Daily Archives: June 13, 2012

ಪರ್ಯಾಯ ರಾಜಕೀಯ ರೂಪಿಸಲು ಇದು ಸಕಾಲ

– ಆನಂದ ಪ್ರಸಾದ್

ಕರ್ನಾಟಕದಲ್ಲಿರುವ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಭ್ರಷ್ಟವಾಗಿದ್ದು ಮತದಾರರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.  ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಭಿನ್ನಮತದಿಂದ ಬೇಸತ್ತ ಹಾಗೂ ರೋಸಿ ಹೋದ ಜನ ಕಾಂಗ್ರೆಸ್ ಪಕ್ಷದ ಕಡೆ ಒಲವು ತೋರುವ ಸಂಭವ ಮುಂದಿನ ಚುನಾವಣೆಯಲ್ಲಿ ಇದೆ ಎಂಬ ವಾತಾವರಣ ಇರುವಾಗಲೇ ರಾಜ್ಯ ಕಾಂಗ್ರೆಸ್ಸಿನಲ್ಲೂ ಹಲವು ಗುಂಪುಗಳು ಪರಸ್ಪರ ಕಾಲೆಳೆಯುವ ಹುಂಬತನದಲ್ಲಿ ತೊಡಗಿದ್ದು ಮತ್ತೆ ರಾಜ್ಯ ಅತಂತ್ರ ವಿಧಾನ ಸಭೆಗೆ ಹಾಗೂ ತನ್ಮೂಲಕ ರಾಜಕೀಯ ಅಸ್ಥಿರತೆ, ಕುದುರೆ ವ್ಯಾಪಾರದ ವಿಕಾರ ಸ್ಥಿತಿಗೆ ಹೋಗುವ ಸಂಭವ ಕಾಣಿಸುತ್ತಿದೆ.  ಜೆಡಿಎಸ್ ಪಕ್ಷವೂ ಚುನಾವಣೆಗಳಲ್ಲಿ ಬಹುಮತ ಪಡೆಯುವ ಸ್ಥಿತಿಯಲ್ಲಿ ಇಲ್ಲ, ಅದು ಹೆಚ್ಚೆಂದರೆ ಚೌಕಾಸಿ ರಾಜಕೀಯ ಮಾಡುವಷ್ಟು ಸ್ಥಾನ ಪಡೆಯಬಹುದು.  ಇಂಥ ಅತಂತ್ರ ಸನ್ನಿವೇಶದಲ್ಲಿ ರಾಜ್ಯದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆ ರೂಪಿಸಲು ಇದು ಹದಗೊಂಡ ಕಾಲವಾಗಿದೆ.  ಆದರೆ ಆ ನಿಟ್ಟಿನಲ್ಲಿ ಮಹತ್ತರ ಕಾರ್ಯಕ್ರಮಗಳು ನಡೆಯುವುದು ಕಂಡುಬರುತ್ತಿಲ್ಲ.

ರೈತ ಸಂಘ, ದಲಿತ ಸಂಘಟನೆಗಳು ಹಾಗೂ ಇನ್ನಿತರ ಸಂಘಟನೆಗಳು ಕೂಡಿಕೊಂಡು ಪರ್ಯಾಯ ರಾಜಕೀಯ ಶಕ್ತಿ ರೂಪಿಸುವ ಕ್ರಿಯೆಗೆ ಚಾಲನೆ ನೀಡಿವೆಯಾದರೂ ಅವು ಮಾತ್ರವೇ ಪರ್ಯಾಯ ರಾಜಕೀಯ ಶಕ್ತಿಯಾಗಲು ಸಾಧ್ಯವಿಲ್ಲ ಎಂಬುದು ವಾಸ್ತವ.  ಒಬ್ಬ ಜನಪ್ರಿಯ ಹಾಗೂ ಅನುಭವೀ ರಾಜಕೀಯ ಮುಖದ ಅವಶ್ಯಕತೆ ಈ ಒಕ್ಕೂಟಕ್ಕೆ ಇದೆ.  ಎಲ್ಲರೂ ಒಪ್ಪಬಲ್ಲ, ಸಮೃದ್ಧ ಕರ್ನಾಟಕವನ್ನು ಕಟ್ಟಬಲ್ಲ ಅಂಶಗಳನ್ನು ಉಳ್ಳ ಒಂದು ಪ್ರಣಾಳಿಕೆ ರೂಪಿಸಬೇಕಾದ ಅಗತ್ಯವಿದೆ.  ಸಿದ್ಧರಾಮಯ್ಯನವರಿಗೆ ಕಾಂಗ್ರೆಸ್ಸಿನಲ್ಲಿ ಭವಿಷ್ಯ ಇರುವಂತೆ ಕಾಣುವುದಿಲ್ಲ.  ಅವರ ಗುರಿ ಮುಖ್ಯಮಂತ್ರಿ ಆಗುವುದು.  ಕರ್ನಾಟಕದ ಕಾಂಗ್ರೆಸ್ಸಿನ ಗುಂಪುಗಾರಿಕೆ, ಆ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ತುದಿಗಾಲಿನಲ್ಲಿ ನಿಂತಿರುವ ನಾಯಕರ ಸಂಖ್ಯೆ ನೋಡಿದರೆ ಸಿದ್ಧರಾಮಯ್ಯನವರ ಕನಸು ನನಸಾಗುವ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.  ಹೆಚ್ಚೆಂದರೆ ಒಬ್ಬ ಪ್ರಭಾವಿ ಮಂತ್ರಿ ಸ್ಥಾನವಷ್ಟೇ ಅಲ್ಲಿ ಸಿದ್ಧರಾಮಯ್ಯನವರಿಗೆ ಸಿಗಬಹುದು.  ಈ ಭಾಗ್ಯಕ್ಕೆ ಸಿದ್ಧರಾಮಯ್ಯನವರು ಕಾಂಗ್ರೆಸ್ ಸೇರಬೇಕಾದ ಅಗತ್ಯ ಇರಲಿಲ್ಲ. ಶಾಮನೂರು ಶಿವಶಂಕರಪ್ಪನವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಲಿಂಗಾಯತರಿಗೆ ನೀಡಬೇಕು ಮತ್ತು ತಾನೇ ಅದಕ್ಕೆ ಸೂಕ್ತ ವ್ಯಕ್ತಿ ಎಂದು ಗರ್ಜಿಸುವುದನ್ನು ನೋಡಿದರೆ ಅವರೂ ಮುಖ್ಯಮಂತ್ರಿ ಸ್ಥಾನದ ಪ್ರಧಾನ ಆಕಾಂಕ್ಷಿ ಎಂದು ತಿಳಿಯಬಹುದು. ಏಕೆಂದರೆ ಚುನಾವಣಾಪೂರ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದವರೇ ಚುನಾವಣೆಗಳಲ್ಲಿ ಗೆದ್ದರೆ ಮುಖ್ಯಮಂತ್ರಿಯಾಗುವ ಸಂಭಾವ್ಯತೆ ಕಾಂಗ್ರೆಸ್ ಪಕ್ಷದಲ್ಲಿದೆ.  ಹೀಗಾದರೆ ಸಿದ್ಧರಾಮಯ್ಯನವರನ್ನು ಕಾಂಗ್ರೆಸ್ ಪಕ್ಷದಲ್ಲಿ ಕೇಳುವವರೂ ಇರುವುದಿಲ್ಲ.  ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆದ ಸಿದ್ಧರಾಮಯ್ಯನವರು ಸಾಮಾನ್ಯ ಮಂತ್ರಿ ಸ್ಥಾನ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ.  ಒಂದು ವೇಳೆ ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್ಸಿನಲ್ಲಿ ಲಭಿಸಿದರೂ ಅದರ ಜೊತೆಗೆ ಭೀಕರ ಭಿನ್ನಮತವೂ ಭುಗಿಲೇಳುವ ಸಂಭವ ಹೆಚ್ಚಾಗಿರುವುದರಿಂದ ಸಮರ್ಪಕ ಆಡಳಿತ ನಡೆಸಲು ಸಾಧ್ಯವಾಗಲಿಕ್ಕಿಲ್ಲ.   ಹೀಗಾಗಿ ಸಿದ್ಧರಾಮಯ್ಯನವರ ರಾಜಕೀಯ ಜೀವನ ಅಲ್ಲಿಗೆ ಕೊನೆಗೊಳ್ಳುವ ಸಂಭವ ಇದೆ.  ಇಂಥ ಅತಂತ್ರ ಸನ್ನಿವೇಶದಲ್ಲಿ ಸಿದ್ಧರಾಮಯ್ಯನವರು ಪರ್ಯಾಯ ರಾಜಕೀಯ ರೂಪಿಸುವ ಒಂದು ಪ್ರಯೋಗ ಮಾಡಿ ನೋಡಲು ಸಾಧ್ಯವಿದೆ.  ಇಂದಿನ ರಾಜ್ಯದ ಅತಂತ್ರ ಸ್ಥಿತಿಯಲ್ಲಿ ಇದು ಒಂದೇ ಚುನಾವಣೆ ಎದುರಿಸಿ ಸಾಧ್ಯವಾಗಲೂಬಹುದು ಅಥವಾ ವಿಫಲವಾಗಲೂಬಹುದು.  ಹೇಗಿದ್ದರೂ ಸಿದ್ಧರಾಮಯ್ಯನವರಿಗೆ ಕಾಂಗ್ರೆಸ್ಸಿನಲ್ಲಿ ಭವಿಷ್ಯ ಕಾಣಿಸುತ್ತಿಲ್ಲ.  ಜೆಡಿಎಸ್ ಪಕ್ಷಕ್ಕೆ ಅವರು ಮರಳಿ ಹೋಗುವ ಸಾಧ್ಯತೆ ಇಲ್ಲ, ಹೋದರೂ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಸಂಭವ ಇಲ್ಲ.   ಆ ಸ್ಥಾನ ಹೇಗಿದ್ದರೂ ದೇವೇಗೌಡರ ಕುಟುಂಬದ ಸದಸ್ಯರಿಗೆ ಮೀಸಲಾಗಿದೆ.   ಹೀಗಾಗಿ ಪರ್ಯಾಯ ರಾಜಕೀಯದ ನಾಯಕತ್ವವನ್ನು ಸಿದ್ಧರಾಮಯ್ಯ ವಹಿಸಿಕೊಳ್ಳುವುದರಿಂದ ನಷ್ಟವೇನೂ ಇಲ್ಲ ಎನಿಸುತ್ತದೆ.

ಪ್ರಸಕ್ತ ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಇರುವ ಪ್ರಾಮಾಣಿಕರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವ, ವಂಶವಾಹಿ ರಾಜಕೀಯವನ್ನು ವಿರೋಧಿಸುವ, ಪ್ರಗತಿಶೀಲ ನಿಲುವಿನ ಚಿಂತನಶೀಲ ರಾಜಕಾರಣಿಗಳು ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಪರ್ಯಾಯ ರಾಜಕೀಯ ರೂಪಿಸುವ ಕಾರ್ಯದಲ್ಲಿ ತೊಡಗಬೇಕಾದ ಅಗತ್ಯ ಇದೆ.  ಉದಾಹರಣೆಗೆ ಉಗ್ರಪ್ಪ, ಬಿ.ಎಲ್. ಶಂಕರ್, ಕೃಷ್ಣ ಭೈರೇಗೌಡ, ವಿ.ಆರ್. ಸುದರ್ಶನ್, ಪಿ.ಜಿ. ಆರ್. ಸಿಂಧ್ಯಾ ಇತ್ಯಾದಿ ತಮ್ಮ ಪಕ್ಷವನ್ನು ಬಿಟ್ಟು ಹೊರಬಂದು ಭ್ರಷ್ಟ ವ್ಯವಸ್ಥೆಯನ್ನು ಧಿಕ್ಕರಿಸಬೇಕಾದ ಅಗತ್ಯ ಇದೆ.  ಎಲ್ಲರೂ ಒಗ್ಗೂಡಿ ಪರ್ಯಾಯ ರಾಜಕೀಯ ಶಕ್ತಿಗೆ ಬಲ ತುಂಬಬೇಕಾದ ಅಗತ್ಯ ಇದೆ.  ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟತೆಯ ವಿರುದ್ಧ ದಿಟ್ಟ ನಿಲುವಾಗಲಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಗೌರವವಾಗಲಿ ಕಂಡುಬರುತ್ತಿಲ್ಲ.  ಕಾಂಗ್ರೆಸ್ಸಿನ ಯಾವ ನಾಯಕರೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಇಚ್ಛಾಶಕ್ತಿಯನ್ನು ತೋರಿಸುವ ಸಂಭವ ಕಾಣಿಸುತ್ತಿಲ್ಲ.  ಹೀಗಿರುವಾಗ ಆ ಪಕ್ಷದಲ್ಲಿ ಪ್ರಾಮಾಣಿಕರು, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಗೌರವ ಇರುವ ರಾಜಕಾರಣಿಗಳು ಇದ್ದು ಮಾಡುವುದೇನೂ ಉಳಿದಿಲ್ಲ.  ಅಲ್ಲಿ ಜೀ ಹುಜೂರ್ ಎಂದು ಬೆನ್ನು ಬಗ್ಗಿಸಿ ಗುಲಾಮಗಿರಿ ಮಾಡುವ ಬದಲು ಆತ್ಮಾಭಿಮಾನ ಇರುವ ರಾಜಕಾರಣಿಗಳು ಆ ಪಕ್ಷವನ್ನು ಧಿಕ್ಕರಿಸಿ ಹೊರಬರಬೇಕು.  ಎಡ ಪಕ್ಷಗಳು, ಪ್ರಗತಿಶೀಲ ಸಂಘಟನೆಗಳು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳು ಪ್ರಣಾಳಿಕೆಯೊಂದನ್ನು ರೂಪಿಸಿ ಒಗ್ಗೂಡಿ ಪರ್ಯಾಯ ಚುನಾವಣಾಪೂರ್ವ ಮೈತ್ರಿಕೂಟವೊಂದನ್ನು ಸ್ಥಾಪಿಸಿ ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿ ಚುನಾವಣೆಗೆ ಹೋದರೆ ಅನುಕೂಲ ಆಗಬಹುದು.  ಇಂದಿನ ಕರ್ನಾಟಕದ ಅತಂತ್ರ ಸ್ಥಿತಿಯನ್ನು ನೋಡಿದರೆ ಯಾವುದೇ ರಾಜಕೀಯ ಪಕ್ಷ ಬಹುಮತ ಪಡೆಯುವ ಸಂಭವ ಕಾಣಿಸುತ್ತಿಲ್ಲ.  ಹೀಗಾಗಿ ಕೇರಳದಲ್ಲಿ ಇರುವಂತೆ ಹಲವು ರಾಜಕೀಯ ಪಕ್ಷಗಳ  ಮೈತ್ರಿಕೂಟವೊಂದನ್ನು ಸ್ಥಾಪಿಸಿ ದೃಢವಾದ ಪ್ರಗತಿಶೀಲ ಸರಕಾರವೊಂದನ್ನು ನೀಡಲು ಸಾಧ್ಯವಿದೆ.

ಸಿದ್ಧರಾಮಯ್ಯನವರಂಥ ರಾಜಕಾರಣಿಗಳು ಕಾಂಗ್ರೆಸ್ಸಿನಂಥ ಯಜಮಾನ ಸಂಸ್ಕೃತಿಯ ಪಕ್ಷವನ್ನು ಸೇರಿದ್ದೇ ದೊಡ್ಡ ತಪ್ಪು.  ಆ ಪಕ್ಷದಲ್ಲಿ ಪ್ರಾಮಾಣಿಕ ಹಾಗೂ ಶಕ್ತ ನಾಯಕತ್ವ ಗುಣ ಉಳ್ಳ ರಾಜಕಾರಣಿಗಳಿಗೆ ಬೆಲೆ ಇಲ್ಲ.  ನಾಯಕತ್ವ ಗುಣ ಉಳ್ಳ ರಾಜಕಾರಣಿಗಳನ್ನು ಗುರುತಿಸುವ ವ್ಯವಸ್ಥೆಯೂ ಆ ಪಕ್ಷದಲ್ಲಿ ಇಲ್ಲ.  ಅಲ್ಲಿ ಏನಿದ್ದರೂ ಪಕ್ಷದ ಅಧ್ಯಕ್ಷರಿಗೆ, ಒಂದು ಕುಟುಂಬಕ್ಕೆ ನಿಷ್ಠೆ ತೋರುವವರಿಗೆ ಮಾತ್ರ ಬೆಲೆ.  ಆ ಕುಟುಂಬಕ್ಕೆ ರಾಜಕೀಯದ ಸಮರ್ಪಕ ಜ್ಞಾನವಾಗಲೀ, ಪ್ರಜಾಪ್ರಭುತ್ವದ ಮೂಲಭೂತ ನಿಯಮಗಳೂ ತಿಳಿದಿರುವಂತೆ ಕಾಣುವುದಿಲ್ಲ.  ಭ್ರಷ್ಟಾಚಾರದ ವಿರುದ್ಧ ಹೋರಾಡುವ, ದೇಶದ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವ ಎಲ್ಲ ಅಧಿಕಾರವಿದ್ದರೂ ಇಚ್ಚಾಶಕ್ತಿಯನ್ನು ಪ್ರದರ್ಶಿಸದ, ಅದನ್ನು ಬಳಸದ ನಿಷ್ಕ್ರಿಯ ನಾಯಕತ್ವ ದೇಶಕ್ಕೆ ಶಾಪವಾಗಿದೆ.  ಇದರಿಂದ ಹೊರಬರುವ, ಪರ್ಯಾಯವನ್ನು ರೂಪಿಸುವ ಅಗತ್ಯ ಇಂದು ಇದೆ.

ಬಡ ಕೂಲಿ ಕಾರ್ಮಿಕ ರೈತ ಮಕ್ಕಳಿಗೆ ಇಂಗ್ಲಿಷ್

 – ಮಹದೇವ ಹಡಪದ

ಜಗತ್ತಿನ ಎಲ್ಲ ಭಾಷೆಯ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಅನುವಾದವೋ, ಛಾಯಾನುವಾದವೋ, ರೂಪಾಂತರವೋ…. ಒಟ್ಟಿನಲ್ಲಿ ಯಾವುದೇ ರೂಪದಲ್ಲಿ ಬಂದರೂ ಅದರ ಸ್ವಾದ ಸ್ವಾರಸ್ಯವನ್ನು ಕನ್ನಡದವರೇ ಆಗಿ ಓದುವ ನಮಗೆ ಇಂಗ್ಲಿಷಿನ ಷೇಕ್ಸಪೀಯರ್ ಕನ್ನಡದಲ್ಲಿ ಶೇಷಣ್ಣನಾಗಿಬಿಡುತ್ತಾನೆ. ನಮ್ಮದೇ ಏಕಾಂತದ ಒಳಗಿನ ಮೊಳಕೆಯೊಡೆಯುವ ಹೊತ್ತು-ಅವನ ಸಾನೆಟ್, ನಾಟಕಗಳಲ್ಲಿ ಕೇಂದ್ರವಾಗಿರುತ್ತದೆ. ಆದರೆ ಕನ್ನಡದ ಅಭಿಮಾನವೆಂಬ ಸ್ವಹಿತಾಸಕ್ತಿಯ ದುರಹಂಕಾರ ಡಬ್ಬಿಂಗ್ ವಿಷಯದಲ್ಲಿ ಏಕಾಏಕಿ “ಡಬ್ಬಿಂಗ್ ಕನ್ನಡ ಭಾಷೆಗೆ ಮಾರಕ” ಎಂದು ಗುಡುಗುವ ಮಹಾಶಯರ ಘರ್ಜನೆಯು ಹೇಗೆ ಹಾಸ್ಯಾಸ್ಪದವಾಗಿ ಕಾಣುತ್ತದೆಯೋ ಹಾಗೇ ಈ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ (6ನೇ ತರಗತಿಯಿಂದ) ಅಳವಡಿಸುವುದರ ವಿರುದ್ಧ ಗುಡುಗಿದವರ ಬಗ್ಗೆಯೂ ಅನುಮಾನ ಮೂಡುತ್ತದೆ.

ನಾನು ವಾಸಿಸುವ ಹಳ್ಳಿಯಲ್ಲಿ ಇಂಗ್ಲಿಷ್ ಮಾಧ್ಯಮದ ಕಾನ್ವೆಂಟ್ ಶಾಲೆಯೊಂದಿದೆ. ಇಲ್ಲಿಗೆ ಸೇರಲು ಬರುವ ಮತ್ತು ಸೇರ್ಪಡೆ ಪಡೆದಿರುವ ವಿದ್ಯಾರ್ಥಿಗಳೆಲ್ಲ ರೈತಕುಟುಂಬದಿಂದ ಬಂದವರು. ಅವರ ಕೈಯೊಳಗಿನ ಟ್ರಂಕು-ಹಾಸಿಗೆ ಸುರುಳಿ ನೋಡುತ್ತಿದ್ದ ಹಾಗೆ ಊಹಿಸಬಹುದಾದದ್ದು ಅಂದರೆ ಅವರೆಲ್ಲ ಹಳ್ಳಿ ಮಕ್ಕಳೇ ಎಂದು. ಹಾಗೆ ಅವರನ್ನು ಕರೆದು ಮಾತಾಡಿಸಿದಾಗ ತಿಳಿದದ್ದು ಅವರು ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಂಡ ಕಾರಣಕ್ಕಾಗಿಯೇ ಇಷ್ಟು ದೂರ ಬಂದವರು. ಒಂದೇ ಸಂಸ್ಥೆಯ ಕನ್ನಡ ಮಾಧ್ಯಮದ ಮಾಧ್ಯಮಿಕ ಶಾಲೆಯಲ್ಲಿ ಸೀಟುಗಳು ಇನ್ನೂ ಪೂರ್ಣ ಭರ್ತಿಯಾಗಿಲ್ಲವಾದರೂ ಇಂಗ್ಲಿಷ್ ಮಾಧ್ಯಮದ ಮಾಧ್ಯಮಿಕ ಶಾಲೆಯಲ್ಲಿ ಮಿತಿಮೀರಿ ಪ್ರವೇಶಗಳು ಆಗಿದ್ದವು. ದುರಂತವೆಂದರೆ ಕಳೆದ ಸಾಲಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದ ಕೆಲವು ವಿದ್ಯಾರ್ಥಿಗಳಿಗೆ ತಡವಾಗಿ ಸೇರಲು ಬಂದ ಕಾರಣಕ್ಕಾಗಿ ಪ್ರವೇಶ ಸಿಕ್ಕದಾಗಿದೆ. ಹಾಗೆ ತಡವಾಗಿ ಪ್ರವೇಶ ಬಯಸಿ ಬಂದ ಸಾಣೇಹಳ್ಳಿಯ ಪಕ್ಕದ ಊರಿನ ಪೂಜಾ ಎಂಬ ಹುಡುಗಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರವೇಶ ಸಿಗಲಿಲ್ಲವೆಂಬ ಕಾರಣಕ್ಕಾಗಿಯೇ ದಿನಾಂಕ 09/ಜೂನ್/2012 ರಂದು ವಿಷ ಕುಡಿದು ಆತ್ಮಹತ್ಯೆಮಾಡಿಕೊಂಡಿದ್ದಾಳೆ. ಆ ಮಗಳ ತಂದೆ, ಆ ರೈತ, ಯಾವ ಕೆಲಸದ ಅವಸರಕ್ಕಾಗಿ ತಾನು ತಡವಾಗಿ ಬಂದನೋ ಅದನ್ನು ಶಪಿಸುತ್ತಿದ್ದಾನೆ. ಈ ಹಳ್ಳಿಮಕ್ಕಳ ಇಂಗ್ಲಿಷ್ ವ್ಯಾಮೋಹ-ಕನ್ನಡ ಪ್ರೀತಿಯನ್ನ ಕಂಡಾಗ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಅವಶ್ಯಕತೆಯನ್ನು ಕುರಿತಾಗಿ ಗಹನವಾಗಿಯೇ ಆಲೋಚಿಸಬೇಕಾಗಿದೆ.

ಹುಲಿ ಸಿಂಹ ಶಾರ್ದೂಲಗಳ ಜೊತೆಗೆ ಹುಲ್ಲೆ ಹಸು ಕುರಿಗಳು ಒಡನಾಡಿಕೊಂಡು ಬದುಕುವ ಮಾರ್ಗವೊಂದು ತೆರೆದುಕೊಂಡದ್ದು ಈ ಇಂಗ್ಲಿಷ್ ಎಂಬ ಮಾಯಾವಿ ಭಾಷೆಯಿಂದ ಎಂಬುದನ್ನು ಅರ್ಥಮಾಡಿಕೊಳ್ಳುವುದಾದರೆ ಸಮಾನ ಶಿಕ್ಷಣ ಸಾಧ್ಯವಾಗುತ್ತದೆ. ಆದರೆ ಈ ಬುದ್ಧಿವಂತ ವರ್ಗ ಹೋರಾಟದ, ಕೆಚ್ಚೆದೆಯ, ಬೀಸು ದೊಣ್ಣೆಯ ತುಂಬು ಅಭಿಮಾನದ ಗುಟುರು ಹಾಕುತ್ತಲಿದೆ. ಅದು ಯಾರ ವಿರುದ್ಧ – ಶೂದ್ರಾತಿಶೂದ್ರ ಬಡವರ, ಹಳ್ಳಿಗರ, ರೈತರ ಮಕ್ಕಳ ವಿರುದ್ಧ. ಭಾಷೆಯೂ ಕೀಳರಿಮೆಯನ್ನು ಸೃಷ್ಟಿಸುತ್ತದೆ.

ಹೊಸ ಸಂವೇದನೆಯೊಂದು ಇಂಗ್ಲಿಷ್ ಎಂಬ ಭಾಷೆಯೊಂದಿಗೆ ನಮ್ಮ ನೆಲಕ್ಕೆ ಬಂದಿರುವುದನ್ನು ನಾವು ಮರೆಯಬಾರದು. ಇಂಗ್ಲಿಷ್ ನಮ್ಮ ರಾಜ್ಯದ ಕರಾವಳಿ ಭಾಗದಲ್ಲಿ ಮೊದಲು ತನ್ನ ಅಸ್ತಿತ್ವದ ನೆಲೆಯನ್ನು (ಇಂಡಿಯಾದ ಕರಾವಳಿಯಲ್ಲೂ) ಕಂಡುಕೊಂಡಿತು. ಅದನ್ನು ಕಲಿತ ಕನ್ನಡದಲ್ಲಿ ಯೋಚಿಸುವವನು ಅಂಗ್ರೇಜಿಯಲ್ಲಿ ವಿವರಿಸಬಲ್ಲವನಾಗಿರುತ್ತಾನೆ. ಅಂಥವನು ಎಲ್ಲ ದೇಶಗಳ ಎಲ್ಲ ಕಂಪನಿಗಳಲ್ಲೂ ಕೆಲಸ ಮಾಡಬಲ್ಲವನಾಗಿರುತ್ತಾನೆ. ಅವನಿಗೆ ಸಿಗುವ ಪ್ರಾಧಾನ್ಯತೆಯನ್ನು ಕನ್ನಡದಲ್ಲಿ ಯೋಚಿಸಿ ಕನ್ನಡದಲ್ಲೇ ವ್ಯವಹರಿಸಬಲ್ಲಾತನು ಪಡೆಯಲಾರ, ಇದನ್ನು ಅರ್ಥವತ್ತಾಗಿ ವಿವರಿಸುವ ಅಗತ್ಯವಿಲ್ಲ. ಯಾಕೆಂದರೆ ಮಾಧ್ಯಮದ ಆಯ್ಕೆಯಲ್ಲಿ ಎರಡು ವರ್ಗಗಳು ಗೆರೆ ಕೊರೆದುಕೊಂಡೇ ಹುಟ್ಟಿಕೊಳ್ಳುತ್ತಿರುವ ಈ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಸಿಗುವ ಮಾನ್ಯತೆ ಕನ್ನಡಕ್ಕೆ ಸಿಕ್ಕಿಲ್ಲ. ಆದರೆ…

ಓದು ಚಿಂತನೆ ಅನ್ನುವುದು ವಿಶ್ವವ್ಯಾಪಕವಾಗಿ ಆಯಾ ಭಾಷೆಗಳಿಂದ ತುರ್ಜುಮೆಯ ರೂಪದಲ್ಲಿ ಸಿಕ್ಕುವುದು ಇಂಗ್ಲಿಷ್ ಎಂಬ ಕೊಂಡಿಯೊಂದರ ಮುಖೇನವೆಂಬುದು ಎಲ್ಲರಿಗೂ ತಿಳಿದ ಸತ್ಯ. ಹಾಗೆಂದ ಮಾತ್ರಕ್ಕೆ ಇಂಗ್ಲಿಷ್ ದೇವಭಾಷೆ ಏನೂ ಅಲ್ಲ. ಸಂಪರ್ಕ ಸಹಜವಾದ, ಇಂದಿನ ಜಗತ್ತಿನಲ್ಲಿ ಬಹುಸಂಖ್ಯಾತರಿಗೆ ತಿಳಿದ ಏಕೈಕ ಭಾಷೆ ಇಂಗ್ಲಿಷ್. ಆದ್ದರಿಂದ ಇಂಗ್ಲಿಷ್ ಮಾಧ್ಯಮವನ್ನು ಖುದ್ದಾಗಿ ಸರಕಾರವೇ ಅಳವಡಿಸುತ್ತಿರುವಾಗ ಅದನ್ನು ವಿರೋಧಿಸುವುದು ಯಾವ ನ್ಯಾಯ? ಕನ್ನಡದ ಆಸೆ-ಭಾಷೆಗಳೆರಡೂ ಆಳವಾಗಿ ಬೇರೂರಿರುವುದು ಬರೀ ಮೌಖಿಕವಾಗಿಯೇ ಏನೂ ಇಲ್ಲ. ಭಾಷೆಯ ಅಧ್ಯಯನ ಮತ್ತು ಸಂಶೋಧನೆಗಳೊಂದಿಗೆ ಕನ್ನಡದ ನೆಲೆ ದೂರದೃಷ್ಟಿವುಳ್ಳದ್ದಾಗಿದೆ. ಈಗ ನಿಜಕ್ಕೂ ಈ ಭಾಷೆಯ ವಿಷಯದಲ್ಲಿ ಮುಜುಗರ ಅನುಭವಿಸುತ್ತಿರುವವರು ನನ್ನಂತೆ ಹಿಂದುಳಿದ ವರ್ಗದಿಂದ ಬಂದವರು, ತೀರ ಬಡಕುಟುಂಬದಿಂದ ಬಂದವರು, ಹಳ್ಳಿಯಿಂದಲೇ ಓದು ಆರಂಭಿಸಿದವರು. ಕನ್ನಡದ ಪರವಾಗಿ ಮಾತಾಡುತ್ತಿರುವವರು ಕೆಲವರು ಸರಕಾರಿ ಶಾಲೆಯಲ್ಲಿ ಓದಿ ಬಂದದ್ದನ್ನ ಮತ್ತು ತಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವುದನ್ನ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈ ಸಮರ್ಥನೆ ಕೊಟ್ಟ ಕಾರಣಕ್ಕೆ ಇವರು ಭಾಷೆಯನ್ನು ಕಟ್ಟಲು, ಉಳಿಸಲು ಹೊರಾಟಕ್ಕೆ ಯೋಗ್ಯರು ಎಂಬ ಯಾವ ಗ್ರೇಡು ಸಿಗುತ್ತದೋ ಗೊತ್ತಿಲ್ಲ. ಆದರೆ ಇವರ ಅಭಿಮಾನ ಒಂದು ವರ್ಗದ ಜನರ ಕನ್ನಡದ ಪ್ರೀತಿಯನ್ನು, ಇಂಗ್ಲಿಷ್ ಕುರಿತಾದ ವ್ಯಾಮೋಹವನ್ನು ಹೊಸಕಿ ಹಾಕುತ್ತಿದೆ.

ಇಂಗ್ಲಿಷ್ ಮತ್ತು ಕನ್ನಡವೆಂಬ ಓದುವ ಮಾಧ್ಯಮದ ಒಳಾಂಗಣದ ಒಳಗೇ ರಚಿತಗೊಳ್ಳುವ ಈ ಎರಡು ವರ್ಗಗಳು ಬರೀ ಕನ್ನಡ-ಇಂಗ್ಲಿಷಿನದ್ದು ಎಂದು ವರ್ಗೀಕರಿಸಿದರೆ ತಪ್ಪಾದೀತು. ಇದರಲ್ಲಿ ಮೇಲ್ವರ್ಗ ಮತ್ತು ಕೆಳವರ್ಗ(/ಹಿಂದುಳಿದ) ಎಂಬುದರ ನಡುವೆ ಮಧ್ಯಮ ವರ್ಗವೆಂಬ ಮತ್ತೊಂದು ಕವಲಿದೆ. ವಲಸಿಗರು ಮತ್ತು ಶ್ರಮಿಕ ನಗರವಾಸಿ ಮಕ್ಕಳು ಇಂಗ್ಲಿಷ್ ಮಾಧ್ಯಮವೆಂದು ಪ್ರವೇಶ ಪಡೆಯುವ ಎಷ್ಟೋ ಶಾಲೆಗಳಲ್ಲಿ ಸೌಲಭ್ಯದ ಕೊರತೆಯಿಂದಾಗಿ ಅರೆಬರೆ ಶಿಕ್ಷಣ ಪಡೆಯುವ ಇವರು ಅಗಾಧವಾಗಿ ಕನ್ನಡವನ್ನು ಪ್ರೀತಿಸುತ್ತಾರೆ. ಅಂತೆಯೆ ಇಂಗ್ಲಿಷನ್ನು ಒಪ್ಪುತ್ತಾರೆ. ಇವರಲ್ಲಿ ಭಾಷೆಯ ಹಂಬಲದ ಕನಸುಗಳು ಭರವಸೆಯ ಬದುಕನ್ನು ಚಿಗುರಿಸುತ್ತಿರುತ್ತವೆ. ಕನ್ನಡದ ನವಮಾನವ ಕಲ್ಪನೆ ರೂಪುಗೊಳ್ಳುವುದಾದರೆ ಈ ಮಕ್ಕಳು ಹರಿದಾಡುವ ಅಂಗಳದಲ್ಲೆಲ್ಲ ಕನ್ನಡದ ಕಂಪು ಸೂಸೀತು, ಇವರ ಚೈತನ್ಯವೇ ಎರಡರ ಸೇತುವೆ ಆದೀತು ಎಂಬ ಭರವಸೆಯನ್ನು ನಾವು ಇಡಬಹುದಾಗಿದೆ. ಅವಸರದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ಜಾರಿಗೊಳಿಸಿದರೆ ಸರಕಾರಿ ಶಾಲೆಗಳ ಬೋಧನಾ ಸೌಕರ್ಯ ಹೇಗಿದೆ? ಇಂಗ್ಲಿಷ್ ಕಲಿಕೆಯನ್ನು ಸಮರ್ಥವಾಗಿ ಮಾಡಬಲ್ಲ ಶಿಕ್ಷಕರು ಎಲ್ಲಿದ್ದಾರೆ ? ಇದು ದೂರದೃಷ್ಟಿಯುಳ್ಳ ಯೋಜನೆ ಅಲ್ಲ…  ಮುಂತಾಗಿ ಪ್ರಶ್ನೆಗಳು, ಅನುಮಾನಗಳು ಹುಟ್ಟಿಕೊಳ್ಳುತ್ತವೆ, ಆದರೆ ಅಂತಹದ್ದೊಂದು ಅವಕಾಶ ಈ ಮಧ್ಯಮವರ್ಗೀಯ ಮಕ್ಕಳಿಗೆ ದಕ್ಕುತ್ತಿರುವಾಗ ಅಪ್ರಾಮಾಣಿಕ, ಹಣ ಮಾಡುವ ಅಡ್ಡೆಯಾದ, ಮ್ಯಾನೇಜ್‌ಮೆಂಟ್ ವರ್ಚಸ್ಸಿನ ಖಾಸಗಿ ಒಡೆತನದ ಶಾಲೆಗಳಿಗಿಂತ ಸರಕಾರೀ ಶಾಲೆಗಳೇ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯನ್ನು ಈ ವರ್ಷದ ಸರಕಾರಿ ಶಾಲೆಗಳ ಫಲಿತಾಂಶ ಗಮನಿಸಿದವರು ಅಲ್ಲಗಳೆಯಲಾರರು.

ದೂರದೃಷ್ಟಿ ಸರಕಾರಕ್ಕಿರಲಿಕ್ಕಿಲ್ಲ. ಆದರೆ ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಳ್ಳುವ ಬಡಕೂಲಿ ಕಾರ್ಮಿಕರ ಮಕ್ಕಳಿಗೆ, ರೈತ ಕುಟುಂಬದ ಮಕ್ಕಳಿಗೆ ತಮ್ಮ ಬದುಕಿನ ದೂರದೃಷ್ಟಿ ಮತ್ತು ಅದಕ್ಕಾಗಿ ಇಂಗ್ಲಿಷ್ ವ್ಯಾಮೋಹ ಇರುವುದಂತೂ ಸತ್ಯ.

(ಚಿತ್ರಕೃಪೆ: ದ ಹಿಂದು, ವಿಕಿಪೀಡಿಯ, ಇತರೆ)