Daily Archives: June 22, 2012

ತೈಲ ಬೆಲೆ ಏರಿಕೆ : ಅರ್ಥ ಮಾಡಿಕೊಳ್ಳುವುದು ಹೇಗೆ?

– ಪ್ರಕಾಶ್ ಕೆ

ಮನುಷ್ಯನಿಗೆ ಅಗತ್ಯವಾದ ವಸ್ತುಗಳ ಬೆಲೆಗಳು ಒಂದೇ ಸಮನೆ ಏರುತ್ತಿದೆ. ಜೊತೆಗೆ ಪೆಟ್ರೋಲ್, ಡೀಸೆಲ್, ಅಡಿಗೆ ಅನಿಲ, ಸೀಮೆಎಣ್ಣೆ ಬೆಲೆಗಳು ಪದೇ ಪದೇ ಏರಿಕೆಯಾಗುತ್ತಿದೆ. ಸಾಮಾನ್ಯ ಜನ ಇದರಿಂದ ತತ್ತರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಇಂತಹ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಮತ್ತಷ್ಟು ಹೆಚ್ಚಿಸಬೇಕೆಂಬ ಮಾತುಗಳೂ ಬರುತ್ತಿವೆ. ರಾಜ್ಯ ಸರ್ಕಾರಗಳು ಇದರ ಲಾಭ ಮಾಡಿಕೊಳ್ಳುತ್ತಿವೆ. ಬೆಲೆ ಏರಿಕೆಯನ್ನು ಒಪ್ಪಿಕೊಂಡು ಅನುಭವಿಸಬೇಕಾ? ಅಥವಾ ಇದರ ಹಿಂದಿರುವ ಮೋಸದ ಜಾಲವನ್ನು ಬಯಲುಮಾಡಿ ವಿರೋಧಿಸಬೇಕಾ? ಈ ಹಿನ್ನೆಲೆಯಲ್ಲಿ ಕೆಲವು ವಿಚಾರಗಳನ್ನು ಗಮನಿಸಬೇಕು.

ಕಚ್ಛಾ ತೈಲದ ಬೆಲೆಯೆಷ್ಟು?

ಭಾರತ ತನಗೆ ಬೇಕಾದ ಒಟ್ಟು ಕಚ್ಛಾ ತೈಲದ ಪ್ರಮಾಣದಲ್ಲಿ ಸುಮಾರು ಶೇ.70 ರಷ್ಟು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರ ಈಗಿನ ಅಂತರರಾಷ್ಟ್ರೀಯ ಬೆಲೆಗಳು ಬ್ಯಾರೆಲ್‌ಗೆ 83 ಡಾಲರ್‌ಗಳು ಎಂದುಕೊಳ್ಳಿ. ಉಳಿದ ಸುಮಾರು ಶೇ.30 ರಷ್ಟು ಕಚ್ಛಾ ತೈಲವನ್ನು ದೇಶದ ಒಳಗೇ ಸರ್ಕಾರಿ ಸ್ವಾಮ್ಯದ ONGC ಮತ್ತು OIL ಕಂಪನಿಗಳು ಇದರ ಅರ್ಧದಷ್ಟು ಕಡಿಮೆ ವೆಚ್ಚದಲ್ಲಿ ಉತ್ಪಾದಿಸುತ್ತವೆ. ಆದರೂ ಇದನ್ನು ಅಂತರರಾಷ್ಟ್ರೀಯ ಬೆಲೆಗಳಿಗೆ ಸಮನಾಗಿ (International Price Parity) ಪರಿಗಣಿಸುವ ಪದ್ಧತಿ ಜಾರಿಗೊಳಿಸಲಾಗಿದೆ. ಲೆಕ್ಕದ ಸಲುವಾಗಿ ನಾವೂ ಹಾಗೇ ಪರಿಗಣಿಸೋಣ. ಒಂದು ಬ್ಯಾರೆಲ್ ಎಂದರೆ 158.98 ಲೀಟರ್‌ಗಳು. ಈ ಪ್ರಕಾರ ಒಂದು ಲೀಟರ್ ಕಚ್ಛಾ ತೈಲಕ್ಕೆ 29 ರೂ.ಗಳಾಗುತ್ತವೆ.

ಇನ್ನು ಮುಖ್ಯವಾಗಿ ವೆಚ್ಚ ಎಂದು ಬರುವುದು ಹಡಗು ಸಾಗಣೆ, ವಿಮೆ, ಸಂಸ್ಕರಣೆ ಹಾಗೂ ಒಳ ಸಾಗಾಣಿಕೆ ಮಾಡಲು ಆಗುವ ವೆಚ್ಚ. ಒಂದು ಅಂದಾಜಿನ ಪ್ರಕಾರ ಒಂದು ಲೀಟರ್ ಸಿದ್ಧಗೊಂಡ ಪೆಟ್ರೋಲಿಯಂ ಉತ್ಪನ್ನದಲ್ಲಿ ಶೇ. 90 ರಷ್ಟು ಕಚ್ಛಾ ತೈಲದ ಬೆಲೆಯಿರುತ್ತದೆ. ಅಂದರೆ ಉಳಿದ ಶೇ. 1ರ ರಷ್ಟು ಮಾತ್ರವೇ ಉಳಿದ ವೆಚ್ಚವಾಗುತ್ತದೆ. ಅಂದರೆ ಒಂದು ಲೀ. ಕಚ್ಛಾ ತೈಲದ ಬೆಲೆಗೆ ಇತರೆ ವೆಚ್ಚ 3 ರೂಗಳನ್ನು ಸೇರಿಸಿದರೆ 1 ಲೀ. ಪೆಟ್ರೋಲ್ ಸುಮಾರು 33 ರೂಗಳಾಗುತ್ತದೆ. ಈ ರೀತಿ ಅಂತರರಾಷ್ಟ್ರೀಯ ಬೆಲೆಗಳ ಏರುಪೇರಿನ ಆಧಾರದಲ್ಲಿ ಲೆಕ್ಕ ಮಾಡಬಹುದು. ಹಾಗಾದರೆ ನಾವು ಪ್ರತಿ ಲೀ. ಪೆಟ್ರೋಲ್‌ಗೆ 79 ರೂಗಳನ್ನು ಪಾವತಿಸುವುದು ಏಕೆ?  ಕೇಂದ್ರ-ರಾಜ್ಯ ಸರ್ಕಾರಗಳು ವಿಧಿಸುವ ದುಬಾರಿ ತೆರಿಗೆಗಳ ಕಾರಣದಿಂದ. ಜಗತ್ತಿನಲ್ಲಿಯೇ ಅತಿ ಹೆಚ್ಚು ತೈಲ ತೆರಿಗೆಗಳನ್ನು ಭಾರತದಲ್ಲಿ ವಿಧಿಸಲಾಗಿದೆ.

‘ನಷ್ಟ’ವೆಂಬ ಸುಳ್ಳುಗಳು

ತೆರಿಗೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದರೂ ತೈಲ ಕಂಪನಿಗಳಿಗೆ ನಷ್ಟವಾಗುತ್ತಿದೆ, ಸಬ್ಸಿಡಿಯ ಮೊತ್ತ ಏರುತ್ತಿದೆ, ಸರ್ಕಾರ ದಿವಾಳಿಯಾಗುತ್ತದೆ ಎಂದೆಲ್ಲಾ ವಾದಿಸುವುದು ಏಕೆ? ತೈಲ ಕಂಪನಿಗಳು ನಿಜವಾಗಿ ನಷ್ಟ ಅನುಭವಿಸುತ್ತಿವೆಯೇ? ಇಂಡಿಯನ್ ಆಯಿಲ್ ಕಾರ್ಪೋರೇಷನ್ (IOC) ನಮ್ಮ ದೇಶದ ಅತಿದೊಡ್ಡ ತೈಲ ಮಾರಾಟ ಕಂಪನಿಯಾಗಿದೆ. ಇದು ಸತತವಾಗಿ ಲಾಭಗಳಿಸುವ ಕಂಪನಿಯಾಗಿದೆ. ಅದೇ ರೀತಿ ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಮತ್ತು ಭಾರತ್ ಪೆಟ್ರೋಲಿಯಂ (BPCL) ಕಂಪನಿಗಳೂ ಕೂಡಾ ಸತತವಾಗಿ ಲಾಭ ಮಾಡುತ್ತಿರುವ ಕಂಪನಿಗಳಾಗಿವೆ. IOC 2009-2010ರಲ್ಲಿ ರೂ.10,998.68 ಕೋಟಿ ಹಾಗೂ 2010-2011ರಲ್ಲಿ ರೂ.8085.62 ಕೋಟಿ ನಿವ್ವಳ ಲಾಭಗಳಿಸಿದೆ. HPCL- 2009-10ರಲ್ಲಿ ರೂ.1476.48 ಕೋಟಿ ಹಾಗೂ 2010-2011 ರಲ್ಲಿ ರೂ.1702.04 ಕೋಟಿ ನಿವ್ವಳ ಲಾಭಗಳಿಸಿದೆ. BPCL- 2009-2010ರಲ್ಲಿ ರೂ.1719.98 ಕೋಟಿ ಹಾಗೂ 2010-2011ರಲ್ಲಿ ರೂ.1742.06 ಕೋಟಿ ನಿವ್ವಳ ಲಾಭಗಳಿಸಿದೆ. ಈ ಮೂರು ಕಂಪನಿಗಳು ಎಲ್ಲ ರೀತಿಯ ತೆರಿಗೆ, ಡಿವಿಡೆಂಡ್, ಇತ್ಯಾದಿಗಳನ್ನೆಲ್ಲಾ ಪಾವತಿಸಿದ ಮೇಲೆ ಗಳಿಸಿರುವ ಲಾಭದ ಪ್ರಮಾಣವಿದು. ಹೀಗಿದ್ದರೂ ಕಂಪನಿಗಳು ನಷ್ಟದಲ್ಲಿವೆ ಇನ್ನೇನು ಮುಳುಗಿ ಹೋಗುತ್ತವೆ ಎಂಬ ಆತಂಕವನ್ನು ಸೃಷ್ಟಿಸುತ್ತಿರುವುದು ಜನರನ್ನು ದಾರಿ ತಪ್ಪಿಸಲು.

Under Recovery ಎಂಬ ಕಲ್ಪಿತ ನಷ್ಟ

ಸರ್ಕಾರ ನಷ್ಟ ಎಂಬುದನ್ನು Under Recovery ಎನ್ನುತ್ತಿದೆ. ಇದರಿಂದ ತೈಲ ಮಾರ್ಕೆಟಿಂಗ್ ಕಂಪನಿಗಳಿಗೆ (OMCs – IOC, HP, BP) ಈಗಿನ ಬೆಲೆ ಏರಿಕೆ ನಂತರವೂ 1 ಲಕ್ಷ ಕೋಟಿ ರೂ.ಗಳಷ್ಟು ’ಕಳೆದು ಹೋಗುತ್ತಿದೆ’ಯಂತೆ. ಜಾಗತೀಕರಣದ ಲೂಟಿಕೋರರು ಕಂಡುಹಿಡಿದಿರುವ ಹೊಸ ಪದಗುಚ್ಚಗಳು ಜನರಿಗೆ ಅರ್ಥವಾಗುವುದೇ ಕಷ್ಟ. ಇದು ಬಂಡವಾಳಿಗರ ಭಾಷೆ. “Under Recoveries” ಎಂಬುದು “ನಷ್ಟ”ವಲ್ಲ. ಭಾರತದ ಪ್ರಮುಖ OMCಗಳ ಬ್ಯಾಲೆನ್ಸ್ ಷೀಟ್‌ಗಳಲ್ಲಿ ಎಲ್ಲಿಯೂ ಕೂಡಾ Under Recovery ಎಂಬ ಶಬ್ದವೇ ಇಲ್ಲ. ಈಗಾಗಲೇ ಹೇಳಿದೆ ಹಾಗೆ ನಮ್ಮ ದೇಶ ಕಚ್ಚಾ ತೈಲವನ್ನು ಅಮದು ಮಾಡಿಕೊಂಡು ಡೀಸೆಲ್, ಪೆಟ್ರೋಲ್‌ನಂತಹ ಪೆಟ್ರೋಲಿಯಂ ಉತ್ಪನ್ನಗಳನ್ನು ದೇಶೀಯವಾಗಿ ಉತ್ಪಾದಿಸುತ್ತದೆ. ಆದರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆಂದು ಕಲ್ಪಿಸಿಕೊಂಡು, ಜಾಗತೀಕವಾಗಿ ಅದಕ್ಕೇನು ಬೆಲೆಯಿದೆಯೋ ಅದೇ ಬೆಲೆಯನ್ನು ದೇಶದೊಳಗೆ ನಿಗದಿಪಡಿಸಬೇಕೆನ್ನುವ ವಿಚಿತ್ರವಾದ ವಾದದಿಂದ ಬಂದಿರುವುದೇ ಈ Under Recoveries. ಉದಾಹರಣೆಗೆ:- ಇಂಗ್ಲೆಂಡ್‌ನಲ್ಲಿ ಒಂದು ಲೀ. ಪೆಟ್ರೋಲ್‌ಗೆ ಸುಮಾರು 120 ರೂ.ಗಳಾಗುತ್ತದೆ ಎಂದುಕೊಳ್ಳೋಣ. ಭಾರತದ ಕಂಪನಿಯೊಂದು ಇಂಗ್ಲೆಂಡ್‌ನಿಂದ ಕಚ್ಛಾ ತೈಲವನ್ನು ಆಮದು ಮಾಡಿಕೊಂಡು ಪೆಟ್ರೋಲ್ ತಯಾರಿಸುತ್ತದೆ ಎಂದುಕೊಳ್ಳಿ. ಇಲ್ಲಿ ಒಂದು ಲೀ. ಪೆಟ್ರೋಲ್‌ಗೆ 33 ರೂ. ಆಗಬಹುದು. ಅಂತರರಾಷ್ಟ್ರೀಯ ಬೆಲೆ (IPP) 120 ರೂಪಾಯಿ ಇದೆಯಾದ್ದರಿಂದ ಇಲ್ಲಿನ ಗ್ರಾಹಕರೂ ಕೂಡಾ ಅದೇ ಬೆಲೆಯನ್ನು ನೀಡಬೇಕೆಂದು, ಅಷ್ಟು ಕೊಡದಿದ್ದರೆ 87 ರೂ.ಗಳ Under Recoveryಯನ್ನು ಕಂಪನಿ ಅನುಭವಿಸುತ್ತದೆ ಎಂದು ಹೇಳಬಹುದು. ಅಂದರೆ ಇಲ್ಲಿನ ಬೆಲೆಯನ್ನು ನಿಗದಿಪಡಿಸಲು ದೇಶೀಯ ಉತ್ಪಾದನಾ ವೆಚ್ಚದ ಬದಲಿಗೆ ಇಂಗ್ಲೆಂಡಿನ ಉತ್ಪಾದನಾ ವೆಚ್ಛವನ್ನು ಆಧಾರವಾಗಿಟ್ಟುಕೊಳ್ಳಬೇಕೆಂಬುದು ಈ ವಾದ. ಇದನ್ನು ಸುಲಿಗೆಕೋರರ ಭಾಷೆ ಎನ್ನದೆ ಬೇರೇನೇಳಲು ಸಾಧ್ಯ?

ಒಂದು ಕಡೆ ಜನತೆಯ ತೀವ್ರ ವಿರೋಧವನ್ನು ಕಡೆಗಣಿಸಿ ತೆರಿಗೆಗಳನ್ನು ಕಡಿತಗೊಳಿಸಲು ನಿರಾಕರಿಸುತ್ತಾ, ಮತ್ತೊಂದು ಕಡೆ ಕಲ್ಪಿತ ನಷ್ಟವನ್ನೇ ನಿಜವಾದ ನಷ್ಟವೆಂದು ಬಿಂಬಿಸುತ್ತಾ, ಮತ್ತೆ ಮತ್ತೆ ಬೆಲೆಗಳನ್ನು ಏರಿಸಲು ಸರ್ಕಾರ ಹಾತೊರೆಯುತ್ತಿದೆ. ತೆರಿಗೆ ಕಡಿತಗೊಳಿಸಿದರೆ ಸರ್ಕಾರಕ್ಕೆ ಆದಾಯ ಕಡಿಮೆಯಾಗುತ್ತದೆ ಮತ್ತು ಸಬ್ಸಿಡಿ ಹೊರೆ ಹೆಚ್ಚಾಗುತ್ತದೆ ಎಂದು ಸರ್ಕಾರ ವಾದಿಸುತ್ತಿದೆ. ಆದರೆ ವಾಸ್ತವವೇನು? ಒಂದು ಉದಾಹರಣೆಯನ್ನೇ ಗಮನಿಸಿ :- 6 ತಿಂಗಳ ಹಿಂದೆ ಅಂತರರಾಷ್ಟ್ರೀಯ ಕಚ್ಛಾ ತೈಲ ಒಂದು ಬ್ಯಾರೆಲ್‌ಗೆ 110 ಡಾಲರ್ ಇದೆ ಇತ್ತು. ಎರಡು ವರ್ಷಗಳ ಹಿಂದೆ ಇದು 75 ಡಾಲರ್ ಇತ್ತು. ಆಮದು ಮಾಡುವಾಗ ಭಾರತ ಸರ್ಕಾರ ಶೇ.10 ರಷ್ಟು ಸುಂಕವನ್ನು ವಿಧಿಸಿದೆ ಎಂದುಕೊಳ್ಳೋಣ. ಇದರ ಆಧಾರದಲ್ಲಿ ಒಂದು ಬ್ಯಾರೆಲ್ ಮೇಲೆ ಭಾರತ ಸರ್ಕಾರಕ್ಕೆ 7.5 ಡಾಲರ್ ಆದಾಯ ಬರುತ್ತಿತ್ತು. ಅದೇ ಪ್ರಮಾಣದ ತೆರಿಗೆಯಿಂದ 6 ತಿಂಗಳ ಹಿಂದೆ 11 ಡಾಲರ್ ಆದಾಯ ಬರುತ್ತಿತ್ತು. ಸುಂಕದ ಪ್ರಮಾಣದಲ್ಲಿ ಹೆಚ್ಚಳವಿಲ್ಲದೆಯೇ ಸರ್ಕಾರಕ್ಕೆ 3.5 ಡಾಲರ್ ಹೆಚ್ಚು ಆದಾಯ ಬರುತ್ತಿತ್ತು. ಇಂತಹ ಸಂದರ್ಭದಲ್ಲಿ ಸರ್ಕಾರ ಶೇ.4 ರಷ್ಟು ಸುಂಕ ಇಳಿಸಿದರೂ ಆದಾಯ ಮೊದಲಿನಷ್ಟೇ ಇರುತ್ತದೆ ಅಥವಾ ಸ್ವಲ್ಪ ಹೆಚ್ಚಿಗೆ ಸಿಗುತ್ತಿರುತ್ತದೆ. ಆದ್ದರಿಂದ ಸರ್ಕಾರಕ್ಕೆ ನಷ್ಟವಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂತರರಾಷ್ಟ್ರೀಯ ಬೆಲೆಗಳು ಏರಿದಂತೆಲ್ಲಾ ಸರ್ಕಾರಕ್ಕೆ ಆಮದು ಸುಂಕದಲ್ಲಿ ತಂತಾನೇ ಹೆಚ್ಚುವರಿ ಆದಾಯ ಬರುತ್ತಿರುತ್ತದೆ. ಹೀಗಾಗಿ ಹೆಚ್ಚೆಚ್ಚು ತೆರಿಗೆಗಳನ್ನು ಸರ್ಕಾರ ವಿಧಿಸಿ ಆದಾಯ ಸಂಗ್ರಹ ಮಾಡುತ್ತದೆ ಮತ್ತು ಬೆಲೆ ಏರಿಕೆಗೆ ಇದೇ ಮೂಲ ಕಾರಣವಾಗಿದೆ.

ಅಡಿಗೆ ಅನಿಲ ರಿಲಯನ್ಸ್ ತೆಕ್ಕೆಗೆ

ಅಡುಗೆ ಅನಿಲದ ಬೆಲೆಯನ್ನು 50 ರೂ. ಹೆಚ್ಚಿಸಿದ ನಂತರವೂ ಸರ್ಕಾರಕ್ಕೆ ಪ್ರತಿ ಸಿಲಿಂಡರ್ ಮೇಲೆ ರೂ.353.72 ನಷ್ಟವಾಗುತ್ತಿದೆ ಎನ್ನುತ್ತಿದೆ ಮನಮೋಹನಸಿಂಗ್ ಸರ್ಕಾರ. ಇದನ್ನು ಸಮರ್ಥನೆ ಮಾಡಿಕೊಳ್ಳಲು ಶ್ರೀಲಂಕ, ಬಾಂಗ್ಲಾ ದೇಶ, ಪಾಕಿಸ್ತಾನ, ನೇಪಾಳ ದೇಶಗಳೊಂದಿಗೆ ಹೋಲಿಸಿಕೊಂಡು ಅವರಿಗಿಂತ ನಮ್ಮದು ಕಡಿಮೆ ಬೆಲೆಯ ಗ್ಯಾಸ್ ಎನ್ನಲಾಗುತ್ತಿದೆ. ಮೊದಲನೆಯದಾಗಿ ಹೋಲಿಸುತ್ತಿರುವ ಯಾವ ದೇಶಗಳೂ ಸ್ವತಂತ್ರವಾಗಿ ಅನಿಲವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ನಮ್ಮ ರೀತಿಯಲ್ಲಿ ಹೊಂದಿಲ್ಲದ ದೇಶಗಳು ಮತ್ತು ಅತ್ಯಂತ ಬಡ ದೇಶಗಳು. ಆದರೆ ಅದೇ ದೇಶಗಳಲ್ಲಿ ನಮಗಿಂತ ಕಡಿಮೆ ಬೆಲೆಗೆ ಪೆಟ್ರೋಲ್ ಮತ್ತು ಡೀಸೆಲ್‌‍ನ್ನು ನೀಡಲಾಗುತ್ತಿದೆ ಎಂಬುದನ್ನು ಸರ್ಕಾರ ಮರೆಮಾಚುತ್ತಿದೆ. ಅಡಿಗೆ ಅನಿಲದ ವಿಚಾರಕ್ಕೆ ಬಂದರೆ, ನಿಜ ಸರ್ಕಾರ ಸ್ವಲ್ಪ ಸಬ್ಸಿಡಿ ನೀಡುತ್ತಿದೆ. ಇದರ ನೆಪವೊಡ್ಡಿ ಅನಿಲ ಉತ್ಪಾದನೆಯನ್ನು ರಿಲಯನ್ಸ್ ಕಂಪನಿಗೆ ವರ್ಗಾಯಿಸುವ ಹುನ್ನಾರವನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಸಿಎಜಿ ವರದಿ ಬಹಿರಂಗ ಮಾಡಿರುವ ಪ್ರಾಥಮಿಕ ವರದಿಯ ಪ್ರಕಾರ ಮತ್ತು ಸಿಪಿಐ (ಎಂ) ಪಕ್ಷದ ಸಂಸದರಾದ ಬಸುದೇವ ಆಚಾರ್ಯ ಮತ್ತು ತಪನ್‌ಸೇನ್‌ರವರು 2007 ರಲ್ಲೇ ಹೇಳಿದ ಹಾಗೆ, ಆಂಧ್ರದ ಕೃಷ್ಣ ಗೋದಾವರಿ ಕಣಿವೆಯಲ್ಲಿ (KG Basin) ಡಿ-6 ಬ್ಲಾಕ್‌ನ್ನು ರಿಲಯನ್ಸ್ ಕಂಪನಿಗೆ ನೀಡಿರುವುದರಲ್ಲಿ ಲಕ್ಷಾಂತರ ಕೋಟಿ ಹಣ ದೇಶಕ್ಕೆ ನಷ್ಟವಾಗಲಿದೆ.

ಜನರಿಗಿಲ್ಲ ಸಹಾಯಧನ – ಬಂಡವಾಳಿಗರ ಸ್ವಾಹಾಕ್ಕೆ ಸರ್ಕಾರದ ಹಣ

ದೇಶದ ಜನರಿಗೆ ಕಡಿಮೆ ದರದಲ್ಲಿ ಅಡುಗೆ ಅನಿಲವನ್ನು ಪೊರೈಸಲು ಸಾಧ್ಯವಿರುವುದು ಸರ್ಕಾರಿ ಸ್ವಾಮ್ಯದ ONGC ಕಂಪನಿಪಿನಿಗೆ. 2005-2008ರ ಅವಧಿಯಲ್ಲಿ ಒಂದು ಯೂನಿಟ್ (MBTU= ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ಸ್) ಗ್ಯಾಸ್‌ಗೆ 1.8 ಡಾಲರ್ ನೀಡಿ ONGC ಯಿಂದ ಪಡೆದುಕೊಳ್ಳಲಾಗುತ್ತಿತ್ತು. ಇದರಿಂದ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಗ್ಯಾಸ್ ನೀಡಲು ಸಹಾಯವಾಗುತ್ತಿತ್ತು. ರಿಲಯನ್ಸ್‌ನೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಒಂದು ಯೂನಿಟ್ ಗ್ಯಾಸನ್ನು 4.2 ಡಾಲರ್‌ಗೆ ಕೊಂಡುಕೊಳ್ಳಲಾಗುತ್ತಿದೆ. ಒಂದು ಯೂನಿಟ್ ಗ್ಯಾಸ್ ಮೇಲೆ 2.4 ಡಾಲರ್ ಹೆಚ್ಚು ಹಣವನ್ನು ರಿಲಯನ್ಸ್‌ಗೆ ಕೊಡಲು ಒಪ್ಪಂದ ಮಾಡಿಕೊಂಡಿದ್ದು ಯಾರ ಹಿತಕ್ಕಾಗಿ? ಕಡಿಮೆ ಬೆಲೆಯಲ್ಲಿ ಗ್ಯಾಸ್ ಉತ್ಪಾದಿಸುವ ONGCಯ ಬದಲಿಗೆ ರಿಲಯನ್ಸ್‌ಗೆ ದೇಶದ ಅಮೂಲ್ಯ ಅನಿಲ ಸಂಪತ್ತನ್ನು ಬಿಟ್ಟಿದ್ದೇಕೆ? ಮನಮೋಹನಸಿಂಗ್ ಸರ್ಕಾರ ಇದನ್ನು ಮುಚ್ಚಿಡಲು ಸಾಧ್ಯವಿಲ್ಲ. ರಿಲಯನ್ಸ್‌ನಂತಹ ಖಾಸಗಿ ಕಂಪನಿಗಳ ಜೊತೆ ಸೇರಿ ಲೂಟಿ ಮಾಡಲು ಕಾಂಗ್ರೆಸ್ ಸರ್ಕಾರ ಗ್ಯಾಸ್‌ನ ಉತ್ಪಾದನಾ ಬೆಲೆಯನ್ನು ಕೃತಕವಾಗಿ ಏರಿಸಿದೆ. ಅದರ ಹೊರೆಯನ್ನು ಜನರ ಮೇಲೆ ವರ್ಗಾಯಿಸುತ್ತಿದೆ. ಇದನ್ನೇ ಸಬ್ಸಿಡಿ ಕೊಡುತ್ತಿದ್ದೇವೆಂದು ಹೇಳುತ್ತಿದೆ. ಸಬ್ಸಿಡಿ ನೀಡುತ್ತಿರುವುದು ಸಾಮಾನ್ಯ ಅಡುಗೆ ಅನಿಲದ ಗ್ರಾಹಕರಿಗಲ್ಲ, ಅಂಬಾನಿಯಂತಹ ಬಂಡವಾಳದಾರರಿಗೆ ಎಂಬುದನ್ನು ಗಮನಿಸಬೇಕು.

ಬೆಲೆ ಏರಿಕೆಯ ಧೋರಣೆಗೆ ಪ್ರೇರಣೆ ಯಾವುದು?

ಇಂತಹ ಮೂರ್ಖತನದ ಕೆಲಸವನ್ನು ಮಾಡಲು ಮನಮೋಹನಸಿಂಗ್ ಸರ್ಕಾರ ತುದಿಗಾಲಲ್ಲಿ ನಿಂತಿರುವುದು ಏಕೆ ? ಸಿಪಿಐ (ಎಂ) ಪಕ್ಷ ಪೆಟ್ರೋಲಿಯಂ ವಸ್ತುಗಳ ಬೆಲೆ ಏರಿಕೆ ವಿರುದ್ಧ ಹೊರತಂದ ಕಿರುಹೊತ್ತಿಗೆ “ಸುಳ್ಳುಗಳ ಹಿಂದಿನ ಸತ್ಯ”ದಲ್ಲಿ ಈ ರೀತಿ ವಿವರಿಸಲಾಗಿದೆ; 1976 ರಲ್ಲಿ, ಭಾರತವನ್ನು ಲೂಟಿ ಮಾಡುತ್ತಿದ್ದ ಬರ್ಮಾ ಶೆಲ್, ಕಾಲ್ಟೆಕ್ಸ್, ಎಸ್ಸೊ ಎಂಬ ಬೃಹತ್ ವಿದೇಶೀ ಕಂಪನಿಗಳನ್ನು, ಶ್ರೀಮತಿ ಇಂದಿರಾ ಗಾಂಧಿ ರಾಷ್ಟ್ರೀಕರಣ ಮಾಡಿದರು. ಇದಕ್ಕೂ ಮೊದಲು ಈ ಕಂಪನಿಗಳು ಪೆಟ್ರೋಲಿಯಂ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ದರಗಳನ್ನು ಗ್ರಾಹಕರಿಂದ ವಸೂಲಿ ಮಾಡಿ ಅಪಾರ ಲಾಭಗಳಿಸುತ್ತಿದ್ದವು. ಇದನ್ನು ’ಆಮದು ಸಮಮೌಲ್ಯ ಬೆಲೆ ವ್ಯವಸ್ಥೆ? (Import Price Parity System) ಎನ್ನಲಾಗುತ್ತಿತ್ತು. ಬೃಹತ್ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಉದ್ಯಮಿಗಳ ಕೂಟಗಳ ಸೇರಿ ಜಗತ್ತಿನ ತೈಲ ಮಾರುಕಟ್ಟೆಗಳ ಹಿಡಿತ ಸಾಧಿಸುವುದು ಮತ್ತು ತಮ್ಮ ಲಾಭದ ಹೆಚ್ಚಳಕ್ಕಾಗಿ ದರಗಳಲ್ಲಿ ಕೈಚಳಕ (Manipulate) ಮಾಡುವುದು ಎಲ್ಲರಿಗೂ ತಿಳಿದ ವಿಚಾರ. 1976 ರಲ್ಲಿ ಆಮದು ಸಮಮೌಲ್ಯ ಬೆಲೆ ಪದ್ಧತಿಯನ್ನು ನಿಲ್ಲಿಸಲಾಯಿತು. ಆಗಿನ ಸರ್ಕಾರ “ಆಡಳಿತಾತ್ಮಕ ಬೆಲೆ ನಿಯಂತ್ರಣ” (APM – Administered Price Mechanism) ಪದ್ಧತಿಯನ್ನು ಜಾರಿಗೆ ತಂದಿತು. ಇದನ್ನು ‘ತೈಲ ನಿಧಿ ಖಾತೆ’ (Oil Pool Account) ಎಂದೂ ಸಹ ಕರೆಯಲಾಗಿತ್ತು. ದೇಶೀಯ ಸಂಸ್ಕರಣಾ ಸಾಮರ್ಥ್ಯ ಹೆಚ್ಚಿಸುವುದು ಮತ್ತು ವಿದೇಶೀ ಕಂಪನಿಗಳ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕೊನೆಗೊಳಿಸುವ ಪ್ರಯತ್ನ ಇದಾಗಿತ್ತು. APM ಮೂಲಕ ಕಚ್ಛಾ ತೈಲದ ಬೆಲೆ, ಸಂಸ್ಕರಣಾ ವೆಚ್ಚ, ಸೂಕ್ತವಾದ ಲಾಭ ಎಲ್ಲವನ್ನೂ ಒಳಗೊಂಡು ಉತ್ಪನ್ನಗಳ ಬೆಲೆ ನಿಗದಿಯಾಗುತ್ತಿತ್ತು.

1991 ರಲ್ಲಿ ಮನಮೋಹನಸಿಂಗ್ ನೇತೃತ್ವದಲ್ಲಿ ನವ-ಉದಾರವಾದಿ ನೀತಿಗಳು ಶುರುವಾದ ಮೇಲೆ ವಿದೇಶೀ ಮತ್ತು ಸ್ವದೇಶೀ ಖಾಸಗಿ ಹೂಡಿಕೆದಾರರ ಹೆಚ್ಚಳವಾಯ್ತು. APM ವ್ಯವಸ್ಥೆಯನ್ನು ಕಿತ್ತುಹಾಕಿ 1976ಕ್ಕೂ ಹಿಂದೆ ಇದ್ದ ರೀತಿಯಲ್ಲೇ ಲೂಟಿ ಹೊಡೆಯಲು ಸರ್ಕಾರದ ಮೇಲೆ ವಿಪರೀತ ಒತ್ತಡ ಹಾಕಿದರು. 2002 ರಲ್ಲಿ ಬಿಜೆಪಿಯ ವಾಜಪೇಯಿ ಸರ್ಕಾರ APM ಅಥವಾ ತೈಲ ನಿಧಿ ಖಾತೆಯನ್ನು ಕಳಚಿ ಹಾಕಿತು. ಮತ್ತೆ ವಾಪಸ್ ಆಮದು ಸಮಮೌಲ್ಯ ಬೆಲೆ ಪದ್ಧತಿಗೆ ಬರಲಾಯ್ತು.

2002ರ ನಂತರ ರಿಲಯನ್ಸ್ ಮತ್ತು ಎಸ್ಸಾರ್‌ನಂತಹ ಖಾಸಗಿ ಕಂಪನಿಗಳು ಮತ್ತಷ್ಟು ನಿಯಂತ್ರಣ ಕಳಚಬೇಕೆಂದು ಬಯಸಿದವು. ಬಿಜೆಪಿ ಸರ್ಕಾರದ ಪ್ರಯತ್ನಗಳು ಅವರಿಗೆ ಸಾಕೆನಿಸಲಿಲ್ಲ. ಕಿರಿಟ್ ಪಾರಿಖ್ ಸಮಿತಿಯನ್ನು ಖಾಸಗಿಯವರ ಈ ಬೇಡಿಕೆಗಳನ್ನು ಪರಿಹರಿಸುವ ಉದ್ದೇಶದಿಂದಲೇ ನೇಮಿಸಲಾಯಿತು. ಈ ಸಮಿತಿಯು ಪೆಟ್ರೋಲಿಯಂ ವಸ್ತುಗಳನ್ನು ಸಂಪೂರ್ಣವಾಗಿ ಸರ್ಕಾರ ನಿಯಂತ್ರಣದಿಂದ ಕಳಚಿ ಹಾಕಬೇಕೆಂದು ವರದಿ ನೀಡಿತು. ಪ್ರಸಕ್ತ ಮನಮೋಹನಸಿಂಗ್ ಕಾಂಗ್ರೆಸ್ ಸರ್ಕಾರ ಈ ವರದಿಯ ಶಿಫಾರಸ್ಸುಗಳನ್ನು ಒಪ್ಪಿಕೊಂಡು, ಮೊದಲಿಗೆ ಪೆಟ್ರೋಲ್‌ಅನ್ನು ನಿಯಂತ್ರಣ ಮುಕ್ತಗೊಳಿಸಿ ಅದೇ ದಾರಿಯ ಮೂಲಕ ಆಮದು ಸಮಮೌಲ್ಯ ಬೆಲೆ ಪದ್ಧತಿಯನ್ನು (IPP) ಪುನರ್ಜಾರಿಗೊಳಿಸಿದೆ. ಹೀಗಾಗಿ ಭಾರತದ ಜನರನ್ನು ಖಾಸಗಿ ಕಂಪನಿಗಳ ನೇತೃತ್ವದ ಮಾರುಕಟ್ಟೆ ಹಿಡಿತಕ್ಕೆ ಒಪ್ಪಿಸಲಾಗಿದೆ.

ಖಾಸಗಿಯವರ ಸೂಪರ್ ಲಾಭವನ್ನು ಖಾತ್ರಿಗೊಳಿಸುವ ಸಲುವಾಗಿ ನಿಯಂತ್ರಣ ಮುಕ್ತ ಮಾಡಿರುವ ಕಾರಣದಿಂದಾಗಿಯೇ ಪೆಟ್ರೋಲಿಯಂ ದರಗಳು ರಾತ್ರೋರಾತ್ರಿ ಪದೇ ಪದೇ ಏರುತ್ತಿವೆ. ದರಗಳನ್ನು ಜಾಗತಿಕ ಮಾರುಕಟ್ಟೆಗೆ ಹೋಲಿಸಿ ಜನರಿಂದ ವಸೂಲಿ ಮಾಡಬೇಕೆನ್ನುವ ಸರ್ಕಾರ ಮತ್ತು ತೈಲ ಕಂಪನಿಗಳು ಅದೇ ರೀತಿ ಅದನ್ನು ಉತ್ಪಾದಿಸುವ ಕಾರ್ಮಿಕರಿಗೆ ಜಾಗತಿಕವಾಗಿ ನೀಡುವ ರೀತಿಯಲ್ಲಿ ಸಂಬಳಗಳನ್ನು ನೀಡುವ ಬಗ್ಗೆ ಮಾತನಾಡುವುದಿಲ್ಲ. ರಾಜ್ಯ ಸರ್ಕಾರಗಳೂ ಕೂಡಾ ಪೆಟ್ರೋಲಿಯಂ ವಸ್ತುಗಳನ್ನು ಹಿಂಡುವ ಕೆಚ್ಚಲನ್ನಾಗಿಯೇ ನೋಡುತ್ತಿವೆ. ರಾಷ್ಟ್ರಮಟ್ಟದಲ್ಲಿ ಬೆಲೆ ಏರಿದಂತೆಲ್ಲಾ ತಾವೂ ಲಾಭ ಮಾಡಿಕೊಳ್ಳುತ್ತಿವೆ.

ಪರಿಹಾರವೇನು?

ಈ ಹಿನ್ನೆಲೆಯಲ್ಲಿ ಜಾಗತೀಕವಾಗಿ ಏರುಪೇರಾಗುವ ತೈಲ ಬೆಲೆಗಳ ಸಮಸ್ಯೆಯನ್ನು ಎದುರಿಸಲು ಹಿಂದೆ ಇದ್ದ ರೀತಿಯಲ್ಲಿ ಆಡಳಿತಾತ್ಮಕ ಬೆಲೆ ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೆ ತರುವುದು ಅಗತ್ಯವಾಗಿದೆ. ಜೊತೆಗೆ ಜಗತ್ತಿನಲ್ಲೇ ಅತಿ ಹೆಚ್ಚು ಇರುವ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಿ ಪುನರ್ರಚಿಸಬೇಕಾದ ಅಗತ್ಯವಿದೆ. ದೇಶೀಯವಾಗಿ ಸ್ವಾವಲಂಬೀ ತೈಲ ಉತ್ಪಾದನೆಗೆ ವಿಶೇಷವಾದ ಯೋಜನೆಗಳನ್ನು ಸರ್ಕಾರ ರೂಪಿಸಬೇಕಾಗಿದೆ. ತೈಲ ರಾಷ್ಟ್ರದ ಅತ್ಯಮೂಲ್ಯ ಸಂಪನ್ಮೂಲ. ಇದನ್ನು ಸಾರ್ವಜನಿಕ ಸಂಪತ್ತಾಗಿ ಉಳಿಸಿಕೊಳ್ಳಬೇಕಾಗಿದೆ.