ಪ್ರೀತಿಯ ಜಾನ್, ನಿನಗೆ ಸಾಯಲಿಕ್ಕೆ ಯಾರು ಹೇಳಿದ್ದು?


-ಬಿ. ಶ್ರೀಪಾದ್ ಭಟ್ 


 

1986 ರಲ್ಲಿ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಮೊದಲ ಬಾರಿಗೆ ಜಾನ್ ಅಬ್ರಹಾಂ ನಿರ್ದೇಶನದ “ಅಗ್ರಹಾರತ್ತಿಲ್ ಕತ್ತೈ” ತಮಿಳು ಚಿತ್ರವನ್ನು ನೋಡಿದಾಗ ಆಗ ಮನಸ್ಸಿನಲ್ಲಿ ಉಂಟಾದ ಇನ್ನಿಲ್ಲದ ತುಮುಲಗಳು ಮತ್ತು ತಲ್ಲಣಗಳು ಮೊನ್ನೆ ಸ್ನೇಹಿತರೊಂದಿಗೆ 27 ವರ್ಷಗಳ ನಂತರ 5ನೇ ಬಾರಿ ಈ ಚಿತ್ರವನ್ನು ನೋಡಿದಾಗಲೂ ಸಹ ಅದೇ ತಲ್ಲಣ ಹಾಗೂ ಅನುಭವಗಳು ಈಗಲೂ ಉಂಟಾಯಿತು. ಹಳ್ಳಿಯೊಂದರಲ್ಲಿನ ಎಲ್ಲ ಅನಿಷ್ಟಗಳಿಗೆ ನಾಲ್ಕು ಕಾಲಿನ ಕತ್ತೆಯನ್ನು ಹೊಣೆಗಾರನನ್ನಾಗಿ ಮಾಡಿ ಅದನ್ನು ಬಾಡಿಗೆ ಹಂತಕರಿಂದ ಕೊಲ್ಲಿಸಲಾಗುತ್ತದೆ. ಆದರೆ ಕತ್ತೆ ಸತ್ತ ನಂತರ ಇದೇ ಹಳ್ಳಿಯಲ್ಲಿ ಪವಾಡ ಸದೃಶ್ಯ ಬದಲಾವಣೆಗಳಾಗುತ್ತವೆ. ಕಾಲಿಲ್ಲದವನಿಗೆ ಕಾಲು ಬರುತ್ತದೆ. ರೋಗಿಷ್ಟ ಗುಣಮುಖನಾಗುತ್ತಾನೆ. ಅಲ್ಲಿ ತಾವೇ ಸಾಯಿಸಿದ ಕತ್ತೆಯನ್ನು ದೇವರ ಮೂರ್ತಿಯಾಗಿ ಪ್ರತಿಷ್ಟಾಪಿಸುತ್ತಾರೆ. ನಂತರ ಸತ್ತ ಕತ್ತೆಯ ಕಳೇಬರವನ್ನು ಅತ್ಯಂತ ಗೌರವಪೂರ್ಣವಾಗಿ ದಹನ ಮಾಡಲು ನಿರ್ಧರಿಸುತ್ತಾರೆ. ಆದರೆ ದಹನದ ಸಂದರ್ಭದಲ್ಲಿ ಇಡೀ ಹಳ್ಳಿ ಸುಟ್ಟು ಹೋಗುತ್ತದೆ. ಕಡೆಗೆ ಉಳಿದುಕೊಳ್ಳುವುದು ಮೊದಲು ಆ ಕತ್ತೆಯನ್ನು ಸಾಕುತ್ತಿದ್ದ ಅಧ್ಯಾಪಕ ಮತ್ತು ಆತನ ಕೆಲಸದ ಹುಡುಗಿ ಮಾತ್ರ.

ಇಲ್ಲಿ ಜಾನ್ ತನ್ನ ಅದ್ಬುತ black humor ಮೂಲಕ ಇಡೀ ಚಿತ್ರವನ್ನು ಕಟ್ಟುವ ಶೈಲಿ ಮನಮುಟ್ಟುವಂತದ್ದು. ಆತ ಬಳಸುವ ಸಾಂಕೇತಿಕ ರೂಪಕಗಳು ಪ್ರತಿ ಫ್ರೇಮಿನಲ್ಲಿ ಕಲಾತ್ಮಕವಾಗಿ ಅತ್ಯಂತ ಒರಟಾಗಿ ಮೈದಾಳುತ್ತಾ ಹೋಗುತ್ತದೆ. ಈ ಚಿತ್ರವನ್ನು ಹೀಗೆಯೇ ಎಂದು ಹೇಳಲು ಈ ಕೆಲವು ವಾಕ್ಯಗಳಲ್ಲಿ ಸಾಧ್ಯವೇ ಇಲ್ಲ. ಈ ಜಾನ್‌ನನ್ನು ವಾಕ್ಯಗಳಲ್ಲಿ ವಿಮರ್ಶಿಸುವುದು ಬಲು ಕಷ್ಟ. ಅದು ಅಪೂರ್ಣ. ಆ ರೀತಿ ಮಾಡಲು ಹೊರಟರೆ ಅದು ವಿಮರ್ಶಕನ ಸೋಲು. ಆತನ ಚಿತ್ರವನ್ನು ನೋಡಿಯೇ ಅನುಭವಿಸಬೇಕು. ಅದೇ ರೀತಿ “ಅಮ್ಮ ಅರಿಯನ್” ಎನ್ನುವ ಸಂಕೀರ್ಣ ಸಿನಿಮಾದಲ್ಲಿ ಜಾನ್ ವ್ಯಕ್ತಿಯೊಬ್ಬನ ಐಡೆಂಟಿಟಿಯನ್ನು ಹುಡುಕುತ್ತಾ ಆ ಮೂಲಕ ವರ್ಗ ಸಂಘರ್ಷಗಳನ್ನು, ವಿದ್ಯಾರ್ಥಿ ಚಳವಳಿಗಳನ್ನು ಪರಾಮರ್ಶಿಸುತ್ತಾ, ಕೇರಳದ ಗ್ರಾಮಗಳ ಸಾಮಾಜಿಕ ಮತ್ತು ಫ್ಯೂಡಲ್ ಸಂರಚನೆಯನ್ನು ಅರ್ಥೈಸಿಕೊಳ್ಳಲು ಹುಡುಕಾಡುತ್ತಾನೆ. ಭೂಗತ ಚಳವಳಿಗಳ ಸೋಲನ್ನು ವಿಮರ್ಶಿಸುತ್ತಾನೆ. ಇಷ್ಟೊಂದು ಸಂಕೀರ್ಣ ವಿಷಯಗಳನ್ನು ಒಂದು ಬಂಧದಲ್ಲಿ ಪೋಣಿಸುತ್ತ ಸಿನಿಮಾವನ್ನು ನಾವಿಕನಂತೆ ಮುನ್ನಡೆಸುವಲ್ಲಿ ಜಾನ್ ಸಫಲನಾಗುತ್ತಾನೆ.

“ಅಮ್ಮ ಅರಿಯನ್” ಜಾನ್ ಅಬ್ರಹಾಂನ ಕುಶಲ ಹಾಗೂ ಪಳಗಿದ ಚಿತ್ರಕಥೆಯ ರಚನೆಗೆ ಅತ್ಯುತ್ತಮ ಉದಾಹರಣೆ. ತನ್ನ ಬದಲಾದ ಕಾಲಘಟ್ಟಗಳ ನಂತರವೂ, ಅನೇಕ ಸಾಮಾಜಿಕ ಹಾಗೂ ರಾಜಕೀಯ ಸ್ಥಿತ್ಯಂತರಗಳ, ಸಿದ್ಧಾಂಗಳ ಪಲ್ಲಟಗಳ ನಂತರವೂ ಒಂದು ಚಿತ್ರ ತನ್ನ ಮೊದಲಿನ ಕಾವನ್ನು ಉಳಿಸಿಕೊಂಡಿದ್ದರೆ ಅದು ಶ್ರೇಷ್ಟ ಚಿತ್ರವೇ ಸರಿ ಹಾಗೂ ಅದರ ನಿರ್ದೇಶಕನೂ ಸಹ. ಈತನ ಈ ಚಿತ್ರಗಳು ಕೇರಳದಲ್ಲಿ, ತಮಿಳುನಾಡಿನಲ್ಲಿ ಎಲ್ಲಾ ವರ್ಗಗಳಿಗೂ ತಲುಪಿದ್ದು ಇದರ ಬಲು ದೊಡ್ಡ ಗೆಲುವು. ಇದಲ್ಲದೆ ಈ ಪ್ರತಿಭಾವಂತ ಜಾನ್ ಅಬ್ರಹಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ “ವಿದ್ಯಾರ್ಥಿಗಳೆ ಇದಿಲೆ ಇದಿಲೆ”, ಮತ್ತೊಂದು ಮಲೆಯಾಳಿ ಸಿನಿಮಾ ಹೀಗೆ ನಾಲ್ಕು ಸಂವೇದನಶೀಲ, ಸೂಕ್ಷ್ಮ ಸಿನಿಮಾಗಳ ಮೂಲಕ ತನ್ನ ಜೀವನವನ್ನು ನಿಜಕ್ಕೂ ಸಾರ್ಥಕಗೊಳಿಸಿಕೊಂಡ.

ಆದರೆ ಜಾನ್ ವಿಷಯದಲ್ಲಿ ಇದೂ ಕೂಡ ಬಲು ದೊಡ್ಡ ವ್ಯಂಗ್ಯವೇ ಸರಿ!! ಏಕೆಂದರೆ ತನ್ನ 49ನೇ ವಯಸ್ಸಿನಲ್ಲಿ ಮಹಡಿಯ ಮೇಲಿಂದ ಬಿದ್ದು ತೀರಿಕೊಂಡ ಈ ಜಾನ್ ಅಬ್ರಹಂನನ್ನು ಭಾರತೀಯ ಚಿತ್ರರಂಗ ವಿಕ್ಷಿಪ್ತ ವ್ಯಕ್ತಿಯನ್ನಾಗಿಯೂ, ಒಬ್ಬ ಪ್ರತಿನಾಯಕನನ್ನಾಗಿಯೇ ಮತ್ತು ತಂಟೆಕೋರನನ್ನಾಗಿಯೇ ನೋಡಿತು. ಅನೇಕ ವಿಮರ್ಶಕರು ಈತನನ್ನು ಹುಚ್ಚನೆಂದೇ, ಅರಾಜಕತೆವಾದಿಯೆಂದೇ ಕರೆದರು. ಜಾನ್‌ನ ಗುರುವಾಗಿದ್ದ ಮತ್ತೊಬ್ಬ ಶ್ರೇಷ್ಟ ನಿರ್ದೇಶಕ “ಖುತ್ವಿಕ್ ಘಟಕ್” ವಿಷಯವಾಗಿಯೂ ಇದೇ ರೀತಿ ವ್ಯತಿರಿಕ್ತವಾಗಿ ನಡೆದುಕೊಂಡಿತು ಇಂಡಿಯಾದ ಚಿತ್ರರಂಗ. ಇಂತಹ ಹಿನ್ನೆಯಲ್ಲಿ ಮತ್ತೆ ನಮ್ಮ ಅಭಿಮಾನಿ ನಿರ್ದೇಶಕನನ್ನು ನೆನೆಸಿಕೊಳ್ಳುವುದು ತುಂಬಾ ಕ್ಲೀಷೆಯಾಗುತ್ತದೆ. ಈ ಮಲೆಯಾಳಿ ಹಿನ್ನೆಲೆಯ ಜಾನ್ ಅಬ್ರಾಹಂ ಎನ್ನುವ ಶ್ರೇಷ್ಟ ಚಿತ್ರ ನಿರ್ದೇಶಕನನ್ನು ಯಾವ ರೀತಿ ನೆನೆಯುವುದು ಎನ್ನುವುದು ತುಂಬಾ ಕ್ಲಿಷ್ಟದ ಕೆಲಸ.

ಸ್ವತಹ ಅತ್ಯಂತ ಸಂಕೀರ್ಣತೆಯ ಗೂಡಾಗಿದ್ದ ಈ ಪ್ರತಿಭಾವಂತ ಜಾನ್ ಅಬ್ರಾಹಂ ಒಂದು ಕಾಲದಲ್ಲಿ ಅದರಲ್ಲೂ 80ರ ದಶಕದಲ್ಲಿ ಕಾಲೇಜು ವಿಧ್ಯಾರ್ಥಿಗಳಾಗಿದ್ದ ನಮಗೆಲ್ಲ ಬಲು ದೊಡ್ಡ ಆದರ್ಶ ನಿರ್ದೇಶಕನಾಗಿದ್ದ. ಸಂಪೂರ್ಣವಾಗಿ ಭಿನ್ನವಾಗಿ ಮಾರ್ಕ್ಸವಾದವನ್ನು ಈತ ಅರ್ಥೈಸಿಕೊಂಡಿದ್ದ. ಇಲ್ಲಿ ರೋಮಾಂಟಿಸಂ ಇತ್ತು. ಮಲೆಯಾಳಂ ಮತ್ತು ತಮಿಳು ಚಿತ್ರ ನಿರ್ದೇಶಕನಾಗಿದ್ದ ಜಾನ್ ಮೂಲಭೂತವಾಗಿ ಮಾನವತಾವಾದಿಯಾಗಿದ್ದ. ಈ ಮಾನವತಾವಾದದ ಮೂಲಕವೇ ಚಿತ್ರರಂಗವನ್ನು ಬಳಸಿಕೊಂಡು ಸಾಮಾಜಿಕ ಬದಲಾವಣೆಗಳನ್ನು ಮಾಡಬಹುದು ಎಂದು ಅತ್ಯಂತ ಮುಗ್ಧವಾಗಿ ನಂಬಿದ್ದ ಮಾರ್ಕ್ಸವಾದಿ ಜಾನ್ ಅಬ್ರಹಂ ಎನ್ನುವ ಮುಗ್ಧ ನಿರ್ದೇಶಕನ್ನು ನಾವೂ ಈ ಕಾರಣಕ್ಕಾಗಿಯೇ ಅತ್ಯಂತ ಮುಗ್ಧತೆಯಿಂದ ಆರಾಧಿಸಿದ್ದೆವು. ತನ್ನ ಜೀವವಿಮಾ ಉದ್ಯೋಗವನ್ನು ತೊರೆದು ಪುಣೆಯ ಫಿಲ್ಮ ಇನ್ಸ್‌ಸ್ಟಿಟ್ಯೂಟಗೆ ಬಂದಾಗ ಅಲ್ಲಿ ಜಾನ್‌ಗೆ ಸಹಪಾಠಿಯಾಗಿದ್ದು “ಅಡೂರು ಗೋಪಾಲಕೃಷ್ಣನ್” ಹಾಗೂ ಬಹಳ ಮುಖ್ಯವಾಗಿ ಈತನ ಗುರುವಾಗಿದ್ದು ಮಹಾನ್ ನಿರ್ದೇಶಕ “ಖುತ್ವಿಕ್ ಘಟಕ್”. ಆದಷ್ಟು ನಯನಾಜೂಕತೆಯನ್ನು ಪಕ್ಕಕ್ಕೆ ಇಟ್ಟು ತನ್ನೊಳಗಿನ ಪ್ರತಿಭೆಯನ್ನೆಲ್ಲ ಬಳಸಿ ಅತ್ಯಂತ RAW ಮಟ್ಟದಲ್ಲಿ, ಮನಮುಟ್ಟುವಂತೆ ಚಿತ್ರಕಥೆಯನ್ನು ರೂಪಿಸುವುದನ್ನು ಈ ಜಾನ್ ತನ್ನ ಗುರುಗಳಾದ ಹಾಗೂ ಈ ಮಾದರಿಯ ಪಿತಾಮಹರೆಂದೇ ಕರೆಬಹುದಾದ ಮಾಂತ್ರಿಕ “ಖುತ್ವಿಕ್ ಘಟಕ್” ರಿಂದ ಬಹಳ ಚೆನ್ನಾಗಿಯೇ ಕಲೆತ. (ಕನ್ನಡದಲ್ಲಿ ಇದಕ್ಕೆ ಅತ್ಯತ್ತಮ ಉದಾಹರಣೆ ಪಿ.ಲಂಕೇಶರ ಪಲ್ಲವಿಚಿತ್ರ) ನಿರ್ದೇಶಕ ಅಡೂರ ಗೋಪಾಲಕೃಷ್ಣ ಹೇಳುವಂತೆ “ಖುತ್ವಿಕ್ ಘಟಕ್” ಅವರು ಜಾನ್‌ನನ್ನು ತಮ್ಮ ವಿದ್ಯಾರ್ಥಿಗಳಲೆಲ್ಲ ಅತ್ಯಂತ ಪ್ರತಿಭಾವಂತನೆಂದೂ ಮುಂದೆ ಈತ ಬಲು ದೊಡ್ಡ ಬದಲಾವಣೆಯ ಹರಿಕಾರನಾಗುತ್ತಾನೆಂದು ಹೇಳುತ್ತಿದ್ದರು. ಇದು ಇಂದಿಗೆ ನಿಜವಾಗಿದೆ. ಜಾನ್ ಅಬ್ರಹಂನ ಆತ್ಮವಾಗಿದ್ದ, ಅತ್ಯಂತ ಕಲಾತ್ಮಕವಾದ, ಮಾನವೀಯತೆ ನೆಲೆಯ black humor ಇಂದು ಅನೇಕ ಪ್ರತಿಭಾವಂತ ನಿರ್ದೇಶಕರ ಟ್ರಂಪ್ ಕಾರ್ಡ ಆಗಿದೆ. ಇಂದಿನ ಬ್ರಿಡ್ಜ ಅಥವಾ ಪರ್ಯಾಯ ಚಿತ್ರಗಳ ಜೀವಾಳವೇ ಒಂದು ಕಾಲದಲ್ಲಿ ಜಾನ್ ರೂಪಿಸಿದ black humor. ನಿರ್ದೇಶಕನಾದವನು ಅದರಲ್ಲೂ ಸೂಕ್ಷ್ಮ ಮನಸ್ಸಿನ ನಿರ್ದೇಶಕನಾದವನು ತನ್ನೆಲ್ಲ ಸಾತ್ವಿಕತೆಯನ್ನು ಬಿಟ್ಟುಕೊಡದೆ ತನ್ನೊಳಗಿನ angst ಅನ್ನು ತೆರೆಯ ಮೇಲೆ ಸಾಕಾರಗೊಳಿಸಿ ಕಡೆಗೆ ತಮ್ಮ ಮೂಲ ಉದ್ದೇಶವನ್ನು, ಚಿಂತನೆಗಳನ್ನು validate ಆಗುವಂತೆ ಸಫಲತೆಯನ್ನು ಸಾಧಿಸುವುದನ್ನು “ಖುತ್ವಿಕ್ ಘಟಕ್” ತಮ್ಮ ಶಿಷ್ಯ ಜಾನ್‌ಗೆ ಸಮರ್ಥವಾಗಿಯೇ ಹೇಳಿಕೊಟ್ಟರು. ಒಂದು ವೇಳೆ ಜಾನ್ ಅಬ್ರಾಹಂ “ಖುತ್ವಿಕ್ ಘಟಕ್” ಅವರ ಸಂಪರ್ಕಕ್ಕೆ ಬರದಿದ್ದರೆ ಈಗಿನಂತೆ ತನ್ನ ಚಿತ್ರಗಳನ್ನು ಮಾಡಲು ಸಾಧ್ಯವೇ ಇರುತ್ತಿರಲಿಲ್ಲ. ಜಾನ್ ನಿರ್ದೇಶನದ ಕಡೆಯ ಸಿನಿಮಾ “ಅಮ್ಮ ಅರಿಯನ್” ಒಂದು ರೀತಿಯಲ್ಲಿ ತಾಯಿ ಮತ್ತು ಗುರುವಿಗೆ ಸಲ್ಲಿಸಿದ ಗ್ರೇಟ್ Tribute. ಇದರ ಮಾಂತ್ರಿಕತೆಯನ್ನು ನಾವು ಈ ಚಿತ್ರ ನೋಡಿಯೇ ಅನುಭವಿಸಬೇಕು.

ಸಮುದಾಯದತ್ತ ಸಿನಿಮಾ ಮಾಧ್ಯಮವನ್ನು ಕೊಂಡೊಯ್ಯುವ ತನ್ನ ಕನಸಿನ ಭಾಗವಾಗಿಯೇ 1986 ರಲ್ಲಿ “ಒಡೆಸ್ಸ ಮೂವೀಸ್” ಅನ್ನು ಸ್ಥಾಪಿಸಿದ. ಇದನ್ನು ಜನಪರ ಸಿನಿಮಾ ಚಳವಳಿ ಎಂದು ಕರೆದ. ತನ್ನ ಸಮಾನಮನಸ್ಕ ಗೆಳೆಯರೊಂದಿಗೆ ಸೇರಿಕೊಂಡು ಸಿನಿಮಾದಲ್ಲಿ ವ್ಯಾಪಾರೀಕರಣವನ್ನು ಕುಂಠಿತಗೊಳಿಸಿ ಬದಲಾಗಿ ಸಿನಿಮಾದ ಮೂಲಕ ಸಾಮಾಜಿಕ ಕಳಕಳಿಗಳನ್ನು ವ್ಯಕ್ತಪಡಿಸುತ್ತ, ಸಾಮಾಜಿಕ ಬದಲಾವಣೆಗಳನ್ನು ಸಿನಿಮಾದ ಮೂಲಕ ತರಬೇಕು (ಎಂತಹ ಆಸೆಗಳು!!) ಈ ಮೂಲಕ ಚಿತ್ರರಂಗದ ಪಟ್ಟಭದ್ರ ಹುಸಿಯನ್ನು ಒಡೆಯುವುದು ಜಾನ್‌ನ ಉದ್ಧೇಶವಾಗಿತ್ತು. ಆದರೆ ದುರಂತವೆಂದರೆ ಇದನ್ನು ಸ್ಥಾಪಿಸಿ ಒಂದು ವರ್ಷದ ನಂತರ 1987 ರಲ್ಲಿ ಜಾನ್ ತೀರಿಕೊಂಡ. 80ರ ದಶಕದ ಆರಂಭದ ವರ್ಷಗಳಲ್ಲಿ ಕಥೆಗಳನ್ನು ಬರೆದು ಪ್ರಕಟಿಸಿದ. ನಾಟಕಗಳನ್ನು ರಚಿಸಿ ನಿರ್ದೇಶಿಸಿದ. ಹಲವಾರು ಚಿತ್ರಕಥೆಗಳನ್ನು ಬರೆದು ಕೇರಳದಾದ್ಯಂತ ಅಲೆದ. ಒಂದು ಡಾಕ್ಯುಮೆಂಟರಿ ಸಿನಿಮಾ ಸಹ ಮಾಡಿದ. ಆದರೆ ಈ ಕಾಲಘಟ್ಟದಲ್ಲಿ ತೀರಾ ವಿಕ್ಷಿಪ್ತನಾಗಿದ್ದ ಜಾನ್ ಕುಡಿತವನ್ನು ತೀವ್ರವಾಗಿ ಬೆಳಸಿಕೊಂಡ. ತನ್ನ ಜೀವಮಾನ ಪೂರ್ತಿ ಜಂಗಮನಾಗಿಯೇ ಕಳೆದ ಜಾನ್ ಅಬ್ರಹಂ ಅನೇಕ ವೇಳೆ ಕುಡಿತದ ಅಮಲಿನಲ್ಲಿ ಸಾರ್ವಜನಿಕವಾಗಿ ವಿಕ್ಷಿಪ್ತನಾಗಿ. ನಿರ್ಗತಿಕನಾಗಿ ತಿರುಗುತ್ತಿದ್ದ.

ಆದರೆ ತನ್ನ ವೈಯುಕ್ತಿಕ ಬದುಕನ್ನು ವ್ಯವಸ್ಥೆಯ ಅಗತ್ಯಕ್ಕೆ ತಕ್ಕಂತೆ ಆದಷ್ಟು ಚೊಕ್ಕವಾಗಿ, ನೇರವಾಗಿ ಹೊಂದಿಸಿಕೊಳ್ಳುತ್ತ ಒಬ್ಬ ಮಧ್ಯಮವರ್ಗದ Gentleman ಆಗಿ ಪ್ರಸಿದ್ಧಿ ಹೊಂದುವುದನ್ನು ಜಾನ್ ವಿಷಯದಲ್ಲಿ ಸಾಧ್ಯವೇ ಇರಲಿಲ್ಲ. ತನ್ನ ಇಷ್ಟದಂತೆ ಬದುಕಿದ ಜಾನ್ ಅಬ್ರಾಹಂನನ್ನು ಸಹಜವಾಗಿಯೇ ಈ ವ್ಯವಸ್ಥೆ ಎಂದೂ ಒಳಗೊಳ್ಳಲೇ ಇಲ್ಲ. ಆಗ ಅವನ ಮನಸ್ಸಿನಲ್ಲಿ ಏನಿತ್ತೋ? ತಮ್ಮ “ಸಿನೆಮಾ, ಸಾಹಿತ್ಯ ಮತ್ತು ಜೀವನ” ಎನ್ನುವ ಪುಸ್ತಕದಲ್ಲಿ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರು ಜಾನ್ ಅಬ್ರಹಂನೊಂದಿಗಿನ ತಮ್ಮ ಒಡನಾಟವನ್ನು ಈ ರೀತಿಯಾಗಿ ವಿವರಿಸಿದ್ದಾರೆ.

“ನಾನು ಮತ್ತು ಜಾನ್ ಅಬ್ರಹಂ ಒಟ್ಟಿಗೆ ಪೆಸ್ಸಾರೋ ಫಿಲ್ಮ ಫೆಸ್ಟಿವಲ್‌ಗೆ ಇಟಲಿಗೆ ಹೊರಟಿದ್ದೆವು. ಆ ಸಂದರ್ಭದಲ್ಲಿ ಜಾನ್ ಖರೀದಿಸಿದ್ದ ಹೊಸ ಜೊತೆಯ ಶೂಗಳು ಅವನ ಕಾಲಿಗೆ ಹೊಂದುತ್ತಿರಲಿಲ್ಲ. ಇನ್ನೇನು ವಿಮಾನ ಹೊರಡುವ ಕೆಲವೇ ನಿಮಿಷಗಳಲ್ಲಿ ಜಾನ್ ಇಮ್ಮಿಗ್ರೇಷನ್ ಪರವಾನಗಿಯನ್ನು ಹೊಂದಿರಲಿಲ್ಲ ಎನ್ನುವುದು ನಮಗೆ ಗೊತ್ತಾಯಿತು. ಆದರೆ ಕೆಲವು ಉನ್ನತ ಅಧಿಕಾರಿಗಳ ಸಹಾಯದಿಂದ ಇದನ್ನು ಬಗೆಹರಿಸಲಾಯಿತು. ಇಟಲಿಯಲ್ಲಿ ನಾವೆಲ್ಲರೂ ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಉಣ್ಣೆಯ ಸ್ವೆಟರ್‌ ಅನ್ನು ಧರಿಸಿದ್ದರೆ ಈ ನಮ್ಮ ಜಾನ್ ಕೇವಲ ಹತ್ತಿಯ ಬಟ್ಟೆಗಳನ್ನು ಧರಿಸಿದ್ದ. ರಾತ್ರಿಯ ವೇಳೆ ನಾವೆಲ್ಲ ಬೆಚ್ಚಗಿನ ರೂಮಿನಲ್ಲಿ ಗಾಢವಾಗಿ ನಿದ್ರಿಸುತ್ತಿದ್ದರೆ ಈ ಜಾನ್ ಆ ಕತ್ತಲ ರಾತ್ರಿಗಳಲ್ಲಿ ಇಟಲಿಯ ಬೀದಿಗಳನ್ನು ಸುತ್ತುತ್ತಿದ್ದ. ಇಟಲಿಯಲ್ಲಿ ಕೇವಲ ತನ್ನ ಮುಗ್ಧತೆ, ನಡತೆ ಮತ್ತು ಪ್ರತಿಭೆಯ ಮೂಲಕ ಅಲ್ಲಿನ ಜನರ ನಡುವೆ ಬಹಳ ಜನಪ್ರಿಯನಾಗಿದ್ದ. ಚಿತ್ರೋತ್ಸವದಲ್ಲಿ “ಆಗ್ರಹಾರದಲ್ಲಿ ಕತ್ತೆ” ಚಿತ್ರ ಪ್ರದರ್ಶನದ ನಂತರ ವೇದಿಕೆಯ ಮೇಲೆ ಚಿತ್ರಕ್ಕೆ ಸಂಬಂಧ ಪಟ್ಟಂತೆ ಸಂವಾದಕ್ಕಾಗಿ ಜಾನ್ ವೇದಿಕೆಯೆನ್ನು ಏರುವ ದೃಶ್ಯ ಮತ್ತು ಅದಕ್ಕಾಗಿ ಪ್ರಶಂಸೆಯಿಂದ ಮತ್ತು ಕಾತರದಿಂದ ಕಾಯುತ್ತಿದ್ದ ಅಲ್ಲಿನ ಪ್ರೇಕ್ಷಕರು ಈ ದೃಶ್ಯಗಳನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ವ್ಯಾಟಿಕನ್‌ನಲ್ಲಿನ ಸುಪ್ರಸಿದ್ದ ಸೇಂಟ್ ಪೀಟರ್ ಬಾಸಿಲಿಕ ಚರ್ಚ್‌ನ ಒಳಗೆ ನಿಂತು ತುಂಟತನದಿಂದ ಮತ್ತು ಹೆಮ್ಮೆಯಿಂದ ಜಾನ್ ಹೇಳಿದ್ದು “ಇಲ್ಲಿ ಒಬ್ಬ ಕ್ರಿಶ್ಚಿಯನ್ ನಿಂತುಕೊಂಡು ಚಣಮಟ್ಟಕ್ಕೆ ದುರಹಂಕಾರಿಯಾದರೆ ಅದು ಅವನ ತಪ್ಪಲ್ಲ”. ಅನೇಕ ವರ್ಷಗಳ ನಂತರ ನನ್ನ ಮನೆಗೆ ಬಂದ ಜಾನ್ ಅಬ್ರಹಂ ನನ್ನ ಮಗಳನ್ನು ತಮಾಷೆಯಾಗಿ ಕೇಳಿದ “ನಿನಗೆ ಬೆಳೆಯಲಿಕ್ಕೆ ಯಾರು ಹೇಳಿದ್ದು?”. ಈಗ ನಾನು ಜಾನ್‌ನನ್ನು ಕೇಳಬೇಕೆಂದುಕೊಂಡಿದ್ದು “ಪ್ರೀತಿಯ ಜಾನ್, ನಿನಗೆ ಸಾಯಲಿಕ್ಕೆ ಯಾರು ಹೇಳಿದ್ದು?””

 ಹೌದು, ನಮ್ಮ ಪ್ರೀತಿಯ ಜಾನ್, ನಿನಗೆ ಸಾಯಲಿಕ್ಕೆ ಯಾರು ಹೇಳಿದ್ದು?

ಇದೆಲ್ಲ ಮತ್ತೆ ನೆನಪಾಗಿದ್ದು ಕನ್ನಡದ ಅದ್ಭುತ ರಂಗ ನಟ ಏಣಗಿ ನಟರಾಜ ತೀರಿಕೊಂಡಾಗ. ಏಣಗಿ ನಟರಾಜ ಸಹ ಅಷ್ಟೇ ವ್ಯವಸ್ಥೆಯ ಅನಾದರಕ್ಕೆ ಬಲಿಯಾದ ನಿಜದ ನಟರಾಗಿದ್ದರು. ತನ್ನ ಸಹಜ ಶೈಲಿಯ ನಟನೆಯ ಮೂಲಕ ಅದ್ಭುತವೆನ್ನಿಸುವಷ್ಟರ ಮಟ್ಟಿಗಿನ Body language ಅನ್ನು ಬಳಸುತ್ತಿದ್ದ ಏಣಗಿ ನಟರಾಜ ಹುಟ್ಟು ನಟರಾಗಿದ್ದರು. ಇವರ ನಟನೆಯ ಪರಿಪೂರ್ಣತೆಯನ್ನು ನೋಡಬೇಕೆಂದರೆ ಟಿವಿ ದಾರವಾಹಿ ಸಂಕ್ರಾತಿಯಲ್ಲಿ ಅವರ ಶೇಷಪ್ಪನ ಪಾತ್ರದ ಅಭಿನಯವನ್ನು ನೋಡಬೇಕು. ಕೆ.ರಾಮಯ್ಯನವರ ದೇಸಿ ಸೊಗಡಿನ ಅದ್ಭುತ ಕಥೆ ಮತ್ತು ಚಿತ್ರಕಥೆಗೆ ಈ ನಟ ಸ್ಪಂದಿಸಿದ ರೀತಿ ಸಹ ಅಷ್ಟೇ ಮನನೀಯವಾಗಿತ್ತು. ಇದು ನೆಲದ ಒರಿಜಿನಲ್ ನಟನೆಯ ಭಾಷೆ. ಸಂಪೂರ್ಣ ಜೀವಪರ ಭಾಷೆ. ಈ ಭಾಷೆಯನ್ನು ಏಣಗಿ ನಟರಾಜರು ಸಮರ್ಥವಾಗಿ ನಿಭಾಯಿಸಿದ್ದರು. ಆದರೆ ಈ ಸಮರ್ಥ ಭಾಷೆಯನ್ನು ಒಳಗೊಳ್ಳುವ ಮನೋಭಾವ, ಸೂಕ್ಷ್ಮ ಮಟ್ಟದ ಗ್ರಹಿಕೆ ನಮ್ಮ ಕನ್ನಡ ಚಿತ್ರರಂಗಕ್ಕಾಗಲಿ, ಕನ್ನಡದ ಪ್ರೇಕ್ಷಕರಿಗಾಗಲಿ ಕಡೆವರೆಗೂ ಬರಲಿಲ್ಲ. ಪರಿಣಾಮ ಏಣಗಿ ನಟರಾಜರು ಎಲ್ಲಿಯೂ ಸಲ್ಲದೇ ಗುರುತಿಲ್ಲದೆಯೇ ಬದುಕಿದರು. ಹಾಗೆಯೇ ತೀರಿಕೊಂಡರು ಸಹ.

ನಮ್ಮೆಲ್ಲರ ಅಮಾನವೀಯತೆಯ ನಡೆಗಳಿಗೆ ಕೊನೆಯೇ ಇಲ್ಲವೇ?

One thought on “ಪ್ರೀತಿಯ ಜಾನ್, ನಿನಗೆ ಸಾಯಲಿಕ್ಕೆ ಯಾರು ಹೇಳಿದ್ದು?

  1. ಬಸವರಾಜು

    ಜಾನ್ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಲೇಖನ, ಚೆನ್ನಾಗಿದೆ..

    Reply

Leave a Reply

Your email address will not be published. Required fields are marked *