮೊದಲು ಅರಿಯಬೇಕು.

ನಕ್ಸಲ್ ನಾಯಕರ ಎನ್‌ಕೌಂಟರ್ ಘಟನೆ ನಕ್ಸಲಿಯ ಹೋರಾಟಗಾರರಲ್ಲಿ ಬೆದರಿಕೆಯನ್ನು ಹುಟ್ಟು ಹಾಕುವ ಬದಲು, ಅವರನ್ನು ಮತ್ತಷ್ಟು ಕೆರಳಿಸಿತು. ಈ ಘಟನೆಗೆ ಪ್ರತಿಯಾಗಿ ಅವರು, 1970 ಜನವರಿ 8 ರಂದು ಮತ್ತೊಬ್ಬ ಜಮೀನ್ದಾರನ ಹತ್ಯೆಯನ್ನು ಅತ್ಯಂತ ಭೀಕರವಾಗಿ ನಡೆಸಿದರು. ಸೋಂಪೇಟ ತಾಲೂಕಿನ ಭಾವನಪುರಂ ಎಂಬ ಹಳ್ಳಿಯ ಹೊರವಲಯದ ತೋಟದಲ್ಲಿ ವಾಸವಾಗಿದ್ದ ವೂನ ಸವರಯ್ಯ ಎಂಬ ಜಮೀನ್ದಾರನನ್ನು ಅವನ ಹೆಂಡತಿ, ಮಕ್ಕಳೆದುರು, ಕತ್ತರಿಸಿ ಹಾಕಿ ಅವನ ದೇಹದ ಅಂಗಾಂಗಗಳನ್ನು ಮನೆಯ ಮುಂಭಾಗದಲ್ಲಿ ತೋರಣದಂತೆ ಕೆಂಪು ಬಾವುಟಗಳ ಸಮೇತ ನೇತು ಹಾಕಲಾಯಿತು. ಅಲ್ಲದೆ, ಅವನ ರಕ್ತದಲ್ಲಿ ಗೋಡೆಯ ಮೇಲೆ ಬರಹವೊಂದನ್ನು ಬರೆಯುವುದರ ಮೂಲಕ ತಾಕತ್ತಿದ್ದರೆ, ನಮ್ಮ ಹೋರಾಟವನ್ನು ನಿಗ್ರಹಿಸಿ ಎಂಬ ಸವಾಲನ್ನು ಸರ್ಕಾರಕ್ಕೆ ಮತ್ತು ಪೊಲೀಸರಿಗೆ ಹಾಕಲಾಗಿತ್ತು.

ಬಹುತೇಕ ನಾಯಕರು ಎನ್‌ಕೌಂಟರ್‌ಗೆ ಬಲಿಯಾದ ನಂತರ, ಆಂಧ್ರ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದೆ, ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತಾ ಗಿರಿಜನರನ್ನು ಸಂಘಟಿಸುವ ಸಂಪೂರ್ಣ ಹೊಣೆ ವೆಂಪಟಾಪು ಸತ್ಯನಾರಾಯಣನ ಮೇಲೆ ಬಿತ್ತು. ಇಂತಹ ವೇಳೆಯಲ್ಲಿ ಸತ್ಯನಾರಾಯಣನಿಗೆ ಅದಿಬಟ್ಲ ಕೈಲಾಸಂ ಎಂಬ ಅದ್ಭುತ ಸಂಘಟನಾಕಾರನೊಬ್ಬ ನೆರವಾದ. ನಾಯಕರ ಹತ್ಯೆಯಿಂದ ಆದಿವಾಸಿ ಹೋರಾಟಗಾರರು ಎದೆಗುಂದಿರಲಿಲ್ಲ. ದಿನನಿತ್ಯ ಜಮೀನ್ದಾರರ ಕೈಗೆ ಸಿಕ್ಕಿ ಸಾಯುವ ಬದಲು, ಪೋಲೀಸರನ್ನು ಎದುರಿಸಿ ಒಂದೇ ದಿನ ಸಾಯೋಣ ಎಂಬ ದೃಢ ನಿರ್ಧಾರಕ್ಕೆ ಅವರೆಲ್ಲಾ ಬದ್ಧರಾಗಿದ್ದರು. ಆದರೆ ಅವರನ್ನು ಮುನ್ನಡೆಸುವ ನಾಯಕರು ಇರಲಿಲ್ಲ. ಈ ಕೊರತೆ ಅವರನ್ನು ಕಾಡುತ್ತಿತ್ತು.

ಶ್ರೀಕಾಕುಳಂ ಜಿಲ್ಲೆಯ ಎನ್‌ಕೌಂಟರ್ ಘಟನೆಯಿಂದ ತೀವ್ರ ಹತಾಶನಾದವನಂತೆ ಕಂಡುಬಂದ ಚಾರುಮುಜಂದಾರ್ ದೂರದ ಕೊಲ್ಕತ್ತ ನಗರದಿಂದ ಆಂಧ್ರದ ಕಾಮ್ರೇಡ್‌ಗಳಿಗೆ ಪ್ರತಿದಿನ ಪತ್ರ ಬರೆದು ಅವರುಗಳನ್ನು ಹೋರಾಟಕ್ಕೆ ಹುರಿದುಂಬಿಸುತ್ತಿದ್ದ. 1970 ರ ಜುಲೈ ತಿಂಗಳಿನಲ್ಲಿ ಪತ್ರ ಬರೆದು, ಈಗ ನೂರು ಸದಸ್ಯರಿರುವ ದಳಗಳನ್ನು ವಿಭಜಿಸಿ, ತಲಾ 10 ರಿಂದ 20 ಸದಸ್ಯರಿರುವ ದಳಗಳನ್ನಾಗಿ ಮಾಡಿ ಎಂದು ಸತ್ಯನಾರಾಯಣನಿಗೆ ಸಲಹೆ ನೀಡಿದ. ಪೊಲೀಸರ ಎನ್‌ಕೌಂಟರ್‌ನಿಂದ ಆಗಿರುವ ಹಿನ್ನಡೆಯಿಂದ ನಕ್ಸಲ್ ಹೋರಾಟ ಚೇತರಿಸಿಕೊಳ್ಳುತ್ತದೆ ಎಂಬ ಆಶಾಭಾವನೆ ಚಾರುವಿಗಿತ್ತು. ಆದರೆ, ಜುಲೈ 18 ರಂದು, ವೆಂಪಟಾಪು ಸತ್ಯನಾರಾಯಣ ಮತ್ತು ಕೈಲಾಸಂ ಇಬ್ಬರನ್ನು ಸರೆಹಿಡಿದ ಆಂಧ್ರ ಪೊಲೀಸರು. ಅವನ್ನು ಪಾರ್ವತಿಪುರಂ ತಾಲೂಕಿನ ಬೋರಿಬೆಟ್ಟ ಎಂಬಲ್ಲಿಗೆ ಕರೆದೊಯ್ದು, ಬೆಟ್ಟದ ತುದಿಯಲ್ಲಿ ನಿರ್ಧಯವಾಗಿ ಗುಂಡಿಟ್ಟು ಕೊಂದು, ಎನ್‌ಕೌಂಟರ್ ಹೆಸರಿನಲ್ಲಿ ಈ ಹತ್ಯೆಗೆ ತೇಪೆ ಹಚ್ಚಿದರು.

ಈ ಇಬ್ಬರು ನಾಯಕರ ಹತ್ಯೆಯಿಂದಾಗಿ ಶ್ರೀಕಾಕುಳಂ ಪ್ರಾಂತ್ಯದ ಆದಿವಾಸಿ ರೈತರ ಮೊದಲ ಹಂತದ ಹೋರಾಟಕ್ಕೆ ತೆರೆಬಿದ್ದಿತು. ಆದರೆ, ನಕ್ಸಲ್ ಹೋರಾಟವೆಂಬ ಅಗ್ನಿ ಪರ್ವತದ ಲಾವಾರಸ ನೆರೆಯ ರಾಜ್ಯಗಳಿಗೆ ವ್ಯಾಪಿಸಿ, ಹತ್ತು ವರ್ಷಗಳ ನಂತರ ಮತ್ತೇ ತೆಲಂಗಾಣ ಪ್ರಾಂತ್ಯದಲ್ಲಿ, ಪ್ರಜಾಸಮರಂ (ಪೀಪಲ್ಸ್ ವಾರ್) ಎಂಬ  ಹೆಸರಿನಲ್ಲಿ ಉದ್ಭವಗೊಂಡು, ಕೊಂಡಪಲ್ಲಿ ಸೀತಾರಾಮಯ್ಯ ಎಂಬ ನಾಯಕನನ್ನು ಹುಟ್ಟು ಹಾಕಿತು. ಸೋಜಿಗದ ಸಂಗತಿಯೆಂದರೆ, ಸೀತಾರಾಮಯ್ಯ ಕೂಡ, ನಕ್ಸಲ್ ಹೋರಾಟಕ್ಕೆ ದುಮುಕುವ ಮುನ್ನ, ಸತ್ಯನಾರಾಯಣನಂತೆ ವೃತ್ತಿಯಲ್ಲಿ ಶಿಕ್ಷಕನಾಗಿದ್ದ.

Leave a Reply

Your email address will not be published.