Daily Archives: June 18, 2012

ನಿತ್ಯಾನಂದನಿಗೆ ಒಂದು ನೀತಿ, ಭ್ರಷ್ಟ ರಾಜಕಾರಣಿಗಳಿಗೆ ಇನ್ನೊಂದು ನೀತಿ. ಏಕಿಂಥ ತಾರತಮ್ಯ?

-ಆನಂದ ಪ್ರಸಾದ್

ಸುವರ್ಣ ಸುದ್ದಿ ವಾಹಿನಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ನಿತ್ಯಾನಂದ ಸ್ವಾಮಿಯ ವಿರುದ್ಧ ಆಕ್ರಮಣಕಾರಿಯಾಗಿ ಸುದ್ದಿಗಳನ್ನು ಪ್ರಸಾರ ಮಾಡುತ್ತ ಬಂದಿರುವುದರ ಪರಿಣಾಮವಾಗಿ ಇಂದು ಕರ್ನಾಟಕದಲ್ಲಿ ನಿತ್ಯಾನಂದನ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅಕ್ರೋಶ ರೂಪುಗೊಂಡಿರುವುದು ಕಂಡುಬರುತ್ತದೆ. ಇದೇ ರೀತಿಯ ಆಕ್ರೋಶ ಭ್ರಷ್ಟರ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಕರ್ನಾಟಕದಲ್ಲಿ ರೂಪುಗೊಳ್ಳುವುದಿಲ್ಲ ಏಕೆ? ಉದಾಹರಣೆಗೆ ಕರ್ನಾಟಕದಲ್ಲಿ ಲೋಕಾಯುಕ್ತ ಹುದ್ದೆ ಖಾಲಿ ಬಿದ್ದು ಹಲವಾರು ತಿಂಗಳುಗಳೇ ಕಳೆದಿವೆ, ಆದರೂ ಲೋಕಾಯುಕ್ತರ ನೇಮಕ ಏಕೆ ಮಾಡಿಲ್ಲ ಎಂದು ಯಾವುದೇ ವಾಹಿನಿಯವರು ಸರ್ಕಾರಕ್ಕೆ ನಿತ್ಯಾನಂದನ ವಿಷಯದಲ್ಲಿ ಸವಾಲು ಹಾಕಿರುವಂತೆ ಸವಾಲು ಹಾಕಿರುವುದು ಕಂಡುಬರುವುದಿಲ್ಲ. ಕರ್ನಾಟಕದಲ್ಲಿ ರಾಜಕಾರಣಿಗಳ ಭ್ರಷ್ಟಾಚಾರ ನಿಯಂತ್ರಣಕ್ಕೆ ನಿಷ್ಪಕ್ಷಪಾತಿ ಲೋಕಾಯುಕ್ತರ ನೇಮಕ ಮಾಡಲೇಬೇಕು ಎಂದು ಗಡುವು ವಿಧಿಸಿ ಹೋರಾಟ ಮಾಡಲು, ಜನಜಾಗೃತಿ ಮೂಡಿಸಲು ಯಾವುದೇ ಟಿವಿ ವಾಹಿನಿಗಳು ಏಕೆ ಪ್ರಯತ್ನಿಸುತ್ತಿಲ್ಲ? ಏಕೆ ಈ ರೀತಿ ಯಾವುದೇ ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದು ಉಗ್ರ ಹೋರಾಟಕ್ಕೆ ಮುಂದಾಗುತ್ತಿಲ್ಲ?

ಟಿವಿ ವಾಹಿನಿಗಳಿಗೆ ಜನಜಾಗೃತಿ ಮೂಡಿಸುವ ಅಪಾರ ಸಾಮರ್ಥ್ಯ ಇದೆ ಎಂಬುದು ನಿತ್ಯಾನಂದನ ವಿಷಯದಲ್ಲಿ ಸುವರ್ಣ ಸುದ್ದಿವಾಹಿನಿ ನಡೆಸಿದ ನಿರಂತರ ಅಭಿಯಾನದಿಂದ ಗೊತ್ತಾಗುತ್ತದೆ. ನಿತ್ಯಾನಂದನ ವಿಷಯದಲ್ಲಿ ಈ ರೀತಿ ಆಕ್ರಮಣಕಾರಿಯಾಗಿ ನಡೆದುಕೊಳ್ಳಲು ಸುವರ್ಣ ಸುದ್ದಿ ವಾಹಿನಿಗೆ ಏನು ಹಿತಾಸಕ್ತಿಗಳು ಇವೆಯೋ ಗೊತ್ತಿಲ್ಲ. ಆದರೆ ಒಂದು ವಿಷಯವನ್ನು ತೆಗೆದುಕೊಂಡು ನಿರಂತರ ಕಾರ್ಯಕ್ರಮಗಳನ್ನು ನಡೆಸಿದರೆ ವ್ಯಾಪಕ ಜನಜಾಗೃತಿ ಎಲ್ಲೆಡೆ ಆಗುವುದು ಖಚಿತ ಎಂದು ಇದರಿಂದ ಗೊತ್ತಾಗುತ್ತದೆ. ನಿತ್ಯಾನಂದನ ವಿಷಯದಲ್ಲಿ ನಿರಂತರ ಕಾರ್ಯಕ್ರಮ ಪ್ರಸಾರ ಮಾಡಿದ್ದರಿಂದ ವಿಶ್ವಾದ್ಯಂತ ಕನ್ನಡಿಗರಿಂದ ಆಕ್ರೋಶ ಭುಗಿಲೇಳಲು ಆರಂಭವಾಯಿತು. ಆರಂಭದಲ್ಲಿ ಸುವರ್ಣ ಸುದ್ದಿವಾಹಿನಿ ಮಾತ್ರ ಈ ವಿಷಯದಲ್ಲಿ ಕಾರ್ಯಕ್ರಮ ಪ್ರಸಾರ ಮಾಡುತ್ತಿತ್ತು. ಇದರಿಂದ ಉಂಟಾದ ಪ್ರಭಾವದಿಂದ ಇತರ ಟಿವಿ ವಾಹಿನಿಗಳೂ ಇದೇ ವಿಚಾರದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದವು.

ಇದೇ ರೀತಿ ಭ್ರಷ್ಟ ರಾಜಕಾರಣಿಗಳ ವಿರುದ್ಧವೂ ಯಾಕೆ ಸುವರ್ಣ ಸುದ್ದಿ ವಾಹಿನಿಯವರು ಅಥವಾ ಇತರ ವಾಹಿನಿಗಳು ನಿರಂತರ ಅಭಿಯಾನ ನಡೆಸುವುದಿಲ್ಲ? ಜನತೆಗೆ ನಿತ್ಯಾನಂದನ ವಿಷಯದಲ್ಲಿ ಉಕ್ಕುತ್ತಿರುವ ಆಕ್ರೋಶ ಭ್ರಷ್ಟ ರಾಜಕಾರಣಿಗಳ ವಿಷಯದಲ್ಲಿಯೂ ಉಕ್ಕಿದರೆ ಒಳ್ಳೆಯದು. ನಿತ್ಯಾನಂದನನ್ನು ಗಡೀಪಾರು ಮಾಡಿರುವಂತೆ ಹಾಗೂ ಬಂಧಿಸಿರುವಂತೆ ಭ್ರಷ್ಟ ರಾಜಕಾರಣಿಗಳನ್ನು ಯಾಕೆ ಬಂಧಿಸುವುದಿಲ್ಲ ಹಾಗೂ ಗಡೀಪಾರು ಮಾಡುವುದಿಲ್ಲ? ಭ್ರಷ್ಟ ರಾಜಕಾರಣಿಗಳಿಗೆ ಜೈಲಿನಿಂದ ಹೊರಬಂದಾಗ ಅದ್ಧೂರಿ ಸ್ವಾಗತ ಕೋರುವ ಜನರು ಹಾಗೂ ಸ್ವಾಮೀಜಿಗಳ ದ್ವಿಮುಖ ನೀತಿಯಿಂದಾಗಿ ಕರ್ನಾಟಕವು ಇಂದು ಭ್ರಷ್ಟಾಚಾರದಲ್ಲಿ ನಂಬರ್ ಒಂದು ರಾಜ್ಯ ಎಂಬ ಹೆಸರುಗಳಿಸಿದೆ. ನಿತ್ಯಾನಂದನು ಈಗ ಆರೋಪಿಯಷ್ಟೆ, ಆತನು ಅಪರಾಧಿ ಎಂದು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಆದರೂ ಆತನ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ.

ಇದೇ ರೀತಿಯ ಆಕ್ರೋಶ ಭ್ರಷ್ಟ ರಾಜಕಾರಣಿಗಳು ಮೇಲೆಯೂ ಏಕೆ ಭುಗಿಲೆಳುವುದಿಲ್ಲ? ಭ್ರಷ್ಟ ರಾಜಕಾರಣಿಗಳ ವಿಷಯ ಬಂದಾಗ ಅವರ ಮೇಲೆ ಆರೋಪವಷ್ಟೇ ಇದೆ, ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾಗಿಲ್ಲ ಎಂದು ಏಕೆ ರಿಯಾಯತಿಯನ್ನು ಕೊಡಬೇಕು? ನಿತ್ಯಾನಂದ ಮಾಡಿರುವುದು ಮಾತ್ರ ಅನೈತಿಕವೇ? ನಂಬಿಕೆದ್ರೋಹವೇ? ಜನರ ಸೇವೆ ಮಾಡಲೋಸುಗ ಜನರಿಂದ ಆಯ್ಕೆಯಾಗಿ ಅಪರೇಷನ್ ಕಮಲ ಎಂಬ ಹೆಸರಿನಲ್ಲಿ ಶಾಸಕರನ್ನು ಪಶುಗಳಂತೆ ಕೊಳ್ಳುವುದು ನಂಬಿಕೆದ್ರೋಹವಲ್ಲವೇ? ಜನರ ಸೇವೆ ಮಾಡಲು ಜನರಿಂದ ಆಯ್ಕೆಯಾಗಿ ಅಕ್ರಮ ಆಸ್ತಿ-ಪಾಸ್ತಿ ಮಾಡಿಕೊಳ್ಳುವುದು ಅನೈತಿಕವಲ್ಲವೇ? ಹೀಗಿದ್ದರೂ ನಮ್ಮ ಜನ ಲೈಂಗಿಕತೆ ವಿಚಾರದಲ್ಲಿ ಮಾತ್ರ ಏಕೆ ಅನೈತಿಕತೆ ಎಂದು ಆಕ್ರೋಶಗೊಳ್ಳುತ್ತಾರೆ? ಇದೇ ರೀತಿ ಭ್ರಷ್ಟರ ವಿರುದ್ಧ ಆಕ್ರೋಶಗೊಂಡು ರಾಜೀನಾಮೆಗೆ ಏಕೆ ಜನ ಪಟ್ಟು ಹಿಡಿದು ಬೀದಿಗೆ ಇಳಿಯುವುದಿಲ್ಲ ಅಥವಾ ಭ್ರಷ್ಟರ ಗಡೀಪಾರಿಗೆ ಅಗ್ರಹಿಸುವುದಿಲ್ಲ? ಜನತೆ ನಿತ್ಯಾನಂದನ ವಿರುದ್ಧ ತೋರಿದ ರೀತಿಯಲ್ಲೇ ಆಕ್ರೋಶವನ್ನು ಭ್ರಷ್ಟರ ವಿಷಯದಲ್ಲಿಯೂ ತೋರಿಸಿದರೆ ಕರ್ನಾಟಕ ಭ್ರಷ್ಟಾಚಾರದಿಂದ ಮುಕ್ತಿ ಪಡೆಯಲು ಹೆಚ್ಚು ಸಮಯ ಬೇಕಾಗಿಲ್ಲ.

ಜನಜಾಗೃತಿಯ ವಿಷಯದಲ್ಲಿ ಟಿವಿ ಮಾಧ್ಯಮ ತನಗಿರುವ ನೈಜ ಸಾಮರ್ಥ್ಯದ ಶೇಕಡಾ ಒಂದರಷ್ಟನ್ನೂ ಬಳಸುತ್ತಿಲ್ಲ ಎಂದು ಖಚಿತವಾಗಿ ಹೇಳಬಹುದು. ಟಿವಿ ಮಾಧ್ಯಮ ಭ್ರಷ್ಟಾಚಾರದ ವಿರುದ್ಧ, ಭ್ರಷ್ಟ ರಾಜಕಾರಣಿಗಳ ವಿರುದ್ಧ ನಿರಂತರ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಜನರನ್ನು ಎಚ್ಚರಗೊಳಿಸಿದರೆ ರಾಜಕಾರಣಿಗಳು ಭ್ರಷ್ಟಾಚಾರ ಮಾಡಲು ಹೆದರಬಹುದು. ಲೈಂಗಿಕ ಅನೈತಿಕತೆಯ ವಿಷಯದಲ್ಲಿ ಜನತೆ ತೋರುವ ಬಹಿಷ್ಕಾರ, ಆಕ್ರೋಶ ಭ್ರಷ್ಟಾಚಾರದ ವಿಷಯದಲ್ಲಿಯೂ ಕಂಡುಬಂದರೆ ರಾಜಕಾರಣಿಗಳು ಎಚ್ಚರಿಕೆಯಿಂದ ವರ್ತಿಸಬಹುದು. ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಕ ಮಾಡಲೇಬೇಕೆಂದು ಒಂದು ಗಡುವನ್ನು ನೀಡಿ ನಿರಂತರ ಜನಜಾಗೃತಿಯ ಕಾರ್ಯಕ್ರಮವನ್ನು ಪ್ರಸಾರ ಮಾಡಿದರೆ ಲೋಕಾಯುಕ್ತರ ನೇಮಕ ಶೀಘ್ರವೇ ಆಗುವುದರಲ್ಲಿ ಸಂದೇಹವಿಲ್ಲ. ಪ್ರಖ್ಯಾತ ಸಾಹಿತಿಗಳು, ಕಲಾವಿದರು, ಸಿನೆಮಾ ನಟರು, ವಿವಿಧ ಕ್ಷೇತ್ರಗಳ ಸಾಧಕರನ್ನು ಸ್ಟುಡಿಯೋಗೆ ಕರೆಸಿ ನಿಷ್ಪಕ್ಷಪಾತ ನಿಲುವಿನ ಲೋಕಾಯುಕ್ತರ ನೇಮಕ ಏಕೆ ಅಗತ್ಯ ಎಂದು ಒತ್ತಡ ಹೇರಲು ಶುರುಮಾಡಿದರೆ ಸರ್ಕಾರದ ಮೇಲೆ ಒತ್ತಡ ಬಿದ್ದೇ ಬೀಳುತ್ತದೆ. ನಿತ್ಯಾನಂದನ ವಿಷಯದಲ್ಲಿ ಸರ್ಕಾರಕ್ಕೆ ಸವಾಲು ಹಾಕಿದಂತೆ ಟಿವಿ ವಾಹಿನಿಗಳು ಲೋಕಾಯುಕ್ತರ ನೇಮಕದ ವಿಷಯದಲ್ಲಿಯೂ ಸವಾಲು ಹಾಕಬೇಕಾದ ಅಗತ್ಯ ಇದೆ. ಜನರಿಂದ ಈ ವಿಷಯದಲ್ಲಿ ಅಭಿಪ್ರಾಯಗಳನ್ನು ಪಡೆದು ಕೆಲವು ದಿನ ನಿರಂತರ ಪ್ರಸಾರ ಮಾಡುತ್ತಿದ್ದರೆ ಜನತೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಕುದಿಯಲು ಆರಂಭವಾಗುತ್ತದೆ. ಆಗ ಸರ್ಕಾರಗಳು ಬಗ್ಗಲೇಬೇಕಾಗುತ್ತದೆ. ಏಕೆಂದರೆ ಟಿವಿ ಮಾಧ್ಯಮದ ಶಕ್ತಿ ಅಷ್ಟು ಬಲವಾಗಿದೆ. ಈ ಕೆಲಸವನ್ನು ಟಿವಿ ವಾಹಿನಿಗಳು ಏಕೆ ಮಾಡಬಾರದು?

ರಾಜ್ಯದ ನೈಸರ್ಗಿಕ ಸಂಪನ್ಮೂಲಗಳಾದ ಕಬ್ಬಿಣದ ಅದಿರು ಮೊದಲಾದವುಗಳನ್ನು ಅಕ್ರಮವಾಗಿ ವಿದೇಶಗಳಿಗೆ ಮಾರಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೂಡಿಹಾಕಿ ಆ ಹಣದ ಬಲದಿಂದ ರಾಜಕೀಯ ಮಾಡುವುದು ಅನೈತಿಕವಲ್ಲವೇ? ಅಂಥ ಅನೈತಿಕ ಹಣದ ಬಲದಿಂದ ಪಕ್ಷ ಕಟ್ಟಿ ಪಾದಯಾತ್ರೆ ಮಾಡುವವರ ವಿರುದ್ಧ ಏಕೆ ರಾಜ್ಯದಲ್ಲಿ ಜನತೆಯ ಆಕ್ರೋಶ ಸ್ಪೋಟಗೊಳ್ಳುವುದಿಲ್ಲ? ಇಂಥ ಅಕ್ರಮ ಹಾಗೂ ಅನೈತಿಕತೆ ಬಗ್ಗೆ ಟಿವಿ ವಾಹಿನಿಗಳ ಕಣ್ಣು ಏಕೆ ಕುರುಡಾಗಿದೆ? ಗಣಿ ಅಕ್ರಮದ ಹಣದ ಬಲದಿಂದ ಕಟ್ಟುತ್ತಿರುವ ಪಕ್ಷದ ಹಿಂದೆ ಜನ ಏಕೆ ಕುರಿಗಳಂತೆ ಹೋಗುತ್ತಿದ್ದಾರೆ? ಇಂಥ ಜನರನ್ನು ಎಚ್ಚರಿಸಿ ಗಣಿ ಅಕ್ರಮದ ಅನೈತಿಕ ಹಣದಿಂದ ರಾಜ್ಯವನ್ನು ಹಾಳುಗೆಡವುದರ ವಿರುದ್ಧ ಟಿವಿ ವಾಹಿನಿಗಳು ಏಕೆ ಆಂದೋಲನ ನಡೆಸುವುದಿಲ್ಲ? ಬದಲಾಗಿ ಅಂಥ ಪಾದಯಾತ್ರೆಯ ನಾಟಕವನ್ನು ಜನರ ಮುಂದೆ ಹಾಡಿ ಹೊಗಳಿ ಕಾರ್ಯಕ್ರಮ ಪ್ರಸಾರ ಮಾಡುವುದರ ಗುಟ್ಟೇನು?