ಬಡ ಕೂಲಿ ಕಾರ್ಮಿಕ ರೈತ ಮಕ್ಕಳಿಗೆ ಇಂಗ್ಲಿಷ್

 – ಮಹದೇವ ಹಡಪದ

ಜಗತ್ತಿನ ಎಲ್ಲ ಭಾಷೆಯ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಅನುವಾದವೋ, ಛಾಯಾನುವಾದವೋ, ರೂಪಾಂತರವೋ…. ಒಟ್ಟಿನಲ್ಲಿ ಯಾವುದೇ ರೂಪದಲ್ಲಿ ಬಂದರೂ ಅದರ ಸ್ವಾದ ಸ್ವಾರಸ್ಯವನ್ನು ಕನ್ನಡದವರೇ ಆಗಿ ಓದುವ ನಮಗೆ ಇಂಗ್ಲಿಷಿನ ಷೇಕ್ಸಪೀಯರ್ ಕನ್ನಡದಲ್ಲಿ ಶೇಷಣ್ಣನಾಗಿಬಿಡುತ್ತಾನೆ. ನಮ್ಮದೇ ಏಕಾಂತದ ಒಳಗಿನ ಮೊಳಕೆಯೊಡೆಯುವ ಹೊತ್ತು-ಅವನ ಸಾನೆಟ್, ನಾಟಕಗಳಲ್ಲಿ ಕೇಂದ್ರವಾಗಿರುತ್ತದೆ. ಆದರೆ ಕನ್ನಡದ ಅಭಿಮಾನವೆಂಬ ಸ್ವಹಿತಾಸಕ್ತಿಯ ದುರಹಂಕಾರ ಡಬ್ಬಿಂಗ್ ವಿಷಯದಲ್ಲಿ ಏಕಾಏಕಿ “ಡಬ್ಬಿಂಗ್ ಕನ್ನಡ ಭಾಷೆಗೆ ಮಾರಕ” ಎಂದು ಗುಡುಗುವ ಮಹಾಶಯರ ಘರ್ಜನೆಯು ಹೇಗೆ ಹಾಸ್ಯಾಸ್ಪದವಾಗಿ ಕಾಣುತ್ತದೆಯೋ ಹಾಗೇ ಈ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ (6ನೇ ತರಗತಿಯಿಂದ) ಅಳವಡಿಸುವುದರ ವಿರುದ್ಧ ಗುಡುಗಿದವರ ಬಗ್ಗೆಯೂ ಅನುಮಾನ ಮೂಡುತ್ತದೆ.

ನಾನು ವಾಸಿಸುವ ಹಳ್ಳಿಯಲ್ಲಿ ಇಂಗ್ಲಿಷ್ ಮಾಧ್ಯಮದ ಕಾನ್ವೆಂಟ್ ಶಾಲೆಯೊಂದಿದೆ. ಇಲ್ಲಿಗೆ ಸೇರಲು ಬರುವ ಮತ್ತು ಸೇರ್ಪಡೆ ಪಡೆದಿರುವ ವಿದ್ಯಾರ್ಥಿಗಳೆಲ್ಲ ರೈತಕುಟುಂಬದಿಂದ ಬಂದವರು. ಅವರ ಕೈಯೊಳಗಿನ ಟ್ರಂಕು-ಹಾಸಿಗೆ ಸುರುಳಿ ನೋಡುತ್ತಿದ್ದ ಹಾಗೆ ಊಹಿಸಬಹುದಾದದ್ದು ಅಂದರೆ ಅವರೆಲ್ಲ ಹಳ್ಳಿ ಮಕ್ಕಳೇ ಎಂದು. ಹಾಗೆ ಅವರನ್ನು ಕರೆದು ಮಾತಾಡಿಸಿದಾಗ ತಿಳಿದದ್ದು ಅವರು ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಂಡ ಕಾರಣಕ್ಕಾಗಿಯೇ ಇಷ್ಟು ದೂರ ಬಂದವರು. ಒಂದೇ ಸಂಸ್ಥೆಯ ಕನ್ನಡ ಮಾಧ್ಯಮದ ಮಾಧ್ಯಮಿಕ ಶಾಲೆಯಲ್ಲಿ ಸೀಟುಗಳು ಇನ್ನೂ ಪೂರ್ಣ ಭರ್ತಿಯಾಗಿಲ್ಲವಾದರೂ ಇಂಗ್ಲಿಷ್ ಮಾಧ್ಯಮದ ಮಾಧ್ಯಮಿಕ ಶಾಲೆಯಲ್ಲಿ ಮಿತಿಮೀರಿ ಪ್ರವೇಶಗಳು ಆಗಿದ್ದವು. ದುರಂತವೆಂದರೆ ಕಳೆದ ಸಾಲಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದ ಕೆಲವು ವಿದ್ಯಾರ್ಥಿಗಳಿಗೆ ತಡವಾಗಿ ಸೇರಲು ಬಂದ ಕಾರಣಕ್ಕಾಗಿ ಪ್ರವೇಶ ಸಿಕ್ಕದಾಗಿದೆ. ಹಾಗೆ ತಡವಾಗಿ ಪ್ರವೇಶ ಬಯಸಿ ಬಂದ ಸಾಣೇಹಳ್ಳಿಯ ಪಕ್ಕದ ಊರಿನ ಪೂಜಾ ಎಂಬ ಹುಡುಗಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರವೇಶ ಸಿಗಲಿಲ್ಲವೆಂಬ ಕಾರಣಕ್ಕಾಗಿಯೇ ದಿನಾಂಕ 09/ಜೂನ್/2012 ರಂದು ವಿಷ ಕುಡಿದು ಆತ್ಮಹತ್ಯೆಮಾಡಿಕೊಂಡಿದ್ದಾಳೆ. ಆ ಮಗಳ ತಂದೆ, ಆ ರೈತ, ಯಾವ ಕೆಲಸದ ಅವಸರಕ್ಕಾಗಿ ತಾನು ತಡವಾಗಿ ಬಂದನೋ ಅದನ್ನು ಶಪಿಸುತ್ತಿದ್ದಾನೆ. ಈ ಹಳ್ಳಿಮಕ್ಕಳ ಇಂಗ್ಲಿಷ್ ವ್ಯಾಮೋಹ-ಕನ್ನಡ ಪ್ರೀತಿಯನ್ನ ಕಂಡಾಗ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಅವಶ್ಯಕತೆಯನ್ನು ಕುರಿತಾಗಿ ಗಹನವಾಗಿಯೇ ಆಲೋಚಿಸಬೇಕಾಗಿದೆ.

ಹುಲಿ ಸಿಂಹ ಶಾರ್ದೂಲಗಳ ಜೊತೆಗೆ ಹುಲ್ಲೆ ಹಸು ಕುರಿಗಳು ಒಡನಾಡಿಕೊಂಡು ಬದುಕುವ ಮಾರ್ಗವೊಂದು ತೆರೆದುಕೊಂಡದ್ದು ಈ ಇಂಗ್ಲಿಷ್ ಎಂಬ ಮಾಯಾವಿ ಭಾಷೆಯಿಂದ ಎಂಬುದನ್ನು ಅರ್ಥಮಾಡಿಕೊಳ್ಳುವುದಾದರೆ ಸಮಾನ ಶಿಕ್ಷಣ ಸಾಧ್ಯವಾಗುತ್ತದೆ. ಆದರೆ ಈ ಬುದ್ಧಿವಂತ ವರ್ಗ ಹೋರಾಟದ, ಕೆಚ್ಚೆದೆಯ, ಬೀಸು ದೊಣ್ಣೆಯ ತುಂಬು ಅಭಿಮಾನದ ಗುಟುರು ಹಾಕುತ್ತಲಿದೆ. ಅದು ಯಾರ ವಿರುದ್ಧ – ಶೂದ್ರಾತಿಶೂದ್ರ ಬಡವರ, ಹಳ್ಳಿಗರ, ರೈತರ ಮಕ್ಕಳ ವಿರುದ್ಧ. ಭಾಷೆಯೂ ಕೀಳರಿಮೆಯನ್ನು ಸೃಷ್ಟಿಸುತ್ತದೆ.

ಹೊಸ ಸಂವೇದನೆಯೊಂದು ಇಂಗ್ಲಿಷ್ ಎಂಬ ಭಾಷೆಯೊಂದಿಗೆ ನಮ್ಮ ನೆಲಕ್ಕೆ ಬಂದಿರುವುದನ್ನು ನಾವು ಮರೆಯಬಾರದು. ಇಂಗ್ಲಿಷ್ ನಮ್ಮ ರಾಜ್ಯದ ಕರಾವಳಿ ಭಾಗದಲ್ಲಿ ಮೊದಲು ತನ್ನ ಅಸ್ತಿತ್ವದ ನೆಲೆಯನ್ನು (ಇಂಡಿಯಾದ ಕರಾವಳಿಯಲ್ಲೂ) ಕಂಡುಕೊಂಡಿತು. ಅದನ್ನು ಕಲಿತ ಕನ್ನಡದಲ್ಲಿ ಯೋಚಿಸುವವನು ಅಂಗ್ರೇಜಿಯಲ್ಲಿ ವಿವರಿಸಬಲ್ಲವನಾಗಿರುತ್ತಾನೆ. ಅಂಥವನು ಎಲ್ಲ ದೇಶಗಳ ಎಲ್ಲ ಕಂಪನಿಗಳಲ್ಲೂ ಕೆಲಸ ಮಾಡಬಲ್ಲವನಾಗಿರುತ್ತಾನೆ. ಅವನಿಗೆ ಸಿಗುವ ಪ್ರಾಧಾನ್ಯತೆಯನ್ನು ಕನ್ನಡದಲ್ಲಿ ಯೋಚಿಸಿ ಕನ್ನಡದಲ್ಲೇ ವ್ಯವಹರಿಸಬಲ್ಲಾತನು ಪಡೆಯಲಾರ, ಇದನ್ನು ಅರ್ಥವತ್ತಾಗಿ ವಿವರಿಸುವ ಅಗತ್ಯವಿಲ್ಲ. ಯಾಕೆಂದರೆ ಮಾಧ್ಯಮದ ಆಯ್ಕೆಯಲ್ಲಿ ಎರಡು ವರ್ಗಗಳು ಗೆರೆ ಕೊರೆದುಕೊಂಡೇ ಹುಟ್ಟಿಕೊಳ್ಳುತ್ತಿರುವ ಈ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಸಿಗುವ ಮಾನ್ಯತೆ ಕನ್ನಡಕ್ಕೆ ಸಿಕ್ಕಿಲ್ಲ. ಆದರೆ…

ಓದು ಚಿಂತನೆ ಅನ್ನುವುದು ವಿಶ್ವವ್ಯಾಪಕವಾಗಿ ಆಯಾ ಭಾಷೆಗಳಿಂದ ತುರ್ಜುಮೆಯ ರೂಪದಲ್ಲಿ ಸಿಕ್ಕುವುದು ಇಂಗ್ಲಿಷ್ ಎಂಬ ಕೊಂಡಿಯೊಂದರ ಮುಖೇನವೆಂಬುದು ಎಲ್ಲರಿಗೂ ತಿಳಿದ ಸತ್ಯ. ಹಾಗೆಂದ ಮಾತ್ರಕ್ಕೆ ಇಂಗ್ಲಿಷ್ ದೇವಭಾಷೆ ಏನೂ ಅಲ್ಲ. ಸಂಪರ್ಕ ಸಹಜವಾದ, ಇಂದಿನ ಜಗತ್ತಿನಲ್ಲಿ ಬಹುಸಂಖ್ಯಾತರಿಗೆ ತಿಳಿದ ಏಕೈಕ ಭಾಷೆ ಇಂಗ್ಲಿಷ್. ಆದ್ದರಿಂದ ಇಂಗ್ಲಿಷ್ ಮಾಧ್ಯಮವನ್ನು ಖುದ್ದಾಗಿ ಸರಕಾರವೇ ಅಳವಡಿಸುತ್ತಿರುವಾಗ ಅದನ್ನು ವಿರೋಧಿಸುವುದು ಯಾವ ನ್ಯಾಯ? ಕನ್ನಡದ ಆಸೆ-ಭಾಷೆಗಳೆರಡೂ ಆಳವಾಗಿ ಬೇರೂರಿರುವುದು ಬರೀ ಮೌಖಿಕವಾಗಿಯೇ ಏನೂ ಇಲ್ಲ. ಭಾಷೆಯ ಅಧ್ಯಯನ ಮತ್ತು ಸಂಶೋಧನೆಗಳೊಂದಿಗೆ ಕನ್ನಡದ ನೆಲೆ ದೂರದೃಷ್ಟಿವುಳ್ಳದ್ದಾಗಿದೆ. ಈಗ ನಿಜಕ್ಕೂ ಈ ಭಾಷೆಯ ವಿಷಯದಲ್ಲಿ ಮುಜುಗರ ಅನುಭವಿಸುತ್ತಿರುವವರು ನನ್ನಂತೆ ಹಿಂದುಳಿದ ವರ್ಗದಿಂದ ಬಂದವರು, ತೀರ ಬಡಕುಟುಂಬದಿಂದ ಬಂದವರು, ಹಳ್ಳಿಯಿಂದಲೇ ಓದು ಆರಂಭಿಸಿದವರು. ಕನ್ನಡದ ಪರವಾಗಿ ಮಾತಾಡುತ್ತಿರುವವರು ಕೆಲವರು ಸರಕಾರಿ ಶಾಲೆಯಲ್ಲಿ ಓದಿ ಬಂದದ್ದನ್ನ ಮತ್ತು ತಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವುದನ್ನ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈ ಸಮರ್ಥನೆ ಕೊಟ್ಟ ಕಾರಣಕ್ಕೆ ಇವರು ಭಾಷೆಯನ್ನು ಕಟ್ಟಲು, ಉಳಿಸಲು ಹೊರಾಟಕ್ಕೆ ಯೋಗ್ಯರು ಎಂಬ ಯಾವ ಗ್ರೇಡು ಸಿಗುತ್ತದೋ ಗೊತ್ತಿಲ್ಲ. ಆದರೆ ಇವರ ಅಭಿಮಾನ ಒಂದು ವರ್ಗದ ಜನರ ಕನ್ನಡದ ಪ್ರೀತಿಯನ್ನು, ಇಂಗ್ಲಿಷ್ ಕುರಿತಾದ ವ್ಯಾಮೋಹವನ್ನು ಹೊಸಕಿ ಹಾಕುತ್ತಿದೆ.

ಇಂಗ್ಲಿಷ್ ಮತ್ತು ಕನ್ನಡವೆಂಬ ಓದುವ ಮಾಧ್ಯಮದ ಒಳಾಂಗಣದ ಒಳಗೇ ರಚಿತಗೊಳ್ಳುವ ಈ ಎರಡು ವರ್ಗಗಳು ಬರೀ ಕನ್ನಡ-ಇಂಗ್ಲಿಷಿನದ್ದು ಎಂದು ವರ್ಗೀಕರಿಸಿದರೆ ತಪ್ಪಾದೀತು. ಇದರಲ್ಲಿ ಮೇಲ್ವರ್ಗ ಮತ್ತು ಕೆಳವರ್ಗ(/ಹಿಂದುಳಿದ) ಎಂಬುದರ ನಡುವೆ ಮಧ್ಯಮ ವರ್ಗವೆಂಬ ಮತ್ತೊಂದು ಕವಲಿದೆ. ವಲಸಿಗರು ಮತ್ತು ಶ್ರಮಿಕ ನಗರವಾಸಿ ಮಕ್ಕಳು ಇಂಗ್ಲಿಷ್ ಮಾಧ್ಯಮವೆಂದು ಪ್ರವೇಶ ಪಡೆಯುವ ಎಷ್ಟೋ ಶಾಲೆಗಳಲ್ಲಿ ಸೌಲಭ್ಯದ ಕೊರತೆಯಿಂದಾಗಿ ಅರೆಬರೆ ಶಿಕ್ಷಣ ಪಡೆಯುವ ಇವರು ಅಗಾಧವಾಗಿ ಕನ್ನಡವನ್ನು ಪ್ರೀತಿಸುತ್ತಾರೆ. ಅಂತೆಯೆ ಇಂಗ್ಲಿಷನ್ನು ಒಪ್ಪುತ್ತಾರೆ. ಇವರಲ್ಲಿ ಭಾಷೆಯ ಹಂಬಲದ ಕನಸುಗಳು ಭರವಸೆಯ ಬದುಕನ್ನು ಚಿಗುರಿಸುತ್ತಿರುತ್ತವೆ. ಕನ್ನಡದ ನವಮಾನವ ಕಲ್ಪನೆ ರೂಪುಗೊಳ್ಳುವುದಾದರೆ ಈ ಮಕ್ಕಳು ಹರಿದಾಡುವ ಅಂಗಳದಲ್ಲೆಲ್ಲ ಕನ್ನಡದ ಕಂಪು ಸೂಸೀತು, ಇವರ ಚೈತನ್ಯವೇ ಎರಡರ ಸೇತುವೆ ಆದೀತು ಎಂಬ ಭರವಸೆಯನ್ನು ನಾವು ಇಡಬಹುದಾಗಿದೆ. ಅವಸರದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ಜಾರಿಗೊಳಿಸಿದರೆ ಸರಕಾರಿ ಶಾಲೆಗಳ ಬೋಧನಾ ಸೌಕರ್ಯ ಹೇಗಿದೆ? ಇಂಗ್ಲಿಷ್ ಕಲಿಕೆಯನ್ನು ಸಮರ್ಥವಾಗಿ ಮಾಡಬಲ್ಲ ಶಿಕ್ಷಕರು ಎಲ್ಲಿದ್ದಾರೆ ? ಇದು ದೂರದೃಷ್ಟಿಯುಳ್ಳ ಯೋಜನೆ ಅಲ್ಲ…  ಮುಂತಾಗಿ ಪ್ರಶ್ನೆಗಳು, ಅನುಮಾನಗಳು ಹುಟ್ಟಿಕೊಳ್ಳುತ್ತವೆ, ಆದರೆ ಅಂತಹದ್ದೊಂದು ಅವಕಾಶ ಈ ಮಧ್ಯಮವರ್ಗೀಯ ಮಕ್ಕಳಿಗೆ ದಕ್ಕುತ್ತಿರುವಾಗ ಅಪ್ರಾಮಾಣಿಕ, ಹಣ ಮಾಡುವ ಅಡ್ಡೆಯಾದ, ಮ್ಯಾನೇಜ್‌ಮೆಂಟ್ ವರ್ಚಸ್ಸಿನ ಖಾಸಗಿ ಒಡೆತನದ ಶಾಲೆಗಳಿಗಿಂತ ಸರಕಾರೀ ಶಾಲೆಗಳೇ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯನ್ನು ಈ ವರ್ಷದ ಸರಕಾರಿ ಶಾಲೆಗಳ ಫಲಿತಾಂಶ ಗಮನಿಸಿದವರು ಅಲ್ಲಗಳೆಯಲಾರರು.

ದೂರದೃಷ್ಟಿ ಸರಕಾರಕ್ಕಿರಲಿಕ್ಕಿಲ್ಲ. ಆದರೆ ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಳ್ಳುವ ಬಡಕೂಲಿ ಕಾರ್ಮಿಕರ ಮಕ್ಕಳಿಗೆ, ರೈತ ಕುಟುಂಬದ ಮಕ್ಕಳಿಗೆ ತಮ್ಮ ಬದುಕಿನ ದೂರದೃಷ್ಟಿ ಮತ್ತು ಅದಕ್ಕಾಗಿ ಇಂಗ್ಲಿಷ್ ವ್ಯಾಮೋಹ ಇರುವುದಂತೂ ಸತ್ಯ.

(ಚಿತ್ರಕೃಪೆ: ದ ಹಿಂದು, ವಿಕಿಪೀಡಿಯ, ಇತರೆ)

8 thoughts on “ಬಡ ಕೂಲಿ ಕಾರ್ಮಿಕ ರೈತ ಮಕ್ಕಳಿಗೆ ಇಂಗ್ಲಿಷ್

  1. prasad raxidi

    ಇಂದಿಗೆ ಖಂಡಿತ ಇಂಗ್ಲಿಷ್ ಅನಿವಾರ್ಯ ಬೇರೆ ಮಾತಿಲ್ಲ, ಆದರೆ ಕನಿಷ್ಟ ಏಳನೇ ತರಗತಿಯವರೆಗಾದರೂ ಶಿಕ್ಷಣ, ಆ ರಾಜ್ಯದ ಆಡಳಿತ ಭಾಷೆಯೇ ಆಗಿರಬೇಕೆಂದು ನನ್ನ ಅಭಿಮತ (ಮಾತ್ರಭಾಷೆ ಎಂಬ ಪದವನ್ನು ನಾನು ಉದ್ದೇಶಪೂರ್ವಕವಾಗಿಯೇ ಬಳಸಿಲ್ಲ) ನಾನೂ ಪ್ರೌಢಶಾಲೆಯವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿತವನು, ನನ್ನ ಮಕ್ಕಳನ್ನೂ ಕನ್ನಡ ಶಾಲೆಯಲ್ಲೇ ಓದಿಸಿ ಜೊತೆಯವರಿಂದ ಜುಗ್ಗ-ತಲೆತಿರುಕ ಇತ್ಯಾದಿ ಹಂಗಿಸಿಕೊಂಡವನು. ನಾನು ಸರಿಯಾಗಿ ಇಂಗ್ಲಿಷ್ ಕಲಿಯದ್ದರಿಂದ ಏನು ತೊಂದರೆಯಾಯಿತೆಂದೂ ಅರಿತವನು. ಆದರೆ ನಾವಂದುಕೊಂಡಂತೆ ಸರ್ಕಾರ ಇಂಗ್ಲಿಷ್ ಮಾದ್ಯಮದ ಶಾಲೆಗಳನ್ನು ತೆರದಾಕ್ಷಣ ಕನ್ನಡ ಸಾಯುವುದೂ ಇಲ್ಲ- ನಮ್ಮ ಮಕ್ಕಳು ಇಂಗ್ಲಿಷ್ ಭಾಷಾವಿದರೂ ಆಗುವುದಿಲ್ಲ ಯಾಕೆಂದರೆ ದೊಡ್ಡನಗರಗಳು ಬಿಟ್ಟರೆ ಸಣ್ಣ ಊರು ಮತ್ತು ಹಳ್ಳಿಗಳಲ್ಲಿ ಈಗ ಸಾಕಷ್ಟಿರುವ ಖಾಸಗಿ ಇಂಗ್ಲಿಷ್ ಶಾಲೆಗಳು ಕಲಿಸುವ ಇಂಗ್ಲೀಷ್ ಯಾವ ಉಪಯೋಗಕ್ಕೂ ಇಲ್ಲದಂಥಾದ್ದು, ಅಲ್ಲಿ ಕಲಿಯುತ್ತಿರುವ ಮಕ್ಕಳಿಗೆ, ಅತ್ತ ಕನ್ನಡವೂ ಇಲ್ಲ ಇತ್ತ ಇಂಗ್ಲೀಷೂ ಬರಲಿಲ್ಲ ಎಂಬಂತಾಗಿದೆ. ಇನ್ನು ಈಗಲೇ ಸರಿಯಾದ ಶಿಕ್ಷಕರಿಲ್ಲದೆ ನರಳುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಏನು ಕಲಿಸಿಯಾರು.. ನಾವೆಲ್ಲ ಒತ್ತಾಯಿಸಬೇಕಾದದ್ದು ಮೊದಲನೆಯದಾಗಿ ದೇಶಾದ್ಯಂತ ಸಮಾನ ಶಿಕ್ಷಣ ವ್ಯವಸ್ತೆ ಜಾರಿಗೊಳಿಸುವ ಬಗ್ಗೆ, ಹಾಗೇ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಚೆನ್ನಾಗಿ ಕಲಿಸುವ ಬಗ್ಗೆ. ಹಳ್ಳಿಯ ಮಕ್ಕಳಿಗೆ(ನಗರಗಳಲ್ಲೂ ಕೆಳವರ್ಗದ ಮಕ್ಕಳಿಗೆ)ಚೆನ್ನಾಗಿ ಇಂಗ್ಲಿಷ್ ಕಲಿಸಲು ಒಂದು ಆಂದೋಲನವನ್ನೇ ಪ್ರಾರಂಭಿಸಬೇಕು(ಸಾಕ್ಷರತಾ ಆಂದೋಲನದಂತೆ). ಅಲ್ಲಿಯವರೆಗೆ ಇಂಗ್ಲಿಷ್ ಕಲಿಸುವ ಬಗ್ಗೆ ನಾವು ನಮ್ಮ ನಮ್ಮಲ್ಲೇ ವಾದವಿವಾದ ಮಾಡುತ್ತಾ ಕಿತ್ತಾಡುತ್ತಾ ಗಾದೆಮಾತಿನಲ್ಲಿ ಹೇಳುವಂತೆ “ಜೊಳ್ಳು ಕುಟ್ಟಿ ಅಕ್ಕಿ ಹುಡುಕುತ್ತಾ ” ಇರುತ್ತೇವೆ.

    Reply
  2. Ananda Prasad

    ಒಂದು ಭಾಷೆಯಲ್ಲಿ ಮಾತಾಡುವ ಪ್ರಾವೀಣ್ಯತೆ, ನಿರರ್ಗಳ ಶೈಲಿ ದಕ್ಕಬೇಕಾದರೆ ಆ ಭಾಷೆ ಎಳೆಯ ವಯಸ್ಸಿನಲ್ಲಿಯೆ ನಮ್ಮ ಪರಿಸರದಲ್ಲಿ ಬಳಕೆಯಲ್ಲಿರಬೇಕು. ಹಾಗಿದ್ದಾಗ ಅದು ಸಹಜವಾಗಿ ದಕ್ಕುತ್ತದೆ. ಈ ಕಾರಣಕ್ಕಾಗಿಯೇ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಳಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರಸ್ಪರ ಪಠೄ ವಿಷಯ ಬಿಟ್ಟು ಬೇರೆ ವಿಷಯ ಸಂವಹನ ನಡೆಸುವಾಗಲೂ ಆಂಗ್ಲ ಭಾಷೆಯಲ್ಲಿಯೇ ಮಾತಾಡಬೇಕು ಎಂದು ಕಡ್ಡಾಯ ಮಾಡಿರುತ್ತಾರೆ. ಇದರಿಂದ ಆಂಗ್ಲ ಭಾಷೆಯ ಪರಿಸರ ಒದಗಿ ಭಾಷೆಯಲ್ಲಿ ಪ್ರಾವೀಣ್ಯತೆ, ನಿರರ್ಗಳ ಶೈಲಿ ದಕ್ಕುತ್ತದೆ. ಈ ದೃಷ್ಟಿಯಿಂದ ನೋಡುವುದಾದರೆ ಸರ್ಕಾರವೇ ಆಂಗ್ಲ ಮಾಧ್ಯಮವನ್ನು ಅಂಗನವಾಡಿ ಮಟ್ಟದಿಂದಲೇ ತರುವುದು ಸೂಕ್ತ. ಹೀಗಾದರೆ ಬಡವರು ಸಾಲ ಮಾಡಿ ತಮ್ಮ ಮಕ್ಕಳನ್ನು ದುಬಾರಿ ಫೀಸ್ ತೆತ್ತು ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸುವ ಅನಿವಾರ್ಯತೆಯನ್ನು ತಪ್ಪಿಸಬಹುದು ಹಾಗೂ ಸರ್ಕಾರೀ ಶಾಲೆಗಳು ಮುಚ್ಚುತ್ತ ಹೋಗುವ ದುರಂತವನ್ನೂ ತಪ್ಪಿಸಬಹುದು. ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಿದರೆ ಸಾಕು. ಕನ್ನಡವು ನಮ್ಮ ಪರಿಸರದ, ಆಡಳಿತದ ಭಾಷೆಯಾಗಿರುವ ಕಾರಣ ಅದು ಸಹಜವಾಗಿಯೇ ಎಲ್ಲರಿಗೂ ದಕ್ಕುತ್ತದೆ. ಹೀಗಾಗಿ ಕನ್ನಡದ ಉಳಿವಿನ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ.

    Reply
  3. Ananda Prasad

    ವಿಶ್ವದಾದ್ಯಂತ ಶಿಕ್ಷಣ ತಜ್ಞರು, ವಿಜ್ಞಾನಿಗಳು ಮಾತೃಭಾಷೆ ಅಥವಾ ಪರಿಸರದ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಬೇಕೆಂದೇ ಪ್ರತಿಪಾದಿಸುತ್ತ ಬಂದಿದ್ದಾರೆ. ಆದರೆ ಇದು ಸಮಾನ ಶಿಕ್ಷಣ ನೀತಿ ಇಲ್ಲದ ನಮ್ಮ ರಾಜ್ಯ/ದೇಶದಲ್ಲಿ ಸಾಧ್ಯವಾಗುತ್ತಿಲ್ಲ. ಎಲ್ಲಿಯವರೆಗೆ ಖಾಸಗಿ ಅಂಗ್ಲ ಮಧ್ಯಮ ಶಾಲೆಗಳು ಪರಿಸರದಲ್ಲಿ ಇರುತ್ತವೆಯೋ ಅಲ್ಲಿಯವರೆಗೆ ಪೋಷಕರು ಅಂಗ್ಲ ಮಾಧ್ಯಮದೆಡೆಗೆ ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಸರ್ಕಾರ ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಿದರೂ ಈ ಪ್ರವೃತ್ತಿಯನ್ನು ತಡೆಯಲು ಸಾಧ್ಯವಾಗಿಲ್ಲ. ಪರಿಣಾಮಕಾರಿಯಾಗಿ ಇಂಗ್ಲಿಷನ್ನು ಕಲಿಸಬಲ್ಲ ಶಿಕ್ಷಕರ ಕೊರತೆ ಇದಕ್ಕೆ ಕಾರಣ ಎನ್ನಲಾಗಿದೆ. ಇದೇ ಸಮಸ್ಯೆ ಆರನೆಯ ತರಗತಿಯಿಂದ ಇಂಗ್ಲೀಷ್ ಮಾಧ್ಯಮ ತರುವಾಗಲೂ ಇರುತ್ತದೆ ಅಥವಾ ಅಂಗನವಾಡಿಯಿಂದ ಇಂಗ್ಲೀಷ್ ಮಾಧ್ಯಮ ತಂದರೂ ಇದೇ ಸಮಸ್ಯೆ ಇರುತ್ತದೆ. ಲಕ್ಷಾಂತರ ಇಂಗ್ಲೀಷ್ ಭಾಷೆಯಲ್ಲಿ ನುರಿತ ಶಿಕ್ಷಕರು ಸಿಗುವುದು ಸಾಧ್ಯವಿಲ್ಲ. ಆಂಗ್ಲ ಭಾಷೆಯಲ್ಲಿ ಪರಿಣತಿ ಪಡೆದ ಲಕ್ಷಾಂತರ ನುರಿತ ಶಿಕ್ಷಕರನ್ನು ಸಿದ್ಧಗೊಳಿಸಲು ಕೆಲವು ವರ್ಷಗಳೇ ಬೇಕಾದೀತು. ಇಂಥ ಇಚ್ಛಾಶಕ್ತಿ ನಮ್ಮ ಸರ್ಕಾರಗಳಿಗೆ ಇಲ್ಲ. ಹೀಗಾಗಿ ಈ ಸಮಸ್ಯೆ ನಿರಂತರವಾಗಿ ಇರಲಿದೆ.

    Reply
  4. avinash totad

    i am living in Mdagascar now. it is afrench clony. Spirit of french colony is to bring equality. Here most of the elementary education is given in french. Peole speak good french. even the poorer ones. They have good access to outside world. Soceaty is less highrachical and there is social justice. So think english education is importaznt in rural governemant schools.

    Reply
  5. Priyank

    ಹಲ ವರುಷಗಳಿಂದ ಇಂಗ್ಲೀಶನ್ನು ಒಂದು ವಿಷಯವಾಗಿ ಪಾಟ ಮಾಡುತ್ತಾ ಬಂದಿರುವ ಹಿರಿಯ ಪ್ರಾಧ್ಯಾಕರಾದ ಎನ್.ಎಸ್. ರಘುನಾಥ್ ಅವರು ಇಂಗ್ಲೀಶನ್ನು ಮಾಧ್ಯಮವನ್ನಾಗಿ ಆರಿಸಿಕೊಳ್ಳುವುದರಿಂದ ಆಗುವ ತೊಡಕುಗಳನ್ನು ಇವತ್ತಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ.
    ಜಗತ್ತಿನ ಎಲ್ಲಾ ಶಿಕ್ಷಣ ತಜ್ನರೂ, ಭಾಷಾ ತಜ್ನರೂ ಹೇಳುವುದು, ಮೊದಲ ಹಂತದ ಕಲಿಕೆ ತಾಯ್ನುಡಿಯಲ್ಲಿದ್ದರೇನೇ ಒಳಿತು ಎಂದು. ನಮ್ಮ ಸಮಾಜ, ಇಂಗ್ಲೀಶ್ ಕಲಿಕೆಯೇ ನಿಜವಾದ ಕಲಿಕೆ ಎಂದು ನಂಬಿ ಕೂತಿದೆ. ಇಂಗ್ಲೀಶನ್ನು ಮಾಧ್ಯಮವನ್ನಾಗಿ ಮಾಡಿದರೆ, ನಾಡಿನ ಮಕ್ಕಳಿಗೆ ಮತ್ತು ಮುಂದಿನ ಪೀಳಿಗೆಗೆ ಕೆಡುಕು ಹೆಚ್ಚು ಎಂಬುದನ್ನು ನಮ್ಮ ಸಮಾಜ ಮನಗಂಡಂತಿಲ್ಲ.
    ತಾಯ್ನುಡಿಯಲ್ಲಿಯೇ ಮಕ್ಕಳಿಗೆ ವಿಷಯಗಳನ್ನು ಕಲಿಸುತ್ತಾ, ಇಂಗ್ಲೀಶನ್ನು ಒಂದು ಭಾಷೆಯಾಗಿ ಚೆನ್ನಾಗಿ ಕಲಿಸುವ ಏರ್ಪಾಡೇ ನಮ್ಮ ಜನರಿಗೆ ಒಳಿತು ಮಾಡಬಲ್ಲುದು. ವಿಜ್ನಾನ, ಗಣಿತದ ವಿಷಯಗಳ ಮೇಲೆ ಹಿಡಿತವಿರುವ, ಇಂಗ್ಲೀಶ್ ಬಲ್ಲ ಸಮಾಜ ನಮಗೆ ಬೇಕಿರುವುದು. ಬರೀ ಇಂಗ್ಲೀಶ್ ಬಲ್ಲ, ವಿಷಯಗಳ ಮೇಲೆ ಹಿಡಿತವಿಲ್ಲದ ಸಮಾಜವನ್ನು ನಾವು ಕಟ್ಟಿದರೆ, ಮುಂದಿನ ಪೀಳಿಗೆಯು ಜಾಗತಿಕ ಓಟದಲ್ಲಿ ಹಿಂದೆ ಬಿದ್ದೀತು.

    Reply
  6. ಗಿರೀಶ್ ಕಾರ್ಗದ್ದೆ

    ಸರ್ಕಾರವು ಮುನ್ನೂರಕ್ಕೂ ಹೆಚ್ಚು ಇಂಗ್ಲಿಷ್ ಶಾಲೆಗಳನ್ನು ತೆರೆಯಲು ಹೊರಟಿದೆ. ಇದನ್ನು ಸಮರ್ಥಿಸುತ್ತಿರುವವರ ವಾದವೇನಂದರೆ, ಖಾಸಗಿ ಶಾಲೆಯಲ್ಲಿ ಶ್ರೀಮಂತರಿಗೆ ದೊರೆಯುತ್ತಿರುವ ಇಂಗ್ಲಿಷ್ ಶಿಕ್ಷಣವು ಬಡವರಿಗೂ ದೊರೆಯಲಿ ಎನ್ನುವುದು. ಆದರೆ ಇಲ್ಲಿ ಮುಖ್ಯವಾಗಿರುವುದು ಮಾತೃಭಾಷೆಯಲ್ಲಿ ದೊರೆಯುವ ಶಿಕ್ಷಣದ ಮಹತ್ವ.ಮಗುವಿಗೆ ಮಾತೃಭಾಷೆಯಲ್ಲಿ ಸಿಗುವ ಭೋಧನೆ ಸುಲಭ ಮತ್ತು ಮನದಟ್ಟಾಗುತ್ತದೆ ಎಂಬುದನ್ನು ಜಗತ್ತಿನ ಸಂಶೋದನೆಗಳು ಒತ್ತಿ ಹೇಳಿವೆ. ವಿಶ್ವಸಂಸ್ಥೆಯು ಸಹ ಇದೇ ಅಂಶವನ್ನು ಸಾರಿದೆ. ಈಗ ನಮಗೆ ಕನ್ನಡವು ಅನ್ನವನ್ನು ಹುಟ್ಟಿಸಲಾಗದ ಭಾಷೆ ಎಂಬ ಅಭಿಪ್ರಾಯ ಇದೆ, ಸದ್ಯದ ಪರಿಸ್ಥಿತಿಯಲ್ಲಿ ಅದು ನಿಜದಂತೆ ಕಾಣುತ್ತಿದೆ. ಆದರೆ ಕನ್ನಡವನ್ನು ಅನ್ನ ಹುಟ್ಟಿಸುವ ಭಾಷೆಯಾಗಿ ಮಾಡುವ ಪ್ರಯತ್ನ ಆಗಬೇಕು. ಇಂಗ್ಲಿಶ್ ಕಲಿತು ನಾವು ಕೇವಲ ಸೇವಾವಲಯದ ನೌಕರರಾದರೆ ನಾವು ಅಲ್ಲೆ ಉಳಿಯುತ್ತೀವಿ. ಈ ಜಗತ್ತಿನ ಎಲಾ ಮುಂದುವರಿದ ದೇಶಗಳನ್ನು ನೋಡಿದಾಗ ಅಲ್ಲಿ ಕಾಣುವ ಒಂದು ಸಮಾನ ಅಂಶವೆಂದರೆ, ಇವೆಲ್ಲಾ ದೇಶಗಳು ತಮ್ಮ ಮಾತೃಭಾಷೆಯನ್ನೆ ಅಳವಡಿಸಿಕೊಂಡಿವೆ. ಕನ್ನಡವನ್ನು ನಾವು ಆ ಮಟ್ಟಕ್ಕೆ ಕೊಂಡಯ್ಯಬೇಕು. ಸರ್ಕಾರ ಮತ್ತು ಜನಸಮುದಾಯ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರೆ ಕೆಲವೇ ದಶಕಗಳಲ್ಲಿ ಇದು ಸಾದ್ಯ. ಕರ್ನಾಟಕದಷ್ಟೆ ವಿಸ್ತೀರ್ಣ ಮತ್ತು ಜನಸಂಖ್ಯೆ ಹೊಂದಿರುವ ಜರ್ಮನಿಯು ಮರ್ಸಿಡಿಸ್ ಕಾರ್ ಅನ್ನು ತಯಾರಿಸಬಲ್ಲದು ಅಂದರೆ ನಮ್ಮ ಕನ್ನಡಿಗರಿಗೂ ಅದು ಸಾದ್ಯ. ಆದರೆ ನಮ್ಮ ಯೋಚಿಸುವ ಶಕ್ತ್ರಿಯನ್ನು ನಮ್ಮ ಮಾತೃಭಾಷಾ ಶಿಕ್ಷಣದ ಮೂಲಕ ಪಡೆಯಬಹುದಾಗಿದೆ. ಜನರಲ್ಲಿ ಮಾತೃಭಾಷೆಯ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಈಗ ಶಾಲೆಗೆ ಹೋಗುವ ಮಕ್ಕಳನ್ನು ನೋಡಿದಾಗ ಇಂಗ್ಲಿಷ್ ಮಾದ್ಯಮ ಮತ್ತು ತನ್ನ ಶಕ್ತಿಗೆ ಮೀರಿದ ಸ್ಪರ್ದೆಯಿಂದಾಗಿ ಎಲ್ಲಿ ತಮ್ಮ ಬಾಲ್ಯವನ್ನು ಮುಂದೆ ತಮ್ಮ ಭವಿಶ್ಯವನ್ನು ಕಳೆದುಕೊಳುತ್ತಾರೊ ಎಂಬ ಆತಂಕ ಎದುರಾಗುತ್ತದೆ. ಆರು ಕೋಟಿ ಕನ್ನಡಿಗರು ಇಂಗ್ಲಿಷ್ ಕಲಿತರೆ ಎಲ್ಲರಿಗೂ ಐಟಿ.ಬಿಟಿಯಲ್ಲಿ ಕೆಲಸ ದೊರೆಯುವುದಿಲ್ಲ. ಈಗಿರುವ ಪರಿಸ್ತಿತಿಯೇ ಇರುತ್ತದೆ ಆದರೆ ಎಲ್ಲರಿಗೂ ಮಾತನಾಡಲು ಇಂಗ್ಲಿಷ್ ಬರುತ್ತದೆ ಅದೊಂದೆ ವ್ಯತ್ಯಾಸ. ನಾವು ಸಹ ಮುಂದುವರಿದ ರಾಷ್ತ್ರವಾಗಬೇಕಂದರೆ ನಮ್ಮ ಶಿಕ್ಸಣ ವ್ಯವಸ್ತೆಯನ್ನು ಸಂಪೂರ್ಣವಾಗಿ ಮಾತೃಭಾಷಾ ಮಾದ್ಯಮದಲ್ಲಿ ಕಟ್ಟಬೇಕು.

    Reply
  7. ಆನಂದ್

    ಮಹದೇವ್ ನಿಮ್ಮ ತುಡಿತ ಅರ್ಥವಾಗುವಂಥದ್ದೇ… ಜನರಿಗೆ ಆಯ್ಕೆಸ್ವಾತಂತ್ರ್ಯ ನಿರಾಕರಿಸಿ ಕನ್ನಡ ಮಾಧ್ಯಮದಲ್ಲೇ ಕಲಿಯಿರಿ ಎನ್ನುವುದನ್ನು ಒಪ್ಪಲಾಗದು. ಪೋಷಕರಿಗೆ ಮಾಧ್ಯಮದ ಆಯ್ಕೆಯ ಹಕ್ಕು ಇದೆ. ಇರಬೇಕು. ಕನ್ನಡ ಜನರೇ ಇಂಗ್ಲೀಶ್ ಮಾಧ್ಯಮ ಕೇಳುತ್ತಿದ್ದರೆ ಸರ್ಕಾರದ ಹೊಣೆಗಾರಿಕೆ ‘ಸರಿಯಾದುದರ ಬಗ್ಗೆ ಜನಕ್ಕೆ ಮನವರಿಕೆ ಮಾಡಿಸುವುದು’. ತಾಯ್ನುಡಿಯಲ್ಲಿ ಕಲಿಯೋದು ಒಳ್ಳೇದು ಅನ್ನೋ ನಿಲುವನ್ನು ಜನರಿಗೆ ಮನವರಿಕೆ ಮಾಡಿಸುವುದು. ಇದೂ ಕೂಡಾ ಸಾಧ್ಯವಾಗೋದು “ಕನ್ನಡ ಮಾಧ್ಯಮದಲ್ಲಿ ಓದುವುದರಿಂದ ಜ್ಞಾನ ಸಂಪಾದನೆ ಅತ್ಯುತ್ತಮವಾಗುತ್ತದೆ ಮತ್ತು ಇಂಗ್ಲೀಶಿನಲ್ಲಿ ಪರಿಣಿತಿ ಹೊಂದುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ಇಂಗ್ಲೀಶ್ ಒಂದೇ ಅಲ್ಲದೆ ಜಗತ್ತಿನ ಯಾವುದೇ ಭಾಷೆಯಲ್ಲಿ ಪರಿಣಿತಿ ಪಡೆಯುವುದು ನಾಡಿಗೆ ಒಳ್ಳೆಯದು” ಎಂಬುವ ಭರವಸೆ ಹುಟ್ಟುವಂಥಾ ವ್ಯವಸ್ಥೆಯನ್ನು ಕಟ್ಟುವುದರಿಂದಲೇ. ಹೀಗೆ ಮಾಡಿ ಎಂದೇ ನಾನು ಹೇಳುತ್ತಿರುವುದು. ಹೀಗೆ ಮಾಡುವ ಸರ್ಕಾರ ತಾನೇ ಇಂಗ್ಲೀಶ್ ಮಾಧ್ಯಮ ಶಾಲೆ ಆರಂಭಿಸೋದು ಸರಿಯೇ? ಖಾಸಗಿ ಶಾಲೆಗಳ ಮೇಲೆ ಹಿಡಿತವೇ ಇಲ್ಲದಂತೆ ಆಡುತ್ತಿರುವ ಸರ್ಕಾರ ಅಂಥಾ ಶಾಲೆಗಳ ಶುಲ್ಕದ ಮೇಲೆ ಕಡಿವಾಣ ಹಾಕಲಾಗದೇ? ಅಥವಾ “ಕಲಿಕೆಯ ಹಕ್ಕು” ಶಾಸನದಡಿಯಲ್ಲಿ ೨೫% ವಿದ್ಯಾರ್ಥಿಗಳ ಶುಲ್ಕ ಹೊರಲು ಮುಂದಾಗಿರುವ ಸರ್ಕಾರ ಮತ್ತಷ್ಟು ಮಕ್ಕಳ ಶುಲ್ಕ ಹೊರಲಾರದೇ? ಇವತ್ತು ಸರ್ಕಾರವೇ ಇಂಗ್ಲೀಶ್ ಶಾಲೆ ತೆರೆಯಲು ಮುಂದಾದರೆ ನಾಳೆ ಭಾಷಾ ಮಾಧ್ಯಮದ ಕೇಸನ್ನು ಹೇಗೆ ಎದುರಿಸೀತು? ಅಥವಾ ಸರ್ಕಾರವೇ ತನ್ನ ಭಾಷಾ ನೀತಿಯನ್ನು ಬದಲಾಯಿಸುವುದಾದರೆ ಬದಲಿಸಲಿ ಬಿಡಿ. ಆರರಿಂದ ಯಾಕೆ? ಒಂದನೇ ತರಗತಿಯಿಂದಲೇ ಇಂಗ್ಲೀಶ್ ಮಾಧ್ಯಮ ಆರಂಭಿಸಲಿ. ನಿಮ್ಮ ಬರಹದಲ್ಲಿ ನಾನು ವಾದ ದಾರಿ ತಪ್ಪದಿರಲಿ ಎಂದು ಬರೆದ ’ನನ್ನ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ’ ಎನ್ನುವ ಮಾತು ನನಗಿರುವ ಹಕ್ಕು ಚಲಾಯಿಸಲು ಅಲ್ಲಾ ಹೇಳಿದ್ದು. ಇದೇ ವರ್ತಮಾನದ ಸೂರ್ಯ ಅವರ ಲೇಖನ ನೋಡಿ. ಇಂಗ್ಲೀಶ್ ಮಾಧ್ಯಮ ಬೇಡೆನ್ನುವವರ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಾರೆ ಎನ್ನುವ ಆರೋಪವಿದೆ. ಹಾಗೆ ನಾಡಿನ ಬಗ್ಗೆ ಮಾತಾಡಲು ನಾನೊಬ್ಬ ಕನ್ನಡಿಗನಾಗಿರುವುದು ಹೆಚ್ಚಿನ ಹಕ್ಕು ಕೊಟ್ಟಿದೆ ಎಂದು ತಿಳಿಸಲು ಬಯಸುತ್ತೇನೆ.

    Reply
  8. ವಸಂತ

    ಇಂಗ್ಲಿಷ್ ಮಾಧ್ಯಮ ಬಡವರ ಪಾಲಿನ ಕಾಮಧೇನು ಅನ್ನುವ ರೀತಿಯ ವಾದವನ್ನು ವೈಜ್ಞಾನಿಕವಾದ ಕಾರಣಗಳಿಂದ ನಾನು ಒಪ್ಪುವುದಿಲ್ಲ. ಅದನ್ನು ಒಪ್ಪದಿರಲು ಇರುವ ಕಾರಣಗಳು ಇಂತಿವೆ:

    ಜಗತ್ತಿನ ಅಭಿವೃದ್ಧಿ ಹೊಂದಿರುವ ಎಲ್ಲ ದೇಶಗಳು ತಾಯ್ನುಡಿಯ ಸುತ್ತಲೇ ತಮ್ಮ ಕಲಿಕೆಯನ್ನು ರೂಪಿಸಿಕೊಂಡಿದ್ದು, ಆ ಗಟ್ಟಿ ತಳಹದಿಯ ಮೇಲೆ ಕಟ್ಟಿಕೊಂಡಿರುವ ಆರ್ಥಿಕ ವ್ಯವಸ್ಥೆಯಿಂದಲೇ ಆ ದೇಶಗಳು ಅಭಿವೃದ್ಧಿ ಹೊಂದಿವೆ. ತನ್ನ ತಾಯ್ನುಡಿ ಬಿಟ್ಟು ಇನ್ನೊಂದು ನುಡಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ಒಂದೇ ಒಂದು ದೇಶವೂ ಜಗತ್ತಿನಲ್ಲಿ ಏಳಿಗೆ ಹೊಂದಿದ ದೇಶವಾಗಿಲ್ಲ ಅನ್ನುವುದನ್ನು ಗಮನಿಸಬೇಕಿದೆ.
    ತಾಯ್ನುಡಿಯಲ್ಲಿ ಕಲಿಕೆ ಮಕ್ಕಳಲ್ಲಿ ಕಾನ್-ಸೆಪ್ಚುವಲ್ ಥಿಂಕಿಂಗ್ (ತಿರುಳು ತಿಳುವಳಿಕೆ) ಬೆಳೆಸುತ್ತೆ ಅನ್ನುವುದು ಜಗತ್ತಿನ ನೂರಾರು ವಿಜ್ಞಾನಿಗಳು, ಮನಶಾಸ್ತ್ರಜ್ಞರು, ಚಿಂತಕರು ಸಾರಿ ಸಾರಿ ಹೇಳಿರುವ ಸತ್ಯವಾಗಿದೆ. ವಿಶ್ವಸಂಸ್ಥೆ ಕೂಡಾ ಇದರ ಮಹತ್ವವನ್ನು ಸಾರುವ ಹಲವಾರು ಸಂಶೋಧನೆಗಳನ್ನು ಪ್ರಕಟಿಸಿದೆ.
    ಕರ್ನಾಟಕದ ೮೩% ಶಾಲೆಗಳು ಸರ್ಕಾರಿ+ಸರ್ಕಾರಿ ಅನುದಾನಿತ ಶಾಲೆಗಳಾಗಿವೆ. ಇವೆಲ್ಲವೂ ಕನ್ನಡ ಮಾಧ್ಯಮದಲ್ಲೇ ನಡೆಯುತ್ತಿವೆ. ಇಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಈ ಎಲ್ಲ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಬದಲಾಯಿಸಲು ಪ್ರತಿ ೩೦ ಮಕ್ಕಳಿಗೆ ಒಬ್ಬ ಶಿಕ್ಷಕರಂತೆ ಸುಮಾರು ೩-೩.೫ ಲಕ್ಷ ಇಂಗ್ಲಿಷ್ ಅನ್ನು ಚೆನ್ನಾಗಿ ಅರೆದು ಕುಡಿದಿರುವ ಶಿಕ್ಷಕರು ಬೇಕು. ಅವರನ್ನು ಎಲ್ಲಿಂದ ತರೋಣ? ಇಂಗ್ಲಿಶ್ ಇಲ್ಲಿನ ಮಕ್ಕಳ, ಹೆತ್ತವರ, ಈಗಿರುವ ಶಿಕ್ಷಕರ ಪರಿಸರದಲ್ಲಿಲ್ಲ. ಅಲ್ಲಿರುವುದು ಕನ್ನಡ. ಹೀಗಿರುವಾಗ ಪರಿಸರದ ನುಡಿಯಲ್ಲಿ ಕಲಿಸುವ ವ್ಯವಸ್ಥೆ ಚೆನ್ನಾಗಿ ರೂಪಿಸುವುದು ಸರಿಯಾದದ್ದೋ ಇಲ್ಲ ಅಲ್ಲೆಲ್ಲೂ ಇಲ್ಲದ ನುಡಿಯಲ್ಲಿ ಇದನ್ನು ಮಾಡಲು ಹೊರಡುವುದು ಸರಿಯಾದದ್ದೋ?
    ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಒಂದು ನುಡಿಯಾಗಿ ಒಂದನೇ ತರಗತಿಯಿಂದ ಕಲಿಸಲು ೨೦೦೭-೦೮ರಿಂದಲೇ ಸರ್ಕಾರ ಶುರು ಮಾಡಿದೆ. ಆದರೆ ಆ ಪ್ರಯತ್ನ ಸಂಪೂರ್ಣವಾಗಿ ಸೋತಿದೆ ಅನ್ನುವ ವರದಿಗಳು ಬಂದಿವೆ. ರೀಜನಲ್ ಇನ್-ಸ್ಟಿಟ್ಯೂಟ್ ಆಫ್ ಇಂಗ್ಲಿಷ್, ದಕ್ಷಿಣಭಾರತದಲ್ಲಿ ಪ್ರಾಧ್ಯಾಪಕರಾಗಿರುವ ರವಿನಾರಾಯಣ್ ಚಕ್ರಕೋಡಿ ಅವರು ಈ ಬಗ್ಗೆ ನಡೆಸಿರುವ ಅಧ್ಯಯನದಲ್ಲಿ ಇಂಗ್ಲಿಷ್ ಒಂದು ನುಡಿಯಾಗಿ ಕಲಿಸುವ ಸಾಮರ್ಥ್ಯದ ಕೊರತೆ ಶಿಕ್ಷಕರಲ್ಲಿರುವುದೇ ಈ ವೈಫಲ್ಯಕ್ಕೆ ಮುಖ್ಯ ಕಾರಣ ಅನ್ನುವುದನ್ನು ಗುರುತಿಸಿದ್ದಾರೆ. ಹೀಗಿರುವಾಗ ಇದೇ ಶಿಕ್ಷಕರನ್ನು ಇಟ್ಟುಕೊಂಡು ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಸಲು ಮುಂದಾಗುತ್ತೇವೆ ಅನ್ನುವುದು ಮಕ್ಕಳ ಕಲಿಕೆಯ ಮೇಲೆ ಬೀರುವ ಪರಿಣಾಮಗಳನ್ನು ಊಹಿಸಿದ್ದಾರಾ? ಈಗ ತಕ್ಕ ಮಟ್ಟಿಗೆ ಕನ್ನಡದಲ್ಲಿ ಚೆನ್ನಾಗಿ ಕಲಿಯುತ್ತಿರುವ ಮಕ್ಕಳು ನಾಳೆ ಇಂಗ್ಲಿಶ್ ಬಾರದ ಈ ಶಿಕ್ಷಕರ ಕೈಯಲ್ಲಿ ಅತ್ತ ಕನ್ನಡವೂ ಬಾರದ ಇತ್ತ ಇಂಗ್ಲಿಶು ಬರದ ಎಡಬಿಡಂಗಿಗಳಾಗುವ ಸಾಧ್ಯತೆಯೇ ಹೆಚ್ಚು.
    ಕಳೆದ ೨೫ ವರ್ಷದಿಂದ ಹೆಚ್ಚಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ಬೆಂಗಳೂರಿನಂತಹ ಊರಿನಲ್ಲಿ ಏನಾಗಿದೆ? ಮಾತನಾಡುವಾಗ ಕನ್ನಡದಲ್ಲಿ ಇಂಗ್ಲಿಶ್ ಬೆರಕೆ, ಕನ್ನಡ ಓದಲು ಬಾರದಿರುವುದು, ಕನ್ನಡ ಮಾತನಾಡದಿರುವುದೇ ಪ್ರತಿಷ್ಟೆಯ ಸಂಕೇತ ಅನ್ನುವಂತಹ ಕೀಳರಿಮೆ ಇಲ್ಲಿನ ಕನ್ನಡಿಗರಲ್ಲಿ ಹುಟ್ಟು ಹಾಕಿರುವುದು ಬಿಟ್ಟರೆ ಜಗತ್ತೇ ನಿಬ್ಬೆರಗಾಗುವಂತಹ ಸಾಧನೆಗಳು, ಪೇಟೆಂಟ್ ಗಳು ಒಂದಾದರೂ ಬೆಂಗಳೂರಿನಿಂದ ಬಂದಿವೆಯೇ? ಮೈಕ್ರೊಸಾಫ್ಟ್, ಆಪಲ್, ಮರ್ಸಿಡೀಸ್, ಸ್ಯಾಮ್ಸಂಗ್, ನೋಕಿಯಾದಂತಹ ಒಂದಾದರೂ ಕಂಪನಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಬೆಂಗಳೂರಿನ ಕನ್ನಡಿಗರಿಂದ ಬಂದಿದೆಯೇ? ನಿಜ ಹೇಳಬೇಕು ಅಂದರೆ ಕನ್ನಡ ಮಾಧ್ಯಮದಲ್ಲೇ ಕಲಿತ ನಾರಾಯಣ ಮೂರ್ತಿ ಅವರಿಂದ ಇನ್-ಫೋಸಿಸ್, ಕ್ಯಾಪ್ಟನ್ ಗೋಪಿನಾಥ್ ಅವರಿಂದ ಏರ್ ಡೆಕ್ಕನ್ ತರಹದ ಸಂಸ್ಥೆಗಳನ್ನು ಹುಟ್ಟಿಸಲು ಆಗಿದೆ ಅನ್ನುವುದು ಸಾಧಕರಾಗಲು ತಾಯ್ನುಡಿ ಶಿಕ್ಷಣದ ತಳಹದಿ ಎಷ್ಟು ಮುಖ್ಯ ಅನ್ನುವುದನ್ನು ಸಾರುತ್ತಿವೆ.
    ಇನ್ನೊಂದೆಡೆ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತೇವೆ ಅನ್ನುವ ಸರ್ಕಾರದ ನಿಲುವಿನ ಹಿಂದೆ ಮಕ್ಕಳ ಏಳಿಗೆಯ ಕಾಳಜಿ ಇರದೇ ಸರ್ಕಾರಿ ಶಾಲೆಗಳನ್ನು ಖಾಸಗಿಯವರ ತೆಕ್ಕೆಗೆ ಕೊಡುವ ಹುನ್ನಾರವೇ ಕಾಣುತ್ತಿದೆ. ಬಿ.ಬಿ.ಎಮ್.ಪಿ ವ್ಯಾಪ್ತಿಯ ಪಾಲಿಕೆಯ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಬದಲಾಯಿಸಿ ಭಾರತೀಯ ವಿದ್ಯಾ ಭವನ ಅನ್ನುವ ಖಾಸಗಿ ಸಂಸ್ಥೆಯ ಆಧೀನಕ್ಕೆ ಕೊಟ್ಟ ಉದಾಹರಣೆಯನ್ನು ಇಲ್ಲಿ ನೆನೆಯಬಹುದು. ಸರ್ಕಾರಕ್ಕೆ ಕಲಿಕೆಯ ಬಗ್ಗೆ ಯಾವುದೇ ಚಿಂತನೆ ಇಲ್ಲ, ಇದ್ದಿದ್ದರೆ ಸುಪ್ರಿಂ ಕೋರ್ಟಿನಲ್ಲಿ ನಡೆಯುತ್ತಿರುವ ಭಾಷಾ ಮಾಧ್ಯಮ ವಿವಾದಕ್ಕೆ ಎರಡು ವರ್ಷದಿಂದ ಸರ್ಕಾರದ ಪರ ವಾದ ಮಾಡಲು ವಕೀಲರೇ ಇಲ್ಲ ಅನ್ನುವ ಪರಿಸ್ಥಿತಿ ಇರುತ್ತಿತ್ತೇ?

    ನಾಳೆಯ ದಿನಗಳಲ್ಲಿ ಕನ್ನಡದಲ್ಲೂ ಉನ್ನತ ಶಿಕ್ಷಣ ಸಾಧ್ಯವಾಗಿಸಲು ಬೇಕಿರುವ ಸಮಯಾಧಾರಿತ ಕಾರ್ಯ ಯೋಜನೆಯೊಂದನ್ನು ರೂಪಿಸಿಕೊಂಡು ಅದಕ್ಕೆ ಬೇಕಿರುವ ಸಮಯ, ಹಣವನ್ನು ಆದ್ಯತೆಯ ಮೇರೆಗೆ ಕೊಡುವ ಕೆಲಸಕ್ಕೆ ಸರ್ಕಾರ ಕೈ ಹಾಕಬೇಕಿದೆ. ಅಂತಹದೊಂದು ವ್ಯವಸ್ಥೆ ಕಟ್ಟಿಕೊಳ್ಳುವವರೆಗೂ ಈಗಿರುವ ವ್ಯವಸ್ಥೆಯ ಲಾಭ ಪಡೆಯಲು ಇಂಗ್ಲಿಷ್ ಅನ್ನು ಒಂದು ಭಾಶೆಯಾಗಿ ಚೆನ್ನಾಗಿ ಕಲಿಸುವತ್ತ ಸರ್ಕಾರ ತನ್ನ ಗಮನ ಹರಿಸಲಿ. ಬೇಕಿದ್ದಲಿ ಮೂರನೇ ಭಾಷೆಯಾಗಿ ಹಿಂದಿಯನ್ನು ಹೇರುವ ಬದಲು ಇಂಗ್ಲಿಷ್ ಅಡ್ವಾನ್ಸಡ್ ಅನ್ನುವ ಮಾತನಾಡುವ ಇಂಗ್ಲಿಶ್ ಕಲಿಸುವ ವಿಷಯವೊಂದನ್ನು ಪರಿಚಯಿಸಲಿ.

    Reply

Leave a Reply

Your email address will not be published. Required fields are marked *