ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-11)


– ಡಾ.ಎನ್.ಜಗದೀಶ್ ಕೊಪ್ಪ


 

The seed ye sow, another reaps;
The wealth ye find, another keeps;
The robes ye weave, another wears;
The arms ye forge, another bears
-Shelley.

ಇವರ ಮೇಲೆ ದಾಳಿ ಮಾಡಿದ್ದ, ನರಸಿಂಗ್‌ಪುರ್‌ ಗ್ರಾಮದ ಜಮೀನ್ದಾರ ಬಿಜಿಲಿಸಿಂಗ್ ಹಾಗೂ ಅವನ ಸೇವಕರನ್ನು ಹಾಡು ಹಗಲೇ ಬೀದಿಯಲ್ಲಿ ಕೊಚ್ಚಿಹಾಕಿ, ಅವರ ದೇಹದ ತುಂಡುಗಳನ್ನು ರಸ್ತೆಯುದ್ಧಕ್ಕೂ ಬಿಸಾಡಿದರು. ಒಂದು ವರ್ಷ ಪಶ್ಚಿಮ ಬಂಗಾಳ ಮತ್ತು ಆಂಧ್ರದಲ್ಲಿ 1960 ರ ದಶಕದಲ್ಲಿ ಹೊತ್ತಿಕೊಂಡ ನಕ್ಸಲ್ ಹೋರಾಟದ ಕಿಡಿ, 70ರ ದಶಕದ ವೇಳೆಗೆ ಚಳವಳಿಯ ಪ್ರಮುಖ ನಾಯಕರಾದ ವೆಂಪಟಾಪು ಸತ್ಯನಾರಾಯಣ ಮತ್ತು ಚಾರುಮುಜಂದಾರ್ ಇವರ ಹತ್ಯೆಯಿಂದ ಈ ಎರಡು ರಾಜ್ಯಗಳಲ್ಲಿ ಕೆಲವು ದಿನಗಳ ಕಾಲ ತಣ್ಣಗಾಯಿತಾದರೂ, ಅದು ಭಾರತದ ಹನ್ನೊಂದು ರಾಜ್ಯಗಳಿಗೆ ವ್ಯಾಪಿಸುವಲ್ಲಿ ಸಹಕಾರಿಯಾಯಿತು. ಒರಿಸ್ಸಾ, ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಅಸ್ಸಾಮ್, ಜಮ್ಮು, ಕಾಶ್ಮೀರ, ತಮಿಳುನಾಡು, ಕೇರಳ, ರಾಜಸ್ಥಾನ್, ದೆಹಲಿ ರಾಜ್ಯಗಳಿಗೆ ನಕ್ಸಲ್ ಹೋರಾಟದ ಬೆಂಕಿಯ ನದಿ ಹರಿಯಿತಾದರೂ, ಅದು ತನ್ನ ಕಾವನ್ನು ಉಳಿಸಿಕೊಂಡಿದ್ದು, ಕೇವಲ ನಾಲ್ಕು ರಾಜ್ಯಗಳಲ್ಲಿ ಮಾತ್ರ. ಒರಿಸ್ಸಾ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ಬೆಂಕಿಯ ಕಾವು ಇನ್ನೂ ಜೀವಂತವಾಗಿದೆ. 70ರ ದಶಕದಲ್ಲಿ ಚಾರುವಿನ ಸಾವಿಗೆ ಮುನ್ನ ಈ ರಾಜ್ಯಗಳಲ್ಲಿ ನಡೆದ ಘಟನೆಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಾಗಿದೆ.

ಬಿಹಾರದ ಮುಜಾಪುರ್ ಜಿಲ್ಲೆಯ ಮುಶ್ರಾಯ್ ಎಂಬ ತಾಲೂಕಿನ ಹಳ್ಳಿಗಳ ಹತ್ತುಸಾವಿರ ಜನತೆ ಪ್ರಪಥಮ ಬಾರಿಗೆ ಜಮೀನ್ದಾರರ ವಿರುದ್ಧ ಸಿಡಿದೆಳುವುದರ ಮೂಲಕ ಬಿಹಾರದಲ್ಲಿ ಕೆಂಪು ಬಾವುಟವನ್ನು ಹಾರಿಸಿದರು. ಇವರೆಲ್ಲರೂ ಭೂಹೀನ ಕೃಷಿ ಕಾಮರ್ಮಿಕರಾಗಿದ್ದು, ದಲಿತ ವರ್ಗಕ್ಕೆ ಸೇರಿದವರಾಗಿದ್ದರು. ಉತ್ತರ ಬಿಹಾರದ ಈ ಪ್ರಾಂತ್ಯದ ಜನ, ಪಶ್ಚಿಮ ಬಂಗಾಳದ ಸಿಲಿಗುರಿಯ ನಕ್ಸಲ್‌ಬಾರಿ ಹಳ್ಳಿಯಲ್ಲಿ ನಡೆದ ಘಟನೆಯಿಂದ ಪ್ರೇರಿತರಾಗಿದ್ದು ವಿಶೇಷ. ಮೊದಲಿಗೆ ಗಂಗಾಪುರ್ ಎಂಬ ಸಾಮಾನ್ಯ ಹಳ್ಳಿಯಲ್ಲಿ ಕೃಷಿಕಾರ್ಮಿಕರು, 1968ರ ಏಪ್ರಿಲ್ ತಿಂಗಳಿನಲ್ಲಿ  ಜಮೀನ್ದಾರನ ಹೊಲಕ್ಕೆ ದಾಳಿ ಇಟ್ಟು, ಬೆಳೆದಿದ್ದ ಅರಾರ್ ಎಂಬ ದ್ವಿದಳ ಧಾನ್ಯದ ಬೆಳೆಯನ್ನು ಕುಯಿಲು ಮಾಡಿ ಕೊಂಡೊಯ್ದರು. ಇದರಿಂದ ಸಿಟ್ಟಿಗೆದ್ದ ಬಿಜಿಲಿಸಿಂಗ್ ಎಂಬ ಜಮೀನ್ದಾರ, ಮುನ್ನೂರು ಗೂಂಡಾ ಸೇವಕರನ್ನು ಕರೆದು ಕೊಂಡು, ಆನೆಯ ಮೇಲೆ, ಕಲ್ಲು, ಬಡಿಗೆ, ಇವುಗಳನ್ನು ಹೇರಿಕೊಂಡು ಬಂದು, ಹಳ್ಳಿಗಳಿಗೆ ದಾಳಿ ಇಟ್ಟು, ಎಲ್ಲಾ ದಲಿತ ಕೂಲಿ ಕಾರ್ಮಿಕರನ್ನ ಮನಸೋ ಇಚ್ಚೆ ಥಳಿಸಿದ.

ಈ ಘಟನೆ ಇಡೀ ಪ್ರಾಂತ್ಯದ ರೈತರು ಮತ್ತು ಕೂಲಿ ಕಾರ್ಮಿಕರನ್ನು ಕೆರಳಿಸಿತು. ಹನ್ನೆರೆಡು ಹಳ್ಳಿಗಳ ಎಲ್ಲಾ ದಲಿತರು, ರೈತರು, ಸಂಘಟಿತರಾಗಿ, ಸತ್ಯನಾರಾಯಣಸಿಂಗ್ ಎಂಬಾತನ ನೇತೃತ್ವದಲ್ಲಿ  “ಕಿಸಾನ್ ಸಂಗ್ರಾಮ್ ಸಮಿತಿ” ಮತ್ತು “ಗ್ರಾಮ್ ರಕ್ಷಣ್ ದಳ್” ಎಂಬ ಹೆಸರಿನಲ್ಲಿ ಸಮಿತಿಗಳನ್ನು ರಚಿಸಿಕೊಂಡರು. ಇವರಿಗೆ ಗೆರಿಲ್ಲಾ ಯುದ್ಧ ತಂತ್ರಗಳ ತರಬೇತಿ ನೀಡಲು, ನೆರೆಯ ಪಶ್ಚಿಮಬಂಗಾಳದಿಂದ ನಾಯಕರು ಬಂದು, ದಾಳಿಗೆ ಮಾರ್ಗದರ್ಶನ ನೀಡಿದರು. 1969 ಜನವರಿ ವೇಳೆಗೆ ಚಂಡಮಾರುತದಂತೆ ಉತ್ತರ ಬಿಹಾರವನ್ನು ಆವರಿಸಿಕೊಂಡ ಹೋರಾಟಗಾರರು, ಶೋಷಣೆಯನ್ನೇ ವೃತ್ತಿ ಮಾಡಿಕೊಂಡಿದ್ದ ಭೂಮಾಲಿಕರಿಗೆ, ಬಡ್ಡಿ ಹಣದ ಲೇವಾದೇವಿಗಾರರಿಗೆ ಹಿಂಸೆಯ ರುಚಿಯನ್ನು ಪ್ರಥಮ ಬಾರಿಗೆ ತೋರಿಸಿಕೊಟ್ಟರು. ಹಿಂದೊಮ್ಮೆದ ಅವಧಿಯಲ್ಲಿ ಹದಿಮೂರು ಮಂದಿ ಭೂಮಾಲೀಕರು ಹತ್ಯೆಯಾಗುವುದರ ಮೂಲಕ ಉತ್ತರ ಬಿಹಾರವೆಂದರೆ, ಭೂಮಾಲೀಕರ ರುಧ್ರಭೂಮಿ ಎಂಬಂತಾಯಿತು. ಮುಜಾಪುರ್ ಜಿಲ್ಲೆಯ ಈ ಹೋರಾಟ ಸಹಜವಾಗಿ ದರ್ಭಾಂಗ ಮತ್ತು ಚಂಪಾರಣ್ಯ ಜಿಲ್ಲೆಗಳಿಗೂ ಹರಡಿತು. ಇದರ ಜೊತೆಗೆ ಚೋಟಾ ನಾಗ್ಪುರ್ ಪ್ರದೇಶದಲ್ಲಿ ಆದಿವಾಸಿಗಳ ಪ್ರತ್ಯೇಕ ಹೋರಾಟ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿತು. ಎಂ,ಎಂ,ಜಿ. (Man, Money, Gun) ಇದರ ನೇತೃತ್ವವನ್ನು ಬಂಗಾಳಿ ಮೂಲದ ಸುಬೋತ್ರ ರಾಯ್ ಎಂಬಾತ ವಹಿಸಿಕೊಂಡಿದ್ದ. ಈ ತಂಡದ ಬಹುತೇಕ ಸದಸ್ಯರು ನಗರ ಜೀವನದಿಂದ ಬಂದವರಾಗಿದ್ದರಿಂದ ಅರಣ್ಯದಲ್ಲಿ ಅಡಗಿ ಹೋರಾಟ ನಡೆಸಲು ಸಾಧ್ಯವಾಗದೆ, ಅತಿ ಶೀಘ್ರದಲ್ಲಿ ಬಿಹಾರ ಪೊಲೀಸರಿಂದ ಬಂಧಿತರಾದರು. 54 ಮಂದಿ ಬಂಧಿತ ಸದಸ್ಯರಲ್ಲಿ ಮೇರಿ ಟೈಲರ್ ಎಂಬ ಓರ್ವ ಬ್ರಿಟಿಷ್ ಯುವತಿ ಸಿಕ್ಕಿ ಬಿದ್ದುದು ವಿಶೇಷ. (ವಿಚಾರಣೆಯ ನಂತರ ಈಕೆಯನ್ನ ತಾಯ್ನಾಡಿಗೆ ಗಡಿಪಾರು ಮಾಡಲಾಯಿತು)

ಬಿಹಾರ ಪೊಲೀಸರ ಕಾರ್ಯಾಚರಣೆಯ ನಡುವೆಯೂ, ನಕ್ಸಲ್ ಚಳವಳಿ, ರಾಂಚಿ ಮತ್ತು ಸಿಂಘಭೂಮಿ ಜಿಲ್ಲೆಗಳಿಗೆ ಹರಡಿತು. ಇದರಿಂದಾಗಿ ಚೋಟಾ ಕಲ್ಕತ್ತ ಎಂದು ಕರೆಯಲ್ಪಡುತ್ತಿದ್ದ ಜೆಮ್‌ಶೆಡ್‌‍ಪುರ ನಕ್ಸಲ್ ಹಾವಳಿಗೆ ತುತ್ತಾಗಬೇಕಾಯಿತು. 1970ರ ಅಕ್ಡೋಬರ್ ತಿಂಗಳಿನಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ಟಾಟ ಕಂಪನಿ ನೌಕರರ ವಸತಿ ಕಾಲೋನಿಯ ಭದ್ರತಾ ದಳದ ಅಧಿಕಾರಿಯೊಬ್ಬನನ್ನು ಹೋರಾಟಗಾರರು ಕೊಂದು ಹಾಕಿದರು. ಇದಕ್ಕೂ ಮುನ್ನ ಆಗಸ್ಟ್ ತಿಂಗಳಿನಲ್ಲಿ ಶಾಲಾ ಕಟ್ಟಡಗಳನ್ನು ಧ್ವಂಸಗೊಳಿಸಿದ ನಕ್ಸಲ್ ಹೋರಾಟಗಾರರು ಜೆಮ್‌ಸೆಡ್‌ಪುರಕ್ಕೆ ತಾವು ಕಾಲಿಟ್ಟರಿವ ಬಗ್ಗೆ ಸರ್ಕಾರಕ್ಕೆ ಪರೋಕ್ಷ ಸೂಚನೆಯನ್ನು ನೀಡಿದ್ದರು. 1971 ರಲ್ಲಿ ಸರ್ಕಾರಕ್ಕೆ ಸೇರಿದ ನಾಲ್ಕು ಸಾರಿಗೆ ಬಸ್ಸುಗಳನ್ನು ಸುಟ್ಟು ಹಾಕಿದ್ದಲ್ಲದೆ,  ಜೆಮ್‌ಸೆಡ್‌ಪುರ ವಿಮಾನ ಕ್ಲಬ್‌ಗೆ ಸೇರಿದ ಪುಷ್ವಕ್ ಎಂಬ ಲಘು ವಿಮಾನವನ್ನು ಬಾಂಬ್ ಇಟ್ಟು ಸ್ಪೋಟಿಸಿದರು. ಪಶ್ಚಿಮ ಬಂಗಾಳದ ಗೋಪಿಬಲ್ಲಬಪುರ ಜಿಲ್ಲೆಯ ಗಡಿಭಾಗ ಹೊಂದಿದ್ದ, ಸಿಂಘಭೂಮಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಹಿಂಸೆ, ಕೊಲೆಯ ಯತ್ನ ಮತ್ತು ಲೂಟಿಗಳು ನಡೆದವು. ಈ ಎಲ್ಲಾ ಘಟನೆಗಳ ಹಿಂದೆ ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ನಕ್ಸಲ್ ನಾಯಕರ ಕೈವಾಡವಿತ್ತು. ಚಾರು ಮುಜಂದಾರ್ ಬೆಂಬಲಿಗರು, ಬಿಹಾರದಲ್ಲಿ ಮೇಲ್ವರ್ಗದ ಜಾತಿ ಮತ್ತು ಶ್ರೀಮಂತ ಸಮುದಾಯದ ಶೋಷಣೆಯಿಂದ ನರಳಿದ್ದ ದಲಿತರಿಗೆ, ಭೂಹೀನ ಕೃಷಿ ಕಾರ್ಮಿಕರಿಗೆ ನಕ್ಸಲ್ ಹೋರಾಟದ ದೀಕ್ಷೆ ನೀಡುವುದರ ಮೂಲಕ ಬಿಹಾರದಲ್ಲಿ ನಕ್ಸಲ್ ಅಧ್ಯಾಯಕ್ಕೆ ನಾಂದಿ ಹಾಡಿದರು.

ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಒಂದು ಎನಿಸಿರುವ ಉತ್ತರ ಪ್ರದೇಶಕ್ಕೆ 1970 ರಲ್ಲಿ ಚಾರುವಿನ ಹತ್ಯೆಯ ನಂತರ ನಕ್ಸಲ್ ಹೋರಾಟ ವ್ಯಾಪಿಸಿತು. ಇಡೀ ಭಾರತದಲ್ಲಿ ಅತ್ಯಂತ ಹೆಚ್ಚು ಹಳ್ಳಿಗಳನ್ನ, ಬಡವರನ್ನ, ಮತ್ತು ಹಿಂದುಳಿದ ಜಾತಿಯ ಸಮುದಾಯಗಳನ್ನು ಹೊಂದಿರುವ ಖ್ಯಾತಿ ಮತ್ತು ಕುಖ್ಯಾತಿ ಎರಡನ್ನು ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳು ಪಡೆದಿವೆ. ಬಡತನ, ಶೋಷಣೆ ಮತ್ತು ಅನ್ಯಾಯಗಳೇ ತಾಂಡವವಾಡುವ ಈ ಪ್ರದೇಶಗಳಲ್ಲಿ ನಕ್ಸಲ್ ಹೋರಾಟ ಹರಡುವುದು ಕಷ್ಟಕರವೇನಲ್ಲ ಎಂಬ ಸತ್ಯವನ್ನು ಪಶ್ಚಿಮ ಬಂಗಾಳದ ಮತ್ತು ಆಂಧ್ರದ ನಕ್ಸಲ್ ನಾಯಕರು ಚೆನ್ನಾಗಿ ಅರಿತಿದ್ದರು. ಉತ್ತರ ಪ್ರದೇಶದಲ್ಲಿ ನಕ್ಸಲ್ ಚಳವಳಿ ಆರಂಭಗೊಂಡಿದ್ದು, ಉತ್ತರ ಭಾಗದ ಲಕ್ಷೀಪುರ್ ಜಿಲ್ಲೆಯಲ್ಲಿ. ಇದು, ತೆಹ್ರಿ ಪ್ರಾಂತ್ಯಕ್ಕೆ ಹೊಂದಿಕೊಂಡಿದ್ದು, ಅರಣ್ಯ ಪ್ರದೇಶದಿಂದ ಆವೃತ್ತವಾಗಿದೆ. ಥಾರುಸ್ ಎಂಬ ಬುಡಕಟ್ಟು ಜನಾಂಗ ಹೆಚ್ಚಾಗಿ ವಾಸಿಸುವ ಈ ಪ್ರದೇಶದಲ್ಲಿ, 1960ರ ದಶಕದಲ್ಲಿ ಉತ್ತರಪ್ರದೇಶ ಸರ್ಕಾರ ಆದಿವಾಸಿಗಳಿಗೆ ಒಂದು ವಿಶೇಷ ಕಾನೂನನ್ನು ರೂಪಿಸಿತ್ತು. ಯಾವುದೇ ಆದಿವಾಸಿ ಕುಟುಂಬ 10 ರಿಂದ 12 ಎಕರೆ ಅರಣ್ಯ ಪ್ರದೇಶವನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕೊಂಡು, ಬೇಸಾಯ ಮಾಡಬಹುದು ಎಂಬ ಈ ಕಾಯ್ದೆ ನಿಜಕ್ಕೂ ಆದಿವಾಸಿಗಳ ಪಾಲಿಗೆ ವರದಾನವಾಗಿತ್ತು. ಆದರೆ, ಇಲ್ಲೂ ಕೂಡ, ಅಕ್ಷರ ಲೋಕದಿಂದ ವಂಚಿತರಾದ ಈ ಮುಗ್ಧ ಜನಾಂಗ ದಳ್ಳಾಳಿಗಳಿಂದ ಮತ್ತು ಜಮೀನ್ದಾರರಿಂದ ವಂಚಿತರಾಗಬೇಕಾಯಿತು. ವಿಶ್ವನಾಥ ತಿವಾರಿ ಎಂಬ ನಕ್ಸಲ್ ನಾಯಕನ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ 1969 ರಿಂದ 1972 ರ ನಡುವೆ ಅನೇಕ ಹಿಂಸಾಚಾರದ ಘಟನೆ ಮತ್ತು ಭೂಮಾಲೀಕರ ಹತ್ಯೆಗಳು ಜರುಗಿದವು. ಇದರ ಜೊತೆ ಜೊತೆಗೆ ನೆರೆಯ ಪಾಲಿಯ ಜಿಲ್ಲೆಗೆ ಹಿಂಸಾತ್ಮಕ ಹೋರಾಟ ವ್ಯಾಪಿಸಿತು.

ಪಾಲಿಯ ಜಿಲ್ಲೆ ನೇಪಾಳದ ಗಡಿ ಭಾಗವನ್ನು ಹೊಂದಿದ್ದರಿಂದ ನಾಯಕರಿಗೆ ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ನೆರೆಯ ನೇಪಾಳಕ್ಕೆ ಪಲಾಯನ ಮಾಡಲು ಸೂಕ್ತ ಸ್ಥಳವಾಗಿತ್ತು. ಪಾಲಿಯ ಜಿಲ್ಲೆ ಜೊತೆಗೆ ಕಾನ್ಪುರ, ವಾರಾಣಾಸಿ, ಫರುಕ್ಕಾಬಾದ್, ಉನ್ನಾವೊ, ರಾಯ್ ಬರೇಲಿ, ಮೊರದಾಬಾದ್, ಅಜಮ್ಘರ್ ಜಿಲ್ಲೆಗಳಿಗೆ ನಕ್ಸಲ್ ಚಳವಳಿ ವ್ಯಾಪಿಸಿ 70ರ ದಶಕದಲ್ಲಿ ಸಣ್ಣ ಪುಟ್ಟ ಘಟನೆಗಳು ನಡೆದವು. ಉತ್ತರ ಪ್ರದೇಶದಲ್ಲಿ ಅಲ್ಲಿನ ಜನರ ಬಡತನ ಮತ್ತು ಅನಕ್ಷರತೆಯ ಕಾರಣದಿಂದ ನಕ್ಸಲ್ ಹೋರಾಟ ಪ್ರಭಾವಶಾಲಿಯಾಗಿ ಹೊರಹೊಮ್ಮಲು ಸಾಧ್ಯವಾಗಲಿಲ್ಲ. ಕರಪತ್ರ ಮತ್ತು ಭಾಷಣ ಗಳ ಮೂಲಕ ಜನರನ್ನು ಪ್ರಜ್ಞಾವಂತರನ್ನಾಗಿ ಮಾಡುವುದಕ್ಕೆ ಅಲ್ಲಿನ ನಾಯಕರು ತಮ್ಮ ಸಮಯವನ್ನು ವಿನಿಯೋಗಿಸಿದರು. ಆದರೆ, ಹಸಿದವನ ಮುಂದೆ ಉಪದೇಶ ಪ್ರಯೋಜನಕ್ಕೆ ಬಾರದು ಎಂಬಂತೆ, ಅಲ್ಲಿನ ಬಡವರನ್ನು ಹೋರಾಟಕ್ಕೆ ಸೆಳೆಯುವ ಯತ್ನ ವಿಫಲವಾಯಿತು.

ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವೆ ಇರುವ ಒರಿಸ್ಸಾದ ಕೊರಾಪೇಟ್ ಮತ್ತು ಗಂಜಾಂ ಜಿಲ್ಲೆಗಳಿಗೆ 1968 ರಲ್ಲೇ ನಕ್ಸಲ್ ಚಳವಳಿ ವ್ಯಾಪಿಸಿತ್ತು. ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಹೋರಾಟದಿಂದ ಸ್ಪೂರ್ತಿ ಪಡೆದಿದ್ದ ಇಲ್ಲಿನ ಡಿ.ಬಿ.ಎಂ. ಪಟ್ನಾಯಕ್, ಜಲಧರ್ನಂದಾ, ರಬಿದಾಸ್, ಕುಂದನ್ರಾಮ್, ನಾಗಭೂಷಣ ಪಟ್ನಾಯಕ್, ಧೀನಬಂಧುಸಮಲ್, ಜಗನ್ನಾಥ್ ಮಿಶ್ರಾ ಮುಂತಾದವರು ಹೋರಾಟದ ಮುಂಚೂಣಿಯಲ್ಲಿದ್ದರು. 1969 ರಲ್ಲಿ ಚಾರುಮುಜಂದಾರ್ ಮನವಿ ಮೇರೆಗೆ ತಮ್ಮ ಸಂಘಟನೆಯನ್ನು ಸಿ.ಪಿ.ಎಂ. (ಎಮ್.ಎಲ್) ಸಂಘಟನೆಯೊಂದಿಗೆ ವಿಲೀನಗೊಳಿಸಿದರು. ಅಲ್ಲದೆ ಒರಿಸ್ಸಾದ ಜಿಲ್ಲೆಗಳ ಹೋರಾಟದ ನಿರ್ವಹಣೆಯನ್ನು ಕ್ರಮವಾಗಿ, ಪಶ್ಚಿಮ ಬಂಗಾಳ ಮತ್ತು ಆಂಧ್ರದ ನುರಿತ ತಂಡಗಳಿಗೆ ವಹಿಸಲಾಗಿತ್ತು. ಒರಿಸ್ಸಾದಲ್ಲಿ ಪ್ರಥಮ ಹಿಂಸಾಚಾರದ ಘಟನೆ 1971ರ ಪೆಬ್ರವರಿ 21 ರಂದು, ಸರ್ಕಾರದ ಮಾಹಿತಿದಾರರು ಎಂಬ ಆರೋಪದಡಿ ಶಾಲಾಶಿಕ್ಷಕ ಹಾಗೂ ಗ್ರಾಮಸಹಾಯಕ ಇವರನ್ನು ಹತ್ಯೆ ಮಾಡುವುದರೊಂದಿಗೆ ಪ್ರಾರಂಭವಾಯಿತು. ಅದೇ ವರ್ಷ ಜುಲೈ 5ರಂದು ಬೊಲ್ಲ ಎಂಬ ಹಳ್ಳಿಯ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ ಪೇದೆಯನ್ನು ಇರಿದು ಗಾಯಗೊಳಿಸಿ, ವಾಹನಕ್ಕೆ ಬೆಂಕಿ ಹಚ್ಚಲಾಯಿತು. ಈ ಎರಡು ಘಟನೆಗಳು ಸಂಭವಿಸಿದ ಕೆಲ ದಿನಗಳಲ್ಲೇ ಒರಿಸ್ಸಾದ ಹೋರಾಟದ ನಾಯಕತ್ವ ವಹಿಸಿದ್ದ, ಪಶ್ಚಿಮ ಬಂಗಾಳದ ಅಸೀಮ್‌ಚಟರ್ಜಿ ಮತ್ತು ಸಂತೋಷ್ ರಾಣ ಇವರ ಬಂಧನದೊಂದಿಗೆ ಮೊದಲ ಹಂತದ ಹೋರಾಟ ತಣ್ಣಗಾಯಿತು. ಇದರ ಪರಿಣಾಮವಾಗಿ ಎರಡನೇ ವರ್ಗದ ನಾಯಕರು ನೆರೆಯ ಆಂಧ್ರ ಮತ್ತು ಪಶ್ಚಿಮ ಬಂಗಾಳಕ್ಕೆ ಪಲಾಯನಗೈದು ನೆಲೆಕಂಡುಕೊಂಡರು.

ಮಧ್ಯಪ್ರದೇಶದ ಈಗಿನ ಛತ್ತೀಸ್‌ಗಡ್ ರಾಜ್ಯಕ್ಕೆ ಸೇರಿರುವ ರಾಯ್‌ಪುರ, ದರ್ಗ್, ಬಿಲಾಸ್ಪುರ, ಬಸ್ತರ್, ರಾಯ್‌ಗರ್ ಜಿಲ್ಲೆಗಳಲ್ಲಿ 70ರ ದಶಕದಲ್ಲಿ ನಕ್ಸಲ್ ಹೋರಾಟ ಕಾಲಿಟ್ಟಿತು. (2000ನೇ ಇಸವಿಯಲ್ಲಿ ಛತ್ತೀಸ್‌ಗಡ್ ಮಧ್ಯಪ್ರದೇಶದಿಂದ ಬೇರ್ಪಟ್ಟು ಹೊಸ ರಾಜ್ಯವಾಗಿ ಉದಯಿಸಿತು.)  ಇಲ್ಲಿನ ಜೊಗುರಾಯ್ ಎಂಬ ಮಾವೋವಾದಿ ಕಮ್ಯೂನಿಷ್ಟ್ ಪಕ್ಷದ ನಾಯಕ ಬುಡಕಟ್ಟು ಜನಾಂಗವನ್ನು “ಕ್ರಾಂತಿಕಾರಿ ಕಿಸಾನ್ ಮಜ್ದೂರ್” ಎಂಬ ಸಂಘಟನೆಯ ಹೆಸರಿನಲ್ಲಿ ಒಂದುಗೂಡಿಸಿ ಸರ್ಕಾರದ ವಿರುದ್ಧ ಯುದ್ಧ ಸಾರಿದನು. ಕ್ರಮೇಣ ಚಳವಳಿ, ಭೂಪಾಲ್, ಜಬಲ್ ಪುರ, ಉಜ್ಜಯನಿ ಜಿಲ್ಲೆಗಳಿಗೂ ಹರಡಿತು. ಪಂಜಾಬ್ ಹರಿಯಾಣ ರಾಜ್ಯಗಳಿಗೆ ದೆಹಲಿ ಮೂಲಕ ನಕ್ಸಲ್ ಚಳವಳಿಯನ್ನು ವಿಸ್ತರಿಸುವ ಪ್ರಯತ್ನ ನಡೆಯಿತಾದರೂ ಅದು ಯಶಸ್ವಿಯಾಗಲಿಲ್ಲ. 1971 ರಲ್ಲಿ ಸಂಗ್ರೂರ್ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಡೆಪ್ಯೂಟಿ ಪೊಲೀಸ್ ಸೂಪರಿಡೆಂಟೆಂಟ್ ಒಬ್ಬನನ್ನು ಹತ್ಯೆ ಮಾಡಲಾಯಿತು. ಯುವ ವಿದ್ಯಾರ್ಥಿಗಳು, ಮತ್ತು ಕೆಳವರ್ಗದ ಜನರನ್ನು ಸಂಘಟಿಸುವ ಯತ್ನ ಯಶಸ್ವಿಯಾಗಲಿಲ್ಲ. ಇದಕ್ಕಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಲೋಕ್ ಯುಧ್ಧ್, ಪೀಪಲ್ಸ್ ಪಾಥ್, ಎಂಬ ಎರಡು ಪತ್ರಿಕೆಗಳನ್ನು ಸಹ ಹೊರ ತರಲಾಗಿತ್ತು.

1970 ರ ದಶಕದ ಪ್ರಾರಂಭದ ದಿನಗಳಲ್ಲಿ ಚಾರುಮುಜಂದಾರ್ ಕನಸಿನಂತೆ ದೇಶಾದ್ಯಂತ ನಕ್ಸಲ್ ಹೋರಾಟ ವಿಸ್ತರಿಸಲು ಎಲ್ಲಾ ಬಗೆಯ ಪ್ರಯತ್ನ ನಡೆಯಿತು. ಮಹಾರಾಷ್ಟ್ರ, ರಾಜಸ್ಥಾನ, ಜಮ್ಮು, ಕಾಶ್ಮೀರ, ಕೇರಳ ತಮಿಳುನಾಡು. ಈಶಾನ್ಯ ಭಾಗದ ಅಸ್ಸಾಮ್ ಮುಂತಾದ ರಾಜ್ಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೆಲೆಯೂರಿ, ಒಂದು ಅಥವಾ ಎರಡು ಹಿಂಸಾತ್ಮಕ ಘಟನೆಗಳಿಗೆ ಚಳವಳಿ ಸೀಮಿತಗೊಂಡಿತು. ಪ್ರಾಯೋಗಿಕವಾಗಿ ಮಾವೋವಾದಿ ನಕ್ಸಲಿಯರ ಪ್ರಥಮ ಹಂತದ ಹೋರಾಟ ದೇಶಾದ್ಯಂತ ಯಶಸ್ವಿಯಾಗದಿದ್ದರೂ, ಸೈದ್ಧಾಂತಿಕವಾಗಿ ಹಲವಾರು ಯುವ ಮನಸ್ಸುಗಳನ್ನ ಚಳವಳಿಗೆ ಸೆಳೆದುಕೊಳ್ಳುವಲ್ಲಿ ಸಫಲವಾಯಿತು. ದೇಶದ ಅಧಿಕಾರದ ಕೇಂದ್ರ ಬಿಂದುವಾಗಿರುವ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿಗಳು ನಕ್ಸಲ್ ಹೋರಾಟಕ್ಕೆ ಸೇರ್ಪಡೆಗೊಂಡರು. ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ, ದೆಹಲಿ ಸ್ಕೂಲ್ ಆಫ್ ಎಕಾನಾಮಿಕ್ಸ್, ಸೆಂಟ್ ಸ್ಟೀಪನ್ ಕಾಲೇಜು, ದೆಹಲಿ ವಿ.ವಿ. ಇವುಗಳಿಂದ ಸಾವಿರಾರು ವಿದ್ಯಾರ್ಥಿಗಳು ನಕ್ಸಲ್ ಹೋರಾಟಕ್ಕೆ ದುಮುಕಿದರು, ಇವರುಗಳಲ್ಲಿ, ವೈದ್ಯಕೀಯ ಮತ್ತು ಇಂಜಿನೀಯರಿಂಗ್ ವಿದ್ಯಾರ್ಥಿಗಳು, ಮತ್ತು ಸರ್ಕಾರದ ಹಿರಿಯ ಐ.ಎ.ಎಸ್, ಐ.ಪಿ.ಎಸ್. ಅಧಿಕಾರಿಗಳ ಮಕ್ಕಳು ಸೇರಿದ್ದು ವಿಶೇಷ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ತಮ್ಮ ಗೆಳೆಯರಿಂದ ಆಕರ್ಷಿತರಾದ ಹಲವು ವಿದ್ಯಾಥಿನೀಯರು, ವಿಶೇಷವಾಗಿ, ಲೇಡಿ ಶ್ರಿರಾಮ್ ಕಾಲೇಜಿನಿಂದ ಬಂದವರು ಹೋರಾಟದ ನದಿಗೆ ಧುಮುಕಿದರು.

ದೆಹಲಿಯ ಈ ವಿದ್ಯಾರ್ಥಿಗಳ ಸಂಘಟನೆ ಮಾರ್ಕ್ಸ್ ಮತ್ತು ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾಗಿ, ವಿಚಾರ ಸಂಕಿರಣ, ನಾಟಕ ಪ್ರದರ್ಶನ ಮುಂತಾದವುಗಳನ್ನು ಏರ್ಪಡಿಸುವುದರ ಮೂಲಕ ಎಡಪಂಥೀಯ ಸಿದ್ಧಾಂತಗಳನ್ನು ಜೀವಂತವಾಗಿಟ್ಟಿತು. ಇದು ಮುಂದಿನ ದಿನಗಳಲ್ಲಿ ಅಂದರೆ, 1980 ದಶಕದಲ್ಲಿ ಪ್ರಾರಂಭವಾದ ಪೀಪಲ್ಸ್ ವಾರ್ ಹೆಸರಿನ ಎರಡನೇ ಹಂತದ  ನಕ್ಸಲ್ ಹೋರಾಟಕ್ಕೆ ಭದ್ರ ಬುನಾದಿ ಹಾಕಿತು.

(ಮುಂದುವರಿಯುವುದು)

Leave a Reply

Your email address will not be published. Required fields are marked *