Daily Archives: June 15, 2012

ರಾಮಚಂದ್ರ ಗೌಡ ಗೆಲುವು, ಸಮಾಜದ ಸೋಲು

– ರವಿ ಕೃಷ್ಣಾರೆಡ್ಡಿ

ಭ್ರಷ್ಟಾಚಾರದ ಬಗ್ಗೆ ಈ ರೀತಿ ಕೂಗೆದ್ದಿದೆ; ಆದರೂ ಜನ ಭ್ರಷ್ಟಾಚಾರಿ ಎಂದು ಮೇಲ್ನೋಟಕ್ಕೆ ರುಜುವಾತಾಗಿರುವ ಆರೋಪಿಯನ್ನು, ಅದೇ ಕಾರಣಕ್ಕೆ ರಾಜ್ಯ ಸಚಿವ ಸಂಪುಟದಿಂದ ಕೈಬಿಡಲಾದ ವ್ಯಕ್ತಿಯನ್ನು, ಅದೂ ಇಂತಹ ಸಂದರ್ಭದಲ್ಲಿ ಆರಿಸಿ ಕಳುಹಿಸುತ್ತಾರಲ್ಲಾ, ಇದಕ್ಕೇನನ್ನಬೇಕು? ಜೊತೆಗೆ ಈ ಚುನಾವಣೆಯಲ್ಲಿ ಮತ ಹಾಕಿದವರೆಲ್ಲರೂ ಪದವೀಧರರೂ ಆಗಿದ್ದರಲ್ಲವೆ? ಇವರು ಕನಿಷ್ಟ ತಮ್ಮ ಮಕ್ಕಳಿಗೆ ಯಾವ ರೀತಿಯ ಆದರ್ಶ ಕೊಡಬೇಕೆಂದು ಬಯಸುತ್ತಿದ್ದಾರೋ, ಅರ್ಥವಾಗುತ್ತಿಲ್ಲ.

ಈ ಚುನಾವಣೆಯಲ್ಲಿ ಇನ್ನೂ ಒಂದು ವಿರೋಧಾಭಾಸ ಇದೆ. ಲೋಕಸತ್ತಾ ಪಕ್ಷದಿಂದ ನಿಂತಿದ್ದ ಅಶ್ವಿನ್ ಮಹೇಶರು ಅಣ್ಣಾ ಹಜಾರೆ ಮುಂದಾಳತ್ವದ ’ಭ್ರಷ್ಟಾಚಾರದ ವಿರುದ್ಧ ಭಾರತ’ ಸಂಘಟನೆಯ ಬೆಂಗಳೂರು ವಲಯದ ಪ್ರಮುಖ ನಾಯಕರು. ಅಣ್ಣಾ ಹಜಾರೆ ದೆಹಲಿಯಲ್ಲಿ ಉಪವಾಸ ಕುಳಿತಿದ್ದಾಗ ಇಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಕಾರ್ಯಕ್ರಮಗಳ ರೂಪುರೇಷೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಅವರು ಈ ಬಾರಿಯ ಪದವೀಧರರ ಕ್ಷೇತ್ರದ ಚುನಾವಣೆಗೆ ನಿಂತಾಗ ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆಯವರು ಬಹಿರಂಗ ಬೆಂಬಲ ಸಹ ಸೂಚಿಸಿದ್ದರು. ಅಷ್ಟೇ ಅಲ್ಲ, ಪ್ರಚಾರ ಕಾರ್ಯ ಸಹ ಕೈಗೊಂಡಿದ್ದರು. ಒಂದು ರೀತಿಯಲ್ಲಿ ಇವರಿಗೆ ಬೀಳುವ ಒಂದೊಂದು ಓಟೂ ಭ್ರಷ್ಟಾಚಾರದ ವಿರುದ್ಧ ಬೀಳುವ ಮತವಾಗಬೇಕಿತ್ತು.

ಆದರೆ.. ಪತ್ರಿಕಾವರದಿಗಳನ್ನು ನಂಬಬಹುದಾದರೆ, ರಾಮಚಂದ್ರ ಗೌಡರಿಗೆ ಬಿದ್ದ ಅನೇಕ ಮೊದಲ ಪ್ರಾಶಸ್ತ್ಯದ ಮತಪತ್ರಗಳಲ್ಲಿ ಎರಡನೇ ಪ್ರಾಶಸ್ತ್ಯದ ಮತ ಅಶ್ವಿನ್‌ರದಾಗಿತ್ತು. ಅಶ್ವಿನ್ ಮಹೇಶ್‌ಗೆ ಬಿದ್ದ ಮೊದಲ ಪ್ರಾಶಸ್ತ್ಯದ ಅನೇಕ ಓಟುಗಳಲ್ಲಿ ಎರಡನೇ ಪ್ರಾಶಸ್ತ್ಯದ ಮತ ರಾಮಚಂದ್ರ ಗೌಡರದಾಗಿತ್ತು. ಯಾವಾಗ ಅಶ್ವಿನ್‌ರಿಗೆ ಬಿದ್ದಿದ್ದ ಮತಪತ್ರದ ಎರಡನೇ ಪ್ರಾಶಸ್ತ್ಯದ ಮತಗಳು ರಾಮಚಂದ್ರ ಗೌಡರಿಗೆ ವರ್ಗಾವಣೆಯಾದವೊ, ಆಗಲೇ ಅಲ್ಲಿಯತನಕ ಎರಡನೇ ಸ್ಥಾನದಲ್ಲಿದ್ದ ರಾಮಚಂದ್ರ ಗೌಡ ಮೊದಲ ಸ್ಥಾನಕ್ಕೆ ಬಂದು ಗೆದ್ದಿದ್ದು. (ರಾಮಚಂದ್ರ ಗೌಡರಿಗೆ ಬಿದ್ದಿರುವ ಎರಡನೇ ಪ್ರಾಶಸ್ತ್ಯದ ಮತಗಳು ಸುಮಾರು ಎರಡು ಸಾವಿರ.)

ಇದು ಏನನ್ನು ಸೂಚಿಸುತ್ತದೆ? ಭ್ರಷ್ಟಾಚಾರದ ವಿರುದ್ಧದ ಮತಗಳಲ್ಲಿಯೇ ಭ್ರಷ್ಟಾಚಾರದ ಪರ ಮತಗಳೂ ಇವೆ. ಇದು ನಮ್ಮ ಸಮಾಜದಲ್ಲಿರುವ ಆಷಾಢಭೂತಿತನ ಮತ್ತು ಅದರ ಒಡಲಲ್ಲೇ ಇರುವ ಬೆಂಕಿ. ಹೆಚ್ಚಿನ ಜನರಿಗೆ ಬಿಜೆಪಿ ಮತ್ತು ಲೋಕಸತ್ತಾ ಪ್ರತಿನಿಧಿಸುವ ಮೌಲ್ಯಗಳು ಬೇರೆಬೇರೆಯಾಗಿ ಕಾಣಿಸುತ್ತಿಲ್ಲ.

ಆದರೂ, ಇದು ಒಂದು ರೀತಿಯಲ್ಲಿ ಭವಿಷ್ಯದ ದಿನಗಳಲ್ಲಿ ಬೆಂಗಳೂರಿನ ರಾಜಕೀಯದ ನಡೆಯನ್ನು ಸೂಚಿಸುತ್ತಿದೆ. ಸುಮಾರು 4349  ಮತಗಳನ್ನು ಪಡೆದಿರುವ ಅಶ್ವಿನ್‌ರ ಸಾಧನೆ ಕಮ್ಮಿಯೇನೂ ಅಲ್ಲ. ಅದಕ್ಕಾಗಿ ಅವರು ಮತ್ತವರ ತಂಡ ಪಟ್ಟಿರುವ ಶ್ರಮ ಕಮ್ಮಿಯೇನೂ ಅಲ್ಲ. ಸಂತೋಷ್ ಹೆಗಡೆ, ಕಾರ್ಪೊರೇಟ್ ಜಗತ್ತಿನ ಕಿರಣ್ ಮಜುಂದಾರ್ ಷಾ, ಮೋಹನ್‌ದಾಸ್ ಪೈ, ಇತ್ಯಾದಿಗಳ ಬೆಂಬಲದ ಹೊರತಾಗಿಯೂ ಚುನಾವಣೆಗಾಗಿ ಕಾರ್ಯಕರ್ತರ ಸಂಘಟನೆ ಮತ್ತು ಪ್ರಚಾರ ಅಪಾರ ಪ್ರಮಾಣದ ಶ್ರಮ ಮತ್ತು ಹಣವನ್ನು ಬೇಡುತ್ತದೆ. ಮತದಾರರ ನಿರ್ಲಕ್ಷ್ಯ, ಜಾತಿ-ಮತ-ಪಂಗಡ-ಉದ್ಯೋಗ-ಹಣದ ಪ್ರಭಾವ, ಇತ್ಯಾದಿ ನೆಲೆಯಲ್ಲಿ ಒಡೆದು ಹೋಗಿರುವ ಮತದಾರರ ಹಿನ್ನೆಲೆಯಲ್ಲಿ ಯೋಚಿಸಿದರೆ ಅಶ್ವಿನ್ ಮಹೇಶ್ ಪವಾಡವನ್ನೇ ಮಾಡಿದ್ದಾರೆ ಎಂದೆನಿಸದಿರದು; ಅವರ ಮತದಾರರಲ್ಲಿ ಅಂತರ್ಗತವಾಗಿರುವ ಹಿಪಾಕ್ರಸಿಯ ಹೊರತಾಗಿಯೂ.

ಆದರೆ, ಇದೇ ಪವಾಡವನ್ನು ಅವರು ಮತ್ತವರ ಪಕ್ಷ ಮುಂಬರುವ ಚುನಾವಣೆಗಳಲ್ಲಿ ಮಾಡಬಲ್ಲರೇ ಎನ್ನುವುದು ಸಂಶಯಾಸ್ಪದ. ಈ ನೆಲದ ಭಾಷೆ ಮತ್ತು ಇಲ್ಲಿಯ ಸಾಮಾಜಿಕ ಸಂರಚನೆಯನ್ನು ಅರಿಯದೆ ಕೇವಲ ಇಂಗ್ಲಿಷ್ ಮೀಡಿಯಾಗೆ ಪ್ರಿಯವಾದ ಭಾಷೆಯಲ್ಲಿ ಮಾತನಾಡುತ್ತಾ ಹೊರಟರೆ ಅವರಿಗೆ ಅಂತಹ ಯಶಸ್ಸು ಸಾಧ್ಯವಾಗುವುದಿಲ್ಲ. ಇವರ ಸದ್ಯದ ಹೋರಾಟ ಮತ್ತು ಕಾರ್ಯಕ್ರಮಗಳು ಮೇಲ್ಮಧ್ಯಮ ವರ್ಗ ಮತ್ತು ಐಟಿ-ಬಿಟಿ ಉದ್ಯೋಗಿಗಳ ಸಮಾನ ಚಿಂತನೆಯಿಂದ ಆರಂಭವಾಗಿ ಅಲ್ಲಿಯೇ ಕೊನೆಯಾಗುತ್ತಿದೆ. ಎಲ್ಲಿಯವರೆಗೆ ಅವರ ಆಮದಾದ ನುಡಿಗಟ್ಟು ಸ್ಥಳೀಯವಾಗುವುದಿಲ್ಲವೋ ಅಲ್ಲಿಯತನಕ ಅವರ ಮಾತು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಹೊಸದಾದ, ಸ್ಥಳೀಯವಾದ ನಾಯಕತ್ವ ಅಲ್ಲಿ ಹುಟ್ಟಿ ಬೆಳೆದು, ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯಕ್ಕೆ ಪ್ರತಿಕ್ರಿಯಿಸುತ್ತ ಹೋದರೆ ಲೋಕಸತ್ತಾಗೆ ಬೆಂಗಳೂರಿನಲ್ಲಿ ಇನ್ನೊಂದೈದತ್ತು ವರ್ಷಗಳಲ್ಲಿ ಗಟ್ಟಿಯಾದ ನೆಲೆ ಸಿಗಬಹುದು. ಆದರೆ ಅಲ್ಲಿಯವರೆಗೆ ಲೋಕಸತ್ತಾ ಹಲ್ಲುಕಚ್ಚಿ ದುಡಿಯುತ್ತದೆಯೇ ಎನ್ನುವುದು ಪ್ರಶ್ನೆ. ಜೊತೆಗೆ ತಮ್ಮಲ್ಲೇ ಇರುವ ಬಿಜೆಪಿ ಬೆಂಬಲಿಗರನ್ನು ಮತ್ತು ಕಾರ್ಪೊರೇಟ್ ಹಿತಾಸಕ್ತಿಯನ್ನು ಇವರು ಯಾವ ರೀತಿ ಹತೋಟಿಯಲ್ಲಿಟ್ಟಿರುತ್ತಾರೆ ಎನ್ನುವುದೂ ಮುಖ್ಯವಾಗುತ್ತದೆ.

ಇನ್ನು, ಕಮ್ಯುನಿಸ್ಟ್ ಪಕ್ಷದ ಪೋಟಿ. ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡದ ಹಲವು ಪ್ರಗತಿಪರ ಚಿಂತಕರ ಬೆಂಬಲದ ಹೊರತಾಗಿಯೂ ಎಡಪಂಥೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಲಕ್ಷ್ಮಿಯವರಿಗೆ ಬಿದ್ದಿರುವುದು ಅಶ್ವಿನ್ ಮಹೇಶರಿಗೆ ಬಿದ್ದಿರುವ ಓಟುಗಳಲ್ಲಿ ಶೇ. 12 ಮಾತ್ರ (536). ಕರ್ನಾಟಕದಲ್ಲಿ ಕಮ್ಯುನಿಸ್ಟ್ ಪಕ್ಷಗಳ ಚುನಾವಣಾ ಸ್ಪರ್ಧೆ, ಸ್ಪರ್ಧೆಗಾಗಿ ಸ್ಪರ್ಧೆ ಎಂಬಂತಾಗಿದೆ. ಇಂತಹುದೊಂದು ಚುನಾವಣೆಯಲ್ಲಿ ಇಡೀ ರಾಜ್ಯದ ತಮ್ಮ ಸಂಘಟನೆಗಳ ಎಲ್ಲಾ ಬಲವನ್ನು ಬಳಸಿಕೊಂಡು ಚುನಾವಣೆ ಎದುರಿಸಬೇಕಿದ್ದ ಅಗತ್ಯತೆಯನ್ನು ಅವರು ಅರಿಯಲಾರದೆ ಹೋಗಿದ್ದಾರೆ. ಸಾರ್ವತ್ರಿಕ ಚುನಾವಣೆಯದ್ದಾದರೆ ಅದು ಬೇರೆ ವಿಷಯ. ಆದರೆ ಈ ಚುನಾವಣೆಯಲ್ಲಿ ಅವರು ಕನಿಷ್ಟ ತಮ್ಮ ರಾಜ್ಯವ್ಯಾಪಿ ಸಂಘಟನೆಗಳನ್ನು ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಬಳಸಿಕೊಳ್ಳಬೇಕಿತ್ತು. ತಮ್ಮೆಲ್ಲಾ ಶಕ್ತಿಯನ್ನು ಇಲ್ಲಿ ಕ್ರೋಢೀಕರಿಸಿಕೊಳ್ಳಬೇಕಿತ್ತು. ಇವರ ಸಭೆಗಳಲ್ಲಿ ಯಾವಾಗ ನೋಡಿದರೂ ಅದೇ Usual Suspects ಕಾಣಸಿಗುತ್ತಾರೆ. ಅದೇ ಮಾತುಗಳು ಪುನರಾವರ್ತನೆಯಾಗುತ್ತಿರುತ್ತವೆ. ಮತ್ತು, ಚುನಾವಣೆ ಬಂದಾಗ ಕರಪತ್ರ ಹೊರಡಿಸಲೂ ಹಿಂದೆಮುಂದೆ ನೋಡುತ್ತಾರೆ. (ಹಾಗೆ ನೋಡಿದರೆ ನನ್ನ ವಿಳಾಸಕ್ಕೆ ಮತ ಕೋರಿ ಬಂದದ್ದು ಮೂರೇ ಅಂಚೆಪತ್ರಗಳು: ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾದ ರಾಮಚಂದ್ರ ಗೌಡರ ಪೇಯ್ಡ್ ಸಪ್ಲಿಮೆಂಟ್ ಕೇವಲ ಎರಡು ರೂ ಅಂಚೆಚೀಟಿ ಹೊತ್ತು ಬಂದಿತ್ತು. ಅದರ ಮೇಲೆ ಅಂಚೆಕಚೇರಿಯ ಸೀಲ್ ಸಹ ಇರಲಿಲ್ಲ. ಬಹುಶಃ ಯಾರಾದರೂ ಕೊರಿಯರ್‌ನವರು ಹಾಕಿ ಹೋದರೇನೊ. ಎರಡನೆಯದು ಜೆಡಿಎಸ್‌ನವರದು. ಮೂರನೆಯದು ಅಶ್ವಿನ್ ಮಹೇಶರಿಗೆ ಮತ ನೀಡಬೇಕೆಂದು ಕೋರಿ ನಾಗರಿಕರ ವೇದಿಕೆಯೊಂದು ಕಳುಹಿಸಿದ ಇನ್‌ಲ್ಯಾಂಡ್ ಲೆಟರ್.) ಇಷ್ಟೆಲ್ಲ ಪೂರ್ವಸಿದ್ದತೆಗಳಿಲ್ಲದ ಚಿಂತನೆ ಮತ್ತು ಪತ್ರ ಕಳುಹಿಸಲೂ ಆಗದಷ್ಟು ಆರ್ಥಿಕ ಬಡತನವಿದ್ದರೂ ಕಮ್ಯುನಿಸ್ಟರಿಗೆ ಚುನಾವಣೆಗೆ ಸ್ಪರ್ಧಿಸುವ ಹುಮ್ಮಸ್ಸು. ಶಸ್ತ್ರಾಭ್ಯಾಸ ಮಾಡದೇಯೂ ಯುದ್ದವನ್ನು ಗೆದ್ದುಬಿಡುವ ಉಮೇದು. ಇವರ ಮಾತಿನ ಶೂರತ್ವ ಮತ್ತು ಸಿದ್ದತೆಗಳಿಲ್ಲದ ಸ್ಪರ್ಧೆ ಬರುಬರುತ್ತಾ ಆತ್ಮಹತ್ಯಾಕಾರಿಯಾಗುತ್ತದೆ ಎನ್ನುವುದನ್ನು ಕಮ್ಯುನಿಸ್ಟರು ಆದಷ್ಟು ಬೇಗ ಅರಿಯಬೇಕು. ಇವರನ್ನು ಬೆಂಬಲಿಸುವವರಿಗೂ ಇದು ಅಪ್ರಿಯವಾದ ಸಂದರ್ಭ. ಬೆಂಗಳೂರಿನಂತಹ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುವ ಸ್ಥಳದಲ್ಲಿಯೇ ಈಗ ತಾನೆ ಕಣ್ಣುಬಿಡುತ್ತಿರುವ ಲೋಕಸತ್ತಾದ ಅಭ್ಯರ್ಥಿ ಗಳಿಸುವ ಮತಗಳಲ್ಲಿ ಶೇ. 12ರನ್ನೂ ಮೀರಲಾರದಷ್ಟು ಇವರು ಗಳಿಸುತ್ತಾರೆ ಎಂದರೆ ಇದು ಅವರು ನಿರ್ವಂಚನೆಯಿಂದ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ. ತಮ್ಮ ರಾಜಕೀಯ ಹೋರಾಟದ ಮಂತ್ರತಂತ್ರಗಳನ್ನು ತುಲನೆಗೆ ಹಚ್ಚಬೇಕಾದ ಸಂದರ್ಭ.

ಕಳೆದೆರಡು ವರ್ಷಗಳಿಂದ ಭ್ರಷ್ಟಾಚಾರ ಜನರ ನಡುವೆ ಚರ್ಚೆಗೆ ಬಂದಿತ್ತು. ಬಹಳಷ್ಟು ಅಮಾಯಕರು ದೇಶ ಇನ್ನೇನು ಭ್ರಷ್ಟಾಚಾರದಿಂದ ಮುಕ್ತವಾಗಿಬಿಟ್ಟಿತು ಎಂದೇ ಭಾವಿಸಿದ್ದರು. ಆದರೆ ದೇಶದಾದ್ಯಂತ ನಡೆಯುತ್ತಿರುವ ಚುನಾವಣೆಗಳು ಪ್ರತಿಸಾರಿಯೂ ಆ ಅಮಾಯಕರ ಆಶಾವಾದ ಎಷ್ಟು ಹುಸಿಯಾದದ್ದು ಎಂದು ನಿರೂಪಿಸುತ್ತಲೇ ಬರುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿಯೇ ಇರುವ ದ್ವಂದ್ವಗಳು. ಎಲ್ಲಿಯವರೆಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವವರು ಭ್ರಷ್ಟಾಚಾರಿಗಳ ಜೊತೆಗೂ ಸಂಬಂಧ ಇಟ್ಟುಕೊಂಡಿರುತ್ತಾರೊ (ಅಶ್ವಿನ್ ಮಹೇಶ್‌ಗೊಂದು ಓಟು, ರಾಮಚಂದ್ರ ಗೌಡರಿಗೂ ಒಂದು ಓಟು ತರದಲ್ಲಿ) ಅಲ್ಲಿಯವರೆಗೆ ಈ ಸಮಾಜ ಎಚ್ಚತ್ತಿಲ್ಲ ಎಂದೇ ಹೇಳಬೇಕು. ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಹೋರಾಟ ಸಮಾಜಕ್ಕೆ ಈಗ ಬೇಕಿಲ್ಲ. ಅದಕ್ಕಿನ್ನೂ ಸಮಯ ಬಂದಿಲ್ಲ. ಇನ್ನೂ ಸಾಕಷ್ಟು ಅನಾಚಾರಗಳು, ಅನ್ಯಾಯಗಳು, ಅಪಮೌಲ್ಯಗಳು ಆಗಬೇಕಿದೆ. ವರ್ತಮಾನದ ದುರಂತ ಇದು.

ವೀರಣ್ಣ ಮಡಿವಾಳರಿಗೆ ಅಭಿನಂದನೆ ಮತ್ತು ಕವಿಗೋಷ್ಟಿ

ಸ್ನೇಹಿತರೆ,

ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ ಪುರಸ್ಕೃತ ಕವಿ ವೀರಣ್ಣ ಮಡಿವಾಳರಿಗೆ ಇದೇ ಭಾನುವಾರದಂದು (ಜೂನ್ 17, 2012) ಬೆಂಗಳೂರಿನಲ್ಲಿ ಅಭಿನಂದನೆ ಕಾರ್ಯಕ್ರಮವೊಂದನ್ನು “ಸಂವಹನ”ದ ಗೆಳೆಯರು ಹಮ್ಮಿಕೊಂಡಿದ್ದಾರೆ.  ಆ ಸಂದರ್ಭದಲ್ಲಿ ನಟರಾಜ್ ಹುಳಿಯಾರ್, ದಿನೇಶ್ ಅಮೀನ್‌ಮಟ್ಟು, ಸುಬ್ಬು ಹೊಲೆಯಾರ್, ಮತ್ತು ನಾನು ಭಾಗವಹಿಸಲಿದ್ದೇವೆ. ಅಭಿನಂದನೆ ಕಾರ್ಯಕ್ರಮದ ನಂತರ ಸುಮಾರು 20 ಕವಿಗಳ ಕವಿಗೋಷ್ಟಿ ಇದೆ. ಸ್ಥಳ ಮತ್ತು ಸಮಯದ ವಿವರಗಳು ಕೆಳಗಿನ ಆಹ್ವಾನ ಪತ್ರಿಕೆಯಲ್ಲಿದೆ. ದಯವಿಟ್ಟು ತಾವು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವರ್ತಮಾನ.ಕಾಮ್‌ನ ಪರವಾಗಿ ವಿನಂತಿಸುತ್ತೇನೆ.

-ರವಿ ಕೃಷ್ಣಾರೆಡ್ಡಿ