ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 24 )


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್‌ಗೆ ವಯಸ್ಸಾಗುತ್ತಿದ್ದಂತೆ, ಜೀವನದ ವಿಶ್ರಾಂತಿಯ ಬಯಕೆ ಹೆಚ್ಚಾಗತೊಡಗಿತು. ನೈನಿತಾಲ್ ಪಟ್ಟಣದ ಪುರಸಭೆಯ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ. ಜೊತೆಗೆ ಮೊಕಮೆಘಾಟ್‌ನ ರೈಲ್ವೆ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಅಲ್ಲಿನ ಸರಕು ಮತ್ತು ಕಲ್ಲಿದ್ದಲು ಸಾಗಾಣಿಕೆಯ ಗುತ್ತಿಗೆಯನ್ನ ತನ್ನ ಬಳಿ ಎರಡು ದಶಕಕ್ಕೂ ಹೆಚ್ಚು ಕಾಲ ದುಡಿದ ನಿಷ್ಟಾವಂತ ಕೂಲಿಕಾರ್ಮಿಕರಿಗೆ ವಹಿಸಿ, ಅವರ ಪರವಾಗಿ ತಾನೇ ರೈಲ್ವೆ ಇಲಾಖೆಗೆ ಠೇವಣಿ ಹಣವನ್ನು ತುಂಬಿದ. ಎರಡು ದಶಕ ನನ್ನ ಜೊತೆ ದುಡಿದ ನಿಮಗೆ ಮತ್ತು ನಿಮ್ಮ ಪ್ರೀತಿಗೆ ನಾನು ನೀಡಬಹುದಾದ ಕಾಣಿಕೆ ಇದೊಂದೇ ಎಂದು ಅಗಲಿಕೆಯ ಸಂದರ್ಭದಲ್ಲಿ ಹೆಮ್ಮೆಯಿಂದ ಕಾರ್ಬೆಟ್ ಘೋಷಿದ. ನೈನಿತಾಲ್ ಪಟ್ಟಣದಲ್ಲಿ ನಡೆಯುತ್ತಿದ್ದ ರಿಯಲ್ ಎಸ್ಟೇಟ್ ವ್ಯವಹಾರವನ್ನು ತಾಯಿ ಮೇರಿ ಕಾರ್ಬೆಟ್ ಹಾಗೂ ಮ್ಯಾಥ್ಯು ಕಂಪನಿಯ ವ್ಯವಹಾರವನ್ನು ಸಹೋದರಿ ಮ್ಯಾಗಿ ಹಾಗೂ ಮಲಸಹೋದರಿ ಮೇರಿಡೊಯಲ್ ಯಶಸ್ವಿಯಾಗಿ ನಿರ್ವಹಿಸುತ್ತಿದ್ದ ಕಾರಣ, ಕಾರ್ಬೆಟ್ ಆಪ್ರಿಕಾದ ತಾಂಜೇನಿಯಾದ ಕೃಷಿ ಚಟುವಟಿಕೆಗಳತ್ತ ಗಮನ ನೀಡತೊಡಗಿದ.

ನೈನಿತಾಲ್ ಗಿರಿಧಾಮದ ಪ್ರತಿಷ್ಟಿತ ಯುರೋಪಿಯನ್ ಕುಟುಂಬಗಳಲ್ಲಿ ಕಾರ್ಬೆಟ್ ಕುಟುಂಬಕ್ಕೆ ಮಹತ್ವದ ಸ್ಥಾನವಿತ್ತು. ಅಲ್ಲಿನ ಜನ ಎಲ್ಲಾ ವ್ಯವಹಾರಗಳಿಗೆ ಕಾರ್ಬೆಟ್‌ನ ತಾಯಿ ಮೇರಿಯನ್ನು ಆಶ್ರಯಿಸುತ್ತಿದ್ದರು. ಮೇರಿ ಕಾರ್ಬೆಟ್ ಜೀವನ ಪೂರ್ತಿ ಹೋರಾಟ ನಡೆಸಿ ಬದುಕು ಕಟ್ಟಿಕೊಂಡ ಪರಿಣಾಮ ಸದಾ ತನ್ನ ಕುಟುಂಬ ಭದ್ರತೆ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಳು. ಮುಂದೆ ಎಂತಹದ್ದೇ ಸಂದರ್ಭಗಳಲ್ಲಿ ತಾನಾಗಲಿಗಲಿ, ಅಥವಾ ತನ್ನ ಮಕ್ಕಾಳಾಗಲಿ ಸಂಕಷ್ಟಕ್ಕೆ ಸಿಲುಕಬಾರದು ಎಂಬುದು ಮೇರಿಯ ನಿಲುವಾಗಿತ್ತು. ಹಾಗಾಗಿ ಸಂಪಾದಿಸಿದ ಹಣಕ್ಕೆ ಮೇರಿ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದಳು. ನೈನಿತಾಲ್ ಪಟ್ಟಣದಲ್ಲಿ ಅಷ್ಟೆಲ್ಲಾ ಆಸ್ತಿ ಇದ್ದರೂ ಕೂಡ ತನ್ನ ಹಾಗೂ ಮಕ್ಕಳ ಹೆಸರಿನಲ್ಲಿ ಬ್ಯಾಂಕುಗಳಲ್ಲಿ ಹಣವನ್ನು ಠೇವಣಿ ಇಡುತ್ತಿದ್ದಳು. ಜಿಮ್ ಕಾರ್ಬೆಟ್ ಹೊರತುಪಡಿಸಿ, ಇಡೀ ಕುಟುಂಬದ ಎಲ್ಲರೂ ಯಾವುದಕ್ಕೂ ಕೊರತೆ ಇಲ್ಲದಂತೆ ಐಷಾರಾಮದ ಬದುಕನ್ನು ರೂಢಿಸಿಕೊಂಡಿದ್ದರು. ಜಿಮ್ ಕಾರ್ಬೆಟ್ ಮಾತ್ರ ಎಂದೂ ದುಂದುವೆಚ್ಚಕ್ಕೆ ಅಥವಾ ಐಷಾರಾಮದ ಬದುಕಿಗೆ ಮನಸೋತವನಲ್ಲ. ಅವನ ಕೈಯಲ್ಲಿ ಕಾಡಿಗೆ ಶಿಕಾರಿಗೆ ತೆರಳುವ ಸಂದರ್ಭದಲ್ಲಿ ಮಾತ್ರ ರಿಸ್ಟ್ ವಾಚೊಂದು ಇರುತ್ತಿತ್ತು. ಉಳಿದಂತೆ ಸಾಧಾರಣ ಉಡುಪುಗಳಲ್ಲಿ ಇರುವುದು ಅವನ ಹವ್ಯಾಸವಾಗಿತ್ತು. ತಲೆಗೊಂದು ಹ್ಯಾಟ್ ಧರಿಸುವುದು ಅವನ ಮೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು. ರಾತ್ರಿ ಎರಡು ಪೆಗ್ ವಿಸ್ಕಿ ಮತ್ತು ದಿನಕ್ಕೆ ಇಪ್ಪತ್ತು ಸಿಗರೇಟ್ ಸೇದುವ ಹವ್ಯಾಸ, ಬೇಸರವಾದಾಗಲೆಲ್ಲಾ ಹಾಲಿಲ್ಲದ ಕಪ್ಪು ಚಹಾ ಕುಡಿಯುವ ಅಭ್ಯಾಸ ಅವನಿಗಿತ್ತು.

ಜಿಮ್ ಕಾರ್ಬೆಟ್ ಯಾವಾಗಲೂ ಅರಣ್ಯಕ್ಕೆ ಕಾಡ್ಗಿಚ್ಚು ಆವರಿಸಿಕೊಳ್ಳುವ ಸಂದರ್ಭದಲ್ಲಿ ಹೆಚ್ಚು ಚಿಂತಾಕ್ರಾಂತನಾಗುತ್ತಿದ್ದ. ಆಫ್ರಿಕಾದಲ್ಲಿ ವಿಶೇಷವಾಗಿ ಕೀನ್ಯಾ ಮತ್ತು ತಾಂಜೇನಿಯ ಕಾಡುಗಳಲ್ಲಿ ಬೇಸಿಗೆ ಸಮಯದಲ್ಲಿ ನೈಸರ್ಗಿಕವಾಗಿ ಕಾಡ್ಗಿಚ್ಚು ಆವರಿಸಿಕೊಳ್ಳುವುದನ್ನು ನೋಡಿದ್ದ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಭಾರತದಲ್ಲಿ ಮರಗಳ್ಳರು ಮತ್ತು ಅಕ್ರಮ ಬೇಟೆಗಾರರು ಕಾಡಿಗೆ ಬೆಂಕಿ ಇಡುವುದನ್ನು ಕಂಡು ಬಹುವಾಗಿ ನೊಂದುಕೊಳ್ಳತ್ತಿದ್ದ. ಈ ಕಾರಣಕ್ಕಾಗಿ ಬೇಸಿಗೆಯ ಸಮಯದಲ್ಲಿ ಕಲದೊಂಗಿ ಮತ್ತು ಚೋಟಾಹಲ್ದಾನಿಯ ರೈತರನ್ನು ಕರೆದುಕೊಂಡು ಅರಣ್ಯದಲ್ಲಿ ಅಲೆದಾಡಿ ಕಾಡ್ಗಿಚ್ಚು ಆವರಿಸದಂತೆ ಎಚ್ಚರಿಕೆ ವಹಿಸುತ್ತಿದ್ದ. ಬಿದಿರು ಬೆಳೆದಿರುವ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇಡುವಂತೆ ಸ್ಥಳಿಯರಿಗೆ ಕರೆ ನೀಡುತ್ತಿದ್ದ. ಇಡೀ ಕುಮಾವನ್ ಪ್ರಾಂತ್ಯದ ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಇಂಜಿನಿಯರ್‌ಗಳು ವೈದ್ಯರು ಕಾರ್ಬೆಟ್‌ಗೆ ಪರಿಚತರಾಗಿದ್ದರು. ಅವರು ಭೇಟಿಯಾದಾಗಲೆಲ್ಲಾ ಸ್ಥಳೀಯ ಭಾಷೆಯಲ್ಲಿ ಅವರ ಯೋಗಕ್ಷೇಮ ವಿಚಾರಿಸಿ, ಅವರ ಸೇವೆ ಬಗ್ಗೆ ಮಾಹಿತಿ ಪಡೆದು ಸಲಹೆ ನೀಡುತ್ತಿದ್ದ. ಮತ್ತು ವೃತ್ತಿಯಲ್ಲಿ ಇರಬೇಕಾದ ಕಾಳಜಿಗಳ ಬಗ್ಗೆ ವಿವರಿಸಿ ಹೇಳುತ್ತಿದ್ದ. ಭಾರತದ ಗೌರ್ವನ್ ಜನರಲ್‌ಗಳು. ಪ್ರಾಂತ್ಯದ ಜಿಲ್ಲಾಧಿಕಾರಿಗಳು, ಕಾರ್ಬೆಟ್‌ಗೆ ಗೆಳೆಯರಾದ ಕಾರಣ ಅಲ್ಲಿನ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಜಿಮ್ ಕಾರ್ಬೆಟ್ ಕುರಿತು ಭಯ ಮಿಶ್ರಿತ ಗೌರವವಿತ್ತು.

ತಾನು ವಾಸಿಸುತ್ತಿದ್ದ ನೈನಿತಾಲ್ ಗಿರಿಧಾಮದ ಪರಿಸರ ಅತಿಯಾದ ಪ್ರವಾಸಿಗರ ಭೇಟಿಯಿಂದಾಗಿ ಕಲುಷಿತವಾಗುತ್ತಿರುವುದನ್ನು ಕಂಡ ಕಾರ್ಬೆಟ್ ನಾಗರೀಕ ಸಮಿತಿಯೊಂದನ್ನು ರಚಿಸಿಕೊಂಡು, ಅದರ ರಕ್ಷಣೆಗೆ ಮುಂದಾದ. ಇದು ನಾಗರೀಕ ಸಮಿತಿಯಿಂದ ಸಾಧ್ಯವಿಲ್ಲ ಎಂಬುದನ್ನ ಮನಗಂಡಕೂಡಲೇ ಕಾರ್ಬೆಟ್ ಮತ್ತೇ ಅಲ್ಲಿನ ಪುರಸಭೆಗೆ ಸ್ಪರ್ಧಿಸಿ ಆಯ್ಕೆಯಾಗುವುದರ ಜೊತೆಗೆ ಉಪಾಧ್ಯಕ್ಷನ ಸ್ಥಾನ ಅಲಂಕರಿಸಿ, ನೈನಿತಾಲ್ ಪರಿಸರದ ರಕ್ಷಣೆಗೆ ಮುಂದಾದ. ಪಟ್ಟಣದ ಜನತೆ ಕುಡಿಯುವ ನೀರಿನ ಗುಣ ಮಟ್ಟ ಅಳೆಯಲು ಸಣ್ಣದೊಂದು ಪ್ರಯೋಗಾಲವೊಂದನ್ನು ನಿರ್ಮಿಸಿದ. ಮನೆಗಳಿಂದ ಹೊರಬರುವ ಕೊಳಚೆ ನೀರು ಅಲ್ಲಿನ ಸರೋವರ ಸೇರದಂತೆ ಮಾಡಲು ಪ್ರಪಥಮವಾಗಿ ಒಳಚರಂಡಿ ವ್ಯವಸ್ಥೆಯನ್ನು ಜಾರಿಗೆ ತಂದ. ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಪಟ್ಟಣದ ರಸ್ತೆಗಳಲ್ಲಿ ಸಾಲು ಮರಗಳ ಸಸಿಗಳನ್ನು ನೆಟ್ಟು ಪೋಷಿಸಿದ. ಎಲ್ಲಾ ಧರ್ಮದ ಜನರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಸ್ಮಶಾನ ಭೂಮಿಗಳನ್ನು ನಿರ್ಮಿಸಿದ. ಪಟ್ಟಣದ ಹೃದಯ ಭಾಗದಲ್ಲಿದ್ದ ನೈನಿ ಸರೋವರದ ಸುತ್ತ-ಮುತ್ತ ತಡೆಗೋಡಯನ್ನು ನಿರ್ಮಿಸಿ, ರಸ್ತೆಯ ಕೊಳಚೆ ನೀರು ಸರೋವರಕ್ಕೆ ಸೇರದಂತೆ ಮಾಡಿ, ಅಪರೂಪದ ಮಷೀರ್ ಜಾತಿಯ ಮೀನುಗಳನ್ನು ಸಾಕುವ ಯೋಜನೆಯೊಂದನ್ನು ರೂಪಿಸಿದ. ರಾತ್ರಿಯ ವೇಳೆ ಕೆಲವರು ಮೀನು ಶಿಕಾರಿಯಲ್ಲಿ ತೊಡಗಿರುವದನ್ನು ಕಂಡು, ಸರೋವರದಲ್ಲಿ  ಮೀನು ಶಿಕಾರಿ ನಿಷೇದಿಸಿದ ಕಾನೂನನ್ನು ಜಾರಿಗೆ ತಂದ.

ಅತಿ ವೇಗವಾಗಿ ಬೆಳೆಯುತ್ತಿದ್ದ ನೈನಿತಾಲ್ ಗಿರಿಧಾಮಕ್ಕೆ ಬೆಳೆವಣಿಗೆಗೆ ಕಡಿವಾಣ ಹಾಕಲು, ಸುತ್ತ ಮುತ್ತಲಿನ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ವಸತಿ ಪ್ರದೇಶಗಳು ತಲೆ ಎತ್ತುವುದಕ್ಕೆ ಕಡಿವಾಣ ಹಾಕಿ, ಬಹುಮಹಡಿ ಕಟ್ಟಡಗಳಿಗೆ ಉತ್ತೇಜನ ನೀಡಿದ. ಕಣ್ಣೆದುರು, ವೇಗವಾಗಿ ಬೆಳೆಯುತ್ತಿರುವ ನಾಗರೀಕತೆಯಿಂದ ಅರಣ್ಯ ನಾಶವಾಗುತ್ತಿರುವುದನ್ನು ಮನಗಂಡು, ಭಾರತ ಸರ್ಕಾರದೊಂದಿಗೆ ಸಮಾಲೋಚಿಸಿ ಕುಮಾವನ್ ಪ್ರಾಂತ್ಯದ ಅರಣ್ಯ ರಕ್ಷಣೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಂದಾದ. ಕೆಲವೊಮ್ಮೆ ಸರ್ಕಾರದ ನಿರ್ಧಾರಗಳು ಅವನಲ್ಲಿ ಜಿಗುಪ್ಸೆ ಮೂಡಿಸುತ್ತಿದ್ದವು.

ಭಾರತದಲ್ಲಿ ಆಗ ತಾನೇ ವಿಸ್ತಾರಗೊಳ್ಳುತ್ತಿದ್ದ ರೈಲ್ವೆ ಯೋಜನೆಗಳಿಗೆ ಈಶಾನ್ಯ ರಾಜ್ಯಗಳ ಅರಣ್ಯ ಮತ್ತು ಹಿಮಾಲಯ ತಪ್ಪಲಿನ ಅರಣ್ಯ ಪ್ರದೇಶ ಬಲಿಯಾಗುತ್ತಿರುದನ್ನು ಕಂಡು ಕಾರ್ಬೆಟ್ ನೊಂದುಕೊಳ್ಳುತ್ತಿದ್ದ. ರೈಲ್ವೆ ಹಳಿಗಳ ಕೆಳಗೆ ಹಾಸಲು ವಯಸ್ಸಾದ ಸದೃಢ ಮರಗಳನ್ನು ಕಡಿದು ಹಾಕುವುದರ ಬಗ್ಗೆ ಅವನು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿದ. ಮರ ಕಡಿದ ಜಾಗದಲ್ಲಿ ಅತಿ ಶೀಘ್ರವಾಗಿ ಬೆಳೆಯವ ಮರಗಳನ್ನು ಬೆಳಸುವ ಸರ್ಕಾರದ ಯೋಜನೆಗಳಿಗೆ ಪ್ರತಿಭಟಿಸಿದ. ಆಯಾ ಪ್ರದೇಶದ ಬೌಗೂಳಿಕ ಲಕ್ಷಣಗಳಿಗೆ ಅನುಸಾರವಾಗಿ ಒಕ್ ಮತ್ತು ದೇವದಾರು ಮರಗಳನ್ನು ಬೆಳೆಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಿದ. ಸರ್ಕಾರ ಮತ್ತು ಅಧಿಕಾರಿಗಳು ಅರಣ್ಯವನ್ನು ಮತ್ತು ಅಲ್ಲಿನ ಮರಗಳನ್ನು ವಾಣಿಜ್ಯ ದೃಷ್ಟಿಕೋನದಿಂದ ನೋಡುವುದರ ಬಗ್ಗೆ ಕಾರ್ಬೆಟ್‌ಗೆ ತೀವ್ರ ಅಸಹನೆಯಿತ್ತು. ಮರಗಳ ನಾಶದಿಂದ ಗೂಡು ಕಟ್ಟಲು ಪರಿತಪಿಸುತಿದ್ದ ಪಕ್ಷಿಗಳನ್ನು ಕಂಡಾಗ ಕಾರ್ಮೆಟ್ ತೀವ್ರವಾಗಿ ನೊಂದುಕೊಳ್ಳುತ್ತಿದ್ದ. ಒಮ್ಮೊಮ್ಮೆ ತನ್ನ ಅಂತರಂಗಕ್ಕೆ ತಾನೇ ಪ್ರಶ್ನೆಗಳನ್ನು ಹಾಕಿಕೊಂಡು, ಪರಿಸರ ಕುರಿತಂತೆ ತನ್ನ ನಿಲುವುಗಳಲ್ಲಿ ದ್ವಂದ್ವ ಇರುವುದನ್ನು ಕಂಡು ಮುಜುಗರ ಪಟ್ಟುಕೊಂಡ. ಇದಕ್ಕೆ ಪ್ರಾಯಸ್ಛಿತ್ತವಾಗಿ ಎಲ್ಲಾ ಬಗೆಯ ಅರಣ್ಯ ಶಿಕಾರಿಗಳಿಗೆ ತಿಲಾಂಜಲಿ ನೀಡಲು ನಿರ್ಧರಿಸಿದ.

ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟನೆಂದರೆ, ಮತ್ತೇ ರಾತ್ರಿಗೆ ಹಿಂತಿರುಗುತ್ತಿದ್ದ ಜಿಮ್ ಕಾರ್ಬೆಟ್ ತನ್ನ ವಯಸ್ಸು ಮಾಗುತ್ತಿದ್ದಂತೆ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಮತ್ತು ಪರಿಸರ ರಕ್ಷಿಸುವಲ್ಲಿ ಆಸಕ್ತಿ ತೋರತೊಡಗಿದ. ನೈನಿತಾಲ್ ಪಟ್ಟಣದ ರಸ್ತೆಗಳ ಅಗಲೀಕರಣಕ್ಕಾಗಿ ಸರ್ಕಾರದ ಲೋಕೋಪಯೊಗಿ ಇಲಾಖೆ ಮರಗಳನ್ನು ಕಡಿಯಲು ಮುಂದಾದಾಗ, ಪ್ರತಿಭಟಿಸಿ ತಡೆಯೊಡ್ಡಿದ. ಕಾರ್ಬೆಟ್, ರಸ್ತೆಗಾಗಿ ನೆಲಕ್ಕೆ ಉರುಳುವ ಮರಗಳ ಬದಲಾಗಿ ಅವುಗಳ ಸಂಖ್ಯೆಯ ದುಪ್ಪಟ್ಟು ಮರಗಳನ್ನು ನೆಡಲಾಗುವುದೆಂದು ಸರ್ಕಾರದಿಂದ ಆಶ್ವಾಸನೆ ಪಡೆದು ನಂತರವಷ್ಟೇ ರಸ್ತೆಯ ಅಗಲೀಕರಣಕ್ಕೆ ಅನುವು ಮಾಡಿಕೊಟ್ಟ. ಪಟ್ಟಣ ಪುರಸಭೆಯ ಹಿರಿಯ ಉಪಾಧ್ಯಕ್ಷ ಹಾಗೂ ಸಮಾಜದ ಗೌರವಾನ್ವಿತ ವ್ಯಕ್ತಿಯಾಗಿದ್ದ ಕಾರ್ಬೆಟ್‌ನ ಕಾಳಜಿಗಳ ಬಗ್ಗೆ ಅಥವಾ ಆತನ ನಿಲುವುಗಳ ಬಗ್ಗೆ ಪ್ರಶ್ನಿಸುವ ಧೈರ್ಯ ನೈನಿತಾಲ್ ಪಟ್ಟಣ ಮಾತ್ರವಲ್ಲ, ಕುಮಾವನ್ ಪ್ರಾಂತ್ಯದಲ್ಲಿ ಯಾರಿಗೂ ಇರಲಿಲ್ಲ. ಪ್ರಾಣಿ ಮತ್ತು ಪರಿಸರ ಕುರಿತು ಅಪಾರ ಕಾಳಜಿ ಬೆಳಸಿಕೊಂಡಿದ್ದ. ಕಾರ್ಬೆಟ್, ಸಾಮಾನ್ಯ ಜನತೆಗೆ ಈ ಕುರಿತು ಜಾಗೃತಿ ಮೂಡಿಸಲು ಹೊಸದೊಂದು ಯೋಜನೆಯನ್ನು ರೂಪಿಸಿದ. ಕ್ಯಾಮರಾ ಮೂಲಕ ಪ್ರಾಣಿ, ಪಕ್ಷಿಗಳ ಚಿತ್ರವನ್ನು ಸರೆಹಿಡಿದು ಅವುಗಳ ಬದುಕನ್ನು ಜನಸಾಮಾನ್ಯರಿಗೆ ವಿವರಿಸುವುದು, ಅವನ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು.

(ಮುಂದುವರಿಯುವುದು)

Leave a Reply

Your email address will not be published. Required fields are marked *