ಆದರ್ಶ, ಆಡಳಿತ ಮತ್ತು ಆಚರಣೆಗಳ ನಡುವೆ : ದೇವರಾಜ ಅರಸು ಅವರ ಭೂ ಸುಧಾರಣೆಯಲ್ಲಿ ಪ್ರತ್ಯೇಕತೆಗೆ ಅವಕಾಶ

– ಪ್ರೊ. ನರೇಂದರ್ ಪಾಣಿ
ಕನ್ನಡಕ್ಕೆ: ಡಾ. ಎಚ್.ಎಸ್.ಅನುಪಮಾ

ಭಾರತ ಸಂವಿಧಾನ ಅಳವಡಿಸಿಕೊಂಡ ಅರವತ್ತು ವರ್ಷಗಳಲ್ಲಿ ಎದ್ದು ಕಾಣುವ ಒಂದು ಅಂಶವೆಂದರೆ ಕಾನೂನು ವ್ಯವಸ್ಥೆ ಮತ್ತು ಸುಧಾರಣೆಗಳ ನಡುವೆ ಬೆಳೆದಿರುವ ಸಂಬಂಧ. ಇತ್ತೀಚಿನ ದಶಕಗಳಲ್ಲಿ ಕಾನೂನು, ಸುಧಾರಣೆ ತರುವ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮಿದೆ. ಸುಧಾರಣೆಯ ಹಾದಿಯಲ್ಲಿ – ಭೂಸುಧಾರಣೆಯಿಂದ ಹಿಡಿದು ಲಿಂಗ ತಾರತಮ್ಯದವರೆಗೆ – ಸಾರ್ವಜನಿಕ ಅಭಿಪ್ರಾಯ ರೂಪಿಸುವಂತೆ ಕಾನೂನಿನಲ್ಲಿ ಅಗತ್ಯ ಬದಲಾವಣೆ ಮಾಡಬೇಕೆಂದು ಒತ್ತಾಯ ತರಲಾಗುತ್ತಿದೆ. ಒಮ್ಮೆ ಅದನ್ನು ಸಾಧಿಸಿದ ನಂತರ ಇಡೀ ರಾಜ್ಯ ಮತ್ತು ನ್ಯಾಯಾಂಗದ ಅಧಿಕಾರವನ್ನೆಲ್ಲಾ ಕಾನೂನು ಮತ್ತು ಅದು ಒಳಗೊಂಡ ಸುಧಾರಣೆಗಳನ್ನು ಜಾರಿಗೆ ತರುವಂತೆ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಸುಧಾರಣೆಗಳಿಗೆ ಸಂಬಂಧ ಪಟ್ಟಂತೆ ಬದಲಾವಣೆಯ ಸಲುವಾಗಿ ಈ ಪ್ರಕ್ರಿಯೆಯು ಅವಶ್ಯಕ ನೆಲಗಟ್ಟನ್ನು ಒದಗಿಸಿದೆ ಮತ್ತು ಕಾನೂನಿನ ಸುಧಾರಣೆಗಳು ಅದನ್ನು ಗಟ್ಟಿಗೊಳಿಸಿದೆ. ಆದರೆ ಅವಶ್ಯಕ ನೆಲಗಟ್ಟನ್ನು ತಕ್ಕ ಮಟ್ಟಿಗೆ ಎಲ್ಲಿ ಸಿದ್ಧ ಮಾಡಿಲ್ಲವೋ ಅಲ್ಲಿ ಕಾನೂನು ಆ ನೆಲದ ನಂಬಿಕೆಗಳೊಂದಿಗೆ ಘರ್ಷಣೆಗಿಳಿಯಬೇಕಾಗುತ್ತದೆ. ಹೀಗೆ ಕಾನೂನಿಗೆ ಜನಾಭಿಪ್ರಾಯದ ಒಪ್ಪಿಗೆಯ ನೆಲಗಟ್ಟು ದೊರಕದಿದ್ದಲ್ಲಿ ಜನ ಕಾನೂನು ವಿರೋಧಿಸುವುದನ್ನೇ ಸಮರ್ಥಿಸಿಕೊಳ್ಳತೊಡಗುತ್ತಾರೆ. ಈ ಸಂಘರ್ಷ ಒಡ್ಡುವ ಪ್ರತಿರೋಧವು ಕಾನೂನು ವಿರೋಧಿಯಾಗಿರುತ್ತದೆ. ಇದನ್ನು ಇಪ್ಪತ್ತು ಇಪ್ಪತ್ತೊಂದನೇ ಶತಮಾನದಲ್ಲಿ ಸಾಮಾಜಿಕ ನ್ಯಾಯದ ಆದರ್ಶಗಳಲ್ಲಿ ಸಮಂಜಸವೆಂದೇ ಪರಿಗಣಿಸಲ್ಪಟ್ಟಿದೆ. ಮದುವೆಯ ಪಾರಂಪರಿಕ ಕಟ್ಟು ಪಾಡುಗಳನ್ನು ಪಾಲಿಸದ ದಂಪತಿಗಳಿಗೆ ಖಾಪ್ ಪಂಚಾಯತಿಗಳು ವಿಧಿಸುವ ಮರಣದಂಡನೆ, ಹತ್ಯೆಗಳು ಈ ಪ್ರವೃತ್ತಿಯ ಸಣ್ಣ ಉದಾಹರಣೆಯಷ್ಟೇ. ಈ ಸಂಘರ್ಷವು ವ್ಯಾಪಕವಾಗುತ್ತಾ ಹೋದಂತೆ ರಾಜ್ಯ ಮತ್ತು ನ್ಯಾಯಾಂಗಗಳ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ.

ಆದರೂ ಈ ಸಂಘರ್ಷವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಸ್ಪಷ್ಟವಾಗಿ ಕಾನೂನು ಉಲ್ಲಂಘನೆಯಾದ ಘಟನೆಗಳ ಮೇಲಷ್ಟೇ ಬೆಳಕು ಚೆಲ್ಲಿದರೆ ಸಾಲದು. ಒತ್ತಾಯವಾಗಿ ಹೇರಲ್ಪಟ್ಟ ಕಾನೂನಿನ ಆಶಯಗಳೇ ಬೇರೆ, ಅದಕ್ಕೆ ಪರಿಣಾಮವಾಗಿ ಸಿಕ್ಕ ಫಲಿತಾಂಶಗಳೇ ಬೇರೆಯಾಗಿರುವ ಉದಾಹರಣೆಗಳೂ ಇವೆ. ತತ್ವಾಧಾರಿತ ಕಾನೂನು ಮತ್ತು ವಾಸ್ತವದ ಸತ್ಯಗಳು ಬೇರೆ ಬೇರೆಯಾಗಿರುವಾಗ ಇಂತಹ ವೈರುಧ್ಯ ಸಂಭವಿಸುವ ಅವಕಾಶ ಹೆಚ್ಚು. ಹಾಗಾಗಿ ಒಂದು ಪ್ರದೇಶದ ಸಾಮಾಜಿಕ ವಾಸ್ತವಗಳಿಗೆ ತಕ್ಕಂತೆ ರೂಪಿಸಲ್ಪಟ್ಟ ಕಾನೂನು ಭಿನ್ನ ಸಾಮಾಜಿಕ ವ್ಯವಸ್ಥೆಗಳಲ್ಲಿ ತದ್ವಿರುದ್ಧ ಪರಿಣಾಮಗಳನ್ನು ಬೀರಬಹುದು. ಒಂದೇ ತತ್ವದ ಆಧಾರದ ಮೇಲೆ ರೂಪುಗೊಂಡಿದ್ದರೂ ಬೇರೆ ಬೇರೆ ಪ್ರದೇಶಗಳಲ್ಲಿ ವಾಸ್ತವವು ಬೇರೆಯೇ ಆಗಿದ್ದಾಗ ಕಾನೂನಿನ ಸಿದ್ಧಾಂತ ಮತ್ತು ವಾಸ್ತವ ಸತ್ಯಗಳ ನಡುವಿನ ಈ ಅಂತರವು ನಿರೀಕ್ಷಿತವೇ ಆಗಿದೆ. ಹಾಗಾಗಿಯೇ ಈ ವ್ಯತ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳಲು ಕಾನೂನುಗಳನ್ನು – ಉದಾ: ಭೂ ಸುಧಾರಣೆಯಂತಹ ಕಾನೂನು – ಬೇರೆಬೇರೆಯಾಗಿಯೇ ರೂಪಿಸಲಾಗಿರುತ್ತದೆ. ಆದರೆ ಒಂದೇ ರಾಜ್ಯದ ಒಳಗೂ ಸಾಮಾಜಿಕ ಪರಿಸ್ಥಿತಿಯಲ್ಲಿ ಢಾಳಾದ ಬದಲಾವಣೆಗಳಿರುವಾಗ ಒಂದೇ ರೀತಿಯಲ್ಲಿ ಕಾನೂನನ್ನು ಜಾರಿಗೊಳಿಸಿದಲ್ಲಿ ಅನಿರೀಕ್ಷಿತ ಹಾಗೂ ಅನಪೇಕ್ಷಿತ ಪರಿಣಾಮಗಳನ್ನುಂಟು ಮಾಡಬಹುದು.

ಇಂತಹ ಪರಿಣಾಮಗಳು ಮೂಲ ಕಾನೂನಿನ ಸದುದ್ದೇಶದಿಂದ ಎಷ್ಟು ದೂರ ಹೋಗಿವೆಯೆಂದು ತಿಳಿಯಬೇಕಾದರೆ 1974 ರ ಕರ್ನಾಟಕ ಭೂಸುಧಾರಣಾ ಕಾನೂನಿನ ಅನುಷ್ಠಾನದ ಅನುಭವವನ್ನು ನೋಡಬಹುದು. ಇದು ವಿಭಿನ್ನ ಸಾಮಾಜಿಕ ಸನ್ನಿವೇಶಗಳಲ್ಲಿ ಒಂದೇ ರೀತಿಯ ಕಾನೂನು ಅನುಷ್ಠಾನವಾದರೆ ಉಂಟಾಗುವ ಪರಿಣಾಮಗಳ ಬಗೆಗೆ ತಿಳಿಸುತ್ತದೆ. ಮತ್ತು ಕಾನೂನು ಹಾಗೂ ಬದಲಾಗುವ ವಾಸ್ತವ ಸತ್ಯಗಳ ನಡುವಿನ ಸಂಬಂಧ ಹೇಗಿರಬೇಕೆಂಬ ಗ್ರಹಿಕೆಯ ಕುರಿತಾದ ಪ್ರಶ್ನೆಗಳನ್ನೆತ್ತುತ್ತದೆ.

1974 ರ ಕರ್ನಾಟಕದ ಭೂಸುಧಾರಣೆ:

ಒಂದೇ ರೀತಿಯ ಕಾನೂನನ್ನು ಭಿನ್ನ ಸಾಮಾಜಿಕ ಸನ್ನಿವೇಶಗಳ ಮೇಲೆ ಹೇರಿದಾಗ ಏನಾಗಬಹುದೆಂದು ನೋಡಲು ಕರ್ನಾಟಕದ ಭೂಸುಧಾರಣೆಗಿಂತ ಉತ್ತಮ ಉದಾಹರಣೆ ಸಿಗಲಾರದು. ಈ ಇಡೀ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಅವರೇ ಮುಂದಾಳಾಗಿ ನಿಂತಿದ್ದು ಸಾಮಾಜಿಕ ಸುಧಾರಣೆಯ ನಿಟ್ಟಿನಲ್ಲಿ ಇದನ್ನು ದೊಡ್ಡ ಯಶಸ್ಸು ಎಂದೇ ಗುರುತಿಸಲಾಗಿದೆ. ಅಲ್ಲದೇ ದೇವರಾಜ ಅರಸು ಅವರಿಗೆ ‘ಅಭಿಪ್ರಾಯ ಬದ್ಧ, ಪ್ರಗತಿಪರ’ ಎಂಬ ಹೆಸರನ್ನೂ ಇದು ನೀಡಿದೆ. ಭೂ ಸುಧಾರಣಾ ಕಾಯ್ದೆಯು ಭೂಮಿ ಒಡೆತನ ವ್ಯವಸ್ಥೆಯ ಮೇಲೆ ಭೂ ಪರಿಮಿತಿ ಹಾಗೂ ಭೂಸುಧಾರಣೆಯ ರೂಪದಲ್ಲಿ ಎರಡು ವಿಧದ ಆಘಾತ ನೀಡಿದರೂ ಅದರ ಮುಖ್ಯ ಉದ್ದೇಶ ಉಳುವವನಿಗೆ ಭೂಮಿಯ ಒಡೆತನ ನೀಡುವುದೇ ಆಗಿತ್ತು. ಗೇಣಿ ಸುಧಾರಣಾ ಕಾಯ್ದೆ ಜಾರಿಯ ಮೂಲ ರಾಜ್ಯ ಮತ್ತು ರಾಷ್ಟ್ರದಲ್ಲಿ ಒಂದೇ ಆಗಿತ್ತು. ಕೃಷಿಯು ದೊಡ್ಡ ಜಮೀನ್ದಾರರ ಹಿಡಿತದಲ್ಲಿದೆ ಮತ್ತು ಅವರು ಸಣ್ಣ ರೈತರಿಗೆ ಉಳಲು ಭೂಮಿಯನ್ನು ಗೇಣಿ ನೀಡುವುದರ ಮೂಲಕ ಸಾಗುವಳಿ ನಿಭಾಯಿಸುತ್ತಾರೆ ಎಂಬುದು ಒಟ್ಟಾರೆ ಕೃಷಿ ವ್ಯವಸ್ಥೆಯ ಬಗೆಗಿದ್ದ ಅಭಿಪ್ರಾಯವಾಗಿತ್ತು. ಉಳುವವನಿಗೆ ಭೂಮಿ ಎಂದರೆ ಗೇಣಿ ಪಡೆದವನಿಗೆ ಭೂಮಿಯ ಒಡೆತನದ ಹಕ್ಕು ನೀಡುವುದೇ ಆಗಿತ್ತು.

ಈ ಮೂಲತತ್ವ ವ್ಯಾಪಕವಾಗಿ ಅಂಗೀಕೃತವಾದಂತೆ ಮಾರ್ಚ್  1, 1974 ರಲ್ಲಿ ಕರ್ನಾಟಕದಲ್ಲಿ  ಭೂ ಸುಧಾರಣಾ ಕಾಯಿದೆ ಜಾರಿಗೆ ಬಂತು. ಗೇಣಿದಾರನಿಗೆ ಭೂಮಿಯ ಹಕ್ಕು ಕೊಡಿಸುವ ಕೆಲಸ ತೀವ್ರ ಗತಿಯಲ್ಲಿ ಶುರುವಾಯಿತು. ಕೃಷಿ ವ್ಯವಸ್ಥೆಯೆಂದರೇ ದೊಡ್ಡ ಭೂಮಾಲೀಕ – ಸಣ್ಣ ಗೇಣಿದಾರರ ಸಮೂಹ ಎಂಬ ನಂಬಿಕೆಯಿದ್ದುದರಿಂದ ಈ ಕಾಯಿದೆಗೆ ನೀಡಲಾದ ಕೆಲವು ರಿಯಾಯಿತಿಗಳೂ ಕೊರತೆಗಳೆಂದೇ ಭಾವಿಸಲಾಯಿತು. 1974 ರಲ್ಲಿ ತಿದ್ದುಪಡಿಯೊಂದನ್ನು ತಂದು ಸಣ್ಣ ರೈತರು, ವಿಧವೆಯರು, ಅಪ್ರಾಪ್ತ ವಯಸ್ಕರು, ಮಾನಸಿಕ ಅಸ್ವಸ್ಥರು, ಅಂಗವಿಕಲರಿಗೆ ಮೊದಲು ನೀಡಿದ್ದ ರಿಯಾಯ್ತಿಯನ್ನು ರದ್ದುಮಾಡಲಾಯಿತು. 1974 ರ ತಿದ್ದುಪಡಿಯ ಆಧಾರದ ಮೇಲೆ ಅವರೆಲ್ಲ ಭೂಮಿ ಕಳೆದುಕೊಂಡರು. ಕಾನೂನಿನ ಮೂಲ ಉದ್ದೇಶಗಳ  ಮೇಲೆ ಎಂಥ ಧೃಢ ವಿಶ್ವಾಸವಿತ್ತೆಂದರೆ ಈ ವಿಷಯದಲ್ಲಿ ನ್ಯಾಯಾಂಗ ವ್ಯವಸ್ಥೆಯೂ ಒಂದು ಅಡ್ಡಿಯೆಂದೇ ಭಾವಿಸಲಾಯಿತು. ಕೋರ್ಟ್‍ನ ದಾವೆಗಳಿಂದ ವಿಳಂಬಗೊಂಡ ಕೇಸುಗಳನ್ನು ಇತ್ಯರ್ಥ ಮಾಡಲು ಭೂ ನ್ಯಾಯ ಮಂಡಳಿಗಳನ್ನು ಸ್ಥಾಪಿಸಲಾಯಿತು. ಸ್ಥಳೀಯ ಮುಖಂಡರು ಮತ್ತು ರಾಜಕಾರಣಿಗಳೇ ಮುಖಂಡರಾಗಿರುತ್ತಿದ್ದ ಮಂಡಳಿಗಳಿಗೆ ಭೂ ಸುಧಾರಣೆ ಜಾರಿಗೆ ತರಲು ಪ್ರಮುಖ ಪಾತ್ರ ವಹಿಸಲಾಗಿತ್ತು. ಈ ನ್ಯಾಯಮಂಡಳಿಗಳಿಗೆ ವ್ಯಾಪಕ ಅಧಿಕಾರ ನೀಡಿ ಹಕ್ಕು ಪತ್ರ ಪರಿಶೀಲಿಸದೇ ಯಾರು ಗೇಣಿದಾರನೆಂದು ನಿರ್ಣಯಿಸುವ ಅಧಿಕಾರ ಕೊಡಲಾಗಿತ್ತು. ಸುಧೀರ್ ಕೃಷ್ಣ ಒಂದೆಡೆ ಹೇಳುವಂತೆ,  “ಯಾವ ದಾಖಲೆಗಳಿಲ್ಲದಿದ್ದರೂ ಸ್ಥಳೀಯವಾಗಿ ವಿಚಾರಿಸಿದಾಗ ಆತ ನ್ಯಾಯಯುತವಾಗಿ ಭೂಮಿಯನ್ನು ಅಂದು ಉಳುತ್ತಿದ್ದಾನೆ ಎಂಬ ವಿಷಯ ತಿಳಿದರೆ ಸಾಕು, ಆ ವ್ಯಕ್ತಿ ಗೇಣಿದಾರನೆಂದು ತೀರ್ಮಾನಿಸಲಾಗುತ್ತಿತ್ತು.”

ಈ ಕಾನೂನು ಜಾರಿಯ ತೀವ್ರ ಪ್ರಯತ್ನಗಳು ಕರ್ನಾಟಕದ ವಿವಿಧ ರೀತಿಯ ವ್ಯವಸ್ಥೆಗಳಲ್ಲಿ ವಿರುದ್ಧವಾಗಿಯೂ ಕಂಡುಬಂದವು. ಒಂದು ಕಡೆ ಭೂ ಸುಧಾರಣಾ ಕಾನೂನು ಜಾರಿಯ ಉದ್ದೇಶಕ್ಕೆ ತಕ್ಕದಾದ ಕೃಷಿ ವ್ಯವಸ್ಥೆಯಿತ್ತು. ಅದರಲ್ಲೂ ಕರಾವಳಿಯ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭೂ ಮಾಲೀಕ – ಗೇಣಿದಾರ ವ್ಯವಸ್ಥೆ ಭೂ ಸುಧಾರಣಾ ಕಾನೂನು ಬದಲಾವಣೆ ತರಬಯಸಿದ್ದ ವ್ಯವಸ್ಥೆಯೇ ಆಗಿತ್ತು. 19ನೇ ಶತಮಾನದ ಮೊದಲ ಭಾಗದಲ್ಲಿ ಪ್ರವಾಸಿ ಬುಕಾನನ್ ಗಮನಿಸಿ ದಾಖಲಿಸಿದಂತೆ ಭೂ ಮಾಲೀಕನ ಜಮೀನುಗಳನ್ನು ಗೇಣಿದಾರರು ಉಳುಮೆ ಮಾಡುತ್ತಿದ್ದರು. 1881 ರ ಜನಗಣತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರಲ್ಲಿ ಶೇ. 48. 51 ಗೇಣಿದಾರರಾಗಿದ್ದರು. 1872 ರ ಜನಗಣತಿಯು ಉತ್ತರ ಕನ್ನಡದ ಶೇ. 45. 53 ಕೃಷಿಕರು ಗೇಣಿದಾರರು ಎಂದು ತಿಳಿಸಿತ್ತು. ಮುಂದಿನ ಶತಮಾನದಲ್ಲಿ ಗೇಣಿ ಪದ್ಧತಿ ಹೇಗೆ ಹೆಚ್ಚುತ್ತ ಹೋಯಿತೆಂಬುದನ್ನು ಮುಂದಿನ ಕೋಷ್ಟಕ – 1 ತಿಳಿಸುತ್ತದೆ.

ಕೋಷ್ಟಕ – 1

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗೇಣಿದಾರರಿಂದ ಉಳುಮೆ ಮಾಡಲ್ಪಟ್ಟ ಒಟ್ಟು ಭೂಮಿಯ ಪ್ರಮಾಣ – 1971.

ಜಿಲ್ಲೆ 2 ಹೆಕ್ಟೇರುಗಳಿಗಿಂತ ಕಡಿಮೆ 2ರಿಂದ5 ಹೆಕ್ಟೇರುಗಳು 5 ಹೆಕ್ಟೇರುಗಳಿಗಿಂತ ಕಡಿಮೆ
ಉತ್ತರ ಕನ್ನಡ  71.32 60.13  60.87
ದಕ್ಷಿಣ ಕನ್ನಡ 57.57  53.62 31.52

ಮೂಲ: ಕರ್ನಾಟಕದ ಕೃಷಿ ಜಮೀನಿನ ಗಣತಿ, 1971.

ಆದರೆ ಪ್ರತಿ ಜಿಲ್ಲೆಯೊಳಗೂ ಗೇಣಿಯ ಸ್ವರೂಪ ಬೇರೆ ಬೇರೆಯಾಗಿತ್ತು. ಈ ಜಿಲ್ಲೆಗಳಲ್ಲಿ ಚಾರಿತ್ರಿಕವಾಗಿ ಎರಡು ರೀತಿಯ ಗೇಣಿ ಪದ್ಧತಿಯಿತ್ತು. ಮೂಲ ಗೇಣಿ ಹಾಗೂ ಚಾಲಗೇಣಿ. ಮೂಲಗೇಣಿಯು ಒಂದು ರೀತಿಯ ಖಾಯಮ್ಮಾದ, ವಂಶ ಪಾರಂಪರ್ಯ ಗೇಣಿ ವಿಧಾನ. ಭೂಮಾಲೀಕ ವಿಧಿಸಿದಷ್ಟು ಉತ್ಪನ್ನವನ್ನು ಸರಿಯಾಗಿ ಕೊಡುತ್ತ ಹೋದರೆ ಗೇಣಿದಾರ ಆ ಭೂಮಿಯನ್ನು ಅಡವಿಡಬಹುದಾಗಿತ್ತು. ಅದರ ಬಡ್ಡಿ ಅನುಭವಿಸಬಹುದಾಗಿತ್ತು. ಅಥವಾ ಬೇರೆಯವರಿಗೆ ಗೇಣಿಗೆ ಕೊಡಬಹುದಾಗಿತ್ತು. ಅವರು ‘ಗೇಣಿದಾರರಷ್ಟೇ ಅಲ್ಲ, ಅಧೀನ ಭೂಮಾಲೀಕರು.’  ಆದರೆ ಈ ಪದ್ಧತಿ ಪ್ರಧಾನ ಗೇಣಿ ವಿಧಾನವಾಗಿರಲಿಲ್ಲ. 1938 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 10 ಕ್ಕಿಂತ ಕಡಿಮೆ ಭೂಮಿ ಮೂಲಗೇಣಿಗೆ ಒಳಪಟ್ಟಿತ್ತು.

ಬಹುವಾಗಿ ಚಾಲ್ತಿಯಲ್ಲಿದ್ದ ಗೇಣಿ ವಿಧಾನವೆಂದರೆ ಚಾಲಗೇಣಿ – ಅಥವಾ ಬೇಡನ್ ಪೊವೆಲ್ ಹೇಳುವಂತೆ ‘ಐಚ್ಛಿಕ ಗೇಣಿ.’  1883 ರ ಗೆಜೆಟಿಯರಿನಲ್ಲಿ ತಿಳಿಸಿದಂತೆ ಬಹುಪಾಲು ಕೃಷಿ ಭೂಮಿಯು ವಾರ್ಷಿಕ ಗೇಣಿಯ ಚಾಲಗೇಣಿ ಪದ್ಧತಿಯಲ್ಲಿ ಉಳಲ್ಪಡುತ್ತಿತ್ತು. ಮೂಲ ಗೇಣಿದಾರನ ಸ್ಥಿತಿ ಗತಿಗಳಿಗಿಂತ ಚಾಲಗೇಣಿದಾರನ ಸ್ಥಿತಿಯು ಭಿನ್ನವಾಗಿದ್ದು ಅದು ಬಹುತೇಕ ಕೃಷಿ ಕೂಲಿ ಕಾರ್ಮಿಕರನ್ನು ಹೋಲುತ್ತಿತ್ತು. ಚಾಲ ಗೇಣಿದಾರರು ಹೆಚ್ಚಾಗಿ ಕೆಳಜಾತಿಯ ಹೊಲೆಯ ಮತ್ತು ಮಹಾರ್‌ಗಳಾಗಿದ್ದು ಅವರು ಕೃಷಿ ಕೂಲಿ ಕಾರ್ಮಿಕರೂ, ಚಾಲಗೇಣಿದಾರರೂ ಆಗಿದ್ದರು. ಈ ಎರಡೂ ಪದ್ಧತಿಗಳ ನಡುವೆ ತುಂಬ ಭಿನ್ನತೆಯಿತ್ತು. ಮೂಲಗೇಣಿದಾರ ಕೆಲವೊಮ್ಮೆ ತನ್ನ ಜಮೀನನ್ನು ಚಾಲಗೇಣಿಗೆ ಉಳುಮೆ ಮಾಡಲು ಕೊಡುತ್ತಿದ್ದ. ಬಹುಸಂಖ್ಯೆಯಲ್ಲಿದ್ದ ಚಾಲಗೇಣಿದಾರರನ್ನು ಗಮನದಲ್ಲಿಟ್ಟುಕೊಂಡರೆ ಭೂ ಸುಧಾರಣಾ ಕಾಯ್ದೆ ಯಾವ ಬದಲಾವಣೆ ತರಬೇಕೆಂದು ಉದ್ದೇಶಿಸಿತ್ತೋ ಅದು ಈ ಶಕ್ತಿ ಹೀನ ಗೇಣಿದಾರರನ್ನು ಕುರಿತೇ ಇತ್ತು. ಈ ಎರಡೂ ಜಿಲ್ಲೆಗಳಲ್ಲಿ 1971 ರ ವೇಳೆಗೆ ಚಾಲ್ತಿಯಲ್ಲಿದ್ದ ಗೇಣಿದಾರ ವರ್ಗದ ಗಾತ್ರವನ್ನು ಗಮನಿಸಿದರೆ ಇದು ತಿಳಿಯುತ್ತದೆ. ಎರಡು ಹೆಕ್ಟೇರಿಗಿಂತ ಕಡಿಮೆ ಭೂಮಿ ಉಳುತ್ತಿದ್ದವನ ಪ್ರಮಾಣ ಅತಿ ಹೆಚ್ಚಿದ್ದರೆ, ಹೆಚ್ಚೆಚ್ಚು ಭೂಮಿ ಉಳುತ್ತಿದ್ದ ಗೇಣಿದಾರರು ಕಡಿಮೆ ಸಂಖ್ಯೆಯಲ್ಲಿದ್ದರು. ಸಣ್ಣ ಗೇಣಿದಾರರ ಸಂಖ್ಯೆ ಎರಡೂ ಜಿಲ್ಲೆಗಳಲ್ಲಿ ಬೇರೆ ಬೇರೆ ಇದ್ದರೂ ಒಟ್ಟಾರೆ ಮಾದರಿ ಒಂದೇ ಆಗಿತ್ತು.

ಭೂ ಸುಧಾರಣಾ ಕಾನೂನಿನ ಜಾರಿ ಈ ಎರಡೂ ಜಿಲ್ಲೆಗಳಲ್ಲಿ ಕ್ರಾಂತಿಕಾರೀ ಪರಿಣಾಮ ತಂದಿತು. ಆ ಪ್ರದೇಶಗಳಲ್ಲಿ ‘ಉಳುವವನಿಗೇ ಭೂಮಿ’ ಘೋಷಣೆಯ ಮೂಲಕ ವ್ಯಾಪಕ ರಾಜಕೀಯ ಸಂಚಲನ ಶುರುವಾಗಿ ಕಾನೂನು ಜಾರಿಗೆ ಅನುಕೂಲವೇ ಆಯಿತು. ಗೇಣಿಗೆ ಭೂಮಿ ಕೊಟ್ಟ ಕೆಲವು ಸಣ್ಣ ರೈತರು ಭೂಮಿ ಕಳೆದುಕೊಂಡರು. ಆದರೆ ಅಂತಹವರ ಸಂಖ್ಯೆ ತುಂಬ ಕಡಿಮೆಯಿತ್ತು. 1980 ಅಕ್ಟೋಬರ್ ವೇಳೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಮಿ ಕಳೆದುಕೊಂಡು ಪರಿಹಾರ ಪಡೆದ ಸಣ್ಣ ಭೂಮಾಲೀಕರ ಸಂಖ್ಯೆ ಶೇ. 9 ಕ್ಕಿಂತ ಕಡಿಮೆ ಇತ್ತು. ಇದು ದಕ್ಷಿಣ ಕನ್ನಡದಲ್ಲಿ ಸ್ವಲ್ಪ ಹೆಚ್ಚಿದ್ದು ಶೇ. 11. 58 ಇತ್ತು. ಈ ಎರಡು ಜಿಲ್ಲೆಗಳಲ್ಲಿ ಕಾನೂನು ಉದ್ದೇಶಿಸಿದ ಹಾಗೆಯೇ ಭೂಮಿಯ ಒಡೆತನ ಉಳುವವನಿಗೇ ಹೋಯಿತು.

ಆದರೆ ಕರ್ನಾಟಕದ ಬೇರೆಬೇರೆ ಭಾಗಗಳಲ್ಲಿ  [ಕರ್ನಾಟಕದ ಬಹುಭಾಗಗಳಲ್ಲಿ ಎನ್ನಬಹುದು – ಕೃಷಿಯ ಚಿತ್ರಣ ಭೂ ಮಾಲೀಕ – ಗೇಣಿದಾರ ರೀತಿಯಾಗಿರದೇ ಭಿನ್ನವಾಗಿತ್ತು]  ಅದರಲ್ಲೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಈ ಜಿಲ್ಲೆಗಳ ಕೃಷಿ ಪದ್ಧತಿಗಳಲ್ಲಿ ಸಣ್ಣ ರೈತರದ್ದೇ ಮೇಲುಗೈ. ಕೋಷ್ಟಕ – 2 ತೋರಿಸುವಂತೆ ಒಟ್ಟಾರೆ ಗೇಣಿ ನೀಡಲ್ಪಟ್ಟ ಭೂಮಿ ತುಂಬ ಕಡಿಮೆ. ಕೆಲವೆಡೆಯಂತೂ – ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ಜಿಲ್ಲೆಗಳಲ್ಲಿ – ಶೇ. 10 ಕ್ಕಿಂತ ಕಡಿಮೆ. ಸ್ಕಾರ್ಲೆಟ್  ಎಪ್‍ಸ್ಟೀನನ  ಗ್ರಾಮ ಅಧ್ಯಯನವಿರಬಹುದು, ಅಥವಾ 1961 ರ ಜನಗಣತಿಯ ಗ್ರಾಮೀಣ ಸಮೀಕ್ಷೆಯ ವರದಿಯಿರಬಹುದು – ಅವು ಈ ಭಾಗದಲ್ಲಿ ಗೇಣಿ ಪದ್ಧತಿ ಕೃಷಿಯ ಪ್ರಧಾನ ವಿಧಾನವಾಗಿತ್ತೆಂದು ಹೇಳುವುದಿಲ್ಲ. ಇದಕ್ಕೆ ಚಾರಿತ್ರಿಕ ಸಾಕ್ಷ್ಯಗಳೂ ಇವೆ. 1881 ರ ಹಳೇ ಮೈಸೂರು ಗಣತಿಯ ಪ್ರಕಾರ ಈ ಭಾಗದ ಕೃಷಿಯಲ್ಲಿ ಗೇಣಿ ಪದ್ಧತಿ ಅತ್ಯಲ್ಪವಾಗಿದ್ದು ಒಟ್ಟು ಶೇ. 4.61 ಕ್ಕಿಂತ ಕಡಿಮೆ ಕೃಷಿಕರು ಗೇಣಿದಾರರಾಗಿದ್ದರೆಂದು ತಿಳಿಸುತ್ತದೆ.

ಕೋಷ್ಟಕ – 2

ದಕ್ಷಿಣ ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ಗೇಣಿ ಪದ್ಧತಿಯಿಂದ ಉಳುಮೆ ಮಾಡಲ್ಪಟ್ಟ, ಕೃಷಿ ಭೂಮಿಯ ಪ್ರಮಾಣ, 1971

ಜಿಲ್ಲೆ  2 ಹೆಕ್ಟೇರುಗಳಿಗಿಂತ ಕಡಿಮೆ 2ರಿಂದ5 ಹೆಕ್ಟೇರುಗಳು 5 ಹೆಕ್ಟೇರುಗಳಿಗಿಂತ ಕಡಿಮೆ
ಹಾಸನ 3.07 4.66 5.59
ಮಂಡ್ಯ 2.22 2.77 3.29
ಮೈಸೂರು 3.45 3.97 4.61
ತುಮಕೂರು 1.50 2.13 2.89
ಬೆಂಗಳೂರು 4.68 7.35 9.39

ಮೂಲ : ಕೃಷಿ ಭೂಮಿಯ ಗಣತಿ, 1971

ಹಳೇ ಮೈಸೂರು ಭಾಗದ ಆಡಳಿತಗಾರರು ಭೂಮಿಯನ್ನು ಉಳುಮೆಗಾಗಿ ನೇರ ರೈತರಿಗೇ ಕೊಡುತ್ತಿದ್ದುದರಿಂದ ಗೇಣಿ ಪದ್ಧತಿ ಕಡಿಮೆಯಿತ್ತು ಎನ್ನಬಹುದು. ಮಾರ್ಕ್ ವಿಲ್ಕ್ಸ್ ಹೇಳುವಂತೆ ಗೇಣಿದಾರ ಮತ್ತು ಆತನ ಉತ್ತರಾಧಿಕಾರಿಗಳು “ಎಲ್ಲಿಯವರೆಗೆ ವಿಧಿಸಲ್ಪಟ್ಟ ಶುಲ್ಕವನ್ನು ಜಿಲ್ಲಾಡಳಿತಕ್ಕೆ ಸಂದಾಯ ಮಾಡುತ್ತಾರೋ ಅಲ್ಲಿಯವರೆಗೆ ಅಷ್ಟೂ ಜಮೀನನ್ನು ತಮ್ಮದಾಗಿಟ್ಟುಕೊಳ್ಳಬಹುದು. ಗೇಣಿದಾರ ಉಳುಮೆ ನಿಲ್ಲಿಸಿದ ಕೂಡಲೇ ಭೂಮಿಯ ಹಕ್ಕು ಸರ್ಕಾರಕ್ಕೆ ಹಿಂದಿರುಗುತ್ತದೆ.  ಸರ್ಕಾರವು ಇದನ್ನು ಬೇರೊಬ್ಬನಿಗೆ ವಹಿಸಿಕೊಡಲು ಸ್ವತಂತ್ರ್ಯವಾಗಿರುತ್ತದೆ.” ಆದರೆ ಸರ್ಕಾರ ಭೂಮಿ ಹಿಂಪಡೆಯುವುದು ತುಂಬ ಅಪರೂಪವಾಗಿತ್ತು. ಎಲ್ಲಿಯವರೆಗೆ ಗೇಣಿದಾರ ಉಳುಮೆ ಮಾಡುತ್ತಾನೋ ಅಲ್ಲಿಯವರೆಗೆ ಭೂಮಿ ಕಳೆದುಕೊಳ್ಳುವ ಭಯವಿರಲಿಲ್ಲ. ತನಗೆ ಉಳಲು ಆಗುವುದಿಲ್ಲವೆಂದು ಮನವಿ ಸಲ್ಲಿಸಿದಲ್ಲಿ ಅವನಿಗೆ – ಟಕಾವಿ – ಸರಕು ಕೊಳ್ಳಲು ಸಾಲ ನಿಡಲಾಗುತ್ತಿತ್ತು.  ಕಾಲ ಕಳೆದಂತೆ ಹಾಗೂ ಉಳುಮೆ ಖಾಯಂ ಆಗುತ್ತ ಹೋದಂತೆ ರಾಜನಿಗೆ ನೀಡಬೇಕಾದ ಶುಲ್ಕ ಮತ್ತು ತೆರಿಗೆಯ ಅಂತರ ಅಳಿಸಿ ಹೋಯಿತು. ಹೀಗಾಗಿ ಮೊದಲು ರಾಜನ ಗೇಣಿದಾರರಾಗಿದ್ದವರು ಕೊನೆಗೆ ಭೂಮಿಯ ಒಡೆತನ ಪಡೆದುಕೊಂಡರು.

ಆದರೆ ಭೂ ಸುಧಾರಣಾ ಕಾನೂನಿನಲ್ಲಿ ವಿವರಿಸಲ್ಪಟ್ಟ ದೊಡ್ಡ ಭೂಮಾಲೀಕ – ಗೇಣಿದಾರ ರೀತಿಗಿಂತ ಈ ಪದ್ಧತಿ ತುಂಬ ಭಿನ್ನವಾಗಿತ್ತು. ಗೇಣಿಗಾಗಿ ಭೂಮಿಯನ್ನು ಕೊಡುವ ಅವಕಾಶ ತುಂಬ ಕಡಿಮೆ ಇತ್ತು. ಅಲ್ಲದೇ ಗೇಣಿ ನೀಡಿದ್ದರೂ ಅದು ಸದ್ಯದ ಅನುಕೂಲಕ್ಕೇ ಹೊರತು ಪಾರಂಪರಿಕವಾಗಿರಲಿಲ್ಲ. ಭೂ ಮಾಲೀಕ ಇದ್ದ ಸ್ವತ್ತನ್ನು ವಿಸ್ತರಿಸಲು ಹೆಚ್ಚುವರಿ ಭೂಮಿಯನ್ನು ಗೇಣಿಗೆ ಕೊಡುತ್ತಿದ್ದಿರಲೂಬಹುದು.  ‘ದಿ ರಿಮೆಂಬರ್ಡ್ ವಿಲೇಜ್’ ನಲ್ಲಿ ಶ್ರೀನಿವಾಸ್ ನೆನಪಿಸಿಕೊಳ್ಳುವಂತೆ ಭೂ ಮಾಲೀಕರು ಗೇಣಿದಾರರೂ ಆಗಬಹುದಿತ್ತು. ಹಾಗೆಯೇ ಸಣ್ಣ ರೈತನೊಬ್ಬ ಆ ವರ್ಷ ಉಳುಮೆ ಮಾಡಲಾಗದಿದ್ದರೆ ತನ್ನ ಭೂಮಿಯನ್ನು ಗೇಣಿಗೆ – ಕೆಲವು ಸಲ ಶ್ರೀಮಂತ ರೈತನಿಗೂ – ಕೊಡಬಹುದಿತ್ತು. ಒಟ್ಟಿನಲ್ಲಿ ಎಲ್ಲ ವರ್ಗಕ್ಕೆ ಸೇರಿದ ಭೂಮಾಲೀಕರೂ ಇದ್ದರು. ಹಾಗೆಯೇ ಗೇಣಿದಾರರಲ್ಲೂ ಸಣ್ಣ ಹಾಗೂ ದೊಡ್ಡ ಮತ್ತು ಪ್ರಭಾವೀ ಗೇಣಿದಾರರಿದ್ದರು. ಕೋಷ್ಟಕ – 2 ತೋರಿಸುವಂತೆ ಹಾಸನ, ಮಂಡ್ಯ, ಮೈಸೂರು, ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಗೇಣಿದಾರರ ಜಮೀನಿನ ವಿಸ್ತೀರ್ಣ ಹೆಚ್ಚಿದಂತೆ ಅವರ ಸಂಖ್ಯೆಯೂ ಹೆಚ್ಚಾಗುತ್ತ ಬಂದಿದ್ದು ಕಂಡುಬರುತ್ತದೆ.

ಆದರೆ ಇಂಥ ಕೃಷಿ ಪದ್ಧತಿ ಇರುವ ಕಡೆ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದರೆ ಎಲ್ಲ ವರ್ಗಗಳಿಗೆ ಸೇರಿದ ಭೂಮಾಲೀಕರ ಭೂಮಿಯು, ಎಲ್ಲ ವರ್ಗಗಳಿಗೆ ಸೇರಿದ ಗೇಣಿದಾರರ ಕೈ ಸೇರುತ್ತದೆ. ಗೇಣಿದಾರರೆಲ್ಲ ಬಡವರೇ ಆಗಿರುವುದಿಲ್ಲ. 1980 ಅಕ್ಟೋಬರ್ ವೇಳೆಗೆ ದಕ್ಷಿಣ ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯ್ದೆಯಿಂದ ಭೂಮಿ ಕಳೆದುಕೊಂಡು ಪರಿಹಾರ ಪಡೆದವರ ಪ್ರಮಾಣ ಗಮನಾರ್ಹವಾಗಿಯೇ ಇತ್ತು. ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಭೂಮಿ ಕಳೆದುಕೊಂಡ ಮೂರನೇ ಒಂದು ಭಾಗ ರೈತರು ಸಣ್ಣ ರೈತರಾಗಿದ್ದರು. ಹಾಸನದಲ್ಲಿ ಭೂಮಿ ಕಳೆದುಕೊಂಡವರಲ್ಲಿ ಐದನೇ ಒಂದು ಭಾಗ ಸಣ್ಣ ರೈತರಾಗಿದ್ದರು. ಈ ಜಿಲ್ಲೆಗಳಲ್ಲಿ ಉಳುವವನಿಗೇ ಭೂಮಿ ಎಂಬ ಕಾನೂನಿನ ಅನುಷ್ಠಾನವು ಬಹಳ ತೀವ್ರಗತಿಯಲ್ಲಿ ನಡೆಯಿತು. 1971 ರ ಕೃಷಿ ಸ್ವತ್ತಿನ ಗಣತಿಯಲ್ಲಿ ಕಾಣುವ ಗೇಣಿದಾರರ ಸಂಖ್ಯೆಗೂ, 1980 ರ ವೇಳೆಗೆ ಭೂಸುಧಾರಣಾ ಕಾಯ್ದೆಯ ಅನ್ವಯ ಭೂಮಿ ಪಡೆದವರ ಸಂಖ್ಯೆಗೂ ಇರುವ ವ್ಯತ್ಯಾಸ ಗಮನಿಸಿದರೆ ಈ ಕಾಯ್ದೆ ಎಷ್ಟು ಭಾರೀ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿತೆಂದು ತಿಳಿಯುತ್ತದೆ. ಕುತೂಹಲಕಾರೀ ಸಂಗತಿಯೆಂದರೆ ಬೆಂಗಳೂರಿನಲ್ಲಿ ಕಾಯ್ದೆ ಜಾರಿ 100% ಆದರೆ ಕೆಲವು ಜಿಲ್ಲೆಗಳಲ್ಲಿ ಅದು ನೂರನ್ನೂ ಮೀರಿ – ಮೈಸೂರಿನಲ್ಲಿ 140. 85%, ಹಾಸನದಲ್ಲಿ 157. 25% – ಇತ್ತು. ಇದನ್ನು ಅರ್ಥೈಸುವುದು ಹೇಗೆ? ಬಹುಶಃ 1971 ರ ವರದಿಯಲ್ಲಿ ಗೇಣಿದಾರರ ಬಗ್ಗೆ ಮಾಹಿತಿ ಸರಿಯಾಗಿ ಸಿಗದೆ ಕಡಿಮೆ ಸಂಖ್ಯೆ ನಮೂದಾಗಿರಬಹುದು. ಅಥವಾ ಗೇಣಿದಾರರಲ್ಲದವರೂ ಈ ಕಾಯ್ದೆಯಡಿ ಭೂಮಿ ಪಡೆದಿರಬಹುದು. ದಾಖಲೆಗಳೇ ಅಗತ್ಯವಿಲ್ಲದ, ಸ್ಥಳೀಯ ಮುಖಂಡರನ್ನೊಳಗೊಂಡ ಭೂ ನ್ಯಾಯ ಮಂಡಳಿಯೇ ಗೇಣಿದಾರರನ್ನು ಗುರುತಿಸುವ ವ್ಯವಸ್ಥೆಯಲ್ಲಿ ಗೇಣಿದಾರನಲ್ಲದವನೂ ಫಲಾನುಭವಿಯಾಗಿರುವ ಸಾಧ್ಯತೆಯಿದೆ.

ಐಚ್ಛಿಕ – ಅನೈಚ್ಛಿಕ ಪರಿಣಾಮಗಳು:

ಕರ್ನಾಟಕದ ಭೂ ಸುಧಾರಣಾ ಕಾನೂನು ಜಾರಿಯ ಅನುಭವದ ಈ ಸಣ್ಣ ಭಾಗವು ಭಿನ್ನ ವ್ಯವಸ್ಥೆಗಳಲ್ಲಿ ಏಕರೂಪ ಶಾಸನ ಜಾರಿಯಾಗುವುದರಿಂದ ಭಿನ್ನ ಪರಿಣಾಮಗಳು ಹೇಗೆ ಉಂಟಾಗಬಹುದೆಂದು ತೋರಿಸುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಶಾಸನದ ಆಶಯದಂತೆ ಬಡ ಗೇಣಿದಾರರು ಭೂಮಿಯ ಒಡೆತನ ಪಡೆದುಕೊಂಡರು. ಗೇಣಿ ಪದ್ಧತಿಯೇ ಪ್ರಧಾನವಾಗಿ ಚಾಲ್ತಿಯಲ್ಲಿದ್ದ ಕಡೆ ಸಾಮಾಜಿಕ ಸುಧಾರಣೆಯಾಗಬೇಕಾದರೆ ವರ್ಗ ಸಂಬಂಧ ಬದಲಾಗಬೇಕಾದ ಅಗತ್ಯವನ್ನು ಒತ್ತಿ ಹೇಳಿತು. ವರ್ಗಾಧಾರಿತ ಸಿದ್ಧಾಂತ ಹೊಂದಿದ ಕಮ್ಯುನಿಸ್ಟ್ ಪಕ್ಷಗಳು ಆ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದವು. ನೈತಿಕವಾಗಿಯೂ ಭೂಮಿಯನ್ನು ಶ್ರೀಮಂತ ಭೂಮಾಲೀಕರಿಂದ ಸಣ್ಣ ಗೇಣಿದಾರರಿಗೆ ಹಸ್ತಾಂತರಿಸಲು ಸಮರ್ಥನೆ ಸಿಕ್ಕಿತು.

ಅದಕ್ಕೆ ವಿರುದ್ಧವಾಗಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಗೇಣಿ ವಿಷಯವು ವರ್ಗ ಸಂಬಂಧಿ ಘರ್ಷಣೆಯ ಕಾರಣವಾಗಿತ್ತೇ ಎಂಬುದು ಎಂದೂ ಸ್ಪಷ್ಟವಾಗಿರಲಿಲ್ಲ. ವರ್ಗಾಧಾರಿತ ರಾಜಕೀಯ ಹೊಂದಿದ ಸುಧಾರಣೆಯೊಂದು ರಾಜಕೀಯ ಗುಂಪುಗಾರಿಕೆ ಇರುವ ಕಡೆ ಎಂತಹ ಪರಿಣಾಮ ಉಂಟು ಮಾಡಬಹುದೆಂದು ನೋಡಲು ಇದೊಂದು ನೈಜ ಉದಾಹರಣೆಯಾಗಿದೆ. ಶ್ರೀನಿವಾಸ್ ಅವರು ಗುಂಪುಗಳು ಎಲ್ಲ ಕಡೆ ಇರುವಂಥದ್ದೇ ಎಂದು ವಾದಿಸುತ್ತಾರೆ.  “ಗುಂಪುಗಳಿಲ್ಲದ ಹಳ್ಳಿಗಳೇ ಇಲ್ಲ. ಗ್ರಾಮೀಣ ಬದುಕಿನಲ್ಲಿ ಗುಂಪುಗಳು ಅಖಂಡ ಭಾಗಗಳಾಗಿವೆ”  ಎಂದಿದ್ದಾರೆ.  ಗುಂಪುಗಳ ಪ್ರಾಬಲ್ಯ ಎಷ್ಟರ ಮಟ್ಟಿಗೆ ಇರಬಹುದೆಂದರೆ, ಒಂದು ಗುಂಪಿಗೆ ವಿಧೇಯರಾಗಿರುವುದು ಬೇರೆ ಅಂತರಗಳನ್ನು – ಧರ್ಮ, ವರ್ಗ ಸಂಬಂಧೀ ಅಂತರಗಳನ್ನೂ ಸಹಾ – ಮುಚ್ಚಿ ಹಾಕುತ್ತದೆ. ಹಿಂದೂ ರೈತ ಮುಖಂಡನೊಬ್ಬನ ಗುಂಪಿನಲ್ಲಿ ಮುಸ್ಲಿಮನೊಬ್ಬ ಇರುವುದು ಅಸಾಮಾನ್ಯವೇನಲ್ಲ. ಭೂ ಮಾಲೀಕ – ಗೇಣಿದಾರ ಸಂಬಂಧ ಕೂಡಾ ಗುಂಪಿನೊಳಗೆ ಕರಗಿಬಿಡುವ ಸಾಧ್ಯತೆಯಿರುತ್ತದೆ. ಪ್ರಭಾವೀ ಭೂ ಮಾಲೀಕನೊಬ್ಬ ತನ್ನ ಅನುಯಾಯಿಯ  ದೀರ್ಘಾವಧಿ ಮತ್ತು ನಿಷ್ಠ ಸೇವೆಗೆ ಸ್ವಲ್ಪ ಭೂಮಿಯನ್ನೂ ಕೊಡುವ ಸಾಧ್ಯತೆಯೂ ಇದೆಯೆಂದು ಶ್ರೀನಿವಾಸ್ ಹೇಳುತ್ತಾರೆ.

ಹೀಗೆ ಗುಂಪು ಆಧಾರಿತ ಹಳ್ಳಿಯ ರಾಜಕಾರಣ ಗಮನಿಸಿದಾಗ; ಎಲ್ಲ ವರ್ಗಗಳಲ್ಲಿದ್ದ ಭೂ ಮಾಲೀಕರಿಂದ ಭೂಮಿಯನ್ನು ಕಸಿದುಕೊಂಡು ಎಲ್ಲ ವರ್ಗಗಳ ಗೇಣಿದಾರರಿಗೆ ಒಡೆತನ ನೀಡಿರುವುದು ನೋಡಿದಾಗ ಗುಂಪು ಸಂಘರ್ಷಕ್ಕೆ ಭೂ ಸುಧಾರಣಾ ಕಾಯಿದೆ ಒಂದು ಅಸ್ತ್ರವಾಗಿ ಬಳಕೆಯಾಗಿರುವ ಸಾಧ್ಯತೆಯಿದೆ. ಭೂ ನ್ಯಾಯಮಂಡಳಿಯಲ್ಲಿ ಸ್ಥಾನ ಸಂಪಾದಿಸಿದ ಗುಂಪೊಂದರ ನಾಯಕನು ತನ್ನ ಗುಂಪಿನವರ ಹಿತಾಸಕ್ತಿ ಕಾಯುವ, ಅವರಿಗೆ ಅನುಕೂಲಕರವಾಗಿ ಕಾಯ್ದೆ ಜಾರಿ ಮಾಡುವ ಅಧಿಕಾರ ಹೊಂದಿರುತ್ತಿದ್ದರು. ಅರ್ಜಿದಾರನೊಬ್ಬ ಗೇಣಿದಾರ ಹೌದೋ ಅಲ್ಲವೋ ಎಂದು ತೀರ್ಮಾನಿಸುವುದು ಭೂ ನ್ಯಾಯ ಮಂಡಳಿಗಳೇ ಆಗಿದ್ದರಿಂದ ತಮ್ಮ ಅನುಯಾಯಿಗಳಿಗೆ ಅವರು ಘರ್ಷಣೆಗಿಳಿದಾದರೂ ಭೂಮಿ ಕೊಡಿಸಬಲ್ಲವರಾಗಿದ್ದರು. ಇದರಲ್ಲಿ ಗುಂಪುಗಳ ಮುಖಂಡರ ಪ್ರಧಾನ ಪಾತ್ರ ಮತ್ತು ಗುಂಪುಗಳ ನಡುವಿನ ವೈರ ಎಷ್ಟರಮಟ್ಟಿಗಿತ್ತೆಂದರೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ರಾಜಕೀಯ ಪಕ್ಷ ಬದಲಾದ ಹಾಗೆ ಭೂನ್ಯಾಯ ಮಂಡಳಿಗಳೂ ಪುನರ್ ರಚಿತಗೊಂಡವು.

‘ಉಳುವವನೇ ಒಡೆಯ’ ಎಂಬ ನೈತಿಕ ತಳಹದಿಯ ಮೇಲೆ ವರ್ಗ ಸಂಬಂಧ ಬದಲಾಯಿಸುವ ಉದ್ದೇಶದಿಂದ ಬಂದ ಭೂ ಸುಧಾರಣಾ ಕಾಯ್ದೆಯನ್ನು ಕೂಡಾ ರಾಜಕೀಯ ಗುಂಪು ಸಂಘರ್ಷಕ್ಕೆ ಬಳಸಿಕೊಂಡಿದ್ದನ್ನು ಗಮನಿಸಿದರೆ, ಹೇಗೆ ರಾಜಕೀಯ ಗುಂಪುಗಾರಿಕೆಯು ನೈತಿಕ ತಳಹದಿಯನ್ನೇ ಕರಗಿಸಿಬಿಡುತ್ತದೆ ಎಂಬುದು ಗೊತ್ತಾಗುತ್ತದೆ. ವರ್ಗ ವಿಶ್ಲೇಷಣೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸಮಾನತೆಯ ತಳಹದಿಯ ಮೇಲೆ ನಿಂತ ಭೂ ಸುಧಾರಣಾ ಕಾಯ್ದೆ ಸ್ವೀಕಾರಾರ್ಹವಾಗುತ್ತದೆ. ಆದರೆ ಅದೇ ಕಾಯ್ದೆಯನ್ನು ಗುಂಪುಗಳು ತಮ್ಮ ಹಿತಕ್ಕೆ ಬಳಸಿಕೊಂಡಾಗ ಅವರ ಹಿತಾಸಕ್ತಿಗಳೇ ಬೇರೆಯಾಗಿರುತ್ತವೆ. ಗುಂಪಿನ ನಾಯಕ ತನ್ನ ಗುಂಪಿನವರಿಗೆ ಮಾತ್ರ ಹೆಚ್ಚು ಕರ್ತವ್ಯ ಬದ್ಧನಾಗಿರುತ್ತಾನೆ. ಇಲ್ಲಿ ನ್ಯಾಯವೆಂದರೆ ಅವನ ಗುಂಪಿನವನಿಗೆ ಕೊಡಿಸುವ ನ್ಯಾಯ ಎಂದು ನಿರೀಕ್ಷಿಸಲಾಗುತ್ತದೆ. ರಾಷ್ಟ್ರ – ರಾಜ್ಯ ಮಟ್ಟದಲ್ಲಿ ಭೂಸುಧಾರಣಾ ಕಾಯ್ದೆಯಿಂದ ವರ್ಗ ಸಂಬಂಧಗಳನ್ನು ಸುಧಾರಿಸುವ ಹಾಗೂ ಸಮಾನತೆಯ ಕಡೆಗೆ ಚಲಿಸುವ ನೈತಿಕ ಗುರಿ ಹೊಂದಿದ್ದರೆ, ಗ್ರಾಮೀಣ ಮಟ್ಟದಲ್ಲಿ ಇದು ಗುಂಪು ರಾಜಕೀಯಕ್ಕೆ  ಆರ್ಥಿಕ ಬಲ ಒದಗಿಸುವ ಸಾಧ್ಯತೆಯಿರುತ್ತದೆ.

ಕಾನೂನು ಮತ್ತು ಸುಧಾರಣೆ ಕುರಿತ ಕೆಲವು ಪ್ರಶ್ನೆಗಳು 

1974 ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ವಿಭಿನ್ನ ಅನುಭವಗಳ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುಧಾರಣೆಗಳ ನಡುವಿನ ಸಂಬಂಧಗಳ ಕುರಿತು ಮೂರು ಪ್ರಶ್ನೆಗಳು ಹುಟ್ಟುತ್ತವೆ. ಮೊದಲನೆಯದಾಗಿ ಸುಧಾರಣಾ ತತ್ವದ ಕುರಿತ ವಿಷಯ. ಕೆಲವರ ಅಭಿಪ್ರಾಯದಂತೆ ಒಟ್ಟಾರೆ ವಿಶ್ವಾತ್ಮಕ ಮತ್ತು ವಾಸ್ತವ ಗ್ರಹಿಕೆಯಿಂದ ಹುಟ್ಟಬೇಕಾದ ಸಿದ್ಧಾಂತಗಳೆಲ್ಲ ಆದರ್ಶವಾದಿಯಾಗಿರುತ್ತವೆ. ಆದರ್ಶವಾದಿ ತತ್ವವು ಸಮಾಜ ಸುಧಾರಣೆಯ ಆರಂಭ ಬಿಂದುವೂ ಆಗಿರುತ್ತದೆ. ಮೇಲೆ ನೋಡಿದ ಉದಾಹರಣೆಯಲ್ಲಿ ಉಳುವವನಿಗೇ ಭೂಮಿ ಎಂಬ ತತ್ವದೊಂದಿಗೆ ಇಡೀ ಭೂ ಸುಧಾರಣಾ ಕಾಯ್ದೆ ರೂಪಿಸಲ್ಪಟ್ಟಿತು. ಆದರೆ ಕೆಲವು ಪ್ರದೇಶಗಳಲ್ಲಿ ಇದು ಅನ್ವಯವಾಗದಿದ್ದಾಗ ಅನಪೇಕ್ಷಿತ ಮತ್ತು ವಿರುದ್ಧ ಪರಿಣಾಮಗಳನ್ನೂ ಕೊಟ್ಟಿತು. ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ, ಮೊದಲೇ ಬೇರೆ ಬೇರೆ ಕೃಷಿ ಪದ್ಧತಿಗಳನ್ನು ಅನುಭವದಿಂದ ಗಮನಿಸಿ ನಂತರವೇ ಪ್ರತಿ ವ್ಯವಸ್ಥೆಗೂ ಹೊಂದುವಂತಹ ಅಗತ್ಯ ಸುಧಾರಣಾ ತತ್ವಗಳನ್ನು ರೂಪಿಸಬೇಕಿತ್ತೇ ಎಂದು. ಹಾಗಾದರೆ ಸುಧಾರಣೆಗಳ ತಾತ್ವಿಕ ಆರಂಭ ಬಿಂದುವನ್ನು ಆದರ್ಶವಾದಿ ತತ್ವಗಳಿಂದ ವಾಸ್ತವ ಅನುಭವಗಳ ನೆಲೆಗೆ ಬದಲಿಸಬೇಕಿತ್ತೆ?

ಸೈದ್ಧಾಂತಿಕ ಆರಂಭ ಬಿಂದು ಹಾಗೂ ವಾಸ್ತವ ಅನುಭವದ ಆರಂಭ ಬಿಂದುವಿನ ನಡುವಿನ ವ್ಯತ್ಯಾಸ ಎರಡನೆಯ ಪ್ರಶ್ನೆಯನ್ನೆತ್ತುತ್ತದೆ. ಸುಧಾರಣೆಯ ಹಾದಿಯಲ್ಲಿ ವಿಭಿನ್ನ ಗುಂಪುಗಳ ವರ್ತನೆಯನ್ನು ಈ ವ್ಯತ್ಯಾಸವು ಪ್ರಭಾವಿಸುತ್ತದೆಯೆ?. ಸಾಧಾರಣವಾಗಿ ಬುದ್ಧಿಜೀವಿಗಳು ಸೈದ್ಧಾಂತಿಕ ತತ್ವದ ಆರಂಭದೆಡೆಗೇ ವಾಲುತ್ತಾರೆ. ಅದಕ್ಕೆ ವಿರುದ್ಧವಾಗಿ ರಾಜಕಾರಣಿಗಳು – ಅವರ ಭವಿಷ್ಯ ವಾಸ್ತವ ಸತ್ಯಗಳ ಮೇಲೇ ಅವಲಂಬಿಸಿರುವುದರಿಂದ – ವಾಸ್ತವ ಗ್ರಹಿಕೆಗಳ ಆಧಾರದ ಕಡೆಗೇ ವಾಲುತ್ತಾರೆ. ಸೈದ್ಧಾಂತಿಕ ರಾಜಕೀಯ ಪಕ್ಷಕ್ಕೆ ಸೇರಿದ ರಾಜಕಾರಣಿಗಳೂ ಕೂಡಾ ವಾಸ್ತವ ಸತ್ಯಕ್ಕೆ ಎದುರಾದೊಡನೆ ವ್ಯಾವಹಾರಿಕವಾದ ನಿಲುವನ್ನೇ ತೆಗೆದುಕೊಳ್ಳುತ್ತಾರೆ. ರಾಜಕಾರಣಿಗಳೇ ಶಾಸನ ರೂಪಿಸುವವರೂ ಆಗಬೇಕಾದ್ದರಿಂದ ಅವರಿಗೆ ಎರಡೂ ಕಡೆ ಸಂಭಾಳಿಸಬೇಕಾದ ಜವಾಬ್ದಾರಿಯಿರುತ್ತದೆ. ಆದರ್ಶ ಮತ್ತು ಸದ್ಯದ ವಾಸ್ತವಗಳ ನಡುವಿನ ಮುಕ್ತ ಅವಕಾಶದಲ್ಲಿ ಯಾರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೋ ಅವರು ಯಶಸ್ವೀ ರಾಜಕಾರಣಿಗಳಾಗಿರುತ್ತಾರೆ. ಬೇಡಿಕೆಯ ಘರ್ಷಣೆಗಳ ನಡುವೆ ರಾಜಿ ಎಂಬಂತೆ ಇದು ಕಾಣಬಹುದು. ಆದರೆ 1974 ರ ಭೂ ಸುಧಾರಣಾ ಕಾಯ್ದೆಯ ದಕ್ಷಿಣ ಕರ್ನಾಟಕದ ಅನುಭವ ಮತ್ತೊಂದು ಸಾಧ್ಯತೆಯನ್ನೂ ತೋರಿಸುತ್ತದೆ. ವರ್ಗಾಧಾರಿತ ಭೂಸುಧಾರಣಾ ಕಾಯ್ದೆಯನ್ನು ರಾಜಕೀಯ ಗುಂಪುಗಳು ಆದರ್ಶ ಮತ್ತು ವಾಸ್ತವಗಳ ನಡುವೆಯೂ ತಮ್ಮ ಮಹತ್ವಾಕಾಂಕ್ಷಿ ರಾಜಕೀಯ ಹಿತಾಸಕ್ತಿಗೆ ಬಳಸಿಕೊಂಡವು. ಈ ಅವಕಾಶವನ್ನೇ ವಿಶೇಷ ರಾಜಕೀಯ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವಂತಾಗಬೇಕು ಮತ್ತು ಅದು ಸುಧಾರಣೆಯ ಜೊತೆ ಯಾವ ಸಂಬಂಧವನ್ನೂ ಹೊಂದಬಾರದು.

ಇದು ಕೊನೆಗೆ ನಮ್ಮನ್ನು ಸುಧಾರಣಾ ಪ್ರಕ್ರಿಯೆಯಲ್ಲಿ ಕಾನೂನಿನ ಪಾತ್ರವೇನು ಎಂಬ ಪ್ರಶ್ನೆಯತ್ತ ತಂದು ನಿಲ್ಲಿಸುತ್ತದೆ. ಸುಧಾರಣೆಗಾಗಿ ಕಾನೂನೇ ಪ್ರಮುಖ ಅಸ್ತ್ರ ಎಂಬ ಧೋರಣೆಯಿಂದ ಕಾನೂನು ರೂಪಿಸುವವರ ಹಾಗೂ ಅನುಷ್ಠಾನಕ್ಕೆ ತರುವವರ ಜವಾಬ್ದಾರಿ ಹೆಚ್ಚುತ್ತದೆ. ಅಲ್ಲದೇ ಸದ್ಯದ ಸ್ಥಳೀಯ ವ್ಯವಸ್ಥೆಗೆ ತಕ್ಕುದಾಗಿ ಕಾನೂನು ರೂಪುಗೊಳ್ಳದಿದ್ದರೆ ಅದು ನ್ಯಾಯಾಂಗ ವ್ಯಸ್ಥೆಯ ವಿಶ್ವಾಸಾರ್ಹತೆಯನ್ನೇ ಘಾಸಿಗೊಳಿಸುತ್ತದೆ. ಇದರ ಪರಿಣಾಮವು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಕಾನೂನು ಬದಲಿಸುವವರಿಗೆ ಅನುಕೂಲಕರವಾಗುತ್ತದೆ. ಹಾಗೂ ಅವರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಡವರನ್ನೂ ಪ್ರತ್ಯೇಕಿಸಿ ಇಡಬಲ್ಲರಾದರೆ ಅದು ಸುಧಾರಣೆಯ ಮೂಲ ಆಶಯಕ್ಕೆ ವಿರುದ್ಧವಾಗುತ್ತದೆ. ಹಾಗಾಗಿ ಕಾನೂನು ಸುಧಾರಣೆಗಳನ್ನು ಸಶಕ್ತಗೊಳಿಸುವುದಲ್ಲದೇ ಬೇರೇನನ್ನಾದರೂ ಮಾಡಲು ಸಾಧ್ಯವೆ?  ಕಾನೂನು ಮತ್ತು ಅದರ ಜೊತೆಜೊತೆಗೇ ನಡೆವ ರಾಜ್ಯ ಆಡಳಿತ ಈ ಎರಡೂ ವಾಸ್ತವ ಸತ್ಯಗಳಲ್ಲಿ ಅಗತ್ಯ ಬದಲಾವಣೆ ತರಬಯಸುವ ಸಾಮಾಜಿಕ ಚಳವಳಿಗಳನ್ನು ಕಟ್ಟುವ ಪ್ರಕ್ರಿಯೆಗೆ ಬದಲೀ ವ್ಯವಸ್ಥೆ ಆಗಲಾರವು.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

2 thoughts on “ಆದರ್ಶ, ಆಡಳಿತ ಮತ್ತು ಆಚರಣೆಗಳ ನಡುವೆ : ದೇವರಾಜ ಅರಸು ಅವರ ಭೂ ಸುಧಾರಣೆಯಲ್ಲಿ ಪ್ರತ್ಯೇಕತೆಗೆ ಅವಕಾಶ

  1. vageesh kumar G A

    ಭೂ ಸುಧಾರಣೆ ಕಾಯ್ದೆಯಿಂದ ಸಣ್ಣ ಸಂಖ್ಯೆಯಲ್ಲಾದರೂ ಚಿಕ್ಕ ರೈತರು ಭೂಮಿ ಕಳೆದುಕೊಂಡರು ಎಂದು ಉಲ್ಲೇಖಿಸಲ್ಪಟ್ಟಿದೆ. ಕೆಲವರು ಬೇರೆ ಊರಲ್ಲಿದ್ದ ಕಾರಣ ಗೇಣಿ ಕೊಟ್ಟಿದ್ದೂ ಇದೆ. ಮತ್ತು ಅವರ ಮತ್ತು ಗೇಣಿದಾರರ ಸಂಬಂಧ ತುಂಬಾ ಚೆನ್ನಾಗಿತ್ತು. ಆದರೆ, ಭೂ ಸುಧಾರಣೆ ಬಂದ ಬಳಿಕ ಸಣ್ಣ ರೈತರೂ ಭೂಮಿ ಕಳೆದುಕೊಂಡರು. ಅಂದರೆ, ಪ್ರಮಾಣ ಕಡಿಮೆಯಿದ್ದರೂ ಚಿಕ್ಕ ರೈತರ ಬಾಯಿಗೆ ಮಣ್ಣು ಬಿದ್ದದ್ದಂತೂ ಅವರು ನಿರ್ಗತಿಕರಾದ್ದಂತೂ ಸತ್ಯ. ಹೀಗೆ ಹೇಳಿದರೆ ಸುಧಾರಣೆ ವಿರೋಧಿ ಅನ್ನುವವರೂ ಇದ್ದಾರೆ. ಆದ್ರೆ, ವಾಸ್ತವ ಸಂಗತಿಯೆಂದರೆ, ಕಾನೂನು ರಚಿಸುವಾಗ ಅದಕ್ಕೊಂದು ಚೌಕಟ್ಟು ಹಾಕಬೇಕಾದವರು ಅದನ್ನು ಹಾಕದೆ, ಬ್ಲೈಂಡ್ ಆಗಿ ಕಾನೂನು ರಚಿಸಿದ ಕಾರಣ, ಕಡಿಮೆ ಪ್ರಮಾಣದಲ್ಲಾದರೂ ಚಿಕ್ಕ ರೈತರಿಗೆ ಭರಿಸಲಾರದ ಅನ್ಯಾಯ ಆಗಿ ಅವರು ಬೀದಿಗೆ ಬಿದ್ರು. ಇಲ್ಲಿಗೆ ಒಂದು ಕನ್ ಕ್ಲೂಶನ್ ಏನೆಂದ್ರೆ, ಯಾವುದೇ ಕಾನೂನು, ಕಟ್ಟಳೆಗಳು ಬಂದರೂ ಕೊನೆಗೆ ಅದರ ಬವಣೆ ಅನುಭವಿಸುವವನು ಬಡವ ಮಾತ್ರ. ಯಾಕೆಂದ್ರೆ, ಶ್ರೀಮಂತರಿಗೆ, ದೊಡ್ಡ ಹಿಡುವಳಿದಾರರು ಗೂಂಡಾಗಿರಿ, ರಾಜಕೀಯ ಪ್ರಭಾವ, ಹಣ ಬಲದಿಂದ ಇವನ್ನೆಲ್ಲಾ ಹತ್ತಿಕ್ಕುವಶ್ಟು ದೊಡ್ಡವರಾಗಿರುತ್ತಾರೆ.

    Reply

Leave a Reply

Your email address will not be published. Required fields are marked *