Daily Archives: June 5, 2012

ಪದವೀಧರರ ಚುನಾವಣೆಯಲ್ಲಿ ನನ್ನ ಬೆಂಬಲ ಯಾರಿಗೆ ಮತ್ತು ಯಾಕಾಗಿ…

ಸ್ನೇಹಿತರೆ,

ನಾನು ಹಿಂದೊಮ್ಮೆ ಪದವೀಧರರ ಕ್ಷೇತ್ರದ ಚುನಾವಣೆ ಬಗ್ಗೆ ಮತ್ತು ಬೆಂಗಳೂರು ಪದವೀಧರರ ಕ್ಷೇತ್ರವನ್ನು ಪ್ತತಿನಿಧಿಸುತ್ತಿರುವ ರಾಮಚಂದ್ರ ಗೌಡ ಎಂಬ ಜನಪ್ರತಿನಿಧಿಯ ಬಗ್ಗೆ ಬರೆದಿದ್ದೆ. ನಿಮಗೆ ಗೊತ್ತಿರುವ ಹಾಗೆ ಇದೇ ಭಾನುವಾರದಂದು (ಜೂನ್ 10, 2012) ಈ ಚುನಾವಣೆ ಜರುಗಲಿದೆ. ಸದ್ಯ ನನಗೆ ಬೇರೆ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಗೊತ್ತಿಲ್ಲ. ಆದ್ದರಿಂದ ನಾನು ಮತ ಚಲಾಯಿಸಲಿರುವ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಮಾತ್ರ ಇಲ್ಲಿ ಪ್ರಸ್ತಾಪಿಸಿ, ನನ್ನ ಓಟು ಯಾರಿಗೆ ಎಂಬುದನ್ನೂ ಬರೆಯಬಯಸುತ್ತೇನೆ. ಇದನ್ನು ಓದುವ ಹಲವರಿಗಾದರೂ ಈ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಅಥವ ಭಿನ್ನ ಅಭಿಪ್ರಾಯ ಇರಬಹುದು. ಸಾಧ್ಯವಾದರೆ ಕಮೆಂಟ್‌ಗಳ ಮೂಲಕ ಹಂಚಿಕೊಳ್ಳಿ. ನಿಜವನ್ನು ತಿಳಿದುಕೊಳ್ಳುವುದು ಮತ್ತು ತಿದ್ದಿಕೊಳ್ಳುವುದು ನಮ್ಮೆಲ್ಲರ ಕರ್ತ್ಯವ್ಯ.

ಹಾಲಿ ಎಂಎಲ್‌ಸಿ ರಾಮಚಂದ್ರ ಗೌಡ ಈ ಬಾರಿಯೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ. ಆ ಪಕ್ಷದ ಬಗ್ಗೆಯಂತೂ ಹೇಳಲು ಏನೂ ಉಳಿದಿಲ್ಲ. ಇನ್ನು ಆ ಅಭ್ಯರ್ಥಿಯಂತೂ ಬಿಜೆಪಿಯಂತಹ ಬಿಜೆಪಿಯ ಭ್ರಷ್ಟ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಸಂಪುಟದಿಂದ ಕೈಬಿಡಲಾದ ವ್ಯಕ್ತಿ. ಅದು ಯಾವ ನ್ಯಾಯ-ನೀತಿ-ಜವಾಬ್ದಾರಿಯುತ ನಡವಳಿಕೆಯ ಆಧಾರದ ಮೇಲೆ ಇವರಿಗೆ ಮತಗಳು ಬೀಳುತ್ತವೊ, ತಿಳಿಯದು. ಪಕ್ಷವೂ ಅಸಹ್ಯ, ವ್ಯಕ್ತಿಯೂ ಅನರ್ಹ.

ಇನ್ನು ಇತರೆ ಮುಖ್ಯಪಕ್ಷಗಳಾದ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಗಳ ಅಭ್ಯರ್ಥಿಗಳು. ಬಿಜೆಪಿಯನ್ನೂ ಒಳಗೊಂಡಂತೆ ಈ ಮೂರೂ ಪಕ್ಷಗಳು ಎಷ್ಟು ನೀತಿಭ್ರಷ್ಟವಾಗಿವೆ ಎಂದರೆ ಇಡೀ ರಾಜ್ಯದಲ್ಲಿ ಇವರಿಗೆ ದುಡ್ಡಿರುವ. ಈಗಾಗಲೆ ಭ್ರಷ್ಟರಾಗಿರುವ ಅಥವ ಭ್ರಷ್ಟರಾಗಲು ಹೊರಟಿರುವ, ರಿಯಲ್-ಎಸ್ಟೇಟ್ ಅಥವ ಗಣಿ ಉದ್ದಿಮೆ ಅಥವ ಲಾಭಕೋರ ಶಿಕ್ಷಣ ಸಂಸ್ಥೆ ಅಥವ ಇನ್ನಿತರ ಭ್ರಷ್ಟಮಾರ್ಗಗಳಲ್ಲಿ ದುಡ್ಡು ಮಾಡಿರುವವರನ್ನು ಬಿಟ್ಟು ಬೇರೆಯವರಿಗೆ. ಅರ್ಹರಿಗೆ, ಹೋಗಲಿ ಕನಿಷ್ಟ ಸಜ್ಜನರಿಗಾದರೂ ಟಿಕೆಟ್ ಕೊಡುವ ಸ್ಥಿತಿಯಲ್ಲಿ ಅವು ಇಲ್ಲ. ಈ ಅಭ್ಯರ್ಥಿಗಳ ಫೋಟೋಗಳನ್ನು ನೋಡಿದರೆ ಸಾಕು, ಅವರ ಹಣೆ, ಕುತ್ತಿಗೆ, ಕೈ ಮತ್ತು ಕೈಬೆರಳುಗಳನ್ನು ನೋಡಿ, ಅಲ್ಲ್ರಿರುವ ಕುಂಕುಮ ಮತ್ತು ಚಿನ್ನವನ್ನು, ಅವರು ಧರಿಸುವ ನಾಯಿಚೈನುಗಳನ್ನು ಗಮನಿಸಿದರೆ ಸಾಕು ಅವರ ಇತಿಹಾಸ, ವರ್ತಮಾನ, ಮತ್ತು ಭವಿಷ್ಯ ಹೇಳಬಹುದು. ಹಾಗಾಗಿ ನಾನು ಕಾಂಗ್ರೆಸ್ ಮತ್ತು ಜನತಾದಳದ ಅಭ್ಯರ್ಥಿಗಳ ಬಗ್ಗೆ ಮಾತನಾಡಲೂ ಹೋಗುವುದಿಲ್ಲ. ಬೇಜವಾಬ್ದಾರಿಯುತ, ಘನತೆಯಿಲ್ಲದ ರಾಜಕೀಯ ಪಕ್ಷಗಳು ಮತ್ತು ಅವುಗಳ ಮುಖಂಡರು. ಸ್ವಾರ್ಥಸಾಧಕರು. ಅದಕ್ಕೆ ಸಮಾಜಸೇವೆಯ ಮುಖವಾಡ ಬೇರೆ. ಛೇ.

ಇನ್ನು ಈ ಚುನಾವಣೆಗೆ ನಿಂತಿರುವ ನನಗೆ ತಿಳಿದಿರುವ ಅಭ್ಯರ್ಥಿಗಳು ಮೂವರು. ಒಬ್ಬರು ಲೋಕಸತ್ತಾ ಪಕ್ಷದ ಅಶ್ವಿನ್ ಮಹೇಶ್, ಇನ್ನೊಬ್ಬರು ಎಡಪಕ್ಷಗಳ ಅಭ್ಯರ್ಥಿಯಾಗಿ ಕೆ.ಎಸ್. ಲಕ್ಷ್ಮಿ. ಮತ್ತೊಬ್ಬರು ಪಕ್ಷೇತರ ಅಭ್ಯರ್ಥಿಯಾಗಿರುವ ನಾಗಲಕ್ಷ್ಮಿ ಬಾಯಿ.

ಅಶ್ವಿನ್ ಮಹೇಶ್ ಬೆಂಗಳೂರಿನ IIM-B ಯಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ಅವರು ತಮ್ಮ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿರುವಂತೆ ನಗರದ ಬಿಗ್10 ಬಸ್ ವ್ಯವಸ್ಥೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಬೆಂಗಳೂರು ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳಲ್ಲಿ ಪಾಲ್ಗೊಂಡಿದ್ದಾರೆ, ತಿಳಿದುಕೊಂಡಿದ್ದಾರೆ. ಹಾಗೆಯೇ, India Against Corruption ಸಂಘಟನೆಯ ಬೆಂಗಳೂರು ನಾಯಕರಲ್ಲಿ ಪ್ರಮುಖರು. ಮತ್ತು ಲೋಕಸತ್ತಾ ಪಾರ್ಟಿಯ ಕರ್ನಾಟಕ ವಿಭಾಗದ ಮುಖಂಡರೂ ಹೌದು. ಯಾವುದೇ ಸಂದರ್ಭದಲ್ಲಿ ಬಿಜೆಪಿ-ಕಾಂಗ್ರೆಸ್-ಜನತಾದಳಗಳ ಅಭ್ಯರ್ಥಿಗಳಿಗಿಂತ ಯೋಗ್ಯವಾದ ವ್ಯಕ್ತಿ. ಆದರೆ, ಇವರು ಮತ್ತು ಇವರ ಹೋರಾಟಗಳು ಧೈರ್ಯವನ್ನು, ಕೆಚ್ಚನ್ನು, ಆತ್ಮವಿಶ್ವಾಸವನ್ನು ತುಂಬಬಲ್ಲವು ಎಂದು ಹೇಳಲಾಗುವುದಿಲ್ಲ. ಕರ್ನಾಟಕದಲ್ಲಿಯಂತೂ ಭ್ರಷ್ಟಾಚಾರದ ಬಗ್ಗೆ ಆಂದೋಳನ ರೂಪಿಸುವುದಕ್ಕೆ ಮತ್ತು ಅನೇಕ ಭ್ರಷ್ಟರನ್ನು ನ್ಯಾಯಾಲಯಕ್ಕೆ ಎಳೆಯುವುದಕ್ಕೆ “ಭ್ರಷ್ಟಾಚಾರದ ವಿರುದ್ದ ಭಾರತ” ಸಂಘಟನೆಗೆ ಮತ್ತು ಲೋಕಸತ್ತಾ ಪಕ್ಷಕ್ಕೆ ಅನೇಕ ಅವಕಾಶಗಳಿದ್ದವು. ಅಮೂರ್ತವಾದ “ಭ್ರಷ್ಟಾಚಾರ” ಎಂಬುದರ ವಿರುದ್ದ ಇವರ ೌಪವಾಸ ಮತ್ತು ಬಾಯಿಮಾತಿನ ಹೋರಾಟ ಯಾವುದೇ ಫಲ ನೀಡದು ಮತ್ತು ಅಷ್ಟೇನೂ ಪ್ರಾಮಾಣಿಕವಲ್ಲದ್ದು ಎಂಬ ಸಾಮಾನ್ಯ ಜ್ಞಾನ ಇವರಿಗೆ ಇದೆ ಎಂದು ಎನಿಸುವುದಿಲ್ಲ. ಇಲ್ಲಿಯವರೆಗೂ ಯಾರ ಹೆಸರನ್ನೂ ಹೇಳದೆ “ಕ್ಷೇಮ” ಹೋರಾಟ ರೂಪಿಸಿಕೊಂಡು ಬಂದವರು ಇವರು. ಯಾವುದೇ ಅಧಿಕಾರಸ್ಥ ರಾಜಕಾರಣಿಯ ವಿರುದ್ಧ, ಇಲ್ಲಿಯ ಆಡಳಿತ ಪಕ್ಷದ ಭ್ರಷ್ಟರ ವಿರುದ್ದ ಇವರು ಹೆಸರು ಹಿಡಿದು ಹೋರಾಟ ಮಾಡಿದ್ದು ಕಾಣಿಸುವುದಿಲ್ಲ. ಅದಕ್ಕೆ ಒಂದೇ ಒಂದು ಅಪವಾದ ಎಂದರೆ ಸಂತೋಷ್ ಹೆಗಡೆಯವರು ಮಾತ್ರ. ಆದರೆ ಅವರು ಆ ಸಂಘಟನೆಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿದ್ಡಾರೆ ಎಂದು ಹೇಳಲಾಗುವುದಿಲ್ಲ. ಹೀಗಾಗಿಯೇ, ಈ ಸಂಘಟನೆಯಲ್ಲಿ ತೊಡಗಿಕೊಂಡಿರುವವರ ಪ್ರಾಮಾಣಿಕತೆ ಪ್ರಶ್ನಾರ್ಹ. ಮತ್ತು ಅವರ ಜೀವನಾನುಭವವೂ.

ಇಷ್ಟೆಲ್ಲ ಇದ್ದರೂ, ರಾಜಕೀಯ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸುವ ಅಹಂಕಾರಿ ಸೋಫಿಸ್ಟಿಕೇಟೆಡ್ ಮೇಲ್ವರ್ಗದ ಮತ್ತು  ಐಟಿ-ಬಿಟಿ ಉದ್ಯಮದ ಜನರನ್ನು ಈ ಪದವೀಧರ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಅಶ್ವಿನ್ ಮಹೇಶ್ ಮತ್ತು ಅವರ ಸಂಗಡಿಗರು ಬಹಳ ಪ್ರಯತ್ನಿಸುತ್ತಿದ್ದಾರೆ. ಪದವೀಧರ ಕ್ಷೇತ್ರದ ಮತದಾರನಾಗಿ ನೊಂದಾಯಿಸಿಕೊಳ್ಳುವ ಪ್ರಕ್ರಿಯೆಯನ್ನು ಸರಳ ಮಾಡುವ ವಿಷಯಕ್ಕೆ ಇವರು ಹೈಕೋರ್ಟಿಗೂ ಹೋಗಿದ್ದರು. ಮೊದಲೇ ಹೇಳಿದಂತೆ, ಮೂರೂ ದೊಡ್ಡ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ಇವರು ಉತ್ತಮರು. ಇವರಿಗೆ ಕೊಡುವ ಓಟು ಅನರ್ಹನಿಗೆ ಕೊಡುವ ಓಟು ಎಂದು ಹೇಳಲಾಗದು.

ಕೆ.ಜಿ. ನಾಗಲಕ್ಷ್ಮಿ ಬಾಯಿ ಪತ್ರಕರ್ತೆ ಮತ್ತು ಹೋರಾಟಗಾರ್ತಿ, ಎರಡು-ಮೂರು ಪದವಿಗಳನ್ನು ಪಡೆದಿರುವ ಇವರು ಲಂಬಾಣಿ ತಾಂಡಾಗಳಲ್ಲಿ ಮಕ್ಕಳ ಮಾರಾಟ ಜಾಲ, ಲಿಂಗಪತ್ತೆ-ಭ್ರೂಣಹತ್ಯೆ, ಇತ್ಯಾದಿ ವಿಷಯಗಳ ಬಗ್ಗೆ ಪುಸ್ತಕ ಬರೆದಿದ್ದಾರೆ. ರಾಜಕೀಯ ನಾಯಕರ ಕೃಪಾಕಟಾಕ್ಷದಿಂದ ಜಿ-ಕ್ಯಾಟೆಗರಿ ಎಂಬ ಅನೈತಿಕ ಮಾರ್ಗದಿಂದ ಸೈಟು ಹೊಡೆದುಕೊಂಡಿದ್ದವರ ವಿರುದ್ಧ ನ್ಯಾಯಾಲಯಕ್ಕೂ ಹೋಗಿ ಹಲವಾರು ಸೈಟುಗಳ ಅಕ್ರಮ ನೀಡಿಕೆಯನ್ನು ರದ್ದು ಮಾಡಿಸಿ ಸರ್ಕಾರಕ್ಕೆ ಸುಮಾರು 20 ಕೋಟಿ ಆಸ್ತಿ ಉಳಿಸಿಕೊಟ್ಟಿದ್ದಾರೆ. ಹಾಲಿ ಮುಖ್ಯಮಂತ್ರಿ ಸದಾನಂದ ಗೌಡರು ತಮ್ಮ ಮನೆ ನಿರ್ಮಾಣದಲ್ಲಿ ಅಕ್ರಮಗಳೆಸಗಿರುವುದರ ವಿರುದ್ದ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾರೆ. ಗೃಹ ಸಚಿವ ಅಶೋಕರ ವಿರುದ್ಧ ನ್ಯಾಯಾಲಯದಲ್ಲಿ ಹೂಡಲಾಗಿರುವ ಮೊಕದ್ದಮೆಯ ಹಿಂದೆ ಇವರೂ ಇದ್ದಾರೆ. ಈ ಮಟ್ಟದಲ್ಲಿ ಕರ್ನಾಟಕದಲ್ಲಿ ಪ್ರಭಾವಿ ಮತ್ತು ಬಲಿಷ್ಟರನ್ನು ನೇರವಾಗಿ ಎದುರು ಹಾಕಿಕೊಂಡಿರುವ ಇನ್ನೊಬ್ಬ ಹೆಣ್ಣುಮಗಳು ಈಗ ಸದ್ಯಕ್ಕೆ ಕರ್ನಾಟಕದಲ್ಲಿ ಇಲ್ಲ ಎಂದು ಹೇಳಬೇಕು.

ಆದರೆ, ನಾಗಲಕ್ಷ್ಮಿ ಬಾಯಿಯವರು ಪಕ್ಷೇತರರಾಗಿ ನಿಲ್ಲುವುದಕ್ಕಿಂತ ತಮ್ಮ ಧ್ಯೇಯ-ನಿಲುವು-ಸಾಮಾಜಿಕ ಕಾಳಜಿಗಳಿಗೆ ಹತ್ತಿರವಿರುವ ಪಕ್ಷಕ್ಕೆ ಸೇರಿಕೊಂಡು, ಅಲ್ಲಿ ಕಾರ್ಯಕರ್ತೆಯಾಗಿ ದುಡಿದು, ಅಂತಹ ಪಕ್ಷದಿಂದ ಚುನಾವಣೆಗೆ ನಿಲ್ಲುವುದು ಸೂಕ್ತ. ಪಕ್ಷೇತರರಾಗಿ ನಿಂತು ಗೆಲ್ಲುವುದು ಈ ಸಂದರ್ಭದಲ್ಲಿ ಕಷ್ಟವಷ್ಟೇ ಅಲ್ಲ, ಇವರ ಸಾಮಾಜಿಕ ಮತ್ತು ರಾಜಕೀಯ ನಿಲುವುಗಳೇನು ಎಂದು ಮತದಾರರಿಗೆ ತಿಳಿಯಪಡಿಸುವುದೂ ಕಷ್ಟ. ಆದರೂ, ಇವರೂ ಸಹ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಪ್ರಚಾರ ಕೈಗೊಂಡಿದ್ಡಾರೆ. ಇವರೂ ಸಹ ಮೂರೂ ದೊಡ್ಡ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ಉತ್ತಮರು. ಇವರಿಗೆ ಕೊಡುವ ಓಟು ಸಹ ಅನರ್ಹನಿಗೆ ಕೊಡುವ ಓಟು ಎಂದು ಹೇಳಲಾಗದು.

ಕೆ.ಎಸ್. ಲಕ್ಷ್ಮಿಯವರು ಚಳವಳಿ ಮತ್ತು ಸಂಘಟನೆಗಳಿಂದ ಬಂದವರು. ಈ ಮೊದಲು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೆನೆಟ್ ಸದಸ್ಯರಾಗಿ ಚುನಾಯಿತರಾಗಿ ಕೆಲಸ ನಿರ್ವಹಿಸಿರುತ್ತಾರೆ. ಕಮ್ಯುನಿಸ್ಟ್ ಪಕ್ಷದ ಅಂಗಸಂಸ್ಥೆಯಾದ SFI ನಲ್ಲಿ ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಈಗ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ಡಾರೆ.

ನಾನು ಹೇಗೆ ಕೋಮುವಾದಿಯಾಗಲಾರೆನೋ, ಹಾಗೆಯೇ ಕಮ್ಯುನಿಸ್ಟನೂ ಆಗಲಾರೆ. ಆದರೆ, ನಮ್ಮ ದೇಶದ ಕಮ್ಯುನಿಸ್ಟರ ಅನೇಕ ವಿಚಾರಗಳಿಗೆ (ಆರ್ಥಿಕ ಮತ್ತು ಅವರ ಪಕ್ಷವ್ಯವಸ್ಥೆಯ ಹೊರತಾಗಿ) ನನ್ನ ಸಹಮತವಿದೆ. ಅವರು ಬಯಸುವ ಸಮಾನತೆಯನ್ನು ನಾನೂ ಬೆಂಬಲಿಸುತ್ತೇನೆ. ಆ ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ಪ್ರಾಮಾಣಿಕತೆ ಮತ್ತು ಸರಳ ಜೀವನವನ್ನು, ತುಡಿತವನ್ನು, ಪ್ರಶಂಸಿಸುತ್ತೇನೆ. ಕರ್ನಾಟಕದ ಈಗಿನ ವರ್ತಮಾನದಲ್ಲಿ ಒಂದು ಪ್ರಬಲ ರಾಜಕೀಯ ಹೋರಾಟ ರೂಪಿಸುವುದಕ್ಕೆ ಕಮ್ಯುನಿಸ್ಟರಿಗೆ ಅವಕಾಶವಿದೆ. ಆ ಪಕ್ಷಗಳಲ್ಲಿ ಭ್ರಷ್ಟರಾಗದ, ತೀವ್ರನಿಷ್ಠೆಯಿಂದ ದುಡಿಯುವ, ವೈಯಕ್ತಿಕ ಕಷ್ಟಗಳನ್ನು ಮತ್ತು ಆಕಾಂಕ್ಷೆಗಳನ್ನು ಬದಿಗೊತ್ತಿ ಕೆಲಸ ಮಾಡುವ ನಾಯಕ-ಕಾರ್ಯಕರ್ತರ ದೊಡ್ಡ ಗುಂಪೇ ಇದೆ. ಆದರೂ ಈ ಗುಂಪು ಒಂದು ಬಲವಾದ ಸೈದ್ಧಾಂತಿಕ ಹೋರಾಟವನ್ನು ಕರ್ನಾಟಕದಲ್ಲಿ ರೂಪಿಸುವಲ್ಲಿ, ಆ ಮೂಲಕ ಪರ್ಯಾಯವೊಂದನ್ನು ಸೃಷ್ಟಿಸುವಲ್ಲಿ ವಿಫಲರಾಗಿದ್ದ್ರಾರೆ. ಹೆಚ್ಚುಹೆಚ್ಚು ಅಕಡೆಮಿಕ್ ಭಾಷೆಯನ್ನೇ ಮಾತನಾಡುತ್ತ, ಚಿಂತನೆಯನ್ನೇ ಹೇಳುತ್ತ, ಎಲ್ಲರನ್ನೂ ಒಳಗೊಂಡ ಒಂದು ರಾಜಕೀಯ ಪಕ್ಷವನ್ನು ಕಟ್ಟುವ ಕಾರ್ಯಕ್ರಮಗಳಿಗಿಂತ ಕಾರ್ಮಿಕ ಸಂಘಟನೆಗಳನ್ನು ಕಟ್ಟುವ ವಿಚಾರಕ್ಕೇ ಹೆಚ್ಚು ಒತ್ತು ನೀಡಿದ್ದಾರೆ ಎನಿಸುತ್ತದೆ. ಇವರೂ ಸಹ ಕರ್ನಾಟಕದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ರೂಪಿಸುವಲ್ಲಿ ಮತ್ತು ಭ್ರಷ್ಟರನ್ನು ನ್ಯಾಯಾಲಯಕ್ಕೆ ಎಳೆಯುವಂತಹ ಕಾರ್ಯ ಮಾಡುವಲ್ಲಿ ವಿಫಲರಾಗಿದ್ದಾರೆ; ಹಲವಾರು ಸಂಘಟನೆಗಳ ಬಲವಿದ್ದೂ.

ಕೆ.ಎಸ್. ಲಕ್ಷ್ಮಿಯವರು ವಿದ್ಯಾರ್ಥಿಯಾಗಿದ್ದಾಗಿನಿಂದ ಹಿಡಿದು ಸೆನೆಟ್ ಸದಸ್ಯರಾಗುವ ತನಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತ ಬಂದವರು. ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರು. ಮತ್ತು ಕಮ್ಯುನಿಸ್ಟ್ ಪಕ್ಷದವರಾದ್ದರಿಂದ ಸಹಜವಾಗಿಯೇ ವಿಚಾರವಂತರೂ ಸಹ. ಸೈದ್ಧಾಂತಿಕ ನೆಲೆಯಿಂದ ಬಂದವರಾಗಿರುವುದರಿಂದ ವಿಧಾನಪರಿಷತ್‌ನಲ್ಲಿ ಗಟ್ಟಿಯಾಗಿ ದನಿಯೆತ್ತಿ ವಿಷಯ ಮಂಡಿಸಬಲ್ಲವರು ಮತ್ತು ಆ ಸದನ ಬಯಸುವಂತೆ ಉತ್ತಮ ನೀತಿನಿರೂಪಕರಾಗಬಲ್ಲರು ಎಂದು ನಾನು ಭಾವಿಸುತ್ತೇನೆ.

ಹಾಗಾಗಿ ಕೆ.ಎಸ್. ಲಕ್ಷ್ಮಿಯವರಿಗೆ ಕೊಡುವ ಓಟು ಅರ್ಹರಿಗೆ ಕೊಡುವ ಓಟು ಎಂದು ನಾನು ಭಾವಿಸುತ್ತೇನೆ. ಈ ಚುನಾವಣೆಯಲ್ಲಿ ನನ್ನ ಮತ ಮತ್ತು ಬೆಂಬಲ ಇವರಿಗಿದೆ.

– ರವಿ ಕೃಷ್ಣಾರೆಡ್ಡಿ


ಮೊದಲೇ ಹೇಳಿದಂತೆ ನಮ್ಮ ವೆಬ್‌ಸೈಟಿನ ಓದುಗರು ತಮ್ಮ ಒಲವು ಮತ್ತು ಕಾರಣಗಳನ್ನು ಮತ್ತು ನನ್ನ ವಿಶ್ಲೇಷಣೆಯಲ್ಲಿನ ತಪ್ಪುಗಳನ್ನು ಲೇಖನದ ಮೂಲಕ ಅಥವ ಕೆಳಗೆ ಅಭಿಪ್ರಾಯಗಳ ಮೂಲಕ ದಾಖಲಿಸಬಹುದು.

ಎಲ್ಲರೂ ಜಾತಿಗೆ ಜೋತುಬಿದ್ದರೆ ಖರೆ ಖರೆ ಸಮರ್ಥರ ಪಾಡೇನು?


-ಡಾ.ಎಸ್.ಬಿ. ಜೋಗುರ  


 

ಭಾರತೀಯ ಸಾಮಾಜಿಕ ಸ್ತರವಿನ್ಯಾಸದಲ್ಲಿ ಸಂಚಲನೆಯ ಸಾಧನವಾಗಿ ಜಾತಿ ಮುಂಚಿನಿಂದಲೂ ಕೆಲಸ ಮಾಡುವುದಿದೆ. ಈ ಬಗೆಯ ಸಾಮಾಜಿಕ ಸಂಚಲನೆಯಲ್ಲಿ ಇಡಿಯಾಗಿ ಎರಡು ರೂಪಗಳಿವೆ. ಒಂದು ಲಂಬರೂಪದ ಸಂಚಲನೆ, ಮತ್ತೊಂದು ಸಮಾನಾಂತರ ಸಂಚಲನೆ. ಲಂಬರೂಪದ ಸಂಚಲನೆಯಲ್ಲಿಯೇ ಮತ್ತೆರಡು ಪ್ರಬೇಧಗಳಿವೆ ಮೇಲ್ಮುಖ ಹಾಗೂ ಕೆಳಮುಖ ಸಂಚಲನೆಗಳು. ಜಾತಿಯಲ್ಲಿ ಯಾವುದೇ ಬಗೆಯ ಸ್ಥಿತ್ಯಂತರಗಳಾದರೂ ಅದು ಕೇವಲ ಸಮಾನಾಂತರ ಸಂಚಲನೆಗೆ ಎಡೆ ಮಾಡಿಕೊಡುತ್ತದೆಯೇ ಹೊರತು, ಲಂಬರೂಪದ ಸಂಚಲನೆಗೆ ಅವಕಾಶವೀಯುವುದಿಲ್ಲ. ಊಟೋಪಚಾರದಲ್ಲಿ, ವಿವಾಹದಲ್ಲಿ, ಉದ್ಯೋಗದಲ್ಲಿ, ಧಾರ್ಮಿಕ ಆಚರಣೆಗಳಲ್ಲಿ, ಸಾಮಾಜಿಕ ಸಂಪರ್ಕದಲ್ಲಿ ಹೀಗೆ ಇನ್ನೂ ಅನೇಕ ಬಗೆಯ ಸಂಗತಿಗಳಲ್ಲಿ ಅಸಮಾನತೆಯನ್ನು ಪ್ರತಿಪಾದಿಸುವ, ಅದನ್ನೇ ಜಾತಿಯ ಆಚರಣೆ ಎಂದು ಒಪ್ಪಿಕೊಳ್ಳುವ ಮೂಲಕ ಜಾತಿಯೊಂದು ನಿರ್ಬಂಧಿತ ಸಂಸ್ಥೆಯಾಗಿ ಉಳಿದಿರುವುದಿದೆ.

ಮದ್ಯಕಾಲೀನ ಸಮಾಜದಲ್ಲಿ ಒಂದು ಸಾಮಾಜಿಕ ಅನಿಷ್ಟವಾಗಿದ್ದ ಜಾತಿಪದ್ಧತಿ ಇಂದು ಇಷ್ಟವಾಗಿ ಆಯಾ ಜಾತಿಯ ಸತ್ತೆ ಇಲ್ಲವೇ ಬಲ ಪ್ರದರ್ಶನದ ಕುರುಹಾಗಿ ಕೆಲಸ ಮಾಡುತ್ತಿದೆ. ರಾಜಕಾರಣದ ಹಿಂದಿರುವ ಬಹು ಮುಖ್ಯವಾದ ಕಾರಣವಾಗಿ ಜಾತಿ ಕೆಲಸ ಮಾಡುತ್ತಿದೆ. ಜಾತಿ ಬಿಟ್ಟರೆ ಕೆಟ್ಟೇನು ಎನ್ನುವ ಹಾಗೆ ರಾಜಕೀಯ ನಾಯಕರುಗಳು ತನ್ನ ಹಿಂದೆ ತನ್ನ ಜಾತಿಯ ಜನರಿದ್ದಾರೆ ಎನ್ನುವ ಜೊತೆಗೆ ಇತರೆ ಜಾತಿಯವರೂ ತನಗೆ ಬೆಂಬಲವಿದ್ದಾರೆ ಎಂದು ಹೇಳುವ ಮೂಲಕವೇ ಟಿಕೆಟ್ ಗಿಟ್ಟಿಸುವ ಸಂದರ್ಭದಲ್ಲಿ ತಾತ್ವಿಕ ಬದ್ಧತೆಯನ್ನಿಟ್ಟುಕೊಂಡು ರಾಜಕಾರಣ ಮಾಡುವವರನ್ನು ಅದಾಗಲೇ ಮಣ್ಣು ಕೊಟ್ಟಾಗಿದೆ. ಜಾತಿಯ ವಾಸನೆ ಈಗೀಗ ತೀರಾ ದಟ್ಟವಾಗತೊಡಗಿದೆ. ಸಾರ್ವಜನಿಕ ವಲಯದ ಮೂಲೆ ಮೂಲೆಯನ್ನೂ ಸ್ಪರ್ಷಿಸಿದ ಈ ಜಾತಿ ಎಲ್ಲಾ ಕಡೆ ತನ್ನ ಸರ್ವವ್ಯಾಪಕತೆಯನ್ನು ಮೆರೆಯುವ ಮೂಲಕ ಸಮರ್ಥರಿಗೂ ಅನ್ಯಾಯವಾಗುವ ಕೆಲಸವನ್ನು ಮಾಡುತ್ತಲೇ ಮುನ್ನಡೆದಿದೆ.

ಇತ್ತೀಚಿನ ದಿನಗಳಲ್ಲಿ ತನ್ನ ಜಾತಿಯವರಿಗೆ ಅನ್ಯಾಯವಾಗಿದೆ, ತನ್ನ ಜಾತಿಯವರನ್ನು ನಿರ್ಲಕ್ಷಿಸಲಾಗಿದೆ ಎನ್ನುವ ಕೂಗು ಮತ್ತೆ ಮತ್ತೆ ಕೇಳಿಬರುತ್ತಿದೆ. ಈ ದೇಶದಲ್ಲಿ ಮೂರುಸಾವಿರಕ್ಕಿಂತಲೂ ಹೆಚ್ಚು ಜಾತಿ ಉಪಜಾತಿಗಳಿವೆ. ಪ್ರತಿಯೊಂದು ಜಾತಿಯೂ ತನ್ನದೇಯಾದ ಒಂದು ಪುಟ್ಟ ಪ್ರಪಂಚವನ್ನು ಸ್ಥಾಪಿಸಿಕೊಂಡು ನಡುಗಡ್ಡೆಗಳ ಹಾಗೆ ಗೋಚರವಾಗುವ ಜೊತೆಗೆ, ರಾಷ್ಟ್ರೀಯ ಐಕ್ಯತೆಯಲ್ಲೂ ಪರೋಕ್ಷವಾಗಿ ಗಂಡಾಂತರಕಾರಿಯಾಗುವ ಕೆಲಸವನ್ನು ಮಾಡುತ್ತಿವೆ. ಈ ಸಾವಿರಾರು ಸಂಖ್ಯೆಯಲ್ಲಿರುವ ಪ್ರತಿಯೊಂದು ಜಾತಿಯೂ ತನ್ನ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ಕೂಗಲು ಶುರು ಮಾಡಿದರೆ ನಿಜವಾಗಿಯೂ ಅನ್ಯಾಯವಾಗಿ ಕೂಗದೇ ಇರುವವರನ್ನು ಕೇಳುವವರು ಯಾರು? ಒಂದು ರಾಷ್ಟ್ರದ ಮಾನವ ಸಂಪನ್ಮೂಲದ ಶಕ್ತಿ ಸಾಮರ್ಥ್ಯಗಳು ನಿರ್ಣಯವಾಗಬೇಕಾದುದು ಹೀಗೆ ಆಯಾ ಜಾತಿಯವರು ತನ್ನ ಜಾತಿಯನ್ನು ಮುಂದಿಟ್ಟುಕೊಂಡು ಮಾಡುವ ಶಿಫಾರಸುಗಳ ಮೂಲಕವಲ್ಲ. ಬದಲಾಗಿ ಯೋಗ್ಯ ವ್ಯಕ್ತಿಗೆ ಯೋಗ್ಯ ಸ್ಥಾನ ಎನ್ನುವ ಮೂಲಕ. ನಾನು [ಅ] ಎನ್ನುವ ಜಾತಿಗೆ ಸಂಬಂಧಿಸಿದವನು ಹಾಗಾಗಿಯೇ ನನಗೆ ಈ ಸ್ಥಾನಮಾನಗಳು ಸಿಗಬೇಕು. ನಾನು [ಬ] ಎನ್ನುವ ಜಾತಿಗೆ ಸಂಬಂಧಿಸಿದವ, ಮತ್ತೊಬ್ಬ [ಸಿ] ಅನ್ನುವ ಜಾತಿಗೆ ಸಂಬಂಧಿಸಿದವ, ಇದು ಹಾಗೇ ಮುಂದುವರೆಯುತ್ತದೆ. ಇದು ನಿನ್ನ ಜಾತಿಯನ್ನು ಮುಂದೆ ಮಾಡಿಕೊಂಡು ಕೇಳುವ ಹಕ್ಕಾಯಿತು. ಅಷ್ಟಕ್ಕೂ ನಿನ್ನಲ್ಲಿರುವ ಸತ್ವವಾದರೂ ಯಾವುದು? ಬರೀ ಅಮೂರ್ತವಾದ ಜಾತಿಯೇ? ಹೀಗೆ ಪ್ರತಿಯೊಂದು ಜಾತಿಯೂ ತನ್ನ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ಕೂಗಲು ಆರಂಭಿಸಿದರೆ ಆ ಅನ್ಯಾಯ ಪದಕ್ಕೆ ಅರ್ಥವೇ ಇರುವುದಿಲ್ಲ.

ಚಾರಿತ್ರಿಕವಾಗಿ ಸಾವಿರಾರು ವರ್ಷಗಳ ಕಾಲ ಶೋಷಣೆಯನ್ನು ಅನುಭವಿಸಿದ ದಮನಿತ ಜಾತಿಗಳು ತಮಗಾದ ಅನ್ಯಾಯವನ್ನು ಸರಿಪಡಿಸುವಂತೆ ಕೇಳುವಲ್ಲಿ ಒಂದು ತಥ್ಯವಿದೆ. ಸಾವಿರಾರು ವರ್ಷಗಳಿಂದಲೂ ಎಲ್ಲ ಬಗೆಯ ಗೌರವಾರ್ಹ ಅಂತಸ್ತು ಮತ್ತು ಸೌಲಭ್ಯಗಳನ್ನು ಅನುಭಸಿಯೂ ತನ್ನ ಜಾತಿಗೂ ಅನ್ಯಾಯವಾಗಿದೆ ಎಂದು ಕೂಗುವಲ್ಲಿ ತುಂಬಾ ವ್ಯತ್ಯಾಸಗಳಿವೆ. ಹಾಗೆಂದು ಜಾತಿಯನ್ನಿಟ್ಟುಕೊಂಡು ಸಾಮರ್ಥ್ಯವನ್ನು ಸರಿದೂಗಿಸಿಕೊಳ್ಳುವ ಕ್ರಮ ಯಾವ ಕಾಲಕ್ಕೂ ಸರಿಯಲ್ಲ. ಯಾಕೆಂದರೆ ಯಾವ ಕಾಲಕ್ಕೂ ಖರೆ ಖರೆ ಸಮರ್ಥರಾದವರಿಗೆ ಅನ್ಯಾಯವಾಗಬಾರದು. ಅದು ಜಾತಿ, ಭಾಷೆ, ಜನಾಂಗ ಯಾವುದರ ಮೂಲಕವಾದರೂ ಇರಬಹುದು. ಒಂದು ರಾಷ್ಟ್ರದ ಮಾನವ ಸಂಪನ್ಮೂಲ ಅದು ಹೊಂದಿರುವ ತನ್ನ ಅಂತ:ಸತ್ವದ ಮೂಲಕ ಪ್ರಜ್ವಲಿಸಬೇಕೇ ಹೊರತು ಯಾರೋ ಒಬ್ಬ ಜಾತಿ ಪ್ರತಿನಿಧಿಯ ಹಂಬಲದಿಂದಾಗಲೀ, ಹುನ್ನಾರದಿಂದಾಗಲೀ ಅಲ್ಲ.

ಇಂದು ಎಲ್ಲ ಜಾತಿಗಳಲ್ಲಿ ಸಮರ್ಥರಿದ್ದಾರೆ. ಅವರಿಗಾಗಿ ಆಯಾ ಜಾತಿಯ ಪ್ರತಿನಿಧಿಗಳು ತನ್ನ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ಕೂಗುವ ಅವಶ್ಯಕತೆಯಿಲ್ಲ. ಹಾಗೆಯೇ ತನ್ನ ಜಾತಿಯಲ್ಲಿರುವ ಅಸಮರ್ಥರ ಬಗೆಗೂ ಆತ ಕೂಗುವಂತಿಲ್ಲ. ಯಾಕೆಂದರೆ ಅವರ ಅಸಮರ್ಥತೆತನ್ನು ಸಮರ್ಥವಾಗಿ ತುಂಬುವ ಸಾಧನಗಳನ್ನು ಸೃಷ್ಟಿಸುವ ದಿಶೆಯಲ್ಲಿ ಯೋಜಿಸಬೇಕು. ಅನೇಕ ಸಂದರ್ಭಗಳಲ್ಲಿ ಒಬ್ಬ ಪ್ರತಿಭಾವಂತನಿಗೆ ಈ ಜಾತಿಯ ತಾರತ್ಯಮ ಧೋರಣೆಯಿಂದಾಗಿ ಅನ್ಯಾಯವಾಗುವುದಿದೆ. ಆತ ನಿಜವಾಗಿಯೂ ಸಮರ್ಥ, ಅವಕಾಶ ಸಿಕ್ಕರೆ ಮಹತ್ತರವಾದುದನ್ನು ಮಾಡಿ ತೋರುವ ಎಲ್ಲ ಗುಣ-ಸಾಮರ್ಥ್ಯಗಳೂ ಅವನಲ್ಲಿವೆ. ದುರಂತವೆಂದರೆ ಆತ ಯಾವುದೋ ಒಂದು ಜಾತಿಯವರ ತಾತ್ಸಾರಕ್ಕೆ ಒಳಗಾಗಿ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲೇ ಉಳಿಯುತ್ತಾನೆ. ಇಂಥಾ ಅದೆಷ್ಟೋ ಸಮರ್ಥರು ಸಾಮಾಜಿಕ ಬದುಕಿನ ಅನೇಕ ರಂಗಗಳಲ್ಲಿ ಜಾತಿಯ ಮೂಲಕ ಉಪೇಕ್ಷಿತರಾಗಿದ್ದಾರೆ. ಪ್ರತಿಯೊಂದು ಜಾತಿಯೂ ತನ್ನ ಜಾತಿಯವರಿಗೆ ಅನ್ಯಾಯವಾಗುತ್ತಿದೆ ಎನ್ನುತ್ತಲೇ ಇತರೆ ಜಾತಿಗಳನ್ನು ಶೋಷಿಸುವ, ತುಳಿಯುವ ಕುಹಕ ಬುದ್ಧಿಯವರ ನಡುವೆ ಖರೆ ಖರೆ ಪ್ರತಿಭಾವಂತರ ಪರಿಸ್ಥಿತಿ ಏನು?

ಆತ ಯಾರೇ ಆಗಿರಲಿ, ಯಾವುದೇ ಜಾತಿಗೆ ಸಂಬಂಧಿಸಿರಲಿ ಅವನಲ್ಲಿ ಸತ್ವ ಮತ್ತು ಶಕ್ತಿ ಇದೆ ಎಂದರೆ ಅದನ್ನು ನಾವು ಯಾವುದೇ ಜಾತಿಗೆ ಸಂಬಂಧ ಪಟ್ಟವರಾದರೂ ಗೌರವಿಸಲೇಬೇಕು. ಗುಣಕ್ಕೆ ಮತ್ಸರವಿಲ್ಲ ಎಂದವರು ನೀವೇ ಅಲ್ಲವೇ? ಹೀಗಾಗಿ ಗುಣಗೌರವ ಅನಿವಾರ್ಯ. ತಮ್ಮ ತಮ್ಮ ಜಾತಿಯ ತೌಡನ್ನೇ ಗಟ್ಟಿ ಕಾಳು ಎಂದು ಬಿಂಬಿಸುವ ಅನೀತಿಯನ್ನು ಯಾರೂ ಮಾಡಬಾರದು. ಎಲ್ಲರೂ ತನ್ನ ಜಾತಿಯವರಿಗೆ ಮಾತ್ರ ಅನ್ಯಾಯವಾಗಿದೆ ಎನ್ನುವುದನ್ನು ನೋಡಿದರೆ ಎಲ್ಲ ಜಾತಿಗಳು ಸಾಮರ್ಥ್ಯವನ್ನು, ಸಮರ್ಥರನ್ನು ಪೋಷಿಸುವ, ಪೊರೆಯುವ ಪರಿಪಾಠವನ್ನು ಮರೆತಂತಿದೆ. ಪ್ರತಿನಿತ್ಯ ಈ ಹಾಳಾದ ಜಾತಿಪದ್ಧತಿಯಿಂದ ಅನೇಕ ಪ್ರತಿಭಾವಂತರಿಗೆ, ಸಮರ್ಥರಿಗೆ ಅನ್ಯಾಯವಾಗುವುದಿದೆ. ಈ ಬಗೆಯ ಅನ್ಯಾಯ ಮಾತ್ರ ಜಾತ್ಯಾತೀತವಾದುದು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವು ಯೋಚಿಸಬೇಕಾಗಿದೆ. ಪ್ರತಿಯೊಬ್ಬರೂ ತನ್ನ ಜಾತಿಯವರಿಗೆ ಅನ್ಯಾಯವಾಗಿದೆ ಎಂದು ಯೋಚಿಸುವ ಬದಲಾಗಿ ಆತ ಯಾವುದೇ ಜಾತಿಯವನಾದರೂ ಆತ ಸಮರ್ಥನಿದ್ದಾನೆ, ಅವನಿಗೆ ಅನ್ಯಾಯವಾಗಬಾರದು ಎಂದು ಯೋಚಿಸುವಂತಾಗಬೇಕು. ಖ್ಯಾತ ಸಮಾಜಶಾಸ್ತ್ರಜ್ಞ ಎಮ್.ಎನ್.ಶ್ರೀನಿವಾಸ ಈ ಜಾತಿಯ ಕುರುಡು ಮೋಹದ ಅಪಾಯವನ್ನು ಹೀಗೆ ಹೇಳಿದ್ದಾರೆ. ‘ಪ್ರಸ್ತುತ ಸಂದರ್ಭದಲ್ಲಿ ಒಟ್ಟು ಜನಸಂಖ್ಯೆಯ ತೀರಾ ಕಡಿಮೆ ಪ್ರಮಾಣದ ಬುದ್ಧಿಮತ್ತೆ ಮತ್ತು ಸಾಮರ್ಥ್ಯವನ್ನು ಮಾತ್ರ ನಾವು ಬಳಸಿಕೊಳ್ಳುತ್ತಿದ್ದೇವೆ, ಇದರಿಂದ ಅಪಾರ ಪ್ರಮಾಣದ ಮಾನವ ಸಂಪನ್ಮೂಲ ವ್ಯಯವಾಗುತ್ತದೆ, ಅಲಕ್ಷಿತವಾಗುತ್ತದೆ. ಇದು ಪರೋಕ್ಷವಾಗಿ ಅಪರಾಧವೂ ಹೌದು,’ ಎಂದಿರುವದನ್ನು ನೋಡಿದರೆ ಜಾತಿಯಾಧಾರಿತ ಮಾನವ ಸಂಪನ್ಮೂಲದ ಬಳಕೆಯ ಬದಲಾಗಿ ಸಮರ್ಥತೆಯ ತಳಹದಿಯ ಮೇಲೆ ಅದು ಸಾಧ್ಯವಾಗಬೇಕು.

(ಚಿತ್ರಕೃಪೆ: ದ ಹಿಂದು)