Daily Archives: June 3, 2012

ಕಾಂಗ್ರೆಸ್‌ ಎಂಬ ವೃದ್ಧಾಶ್ರಮ


 


– ಡಾ.ಎನ್.ಜಗದೀಶ್ ಕೊಪ್ಪ


 

ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ನೇತೃತ್ವದ ಯು.ಪಿ.ಎ. ಸರ್ಕಾರ ಹಲವು ಅಗ್ನಿ ಪರೀಕ್ಷೆಗಳಿಗೆ ತುತ್ತಾಗಿ, ಅಬ್ಬೆಪಾರಿಯಂತೆ ದೇಶದ ಜನರೆದುರು ಬೆತ್ತಲಾಗಿ ನಿಂತಿದೆ. ಒಂದೇ ಸಮನೇ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ. ಹಿಡಿತಕ್ಕೆ ಸಿಗದ ತೈಲ ಬೆಲೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ರೂಪಾಯಿ ಮೌಲ್ಯ ಹಾಗೂ ಷೇರು ಮಾರುಕಟ್ಟೆಯಲ್ಲಿ ನಿಲ್ಲದ ಪತನ ಇವುಗಳಿಗೆ ಜಗತ್ಪ್ರಸಿದ್ಧ ಆರ್ಥಿಕ ತಜ್ಙರೂ ಆಗಿರುವ ನಮ್ಮ ಪ್ರಧಾನಿ ಮನಮೋಹನಸಿಂಗ್‌ರ ಬತ್ತಳಿಕೆಯಲ್ಲಿ ಈಗ ಯಾವುದೇ ಬಾಣಗಳಿಲ್ಲ.

1990ರ ದಶಕದಲ್ಲಿ ಮುಕ್ತ ಮಾರುಕಟ್ಟೆನೀತಿಯ ಪ್ರತಿರೂಪವಾದ ಆರ್ಥಿಕ ಉದಾರೀಕರಣವನ್ನು ಭಾರತಕ್ಕೆ ತಂದು ಕೆಂಪು ಕಂಬಳಿ ಹಾಸಿ ಸ್ವಾಗತಿಸಿದಾಗಲೇ ಇಂತಹ ಅನಾಹುತವನ್ನು ಹಲವು ಆರ್ಥಿಕ ತಜ್ಙರು ಊಹಿಸಿದ್ದರು. ಏಕೆಂದರೆ, ಜಾಗತೀಕರಣವೆಂಬುದು ಹುಲಿಯ ಮೇಲಿನ ಸವಾರಿ ಎಂಬುದು ಮನಮೋಹನಸಿಂಗರಿಗೆ ತಿಳಿಯದ ವಿಷಯವೇನಲ್ಲ. ಈಗ ಹುಲಿಯ ಮೇಲಿನ ಭಾರತದ ಸವಾರಿ ಈಗ ಮುಗಿದಿದ್ದು, ಬಡಭಾರತದ ಮೇಲಿನ ಹಸಿದ ಹುಲಿಯ ಕಬಳಿಕೆಗೆ ನಾವು ಸಾಕ್ಷಿಯಾಗುತಿದ್ದೇವೆ ಅಷ್ಡೆ.

ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳು ಒಂದೇಸಮನೆ ವಾಗ್ದಾಳಿ ನಡೆಸುತಿದ್ದರೂ, ಸಮರ್ಥಿಸಿಕೊಳ್ಳುವ ನಾಯಕರ ಕೊರತೆಯನ್ನ ಕಾಂಗ್ರೆಸ್‌ ಪಕ್ಷ ಎದುರಿಸುತ್ತಿದೆ. ವಿತ್ತ ಸಚಿವ ಪ್ರಣವ್ ಮುಖರ್ಜಿ ಹೊರತು ಪಡಿಸಿದರೆ, ಉಳಿದ ಸಚಿವರ ಅಸಮರ್ಥತೆ ಎದ್ದುಕಾಣುತ್ತಿದೆ. ಕೇಂದ್ರ ಸಚಿವರ ವಯಸ್ಸಿನತ್ತ ಗಮನ ಹರಿಸಿದರೆ ಸಾಕು, ಕಾಂಗ್ರೆಸ್‌ ಪಕ್ಷವೆಂಬುದು ನಿಷ್ಟಾವಂತ ಕಾಂಗ್ರೆಸ್ಸಿಗರ ವೃದ್ಧಾಶ್ರಮವೆಂದು ನಿಸ್ಸಂಕೊಚವಾಗಿ ಹೇಳಬಹುದು. ಪ್ರಧಾನಿ ಮನಮೋಹನಸಿಂಗ್, ಎಸ್.ಎಮ್.ಕೃಷ್ಣ, ವೀರಪ್ಪಮೊಯ್ಲಿ, ಖರ್ಗೆ, ವಯಲಾರ್ ರವಿ, ಎ.ಕೆ.ಆಂಟೋಣಿ, ಸುಶೀಲ್ ಕುಮಾರ್ ಶಿಂದೆ ಇವರೆಲ್ಲಾ ಎಪ್ಪತ್ತು ದಾಟಿದ ವಯೋವೃದ್ಧರು, ಮತ್ತು ವಯಸ್ಸಿನ ಕಾರಣದಿಂದ ಹೃದಯ ಮತ್ತು ನಾಲಿಗೆಯ ನಡುವಿನ ಸಮತೋಲನ ಕಳೆದುಕೊಂಡವರು. ಕೆ.ಹೆಚ್. ಮುನಿಯಪ್ಪ. ಆಸ್ಕರ್ ಫರ್ನಾಂಡಿಸ್ ಇಂತಹವರು ಮೀಸಲಾತಿಯ ಕೋಟಾದಲ್ಲಿ ಸಂಪುಟಕ್ಕೆ ತೂರಿಕೊಂಡ ಅಸಮರ್ಥರು.

ವಾಸ್ತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಪ್ರತಿಭಾವಂತ ನಾಯಕರ ಕೊರತೆಯೇನು ಇಲ್ಲ. ಆದರೆ, ಗುಲಾಮಗಿರಿತನವನ್ನು ಒಪ್ಪಿಕೊಂಡ ನಾಯಕರನ್ನು ಓಲೈಸುವ ಕೆಟ್ಟ ಛಾಳಿಯನ್ನು  ಪಕ್ಷ ಬದಿಗಿಟ್ಟು, ನಿಜವಾದ ನಾಯಕರನ್ನು ಗುರುತಿಸಲು ಮುಂದಾಗಬೇಕಿದೆ. ಆದರೆ, ಅಂತಹ ಸುಳಿವಾಗಲಿ, ಆಲೋಚನೆಯಾಗಲಿ ಕಾಂಗ್ರೆಸ್‌ ಪಕ್ಷಕ್ಕೆ ಇದ್ದಂತೆ ಕಾಣುವುದಿಲ್ಲ.

ಮೊನ್ನೆ ತಾನೆ ನಡೆದ ರಾಜ್ಯಪಾಲರ ಆಯ್ಕೆಯಲ್ಲಿ ಪಕ್ಷ ಆರಿಸಿಕೊಂಡ ವ್ಯಕ್ತಿಗಳನ್ನು ಗಮನಿಸಿದರೆ ಸಾಕು,  ರಾಜ್ಯಪಾಲ ಹುದ್ದೆಯೆಂಬುದು, ರಾಜಕೀಯ ನಿರಾಶ್ರಿತರಿಗೆ ನೀಡಬಹುದಾದ ಸ್ಥಾನ ಮಾನವೇನೋ ಎಂಬ ಅನುಮಾನ ಮೂಡುತ್ತದೆ. ಇಡೀ ದೇಶದುದ್ದಕ್ಕೂ ಇರುವ ಅನೇಕ ವಯೋವೃದ್ಧ ರಾಜ್ಯಪಾಲರುಗಳನ್ನು ಗಮನಿಸಿದರೆ, ರಾಜಭವನಗಳನ್ನು ರಾಜಕೀಯ ನಿರಾಶ್ರಿತರ ಶಿಬಿರಗಳೆಂದು ಕರೆಯಬಹುದು.

1969ರಲ್ಲಿ ಕಾಂಗ್ರೆಸ್‌ ಪಕ್ಷ ವಿಭಜನೆಗೊಂಡು, ಬೆಂಗಳೂರಿನ ಲಾಲ್‌ಬಾಗ್ ಗಾಜಿನ ಮನೆಯಲ್ಲಿ ಇಂದಿರಾ ಕಾಂಗ್ರೆಸ್‌ ಪಕ್ಷ ಹುಟ್ಟಿಕೊಂಡ ತಕ್ಷಣವೇ,  ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಅಸುನೀಗಿತು. ಇಂದಿರಾಗಾಂಧಿಗೆ ನಿಷ್ಟೆ ತೋರಿಸುವ ನೆಪದಲ್ಲಿ, ಜೈಕಾರ ಹಾಕುವಗುಲಾಮಗಿರಿತನ ಕಾಂಗ್ರೆಸ್‌ ನಾಯಕರ ಎದೆಯಲ್ಲಿ ಮೊಳಕೆಯೊಡೆಯಿತು. ಈ ಅನಿಷ್ಟ ಪದ್ಧತಿ, ಈಗ ಚಿವುಟಿ ಹಾಕಲಾರದ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಸತ್ಯವನ್ನ ಕಾಂಗ್ರೆಸ್‌ ಅರಿಯಲಾರದೇ ಹೋದರೆ, ಪಕ್ಷಕ್ಕೆ ಭವಿಷ್ಯವಿಲ್ಲ.

ಇತ್ತೀಚೆಗೆ ಕರ್ನಾಟಕದ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ, ಪ್ರಜ್ಞಾವಂತ ನಾಗರೀಕರಲ್ಲಿ ಕಾಂಗ್ರೆಸ್‌ ಪಕ್ಷದ ಬಗ್ಗೆ ಜಿಗುಪ್ಸೆ ಮೂಡುತ್ತದೆ. ಸುಮ್ಮನೆ ಗಮನಿಸಿ, ಬಿ.ಎಲ್.ಶಂಕರ್, ವಿ.ಆರ್. ಸುದರ್ಶನ್, ಉಗ್ರಪ್ಪ, ಸಿ.ಎಂ.ಇಬ್ರಾಹಿಮ್, ಎಲ್.ಹನುಮಂತಯ್ಯ, ಇವರ ಓರೆಕೋರೆಗಳು ಏನೇ ಇರಲಿ ಇವರೆಲ್ಲಾ ಪಕ್ಷಕ್ಕೆ ಆಸ್ತಿಯಾಗಬಲ್ಲವರು. ವಿಧಾನಮಂಡಲದ ಒಳಗೆ, ಹೊರಗೆ ಪಕ್ಷವನ್ನು, ಪಕ್ಷದ ಸಿದ್ಧಾಂತಗಳನ್ನು ಸಮರ್ಥವಾಗಿ ಮಂಡಿಸಬಲ್ಲ ಪ್ರತಿಭೆಯುಳ್ಳವರು. ಇವರುಗಳನ್ನ ವಿಧಾನ ಪರಿಷತ್ತಿಗೆ ಪರಿಗಣಿಸುವ ಕನಿಷ್ಟ ಆಸಕ್ತಿ ಕೂಡ ಈಗ  ಕಾಂಗ್ರೆಸ್‌ ನಾಯಕರಿಗಿಲ್ಲ. ಏಕೆಂದರೆ, ಹನುಮಂತಯ್ಯ ಹೊರತು ಪಡಿಸಿ, ಉಳಿದವರೆಲ್ಲರೂ ಜನತಾ ಪಕ್ಷದ ಮೂಲದಿಂದ ಬಂದವರು. ಕಳೆದ ನಾಲ್ಕು ವರ್ಷಗಳಲ್ಲಿ ಬಿ.ಜೆ.ಪಿ. ಪಕ್ಷದ ಭ್ರಷ್ಟಾಚಾರದ ಬಗ್ಗೆ ನಿಷ್ಟುರವಾಗಿ ದನಿಯೆತ್ತಿ ಮಾತನಾಡಿವರೆಂದರೆ, ಇವರುಗಳು ಮಾತ್ರ. ವಿಧಾನ ಸಭೆಯಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ ಬಿ.ಜೆ.ಪಿ ಸರ್ಕಾರವನ್ನು ಹಿಗ್ಗಾಮುಗ್ಗಾ ಜಾಡಿಸಿ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ ಸಿದ್ಧರಾಮಯ್ಯನವರ ಬಗ್ಗೆ ಕಾಂಗ್ರೆಸ್‌ ಪಕ್ಷ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇವತ್ತು ಕರ್ನಾಟಕದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿ.ಜೆ.ಪಿ . ಸರ್ಕಾರದ ವಿರುದ್ಧ , ಅದರ ಭ್ರಷ್ಟಾಚಾರದ ವಿರುದ್ಧ, ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಕಾಂಗ್ರೆಸ್‌ ಪಕ್ಷ ವಿಫಲವಾಗಿರುವುದು, ಎಲ್ಲರೂ ತಿಳಿದ ಸಂಗತಿ. ಮುಂದಿನ ದಿನಗಳಲ್ಲಿ ಬಿ.ಜೆ.ಪಿ. ಪಕ್ಷ ಪತನವಾದರೆ, ಕಾಂಗ್ರೆಸ್‌ ಪಕ್ಷ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರಿಗೆ ಋಣಿಯಾಗಿರಬೇಕು. ಅಷ್ಟೇ ಅಲ್ಲ ,ಒಂದು ವೇಳೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ, ಪ್ರತಿಯೊಬ್ಬ ಸಚಿವನ ಕೊಠಡಿಯಲ್ಲಿ ಯಡಿಯೂರಪ್ಪನ ಫೋಟೊ ಇಟ್ಟು ಪೂಜೆ ಮಾಡಬೇಕು.

ಕಾಂಗ್ರೆಸ್‌ ಪಕ್ಷಕ್ಕೆ ಆಳುವುದು ಗೊತ್ತೇ ಹೊರತು, ಆಳಿಸುಕೊಳ್ಳುವುದು ಗೊತ್ತಿಲ್ಲ. ಇದರಿಂದಾಗಿ ದೇಶಾದ್ಯಂತ ಈ ರಾಷ್ಟ್ರೀಯಪಕ್ಷ, ಒಂದು ಬಲಿಷ್ಟ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಅಥವಾ ಹೊರಹೊಮ್ಮಲು ವಿಫಲವಾಗಿದೆ.

ಪಕ್ಷಕ್ಕೆ ಹೊಸ ತಲೆಮಾರು, ಅಥವಾ ಹೊಸ ಚಿಂತನೆಗಳು ಯಾವತ್ತೂ ಬೇಡವಾಗಿವೆ. ಅದೂ ಇವತ್ತಿಗೂ, ನೆಹರೂ ವಂಶದ ಕುಡಿಯಾದ ರಾಹುಲ್ ಗಾಂಧಿಯಿಂದ ಪವಾಡವನ್ನು ಎದುರು ನೋಡುತ್ತಾ ಕುಳಿತಿದೆ. ಇಂತಹ ದಯನೀಯ ಸ್ಥಿತಿ ದೇಶದಲ್ಲಿ ಯಾವ ರಾಷ್ಟ್ರೀಯ ಪಕ್ಷಕ್ಕೂ ಬರಬಾರದು.

ನಿನ್ನೆ ಹುಬ್ಬಳ್ಳಿಗೆ ಬಂದು ಹೋದ ರಾಹುಲ್ ಗಾಂಧಿಯ ಚಟುವಟಿಕೆಗಳನ್ನ ಗಮನಿಸಿ ಈ ಮಾತು ಹೇಳುತಿದ್ದೇನೆ.

ಈ ಯುವ ನಾಯಕನ ಬರುವಿಕೆಗಾಗಿ, ಹುಬ್ಬಳ್ಳಿ ನಗರದ ಎರಡು ಪಂಚತಾರ ಹೋಟೇಲುಗಳಲ್ಲಿ ವಿಶೇಷ ಕೊಠಡಿಗಳನ್ನ ಐದು ದಿನಗಳ ಮುಂಚೆ ಕಾಯ್ದಿರಿಸಲಾಗಿತ್ತು. ದಿನವೊಂದಕ್ಕೆ ಹದಿನೈದು ಸಾವಿರ ಬಾಡಿಗೆಯ ಈ ಕೊಠಡಿಗಳನ್ನ ಕಳೆದ ಮಂಗಳವಾರ, ದೆಹಲಿಯಿಂದ ಬಂದ ಎಸ್.ಜಿ.ಪಿ. ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು. ಶುಕ್ರವಾರ, ಈ ಯುವರಾಜಕುಮಾರನಿಗೆ ಊಟ ತಿಂಡಿ ಸಿದ್ಧಪಡಿಸಲು ಉತ್ತರಪ್ರದೇಶದಿಂದ ಮೂವರು ಬಾಣಸಿಗರ ನೇತೃತ್ವದ ತಂಡ ಬಂದು ಇಳಿಯಿತು. ನೆಹರೂ ಮೈದಾನದಲ್ಲಿ ಈತನ ಒಂದು ಗಂಟೆಯ ಕಾರ್ಯಕ್ರಮ ಮತ್ತು ಎಂಟು ನಿಮಿಷಗಳ ಅವಧಿಯ ಭಾಷಣಕ್ಕಾಗಿ ವೇದಿಕೆಯ ಹಿಂಭಾಗ ವಿಶೇಷ ಹವಾನಿಯಂತ್ರಣ ಕೊಠಡಿಯನ್ನು ಸಿದ್ಧಪಡಿಸಲಾಗಿತ್ತು.

ಇಷ್ಟೆಲ್ಲಾ ಅನುಕೂಲಗಳ ನಡುವೆ ಈ ರಾಜಕುಮಾರ, ಕಾರ್ಯಕರ್ತರ ನಡುವೆ ಮುಕ್ತವಾಗಿ ಬೆರತು, ಪಕ್ಷದ ಹಾಗು ಹೋಗುಗಳನ್ನ ಚಱಿಸಲು ಸಾಧ್ಯವಾಗಲೇ ಇಲ್ಲ. ಭದ್ರತೆಯ ನೆಪದಲ್ಲಿ ಏಳುಸುತ್ತಿನ ಕೋಟೆಯ ನಡುವೆ ಬಂಧಿಯಾಗಿರುವ ರಾಹುಲ್ ಗಾಂಧಿಯೆಂಬ ಯುವರಾಜಕುಮಾರನಿಂದ ಜನಸಾಮಾನ್ಯರು ಇರಲಿ, ಪಕ್ಷದ ಕಾರ್ಯಕರ್ತರು ತಾನೆ ಏನು ನಿರೀಕ್ಷಿಸಲು ಸಾಧ್ಯ?

ರಾಹುಲ್ ಗಾಂಧಿಗೆ ಕರ್ನಾಟಕದ ಕಾಂಗ್ರೆಸ್‌ ಪಕ್ಷದ ಎಷ್ಟು ಜನ ನಾಯಕರ ಹೆಸರು ಗೊತ್ತಿದೆ ಕೇಳಿ ನೋಡಿ? ಈಗಾಗಲೇ ಬಿಹಾರ, ಉತ್ತರಪ್ರದೇಶ, ಮುಂತಾದ ರಾಜ್ಯಗಳಲ್ಲಿ ಈ ಯುವನಾಯಕನ ಮೋಡಿ ನಡೆಯದೇ, ಕಾಂಗ್ರೆಸ್‌ ಪಕ್ಷ ಏಕೆ ಮಕಾಡೆ ಮಲಗಿತು ಎಂಬುದಕ್ಕೆ ಕಾಂಗ್ರೆಸ್ಸಿಗರು ರಾಹುಲ್ ನಡುವಳಿಕೆಯಲ್ಲಿ ಉತ್ತರ ಕಂಡುಕೊಳ್ಳಬೇಕಿದೆ. ಒಬ್ಬ ರಾಜಕೀಯ ನಾಯಕ ಈ ನೆಲದ ತಳಮಟ್ಟದಿಂದ, ಜನರ ನಡುವೆ, ಅವರ ಸಂಕಷ್ಟ ಮತ್ತು ನೋವಿನ ನಡುವೆ ಹುಟ್ಟಿ ಬರಬೇಕೇ ಹೊರತು. ಗಾಜಿನ ಮನೆಯಿಂದ ಅಲ್ಲ. ಹೀಗೆ ಸೃಷ್ಟಿಯಾಗುವ ನಾಯಕನನ್ನ ಈ ನೆಲದ ಬಹು ಸಂಸ್ಕೃತಿಯ ಸಮಾಜ ಅಷ್ಟು ಸುಲಭವಾಗಿ ಒಪ್ಪಿಕೊಂಡ ಉದಾಹರಣೆಗಳಿಲ್ಲ. ಹಾಗಾಗಿ ಪ್ರತಿಭಾವಂತರನ್ನ, ಬದ್ಧತೆ ಮತ್ತು ಕಾಳಜಿ ಇರುವ ನಾಯಕರನ್ನ ಕಾಂಗ್ರೆಸ್‌ ಪಕ್ಷ ಉಳಿಸಿಕೊಂಡು ಅವರನ್ನು ಬೆಳಸಬೇಕಿದೆ.

ಇದು ಕಳೆದ ನಾಲ್ಕು ವರ್ಷದ ಹಿಂದಿನ ಚುನಾವಣೆಯ ಸಂದರ್ಭದ ಘಟನೆ. ಕರ್ನಾಟಕ ಕಂಡ ಅಪರೂಪದ ಸಜ್ಜನ ರಾಜಕಾರಣಿ ದಿ. ಎಂ.ಪಿ. ಪ್ರಕಾಶ್ ಹರಪನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರ ಎದುರಾಳಿ, ನಮ್ಮ ಗಣಿಕಳ್ಳ ಜನಾರ್ದನ ರೆಡ್ಡಿಯ ಅಣ್ಣ ಕರುಣಾಕರ ರೆಡ್ಡಿ. ಅದು ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ  ಬಿ.ಜೆ.ಪಿ. ಪಕ್ಷ ರೆಡ್ಡಿಯ ದರೋಡೆ ಹಣದ ಎಂಜಲಿನಲ್ಲಿ ಮುಳುಗಿ ಏಳುತಿದ್ದ ಸಮಯ. ಇನ್ನು ಹರಪನಹಳ್ಳಿಯಲ್ಲಿ ಕೇಳಬೇಕೆ? ಮತದಾರರ ಕೈಯಲ್ಲಿ ಸಾವಿರ ರೂಪಾಯಿನ ನೋಟುಗಳು ಹರಿದಾಡುವುದನ್ನು ಕಂಡು ಕಂಗಾಲಾದ ಎಂ.ಪಿ.ಪ್ರಕಾಶ್, ಹರಪನಹಳ್ಳಿಯಲ್ಲಿ ರಾಹುಲ್ ಗಾಂಧಿಯ ಚುನಾವಣಾ ಪ್ರಚಾರವನ್ನು ಏರ್ಪಡಿಸಿದ್ದರು.

ರಾಹುಲ್ ಬಂದಾಗ ಆ ಯುವಕನ ಎದುರು, ಮೈ ಬಗ್ಗಿಸಿ, ಕುಗ್ಗಿಸಿ, ಪ್ರಕಾಶ್ ನಡೆದುಕೊಂಡ ರೀತಿ ನಿಜಕ್ಕೂ ನನಗೆ ಅಸಹ್ಯ ತರಿಸಿತು. ನಾನು, ಆತ್ಮೀಯವಾದ ವೈಯಕ್ತಿಕ ಸಂಬಂಧ ಇರಿಸಿಕೊಂಡಿದ್ದ ಕೆಲವೇ ರಾಜಕೀಯ ವ್ಯಕ್ತಿಗಳಲ್ಲಿ ಪ್ರಕಾಶ್ ಒಬ್ಬರು. ಹಾಗಾಗಿ ತಡರಾತ್ರಿ ಅವರಿಗೆ ಕರೆಮಾಡಿ ನನ್ನ ಅಸಮಧಾನವನ್ನು ವ್ಯಕ್ತಪಡಿಸಿದೆ. ಆ ಕ್ಷಣದಲ್ಲಿ ಪ್ರಕಾಶ್ ತಾಳ್ಮೆಯಿಂದ ಉತ್ತರಿಸಿದ ರೀತಿ ನನ್ನನ್ನು ದಂಗುಬಡಿಸಿತು.  “ಜಗದೀಶ್, ದಡವೇ ಇಲ್ಲದ ಕಾಂಗ್ರೆಸ್‌ ಎಂಬ ಸಮುದ್ರಕ್ಕೆ ದುಮುಕಿದ್ದೇನೆ, ಯಾರು ಏನು ಹೇಳುತ್ತಾರೋ ಹಾಗೇ ಈಜುತ್ತಲೇ ಇರಬೇಕು. ದಡ ಸಿಗಬಹುದು ಎಂಬ ಆಸೆಯಿಂದ ಅವರು ತೋರಿಸುವ ದಿಕ್ಕಿನತ್ತ ಈಜುತ್ತಲೇ ಇರಬೇಕು. ಇದು ನನ್ನ ಸ್ಥಿತಿ. ಕಾಂಗ್ರೆಸ್‌ ಪಕ್ಷದ ಶಬ್ಧಕೋಶದಲ್ಲಿ ಮುಜುಗರ ಮತ್ತು ಅಪಮಾನಗಳಿಗೆ ಅರ್ಥವಿಲ್ಲ.” ಪ್ರಕಾಶ್‌ರವರ ಈ ಉತ್ತರಕ್ಕೆ ನಾನು ಪ್ರತಿಕ್ರಿಯಿಸಲು ಮಾತುಗಳಿಗೆ ತಡಕಾಡಿದೆ. ಆ ದಿನ ಪ್ರಕಾಶ್ ಅನುಭವಿಸಿದ ಯಾತನೆಯನ್ನ ಇಂದು ಸಿದ್ಧರಾಮಯ್ಯ ಅನುಭವಿಸುತಿದ್ದಾರೆ ಅಷ್ಟೆ.

ಇದು ಕಹಿಯೆನಿದರೂ ಹೇಳಲೇಬೇಕಾದ ಸತ್ಯ. ಕಾಂಗ್ರೆಸ್‌ ಪಕ್ಷದಲ್ಲಿ, ಜಾಫರ್ ಷರೀಫ್ ಮತ್ತು ರೆಹಮಾನ್ ಖಾನ್ ಇರುವ ತನಕ ಒಬ್ಬ ಮುಸ್ಲಿಂ ನಾಯಕ, ಖರ್ಗೆ ಮತ್ತು ಕೆ.ಹೆಚ್. ಮುನಿಯಪ್ಪ ಇರುವ ತನಕ  ಒಬ್ಬ ದಲಿತ ನಾಯಕನಾಗಲಿ, ಆಸ್ಕರ್ ಫರ್ನಾಂಡೀಸ್ ಇರುವ ತನಕ ಒಬ್ಬ ಕ್ರಿಶ್ಚಿಯನ್ ನಾಯಕನಾಗಲಿ, ಎಸ್.ಎಂ. ಕೃಷ್ಣ ಇರುವ ತನಕ ಒಬ್ಬ ಒಕ್ಕಲಿಗ ನಾಯಕನಾಗಲಿ ಪ್ರಮುಖ ಸ್ಥಾನ ಪಡೆದು, ಬೆಳೆಯುವುದು ಸುಲಭದ ಸಂಗತಿಯಲ್ಲ. ಈ ಮಹಾನ್ ನಾಯಕರು ನಿವೃತ್ತಿಯಾಗುವುದರೊಳಗೆ, ಸರತಿ ಸಾಲಿನಲ್ಲಿ ನಿಂತಿರುವ ಎರಡನೇ ವರ್ಗದ ನಾಯಕರ ಆಯಸ್ಸು ಮುಗಿದು ಹೋಗಿರುತ್ತದೆ. ಇದು ಕಾಂಗ್ರೆಸ್‌ ಎಂಬ ಸುದೀರ್ಘ ಇತಿಹಾಸವಿರುವ ರಾಷ್ಟ್ರೀಯ ಪಕ್ಷವೊಂದರ, ರಾಷ್ಟ್ರೀಯ ದುರಂತ.