Daily Archives: June 19, 2012

ಸಾಮಾಜಿಕ ನ್ಯಾಯ ಮತ್ತು ಖಾಸಗಿ ಕ್ಷೇತ್ರ

-ಡಾ.ಎಸ್. ಜಾಫೆಟ್

ಭಾರತ ಸಂವಿಧಾನ ಜಾರಿಗೆ ಬಂದು 61 ವರ್ಷಗಳಾಯಿತು. ಹೆಚ್ಚೂಕಮ್ಮಿ ಇಷ್ಟೇ ವರ್ಷಗಳ ಮೀಸಲಾತಿಯ ಇತಿಹಾಸವನ್ನು ಈ ದೇಶ ಕಂಡಿದೆ. ಮೀಸಲಾತಿ ಅಂದಕೂಡಲೇ ಈ ನೆಲದ ತಳಸಮುದಾಯಗಳು ಅದರಲ್ಲೂ ದಲಿತ ಮತ್ತು ಬುಡಕಟ್ಟು ವರ್ಗಗಳು ಮೀಸಲಾತಿ ವಿರೋಧಿಗಳ ನಾಲಿಗೆಗೆ ಸುಲಭದ ಆಹಾರವಾಗಿ ಬಿಡುತ್ತವೆ. ಸರ್ಕಾರಿ  ಕ್ಷೇತ್ರದಲ್ಲಿ ಮೀಸಲಾತಿ ಜಾರಿಯಿದ್ದ ಹೊತ್ತಲ್ಲೇ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡಬೇಕು ಎಂಬ ಚರ್ಚೆ ದೇಶದ ಅಲ್ಲಲ್ಲಿ ಈಗ ಹುಟ್ಟಿಕೊಂಡಿವೆ. ಇದರಿಂದ ಹಠಾತ್ ಎಚ್ಚೆತ್ತುಕೊಂಡವರಂತೆ ಕಂಡ ಖಾಸಗಿ ಕ್ಷೇತ್ರದ ದುಡ್ಡಿನ ಜನ ರಂಗೋಲಿ ಕೆಳಗೆ ನುಗ್ಗಿ, ಮೀಸಲಾತಿ ನೀತಿಯನ್ನು ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸುವ ಸರ್ಕಾರದ ನಡೆಯನ್ನು ಆರಂಭದಲ್ಲೇ ಚಿವುಟಿ ಹಾಕುವ ಕೆಲಸಕ್ಕೆ ಕೈಹಾಕಿದ್ದಾರೆ. ಇತ್ತೀಚಿನ ಪಿ.ಎ.ಇನಾಂದಾರ್ ವಿರುದ್ಧ ಮಹಾರಾಷ್ಟ್ರ ರಾಜ್ಯ ಪ್ರಕರಣವು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕೆನ್ನುವ ವಾದಕ್ಕೆ ಮತ್ತೆ ಜೀವಕೊಟ್ಟಿದೆ. ಪ್ರಧಾನಿ ಮನಮೋಹನ್ ಸಿಂಗ್ ಯುಪಿಎ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿಯನ್ನು ನೀಡಬೇಕೆನ್ನುವ ಜನಪರ ಕೂಗಿಗೆ ಒತ್ತಾಸೆಯಾಗಿ ನಿಂತು ಖಾಸಗಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವ ವರ್ಗದೊಂದಿಗೆ ಮಾತಿಗೂ ಇಳಿದಿದೆ.

ಪಿ.ಎ.ಇನಾಂದಾರ್ ವಿರುದ್ಧ ಮಹಾರಾಷ್ಟ್ರ ರಾಜ್ಯ ಪ್ರಕರಣದಲ್ಲಿ ಹೊರ ಬಂದ ತೀರ್ಪಿನಲ್ಲಿ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಪಡೆಯದ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಮೀಸಲಾತಿ ನೀತಿಯನ್ನು ಪಾಲಿಸಬೇಕೆಂದು ನ್ಯಾಯಾಲಯವು ಹೇಳಿತು. ಮುಂದುವರೆದು ಖಾಸಗಿ ಕೈಗಾರಿಕಾ ವಲಯಗಳು ಕೂಡಾ ಇದರಡಿ ಬರುತ್ತವೆ ಎಂದು ಹೇಳಿತು. ಈ ತೀರ್ಪನ್ನು ಮುಂದಿಟ್ಟುಕೊಂಡು ಭಾರತ ಸರ್ಕಾರದ ಮಂತ್ರಿಗಳ ಸಮೂಹವೊಂದು ಖಾಸಗಿ ಒಡೆತನ ಹೊಂದಿರುವ ಅನೇಕ ಕೈಗಾರಿಕೆಗಳ ಮಾಲೀಕರೊಂದಿಗೆ ಮಾತಿಗೂ ಇಳಿಯಿತು. ಇದಕ್ಕೆ ಪ್ರತಿಯಾಗಿ ಆ ಮಾಲೀಕರಿಂದ ಬಂದ ಪ್ರತಿಕ್ರಿಯೆ ಹೀಗಿತ್ತು.

  1. ಸರ್ಕಾರಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿಕೆಯು ತಾತ್ಕಾಲಿಕವಾಗಿದ್ದು, ಅದು ಪರಿಣಾಮಕಾರಿಯಾಗಿ ಜಾರಿಯಾಗದಿದ್ದರೂ ಕೂಡ ಈಗಲೂ ಮುಂದುವರೆಯುತ್ತಿದೆ.
  2. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿಕೆಯನ್ನು ಜಾರಿಗೊಳಿಸಲು ಸರ್ಕಾರವು ಮುಂದಾಗಿರುವುದು ಸರಿಯಲ್ಲ, ಇದು ನಮ್ಮ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವ ಕ್ರಮದಂತೆ ಕಾಣುತ್ತಿದೆ. ಕೈಗಾರಿಕೆಗಳು ಗಟ್ಟಿಯಾಗಿ ನಿಂತಿರುವುದೇ ಬಂಡವಾಳ ಹೂಡಿಕೆದಾರರಿಂದ; ನಾವು ಹೆಚ್ಚು ನಿಷ್ಠರಾಗಿರಬೇಕಾಗಿರುವುದು ಈ ಹೂಡಿಕೆದಾರರಿಗೆ ಮಾತ್ರವೇ. ಖಾಸಗಿ ಕ್ಷೇತ್ರಕ್ಕೂ ಮೀಸಲಾತಿ ನೀತಿ ಜಾರಿಯಾಗುವ ವಿಚಾರವೇನಾದರೂ ನಮ್ಮ ಹೂಡಿಕೆದಾರರಿಗೆ ತಿಳಿದರೆ ಅವರು ಖಂಡಿತ ಹಣ ಹೂಡದೆ ಇಲ್ಲಿಂದ ಕಾಲ್ಕೀಳುತ್ತಾರೆ.
  3. ಇಂಥ ನೀತಿಗಳು ಜಾರಿಯಾದರೆ ಖಾಸಗಿ ಕ್ಷೇತ್ರದ ಸ್ವಾಸ್ಥ್ಯವೇ ಹದಗೆಡುತ್ತದೆ. ಇಲ್ಲಿ ಸ್ಪರ್ಧೆ ಇರಲಿ. ಯಾವ ಕಾರಣಕ್ಕೂ ಮೀಸಲಾತಿ ಬೇಡ.

ಮೀಸಲಾತಿ ನೀತಿಯನ್ನು ಖಾಸಗಿ ಕ್ಷೇತ್ರದಲ್ಲಿ ಜಾರಿಗೊಳಿಸಲು ಬಯಸದ ಜನರ ಅಭಿಪ್ರಾಯಗಳ ಬಗ್ಗೆ ಹೆಚ್ಚು ಬಿಡಿಸಿ ಹೇಳುವ ಅಗತ್ಯವಿಲ್ಲ.

ಮೊದಲನೆಯದಾಗಿ 2004 ರ ಮಾನವಾಭಿವೃದ್ಧಿ ವರದಿಯ ಪ್ರಕಾರ ಈಗ ಜಾರಿಯಲ್ಲಿರುವ ಮೀಸಲಾತಿಯನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳು ಪಡೆಯುತ್ತಿದ್ದು, ಸರ್ಕಾರಿ ಉದ್ಯೋಗಗಳಲ್ಲಿ ಈ ವರ್ಗಗಳ ಪ್ರಾತಿನಿದ್ಯಕ್ಕೆ ಸಾಮಾಜಿಕ ನ್ಯಾಯ ಸಿಕ್ಕಂತಾಗಿದೆ. ಇದಲ್ಲದೆ ನಗರ ಪ್ರದೇಶಗಳಲ್ಲಿ ಜಾತಿಯನ್ನು ಮೀರುವ ಮಧ್ಯಮ ವರ್ಗಗಳು ಸೃಷ್ಟಿಯಾಗಿದ್ದು ಈ ಮೀಸಲಾತಿ ನೀಡಿಕೆಯಿಂದಲೇ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಪರಿಸ್ಥಿತಿಗೆ ಹೋಲಿಸಿದರೆ ಇವತ್ತು ಮೀಸಲಾತಿ ಪಡೆದುಕೊಂಡಿರುವ ದಲಿತ ಮತ್ತು ಹಿಂದುಳಿದ ವರ್ಗಗಳ ಸಾಮಾಜಿಕ ಪ್ರಜ್ಞೆಯ ಅರಿವಿನ ನಡೆಯಲ್ಲಿ ಗಮನಾರ್ಹವೆನಿಸುವ ಬದಲಾವಣೆಗಳನ್ನು ಕಾಣಬಹುದಾಗಿದೆ. ಈ ದೇಶದಲ್ಲಿ ಮೀಸಲಾತಿ ನೀತಿ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎನ್ನುವ ಖಾಸಗಿ ಕ್ಷೇತ್ರದ ಜನರ ಮಾತುಗಳಲ್ಲಿ ಕಾಳಜಿಗಿಂತ ಹೆಚ್ಚು ಆತಂಕವೇ ತುಂಬಿದೆ.

ಎರಡನೆಯದಾಗಿ ಖಾಸಗಿ ಸ್ವಾಮ್ಯದಲ್ಲಿರುವ ಕೈಗಾರಿಕಾ ವಲಯಗಳ ಮೇಲೆ ಸರ್ಕಾರ ತಲೆಹಾಕಬಾರದೆನ್ನುವ ಅವರ ವಾದ ಸಾಮಾಜಿಕ ನ್ಯಾಯವನ್ನೇ ಅಣಕಿಸಿದಂತಿದೆ. ಇದು ಕೈಗಾರಿಕೆ, ಕಾರ್ಮಿಕ  ಮತ್ತು ಪರಿಸರಕ್ಕೆ ಸಂಬಂಧಿಸಿದ ಅಧಿನಿಯಮಗಳನ್ನು ರೂಪಿಸುವ ಸಂಪೂರ್ಣ ಅಧಿಕಾರವನ್ನು ಸರ್ಕಾರವು ಖಾಸಗಿ ಕ್ಷೇತ್ರಗಳಿಗೆ ಬಿಟ್ಟುಕೊಡಬೇಕು ಅನ್ನುವಂತಿದೆ. ಬಂಡವಾಳ ಹೂಡಿಕೆದಾರರಿಗೆ ಮಾತ್ರ ನಿಷ್ಠವಾಗಿರುವ ಖಾಸಗಿ ಸಂಸ್ಥೆಗಳು, ಹೂಡಿಕೆದಾರರಿಗೆ ಅನುಕೂಲವಾಗುವಂತಹ ಕಾಯ್ದೆಗಳನ್ನು ಮಾತ್ರ ಈ ದೇಶದ ಸರ್ಕಾರಗಳು ರಚಿಸಬೇಕು ಎನ್ನುವ ಧೋರಣೆಗಳಿಗೆ ಬಂದು ನಿಂತಂತೆ ವರ್ತಿಸುತ್ತಿವೆ.

ಮೂರನೆಯದಾಗಿ, ‘ಸ್ಪರ್ಧೆ ಇರಲಿ ಯಾವ ಕಾರಣಕ್ಕೂ ಮೀಸಲಾತಿ ಬೇಡ’ ಎನ್ನುವ ಖಾಸಗಿ ಸಂಸ್ಥೆಗಳು ಈ ದೇಶದ ಸಾಮಾಜಿಕ ನ್ಯಾಯವನ್ನು ಹೇಗೆ ನೋಡುತ್ತಿವೆ ಎಂಬುದು ಗೊತ್ತಾಗುತ್ತದೆ. ಇವರು ಹೇಳುವ ಸ್ಪರ್ಧೆಗೆ ಬೇಕಾದ ದಕ್ಷತೆಯನ್ನು ಇಟ್ಟುಕೊಂಡಿರುವ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ನಿಜಕ್ಕೂ ಪ್ರವೇಶ ದೊರಕುವುದೇ?. ಈ ದೇಶದ ಖಾಸಗಿ ವಲಯಗಳಲ್ಲಿ ಸ್ಪರ್ಧೆಎಂದರೆ ತಮಗೇ ಬೇಕಾದ ವರ್ಗವನ್ನು ಮಾತ್ರ ಒಳಕ್ಕೆ ಬಿಟ್ಟುಕೊಳ್ಳುವ ನೀತಿಯೆಂದೇ ಅರ್ಥ.

ಪ್ರತಿಯೊಂದಕ್ಕೂ ಅಮೆರಿಕಾದತ್ತ ಮುಖಮಾಡಿ ಅಲ್ಲಿನ ಮಾದರಿಯನ್ನು ಅನುಸರಿಸುವ ಭಾರತ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿಕೆಯ ವಿಚಾರದಲ್ಲಿ ಅಮೆರಿಕಾವನ್ನು ಇದುವರೆಗೂ ಕಣ್ಣೆತ್ತಿಯೂ ನೋಡಿಲ್ಲ. ಜಗತ್ತಿನ ಅತಿ ಶ್ರೀಮಂತ ದೇಶವೆಂದೇ ಕರೆಸಿಕೊಳ್ಳುವ ಅಮೆರಿಕಾ ಕಳೆದ ನಾಲ್ಕು ದಶಕಗಳಿಂದ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ನೀಡುತ್ತಾ ಬಂದಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀತಿ ಅನುಸರಿಸಿದರೆ ದೊಡ್ಡ ಬಂಡವಾಳ ಹೂಡಿಕೆದಾರರು ದೇಶದಿಂದಲೇ ಕಾಲ್ಕೀಳುತ್ತಾರೆ ಎನ್ನುವ ಭಾರತದ ಖಾಸಗಿ ವಲಯದ ಆತಂಕ ನಿಜವೇ ಆಗಿದ್ದರೆ ಇಷ್ಟು ಹೊತ್ತಿಗೆ ಅಮೆರಿಕಾದ ಆರ್ಥಿಕ ವ್ಯವಸ್ಥೆಯೇ ಕುಸಿದು ಬೀಳಬೇಕಿತ್ತಲ್ಲವೇ?.

ಪ್ರತಿಭೆಗೆ ಮಾತ್ರ ಮನ್ನಣೆ ನೀಡಬೇಕು ಎನ್ನುವ ಖಾಸಗಿ ಕ್ಷೇತ್ರದ ವಾದಕ್ಕೆ ಮಣೆ ಹಾಕುವುದಾದರೆ ಈ ದೇಶದ ತುಳಿತಕ್ಕೊಳಗಾದ ಎಲ್ಲ ಶೋಷಿತ ಸಮುದಾಯಗಳನ್ನು ಶಾಶ್ವತವಾಗಿ ಕತ್ತಲಲ್ಲಿಡಬೇಕಾಗುತ್ತದೆ. ಈ ದೇಶದ ವರ್ತಮಾನದ ಸಾಮಾಜಿಕ ಪರಿಸ್ಥಿತಿ ಹೇಗಿದೆಯೆಂದರೆ ಪ್ರತಿಭೆಯ ಹೆಸರನ್ನು ಮುಂದಿಟ್ಟುಕೊಂಡು ಪುರಾತನ ಅಧಿಪತ್ಯಕ್ಕೆ ಲಾಭವಾಗುವ ನಿರ್ಣಯಗಳನ್ನು ಜಾರಿಮಾಡುವ ಸ್ಥಾನಗಳಲ್ಲಿ ಮೀಸಲಾತಿ ನೀತಿಯನ್ನು ಗಟ್ಟಿಯಾಗಿ ವಿರೋಧಿಸುವ ದೊಡ್ಡ ವರ್ಗವೇ ಕೂತುಬಿಟ್ಟಿದೆ. ಹೀಗಾಗಿ ಸಾಮಾಜಿಕ ನ್ಯಾಯದ ಪ್ರಶ್ನೆಗಳು ಈ ದೇಶದಲ್ಲಿ ಹುಟ್ಟಿಕೊಂಡಾಗಲೆಲ್ಲ ಅದನ್ನು ಆರಂಭದಲ್ಲೇ ವಿರೋಧಿಸುವ ವರ್ಗ ಸದಾ ಕ್ರಿಯಾಶೀಲವಾಗಿರುತ್ತದೆ.

ಖಾಸಗಿ ಕ್ಷೇತ್ರದ ಸ್ಥಾಪನೆಗೆ ಅವಕಾಶ ನೀಡುವ ಸಂದರ್ಭಗಳಲ್ಲಿ ನಮ್ಮ ಸರ್ಕಾರಗಳು ಅಪಾರ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಅವಕ್ಕೆ ಒದಗಿಸಿವೆ. ಒಂಭತ್ತು, ಹತ್ತು ಮತ್ತು ಹನ್ನೊಂದನೆಯ ಪಂಚವಾರ್ಷಿಕ ಯೋಜನೆಗಳಲ್ಲಿ ಜನತೆಯ ಹಣವನ್ನು ಖಾಸಗಿ ಕ್ಷೇತ್ರದ ಬೆಳವಣಿಗೆಗೆ ಸರ್ಕಾರವೇ ಖುದ್ದು ತೊಡಗಿಸಿದೆ. ಜನತೆಯ ತೆರಿಗೆ ಹಣದಿಂದ ಬೆಳೆದು ಕೊಬ್ಬುವ ಖಾಸಗಿ ಕ್ಷೇತ್ರವು ಸಾಮಾಜಿಕ ನ್ಯಾಯದ ಪರ ನಿಲ್ಲಬೇಕೆಂಬ ಪ್ರಶ್ನೆ ಬಂದಾಗ ಪಲಾಯನದ ಹಾದಿ ಹಿಡಿಯುತ್ತವೆ. ಸ್ವಾತಂತ್ರ್ಯೋತ್ತರದ ಕಳೆದ ಆರು ದಶಕಗಳಲ್ಲಿ ಇಲ್ಲಿನ ನೆಲ, ಜಲ, ಸಂಪನ್ಮೂಲ, ಮೂಲಭೂತ ಸೌಕರ್ಯಗಳನ್ನು ಪಡೆದುಕೊಂಡ ಖಾಸಗಿ ಕ್ಷೇತ್ರವು ಜನತೆಯ ಸಂಕಟಗಳಿಗೆ ಬೆನ್ನುತೋರಿಸಿದ್ದೇ ಹೆಚ್ಚು.

ಸರ್ಕಾರ ಏನು ಮಾಡಬಹುದು?

ಇವತ್ತು ಸರ್ಕಾರಿ ಸ್ವಾಮ್ಯದಲ್ಲಿರುವ ಬೃಹತ್ ಉದ್ದಿಮೆಗಳು ಖಾಸಗಿಯವರ ಹಿಡಿತದಲ್ಲೂ ಇವೆ. ಸರ್ಕಾರದ ಹಂಗಿಲ್ಲದೆ ಸ್ವಾತಂತ್ರ್ಯವಾಗಿ ಬೆಳೆದಿರುವ ಅನೇಕ ಕೈಗಾರಿಕಾ ಸಂಸ್ಥೆಗಳನ್ನು ನಾವು ಕಾಣಬಹುದು. ಸಾರ್ವಜನಿಕ ಹಿತಾಸಕ್ತಿಗೆ ಮನ್ನಣೆ ನೀಡುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳ ಮೇಲೆ ನಿರ್ಬಂಧ ಹೇರುವುದು ಸಾಧ್ಯವಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಮಾಡುವ ಇಚ್ಛಾಶಕ್ತಿ ಸರ್ಕಾರಕ್ಕೆ ಇರುವುದು ನಿಜವೇ ಆದಲ್ಲಿ ಖಾಸಗಿ ಸಂಸ್ಥೆಗಳು ಸರ್ಕಾರದ ಜೊತೆ ಕೈಜೋಡಿಸುವ, ಸರ್ಕಾರದ ನೀತಿಗಳಿಗೆ ಒಳಪಡುವಂತೆ ನಿಯಮಗಳನ್ನು ರಚಿಸಬಹುದಲ್ಲವೇ?

ಖಾಸಗಿ ಸ್ವಾಮ್ಯದ ಸಂಸ್ಥೆಗಳು ನಿರ್ವಾತ ಸ್ಥಿತಿಯಿಂದಾಗಲಿ, ಶೂನ್ಯದಿಂದಾಗಲಿ ಹುಟ್ಟಿಕೊಂಡಿಲ್ಲ. ಸರ್ಕಾರದ ಅನುದಾನ, ಸಬ್ಸಿಡಿ, ವಿಶೇಷ ಯೋಜನೆಗಳಿಂದಾಗಿ ಇವತ್ತು ಅನೇಕ ಖಾಸಗಿ ಸಂಸ್ಥೆಗಳು ಅಸ್ತಿತ್ವದಲ್ಲಿವೆ. ಉತ್ತೇಜನಕಾರಿ ಪೋಷಣೆ, ಬಂಡವಾಳ ಹೂಡಿಕೆಯನ್ನಷ್ಟೇ ನಂಬಿಗೊಂಡು ಹೆಜ್ಜೆ ಇಡುವ ಖಾಸಗಿ ಸಂಸ್ಥೆಗಳಿಗೆ ಸರ್ಕಾರದ ಮೂಲಭೂತ ಸೌಕರ್ಯದ ನೆರವುಗಳು ದೊರಕದಿದ್ದರೆ ಅವು ಉಸಿರಾಡುವುದೇ ಕಷ್ಟವಾಗುತ್ತದೆ. ಖಾಸಗಿ ಸಂಸ್ಥೆಗಳು ಮೀಸಲಾತಿ ನೀತಿಯನ್ನು ಅಳವಡಿಸಿಕೊಳ್ಳಲು ನಿರಾಕರಿಸಿದರೆ ಆಗ, ಸರ್ಕಾರ ಅವುಗಳಿಗೆ ನೀಡಿರುವ ಸವಲತ್ತನ್ನು ಹಿಂತೆಗೆದುಕೊಳ್ಳಬಹುದು ಮತ್ತು ಅದರ ಮಾನ್ಯತೆಯನ್ನು ರದ್ದುಮಾಡುವ ಕ್ರಮಗಳಿಗೂ ಮುಂದಾಗಬಹುದು.

ಸಂವಿಧಾನವನ್ನು ಎದುರಿಗಿಟ್ಟುಕೊಂಡು:

ಸಾಮಾಜಿಕ ನ್ಯಾಯ ಮತ್ತು ಕಲ್ಯಾಣದ ಗುರಿಗಾಗಿ ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಮೂಲಕ ಸಂವಿಧಾನದ ನೆರವಿನೊಂದಿಗೆ ಖಾಸಗಿ ಕ್ಷೇತ್ರಗಳಲ್ಲಿ ಮೀಸಲಾತಿ ಜಾರಿಗಾಗಿ ಪ್ರಯತ್ನಿಸಬಹುದು. ಈ ನಿಟ್ಟಿನಲ್ಲಿ ಅನುಚ್ಛೇದ 38, 39(ಬಿ) ಮತ್ತು (ಸಿ), 41 ಮತ್ತು 46 ನಮ್ಮ ಬೆನ್ನಿಗೆ ನಿಲ್ಲುತ್ತವೆ. ಅದರಲ್ಲೂ ಅನುಚ್ಛೇದ 46 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಮತ್ತು ಆರ್ಥಿಕ  ಸ್ಥಿತಿಯನ್ನು ಉತ್ತಮ ಪಡಿಸಲು ರಾಜ್ಯವು ವಿಶೇಷ ನೀತಿಗಳನ್ನು ರಚಿಸಿ ಅನುಷ್ಠಾನಕ್ಕೆ ತರಬಹುದು ಎಂದು ಹೇಳುತ್ತದೆ.

ಅನುಚ್ಛೇದ 14 ಈ ದೇಶದ ಕಾನೂನಿನ ಮುಂದೆ ಎಲ್ಲರೂ ಸಮಾನರು, ರಾಜ್ಯ ಅಥವಾ ಕೇಂದ್ರ ಸರ್ಕಾರವು ಯಾವುದೇ ನೆಪವೊಡ್ಡಿ ಈ ಸಮಾನತೆಯ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ವಿವೇಚಿಸುತ್ತದೆ. ಇಂದ್ರಸಾಹ್ನಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದ  ತೀರ್ಪಿನಲ್ಲಿ ಸರ್ವೊಚ್ಚ ನ್ಯಾಯಾಲಯವು ‘ಎಲ್ಲರಿಗೂ ಸಮಾನ ರಕ್ಷಣೆ ನೀಡುವ ನಿಟ್ಟಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ  ಬದಲಾವಣೆಗೆ ರಾಜ್ಯವು ಪ್ರಯತ್ನಿಸಬೇಕು, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದರೆ ಆರ್ಥಿಕ ಸಂಪನ್ಮೂಲಗಳನ್ನು ಪಡೆಯಲು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವುದೇ ಆಗಿದೆ’ ಎಂದು ಹೇಳಿದೆ.

ಅನುಚ್ಛೇದ 15(1) ಈ ದೇಶದ ಯಾವುದೇ ನಾಗರಿಕನ ವಿರುದ್ಧ ಆತನ ಜಾತಿ, ಮತ, ಲಿಂಗ, ಹುಟ್ಟಿದ ಸ್ಥಳಗಳ ಆಧಾರದ ಮೇಲೆ ರಾಜ್ಯವು ತಾರತಮ್ಯ ಮಾಡಕೂಡದೆಂದು ಹೇಳುತ್ತದೆ. ಜೊತೆಗೆ ಅನುಚ್ಛೇದ 15(4) ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಗತಿಗಾಗಿ ರಾಜ್ಯವು ತನಗೆ ಸರಿಕಂಡ ಉಪಬಂಧಗಳನ್ನು ರಚಿಸಿಕೊಳ್ಳಬಹುದು ಎಂದು ಹೇಳುತ್ತದೆ.

ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲಿಕ್ಕೆಂದೇ ನಮ್ಮಲ್ಲಿ ಅನೇಕ ಜನಪರ ಅಧಿನಿಯಮಗಳು ರಚನೆಯಾಗಿವೆ. ಹೆಣ್ಣನ್ನು ಆರ್ಥಿಕವಾಗಿ ಸಬಲಗೊಳಿಸಲು ‘ಸಮಾನ ವೇತನ ಅಧಿನಿಯಮ’ದಂತಹ ಕಾಯ್ದೆ ನಮ್ಮಲ್ಲಿದೆ. ಈ ಅಧಿನಿಯಮದ ಪ್ರಕಾರ ಹೆಣ್ಣಿಗೆ ಗಂಡಿನಷ್ಟೆ ಸಮಾನ ಕೆಲಸಕ್ಕಾಗಿ ಸಮಾನ ವೇತನ ಪಡೆಯುವ ಹಕ್ಕಿದೆ. ಈ ಅಧಿನಿಯಮ  ಸರ್ಕಾರಿ ಮತ್ತು ಖಾಸಗಿ ಎರಡು ಕ್ಷೇತ್ರಗಳಲ್ಲೂ ಒಳಪಡುತ್ತದೆ. ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಸಂಸ್ಥೆಗಳಲ್ಲಿ ಹೆಣ್ಣು ಗಂಡಿನಷ್ಟು ಕೆಲಸಮಾಡಲಾರಳು ಎಂಬ ಪೂರ್ವಗ್ರಹಕ್ಕೆ ಅಂಟಿಕೊಂಡು ಕೂತಿದ್ದರೆ ಇಂಥದೊಂದು ಅಧಿನಿಯಮ ಜಾರಿಯಾಗುತ್ತಲೇ ಇರಲಿಲ್ಲ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿಕೆ ವಿಚಾರದಲ್ಲಿ ಮೀನಮೇಷ ಎಣಿಸುತ್ತಿರುವ  ಸರ್ಕಾರಗಳು ಕಣ್ಣೆದುರಿಗಿರುವ ‘ಸಮಾನ ವೇತನ ಅಧಿನಿಯಮ’ದ ಯಶಸ್ಸಿನ ಫಲಿತಾಂಶಗಳತ್ತ ಸ್ವಲ್ಪ ಕಣ್ಣು ಹಾಯಿಸಲಿ.

ಕೊನೆಯದಾಗಿ, ಅನುಚ್ಛೇದ 21 ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಘನತೆಯಿಂದ ಜೀವಿಸುವ, ಜೀವ ರಕ್ಷಣೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳನ್ನು ಪ್ರಜಾಪ್ರಭುತ್ವದ ಸಮಾಜದಲ್ಲಿ ಹೊಂದುವ ಹಕ್ಕುಗಳನ್ನು ನೀಡಿದೆ. ಇದರ ಪ್ರಕಾರ ಪ್ರತಿಯೊಬ್ಬ ನಾಗರಿಕನು ಉತ್ತಮ ಪರಿಸರದಲ್ಲಿ ಜೀವಿಸುವ, ಮೂಲಭೂತ ಸೌಕರ್ಯಗಳನ್ನು ಪಡೆಯುವ, ಪೌಷ್ಟಿಕ ಆಹಾರ, ಶಿಕ್ಷಣ, ಆರೋಗ್ಯ ಕೇಂದ್ರಗಳಿಗಾಗಿ ರಾಜ್ಯದ ಮೊರೆ ಹೋಗಬಹುದಾಗಿದೆ.

ಬಂಧು ಮುಕ್ತಿ  ಮೋರ್ಚಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸರ್ವೊಚ್ಚ ನ್ಯಾಯಾಲಯವು ‘ಶೋಷಣೆ ಮುಕ್ತ ಮತ್ತು ಆತ್ಮಗೌರವದ ಬದುಕು ನಡೆಸುವ’ ಸಲುವಾಗಿ ಮೂಲಭೂತ ಹಕ್ಕುಗಳನ್ನು ಈ ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ನೀಡಿದೆ. ಅನುಚ್ಛೇದ 21ರ ಪ್ರಕಾರ ನೈತಿಕ ಮತ್ತು ಗೌರವದ ಬದುಕಿಗಾಗಿ ಈ ದೇಶದ ಪ್ರತಿಯೊಬ್ಬರು ರಾಜ್ಯ ನೀತಿಯ ನಿರ್ದೇಶಕ  ತತ್ವಗಳನ್ನು ಬಳಸಿಕೊಂಡು ಸರ್ಕಾರದ ಮೇಲೆ ಒತ್ತಡ ತರಬಹುದಾಗಿದೆ. ಆದರೆ ಖಾಸಗಿ ಸಂಸ್ಥೆಗಳು ಮೀಸಲಾತಿ ನೀತಿಯನ್ನು ಗಾಳಿಗೆ ತೂರಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳನ್ನು ಸಾಮಾಜಿಕ ಬದುಕಿನ ಮುಖ್ಯವಾಹಿನಿಗಳಿಂದ ದೂರವಿಡುವ ಕೆಲಸಗಳನ್ನು ಎಗ್ಗಿಲ್ಲದೆ ಮಾಡುತ್ತಲೇ ಇವೆ.

ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಉಳಿವಿಗಾಗಿ ಮತ್ತು ಈ ಜನರ ಜೀವನೋಪಾಯಕ್ಕಾಗಿ ಸರ್ಕಾರವು ವಿಶೇಷ ಅಧಿನಿಯಮಗಳನ್ನು ರಚಿಸಬಹುದೆಂದು ಸಂವಿಧಾನ ಹೇಳಿದರೆ, ಖಾಸಗಿ ಕ್ಷೇತ್ರಗಳು ಸರ್ಕಾರದ ಹಿಡಿತದಲ್ಲಿರುವ ಸಾರ್ವಜನಿಕ ಸಂಸ್ಥೆಗಳನ್ನು ನುಂಗಿಹಾಕುತ್ತಾ ಈ ಮಣ್ಣಿನ ತಳಸಮುದಾಯಗಳು ಯಾವ ಕಾರಣಕ್ಕೂ ಖಾಸಗಿ ಒಡೆತನದ ಸಂಸ್ಥೆಗಳ ಬಾಗಿಲು ತಟ್ಟದಂತೆ ನಾಜೂಕಾಗಿ ನೋಡಿಕೊಳ್ಳುತ್ತಿವೆ.

ಮಾದರಿಯಾಗಬಹುದಾದ ಪಶ್ಚಿಮದ ಪಾಠಗಳು:

ಭಾರತದಂತೆ ಅನೇಕ ಪಶ್ಚಿಮ ದೇಶಗಳು ಕೂಡ ಅಸಮಾನ ಸಮಾಜವನ್ನು ಸೃಷ್ಟಿಸಿ ಅದನ್ನು ಜೀವಂತವಾಗಿಡಲು ಹರಸಾಹಸ ನಡೆಸುತ್ತಿವೆ. ಪರಿಸ್ಥಿತಿ ಹೀಗಿದ್ದರೂ ದಕ್ಷಿಣ ಆಫ್ರಿಕಾ ಮತ್ತು ಅಮೆರಿಕಾ ದೇಶಗಳು ಈಗಾಗಲೇ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀತಿಯನ್ನು ಅಳವಡಿಸಿಕೊಂಡಿವೆ. ಅಲ್ಲಿನ ಪಾಠಗಳನ್ನು ಅವಲೋಕಿಸಿದರೆ ನಮ್ಮ ನೆಲದ ಕಾನೂನುಗಳು ಇನ್ನಷ್ಟು ಗಟ್ಟಿಯಾಗಿ ನಿಲ್ಲಲು ನೆರವಾಗಬಹುದೇನೋ.

ದಕ್ಷಿಣ ಆಫ್ರಿಕಾ:

ದಕ್ಷಿಣ ಆಫ್ರಿಕಾ ಸಂವಿಧಾನದ ಅನುಚ್ಛೇದ 9(2) ಮತ್ತು 36 ಗತಕಾಲದಿಂದ ಬೇರುಬಿಟ್ಟಿದ್ದ ಸಾಮಾಜಿಕ ತಾರತಮ್ಯವನ್ನು ಕೊನೆಗಾಣಿಸಲು ಪ್ರಭುತ್ವವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗವನ್ನು ಬಳಸಿಕೊಂಡು ವಿಶೇಷ ಕಾನೂನುಗಳನ್ನು ರಚಿಸಬಹುದು ಎಂದು ವಿವೇಚಿಸುತ್ತದೆ. ಇದರ ಪ್ರಯತ್ನವಾಗಿ ದಕ್ಷಿಣ ಆಫ್ರಿಕಾದಲ್ಲಿ The Employment Equity Act, 1998 ಮತ್ತು The Promotion of Equality and Prevention of Unfair Discrimination Act, 2000  ಎಂಬೆರಡು ಅಧಿನಿಯಮಗಳು ಜಾರಿಗೆ ಬಂದವು. ಸರ್ಕಾರಿ ಮತ್ತು ಖಾಸಗಿ ಒಡೆತನದಲ್ಲಿರುವ ಸಂಸ್ಥೆಗಳು ಈ ಎರಡು ಅಧಿನಿಯಮದ ಉಪಬಂಧ ಮತ್ತು ನಿಯಮಗಳಿಗೆ ಒಳಪಡುತ್ತವೆ. ಜನಾಂಗ, ಮತ, ಹುಟ್ಟಿನ ಕಾರಣಗಳ ಆಧಾರದ ಮೇಲೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಯಾವುದೇ ರೀತಿಯಲ್ಲೂ ತಾರತಮ್ಯ, ಕಿರುಕುಳ, ದ್ವೇಷ ಕಾರುವ ಮಾತುಗಳಿಂದ ಶೋಷಣೆಗೆ ಒಳಪಡಿಸುವಂತಿಲ್ಲವೆಂದು The Promotion of Equality and Prevention of Unfair Discrimination Act, 2000 ಹೇಳಿದರೆ, ಕಪ್ಪು ಜನರ ಒಳಿತಿಗಾಗಿ ಉದ್ಯೋಗ ನೀಡಿಕೆಯಲ್ಲಿ ಸಮಾನ ಅವಕಾಶ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಲು ಈ ಜನರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು The Employment Equity Act, 1998 ಹೇಳುತ್ತದೆ. ಈ ಅಧಿನಿಯಮದ ಕಲಂ 5 ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ದುಡಿಯುವ ಕಪ್ಪು ಜನರಿಗೆ ತಾರತಮ್ಯ ಮತ್ತು ಶೋಷಣೆ ಮುಕ್ತ ಪ್ರದೇಶದಲ್ಲಿ ಕೆಲಸ ಮಾಡುವಂತಹ ವಾತಾವರಣವನ್ನು ಆ ಸಂಸ್ಥೆಗಳ ಒಡೆತನ ಹೊಂದಿರುವ ಮಾಲೀಕರೆ ನಿರ್ಮಿಸಬೇಕು ಮತ್ತು ಕಲಂ 6 ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀತಿಯಡಿ ಕಪ್ಪು ಜನರಿಗೆ ಸೂಕ್ತ ಪ್ರಾತಿನಿಧ್ಯ ನೀಡದ ಸಂಸ್ಥೆಗಳನ್ನು ವಿಸರ್ಜಿಸುವ ಹಕ್ಕು ಪ್ರಭುತ್ವಕ್ಕಿದೆ ಎಂದು ಹೇಳುತ್ತದೆ.

ಈ ಎರಡು ಅಧಿನಿಯಮಗಳಿಗೆ ಒಳಪಡುವ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ದಕ್ಷಿಣ ಆಫ್ರಿಕಾ ಮಾನವ ಹಕ್ಕುಗಳ ಆಯೋಗಕ್ಕೆ ವಾರ್ಷಿಕ ವರದಿಯನ್ನು ನೀಡಬೇಕು. ಈ ಆಯೋಗವು ಸಮಾನ ಉದ್ಯೋಗ ನೀತಿಯನ್ನು ಕಾಯ್ದುಕೊಳ್ಳಲು ವಿಫಲವಾದ ಖಾಸಗಿ ಮತ್ತು ಸಾರ್ವಜನಿಗ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬಹುದಾಗಿದೆ.

ಅಮೆರಿಕಾ:

ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ನೀತಿಯನ್ನು ಜಾರಿಗೆ ತರಲು ಅಮೆರಿಕಾ ಕಾಂಗ್ರೆಸ್ 1964 ರಲ್ಲಿಯೇ Civil Rights Act ರಚಿಸಿಕೊಂಡಿದೆ. ಈ ಅಧಿನಿಯಮದ ಪ್ರಕಾರ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ, ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುವ, ಕಾರ್ಮಿಕರಿಗೆ ಗುತ್ತಿಗೆ ನೀಡುವ, ಬಡ್ತಿ, ರಜೆ, ಪರಿಹಾರ, ನಿವೃತ್ತಿ ವೇತನ ಇವೇ ಮೊದಲಾದ ವಿಚಾರಗಳಲ್ಲಿ ಜನಾಂಗದ ಆಧಾರದ ಮೇಲೆ ಯಾರನ್ನೂ ತಾರತಮ್ಯಕ್ಕೆ ಒಳಪಡಿಸುವಂತಿಲ್ಲ ಎಂದು ಹೇಳುತ್ತದೆ. ಖಾಸಗಿ ಸಂಸ್ಥೆಗಳ ಮೇಲೆ ಕಣ್ಣಿಡಲೆಂದೇ ಸಮಾನ ಉದ್ಯೋಗ ಅವಕಾಶಗಳ ಆಯೋಗ (Equal Employment Opportunities Commission)ವನ್ನು ರಚಿಸಲಾಗಿದೆ. ಇದಲ್ಲದೆ ಸಂಸ್ಥೆಗಳ ಎಲ್ಲಾ ಬಗೆಯ ಚಟುವಟಿಕೆಗಳು ಕಾರ್ಮಿಕ ಇಲಾಖೆಯ ನಿಯಂತ್ರಣಕ್ಕೆ ಒಳಪಡುತ್ತವೆ. ಜೊತೆಗೆ ಬೃಹತ್ ಪ್ರಮಾಣದ ಲೋಕೋಪಯೋಗಿ ಕೆಲಸಗಳಿಗೆ ಹೊರಗುತ್ತಿಗೆ ನೀಡುವಾಗ ಕಡ್ಡಾಯವಾಗಿ ಸಮಾಜದ ಅಂಚಿನಲ್ಲಿರುವ ಜನರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು ಅಮೆರಿಕಾ ಸಂವಿಧಾನವೇ ಹೇಳುತ್ತದೆ.

ಸಂವಿಧಾನದ ತಿದ್ದುಪಡಿಯಾಗಲಿ:

ಸರ್ಕಾರದಿಂದ ಅನುದಾನ, ಸಬ್ಸಿಡಿ, ರಿಯಾಯಿತಿ ಮತ್ತು ಇತರೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಪಡೆದಿರುವ ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ತಮ್ಮ ಸಂಸ್ಥೆಯಲ್ಲಿ ಮೀಸಲಾತಿಯನ್ನು ನೀಡಬೇಕೆಂದು ಜನವರಿ 2004 ರಂದು ಮಹಾರಾಷ್ಟ್ರ ಸರ್ಕಾರವು ಮಸೂದೆಯೊಂದನ್ನು ಪಾಸು ಮಾಡಿತು. ಇದಕ್ಕೆ ಉತ್ತರವಾಗಿ ವಿಡಿಯೋಕಾನ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಶೇಕಡ 15 ರಿಂದ 20ರಷ್ಟು ಮೀಸಲಾತಿಯನ್ನು ತನ್ನ ಸಂಸ್ಥೆಯಲ್ಲಿ ಒದಗಿಸಿತು. ವಿಡಿಯೋಕಾನ್ ಬಿಟ್ಟರೆ ಮತ್ತಿನ್ನ್ಯಾವ ಸಂಸ್ಥೆಯೂ ಮೀಸಲಾತಿ ನೀಡಿಕೆಯಲ್ಲಿ ಎದೆಕೊಟ್ಟು ಮುಂದೆ ಬರಲಿಲ್ಲ. ಅಂತಹ ಸಂಸ್ಥೆಗಳಿಗೆ ಇನ್ನು ಮುಂದೆ ಸರ್ಕಾರದಿಂದ ಯಾವುದೇ ರೀತಿಯ ನೆರವು ದೊರಕಲಾರದೆಂದು ಮಹಾರಾಷ್ಟ್ರ ಸರ್ಕಾರವು ಆದೇಶವನ್ನು ಹೊರಡಿಸಿತು. ಖಾಸಗಿ ಸಂಸ್ಥೆಗಳು ಬೆಚ್ಚಿದ್ದೇ ಆಗ!

ಭಾರತ ಸ್ವಾತಂತ್ರ್ಯಗಳಿಸಿ 63 ವರ್ಷಗಳಾಯಿತು. ಸಂವಿಧಾನದ ಮೂಲಕ ಈ ನೆಲದ ತಳ ಸಮುದಾಯಗಳಿಗೆ, ಸಮಾಜದ ಅಂಚಿನಲ್ಲಿರುವ ಅಲಕ್ಷಿತ ಜಾತಿಗಳಿಗೆ ಸಿಗಬೇಕಿದ್ದ ಸಾಮಾಜಿಕ ನ್ಯಾಯವು ಸಂಪೂರ್ಣವಾಗಿ ಇದುವರೆವಿಗೂ ಸಿಕ್ಕಿಲ್ಲ. ಸರ್ಕಾರ ಖಾಸಗಿ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿ ಮೀಸಲಾತಿ ನೀತಿಯನ್ನು ಕಡ್ಡಾಯವಾಗಿ ಪಾಲಿಸಲೇಬೇಕೆಂಬ ಗಂಭೀರ ಮಿತಿಯನ್ನು ಒಡ್ಡದಿದ್ದರೆ, ಖಾಸಗಿ ಸಂಸ್ಥೆಗಳು ಇನ್ನಷ್ಟು ಬೆಳೆದು ಆರ್ಥಿಕ ಸಮಾನತೆಯ ಕನಸುಗಳು ಛಿದ್ರಗೊಳ್ಳಬಹುದು. ಖುದ್ದು ಪ್ರಭುತ್ವವೇ ನಿಯಂತ್ರಣ ಹಾಕದಿದ್ದರೆ ಖಾಸಗಿ ಸಂಸ್ಥೆಗಳು ಅಷ್ಟು ಸುಲಭವಾಗಿ ಮಣಿಯಲಾರವು.  ಈಗಾಗಲೇ ನಮ್ಮ ಸಂವಿಧಾನಕ್ಕೆ 94 ತಿದ್ದುಪಡಿಗಳಾಗಿವೆ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿಕೆ ವಿಚಾರದಲ್ಲಿ ಮತ್ತೊಂದು ತಿದ್ದುಪಡಿಯಾಗಬೇಕಾದ ತುರ್ತಿದೆ. ಇದಾಗದ ಹೊರತು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿಕೆಯ ಕುರಿತು ಈಗ ನಡೆಯುತ್ತಿರುವ ಚರ್ಚೆಗಳಿಗೆ ಒಂದು ಸ್ಪಷ್ಟ ಆಕಾರ ದೊರಕಲಾರದೇನೋ.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.