Daily Archives: June 16, 2012

ಗಡಿಪಾರು ಆಗಬೇಕಿರುವುದು ನಿತ್ಯಾನಂದನಲ್ಲ, ಧ್ಯಾನ ಎಂಬ ಸಮೂಹ ಸನ್ನಿ.

– ನವೀನ್ ಸೂರಿಂಜೆ

ಧ್ಯಾನ ಗುರು ನಿತ್ಯಾನಂದ ಸ್ವಾಮಿಯನ್ನೇನೋ ಸರಕಾರ ರಾಮನಗರ ಜಿಲ್ಲೆಯಿಂದ ಗಡಿಪಾರು ಮಾಡಿದೆ. ಸರಕಾರ ಅಥವ ವ್ಯವಸ್ಥೆ ಗಡಿಪಾರು ಮಾಡಬೇಕಿರುವುದು ಒರ್ವ ಸ್ವಾಮಿಯನ್ನೋ ಅಥವಾ ಗುರೂಜಿಯನ್ನೋ ಅಲ್ಲ. ಜನರನ್ನು ಸಮೂಹ ಸನ್ನಿಗೆ ಒಳಪಡಿಸೋ ಇಂತಹ ಗುರೂಜಿಗಳ ಚಿಂತನೆಯನ್ನು ಸರಕಾರ ಗಡಿಪಾರು ಮಾಡಲು ಕ್ರಮ ಕೈಗೊಳ್ಳಬೇಕಿತ್ತು. ಸನಾತನ ಕಾಲದಲ್ಲಿ ಋಷಿ ಮುನಿಗಳು ಧ್ಯಾನ ಮಾಡುತ್ತಿದ್ದರು ಎನ್ನವ ಕತೆಯನ್ನೇ ಇತಿಹಾಸವನ್ನಾಗಿಸಿ ಧ್ಯಾನವನ್ನು ವ್ಯಾಪಾರವನ್ನಾಗಿಸಲಾಗುತ್ತಿದೆ. ಒಬ್ಬ ನಿತ್ಯಾನಂದ ಮತ್ತೊಬ್ಬ ಗುರೂಜಿ ಅನಭಿಷಿಕ್ತ ನಾಯಕರಾಗಿರುವ ಧ್ಯಾನ ಲೋಕದಲ್ಲಿ ಸಮಾಜ ಮೂರಾಬಟ್ಟೆಯಾಗುತ್ತಿದೆ. ಇಷ್ಟಕ್ಕೂ ಧ್ಯಾನ ಎನ್ನುವುದು ವ್ಯಕ್ತಿಯೊಬ್ಬನನ್ನು ಸಮಾಜದಿಂದ ಬೇರ್ಪಡಿಸೋ ನಿಧಾನಗತಿಯ ಕಾರ್ಯಕ್ರಮ. ಪ್ರಾರಂಭದಲ್ಲಿ ಧ್ಯಾನ ತನ್ನ ಮನಸ್ಸಿನ ಆಯಾಸ ಕಳೆಯುತ್ತದೆ ಎನ್ನುವಂತೆ ಭಾಸವಾದರೂ ಧ್ಯಾನದ ಅಂತಿಮ ಘಟ್ಟ ತಲುಪಿದಾಗ ತನ್ನ ಕುಟುಂಬ ಮತ್ತು ಸಮಾಜಕ್ಕೂ ನನಗೂ ಸಂಬಂಧವೇ ಇಲ್ಲದಂತೆ ಧ್ಯಾನ ಮಾಡುವವರು ವರ್ತಿಸಲಾರಂಭಿಸುತ್ತಾರೆ. ಇದರ ಫಲವೇ ತನ್ನ ಆಸ್ತಿಯನ್ನೆಲ್ಲಾ ಸ್ವಾಮಿಗಳಿಗೋ, ಗುರೂಜಿಗಳಿಗೋ ಸಮರ್ಪಿಸಿ ತಾನಾಯಿತು ತನ್ನ ಪಾಡಾಯಿತು ಎಂದು ಧ್ಯಾನದಲ್ಲಿ ಮಗ್ನರಾಗುತ್ತಾರೆ.

ಒಬ್ಬ ಮೂವತ್ತೈದರ ಆಸುಪಾಸಿನ ಯುವಕ ನಿತ್ಯಾನಂದ ಕೇವಲ ಧ್ಯಾನವೊಂದರಿಂದ ಸಾವಿರಾರು ಕೋಟಿ ಸಂಪಾದಿಸಬಹುದು. ಮತ್ತೊಬ್ಬ ಕೀರಲು ದ್ವನಿಯ ಧ್ಯಾನದ ಗುರೂಜಿಯೊಬ್ಬ ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿಯನ್ನು ಸಂಪಾದಿಸಬಹುದು ಎಂದಿದ್ದರೆ ಧ್ಯಾನ ಅಷ್ಟೊಂದು ಫವರ್‌ಫುಲ್ ಇದೆಯಾ ಎಂಬ ಪ್ರಶ್ನೆ ಸಾಮಾನ್ಯ ಜನರಲ್ಲಿ ಸಹಜವಾಗಿ ಮೂಡುತ್ತದೆ. ನಿತ್ಯ ಜೀವನದ ಒತ್ತಡಗಳು, ಆಯಾಸಗಳು, ನೋವುಗಳು, ಸವೆತಗಳು ಧ್ಯಾನದಿಂದ ದೂರವಾಗುವವು ಎಂಬ ಪ್ರಚಾರದ ಹಿನ್ನೆಲೆಯಲ್ಲಿ ಧ್ಯಾನ ಅಸ್ತಿತ್ವಕ್ಕೆ ಬಂದಿದೆ. ಜಗತ್ತಿನಲ್ಲಿ ಯಾವುದೇ ಜೀವಿಯ ಬದುಕಿನಲ್ಲಿ ಒತ್ತಡಗಳು, ಆಯಾಸಗಳು, ನೋವುಗಳು, ಸವೆತಗಳು ಇಲ್ಲದೇ ಇರುವ ಬದುಕೇ ಇರಲು ಸಾಧ್ಯವಿಲ್ಲ. ಉಳ್ಳವರ ಜೀವನದ ಒತ್ತಡ, ಆಯಾಸ, ನೋವು, ಸವೆತಗಳೇ ಈ ಧ್ಯಾನದ ಬಂಡವಾಳ.

ಧ್ಯಾನದ ವ್ಯಾಪಾರಿಗಳ ಪ್ರಕಾರ ಧ್ಯಾನ ಎಂದರೇನು?

“ಧ್ಯಾನ ಎಂದರೆ ಯೋಗ ನಿದ್ರೆ. ಧ್ಯಾನ ಸಾಧಕನು ಧ್ಯಾನವನ್ನು ಮಾಡುತ್ತಿರುವಾಗ ಮನಸ್ಸು ಧ್ಯಾನ ಮಾಡುತ್ತಾ ಎಚ್ಚರವಾಗಿದ್ದರೂ ಶರೀರಕ್ಕೆ ವಿಪರೀತವಾದ ವಿಶ್ರಾಂತಿ ಉಂಟು ಮಾಡುವುದು. ಇದನ್ನೇ ಯೋಗ ನಿದ್ರೆ ಎನ್ನುತ್ತಾರೆ. ಈ ಯೋಗ ನಿದ್ರೆಯಿಂದ ಶರೀರವು ತನಗಾಗಿರೋ ಆಯಾಸ, ಸವೆತ, ನೋವು ಇತ್ಯಾದಿಗಳನ್ನು ಹೊರಹಾಕಿ ತನ್ನನ್ನು ತಾನು ಸಾಕಷ್ಟು ಮಟ್ಟಿಗೆ ಸರಿಪಡಿಸಿಕೊಳ್ಳುವುದು. ಹೀಗೆ ಧ್ಯಾನದಿಂದ ಕೆಲವಾರು ಸಣ್ಣ ಪ್ರಮಾಣದ ಖಾಯಿಲೆಗಳು ಮಾಯವಾಗುವುದಲ್ಲದೆ ದೊಡ್ಡ ಪ್ರಮಾಣದ ಖಾಯಿಲೆಗಳಿದ್ದರೆ ಹೆಚ್ಚಾಗದಂತೆ ತಡೆಯುವುದು, ಮತ್ತು ಔಷಧಿಗಳ ಗುಣಕಾರಿ ಫಲವನ್ನು ಹೆಚ್ಚಿಸುವುದು. ಶರೀರದ ಆರೋಗ್ಯವು ಉತ್ತಮಗೊಂಡಾಗ ಧ್ಯಾನ ಸಾಧಕನಲ್ಲಿ ಮಾನಸಿಕ ಲವಲವಿಕೆ ಮತ್ತು ಉಲ್ಲಾಸ ಉಂಟಾಗುವುದು,” ಎನ್ನುತ್ತದೆ ಧ್ಯಾನ ಲೋಕ. ಧ್ಯಾನದಲ್ಲಿ ಮೂರ್ನಾಲ್ಕು ಹಂತಗಳಿವೆ. ಧ್ಯಾನ ಪ್ರಾರಂಭಿಸುವಾಗಲೇ ಎಲ್ಲರಿಗೂ ಕೆಲವೊಂದು ಸೂಚನೆಗಳನ್ನು ನೀಡಲಾಗುತ್ತದೆ. “ಧ್ಯಾನದಲ್ಲಿ ಅಥವಾ ಧ್ಯಾನ ನಂತರ ತಲೆ ಭಾರವಾಗಬಹುದು. ಅಥವಾ ಸ್ವಲ್ಪ ತಲೆ ನೋವಾಗಬಹುದು. ಇದು ಕೇವಲ ಧ್ಯಾನದಲ್ಲಿ ಸುರುಳಿ ಬಿಚ್ಚಿಕೊಂಡ ಕರ್ಮಗಳು ಹೊರ ಹೋಗಲು ಸ್ವಲ್ಪ ತಡವಾಗುವುದರಿಂದ ಈ ರೀತಿಯಾಗುತ್ತದೆ. ಆಗ ಕಣ್ಣುಗಳನ್ನು ಮುಚ್ಚಿ ಮನಸ್ಸನ್ನು ಸ್ವೇಚ್ಚೆಯಾಗಿ ಹರಿಯಲು ಬಿಟ್ಟು ಮೌನವಾಗಿ 10 – 15 ನಿಮಿಷ ಕುಳಿತುಕೊಳ್ಳಿ” ಎನ್ನುತ್ತಾರೆ. ಧ್ಯಾನದ ಫ್ರಾಥಮಿಕ ಹಂತದಲ್ಲೇ ಧ್ಯಾನ ಎಂದರೆ ಒಂದೋ ನಮ್ಮನ್ನು ಸಮಾಜದಿಂದ ಬೇರ್ಪಡಿಸೋ ಕ್ರೀಯೆ ಅಥವಾ ಸಮೂಹ ಸನ್ನಿಗೆ ಒಳಪಡಿಸಿ ನಮ್ಮನ್ನ ಅವರ ಸುಪರ್ದಿಯಲ್ಲಿರಿಸುವ ಯತ್ನ ಎಂಬುದನ್ನು ಮನಗಾಣಬೇಕು.

ಶರೀರಕ್ಕೆ ಜೀವನದ ಒತ್ತಡದಿಂದ ವಿಶ್ರಾಂತಿ ನೀಡುವ ಕ್ರೀಯೆಯಾಗಿ ಯೋಗ ನಿದ್ರೆ ಮಾಡುವುದು ಎಂದರೆ ನೀವು ಒತ್ತಡವನ್ನು ನಿವಾರಿಸಲು ಮಾಡುವ ಯೋಚನೆಯನ್ನು ಚಿವುಟುವುದು ಎಂದರ್ಥ. ನಿಮ್ಮ ಮಾನಸಿಕ ಕ್ಷೊಭೆಯನ್ನು ನಿಮ್ಮೊಳಗೆ ಇಂಗಿಸಿಕೊಂಡು ನಿಮ್ಮ ಮನಸ್ಸಿಗೆ ತಾತ್ಕಲಿಕ ರಿಲ್ಯಾಕ್ಸ್ ಕೊಡಿಸುವ ಮೂಲಕ ಶಾಶ್ವತ ಪರಿಹಾರದಿಂದ ವಿಮುಖರನ್ನಾಗಿಸುವುದೇ ಧ್ಯಾನ. ಸರಳವಾಗಿ ಹೇಳುವುದಾದರೆ ಯಾವುದೇ ಮಾನಸಿಕ ಕ್ಷೊಭೆಗೆ ಅಥವ ಜೀವನದ ಒತ್ತಡ ನಿವಾರಣೆಗೆ ಮಾತು ಮುಖ್ಯವೇ ಹೊರತು ಮೌನವಲ್ಲ. ಮನಸ್ಸಿನಲ್ಲಿ ಯಾವುದೋ ನೋವು ತುಂಬಿಕೊಂಡು ಅಥವಾ ಒತ್ತಡಗಳನ್ನು ಹೇರಿಕೊಂಡು ಕ್ಷೊಭೆಗೆ ಒಳಗಾಗಿದ್ದರೆ ಆತನನ್ನು ಮಾನಸಿಕ ರೋಗಿ ಎನ್ನಬಹುದು. ಒರ್ವ ಮಾನಸಿಕ ರೋಗಿ ಮೌನಿಯಾದಷ್ಟು ಆತನ ರೋಗ ಉಲ್ಬಣಗೊಳ್ಳುತ್ತದೆ. ಆತ ವೈದ್ಯರ ಬಳಿಯೋ, ಆಪ್ತ ಸಮಾಲೋಚಕರ ಬಳಿಯೋ ಎಲ್ಲವನ್ನು ಮುಕ್ತವಾಗಿ ಹೇಳಿಕೊಳ್ಳಬೇಕು. ಮುಕ್ತವಾಗಿ ಮಾತನಾಡುವುದೇ ಮಾನಸಿಕ ರೋಗಕ್ಕೆ ಪ್ರಾಥಮಿಕ ಚಿಕಿತ್ಸೆ. ಆದರೆ ಧ್ಯಾನದ ಚಿಕಿತ್ಸೆಯಲ್ಲಿ ಯೋಗ ನಿದ್ರೆ ಮಾಡಲಾಗುತ್ತದೆ. ಇದು ತಾತ್ಕಾಲಿಕವಾಗಿ ಪರಿಹಾರ ಎನಿಸಬಹುದಾದರೂ ಇದೊಂದು ವಂಚನೆಯಷ್ಟೆ. ಇನ್ನು ಧ್ಯಾನವು ಹಲವು ರೋಗಗಳನ್ನು ಗುಣ ಮಾಡುತ್ತದೆ ಮತ್ತು ನಾವು ಸೇವಿಸಿದ ಔಷಧದ ಗುಣಫಲವನ್ನು ಹೆಚ್ಚಿಸುತ್ತದೆ ಎಂಬುದು ಮೂರ್ಖತನದ ಪರಮಾವಧಿ. ಇಷ್ಟಕ್ಕೂ ಕಣ್ಣುಗಳನ್ನು ಮುಚ್ಚಿ ಮೌನವಾಗಿ ಮನಸ್ಸನ್ನು ಸ್ವೇಚ್ಚೆಯಾಗಿ ಹರಿಯ ಬಿಡಿ ಎನ್ನುವುದು ಧ್ಯಾನದ ಅಂತಿಮ ಘಟ್ಟದ ಪೂರ್ವ ಸಿದ್ಧತೆ ಎನ್ನಬಹುದು. ನಿತ್ಯಾನಂದನಂತಹ ಗುರೂಜಿಗಳು ಇಂತಹ ಮೌನ ಸ್ವೇಚ್ಚೆಯನ್ನೇ ಧ್ಯಾನದ ಅಂತಿಮ ಘಟ್ಟದಲ್ಲಿ ಬಳಸಿಕೊಳ್ಳುತ್ತಾರೆ.

ಧ್ಯಾನವನ್ನು ಸಾಮೂಹಿಕವಾಗಿಯೇ ಯಾಕೆ ಮಾಡುತ್ತಾರೆ?

ಧ್ಯಾನ ವ್ಯಕ್ತಿಯೊಬ್ಬನಿಗೆ ವೈಯುಕ್ತಿಕ ಜೀವನದ ಒತ್ತಡದಿಂದ ತಾತ್ಕಾಲಿಕ ಪರಿಹಾರ ನೀಡಬಹುದು. ಈ ಧ್ಯಾನವನ್ನು ಎಲ್ಲರೂ ಸಾಮೂಹಿಕ ಧ್ಯಾನವನ್ನಾಗಿ ಮಾಡಿಸಲು ಮಾತ್ರ ಉತ್ಸುಕರಾಗಿದ್ದಾರೆ. ಸಾಮೂಹಿಕ ಧ್ಯಾನ ಮಾಡುವುದರಿಂದ ಇನ್ನಷ್ಟು ಜನರನ್ನು ಸಮೂಹ ಸನ್ನಿಗೆ ಒಳಪಡಿಸಬಹುದು ಎಂಬ ತಂತ್ರ ಇದರಲ್ಲಿ ಅಡಗಿದೆ. ದೇವರ ನಾಮ ಅಥವಾ ಗುಣವನ್ನು ಮನನ ಮಾಡುವುದೇ ಧ್ಯಾನ ಎಂದು ವೇದಗಳು ಹೇಳುತ್ತವೆ. “ಯಜ್ಞಾನಾಂ ಜಪಯಜ್ಞೋಸ್ಮಿ” – ಆಧ್ಯಾತ್ಮಿಕ ಸಾಧನೆಗಳಲೆಲ್ಲಾ ಶ್ರೇಷ್ಠವಾದ ಧ್ಯಾನವು ನಾನೇ ಆಗಿರುವೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಧ್ಯಾನದಲ್ಲಿ ಮೂರು ಬಗೆಯ ಧ್ಯಾನಗಳಿವೆ. 1. ವೈಖರಿ ಧ್ಯಾನ, 2. ಉಪಾಂಶು ಧ್ಯಾನ, 3. ಮಾನಸಿಕ ಧ್ಯಾನ. ನಾಲಿಗೆಯ ತುಟಿಗಳನ್ನು ಅಲುಗಾಡಿಸುತ್ತಾ ಇತರರಿಗೆ ಕೇಳಿಸುವಂತೆ ಮನನ ಮಾಡುವುದೇ ವೈಖರಿ ಧ್ಯಾನ. ಕಣ್ಣುಗಳನ್ನು ಮುಚ್ಚಿ ನಾಲಿಗೆ ತುಟಿಗಳನ್ನು ಅಲುಗಾಡಿಸುತ್ತಾ ಕೇವಲ ಮನಸ್ಸಿನಲ್ಲೇ ಮನನ ಮಾಡುವುದೇ ಉಪಾಂಶು ಧ್ಯಾನ. ಯಜ್ಞ ಯಾಗಾಧಿಗಳಿಂಧ ಸಾವಿರ ಪಟ್ಟು ಹೆಚ್ಚು ಫಲ ಸಿಗುವ ಮಾನಸಿಕ ಧ್ಯಾನಕ್ಕೆ ಕಣ್ಣುಗಳನ್ನು ಮುಚ್ಚಿ ತುಟಿಯನ್ನು ಅಲ್ಲಾಡಿಸದೇ ಮನಸ್ಸಿನಲ್ಲಿ ಮನನ ಮಾಡಿಕೊಳ್ಳಬೇಕು. ಇಂತಹ ಎಲ್ಲಾ ಧ್ಯಾನವನ್ನು ಪ್ರತಿಯೊಬ್ಬರು ಮನೆಯಲ್ಲಿ ತೀರಾ ವೈಯುಕ್ತಿಕವಾಗಿ ಮಾಡಬಹುದು. ಅಗತ್ಯವೆನಿಸಿದ್ದಲ್ಲಿ ಧ್ಯಾನದ ಬಗ್ಗೆ ಒಂದು ವಾರದ ಕಾರ್ಯಗಾರವನ್ನು ಮಾಡಿ ಧ್ಯಾನ ಮಾಡುವುದನ್ನು ಕಲಿಸಿಕೊಟ್ಟು ಮನೆಯಲ್ಲೇ ಧ್ಯಾನ ಮಾಡಿಸಬಹುದು. ಆದರೆ ಮನೆಯಲ್ಲೇ ಧ್ಯಾನ ಮಾಡಿ ಎಂದು ಯಾವ ಗುರೂಜಿಯೂ ಸಲಹೆ ಕೊಡುವುದಿಲ್ಲ. ನಿತ್ಯ ನಾವಿರುವಲ್ಲೇ ಒಂದು ಧ್ಯಾನ ಮಾಡಿ ಅನ್ನುತ್ತಾರೆ. ಧ್ಯಾನಿಗರ ಮಾನಸಿಕ ಸ್ಥಿತಿಯನ್ನು ಸಂಪೂರ್ಣವಾಗಿ ಕ್ಯಾಪ್ಚರ್ ಮಾಡಿಕೊಂಡ ನಂತರ ಆಶ್ರಮದಲ್ಲೇ ಇರಿ ಎನ್ನುತ್ತಾರೆ. ಕೊನೆಗೆ ಧ್ಯಾನ ಮರೆತ ಜನ ಒಂದೋ ಗುರೂಜಿಗಳ ಆಶ್ರಮದಲ್ಲಿ ಇರುತ್ತಾರೆ ಇಲ್ಲವೋ ಗುರೂಜಿಗಳ ಫೋಟೋವನ್ನು ಮನೆ ಅಥವಾ ಉದ್ಯೋಗದ ಸ್ಥಳದಲ್ಲಿಟ್ಟು ಪೂಜೆ ಮಾಡುತ್ತಾರೆ.

ನಿತ್ಯಾನಂದ ತರಾತುರಿ ಬಂಧನದ ಹಿಂದಿನ ಹುನ್ನಾರ

ನಿತ್ಯಾನಂದ ಆಶ್ರಮದಲ್ಲಿ ನಡೆದ ಗಲಾಟೆ, ನಂತರ ನಡೆದ ಬಂಧನ ಪ್ರಕ್ರಿಯೆಗಳ ಹಿಂದೆ ಹಲವಾರು ಹುನ್ನಾರಗಳಿರುವ ಬಗ್ಗೆ ಆರೋಪಗಳಿವೆ. ಅದೇನೇ ಇರಲಿ, ನಿತ್ಯಾನಂದ ಮಾಡಿರುವುದೆಲ್ಲ ಕಾನೂನು ಬಾಹಿರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈತನ ತರಾತುರಿ ಬಂಧನದ ಹಿಂದೆ ಧ್ಯಾನದ ಪಾವಿತ್ರ್ಯತೆಯನ್ನು ಉಳಿಸುವ ಕುತಂತ್ರ ಅಡಗಿದೆ. ನಿತ್ಯಾನಂದ ಬಂಧನ ಮಾಡಿ ಗಡಿಪಾರು ಆದೇಶ ನೀಡಿದ ನಂತರ ನಿತ್ಯಾನಂದನ ಧ್ಯಾನ ಮಾಡಿರೋ ಅವಾಂತರಗಳೆಲ್ಲವೂ ಅಡಗಿ ಹೋಯಿತು. ಈ ಧ್ಯಾನದಿಂದ ಸಂತ್ರಸ್ತರಾದ ಆರತಿ, ಬಾರದ್ವಜ್, ಸಂತೋಷ್ ಏನಾದರು ಎಂಬುದು ಗೊತ್ತೇ ಆಗಲಿಲ್ಲ. ಇಂತಹ ಎಷ್ಟು ಧ್ಯಾನ ಸಂತ್ರಸ್ತರಿದ್ದಾರೆ ಎಂಬುದೂ ಗೊತ್ತಾಗಿಲ್ಲ. ಧ್ಯಾನದ ಅಂತಿಮ ಘಟ್ಟದಲ್ಲಿ ಗುರೂಜಿಗಳು ಧ್ಯಾನಿಗರ ಧ್ಯಾನವನ್ನು ಹೇಗೆಲ್ಲಾ ಬಳಸುತ್ತಾರೆ ಎಂಬಿತ್ಯಾಧಿಗಳು ನಿತ್ಯಾನಂದ ಬಂಧನದಲ್ಲೇ ಮುಚ್ಚಿ ಹೋಗಿದೆ. ನಿಜವಾಗಿಯೂ ಧ್ಯಾನ ಗುರೂಜಿ ನಿತ್ಯಾನಂದನನ್ನು ಕಾನೂನಿನ ಬಾಹುಗಳಲ್ಲಿ ಬಂಧಿಸಬೇಕು ಎಂಬ ಇರಾದೆ ಸರಕಾರಕ್ಕೆ ಇದ್ದಿದ್ದರೆ ಗಡಿಪಾರು ಆದೇಶ ಮಾಡುತ್ತಿರಲಿಲ್ಲ. ಇಂತಹ ಸಮೂಹ ಸನ್ನಿಗೆ ಒಳ ಪಟ್ಟ ಸಾವಿರಾರು ಮಂದಿ ಇರುವ ಸಾಧ್ಯತೆಗಳು ಇರುತ್ತದೆ. ಈ ನಿಟ್ಟಿನಲ್ಲಿ ಸರಕಾರಗಳು ಮಾಮೂಲಿಯಾಗಿ ಒಂದು ತನಿಖಾ ನೀತಿಯನ್ನು ಹೊಂದಿರುತ್ತದೆ. ಸರಕಾರ ಒಂದೋ ನಿತ್ಯಾನಂದ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ ವಿಶೇಷ ತಂಡವನ್ನು ರಚಿಸಬೇಕಿತ್ತು. ಆ ತಂಡದ ಮೂಲಕ ಜಿಲ್ಲಾ ಕೇಂದ್ರದಲ್ಲಿ ದೂರು ವಿಭಾಗವನ್ನು ಸ್ಥಾಪಿಸಿ ಸಂತ್ರಸ್ತರಿಂದ ದೂರುಗಳನ್ನು ಆಹ್ವಾನಿಸಬೇಕಿತ್ತು. ಅಥವಾ ಸರಕಾರ ನ್ಯಾಯಾಂಗ ತನಿಖೆಯನ್ನು ಮಾಡಬೇಕಿತ್ತು. ನಿವೃತ್ತ ನ್ಯಾಯಾಧೀಶರನ್ನು ಆಯೋಗದ ಅಧ್ಯಕ್ಷರನ್ನಾಗಿಸಿ, ಸೂಕ್ತ ಸಿಬ್ಬಂಧಿಯನ್ನು ನೀಡಿ, ಜಿಲ್ಲಾ/ತಾಲ್ಲೂಕು ಕೇಂದ್ರಗಳಲ್ಲಿ ಸಂತ್ರಸ್ತರಿಂದ ದೂರು ಸ್ವೀಕರಿಸಿ ತನಿಖೆ ಮಾಡಬೇಕಿತ್ತು. ದೂರುದಾದರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರೇ ಜಾಸ್ತಿ ಇರುವುದರಿಂದ ಮತ್ತು ಧ್ಯಾನದ ಆಶ್ರಮಗಳಿಗೆ ಆಸ್ತಿ ನೀಡಿ ಮೂರ್ಖರಾದವರು ದೂರು ನೀಡಿ ಮತ್ತೆ ಮಾನ ಕಳೆದುಕೊಳ್ಳಲು ಹಿಂಜರಿಯುವುದರಿಂದ ದೂರುದಾರರ ವಿವರಗಳನ್ನು ಗೌಪ್ಯವಾಗಿಡೋ ಕ್ರಮಗಳನ್ನು ಕೈಗೊಂಡು ತನಿಖೆ ಮಾಡಬಹುದು. ಇದೆಲ್ಲಾ ಮಾಡಿದರೆ ನಿತ್ಯಾನಂದನಂತಹ ಗುರೂಜಿಗಳಿಗಿಂತಲೂ ಧ್ಯಾನ ಎಷ್ಟು ಭೋಗಸ್ ಎಂದು ತಿಳಿಯುತ್ತಿತ್ತು. ಒಬ್ಬ ನಿತ್ಯಾನಂದನ ಬಂಧನದ ಜೊತೆಗೆ ಜನರನ್ನು ಸಮೂಹ ಸನ್ನಿಗೆ ಒಳಗಾಗಿಸೋ ಹಲವಾರು ಸ್ವಾಮಿಗಳು, ಗುರೂಜಿಗಳು, ಕಲ್ಕಿಗಳು ಜನರ ಮುಂದೆ ಬೆತ್ತಲಾಗುತ್ತಿದ್ದರು.