Daily Archives: June 4, 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 23)


– ಡಾ.ಎನ್.ಜಗದೀಶ್ ಕೊಪ್ಪ


 

1925ರ ಡಿಸಂಬರ್ ತಿಂಗಳಿನಲ್ಲಿ ಕ್ರಿಸ್‌ಮಸ್ ಹಬ್ಬದ ಆಚರಣೆ ಹಾಗೂ ಒಂದಿಷ್ಟು ವಿಶ್ರಾಂತಿಗಾಗಿ ನೈನಿತಾಲ್‌ಗೆ ಬಂದ ಕಾರ್ಬೆಟ್‌‍ಗೆ ಮತ್ತೇ ರುದ್ರಪ್ರಯಾಗಕ್ಕೆ ಹೋಗಿ ನರಭಕ್ಷಕನನ್ನು ಬೇಟೆಯಾಡಬೇಕೆಂದು ಮನಸ್ಸಿನಲ್ಲಿ ಕೊರೆಯುತಿತ್ತು. ಆದರೆ, ನೈನಿತಾಲ್ ಹಾಗೂ ದೂರದ ತಾಂಜೇನಿಯಾದಲ್ಲಿನ ಅವನ ಕೃಷಿ ಮತ್ತು ಎಸ್ಟೇಟ್ ವ್ಯವಹಾರಗಳು ಅವನಿಗೆ ಅಡ್ಡಿಯಾಗುತಿದ್ದವು. ಜೊತೆಗೆ ಚಳಿಗಾಲದ ಶೀತಗಾಳಿ ಅವನ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿತ್ತು. ಇವತ್ತು ಕೂಡ, ಸಂಜೆ ಆರರ ನಂತರ ನಾವು ನೈನಿತಾಲ್, ಅಲ್ಮೋರ. ರಾಣಿಖೇತ್, ರುದ್ರಪ್ರಯಾಗ ಅಥವಾ ಮನಾಲಿಯಲ್ಲಿ ಗಾಳಿಗೆ ಮೈಯೊಡ್ಡಿ ನಿಲ್ಲಲು ಸಾಧ್ಯವಾಗುವುದಿಲ್ಲ. ಇನ್ನು 85 ವರ್ಷಗಳ ಹಿಂದಿನ ಪರಿಸ್ಥಿತಿ ಹೇಗಿತ್ತು ನೀವೇ ಊಹಿಸಿ.

ಕಾರ್ಬೆಟ್‌ ರುದ್ರಪ್ರಯಾಗದಿಂದ ನೈನಿತಾಲ್‌ಗೆ ವಾಪಸ್ ಬಂದ ನಂತರ, ನರಭಕ್ಷಕ ಚಿರತೆ ರುದ್ರಪ್ರಯಾಗದ ಆಸುಪಾಸಿನ ಹಳ್ಳಿಗಳಲ್ಲಿ ಅಸಂಖ್ಯಾತ ಮೇಕೆ, ಹಸುಗಳು ಅಲ್ಲದೇ, ಹತ್ತು ಜನರನ್ನು ಬಲಿತೆಗೆದುಕೊಂಡಿತ್ತು. ಈ ಎಲ್ಲಾ ಸುದ್ಧಿಗಳು ಕಾರ್ಬೆಟ್‌ಗೆ ಇಬ್ಸ್‌ಟನ್ ಮೂಲಕ ತಲಪುತಿದ್ದವು. ಏಪ್ರಿಲ್ ತಿಂಗಳಿನಲ್ಲಿ ಬೇಸಿಗೆ ಆರಂಭವಾಗುತಿದ್ದಂತೆ, ಕಾಬೆಟ್ ತನ್ನ ಸಂಗಡಿಗರೊಂದಿಗೆ ಮತ್ತೆ ರುದ್ರಪ್ರಯಾಗಕ್ಕೆ ನರಭಕ್ಷಕನ ಬೇಟೆಗೆ ಹೊರಟ. ಈ ಬಾರಿ ಅವನು ಕಾಲ್ನಡಿಗೆ ಅಥವಾ ಕುದುರೆ ಸವಾರಿ ಬದಲಿಗೆ, ನೈನಿತಾಲ್ ಗಿರಿಧಾಮದ ಕೆಳಗಿರುವ ಕತಂಗೊಂಡಂನಿಂದ ರೈಲಿನಲ್ಲಿ ಹರಿದ್ವಾರ, ಕೋಟದ್ವಾರದ ಮೂಲಕ ರುದ್ರಪ್ರಯಾಗ ತಲುಪಿದನು ಇದರಿಂದಾಗಿ 8-10 ದಿನಗಳ ಕಾಲ್ನಡಿಗೆಯ ಪ್ರಯಾಣದ ಸಮಯ ಉಳಿತಾಯವಾಯಿತು.

ಕಾರ್ಬೆಟ್‌ ತನ್ನ ನೆಚ್ಚಿನ ಭಂಟ ಮಾಧೂಸಿಂಗ್ ಮತ್ತು ಸೇವಕರೊಡನೆ ರುದ್ರಪ್ರಯಾಗ ತಲುಪುವ ವೇಳೆಗೆ, ಛಾರ್ ಧಾಮ್ ಎಂದು ಕರೆಸಿಕೊಳ್ಳುವ ಹೃಷಿಕೇಶ, ಹರಿದ್ವಾರ, ಕೇದಾರನಾಥ, ಮತ್ತು ಬದರಿನಾಥ ಯಾತ್ರೆಗಾಗಿ ದೇಶಾದ್ಯಂತ ಭಕ್ತರು ಆಗಮಿಸುತಿದ್ದರು. ಎಲ್ಲಾ ಪಟ್ಟಣಗಳು ಮತ್ತು ಯಾತ್ರೆಯ ಹಾದಿಯಲ್ಲಿದ್ದ ಹಳ್ಳಿಗಳು ಭಕ್ತರಿಂದ ತುಂಬಿ ತುಳುಕುತಿದ್ದವು.. ನರಭಕ್ಷಕ ಚಿರತೆ ಯಾತ್ರೆಯ ಹಾದಿಯಲ್ಲಿರುವ ಹಳ್ಳಿಗಳನ್ನ ಗುರಿಯಾಗಿರಿಸಿಕೊಂಡು ನರಬಲಿ ತೆಗೆದುಕೊಳ್ಳುವುದನ್ನು ಆರಂಭಿಸಿತ್ತು.

ಎರಡನೇ ಬಾರಿ ರುದ್ರಪ್ರಯಾಗಕ್ಕೆ ಕಾರ್ಬೆಟ್‌ ಮತ್ತು ಅವನ ತಂಡ ಬಂದಾಗ ಜಿಲ್ಲಾಧಿಕಾರಿ ಇಬ್ಸ್‌ಟನ್ ಬಂದು ಇವರನ್ನು ಸೇರಿಕೊಳ್ಳಲಾಗಲಿಲ್ಲ. ಪೌರಿಯಲ್ಲಿ ಸರ್ಕಾರದ ಕೆಲಸದ ಒತ್ತಡದಿಂದಾಗಿ ವಾರ ಕಳೆದು ಪತ್ನಿ ಜೀನ್ ಬರುವುದಾಗಿ, ಸಂದೇಶ ಕಳಿಸಿ, ಕಾರ್ಬೆಟ್‌ ಮತ್ತು ಅವನ ತಂಡಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿದ್ದನು.

ಕಾರ್ಬೆಟ್‌ ಬರುವುದರೊಳಗೆ, ರುದ್ರಪ್ರಯಾಗದ ಸನೀಹದ ಗೋಲಬಾರಿ ಹಳ್ಳಿಯಲ್ಲಿ ನರಭಕ್ಷಕ ಮಧ್ಯವಯಸ್ಸಿನ ಹೆಂಗಸೊಬ್ಬಳನ್ನು ಬಲಿತೆಗೆದುಕೊಂಡಿತ್ತು. ಆ ನತದೃಷ್ಟ ಮಹಿಳೆ ಕತ್ತಲಾದ ಕಾರಣ ತನ್ನ ಹಳ್ಳಿಗೆ ಹಿಂತಿರುಗಲಾರದೆ, ಪಂಡಿತನ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಸೋಜಿಗವೆಂದರೆ, ಐವತ್ತಕ್ಕೂ ಪ್ರವಾಸಿಗರು ಮಲಗಿದ್ದ ವಿಶಾಲವಾದ ಜಾಗದಲ್ಲಿ ಎಲ್ಲರನ್ನು ಬಿಟ್ಟು ಈಕೆಯನ್ನು ಮಿಸುಕಾಡಲು ಆಸ್ಪದ ನೀಡದೆ, ಕೊಂದು ಹೊತ್ತೊಯ್ದು ತಿಂದು ಹಾಕಿತ್ತು.

ಈ ಘಟನೆಯ ಹಿಂದಿನ ಐದು ದಿನಗಳ ಹಿಂದೆ ಇದೇ ನರಭಕ್ಷ ಪಕ್ಕದ ಹಳ್ಳಿಯಲ್ಲಿ ರಾತ್ರಿಯ ವೇಳೆ ಜಾನುವಾರುಗಳಿಗೆ ಮೇವನ್ನು ಹಾಕುತಿದ್ದ ರೈತ ಮಹಿಳೆಯ ಮೇಲೆ ದಾಳಿ ಮಾಡಿತ್ತು. ಮೇವು ಕತ್ತರಿಸಲು ಆಕೆ ಕೈಯಲ್ಲಿ ಕುಡಗೋಲು ಇದ್ದ ಕಾರಣ ಅದರ ಮೂತಿಗೆ ಬಲವಾಗಿ ಹೊಡೆದು ತಪ್ಪಿಸಿಕೊಂಡಿದ್ದಳು. ಆದರೂ ಅದು ಅವಳ ಮೊಣಕಾಲಿನ ಹಿಂಬದಿಯ ಮಾಂಸ ಖಂಡವನ್ನು ಬಲವಾಗಿ ಕಚ್ಚಿ ಹಿಡಿದು ಗಾಯಗೋಳಿಸಿತ್ತು. ಇದೇ ರೀತಿ ನರಭಕ್ಷಕ ದಾಳಿಯಿಂದ ಬದುಕುಳಿದ ಇನ್ನೋರ್ವ ವ್ಯಕ್ತಿಯೆಂದರೆ, ಪಂಡಿತ. ಅವನು ಒಮ್ಮೆ ತನ್ನ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ಪ್ರವಾಸಿಗರ ಜೊತೆ ಮಲಗಿದ್ದಾಗ, ನಡುರಾತ್ರಿ ಉಸಿರು ಕಟ್ಟಿದ ಅನುಭವವಾಗಿ ಬಾಗಿಲು ತೆರೆದು ಹೊರಗಿನ ಹಜಾರಕ್ಕೆ ಬಂದ ತಕ್ಷಣ ಕಾದು ಕುಳಿತಿದ್ದ ನರಭಕ್ಷಕ ಇವನ ಮೇಲೆ ಎರಗಿತ್ತು. ಕಂಬದ ಬಳಿ ಅವನು ನಿಂತಿದ್ದರಿಂದ ಅದನ್ನು ಬಲವಾಗಿ ತಬ್ಬಿ ಹಿಡಿದು, ಚಿರತೆಯ ಹೊಟ್ಟೆಗೆ ಬಲವಾಗಿ ಒದ್ದು ಅದರ ಹಿಡಿತದಿಂದ ಬಿಡಿಸಿಕೊಂಡಿದ್ದ. ಆದರೆ, ಅದರ ಬಲವಾದ ಉಗುರುಗಳು ಅವನ ಕತ್ತನ್ನು ಸೀಳಿ, ಅನ್ನನಾಳ, ಮತ್ತು ಶ್ವಾಸನಾಳಗಳೆರಡನ್ನು ಘಾಸಿಗೊಳಿಸಿದ್ದವು. ರುದ್ರಪ್ರಯಾಗದ ಆಸ್ಪತ್ರೆಯಲ್ಲಿ ನಾಲ್ಕು ತಿಂಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದನು.

ಈ ಬಾರಿ ನರಭಕ್ಷಕ ಚಿರತೆಯನ್ನು ಅರಸಿಕೊಂಡು ಹಳ್ಳಿಗಳನ್ನು ಸುತ್ತುವ ಬದಲು. ಯಾತ್ರಿಕರ ಹಾದಿಯಲ್ಲಿ ಗಸ್ತು ತಿರುಗುತ್ತಿರುವ ಅದನ್ನು ಹಾದಿಯ ಸಮೀಪದಲ್ಲೇ ಮೇಕೆಯೊಂದನ್ನು ಕಟ್ಟಿ ಕಾಕಿ, ಮರದ ಮೇಲೆ ಕುಳಿತು ಬೇಟೆಯಾಡಬೇಕೆಂದು ಕಾರ್ಬೆಟ್‌ ತೀರ್ಮಾನಿಸಿದನು. ಅಷ್ಟರ ವೇಳೆಗೆ ರುದ್ರಪ್ರಯಾಗಕ್ಕೆ ಆಗಮಿಸಿದ ಇಬ್ಸ್‌ಟನ್ ದಂಪತಿಗಳು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದರು.

ಯಾತ್ರಿಕರ ಹಾದಿಯಲ್ಲಿ ಹೊಂಚು ಹಾಕಿ ಪ್ರತಿ ಐದು ದಿನಕ್ಕೊಮ್ಮೆ ಮನುಷ್ಯರನ್ನು ಬಲಿತೆಗೆದುಕೊಳ್ಳತಿದ್ದ ನರಭಕ್ಷಕನನ್ನು ಹೊಡೆಯಲು, ಗೋಲಬಾರಿ ಹಳ್ಳಿಯ ಪಂಡಿತನ ಮನೆಯ ಮೊಭಾಗದ ಹಳ್ಳದಲ್ಲಿರುವ ಕಾಡಿಗೆ ಸಂಪರ್ಕ ಕಲ್ಪಿಸುವ ಹಾದಿಯೇ ಸೂಕ್ತ ಎಂದು ಕಾರ್ಬೆಟ್‌ ನಿರ್ಧರಿಸಿದನು. ಅಲ್ಲೊಂದು ಮಾವಿನ ಮರವಿದ್ದ ಕಾರಣ ಆ ಸ್ಥಳವನ್ನು ಬೇಟೆಗಾಗಿ ಆಯ್ಕೆ ಮಾಡಿಕೊಂಡನು. ತನ್ನ ಸೇವಕರನ್ನು ಕರೆಸಿ ಮರದ ಮೇಲೆ ಮಚ್ಚಾನು ಕಟ್ಟಿಸಿ, ಪಕ್ಕದ ಹಳ್ಳಿಯೊಂದರಿಂದ ಮೇಕೆಯೊಂದನ್ನು ಖರೀದಿಸಿ ತಂದನು. ಸಾಮಾನ್ಯವಾಗಿ ಮನುಷ್ಯರ ಬೇಟೆಗಾಗಿ ಪಕ್ಕದ ಕಾಡಿನಿಂದ ಚಿರತೆ ಈ ಹಾದಿಯಲ್ಲಿ ಬರುತಿದ್ದುದನ್ನು ಅದರ ಹೆಜ್ಜೆಯ ಗುರುತುಗಳಿಂದ ಕಾರ್ಬೆಟ್‌ ದೃಢಪಡಿಸಿಕೊಂಡಿದ್ದ.

ಈ ಬಾರಿ ನರಭಕ್ಷಕನ ಬೇಟೆ ವಿಫಲವಾದರೆ, ಮತ್ತೇ ನಾನು ರುದ್ರಪ್ರಯಾಗಕ್ಕೆ ಬರಲಾರೆ ಎಂದು ಕಾರ್ಬೆಟ್‌ ಜಿಲ್ಲಾಧಿಕಾರಿ ಇಬ್ಸ್‌ಟನ್‌ಗೆ ತಿಳಿಸಿದ್ದ. ಇದರ ಸಲುವಾಗಿಯೇ ಅವನ ಹಲವಾರು ವ್ಯವಹಾರಗಳು ಕುಂಠಿತಗೊಂಡಿದ್ದವು. ತಾನು ತುರ್ತಾಗಿ ಬೇಟಿ ನೀಡಬೇಕಾಗಿದ್ದ ತಾಂಜೇನಿಯ ಪ್ರವಾಸವನ್ನು ಕಳೆದ ಮೂರು ತಿಂಗಳಿನಿಂದ ಮುಂದೂಡತ್ತಲೇ ಬಂದಿದ್ದನು.

ಕಾರ್ಬೆಟ್‌ ಮೇಕೆಯ ಕೊರಳಿಗೆ ಗಂಟೆಯನ್ನು ಕಟ್ಟಿ ಅದನ್ನು ಮಾವಿನ ಮರದ ಸಮೀಪ ಕೇವಲ 20 ಅಡಿ ದೂರದಲ್ಲಿ ಕಟ್ಟಿ ಹಾಕಿ ಪ್ರತಿದಿನ ಸಂಜೆ ಬಂದು ರಾತ್ರಿಯೆಲ್ಲಾ ನರಭಕ್ಷಕನಿಗೆ ಕಾಯಲು ಆರಂಭಿಸಿದ. ಮಾವಿನ ಮರ ಎತ್ತರವಿದ್ದ ಕಾರಣ ಚಿರತೆಗೆ ಕಾರ್ಬೆಟ್‌ನ ಸುಳಿವು ಸಿಗಲು ಸಾಧ್ಯವಿರಲಿಲ್ಲ. ಹೀಗೆ ಸತತ ಹತ್ತು ರಾತ್ರಿಗಳನ್ನು ಮರದ ಮೇಲೆ ಕುಳಿತು ಕಾದರೂ ಏನೂ ಫಲ ಸಿಗದ ಕಾರಣ ಅವನಲ್ಲಿ ಹತಾಶೆಯ ಮನೋಭಾವ ಮೋಡತೊಡಗಿತು. ಇನ್ನೆರೆಡು ದಿನ ಕಾದು, ಈ ನರಭಕ್ಷಕನ ಶಿಕಾರಿ ನನ್ನಿಂದ ಸಾಧ್ಯವಿಲ್ಲ ಎಂದು ತಿಳಿಸಿ, ಹೋಗೋಣವೆಂದು ಕಾರ್ಬೆಟ್‌ ಅಂತಿಮವಾಗಿ ದೃಢ ನಿಶ್ಚಯಕ್ಕೆ ಬಂದ. ಆದರೆ, ಅವನ ಕಾಯುವಿಕೆಯನ್ನು ನಿರಾಶೆಗೊಳಿಸದೆ, ಹನ್ನೊಂದನೇ ದಿನದ ರಾತ್ರಿ 9 ಗಂಟೆ ಸುಮಾರಿಗೆ ನರಭಕ್ಷಕ ಚಿರತೆ ಮಾವಿನ ಮರದ ಬಳಿ ಕಟ್ಟಿ ಹಾಕಿದ್ದ ಮೇಕೆಯ ಬಳಿ ಬಂತು. ಈ ಬಾರಿ ನೈನಿತಾಲ್‌ನಿಂದ ಖರೀದಿಸಿ ತಂದಿದ್ದ ನೇರವಾಗಿ ಬೆಳಕು ಚೆಲ್ಲುವ ಟಾರ್ಚ್ ಒಂದನ್ನು ಬಂದೂಕದ ನಳಿಕೆಗೆ ಕಾರ್ಬೆಟ್‌ ಜೋಡಿಸಿಕೊಂಡಿದ್ದ. ಕತ್ತಲೆಯಲ್ಲಿ ಮೈಯೆಲ್ಲವನ್ನು ಕಣ್ಣು ಮತ್ತು ಕಿವಿಯಾಗಿಸಿಕೊಂಡು ನೋಡತೊಗಿದ. ಮೇಕೆಯ ಸನೀಹ ಬಂದು ಕುಳಿತ ಚಿರತೆ ಅದರ ಮೇಲೆ ಎರಗುವ ಮುನ್ನ ಸುತ್ತ ಮುತ್ತ ಅಪಾಯವಿರಬಹುದೇ ಎಂಬಂತೆ ಸುತ್ತೆಲ್ಲಾ ನೋಡತೊಡಗಿತು. ಮೇಕೆ ಗಾಬರಿಯಿಂದ ಅಲುಗಾಡಿದ ಪರಿಣಾಮ ಅದರ ಕೊರಳಿದ್ದ ಗಂಟೆಯ ಶಬ್ಧ ಕಾರ್ಬೆಟ್‌ಗೆ ಕೇಳತೊಡಗಿತು. ತಕ್ಷಣವೆ ಟಾರ್ಚ್ ಬೆಳಕು ಬಿಟ್ಟ. ಮೇಕೆ ಮೇಲೆ ಎರಗಲು ಭೂಮಿಯ ಮೇಲೆ ಕವುಚಿ ಹಾಕಿ ಕುಳಿತ ನರಭಕ್ಷಕ ಬೆಳಕು ಬಂದ ಮಾವಿನ ಮರದತ್ತ ನೋಡತೊಡಗಿತು. ಕೂಡಲೇ ಕಾರ್ಬೆಟ್‌ ಗುಂಡು ಹಾರಿಸಿಬಿಟ್ಟ. ಆ ಕತ್ತಲೆಯಲ್ಲಿ ಏನು ಜರುಗಿದೆ ಎಂಬುದು ತಿಳಿಯದ ಸ್ಥಿತಿ. ಗುಂಡಿನ ಶಬ್ಧ ಕೇಳಿ, ಕೇವಲ ನೂರೈವತ್ತು ಅಡಿ ದೂರದಲ್ಲಿದ್ದ ಮನೆಯ ಬಾಗಿಲು ತೆರೆದು ಹೊರಬಂದ ಪಂಡಿತ ಜೋರಾಗಿ ಅರುಚುತ್ತಾ, ’ಸಾಹೇಬ್ ಗುಂಡಿಗೆ ಚಿರತೆ ಸಿಕ್ತಾ?’ ಎಂದು ಕೇಳಿದ. ಕಾರ್ಬೆಟ್‌ಗೆ ಆ ಕ್ಷಣದಲ್ಲಿ ಪಂಡಿತನ ಮೇಲೆ ಇನ್ನಿಲ್ಲದ ಸಿಟ್ಟು ಬಂದಿತು. ಆವನ ಕೂಗಿಗೆ ಕಾರ್ಬೆಟ್‌ ಉತ್ತರಿಸಲಿಲ್ಲ.

ಆಕಾಶದಲ್ಲಿ ಕತ್ತಲೆಯಿದ್ದ ಕಾರಣ ಚಂದ್ರನ ಬೆಳಕಿಗೆ ಬೆಳಗಿನ ಜಾವ ಮೂರು ಗಂಟೆಯವರೆಗೆ ಕಾಯಬೇಕಿತ್ತು. ಸ್ವಲ್ಪ ಸಮಯದ ನಂತರ ಮೇಕೆಯ ಗಂಟೆ ಸದ್ದು ಮತ್ತೇ ಕೇಳಿದ ನಂತರ ಕಾರ್ಬೆಟ್‌ಗೆ ಕುತೂಹಲ ಹೆಚ್ಚಾಗತೊಡಗಿತು. ಮರದ ಮೇಲಿನ ಭಾಗಕ್ಕೆ ಹೋಗಿ ಸುತ್ತೆಲ್ಲಾ ವೀಕ್ಷಿಸತೊಡಗಿದ. ಏನೂ ಕಾಣಲಿಲ್ಲ. ಬೆಳಗಿನ ಜಾವದವರೆಗೆ ಕಾಯೋಣವೆಂದುಕೊಂಡು ಮರದಮೇಲೆ ನಿದ್ರೆಗೆ ಮೊರೆಹೋದ.

ಬೆಳಗಿನ ಜಾವ ಬೆಳಕರಿದ ಮೇಲೆ ಮರದಿಂದ ಇಳಿದು ಬಂದ ಕಾರ್ಬೆಟ್‌ ಮೇಕೆಯ ಹತ್ತಿರ ಬಂದಾಗ ಅದು ಏನೂ ನಡೆದಿಲ್ಲವೆಂಬಂತೆ ತನ್ನ ಬಳಿ ಇದ್ದ ಸೊಪ್ಪನ್ನು ಮೇಯುತ್ತಲಿತ್ತು. ಆದರೆ, ಅದರ ಬಳಿ ನೆಲದ ಮೇಲೆ ರಕ್ತದ ಕೋಡಿಯೇ ಹರಿದಿತ್ತು. ಮುಂದೆ ಸುಮಾರು ಐವತ್ತು ಅಡಿ ದೂರದಲ್ಲಿ ನರಭಕ್ಷಕ ಸಾವಿಗೀಡಾಗಿ ನೆಲಕ್ಕೊಗಿತ್ತು. ಅದರ ಬಳಿ ಬಂದು ಸಾವನ್ನು ಖಚಿತಪಡಿಸಿಕೊಂಡ ಕಾರ್ಬೆಟ್‌ ತನ್ನ ಎರಡು ಕೈಗಳನ್ನು ಆಕಾಶಕ್ಕೆ ಎತ್ತಿ ಹಿಡಿದು ಜೋರಾಗಿ ಹುರ್ರಾ ಎನ್ನುತ್ತಾ ಒಮ್ಮೆ ಕುಪ್ಪಳಿಸಿಸಿಬಿಟ್ಟ. ಇಡೀ ಗೋಲಬಾರಿ ಗ್ರಾಮಸ್ಥರು ಮತ್ತು ಕಾರ್ಬೆಟ್‌ನ ಸಂಗಡಿಗರು ಓಡೋಡಿ ಬಂದರು. ನಾಲ್ಕು ಮೈಲಿ ದೂರದ ಪ್ರವಾಸಿ ಮಂದಿರದಲ್ಲಿದ್ದ ಇಬ್ಸ್‌ಟನ್‌ಗೆ ಸುದ್ಧಿ ತಲುಪಿದಾಕ್ಷಣ ಕುದುರೆ ಹತ್ತಿ ಸ್ಥಳಕ್ಕೆ ಬಂದ ಅವನು, ತಾನು ಈ ಪ್ರಾಂತ್ಯದ ಜಿಲ್ಲಾಧಿಕಾರಿ ಎಂಬುದನ್ನು ಮರೆತು ಚಿರತೆಯ ಕಳೇಬರದ ಸುತ್ತಾ ಸಂತೋಷದಿಂದ ನರ್ತಿಸಿದನು. ಹಳ್ಳಿಗರ ಪ್ರಶಂಸೆ, ಮತ್ತು ಕೃತಜ್ಙತೆಯ ನಡುವೆ ಮಾತು ಬಾರದ ಮೂಕನಂತೆ ಕುಳಿತಿದ್ದ ಕಾರ್ಬೆಟ್‌, ಅವರು ತಂದುಕೊಟ್ಟ ಚಹಾ ಹೀರುತ್ತಾ, ಉದ್ವೇಗ ತಡೆದುಕೊಳ್ಳಲಾಗದೆ, ಒಂದೇ ಸಮನೆ ಸಿಗರೇಟು ಸೇದತೊಡಗಿದ.

ಸುಮಾರು ಏಳು ಅಡಿ ಉದ್ದ, 180 ಕೆ.ಜಿ. ಗಿಂತಲೂ ಹೆಚ್ಚು ತೂಕವಿದ್ದ ವಯಸ್ಸಾದ ಗಂಡು ನರಭಕ್ಷಕ ಚಿರತೆಯನ್ನು ಕಾರ್ಬೆಟ್‌ ಮತ್ತು ಇಬ್ಸ್‌ಟನ್ ಇಬ್ಬರೂ ಪರಿಶೀಲಿಸತೊಡಗಿದರು. ಪ್ರಥಮ ಬಾರಿಗೆ ರುದ್ರಪ್ರಯಾಗದ ಸೇತುವೆ ಮೇಲೆ ಸಾಗಿ ಬರುತಿದ್ದಾಗ ಇಬ್ಬರು ಬ್ರಿಟಿಷ್ ಅಧಿಕಾರಿಗಳು ಹಾರಿಸಿದ್ದ ಗುಂಡಿನಿಂದಾಗಿ ಅದರ ಮುಂಗಾಲಿನ ಎರಡು ಉಗುರು ಕಿತ್ತು ಹೋಗಿದ್ದವು. ಅಲ್ಲದೇ, ಕಾರ್ಬೆಟ್‌ ನ ಗುಂಡಿನಿಂದ ಒಮ್ಮೆ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದ ಅದರ ಕುತ್ತಿಗೆ ಭಾಗದಲ್ಲಿ ಗುಂಡು ಸವರಿಕೊಂಡು ಹೋದ ಗಾಯದ ಗುರುತು ಹಾಗೇ ಇತ್ತು. ಸೈನೈಡ್ ಪಾಷಣವನ್ನು ತಿಂದು ಬದುಕುಳಿದ ಪ್ರಯುಕ್ತ ಅದರ ನಾಲಗೆ ಕಪ್ಪಾಗಿತ್ತು. ಇವೆಲ್ಲಾ ಆಧಾರಗಳಿಂದ ಇದೇ ರುದ್ರಪ್ರಯಾಗದ ನರಭಕ್ಷಕ ಎಂಬ ತೀರ್ಮಾನಕ್ಕೆ ಬರಲಾಯಿತು.

ಚಿರತೆಯನ್ನು ಮೆರವಣಿಗೆಯಲ್ಲಿ ರುದ್ರಪ್ರಯಾಗದ ಪ್ರವಾಸಿ ಮಂದಿರಕ್ಕೆ ಹೊತ್ತು ತರಲಾಯಿತು. ಸತತ ಎರಡು ದಿನಗಳ ಕಾಲ ಇಡೀ ಪ್ರಾಂತ್ಯದ ಜನರೆಲ್ಲಾ ಸತ್ತು ಮಲಗಿದ್ದ ಭಯಾನಕ ನರಭಕ್ಷಕನನ್ನು ಒಮ್ಮೆ ನೋಡಿ ಹಿಡಿಶಾಪ ಹಾಕುತ್ತಾ ಹೋದರೆ, ಇದರ ದೆಶೆಯಿಂದ ತಮ್ಮ ಜಾನುವಾರುಗಳು, ಹಾಗೂ ಸಂಬಂಧಿಕರನ್ನು ಕಳೆದುಕೊಂಡ ಜನ ಕಾರ್ಬೆಟ್‌ ನ ಕಾಲಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸುತಿದ್ದರು. ಈ ಸಂಭ್ರಮದ ನಡುವೆ ಬದುಕುಳಿದ ಮೇಕೆ ಕೂಡ ಜಿಮ್ ಕಾರ್ಬೆಟ್‌ನಷ್ಟೇ ಪ್ರಸಿದ್ದಿ ಪಡೆಯಿತು. ಸಕಾರದ ವತಿಯಿಂದ ಇಬ್ಸ್‌ಟನ್ ಅದರ ಕುತ್ತಿಗೆಗೆ ಒಂದು ತಾಮ್ರ ಮತ್ತು ಹಿತ್ತಾಳೆಯ ಪಟ್ಟಿಯೊಂದನ್ನು ಮಾಡಿಸಿ ಹಾಕಿದ. ಅದೃಷ್ಟದ ಮೇಕೆಯೆಂದು ರುದ್ರಪ್ರಯಾಗದ ಪ್ರಾಂತ್ಯದಲ್ಲಿ ಹೆಸರುವಾಸಿದ ಅದನ್ನು ಹಲವಾರು ಜನ ಬಂದು ನೋಡುತಿದ್ದರು. ಅದರ ಯಜಮಾನನಿಗೆ ಮತ್ತೇ ಉಡುಗರೆಯಾಗಿ ಕಾರ್ಬೆಟ್‌ ಮೇಕೆಯನ್ನು ನೀಡಿದ. ಅವನು ಅದು ಸಾಯುವವರೆಗೂ ಮಾಲೀಕ ಅತ್ಯಂತ ಜತನದಿಂದ ನೋಡಿಕೊಂಡಿದ್ದು ವಿಶೇಷ.

ಈ ಒಂದು ನರಭಕ್ಷಕ ಚಿರತೆಯ ಬೇಟೆಯಿಂದಾಗಿ ಕಾರ್ಬೆಟ್‌ ವಿಶ್ವ ಪ್ರಸಿದ್ಧನಾದ. ಅವನ ಸಂದರ್ಶನಕ್ಕಾಗಿ ಜಗತ್ತಿನ ದಿನಪತ್ರಿಕೆಗಳ ವರದಿಗಾರರು ಮುಗಿಬಿದ್ದರು. ಸರ್ಕಾರ ಕೂಡ ಅವನನ್ನು ಅತ್ಯಂತ ಗೌರವದಿಂದ ಸನ್ಮಾನಿಸಿತು. ಅಲ್ಲದೇ ಅವನು ರುದ್ರಪ್ರಯಾಗದ ಚಿರತೆಯನ್ನು ಕೊಂದ ಸ್ಥಳದಲ್ಲಿ ಒಂದು ಸ್ಮಾರಕವನ್ನು ನಿಲ್ಲಿಸಿತು. ಈಗಲೂ ಕೂಡ ರುದ್ರಪ್ರಯಾಗದ ಸಮೀಪದ ಗೋಲ್ಬಾರಿ ಹಳ್ಳಿಯಲ್ಲಿರುವ ಆ ಸ್ಮಾರಕಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬೇಟಿ ನೀಡುತ್ತಾರೆ.

(ಮುಂದುವರೆಯುವುದು)