Daily Archives: June 7, 2012

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-10)


– ಡಾ.ಎನ್.ಜಗದೀಶ್ ಕೊಪ್ಪ


 

ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲಿ ಹತ್ತಿ ಉರಿದು ತಣ್ಣಗಾದ ನಕ್ಸಲ್ ಹಿಂಸಾಚಾರದ ಹೋರಾಟ, ಪಶ್ಚಿಮ ಬಂಗಾಳದಲ್ಲಿ ಫಿನಿಕ್ಸ್ ಹಕ್ಕಿಯಂತೆ ಜನ್ಮ ತಾಳಿತು. ಈ ಬಾರಿಯ ಹೋರಾಟಕ್ಕೆ ಆವೇಶ, ಕೆಚ್ಚು, ಇವುಗಳ ಜೊತೆಗೆ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುವ ಮನೋಭಾವ ಎದ್ದು ಕಾಣುತ್ತಿತ್ತು. ಶ್ರೀಕಾಕುಳಂ ಜಿಲ್ಲೆಯ ನಾಯಕರ ಹತ್ಯೆ ಎಲ್ಲರನ್ನು ಕೆರಳಿಸಿತ್ತು ಹಾಗಾಗಿ ಸೈದ್ಧಾಂತಿಕ ವಿಚಾರಗಳನ್ನು ಬದಿಗಿರಿಸಿದ ಇಲ್ಲಿನ ನಾಯಕರು ಸರ್ಕಾರದ ಜೊತೆ ಹಿಂಸಾತ್ಮಕ ಮಾರ್ಗದಲ್ಲಿ ಹೋರಾಟಕ್ಕೆ ಮುಂದಾದರು. ಮಧ್ಯಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳ ಗಡಿಗೆ ಹೊಂದಿಕೊಂಡಂತೆ ಇರುವ ಮಿಡ್ನಾಪುರ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡ, ಪಶ್ಚಿಮ ಬಂಗಾಳದ ನಾಯಕರು, ತಮ್ಮ ಹೋರಾಟವನ್ನು ದೆಬ್ರಾ ಮತ್ತು ಗೋಪಿಬಲ್ಲಬಪುರ್ ಜಿಲ್ಲೆಗಳಿಗೆ ವಿಸ್ತರಿಸಿದರು. ಈ ಜಿಲ್ಲೆಗಳಲ್ಲಿ ಸಂತಾಲ್, ಲೊದಸ್ ಮತ್ತು ಒರಯನ್ ಎಂಬ ಬುಡಕಟ್ಟು ಜನಾಂಗ ಅತಿ ಹೆಚ್ಚು ಪ್ರಮಾಣದಲ್ಲಿ ವಾಸವಾಗಿದ್ದುದು ಕಾರಣವಾಗಿತ್ತು. ಇವರೆಲ್ಲರೂ ಕೃಷಿ ಕೂಲಿಕಾರ್ಮಿಕರಾಗಿದ್ದರು ಜೊತೆಗೆ ಒಂದಿಷ್ಟು ಮಂದಿ ಜಮೀನ್ದಾರರ ಭೂಮಿಯನ್ನು ಗೇಣಿಗೆ ಪಡೆದು ರೈತರಾಗಿ ದುಡಿಯುತ್ತಿದ್ದರು.

ನಕ್ಸಲ್‌ಬಾರಿ ಹೋರಾಟದ ನಂತರ ಪಶ್ಚಿಮ ಬಂಗಾಳದಲ್ಲಿ ಈ ಮೂರು ಜಿಲ್ಲೆಗಳನ್ನು ತಮ್ಮ ಹೋರಾಟಕ್ಕೆ ಆಯ್ದುಕೊಳ್ಳಲು ಹಲವು ಕಾರಣಗಳಿದ್ದವು. ಗೋಪಿಬಲ್ಲಬಪುರ್ ಎಂಬ ಜಿಲ್ಲೆ ಅರಣ್ಯದಿಂದ ಆವೃತ್ತವಾಗಿ, ತನ್ನ ಗಡಿಭಾಗದಲ್ಲಿ ಬಿಹಾರ್ ಮತ್ತು ಒರಿಸ್ಸಾ ರಾಜ್ಯವನ್ನು ಹೊಂದಿತ್ತು. ಪೊಲೀಸರ ದಾಳಿಯ ಸಂದರ್ಭದಲ್ಲಿ ನೆರೆಯ ರಾಜ್ಯಗಳಿಗೆ ನಾಯಕರು ನುಸುಳಿ ಹೋಗಲು ಪ್ರಶಸ್ತವಾಗಿತ್ತು. ಪಕ್ಕದ ಮಿಡ್ನಾಪುರ ಜಿಲ್ಲೆಯಿಂದ ಈ ಜಿಲ್ಲೆಗೆ ಸುವರ್ಣರೇಖ ಎಂಬ ನದಿಗೆ ಕಟ್ಟಲಾಗಿದ್ದ ಸೇತುವೆ ಮಾತ್ರ ಸಂಪರ್ಕದ ಮಾರ್ಗವಾಗಿತ್ತು. ಹಾಗಾಗಿ ಸೇತುವೆ ಬಳಿ ಕಾವಲು ಕೂತರೆ, ಗೋಪಿಬಲ್ಲಬಪುರ್ ಜಿಲ್ಲೆಗೆ ಯಾರು ಬಂದರೂ ನಕ್ಸಲ್ ಚಳವಳಿಗಾರರಿಗೆ ತಿಳಿಯುತ್ತಿತ್ತು. ದೆಬ್ರಾ ಜಿಲ್ಲೆಯು ಕೊಲ್ಕತ್ತಾ-ಮುಂಬೈ ನಗರಗಳ ನಡುವಿನ ಹೆದ್ದಾರಿಯಲ್ಲಿತ್ತು. ಕೊಲ್ಕತ್ತಾ ನಗರದಿಂದ ನಾಯಕರು ಬಂದು ಹೋಗಲು ಈ ಜಿಲ್ಲೆ ಅವರ ಪಾಲಿಗೆ ಪ್ರಶಸ್ತ ಸ್ಥಳವಾಗಿತ್ತು. ಆದರೆ, ಈ ಪ್ರದೇಶದಲ್ಲಿ ಅರಣ್ಯ ಪ್ರದೇಶ ಕಡಿಮೆ ಇದ್ದುದರಿಂದ ಗೆರಿಲ್ಲಾ ಯುದ್ಧ ತಂತ್ರಕ್ಕೆ ಇಲ್ಲಿ ಸಾಧ್ಯವಿರಲಿಲ್ಲ.

1967 ರಲ್ಲಿ ಸಿಲಿಗುರಿ ಪ್ರಾಂತ್ಯದ ನಕ್ಸಲ್‌ಬಾರಿ ಹೋರಾಟದ ನಂತರ ಕಮ್ಯೂನಿಷ್ಟ್ ಪಕ್ಷ ವಿಭಜನೆಯಾದ ನಂತರ ಮಾವೋವಾದಿ ಕಮ್ಯೂನಿಷ್ಟ್ ಪಕ್ಷಕ್ಕೆ ಬಂದ ಬಹುತೇಕ ನಾಯಕರು ಈ ಮೂರು ಜಿಲ್ಲೆಗಳಿಂದ ಬಂದವರಾಗಿದ್ದು, ಅವರೆಲ್ಲರೂ ಚಾರುಮುಜಂದಾರ್‌ಗೆ ನಿಷ್ಠೆ ತೋರಿಸಿದ್ದರು. ಇವರಲ್ಲಿ ದೆಬ್ರಾ ಜಿಲ್ಲೆಯ ಬಾಬುದೇಬ್ ಮಂಡಲ್ ಎಂಬಾತ ವೃತ್ತಿಯಲ್ಲಿ ವಕೀಲನಾಗಿದ್ದು, 1967 ರ ಅಸೆಂಬ್ಲಿ ಚುನಾವಣೆಯಲ್ಲಿ ಕಮ್ಯೂನಿಷ್ಟ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವನಾಗಿದ್ದ. ಗೋಪಿಬಲ್ಲಬಪುರ್ ಜಿಲ್ಲೆಯ ಗುಣಧರ್‌ಮುರ್ಮು ಎಂಬಾತ ಸ್ಥಳೀಯ ಬುಡಕಟ್ಟು ಜನಾಂಗದ ನಾಯಕನಾಗಿದ್ದ. ಇವರೆಲ್ಲರಿಗೆ ಸ್ಪೂರ್ತಿಯಾಗಿದ್ದವರು, ಸಂತೋಷ್ ರಾಣಾ ಮತ್ತು ಅಸಿಮ್ ಚಟರ್ಜಿ ಎಂಬ ಯುವ ನಾಯಕರು. ಇವರಲ್ಲಿ ಸಂತೋಷ್ ರಾಣಾ ಕೊಲ್ಕತ್ತಾ ವಿ.ವಿ.ಯಿಂದ ಎಮ್.ಎಸ್ಸಿ ಮತ್ತು ಎಂ.ಟೆಕ್. ಪದವೀಧರನಾದರೆ, ಅಸಿಮ್ ಚಟರ್ಜಿ ಪ್ರಸಿಡೆನ್ಸಿ ಕಾಲೇಜಿನಿಂದ ಬಿ.ಎಸ್ಸಿ. ಪಡೆದು ಹೊರಬಂದಿದ್ದ. (ಅಸಿಮ್ ಚಟರ್ಜಿ ಅವರ ಇತ್ತಿಚೆಗಿನ ಚಿತ್ರ ಗಮನಿಸಿ: ಪಾರ್ಶ್ವವಾಯುಪೀಡಿತರಾಗಿದ್ದಾರೆ.)

ಸಂತೋಷ್ ರಾಣ ಗೋಪಿಬಲ್ಲಬಪುರ ಜಿಲ್ಲೆಯ ನಯಬಸಾನ್ ಎಂಬ ಹಳ್ಳಿಯಲ್ಲಿ ಶಿಕ್ಷಕ ವೃತ್ತಿಯನ್ನು ಕೈಗೊಂಡು, ಅಲ್ಲಿನ ಸಂತಾಲ್ ಬುಡಕಟ್ಟು ಜನಾಂಗದ ರೈತರನ್ನು ಮತ್ತು ಕೃಷಿಕೂಲಿ ಕಾರ್ಮಿಕರನ್ನು ಸಂಘಟಿಸತೊಡಗಿದ. ಅಸಿಮ್ ಚಟರ್ಜಿ ಕೊಲ್ಕತ್ತ ನಗರದ ಯುವ ವಿದ್ಯಾರ್ಥಿಗಳನ್ನು ಹೋರಾಟಕ್ಕೆ ಪ್ರೆರೇಪಿಸತೊಡಗಿದ. ಈ ಇಬ್ಬರೂ ನಾಯಕರು, ಅಲ್ಲಿ ಜಮೀನ್ದಾರರ ಬಗ್ಗೆ, ಹಾಗೂ ಅಸಮಾನತೆಯಿಂದ ಕೂಡಿದ್ದ ಅವರ ಗೇಣಿ ಪದ್ಧತಿ ಮತ್ತು ಕೂಲಿದರದ ಬಗ್ಗೆ ಅಲ್ಲಿನ ಬುಡಕಟ್ಟು ಜನಕ್ಕೆ ವಿವರಿಸಿ, ಸರ್ಕಾರದ ಪಾಳು ಬಿದ್ದಿರುವ ಜಮೀನನ್ನು ಉಳುಮೆ ಮಾಡಲು ಪ್ರೊತ್ಸಾಹಿಸಿದರು. ಅಸಿಮ್ ಚಟರ್ಜಿಯ ಮಾತುಗಳಿಂದ ಪ್ರೇರಿತರಾದ ಹಲವಾರು ಪದವೀಧರರು ನಗರದ ಬದುಕನ್ನು ತ್ಯೆಜಿಸಿ ಬಂದು, ಹಳ್ಳಿಗಳಲ್ಲಿ ಸಂತಾಲ್ ಬುಡಕಟ್ಟು ಜನಾಂಗದ ಜೊತೆ ವಾಸಿಸತೊಡಗಿದರು. ಇವರಲ್ಲಿ ಅನೇಕ ಮಂದಿ ವೈದ್ಯಕೀಯ ಮತ್ತು ಇಂಜಿನೀಯರಿಂಗ್ ಪದವೀಧರರು ಇದ್ದದು ವಿಶೇಷ. ಇವರುಗಳು. ಸಂತಾಲ್ ಬುಡಕಟ್ಟು ಜನಾಂಗದ ಸಾಮಾನ್ಯ ಕಾಯಿಲೆಗಳಿಗೆ ಉಪಚರಿಸುತ್ತಾ, ಅವರುಗಳ ಔಷಧದ ಖರ್ಚನ್ನು ತಾವೇ ಭರಿಸುತ್ತಾ, ಆದಿವಾಸಿಗಳು ವಾಸಿಸುತ್ತಿದ್ದ ಗುಡಿಸಲು, ರಸ್ತೆಗಳನ್ನು ಸುಧಾರಿಸಿ, ಅವರ ವಿಶ್ವಾಸಕ್ಕೆ ಪಾತ್ರರಾದರು.

ದೆಬ್ರಾ ಜಿಲ್ಲೆಯಲ್ಲಿ ಭೂರಹಿತ ಕೃಷಿ ಕೂಲಿಕಾರ್ಮಿಕರ ವೇತನ ಹೋರಾಟಕ್ಕೆ ನಾಂದಿಯಾಡಿತು. ಈ ಮುನ್ನ ಕಮ್ಯೂನಿಷ್ಟ್ ಪಕ್ಷದಲ್ಲಿದ್ದ ಅಲ್ಲಿನ ನಾಯಕರಾದ, ಗುಣಧರ್ ಮುರ್ಮು ಮತ್ತು ಬಾಬುದೇಬ್ ಮಂಡಲ್ ಇಬ್ಬರನ್ನೂ ಪಕ್ಷ ಉಚ್ಛಾಟಿಸಿದ್ದ ಕಾರಣ ಇವರಿಬ್ಬರೂ ಮಾವೋವಾದಿ ಕಮ್ಯೂನಿಷ್ಟ್ ಪಕ್ಷ ಸೇರಿ ಆದಿವಾಸಿಗಳನ್ನು ಹೋರಾಟಕ್ಕೆ ಸಜ್ಜುಗೊಳಿಸಿದರು. ಇವೆಲ್ಲವುಗಳ ಪರಿಣಾಮವಾಗಿ. 1969ರ ಆಗಸ್ಟ್ ತಿಂಗಳಿನಲ್ಲಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ನಕ್ಸಲ್ ಹೋರಾಟಗಾರರ ಬಹು ಮುಖ್ಯವಾದ ಕಾರ್ಯಾಚರಣೆ 1969 ರ ಸೆಪ್ಟಂಬರ್ 27 ರಂದು ಆರಂಭಗೊಂಡಿತು. ಗೋಪಿಬಲ್ಲಬಪುರ ಜಿಲ್ಲೆಯಲ್ಲಿ ಸಂತೋಷ್ ರಾಣ ನೇತೃತ್ವದಲ್ಲಿ ಹೋರಾಟಗಾರರು, ನಗೆನ್ ಸೇನಾಪತಿ ಎಂಬ ಜಮೀನ್ದಾರನ ಮನೆ ಮೇಲೆ ದಾಳಿ ಮಾಡಿ, ಅವನ್ನು ಮತ್ತು ಅವನ ಸಹೋದರನನ್ನು ತೀವ್ರವಾಗಿ ಗಾಯಗೊಳಿಸಿ, ಬಂದೂಕು ಮತ್ತು ಭತ್ತದ ಫಸಲನ್ನು ದೋಚಿದರು.

ಅಕ್ಟೋಬರ್ 16 ರಂದು ಸಂತೋಷ್ ರಾಣನ ತಮ್ಮ ಮಿಹಿರ್ ರಾಣನ ನೇತೃತ್ವದ ತಂಡ, ಚೌ ಬಝಾರ್ ಎಂಬ ಹಳ್ಳಿಗೆ ನುಗ್ಗಿ ಅಲ್ಲಿನ ಜಮೀನ್ದಾರನೊಬ್ಬನನ್ನು ಕೊಂದುಹಾಕಿತು. ಕೇವಲ ಎರಡು ತಿಂಗಳ ಅವಧಿಯಲ್ಲಿ ಹನ್ನೆರೆಡು ಜಮೀನ್ದಾರರು ನಕ್ಸಲ್ ಹೋರಾಟಕ್ಕೆ ಬಲಿಯಾದರು. ಇತ್ತ ದೆಬ್ರಾ ಜಿಲ್ಲೆಯಲ್ಲಿ ಗುಣಧರ್ ಮುರ್ಮು ನೇತೃತ್ವದ ಆದಿವಾಸಿ ಹೋರಾಟಗಾರರು, ಏಳು ಮಂದಿ ಜಮೀನ್ದಾರರನ್ನು ಬಲಿತೆಗೆದುಕೊಂಡರು. ಇವರಲ್ಲಿ ಕೆಲವರು, ಹೋರಾಟವನ್ನು ಬಗ್ಗು ಬಡಿಯಲು ಆಗಮಿಸಿದ್ದ ಪೊಲೀಸರಿಗೆ ಆಶ್ರಯ ನೀಡಿದ್ದರು. ಈ ಹಿಂಸಾತ್ಮಕ ಘಟನೆಗಳಿಂದ ಬೆದರಿದ ಜಮೀನ್ದಾರರು ತಮ್ಮ ಮನೆಗಳನ್ನು ತೊರೆದು ಬಂದು, ಮಿಡ್ನಾಪುರ್ ಜಿಲ್ಲಾ ಕೇಂದ್ರದಲ್ಲಿ ಆಶ್ರಯ ಪಡೆಯತೊಡಗಿದರು. ಇದರಿಂದ ಎಚ್ಚೆತ್ತುಕೊಂಡ ಪಶ್ಚಿಮ ಬಂಗಾಳ ಸರ್ಕಾರ ಮಿಡ್ನಾಪುರ್, ದೇಬ್ರಾ, ಮತ್ತು ಗೋಪಿಬಲ್ಲಬಪುರ ಜಿಲ್ಲೆಗಳಿಗೆ ಪೊಲೀಸ್ ತುಕಡಿಗಳನ್ನು ಕಳುಹಿಸಿ, ಕಂಡಲ್ಲಿ ಗುಂಡಿಕ್ಕುವಂತೆ ಆದೇಶ ನೀಡಿತು. ಇದು ನಕ್ಸಲ್ ಹೋರಾಟಗಾರರನ್ನು ಮತ್ತಷ್ಟು ಕೆರಳಿಸಿತು. ಅಲ್ಲಿಯವರೆಗೆ ಜಮೀನ್ದಾರರನ್ನೆ ಗುರಿಯಾಗಿಸಿಕೊಂಡಿದ್ದ ನಕ್ಸಲ್ ಹೋರಾಟ ಪ್ರಪಥಮವಾಗಿ ಸರ್ಕಾರದತ್ತ ತಿರುಗಿತು. ಹೋರಾಟಗಾರರು, ಪೊಲೀಸ್ ಠಾಣೆ ಸೇರಿದಂತೆ ಸರ್ಕಾರಿ ಕಟ್ಟಡಗಳನ್ನು ಧ್ವಂಸ ಮಾಡತೊಡಗಿದರು.

ಶ್ರೀಕಾಕುಳಂ ಜಿಲ್ಲೆಯಲ್ಲಿ ಸತ್ಯನಾರಾಯಣ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ನಿರ್ಧಯವಾಗಿ ಎನ್ ಕೌಂಟರ್ ಹೆಸರಿನಲ್ಲಿ ಕೊಂದುಹಾಕಿದ್ದರಿಂದ, ಈ ಘಟನೆಯಿಂದ ಕ್ಷುದ್ರಗೊಂಡಿದ್ದ ನೇತಾರ ಚಾರು ಮುಜಂದಾರ್ ಒಂದು ರೀತಿಯಲ್ಲಿ ಸರ್ಕಾರದ ವಿರುದ್ಧ ಯುದ್ಧವನ್ನೇ ಘೋಷಣೆ ಮಾಡಿದ್ದ. 1975 ರ ಒಳಗೆ ನಕ್ಸಲ್ ಹೋರಾಟದ ಮೂಲಕ ಭಾರತದ ಆಡಳಿತ ಚುಕ್ಕಾಣಿಯನ್ನು ತನ್ನ ಕೈಗೆ ತೆಗೆದುಕೊಳ್ಳಬೇಕೆಂದು ಆವನ ಗುರಿಯಾಗಿತ್ತು. ಚಾರುವಿನ ಪ್ರೇರಣೆಯಿಂದ ನಕ್ಸಲ್ ಹೋರಾಟ ತೀವ್ರಗೊಂಡ ಕಾರಣ ಮತ್ತಷ್ಟು ಶೋಷಿತ ಜಮೀನ್ದಾರರ ತಲೆಗಳು ಉರುಳಿದವು. ತನ್ನ ಕಾಮುಕತನದಿಂದಾಗಿ ಆದಿವಾಸಿಗಳಿಂದ ರಣಹದ್ದು ಎಂದು ಕರೆಸಿಕೊಳ್ಳುತ್ತಿದ್ದ ಗೋಪಿಬಲ್ಲಬಪುರ ಜಿಲ್ಲೆಯ ಅಶು ಮಹಾಪಾತ್ರ ಎಂಬ ಜಮೀನ್ದಾರನನ್ನು 1970 ಮಾರ್ಚ್ 5 ರಂದು ಅವನ ಮನೆಯೆದುರು ಹತ್ಯೆಗೆಯ್ಯಲಾಯಿತು.

ಇದಾದ ಎರಡುದಿನಗಳಲ್ಲೇ ಇದೇ ಹೋರಾಟಗಾರರು, ಕೇದಾರ್‌ಘೋಶ್ ಎಂಬಾತನನ್ನು ಮತ್ತು ಅವನ ಮಗನನ್ನು ಕೊಂದು ಹಾಕಿದರು.  ಮಾರ್ಚ್ 21 ರಂದು ನಕ್ಸಲ್ ಹೋರಾಟಕ್ಕೆ ಪ್ರತಿಯಾಗಿ ಗೂಂಡಾಪಡೆಯನ್ನು ಕಟ್ಟಿಕೊಂಡು ರಕ್ಷಣೆಪಡೆದಿದ್ದ ನಾರಾಯನ್‌ಪತಿ ಎಂಬ ಜಮೀನ್ದಾರ ಮತ್ತು ಅವನ ಗೂಂಡಾಗಳನ್ನು ಗುಣಧರ್ ಮುರ್ಮು ನೇತೃತ್ವದಲ್ಲಿ ಆದಿವಾಸಿಗಳು, ಮೈ ಮೇಲಿನ ಇರುವೆ ಹೊಸಕಿ ಹಾಕಿದಂತೆ ಹೊಸಕಿ ಹಾಕಿದರು. ಹಿಂದೊಮ್ಮೆ ಹೋರಾಟಗಾರರಿಂದ ತಪ್ಪಿಸಿಕೊಂಡಿದ್ದ, ಕನೈ ಕ್ವಿಟಿ ಎಂಬ ಜಮೀನ್ದಾರ ಕೊನೆಗೂ ದೆಬ್ರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಕ್ಸಲಿಯರ ಸಿಟ್ಟಿಗೆ  ಬಲಿಯಾದ. ಮಾರ್ಚ್ 22 ರಂದು ಹೈಫುದ್ದೀನ್ ಮಲ್ಲಿಕ್ ಎಂಬ ಮುಸ್ಲಿಂ ಜಮೀನ್ದಾರನನ್ನು, ಮಾರುಕಟ್ಟೆಯಿಂದ ಹಿಂತಿರುಗಿ ಬರುತ್ತಿರುವ ಸಂದರ್ಭದಲ್ಲಿ ತಡೆದು ನಿಲ್ಲಿಸಿದ ಆದಿವಾಸಿ ಹೋರಾಟಗಾರರು, ಮುಖ್ಯ ರಸ್ತೆಯಲ್ಲಿ ಅವನ ರುಂಡ ಮುಂಡ ಬೇರ್ಪಡುವಂತೆ ಕೊಚ್ಚಿ ಹಾಕಿದರು.

ಪೃಥ್ವಿಯ ಒಡಲೊಳಗೆ ಅಡಿಗಿದ್ದ ಅಗ್ನಿ ಜ್ವಾಲೆಯೊಂದು ಅನಿರೀಕ್ಷಿತವಾಗಿ ಸ್ಪೋಟಗೊಳ್ಳುವಂತೆ ಬುಗಿಲೆದ್ದ ನಕ್ಸಲಿಯರ ಹಿಂಸಾಚಾರಕ್ಕೆ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸತ್ತಿದ್ದ ಕಾಂಗ್ರೆಸ್ ಮತ್ತು ಕಮ್ಯೂನಿಷ್ಟ್ ಪಕ್ಷಗಳ ಸಂಯುಕ್ತ ಸರ್ಕಾರ ದಿಕ್ಕು ಕಾಣದಂತೆ ತತ್ತರಿಸಿ ಹೋಯಿತು. ಆ ಸರ್ಕಾರದಲ್ಲಿ ಗೃಹ ಮಂತ್ರಿಯಾಗಿದ್ದವರು ಜ್ಯೋತಿಬಸು. ಅವರು ಧರ್ಮ ಸಂಕಟಕ್ಕೆ ಸಿಲುಕಿ ಹೋದರು. ಹೋರಾಟಗಾರರೆಲ್ಲಾ ಅವರದೇ ಪಕ್ಷದಿಂದ ಸಿಡಿದು ಹೋದವರು. ಅವರ ಮೇಲೆ ಹಿಂಸೆಯ ರೂಪದಲ್ಲಿ ಪ್ರತಿಕಾರದ ಸೇಡು ತೀರಿಸಿಕೊಳ್ಳಲು ವ್ಯಯಕ್ತಿವಾಗಿ ಜ್ಯೋತಿಬಸುರವರಿಗೆ ಮನಸ್ಸಿರಲಿಲ್ಲ. ಮಾತುಕತೆಯ ಮೂಲಕ ಹೋರಾಟಕ್ಕೆ ಅಂತ್ಯ ಹಾಕಬೇಕೆನ್ನುವುದು ಅವರ ಗುರಿಯಾಗಿತ್ತು. ಆದರೆ, ಅಂತಿಮವಾಗಿ ಅವರು ಸರ್ಕಾರದ ಮತ್ತು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯಬೇಕಾಯಿತು.

ನಕ್ಸಲ್ ಪೀಡಿತ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಪೊಲೀಸ್ ತುಕುಡಿಗಳನ್ನು ರವಾನಿಸಿದರೂ ಕೂಡ, ಪೊಲೀಸರಿಂದ ಸರ್ಕಾರಿ ಕಟ್ಟಡಗಳನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು. ಸ್ಥಳೀಯ ಜನರ ಜೊತೆ ನಕ್ಸಲ್ ಹೋರಾಟಗಾರರು ಹೊಂದಿದ್ದ ಸುಮಧುರ ಬಾಂಧವ್ಯದಿಂದಾಗಿ, ಪೊಲೀಸರಿಗೆ ಯಾವುದೇ ಮಾಹಿತಿ ಪಡೆಯಲು ಸಾಧ್ಯವಾಗಲಿಲ್ಲ.  ಜೊತೆಗೆ ನಕ್ಸಲಿಯರ ಹೋರಾಟ ಬೀರ್ ಭೂಮಿ ಜಿಲ್ಲೆಗೆ ವಿಸ್ತರಿಸಿತು. ಈ ಜಿಲ್ಲೆಯಲ್ಲಿ ತಾಂಡವಾಡುತ್ತಿದ್ದ ಬಡತನ ಮತ್ತು ವಿದ್ಯಾವಂತ ಯುವಕರ ನಿರುದ್ಯೋಗ ಚಳವಳಿಗೆ ಪರೋಕ್ಷವಾಗಿ ಕಾರಣವಾಯಿತು. ಸುದೇವ್ ಬಿಶ್ವಾಸ್ ಎಂಬ ಇಂಜಿನೀರಿಂಗ್ ಪದವೀಧರ, ಕ್ಷಿತೀಶ್ ಚಟರ್ಜಿ ಎಂಬ ಎಂ.ಎಸ್ಸಿ, ಪದವೀಧರ, ಹಾಗೂ ಬಿರೇನ್ ಘೋಷ್ ಎಂಬ ವಿಜ್ಙಾನ ಪದವೀಧರ ಈ ಮೂವರು ಸೇರಿ ಬೀರ್ ಭೂಮಿ ಜಿಲ್ಲೆಯನ್ನು ನಕ್ಸಲ್ ರಣರಂಗವಾಗಿ ಪರಿವರ್ತಿಸಿದರು. ಪಶ್ಚಿಮ ಬಂಗಾಳದಲ್ಲಿ 1970 ರ ಜುಲೈ ತಿಂಗಳಿನಿಂದ 1971 ರ ಜೂನ್‌ವರೆಗೆ ಸಾವಿರಾರು ಹಿಂಸಾತ್ಮಕ ಘಟನೆಗಳು ಜರುಗಿದವು.70 ರ ಡಿಸಂಬರ್‌ವರೆಗೆ ಪ್ರತಿಭಟನೆಯಿಂದ ಕೂಡಿದ್ದ ಚಳವಳಿ 1971ರ ಜನವರಿ ತಿಂಗಳಿನಲ್ಲಿ ಹಿಂಸೆಯ ರೂಪಕ್ಕೆ ತಿರುಗತೊಡಗಿತು. ಜನವರಿಯಲ್ಲಿ 44, ಪೆಬ್ರವರಿಯಲ್ಲಿ 90, ಮಾರ್ಚ್ ತಿಂಗಳಿನಲ್ಲಿ 116, ಏಪ್ರಿಲ್‌ನಲ್ಲಿ 119, ಮೇ ತಿಂಗಳಲ್ಲಿ 76 ಮತ್ತು ಜೂನ್‌ನಲ್ಲಿ 100 ಘಟನೆಗಳು ನಡೆದವು.

ನಕ್ಸಲ್ ಚಟುವಟಿಕೆ ತೀವ್ರಗತಿಯಲ್ಲಿ ಹರಡುತ್ತಿರುವುದನ್ನ ಮನಗಂಡ ಸರ್ಕಾರ, ಪೊಲೀಸ್ ತುಕಡಿಗಳ ಜೊತೆಗೆ ಅರೆಸೈನಿಕ ಪಡೆ ಸೇರಿದಂತೆ ವಿವಿಧ ಪಡೆಗಳನ್ನು ಕಾರ್ಯಾಚರಣೆಗೆ ಬಳಸಿತು. ರಜಪೂತ್ ಇನ್‌ಪೆಂಟ್ರೆಯ ಐದು ತುಕಡಿಗಳನ್ನು ಸರ್ಕಾರಿ ಕಟ್ಟಡಗಳ ರಕ್ಷಣೆಗೆ ರವಾನಿಸಲಾಯಿತು. ಬೀರ್ ಭೂಮಿ ಜಿಲ್ಲೆಯಲ್ಲಿರುವ ಬೊಲಾಪುರ್ ಸಮೀಪದ ರವೀಂದ್ರನಾಥ ಟ್ಯಾಗರ್‌ರವರ ಶಾಂತಿನಿಕೇತನ ಆಶ್ರಮ ಮತ್ತು ವಿಶ್ವಭಾರತಿ ವಿ.ವಿ.ಯ ಕಟ್ಟಡಗಳಿಗೆ ವಿಶೇಷ ರಕ್ಷಣೆ ಒದಗಿಸಲಾಯಿತು. ಉಳಿದ ತುಕಡಿಗಳು ನಕ್ಸಲಿಯರ ವಿರುದ್ಧ ಕಾರ್ಯಾಚರಣೆಗೆ ಇಳಿದವು. ಸರ್ಕಾರದ ನಿಯಂತ್ರಣದ ನಡುವೆಯೂ, ನಕ್ಸಲ್ ಹೋರಾಟ. ಕೊಲ್ಕತ್ತ ನಗರಕ್ಕೆ ಹೊಂದಿಕೊಂಡಂತೆ ಇರುವ 24 ಪರಗಣ ಜಿಲ್ಲೆ ಮತ್ತು ಹೌರ, ಬುರ್ದ್ವಾನ್, ಮಾಲ್ಡ, ಹೂಗ್ಲಿ, ನಾಡಿಯ ಜಿಲ್ಲೆಗಳಿಗೆ ವ್ಯಾಪಿಸಿತು ಅಲ್ಲಿನ ಕೆಲವು ಕಾರ್ಮಿಕ ಸಂಘಟನೆಗಳು ಚಾರು ಮುಜಂದಾರನ ಹೋರಾಟಕ್ಕೆ ಕೈಜೋಡಿಸಿದವು.

ಕಾಡ್ಗಿಚ್ಚಿನಂತೆ ಇಡೀ ಪಶ್ಚಿಮ ಬಂಗಾಳವನ್ನು ನಕ್ಸಲ್ ಚಳವಳಿ ಆವರಿಸಿಕೊಳ್ಳುತ್ತಿದ್ದ ಸಮಯದಲ್ಲಿ ಸರ್ಕಾರದ ಅವಧಿ ಮುಗಿದು 1972 ರಲ್ಲಿ ರಾಷ್ಟ್ರಪತಿ ಆಡಳಿತ ಹೇರಲ್ಪಟ್ಟಿತು. ಇಂತಹ ಒಂದು ಸಮಯಕ್ಕಾಗಿ ಕಾದು ಕುಳಿತ್ತಿದ್ದ ಪಶ್ಚಿಮ ಬಂಗಾಳ ಪೊಲೀಸರು, ನಕ್ಸಲಿಯರ ಹುಟ್ಟಡಗಿಸಲು, ಆಂಧ್ರ ಪೊಲೀಸರ ಮಾದರಿಯನ್ನು ಅನುಸರಿಸಲು ಮುಂದಾದರು. ಇದರ ಪ್ರಥಮ ಪ್ರಯತ್ನವಾಗಿ ಕೊಲ್ಕತ್ತ ನಗರದಲ್ಲಿ ಭೂಗತನಾಗಿದ್ದ ನಾಯಕ ಚಾರುಮುಜಂದಾರ್‌‍ನನ್ನು ಮುಗಿಸಲು ಸಂಚು ರೂಪಿಸಿದರು. 1972ರ ಜುಲೈ 16 ರಂದು. ಕೊಲ್ಕತ್ತ ನಗರದ ರಹಸ್ಯ ಸ್ಥಳವೊಂದರಲ್ಲಿ ಚಾರುವನ್ನು ಬಂಧಿಸಿ ಲಾಲ್‌ಬಜಾರ್ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು, ವಿಚಾರಣೆಯ ನೆಪದಲ್ಲಿ ನಿರಂತರ 11 ದಿನಗಳ ಕಾಲ ಚಿತ್ರಹಿಂಸೆ ನೀಡಿ ಜುಲೈ 28ರ ಮಧ್ಯರಾತ್ರಿ ಒಂದುಗಂಟೆಗೆ ಕೊಂದು ಹಾಕಿದರು. ಪೊಲೀಸ್ ಕಸ್ಟಡಿಯಲ್ಲಿದ್ದ 12 ದಿನಗಳ ಕಾಲ ವಕೀಲರಿಗೆ, ಚಾರುವಿನ ಗೆಳೆಯರಿಗೆ, ಮತ್ತು ಅವನ ಬಂಧುಗಳಿಗೆ ಪೊಲೀಸರು ಭೇಟಿಗೆ ಅವಕಾಶ ನೀಡಲಿಲ್ಲ. ಜುಲೈ 28ರ ರಾತ್ರಿ ಚಾರುಮುಜಂದಾರ್ ಅಸುನೀಗಿದಾಗ, ಮರಣೋತ್ತರ ಶವ ಪರೀಕ್ಷೆಯನ್ನು ಸಹ ಮಾಡಿಸದೆ, ಅವನ ಬಂಧುಗಳನ್ನು ಠಾಣೆಗೆ ಕರೆಸಿ, 29ರ ಬೆಳಗಿನ ಜಾವ ನಾಲ್ಕು ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಿಬಿಟ್ಟರು.

ಆಗರ್ಭ ಶ್ರೀಮಂತ ಜಮೀನ್ದಾರ ಕುಟುಂಬದಲ್ಲಿ ಹುಟ್ಟಿ, ಭೂರಹಿತ ಬಡವರಿಗಾಗಿ ಹೋರಾಟ ಮಾಡುತ್ತಾ, ಬಡವನಂತೆ ಬದುಕಿದ ಚಾರುಮುಜಂದಾರ್ ತನ್ನ ಕೊನೆಯ ದಿನಗಳಲ್ಲಿ ಅನಾಮಿಕನಂತೆ ಪೊಲೀಸರ ನಡುವೆ ನಡು ರಾತ್ರಿಯಲ್ಲಿ ಪ್ರಾಣ ಬಿಟ್ಟಿದು ಹೋರಾಟದ ವಿಪರ್ಯಾಸಗಳಲ್ಲಿ ಒಂದು. ವರ್ತಮಾನದಲ್ಲಿ ನಕ್ಸಲಿಯರು ಪೊಲೀಸರ ಮೇಲೆ ಮುಗಿಬಿದ್ದು ಅವರನ್ನು ನಿರ್ಧಯವಾಗಿ ಏಕೆ ಕೊಲ್ಲುತಿದ್ದಾರೆ ಎಂದು ಪ್ರಶ್ನೆ ಕೇಳುವವರಿಗೆ, ಚಾರುವಿನ ಅಮಾನುಷವಾದ ಸಾವಿನಲ್ಲಿ ಉತ್ತರ ಅಡಗಿದೆ. ನಾಯಕರ ಹತ್ಯೆಯ ಮೂಲಕ ಚಳವಳಿಯ ಬೇರು ಕಿತ್ತೊಗೆಯಬಹುದೆಂದು ನಿರೀಕ್ಷಿಸಿದ್ದ ಪೊಲೀಸರಿಗೆ ಮತ್ತು ಸರ್ಕಾರಗಳಿಗೆ ಭವಿಷ್ಯದಲ್ಲಿ ಗಂಡಾಂತರ ಕಾದಿತ್ತು. ಏಕೆಂದರೆ, ಪಶ್ಚಿಮ ಬಂಗಾಳದಲ್ಲಿ ಹೋರಾಟದ ಜ್ವಾಲೆ ಆ ಕ್ಷಣಕ್ಕೆ ನಂದಿ ಹೋದರೂ ಕೂಡ, ಅದು ಆರಿ ಹೋಗುವ ಮುನ್ನ ಪಕ್ಕದ ಬಿಹಾರ, ಉತ್ತರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ ರಾಜ್ಯಗಳಿಗೆ ಅಗ್ನಿ ಸ್ಪರ್ಶ ನೀಡಿ, ಕಾಡ್ಗಿಚ್ಚಿನಂತೆ ಹರಡಲು ಸಹಾಯಕವಾಗಿತ್ತು.

(ಮುಂದುವರೆಯುವುದು)