Daily Archives: June 17, 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 24 )


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್‌ಗೆ ವಯಸ್ಸಾಗುತ್ತಿದ್ದಂತೆ, ಜೀವನದ ವಿಶ್ರಾಂತಿಯ ಬಯಕೆ ಹೆಚ್ಚಾಗತೊಡಗಿತು. ನೈನಿತಾಲ್ ಪಟ್ಟಣದ ಪುರಸಭೆಯ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ. ಜೊತೆಗೆ ಮೊಕಮೆಘಾಟ್‌ನ ರೈಲ್ವೆ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಅಲ್ಲಿನ ಸರಕು ಮತ್ತು ಕಲ್ಲಿದ್ದಲು ಸಾಗಾಣಿಕೆಯ ಗುತ್ತಿಗೆಯನ್ನ ತನ್ನ ಬಳಿ ಎರಡು ದಶಕಕ್ಕೂ ಹೆಚ್ಚು ಕಾಲ ದುಡಿದ ನಿಷ್ಟಾವಂತ ಕೂಲಿಕಾರ್ಮಿಕರಿಗೆ ವಹಿಸಿ, ಅವರ ಪರವಾಗಿ ತಾನೇ ರೈಲ್ವೆ ಇಲಾಖೆಗೆ ಠೇವಣಿ ಹಣವನ್ನು ತುಂಬಿದ. ಎರಡು ದಶಕ ನನ್ನ ಜೊತೆ ದುಡಿದ ನಿಮಗೆ ಮತ್ತು ನಿಮ್ಮ ಪ್ರೀತಿಗೆ ನಾನು ನೀಡಬಹುದಾದ ಕಾಣಿಕೆ ಇದೊಂದೇ ಎಂದು ಅಗಲಿಕೆಯ ಸಂದರ್ಭದಲ್ಲಿ ಹೆಮ್ಮೆಯಿಂದ ಕಾರ್ಬೆಟ್ ಘೋಷಿದ. ನೈನಿತಾಲ್ ಪಟ್ಟಣದಲ್ಲಿ ನಡೆಯುತ್ತಿದ್ದ ರಿಯಲ್ ಎಸ್ಟೇಟ್ ವ್ಯವಹಾರವನ್ನು ತಾಯಿ ಮೇರಿ ಕಾರ್ಬೆಟ್ ಹಾಗೂ ಮ್ಯಾಥ್ಯು ಕಂಪನಿಯ ವ್ಯವಹಾರವನ್ನು ಸಹೋದರಿ ಮ್ಯಾಗಿ ಹಾಗೂ ಮಲಸಹೋದರಿ ಮೇರಿಡೊಯಲ್ ಯಶಸ್ವಿಯಾಗಿ ನಿರ್ವಹಿಸುತ್ತಿದ್ದ ಕಾರಣ, ಕಾರ್ಬೆಟ್ ಆಪ್ರಿಕಾದ ತಾಂಜೇನಿಯಾದ ಕೃಷಿ ಚಟುವಟಿಕೆಗಳತ್ತ ಗಮನ ನೀಡತೊಡಗಿದ.

ನೈನಿತಾಲ್ ಗಿರಿಧಾಮದ ಪ್ರತಿಷ್ಟಿತ ಯುರೋಪಿಯನ್ ಕುಟುಂಬಗಳಲ್ಲಿ ಕಾರ್ಬೆಟ್ ಕುಟುಂಬಕ್ಕೆ ಮಹತ್ವದ ಸ್ಥಾನವಿತ್ತು. ಅಲ್ಲಿನ ಜನ ಎಲ್ಲಾ ವ್ಯವಹಾರಗಳಿಗೆ ಕಾರ್ಬೆಟ್‌ನ ತಾಯಿ ಮೇರಿಯನ್ನು ಆಶ್ರಯಿಸುತ್ತಿದ್ದರು. ಮೇರಿ ಕಾರ್ಬೆಟ್ ಜೀವನ ಪೂರ್ತಿ ಹೋರಾಟ ನಡೆಸಿ ಬದುಕು ಕಟ್ಟಿಕೊಂಡ ಪರಿಣಾಮ ಸದಾ ತನ್ನ ಕುಟುಂಬ ಭದ್ರತೆ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಳು. ಮುಂದೆ ಎಂತಹದ್ದೇ ಸಂದರ್ಭಗಳಲ್ಲಿ ತಾನಾಗಲಿಗಲಿ, ಅಥವಾ ತನ್ನ ಮಕ್ಕಾಳಾಗಲಿ ಸಂಕಷ್ಟಕ್ಕೆ ಸಿಲುಕಬಾರದು ಎಂಬುದು ಮೇರಿಯ ನಿಲುವಾಗಿತ್ತು. ಹಾಗಾಗಿ ಸಂಪಾದಿಸಿದ ಹಣಕ್ಕೆ ಮೇರಿ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದಳು. ನೈನಿತಾಲ್ ಪಟ್ಟಣದಲ್ಲಿ ಅಷ್ಟೆಲ್ಲಾ ಆಸ್ತಿ ಇದ್ದರೂ ಕೂಡ ತನ್ನ ಹಾಗೂ ಮಕ್ಕಳ ಹೆಸರಿನಲ್ಲಿ ಬ್ಯಾಂಕುಗಳಲ್ಲಿ ಹಣವನ್ನು ಠೇವಣಿ ಇಡುತ್ತಿದ್ದಳು. ಜಿಮ್ ಕಾರ್ಬೆಟ್ ಹೊರತುಪಡಿಸಿ, ಇಡೀ ಕುಟುಂಬದ ಎಲ್ಲರೂ ಯಾವುದಕ್ಕೂ ಕೊರತೆ ಇಲ್ಲದಂತೆ ಐಷಾರಾಮದ ಬದುಕನ್ನು ರೂಢಿಸಿಕೊಂಡಿದ್ದರು. ಜಿಮ್ ಕಾರ್ಬೆಟ್ ಮಾತ್ರ ಎಂದೂ ದುಂದುವೆಚ್ಚಕ್ಕೆ ಅಥವಾ ಐಷಾರಾಮದ ಬದುಕಿಗೆ ಮನಸೋತವನಲ್ಲ. ಅವನ ಕೈಯಲ್ಲಿ ಕಾಡಿಗೆ ಶಿಕಾರಿಗೆ ತೆರಳುವ ಸಂದರ್ಭದಲ್ಲಿ ಮಾತ್ರ ರಿಸ್ಟ್ ವಾಚೊಂದು ಇರುತ್ತಿತ್ತು. ಉಳಿದಂತೆ ಸಾಧಾರಣ ಉಡುಪುಗಳಲ್ಲಿ ಇರುವುದು ಅವನ ಹವ್ಯಾಸವಾಗಿತ್ತು. ತಲೆಗೊಂದು ಹ್ಯಾಟ್ ಧರಿಸುವುದು ಅವನ ಮೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು. ರಾತ್ರಿ ಎರಡು ಪೆಗ್ ವಿಸ್ಕಿ ಮತ್ತು ದಿನಕ್ಕೆ ಇಪ್ಪತ್ತು ಸಿಗರೇಟ್ ಸೇದುವ ಹವ್ಯಾಸ, ಬೇಸರವಾದಾಗಲೆಲ್ಲಾ ಹಾಲಿಲ್ಲದ ಕಪ್ಪು ಚಹಾ ಕುಡಿಯುವ ಅಭ್ಯಾಸ ಅವನಿಗಿತ್ತು.

ಜಿಮ್ ಕಾರ್ಬೆಟ್ ಯಾವಾಗಲೂ ಅರಣ್ಯಕ್ಕೆ ಕಾಡ್ಗಿಚ್ಚು ಆವರಿಸಿಕೊಳ್ಳುವ ಸಂದರ್ಭದಲ್ಲಿ ಹೆಚ್ಚು ಚಿಂತಾಕ್ರಾಂತನಾಗುತ್ತಿದ್ದ. ಆಫ್ರಿಕಾದಲ್ಲಿ ವಿಶೇಷವಾಗಿ ಕೀನ್ಯಾ ಮತ್ತು ತಾಂಜೇನಿಯ ಕಾಡುಗಳಲ್ಲಿ ಬೇಸಿಗೆ ಸಮಯದಲ್ಲಿ ನೈಸರ್ಗಿಕವಾಗಿ ಕಾಡ್ಗಿಚ್ಚು ಆವರಿಸಿಕೊಳ್ಳುವುದನ್ನು ನೋಡಿದ್ದ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಭಾರತದಲ್ಲಿ ಮರಗಳ್ಳರು ಮತ್ತು ಅಕ್ರಮ ಬೇಟೆಗಾರರು ಕಾಡಿಗೆ ಬೆಂಕಿ ಇಡುವುದನ್ನು ಕಂಡು ಬಹುವಾಗಿ ನೊಂದುಕೊಳ್ಳತ್ತಿದ್ದ. ಈ ಕಾರಣಕ್ಕಾಗಿ ಬೇಸಿಗೆಯ ಸಮಯದಲ್ಲಿ ಕಲದೊಂಗಿ ಮತ್ತು ಚೋಟಾಹಲ್ದಾನಿಯ ರೈತರನ್ನು ಕರೆದುಕೊಂಡು ಅರಣ್ಯದಲ್ಲಿ ಅಲೆದಾಡಿ ಕಾಡ್ಗಿಚ್ಚು ಆವರಿಸದಂತೆ ಎಚ್ಚರಿಕೆ ವಹಿಸುತ್ತಿದ್ದ. ಬಿದಿರು ಬೆಳೆದಿರುವ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇಡುವಂತೆ ಸ್ಥಳಿಯರಿಗೆ ಕರೆ ನೀಡುತ್ತಿದ್ದ. ಇಡೀ ಕುಮಾವನ್ ಪ್ರಾಂತ್ಯದ ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಇಂಜಿನಿಯರ್‌ಗಳು ವೈದ್ಯರು ಕಾರ್ಬೆಟ್‌ಗೆ ಪರಿಚತರಾಗಿದ್ದರು. ಅವರು ಭೇಟಿಯಾದಾಗಲೆಲ್ಲಾ ಸ್ಥಳೀಯ ಭಾಷೆಯಲ್ಲಿ ಅವರ ಯೋಗಕ್ಷೇಮ ವಿಚಾರಿಸಿ, ಅವರ ಸೇವೆ ಬಗ್ಗೆ ಮಾಹಿತಿ ಪಡೆದು ಸಲಹೆ ನೀಡುತ್ತಿದ್ದ. ಮತ್ತು ವೃತ್ತಿಯಲ್ಲಿ ಇರಬೇಕಾದ ಕಾಳಜಿಗಳ ಬಗ್ಗೆ ವಿವರಿಸಿ ಹೇಳುತ್ತಿದ್ದ. ಭಾರತದ ಗೌರ್ವನ್ ಜನರಲ್‌ಗಳು. ಪ್ರಾಂತ್ಯದ ಜಿಲ್ಲಾಧಿಕಾರಿಗಳು, ಕಾರ್ಬೆಟ್‌ಗೆ ಗೆಳೆಯರಾದ ಕಾರಣ ಅಲ್ಲಿನ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಜಿಮ್ ಕಾರ್ಬೆಟ್ ಕುರಿತು ಭಯ ಮಿಶ್ರಿತ ಗೌರವವಿತ್ತು.

ತಾನು ವಾಸಿಸುತ್ತಿದ್ದ ನೈನಿತಾಲ್ ಗಿರಿಧಾಮದ ಪರಿಸರ ಅತಿಯಾದ ಪ್ರವಾಸಿಗರ ಭೇಟಿಯಿಂದಾಗಿ ಕಲುಷಿತವಾಗುತ್ತಿರುವುದನ್ನು ಕಂಡ ಕಾರ್ಬೆಟ್ ನಾಗರೀಕ ಸಮಿತಿಯೊಂದನ್ನು ರಚಿಸಿಕೊಂಡು, ಅದರ ರಕ್ಷಣೆಗೆ ಮುಂದಾದ. ಇದು ನಾಗರೀಕ ಸಮಿತಿಯಿಂದ ಸಾಧ್ಯವಿಲ್ಲ ಎಂಬುದನ್ನ ಮನಗಂಡಕೂಡಲೇ ಕಾರ್ಬೆಟ್ ಮತ್ತೇ ಅಲ್ಲಿನ ಪುರಸಭೆಗೆ ಸ್ಪರ್ಧಿಸಿ ಆಯ್ಕೆಯಾಗುವುದರ ಜೊತೆಗೆ ಉಪಾಧ್ಯಕ್ಷನ ಸ್ಥಾನ ಅಲಂಕರಿಸಿ, ನೈನಿತಾಲ್ ಪರಿಸರದ ರಕ್ಷಣೆಗೆ ಮುಂದಾದ. ಪಟ್ಟಣದ ಜನತೆ ಕುಡಿಯುವ ನೀರಿನ ಗುಣ ಮಟ್ಟ ಅಳೆಯಲು ಸಣ್ಣದೊಂದು ಪ್ರಯೋಗಾಲವೊಂದನ್ನು ನಿರ್ಮಿಸಿದ. ಮನೆಗಳಿಂದ ಹೊರಬರುವ ಕೊಳಚೆ ನೀರು ಅಲ್ಲಿನ ಸರೋವರ ಸೇರದಂತೆ ಮಾಡಲು ಪ್ರಪಥಮವಾಗಿ ಒಳಚರಂಡಿ ವ್ಯವಸ್ಥೆಯನ್ನು ಜಾರಿಗೆ ತಂದ. ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಪಟ್ಟಣದ ರಸ್ತೆಗಳಲ್ಲಿ ಸಾಲು ಮರಗಳ ಸಸಿಗಳನ್ನು ನೆಟ್ಟು ಪೋಷಿಸಿದ. ಎಲ್ಲಾ ಧರ್ಮದ ಜನರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಸ್ಮಶಾನ ಭೂಮಿಗಳನ್ನು ನಿರ್ಮಿಸಿದ. ಪಟ್ಟಣದ ಹೃದಯ ಭಾಗದಲ್ಲಿದ್ದ ನೈನಿ ಸರೋವರದ ಸುತ್ತ-ಮುತ್ತ ತಡೆಗೋಡಯನ್ನು ನಿರ್ಮಿಸಿ, ರಸ್ತೆಯ ಕೊಳಚೆ ನೀರು ಸರೋವರಕ್ಕೆ ಸೇರದಂತೆ ಮಾಡಿ, ಅಪರೂಪದ ಮಷೀರ್ ಜಾತಿಯ ಮೀನುಗಳನ್ನು ಸಾಕುವ ಯೋಜನೆಯೊಂದನ್ನು ರೂಪಿಸಿದ. ರಾತ್ರಿಯ ವೇಳೆ ಕೆಲವರು ಮೀನು ಶಿಕಾರಿಯಲ್ಲಿ ತೊಡಗಿರುವದನ್ನು ಕಂಡು, ಸರೋವರದಲ್ಲಿ  ಮೀನು ಶಿಕಾರಿ ನಿಷೇದಿಸಿದ ಕಾನೂನನ್ನು ಜಾರಿಗೆ ತಂದ.

ಅತಿ ವೇಗವಾಗಿ ಬೆಳೆಯುತ್ತಿದ್ದ ನೈನಿತಾಲ್ ಗಿರಿಧಾಮಕ್ಕೆ ಬೆಳೆವಣಿಗೆಗೆ ಕಡಿವಾಣ ಹಾಕಲು, ಸುತ್ತ ಮುತ್ತಲಿನ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ವಸತಿ ಪ್ರದೇಶಗಳು ತಲೆ ಎತ್ತುವುದಕ್ಕೆ ಕಡಿವಾಣ ಹಾಕಿ, ಬಹುಮಹಡಿ ಕಟ್ಟಡಗಳಿಗೆ ಉತ್ತೇಜನ ನೀಡಿದ. ಕಣ್ಣೆದುರು, ವೇಗವಾಗಿ ಬೆಳೆಯುತ್ತಿರುವ ನಾಗರೀಕತೆಯಿಂದ ಅರಣ್ಯ ನಾಶವಾಗುತ್ತಿರುವುದನ್ನು ಮನಗಂಡು, ಭಾರತ ಸರ್ಕಾರದೊಂದಿಗೆ ಸಮಾಲೋಚಿಸಿ ಕುಮಾವನ್ ಪ್ರಾಂತ್ಯದ ಅರಣ್ಯ ರಕ್ಷಣೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಂದಾದ. ಕೆಲವೊಮ್ಮೆ ಸರ್ಕಾರದ ನಿರ್ಧಾರಗಳು ಅವನಲ್ಲಿ ಜಿಗುಪ್ಸೆ ಮೂಡಿಸುತ್ತಿದ್ದವು.

ಭಾರತದಲ್ಲಿ ಆಗ ತಾನೇ ವಿಸ್ತಾರಗೊಳ್ಳುತ್ತಿದ್ದ ರೈಲ್ವೆ ಯೋಜನೆಗಳಿಗೆ ಈಶಾನ್ಯ ರಾಜ್ಯಗಳ ಅರಣ್ಯ ಮತ್ತು ಹಿಮಾಲಯ ತಪ್ಪಲಿನ ಅರಣ್ಯ ಪ್ರದೇಶ ಬಲಿಯಾಗುತ್ತಿರುದನ್ನು ಕಂಡು ಕಾರ್ಬೆಟ್ ನೊಂದುಕೊಳ್ಳುತ್ತಿದ್ದ. ರೈಲ್ವೆ ಹಳಿಗಳ ಕೆಳಗೆ ಹಾಸಲು ವಯಸ್ಸಾದ ಸದೃಢ ಮರಗಳನ್ನು ಕಡಿದು ಹಾಕುವುದರ ಬಗ್ಗೆ ಅವನು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿದ. ಮರ ಕಡಿದ ಜಾಗದಲ್ಲಿ ಅತಿ ಶೀಘ್ರವಾಗಿ ಬೆಳೆಯವ ಮರಗಳನ್ನು ಬೆಳಸುವ ಸರ್ಕಾರದ ಯೋಜನೆಗಳಿಗೆ ಪ್ರತಿಭಟಿಸಿದ. ಆಯಾ ಪ್ರದೇಶದ ಬೌಗೂಳಿಕ ಲಕ್ಷಣಗಳಿಗೆ ಅನುಸಾರವಾಗಿ ಒಕ್ ಮತ್ತು ದೇವದಾರು ಮರಗಳನ್ನು ಬೆಳೆಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಿದ. ಸರ್ಕಾರ ಮತ್ತು ಅಧಿಕಾರಿಗಳು ಅರಣ್ಯವನ್ನು ಮತ್ತು ಅಲ್ಲಿನ ಮರಗಳನ್ನು ವಾಣಿಜ್ಯ ದೃಷ್ಟಿಕೋನದಿಂದ ನೋಡುವುದರ ಬಗ್ಗೆ ಕಾರ್ಬೆಟ್‌ಗೆ ತೀವ್ರ ಅಸಹನೆಯಿತ್ತು. ಮರಗಳ ನಾಶದಿಂದ ಗೂಡು ಕಟ್ಟಲು ಪರಿತಪಿಸುತಿದ್ದ ಪಕ್ಷಿಗಳನ್ನು ಕಂಡಾಗ ಕಾರ್ಮೆಟ್ ತೀವ್ರವಾಗಿ ನೊಂದುಕೊಳ್ಳುತ್ತಿದ್ದ. ಒಮ್ಮೊಮ್ಮೆ ತನ್ನ ಅಂತರಂಗಕ್ಕೆ ತಾನೇ ಪ್ರಶ್ನೆಗಳನ್ನು ಹಾಕಿಕೊಂಡು, ಪರಿಸರ ಕುರಿತಂತೆ ತನ್ನ ನಿಲುವುಗಳಲ್ಲಿ ದ್ವಂದ್ವ ಇರುವುದನ್ನು ಕಂಡು ಮುಜುಗರ ಪಟ್ಟುಕೊಂಡ. ಇದಕ್ಕೆ ಪ್ರಾಯಸ್ಛಿತ್ತವಾಗಿ ಎಲ್ಲಾ ಬಗೆಯ ಅರಣ್ಯ ಶಿಕಾರಿಗಳಿಗೆ ತಿಲಾಂಜಲಿ ನೀಡಲು ನಿರ್ಧರಿಸಿದ.

ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟನೆಂದರೆ, ಮತ್ತೇ ರಾತ್ರಿಗೆ ಹಿಂತಿರುಗುತ್ತಿದ್ದ ಜಿಮ್ ಕಾರ್ಬೆಟ್ ತನ್ನ ವಯಸ್ಸು ಮಾಗುತ್ತಿದ್ದಂತೆ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಮತ್ತು ಪರಿಸರ ರಕ್ಷಿಸುವಲ್ಲಿ ಆಸಕ್ತಿ ತೋರತೊಡಗಿದ. ನೈನಿತಾಲ್ ಪಟ್ಟಣದ ರಸ್ತೆಗಳ ಅಗಲೀಕರಣಕ್ಕಾಗಿ ಸರ್ಕಾರದ ಲೋಕೋಪಯೊಗಿ ಇಲಾಖೆ ಮರಗಳನ್ನು ಕಡಿಯಲು ಮುಂದಾದಾಗ, ಪ್ರತಿಭಟಿಸಿ ತಡೆಯೊಡ್ಡಿದ. ಕಾರ್ಬೆಟ್, ರಸ್ತೆಗಾಗಿ ನೆಲಕ್ಕೆ ಉರುಳುವ ಮರಗಳ ಬದಲಾಗಿ ಅವುಗಳ ಸಂಖ್ಯೆಯ ದುಪ್ಪಟ್ಟು ಮರಗಳನ್ನು ನೆಡಲಾಗುವುದೆಂದು ಸರ್ಕಾರದಿಂದ ಆಶ್ವಾಸನೆ ಪಡೆದು ನಂತರವಷ್ಟೇ ರಸ್ತೆಯ ಅಗಲೀಕರಣಕ್ಕೆ ಅನುವು ಮಾಡಿಕೊಟ್ಟ. ಪಟ್ಟಣ ಪುರಸಭೆಯ ಹಿರಿಯ ಉಪಾಧ್ಯಕ್ಷ ಹಾಗೂ ಸಮಾಜದ ಗೌರವಾನ್ವಿತ ವ್ಯಕ್ತಿಯಾಗಿದ್ದ ಕಾರ್ಬೆಟ್‌ನ ಕಾಳಜಿಗಳ ಬಗ್ಗೆ ಅಥವಾ ಆತನ ನಿಲುವುಗಳ ಬಗ್ಗೆ ಪ್ರಶ್ನಿಸುವ ಧೈರ್ಯ ನೈನಿತಾಲ್ ಪಟ್ಟಣ ಮಾತ್ರವಲ್ಲ, ಕುಮಾವನ್ ಪ್ರಾಂತ್ಯದಲ್ಲಿ ಯಾರಿಗೂ ಇರಲಿಲ್ಲ. ಪ್ರಾಣಿ ಮತ್ತು ಪರಿಸರ ಕುರಿತು ಅಪಾರ ಕಾಳಜಿ ಬೆಳಸಿಕೊಂಡಿದ್ದ. ಕಾರ್ಬೆಟ್, ಸಾಮಾನ್ಯ ಜನತೆಗೆ ಈ ಕುರಿತು ಜಾಗೃತಿ ಮೂಡಿಸಲು ಹೊಸದೊಂದು ಯೋಜನೆಯನ್ನು ರೂಪಿಸಿದ. ಕ್ಯಾಮರಾ ಮೂಲಕ ಪ್ರಾಣಿ, ಪಕ್ಷಿಗಳ ಚಿತ್ರವನ್ನು ಸರೆಹಿಡಿದು ಅವುಗಳ ಬದುಕನ್ನು ಜನಸಾಮಾನ್ಯರಿಗೆ ವಿವರಿಸುವುದು, ಅವನ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು.

(ಮುಂದುವರಿಯುವುದು)

ಕತೆ: ನೀರು ಕಾರಣ…


-ಡಾ.ಎಸ್.ಬಿ. ಜೋಗುರ


 

*1*

ಬಿಜಾಪುರ ಜಿಲ್ಲೆಯ ಸಿಂದಗಿ ಊರಿಗೆ ಬರ ಬಂತಂದರ ಬಾಳ ಬಿರಿ ಬಂತು ಅಂತಲೇ ಅರ್ಥ. ಇಡೀ ಊರ ಅನ್ನೋದು ಬರದ ಬಿಸಿಯೊಳಗ ಬಾಡಿ ಕರ್ಲಾಗಿ ಬಿಡತ್ತಿತ್ತು. ಸೂರ್ಯ ಹುಟ್ಟೂದೇ ಊರ ಜನರನ್ನ ಸುಡಲಿಕ್ಕ ಅನ್ನೂವಂಗ ಮುಂಜುಮುಂಜಾನೆನೇ ರಾವ್ ಆಗಿ ಏರಿ ಬರತ್ತಿದ್ದ. ಹಂಗಾಗಿ ರಾತ್ರೀ ಹಗಲ ಕೂಡೇ ರಣರಣ ಅಂತಿತ್ತು. ನೀರ ಅನ್ನೂದು ತೀರಾ ಅಪರೂಪ ಆಗಿತ್ತು. ಊರಾಗಿರೋ ಬಹುತೇಕ ಬಾವಿಗೋಳು ತಳಾ ಕಂಡು ಬಿರುಕಬಿಟ್ಟಿದ್ವು. ಬಾಜಾರ ಬಾವಿ, ತೆಕ್ಕೇದ ಗಲ್ಲಿ ಬಾವಿ, ಕುರುಬರ ಕೇರಿ ಬಾವಿ, ಸಿದ್ದಲಿಂಗೇಶ್ವರ ಗುಡಿ ಬಾವಿ, ಬೀರಪ್ಪನ ಕೆರೆ ಎಲ್ಲಾ ತಳ ಕಂಡು ತಿಂಗಳಾಗಲಿಕ್ಕ ಬಂದಿತ್ತು. ತಪ್ಪಿ ಯಾವುದಾದರೂ ಬಾವಿಯೊಳಗ ಇಳದರ ಒಂದು ಸವನ ಝಳಾ ಅನ್ನೂದು ಗವ್.. ಅಂತ ಮುಖಕ್ಕ ಹೊಡೀತಿತ್ತು.

ಪಟ ಪಟ ಅಂತ ಒಳಗ ಸುತ್ತಲೂ ಕಣಕಪ್ಪಲಿ ಹಾರಾಡತಿದ್ವು. ಊರಾಗ ಅಲ್ಲಲ್ಲಿ ಹಾಕಸಿರೋ ಬೋರ್ ನೀರ ಸೈತಾ ಇನ್ನೇನು ಬಾಳ ದಿನಾ ಬರೂವಂಗಿಲ್ಲ ಯಾಕಂದರ ಅದಾಗಲೇ ಅವು ಸಣ್ಣ ಮಕ್ಕಳು ಉಚ್ಚೀ ಹೊಯ್ಯುವಂಗ ತಿಣಕಿ ಸುರೀತಿದ್ವು. ಅಂತಾ ಅಳಬುರಕಿ ಬೋರವೆಲ್ ಮುಂದೇ ನೂರಾರು ಕೊಡಾ ಪಹಳಿಯಲ್ಲಿರತಿದ್ವು. ಊರಾಗ ತಮ್ಮ ಮನೀಗಿ ಮುನಿಸಿಪಾಲ್ಟಿ ನಳಾ ತಗೋಂಡವರು ಬಾಳ ಕಡಿಮಿ. ಅವರೆಲ್ಲಾ ತಮಗೇ ಸಾಲೂದಿಲ್ಲ ಅಂತ ಹೇಳಿ ತೊಲೆಬಾಗಿಲು ಬಂದ್ ಮಾಡಿ ನೀರ ತುಂಬತ್ತಿದ್ದರು. ತಮ್ಮ ಜಾತಿಯವರು, ಸಂಬಂಧಿಗಳು ಯಾರರೇ ಬಂದರ ಅಷ್ಟೇ ಹಗೂರಕ ಬಾಗಿಲಾ ತಗದು, ಎರಡು ಕೊಡಾ ಬಿಡವರು. ಕೆಳಗಿನ ಕೇರಿ ಮಂದಿ ಅಂತೂ ಮುನಿಸಿಪಾಲ್ಟಿ ಟ್ಯಾಂಕರ್ ಮ್ಯಾಲೇ ಡಿಪೆಂಡ್ ಆಗಿದ್ದವರು.

ಅದು ಬಂದಾಗೇ.. ಇವರಿಗಿ ನೀರ ಸಿಕ್ಕಾಗೇ.. ’ಸಿಹಿ ನೀರ ಬರತೈತಿ ಅಂತ ನಂಬಕೊಂಡು ಕುಂತರ ಸತ್ತು ಹೋಗೂದಾಗತೈತಿ, ಸುಮ್ಮ ಸರ್ಕಾರಿ ದವಾಖಾನಿ ಹಿಂದ ಇರೋ ಸವಳು ಬಾವಿ ನೀರ ತಗೊಂಡು ಕುಡೀರಿ’ ಅಂತ ಕಟಕರ ಎಲ್ಲಪ್ಪ ತನ್ನ ಕೇರಿ ಮಂದೀಗಿ ತಿಳಿ ಹೇಳಿದ್ದ. ಹಿಂದಿನ ವಾರ ನೀರಿನ ಟ್ಯಾಂಕರ್ ಬರತೈತಿ ಅಂತ ಬೆಳ್ಳಬೆಳತನಕ ಟ್ಯಾಂಕರ್ ಬರೋ ದಾರಿಯೊಳಗ ಕಣ್ಣ ಹಾಸ್ಕೊಂಡು ನಿಂತರೂ ಟ್ಯಾಂಕರ್ ಬಂದಿರಲಿಲ್ಲ. ಮರುದಿನ ಇವರದೇ ಕೇರಿಯೊಳಗ ಖಾಲಿ ಟ್ಯಾಂಕರ್ ಹಾದು ಹೋಗೂ ಮುಂದ ಸಮಗಾರ ಚಿನ್ನಪ್ಪ ಓಡಿ ಬಂದು ’ಯಾಕಣ್ಣಾ ದಾವಲಸಾಬ್ ನಿನ್ನೆನೂ ಬಂದಿಲ್ಲ, ಇವತ್ತರೇ ಬರ್ತೀಯೋ ಇಲ್ಲೋ..?’ ಅಂದಾಗ ಅಂವಾ ನಕ್ಕೋಂತ ’ನಿನ್ನೆ ನೀರ ತಗೊಂಡು ಬಂದದ್ದೂ ಆಯ್ತು, ಸುರವಿದ್ದೂ ಆಯ್ತು..’ ಅಂದಾಗ ಎಲ್ಲಪ್ಪ ಗಡಬಡಿಸಿ ’ಎಲ್ಲಿ ಸುರದಿ ಮಾರಾಯಾ..? ಹಂಗ ಮಾಡಬ್ಯಾಡಪೋ.. ಪುಣ್ಯ ಬರತೈತಿ ಮನ್ಯಾಗ ಕುಡಿಲಾಕ ಒಂದು ತಂಬಗಿ ಸೈತ ನೀರಿಲ್ಲ. ನಿರ್ವಾ ಇರಲಾರದಕ ಎಲ್ಲರೂ ಆ ಸವುಳ ಬಾವಿ ನೀರ ಕುಡಿಯಾಕತ್ತೀವಿ.’ ’ನಿಮಗ ಅದರೇ ಐತಿ ಇಲ್ಲೇ ಪಕ್ಕದ ಸುಣ್ಣಳ್ಳಿಯೊಳಗ ಹನಿ ಹನಿ ನೀರಿಗೂ ಚಡಪಡಸಕತ್ತಾರ. ಒಂದು ಕೊಡಾ ನೀರಿಗಿ ಹತ್ತು ರೂಪಾಯಿ ಗೊತೈತಾ..?’ ಅಂದಾಗ ಎಲ್ಲಪ್ಪ ಮತ್ತ ಚಿನ್ನಪ್ಪ ಇಬ್ಬರೂ ಒಬ್ಬರ ಮುಖಾ ಒಬ್ಬರು ನೋಡಿ ’ನಮ್ಮ ಹತ್ತರ ಅಟ್ಟೆಲ್ಲಾ ರೊಕ್ಕಾ ಎಲ್ಲಿ ಐತಿ ಮಾರಾಯಾ..? ಹಂಗ ಮಾಡಬ್ಯಾಡ ಪುಣ್ಯ ಬರತೈತಿ. ಮೊಹರಂ ವ್ಯಾಳೆದೊಳಗ ಚಿನ್ನಪ್ಪ ಎರಡು ಚುಲೋ ಹದಾ ಇರೋ ತೊಗಲ ತಗದು ಹಲಗೀ ಮಾಡಿ ಕೊಡ್ತಾನ. ಕುಡಿಲಿಕ್ಕ ಒಂದು ಕೊಡಾ ನೀರಿದ್ದರ..?’ ’ನಿಂದೊಳ್ಳೆ ಐತಲ್ಲ ಇಡೀ ಟ್ಯಾಂಕರ ಉಲ್ಟಾ ಬಿಚ್ಚಿ ಹುಡಕದರೂ ಔಷಧಿಗೂ ಒಂದು ತಂಬಗಿ ನೀರ ಸಿಗುವಂಗಿಲ್ಲ.’ ಅಂತ ದಾವಲಸಾಬ್ ಅಂದದ್ದೇ ಎಲ್ಲಪ್ಪಗ ತುಸು ಬ್ಯಾಸರಾಗಿ

’ಶನಿವಾರಕೊಮ್ಮ ನಮ್ಮ ಕೇರಿಗಿ ಒಂದು ಟ್ಯಾಂಕರ್ ಅಂತ ಮಾತಾಗಿತ್ತು ಹೌದಿಲ್ಲೋ..?’

’ಯಾರ ಜೋಡಿ ಮಾತಾಗಿತ್ತು..?’

’ಎಮ್ಮೆಲ್ಲೆ ಶಂಕ್ರಪ್ಪನವರ ಎದುರ ಅವತ್ತ ನೀನೇ ಹುಂ ಅಂದಿದ್ದೆಲ್ಲ’

’ಈಗ ಅದೇ ಶಂಕ್ರಪ್ಪನವರೇ ಒಂದು ಟ್ಯಾಂಕರ್ ನೀರ ತಮ್ಮ ಬದನೀಗಿಡದ ತೋಟಕ್ಕ ಹಾಕಸಕೊಂಡರು ಇದಕ್ಕೇನಂತಿ..?’

’ಏನು ಅನ್ನೂದು ಮಾರಾಯಾ ದೊಡ್ಡ ಮಂದಿ ಏನರೇ ಅಂದ್ರ ನಮ್ಮನ್ನ ಕೇಳ್ತಾರಾ..? ಕುಡಿಯಾಕ ನೀರ ಕೊಟ್ಟರ ಸಾಕಾಗೈತಿ’

’ಇದನ್ನ ಅಲ್ಲಿ ಹೋಗಿ ಹೇಳು. ನನ್ನ ಮುಂದ ಹೇಳದರ ನಾ ಏನು ಮಾಡಂವ’

’ಅದೂ ಖರೆ ಐತಿ ಬಿಡಪಾ, ನೀ ಅರೇ ಏನು ಮಾಡಂವ’ ದಾವಲಸಾಬ ಟ್ಯಾಂಕರ್ ತಗೊಂಡು ಅಲ್ಲಿಂದ ನಡದ. ಎಲ್ಲಪ್ಪನ ಹೆಂಡತಿ ಹನುಮವ್ವ ದವಾಖಾನಿ ಹಿಂದಿರೋ ಸವುಳ ಬಾವಿಯಿಂದ ಒಂದು ಕೊಡಾ ನೀರ ತಗೊಂಡು ತಲಿ ಮ್ಯಾಲ ಇಟ್ಗೊಂಡು ಏನೋ ವಟವಟ ಅನ್ಕೊಂತ ಬಂದಳು. ’ನಮ್ಮ ನಸೀಬದಾಗ ಸಿಹಿ ನೀರು ಕುಡಿಯೂದು ಬರದಿಲ್ಲ, ಸುಳ್ಳೇ ಯಾರಿಗಂದು ಏನು ಮಾಡೂದೈತಿ..?’ ಅನ್ಕೊಂತ ಮನಿ ಕಡಿ ನಡದಳು. ಇವರ ಕೇರಿ ದಾಟಿ ತುಸು ಮುಂದ ಹೋದರ ಒಂದು ಲಕ್ಷ್ಮೀ ಗುಡಿ ಇತ್ತು ಅದಕ್ಕ ತಾಗಿರೋ ತ್ವಾಟಾನೇ ಎಮ್ಮೆಲ್ಲೆ ಶಂಕರಪ್ಪಂದು. ಅವರದೊಂದು ಸಿಹಿ ನೀರಿನ ಬಾವಿ ಆದರ ಈ ಕೆಳಗಿನ ಕೇರಿ ಮಂದಿ ಆ ಬಾವ್ಯಾಗ ಇಳಿಯೂವಂಗಿರಲಿಲ್ಲ. ಪಂಪ್ ಹಚ್ಚದಾಗ ಮ್ಯಾಲ ಕಾವಲಿಯೊಳಗ ನೀರ ಬೀಳೂ ಮುಂದ ಒಂದು ಕೊಡಾ ಹಿಡಕೊಂಡು ಬರೂದಿತ್ತು. ಈಗ ಆ ಬಾವಿನೂ ಬರಗಾಲದ ಹೊಡತಕ್ಕ ತಳ ಕಂಡಿತ್ತು. ಇಲೆಕ್ಷನ್ ಟೈಮದೊಳಗ ಕೆಳಗಿನ ಕೇರಿ ಮಂದಿಗಿ ನೀರ ಒಯ್ಯಲಾಕ ಅನುಕೂಲ ಆಗೂವಂಗ ಒಂದು ಸಿಮೆಂಟ್ ಟ್ಯಾಂಕ್ ಕಟ್ಟಿಸಿ ಪಂಪ್ ಹಚ್ಚಿ ಅದರೊಳಗ ನೀರ ಬೀಳೂವಂಗ ಮಾಡಿದ್ದ. ಇಲೆಕ್ಷನ್ ಮುಗದು ಕಟಾಕಟಿ ವೋಟಲ್ಲಿ ಆರಿಸಿ ಬಂದದ್ದೇ ತಡ ಮುಂದ ಒಂದು ತಿಂಗಳದೊಳಗ ಬಾವಿ ದಾರೀಗಿ ಮುಳ್ಳ ಹಚ್ಚಿಸಿಬಿಟ್ಟಿದ್ದ. ಅದೂ ಅಲ್ಲದೇ ಅಲ್ಲಿ ಇರೋ ಆಳು ಮನುಷ್ಯಾರಿಗಿ ಕೇಳಗಿನ ಕೇರಿಯವರು ಯಾರೇ ಬಂದರೂ ಒಂದು ತಂಬಗಿ ಸೈತಾ ನೀರ ಕೊಡಬ್ಯಾಡ್ರಿ ಅಂತ ಹುಕುಂ ಮಾಡಿದ್ದ. ದೆವ್ವಿನಂಥಾ ಎರಡು ನಾಯಿಗಳನ್ನ ಯಾವಾಗಲೂ ಬಿಚ್ಚೇ ಇಟ್ಟಿರತಿದ್ದ. ಹೀಂಗಾಗಿ ಯಾವ ನರಪಿಳ್ಳೆನೂ ಆ ಎಮ್ಮೆಲ್ಲೆ ತೋಟದ ಸಮೀಪ ಸೈತ ಹೋಗುವಂಗಿರಲಿಲ್ಲ.

      *2*

ಈ ಪರಿ ಕುಡಿಯೂ ನೀರಿಗಿ ಸಿಂದಗಿಯೊಳಗ ಎಂದೂ ಹಾಹಾಕಾರ ಆಗಿರಲಿಲ್ಲ. ಇದು ಯಾಕ ಹೀಂಗ..? ಅಂತ ವೀರಭದ್ರ ದೇವರ ಗುಡಿ ಪೂಜಾರಿ ಸ್ವಾಮಿ ಚಂಡ್ರಯ್ಯನ್ನ ಕೇಳಿದ್ದೇ ಅಂವಾ ಹಿಂದಿನ ವರ್ಷ ಮಹಾನವಮಿ ವ್ಯಾಳೆದೊಳಗ ದೇವಿ ಕೂಡಸಲಿಲ್ಲ, ಅದಕ್ಕೇ ಅಕಿ ಶಾಪ ಕೊಟ್ಟಾಳ ಅಂದಾಗ, ಸಿಂದಗಿ ಬಿಡು, ಸುತ್ತ ಮುತ್ತಲ್ಲಿನ ಹಳ್ಳಿಗೋಳು ಏನು ಪಾಪಾ ಮಾಡಿದ್ವು..? ಅಂತ ಮರು ಪ್ರಶ್ನೆ ಮಾಡಿದ್ದಕ ಸ್ವಾಮಿ ಚಂಡ್ರಯ್ಯ ತನ್ನ ಮೈಯಾಗೇ ದೇವರು ಬಂದವರಂಗ ಕಣ್ಣು ಕೆಂಪಗ ಮಾಡಕೊಂಡು, ಸೂಳಿ ಪಾಪ ಸನ್ಯಾಸಿಗಿ ಅಂತ ಕೇಳಿರಿಲ್ಲೋ.. ಅಂದಿದ್ದ. ಖರೆ ಹಕೀಕತ್ ಏನಂದ್ರ ದೇವಿ ಕೂಡಸದಾಗ ಆ ಒಂಬತ್ತು ದಿನ ಸ್ವಾಮಿ ಸಂಪಾಗಿರತಿದ್ದ. ಅದು ತಪ್ಪತಲ್ಲ.. ಅನ್ನೋ ತಾಪದಿಂದಾಗಿ ಹಂಗ ಹೇಳತಿದ್ದ. ಹಿಂದೊಮ್ಮ ಈ ಚಂಡ್ರಯ್ಯ ಗುಡಿ ಹಿಂದಿನ ಗವಿಯೊಳಗ ಹಗಲ ಹೊತ್ತಿನೊಳಗೇ ಮದರಿ ಸಂಗಣ್ಣನ ಹೆಂಡತಿನ್ನ ಗಟ್ಟಿ ಆಗಿ ಹಿಡಕೊಂಡು ಬಿಟ್ಟಿದ್ದ. ಆ ಹೆಂಗಸು ಜೋರಾಗಿ ಲಬೊಲಬೊ ಅಂತ ಹೊಯ್ಕೊಂಡ ಮ್ಯಾಲ ಮಂದಿ ಸೇರಿದ್ದೇ ತಡ ಚಂಡ್ರಯ್ಯ ಒಂದು ಸವನ ಜೋಲೀ ಹೊಡ್ಯಾಕ ಶುರು ಮಾಡಿದ್ದೇ ಅಲ್ಲಿ ನೆರೆದವರೆಲ್ಲಾ ಅಜ್ಜನ ಮೈಯಾಗ ದೇವರ ಬಂದೈತಿ ಅಂತ ಹತ್ತು ತೆಂಗಿನಕಾಯಿ ಒಡದಿಂದ ಚಂಡ್ರಯ್ಯ ಶಾಂತ ಆಗಿದ್ದ. ಎಲ್ಲಾ ದೇವರ ಮ್ಯಾಲ ಹಾಕೊಂಡು ಸ್ವಾಮಿ ಅರಾಮಾಗಿದ್ದ. ಇಂಥಾ ಸ್ವಾಮಿ ಗುಡಿ ಪೂಜಾರಕಿ ಮಾಡಾಕತ್ತೇ ಇಪ್ಪತ್ತು ವರ್ಷದ ಮ್ಯಾಲಾಗಿತ್ತು. ಉಪಜೀವನಕ ಅಂತ ಎರಡೆಕರೆ ಗುಡಿ ಹಿಂದಿನ ಜಾಗಾ ಈ ಚಂಡ್ರಯ್ಯಗ ಬಿಟ್ಟುಕೊಟ್ಟಿದ್ದರು. ಅಂವಾ ಅದನ್ನ ಎಮ್ಮೆಲ್ಲೆ ಶಂಕ್ರಪ್ಪನ್ನ ಹಿಡಕೊಂಡು ಎನ್ನೇ ಮಾಡಸಿ ಸೈಟ್ ಮಾಡಿ ಕೋಟಿಗಟ್ಟಲೆ ದುಡ್ಡ ಮಾಡಕೊಂಡು ಕೊರಳಾಗ ಎರಡು ತೊಲಿ ಬಂಗಾರ ಚೈನ, ಕೈಯಾಗ ಎರಡು ಬೆರಳಿಗಿ ಒಂದೊಂದು ತೊಲಿ ಉಂಗುರ ಹಾಕೊಂಡು ಗುಡಿಯಿಂದ ಮನಿಗಿ ಓಡ್ಯಾಡಲಿಕ್ಕ ಒಂದು ಕಾರು, ಅದಕ್ಕೊಬ್ಬ ಡ್ರೈವರ್ ಇಟಗೊಂಡು ಬೇಷ ಗಾಂವಾಗಿದ್ದ. ಈ ಸ್ವಾಮಿಗಿ ಕುಡಿಯೂ ನೀರಿಂದು ಯಾವ ತೊಂದರೆನೂ ಇರಲಿಲ್ಲ. ಮನ್ಯಾಗೇ ಒಂದು ಬೋರ್ ಹಾಕಸಿದ್ದ. ನೀರೂ ಚುಲೋ ಬಿದ್ದಿತ್ತು. ತನ್ನ ಮನಿಗಿ ಬೇಕಾದಷ್ಟು ನೀರು ಇಂಥಾ ಬರಗಾಲದೊಳಗೂ ಆ ಬೋರ್ ಹರಸತಿತ್ತು. ತನಗ ಸಾಕಾದ ಮ್ಯಾಲ ಹಿಂದಿನ ಬಾಗಿಲಾ ತಗದು ಒಂದು ಟ್ರಿಪ್‌ಗೆ ಐದು ನೂರು ರೂಪಾಯಿಯಂಗ ಉಡುಪಿ ಹೊಟೇಲಿಗೆ ನೀರ ಮಾರತ್ತಿದ್ದ. ಊರಾಗಿನ ಮಂದಿ ಅಂವಾ ಹೊಂಟರ ಸಾಕು ನೀರು ಮಾರೋ ಪೂಜಾರಿ ಹೊಂಟಾನೋಡು ಅಂತ ಅವನ ಕಿವಿಗಿ ಬೀಳೂವಂಗ ಹೇಳದ ಮ್ಯಾಲೂ ಅಂವಾ ತಲಿ ಕೆಡಸಕೋತಿರಲಿಲ್ಲ. ಅದಕೂ ದೇವರ ಆಜ್ಞೆ ಆಗೇದ ಅಂತಿದ್ದ. ಒಂದು ಕಡಿ ಎಮ್ಮೆಲ್ಲೆ ಇನ್ನೊಂದು ಕಡಿ ಈ ಪೂಜಾರಿ ಮತ್ತ ಊರಾಗಿನ ಒಂದಿಷ್ಟು ಅಂಗಡಿಕಾರರು ಬಿಟ್ಟರ ಇಡೀ ಊರಿಗೂರೇ ನೀರಿಗಾಗಿ ಹಪಾಪಿತನ ಮಾಡತಿತ್ತು. ಇದೇ ಎಮ್ಮೆಲ್ಲೆ ಇಲೆಕ್ಷನಕ ನಿಲ್ಲೂ ಮೊದಲ ಪ್ರತಿ ಹಳ್ಳಿಯೊಳಗೂ ನಿಮ್ಮ ಊರಿಗಿ ಶಾಶ್ವತ ಕುಡಿಯುವ ನೀರಿನ ಯೋಜನೆ ಮಾಡಸೇ ಮಾಡಸ್ತೀನಿ ಅಂತ ಆಶ್ವಾಸನೆ ಕೊಡಕೊಂತ ಬಂದಿದ್ದ. ಈಗ ನೋಡದರ ಕೆಳಗಿನ ಕೇರಿಗಿ ಹೋಗೂ ನೀರ ಸೈತ ಇವನ ಒಡ್ಡಲಕ ಸಾಲದಂಗ ಆಗಿತ್ತು. ಇವನ ಮನ್ಯಾಗ ನೀರ ತುಂಬಕೊಂಡ ಮ್ಯಾಲ ಹೆಚ್ಚಾಗಿ ಅದನ್ನ ಮನಿ ಮುಂದಿನ ಗಾರ್ಡನಕ ಬಿಡತ್ತಿದ್ದರು. ಆ ಪೈಪಿನಿಂದ ದಬದಬಾ ಅಂತ ನೀರು ಹರದು ಹೋಗೂದನ್ನ ಆಜೂ ಬಾಜೂ ಮನಿಯವರು ಬಾಯಿ ಬೆಳ್ಳಗ ಮಾಡಕೊಂಡು ನಿಂತು ನೋಡತಿದ್ದರು. ಒಬ್ಬರಿಗೂ ಒಂದೆರಡು ಕೊಡಾ ನೀರ ಬೇಕಾದರ ತಗೊಂಡು ಹೋಗರಿ ಅಂದಂವಲ್ಲ. ಅವನ ಮನ್ಯಾಗ ಅಡುಗೆ ಕೆಲಸಾ ಮಾಡೊ ಶಿವರಾಯಗೂ ಎರಡು ಕೊಡಾ ಕೊಡಂವಲ್ಲ. ನಿಮ್ಮ ಓಣಿಯೊಳಗ ಇವತ್ತ ಟ್ಯಾಂಕರ ಬರ್ತೈತಿ ಅಂತ ಸ್ಟೈಲಾಗಿ ಹೇಳತಿದ್ದ. ಹಂಗ ಎಮ್ಮೆಲ್ಲೆ ಹೇಳೂ ಮುಂದ ಶಿವರಾಯ ಬಾಯಿ ಒಣಗಿಸಿಕೊಂಡು ಗಾರ್ಡನ್‌ಗೆ ಹರಿದುಹೋಗೋ ನೀರ ನೋಡತಿದ್ದ. ಶಿವರಾಯ ಅವನ ಹೆಂಡತಿ ಮತ್ತ ಮಕ್ಕಳು ಎಲ್ಲರೂ ಶಂಕ್ರಪ್ಪಗೇ ವೋಟ್ ಹಾಕಿದ್ದರು. ಆವಾಗಿದ್ದ ಶಂಕ್ರಪ್ಪೋರು ಈಗಿಲ್ಲ ಅಂತ ಖುದ್ದ ಶಿವರಾಯನೇ ತನಗ ಪರಿಚಯ ಇರೋ ಬಾಳ ಮಂದಿ ಮುಂದ ಹೇಳಿರೂದಿತ್ತು. ಎಮ್ಮೆಲ್ಲೆ ಚೇಲಾ ಶ್ರೀಕಾಂತ ಒಂದು ದಿವಸ ನಿಮ್ಮ ಮನ್ಯಾಗ ಅಡುಗೆ ಮಾಡೊ ಶಿವರಾಯ ನಿಮ್ಮ ಬಗ್ಗೆ ಊರಾಗ ಇಲ್ಲದೊಂದು ಸುಳ್ಳದೊಂದು ಹೇಳಿ ನಿಮ್ಮ ವಾಹಿನಿ ಕೆಡಸಾಕತ್ತಾನ ಅಂದದ್ದೇ ಅವತ್ತೇ ಹಿಂದ ಮುಂದ ಯೋಚನೆ ಮಾಡದೇ ಶಿವರಾಯನನ್ನ ಕೆಲಸದಿಂದ ತಗದಿದ್ದ. ಶಿವರಾಯ ಎಮ್ಮೆಲ್ಲೆ ಮನೆ ಎದುರಿರೋ ವೀರಭದ್ರೇಶ್ವರ ಖಾನಾವಳಿಯೊಳಗ ಕೆಲಸಕ್ಕ ಸೇರಿದ್ದ. ಮನಿಗಿ ಹೋಗೂ ಮುಂದ ಆ ಖಾನಾವಳಿಯೊಳಗಿಂದೇ ಒಂದು ಕೊಡಾ ನೀರ ತಗೊಂಡು ಹೋಗತ್ತಿದ್ದ. ಹಂಗ ಹೋಗೂಮುಂದ ಬೇಕಂತ ಹೇಳಿ ಎಮ್ಮೆಲ್ಲೆ ಮನಿ ಕಡಿ ನೋಡಿ, ಆ ನೀರ ಕೊಡಾ ಹೆಗಲಮ್ಯಾಲ ಇಟ್ಗೊಂಡು ಗತ್ತಿನ್ಯಾಗ ನಡೀತಿದ್ದ. ತುಸು ಭುಜ ಕುಣಿಸಿ ಆ ಕೊಡಾ ನೀರ ತುಂಬಿದ್ದೈತಿ ಅಂತ ತುಸು ನೀರ ತುಳುಕಿಸಿ ತೋರಸತಿದ್ದ. ಸಿಂದಗಿಯೊಳಗ ಆ ವರ್ಷ ಬಾಳ ದೊಡ್ಡ ಬರಗಾಲ. ಒಂದು ಕೊಡಾ ನೀರಿದ್ದರ ಅವರು ಬಾಳ ಶ್ರೀಮಂತರು ಅನ್ನೂವಂಗ ಪರಿಸ್ಥಿತಿ ಇತ್ತು. ಈ ಬರಗಾಲಕ ಎದಿ ಕೊಟ್ಟು ಬದುಕು ಮಾಡೂದು ನೀಗಲಾರದ ಮಂದಿ ರತ್ನಾಗಿರಿ, ಗೋವಾ ಕಡೆಗೆ ಕೂಸು-ಕುನ್ನಿ ಕಟಗೊಂಡು ಗುಳೆ ಹೋಗಿದ್ದರು.

 *3*

ಕೆಳಗಿನ ಕೇರಿಯೊಳಗ ಜನರಿಗೆ ಕುಡಿಲಿಕ್ಕ ಚುಲೊ ನೀರ ಸಿಗಲಾರದಕ್ಕ ಮನಿಗೊಬ್ಬರು ಜಡ್ಡ ಬಂದು ಬೀಳೂವಂಗಾಯ್ತು. ಸರ್ಕಾರಿ ದವಾಖಾನಿ ಹಿಂದಿರೋ ನೀರು ಬರೀ ಸವಳು ಅಷ್ಟೇ ಅಲ್ಲ, ಬಾಳ ಹೊಲಸ ನೀರು. ಅದನ್ನ ಕಾಯಿಸಿ ಆರಿಸಿಕೊಂಡೂ ಕುಡಿಯುವಂಗಿರಲಿಲ್ಲ. ದನಕರುಗಳು ಸೈತಾ ಕುಡೀಲಾಕ ಹಿಂದಾಮುಂದ ನೋಡತಿದ್ವು. ಮೊದಲ ವಾರಕ್ಕೊಮ್ಮರೆ ಚುಲೊ ಕುಡಿಯುವ ನೀರ ಬರತಿತ್ತು ಈಗ ಅದೂ ಇಲ್ಲ. ಟ್ಯಾಂಕರ್ ಕೆಳಗಿನ ಕೇರಿಯೊಳಗ ಬರೂದೇನೋ ಹೌದು, ಆದರ ಖಾಲಿ ಆಗಿ. ತುಂಬಿದ ಟ್ಯಾಂಕರ್ ಸೀದಾ ಎಮ್ಮೆಲ್ಲೆ ತೋಟಕ್ಕ ಹೋಗಿ ಖಾಲಿ ಆಗ ತಿರುಗಿ ಬರತಿತ್ತು. ಕೆಳಗಿನ ಕೇರಿ ತಳವಾರ ತುಳಜಪ್ಪ ಎಮ್ಮೆಲ್ಲೆ ಹೊಲದೊಳಗೇ ಕೆಲಸಾ ಮಾಡತಿದ್ದ ಅನ್ನೂ ಕಾರಣಕ್ಕ ಒಂದೆರಡು ಕೊಡಾ ಚುಲೊ ಕುಡಿಯೂ ನೀರ ಸಿಗತಿದ್ವು. ಹೀಂಗಾಗಿ ಓಣಿಯೊಳಗಿನ ಎಲ್ಲಾ ಮಂದಿ ತುಳಜಪ್ಪನ ಮನಿ ಮುಂದ ಜಡ್ಡಿನವರ ಸಲಾಗಿ ಒಂದು ಗ್ಲಾಸ ಚುಲೊ ನೀರಿಗಾಗಿ ಗುಂಪಾಗಿ ನಿಲ್ಲತಿದ್ದರು. ಆ ತುಳಜಪ್ಪನ ಅಣ್ಣ ಪರಸಪ್ಪ ಜಡ್ಡ ಬಂದು ಹಾಸಗಿ ಹಿಡದು ತಿಂಗಳಾಗಿತ್ತು. ಅವನಿಗಿ ಕುಡಿಲಿಕ್ಕ ಸಿಹಿ ನೀರೇ ಬೇಕು. ತಪ್ಪಿ ಏನಾರೆ ಅವನಿಗಿ ಆ ದವಾಖಾನಿ ಹಿಂದಿನ ಸವಳು ಬಾವಿ ನೀರ ಕೊಟ್ಟರ ಅವನ ಕಥಿ ಮುಗದಂಗೇ ಅಂತ ಡಾಕ್ಟರು ಹೇಳಿದ್ದರು. ಹೀಂಗಾಗಿ ಪರಸಪ್ಪನ ಮಗಳು ರುಕುಮಿ ಕೊಡಾ ತಗೊಂಡು ಟ್ಯಾಂಕರ್ ಬಂದಿದ್ದೇ ತಡ ಎಮ್ಮೆಲ್ಲೆ ತೋಟದ ಕಡಿ ಬರತಿದ್ದಳು. ದಾವಲಸಾಬ ಓಡಿಬಂದು ಅಕಿ ಕೈಯಾಗಿನ ಕೊಡಾ ಇಸಕೊಂಡು ಒಂದು ಕೊಡಾ ನೀರು ತುಂಬಿ ಕೊಟ್ಟು, ಆ ಕೊಡಾ ತೋಟದ ಬಾಂದಾ ದಾಟೂಮಟ ತಾನೇ ಹೊತಗೊಂಡು ಅಕಿನ್ನ ಕಳಿಸಿಕೊಡತಿದ್ದ. ಹಿಂಗ ನೀರ ಕೊಟ್ಟು ಕಳಿಸೂಮುಂದ ಕಬ್ಬಿನ ತೋಟದೊಳಗ ಅಕಿನ್ನ ಕರಕೊಂಡು ಹೋಗಿ ತುಸು ಹೊತ್ತಿನ ಮ್ಯಾಲ ತಿರುಗಿ ಬರತಿದ್ದ. ರುಕುಮಿ ತನ್ನ ಸೀರಿ ಸರಿ ಮಾಡ್ಕೊಂತ, ಹಂಗೇ ಹಲ್ ಕಿಸ್ಕೊಂತ ಹೊಳ್ಳಿ ನೊಡ್ಕೊಂತ ಹೋಗತಿದ್ದಳು. ತುಳಜಪ್ಪಗ ಅವರಿಬ್ಬರೂ ಕಬ್ಬಿನ ಗದ್ದಿಯೊಳಗ ಹೋಗೂದು ನೋಡಿ ಎದಿಯೊಳಗ ಮುಳ್ಳು ಚುಚ್ಚದಂಗ ಆಗತಿತ್ತು ದಾವಲಸಾಬ  ನಕ್ಕೊಂತ ತುಳಜಪ್ಪ ಮಾಂವಾ ಅಂದಾಗಂತೂ ಅಂವಗ ಮತ್ತೂ ಸಿಟ್ಟ ಬರತಿತ್ತು. ಆದರ ಆ ಸಿಟ್ಟು ದವಡೀ ಬಿಟ್ಟು ಕೆಳಗ ಇಳಿಯೂವಂಗಿಲ್ಲ ಅಂತ ದಾವಲಸಬಗ ಗೊತ್ತಿತ್ತು.

ಅವತ್ತ ಲಕ್ಕಮ್ಮನ ಗುಡಿಯೊಳಗ ಕೆಳಗಿನ ಕೇರಿ ಮಂದಿ ಎಲ್ಲಾ ಕುತಗೊಂಡು ನೀರಿಂದು ತಮ್ಮ ಕೇರಿಗಿ ಹಿಂಗೇ ಆದರ ಹ್ಯಾಂಗ..? ನಾವೂ ಎಟ್ಟೇ ಆಗಲಿ ಇದೇ ಊರವರು.. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯನೂ..? ತಿನ್ನಾಕ ಇಲ್ಲಾಂದ್ರ ನಡೀತೈತಿ ಕುಡಿಲಕ್ಕ ನೀರೇ ಇಲ್ಲಾಂದ್ರ ಹ್ಯಾಂಗ? ಅಂತ ಕಟಕರ ಎಲ್ಲಪ್ಪ, ಸಮಗಾರ ಚಿನ್ನಪ್ಪ, ಬ್ಯಾಡರ ಎಂಕಣ್ಣ, ತಳವಾರ ಮುದುಕಪ್ಪ ಎಲ್ಲರೂ ಅಲ್ಲಿ ಸೇರಿ ಮಾತಾಡತಿದ್ದರು. ಅವರೆಲ್ಲರ ನಡುವ ಚಕಮುಕಳಿ ಹಾಕೊಂಡು ಮುನಿಸಿಪಾಲ್ಟಿ ಮೇಂಬರ್ ಮಾದರ ಯಮನಪ್ಪ ಕುಂತಿದ್ದ. ಎಲ್ಲರೂ ಕೂಡಿ ಅಂವಗೇ ಬೆನ್ನಿಗಿ ಬಿದ್ದರು. ಏನರೇ ಮಾಡಿ ಒಂದು ಗತಿ ಕಾಣಸಬೇಕು. ಕೂಸು-ಕುನ್ನಿ ಇರೋ ಬಾಣತೇರಿಗಿ, ಜಡ್ಡು ಜಾಪತ್ರಿ ಇರೋ ವಯಸ್ಸಾದವರಗಿ ಆ ಸವಳು ನೀರು ಕುಡಿಲಿಕ್ಕ ಆಗಲ್ಲ, ಈಗ ಆ ಬಾವಿ ನೀರು ಮತ್ತೂ ಹೊಲಸ ಆಗೈತಿ. ನಾವೇನು ಮತ್ತಮತ್ತೊಂದು ಏನಾರೇ ಕೇಳಾಕತ್ತೀವಾ.? ಕುಡಿಲಾಕ ಚುಲೋ ನೀರು, ಉಳಿದ ಕೇರಿಗಳಿಗೆಲ್ಲಾ ಟ್ಯಾಂಕರ್ ಮೂಲಕ ಹಾಕೋ ನೀರೇ ನಾವೂ ಕೇಳೂದು. ಹಿಂಗೆಲ್ಲಾ ತಲಿಗೊಬ್ಬರು ಮಾತಾಡದ ಮ್ಯಾಲ ಯಮನಪ್ಪ ’ಇವತ್ತ ಎಮ್ಮೆಲ್ಲೆ ಅವರ ಮನಿಕಡಿ ಹೋಗೂಣು. ಹಕೀಕತ್ ಹೇಳೋಣ ಅಟ್ಟಾಗಿನೂ ಏನೂ ಪರಿಹಾರ ಸಿಗಲಿಲ್ಲ ಅಂದ್ರ ಹೋರಾಟ ಮಾಡೋಣ’ ಎಂದೆಲ್ಲಾ ಯಮನಪ್ಪ ಹೇಳಿ, ಎಮ್ಮೆಲ್ಲೆ ಮನಿಗಿ ಒಂದು ಪೋನ್ ಮಾಡಿ ಅವರು ಸಂಜೀ ಮುಂದ ಮನ್ಯಾಗ ಇರ್ತಾರೋ ಇಲ್ಲೋ ಅಂತ ಖಾತ್ರಿ ಮಾಡಿಕೊಂಡ. ’ಯಾರಾರು ಹೋಗೂದು ಅಂತ ಮೊದಲೇ ಪ್ಲ್ಯಾನ್ ಮಾಡಕೋರಿ, ಅಲ್ಲಿ ತಲಿಗೊಂದು ಮಾತಾಡಬ್ಯಾಡ್ರಿ, ಯಾರರೇ ಒಬ್ಬರು ಹಿರೇರು ಮಾತಾಡ್ರಿ. ಕುಡಿಯೂ ನೀರಿಂದು ಬಿಟ್ಟು ಬ್ಯಾರೇ ಏನೂ ಮಾತಾಡಬ್ಯಾಡ್ರಿ. ಅವರು ಏನರೆ ಸಿಟ್ಟೀಲೇ ಎರಡು ಮಾತು ಅಂದರೂನೂ ಅದನ್ನ ಯಾರೂ ಸೀರಿಯಸ್ ಆಗಿ ತಗೊಬ್ಯಾಡ್ರಿ’ ಎಂದೆಲ್ಲಾ ಯಮನಪ್ಪ ಅವರಿಗೆ ಹೇಳಿ ಹೋಗೂ ಟೈಮನ್ನ ಫಿಕ್ಸ್ ಮಾಡಿದ್ದ.

ಎಲ್ಲಪ್ಪ, ಚಿನ್ನಪ್ಪ, ಮುದುಕಪ್ಪ, ಸತ್ತೆಪ್ಪ ಒಟ್ಟ ಹತ್ತಿಪ್ಪತ್ತು ಮಂದಿ ಕೂಡಿ ಎಮ್ಮೆಲ್ಲೆ ಮನಿಗಿ ನಡದರು. ಎಲ್ಲಪ್ಪ ಪಟಕಾ ಸುತಗೊಂಡು ಇದ್ದವರೊಳಗೇ ತುಸು ನೇಟಾಗಿದ್ದ. ಚಿನ್ನಪ್ಪ ಹೊಸಾ ಗಡ್ಡೀ ಮೆಟ್ಟ ಹಾಕೊಂಡು ಹಣಿ ಮ್ಯಾಲ ಕುಂಕುಮ ಇಟಗೊಂಡು ಕೊರಳಾಗ ಒಂದು ತಾಯತ ಕಟಗೊಂಡು ಲಟ್ಟಾ ಹೆಜ್ಜೀ ಹಾಕತಾ ನಡದಿದ್ದ. ಇವರು ಬರೂದು ಮೊದಲೇ ಗೊತ್ತಿತ್ತು. ಹಿಂಗಾಗಿ ಎಮ್ಮೆಲ್ಲೆ ಪಿ.ಎ. ಇವರನ್ನೆಲ್ಲಾ ಆ ಗಾರ್ಡನ್ ಬಾಜೂ ಇರೋ ಬಯಲು ಜಾಗದೊಳಗ ಕುತಗೊಳಿಕ್ಕ ಹೇಳದ. ಮುನ್ಸೀಪಾಲ್ಟಿ ಮೇಂಬರ್ ಯಮನಪ್ಪನರೇ ಕರೀತಾರ ಅಂದರ ಅವನ್ನೂ ಅಲ್ಲೇ ಕೂಡಾಕ ಹೇಳದರು. ’ಎಮ್ಮೆಲ್ಲೆ ಯವರು ಈಗ ಸದ್ಯ ಬರ್ತಾರ’ ಅಂತ ಹೇಳಿ ಹೋದ ಪಿ.ಎ. ಬರಲಿಕ್ಕೇ ಒಂದು ತಾಸು ಐತು. ಒಂದೂವರೆ ತಾಸು ಹಂಗ ಅಲ್ಲಿ ಕೈದ ಮ್ಯಾಲ ಎಮ್ಮೆಲ್ಲೆಯವರ ಮುಖದರ್ಶನವಾಯಿತು. ಎಲ್ಲರೂ ಅವರು ಬಂದದ್ದೇ ಎದ್ದು ನಿಂತು ಬಾಗಿ ನಮಸ್ಕಾರ ಮಾಡದರು. ’ಊರಿನಿಂದ ಸಂಬಂಧಿಗಳು ಬಂದಾರ ಹಿಂಗಾಗಿ ತಡಾ ಐತು, ಏನು ಯಮನಪ್ಪ ಅರಾಮ ಇದಿಯಾ..? ಪೂರ್ತಿ ಠೋಳಿನೇ ಕರಕೊಂಡು ಬಂದೀಯಲ್ಲ..? ಏನು ವಿಶೇಷ’ ಅಂತಾ ಇದ್ದಂಗೆ ಯಮನಪ್ಪನ ಬಾಯಿ ಹಿ..ಹಿ..ಹಿ.. ಅಂತ ಕಿಸಬಾಯಿ ಆಗಿತ್ತು. ’ಸಾಯಿಬರ, ಎಲ್ಲಾ ನಿಮಗ ಗೊತ್ತಿದ್ದಿದ್ದೇ ಐತಿ. ಅದೇ ಕುಡಿಯುವ ನೀರು..’ ಅಂತಾ ಇದ್ದಂಗೆ ಎಮ್ಮೆಲ್ಲೆ ’ನಾ ಏನು ಮಾಡಲಿ ಹೇಳು, ನಿಮ್ಮ ಕೇರಿ ಮಂದಿ ಯಾರೂ ನನಗ ವೋಟು ಕೊಟ್ಟಿಲ್ಲ. ನಮ್ಮ ಮಂದಿ ನನ್ನ ಕೈ ಬಿಡಲಿಲ್ಲ ಅಂತ ನಾ ಆರಿಸಿ ಬಂದೆ.’ ಅಂದಾಗ ಎಲ್ಲಪ್ಪ ಎದ್ದು ನಿಂತು ’ಸಾಯಿಬರ ನಾವು ನಿಮಗ ವೋಟು ಕೊಟ್ಟಿಲ್ಲ ಅಂತ ಹ್ಯಾಂಗ ಅಂತೀರಿ..?’

’ವೋಟ್ ಕೊಟ್ಟೀನಿ ಅಂತ ನೀ ಹ್ಯಾಂಗ ಅಂತೀದಿ..?’

‘……………’

’ಏನೋ ತಪ್ಪಾಗೈತಿ, ಇದೊಂದು ಸಾರಿ ಹೊಟ್ಯಾಗ ಹಾಕೊರಿ’

’ನೋಡು ಯಮನಪ್ಪ, ನಂದೇ ಜನರಿಗಿ ನನಗ ನೀರ ಕೊಡಾಕ ಆಗಾಕತ್ತಿಲ’

’ಯಪ್ಪಾ ನಾವೂ ನಿಮ್ಮ ಊರವರೇ.. ನಿಮದೇ ಜನ.. ಬಾರೀಕಾಲ ನಿಮ್ಮ ಸೇವಾ ಮಾಡಕೊಂಡೇ ಬಂದೀವಿ’

’ನೋಡೊಣ.. ನಾನು ಚೀಫ್ ಆಫೀಸರ್ ಜೋಡಿ ಮಾತಾಡ್ತೀನಿ’

’ಪುಣ್ಯಾ ಕಟಗೊರಿ ಯಪಾ’

’ನೋಡಮ್ಮು ನಾ ಹೇಳಿ ಕಳ್ಸೂತನ ಮತ್ತ ಹಿಂಗ ಬರಬ್ಯಾಡ್ರಿ’ ಅಂತ ಮನಿ ಒಳಗ ನಡದ. ಇವರೂ ಅಲ್ಲಿಂದ ಜಾಗಾ ಖಾಲಿ ಮಾಡದರು.

    *4*

ಅವತ್ತು ಶನಿವಾರ ಮಟ ಮಟ ಮಧ್ಯಾಹ್ನ. ಹನುಮಂತ ದೇವರ ಗುಡಿ ಮುಂದಿನ ಮುನಸೀಪಾಲ್ಟಿ ನಳಾ ಬರೂದಿತ್ತು. ಕುಂಟೋಜಿ ಗುರಲಿಂಗನ ಚಾದ ಅಂಗಡಿ ಹಿಡದು ಇತ್ಲಾಗ  ಸುತಾರ ವೆಂಕೋಬನ ಬೀಡಿ ಅಂಗಡಿ ಮಟ ಕೊಡಾ ಪಾಳಿಗಿದ್ವು. ಪ್ರತಿ ಶನಿವಾರಕೊಮ್ಮ ನೀರ ಬಿಡತಿದ್ದರು. ಒಂದು ಮನಿಗಿ ಎರಡು ಕೊಡದ ಲೆಕ್ಕದಂಗ ಸಾವಿರಾರು ಕೊಡಾ ಅಲ್ಲಿ ಸಾಲಾಗಿ ನಿಂತಿದ್ವು. ಹಿಂಗ ಪಾಳಿಗಿರೋ ಕೊಡಾ ಹಿಂದಾ ಮುಂದ ಆಗಬಾರದು ಅಂತ ಮನ್ಯಾಗಿರೋ ಚುಕ್ಕೋಳನ್ನ ಅಲ್ಲಿ ನೋಡಲಿಕ್ಕ ನಿಲ್ಲಸತಿದ್ದರು. ನಳಾ ಸುಯ್.. ಅಂತ ಹವಾ ಬಿಡಾಕ ಸುರು ಆಗಿದ್ದೇ ಅಲ್ಲಿ ಪಾಳೇಕ ನಿಂತಗೊಂಡಿರೋ ಹುಡುಗರು ಓಡಿ ಹೋಗಿ ನೀರ ಬರೂದೈತಿ ನಳಾ ಹವಾ ಬಿಡಾಕತೈತಿ ಅಂತ ಡಂಗುರ ಸಾರಿ ಬರತಿದ್ದರು. ಇನ್ನೇನು ನಳಾ ಬರೂದೈತಿ.. ಅನ್ನೂದೇ ತಡ, ಓಣ್ಯಾಗಿನ ಹೆಂಗಸರೆಲ್ಲಾ ಓಡಿ ಬರತಿದ್ದರು. ಕೆಲವರಂತೂ ಅವರು ಮನ್ಯಾಗ ಯಾವ ಸ್ಥಿತಿಯೊಳಗ ಇದ್ದರೋ ಅದೇ ಸ್ಥಿತಿಯೊಳಗ ಎದ್ದು ಬರತಿದ್ದರು. ಹಿಂಗಾಗಿ ದಾರಿಯೊಳಗೇ ತಲಿಗೂದಲ ಸರಿ ಮಾಡಕೊಂತ, ತುರಬಾ ಬಿಕ್ಕೋಂತ ಧಾವಿಸಿ ಬರತಿದ್ದರು. ಒಂದು ಸಾರಿ ನಳಾ ಬಂತಂದರ ಆ ನಳದ ಸುತ್ತ ಮುತ್ತ ಜನಾ ಜಾತ್ರಿ. ಒಂದು ಸವನ ಕವಕವ ಅಂತ ಬಡಕೋತಿದ್ವು. ಬಾಯಿ ಸತ್ತ ಹೆಂಗಸರ ಕೆಲಸ ಅಲ್ಲೇನೂ ಇರಲಿಲ್ಲ. ಗಲ ಗಲ ಅಂತ ಗಂಟೀ ಚೌಡೆರಂಗ ಬಾಯಿ ಮಾಡವರದಷ್ಟೇ ಅಲ್ಲಿ ನಡೀತಿತ್ತು. ಅಲ್ಲಿ ಬರೋ ಎಲ್ಲಾ ಹೆಂಗಸರು ಶೇರಿಗೆ ಸವ್ವಾಶೇರು ಅನ್ನೂವಂಗ ಇದ್ದರು. ಅದರಾಗೂ ಮೂರ್‌ನಾಲ್ಕು ಹೆಂಗಸರು  ಬಾಳ ಜಗಳಗಂಟರು ಅಂತ ಫೇಮಸ್ ಆಗಿದ್ದರು. ಅವುಕರ ಬಾಯಿಗಿ ಹತ್ತೂದು ಅಂದ್ರ ಕೆದರಿ ಕ್ಯಾರ ಹಾಕೊಂಡಂಗ ಅಂತ ಎಲ್ಲಾರೂ ಮಾತಾಡತಿದ್ದರು. ಅಗಸರ ಸುಬ್ಯಾನ ಹೆಂಡತಿ ಅನಸವ್ವ, ತಾವರಗಿ ಮೋನಪ್ಪನ ಹೆಂಡತಿ ಮಾದೇವಿ, ಟೇಲರ್ ಸೈಪನನ ಹೆಂಡತಿ ರಾಜಮಾ, ಲೈನಮನ್ ಲಕ್ಕಪ್ಪನ ಹೆಂಡತಿ ಕಮಲವ್ವ ಅವರದೇನಾದರೂ ಜಗಳ ಸುರು ಆದ್ರ ಮುಗೀತು ಒಂದು ಧಾಡಸಿ ದೊಡ್ಡಾಟ ನೋಡದಂಗೇ ಇರತಿತ್ತು. ಇವರ ಜಗಳಾ ಬಿಡಿಸೋ ತಾಕತ್ತು ಸುತ್ತ ನಾಕು ಹಳ್ಳೀಯೊಳಗ ಯಾವ ಗಂಡಸರಿಗೂ ಇರಲಿಲ್ಲ. ಇವುಕರ ಬಾಯಿ ಅನ್ನೂದು ಬೈಗುಳಗಳ ಬಕಾರ ಇದ್ದಂಗ ಅದಕ್ಕಾಗಿನೇ ಎಲ್ಲಾರ ಮನಿಯೊಳಗೂ ನೀರಿಗಿ ಹೋಗೂ ಮುಂದ ಆ ಮಾನಗೇಡಿಗಳ ಬಾಯಿಗಿ ಹತ್ತಬ್ಯಾಡ್ರಿ ಅಂತ ಹೇಳಿ ಕಳಸತಿದ್ದರು. ಇವರ ಬಾಯಾಗ ಸಿಕ್ಕು ಎಂಥೆಂಥವರು ಬೆತ್ತಲೆ ಆಗಿ ಹೋಗ್ಯಾರೋ ಗೊತ್ತಿಲ್ಲ.

ಪಾಳಿಗಿರೋ ಕೊಡಾ ಹಿಂದಾ ಮುಂದಾ ಆಗಿದ್ದೇ ಈ ನಾಕೂ ಹೆಂಗಸರು ನಿಗರಕೊಂಡು ಜಗಳಕ್ಕ ಬರತಿದ್ದರು. ಆ ದಿನ ಮೋನಪ್ಪನ ಹೆಂಡತಿ ಮಾದೇವಿಗೂ ಲೈನಮನ್ ಲಕ್ಕಪ್ಪನ ಹೆಂಡತಿ ಕಮಲವ್ವಗೂ ಬಾಯಿ ಹತ್ತಿತ್ತು. ಅದಕ್ಕ ಕಾರಣ ಏನಂದರ ಕಮಲವ್ವ ತನ್ನ ಮುಂದ ಇರೋ ಕುರುಬರ ಸುಮಿತ್ರಾಳ ಕೊಡಾ ಸರಿಸಿ, ಅಕಿ ಕೊಡಾ ಮುಂದ ಇಟ್ಟಿದ್ದನ್ನ ಮಾದೇವಿ ನೊಡಿದ್ದಳಂತ. ಹಂಗೇ ನಾ ಮುಂದ… ನೀ ಮುಂದ ಅಂತ ಮಾತಿಗಿ ಬಿದ್ದಾಗ ಮಾದೇವಿ, ’ನಾ ಅಂಥಾ ಸೂಳಿ ಅಲ್ಲ. ಇನ್ನೂ ತಾಸ ತಡಾ ಆಗಲಿ ನಾ ಬ್ಯಾರೇ ರಂಡೇರಂಗ ಕೊಡಾ ಮುಂದ ಸರಸಕ್ಕಿ ಅಲ್ಲ’ ಅಂದದ್ದೇ ಕಮಲವ್ವ ’ಯಾವ ಬೋಸ್ಡೆವ್ವನ್ನೂ ಹಗರಿಲ್ಲ. ಯಾರೂ ನೋಡಲಿಲ್ಲ ಅಂದ್ರ ಎಲ್ಲರೂ ಸರಸವರೇ.’

’ಬಾಯಿ ಐತೆಂತ ಹ್ಯಾಂಗ ಬೇಕು ಹಂಗ ಬೊಗಳತೈತಿ’ ಅಂದಿದ್ದೇ ಕಮಲವ್ವ ಸೀದಾ ಮಾದೇವಿ ಮುಂದೇ ಬಂದು ನಿಂತಳು

’ನಿನಗ ನನ್ನ ಹೇಲ ತಿಲ್ಲಾರದೇ ಬೆಳಗೇ ಆಗಲ್ಲ.’

’ಏ ಹುಚ್ ರಂಡೀ.. ನೀ ಊರಮಂದೀದು ತಿನ್ನಾಕಿ ನಾ ಅಲ್ಲ.’

’ಊರಮಂದಿದು ನಾಯಾಕ ತಿನ್ನಲಿ.. ನಿನ್ನ ಗಂಡ ತಿಂತಾನ. ಅದ್ಕೇ ಅಲ್ಲಿ ಹೋಗಿ ಇಟ್ಟಂಗಿ ಭಟ್ಟಿ ಕಲ್ಲೀ ಮಗ್ಗಲಾಗ ಬೀಳ್ತಾನ.’

’ನಿನ್ನ ಗಂಡಂದೇನು ಗೊತ್ತಿಲ್ಲನೂ..? ಸಂತಿ ದಿನ ಕಂಡ ಕಂಡ ಹೆಂಗಸರಗಿಲ್ಲಾ ಕೈ ಮಾಡಿ ಮೆಟ್ಟಲೆ ಹೊಡಸಿಕೊಂಡಿದ್ದು ಇಡೀ ಊರಿಗೂರೇ ಗೊತೈತಿ.’

’ನಿಂದರೇ ಏನು..? ಆ ಗೊಲ್ಲರಂವ ಸೈತ ಸಾಲಲಿಲ್ಲ ನಿನಗ..’

’ನಂದೇನು ಹೇಳ್ತೇ ಹಲ್ಕಟ್ ರಂಡೆ. ಎಮ್ಮೀ ಕಾಯೂ ಮುದುಕಪ್ಪನ್ನೂ ಬಿಡಲಾರದ ಹೆಂಗಸ ನೀನು.’

’ನೋಡದವರಂಗ ಮಾತಾಡಬ್ಯಾಡ ನಿನ್ನ ಕುಂಡೀ ಮ್ಯಾಲ ಒದ್ದೇನು’ ಅಂತ ಅಂದಾಗ ಕಮಲವ್ವ ಓಡಿ ಬಂದು ಸೀರಿ ಮ್ಯಾಲ ಏರಿಸಿ  ಮಾದೇವಿದು ತಲಿ ಕೂದಲ ಹಿಡದು ಹಿಗ್ಗಾ ಮುಗ್ಗಾ ಎಳದಾಡಲಾಕ ಸುರು ಮಾಡದಳು. ಅಲ್ಲಿದ್ದವರೆಲ್ಲಾ ಬಿಡಸಲಿಕ್ಕ ಹೋದಷ್ಟು ಇವರ ಜಗಳ ಬಾಳ ನೇಟಾಗ್ತಿತ್ತು. ಹಿಂದೊಮ್ಮ ಇದೇ ತರ ಜಗಳದೊಳಗ ಕಮಲವ್ವ ತನಗ ಹೊಡದಿದ್ದನ್ನ ನೆನಪು ಮಾಡಕೊಂಡು ಅಗಸರ ಸುಬ್ಯಾನ ಹೆಂಡತಿ ಕಾಲಾಗಿನ ಚಪ್ಪಲಿ ಕೈಗಿ ತಗೊಂಡು ’ಹಾಕು ಆ ರಂಡಿಗಿ’ ಅಂತ ಎರಡೇಟು ಕಮಲವ್ವಗ ಬಿಟ್ಟಳು. ಕಮಲವ್ವಗ ಅದೆಲ್ಲಿದು ಸಿಟ್ಟ ಬಂತೊ ಏನೋ.. ಕಬ್ಬಿಣ ಕೊಡಾ ಎತಗೊಂಡು ಸುಬ್ಯಾನ ಹೆಂಡತಿ ಅನಸವ್ವಳ ತಲಿಗಿ ಟಕ್ಕ್ ಅಂತ ಒಂದೇಟು ಬಿಟ್ಟಳು. ಅಕಿ ತಲಿ ಒಡದು ರಕ್ತ ಅನ್ನೂದು ಬಳಳಳ ಅಂತ ಹಣಿ ಮ್ಯಾಲ ಸೋರಾಕತ್ತತು. ಅಂಗಡಿಯೊಳಗ ಇಸ್ತ್ರಿ ಮಾಡ್ತಿರೋ ಸುಬ್ಯಾ ಓಡಿ ಹೋಗಿ ಪೋಲಿಸರನ್ನ ಕರಕೊಂಡು ಬಂದು ಜಗಳ ಬಗಿಹರಿಸಿದ್ದ. ಸುಬ್ಯಾನ ಹೆಂಡತಿ ಅನಸವ್ವಳನ್ನ ದವಾಖಾನಿಗಿ ಕರಕೊಂಡು ಹೋದರು. ಯಾವಕ್ಕಿದೋ ಒಂದು ಕೊಡಾ ಸರಿಸಿ ಕಮಲವ್ವ ತನ್ನ ಪಾಳಿ ಮುಂದ ಹೋಗಿದ್ದಕ ಈ ಪರಿ ನಳದ ಮ್ಯಾಲ ಒಂದು ದೊಡ್ಡ ಕುರುಕ್ಷೇತ್ರಾನೇ ಆಗಿತ್ತು. ಈ ಥರಾ ಫೈಟಿಂಗ್ ಇದೇ ಮೊದಲೇನು ಅಲ್ಲ ಹಿಂಗ ಬಾಳ ಸಾರಿ ನಡದದ್ದಿತ್ತು. ಒಂದು ಕೊಡಾ ನೀರಿಗಾಗಿ ಇದಕ್ಕಿಂತಾ ದೊಡ್ಡ ದೊಡ್ಡ ಜಗಳ ಇಲ್ಲಿ ನಡದಿದೈತಿ.

 *5*

ಇಡೀ ಊರಿಗೂರೇ ಕೊಡಾ ನೀರಿಗಾಗಿ ಮಾಡಬಾರದ್ದನ್ನೆಲ್ಲಾ ಮಾಡೊವಾಗ ಇತ್ತ ಎಮ್ಮೆಲ್ಲೆ ಶಂಕ್ರಪ್ಪ ಮಾತ್ರ ದಿನ್ನಾ ಗಾರ್ಡನಗೆ ದಬ ದಬ ಅಂತ ಒಂದು ಸವನ ನೀರು ಸುರೀತಿದ್ದ. ಕೆಳಗಿನ ಕೇರಿಯವರಿಗೆ ಮಾತು ಕೊಟ್ಟಿದೇ ಆಯ್ತು ನೀರಂತೂ ಕೊಡಲಿಲ್ಲ. ಆ ದವಾಖಾನಿ ಹಿಂದಿರೋ ಸವುಳು ನೀರಿಗೇ ಅವರು ಒಗ್ಗಿಕೊಂಡರು. ಅವರ ಕೇರಿಗೆ ವಾರಕ್ಕೊಮ್ಮ ಬರಬೇಕಾಗಿರೋ ಟ್ಯಾಂಕರ್ ಬರೂದೂ ಹೌದು.. ಖಾಲಿಯಾಗಿ ಹೋಗೂದು ಹೌದು. ಇದನ್ನೆಲ್ಲಾ ನೋಡಿ ಕೆಳಗಿನ ಕೇರಿಯವರು ಎಮ್ಮೆಲ್ಲೆ ಶಂಕ್ರಪ್ಪಗ ಶಾಪ ಹಾಕಲಿಕ್ಕ ಶುರು ಮಾಡಿದ್ದರು. ಯಾರು ಏನೇ ಹೇಳಿದರೂ ಅವರು ನನಗ ವೋಟು ಕೊಟ್ಟಿಲ್ಲ ನಾಯಕ ನೀರ ಕೊಡಬೇಕು ಅಂತ ಕೇಳಿ ಎಮ್ಮೆಲ್ಲೆ ಮತ್ತೂ ತಾನೇ ಸರಿ ಅನ್ನೂವಂಗ ಮಾತಾಡತಿದ್ದ. ಆ ಕೆಳಗಿನ ಕೇರಿ ಮಂದಿಗಿ ಪಾಠಾ ಕಲಿಸಲಿಕ್ಕೇ ತನ್ನೂರಿಗಿ ಬರಗಾಲ ಬಂದೈತಿ ಅಂತ ತನ್ನ ಪಿ.ಎ. ಮುಂದ ಮಾತಾಡೂದನ್ನ ಅವನ ಮನಿಯೊಳಗ ಈ ಮೊದಲ ಅಡುಗಿ ಕೆಲಸಾ ಮಾಡ್ತಿರೊ ಶಿವರಾಯ ಕೇಳಿದ್ದಿತ್ತು. ಶಿವರಾಯ ಮನಸಿನೋಳಗೇ ಈ ಎಮ್ಮೆಲ್ಲೆ ಎಟ್ಟು ಸಣ್ಣ ಮನುಷ್ಯಾ ಅದಾನಲ್ಲ ಅಂತ ಅಂದ್ಕೊಂತಿದ್ದ. ಎಟ್ಟೋ ಸಾರಿ ಗಾರ್ಡನ್‌ಗೆ ನೀರ ಸಾಕಾಯ್ತು ಅಂತ ಕೆಲಸದಾಳು ಚಂದ್ರಾಮ ಹೇಳದರ ರಾತ್ರಿ ಬಾರಾ ಸುಮಾರ ಮನಿ ಮುಂದಿನ ಗಟಾರಕ ಬಿಡು ಅಂತ ಹೇಳಿಡೋ ಎಮ್ಮೆಲ್ಲೆಗೆ ತನ್ನ ಕೈ ಊಟಾ ಮಾಡಿ ಹಾಕಿರೋ ಬಗ್ಗೆ ಶಿವರಾಯಗ ಬೇಸರಿತ್ತು.

 *6*

ಆ ದಿವಸ ರಾತ್ರಿ ಯಾರೋ ಎಮ್ಮೆಲ್ಲೆ ಮನಿಗಿ ಕನೆಕ್ಟ್ ಆಗಿರೋ ದೊಡ್ಡ ನೀರಿನ ಪೈಪನ್ನ ಮನಿ ಹಿಂದ ಬಂದು ಒಡದಿರೋದಿತ್ತು. ಒಡದ ಪೈಪಿನ ನೀರ ಹ್ಯಾಂಗ ಬೇಕು ಹಂಗ ಹರದು ಗಟಾರ ಸೇರತು. ಅದು ರಿಪೇರಿ ಆಗಲಿಕ್ಕ ಕಮ್ಮೀತ ಕಮ್ಮಿ ಅಂದರೂ ಹದಿನೈದು ದಿನ ಬೇಕಿತ್ತು. ಬೋರವೆಲ್ ನೀರಂತೂ ಬಾಳಂದ್ರ ಬಾಳ ಸಣ್ಣ ಬರ್ತಿತ್ತು. ಎಮ್ಮೆಲ್ಲೆ ಗಾರ್ಡನ್ ಆ ಬಿರುಬಿಸಿಲಿಗೆ  ಒಣಗಿ ಹಳದೀ ಆಗಾಕತ್ತತು. ಟ್ಯಾಂಕರ್ ನಿಂದ ನೀರ ಹಾಕೋ ದಾವಲಸಾಬ ಮದುವಿ ಅಂತ ಊರಿಗಿ ಹೋದಂವ ಬಂದೇ ಇರಲಿಲ್ಲ. ಮನ್ಯಾಗಿರೋ ಎಲ್ಲಾ ಟ್ಯಾಂಕ್ ತಳ ಕಂಡಿದ್ದವು. ತೋಟದೊಳಗಿನ ಸೌತೀಬಳ್ಳಿ ಮತ್ತ ಬದನೀಪಡಾ ಒಣಗಿ ಹೋಗಿದ್ವು. ಹದಿನೈದು ದಿನಾ ಆದರೂ ಆ ಪೈಪ್ ರಿಪೇರಿ ಆಗಲಿಲ್ಲ. ಕುಡಿಲಿಕ್ಕ ಬೇರೆ ಊರಿಂದ ಎರಡು ದಿನಕ್ಕ ಒಂದು ಟ್ಯಾಂಕರ್ ತರಸೂದು ಸಾಲ್ತಿರಲಿಲ್ಲ. ಎಮ್ಮೆಲ್ಲೆ ಫೊನಿನೊಳಗ ಎಲ್ಲರ ಮೇಲೂ ಉರ ಉರದು ಹೈಲಿಕ್ಕ ಶುರು ಮಾಡದ. ’ಇನ್ನೂ ಒಂದು ವಾರ ಅಂದ್ರ ನಾವು ಏನು ಮಾಡಬೇಕು..? ನಾ ಡಿ.ಸಿ. ಗಿ ಕಂಪ್ಲೇಂಟ್ ಮಾಡ್ತೀನಿ. ನಿನ್ನನ್ನ ಸಸ್ಪೆಂಡೇ ಮಾಡ್ಸತೀನಿ’ ಎಂದೆಲ್ಲಾ ಒಂದು ಸವನ ಯಾವುದೋ ಅಧಿಕಾರಿ ಮ್ಯಾಲ ಚೀರಾಡತ್ತಿದ್ದ. ’ನಮ್ಮ ಮನಿ ಮುಂದಿನ ಪೈಪ್ ಒಡದವರು ಯಾರು ಅಂತ ಇವತ್ತಿಗೂ ನಿಮಗ ಹಿಡಿಲಿಕ್ಕ ಆಗಲಿಲ್ಲ ಅಂದ್ರ ಅದ್ಯಾಕ ಪೋಲಿಸ್ ಡ್ಯುಟಿ ಮಾಡ್ತೀರಿ..?’ ಅಂತ ಪೋಲಿಸ್ ಆಫೀಸರ್‌ನ ತರಾಟೆಗೆ ತಗೊಂಡಿದ್ದ. ಅದೇ ವ್ಯಾಳೆದೊಳಗ ವೀರಭದ್ರೇಶ್ವರ ಖಾನಾವಳಿಯೊಳಗಿಂದ ಶಿವರಾಯ ಒಂದು ಕೊಡಾ ನೀರ ತಗೊಂಡು ತನ್ನ ಭುಜದ ಮ್ಯಾಲ ಇಟಗೊಂಡು, ಎಮ್ಮೆಲ್ಲೆ  ಮನಿ ಮುಂದ ಹಾದು ಹೋಗುವಾಗ ಹೀಗೇ ಹೊರಳಿ ಜೋರಾಗಿ ’ಸಾಯಬರ ನಮಸ್ಕಾರ’ ಅಂದಿದ್ದ. ತುಂಬಿದ ಕೊಡಾ ಭುಜದ ಮ್ಯಾಲ ಇಟಗೊಂಡು ಕುಣಸಕೊಂತ, ತುಳಕಸಗೋಂತ ನಡದಿದ್ದ. ಶಿವರಾಯನ ಗತ್ತ ನೋಡಿ ಗಾರ್ಡನಲ್ಲಿರೋ ಚಂದ್ರಾಮ ಕದ್ದಲೇ ನಗತಿದ್ದ. ಎಮ್ಮೆಲ್ಲೆ ಒಂದರ ಮ್ಯಾಲೊಂದು ಫೊನ್ ಮಾಡಿ ದಭಾಯಿಸತಿದ್ದ. ಹದಿನೈದು ದಿನದಿಂದ ನೀರ ಇರಲಾರದಕ್ಕ ಎಮ್ಮೆಲ್ಲೆ ಮನಿ ಮುಂದಿನ ಚರಂಡಿ ವಾಸನಿ ಗಬ್ ಅಂತ ಮೂಗಿಗಿ ಹೊಡೀತಿತ್ತು. ’ಏ ಚಂದ್ರಾಮ ಆ ಗಟಾರಿಗೆ ತುಸು ನೀರ ಬಿಡು’ ಅಂದದ್ದೇ ಚಂದ್ರಾಮ ಮಿಕಿ ಮಿಕಿ ಅಂತ ಎಮ್ಮೆಲ್ಲೆ ಮುಖಾ ನೋಡಿ ಮೌನವಾಗಿದ್ದ.