Daily Archives: June 1, 2012

ಜಾಮೀನಿಗೆ ಕೊಟ್ಟ ಲಂಚ 5 ಕೋಟಿ; ನ್ಯಾಯಾಧೀಶರ ಭ್ರಷ್ಟತೆ ತೊಲಗಬೇಕು

– ರವಿ ಕೃಷ್ಣಾರೆಡ್ಡಿ

ಕರ್ನಾಟಕದ ವಿಚಾರಕ್ಕೇ ಹೇಳುವುದಾದರೆ ಒಂದೆರಡು ವರ್ಷಗಳಿಂದ ಹೀಗೊಂದು ಮಾತು ಕೋರ್ಟು ವ್ಯವಹಾರಗಳನ್ನು ಬಲ್ಲವರಿಂದ ಅಲ್ಲಲ್ಲಿ ಅನಧಿಕೃತವಾಗಿ ಪ್ರಸ್ತಾಪಿಸಲ್ಪಡುತ್ತಿತ್ತು. ನೇರವಾಗಿ ಜಡ್ಜುಗಳಿಗೇ ಲಂಚ ಕೊಟ್ಟು ಬುಕ್ ಮಾಡಿಕೊಳ್ಳಲಾಗಿದೆ, ಈ ಜಡ್ಜ್‌‌ ಜಾತಿ ಕಾರಣಕ್ಕೆ ಇಂತಹ ಆದೇಶ ಹೊರಡಿಸಿದ್ದಾನೆ, ಆ ಜಡ್ಜ್ ಲಂಚ ತೆಗೆದುಕೊಂಡು ಅಂತಹ ಆದೇಶ ಹೊರಡಿಸಿದ್ದಾನೆ. ಮತ್ತೊಬ್ಬ ಜಡ್ಜ್ ಅನ್ನು ಆತನ ಗರ್ಲ್‌ಫ್ರೆಂಡ್ ಮುಖಾಂತರ ಬುಕ್ ಮಾಡಿಕೊಂಡು ಹಾಗೊಂದು ಜಾಮೀನು ತೆಗೆದುಕೊಳ್ಳಲಾಗಿದೆ, ಇತ್ಯಾದಿ, ಇತ್ಯಾದಿ. ಆದರೆ, ನ್ಯಾಯಾಲಯ ಎಂದರೇನೇ ಭಯಪಡುವ ಜನಸಾಮಾನ್ಯರ ನಡುವೆ, ನ್ಯಾಯಾಂಗ ನಿಂದನೆ ಆಗಿಬಿಡುತ್ತದೇನೊ ಎಂದು ಹೇಳಬೇಕಾದದ್ದನ್ನು ಹೇಳದೆ ಇರುವಂತಹ ಭಯಗ್ರಸ್ಥ ವಾತಾವರಣವನ್ನು ನಾವು ಸೃಷ್ಟಿಸಿಕೊಂಡಿದ್ದೇವೆ. ಈ ಮಧ್ಯೆ ಬಲಿಷ್ಟರು, ಶ್ರೀಮಂತರು, ಜಾತಿವಾದಿಗಳು ನ್ಯಾಯಾಂಗದಲ್ಲಿರುವ ಒಂದಷ್ಟು ಭ್ರಷ್ಟರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಪ್ರತಿದಿನ ಸಮಾಜ ನ್ಯಾಯದ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತ ಬರುತ್ತಿದೆ. ತಮಗೆ ಬೇಕಾದಂತೆ ಅನ್ಯಾಯದ ಆದೇಶಗಳನ್ನು ಹೊರಡಿಸಿಕೊಳ್ಳುವಲ್ಲಿ ಸಫಲವೂ ಆಗುತ್ತಿದೆ.

ದೇಶದ ಸರ್ವೋಚ್ಚ ನ್ಯಾಯಮೂರ್ತಿಯಾಗಿದ್ದ ಜಡ್ಜ್ ಬಾಲಕೃಷ್ಣನ್ ಮೇಲೆ ಈಗಲೂ ಗಂಭೀರ ಸ್ವರೂಪದ ಆರೋಪಗಳಿವೆ. ದೇಶದ 16 ನ್ಯಾಯಾಧೀಶರ ಪಟ್ಟಿಯಲ್ಲಿ 8 ನ್ಯಾಯಾಧೀಶರು ಭ್ರಷ್ಟರು ಎಂದು ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಈ ಹಿಂದೆ ಸುಪ್ರೀಮ್‌ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಆಪಾದಿಸಿ. ಅವರ ಹೆಸರುಗಳನ್ನು ಸುಪ್ರೀಮ್‌ಕೋರ್ಟ್‌ಗೆ ಸಲ್ಲಿಸಿದ್ದರು. ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಜಡ್ಜ್ ದಿನಕರನ್ ಮೇಲೆಯೂ ಗಂಭೀರ ಆರೋಪಗಳಿದ್ದವು. ಇತ್ತೀಚೆಗೆ ಲೋಕಾಯುಕ್ತರಾಗಿ ನೇಮಕಗೊಂಡು ವಿವಾದಗಳ ಕಾರಣಗಳಿಂದ ಹಿಂದೆ ಸರಿದ ಜಡ್ಜ್ ಒಬ್ಬರ ಮೇಲೆ ರಾಜ್ಯದ ರಾಜ್ಯಪಾಲರಿಗೆ ದೂರು ಕೊಡಲಾಗಿತ್ತು. ಇವು ಕೆಲವೊಂದು ಹೇಳಬಹುದಾದ ಬಹಿರಂಗವಾದ ವಿಷಯಗಳು. ಆದರೆ ರಾಜಕಾರಣಿಗಳಿಗೆ-ವಕೀಲರಿಗೆ-ಪತ್ರಕರ್ತರಿಗೆ ಗೊತ್ತಿರುವ ಅನೇಕ ವಿಷಯಗಳು–ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ–ಜನಸಾಮಾನ್ಯರಿಗೆ ಗೊತ್ತಿಲ್ಲ. ಹಾಗಾಗಿಯೇ ಇಂತಹುದೊಂದು ಕರ್ಮಕಾಂಡವನ್ನು ಪವಿತ್ರ ಗೋವಿನ ರೀತಿ ರಕ್ಷಿಸಿಕೊಂಡು ಬರುತ್ತಿರುವ ವಿದ್ಯಮಾನದಲ್ಲಿ ಇವರೆಲ್ಲರ ಪಾಲಿದೆ. ಮತ್ತು ದೇಶದ ನ್ಯಾಯವ್ಯವಸ್ಥೆ ದುರವಸ್ಥೆಯಲ್ಲಿರುವುದು ಪ್ರತಿದಿನದ ಪ್ರಕರಣಗಳಿಂದ ಎದ್ದುಕಾಣಿಸುತ್ತಿದೆ.

ಸಂವಿಧಾನಿಕ ಅಂಗವಾದ ನ್ಯಾಯಾಂಗವನ್ನು ದುಷ್ಟ ಮತ್ತು ಭ್ರಷ್ಟ ಶಕ್ತಿಗಳ ಹಸ್ತಕ್ಷೇಪದಿಂದ ದೂರ ಇಡಲು ಇಂದು ದೇಶದ ಸರ್ವೋಚ್ಚ ನ್ಯಾಯಾಲಯದ ಪ್ರಾಮಾಣಿಕ ನ್ಯಾಯಾಧೀಶರೂ ಪ್ರಯತ್ನಿಸುತ್ತಿದ್ದಾರೆ. ಮುಖ್ಯನ್ಯಾಯಮೂರ್ತಿ ಕಪಾಡಿಯರವರು ಇದರ ಬಗ್ಗೆ ಮಾತನಾಡಿದ್ದರು. ಆದರೂ ನ್ಯಾಯಾಧೀಶರಿಗೆ ಇರುವ immunity ಯ ಕಾರಣದಿಂದ ಇವು ಸಾಕಷ್ಟು ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಇಂದು ಆಂಧ್ರಪ್ರದೇಶದಲ್ಲಿ ಬಹಿರಂಗವಾದ ಪ್ರಕರಣ.

ಇಂದು ಆಂಧ್ರಪ್ರದೇಶ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಮದನ್ ಲೋಕೂರ್‌ರವರು ಹೈದರಾಬಾದಿನ ವಿಶೇಷ ಸಿಬಿಐ ಕೋರ್ಟಿನ ನ್ಯಾಯಮೂರ್ತಿಯಾಗಿದ್ದ ಟಿ. ಪಟ್ಟಾಭಿ ರಾಮರಾವ್ ಅವರನ್ನು ನ್ಯಾಯಮೂರ್ತಿ ಸ್ಥಾನದಿಂದ ವಜಾ ಮಾಡಿದ್ದಾರೆ. ಕಾರಣ?

ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಸಿಬಿಐ ವಶದಲ್ಲಿರುವುದು ಎಲ್ಲರಿಗೂ ತಿಳಿದಿರುವುದೆ. ಇವರ ಅನೇಕ ಜಾಮೀನು ಅರ್ಜಿಗಳನ್ನು ವಿವಿಧ ನ್ಯಾಯಾಲಯಗಳು ತಿರಸ್ಕರಿಸುತ್ತ ಬರುತ್ತಿವೆ. ಆದರೆ ಕಳೆದ ಮೇ 12ರಂದು ಅವರಿಗೆ ಹೈದರಾಬಾದಿನ ವಿಶೇಷ ಸಿಬಿಐ ನ್ಯಾಯಾಲಯ ಜಾಮೀನು ನೀಡಿತ್ತು. ಅವರು ಇನ್ನೇನು ಜಾಮೀನಿನ ಮೇಲೆ ಬಿಡುಗಡೆ ಆದರು ಎಂದು ಜನ ಅಂದುಕೊಂಡರು. ಟಿವಿ ಮಾಧ್ಯಮಗಳೂ ಹಾಗೆಯೇ ವರದಿ ಮಾಡಿದವು. ಆದರೆ ಇನ್ನೊಂದು ಜಾಮೀನು ತೆರವಾಗಿಲ್ಲದ ಕಾರಣ ಅವರು ಜೈಲಿನಿಂದ ಹೊರಬರಲು ಆಗಲಿಲ್ಲ. ಆದರೆ, ಅವರಿಗೆ ಮೇ 21ರಂದು ವಿಶೇಷ ನ್ಯಾಯಾಲಯ ಜಾಮೀನು ನೀಡಿದ್ದಾದರೂ ಹೇಗೆ?

ಅದರ ಬೆಲೆ 5 ಕೋಟಿ ಎನ್ನುತ್ತಿವೆ ಇಂದಿನ ವರದಿಗಳು. ಗಾಲಿ ಜನಾರ್ದನ ರೆಡ್ಡಿ ಕಡೆಯವರಿಂದ ಐದು ಕೋಟಿ ಲಂಚ ತೆಗೆದುಕೊಂಡು ಅಂತಹುದೊಂದು ಜಾಮೀನನ್ನು ಪಟ್ಟಾಭಿ ರಾಮರಾವ್ ನೀಡಿದ್ದಾರೆ ಎಂದು ಸಿಬಿಐ ಆಂಧ್ರದ ಮುಖ್ಯನ್ಯಾಯಾಧೀಶರಿಗೆ ದೂರು ನೀಡಿದೆ. ಆ ಐದು ಕೋಟಿ ರೂಪಾಯಿಯನ್ನು ಅದು ರಾಮರಾಯರಿಗೆ ಸಂಬಂಧಿಸಿದ ನೆಂಟರ ಬ್ಯಾಂಕ್ ಲಾಕರ್‌ನಲ್ಲಿ ವಶಪಡಿಸಿಕೊಂಡಿದೆ. ಇವರ ದೂರು ಮತ್ತು ಸಾಕ್ಷ್ಯದ ಆದಾರದ ಮೇಲೆ ಪಟ್ಟಾಭಿ ರಾಮರಾವ್ ವಜಾ ಆಗಿದ್ದಾರೆ. [ಇತ್ತೀಚಿನ ತೆಲುಗು ವಾರ್ತಾಚಾನಲ್‌ಗಳ ವರದಿಗಳ ಪ್ರಕಾರ ಈ ಪ್ರಕರಣದಲ್ಲಿ ಹತ್ತು ಕೋಟಿ ಕೈಬದಲಾಯಿಸಿದೆ, ಮತ್ತು ಬಳ್ಳಾರಿಯಿಂದ ಮಧ್ಯವರ್ತಿಯೊಬ್ಬ ಅದನ್ನು ಹೈದರಾಬಾದಿಗೆ ತಂದಿದ್ದ ಎನ್ನಲಾಗುತ್ತಿದೆ.]

ಈ ಘಟನೆ ನಮ್ಮ ರಾಜ್ಯದಲ್ಲೂ ಧನಾತ್ಮಕ/ಸಕಾರಾತ್ಮಕ ಪರಿಣಾಮ ಬೀರಲಿ ಎಂದಷ್ಟೇ ಈಗ ನಾವು ಆಶಿಸಬಹುದಾದದ್ದು. ಆದರೆ ಹಾಗಾಗುತ್ತದೆ ಎನ್ನುವ ನಂಬಿಕೆ ನನಗೆ ಇನ್ನೂ ಬಂದಿಲ್ಲ. ನಮ್ಮ ರಾಜ್ಯದಲ್ಲಿ ಹಣ ಮತ್ತು ಜಾತಿಯ ಕಬಂಧ ಬಾಹುಗಳು ಬಹಳ ಬಲಶಾಲಿಯಾಗಿವೆ. ಭ್ರಷ್ಟರು ನಿವೃತ್ತರಾಗದ ಹೊರತು ಇದು ಕಮ್ಮಿ ಆಗುತ್ತದೆ ಎನ್ನುವ ಆಸೆ ನನಗಿಲ್ಲ. ಮೇಲಿನ ಪ್ರಕರಣದಲ್ಲಿ ಆದೇಶ ಸಿಬಿಐ ವಿರುದ್ಧವಾಗಿ ಬಂದಿದ್ದರಿಂದ ಸಿಬಿಐ‌ನವರು ವಿಶೇಷ ಕಾಳಜಿ ವಹಿಸಿ ಈ ಪ್ರಕರಣವನ್ನು ಬಯಲಿಗೆಳೆದಿದ್ದಾರೆ, ಸಾಕ್ಷಿ ಸಮೇತ. ಆದರೆ ಸಿಬಿಐನವರು ಪ್ರತಿವಾದಿಗಳಾಗಿಲ್ಲದ ಕಡೆ? ನಮ್ಮಲ್ಲಿ ಲೋಕಾಯುಕ್ತ ಸಂಸ್ಥೆ ಇದೆ. ಅದು ತನ್ನ ವಿರುದ್ಧ ಬಂದ ಆದೇಶಗಳನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಹೋಗುತ್ತಿಲ್ಲ. ಇಂದಿನ ಲೋಕಾಯುಕ್ತ ಸಂಸ್ಥೆ ಕರ್ನಾಟಕದಲ್ಲಿ ನ್ಯಾಯ ಮತ್ತು ಪ್ರಾಮಾಣಿಕತೆಯ ಪರ ಇದೆ ಎಂದು ಹೇಳುವ ಪರಿಸ್ಥಿತಿ ಇಲ್ಲ. ಇಂತಹ ಸ್ಥಿತಿಯಲ್ಲಿ ಯಾರು ಯಾರಿಗೆ ಗಂಟೆ ಕಟ್ಟುವುದು?

ನ್ಯಾಯಸ್ಥಾನದ ಮೇಲೆ ಜನ ಸಂಪೂರ್ಣ ವಿಶ್ವಾಸ ಕಳೆದುಕೊಳ್ಳುವ ಮೊದಲು ನ್ಯಾಯಾಧೀಶರು ಮತ್ತು ಪ್ರಾಮಾಣಿಕ, ನ್ಯಾಯವಂತ ಆಡಳಿತಗಾರರು ಎಚ್ಚತ್ತುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವೇ ಸಂದೇಹಾಸ್ಪದವಾಗುತ್ತದೆ.

“ಸತ್ಯಮೇವ ಜಯತೆ”ಯನ್ನು ಮೀರಿ ಅಮೀರ್ ಖಾನ್ ಮಾಡಬಹುದಾದದ್ದೇನು?


-ಬಿ. ಶ್ರೀಪಾದ್ ಭಟ್


 

ಇತ್ತೀಚೆಗೆ ಖ್ಯಾತ ಚಲನಚಿತ್ರ ನಟ ಅಮೀರ್ ಖಾನ್ ನೇತೃತ್ವದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರಿತವಾಗಿಟ್ಟುಕೊಂಡು ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ “ಸತ್ಯಮೇವ ಜಯತೆ” ಎನ್ನುವ ಕಾರ್ಯಕ್ರಮ ಮಧ್ಯಮ ವರ್ಗಗಳಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿದೆ. ಇಂದು ಅಮೀರ್ ಖಾನ್ ಎತ್ತುತ್ತಿರುವ ಪ್ರಶ್ನೆಗಳನ್ನು ಹಾಗೂ ಅದರ ಕ್ರೂರತೆಯ ವಿರುದ್ಧ ಈ ಹಿಂದೆ ಅನೇಕ ವರ್ಷಗಳ ಕಾಲ ನೂರಾರು ಬಾರಿ ಅನೇಕ ಸಂಘಟನೆಗಳು ಬೀದಿಯಲ್ಲಿ ನಿಂತು ಹೋರಾಟ ಮಾಡಿವೆ. ಸರ್ಕಾರದ ತಟಸ್ಥ ನೀತಿಯ ವಿರುದ್ಧ ನೇರವಾಗಿಯೇ ಮುಖಾಮುಖಿಯಾಗಿ ಸಂಘರ್ಷವನ್ನು ನಡೆಸಿವೆ. ಪತ್ರಿಕೆಗಳು ಇವುಗಳ ಬಗ್ಗೆ ಅತ್ಯಂತ ಮಾನವೀಯತೆಯಿಂದ, ಕಳಕಳಿಯಿಂದ, ಅನೇಕ ಸಾಧ್ಯತೆಗಳ ವಿಸ್ತಾರವಾದ ವರದಿಗಳನ್ನು ಬರೆದಿವೆ. ದೂರದರ್ಶನವನ್ನು ಒಳಗೊಂಡು ದೃಶ್ಯ ಮಾಧ್ಯಮದ ಅನೇಕ ಖಾಸಗೀ ಛಾನಲ್‌ಗಳು ಸಹ ಈ ಎಲ್ಲ ಸಾಮಾಜಿಕ ಕಂಟಕಗಳ ಬಗೆಗೆ ಪ್ರಸಾರ ಮಾಡಿವೆ ಮತ್ತು ಚರ್ಚೆ ನಡೆಸಿವೆ.

ಆದರೆ ಈ ಪ್ರಾಮಾಣಿಕ, ನೈತಿಕ ಹಾಗೂ ಮೌಲ್ಯಾಧಾರಿತ ಹೋರಾಟಗಳು 21ನೇ ಶತಮಾನಕ್ಕೆ ಬೇಕಾದಂತಹ ಅರ್ಭಟ, ಎಲ್ಲಾ ವಿಷಯಗಳನ್ನು ಪ್ಯಾಕೇಜುಗಳಾಗಿ ಪರಿವರ್ತಿಸುವ ಮಾರ್ಕೆಟಿಂಗ್ ಜಾಣ್ಮೆ, ಮತ್ತು ಮಾಧ್ಯಮಗಳ ಡಾರ್ಲಿಂಗ್ ಆಗಲು ಬೇಕಾದಂತಹ ಅಪಾರ ಜನಪ್ರಿಯತೆ ಅಥವಾ ಪೇಜ್ 3ಯ ಸಂಪರ್ಕಗಳು ಅಥವಾ ಕೂಗುಮಾರಿತನ ಇವ್ಯಾವು ಇಲ್ಲದ ಕಾರಣ ಈ ಹೋರಾಟಗಳು ಕ್ಯಾಂಡಲ್ ವೀರರಾದ ಮಧ್ಯಮವರ್ಗಗಳನ್ನಾಗಲಿ, ನೈತಿಕವಾಗಿ ಅಧಃಪತನಕ್ಕೆ ತುತ್ತಾಗಿರುವ ದೃಶ್ಯ ಮಾಧ್ಯಮಗಳನ್ನಾಗಲಿ ಆಕರ್ಷಿಸುವುದಿರಿಲಿ ಇವರಲ್ಲಿ ತಮ್ಮ ಐಡೆಂಟಿಟಿಯನ್ನು ಸಹ ಹುಟ್ಟು ಹಾಕಲು ವಿಫಲವಾದವು, ಇನ್ನು ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು ಇದರ ಬಗ್ಗೆ ಮಾತನಾಡುವುದು ಕನಸಿನ ಮಾತು. ಆದರೆ ಈ ನೆಲದ ಹೋರಾಟಗಳು ಇವೆಲ್ಲ ಅಡೆತಡೆಗಳನ್ನು ಮೀರಿ ವ್ಯವಸ್ಥೆಯೊಳಗೆ ತಮ್ಮ ಪ್ರಭಾವವನ್ನು ಬೀರಿವೆ. ಸಮಾಜವನ್ನು ಕಲಕಿವೆ. ಆಡಳಿತಶಾಹಿಯ ಜಡತೆಗೆ ಬಹಳಷ್ಟು ಚುರುಕನ್ನು ಮುಟ್ಟಿಸಿವೆ. ಇದರ ಬಗ್ಗೆ ನಮಗೆಲ್ಲ ಹೆಮ್ಮೆ, ಕೃತಜ್ಞತೆ ಇದೆ.

ಈ ಒಂದು ಕಾರಣಕ್ಕೆ ಅಮೀರ್ ಖಾನ್ ಈಗ ಅದರ ಬಗ್ಗೆ ಮಾತನಾಡಬಾರದೆನ್ನುವುದಾಗಲೀ ಅಥವಾ ಇದರಲ್ಲಿ ಹೊಸತೇನಿದೆ ಎನ್ನುವ ಸಿನಿಕತನವಾಗಲೀ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಸೂಪರ್ ಸ್ಟಾರ್ ಅಮೀರ್ ಖಾನ್ ತನ್ನ ಜನಪ್ರಿಯತೆಯನ್ನು ಬಳಸಿಕೊಂಡು ಒಂದು ಜನಪರ ಕಾಳಜಿಯ ಚಿಂತನೆಗಳನ್ನು ಸಹ ಜನಪ್ರಿಯಗೊಳಿಸುವುದಾದರೆ ಪ್ರಜ್ಞಾವಂತರೆಲ್ಲ ಅದನ್ನು ಸ್ವಾಗತಿಸಲೇಬೇಕು ಅದೆಷ್ಟೇ ಮಧ್ಯಮವರ್ಗಗಳ ಕೇಂದ್ರಿತವಾಗಿದ್ದರೂ ಸಹಿತ. ಏಕೆಂದರೆ ಈ ಜನಪ್ರಿಯ ನಟ ಅಮೀರ್ ಖಾನ್ ಬಲು ಸುಲಭವಾಗಿ ಪೇಜ್ 3ಯ ಸೆಲೆಬ್ರಿಟಿಯಾಗುವ ಎಲ್ಲಾ ಅಪಾಯಗಳನ್ನು ಮೀರಿ ಸಾಮಾಜಿಕ ಜವಬ್ದಾರಿಯ ಇಂದಿನ ಘಟ್ಟಕ್ಕೆ ಬಂದು ತಲುಪಿದ್ದು ಒಂದು ಮಾದರಿಯೇ ಸರಿ. ಅದರ ಬಗ್ಗೆ ಅನುಮಾನವೇ ಇಲ್ಲ. ಲಗನ್ ಚಿತ್ರದ ನಂತರ ಈ ಅಮೀರ್ ಖಾನ್ ತನ್ನೆಲ್ಲ ಜನಪ್ರಿಯತೆ ಮತ್ತು ಮಾರ್ಕೆಟಿಂಗ್ ತಂತ್ರಗಳನ್ನು ಬಳಸಿಕೊಂಡು ತಾರೇ ಜಮೀನ್ ಪರ್, ಫನಾ, 3 ಈಡಿಯೆಟ್ಸ್, ರಂಗದೇ ಬಸಂತಿಗಳಂತಹ ಸೂಕ್ಷ್ಮಸಂವೇದನೆಯ ಚಲನಚಿತ್ರಗಳಲ್ಲಿ ನಟಿಸಿದ್ದು ಆ ಮೂಲಕ ತನ್ನ ವ್ಯಕ್ತಿತ್ವವನ್ನು ಮತ್ತೊಂದು ಎತ್ತರಕ್ಕೆ ಬೆಳೆಸಿಕೊಂಡಿದ್ದು ಹೃದಯಂಗಮವಾದದ್ದು.

ಇದು ಎಷ್ಟರ ಮಟ್ಟಿಗೆ ಅಮೀರ್‌ರನ್ನು ಪ್ರಭಾವಿಸಿತೆಂದರೆ ಕಳೆದ ಹಲಾವಾರು ವರ್ಷಗಳಿಂದ ಈ ಸೂಕ್ಷ್ಮ ನಟ ಅಮೀರ್ ಬಾಲಿವುಡ್ ನಡೆಸುವ ಯಾವುದೇ ಚನಲಚಿತ್ರ ಪ್ರಶಸ್ತಿ ಸಮಾರಂಭಗಳಲ್ಲಿ ಭಾಗವಹಿಸುತ್ತಿಲ್ಲ. ಅದರ ಆಡಂಬರವನ್ನು, ಅಟ್ಟಹಾಸವನ್ನು, ಹಣವನ್ನು ಹುಣಿಸೇಬೀಜದಂತೆ ಚೆಲ್ಲುವ ಅನೀತಿ ಕೃತ್ಯಕ್ಕೆ ಸದ್ಯಕ್ಕಂತೂ ಅಮೀರ್ ತನ್ನ ತಿರಸ್ಕಾರವನ್ನು ತೋರಿಸಿದ್ದಾನೆ. ಈ ಅಮೀರ್ ಖಾನ್ ಕಾರಣದ ಫಲವಾಗಿ ಸಾಮಾಜಿಕ ಅನಿಷ್ಟಗಳು ಚರ್ಚಿತವಾಗುತ್ತಾ, ಅದರ ಕಬಂಧಬಾಹುಗಳನ್ನು ಕತ್ತರಿಸಿ ಹಾಕಲಾಗದಿದ್ದರೂ ನಿಧಾನವಾಗಿಯಾದರೂ ದುರ್ಬಲಗೊಳಿಸಬಹುದೇ ಎನ್ನುವ ಆಶಯಗಳು, ಈ ಮೂಲಕ ಹುಟ್ಟು ಹಾಕುವ ನಿರಂತರ ಚರ್ಚೆಗಳು, ಕೊಳ್ಳುಬಾಕತನದ ಹೊರತಾಗಿಯೂ ಇನ್ನೂ ಜ್ವಲಂತ ವಿಷಯಗಳಿವೆ ಎಂಬುದನ್ನು ಮಧ್ಯಮವರ್ಗಗಳಲ್ಲಿ ಬಿತ್ತುತ್ತಿರುವ ಬಗೆಗೆ ಹಾಗೂ ಅದರ ಕನಿಷ್ಟ ಪ್ರಯೋಜನಗಳು ಎಲ್ಲವನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ಅದರೆ ತನ್ನ ಈ ಪ್ರಗತಿಪರನಾಗುವ ಪ್ರಕ್ರಿಯೆಯಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಬುದ್ಧಿವಂತ ನಟ ಅಮೀರ್ ಖಾನ್ ಮುಂದೆ ಎಲ್ಲಿ ಹೋಗಿ ತಲುಪಬಹುದು? ಅದರ ಭವಿಷ್ಯ ನಮ್ಮಂತಹ ಹುಲುಮಾನವರಿಗ್ಯಾಕೆ ಅಲ್ಲವೇ?

ಹಿಂದಿ ಚಿತ್ರರಂಗದಲ್ಲಿ ತಮ್ಮೊಳಗಿನ ಆತ್ಮಸಾಕ್ಷಿಯನ್ನು ನೆಚ್ಚಿಕೊಂಡೇ, ತಾವು ನಂಬಿದ ಆದರ್ಶಗಳನ್ನು ಎಂದೂ ಬಿಟ್ಟುಕೊಡದೆ, ಹಣವನ್ನು ಕಾಲಕಸಕ್ಕಿಂತ ಕಡೆಯಾಗಿ ಕಂಡು ಅತ್ಯಂತ ಸಾರ್ಥಕ ಜೀವನ ನಡೆಸಿದ ಪ್ರಗತಿಪರ ನಟರಾದ ಬಲರಾಜ್ ಸಾಹ್ನಿ, ಮೋತಿಲಾಲ್, ನಾಸಿರುದ್ದೀನ್ ಶಾ ಚಿತ್ರ ನಿರ್ದೇಶಕರಾದ ಮೆಹಬೂಬ್ ಖಾನ್, ಕೆ.ಎ.ಅಬ್ಬಾಸ್, ಕೈಫಿ ಆಜ್ಮಿ, ಗೋವಿಂದ ನಿಹಾಲನಿ, ಹೃಷಿಕೇಶ್ ಮುಖರ್ಜಿ, ಗುಲ್ಜಾರ್‌ರಂತಹ ವ್ಯಕ್ತಿತ್ವದ ಮಾದರಿಗಳು ಇಂದು ಕವಲು ಹಾದಿಯಲ್ಲಿರುವ ಅಮೀರ್ ಖಾನ್‌ಗೆ ಮೊದಲ ಪಾಠವಾಗಬೇಕು. ಆದರ್ಶವಾಗಬೇಕು. ಇವರನ್ನು ದಾಟಿದ ನಂತರವಷ್ಟೇ ಎರಡನೇ ಘಟ್ಟವಾದ ಜಂತರ್ ಮಂತರ್ ಮತ್ತು ರಾಮಲೀಲ ಮೈದಾನಗಳು, ಸಿದ್ಧಾಂತಗಳು, ಸಾಧ್ಯವಾದರೆ ಆಕ್ಟಿವಿಸಂ (ಸಾಧ್ಯವೇ ಇಲ್ಲವೆಂದು ಸ್ವತ ತಾನೇ ಒಪ್ಪಿಕೊಂಡಿದಾನೆ).

ಆದರೆ ಈ ಜನಪ್ರಿಯ ನಟನ ಜನಪ್ರಿಯ ಗುಂಗಿನಲ್ಲಿ ಮೂಲ ಆಶಯಗಳು ಮಗ್ಗಾ ಮಲಗಿಬಿಡಬಾರದಲ್ಲವೇ ಎನ್ನುವ ತೀವ್ರ ಕಾಳಜಿಯನ್ನು ಸುತಾರಾಂ ಅಲ್ಲಗೆಳೆಯಲಾಗುವುದಿಲ್ಲ. ಈ ಸತ್ಯಮೇವ ಜಯತೆ ಮತ್ತು ಅಮೀರ್ ಖಾನ್ ಕಾರಣದಿಂದಲೇ ಕ್ಯಾಂಡಲ್ ವೀರರಾದ ಮಧ್ಯಮವರ್ಗಗಳಲ್ಲಿ ಇನ್ನಿಲ್ಲದ ಸಾಮಾಜಿಕ ಜವಬ್ದಾರಿ ಮೂಡಿದೆ ಎನ್ನುವುದು, ಕಳೆದ ಒಂದು ಶತಮಾನದ ಜನಪರ ಚಳವಳಿಗಳು, ಸಂತರ. ಚಿಂತಕರ ಮಾದರಿ ಜೀವನಗಳು ಸಾಧಿಸಲಾಗದ್ದು ಈ ಜನಪ್ರಿಯ ನಟನ ಕಾಳಜಿಗಳು ಬದಲಾಯಿಸುತ್ತವೆ ಎನ್ನುವ ಉದ್ಗಾರಗಳೇ ಶುದ್ಧ ಮೂರ್ಖತನ. ಇದನ್ನು ಸಾರಾಸಗಟಾಗಿ ತಿರಸ್ಕರಿಸಬಹುದು. ಇದಕ್ಕೆ ಕಾರಣಗಳು ಬೇಕಿಲ್ಲ. ಎಲ್ಲವೂ ಚರ್ವಿತ ಚರ್ವಣವೇ. ಇಲ್ಲಿ ನಾನೇನು ಕ್ರಾಂತಿಯನ್ನು ಸಾಧಿಸುತ್ತಿಲ್ಲ ಎಂದು ಸ್ವತಹ ಅದರ ರೂವಾರಿ ಅಮೀರ್ ಖಾನ್‌ಗೆ ಮನವರಿಕೆಯಾಗಿರುವಾಗ ಜನ ಸಾಮಾನ್ಯರಾದ ನಮಗೇಕೆ ಈ UTOPIA?

ಸುದ್ದಿಯ ಹೊರತಾಗಿ ಟಿ.ವಿ.ಯಲ್ಲಿ ಬೇರೆನನ್ನು ಅಷ್ಟಾಗಿ ನೋಡದ ನನ್ನಂತವರು ಇದರ ಕೆಲವು ಎಪಿಸೋಡ್‌ಗಳನ್ನು ನೋಡಿದ ನಂತರ ನನಗೆ ಅನ್ನಿಸಿದ್ದು ಅಲ್ಲಿ ಪ್ರಾಮಾಣಿಕತೆ ಇದೆ. ನೇರವಾಗಿ ವಿಷಯ ಕೇಂದ್ರಿತವಾಗಿ ಚರ್ಚಿಸುವ ಅಮೀರನ ಕಾಳಜಿಗಳನ್ನು “ಬದುಕು ಜಟಕಾ ಬಂಡಿ”ಯಂತಹ ಕುಲಗೆಟ್ಟ, ಡಬ್ಬಾ ಸೀರಿಯಲ್‌ಗಳಿಗೆ ಹೋಲಿಸುವವರು ನಿಜಕ್ಕೂ ವಿತಂಡವಾದಿಗಳೇ ಸರಿ. ಇಷ್ಟರ ಮಟ್ಟಿಗೆ ಈ ಕಾರ್ಯಕ್ರಮ ಗೆದ್ದಿದೆ. ಆದರೆ “ಸತ್ಯಮೇವ ಜಯತೆ”ಗೆ ಎರಡು ಮೂಲಭೂತ ಮಿತಿಗಳಿವೆ. ಇವು ಸಾಮಾನ್ಯ ಮಿತಿಗಳಲ್ಲ.

  1. ಇಡೀ ಕಾರ್ಯಕ್ರಮ ಶೈಲಿ ಮತ್ತು ಪರಿಣಾಮ (PATTERN AND EFFECT)ದ ಬಗೆಗೆ ಕೇಂದ್ರಿಕರಿಸಿಕೊಂಡು ತನ್ನ ಸುತ್ತಲೂ ಒಂದು ಸೀಮಿತ ಪರಿಧಿಯ ವೃತ್ತವನ್ನು ರಚಿಸಿಕೊಳ್ಳುತ್ತದೆ. ಆದರೆ ಇದು “ಮೂಲಭೂತ ಕಾರಣಗಳು ಮತ್ತು ಪರಿಣಾಮಗಳು” (CAUSE AND EFFECT) ಬಗೆಗೆ ಕೇಂದ್ರೀಕೃತವಾಗುವುದಿಲ್ಲ. ಈ ಮೂಲಭೂತ ಕಾರಣಗಳನ್ನು ವಿಸೃತವಾಗಿ, ಆಳವಾಗಿ ಚರ್ಚಿಸದೆ ಸದರಿ ಕಾರ್ಯಕ್ರಮ ತನ್ನ ಉದ್ದೇಶಿತ ಆಶಯಗಳನ್ನು ಈಡೇರಿಸಿಕೊಳ್ಳುವ ಸಾಧ್ಯತೆಗಳು ಬಹಳ ಕಡಿಮೆ. ಕಡೆಯದಾಗಿ ಏನಾಗುತ್ತದೆ ಎಂದರೆ ಸಮಸ್ಯೆಗಳ ಚರ್ಚೆ ಆಗುವುದರ ಜೊತೆಜೊತೆಗೆ ಇದು ಅತ್ಯಂತ ಜನಪ್ರಿಯಗೊಳ್ಳುತ್ತದೆ, ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಆದರೆ ಈ ಸಾಮಾಜಿಕ ಅನಿಷ್ಟಗಳ PATTERNUಗಳು ಬಲು ಆಳವಾದದ್ದು, ವಿಸ್ತಾರವಾದದ್ದು. ಈ PATTERNUಗಳ ಮೂಲಭೂತ ಕಾರಣಗಳನ್ನು ನಿರ್ಲಕ್ಷಿಸಿದ ಯಾವುದೇ ಕಾರ್ಯಕ್ರಮಗಳ ಯಶಸ್ಸು ನಿಜಕ್ಕೂ ಸೀಮಿತ ನೆಲೆಯುಳ್ಳದ್ದು.
  2. ಈ ಎಲ್ಲ ಸಾಮಾಜಿಕ ಅನಿಷ್ಟಗಳಿಗೆ ಜಾಗತೀಕರಣದ ಬಲು ದೊಡ್ಡ ಪಾಲಿದೆ. ಇದನ್ನು ಅರ್ಥೈಸಲು ಸತ್ಯಮೇವ ಜಯತೆ ಸೋತಿದೆ. ಏಕೆಂದರೆ ಇದರ ಮುಖ್ಯ ರೂವಾರಿ ಅಮೀರ್ ಖಾನ್ ಸಹ ಈ ಜಾಗತೀಕರಣದ ಬಲು ದೊಡ್ಡ ಫಲಾನುಭವಿಗಳಲ್ಲೊಬ್ಬರು. ಈ ಸೂಪರ್ ಸ್ಟಾರ್ ಅಮೀರ್ ಖಾನ್‌ನಲ್ಲಿ ಅನೇಕ ವೈರುಧ್ಯಗಳಿವೆ, ವಿರೋಧಭಾಸಗಳಿವೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಅನೇಕ ಮಿತಿಗಳಿವೆ, ತೊಂದರೆಗಳಿವೆ. ಎಲ್ಲದಿಕ್ಕಿಂತಲೂ ಮುಖ್ಯವಾಗಿ ಜಾಗತೀಕರಣದ ನೆಲೆಗಳಿವೆ ಮತ್ತು ಅದರ ಆರ್ಥಿಕ ಫಲಗಳಿವೆ.

ಕಳೆದ ವಾರ ನಾನು ಮತ್ತು ಕೆ.ರಾಮಯ್ಯನವರು ರವೀಂದ್ರ ಕಲಾಕ್ಷೇತ್ರದಲ್ಲಿ “ಜಾಗತೀಕರಣದ ಅಪಾಯಕಾರಿ ಆಶಯಗಳು ಅದರ ಪರಿಣಾಮಗಳು ಮತ್ತು ರಂಗಭೂಮಿ ಹಾಗು ಅದರ ಸವಾಲುಗಳು” ಎನ್ನುವ ಅನೇಕ ವಿಷಯಗಳ ಮೇಲೆ ರಂಗಭೂಮಿಯಲ್ಲಿ ಪ್ರವೇಶಿಸುತ್ತಿರುವ ಹೊಸ ತಲೆಮಾರಿನ ಯುವಕ, ಯುವತಿಯರು ಮತ್ತು ಸುಮಾರು 18ರ ಹರೆಯದ ವಿಧ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದೆವು. ಈ ಸಂವಾದದಲ್ಲಿ ರಾಮಯ್ಯನವರು ಜಾಗತೀಕರಣದ ಸಂದರ್ಭದಲ್ಲಿ ಕೆಲವು ಜಾಹಿರಾತುಗಳ ಉದಾಹರಣೆಗಳನ್ನು ಕೊಡುತ್ತಾ ಅವುಗಳ ಭೀಕರತೆಯ ಬಗೆಗೆ ವಿವರಿಸಿದರು. ಈ ಕೆಲವು ಜಾಹಿರಾತುಗಳನ್ನು ಉದಾಹರಣೆಯಾಗಿ ನೋಡಬಹುದು. ಡೈನೋಸಾರ್‌ನಂತಹ ಜಾಗತೀಕರಣದ ಮೊದಲ ವಾಮನ ಪಾದವೇ ಈ ಜಾಹಿರಾತುಗಳ ಭೂಗತಲೋಕ.

ಜಾಹೀರಾತು 1 : ಇದರಲ್ಲಿ ಕುರುಡ ಬಿಕ್ಷುಕನೊಬ್ಬ (ಅಂದರೆ ಮಧ್ಯಮ ಮತ್ತು ಮೇಲ್ವರ್ಗಗಳ ಪ್ರಕಾರ ಸಮಾಜಕ್ಕೆ ಅನಗತ್ಯವಾಗಿ ಹೊರೆಯಾದವನು) ಬಾಳೆ ಹಣ್ಣನ್ನು ತಿಂದು ನಂತರ ಅದರ ಸಿಪ್ಪೆಯನ್ನು ಬಿಸಾಕಲು ಗೊತ್ತಾಗದೆ ಹಾಗೆಯೇ ಬಿಸಾಡುತ್ತಾನೆ. ಆಗ ಕೂಡಲೆ ಯುವತಿಯೊಬ್ಬಳು ಧಿಗ್ಗನೆ ಎಚ್ಚರಗೊಂಡು, ಭಯ ಭೀತಿಯಿಂದ ತನ್ನ ಕೈ, ಮೈ ಹಾಗೂ ತೋಳುಗಳನ್ನು ಮೂಸಿ ನೋಡುತ್ತ ಅಸಹ್ಯದಿಂದ ಮುಖ ಕಿವುಚುತ್ತಾಳೆ. ಆಗ ಹಿನ್ನೆಯಲ್ಲಿ ಸುಮುಧರವಾದ ಸಂಗೀತದೊಂದಿಗೆ ಪರದೆಯ ಮೇಲೆ ಫರಫ್ಯೂಮ್ ಒಂದರ ಹೆಸರು ಮೂಡುತ್ತ ಆ ಯುವತಿಯ ಮುಖವನ್ನು ಅರಳಿಸುತ್ತಾ — . ಇದರ ಅರ್ಥವನ್ನು ಬಿಡಿಸಿ ಹೇಳಬೇಕೆ? ತಮ್ಮ GARBAGEಗಳಂತಹ ಸರಕುಗಳನ್ನು ಮಾರಲು ಅದರ ಮಾಲೀಕರು ಕುರುಡು ಬಿಕ್ಷುಕನನ್ನು ದುರ್ವಾಸನೆ ಬೀರುವ ವ್ಯಕ್ತಿತ್ವದ ಶಾಶ್ವತ ಚಿತ್ರಣವನ್ನು ಇಂದಿನ ತಲೆಮಾರಿನ ಯುವ ಪೀಳಿಗೆಯಲ್ಲಿ ನೆಟ್ಟು ಈ ತಲೆಮಾರು ಇನ್ನು ಈ ಕುರುಡರು ಮತ್ತು ಬಿಕ್ಷುಕರನ್ನು ಸಮಾಜಕ್ಕೆ ಹೊರೆ ಎನ್ನುವಂತಹ ಭಾವನೆಯನ್ನು ತಮ್ಮೊಳಗೆ ಬೆಳಸಿಕೊಳ್ಳಲು ಸಾಧ್ಯತೆಗಳನ್ನು ಕಲ್ಪಿಸಿಕೊಡುತ್ತಾರೆ. ಮಾಲೀಕರ ಈ VULGARITY  ಹಪಾಹಪಿತನಕ್ಕೆ, ಮಾನವೀಯ ನೆಲಗಳನ್ನೇ ನಾಶಗೊಳಿಸುವ ಅದರ ದುಷ್ಟತನಕ್ಕೆ ಕೊನೆಯೇ ಇಲ್ಲ. ಇದು ಜಾಗತೀಕರಣದ ಫಲ. ಇಂತಹ ಜಾಗತೀಕರಣದ ನೆಲೆಗಳನ್ನು ಅಮೀರ್ ಖಾನ್ ಎಂದೂ ತಿರಸ್ಕರಿಸಿಲ್ಲ. ಬದಲಾಗಿ ಪುರಸ್ಕರಿಸಿದ್ದಾನೆ (ಅದೂ ಹಣಕ್ಕಾಗಿ).

ಜಾಹೀರಾತು 2 : ಕಪ್ಪಗಿನ ಬಣ್ಣದ ಯುವತಿಯೊಬ್ಬಳನ್ನು ನೋಡಲು ಬರುವ ಹುಡುಗರೆಲ್ಲ ಅವಳ ಬಣ್ಣವನ್ನು ಮುಂದುಮಾಡಿ ತಿರಸ್ಕರಿಸುತ್ತಿರುತ್ತಾರೆ. ಇದರಿಂದ ಕಂಗಾಲಾಗಿ ಅಳುತ್ತಾ ಕುಳಿತ ಯುವತಿಗೆ ಅವಳ ಸ್ನೇಹಿತೆ ಸಮಾಧಾನ ಮಾಡುತ್ತ ಫೇರ್ ಅಂಡ್ ಲವ್ಲಿ ಎನ್ನುವ ಫೇಸ್ ಕ್ರೀಮ್ ಅನ್ನು ಕೊಟ್ಟು ಇದನ್ನು ಬಳಸಿಕೊಳ್ಳಲು ಸೂಚಿಸುತ್ತಾಳೆ. ಆ ಯುವತಿ ಅನುಮಾನದಿಂದಲೇ ಅದನ್ನು ಮುಖಕ್ಕೆ ಹಚ್ಚಿಕೊಂಡಾಗ ಏನಾಶ್ಚರ್ಯ!! ಅವಳ ಕಪ್ಪು ಬಣ್ಣ ಕಾಂತಿಯುತವಾಗಿ ಹೊಳೆಯಲಾರಂಬಿಸುತ್ತದೆ. ಮತ್ತೆ ಅವಳನ್ನು ಮದುವೆಯಾಗಲು ಯುವಕರು ಸಾಲುಗಟ್ಟಿ ನಿಲ್ಲುತ್ತಾರೆ. ಆ ಯುವತಿ ಮತ್ತು ಅವಳ ತಂದೆ ತಾಯಿ ಖುಷ್ ದಿಲ್‌ಖುಷ್. ಹೇಳಿ ಇದರ ನೀಚತನ ಯಾವ ಮಟ್ಟದ್ದು? ಜಾಗತೀಕರಣದ ಸಂದರ್ಭದಲ್ಲಿ ಅದ್ಭುತವೆನ್ನುವಷ್ಟರ ಮಟ್ಟಿಗಿನ ಕಮ್ಯುನಿಕೇಶನ್ ಬೆಳವಣಿಗೆಗಳು ಈ ರೀತಿಯಾಗಿ ದುರ್ಬಳಕೆಗೊಂಡು ಮಾಲೀಕ ವರ್ಗದ ಇಂತಹ ಅಮಾನವೀಯ, VULGARITY ಮನಸ್ಥಿಯನ್ನು, ಶಿಕ್ಷೆಗೆ ಅರ್ಹವಾದಂತಹ ಜಾಹೀರಾತನ್ನು ಪ್ರಚಾರದ ನೆಪದಲ್ಲಿ ಸೃಷ್ಟಿಸುತ್ತವೆ ಮತ್ತು ಈ ತರಹದ ಜಾಹೀರಾತುಗಳೇ ಹೆಣ್ಣು ಭ್ರೂಣ ಹತ್ಯೆಗೆ ಕೂಡ ಒಂದು ಕಾರಣವೂ ಸಹ ಆಗಿಬಿಡುತ್ತದೆ. ಆದರೆ ಇಂದು ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಪ್ರಾಮಾಣಿಕವಾಗಿ ಮಾತನಾಡುತ್ತಿರುವ ಈ ಅಮೀರ್ ಖಾನ್ ಈ VULGAR ಮಟ್ಟದ ಜಾಹೀರಾತುಗಳನ್ನು, ಅದರ ಫ್ಯೂಡಲ್ ಮಾಲೀಕರನ್ನು ಎಂದೂ ವಿರೋದಿಸಿಲ್ಲ. ಏಕೆಂದರೆ ಕೋಟಿಗಟ್ಟಲೆ ಹಣ ತರುವ ಈ ಫ್ಯೂಡಲ್ ವರ್ಗವನ್ನು ಎದುರು ಹಾಕಿಕೊಳ್ಳುವಷ್ಟು ದಡ್ಡನಲ್ಲ ಈ ಅಮೀರ್.

ಜಾಹೀರಾತು 3 : ಸ್ವತಹ ಅಮೀರ್ ಖಾನ್ ರೂಪದರ್ಶಿಯಾಗಿರುವ ಕೋಕ ಕೋಲ ಜಾಹೀರಾತನ್ನು ಗಮನಿಸಿ. ಪಟ್ಟಣದಿಂದ ಪ್ಯಾಂಟು, ಟೀ ಷರ್ಟ ತೊಟ್ಟ ಯುವತಿಯರ ಗುಪೊಂದು ಹಳ್ಳಿಗೆ ದಾಳಿ ಇಡುತ್ತದೆ. ಜಗತ್ತಿನ 8ನೇ ಅದ್ಭುತವೆನ್ನುವಂತೆ ಹಳ್ಳಿಯನ್ನು, ಹೊಲವನ್ನು, ತೆಂಗಿನ ಮರಗಳನ್ನು ನೋಡುತ್ತ ಅಲೆಯುವ ಈ ಯುವತಿಯರಿಗೆ ದಾಹ ಉಂಟಾಗುತ್ತದೆ. ಕುಡಿಯಲಿಕ್ಕೆ ಕಂಡ ಕಂಡಲ್ಲಿ ಅಲೆಯುವ ಈ ಯುವತಿಯರಿಗೆ ಹಳ್ಳಿಯಲ್ಲಿ ಕುಡಿಯಲು ನೀರು ದೊರೆಯುವುದಿಲ್ಲ. ನೆನಪಿರಲಿ. ಇದು ಜಾಹೀರಾತಿನ ಮೊದಲ ಅಮಾನವೀಯತೆ. ನಂತರ ಬಾವಿಯ ಬಳಿ ಲಗನ್ ಚಿತ್ರದ ವೇಷ ತೊಟ್ಟ ಈ ಅಮೀರ್ ಖಾನ್ ಈ ಯುವತಿಯರ ಕಣ್ಣಿಗೆ ಬೀಳುತ್ತಾನೆ. ಈ ಯುವತಿಯರು ಅವನಲ್ಲಿ ನೀರಿಗಾಗಿ ಅಂಗಲಾಚುತ್ತಾರೆ (ಅಲ್ಲಿ ಸುತ್ತಲೂ ತೆಂಗಿನ ಮರಗಳಿರುತ್ತವೆ ನೆನಪಿರಲಿ). ಆಗ ಈ ಲಗನ್ ಹೀರೋ ತಡ ಮಾಡದೆ ಬಾವಿಯೊಳಗೆ ಕೊಡವನ್ನು ಬಿಟ್ಟು ಆ ಕೊಡದಿಂದ ಈ ಅಮೀರ್ ಖಾನ್ ಮೇಲೆಳೆಯುವುದು ನೀರನ್ನಲ್ಲ!! ಬದಲಾಗಿ ಕೋಕೋ ಕೋಲ ಬಾಟಲಿಗಳನ್ನು!!! ಸಹಜವಾಗಿಯೇ ಈ ಯುವತಿಯರು ಖುಷಿ ಖುಷಿಯಾಗಿ ಕೋಕೋ ಕೋಲವನ್ನು ಕುಡಿಯುತ್ತ ತಮ್ಮ ದಾಹವನ್ನು ತೀರಿಸಿಕೊಂಡು ಲಗನ್ ವೇಷದಾರಿಯ ಕಡೆಗೆ ಮಾದಕ ನೋಟ ಬೀರುತ್ತಾರೆ. ಹೇಳಿ ಇದು ಯಾವ ಮಟ್ಟದ ನೀಚತನ?

ದಾಹಗೊಂಡಾಗ ನೀರನ್ನು ಕುಡಿಯಬೇಕೆನ್ನುವ ಈ ನೆಲದ ಸಹಜ ಪ್ರಕ್ರಿಯೆಯನ್ನು ಮಾಲೀಕರು ತಮ್ಮ VULGAR ಜಾಹೀರಾತಿನ ಮೂಲಕ ನಮ್ಮ ಬದುಕನ್ನು, ಅದರ ಸರಳ ಸಹಜ ಕ್ರಮವನ್ನು, ಈ ಮಣ್ಣನ್ನು ಅವಮಾನಗೊಳಿಸುತ್ತಾರೆ. ಈ ರೀತಿಯಾಗಿ ಅವಮಾನಗೊಳಿಸುವ ಕ್ರಿಯೆಯಲ್ಲಿ ಈ ಅಮೀರ್ ಖಾನ್ ಕೂಡ ಪ್ರಮುಖ ಪಾತ್ರ ವಹಿಸುತ್ತಾನೆ, ಅದೂ ಲಗನ್ ನಾಯಕನ ವೇಷ ತೊಟ್ಟು!!! ಯಾತಕ್ಕಾಗಿ? ಕೋಟಿಗಟ್ಟಲೆ ರೊಕ್ಕಕ್ಕಾಗಿ!!! ಈ ಅಮೀರ್ ಖಾನ್ ಪ್ರತಿನಿಧಿಸುವ ಕೋಕೋ ಕೋಲ ಕಂಪನಿ ಸಹ ರೈತರ ಆತ್ಮ ಹತ್ಯೆಗೆ ಕಾರಣಕರ್ತರಲ್ಲೊಬ್ಬರು ಎಂದು ಈ ನಟನಿಗೆ ಗೊತ್ತಿದೆ. ರೈತರಿಗೆ ಮೀಸಲಾದ ನೀರನ್ನು ಈ ಪಾನೀಯ ಮಾಲೀಕರು ಬಳಸಿಕೊಂಡು ಜನರಿಗೆ ತಂಪು ಪಾನೀಯವನ್ನು ಹಣಕ್ಕಾಗಿ ಹಂಚುತ್ತಾರೆ. ಇದು ಸತ್ಯಮೇವ ಜಯತೆಯಂತೂ ಖಂಡಿತ ಅಲ್ಲ. ಇದು ಅಮೀರ್ ಖಾನ್‌ನ ಮೂಲ ಸೀಮಿತ, ಬಂಡವಾಳಶಾಹೀ ನೆಲೆಗಳು. ಈ ಸೀಮಿತ ನೆಲೆಗಳನ್ನು ಬದಲಾವಣೆಗೆ ಹಾತೊರೆಯತ್ತಿರುವ ಅಮೀರ್ ಖಾನ್‌ನಂತಹ ನಟ ಮೀರಿ ಮತ್ತೊಂದು ಜಿಗಿತಕ್ಕೆ ತಯಾರಾಗದಿದ್ದರೆ ಈತನ ಪ್ರಾಮಾಣಿಕ ಪ್ರಯತ್ನವಾದ ಸತ್ಯಮೇವ ಜಯತೇ ಸಹ ಕಾಲನ ಹೊಡೆತಕ್ಕೆ ಮೂಲೆಗುಂಪಾಗುತ್ತದೆ. ಸರ್ಕಾರಿ ಒಡೆತನದ HMT ಕಾರ್ಖಾನೆಯ ಗುಣಮಟ್ಟದ ಕೈಗಡಿಯಾರಗಳು ಹಗೂ ಅದರ ಅತ್ಯುತ್ತಮ ಮಟ್ಟದ ತಂತ್ರನ ಖಾಸಗೀ ಒಡೆತನದ  ಟೈಟಾನ್ ಕಂಪನಿಯ ಅಕ್ರಮಣ ಶೈಲಿಯ ಮೂಲಕ ನಾಶಗೊಂಡಿತು. ಈ ಟೈಟಾನ್ ಕಂಪನಿ HMT ಕಾರ್ಖಾನೆಯ ತಂತ್ರಜ್ಞಾನವನ್ನು ತನ್ನದಾಗಿಸಿಕೊಂಡು ಇಂದು ಅದೇ ತಂತ್ರಜ್ಞಾನದ ಮೇಲೆ ಹಕ್ಕು ಸ್ವಾಮ್ಯ ಸಾಧಿಸಿರುವುದು ಸ್ಥಳೀಯ ನೆಲೆಗಳನ್ನು, ಕುರುಹುಗಳು ಮತ್ತು ಚಹರೆಗಳ ಮೇಲೆ ಹಲ್ಲೆ ನಡೆಸಿ ಎಲ್ಲವನ್ನೂ ನುಂಗಿ ಆಪೋಶನ ತೆಗೆದುಕೊಳ್ಳುವ ಜಾಗತೀಕರಣದ ನಡೆಗಳ ಮೂಲಕ. ಇಂದು ಆ ಕೈ ಗಡಿಯಾರಕ್ಕೆ ರೂಪದರ್ಶಿಯಾಗಿರುವ ಅಮೀರ್ ಇದರ ಅನೇಕ ದುಷ್ಟ ಮಜಲುಗಳನ್ನು ಅರಿತಾಗಲೇ ಆತನ ಪ್ರಯೋಗಶೀಲತೆಗೆ ನೈತಿಕ ಬಲ ಸಿಗುತ್ತದೆ.

ಅಲ್ಲದೆ ಮುಂಬೈನಲ್ಲಿ ವಾಸಿಸುವ ಈ ನಟ ಅಲ್ಲಿನ ಉದ್ಯಮಿ ಮುಖೇಶ್ ಅಂಬಾನಿಯ ಅತ್ಯಂತ ಖಾಸಾ ಅತಿಥಿ. ಅವರ 4000 ಕೋಟಿ ವೆಚ್ಚದ ವೆಂಟಿಲಾ ಎನ್ನುವ ಬಂಗಲೆ ಎನ್ನುವ ಅಸಹ್ಯಕರ ಪ್ರದರ್ಶನವನ್ನು, ಅದರ ಪೋಲುತನವನ್ನು ಅಮೀರ್ ಖಾನ್ ಇದುವರೆಗೂ ಟೀಕಿಸಿಲ್ಲ. ಏಕೆ ಬಡವರ ರೊಕ್ಕವನ್ನು ಬಸಿದು ಕಟ್ಟಿದ ಈ 4000 ಕೋಟಿ ವೆಚ್ಚದ ವೆಂಟಿಲಾ ಎನ್ನುವ ಬಂಗಲೆ ಅಮೀರ್ ಖಾನ್‌ಗೆ ಸಾಮಾಜಿಕ ಅನಿಷ್ಟಗಳಲ್ಲೊಂದು ಎಂದು ಅನಿಸಿಲ್ಲವೇ? ಗೊತ್ತಿಲ್ಲ!!!! ಇನ್ನು ಬೆಲ್ಚಿ, ಬೆಂಡಿಗೇರಿ, ಬದನವಾಳು, ಕಂಬಾಲಪಲ್ಲಿ, ಖೈರ್ಲಾಂಜಿಯಲ್ಲಿ ನಡೆದ ದಲಿತರ ಹತ್ಯೆಗಳು ಈ ಸತ್ಯಮೇವ ಜಯತೆಯ ರೂವಾರಿಗೆ ಸಾಮಾಜಿಕ ಹತ್ಯೆಗಳೆಂದು ಅನಿಸಿದೆಯೇ? ದಲಿತರು ನಡೆದಾಡುವ ಜಾಗ, ಅವರು ಮುಟ್ಟಿದ ವಸ್ತುಗಳು, ಅವರು ಕುಡಿದ ಲೋಟ ಸಹ ಅಸ್ಪೃಶ್ಯಗೊಂಡು ಅವನ್ನೆಲ್ಲ ತಿರಸ್ಕರಿಸುವ ಜಾತೀಯತೆಯ ಶೋಷಣೆಯನ್ನು ಈ ಅಮೀರ್ ಖಾನ್ ಹೇಗೆ ಎದುರಿಸುತ್ತಾನೆ? ಜಾತೀಯತೆ ದೇಶದ ಮೊದಲ ಶತ್ರು ಎಂದು ಅಮೀರ್ ಖಾನ್ ದಿಟ್ಟವಾಗಿ ನುಡಿಯಬಲ್ಲನೆ? ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ATROCITIESಗಳ ಶೋಷಣೆಯ ಕುರಿತಾಗಿ ತನ್ನ ಮುಂದಿನ ಎಪಿಸೋಡಗಳಲ್ಲಿ ಮಾತನಾಡುತ್ತಾನೆಯೇ? ಗೊತ್ತಿಲ್ಲ!!!

ಉದಾಹರಣೆಗೆ 2009 ರಲ್ಲಿ ಬಿಹಾರನಲ್ಲಿ ಮುಜ್‌ಫ್ಫರಪುರ್ ಆಸ್ಪತ್ರೆಯಲ್ಲಿ ನಡೆದ ಕೆಲವು ಘಟನೆಗಳ ಮುಖಾಂತರ ಇದನ್ನು ನೋಡಬಹುದು. ಅಲ್ಲಿನ ಡಾಕ್ಟರುಗಳು ಒಟ್ಟಾಗಿ ಕೆಲಸ ಮಾಡುತ್ತಾರೆ. ಆದರೆ ಊಟದ ವೇಳೆಯಲ್ಲಿ ಅಲ್ಲಿನ 150 ಡಾಕ್ಟರಗಳು ಅಲ್ಲಿನ 7 ವಿವಿಧ ಲಂಚ್ ಹೋಮ್‌ಗಳಿಗೆ ತೆರಳುತ್ತಾರೆ. ಅಲ್ಲಿನ ಊಟದ ಮೆನು ಸಾಮಾನ್ಯವಾಗಿರುತ್ತದೆ. ಆದರೆ ಅಲ್ಲಿನ ಅಡುಗೆ ಮನೆಗಳು ಬ್ರಾಹ್ಮಣರಿಗೆ, ದಲಿತರಿಗೆ, ಠಾಕೂರರಿಗೆ ಬೇರೆಬೇರೆ ಆಗಿರುತ್ತವೆ. ಅಲ್ಲಿನ ಡಾಕ್ಟರಗಳು ಕೊಡುವ ಸಮಜಾಯಿಷಿ ಏನೆಂದರೆ ನಮ್ಮ ಸೀನಿಯರ್ಸ್ ನಡೆಸಿಕೊಂಡು ಬರುತ್ತಿರುವುದನ್ನೇ ನಾವು ಮುಂದುವರೆಸುತ್ತಿದ್ದೇವೆ, ಅಷ್ಟೆ.  ಇಲ್ಲಿ ದಲಿತ ಡಾಕ್ಟರುಗಳು ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ಈ ರೀತಿಯಾಗಿ ಆಸ್ಪತ್ರೆಯಲ್ಲಿ ಸಹ ಜಾತಿ ಆಧಾರಿತ ಊಟದ ವ್ಯವಸ್ಥೆಯ ವಿರುದ್ಧ ಯಾವುದೇ ದೂರು ಬಂದಿಲ್ಲವೆಂದು ಅಲ್ಲಿನ ಪ್ರಾಂಶುಪಾಲರು ಹೇಳಿ ಕೈಚೆಲ್ಲುತ್ತಾರೆ. ಇದು ನಡೆಯುತ್ತಿರುವುದು ಸಂಸ್ಕೃತಿವಂತರ ಬೀಡಾದ ಆಸ್ಪತ್ರೆಯಲ್ಲಿ. ಇದು ಒಂದು ಉದಾಹರಣೆಯಷ್ಟೆ. ಇದನ್ನು ನಾವು ಸ್ವಲ್ಪ ಸೂಕ್ಷ್ಮ ಮನಸ್ಸಿನಿಂದ, ತೆರೆದ ಮನಸ್ಸಿನಿಂದ ದೇಶದ ನಾನಾ ಭಾಗಗಳ ಕಡೆಗೆ ಗಮನಿಸಿದರೆ ಸಾಕು ಮರುಗುವಂತಾಗುತ್ತದೆ. ಇಂತಹ ಭ್ರಷ್ಟಾಚಾರದಷ್ಟೆ ಅಥವಾ ಅದಕ್ಕಿಂತಲೂ ದೊಡ್ಡ ಸಾಮಾಜಿಕ ಪಿಡುಗಾದ ಈಸ್ವಚ್ಛಂದ ಜಾತೀಯತೆಯನ್ನು ಈ ಸತ್ಯಮೇವ ಜಯತೆ ಚರ್ಚಿಸಿದೆಯೇ (ಒಂದು ವೇಳೆ ಹೌದಾದರೆ ನಿಜಕ್ಕೂ ಸಂತೋಷವೇ ಸರಿ). ಇನ್ನು ಕಳೆದ 6 ವರ್ಷಗಳಲ್ಲಿ ಇಂಡಿಯಾದ ವಿವಿಧ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ 15 ದಲಿತ ವಿದ್ಯಾರ್ಥಿಗಳು ಅಲ್ಲಿನ ಜಾತಿಯ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ (ನೋಡಿ ನವಯಾನ ಪಬ್ಲಿಕೇಶನ್ಸ). ಇದು ಅಮೀರ್‌ನನ್ನು ಅಲ್ಲಾಡಿಸಬೇಕಿತ್ತು. ಆದರೆ ಹಾಗಾಗಿದ್ದಕ್ಕೆ ಪುರಾವೆಗಳಿಲ್ಲ.

ಇವೆಲ್ಲವನ್ನು ಮೀರಿ ಪ್ರಗತಿಪರತೆಯ ಮತ್ತೊಂದು ಘಟ್ಟಕ್ಕೆ ಬೆಳೆಯಲು ಈ ನಟನಿಗೆ ಇಂದಿಗೂ ಸಾಧ್ಯವಾಗಿಲ್ಲ. ಈ ಅಮಾನವೀಯ, ಲೊಳಲೊಟ್ಟೆಯ ನೆಲೆಗಳನ್ನು ಮೀರದ ಹೊರತು ವಾಸ್ತವವಾಗಿ ಈ ಅಮೀರ್ ಖಾನ್‌ನ ಸತ್ಯಮೇವ ಜಯತೆ ಸತ್ಯಮೇವ ಜಯತೆಯಂತೂ ಖಂಡಿತ ಅಲ್ಲ. ಇದು ಕಷ್ಟ ಸಾಧ್ಯವೇ ಸರಿ. ಏಕೆಂದರೆ “ಔಟು ಲುಕ್‌”ರ ಪತ್ರಿಕೆಯ ಪತ್ರಕರ್ತರು ಮತ್ತು ಅಮೀರ್ ಖಾನ್ ಸಂದರ್ಶನದ ಒಂದು ಭಾಗವನ್ನು ನೋಡಿ

ಸಂದರ್ಶಕ : ನೀವು ಸತ್ಯಮೇವ ಜಯತೇ ಕಾರ್ಯಕ್ರಮಕ್ಕಾಗಿ 3.5 ಕೋಟಿಯನ್ನು ಪ್ರತಿ ಎಪಿಸೋಡಿಗೆ ಪಡೆಯುತ್ತೀರಂತೆ ಹೌದೇ?

ಅಮೀರ್ ಖಾನ್ (ಅತ್ಯಂತ ಆತ್ಮವಿಶ್ವಾಸದಿಂದ): ಹೌದು ಅದಕ್ಕಿಂತಲೂ ಸ್ವಲ್ಪ ಜಾಸ್ತಿಯೇ ಪಡೆಯುತ್ತೇನೆ. ಈ ಕಾರ್ಯಕ್ರಮದ ನಿರ್ಮಾಣದ ವೆಚ್ಚಕ್ಕಾಗಿ ಆ ಹಣ ಬಳಸುತ್ತೇನೆ. ಅಲ್ಲದೆ ಈ ಕಾರ್ಯಕ್ರಮಕ್ಕಾಗಿ ನನ್ನ ಒಂದು ವರ್ಷದ ಜಾಹೀರಾತನ್ನು ಮತ್ತು ಅದರಿಂದ ದೊರಕುವ ಕೋಟಿಗಟ್ಟಲೆ ಹಣವನ್ನು ಬಿಟ್ಟುಕೊಟ್ಟಿದ್ದೇನೆ.!!

ಹೇಳಿ ಇದು ಮಾನವೀಯ ನೆಲೆಯೇ? ಸಮಾಜ ಪರಿವರ್ತನೆಗೆ ಕೈ ಜೋಡಿಸುವ ಸಿನಿಮಾ ನಟ ಅದಕ್ಕಾಗಿ ತಾನು ಕೋಟಿಗಟ್ಟಲೆ ಹಣ ಕಳೆದುಕೊಳ್ಳಬೇಕಾಯಿತು ಎಂದು ಪರಿತಪಿಸುವ ಮನಸ್ಸು ಇದೆಯಲ್ಲ ಅದು ಹೇಗೆ ಮಾನವೀಯ ಸಂಬಂಧಗಳನ್ನು ರೂಪಿಸುತ್ತದೆ ? ಇದು ಯಕ್ಷ ಪ್ರಶ್ನೆ .

ಇವೆಲ್ಲವನ್ನು ಇಷ್ಟು ಕಠಿಣವಾಗಿ ಏಕೆ ಹೇಳಬೇಕಾಗಿದೆಯೆಂದರೆ ಸತ್ಯಮೇವ ಜಯತೆ ಎತ್ತುತ್ತಿರುವ ಸಾಮಾಜಿಕ ಅನಿಷ್ಟಗಳ ಬಗೆಗಿನ ಪ್ರಶ್ನೆಗಳಿಗೆ ಅದು ಕಂಡುಕೊಳ್ಳುತ್ತಿರುವ ಉತ್ತರಗಳು ಅತ್ಯಂತ ಮೇಲುಸ್ತರದ್ದು, ಸಮಸ್ಯೆಗಳ ಆಳಕ್ಕಿಳಿಯದೆ ಈ ಅನಿಷ್ಟಗಳಿಗಿರುವ ಅನೇಕ ಸಂಕೀರ್ಣ ಮುಖಗಳನ್ನು ಚರ್ಚೆಗೆ ಎತ್ತಿಕೊಳ್ಳದೆ, ಎಲ್ಲದಕ್ಕೂ ಸಿದ್ಧ ಮಾದರಿಯ, ಕಪ್ಪುಬಿಳುಪಿನ ಸೀಮಿತ ಅಭಿಪ್ರಾಯಗಳನ್ನು, ಇವೆಲ್ಲವೂ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎನ್ನುವ ಅರ್ಧಸತ್ಯವನ್ನು ನೆಚ್ಚಿಕೊಂಡು ಅದನ್ನೇ ಮಹಾನ್ ಕಾಯಕವೆನ್ನುವಂತೆ ಬಿಂಬಿಸುತ್ತ ನಡೆದರೆ ಅದಕ್ಕೇನು ಹೇಳುವುದು? ಇಲ್ಲಿನ ಸಮಸ್ಯೆಗಳಿಗೆ ಇರುವ ಅನೇಕ ಸಂಕೀರ್ಣತೆಯಲ್ಲಿ ಮತ್ತು ಅನೇಕ ಮುಖಗಳಲ್ಲಿ ಜಾಗತೀಕರಣವೆನ್ನುವ ಡೈನೋಸಾರ್ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಇದು ಜಾಗತೀಕರಣದ ಸಂದರ್ಭದಲ್ಲಿ ಅದ್ಭುತವೆನ್ನುವಷ್ಟರ ಮಟ್ಟಿಗಿನ ಕಮ್ಯುನಿಕೇಶನ್ ಬೆಳವಣಿಗೆಗಳು ಹೇಗೆ ದುರ್ಬಳಕೆಗೊಂಡಿದೆ ಎನ್ನುವ ಮೂಲಭೂತವಾದ ಸಂಕೀರ್ಣ ಪ್ರಶ್ನೆಗಳನ್ನು ಈ ಸತ್ಯಮೇವ ಜಯತೆ ಎನ್ನುವ ತೀರ ಸರಳ ನೆಲೆಯ ಕಾರ್ಯಕ್ರಮ ಹಾಕಿಕೊಳ್ಳವುದೇ ಇಲ್ಲ.

ಉದಾಹರಣೆಗೆ ಜಾಗತೀಕರಣಗೊಂಡ ಜಗತ್ತಿನಲ್ಲಿ ಇಂದು ದುಡಿಯುವ ಹೆಣ್ಣಿನ ಸ್ಥಿತಿಗತಿಗಳ ಒಂದು ನೋಟ ಹೀಗಿದೆ ಜಗತ್ತಿನ 2/3 ಭಾಗದಷ್ಟು ಕೆಲಸದ ಘಂಟೆಗಳನ್ನು ಮಹಿಳೆ ದುಡಿಯುತ್ತಾಳೆ. ಜಗತ್ತಿನ ಅರ್ಧದಷ್ಟು ಆಹಾರವನ್ನು ತಯಾರಿಸುತ್ತಾಳೆ, ಆದರೆ ಜಗತ್ತಿನ ಆದಾಯದಲ್ಲಿ ಶೇಕಡಾ 10 ರಷ್ಟನ್ನು ಮಾತ್ರ ಈಕೆ ಗಳಿಸುತ್ತಾಳೆ, ಅಲ್ಲದೆ ಇಡೀ ಜಗತ್ತಿನ ಆಸ್ತಿಯಲ್ಲಿ ಈಕೆಯ ಪಾಲು ಶೇಕಡಾ 1ರಷ್ಟು ಮಾತ್ರ. ಈ ಜಾಗತೀಕರಣದ ಅತ್ಯಂತ ದುರಂತವೆಂದರೆ ಒಂದೇ ಕಂಪನಿಯಲ್ಲಿ, ಸಮಾನ ಕೆಲಸ ಮಾಡುವ ಭಾರತೀಯ ಮತು ವಿದೇಶಿ ಉದ್ಯೋಗಿಗಳ ವೇತನದಲ್ಲಿ, ಸೌಲಭ್ಯಗಳಲ್ಲಿ ಅನೇಕ ತಾರತಮ್ಯವಿರುತ್ತದೆ. ಇಲ್ಲಿ ದುಡಿಯುವ ಭಾರತೀಯರ ದೇಹವನ್ನು ಮತ್ತು ಮನಸ್ಸನ್ನು ಜೀತದಾಳಿನ ಮಟ್ಟಕ್ಕೆ ಇಳಿಸಲಾಗುತ್ತದೆ. ಇದಕ್ಕೆ ಪ್ರಥಮ ಬಲಿ ಮಹಿಳೆ. ಹೀಗಾಗಿಯೇ ಅವಳಲ್ಲಿ ಖಿನ್ನತೆ ಬೆಳೆಯುತ್ತಿದೆ. ಇದರ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಲು ಅಪಾರ ಅಧ್ಯಯನ ಬೇಕಾಗುತ್ತದೆ. ಜಾಗತೀಕರಣದ ಫಲವಾಗಿ ನೌಕರಿಗಾಗಿ ನಗರಗಳಿಗೆ ವಲಸೆ ಬರುವ ಕೆಳ ವರ್ಗಗಳು ಮತ್ತು ಕೆಳಮಧ್ಯಮ ವರ್ಗಗಳು ಅದಕ್ಕಾಗಿ ತೆರುವ ಬೆಲೆ ಅಪಾರ. ಇಲ್ಲಿಯೂ ಶೋಷಿತಳು ಮಹಿಳೆಯೇ. ಒಂದು ಉದಾಹರಣೆಯೊಂದಿಗೆ ಇದನ್ನು ವಿವರಿಸಬಹುದು (ವಂದನಾ ಶಿವ ಅವರು ಹೇಳಿದ್ದು): “ಉತ್ತರ ಪ್ರದೇಶದ ನೊಯಿಡಾದ ರಫ್ತು ತಯಾರಿಕ ಘಟಕದಲ್ಲಿ ಕೆಲಸ ಮಾಡಲು ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಮಹಿಳೆಯರನ್ನು ಅತ್ಯಂತ ಸುಲಭವಾಗಿ ಹಿಡಿತದಲ್ಲಿರಿಸಿಕೊಳ್ಳಬಹುದು, ಇವರು ಅಲ್ಲಿನ ಅವ್ಯವಸ್ಥೆಯ ವಿರುದ್ಧ ದನಿ ಎತ್ತುವುದಿಲ್ಲ, ಇವರು 12 ಘಂಟೆ ಕೆಲಸ ಮಾಡುಲು ತಯಾರಿರುತ್ತಾರೆ (ಅನಿವಾರ್ಯವಾಗಿ). ಅತ್ಯಂತ ಅಪಾಯಕಾರಿ ವಲಯವೆಂದು ಪರಿಗಣಿತವಾಗಿರುವ ಇಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಹೆರಿಗೆ ಸೌಲಭ್ಯಗಳಿಲ್ಲ. ಕನಿಷ್ಟ ವೇತನವೂ ಸಹ ಇಲ್ಲ. ಕೆಲಸದ ಭದ್ರತೆ ಇಲ್ಲ”.

ಈ ಘಟಕ ದೆಹಲಿಯಿಂದ ಕೇವಲ 24 ಕಿ.ಮೀ. ದೂರದಲ್ಲಿದೆ. ಈ ರೀತಿಯಾಗಿ ಹಳ್ಳಿಯಲ್ಲಿ ಸ್ವಾಭಿಮಾನದಿಂದ, ಸ್ವತಂತ್ರವಾಗಿ, ತಲೆ ಎತ್ತಿ ಒಪ್ಪೊತ್ತಿನ ಊಟವಾದರೂ ಸರಿಯೇ ಅಭಿಮಾನಿಯಾಗಿ ಬದುಕುತ್ತಿದ್ದ ಮಹಿಳೆಯನ್ನು ಈ ಜಾಗತೀಕರಣ ಹಳ್ಳಿಯಿಂದ ಅವಳನ್ನು ಸ್ಥಾನಪಲ್ಲಟಗೊಳಿಸಿ ಬದುಕಿಗಾಗಿ ಪಟ್ಟಣಕ್ಕೆ ಕರೆತಂದು ಅದೇ ಮಹಿಳೆಯನ್ನು ನಿಸ್ಸಹಾಯಕಳನ್ನಾಗಿ, ಜೀತದಾಳನ್ನಾಗಿ ಮಾಡಿದೆ. ಇದು ಜಾಗತೀಕರಣದ ದುರಂತ ಮುಖ. ಹೆಣ್ಣಿನ ಬವಣೆಗಳು, ಆತಂಕಗಳು ಬಗೆಗೆ ಚರ್ಚಿಸುವಾಗ ಇದೇ ರೀತಿಯ ಅನೇಕ ಸಂಕೀರ್ಣ ಮುಖಗಳನ್ನು ಎತ್ತಿಕೊಂಡು ಚರ್ಚಿಸಬೇಕಾಗುತ್ತದೆ. ಆದರೆ ಸತ್ಯಮೇವ ಜಯತೆಗೆ ಈ ಅಪೂರ್ವ ಮಾನವೀಯ ಒಳನೋಟಗಳಿವೆಯೇ? ಅನುಮಾನ. ಜಾಗತೀಕರಣದ ದುಷ್ಪರಿಣಾಮವಾದ ಮತ್ತೊಂದು ಕ್ಷೇತ್ರ ಕಾಲ್‌ಸೆಂಟರ್‍‌ಗಳು. ಇಲ್ಲಿ ಇಂದಿನ ಪಶ್ಚಿಮದ ದೇಶಗಳಿಗೆ ಸೇವೆಯನ್ನು ಒದಗಿಸಲು ಅಭಿವೃದ್ಧಿ ಹೊಂದುತ್ತಿರುವ ಮತ್ತು ತೃತೀಯ ಜಗತ್ತಿನ ಬಡ ದೇಶಗಳ ಯುವಕ ಮತ್ತು ಯುವತಿಯರನ್ನು ಕೇವಲ ಹಣದ ಆಸೆ ತೋರಿಸಿ ಆವರ ವಿಧ್ಯಾಭ್ಯಾಸವನ್ನೇ ಮೊಟಕುಗೊಳಿಸಿ ಕೆಲಸಕ್ಕೆ ಸೇರಿಸಿಕೊಂಡು, ಅವರ ಹೆಸರು ಮತ್ತು ಚಹರೆಗಳನ್ನು ಸಂಪೂರ್ಣವಾಗಿ ರೂಪಾಂತರಗೊಳಿಸಿ ತಮಗೆ ಬೇಡವಾದಾಗ ಅವರನ್ನು ಕೆಲಸದಿಂದ ತೆಗೆದು ಹಾಕುವ ಈ ಅಮಾನವೀಯತೆಯೇ ಇಂದು ಈ ಸತ್ಯಮೇವಜಯತೆ ಎತ್ತುತ್ತಿರುವ ಪ್ರಶ್ನೆಗಳಿಗೆ ಮೂಭೂತ ಕಾರಣಗಳು. ಆದರೆ ಇಂತಹ ಸಂಕೀರ್ಣತೆಯ ಸತ್ಯವನ್ನು ಈ ಕಾರ್ಯಕ್ರಮ ಎತ್ತಿಕೊಳ್ಳುತ್ತಿಲ್ಲ. ಇದು ಈ ಜಾಗತೀಕರಣದ ವಿಷವ್ಯೂಹವನ್ನು ಪಕ್ಕಕ್ಕೆ ಸರಿಸಿ ಅವನ್ನು ಬಿಡು ನೀನು ಹೇಳು ಪರವಾಗಿಲ್ಲ ಎನ್ನುವ ಮರೆಮೋಸತನಕ್ಕೆ ಸಾಕ್ಷಿಯಾಗುತ್ತಿದೆ ಅಷ್ಟೇ. ಇವೆಲ್ಲವೂ ಕೇವಲ ಕೆಲವು ಸಣ್ಣ ಉದಾಹರಣೆಗಳು ಮಾತ್ರ.

ಜಾಗತೀಕರಣ ನಿಜಕ್ಕೂ ಛಿದ್ರಗೊಂಡ ವಲಯಗಳಾದ ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ ನೆಲೆಗಳನ್ನು ಒಂದುಗೂಡಿಸಲು ದೇಸೀಯ ನುಡಿಕಟ್ಟನ್ನು, ಭಾಷೆಯನ್ನು, ಜನಜೀವನವನ್ನೇ ಬಳಸಿಕೊಂಡು ಈ ಎಲ್ಲ ವಲಯಗಳ ನಡುವೆ ಒಂದು ಸಾವಯವ ಸಂಬಂಧವನ್ನು ಸ್ಥಾಪಿಸಿ ನಂತರ ಈ ಸುಧಾರಿತ ವ್ಯವಸ್ಥೆಯನ್ನು ಮರಳಿ ಜನರಿಗೇ ಒಪ್ಪಿಸುವ ಒಂದು ದೊಡ್ಡ ಮಿಶನ್‌ಅನ್ನು ಹುಟ್ಟು ಹಾಕಬೇಕಿತ್ತು. ಆದರೆ ಬದಲಾಗಿ ಆಗಿರುವುದೇನು? ಇದು ಇಂದು ಕೆಲವೇ ಜನರ ಕೈಯಲ್ಲಿ ಶ್ರೀಮಂತ ಆರ್ಥಿಕ ಸಮಾಜವನ್ನು ಸೃಷ್ಟಿಸಿದೆ. ಇದರಿಂದ ರಾಜಕೀಯವೂ, ವ್ಯಾಪಾರವೂ ಹಿಂದೆಂದಿಗಿಂತಲೂ ಇಂದು ಸಂಪೂರ್ಣವಾಗಿ ಉಳ್ಳವರ ಸ್ವತ್ತಾಗಿದೆ, ಕೇವಲ ಇಷ್ಟನ್ನು ಮಾತ್ರ ಸಾಧಿಸಲು ನಾವೆಲ್ಲ ನಮ್ಮ ಸಾಂಸ್ಕೃತಿಕ ನೆಲೆಗಳನ್ನು, ವೈಚಾರಿಕತೆಯನ್ನು ಕಳೆದುಕೊಳ್ಳಬೇಕಾಯಿತು, ಬದಲಾಗಿ pseudo culture ಅನ್ನು ನಮ್ಮ ಕೈಯಾರೆಯಾಗಿ ದೇಶಾದ್ಯಾಂತ ಸೃಷ್ಟಿಸಬೇಕಾಯಿತು. ಇವೆಲ್ಲದರ ಫಲವೇ ಇಂದು ಈ ಸತ್ಯಮೇವ ಜಯತೆ ಚರ್ಚೆಗಾಗಿ ಮತ್ತು ಪರಿಹಾರಕ್ಕಾಗಿ ಎತ್ತಿಕೊಂಡಿರುವ ಸಾಮಾಜಿಕ ಪಿಡುಗುಗಳು. ಹೇಳಿ ಈ ಬಗೆಯ ಪ್ರಶ್ನೆಗಳು ಮತ್ತು ಇದಕ್ಕೆಲ್ಲ ಉತ್ತರಗಳನ್ನು ಈ ಕಾರ್ಯಕ್ರಮ ಈ ಜಾಗತೀಕರಣದ ವಿಷವರ್ತುಲಗಳನ್ನು ಪ್ರಶ್ನಿಸಿಯೇ ಮತ್ತು ಎದುರಿಸಿಯೇ ಪಡೆದುಕೊಳ್ಳಬೇಕಲ್ಲವೇ? ಆದರೆ ಇದು ಕಾಣದಂತೆ ಮಾಯವಾಗಿದೆ!! ಮತ್ತು ಇದು ಕೈಲಾಸ ಸೇರಿಕೊಳ್ಳುವ ಮುನ್ನವೇ ಇದರ ರೂವಾರಿ ಅಮೀರ್ ತನ್ನನ್ನು ತಾನು ಜಾಗತೀಕರಣದ ಎಲ್ಲ ಹುಸಿ ಚಹರೆಗಳಿಂದ, ಅಸ್ಪಷ್ಟ ನಡತೆಗಳಿಂದ, ಕೆಲವೊಮ್ಮೆ ಅಪ್ರಾಮಾಣಿಕತೆಯಿಂದ ಹಾವು ಪೊರೆ ಕಳಚಿದಂತೆ ಕಳಚಿಕೊಳ್ಳಬೇಕಾಗುತ್ತದೆ. ತನ್ನ ಅಭೂತಪೂರ್ವ ಆದಾಯಗಳನ್ನು, ತನ್ನ ಬಂಡವಾಳಶಾಹಿ ಮಾಲೀಕರನ್ನು ಬಿಟ್ಟುಕೊಡಬೇಕಾಗುತ್ತದೆ. ಕಡೆಗೆ ಸಾಮಾಜಿಕ ನ್ಯಾಯವೆನ್ನುವುದು 13 ಎಪಿಸೋಡ್‌ಗಳ ಜನಪ್ರಿಯ ಕಾರ್ಯಕ್ರಮವಲ್ಲ, ಬದಲಾಗಿ ಅದು ಸಾವಿರಾರು ವರ್ಷಗಳ ಪ್ರಾಮಾಣಿಕ ಕನಸು ಮತ್ತು ಅದನ್ನು ವರ್ತಮಾನದಲ್ಲಿ ಹಾಗೂ ಭವಿಷ್ಯದಲ್ಲಿ ಸಾಕಾರಗೊಳಿಸಲು INFINITE ಎಪಿಸೋಡ್‌ಗಳನ್ನು ನಿಜಜೀವನದಲ್ಲಿ ನಾವೆಲ್ಲ ನಡೆಸಬೇಕಾಗುತ್ತದೆ ಎನ್ನುವುದು ಅಮೀರ್ ಖಾನ್‌ಗೆ ಗೊತ್ತಿಲ್ಲವೆಂದೇನಿಲ್ಲ.

ಆದರೆ …