ಸಾಹಿತಿಗಳ ಮಕ್ಕಳಿಗೆ ಇಂಗ್ಲಿಷ್ : ಪರರ ಮಕ್ಕಳಿಗೆ ಕನ್ನಡ


-ಸೂರ್ಯ ಮುಕುಂದರಾಜ್


 

ಸರ್ಕಾರ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಆದೇಶವನ್ನು ಕನ್ನಡದ ಖ್ಯಾತ ಸಾಹಿತಿಗಳೆಲ್ಲ ವಿರೋಧಿಸಿ, ಆದೇಶವನ್ನು ಹಿಂಪಡೆಯದಿದ್ದರೆ ಗೋಕಾಕ್ ಮಾದರಿಯ ಚಳವಳಿ ನಡೆಸುವುದಾಗಿ ಒಬ್ಬರು, ಸಾಹಿತ್ಯ ಪರಿಷತ್ತಿನ ಮುಂದೆ ಆಮರಣಾಂತ ಉಪವಾಸ ಕೂಡುವುದಾಗಿ ಪರಿಷತ್ತಿನ ಅಧ್ಯಕ್ಷರು ಹೀಗೆ ತಮಗೆ ತೋಚಿದ ಹೋರಾಟದ ಮಾದರಿಗಳನ್ನೆಲ್ಲಾ ಪ್ರಯೋಗ ಮಾಡುವುದಾಗಿ ಗುಡುಗಿದ್ದಾರೆ. ಇವರೆಲ್ಲರಿಗೂ ಸಾಮಾನ್ಯವಾಗಿ ಎದುರಾಗುವ ಒಂದು ಪ್ರಶ್ನೆಯೆಂದರೆ ನಿಮ್ಮ ಮಕ್ಕಳನ್ನ ಕನ್ನಡ ಶಾಲೆಗೆ ಕಳುಹಿಸಿದ್ದೀರಾ? ಈ ಪ್ರಶ್ನೆಗೆ ಅವರ ಉತ್ತರ ಯಾವ ಸರ್ಕಾರಿ ಶಾಲೆ ಚೆನ್ನಾಗಿದೆ ರೀ ಸೇರಿಸೋದಕ್ಕೆ? ಅಂತ ಪ್ರತಿ ಪ್ರಶ್ನೆ ಎದುರಾಗುತ್ತದೆ. ಅಂದರೆ ಇವರ ಮಕ್ಕಳು ಮೊಮ್ಮಕ್ಕಳು ಮಾತ್ರ ಖಾಸಗಿ ಶಾಲೆಗಳಲ್ಲಿ ಓದಬೇಕು, ಬಡ ಕನ್ನಡಿಗನ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕನ್ನಡ ಕಲಿಬೇಕು. ಸರ್ಕಾರದ ಮೇಲೆ ಇಷ್ಟೆಲ್ಲಾ ಭೀಕರ ಯುದ್ಧ ಸಾರುವ ಈ ವೀರ ಕನ್ನಡಗರು ಯಾವ ನೈತಿಕತೆಯಿಟ್ಟುಕೊಂಡು ಹೋರಾಟ ಮಾಡುತ್ತಾರೋ ತಿಳಿಯದು.

ಇದಕ್ಕೆ ಸಂಬಂಧಪಟ್ಟಂತೆ ಒಂದು ಘಟನೆಯನ್ನು ಇಲ್ಲಿ ಪ್ರಾಸ್ತಾಪ ಮಾಡುತ್ತೇನೆ. ಕೆಲವು ತಿಂಗಳ ಹಿಂದೆ 5 ಕ್ಕಿಂತ ಕಡಿಮ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಹೊರಡಿಸಿದ ಆದೇಶದ ವಿರುದ್ಧ ಒಂದು ವಿದ್ಯಾರ್ಥಿ ಸಂಘಟನೆ ಶಾಸಕರ ಭವನದಲ್ಲಿ ಸಭೆ ಕರೆದಿತ್ತು. ಆ ಸಭೆಗೆ ಭಾಗವಹಿಸಿದ್ದ ಬಹುಪಾಲು ವಿದ್ಯಾರ್ಥಿಗಳು ಹಳ್ಳಿಗಳಿಂದ ಬಂದು ನಗರದ ಸರ್ಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ರೈತ ಕೂಲಿ ಕಾರ್ಮಿಕರ ಮಕ್ಕಳೇ ಇದ್ದರು. ಇವರನ್ನು ಎದುರಿಗೆ ಕೂರಿಸಿಕೊಂಡು ನಟ ಕಂ ಚಿಂತಕರೊಬ್ಬರು ನನಗೆ ಈ ವಯಸ್ಸಿನಲ್ಲಿ ರಕ್ತ ಕುದಿತಾ ಇದೆ, ನಿಮಗೆಲ್ಲಾ ಏನೂ ಅನ್ನಿಸ್ತಲ್ಲವಾ? ಅಂತ ಪಾಪದ ಹುಡುಗರ ಮುಂದೆ ತಮ್ಮ ಭಾಷಾ ಪ್ರೇಮವನ್ನು ಪ್ರದರ್ಶಿಸಿ ಒಂದೆರೆಡು ನಿಮಿಷ ವೇದಿಕೆಯಲ್ಲಿದ್ದು ನಿರ್ಗಮಿಸಿದರು.

ಬೆಳಿಗ್ಗೆ 10ಕ್ಕೆ ಆರಂಭವಾದ ಈ ಸಭೆ ಮಧ್ಯಾಹ್ನ 2.30 ರವರೆಗೂ ಧೀರ್ಘವಾಗಿ ನಡೆಯಿತು. ಅಲ್ಲಿಯವರೆಗೂ ಈ ಬಡ ಹಾಸ್ಟೆಲ್ ವಾಸಿಗಳು ಹಸಿದ ಹೊಟ್ಟೆಯಲ್ಲಿ ಸರ್ಕಾರದ ಆದೇಶದ ಬಗ್ಗೆ ಕಣ್ಣುಗಳಲ್ಲಿ ಕೆಂಡಕಾರುವಂತಹ ಭಾಷಣಗಳನ್ನು ಕೇಳಿ ಹೋರಾಟಕ್ಕೆ ಸಜ್ಜಾಗಿದ್ದರು. ನಂತರ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳ ಅಭಿಪ್ರಾಯಕ್ಕೆ ವೇದಿಕೆ ಕರೆದರು. ಅಷ್ಟರೊಳಗೆ ಹಿರಿಯ ಭಾಷಣಕಾರರೆಲ್ಲಾ ವೇದಿಕೆ ತ್ಯಜಸಿದ್ದರು. ನನ್ನ ಸರಣಿ ಬಂದಾಗ ನೇರವಾಗಿ ಆ ವಿದ್ಯಾರ್ಥಿಗಳಿಗೆ ಕೇಳಿದೆ, “ಬೆಳಿಗ್ಗೆ ಮಾತನಾಡಿದ ಚಿಂತಕರು ನಿಮಗೆ ರಕ್ತ ಕುದಿತಾ ಇಲ್ಲವಾ ಅಂತ ರೋಷ ಇಲ್ಲವಾ ಅಂತ ನಿಮ್ಮಗಳನ್ನ ತಿವಿದು ಹೋದರು. ಅಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ನಿಮಗ್ಯಾಕಿರಬೇಕು ರೋಷ? ನೀವೆಲ್ಲಾ ನೇರವಾಗಿ ಕೇಳಬೇಕು, ಸಾರ್ ನಿಮ್ ಮಕ್ಕಳನ್ನ ಯಾವ ಶಾಲೆಗೆ ಸೇರಿಸಿದ್ದೀರಾ? ಬಡ ರೈತ ಕೂಲಿಕಾರ್ಮಿಕರ ಮಕ್ಕಳು ಮಾತ್ರ ಸರ್ಕಾರಿ ಶಾಲೆಗೆ ಹೋಗಬೇಕು ಸಮಾನತೆ ಸಮಾಜವಾದ ಮಾತಾಡೋ ನಿಮ್ಮ ಮಕ್ಕಳು ಮಾತ್ರ ಇಂಗ್ಲಿಷ್ ಶಾಲೆಗೆ ಹೋಗ್ಬೇಕು. ನೀವು ನಮಗಲ್ಲ ಹೇಳಬೇಕಾಗಿರೋದು ಈ ಮಾತನ್ನ,” ಅಂತ ಅವರಿಗೆ ಹೇಳಿ ಅಂತಂದು ವೇದಿಕೆಯಿಂದಿಳಿದೆ.

ಇಷ್ಟೆಲ್ಲಾ ಹೋರಾಟ ಮಾಡುವ ಬದಲು ಶಿಕ್ಷಣ ಸಚಿವರಿಗೆ ಗಡುವು ನೀಡುವುದನ್ನ ಬಿಟ್ಟು ಮೊದಲು ಇವರೆಲ್ಲಾ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ ಕನ್ನಡ ಕಲಿಸಲಿ. ಇತ್ತೀಚೆಗೆ ಸಾಹಿತ್ಯ ವಲಯದೊಬ್ಬರ ಶಾಲೆಗೆ ಭೇಟಿನೀಡಿದ್ದಾಗ ಅವರ ಶಾಲೆಯಿರುವ ಹಳ್ಳಿಯ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ದುಃಸ್ಥಿತಿ ಬಗ್ಗೆ ಹೇಳುತ್ತಾ ಒಂದನೇ ಕ್ಲಾಸಿನಿಂದ ಐದನೇ ಕ್ಲಾಸಿನವರೆಗೆ ಒಬ್ಬನೇ ಶಿಕ್ಷಕನಿದ್ದರೆ ಎಲ್ಲಿಂದ ಮಕ್ಕಳು ವಿದ್ಯಾವಂತರಾಗುತ್ತಾರೆ. ಒಂದು ತರಗತಿಯಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳಿದ್ದರೆ ಅವರಿಗೆ ಶಾಲೆಯ ವಾತಾವರಣ ಇಷ್ಟವಾಗಲು ಸಾಧ್ಯಾನಾ. ಇಂತಹ ಶಾಲೆಗಳಿಗೆ ಸೇರಿಸೋದು ಅಂದರೆ ಸುಸೈಡ್ ಮಾಡಿಕೊಂಡಂತೆ ಅಂತ ಹೇಳಿ, ಇಷ್ಟೆಲ್ಲಾ ಮಾತನಾಡುವ ಸಾಹಿತಿಗಳು ಒಂದೊಂದು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ರೆ ಸಾಕೆಂದು ಅಭಿಪ್ರಾಯಪಟ್ಟರು.

ನನ್ನ ತಂದೆ ಸಾಹಿತಿಯಾಗಿ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕನಾಗಿ ನನ್ನನ್ನು ನಾಗರಬಾವಿಯ ಸರ್ಕಾರಿ ಶಾಲೆಗೆ ಸೇರಿಸಿದಾಗ ಇದೇ ಸಾಹಿತಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಯಾಕೆ ಸೇರಿಸಿದ್ದೀರಾ ಯಾವುದಾದ್ರು ಖಾಸಗಿ ಶಾಲೆಗೆ ಸೇರ್ಸಿ ನಾವು ಸೀಟ್ ಕೊಡಿಸ್ತೀವಿ ಅಂದವರ ಸಂಖ್ಯೆಯೇ ಹೆಚ್ಚು. 5ನೇ ತರಗತಿ ಎಲ್.ಕೆ.ಜಿ. ಮಕ್ಕಳು ಕಲಿಯುವ ‘ಎ’ ಫಾರ್ ಆಪಲ್ ಕಲಿಯೋಕೆ ನನ್ನ ಸಹಪಾಠಿಗಳು ತಿಣುಕಾಡುತ್ತಿದ್ದನ್ನು ನೆನೆಸಿಕೊಂಡರೆ ಈಗಲೂ ದುಃಖವಾಗುತ್ತೆ. ನಗರದಲ್ಲೇ ಇದ್ದು ಇಲ್ಲಿನ ಇಂಗ್ಲಿಷ್ ಕಾಂಪ್ಲೆಕ್ಸ್‌ಗಳ ಮಧ್ಯೆ ಸಿಲುಕಿ ತಮ್ಮ ವಿದ್ಯಾಭ್ಯಾಸವನ್ನೇ ನಿಲ್ಲಿಸಿದವರ ಸಂಖ್ಯೆ ಹೆಚ್ಚು. ಬೆಳಿಗ್ಗೆಯೆದ್ದು ಪೇಪರ್ ಹಾಕಿ, ತಂದೆಯೊಂದಿಗೆ ಇಡ್ಲಿ ಮಾರಿ, ಮನೆ ಮನೆಗೆ ಹೂ ಮಾರಿ 10 ಗಂಟೆಗೆ ಶಾಲೆಗೆ ಬರುತ್ತಿದ್ದ ಈ ಪ್ರತಿಭಾವಂತರು 5ನೇ ಕ್ಲಾಸಿನ ಇಂಗ್ಲಿಷ್ ಗುಮ್ಮಕ್ಕೆದಿರಿ ಓದಿಗೆ ವಿದಾಯ ಹೇಳಿದರು. ಈ ಮಕ್ಕಳ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದೆ ತಮ್ಮ ಮಕ್ಕಳ ಸುಖದ ಬಗ್ಗೆ ಅವರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ, ಇವರ ಮಕ್ಕಳು ಬರೆದ ಇಂಗ್ಲಿಷ್ ಕವನಕ್ಕೆ ಚಪ್ಪಾಳೆ ತಟ್ಟಿ ಆನಂದಿಸುವವರು ಬಡವರ ಮಕ್ಕಳು ಇಂಗ್ಲಿಷ್ ಕಲಿತರೆ ಸಹಿಸದಿರೋದು ಎಷ್ಟು ಸರಿ.

ಸುಶಿಕ್ಷಿತ ತಂದೆತಾಯಿಗಳ ಮಕ್ಕಳಲ್ಲದ, ಸ್ಲಂಗಳಿಂದ ಬಂದು ವಿದ್ಯೆ ಕಲಿಯುವ ಈ ಮಕ್ಕಳು ಯಾಕೆ ಕೀಳರಿಮೆಯಿಂದ ನರಳಬೇಕು? ಭ್ರಷ್ಟಾಚಾರದ ಬಗ್ಗೆ ಕವಿತೆ ಬರೆಯುವ ಕವಿ ಉಪನ್ಯಾಸಕರೊಬ್ಬರು ತಮ್ಮ ಮಗನನ್ನು ಒಂದನೇ ಕ್ಲಾಸಿಗೆ ಇಂಗ್ಲಿಷ್ ಕಲಿಯಲಿ, ನನ್ನಂತ ಕನ್ನಡ ಎಂ.ಎ. ಮಾಡಿ ಕಷ್ಟ ಪಡಬಾರದು ಅಂತ ಸೇರಿಸಿದ್ದು ಯಾವ ಶಾಲೆಗೆ ಗೊತ್ತಾ? ರಿಂಗ್ ರಸ್ತೆ ಪಕ್ಕದ ಜಾಗವನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿಸಿ ಕೇಸು ಹಾಕಿಸಿಕೊಂಡ ಹಾಲಿ ಸಚಿವರೊಬ್ಬರು ನಡೆಸುತ್ತಿರುವ ಶಾಲೆಗೆ. ಸಾಹಿತಿಗಳಲ್ಲೇ ದ್ವಂದ್ವವಿರುವಾಗ ಹೇಗೆ ಇಂಗ್ಲಿಷ್ ಮಾಧ್ಯಮ ಆರಂಭಿಸುವುದನ್ನು ವಿರೋಧಿಸುತ್ತಿರುವುದು ಮಾತ್ರ ಅಸಹನೀಯ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕನ್ನಡದ ಜೊತೆಗೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯಲಿ. ನಗರದ ಖಾಸಗಿ ಶಾಲೆಗಳ ಮಕ್ಕಳಿಗೆ ಪೈಪೋಟಿ ನೀಡುವಂತೆ ಬೆಳೆಯಬೇಕು. ಹಾಗಾದರೆ ಮಾತ್ರ ಸಾಹಿತಿಗಳು ಹೇಳುವ ಸಮಾನ ನ್ಯಾಯ ಪಾಲನೆಯಾಗುತ್ತದೆ. ಪರರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವುದನ್ನು ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಕಳುಹಿಸುವ ಮೂಲಕ ಹೊಸ ಮಾದರಿಯ ಹೋರಾಟ ಮಾಡಲಿ.

9 thoughts on “ಸಾಹಿತಿಗಳ ಮಕ್ಕಳಿಗೆ ಇಂಗ್ಲಿಷ್ : ಪರರ ಮಕ್ಕಳಿಗೆ ಕನ್ನಡ

 1. ವಿ.ಆರ್.ಕಾರ್ಪೆಂಟರ್

  I proud of you Soorya. ನಾನು ಮತ್ತು ಮುಕುಂದರಾಜ್ ಸರ್, ಕೊಯಮತ್ತೂರಿನ ಕವಿಗೋಷ್ಟಿಗೆ ಹೋದಾಗ ಕೂಡ ಮುದೇನೂರು ನಿಂಗಣ್ಣ ಎಂಬ ಕನ್ನಡದ ಕವಿ, ತನ್ನ ಮಗನನ್ನು ಖಾಸಗಿ ಶಾಲೆಗೆ ಸೇರಿಸಿದ್ದರ ಬಗ್ಗೆ ಸಮರ್ಥನೆ ಕೊಡುತ್ತಿದ್ದರು. ನಾನು ಮತ್ತು ಸರ್ ತರಾಟೆಗೆ ತೆಗೆದುಕೊಂಡು ನಿನ್ನ ಪ್ರಸ್ತಾಪ ಮಾಡಿ ಉದಾಹರಣೆ ಕೊಟ್ಟೆವು. ಅವರು ಅಂದಿನಿಂದ ನಮ್ಮ ಹತ್ತಿರ ಮಾತನಾಡವುದನ್ನೇ ಬಿಟ್ಟು ಮುನಿಸಿಕೊಂಡಿದ್ದಾರೆ. ಎಲ್ಲರಿಗೂ ಸಂಪಾದಿಸಲು ಸರ್ಕಾರಿ ಉದ್ಯೋಗಗಳೇ ಬೇಕು. ಆದರೆ ತಮ್ಮ ಮಕ್ಕಳು ಮಾತ್ರ ಇಂಗ್ಲಿಷಿನ ಕಾನ್ವೆಂಟ್ ಶಾಲೆಗಳಲ್ಲಿ ಓದಿ ವರ್ಗ ತಾರತಮ್ಯ ಬೆಳೆಸಿಕೊಳ್ಳುವುದನ್ನು ಸಹಿಸಿಕೊಂಡು ಪದ್ಯ/ಗದ್ಯ ಬರೆಯುವಾಗ ಸಾಮಾಜಿಕ ಕಾಳಜಿಯನ್ನು ಕಾರಿಕೊಳ್ಳುತ್ತಾರೆ. ನಿನ್ನ ಬೆಳವಣಿಗೆಯನ್ನು ನೋಡಿದರೆ ನನಗಂತೂ ಹೆಮ್ಮೆಯಾಗುತ್ತದೆ. ನನ್ನ ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಸ್ಪೂರ್ತಿಮೂಲದಲ್ಲಿ ನೀನೂ ಕೂಡ ಇದ್ದೀಯ. ಥ್ಯಾಂಕ್ಸ್ ಫಾರ್ ಎ ಗುಡ್ ಆರ್ಟಿಕಲ್!

  Reply
 2. ಬೇಳೂರು ಸುದರ್ಶನ

  ಇವು ನನ್ನ ಚದುರಿದ ಚಿಂತನೆಗಳು:
  ಸೂರ್ಯ ಮುಕುಂದರಾಜ್‌ ಲೇಖನ ಚೆನ್ನಾಗಿದೆ. ಹಾಗೆಯೇ ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಿದ ಕಾರ್ಪೆಂಟರ್‌ಗೂ ಅಭಿನಂದನೆಗಳು. ನಾನು ಸರ್ಕಾರಿ ಶಾಲೆಗಳಲ್ಲೇ ಓದಿದ್ದು; ಎರಡು ವರ್ಷಗಳ ಹಿಂದೆ ಮಗನನ್ನು ಕರೆದುಕೊಂಡು ಆ ಶಾಲೆಗಳನ್ನೆಲ್ಲ ತೋರಿಸಿದೆ. ಅವನನ್ನು ನಾನು ಇಲ್ಲಿ ಹೇಳಲಾಗದ ಕಾರಣಕ್ಕಾಗಿ ಆಟೋ ಹತ್ತಿಸುವ ಅನಿವಾರ್ಯತೆ ಇರದ, ಮನೆ ಹತ್ತಿರದಲ್ಲೇ ಇದ್ದ ಬ್ಯಾಂಕ್‌ ಅಧಿಕಾರಿಗಳು ನಡೆಸುವ ಪುಟ್ಟ ಶಾಲೆಗೆ ಸೇರಿಸಿದೆ. ಅದು ಇಂಗ್ಲಿಶ್ ಮಾಧ್ಯಮದಲ್ಲಿತ್ತು. ಕನ್ನಡ ಪತ್ರಕರ್ತನಾದ ನಾನು ಮಗನನ್ನು ಆಂಗ್ಲಶಾಲೆಗೆ ಕಳಿಸಿದ್ದರ ಬಗ್ಗೆ ನನಗೇನೂ ಬೇಸರವಿಲ್ಲ; ಏಕೆಂದರೆ ಭಾಷೆಗಿಂತ ಮುಖ್ಯ ಬದುಕು; ನನ್ನ ಮಗನನ್ನು ಆದಷ್ಟೂ ಹೊಣೆಗಾರಿಕೆಯ ಪ್ರಜೆಯನ್ನಾಗಿ ಮಾಡಲು ಯತ್ನಿಸಿದ್ದೇನೆ ಎಂಬ ವಿಶ್ವಾಸವಿದೆ. ಮುಂದಿನ ದಿನಗಳೇ ನನ್ನ ವಿಶ್ವಾಸವನ್ನು ಉಳಿಸಬೇಕಷ್ಟೆ…!
  ನಾನು ಎಂಟನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ, ಆಮೇಲೆ ಇಂಗ್ಲಿಶ್‌ ಮಾಧ್ಯಮಕ್ಕೆ ಬಂದೆ. ವ್ಯಾಕರಣವೇ ಗೊತ್ತಿರಲಿಲ್ಲ; ಹಾಗೆ ಬಂದ ನಾಲ್ಕೈದು ವರ್ಷಗಳಿಗೇ ಓದನ್ನೇ ಬಿಟ್ಟೆ. ಈಗ ನಾನು ನನ್ನ ಸ್ವಂತ ಶ್ರಮದಿಂದಲೇ ಇಂಗ್ಲಿಶ್ ಕಲಿತಿದ್ದೇನೆ. ನನ್ನ ಇಂದಿನ ಜ್ಞಾನಮೂಲದ ಮಾಧ್ಯಮವು ಇಂಗ್ಲಿಶೇ ಆಗಿದೆ. ಕನ್ನಡದ ಬೇರು ನನ್ನೊಳಗೆ ಊರಿದ್ದರಿಂದ ಇಂಗ್ಲಿಶಿನಲ್ಲೂ ಸುಸ್ಥಿರ ಬದುಕಿನ ಮಾಹಿತಿಗಳನ್ನೇ ಹುಡುಕುವ, ಸಮಾಜಪರವಾಗಿ ಚಿಂತಿಸುವ ಗುಣವನ್ನು ಬೆಳೆಸಿಕೊಂಡಿದ್ದೇನೆ.
  ಆಂಗ್ಲ ಮಾಧ್ಯಮ ವಿಷಯಕ್ಕೇ ಬಂದರೆ, ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವುದಕ್ಕೂ, ಆಂಗ್ಲ ಭಾಷೆಯನ್ನು ಕಲಿಸುವುದಕ್ಕೂ ವ್ಯತ್ಯಾಸವಿದೆ. ಬದುಕಿಗೆ ಬೇಕಾದ ವಿಷಯಗಳ ಕಲಿಕೆಗೆ ಭಾಷೆ ಬೇಡ ಎನ್ನುವುದನ್ನು ಬೆಂಗಳೂರಿನ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ನೋಡಿ ಖಚಿತಪಡಿಸಿಕೊಳ್ಳಬಹುದು. ಅವರೆಲ್ಲ ಬಂದಿರುವ ರಾಜ್ಯಗಳಲ್ಲಿ ಒಂದಷ್ಟು ಬೆಂಬಲ ಸಿಕ್ಕಿದ್ದರೆ ಅವರೆಲ್ಲರೂ ಇನ್ನೂ ಹೆಚ್ಚಿನ ಸ್ತರದ ದುಡಿಮೆಯಲ್ಲಿ ತೊಡಗಿರುತ್ತಿದ್ದರು.
  ನಾನು ಕಳೆದ ವರ್ಷವೇ ಶಿಕ್ಷಣ ಸಚಿವರ ಬಳಿಗೆ ಇಂಥದ್ದೇ ಒಂದು ಪುಟ್ಟ, ಆದರೆ ಹಿರಿಯರನ್ನು ಒಳಗೊಂಡ ತಂಡವನ್ನು ಒಯ್ದಿದ್ದೆ. ಆಗ ಅಲ್ಲಿ ನನಗೆ ಪರಿಚಯವಾದ ಶಿಕ್ಷಣ ತಜ್ಞರು (ಗಮನಿಸಿ, ಇವರು ಸಾಹಿತಿಯಲ್ಲ), ಕನ್ನಡ ಮಾಧ್ಯಮ ಇರಲಿ, ಆದರೆ ಆಂಗ್ಲ ಭಾಷೆಯನ್ನು ಸಮರ್ಥವಾಗಿ ಕಲಿಸಲಿ ಎಂಬುದೇ ನಮ್ಮ ಬೇಡಿಕೆ ಎಂದರು. ನನಗೂ ಸರಿ ಅನ್ನಿಸಿತು.
  ಆದ್ದರಿಂದ ನನ್ನ ದೃಷ್ಟಿಯಲ್ಲಿ ಕನ್ನಡಿಗರು ( ಈಗ ಇಲ್ಲಿ ಹಣವುಳ್ಳವರು, ಇಲ್ಲದವರು, ಹೆಣ್ಣು – ಗಂಡು – ಹೀಗೆ, ದಲಿತರು, ಈ ಚರ್ಚೆ ಬೇಡ) ಕನ್ನಡ ಮಾಧ್ಯಮದಲ್ಲಿ ಏಳನೇ ತರಗತಿವರೆಗೆ ಓದಬೇಕು. ಒಂದನೇ ತರಗತಿಯಿಂದಲೇ ಇಂಗ್ಲಿಶನ್ನು ಅತ್ಯಂತ ವೈಜ್ಞಾನಿಕವಾಗಿ ಕಲಿಸಬೇಕು. ಇಂಥ ಆರಂಭಿಕ ಇಂಗ್ಲಿಶ್‌ ಕಲಿಕೆಗೆ ಸರ್ಕಾರವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸಂಪನ್ಮೂಲ ನೀಡಬೇಕು; ಗುಣಮಟ್ಟದ ಶಿಕ್ಷಣ ಮತ್ತು ಗುಣಮಟ್ಟದ ಪಠ್ಯಕ್ರಮವನ್ನು ಸಜ್ಜುಗೊಳಿಸಬೇಕು.
  ಹೈಸ್ಕೂಲು ಮಟ್ಟದಿಂದ ಮಕ್ಕಳು ಮಾಧ್ಯಮದ ಆಯ್ಕೆಗೆ ಸ್ವತಂತ್ರರು. ಅಷ್ಟು ಹೊತ್ತಿಗೆ ಅವರು ಇಂಗ್ಲಿಶ್‌ ಭಾಷೆಯ ಮೇಲೆ ನಿಯಂತ್ರಣ ಸಾಧಿಸುವಂತೆ ಸರ್ಕಾರವು ನೋಡಿಕೊಳ್ಳಬೇಕು.
  ಇಂಗ್ಲಿಶ್‌ ಭಾಷೆಯೇ ಗೊತ್ತಿಲ್ಲದವರು ಶಿಕ್ಷಕರಾಗಿ, ಆಂಗ್ಲ ಪಠ್ಯಗಳನ್ನು ಬೋಧಿಸುವ, ಮಕ್ಕಳನ್ನು ಇನ್ನಷ್ಟು ತಪ್ಪು ಹಾದಿಗೆ ಎಳೆಯುವ ದೃಶ್ಯವನ್ನು ನಾನು (ಆಂಗ್ಲ ಮಾಧ್ಯಮ ಶಾಲೆಗಳಲ್ಲಿ) ಊಹಿಸಿಕೊಳ್ಳುತ್ತಿದ್ದೇನೆ.
  ಕನ್ನಡವನ್ನೇ ಸರಿಯಾಗಿ ಕಲಿಸದ ಶಾಲೆಗಳಿರುವಾಗ ಇಂಗ್ಲಿಶ್‌ ಮಾಧ್ಯಮದ ಶಾಲೆಗಳಿಂದ ಮಕ್ಕಳು ಕಲಿಯವುದಾದರೂ ಏನು ಎಂಬ ಪ್ರಶ್ನೆಗೂ ನಾವು ಉತ್ತರ ಕಂಡುಕೊಳ್ಳಬೇಕು. ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದಾಗಲೂ, ಕನ್ನಡ ಶಾಲೆಗಳನ್ನು ನೋಡಿಕೊಳ್ಳುವಾಗಲೂ, ಕೇವಲ ಪರೀಕ್ಷೆಗಳಿಂದಲೇ ಅಲ್ಲ, ಇತರೆ ವಿಧಾನಗಳಿಂದಲೂ ಮಕ್ಕಳು ಭಾಷೆಯನ್ನು ಚೆನ್ನಾಗಿ ಕಲಿತಿದ್ದಾರೆಯೇ ಎಂದು ಅಳೆಯಬೇಕಲ್ಲವೆ? ಈ ಅಳೆಯುವ ಕೆಲಸವೂ ನಡೆಯುತ್ತಿಲ್ಲ. ಅದರಲ್ಲೂ ಕನ್ನಡಶಾಲೆಗಳನ್ನೇ ಸರಿಯಾಗಿ ನಡೆಸಿದ ದಾಖಲೆ ಇರದ ಪ್ರಸ್ತುತ ವ್ಯವಸ್ಥೆಯಿಂದ ಗುಣಮಟ್ಟದ ಇಂಗ್ಲಿಶ್‌ ಶಾಲೆ ಸಿಗುತ್ತದೆ, ಅಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂದು ನಿರೀಕ್ಷಿಸಬಹುದೆ?
  ಭಾಷೆಯ ಮೇಲೆ ಹಿಡಿತ ಬಂದರೆ ತಾನೆ, ಆ ಮಾಧ್ಯಮದ ಇತರೆ ವಿಷಯಗಳು ಅರ್ಥವಾಗುವುದು?
  ಕನ್ನಡ ಮಾಧ್ಯಮದಲ್ಲಿ ಕಲಿಸಬೇಕಾದ್ದು ಕೇವಲ ಭಾಷೆಗಾಗಿ ಮಾತ್ರವಲ್ಲ; ಕನ್ನಡದ ಬದುಕನ್ನು, ನಾವು ಹುಟ್ಟಿ ಬೆಳೆದ ಪರಿಸರ, ಸಮಾಜವನ್ನು ಅರ್ಥ ಮಾಡಿಕೊಳ್ಳಲು. ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಬಗ್ಗೆ ಕನ್ನಡದಲ್ಲಿ, ಅದರಲ್ಲೂ ಆಯಾ ಪ್ರದೇಶಗಳ ನುಡಿಗಟ್ಟುಗಳಲ್ಲಿ ಹೇಳಿದರೇ ಮನಸ್ಸಿಗೆ ನಾಟುತ್ತದೆ; ಶೋಷಣೆಯ ಇತಿಹಾಸ ಅರಿವಾಗುತ್ತದೆ. ಅದನ್ನೇ ಇಂಗ್ಲಿಶಿನಲ್ಲಿ ಹೇಳಿದಾಗಲೂ ಅಂಥದ್ದೇ ಭಾವನೆ ಸ್ಫುರಿಸಲಾರದು ಎಂಬುದು ನನ್ನ ಅನಿಸಿಕೆ. ಭಾಷೆಯು ಒಂದು ಸಮುದಾಯದ ಜೊತೆಗೆ ತಳುಕು ಹಾಕಿಕೊಂಡಿರುವುದರಿಂದ ಸಮುದಾಯವನ್ನು ಅರಿಯಲು ಆ ಸಮುದಾಯದ ಭಾಷೆಯೇ ಬೇಕು.
  ಇಂಗ್ಲಿಶಿನಲ್ಲೂ ಕನ್ನಡದ, ನಮ್ಮ ಸಮುದಾಯಗಳ ಕಂಪನ್ನು ಉಳಿಸಿಕೊಂಡು ಆಂಗ್ಲ ಮಾಧ್ಯಮ ಶಾಲೆಗಳನ್ನು ನಡೆಸಬಹುದು ಎಂಬ ವಿಶ್ವಾಸ ನನಗೆ ಈ ಹೊತ್ತಿನಲ್ಲಿ, ಈ ವ್ಯವಸ್ಥೆಯ ಮೇಲೆ ಇಲ್ಲ.
  ನಾನು ಆಂಗ್ಲ ಮಾಧ್ಯಮ ಶಾಲೆಗಳ ಪರವಾಗಿಯೂ ಇಲ್ಲ; ಕೇವಲ ಕನ್ನಡವೊಂದೇ ಇರಲಿ ಎಂಬ ಬಿಗುಮಾನವನ್ನೂ ಹೊಂದಿಲ್ಲ. ದಯವಿಟ್ಟು ನನ್ನನ್ನು ಒಂದು ಗುಂಪಿನ ವಕ್ತಾರ ಎಂದು ಬಗೆಯದಿರಿ ಎಂದು ವಿನಂತಿ. ಈ ಬಗೆಯ ಗುಂಪುಗಳು ಮಾತ್ರವೇ ಮಾತುಕತೆ ನಡೆಸಬಹುದು; ಅಥವಾ ಇಂಥ ಗುಂಪುಗಳು ಹೊಂದುವ ನಿಲುವುಗಳನ್ನು ಹೊರತುಪಡಿಸಿ ಬೇರಾವ ನಿಲುವೂ ಇಲ್ಲ ಎನ್ನುವುದು ಸರಿಯಲ್ಲ; ಉದಾಹರಣೆಗೆ ಭ್ರಷ್ಟಾಚಾರ ವಿರೋಧಿ ಹೋರಾಟದ ನಾಯಕ ಅಣ್ಣಾ ಹಜಾರೆ ಹೇಳುವ ಲೋಕಪಾಲ್‌ಗಿಂತಲೂ ಸಮರ್ಥವಾದ ಇನ್ನೊಂದು ಕಾಯ್ದೆಯನ್ನು ಇನ್ನೊಂದು ಸಮುದಾಯವು ರೂಪಿಸಿದ್ದು ಚರ್ಚೆಯಾಗುವುದೇ ಇಲ್ಲ! ಇದೂ ಒಂದು ರೀತಿಯಲ್ಲಿ ಶೋಷಣೆಯೇ.
  ಇನ್ನೊಂದು ವಿಷಯ: ಇಂಗ್ಲಿಶ್‌ ಭಾಷೆಯು ನೂರಾರು ವಿಷಯವಿಭಾಗಗಳಲ್ಲಿ ಸಾವಿರಾರು ಹೊಸ ಪದಗಳನ್ನು ಸೃಷ್ಟಿಸುತ್ತ ನಡೆದಿದೆ. ಅವುಗಳಿಗೆ ಕನ್ನಡದಲ್ಲಿ ಪದಗಳನ್ನು ಹುಡುಕುವುದು ಅಸಾಧ್ಯದ ಮಾತು. ಉನ್ನತ ಶಿಕ್ಷಣದಲ್ಲಿ ಕನ್ನಡ ಪಠ್ಯವಂತೂ ಕನಸಿನ ಹತ್ತಿರಕ್ಕೂ ಬರದು. ಆದ್ದರಿಂದ ಯಾವಾಗಲೂ ಕನ್ನಡವೇ ಮಾಧ್ಯಮವಾಗಿರಬೇಕು ಎನ್ನುವುದೂ ಸಲ್ಲದು.
  ಭಾಷೆಯ ಆಧಾರದಲ್ಲಿ ಚರ್ಚೆ ಮಾಡುವ ಬದಲು ಬದುಕಿನ ಆಧಾರದಲ್ಲಿ ಚರ್ಚೆ ಮಾಡಿದರೆ, ಮಾಧ್ಯಮದ ಆಯ್ಕೆಗಿಂತ ಗಂಭೀರವಾದ ಸಮಸ್ಯೆಗಳತ್ತಲೂ ನಾವು ಗಮನ ಹರಿಸಬಹುದು. ಉತ್ತಮ ಶಿಕ್ಷಕರಿಲ್ಲದ, ಸಂಪನ್ಮೂಲಗಳು ಸೋರಿ ಹೋಗುತ್ತಿರುವ, ಸಮುದಾಯದ ಸಂಗತಿಗಳೇ ಪಠ್ಯದಲ್ಲಿರದ, ಸಮಕಾಲೀನ ಬದುಕಿಗೆ ಸ್ಪಂದಿಸದ ಶಿಕ್ಷಣ ರಂಗವು ಇಂಗ್ಲಿಶ್‌ ಮಾಧ್ಯಮ ಶಾಲೆ ತೆರೆಯುವುದರಿಂದ ಹಿಂದೆಂದೂ ಕಂಡರಿಯದ ಮಹಾನ್‌ ಕ್ರಾಂತಿ ಆಗಲಿದೆ ಎಂಬ ಭ್ರಮೆ ನನಗಿಲ್ಲ.
  ಪತ್ರಿಕಾಕಾಯಕದಲ್ಲೂ ಹೀಗೆ ಇಂಗ್ಲಿಶನ್ನು ಭಾಷೆಯಾಗಿ ಕಲಿಯದೆ ಬಂದವರು ಒಲ್ಳೆಯ ಅನುವಾದದಲ್ಲಿ ವಿಫಲರಾಗುವುದನ್ನೂ ನಾನು ನೋಡಿದ್ದೇನೆ. ಬದುಕಿನ ಹಲವು ವಿಷಯಗಳ ಬಗ್ಗೆ ಭಾವತೀವ್ರತೆ (ಪ್ಯಾಶನ್‌) ಇರದಿದ್ದರೆ ಹೀಗಾಗುತ್ತದೆ.
  ದೀರ್ಘ ಪ್ರತಿಕ್ರಿಯೆಗೆ ಮನ್ನಿಸಿ.
  ವಿಶ್ವಾಸದಿಂದ

  Reply
  1. ರಾಕೇಶ್ ಶೆಟ್ಟಿ

   ನಾನು ಹತ್ತರವರೆಗೆ ಓದಿದ್ದು ಕನ್ನಡ ಮಾಧ್ಯಮದಲ್ಲೇ,ಸರ್ಕಾರಿ ಶಾಲೆಯಲ್ಲೇ.ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಂಡಾಗ ಇಂಗ್ಲಿಷ್ನಿಂದಾಗಿ (ಒಂದು ಸಬ್ಜೆಕ್ಟ್ ಆಗಿ ಇಂಗ್ಲಿಷ್ ನನಗೆ ಸಮಸ್ಯೆಯಾಗಿರಲಿಲ್ಲ.ಆದರೆ ಕನ್ನಡದ ಪದಗಳ ಅನುವಾದ.ಅದರ ಬಗ್ಗೆ ಬರೆಯ ಹೊರಟರೆ ವಿಷಯಾಂತರವಾಗುತ್ತದೆ)ಪಟ್ಟ ಪಾಡು ನನಗೆ ಗೊತ್ತು.ಇಂದಿಗೆ ಸಾಫ್ಟ್ವೇರ್ ತಂತ್ರಜ್ನಾಗಿದ್ದೇನೆ.ನಾ ಪಟ್ಟ ಪಾಡು ಮುಂದೆ ನನ್ನ ಮಕ್ಕಳಿಗೆ ಬರುವುದು ನನಗಂತೂ ಇಷ್ಟವಿಲ್ಲ.

   ಸೂರ್ಯ, ಹೇಳಿದಂತೆ ಬಿಟ್ಟಿ ಉಪದೇಶ ಕೊಡುವುದು ತಪ್ಪೇ.ಈ ಬಗ್ಗೆ ಸಾಹಿತಿಗಳೇ ಯೋಚಿಸಬೇಕು.
   ಹಾಗೆಯೇ, ಬೇಳೂರು ಅವರ ಮಾತುಗಳು ಚಿಂತನಾರ್ಹವಾಗಿವೆ

   Reply
 3. prasad raxidi

  ಇಂದಿಗೆ ಖಂಡಿತ ಇಂಗ್ಲಿಷ್ ಅನಿವಾರ್ಯ ಬೇರೆ ಮಾತಿಲ್ಲ, ಆದರೆ ಕನಿಷ್ಟ ಏಳನೇ ತರಗತಿಯವರೆಗಾದರೂ ಶಿಕ್ಷಣ, ಆ ರಾಜ್ಯದ ಆಡಳಿತ ಭಾಷೆಯೇ ಆಗಿರಬೇಕೆಂದು ನನ್ನ ಅಭಿಮತ (ಮಾತ್ರಭಾಷೆ ಎಂಬ ಪದವನ್ನು ನಾನು ಉದ್ದೇಶಪೂರ್ವಕವಾಗಿಯೇ ಬಳಸಿಲ್ಲ) ನಾನೂ ಪ್ರೌಢಶಾಲೆಯವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿತವನು, ನನ್ನ ಮಕ್ಕಳನ್ನೂ ಕನ್ನಡ ಶಾಲೆಯಲ್ಲೇ ಓದಿಸಿ ಜೊತೆಯವರಿಂದ ಜುಗ್ಗ-ತಲೆತಿರುಕ ಇತ್ಯಾದಿ ಹಂಗಿಸಿಕೊಂಡವನು. ನಾನು ಸರಿಯಾಗಿ ಇಂಗ್ಲಿಷ್ ಕಲಿಯದ್ದರಿಂದ ಏನು ತೊಂದರೆಯಾಯಿತೆಂದೂ ಅರಿತವನು. ಆದರೆ ನಾವಂದುಕೊಂಡಂತೆ ಸರ್ಕಾರ ಇಂಗ್ಲಿಷ್ ಮಾದ್ಯಮದ ಶಾಲೆಗಳನ್ನು ತೆರದಾಕ್ಷಣ ಕನ್ನಡ ಸಾಯುವುದೂ ಇಲ್ಲ- ನಮ್ಮ ಮಕ್ಕಳು ಇಂಗ್ಲಿಷ್ ಭಾಷಾವಿದರೂ ಆಗುವುದಿಲ್ಲ ಯಾಕೆಂದರೆ ದೊಡ್ಡನಗರಗಳು ಬಿಟ್ಟರೆ ಸಣ್ಣ ಊರು ಮತ್ತು ಹಳ್ಳಿಗಳಲ್ಲಿ ಈಗ ಸಾಕಷ್ಟಿರುವ ಖಾಸಗಿ ಇಂಗ್ಲಿಷ್ ಶಾಲೆಗಳು ಕಲಿಸುವ ಇಂಗ್ಲೀಷ್ ಯಾವ ಉಪಯೋಗಕ್ಕೂ ಇಲ್ಲದಂಥಾದ್ದು, ಅಲ್ಲಿ ಕಲಿಯುತ್ತಿರುವ ಮಕ್ಕಳಿಗೆ, ಅತ್ತ ಕನ್ನಡವೂ ಇಲ್ಲ ಇತ್ತ ಇಂಗ್ಲೀಷೂ ಬರಲಿಲ್ಲ ಎಂಬಂತಾಗಿದೆ. ಇನ್ನು ಈಗಲೇ ಸರಿಯಾದ ಶಿಕ್ಷಕರಿಲ್ಲದೆ ನರಳುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಏನು ಕಲಿಸಿಯಾರು.. ನಾವೆಲ್ಲ ಒತ್ತಾಯಿಸಬೇಕಾದದ್ದು ಮೊದಲನೆಯದಾಗಿ ದೇಶಾದ್ಯಂತ ಸಮಾನ ಶಿಕ್ಷಣ ವ್ಯವಸ್ತೆ ಜಾರಿಗೊಳಿಸುವ ಬಗ್ಗೆ, ಹಾಗೇ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಚೆನ್ನಾಗಿ ಕಲಿಸುವ ಬಗ್ಗೆ. ಹಳ್ಳಿಯ ಮಕ್ಕಳಿಗೆ(ನಗರಗಳಲ್ಲೂ ಕೆಳವರ್ಗದ ಮಕ್ಕಳಿಗೆ)ಚೆನ್ನಾಗಿ ಇಂಗ್ಲಿಷ್ ಕಲಿಸಲು ಒಂದು ಆಂದೋಲನವನ್ನೇ ಪ್ರಾರಂಭಿಸಬೇಕು(ಸಾಕ್ಷರತಾ ಆಂದೋಲನದಂತೆ). ಅಲ್ಲಿಯವರೆಗೆ ಇಂಗ್ಲಿಷ್ ಕಲಿಸುವ ಬಗ್ಗೆ ನಾವು ನಮ್ಮ ನಮ್ಮಲ್ಲೇ ವಾದವಿವಾದ ಮಾಡುತ್ತಾ ಕಿತ್ತಾಡುತ್ತಾ ಗಾದೆಮಾತಿನಲ್ಲಿ ಹೇಳುವಂತೆ “ಜೊಳ್ಳು ಕುಟ್ಟಿ ಅಕ್ಕಿ ಹುಡುಕುತ್ತಾ ” ಇರುತ್ತೇವೆ.

  Reply
 4. Ananda Prasad

  ನಿರರ್ಗಳ ಇಂಗ್ಲೀಷ್ ಮಾತಾಡಲು ಬರಬೇಕಾದರೆ ಪೂರ್ವಪ್ರಾಥಮಿಕ ಹಂತದಿಂದಲೇ (ಅಂದರೆ ಅಂಗನವಾಡಿ ಹಂತದಿಂದಲೇ) ಇಂಗ್ಲೀಷ್ ಮಾಧ್ಯಮದಲ್ಲೇ ಕಲಿಸಬೇಕಾದೀತು, ಆರನೆಯ ತರಗತಿಯಿಂದ ಇಂಗ್ಲೀಷ್ ಮಾಧ್ಯಮಕ್ಕೆ ಬದಲಾಯಿಸುವುದರಿಂದ ದೊಡ್ಡ ಪ್ರಯೋಜನ ಆಗಲಾರದು. ಕಲಿಕೆಯಲ್ಲಿ ಚುರುಕಾಗಿರುವ ಮಕ್ಕಳು ಇದಕ್ಕೆ ಹೊಂದಿಕೊಳ್ಳಬಹುದು, ಕಲಿಕೆಯಲ್ಲಿ ಹಿಂದಿರುವ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ವಿಷಯ ಅರ್ಥವಾಗದೆ ಎಡಬಿಡಂಗಿಗಳಾಗುವುದು ಗ್ಯಾರಂಟಿ. ಇಲ್ಲಿಯವರೆಗೆ ಅಂಥವರಿಗೆ ಇಂಗ್ಲೀಷ್ ವಿಷಯ ಒಂದು ಹೊರೆಯಾಗಿದ್ದರೆ ಇನ್ನು ಮುಂದೆ ಅವರಿಗೆ ಎಲ್ಲ ವಿಷಯಗಳು ಅಂದರೆ ವಿಜ್ಞಾನ, ಗಣಿತ, ಸಮಾಜ ಇತ್ಯಾದಿಯೂ ಹೊರೆಯಾಗಬಹುದು.

  Reply
 5. vageesh kumar G A

  ಇಂಗ್ಲೀಶ್ ಮಾಧ್ಯಮ ಬೇಕಾ ಬೇಡವಾ ಅನ್ನೋ ಪ್ರಶ್ನೆಗೆ ನನ್ನ ಪ್ರಕಾರ ಸಂಪೂರ್ಣ ಇಂಗ್ಲೀಶ್ ಮಾಧ್ಯಮ ಬೇಡ. ಆದರೆ, ದೂರದೃಶ್ಟಿಯುಳ್ಳ ಒಂದು ಸರ್ಕಾರ ಬಂದರೆ ಇದಕ್ಕೆ ಸುಲಭ ಪರಿಹಾರವಿದೆ. ಒಂದನೇ ತರಗತಿಯಿಂದಲೇ 1,2,3 ಅಂತ ಇಂಗ್ಲೀಶ್ ಪಠ್ಯ ಇಡಿ. ಉಳಿದದ್ದೆಲ್ಲಾ ಕನ್ನಡವೇ ಇರಲಿ. ಇಂಗ್ಲೀಶ್ ನಲ್ಲಿ ನೂರಾರು ಪ್ರಕಾರಗಳಿವೆ – ಅವುಗಳನ್ನು ಅಫ್ಶನಲ್ ಆಗಿ ಇಡಿ (ಕಮ್ಯೂನಿಕೆಟಿವಿ ಇಂಗ್ಲೀಶ್, ಟೆಕ್ನಾಲಜಿಕಲ್ ಇಂಗ್ಲೀಶ್, ವರ್ಬಲ್ ಇಂಗ್ಲೀಶ್ etc). ಅದರ ಮೇಲೆ ಮುಂದಿನ ತರಗತಿಗಳಿಂದ ಇಂಗ್ಲೀಶ್ ಆಕ್ಸೆಂಟ್ ಆಡಿಯೋ ಪ್ರಶ್ನಾ ಪತ್ರಿಕೆಗಳನ್ನೂ ಪರೀಕ್ಷೆಗಳನ್ನೂ ರೆಡಿ ಮಾಡಿ. ಆದರೆ, ಇದಕ್ಕಿಂತ ಮೊದಲು, ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಟ್ರೈನ್ಡ್ ಇಂಗ್ಲೀಶ್ ಮೇಸ್ಟ್ರುಗಳನ್ನು ಕೇಳಿದ ಸಂಬಳ ಕೊಟ್ಟು ನೇಮಕ ಮಾಡಿ. ಇಲ್ಲದಿದ್ದರೆ ಇಂಗ್ಲೀಶ್ ಮಾಧ್ಯಮ ಮಾಡಿದ್ರೂ ಒಂದೇ ಮಾಡದಿದ್ರೂ ಒಂದೇ. ಸುಮಾರು 10 ವರ್ಶಗಳವರೆಗೆ ಮಕ್ಕಳಲ್ಲಿ ನೆನಪಿನ ಶಕ್ತಿ ತುಂಬಾ ಚೆನ್ನಾಗಿರುತ್ತದೆ. (ಬೇರೆ ವಿಶಯಗಳ ಬಗ್ಗೆ ಮನಸ್ಸು ಡೈವರ್ಟ್ ಆಗಲ್ಲ). ಹಾಗಾಗಿ ಆಗಲೇ ಶೇಕ್ಸ್ ಪೀಯರ್ ಕಾದಂಬರಿಗಳನ್ನು ಪಠ್ಯವಾಗಿ ಮಾಡಲು ಬದಲು, ಹೇಗೆ ಇಂಗ್ಲೀಶ್ ಈಸಿಯಾಗಿ ಕಲಿಯಬಹುದು, ಕಮ್ಯೂನಿಕೇಶನ್, ರೈಟಿಂಗ್ ಹೇಗೆ ಇಂಪ್ರೂವ್ ಮಾಡಬಹುದು ಎಂದು ಹೇಳಿ ಕೊಡಿ. ಇದನ್ನು ಮಾಡಲು ಯಾವ ಸರ್ಕಾರಕ್ಕೆ ವಿಶನ್ ಇದೆ. ಸ್ಪೇಸ್ ಕಡಿಮೆ ಇದ್ದದರಿಂದ ತುಂಬಾ ಬರೆಯಲು ಆಗುತ್ತಿಲ್ಲ.

  Reply
 6. Ananda Prasad

  ಕನ್ನಡ ಮಾಧ್ಯಮದ ಸರ್ಕಾರೀ ಶಾಲೆಗಳನ್ನು ಬಿಟ್ಟು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಧ್ಯಮ ಶಾಲೆಗಳಿಗೆ ಸೇರಿಸುವುದರಿಂದ ಸರ್ಕಾರೀ ಶಾಲೆಗಳಿಗೆ ಮಕ್ಕಳ ಕೊರತೆ ಆಗಿ ಅವುಗಳನ್ನು ಮುಚ್ಚುವ ಪರಿಸ್ಥಿತಿ ಬರುವುದನ್ನು ತಡೆಯಲೋಸುಗ ಒಂದನೇ ತರಗತಿಯಿಂದಲೇ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಭಾಷೆಯ ಬೋಧನೆ ಶುರು ಮಾಡಿ ನಾಲ್ಕಾರು ವರ್ಷ ಆಗುತ್ತ ಬಂತು. ಆದರೆ ಅದರಿಂದ ನಿರೀಕ್ಷಿತ ಪರಿಣಾಮ ಆಗಿಲ್ಲ. ಅಂದರೆ ಪೋಷಕರು ಹಳ್ಳಿಗಳಲ್ಲೂ ತಮ್ಮ ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವ ಪ್ರವೃತ್ತಿ ಕಡಿಮೆಯಾಗಿಲ್ಲ ಹಾಗೂ ತನ್ಮೂಲಕ ಮಕ್ಕಳ ಕೊರತೆಯಿಂದಾಗಿ ಸರ್ಕಾರೀ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ಈಗ ಇದೇ ಕಾರಣಕ್ಕಾಗಿ ಆರನೆಯ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಕಲಿಕೆ ಆರಂಭಿಸುವುದಾಗಿ ಸರ್ಕಾರ ಹೇಳುತ್ತಿದೆ. ಇದರಿಂದಲೂ ನಿರೀಕ್ಷಿತ ಪರಿಣಾಮ ಉಂಟಾಗುವ ಸಾಧ್ಯತೆ ಇಲ್ಲ ಎಂದು ಈಗಲೇ ಹೇಳಬಹುದು. ಏಕೆಂದರೆ ಹಳ್ಳಿಯ ಪೋಷಕರ ತಲೆಯಲ್ಲಿಯೂ ಆಂಗ್ಲ ಮಾಧ್ಯಮದ ಹುಳು ಹೊಕ್ಕಿದ್ದು ಇದನ್ನು ತಡೆಯುವುದು ಬಹಳ ಕಷ್ಟ. ಇದನ್ನು ತಡೆಯಬೇಕಾದರೆ ಅಂಗನವಾಡಿಯಿಂದಲೇ ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ವ್ಯವಸ್ಥೆ ತರಬೇಕೋ ಏನೋ. ಇಂದು ಸಣ್ಣ ಪಟ್ಟಣ ಹಾಗೂ ದೊಡ್ಡ ಹಳ್ಳಿಗಳಿಗೂ ಪೂರ್ವ ಪ್ರಾಥಮಿಕ ಹಂತದ ಖಾಸಗಿ ಆಂಗ್ಲ ಮಾಧ್ಯಮದ ಎಲ್. ಕೆ. ಜಿ. ವ್ಯವಸ್ಥೆ ಕಾಲಿಟ್ಟಿದ್ದು ಹಳ್ಳಿಗಳ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಇನ್ನು ಕೆಲವು ಪ್ರತಿಷ್ಠೆಯ ಹಿಂದೆ ಓದುವ ಬಡವರೂ ಕೂಡ ಇಂಥ ಎಲ್. ಕೆ.ಜಿ. ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವ ಪ್ರವೃತ್ತಿ ಶುರುವಾಗಿದೆ. ಜನರಿಗೆ ತಮ್ಮ ಮಕ್ಕಳ ಬದುಕೇ ದೊಡ್ದದಾಗಿರುವಾಗ ಇಂಥ ಪ್ರವೃತ್ತಿಯನ್ನು ತಡೆಯಲು ಸಾಧ್ಯವಿಲ್ಲ. ಹಣ, ಅಂತಸ್ತು, ಪ್ರತಿಷ್ಠೆ ಎಂಬ ಅಮಲಿನಲ್ಲಿ ಸಿಲುಕಿರುವ ನಮ್ಮ ಸಮಾಜದ ಇಂದಿನ ಅವಸ್ಥೆಯಲ್ಲಿ ಸಂಸ್ಕೃತಿ, ಭಾಷೆ ಯಾರಿಗೆ ಬೇಕಾಗಿದೆ? ಕಾಲಾಯ: ತಸ್ಮೈ ನಮಃ ಎಂದು ಹೇಳದೆ ಅನ್ಯ ಮಾರ್ಗ ಇಲ್ಲ.

  Reply
 7. balu

  Up to Bcom.i had studied in kannada medium almost 3 yeard we 3 to cry on foot path because of eng. problem yaradru full kannada medium andre namma raktha kudiyuthhe + balu

  Reply
 8. devaraj

  ನಮ್ಮಲ್ಲಿ ಕೆಲವರು ಕನ್ನಡದ ಬಗೆಗಿೇನ ಚಿಂತನೆ ಬರೆ ಶಿಕ್ಷಣ ಮಾಧ್ಯಮದ ಪ್ರಶ್ನೆಯೇ ಬೇರೆ ಎನ್ನುತ್ತಾರೆ. ಇನ್ನು ಕೆಲವರು ಮುಂದಿನ ದಿನಗಳಲ್ಲಿ ಕನ್ನಡದಂತಹ ಸ್ಥಳೀಯ ಭಾಷೆಗಳಿಗೆ ಉಳಿಗಾಲವೇ ಇಲ್ಲ, ನಮ್ಮ ಸುತ್ತಲೂ ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಕೊಟ್ಟು ಕನ್ನಡ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಿ ಎನ್ನುವುದು ಹಾಸ್ಯಾಸ್ಪದ. ಹಾಗಾಗಿ ನಾನು ಇಂಗ್ಲಿಷ್ ಪರ ಎನ್ನುವವರಿದ್ದಾರೆ. ಇನ್ನು ಕೆಲವರು ಅಂಬೇಡ್ಕರ್ ನಿಮ್ಮ ಮಕ್ಕಳಿಗೆ ಒಳ್ಳೆಯ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಿ ಎಂದು ಹೇಳಿದ್ದಾರೆ, ಅದಕ್ಕಾಗಿ ನಮ್ಮದು ಇಂಗ್ಲಿಷ್ ಮಾರ್ಗ ಎನ್ನುತ್ತಾರೆ. ಇವೆಲ್ಲ ನಾವು ಬಿಡಿಸಿಕೊಳ್ಳಲೇಬೇಕಾದ ತೊಡರುಗಳು. ಕನ್ನಡ ಮಾಧ್ಯಮದ ಪರವಿರುವವರೂ ಭಾವನಾತ್ಮಕವಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಓದಿಸುತ್ತಿರುವವರು ಹಾಗೂ ಓದಿಸಲು ತುದಿಗಾಲಲ್ಲಿ ನಿಂತವರೂ ಭಾವನಾತ್ಮಕವಾಗಿದ್ದಾರೆ.

  Reply

Leave a Reply

Your email address will not be published.