Daily Archives: June 21, 2012

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-12)


– ಡಾ.ಎನ್.ಜಗದೀಶ್ ಕೊಪ್ಪ


1960ರ ದಶಕದಲ್ಲಿ ಹಿಂಸಾತ್ಮಕ ಘಟನೆಗಳ ಮೂಲಕ ಬೆಂಕಿ, ಬಿರುಗಾಳಿಯಂತೆ ಆವರಿಸಿಕೊಂಡ ನಕ್ಸಲ್ ಹೋರಾಟಕ್ಕೆ 70ರ ದಶಕದ ನಂತರ ಚಾರು ಮತ್ತು ಅವನ ಸಂಗಡಿಗರ ಹತ್ಯೆಯಿಂದಾಗಿ ಹಿನ್ನಡೆಯುಂಟಾಯಿತು. ಚಾರು ಮುಜುಂದಾರ್ ಮತ್ತು ವೆಂಪಟಾಪು ಸತ್ಯನಾರಾಯಣ ಇವರಿಬ್ಬರೂ ಕನಸು ಕಂಡಿದ್ದಂತೆ ಕೃಷಿಕೂಲಿ ಕಾರ್ಮಿಕರ ಹಾಗೂ ಆದಿವಾಸಿಗಳ ಬದುಕು ಹಸನಾಗದಿದ್ದರೂ ಅವರುಗಳ ಸಾಮಾಜಿಕ ಬದುಕಿನಲ್ಲಿ ಒಂದು ಮಹತ್ತರ ಬದಲಾವಣೆಯ ಕ್ರಾಂತಿಗೆ ನಕ್ಸಲ್ ಹೋರಾಟ ಕಾರಣವಾಯಿತು.

ನಕ್ಸಲ್ ಹೋರಾಟಕ್ಕೆ ಮುನ್ನ ಪೂರ್ವ ಮತ್ತು ಉತ್ತರ ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ, ದಲಿತರು, ಹಿಂದುಳಿದವರು, ಹಾಗೂ ಬಡ ಆದಿವಾಸಿಗಳು ಜಮೀನ್ದಾರರ ಪಾಳೇಗಾರ ಸಂಸ್ಕೃತಿಯಿಂದ ನಲುಗಿಹೋಗಿದ್ದರು. ಯಾರೊಬ್ಬರು ತಲೆಗೆ ಮುಂಡಾಸು ಕಟ್ಟುವಂತಿರಲಿಲ್ಲ. ಕಾಲಿಗೆ ಚಪ್ಪಲಿ ಧರಿಸುವಂತಿರಲಿಲ್ಲ, ತಮ್ಮ ಮನೆಯ ಒಳಗೆ ಅಥವಾ ಹೊರಗೆ ಚಾರ್ ಪಾಯ್ ಮಂಚ ಬಳಸುವಂತಿರಲಿಲ್ಲ. (ತೆಂಗಿನ ಅಥವಾ ಸೆಣಬಿನ ನಾರು ಹಗ್ಗದಲ್ಲಿ ನೇಯ್ದು ಮಾಡಿದ ಮಂಚ. ಈಗಿನ ಹೆದ್ದಾರಿ ಪಕ್ಕದ ಡಾಬಗಳಲ್ಲಿ ಇವುಗಳನ್ನು ಕಾಣಬಹುದು) ಅಷ್ಟೇ ಏಕೆ? ತಮ್ಮ ಸೊಂಟಕ್ಕೆ ಪಂಚೆ ಅಥವಾ ಲುಂಗಿ ಕಟ್ಟುವಂತಿರಲಿಲ್ಲ. ನಕ್ಸಲರ ಆಗಮನದಿಂದಾಗಿ, ಆಂಧ್ರ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ ರಾಜ್ಯಗಳಲ್ಲಿ ಶತ ಶತಮಾನಗಳ ಕಾಲ ಮುಕ್ತ ಪ್ರಾಣಿಗಳಂತೆ ಬದುಕಿದ್ದ ಬಡಜನತೆ ತಲೆ ಎತ್ತಿ ನಡೆಯುವಂತಾಯಿತು. ನಾವು ಸಿಡಿದೆದ್ದರೆ, ಭೂಮಿಯನ್ನು ತಲೆಕೆಳಗಾಗಿ ಮಾಡಬಲ್ಲೆವು ಎಂಬ ಆತ್ಮ ವಿಶ್ವಾಸವನ್ನು ನಕ್ಸಲ್ ಹೋರಾಟ ದೀನದಲಿತರಿಗೆ ತಂದುಕೊಟ್ಟಿತು. ನಕ್ಸಲಿಯರ ಈ ಹೋರಾಟ ಚಾರುವಿನ ಅನಿರೀಕ್ಷಿತ ಸಾವಿನಿಂದಾಗಿ, ಮುಂದಿನ ಒಂದು ದಶಕದ ಅವಧಿಯಲ್ಲಿ ಬಹುತೇಕ ಕವಲು ಹಾದಿಯಲ್ಲಿ ಸಾಗಿತು. ಏಕೆಂದರೆ, ಹೋರಾಟವನ್ನು ಯಾವ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬುದರ ಬಗ್ಗೆ ನಾಯಕರಲ್ಲಿ ಜಿಜ್ಞಾಸೆ ಮೂಡಿ, ಭಿನ್ನಭಿಪ್ರಾಯಕ್ಕೆ ಕಾರಣವಾಯಿತು. ಚಾರು ಮುಜುಂದಾರ್ ಕನಸಿದ್ದ ಹೋರಾಟದ ಮಾರ್ಗವನ್ನು (ಗೆರಿಲ್ಲಾ ಯುದ್ಧ ತಂತ್ರ ಮತ್ತು ಹಿಂಸೆ) ತುಳಿಯಲು ಹಲವು ನಾಯಕರಿಗೆ ಇಷ್ಟವಿರಲಿಲ್ಲ. ಚಾರು ರೂಪಿಸಿದ್ದ ಹೋರಾಟದ ಮೂರು ಮುಖ್ಯ ಸೂತ್ರಗಳೆಂದರೆ,

  • ಪ್ರತಿ ಹಂತದಲ್ಲಿ ಸಶಸ್ತ್ರಗಳನ್ನು ಬಳಸಿ, ಕಾರ್ಯಕರ್ತರ ಮನಸ್ಸನ್ನು ಸದಾ ಶತ್ರುಗಳ ವಿರುದ್ದ ಉನ್ಮಾದದ ಸ್ಥಿತಿಯಲ್ಲಿ ಇಡಬೇಕು. ಇದಕ್ಕಾಗಿ ಪ್ರತಿದಿನ ಭೂ ಮಾಲೀಕರ ಪಾಳೆಗಾರ ಸಂಸ್ಕೃತಿಯ ವಿರುದ್ಧ ಯುದ್ಧ ಜರುಗುತ್ತಲೇ ಇರಬೇಕು.
  • ನಕ್ಸಲ್ ಹೋರಾಟಕ್ಕೆ ಎಲ್ಲಾ ವಿದ್ಯಾವಂತ ವರ್ಗ ಧುಮುಕುವಂತೆ ಪ್ರೇರೇಪಿಸಬೇಕು. ವಿಶೇಷವಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ನಗರಗಳಲ್ಲಿ ಗುಪ್ತ ಸಭೆಗಳನ್ನು ನಡೆಸಬೇಕು. ಅವರುಗಳಿಗೆ ಬಡವರ ಬವಣೆಗಳನ್ನು ಮನಮುಟ್ಟುವಂತೆ ವಿವರಿಸಬೇಕು. ಪ್ರತಿ ನಗರ ಹಾಗೂ ಪಟ್ಟಣಗಳಲ್ಲಿ ನಾಲ್ಕು ಅಥವಾ ಐದು ಜನರ ತಂಡವನ್ನು ತಯಾರಿಸಿ ನಕ್ಸಲ್ ಸಿದ್ಧಾಂತ ಎಲ್ಲೆಡೆ ಹರಡುವಂತೆ ನೋಡಿಕೊಳ್ಳಬೇಕು.
  • ಗ್ರಾಮಗಳಲ್ಲಿ ಕೃಷಿಕರು, ಕೂಲಿಗಾರರು ಇವರುಗಳನ್ನು ಸಂಘಟಿಸಿ, ಸಣ್ಣ ಮಟ್ಟದ ರ್‍ಯಾಲಿಗಳನ್ನು ನಡೆಸುವುದರ ಮೂಲಕ ಅವರುಗಳಿಗೆ ಶ್ರೀಮಂತರ ಸುಲಿಗೆ, ಸರ್ಕಾರದ ಇಬ್ಬಂದಿತನ, ಇವುಗಳನ್ನು ವಿವರಿಸಿ, ಅವರನ್ನು ಶೋಷಣೆಯಿಂದ ಮುಕ್ತರಾಗಲು ಹೋರಾಟವೊಂದೇ ಅಂತಿಮ ಮಾರ್ಗ ಎಂಬ ಮನಸ್ಥಿತಿಗೆ ತಂದು ನಿಲ್ಲಿಸಬೇಕು.

ಆದರೆ, ಇವುಗಳನ್ನು ಅನುಷ್ಠಾನಗೊಳಿಸಲು ಕೆಲವು ನಾಯಕರಿಗೆ ಮನಸ್ಸಿರಲಿಲ್ಲ.

ಚಾರು ಮುಜುಂದಾರ್‌ಗೆ 1975 ರ ಒಳಗೆ ಇಡೀ ಭಾರತವನ್ನು ಮಾವೋವಾದಿ ಕಮ್ಯೂನಿಷ್ಟರ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಹೆಬ್ಬಯಕೆ ಇತ್ತು. ಈ ಕಾರಣಕ್ಕಾಗಿ ಅವನು ಯುವಜನರನ್ನು ಹೋರಾಟಕ್ಕೆ ಸಜ್ಜುಗೊಳಿಸುತ್ತಿದ್ದ. ವಸಾಹತು ಕಾಲದಲ್ಲಿ ಬ್ರಿಟಿಷರ ಶೋಷಣೆ, ಸ್ವಾತಂತ್ರ್ಯದ ನಂತರದ ಶ್ರೀಮಂತ ಭೂಮಾಲೀಕರು, ಮತ್ತು ಭ್ರಷ್ಟ ಅಧಿಕಾರಿಗಳ ಶೋಷಣೆಯ ಬಗ್ಗೆ ಯುವ ಜನಾಂಗಕ್ಕೆ ಮನಮುಟ್ಟುವಂತೆ ತಲುಪಿಸುವಲ್ಲಿ ಅವನು ಯಶಸ್ವಿಯಾದ. ಜೊತೆಗೆ ರಾಷ್ಟ್ರೀಯ ನಾಯಕರ ಬಗ್ಗೆ ವಿಶೇಷವಾಗಿ, ಗಾಂಧಿ, ನೆಹರೂ, ಪಟೇಲ್, ರವೀಂದ್ರನಾಥ ಟ್ಯಾಗೂರ್, ಈಶ್ವರ ಚಂದ್ರ ವಿದ್ಯಾಸಾಗರ್ ಇವರುಗಳ ಬಗ್ಗೆ ಯುವಜನಾಂಗದಲ್ಲಿ ಇದ್ದ ಗೌರವ ಭಾವನೆಯನ್ನು ಅಳಿಸಿಹಾಕಿದ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಭಾರತದ ಬಡ ರೈತರ ಬಗ್ಗೆ, ಕೃಷಿಕೂಲಿ ಕಾರ್ಮಿಕರ ಬಗ್ಗೆ ಧ್ವನಿ ಎತ್ತದ ಈ ನಾಯಕರುಗಳೆಲ್ಲಾ ಚಾರುವಿನ ದೃಷ್ಟಿಯಲ್ಲಿ ಸೋಗಲಾಡಿತನದ ವ್ಯಕ್ತಿಗಳು ಎಂಬಂತಾಗಿದ್ದರು. ಚಾರುವಿನ ಪ್ರಚೋದನಕಾರಿ ಭಾಷಣ ಪಶ್ಚಿಮ ಬಂಗಾಳದಲ್ಲಿ ಹಲವು ಬಿಸಿ ರಕ್ತದ ತರುಣರನ್ನು ನಕ್ಸಲ್ ಹೋರಾಟಕ್ಕೆ ಕರೆತರುವಲ್ಲಿ ಯಶಸ್ವಿಯಾಯಿತು. ಪೊಲೀಸ್ ಠಾಣೆಗಳನ್ನು, ಮತ್ತು ಸರ್ಕಾರಿ ಕಚೇರಿ ಕಟ್ಟಡಗಳನ್ನು ಚಾರು ಹಿಂಸಾತ್ಮಕ ದಾಳಿಗೆ ಗುರಿಯಾಗಿರಿಸಿಕೊಂಡಿದ್ದ. ಇದಕ್ಕೆ ಮೂಲ ಕಾರಣ, ಒಂದು ಕಡೆ ಸರ್ಕಾರದ ನೈತಿಕತೆಯನ್ನು ಕುಗ್ಗಿಸುತ್ತಾ, ಇನ್ನೊಂದೆಡೆ, ಸಂಘಟನೆಗೆ ಬೇಕಾದ ಬಂದೂಕಗಳು ಮತ್ತು ಗುಂಡುಗಳನ್ನು ಅಪಹರಿಸುವುದು ಅವನ ಉದ್ದೇಶವಾಗಿತ್ತು.

ಚಾರು ಮುಜುಂದಾರ್ ತಾನು ಪೊಲೀಸರಿಂದ 1971 ರಲ್ಲಿ ಹತ್ಯೆಯಾಗುವ ಮುನ್ನ, ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದ. ಕೇವಲ ಒಂದು ವರ್ಷದ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 3200 ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗಿದ್ದ. ಕೊಲ್ಕತ್ತ ನಗರವೊಂದರಲ್ಲೇ ಕಾರ್ಯಕರ್ತರು ಸೇರಿದಂತೆ ಒಟ್ಟು 139 ಮಂದಿ ಹತ್ಯೆಯಾದರು. ಇವರಲ್ಲಿ 78 ಮಂದಿ ಪೊಲೀಸರು ನಕ್ಸಲ್ ದಾಳಿಗೆ ಬಲಿಯಾದರು. ನಕ್ಸಲರು ಒಂದು ವರ್ಷದಲ್ಲಿ ಪೊಲೀಸ್ ಠಾಣೆಗಳಿಂದ 370 ಬಂದೂಕುಗಳನ್ನು ಅಪಹರಿಸುವಲ್ಲಿ ಯಶಸ್ವಿಯಾದರು. ಪಶ್ಚಿಮ ಬಂಗಾಳದ ಹೋರಾಟ ಪರೋಕ್ಷವಾಗಿ ಬಿಹಾರ್ ಮತ್ತು ಆಂಧ್ರ ರಾಜ್ಯದಲ್ಲಿ ಪರಿಣಾಮ ಬೀರಿ. ಅಲ್ಲಿಯೂ ಕೂಡ ಕ್ರಮವಾಗಿ 220 ಮತ್ತು 70 ಹಿಂಸಾತ್ಮಕ ಘಟನೆಗಳು ಜರುಗಿದವು. ಇದು ಅಂತಿಮವಾಗಿ ಚಾರುವಿನ ಹತ್ಯೆಗೆ ಪಶ್ಚಿಮ ಬಂಗಾಳದ ಪೊಲೀಸರನ್ನು ಪ್ರಚೋದಿಸಿತು.

ಚಾರುವಿನ ಸಾವಿನ ನಂತರ ಮಾವೋವಾದಿ ಸಂಘಟನೆ ಎರಡನೇ ವರ್ಗದ ನಾಯಕರ ಸ್ವಾರ್ಥ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಒಟ್ಟು 30 ಗುಂಪುಗಳಾಗಿ ಸಿಡಿದುಹೋಯಿತು. ಎಲ್ಲರ ಗುರಿ ಒಂದಾದರೂ ಕೂಡ ಬಹುತೇಕ ನಾಯಕರು ಹೋರಾಟದ ಮುಂಚೂಣಿಗೆ ಬರುವ ಆಸೆಯಿಂದ, ನಮ್ಮ ಕರ್ನಾಟಕದ ರೈತಸಂಘ, ದಲಿತ ಸಂಘಟನೆ ಮತ್ತು ಕನ್ನಡ ಪರ ಸಂಘಟನೆಗಳ ಮಾದರಿಯಲ್ಲಿ  ಒಡೆದು ಚೂರಾಯಿತು. ಇವುಗಳಲ್ಲಿ ಮುಖ್ಯವಾಗಿ ಚಾರುವಿನ ಸಿದ್ಧಾಂತವನ್ನು ಒಪ್ಪಿಕೊಂಡ ಒಂದು ಸಂಘಟನೆ ಹಾಗೂ ವಿರೋಧಿಸುವ ಇನ್ನೊಂದು ಸಂಘಟನೆ ಇವೆರಡು ಮಾತ್ರ ಜೀವಂತವಾಗಿ ನಕ್ಸಲ್ ಚಳವಳಿಯನ್ನು ಮುಂದುವರಿಸಿದವು. ಉಳಿದವುಗಳು ಸ್ಥಳೀಯ ನಾಯಕರ ನೇತೃತ್ವದಲ್ಲಿ ಆಯಾ ಪ್ರಾಂತ್ಯಗಳಿಗೆ ಸೀಮಿತವಾದವು.

ನಕ್ಸಲ್ ಹೋರಾಟವನ್ನು ಮುನ್ನಡೆಸುತ್ತಾ, ಮಾವೋತ್ಸೆ ತುಂಗನ ಪರಮ ಆರಾಧಕನಾಗಿದ್ದ ಚಾರು ಮುಜುಂದಾರ್ ಹೋರಾಟದ ಉನ್ಮಾದದಲ್ಲಿ ಮಾವೋನ ಪ್ರಮುಖ ಸಿದ್ಧಾಂತವನ್ನು ಮರೆತದ್ದು ಪ್ರಥಮ ಹಂತದ ಹೋರಾಟದ ಯಶಸ್ವಿಗೆ ಅಡ್ಡಿಯಾಯಿತು. ಮಾವೋತ್ಸೆ ತುಂಗನ ಪ್ರಕಾರ, ಕಮ್ಯೂನಿಷ್ಟರು ಭವಿಷ್ಯ ನುಡಿಯುವ ಜೋತಿಷಿಗಳಲ್ಲ. ಅವರು ಸಮಾಜ ಮತ್ತು ಜನತೆ ಸಾಗಬೇಕಾದ ದಿಕ್ಕನ್ನು ಮತ್ತು ಮಾರ್ಗವನ್ನು ತೋರುವವರು ಮಾತ್ರ. ಕಮ್ಯೂನಿಷ್ಟರು ಅಭಿವೃದ್ಧಿಗೆ ಮಾರ್ಗದರ್ಶಕರೇ ಹೊರತು, ಇಂತಹದ್ದೇ ನಿರ್ದಿಷ್ಟ ಸಮಯದಲ್ಲಿ ಗುರಿ ತಲುಪಬೇಕೆಂಬ ಹುಚ್ಚು ಆವೇಶವನ್ನು ಇಟ್ಟುಕೊಂಡವರಲ್ಲ. ಚಾರು, ಮಾವೋನ ಇಂತಹ ಮಾತುಗಳನ್ನು ಮರೆತ ಫಲವೋ ಏನೊ, ಪರೋಕ್ಷವಾಗಿ ದುರಂತ ಸಾವನ್ನು ಕಾಣಬೇಕಾಯಿತು.

ಇದೇ ವೇಳೆಗೆ 1970ರ ಆಗಸ್ಟ್ 11 ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ರಾಜ್ಯಸಭೆಯಲ್ಲಿ ನೀಡಿದ್ದ ಆಶ್ವಾಸನೆಯಂತೆ ದೇಶಾದ್ಯಂತ ನಕ್ಸಲಿಯ ಚಟುವಟಿಕೆಗಳನ್ನು ಹತ್ತಿಕ್ಕಲು ರಾಷ್ಟ್ರಮಟ್ಟದಲ್ಲಿ ಕಾರ್ಯಾಚರಣೆಗೆ ಆದೇಶ ನೀಡಿದರು. ಅರೆಸೇನಾಪಡೆ ಮತ್ತು ಆಯಾ ರಾಜ್ಯಗಳ ವಿಶೇಷ ಪೊಲೀಸ್ ಪಡೆಯೊಂದಿಗೆ “ಆಪರೇಷನ್ ಸ್ಟೀಪಲ್ ಚೇಸ್” ಎಂಬ ಹೆಸರಿನಲ್ಲಿ ಪ್ರಾರಂಭವಾದ ಕಾರ್ಯಾಚರಣೆಯಿಂದಾಗಿ 1971ರ ಜುಲೈನಲ್ಲಿ ಸಂಭವಿಸಿದ ಚಾರುವಿನ ಮರಣಾನಂತರ, ಎಲ್ಲಾ ರಾಜ್ಯಗಳಲ್ಲಿ ನಕ್ಸಲ್ ಚಳವಳಿಯ ಬೆನ್ನುಮೂಳೆ ಮುರಿಯುವಲ್ಲಿ ಯಶಸ್ವಿಯಾಯಿತು. ನಕ್ಸಲ್ ಹೋರಾಟ ಮುಗಿಸಲು ಹೋರಾಡಿ ಎಂದು ಇಂದಿರಾ ನೀಡಿದ ಕರೆಗೆ ಅಭೂತಪೂರ್ವ ಯಸಸ್ಸು ದೊರಕಿತು. ದೇಶದ ಎಲ್ಲಾ ನಕ್ಸಲ್ ನಾಯಕರು ಬಂಧಿತರಾಗಿ ಸರೆಮನೆಗೆ ತಳ್ಳಲ್ಪಟ್ಟರು. ಪ್ರಮುಖ ನಾಯಕರಾದ ಕನುಸನ್ಯಾಲ್, ಜಂಗಲ್ ಸಂತಾಲ್, ನಾಗಭೂಷಣ್ ಪಟ್ನಾಯಕ್, ಕುನ್ನಿಕಲ್ ನಾರಾಯಣನ್, ಅಶೀಮ್ ಚಟರ್ಜಿ, ಹೀಗೆ, ಆಂಧ್ರದಲ್ಲಿ 1400, ಬಿಹಾರದಲ್ಲಿ 2000, ಪಶ್ಚಿಮ ಬಂಗಾಳದಲ್ಲಿ 4000, ಕೇರಳ, ಉತ್ತರಪ್ರದೇಶ, ಮಧ್ಯಪ್ರದೇಶ, ಒರಿಸ್ಸಾದಲ್ಲಿ 1000 ಮಂದಿ ನಕ್ಸಲ್ ನಾಯಕರು ಮತ್ತು ಪ್ರಮುಖ ಕಾರ್ಯಕರ್ತರುಗಳನ್ನು ಬಂಧಿಸಲಾಯಿತು. ಇದರಿಂದಾಗಿ ಸುಮಾರು ಆರು ವರ್ಷಗಳ ಕಾಲ (1971 ರಿಂದ 1977 ರ ವರೆಗೆ) ನಕ್ಸಲ್ ಹೋರಾಟಕ್ಕೆ ಹಿನ್ನಡೆಯುಂಟಾಯಿತು.

ಈ ನಡುವೆ ಚಾರು ಸಿದ್ಧಾಂತದಿಂದ ದೂರವಾಗಿ ತಮ್ಮದೇ ಬಣಗಳನ್ನು ಕಟ್ಟಿಕೊಂಡಿದ್ದ ಹಲವರು ನಕ್ಸಲ್ ಹೋರಾಟವನ್ನು ಜೀವಂತವಾಗಿ ಇಡುವಲ್ಲಿ ಸಫಲರಾದರು. ಚಾರು ಸಿದ್ಧಾಂತವನ್ನು ಒಪ್ಪಿಕೊಂಡವರು ಲಿನ್ ಬಯೋ ಗುಂಪು ಎಂದೂ, ವಿರೋಧಿ ಬಣವನ್ನು ಲಿನ್ ಬಯೋ ವಿರೋಧಿ ಬಣವೆಂದು ಕರೆಯುವ ವಾಡಿಕೆ ಆದಿನಗಳಲ್ಲಿ ಚಾಲ್ತಿಯಲ್ಲಿತ್ತು. (ಲಿನ್ ಬಯೋ ಎಂಬಾತ ಚೀನಾದಲ್ಲಿ ಮಾವೋ ನಂತರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಮ್ಯೂನಿಷ್ಟ್ ನಾಯಕ.) ಬಿಹಾರದಲ್ಲಿ ಅತ್ಯಂತ ಹಿಂದುಳಿದ ಜಾತಿಗಳಾದ ಅಹಿರ್, ಕುರ್ಮಿಸ್ ಮತ್ತು ಕೊಯಿರಿಸ್ ಜಾತಿಯ ಜನರನ್ನ ಜಗದೀಶ್ ಮಾತೊ ಎಂಬ ಶಿಕ್ಷಕ ಸಂಘಟಿಸಿ ಹೋರಾಟಕ್ಕೆ ಚಾಲನೆ ನೀಡಿದ. ಇವನಿಗೆ ರಾಮೇಶ್ವರ್ ಅಹಿರ್ ಎಂಬಾತ ಜೊತೆಯಾಗಿ ನಿಂತ. ಇವರಿಬ್ಬರ ಮುಖ್ಯ ಗುರಿ, ಕೆಳಜಾತಿಯ ಜನರನ್ನು ಇನ್ನಿಲ್ಲದಂತೆ ಶೋಷಿಸುತ್ತಿದ್ದ ಭೂಮಾಲೀಕರುಗಳನ್ನ ನಿರ್ನಾಮ ಮಾಡುವುದೇ ಆಗಿತ್ತು. ದೇಶದ ಪ್ರಮುಖ ನಕ್ಸಲ್ ನಾಯಕರಲ್ಲಾ ಬಂಧಿಗಳಾಗಿ ಜೈಲುಗಳಲ್ಲಿ ಕೊಳೆಯುತ್ತಿರುವಾಗ ಇವರಿಬ್ಬರು ಸಾರಿದ ಸಮರ ಬಿಹಾರ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರವನ್ನೂ ನಡುಗಿಸಿತು. 1971 ರಿಂದ 77 ರ ಅವಧಿಯಲ್ಲಿ ಇವರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ 90 ಮಂದಿ ಭೂಮಾಲೀಕರು ನಿರ್ಧಯವಾಗಿ ಕೊಲ್ಲಲ್ಪಟ್ಟರು. ಕೊನೆಗೆ ಬಿಹಾರ ಪೊಲೀಸರು ‘ಆಪರೇಷನ್ ಥಂಡರ್’ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಜಗದೀಶ್ ಮಾತೊ, ಮತ್ತು ರಾಮೇಶ್ವರ್ ಅಹಿರ್ ಇಬ್ಬರನ್ನು ಎನ್‌ಕೌಂಟರ್ ಮೂಲಕ ಹತ್ಯೆ ಮಾಡುವುದರೊಂದಿಗೆ ನಕ್ಸಲ್ ಹೋರಾಟವನ್ನು ಸದೆಬಡಿದರು.

ಈ ನಡುವೆ ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲೂ ಸಹ ಚಾರು ಸಿದ್ಧಾಂತವನ್ನು ವಿರೋಧಿಸಿ ಹೊರಬಂದಿದ್ದ ನಕ್ಸಲರ ಬಣವೊಂದು ನಾಗಿರೆಡ್ಡಿಯ ನೇತೃತ್ವದಲ್ಲಿ ಸಂಘಟಿತವಾಯಿತು. ಇದೇ ರೀತಿ ಮತ್ತೇ ಬಿಹಾರದಲ್ಲಿ ಸತ್ಯನಾರಾಯಣಸಿಂಗ್ ನೇತೃತ್ವದಲ್ಲಿ ನಕ್ಸಲ್ ಬಣವೊಂದು ತಲೆಎತ್ತಿತು. ನಕ್ಸಲ್ ಚಳವಳಿಯಲ್ಲಿ ಚಾರು ಮುಜುಂದಾರ್ ಉಗ್ರವಾದದ ಹೋರಾಟವನ್ನು ಅಳಿಸಿ ಹಾಕಿ, ಸಮಾಜದ ಎಲ್ಲಾ ವರ್ಗದ ಜನತೆಯ ವಿಶ್ವಾಸಗಳಿಸಿಕೊಂಡು ಹೋರಾಟವನ್ನು ಮುನ್ನೆಡಸಬೇಕೆಂಬುದು, ಸತ್ಯನಾರಾಯಣಸಿಂಗ್‌ನ ಆಶಯವಾಗಿತ್ತು. ಈ ಕಾರಣಕ್ಕಾಗಿ ಅವನು ಮೊದಲು ಸರ್ಕಾರಿ ಕಚೇರಿಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದ. 1975ರ ಆ ದಿನಗಳಲ್ಲಿ ನಕ್ಸಲ್ ಹೋರಾಟವನ್ನು ಪ್ರಜಾಪ್ರಭುತ್ವದ ಹಾದಿಯಲ್ಲಿ ಹೋರಾಟದ ಮೂಲಕ ಕೊಂಡೊಯ್ಯಬೇಕೆಂಬುದು ಅವನ ಕನಸಾಗಿತ್ತು. ಸಾಧ್ಯವಾದರೆ, ಮಾವೋವಾದಿ ಕಮ್ಯೂನಿಷ್ಟ್ ಪಕ್ಷ ಚುನಾವಣೆಗೆ ನಿಂತು, ದಲಿತರು ಮತ್ತು ಬಡವರ ಶೋಷಣೆಯ ವಿರುದ್ಧ ಜನಪ್ರತಿನಿಧಿಗಳ ಸಭೆಯಲ್ಲಿ ಹೋರಾಡಬೇಕೆಂದು ಸತ್ಯನಾರಾಯಣ ಸಿಂಗ್ ಕರೆಯಿತ್ತ. ಈತನ ಹಲವಾರು ವಿಚಾರಗಳಿಗೆ ನಾಯಕರು ವಿಶೇಷವಾಗಿ ಕನುಸನ್ಯಾಲ್, ಅಶೀಮ್ ಚಟರ್ಜಿ, ನಾಗಭೂಷಣ್ ಪಟ್ನಾಯಕ್ ಮುಂತಾದವರು ಜೈಲಿನಿಂದಲೇ ತಮ್ಮ ವಿರೋಧ ವ್ಯಕ್ತಪಡಿಸಿದರು.

1975 ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ ಹಿನ್ನೆಲೆಯಲ್ಲಿ, ಭಾರತದ ಎಲ್ಲಾ ರಾಜ್ಯಗಳಲ್ಲಿ ತಲೆ ಎತ್ತಿರುವ ನಕ್ಸಲ್ ಸಂಘಟನೆಗಳ ಮೇಲೆ ನಿಷೇಧ ಹೇರಲಾಯಿತು. ಇದರಿಂದಾಗಿ ಹೊರಗೆ ಉಳಿದಿದ್ದ ಇನ್ನಿತರೆ 650 ಮಂದಿ ನಾಯಕರೂ ಸಹ ಜೈಲು ಸೇರಬೇಕಾಯಿತು. ಯಾವುದೇ ಹಿಂಸೆಯ ಘಟನೆಯಲ್ಲಿ ಪಾಲ್ಗೊಳ್ಳದ ಸತ್ಯನಾರಾಯಣ ಸಿಂಗ್ ಬಿಹಾರ ರಾಜ್ಯದಲ್ಲಿ ಭೂಗತನಾಗುವುದರ ಮೂಲಕ ಬಂಧನದಿಂದ ತಪ್ಪಿಕೊಂಡ.

1977 ರಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪತನಗೊಂಡು, ಕೇಂದ್ರದಲ್ಲಿ ಜನತಾಪಕ್ಷ ಅಧಿಕಾರದ ಗದ್ದುಗೆ ಹಿಡಿಯಿತು. ಮುರಾರ್ಜಿ ದೇಸಾಯಿ ಪ್ರಧಾನಿಯಾಗಿ, ಚರಣ್ ಸಿಂಗ್ ಗೃಹ ಮಂತ್ರಿಯಾಗಿ ಆಯ್ಕೆಯಾದರು. ಗೃಹ ಮಂತ್ರಿ ಚರಣ್‌ಸಿಂಗ್‌ರವರನ್ನು ಭೇಟಿಯಾದ ಸತ್ಯನಾರಾಯಣಸಿಂಗ್, ಜನತಾ ಪಕ್ಷಕ್ಕೆ ಮಾವೋವಾದಿಗಳ ಕಮ್ಯೂನಿಷ್ಟ ಪಕ್ಷದ ಬೆಂಬಲವಿದೆ ಎಂದು ತಿಳಿಸಿ, ಯಾವ ಕಾರಣಕ್ಕೂ ದೇಶದ ಆಂತರೀಕ ಭದ್ರತೆಗೆ ಧಕ್ಕೆಯುಂಟುಮಾಡುವುದಿಲ್ಲ ಎಂದು ಭರವಸೆ ನೀಡಿದ; ಅಲ್ಲದೆ ಮಿಸಾ ಅಡಿ ಬಂಧನದಲ್ಲಿರುವ ನಕ್ಸಲ್ ನಾಯಕರನ್ನು ಬಿಡುಗಡೆಗೊಳಿಸಲು ಮನವಿ ಮಾಡಿದ.

ಲೋಕಸಭೆಯ ಸದಸ್ಯ ಹಾಗೂ ಆಲ್ ಇಂಡಿಯ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟಿಸ್ ಅಂಡ್ ಡೆಮಾಕ್ರಟಿಕ್ ರೈಟ್ಸ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಕೃಷ್ಣಕಾಂತ್ ಇವರ ದೆಹಲಿ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತ್ಯನಾರಾಯಣ ಸಿಂಗ್, ಹಿಂಸೆ ನಮ್ಮ ಗುರಿಯಲ್ಲ. ಪ್ರಜಾಪ್ರಭುತ್ವದ ಅಹಿಂಸಾತ್ಮಕ ಹೋರಾಟಕ್ಕೆ ನಕ್ಸಲಿಯರ ಬೆಂಬಲವಿದೆ ಎಂದು ಘೋಷಿಸಿದ. ಆದರೆ, ಜೈಲು ಸೇರಿದ್ದ ಬಹುತೇಕ ನಾಯಕರು, ಸರ್ಕಾರದ ಜೊತೆಗಿನ ಮಾತುಕತೆಗೆ ನಮ್ಮ ಸಹ ಮತವಿಲ್ಲ ಎಂದು ಜಂಟಿಹೇಳಿಕೆ ನೀಡಿದರು. ಈ ಹೇಳಿಕೆಗೆ ಕನುಸನ್ಯಾಲ್, ಜಂಗಲ್ ಸಂತಾಲ್, ಅಶೀಮ್ ಚಟರ್ಜಿ ಹಾಗೂ ಸುರೇನ್ ಬೋಸ್ ಮುಂತಾದವರು ಸಹಿ ಹಾಕಿದ್ದರು.

ಅಂತಿಮವಾಗಿ 1977ರ ಮೇ 3 ರಂದು ಪ್ರಧಾನಿ ಮುರಾರ್ಜಿ ದೇಸಾಯಿ ನಕ್ಸಲ್ ನಾಯಕರ ವಿರುದ್ಧ ಇರುವ ಮೊಕದ್ದಮೆಗಳನ್ನು ಹಿಂಪಡೆದು, ಎಲ್ಲರನ್ನು ಬಿಡುಗಡೆ ಮಾಡಬೇಕೆಂದು ಆದೇಶ ಹೊರಡಿಸಿದರು. ಈ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಹುದ್ದೆ ಏರಿದ್ದ ಜ್ಯೋತಿಬಸು ತಮ್ಮ ರಾಜ್ಯದಲ್ಲಿ ಬಂಧಿತರಾಗಿದ್ದ ನಕ್ಸಲ್ ನಾಯಕರು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದಲ್ಲದೆ, ನೆರೆಯ ಆಂಧ್ರ ಮತ್ತು ಬಿಹಾರ, ಒರಿಸ್ಸಾದಲ್ಲಿ ಬಂಧನದಲ್ಲಿದ್ದವರನ್ನು ಬಿಡುಗಡೆಗೊಳಿಸುವಲ್ಲಿ ಸಫಲರಾದರು.

1977ರ ಅಂತ್ಯದ ವೇಳೆಗೆ ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಬಿಹಾರ ರಾಜ್ಯಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಸತ್ಯನಾರಾಯಣ ಸಿಂಗ್ ಬಣದ ಐವರು ಅಭ್ಯರ್ಥಿಗಳು (ಪ.ಬಂಗಾಳದಲ್ಲಿ ಮೂವರು, ಬಿಹಾರ ಮತ್ತು ಪಂಜಾಬ್‌ನಲ್ಲಿ ತಲಾ ಒಬ್ಬರು) ಚುನಾವಣೆಗೆ ಸ್ಪರ್ಧಿಸಿದರು. ಆದರೆ, ಅಂತಿಮವಾಗಿ, ಪಶ್ಚಿಮ ಬಂಗಾಳದ ಗೋಪಿಬಲ್ಲಬಪುರ ಕ್ಷೇತ್ರದಿಂದ ನಕ್ಸಲ್ ನಾಯಕ ಸಂತೋಷ್ ರಾಣಾ ಇವನ ಪತ್ನಿ ನಾಗರೀಕ ಹಕ್ಕುಗಳ ಹೋರಾಟಗಾರ್ತಿ, ಜಯಶ್ರೀ ರಾಣಾ ಗೆಲ್ಲುವಲ್ಲಿ ಯಶಸ್ವಿಯಾದಳು.

ಹೀಗೆ ಚಾರು ಮುಜುಂದಾರನ ನಿಧನದ ನಂತರ ಹಲವು ಬಣಗಳಾಗಿ ಸಿಡಿದುಹೋದ ನಕ್ಸಲ್ ಹೋರಾಟ, 1971 ರಿಂದ 1980ರ ವರೆಗೆ ನಿರಂತರ ಒಂಬತ್ತು ವರ್ಷಗಳ ಕಾಲ ನಾಯಕರ ತಾತ್ವಿಕ ಸಿದ್ಧಾಂತ ಮತ್ತು ಆಚರಣೆಗೆ ತರಬೇಕಾದ ಪ್ರಯೋಗಗಳ ಕುರಿತ ಭಿನ್ನಾಭಿಪ್ರಾಯದಿಂದ ತನ್ನ ಶಕ್ತಿ ಮತ್ತು ಸಾಮಥ್ಯವನ್ನು ಕುಂದಿಸಿಕೊಂಡಿತು. ಆದರೆ,  1980ರ ದಶಕದಲ್ಲಿ ಮತ್ತೇ ಫಿನಿಕ್ಸ್ ಹಕ್ಕಿಯಂತೆ ಪ್ರಜಾಸಮರ (ಪೀಪಲ್ಸ್ ವಾರ್ ಗ್ರೂಪ್) ಹೆಸರಿನಲ್ಲಿ ತಲೆ ಎತ್ತಿ ನಿಂತಿತು. ಇದನ್ನು ನಕ್ಸಲ್ ಇತಿಹಾಸದಲ್ಲಿ ಎರಡನೇ ಹಂತದ ಹೋರಾಟ ಎಂದು ಗುರುತಿಸಲಾಗುತ್ತಿದೆ. ಇದರ ಪ್ರಮುಖ ನಾಯಕರು, ಕೊಂಡಪಲ್ಲಿ ಸೀತಾರಾಮಯ್ಯ, ಸತ್ಯಮೂರ್ತಿ, ಕಿಶನ್ ಜಿ, ರಾಜೇಂದ್ರಕುಮಾರ್ ಭಾಸ್ಕರ್, ಸಾಕೇತ್ ರಾಜನ್, ಸುನೀತ್ ಕುಮಾರ್ ಘೋಸ್ ಮುಂತಾದವರು.

 (ಮೊದಲ ಹಂತದ ಅಂತಿಮ ಅಧ್ಯಾಯ)


ಕೊನೆಯ ಮಾತು- ಪ್ರಿಯ ಓದುಗ ಮಿತ್ರರೇ, ಇಲ್ಲಿಗೆ ನಕ್ಸಲ್ ಇತಿಹಾಸದ ಮೊದಲ ಹಂತದ  ಹನ್ನೆರೆಡು ಅಧ್ಯಾಯಗಳ ಜೊತೆ ನನ್ನ ಕಥನವನ್ನು ಮುಗಿಸುತ್ತಿದ್ದೇನೆ. ಎರಡು ಮತ್ತು ಮೂರನೇ ಹಂತದ ನಕ್ಸಲ್ ಇತಿಹಾಸವನ್ನು ನೀವು ನವಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ನನ್ನ ಕೃತಿಯಲ್ಲಿ ಓದಬಹುದು. ಮತ್ತೇ ಒಂದಿಷ್ಟು ಅಧ್ಯಯನಕ್ಕಾಗಿ  ಜುಲೈ ಮೊದಲವಾರ ಮಹಾರಾಷ್ಟ್ರ, ಛತ್ತೀಸ್‌ಘಡ್ ಮತ್ತು ಮಧ್ಯಪ್ರಧೇಶ ರಾಜ್ಯಗಳ ನಡುವೆ ಇರುವ ದಂಡಕಾರಣ್ಯ (ಗಡ್ ಚಿರೋಲಿ, ದಂತೆವಾಡ, ರಾಯ್‌ಪುರ್, ಗೊಂಡಿಯ, ಬಾಳ್‌ಘಾಟ್) ಪ್ರದೇಶಕ್ಕೆ ತೆರಳುತ್ತಿದ್ದೇನೆ. ಜೊತೆಗೆ ಭಾರತದ ನಕ್ಸಲ್ ಪೀಡಿತ ಪ್ರದೇಶಗಳ ಕುರಿತಂತೆ ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನಗಳನ್ನು ಒಳಗೊಂಡ 60ಕ್ಕೂ ಹೆಚ್ಚು ಪ್ರಬಂಧಗಳು “ಲಂಡನ್ ಸ್ಕೂಲ್ ಆಪ್ ಎಕನಾಮಿಕ್ಸ್” ಸಂಸ್ಥೆಯಿಂದ ಪ್ರಕಟವಾಗಿವೆ. ಅಲ್ಲದೇ ಇಂಗ್ಲೇಂಡಿನ ಕೇಂಬ್ರಿಡ್ಜ್ ವಿ.ವಿ. ಯ ಸಮಾಜ ಶಾಸ್ತ್ರಜ್ಞರು ಅಧ್ಯಯನ ಮಾಡಿರುವ ಪೂರ್ವ ಭಾರತದ ಬುಡಕಟ್ಟು ಜನಾಂಗಗಳ ಸ್ಥಿತಿ ಗತಿಯ ಬಗ್ಗೆ ಮಾಡಿರುವ ಅಧ್ಯಯನ ಕೂಡ ಪ್ರಕಟವಾಗಿದೆ. ಸದ್ಯಕ್ಕೆ ಕಥನಕ್ಕೆ ವಿರಾಮ ಹೇಳಿ ಅಧ್ಯಯನದ ಈ ಕೃತಿಗಳನ್ನು ಅವಲೋಕಿಸುತ್ತಿದ್ದೇನೆ.

ನಮಸ್ಕಾರ.
ಡಾ.ಎನ್. ಜಗದೀಶ್ ಕೊಪ್ಪ