ಕಾಂಗ್ರೆಸ್‌ ಎಂಬ ವೃದ್ಧಾಶ್ರಮ


 


– ಡಾ.ಎನ್.ಜಗದೀಶ್ ಕೊಪ್ಪ


 

ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ನೇತೃತ್ವದ ಯು.ಪಿ.ಎ. ಸರ್ಕಾರ ಹಲವು ಅಗ್ನಿ ಪರೀಕ್ಷೆಗಳಿಗೆ ತುತ್ತಾಗಿ, ಅಬ್ಬೆಪಾರಿಯಂತೆ ದೇಶದ ಜನರೆದುರು ಬೆತ್ತಲಾಗಿ ನಿಂತಿದೆ. ಒಂದೇ ಸಮನೇ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ. ಹಿಡಿತಕ್ಕೆ ಸಿಗದ ತೈಲ ಬೆಲೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ರೂಪಾಯಿ ಮೌಲ್ಯ ಹಾಗೂ ಷೇರು ಮಾರುಕಟ್ಟೆಯಲ್ಲಿ ನಿಲ್ಲದ ಪತನ ಇವುಗಳಿಗೆ ಜಗತ್ಪ್ರಸಿದ್ಧ ಆರ್ಥಿಕ ತಜ್ಙರೂ ಆಗಿರುವ ನಮ್ಮ ಪ್ರಧಾನಿ ಮನಮೋಹನಸಿಂಗ್‌ರ ಬತ್ತಳಿಕೆಯಲ್ಲಿ ಈಗ ಯಾವುದೇ ಬಾಣಗಳಿಲ್ಲ.

1990ರ ದಶಕದಲ್ಲಿ ಮುಕ್ತ ಮಾರುಕಟ್ಟೆನೀತಿಯ ಪ್ರತಿರೂಪವಾದ ಆರ್ಥಿಕ ಉದಾರೀಕರಣವನ್ನು ಭಾರತಕ್ಕೆ ತಂದು ಕೆಂಪು ಕಂಬಳಿ ಹಾಸಿ ಸ್ವಾಗತಿಸಿದಾಗಲೇ ಇಂತಹ ಅನಾಹುತವನ್ನು ಹಲವು ಆರ್ಥಿಕ ತಜ್ಙರು ಊಹಿಸಿದ್ದರು. ಏಕೆಂದರೆ, ಜಾಗತೀಕರಣವೆಂಬುದು ಹುಲಿಯ ಮೇಲಿನ ಸವಾರಿ ಎಂಬುದು ಮನಮೋಹನಸಿಂಗರಿಗೆ ತಿಳಿಯದ ವಿಷಯವೇನಲ್ಲ. ಈಗ ಹುಲಿಯ ಮೇಲಿನ ಭಾರತದ ಸವಾರಿ ಈಗ ಮುಗಿದಿದ್ದು, ಬಡಭಾರತದ ಮೇಲಿನ ಹಸಿದ ಹುಲಿಯ ಕಬಳಿಕೆಗೆ ನಾವು ಸಾಕ್ಷಿಯಾಗುತಿದ್ದೇವೆ ಅಷ್ಡೆ.

ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳು ಒಂದೇಸಮನೆ ವಾಗ್ದಾಳಿ ನಡೆಸುತಿದ್ದರೂ, ಸಮರ್ಥಿಸಿಕೊಳ್ಳುವ ನಾಯಕರ ಕೊರತೆಯನ್ನ ಕಾಂಗ್ರೆಸ್‌ ಪಕ್ಷ ಎದುರಿಸುತ್ತಿದೆ. ವಿತ್ತ ಸಚಿವ ಪ್ರಣವ್ ಮುಖರ್ಜಿ ಹೊರತು ಪಡಿಸಿದರೆ, ಉಳಿದ ಸಚಿವರ ಅಸಮರ್ಥತೆ ಎದ್ದುಕಾಣುತ್ತಿದೆ. ಕೇಂದ್ರ ಸಚಿವರ ವಯಸ್ಸಿನತ್ತ ಗಮನ ಹರಿಸಿದರೆ ಸಾಕು, ಕಾಂಗ್ರೆಸ್‌ ಪಕ್ಷವೆಂಬುದು ನಿಷ್ಟಾವಂತ ಕಾಂಗ್ರೆಸ್ಸಿಗರ ವೃದ್ಧಾಶ್ರಮವೆಂದು ನಿಸ್ಸಂಕೊಚವಾಗಿ ಹೇಳಬಹುದು. ಪ್ರಧಾನಿ ಮನಮೋಹನಸಿಂಗ್, ಎಸ್.ಎಮ್.ಕೃಷ್ಣ, ವೀರಪ್ಪಮೊಯ್ಲಿ, ಖರ್ಗೆ, ವಯಲಾರ್ ರವಿ, ಎ.ಕೆ.ಆಂಟೋಣಿ, ಸುಶೀಲ್ ಕುಮಾರ್ ಶಿಂದೆ ಇವರೆಲ್ಲಾ ಎಪ್ಪತ್ತು ದಾಟಿದ ವಯೋವೃದ್ಧರು, ಮತ್ತು ವಯಸ್ಸಿನ ಕಾರಣದಿಂದ ಹೃದಯ ಮತ್ತು ನಾಲಿಗೆಯ ನಡುವಿನ ಸಮತೋಲನ ಕಳೆದುಕೊಂಡವರು. ಕೆ.ಹೆಚ್. ಮುನಿಯಪ್ಪ. ಆಸ್ಕರ್ ಫರ್ನಾಂಡಿಸ್ ಇಂತಹವರು ಮೀಸಲಾತಿಯ ಕೋಟಾದಲ್ಲಿ ಸಂಪುಟಕ್ಕೆ ತೂರಿಕೊಂಡ ಅಸಮರ್ಥರು.

ವಾಸ್ತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಪ್ರತಿಭಾವಂತ ನಾಯಕರ ಕೊರತೆಯೇನು ಇಲ್ಲ. ಆದರೆ, ಗುಲಾಮಗಿರಿತನವನ್ನು ಒಪ್ಪಿಕೊಂಡ ನಾಯಕರನ್ನು ಓಲೈಸುವ ಕೆಟ್ಟ ಛಾಳಿಯನ್ನು  ಪಕ್ಷ ಬದಿಗಿಟ್ಟು, ನಿಜವಾದ ನಾಯಕರನ್ನು ಗುರುತಿಸಲು ಮುಂದಾಗಬೇಕಿದೆ. ಆದರೆ, ಅಂತಹ ಸುಳಿವಾಗಲಿ, ಆಲೋಚನೆಯಾಗಲಿ ಕಾಂಗ್ರೆಸ್‌ ಪಕ್ಷಕ್ಕೆ ಇದ್ದಂತೆ ಕಾಣುವುದಿಲ್ಲ.

ಮೊನ್ನೆ ತಾನೆ ನಡೆದ ರಾಜ್ಯಪಾಲರ ಆಯ್ಕೆಯಲ್ಲಿ ಪಕ್ಷ ಆರಿಸಿಕೊಂಡ ವ್ಯಕ್ತಿಗಳನ್ನು ಗಮನಿಸಿದರೆ ಸಾಕು,  ರಾಜ್ಯಪಾಲ ಹುದ್ದೆಯೆಂಬುದು, ರಾಜಕೀಯ ನಿರಾಶ್ರಿತರಿಗೆ ನೀಡಬಹುದಾದ ಸ್ಥಾನ ಮಾನವೇನೋ ಎಂಬ ಅನುಮಾನ ಮೂಡುತ್ತದೆ. ಇಡೀ ದೇಶದುದ್ದಕ್ಕೂ ಇರುವ ಅನೇಕ ವಯೋವೃದ್ಧ ರಾಜ್ಯಪಾಲರುಗಳನ್ನು ಗಮನಿಸಿದರೆ, ರಾಜಭವನಗಳನ್ನು ರಾಜಕೀಯ ನಿರಾಶ್ರಿತರ ಶಿಬಿರಗಳೆಂದು ಕರೆಯಬಹುದು.

1969ರಲ್ಲಿ ಕಾಂಗ್ರೆಸ್‌ ಪಕ್ಷ ವಿಭಜನೆಗೊಂಡು, ಬೆಂಗಳೂರಿನ ಲಾಲ್‌ಬಾಗ್ ಗಾಜಿನ ಮನೆಯಲ್ಲಿ ಇಂದಿರಾ ಕಾಂಗ್ರೆಸ್‌ ಪಕ್ಷ ಹುಟ್ಟಿಕೊಂಡ ತಕ್ಷಣವೇ,  ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಅಸುನೀಗಿತು. ಇಂದಿರಾಗಾಂಧಿಗೆ ನಿಷ್ಟೆ ತೋರಿಸುವ ನೆಪದಲ್ಲಿ, ಜೈಕಾರ ಹಾಕುವಗುಲಾಮಗಿರಿತನ ಕಾಂಗ್ರೆಸ್‌ ನಾಯಕರ ಎದೆಯಲ್ಲಿ ಮೊಳಕೆಯೊಡೆಯಿತು. ಈ ಅನಿಷ್ಟ ಪದ್ಧತಿ, ಈಗ ಚಿವುಟಿ ಹಾಕಲಾರದ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಸತ್ಯವನ್ನ ಕಾಂಗ್ರೆಸ್‌ ಅರಿಯಲಾರದೇ ಹೋದರೆ, ಪಕ್ಷಕ್ಕೆ ಭವಿಷ್ಯವಿಲ್ಲ.

ಇತ್ತೀಚೆಗೆ ಕರ್ನಾಟಕದ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ, ಪ್ರಜ್ಞಾವಂತ ನಾಗರೀಕರಲ್ಲಿ ಕಾಂಗ್ರೆಸ್‌ ಪಕ್ಷದ ಬಗ್ಗೆ ಜಿಗುಪ್ಸೆ ಮೂಡುತ್ತದೆ. ಸುಮ್ಮನೆ ಗಮನಿಸಿ, ಬಿ.ಎಲ್.ಶಂಕರ್, ವಿ.ಆರ್. ಸುದರ್ಶನ್, ಉಗ್ರಪ್ಪ, ಸಿ.ಎಂ.ಇಬ್ರಾಹಿಮ್, ಎಲ್.ಹನುಮಂತಯ್ಯ, ಇವರ ಓರೆಕೋರೆಗಳು ಏನೇ ಇರಲಿ ಇವರೆಲ್ಲಾ ಪಕ್ಷಕ್ಕೆ ಆಸ್ತಿಯಾಗಬಲ್ಲವರು. ವಿಧಾನಮಂಡಲದ ಒಳಗೆ, ಹೊರಗೆ ಪಕ್ಷವನ್ನು, ಪಕ್ಷದ ಸಿದ್ಧಾಂತಗಳನ್ನು ಸಮರ್ಥವಾಗಿ ಮಂಡಿಸಬಲ್ಲ ಪ್ರತಿಭೆಯುಳ್ಳವರು. ಇವರುಗಳನ್ನ ವಿಧಾನ ಪರಿಷತ್ತಿಗೆ ಪರಿಗಣಿಸುವ ಕನಿಷ್ಟ ಆಸಕ್ತಿ ಕೂಡ ಈಗ  ಕಾಂಗ್ರೆಸ್‌ ನಾಯಕರಿಗಿಲ್ಲ. ಏಕೆಂದರೆ, ಹನುಮಂತಯ್ಯ ಹೊರತು ಪಡಿಸಿ, ಉಳಿದವರೆಲ್ಲರೂ ಜನತಾ ಪಕ್ಷದ ಮೂಲದಿಂದ ಬಂದವರು. ಕಳೆದ ನಾಲ್ಕು ವರ್ಷಗಳಲ್ಲಿ ಬಿ.ಜೆ.ಪಿ. ಪಕ್ಷದ ಭ್ರಷ್ಟಾಚಾರದ ಬಗ್ಗೆ ನಿಷ್ಟುರವಾಗಿ ದನಿಯೆತ್ತಿ ಮಾತನಾಡಿವರೆಂದರೆ, ಇವರುಗಳು ಮಾತ್ರ. ವಿಧಾನ ಸಭೆಯಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ ಬಿ.ಜೆ.ಪಿ ಸರ್ಕಾರವನ್ನು ಹಿಗ್ಗಾಮುಗ್ಗಾ ಜಾಡಿಸಿ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ ಸಿದ್ಧರಾಮಯ್ಯನವರ ಬಗ್ಗೆ ಕಾಂಗ್ರೆಸ್‌ ಪಕ್ಷ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇವತ್ತು ಕರ್ನಾಟಕದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿ.ಜೆ.ಪಿ . ಸರ್ಕಾರದ ವಿರುದ್ಧ , ಅದರ ಭ್ರಷ್ಟಾಚಾರದ ವಿರುದ್ಧ, ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಕಾಂಗ್ರೆಸ್‌ ಪಕ್ಷ ವಿಫಲವಾಗಿರುವುದು, ಎಲ್ಲರೂ ತಿಳಿದ ಸಂಗತಿ. ಮುಂದಿನ ದಿನಗಳಲ್ಲಿ ಬಿ.ಜೆ.ಪಿ. ಪಕ್ಷ ಪತನವಾದರೆ, ಕಾಂಗ್ರೆಸ್‌ ಪಕ್ಷ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರಿಗೆ ಋಣಿಯಾಗಿರಬೇಕು. ಅಷ್ಟೇ ಅಲ್ಲ ,ಒಂದು ವೇಳೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ, ಪ್ರತಿಯೊಬ್ಬ ಸಚಿವನ ಕೊಠಡಿಯಲ್ಲಿ ಯಡಿಯೂರಪ್ಪನ ಫೋಟೊ ಇಟ್ಟು ಪೂಜೆ ಮಾಡಬೇಕು.

ಕಾಂಗ್ರೆಸ್‌ ಪಕ್ಷಕ್ಕೆ ಆಳುವುದು ಗೊತ್ತೇ ಹೊರತು, ಆಳಿಸುಕೊಳ್ಳುವುದು ಗೊತ್ತಿಲ್ಲ. ಇದರಿಂದಾಗಿ ದೇಶಾದ್ಯಂತ ಈ ರಾಷ್ಟ್ರೀಯಪಕ್ಷ, ಒಂದು ಬಲಿಷ್ಟ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಅಥವಾ ಹೊರಹೊಮ್ಮಲು ವಿಫಲವಾಗಿದೆ.

ಪಕ್ಷಕ್ಕೆ ಹೊಸ ತಲೆಮಾರು, ಅಥವಾ ಹೊಸ ಚಿಂತನೆಗಳು ಯಾವತ್ತೂ ಬೇಡವಾಗಿವೆ. ಅದೂ ಇವತ್ತಿಗೂ, ನೆಹರೂ ವಂಶದ ಕುಡಿಯಾದ ರಾಹುಲ್ ಗಾಂಧಿಯಿಂದ ಪವಾಡವನ್ನು ಎದುರು ನೋಡುತ್ತಾ ಕುಳಿತಿದೆ. ಇಂತಹ ದಯನೀಯ ಸ್ಥಿತಿ ದೇಶದಲ್ಲಿ ಯಾವ ರಾಷ್ಟ್ರೀಯ ಪಕ್ಷಕ್ಕೂ ಬರಬಾರದು.

ನಿನ್ನೆ ಹುಬ್ಬಳ್ಳಿಗೆ ಬಂದು ಹೋದ ರಾಹುಲ್ ಗಾಂಧಿಯ ಚಟುವಟಿಕೆಗಳನ್ನ ಗಮನಿಸಿ ಈ ಮಾತು ಹೇಳುತಿದ್ದೇನೆ.

ಈ ಯುವ ನಾಯಕನ ಬರುವಿಕೆಗಾಗಿ, ಹುಬ್ಬಳ್ಳಿ ನಗರದ ಎರಡು ಪಂಚತಾರ ಹೋಟೇಲುಗಳಲ್ಲಿ ವಿಶೇಷ ಕೊಠಡಿಗಳನ್ನ ಐದು ದಿನಗಳ ಮುಂಚೆ ಕಾಯ್ದಿರಿಸಲಾಗಿತ್ತು. ದಿನವೊಂದಕ್ಕೆ ಹದಿನೈದು ಸಾವಿರ ಬಾಡಿಗೆಯ ಈ ಕೊಠಡಿಗಳನ್ನ ಕಳೆದ ಮಂಗಳವಾರ, ದೆಹಲಿಯಿಂದ ಬಂದ ಎಸ್.ಜಿ.ಪಿ. ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು. ಶುಕ್ರವಾರ, ಈ ಯುವರಾಜಕುಮಾರನಿಗೆ ಊಟ ತಿಂಡಿ ಸಿದ್ಧಪಡಿಸಲು ಉತ್ತರಪ್ರದೇಶದಿಂದ ಮೂವರು ಬಾಣಸಿಗರ ನೇತೃತ್ವದ ತಂಡ ಬಂದು ಇಳಿಯಿತು. ನೆಹರೂ ಮೈದಾನದಲ್ಲಿ ಈತನ ಒಂದು ಗಂಟೆಯ ಕಾರ್ಯಕ್ರಮ ಮತ್ತು ಎಂಟು ನಿಮಿಷಗಳ ಅವಧಿಯ ಭಾಷಣಕ್ಕಾಗಿ ವೇದಿಕೆಯ ಹಿಂಭಾಗ ವಿಶೇಷ ಹವಾನಿಯಂತ್ರಣ ಕೊಠಡಿಯನ್ನು ಸಿದ್ಧಪಡಿಸಲಾಗಿತ್ತು.

ಇಷ್ಟೆಲ್ಲಾ ಅನುಕೂಲಗಳ ನಡುವೆ ಈ ರಾಜಕುಮಾರ, ಕಾರ್ಯಕರ್ತರ ನಡುವೆ ಮುಕ್ತವಾಗಿ ಬೆರತು, ಪಕ್ಷದ ಹಾಗು ಹೋಗುಗಳನ್ನ ಚಱಿಸಲು ಸಾಧ್ಯವಾಗಲೇ ಇಲ್ಲ. ಭದ್ರತೆಯ ನೆಪದಲ್ಲಿ ಏಳುಸುತ್ತಿನ ಕೋಟೆಯ ನಡುವೆ ಬಂಧಿಯಾಗಿರುವ ರಾಹುಲ್ ಗಾಂಧಿಯೆಂಬ ಯುವರಾಜಕುಮಾರನಿಂದ ಜನಸಾಮಾನ್ಯರು ಇರಲಿ, ಪಕ್ಷದ ಕಾರ್ಯಕರ್ತರು ತಾನೆ ಏನು ನಿರೀಕ್ಷಿಸಲು ಸಾಧ್ಯ?

ರಾಹುಲ್ ಗಾಂಧಿಗೆ ಕರ್ನಾಟಕದ ಕಾಂಗ್ರೆಸ್‌ ಪಕ್ಷದ ಎಷ್ಟು ಜನ ನಾಯಕರ ಹೆಸರು ಗೊತ್ತಿದೆ ಕೇಳಿ ನೋಡಿ? ಈಗಾಗಲೇ ಬಿಹಾರ, ಉತ್ತರಪ್ರದೇಶ, ಮುಂತಾದ ರಾಜ್ಯಗಳಲ್ಲಿ ಈ ಯುವನಾಯಕನ ಮೋಡಿ ನಡೆಯದೇ, ಕಾಂಗ್ರೆಸ್‌ ಪಕ್ಷ ಏಕೆ ಮಕಾಡೆ ಮಲಗಿತು ಎಂಬುದಕ್ಕೆ ಕಾಂಗ್ರೆಸ್ಸಿಗರು ರಾಹುಲ್ ನಡುವಳಿಕೆಯಲ್ಲಿ ಉತ್ತರ ಕಂಡುಕೊಳ್ಳಬೇಕಿದೆ. ಒಬ್ಬ ರಾಜಕೀಯ ನಾಯಕ ಈ ನೆಲದ ತಳಮಟ್ಟದಿಂದ, ಜನರ ನಡುವೆ, ಅವರ ಸಂಕಷ್ಟ ಮತ್ತು ನೋವಿನ ನಡುವೆ ಹುಟ್ಟಿ ಬರಬೇಕೇ ಹೊರತು. ಗಾಜಿನ ಮನೆಯಿಂದ ಅಲ್ಲ. ಹೀಗೆ ಸೃಷ್ಟಿಯಾಗುವ ನಾಯಕನನ್ನ ಈ ನೆಲದ ಬಹು ಸಂಸ್ಕೃತಿಯ ಸಮಾಜ ಅಷ್ಟು ಸುಲಭವಾಗಿ ಒಪ್ಪಿಕೊಂಡ ಉದಾಹರಣೆಗಳಿಲ್ಲ. ಹಾಗಾಗಿ ಪ್ರತಿಭಾವಂತರನ್ನ, ಬದ್ಧತೆ ಮತ್ತು ಕಾಳಜಿ ಇರುವ ನಾಯಕರನ್ನ ಕಾಂಗ್ರೆಸ್‌ ಪಕ್ಷ ಉಳಿಸಿಕೊಂಡು ಅವರನ್ನು ಬೆಳಸಬೇಕಿದೆ.

ಇದು ಕಳೆದ ನಾಲ್ಕು ವರ್ಷದ ಹಿಂದಿನ ಚುನಾವಣೆಯ ಸಂದರ್ಭದ ಘಟನೆ. ಕರ್ನಾಟಕ ಕಂಡ ಅಪರೂಪದ ಸಜ್ಜನ ರಾಜಕಾರಣಿ ದಿ. ಎಂ.ಪಿ. ಪ್ರಕಾಶ್ ಹರಪನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರ ಎದುರಾಳಿ, ನಮ್ಮ ಗಣಿಕಳ್ಳ ಜನಾರ್ದನ ರೆಡ್ಡಿಯ ಅಣ್ಣ ಕರುಣಾಕರ ರೆಡ್ಡಿ. ಅದು ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ  ಬಿ.ಜೆ.ಪಿ. ಪಕ್ಷ ರೆಡ್ಡಿಯ ದರೋಡೆ ಹಣದ ಎಂಜಲಿನಲ್ಲಿ ಮುಳುಗಿ ಏಳುತಿದ್ದ ಸಮಯ. ಇನ್ನು ಹರಪನಹಳ್ಳಿಯಲ್ಲಿ ಕೇಳಬೇಕೆ? ಮತದಾರರ ಕೈಯಲ್ಲಿ ಸಾವಿರ ರೂಪಾಯಿನ ನೋಟುಗಳು ಹರಿದಾಡುವುದನ್ನು ಕಂಡು ಕಂಗಾಲಾದ ಎಂ.ಪಿ.ಪ್ರಕಾಶ್, ಹರಪನಹಳ್ಳಿಯಲ್ಲಿ ರಾಹುಲ್ ಗಾಂಧಿಯ ಚುನಾವಣಾ ಪ್ರಚಾರವನ್ನು ಏರ್ಪಡಿಸಿದ್ದರು.

ರಾಹುಲ್ ಬಂದಾಗ ಆ ಯುವಕನ ಎದುರು, ಮೈ ಬಗ್ಗಿಸಿ, ಕುಗ್ಗಿಸಿ, ಪ್ರಕಾಶ್ ನಡೆದುಕೊಂಡ ರೀತಿ ನಿಜಕ್ಕೂ ನನಗೆ ಅಸಹ್ಯ ತರಿಸಿತು. ನಾನು, ಆತ್ಮೀಯವಾದ ವೈಯಕ್ತಿಕ ಸಂಬಂಧ ಇರಿಸಿಕೊಂಡಿದ್ದ ಕೆಲವೇ ರಾಜಕೀಯ ವ್ಯಕ್ತಿಗಳಲ್ಲಿ ಪ್ರಕಾಶ್ ಒಬ್ಬರು. ಹಾಗಾಗಿ ತಡರಾತ್ರಿ ಅವರಿಗೆ ಕರೆಮಾಡಿ ನನ್ನ ಅಸಮಧಾನವನ್ನು ವ್ಯಕ್ತಪಡಿಸಿದೆ. ಆ ಕ್ಷಣದಲ್ಲಿ ಪ್ರಕಾಶ್ ತಾಳ್ಮೆಯಿಂದ ಉತ್ತರಿಸಿದ ರೀತಿ ನನ್ನನ್ನು ದಂಗುಬಡಿಸಿತು.  “ಜಗದೀಶ್, ದಡವೇ ಇಲ್ಲದ ಕಾಂಗ್ರೆಸ್‌ ಎಂಬ ಸಮುದ್ರಕ್ಕೆ ದುಮುಕಿದ್ದೇನೆ, ಯಾರು ಏನು ಹೇಳುತ್ತಾರೋ ಹಾಗೇ ಈಜುತ್ತಲೇ ಇರಬೇಕು. ದಡ ಸಿಗಬಹುದು ಎಂಬ ಆಸೆಯಿಂದ ಅವರು ತೋರಿಸುವ ದಿಕ್ಕಿನತ್ತ ಈಜುತ್ತಲೇ ಇರಬೇಕು. ಇದು ನನ್ನ ಸ್ಥಿತಿ. ಕಾಂಗ್ರೆಸ್‌ ಪಕ್ಷದ ಶಬ್ಧಕೋಶದಲ್ಲಿ ಮುಜುಗರ ಮತ್ತು ಅಪಮಾನಗಳಿಗೆ ಅರ್ಥವಿಲ್ಲ.” ಪ್ರಕಾಶ್‌ರವರ ಈ ಉತ್ತರಕ್ಕೆ ನಾನು ಪ್ರತಿಕ್ರಿಯಿಸಲು ಮಾತುಗಳಿಗೆ ತಡಕಾಡಿದೆ. ಆ ದಿನ ಪ್ರಕಾಶ್ ಅನುಭವಿಸಿದ ಯಾತನೆಯನ್ನ ಇಂದು ಸಿದ್ಧರಾಮಯ್ಯ ಅನುಭವಿಸುತಿದ್ದಾರೆ ಅಷ್ಟೆ.

ಇದು ಕಹಿಯೆನಿದರೂ ಹೇಳಲೇಬೇಕಾದ ಸತ್ಯ. ಕಾಂಗ್ರೆಸ್‌ ಪಕ್ಷದಲ್ಲಿ, ಜಾಫರ್ ಷರೀಫ್ ಮತ್ತು ರೆಹಮಾನ್ ಖಾನ್ ಇರುವ ತನಕ ಒಬ್ಬ ಮುಸ್ಲಿಂ ನಾಯಕ, ಖರ್ಗೆ ಮತ್ತು ಕೆ.ಹೆಚ್. ಮುನಿಯಪ್ಪ ಇರುವ ತನಕ  ಒಬ್ಬ ದಲಿತ ನಾಯಕನಾಗಲಿ, ಆಸ್ಕರ್ ಫರ್ನಾಂಡೀಸ್ ಇರುವ ತನಕ ಒಬ್ಬ ಕ್ರಿಶ್ಚಿಯನ್ ನಾಯಕನಾಗಲಿ, ಎಸ್.ಎಂ. ಕೃಷ್ಣ ಇರುವ ತನಕ ಒಬ್ಬ ಒಕ್ಕಲಿಗ ನಾಯಕನಾಗಲಿ ಪ್ರಮುಖ ಸ್ಥಾನ ಪಡೆದು, ಬೆಳೆಯುವುದು ಸುಲಭದ ಸಂಗತಿಯಲ್ಲ. ಈ ಮಹಾನ್ ನಾಯಕರು ನಿವೃತ್ತಿಯಾಗುವುದರೊಳಗೆ, ಸರತಿ ಸಾಲಿನಲ್ಲಿ ನಿಂತಿರುವ ಎರಡನೇ ವರ್ಗದ ನಾಯಕರ ಆಯಸ್ಸು ಮುಗಿದು ಹೋಗಿರುತ್ತದೆ. ಇದು ಕಾಂಗ್ರೆಸ್‌ ಎಂಬ ಸುದೀರ್ಘ ಇತಿಹಾಸವಿರುವ ರಾಷ್ಟ್ರೀಯ ಪಕ್ಷವೊಂದರ, ರಾಷ್ಟ್ರೀಯ ದುರಂತ.

6 thoughts on “ಕಾಂಗ್ರೆಸ್‌ ಎಂಬ ವೃದ್ಧಾಶ್ರಮ

  1. Guruprasad Hegde

    ಜಗದೀಶ್ ಅವರೆ, ಕಾಂಗ್ರೆಸ್ ಪಕ್ಷದ ದಯನೀಯ ಪರಿಸ್ತಿತಿ ಬಗ್ಗೆ ಬೆಳಕು ಚೆಲ್ಲಿದ್ದೀರ. ಈ ಲೇಖನವನ್ನ ಕಾಂಗ್ರೆಸ್ಸಿಗರು ಓದಿ ಅರ್ಥಮಾಡಿ ಕೊಳ್ಳಬೇಕಾದ ಅನಿವಾರ್ಯತೆ ಇದೆ!
    ವಿಚಾರವಂತ ಜನತೆ ಕಾಂಗ್ರೆಸ್ಸನ್ನ ಅಸಹ್ಯದಿಂದ ನೋಡುತ್ತಿದ್ದಾರೆ. ಆದ್ರೂ ಯು.ಪಿ.ಎ ಸರ್ಕಾರ ಅಧಿಕಾರಕ್ಕೆ ಬರತ್ತಲ್ಲ, ಇದೇ ಬೇಸರದ ಸಂಗತಿ.

    Reply
  2. Gajanana Hegde

    Mr. Jagadish, your opinion is cent per cent rite. But senior Congress leaders can’t understand the reality. Bjp is also following congress. Actually ( I feel) now we need a new party with new concepts of development, which can sustain for long time or the military rule for some years (in the interest of whole nation).

    Reply
  3. prasad raxidi

    ಆತ್ಮಹತ್ಯೆಯ ಹಾದಿ ಹಿಡಿದು ಬಹಳ ಕಾಲವಾಗಿರುವ ಕಾಂಗ್ರೆಸ್ಸಿನ ಮೆದುಳು ಕೆಲಸ ಮಾಡುವ ಸಂಭವ ಬಹಳ ಕಡಿಮೆ, ಇನ್ನು ಹಿತವಚನ- ಜನಾಭಿಪ್ರಾಯ ಅರ್ಥವಾಗುವ ಬಗೆ ಹೇಗೆ..?

    Reply
  4. Oduga

    ಕಾಂಗ್ರೆಸ್ ಈ ಹೀನಾಯ ಸ್ಥಿತಿಗೆ ತಲುಪಲು ಮುಖ್ಯವಾಗಿ ಮೂರು ಕಾರಣಗಳಿವೆ. ಅದರ ನಾಯಕ ವಗ೯ದ ಸ್ವಾಥ೯, ಸಂಘಟನಾ ನಿಶ್ಯಕ್ತಿ, ಹಾಗೂ ಬೌದ್ಧಿಕ ಅಧಪತನ. ಕಾಂಗ್ರೆಸ್ ಪಕ್ಷವು ಬಿಜೆಪಿಯ ಕೋಮುವಾದದ ರಾಜಕೀಯ ಹಾಗೂ ತನ್ನ ಭ್ರಷ್ಟತೆಯಿಂದಾಗಿ ತನ್ನ ಅಧಿಕಾರವನ್ನು ಕ್ರಮೇಣವಾಗಿ ಕಳಕೊಂಡಂತೆ ಭಾಸವಾದರೂ ಈ ಮೂರು ಕಾರಣಗಳು ಬಹಳ ಮುಖ್ಯವಾಗಿವೆ ಎಂದು ನಾನು ಭಾವಿಸುತ್ತೇನೆ.

    ಈ ಮೂರು ವಿಷಯಗಳಲ್ಲಿ ನಾಯಕ ವಗ೯ದ ಸ್ವಾಥ೯- ಭ್ರಷ್ಟಚಾರ, ಕಾಂಗ್ರೆಸ್ ನಂತೆಯೇ ಇತರ ಎಲ್ಲಾ ಪಕ್ಷಗಳಲ್ಲಿ ಕಂಡು ಬರುವ ಸಾಮಾನ್ಯ ಅಂಶವಾಗಿದೆ.
    ಸಂಘಟನಾ ನಿಶ್ಯಕ್ತಿಯ ವಿವಿಧ ಮುಖಗಳಿವೆ. ಇಲ್ಲಿ ಕಾಂಗ್ರೆಸ್ ನಲ್ಲಿರುವುದು ಅತಿಯಾದ “ಸಾಂಪ್ರದಾಯಿಕ” ನಾಯಕರು ಹಾಗೂ ಅವರಿಂದಾಗಿ ಬೆಳೆಯದಿರುವ ಹೊಸ ನಾಯಕತ್ವಗಳು.

    ಬೌದ್ಧಿಕ ಅಧಪತನ- ಬಹುಶ ಇಂದು ಕಾಂಗ್ರೆಸ್ ನಲ್ಲಿರುವ ಬಹುತೇಕ ಶಾಟ್೯ಕಟ್ ನಾಯಕರಿಗೆ ಹಾಗೂ ವಲಸೆ ಬಂದ ನಾಯಕರಿಗೆ ಪಕ್ಷದ ಸಿದ್ದಾಂತವೇನು, ಅದರ ಧ್ಯೇಯೋದ್ದೇಶಗಳೇನು ಎಂಬುವುದೇ ಗೊತ್ತಿರಲಾರದು. ಕಾಯ೯ಕತ೯ರನ್ನು ಬಿಡಿ. ಜಾತ್ಯತೀತತೆಯ ವಕ್ತಾರನೆಂಬ ಭ್ರಮೆಯಲ್ಲಿರುವ ಈ ಪಕ್ಷದ ನಾಯಕರಿಗಾಗಲಿ, ಬಹುತೇಕ ಕಾಯ೯ಕತ೯ರಿಗಾಗಲಿ ಅದೇನೆಂಬುವುದೇ ತಿಳಿದಿಲ್ಲ. ತಿಳಿದಿದ್ದರೆ ಆ ಸಿದ್ದಾಂತಕ್ಕೆ ತನ್ನ ವೈಯುಕ್ತಿಕ ಕೊಡುಗೆಯೇನು ಎಂಬ ಪ್ರಶ್ನೆಗಳಿಗೆ ಉತ್ತರವಿರಲಾರದು. ಕೇವಲ ಅಧಿಕಾರ ದಾಹವೇ ಇವರ ಬಂಡವಾಳವಾಗಿದೆ. ಯಾವುದೇ ಸಿದ್ದಾಂತ ಅಥವಾ ಚಳುವಳಿ ಅದು ಸಾಮಾಜಿಕವಾಗಿರಲಿ, ಆಥಿ೯ಕವಾಗಿರಲಿ, ಸಾಂಸ್ಕೃತಿಕವಾಗಿರಲಿ ಅಥವಾ ರಾಜಕೀಯವಾಗಿರಲಿ, ಬೌದ್ಧಿಕ ಬೆಳವಣಿಗೆ ಬಹಳ ಮುಖ್ಯವಾಗಿದೆ. ಇತ್ತೀಚಿಗೆ, ಈ ಪಕ್ಷದ ಅಂಗಸಂಸ್ಥೆಯ ರಾಜ್ಯ ಮುಖಂಡನೊಬ್ಬ ಒಂದು ಖಾಸಗಿ ಸಭೆಯಲ್ಲಿ ಕೇಳಿದ ಪ್ರಶ್ನೆಯು (“ಎ ಐ ಡಿ ಎಸ್ ಓ ನ ಫುಲ್ ಫಾಮು೯ ಏನ್ರೀ?”)ದಿಗಿಲು ಹುಟ್ಟಿಸುವಂತಿತ್ತು. ನಿಮ್ಮ ಕಾಯ೯ಚಟುವಟಿಕೆಗಳೇನೆಂದು ಯಾರೋ ಒಬ್ಬಅದೇ ಮುಖಂಡನೊಡನೆ ಪ್ರಶ್ನೆ ಹಾಕಿದ, ಅದರ ಉತ್ತರವನ್ನೊಮ್ಮೆ ಕೇಳಿ, “ಅಭಾವಿಪ ಏನೇನನ್ನೋ ಮಾಡುತ್ತದೋ ಅದನ್ನು ನಾವು ವಿರೋಧಿಸುತ್ತೇವೆ.” ಇಂತಹ ಸಿದ್ದಾಂತವನ್ನಿಟ್ಟುಕೊಂಡವರನ್ನು ಕಟ್ಟಿಕೊಂಡು ಒಂದು ರಾಷ್ಟ್ರೀಯ ಪಕ್ಷವ ಬೆಳೆಯಲು ಸಾಧ್ಯವೇ?

    ತಮ್ಮ ಅಧಿಕಾರ/ಪ್ರಭಾವವನ್ನು ಉಳಿಸಿಕೊಳ್ಳಲು ಬಿಜೆಪಿಗೆ ಕೋಮುವಾದ- ಮೋದಿವಾದ ಯಾವ ತರಹ ಬಂಡವಾಳವಾಗಿದೆಯೋ, ಕನಾ೯ಟಕದಲ್ಲಿ ಕಾಂಗ್ರೆಸ್ ಗೆ ಕೂಡಾ ಬಿಜೆಪಿಯ ಕೋಮುವಾದ ಹಾಗೂ ಪ್ರಭಾಕರವಾದ ಅಷ್ಟೇ ಬಹುಮುಖ್ಯವಾದ ಬಂಡವಾಳವಾಗಿದೆ. ಅಂತಹ ಬಂಡವಾಳಗಳನ್ನು ಚುನಾವಣೆಯವರೆಗೆ ಉಳಿಸಿಕೊಳ್ಳಲು, ಕಾಂಗ್ರೆಸಿಗರಿಗೆ “ಬ್ಲೂ ಫಿಲ್ಮ್” ರಾಜಕೀಯವು ಕೆಲವೊಮ್ಮೆ ನಾಡಿನ “ಶಾಂತಿ ಮತ್ತು ಸುವ್ಯವಸ್ಠೆ” ಗಳಿಗಿಂತ ಮುಖ್ಯವಾಗುತ್ತದೆ. ಕಾಂಗ್ರೆಸಿಗರಿಗೆ ಸದ್ಯಕ್ಕೆ ಅಪಾಯವಿರುವುದು ಬಿಜೆಪಿಯಿಂದಲ್ಲ, ಆದರೆ ಶೋಷಿತರ ಮಧ್ಯೆ ಹುಟ್ಟುತ್ತಿರುವ ಹೊಸ ರಾಜಕೀಯ ಆಲೋಚನೆಗಳಿಂದ. ಅದೂ ಅವರಿಗೆ ಚೆನ್ನಾಗಿ ಗೊತ್ತು.

    Reply
  5. ANIL SWAMY-YADAGIRI

    ” ಕಾಂಗ್ರೇಸ್ ಪಕ್ಷ ವೃದ್ಧಾಶ್ರಮವಿದ್ದಂತೆ—
    ಈ ಕುರಿತು ನನ್ನ ಅಭಿಪ್ರಾಯ—–

    ” ಮನುಷ್ಯನಾಗಿ ಹುಟ್ಟಿದ ಮೇಲೆ ಹುಟ್ಟು, ಸಾವು ಸಹಜ”
    ಅದೇ ರೀತಿ ಪ್ರತಿಯೊಬ್ಬರಿಗೂ ಅವರ ವಯಸ್ಸಿಗೆ ಸಂಬಂಧಿದಂತೆ
    ಆಯಾ ಸಮಯದಲ್ಲಿ ಆಯಾ ಸಂದರ್ಭದಲ್ಲಿ ಯವ್ವನ ಮತ್ತು ಮುಪ್ಪು ಬರುವುದು ಸಹಜ.
    ಆದರೆ ಕಾಂಗ್ರೇಸ್ ಪಕ್ಷವನ್ನು ವೃದ್ಧಾಶ್ರಮ ಅಂತಾ ಬಿಂಬಿಸಿರುವುದಕ್ಕೆ ತೀರಾ ಬೇಸರವಾಗಿದೆ.
    ಏಕೆಂದರೆ ಇಂದಲ್ಲ ನಾಳೆ ನಾವು ವೃದ್ಧರಾಗುತ್ತೇವೆ. ಅಥಾವ ನಮ್ಮ ನಿಮ್ಮ ತಂದೆ ತಾಯಿಗಳು ವೃದ್ಧರಾಗುತ್ತಾರೆ.
    ಅವರ ಮನಸ್ಸಿಗೆ ಈ ಪದ ಎಷ್ಟೊಂದು ಸಮಂಜಸ ಅನ್ನುಸುತ್ತೆ ಒಮ್ಮೆ ಕೇಳಿ ನೋಡೋಣ.? ಎಲ್ಲಾ ರಾಜಕೀಯ ಪಕ್ಷಗಳಲ್ಲಿ
    ವೃದ್ದರಿದ್ದಾರೆ. ಕಾಂಗ್ರೇಸ್ ಪಕ್ಷ ಪುರಾತನವಾದದ್ದು. ಆದರಿಂದ ಅಲ್ಲಿ ಹಿರಿಯ ಜೀವಿಗಳು ಆ ಪಕ್ಷವನ್ನು ಹಿಡಿದುಕೊಂಡು
    ಇದ್ದಾರೆ. ಯಾವುದೇ ಒಂದು ಪಕ್ಷದ ಬಗ್ಗೆ ಮಾತನಾಡುವ ಹಕ್ಕು ಎಲ್ಲರಿಗೂ ಇದೆ.. ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ..
    ಟೀಕಿಸುವ ಹಕ್ಕಿದೆ… ಆದರೆ ಮನಸ್ಸಿಗೆ ನೋವುಂಟು ಮಾಡುವ ಹಕ್ಕು ನಮ್ಮ ಸಂವಿಧಾನಕ್ಕೂ ಇಲ್ಲ.

    ಅನಿಲ್ ಸ್ವಾಮಿ, ಯಾದಗಿರಿ–9008693555

    Reply
  6. althaf bilagula

    vidaana parisathna chunavaneyalli muslim abyartiyannu solisida nantaravadaru congresnalliruva muslimaru adara kapatatanavannu arta maadikondu adarinda horage barabeku
    innu saaku muslimarige congres sahavaasa, congres yaavatu muslimara hitavannu bayasuvudilla, adakke bekaagiruvudu muslimara vote maatra

    Reply

Leave a Reply

Your email address will not be published. Required fields are marked *