ಜಾಮೀನಿಗೆ ಕೊಟ್ಟ ಲಂಚ 5 ಕೋಟಿ; ನ್ಯಾಯಾಧೀಶರ ಭ್ರಷ್ಟತೆ ತೊಲಗಬೇಕು

– ರವಿ ಕೃಷ್ಣಾರೆಡ್ಡಿ

ಕರ್ನಾಟಕದ ವಿಚಾರಕ್ಕೇ ಹೇಳುವುದಾದರೆ ಒಂದೆರಡು ವರ್ಷಗಳಿಂದ ಹೀಗೊಂದು ಮಾತು ಕೋರ್ಟು ವ್ಯವಹಾರಗಳನ್ನು ಬಲ್ಲವರಿಂದ ಅಲ್ಲಲ್ಲಿ ಅನಧಿಕೃತವಾಗಿ ಪ್ರಸ್ತಾಪಿಸಲ್ಪಡುತ್ತಿತ್ತು. ನೇರವಾಗಿ ಜಡ್ಜುಗಳಿಗೇ ಲಂಚ ಕೊಟ್ಟು ಬುಕ್ ಮಾಡಿಕೊಳ್ಳಲಾಗಿದೆ, ಈ ಜಡ್ಜ್‌‌ ಜಾತಿ ಕಾರಣಕ್ಕೆ ಇಂತಹ ಆದೇಶ ಹೊರಡಿಸಿದ್ದಾನೆ, ಆ ಜಡ್ಜ್ ಲಂಚ ತೆಗೆದುಕೊಂಡು ಅಂತಹ ಆದೇಶ ಹೊರಡಿಸಿದ್ದಾನೆ. ಮತ್ತೊಬ್ಬ ಜಡ್ಜ್ ಅನ್ನು ಆತನ ಗರ್ಲ್‌ಫ್ರೆಂಡ್ ಮುಖಾಂತರ ಬುಕ್ ಮಾಡಿಕೊಂಡು ಹಾಗೊಂದು ಜಾಮೀನು ತೆಗೆದುಕೊಳ್ಳಲಾಗಿದೆ, ಇತ್ಯಾದಿ, ಇತ್ಯಾದಿ. ಆದರೆ, ನ್ಯಾಯಾಲಯ ಎಂದರೇನೇ ಭಯಪಡುವ ಜನಸಾಮಾನ್ಯರ ನಡುವೆ, ನ್ಯಾಯಾಂಗ ನಿಂದನೆ ಆಗಿಬಿಡುತ್ತದೇನೊ ಎಂದು ಹೇಳಬೇಕಾದದ್ದನ್ನು ಹೇಳದೆ ಇರುವಂತಹ ಭಯಗ್ರಸ್ಥ ವಾತಾವರಣವನ್ನು ನಾವು ಸೃಷ್ಟಿಸಿಕೊಂಡಿದ್ದೇವೆ. ಈ ಮಧ್ಯೆ ಬಲಿಷ್ಟರು, ಶ್ರೀಮಂತರು, ಜಾತಿವಾದಿಗಳು ನ್ಯಾಯಾಂಗದಲ್ಲಿರುವ ಒಂದಷ್ಟು ಭ್ರಷ್ಟರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಪ್ರತಿದಿನ ಸಮಾಜ ನ್ಯಾಯದ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತ ಬರುತ್ತಿದೆ. ತಮಗೆ ಬೇಕಾದಂತೆ ಅನ್ಯಾಯದ ಆದೇಶಗಳನ್ನು ಹೊರಡಿಸಿಕೊಳ್ಳುವಲ್ಲಿ ಸಫಲವೂ ಆಗುತ್ತಿದೆ.

ದೇಶದ ಸರ್ವೋಚ್ಚ ನ್ಯಾಯಮೂರ್ತಿಯಾಗಿದ್ದ ಜಡ್ಜ್ ಬಾಲಕೃಷ್ಣನ್ ಮೇಲೆ ಈಗಲೂ ಗಂಭೀರ ಸ್ವರೂಪದ ಆರೋಪಗಳಿವೆ. ದೇಶದ 16 ನ್ಯಾಯಾಧೀಶರ ಪಟ್ಟಿಯಲ್ಲಿ 8 ನ್ಯಾಯಾಧೀಶರು ಭ್ರಷ್ಟರು ಎಂದು ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಈ ಹಿಂದೆ ಸುಪ್ರೀಮ್‌ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಆಪಾದಿಸಿ. ಅವರ ಹೆಸರುಗಳನ್ನು ಸುಪ್ರೀಮ್‌ಕೋರ್ಟ್‌ಗೆ ಸಲ್ಲಿಸಿದ್ದರು. ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಜಡ್ಜ್ ದಿನಕರನ್ ಮೇಲೆಯೂ ಗಂಭೀರ ಆರೋಪಗಳಿದ್ದವು. ಇತ್ತೀಚೆಗೆ ಲೋಕಾಯುಕ್ತರಾಗಿ ನೇಮಕಗೊಂಡು ವಿವಾದಗಳ ಕಾರಣಗಳಿಂದ ಹಿಂದೆ ಸರಿದ ಜಡ್ಜ್ ಒಬ್ಬರ ಮೇಲೆ ರಾಜ್ಯದ ರಾಜ್ಯಪಾಲರಿಗೆ ದೂರು ಕೊಡಲಾಗಿತ್ತು. ಇವು ಕೆಲವೊಂದು ಹೇಳಬಹುದಾದ ಬಹಿರಂಗವಾದ ವಿಷಯಗಳು. ಆದರೆ ರಾಜಕಾರಣಿಗಳಿಗೆ-ವಕೀಲರಿಗೆ-ಪತ್ರಕರ್ತರಿಗೆ ಗೊತ್ತಿರುವ ಅನೇಕ ವಿಷಯಗಳು–ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ–ಜನಸಾಮಾನ್ಯರಿಗೆ ಗೊತ್ತಿಲ್ಲ. ಹಾಗಾಗಿಯೇ ಇಂತಹುದೊಂದು ಕರ್ಮಕಾಂಡವನ್ನು ಪವಿತ್ರ ಗೋವಿನ ರೀತಿ ರಕ್ಷಿಸಿಕೊಂಡು ಬರುತ್ತಿರುವ ವಿದ್ಯಮಾನದಲ್ಲಿ ಇವರೆಲ್ಲರ ಪಾಲಿದೆ. ಮತ್ತು ದೇಶದ ನ್ಯಾಯವ್ಯವಸ್ಥೆ ದುರವಸ್ಥೆಯಲ್ಲಿರುವುದು ಪ್ರತಿದಿನದ ಪ್ರಕರಣಗಳಿಂದ ಎದ್ದುಕಾಣಿಸುತ್ತಿದೆ.

ಸಂವಿಧಾನಿಕ ಅಂಗವಾದ ನ್ಯಾಯಾಂಗವನ್ನು ದುಷ್ಟ ಮತ್ತು ಭ್ರಷ್ಟ ಶಕ್ತಿಗಳ ಹಸ್ತಕ್ಷೇಪದಿಂದ ದೂರ ಇಡಲು ಇಂದು ದೇಶದ ಸರ್ವೋಚ್ಚ ನ್ಯಾಯಾಲಯದ ಪ್ರಾಮಾಣಿಕ ನ್ಯಾಯಾಧೀಶರೂ ಪ್ರಯತ್ನಿಸುತ್ತಿದ್ದಾರೆ. ಮುಖ್ಯನ್ಯಾಯಮೂರ್ತಿ ಕಪಾಡಿಯರವರು ಇದರ ಬಗ್ಗೆ ಮಾತನಾಡಿದ್ದರು. ಆದರೂ ನ್ಯಾಯಾಧೀಶರಿಗೆ ಇರುವ immunity ಯ ಕಾರಣದಿಂದ ಇವು ಸಾಕಷ್ಟು ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಇಂದು ಆಂಧ್ರಪ್ರದೇಶದಲ್ಲಿ ಬಹಿರಂಗವಾದ ಪ್ರಕರಣ.

ಇಂದು ಆಂಧ್ರಪ್ರದೇಶ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಮದನ್ ಲೋಕೂರ್‌ರವರು ಹೈದರಾಬಾದಿನ ವಿಶೇಷ ಸಿಬಿಐ ಕೋರ್ಟಿನ ನ್ಯಾಯಮೂರ್ತಿಯಾಗಿದ್ದ ಟಿ. ಪಟ್ಟಾಭಿ ರಾಮರಾವ್ ಅವರನ್ನು ನ್ಯಾಯಮೂರ್ತಿ ಸ್ಥಾನದಿಂದ ವಜಾ ಮಾಡಿದ್ದಾರೆ. ಕಾರಣ?

ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಸಿಬಿಐ ವಶದಲ್ಲಿರುವುದು ಎಲ್ಲರಿಗೂ ತಿಳಿದಿರುವುದೆ. ಇವರ ಅನೇಕ ಜಾಮೀನು ಅರ್ಜಿಗಳನ್ನು ವಿವಿಧ ನ್ಯಾಯಾಲಯಗಳು ತಿರಸ್ಕರಿಸುತ್ತ ಬರುತ್ತಿವೆ. ಆದರೆ ಕಳೆದ ಮೇ 12ರಂದು ಅವರಿಗೆ ಹೈದರಾಬಾದಿನ ವಿಶೇಷ ಸಿಬಿಐ ನ್ಯಾಯಾಲಯ ಜಾಮೀನು ನೀಡಿತ್ತು. ಅವರು ಇನ್ನೇನು ಜಾಮೀನಿನ ಮೇಲೆ ಬಿಡುಗಡೆ ಆದರು ಎಂದು ಜನ ಅಂದುಕೊಂಡರು. ಟಿವಿ ಮಾಧ್ಯಮಗಳೂ ಹಾಗೆಯೇ ವರದಿ ಮಾಡಿದವು. ಆದರೆ ಇನ್ನೊಂದು ಜಾಮೀನು ತೆರವಾಗಿಲ್ಲದ ಕಾರಣ ಅವರು ಜೈಲಿನಿಂದ ಹೊರಬರಲು ಆಗಲಿಲ್ಲ. ಆದರೆ, ಅವರಿಗೆ ಮೇ 21ರಂದು ವಿಶೇಷ ನ್ಯಾಯಾಲಯ ಜಾಮೀನು ನೀಡಿದ್ದಾದರೂ ಹೇಗೆ?

ಅದರ ಬೆಲೆ 5 ಕೋಟಿ ಎನ್ನುತ್ತಿವೆ ಇಂದಿನ ವರದಿಗಳು. ಗಾಲಿ ಜನಾರ್ದನ ರೆಡ್ಡಿ ಕಡೆಯವರಿಂದ ಐದು ಕೋಟಿ ಲಂಚ ತೆಗೆದುಕೊಂಡು ಅಂತಹುದೊಂದು ಜಾಮೀನನ್ನು ಪಟ್ಟಾಭಿ ರಾಮರಾವ್ ನೀಡಿದ್ದಾರೆ ಎಂದು ಸಿಬಿಐ ಆಂಧ್ರದ ಮುಖ್ಯನ್ಯಾಯಾಧೀಶರಿಗೆ ದೂರು ನೀಡಿದೆ. ಆ ಐದು ಕೋಟಿ ರೂಪಾಯಿಯನ್ನು ಅದು ರಾಮರಾಯರಿಗೆ ಸಂಬಂಧಿಸಿದ ನೆಂಟರ ಬ್ಯಾಂಕ್ ಲಾಕರ್‌ನಲ್ಲಿ ವಶಪಡಿಸಿಕೊಂಡಿದೆ. ಇವರ ದೂರು ಮತ್ತು ಸಾಕ್ಷ್ಯದ ಆದಾರದ ಮೇಲೆ ಪಟ್ಟಾಭಿ ರಾಮರಾವ್ ವಜಾ ಆಗಿದ್ದಾರೆ. [ಇತ್ತೀಚಿನ ತೆಲುಗು ವಾರ್ತಾಚಾನಲ್‌ಗಳ ವರದಿಗಳ ಪ್ರಕಾರ ಈ ಪ್ರಕರಣದಲ್ಲಿ ಹತ್ತು ಕೋಟಿ ಕೈಬದಲಾಯಿಸಿದೆ, ಮತ್ತು ಬಳ್ಳಾರಿಯಿಂದ ಮಧ್ಯವರ್ತಿಯೊಬ್ಬ ಅದನ್ನು ಹೈದರಾಬಾದಿಗೆ ತಂದಿದ್ದ ಎನ್ನಲಾಗುತ್ತಿದೆ.]

ಈ ಘಟನೆ ನಮ್ಮ ರಾಜ್ಯದಲ್ಲೂ ಧನಾತ್ಮಕ/ಸಕಾರಾತ್ಮಕ ಪರಿಣಾಮ ಬೀರಲಿ ಎಂದಷ್ಟೇ ಈಗ ನಾವು ಆಶಿಸಬಹುದಾದದ್ದು. ಆದರೆ ಹಾಗಾಗುತ್ತದೆ ಎನ್ನುವ ನಂಬಿಕೆ ನನಗೆ ಇನ್ನೂ ಬಂದಿಲ್ಲ. ನಮ್ಮ ರಾಜ್ಯದಲ್ಲಿ ಹಣ ಮತ್ತು ಜಾತಿಯ ಕಬಂಧ ಬಾಹುಗಳು ಬಹಳ ಬಲಶಾಲಿಯಾಗಿವೆ. ಭ್ರಷ್ಟರು ನಿವೃತ್ತರಾಗದ ಹೊರತು ಇದು ಕಮ್ಮಿ ಆಗುತ್ತದೆ ಎನ್ನುವ ಆಸೆ ನನಗಿಲ್ಲ. ಮೇಲಿನ ಪ್ರಕರಣದಲ್ಲಿ ಆದೇಶ ಸಿಬಿಐ ವಿರುದ್ಧವಾಗಿ ಬಂದಿದ್ದರಿಂದ ಸಿಬಿಐ‌ನವರು ವಿಶೇಷ ಕಾಳಜಿ ವಹಿಸಿ ಈ ಪ್ರಕರಣವನ್ನು ಬಯಲಿಗೆಳೆದಿದ್ದಾರೆ, ಸಾಕ್ಷಿ ಸಮೇತ. ಆದರೆ ಸಿಬಿಐನವರು ಪ್ರತಿವಾದಿಗಳಾಗಿಲ್ಲದ ಕಡೆ? ನಮ್ಮಲ್ಲಿ ಲೋಕಾಯುಕ್ತ ಸಂಸ್ಥೆ ಇದೆ. ಅದು ತನ್ನ ವಿರುದ್ಧ ಬಂದ ಆದೇಶಗಳನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಹೋಗುತ್ತಿಲ್ಲ. ಇಂದಿನ ಲೋಕಾಯುಕ್ತ ಸಂಸ್ಥೆ ಕರ್ನಾಟಕದಲ್ಲಿ ನ್ಯಾಯ ಮತ್ತು ಪ್ರಾಮಾಣಿಕತೆಯ ಪರ ಇದೆ ಎಂದು ಹೇಳುವ ಪರಿಸ್ಥಿತಿ ಇಲ್ಲ. ಇಂತಹ ಸ್ಥಿತಿಯಲ್ಲಿ ಯಾರು ಯಾರಿಗೆ ಗಂಟೆ ಕಟ್ಟುವುದು?

ನ್ಯಾಯಸ್ಥಾನದ ಮೇಲೆ ಜನ ಸಂಪೂರ್ಣ ವಿಶ್ವಾಸ ಕಳೆದುಕೊಳ್ಳುವ ಮೊದಲು ನ್ಯಾಯಾಧೀಶರು ಮತ್ತು ಪ್ರಾಮಾಣಿಕ, ನ್ಯಾಯವಂತ ಆಡಳಿತಗಾರರು ಎಚ್ಚತ್ತುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವೇ ಸಂದೇಹಾಸ್ಪದವಾಗುತ್ತದೆ.

2 thoughts on “ಜಾಮೀನಿಗೆ ಕೊಟ್ಟ ಲಂಚ 5 ಕೋಟಿ; ನ್ಯಾಯಾಧೀಶರ ಭ್ರಷ್ಟತೆ ತೊಲಗಬೇಕು

  1. Ananda Prasad

    ನಮ್ಮ ದೇಶದ ನ್ಯಾಯ ವ್ಯವಸ್ಥೆಯ ವಿಳಂಬ ಹಾಗೂ ನ್ಯಾಯಾಂಗದ ಭ್ರಷ್ಟಾಚಾರವನ್ನು ನೋಡಿದರೆ ನಮ್ಮದು ಅನಾಗರಿಕ ದೇಶ ಎಂದು ಹೇಳಲು ಅಡ್ಡಿಯಿಲ್ಲ. ಇಲ್ಲಿ ಭ್ರಷ್ಟರಿಗೆ ಶಿಕ್ಷೆಯಾದ ಉದಾಹರಣೆ ಕಾಣಿಸುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಕ್ಸಲ್ ಸಮಸ್ಯೆ ಹುಟ್ಟಿಕೊಂಡು ಬೆಳೆದಂತೆ ಭ್ರಷ್ಟರ ನಿಯಂತ್ರಣಕ್ಕೂ ನಕ್ಸಲರ ಹಾದಿಯನ್ನೇ ರೊಚ್ಚಿಗೆದ್ದ ಜನ ತಳೆಯುವ ಸಂಭವ ಇದೆ. ಇದು ಅರಾಜಕತೆಗೆ ದಾರಿ ಮಾಡಿಕೊಡಬಹುದು. ಒಂದು ದೇಶದಲ್ಲಿ ನ್ಯಾಯ ವ್ಯವಸ್ಥೆಯಲ್ಲಿ ಜನ ನಂಬಿಕೆ ಕಳೆದುಕೊಂಡರೆ ನಕ್ಸಲ್ ತರಹದ ಸಮಸ್ಯೆಗಳು ಬೆಳೆಯುತ್ತವೆ. ನಕ್ಸಲ್ ಸಮಸ್ಯೆಯೂ ಹುಟ್ಟಿಕೊಂಡದ್ದು ಬಡವರಿಗೆ ನ್ಯಾಯ ದೊರಕದೆ ಇರುವ ಕಾರಣದಿಂದಲೇ ಅಲ್ಲವೆ? ದುಡ್ಡು ಇರುವವರು ನ್ಯಾಯವನ್ನು ಕೊಂಡುಕೊಳ್ಳುವ ಪ್ರವೃತ್ತಿ ಬೆಳೆದರೆ ಜನ ಅಂತಿಮವಾಗಿ ಕಾನೂನನ್ನು ನಕ್ಸರಂತೆ ಕೈಗೆ ತೆಗೆದುಕೊಳ್ಳುವ ಪ್ರವೃತ್ತಿ ಬೆಳೆಯುವುದು ಸಹಜ.

    Reply
  2. ಬೇಳೂರು ಸುದರ್ಶನ

    ಮತ್ತೆ ಧನಾತ್ಮಕ ಅಂತೀರಲ್ಲ ಮಾರಾಯ್ರೆ….. ಧನಾತ್ಮಕ ಪದವೇ ಭಯ ಹುಟ್ಟಿಸುತ್ತದೆ. ಧನಾತ್ಮಕ ಚಿಂತನೆಯಿಂದಲೇ ಅಲ್ವೆ ಈಗ ಎಲ್ರೂ ಜೈಲಿಗೆ ಹೋಗ್ತಿರೋದು!! ವಿಧಾಯಕ ಅನ್ನೋಣವೆ? ಸುಮ್ನೆ ಈ ಧನ ಪದದಿಂದ ತಪ್ಪಿಸಿಕೊಳ್ಳಲು ಉಪಾಯ!!

    Reply

Leave a Reply

Your email address will not be published. Required fields are marked *