Daily Archives: June 8, 2012

ಮಹಾಂತೇಶ್ ಕೊಲೆ ತನಿಖೆ: ಮೊದಲು ಮಾನ ಹತ್ಯೆ, ಈಗ ಸತ್ಯದ ಮೇಲೆ ಹಲ್ಲೆ!

– ಶಿವರಾಂ ಕೆಳಗೋಟೆ

ದಿವಂಗತ ಕೆ.ಎ.ಎಸ್ ಅಧಿಕಾರಿ ಎಸ್. ಪಿ. ಮಹಾಂತೇಶ್‌ರ ತಾಯಿ ಪಬ್ಲಿಕ್ ಟಿವಿ ಸಂದರ್ಶನವೊಂದರಲ್ಲಿ ನಿನ್ನೆ ಮಾತನಾಡುತ್ತಾ ‘ನನ್ನ ಮೊಮ್ಮಗಳು ನನ್ಹತ್ರ ಬಂದು ‘ನಿಮ್ಮಪ್ಪನ ಬಗ್ಗೆ ನಂಗೆಲ್ಲಾ ಗೊತ್ತು’ ಅಂತ ಕೊಂಕು ಮಾತಿನಲ್ಲಿ ನನ್ನ ಫ್ರೆಂಡ್ ಒಬ್ಬಳು ಹೇಳಿದ್ಲು ಅಂತ ಬೇಸರ ಮಾಡಿಕೊಂಡ್ಲು. ನಾನು ಅವಳಿಗೆ ಸಮಾಧಾನ ಮಾಡಬೇಕಾಯ್ತು’ ಅಂದ್ರು. ಮಹಾಂತೇಶ್‌ರ ಚಿಕ್ಕ ವಯಸ್ಸಿನ ಮಗಳಿಗೆ ಶಾಲೆಯಲ್ಲಿ ಗೆಳತಿಯರು ಮಾತನಾಡುತ್ತಿದ್ದ ರೀತಿ ಕೇಳಿ ಎಂಥ ಬೇಸರ ಆಗಿರಬಹುದು ಎನ್ನುವುದನ್ನು ಯಾರೇ ಆಗಲಿ ಊಹಿಸಬಹುದು.

ಆದರೆ ಅದರ ತೀವ್ರತೆ ಅರ್ಥ ಆಗಬೇಕಿರುವುದು, ಹೀಗೆ ಅವರಿಗೆ ಹೆಣ್ಣಿನೊಂದಿಗೆ ಸಂಬಂಧ ಇತ್ತು ಎಂದು ಮಾಧ್ಯಮದ ಪ್ರತಿನಿಧಿಗಳಿಗೆ ಹೇಳಿದ ಪೊಲೀಸ್ ಮಹಾಶಯರಿಗೆ ಮತ್ತು ‘ಇದು ಸಕ್ಕತ್ ಟಿಅರ್‌ಪಿ ಐಟಮ್’ ಅಂತ ಪದೇ ಪದೇ ಪ್ಯಾಕೇಜ್‌ಗಳನ್ನು ಮಾಡಿ ಪ್ರಸಾರ ಮಾಡಿದೆ ಪತ್ರಕರ್ತರಿಗೆ!

ಬೆಂಗಳೂರಿನ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ನಿನ್ನೆ (ಜೂ 7, 2012) ಪತ್ರಿಕಾ-ಗೋಷ್ಟಿಯಲ್ಲಿ ಆ ತರಹದ ಯಾವುದೇ ವರದಿಗಳು ನಮ್ಮಿಂದ ಬಂದಿಲ್ಲ ಎಂದರು. ಆದರೆ ಇದೇ ಅಧಿಕಾರಿ ಮತ್ತು ಗೃಹ ಮಂತ್ರಿ ಪದೇ ಪದೇ ಹೇಳಿದ್ದ ಒಂದು ಮಾತು ‘ನಾವು ಎಲ್ಲಾ ಆಂಗಲ್‌ಗಳಿಂದ ತನಿಖೆ ನಡೆಸುತ್ತಿದ್ದೇವೆ. ವೈಯಕ್ತಿಯ ಕಾರಣ, ವೃತ್ತಿ ಕಾರಣ.. ಎಲ್ಲವನ್ನೂ ಪರಿಶೀಲಿಸುತ್ತಿದ್ದೇವೆ’. ಹೀಗೆ ಪದೇ ಪದೇ ಈ ಮಾತನ್ನು ಹೇಳಿ ಮಾಧ್ಯಮ ಹರಿ ಬಿಡುತ್ತಿದ್ದ ಗಾಳಿಮಾತಿಗೆ ಬೆಲೆ ಕಟ್ಟಿದವರು ಇವರೇ ಅಲ್ಲವೆ?

ಯಾವುದೇ ತನಿಖಾಧಿಕಾರಿ ಅಥವಾ ತನಿಖಾ ತಂಡದ ಸದಸ್ಯ ನೇರವಾಗಿ ಮಾಧ್ಯಮದ ಎದುರು ತನಿಖೆಯ ಪ್ರಗತಿಯನ್ನು ಹಂಚಿಕೊಳ್ಳುವುದಿಲ್ಲ. ಹಾಗೆ ಹಂಚಿಕೊಂಡಾಗ ಅದನ್ನು ‘ಆಫ್ ದಿ ರೆಕಾರ್ಡ್’ ಎಂದು ಸ್ಪಷ್ಟಪಡಿಸಿರುತ್ತಾರೆ. ಅಥವಾ ಮಾಧ್ಯಮ ವರದಿಗಾರರೇ ‘ಸರ್, ಇದು ಆಫ್ ದಿ ರೆಕಾರ್ಡ್, ನಿಮ್ಮ ಹೆಸರು ಎಲ್ಲಿಯೂ ಬರೋಲ್ಲ’ ಎಂದು ಪುಸಲಾಯಿಸುತ್ತಾರೆ. ಪತ್ರಿಕೋದ್ಯಮಕ್ಕೆ ಮಣ್ಣು, ಕಬ್ಬಿಣದ ಅದಿರು, ಹೊನ್ನು, ಹೊತ್ತ ಎಲ್ಲರಿಗೂ ಈ ಸತ್ಯ ಗೊತ್ತಿದೆ.

ಆದರೆ ಮಿರ್ಜಿಯವರು ಮಾತ್ರ ’ಆ ಅಧಿಕಾರಿಯ ಹೆಸರು ಹೇಳಿ, ನಾನು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಪತ್ರಕರ್ತರೆದುರು ಹೂಂಕರಿಸುತ್ತಾರೆ. ಆ ಅಧಿಕಾರಿ ಯಾರು ಎಂದು ಅವರಿಗೆ ಗೊತ್ತಿಲ್ಲವೆ? ಯಾವುದೋ ಒಂದು ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗಿದ್ದರೆ ಹೋಗಲಿ ಎನ್ನಬಹುದಿತ್ತು. ಎಲ್ಲದರಲ್ಲೂ ಅದೇ ಸುದ್ದಿ. ಹಾಗಾದರೆ, ಎಲ್ಲಾ ವರದಿಗಾರರು ಒಬ್ಬ ಅಧಿಕಾರಿ ಜೊತೆ ನಿರಂತರ ಸಂಪರ್ಕದಲ್ಲಿದ್ದರು, ಅವರಿಂದಲೇ ಇಂತಹ ಮಾಹಿತಿ ಹೋಗಿದೆ ಎನ್ನುವುದು ಗೊತ್ತಾಗದಷ್ಟು ದಡ್ಡರೇ ಈ ಕಮಿಷನರ್. ಅಲ್ಲ, ಅದು ಜಾಣ ದಡ್ಡತನ, ಜಾಣ ಕಿವುಡುತನದ ಹಾಗೆ!

ಇನ್ನು ತನಿಖೆ:

ಮಿರ್ಜಿ ಸಾಹೇಬರು ತಮ್ಮ ಪತ್ರಿಕಾ-ಗೋಷ್ಟಿಯಲ್ಲಿ ಕೊಲೆ ಆರೋಪಿಗಳನ್ನು ಹೆಸರಿಸಿದರು. ಕೊಲೆಗೆ ಮೂಲ ವ್ಯಕ್ತಿ ಕಿರಣ್ ಕುಮಾರ್ ಎಂಬ 23 ವರ್ಷದ ಯುವಕ. ಅವನು ಸಹಕಾರನಗರ ಪತ್ತಿನ ಸಹಕಾರ ಸಂಘದಲ್ಲಿ ಕ್ಯಾಷಿಯರ್  ಆಗಿದ್ದು ಒಂದಿಷ್ಟು ದುಡ್ಡನ್ನು ಮೋಜಿಗೆ ಖರ್ಚು ಮಾಡಿದ್ದನಂತೆ. ಆಗಲೇ ಮಹಾಂತೇಶ್ ತನಿಖೆಗೆ ಬರುತ್ತೇನೆ ಎಂದು ನೋಟಿಸ್ ನೀಡಿದರಂತೆ. ನೋಟಿಸ್ ಬಂದ ತಕ್ಷಣ ಅವರನ್ನು ಹತ್ಯೆ ಮಾಡಲು ಸಂಚು ಹೂಡಿದನಂತೆ. ಅವರು ಕಚೇರಿಗೆ ಬಂದಾಗ, ತನ್ನ ಸ್ನೇಹಿತರನ್ನು ಕರೆಸಿ ಅವರ ವಾಹನ ತೋರಿಸಿದನಂತೆ. ಆತನ ಸ್ನೇಹಿತರು ಮಹಾಂತೇಶರು ಮನೆಗೆ ಹಿಂತಿರುಗುವಾಗ ದಾಳಿ ಮಾಡಿದರಂತೆ.

ಸಹಕಾರ ಸಂಘದ ಕ್ಯಾಷಿಯರ್ ಒಬ್ಬ ಅಧಿಕಾರಿ ನೋಟಿಸ್ ಕೊಟ್ಟ ತಕ್ಷಣ ಕೊಲೆ ಮಾಡಬೇಕು ಅಂತ ನಿರ್ಧಾರ ಮಾಡ್ತಾನೆ ಅಂದ್ರೆ ಅವನು ನೊಟೋರಿಯಸ್ ಇರಬೇಕು, ಇಲ್ಲಾ ವೃತ್ತಿಪರ ಕೊಲೆಗಡುಕನಿರಬೇಕು. ಈ ಹತ್ಯೆಯ ಮೊದಲು ಮತ್ತು ತದನಂತರದ ವಿದ್ಯಮಾನಗಳನ್ನು ಗಮನಿಸಿದವರಿಗೆ ಪೊಲೀಸರು ಬಂಧಿತರ ಬಗ್ಗೆ ಹೇಳುತ್ತಿರುವ ವಿಚಾರ ಕೇವಲ ಕತೆ ಎಂದು ಅನುಮಾನ ಬರುತ್ತೆ. ಪೊಲೀಸರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಮೊದಲ ಬಾರಿಗೆ ನಾಲ್ವರ ಬಂಧನದ ಸುದ್ದಿ ಮಾಧ್ಯಮಗಳಿಗೆ ಬಂದಾಗ ಹಿರಿಯ ಅಧಿಕಾರಿಯೊಬ್ಬರು ಇವರ ಹಿಂದೆ ಇದ್ದಾರೆ ಎಂಬ ಸುದ್ದಿ ಇತ್ತು. ಆದರೆ ಆ ಅಧಿಕಾರಿ ಯಾರು? ಸುದ್ದಿಗೋಷ್ಟಿಯಲ್ಲಿ ಮಿರ್ಜಿ ಅವರ ಬಗ್ಗೆ ಹೇಳಲಿಲ್ಲ, ಆ ಮೂಲಕ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿದರು.

ತನಿಖೆ ಪೂರ್ಣಗೊಂಡಿಲ್ಲ ಎನ್ನುವುದು ಮಾತ್ರ ಸತ್ಯ. ಅಂತೆಯೇ ನಿಜ ಆರೋಪಿಗಳು ಬಯಲಿಗೆ ಬಂದಿದ್ಡಾರೆಯೆ ಎನ್ನುವ ಸಂಶಯ ಇನ್ನೂ ಇದೆ.

ಮತ್ತೊಂದು ಹೊಸ ಪತ್ರಿಕೆ!

– ರಾಜೇಶ್ ದೇವನಹಳ್ಳಿ

ವಿಜಯ ಸಂಕೇಶ್ವರರ ವಿಆರ್‌ಎಲ್ ಮೀಡಿಯಾ ಲಿಮಿಟೆಡ್ ಮತ್ತಿನ್ನೊಂದು ಹೊಸ ದಿನಪತ್ರಿಕೆಯನ್ನು ಘೋಷಿಸಿದೆ. ಬರಹಗಾರ ಮತ್ತು ದೀರ್ಘಕಾಲಿನ ಪತ್ರಕರ್ತ ಸತೀಶ್ ಚಪ್ಪರಿಕೆ ಇನ್ನೂ ಹೆಸರಿಟ್ಟಿಲ್ಲದ ಈ ಹೊಸ ಪತ್ರಿಕೆಯ ಪ್ರಧಾನ ಸಂಪಾದಕ ಜವಾಬ್ದಾರಿ ಹೊತ್ತಿದ್ದಾರೆ. ನಿನ್ನೆಯಷ್ಟೆ ಅಧಿಕಾರ ವಹಿಸಿಕೊಂಡ ಚಪ್ಪರಿಕೆ ಇಂದು ವಿಜಯವಾಣಿ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಹ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಿದ್ದಾರೆ. ಸಹಾಯಕ ಸಂಪಾದಕರಿಂದ ಹಿಡಿದು ಟ್ರೈನಿ ಉಪಸಂಪಾದಕರವರೆಗೆ ಎಲ್ಲರೂ ಬೇಕಿದೆ. ಆಸಕ್ತರು ಇನ್ನು ಅರ್ಜಿ ಹಾಕಬಹುದು.

ಎರಡು ತಿಂಗಳ ಹಿಂದೆಯಷ್ಟೇ ವಿಜಯವಾಣಿ ಆರಂಭಿಸಿದ ವಿಆರ್‌ಎಲ್ ಮೀಡಿಯಾ ಲಿಮಿಟೆಡ್‌ನಿಂದ ಇಷ್ಟು ಬೇಗ ಇಂತಹದೊಂದು ಘೋಷಣೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಕಾರಣ, ಇನ್ನೂ ವಿಜಯವಾಣಿಯೇ ಗಟ್ಟಿಯಾಗಿ ನೆಲೆಯೂರುವ ಮೊದಲೇ ಇಂತಹದೊಂದು ಇನ್ನೊಂದು ಪತ್ರಿಕೆ..ಎಂದಾಕ್ಷಣ ಅಚ್ಚರಿ ಸಹಜ. ವಿಜಯ ಸಂಕೇಶ್ವರರ ತಲೆಯಲ್ಲಿ ಯಾವ ಯೋಚನೆ ಇದೆಯೋ ಗೊತ್ತಿಲ್ಲ. ಯಾವ ಕೋನದಿಂದ ಯೋಚಿಸಿದರೂ ಸಂಕೇಶ್ವರರ ದೂರದೃಷ್ಟಿ ಏನಿರಬಹುದು ಎಂದು ಗೊತ್ತಾಗುತ್ತಿಲ್ಲ.

ಹಿಂದೆ ವಿಜಯ ಕರ್ನಾಟಕ ಪ್ರಸರಣದಲ್ಲಿ ನಂ.1 ಸ್ಥಾನ ತಲುಪಿದ ನಂತರ ಸಂಕೇಶ್ವರ್ ‘ಉಷಾಕಿರಣ’ ಎಂಬ ಪತ್ರಿಕೆ ಆರಂಭಿಸಿದ್ದರು. ಆಗ ಅವರ ಕಣ್ಣು ಇದ್ದದ್ದು ಜಾಹಿರಾತುಗಳ ಮೇಲೆ. ವಿಜಯ ಕರ್ನಾಟಕದ ಜಾಹಿರಾತು ದರಗಳು ಸಹಜವಾಗಿಯೇ ದುಬಾರಿಯಾಗಿದ್ದವು. ಗ್ರಾಹಕರು ತಮ್ಮ ದರಕ್ಕನುಗುಣವಾಗಿ ಕನ್ನಡಪ್ರಭ ಅಥವಾ ಉದಯವಾಣಿಗೆ ಹೋಗುತ್ತಿದ್ದರು. ಆ ಕಾರಣಕ್ಕೆ ಎರಡನೇ ಪತ್ರಿಕೆ ಆರಂಭಿಸಿ, ಆ ಜಾಹಿರಾತುಗಳನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನ ಮಾಡಿದರು. ಆದರೆ ಪ್ರಯೋಗ ಯಶಸ್ವಿಯಾಗಲಿಲ್ಲ. ಆ ಹೊತ್ತಿಗಾಗಲೇ ವಿಜಯ ಟೈಮ್ಸ್ ಎಂಬ ಬಿಳಿ ಆನೆ ಸಾಕುವುದು ಕಷ್ಟವಾಗುತ್ತಿತ್ತು. ಆದಾಯ ಮತ್ತು ಖರ್ಚು ತಮ್ಮ ಲೆಕ್ಕಾಚಾರಕ್ಕೆ ಅನುಗುಣವಾಗಿರಲಿಲ್ಲ. ಹಾಗಾಗಿ ಒಳ್ಳೆಯ ಬೆಲೆಗೇ ಪತ್ರಿಕೆಗಳನ್ನು ಮಾರಿ ಲಾಭ ಮಾಡಿಕೊಂಡರು.

ನಂತರದ ದಿನಗಳಲ್ಲಿ ಅವರಿಗೆ ಪತ್ರಿಕೆ ಇಲ್ಲದೆ ಬೇಸರ ಆಗಿದ್ದು ನಿಜವೇ. ರಾಜಕೀಯವಾಗಿಯೂ ಅವರ ಮಾತಿಗೆ ಬೆಲೆ ಇರಲಿಲ್ಲ. “ಕನ್ನಡ ನಾಡು” ಕಟ್ಟುವ ಭರದಲ್ಲಿ ಶಾಸಕ ಸ್ಥಾನವನ್ನೂ ಗೆಲ್ಲಲಾಗಲಿಲ್ಲ.

ಅನೇಕರು ಗಮನಿಸಿರಬಹುದು, ವಿಜಯವಾಣಿ ಆರಂಭದ ಆಸುಪಾಸಿನಲ್ಲಿಯೇ ಅವರು ಒಮ್ಮೆ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡರನ್ನು ಟೀಕಿಸಿ ಹೇಳಿಕೆ ಕೊಟ್ಟರು. ಆ ಮೊದಲು ಹಾಗೆ ಮಾಡಿದ್ದು ಕಡಿಮೆ. ಈಗ ಮತ್ತೆ ರಾಜಕೀಯ ಮನ್ನಣೆ ಗಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಯೋಗ ಹೇಗೆ ಸಾಗುತ್ತದೆಯೋ ನೋಡಬೇಕು. ಅಥವಾ ಮುಂದೊಂದು ದಿನ ಈ ಎಲ್ಲಾ ಪತ್ರಿಕೆಗಳನ್ನು ಮಾರುವ ಯೋಚನೆ ಇರಬಹುದೇ?

ರಾಜಕಾರಣಿಯ ನಡೆಯನ್ನು ಊಹಿಸಬಹುದು. ಉದ್ಯಮಿಯ ಹೆಜ್ಚೆಯನ್ನೂ ಗ್ರಹಿಸಬಹುದು. ಆದರೆ ರಾಜಕಾರಣಿ ಮತ್ತು ಉದ್ಯಮಿಯಾಗಿರುವವರ ನಡೆಗಳನ್ನು ವಿಶ್ಲೇಷಿಸುವುದು ಅಷ್ಟು ಸುಲಭವಲ್ಲ.