Daily Archives: June 23, 2012

ಸೂರಿಲ್ಲದವರ ಊರಲ್ಲಿ ಹೊಸ ಕಾನೂನು – ನಿವೇಶನ ಶಾಸಕರ ಹಕ್ಕು!!

– ಶಿವರಾಮ್ ಕೆಳಗೋಟೆ

ಕಾನೂನು ಸಚಿವ ಸುರೇಶ ಕುಮಾರ್ ಅಕ್ರಮವಾಗಿ ಬಿಡಿಎ ನಿವೇಶನ ಪಡೆದ ಸುದ್ದಿ ಬಹಿರಂಗವಾದ ನಂತರ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಡಿ.ವಿ ಸದಾನಂದಗೌಡರು ‘ಇದೇನು ಅಂತಹ ಮಹಾಪರಾಧವಲ್ಲ, ಬಿಡಿಎ ನಿವೇಶನ ಶಾಸಕರ ಹಕ್ಕು’ ಎಂದು ರಾಜೀನಾಮೆ ಒಪ್ಪಲು ನಿರಾಕರಿಸಿದ್ದಾರೆ. ರಾಜೀನಾಮೆ ಕೊಡುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟದ್ದು. ಅಂತೆಯೆ ರಾಜೀನಾಮೆ ಸ್ವೀಕರಿಸುವುದು ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟದ್ದು. ಈ ಪ್ರಕರಣದ ಮೂಲಕ ‘ಪ್ರಾಮಾಣಿಕ’ ಸಚಿವರ ಮುಖವಾಡದ ಜೊತೆಗೆ ಕೆಲವು ದೃಶ್ಯ ಮಾಧ್ಯಮ ಸಂಸ್ಥೆಗಳಲ್ಲಿನ ಪತ್ರಕರ್ತರ ‘ಸಾಚಾತನ’ವೂ ಬಯಲಾಗಿದೆ.

ಮಾಹಿತಿ ಹಕ್ಕು ಅಧಿನಿಯಮದಡಿ ಭಾಸ್ಕರನ್ ಎಂಬುವವರು ಮಾಹಿತಿ ಪಡೆದು ವಿಷಯ ಬಹಿರಂಗ ಮಾಡಿದ್ದಾರೆ. ಭಾಸ್ಕರನ್ ಅವರ ಹಿನ್ನೆಲೆ, ಉದ್ದೇಶ ಏನೇ ಇರಲಿ, ಅವರ ಬಳಿ ಇರುವ ಮಾಹಿತಿ ಎಷ್ಟರಮಟ್ಟಿಗೆ ಅಧಿಕೃತ ಎನ್ನುವುದಷ್ಟೆ ಮುಖ್ಯ. ಬಿಡಿಎ ಕಾನೂನು ಪ್ರಕಾರ ಬೆಂಗಳೂರು ಮೆಟ್ರೋಪಾಲಿಟನ್ ವ್ಯಾಪ್ತಿಯಲ್ಲಿ ಕೃಷಿ ಅಥವಾ ವಾಣಿಜ್ಯ ಭೂಮಿ ಹೊಂದಿದ ಯಾರಿಗೂ ಬಿಡಿಎ ನಿವೇಶನ ಪಡೆಯಲು ಅರ್ಹತೆ ಇಲ್ಲ. ಅರ್ಜಿದಾರರು ಬೆಂಗಳೂರು ಮೆಟ್ರೋಪಾಲಿಟನ್ ವ್ಯಾಪ್ತಿಯಲ್ಲಿ ಭೂಮಿ ಹೊಂದಿಲ್ಲ ಎಂದು ಅಫಿಡವಿಟ್ ಸಲ್ಲಿಸಲೇಬೇಕು.

ಅನೇಕರಿಗೆ ಗೊತ್ತಿರಬಹುದು, ಮಾಜಿ ಸಚಿವ ಮುಮ್ತಾಜ್ ಅಲಿ ಖಾನ್ ಇದೇ ವಿಚಾರವಾಗಿ ಬಿಡಿಎ ಸೈಟ್ ಬೇಡ ಎಂದರು. ಮುಖ್ಯಮಂತ್ರಿ ಆದೇಶದ ಮೇರೆಗೆ ಅವರಿಗೆ ನಿವೇಶನ ಮಂಜೂರಾಗಿತ್ತು. ಬಿಡಿಎ ಆಯುಕ್ತರು ಖಾನ್ ಅವರನ್ನು ಸಂಪರ್ಕಿಸಿ ಅಫಿಡವಿಟ್ ಕೊಡಿ ಎಂದರು. ಆಗ ಖಾನ್ ಅವರು ತಾನು ಹಾಗೆ ಅಫಿಡವಿಟ್ ಸಲ್ಲಿಸಲಾರೆ, ಏಕೆಂದರೆ ನಾನು ಈಗಾಗಲೇ ಬೆಂಗಳೂರಿನಲ್ಲಿ ಒಂದು ಮನೆಯ ಒಡೆಯನಾಗಿದ್ದೇನೆ ಎಂದು ಪತ್ರ ಬರೆದು ಸುಮ್ಮನಾದರು.

ಸತ್ಯ, ಪ್ರಾಮಾಣಿಕತೆಯನ್ನೇ ಉಸಿರಾಡುತ್ತೇನೆ ಅಥವಾ ಅಂತಹದೊಂದು ಇಮೇಜು ಇಟ್ಟುಕೊಂಡವರಿಗೆ ಮುಮ್ತಾಜ್ ಅಲಿ ಖಾನ್ ಉದಾಹರಣೆ ಏಕೆ ನೆನಪಾಗಲಿಲ್ಲ? ಅಮ್ಮನ ಹೆಸರಿನಲ್ಲಿದ್ದ, ಮಗಳ ಹೆಸರಿನಲ್ಲಿದ್ದ ಮನೆ/ನಿವೇಶನ ಮಾರಾಟ ಮಾಡಿ ಬಿಡಿಎ ನಿವೇಶನ ಮಂಜೂರಾದದ್ದನ್ನು ಸರಿ ಎಂದು ಸಮರ್ಥಿಸುವ ಅಗತ್ಯವೇನಿತ್ತು? ಮುಖ್ಯಮಂತ್ರಿಯಂತೂ ಈ ಪ್ರಕರಣದಲ್ಲಿ ಒಂದು ಹೆಜ್ಚೆ ಮುಂದೆ ಹೋಗಿ ‘ಬಿಡಿಎ ನಿವೇಶನ ಶಾಸಕರ ಹಕ್ಕು’ಎಂದಿದ್ದಾರೆ. ಬಿಡಿಎ ಕಾನೂನು ಅವರಿಗೆ ಗೊತ್ತಾ? ಕಾನೂನಿನ ಯಾವ ಮೂಲೆಯಲ್ಲಾದರೂ ‘ಶಾಸಕರ ಹಕ್ಕು’ಅಂತ ಇದೆಯಾ?

ನಾಡಿನ ಅನೇಕ ಸಂಸದರು, ಶಾಸಕರು ಹೀಗೆ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ. ಬೆಂಗಳೂರಿನ ಅನೇಕ ಶಾಸಕರು ವೈಯಕ್ತಿಕವಾಗಿ ಬೃಹತ್ ಬಂಗಲೆಗಳನ್ನು ಹೊಂದಿದ್ದಾಗ್ಯೂ ಬಿಡಿಎ ನಿವೇಶನಕ್ಕಾಗಿ ಅರ್ಜಿ ಹಾಕಿ ಪಡೆದಿದ್ದಾರೆ. ಚಿತ್ರದುರ್ಗದ ಸಂಸದ ಜನಾರ್ದನ ಸ್ವಾಮಿ ಕುಟುಂಬದ ಸದಸ್ಯರು ಬೆಂಗಳೂರಿನಲ್ಲಿ ಮೂರು ನಿವೇಶನಗಳನ್ನು (ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ಟಿನ ಪ್ರಕಾರ) ಇಟ್ಟುಕೊಂಡಿದ್ದರೂ ಮತ್ತೊಂದು ನಿವೇಶನವನ್ನು ಬಿಡಿಎ ಮೂಲಕ ಪಡೆದರು. ನಿಮಗೆ ನೆನಪಿರಲಿ, ಇವರ ನಿವೇಶನಗಳೆಲ್ಲವೂ ಮೂರರಿಂದ ನಾಲ್ಕು ಕೋಟಿ ರೂ ಬೆಲೆಬಾಳುವಂತಹವು, ಆದರೆ ಇವರು ಕಟ್ಟಿದ್ದು ಕೇವಲ ಎಂಟರಿಂದ ಹತ್ತು ಲಕ್ಷ ರೂ ಮಾತ್ರ! ಇಂತಹ ಕೃತ್ಯಗಳನ್ನು ಸಮರ್ಥಿಸಬೇಕೆ? ಬೆಂಗಳೂರಿನಲ್ಲಿ ಒಂದು ನಿವೇಶನ ಬೇಕು ಎಂದು ಹತ್ತಾರು ವರ್ಷಗಳಿಂದ ಅರ್ಜಿ ಹಿಡಿದು ಕಾಯುತ್ತಿರುವವರ ಪಾಡು ಕೇಳುವವರ್ಯಾರು?

ಕೆಲ ಟಿವಿ ಚಾನೆಲ್ ಆಂಕರ್‌ಗಳು ಏಕಾಏಕಿ ಸುರೇಶ್ ಕುಮಾರ್ ಸಮರ್ಥನೆಗೆ ನಿಂತಿದ್ದಂತೂ ವಿಶೇಷವಾಗಿತ್ತು. ಆರೋಪ ಬಂದಾಕ್ಷಣ ಅವರು ರಾಜೀನಾಮೆ ಕೊಟ್ಟು ಇತರರಿಗಿಂತ ಭಿನ್ನವಾಗಿದ್ದಾರೆ ಎಂದು ಅವರು ಹೊಗಳಿದರು. ಅಲ್ಲಾರೀ, ಬಿಡಿಎ ಸೈಟ್ ಪ್ರಕರಣ ಮಾಧ್ಯಮ ಮೂಲಕ ಬಹಿರಂಗ ಆಗಿದ್ದು ಅವರಿಗೆ ಬೇಸರ ಆಗಿ ರಾಜೀನಾಮೆ ಕೊಟ್ಟರಾ, ಅಥವಾ ತಮ್ಮಿಂದ ತಪ್ಪಾಗಿದೆ ಅಂತ ಅವರಿಗೆ ಮನವರಿಕೆ ಆಗಿ ರಾಜಿನಾಮೆ ನಿರ್ಧಾರ ತೆಗೆದುಕೊಂಡರಾ? ಇನ್ನೂ ಸ್ಪಷ್ಟವಾಗಿಲ್ಲ. ವಿಚಿತ್ರ ಅಂದರೆ, ಇತರ ಪಕ್ಷಗಳ ನಾಯಕರೂ ಇವರ ಬೆಂಬಲಕ್ಕೆ ನಿಂತಿದ್ದಾರೆ. ಕಾರಣ ಅವರಲ್ಲಿ ಕೆಲವರು ಇಂತಹದೇ ಮಾರ್ಗದಿಂದ ನಿವೇಶನ ಪಡೆದವರಲ್ಲವೆ?

ಕೆಲ ಆಂಕರ್‌ಗಳು ಆರ್.ಟಿ.ಐ. ಅರ್ಜಿದಾರನಿಗೆ ಕೇಳಿದ ಪ್ರಶ್ನೆಗಳು ಹೀಗಿದ್ದವು.

  • ನಿಮ್ಮ ಹಿನ್ನೆಲೆ ಏನು? ನಿಮಗೆ ಏನಾದ್ರೂ ರಾಜಕೀಯ ಉದ್ದೇಶ ಇದೆಯಾ?
  • ಎಲ್ಲಾ ಬಿಟ್ಟು ಸುರೇಶ ಕುಮಾರ್ ಬಗ್ಗೆನೇ ಯಾಕೆ ಆರೋಪ ಮಾಡ್ತೀರಿ?
  • ಮುಂದಿನ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸುವ ಹುನ್ನಾರವೆ?
  • ಈಗ ಸೈಟ್ ವಾಪಸ್ ಕೊಡ್ತೀನಿ ಅಂತ ಸುರೇಶ ಕುಮಾರ್ ಹೇಳಿದ್ದಾರಲ್ಲ, ಮತ್ತೇನು ನಿಮ್ಮದು?
  • ಹಿಂದೆ ಸಚಿವರು ಆರೋಪ ಬಂದರೆ ಸಮರ್ಥನೆ ಮಾಡಿಕೊಳ್ಳತಾ ಇದ್ರು. ಆದರೆ ಇವರು ತಕ್ಷಣ ರಾಜೀನಾಮೆ ಕೊಟ್ಟಿದ್ದಾರಲ್ಲ?

ಈ ಪ್ರಶ್ನೆಗಳೇ ಸೂಚಿಸುತ್ತಿದ್ದವು, ಅವರು ಯಾರ ಪರ ಇದ್ದರು ಎನ್ನುವುದನ್ನು.

ಭ್ರಷ್ಟಾಚಾರ ಅನ್ನೋದು ಒಪ್ಪಿತವೇ ಈ ಸಮಾಜದಲ್ಲಿ?

ಸಾಮಾಜಿಕ ಜಾಹೀರಾತುಗಳು: ಪರಿಣಾಮ ಹಾಗೂ ಪರಿವರ್ತನೆ


-ಡಾ.ಎಸ್.ಬಿ. ಜೋಗುರ


 

ಜಾಹೀರಾತುಗಳ ಮೂಲಕ ಗ್ಲಾಮರಸ್ ಆದ ಸರಕುಗಳನ್ನು ಮಾರಾಟಮಾಡುವಂತೆ ಮನುಷ್ಯ ಸಂಬಂಧಗಳನ್ನು ವಿಲೇವಾರಿ ಮಾಡಲಾಗುವುದಿಲ್ಲ. ಇದು ಸೋ ಕಾಲ್ಡ್ ಬುದ್ಧಿ ಜೀವಿಯಾದ ಮನುಷ್ಯನ ಮಿತಿಯೂ ಹೌದು. ಸಾಮಾಜಿಕ ಸಂಸ್ಥೆಗಳ ಸಾಲಲ್ಲಿಯೇ ಗುರುತಿಸಿಕೊಳ್ಳುವ ಜಾಹೀರಾತುಗಳು ಮಾರುಕಟ್ಟೆಯ ತಂತ್ರಗಾರಿಕೆಯ ಸಫಲ ಸಾಧನವೆನಿಸಿಕೊಂಡಿರುವುದರ ಹಿಂದೆ ಅದರ ಗಮ್ಮತ್ತು ಅಡಗಿದೆ. ಈ ಬಗೆಯ ಗತ್ತು ಸಾಮಾಜಿಕ ಜಾಹೀರಾತುಗಳಿಗೆ ಸಾಧ್ಯವಾಗದ ಕಾರಣ ಅವು ತಲುಪಬೇಕಾದ ಜನಸಮೂಹ, ಪ್ರಮಾಣ, ಪರಿಣಾಮ ಸಾಧ್ಯವಾಗುವುದಿಲ್ಲ. ಸಮಾಜದ ಅಭ್ಯುದಯವನ್ನೇ ಗುರಿಯಾಗಿಸಿಕೊಂಡ ಈ ಸಾಮಾಜಿಕ ಜಾಹೀರಾತುಗಳ ಆಶಯ ಸಮೂಹ ಹಿತಕರವಾಗಿದ್ದರೂ ಅದರ ಪರಿಣಾಮದಲ್ಲಿ ಮಾತ್ರ ಮಾರುಕಟ್ಟೆಯ ಜಾಹೀರಾತುಗಳ ಸೆಳೆತದ ಚಮಕ್ ಇರುವುದಿಲ್ಲ. ಅದಕ್ಕೆ ಅತಿ ಮುಖ್ಯವಾದ ಕಾರಣ ಈ ಬಗೆಯ ಜಾಹೀರಾತುಗಳ ಉದ್ದೇಶ ವ್ಯವಹಾರ ಕುದುರಿಸುವುದಾಗಿರದೇ ಸಾಮಾಜಿಕ ಕಳಕಳಿಯೇ ಆಗಿರುತ್ತದೆ.

ಸಾಮಾಜಿಕ ಜಾಹೀರಾತುಗಳ ಪರಿಕಲ್ಪನೆಯ ಬೇರುಗಳು ಅಸ್ಪಷ್ಟವಾಗಿಯಾದರೂ ತೀರಾ ಪ್ರಾಚೀನ ಕಾಲದಿಂದಲೂ ಇವೆ. ಪ್ರಾಚೀನ ಗ್ರೀಕ್ ಹಾಗೂ ರೋಮನ್ ಸಮಾಜದಲ್ಲಿ ’ಗುಲಾಮರನ್ನು ಬಿಡುಗಡೆ ಮಾಡಿ’ ಎನ್ನುವ ಕೂಗು ಆ ಸಂದರ್ಭದ ಸಾಮಾಜಿಕ ಜಾಹೀರಾತೇ ಹೌದು. 19 ನೇ ಶತಮಾನದಲ್ಲಿ ನಮ್ಮಲ್ಲಿ ಆರಂಭವಾದ ಸಮಾಜ ಸುಧಾರಣಾ ಆಂದೋಲನದ ಉದ್ದೇಶಗಳಲ್ಲಿಯೂ ಈ ಸಾಮಾಜಿಕ ಜಾಹೀರಾತಿನ ಕಳಕಳಿ ಅಡಕವಾಗಿದೆ. 1960 ರ ದಶಕದ ನಂತರ ಅಧಿಕೃತವಾಗಿ ಈ ದೇಶದ ಜನಸಂಖ್ಯೆಯ ಸ್ಫೋಟದೊಂದಿಗೆ ಸಾಮಾಜಿಕ ಜಾಹೀರಾತಿನ ಪ್ರಾಮುಖ್ಯತೆಯ ಅರಿವಾಯಿತು. ಅಲ್ಲಿಂದ ಆರಂಭವಾದ ಈ ಬಗೆಯ ಸಾಮಾಜಿಕ ಹಿತಾಸಕ್ತಿ ಪ್ರೇರಿತ ಜಾಹೀರಾತುಗಳು ಸರ್ಕಾರದ ಮುತುವರ್ಜಿಯಲ್ಲಿಯೇ ಮುಂದುವರೆದುಕೊಂಡು ಬಂದಿವೆ. ಸದ್ಯದ ಸಂದರ್ಭದಲ್ಲಂತೂ ಜನರ ಮನ:ಪ್ರವೃತ್ತಿಗಳಲ್ಲಿ ನಿರೀಕ್ಷಿತ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಕೆಲ ಸರ್ಕಾರೇತರ ಸಂಸ್ಥೆಗಳು ಈ ಬಗೆಯ ಜಾಹೀರಾತನ್ನೇ ಅವಲಂಬಿಸಿವೆ.

ಸಮೂಹ ಮಾಧ್ಯಮಗಳ ಸಾಲಲ್ಲಿ ಅತ್ಯಂತ ಪ್ರಭಾವಿ ಮಾಧ್ಯಮ ಎಂದೇ ಗುರುತಿಸಿಕೊಂಡಿರುವ ಚಲನಚಿತ್ರ ಮತ್ತು ದೂರದರ್ಶನಗಳ ಮೂಲಕ ಜನರ ಮನಸನ್ನು ಪ್ರಭಾವಿಸುವ ಯತ್ನವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಇತ್ತೀಚೆಗಂತೂ ಪ್ರತಿಯೊಂದು ಚಲನಚಿತ್ರದ ಆರಂಭದಲ್ಲಿ ಪೂರ್ವಪೀಠಿಕೆಯ ಹಾಗೆ ಈ ಸಾಮಾಜಿಕ ಜಾಹೀರಾತು ಮೂಡಿ ಬರುತ್ತಿರುವುದು ಅತ್ಯಂತ ತಾಕರ್ಕಿಕವಾದ ಬೆಳವಣಿಗೆ. ಆದರೆ ಈ ಬಗೆಯ ಜಾಹೀರಾತುಗಳು ಹೃದಯಕ್ಕೆ ಇಳಿಯುವ ಬದಲಾಗಿ ಬುದ್ಧಿಗೆ ಇಳಿದಷ್ಟು ಇವುಗಳ ಪ್ರಸಾರದ ಉದ್ದೇಶ ಹಾಗೂ ಗುರಿ ಸಾಫಲ್ಯತೆ ಸಾಧ್ಯವಾಗುತ್ತದೆ. ಮಧ್ಯಪಾನದ ಅಪಾಯ, ಸಿಗರೇಟ್ ಸೇವನೆಯ ಹಾನಿ, ಏಡ್ಸ್ ರೋಗದ ಬಗೆಗಿನ ಮುನ್ನೆಚ್ಚರಿಕೆ, ಹೆಣ್ಣು ಮಗುವಿನ ಬಗ್ಗೆ ತಾರತಮ್ಯ, ಕೃಷಿ, ಪೋಲಿಯೋ, ವರದಕ್ಷಿಣೆ, ದೇವದಾಸಿ ಪದ್ಧತಿ ಮುಂತಾದ ಹತ್ತು ಹಲವಾರು ಸಾಮಾಜಿಕ ರೋಗಗ್ರಸ್ಥ ಸಂಗತಿಗಳನ್ನು ಆಧರಿಸಿ ತಯಾರಾಗುವ ಸಾಮಾಜಿಕ ಜಾಹೀರಾತುಗಳಲ್ಲಿ ನಾನು ಈ ಮೊದಲೇ ಹೇಳಿದಂತೆ ಮಾರುಕಟ್ಟೆಗಾಗಿ ರೂಪಗೊಳ್ಳುವ ಜಾಹೀರಾತುಗಳಲ್ಲಿಯ ಗ್ಲಾಮರ್ ಕೊರತೆ ಎದ್ದು ತೋರುತ್ತದೆ. ಅಷ್ಟಕ್ಕೂ ಇವು ಉಚಿತ ಜಾಹೀರಾತುಗಳು. ಇವುಗಳಿಗೆ ಸಿಗುವ ಸ್ಥಳ, ಸಮಯ, ಮಾದರಿ ಇವೆಲ್ಲವೂ ಉಚಿತವೇ ಇವುಗಳ ರೂಪಧಾರಣೆಯಲ್ಲಿ ಸರ್ಕಾರವೇ ಮುಕ್ಕಾಲು ಭಾಗ ಹಣವನ್ನು ವ್ಯವಯಿಸುವುದಿದೆ. 2007 ರ ಸಂದರ್ಭದಲ್ಲಿ ಈ ಬಗೆಯ ಸಾಮಾಜಿಕ ಹಿತದೃಷ್ಟಿಯ ಜಾಹೀರಾತುಗಳ ಸೃಷ್ಟಿಯಲ್ಲಿ ಸರ್ಕಾರ 87% ಮೊತ್ತವನ್ನು ಭರಿಸಿದರೆ, ಕೆಲ ಸರ್ಕಾರೇತರ ಸಂಸ್ಥೆಗಳು ಕೇವಲ 13% ಮೊತ್ತವನ್ನು ಮಾತ್ರ ಭರಿಸಿರುವುದಿದೆ.

ಈ ಬಗೆಯ ಜಾಹೀರಾತುಗಳು ಭಾವನಾತ್ಮಕವಾಗಿ ಬೀರುವ ಪ್ರಭಾವಕ್ಕಿಂತಲೂ ಮುಖ್ಯವಾಗಿ ಬೌದ್ಧಿಕವಾಗಿ ಕೆಲಸ ಮಾಡಬೇಕಿದೆ. ಕೆಲವು ಜಾಹೀರಾತುಗಳು ಸರ್ಕಾರದ ನೆರವಿನೊಂದಿಗೆ ತಯಾರಾಗಿ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಜಾಹೀರಾತೆಂದು ಪುರಸ್ಕಾರಗಳನ್ನು ಪಡೆದರೂ ಅವು ಸಾಮಾನ್ಯನಿಗೆ ಮಾತ್ರ ಸರಿಯಾಗಿ ತಲುಪಿರುವುದಿಲ್ಲ. ದೂರದರ್ಶನ ಮತ್ತು ಇತರೇ ಖಾಸಗಿ ಚಾನೆಲ್‌ಗಳಲ್ಲಿರುವ ವ್ಯತ್ಯಾಸವೇ ಮಾರುಕಟ್ಟೆಯ ಜಾಹೀರಾತು ಮತ್ತು ಈ ಸಾಮಾಜಿಕ ಜಾಹೀರಾತಿನ ನಡುವೆ ಇದೆ. ಮೂಲಭೂತವಾಗಿ ಮಕ್ಕಳಿಂದ ಮುದುಕರವರೆಗೆ ಇಷ್ಟ ಪಡುವ ಚಾನೆಲ್‌ಗಳೆಲ್ಲಾ ಬಹುತೇಕವಾಗಿ ಮಸಾಲಾ ಚಾನೆಲ್‌ಗಳು. ಅಲ್ಲಿ ಬರುವ ಜಾಹೀರಾತುಗಳು ಮತ್ತೂ ಬರ್ಪೂರ್ ಮಸಾಲಾಮಯವಾಗಿರುತ್ತವೆ. ಹೀಗಿರಲು ದೂರದರ್ಶನದಲ್ಲಿ ಯಾವುದೋ ಒಂದು ಜನಪ್ರಿಯವಲ್ಲದ ಕಾರ್ಯಕ್ರಮದ ನಡುವೆ ಬಂದು ಹೋಗುವ ಈ ಸಾಮಾಜಿಕ ಜಾಹೀರಾತಿನ ಉದ್ದೇಶ ಈಡೇರುವದಾದರೂ ಹೇಗೆ..?

ಈ ಬಗೆಯ ಸಾಮಾಜಿಕ ಜಾಹೀರಾತುಗಳಲ್ಲಿ ಮಾದರಿಯಾಗಿ ಕೆಲಸ ಮಾಡುವವರು ಉಚಿತವಾಗಿಯೇ ಅಭಿನಯಿಸಬೇಕು. ಪರಿಣಾಮವಾಗಿ ಚಾಲ್ತಿಯಲ್ಲಿರದ ನಟ, ನಟಿ, ಆಟಗಾರರು ಈ ಜಾಹೀರಾತುಗಳಲ್ಲಿ ನಟಿಸಿದರೂ ಅವರು ಪ್ರಭಾವ ಬೀರುವಂತಿರುವುದಿಲ್ಲ. ಕೆಲ ಜಾಹೀರಾತುಗಳಂತೂ ತೀರಾ ಕಳಪೆಯಾಗಿ ತಯಾರಾಗಿರುತ್ತವೆ. ಅಂದ ಮೇಲೆ ಅದರ ಪ್ರಭಾವ, ಪರಿವರ್ತನೆಯ ಬಗ್ಗೆ ಯೋಚಿಸುವುದೇ ಬೇಡ. ಇನ್ನು ಕೆಲ ಗುಟ್ಕಾ, ಸಿಗರೇಟ್, ಮದ್ಯ ಮಾರಾಟದ ಕಂಪನಿಗಳು ಕೂಡಾ ಈ ಬಗೆಯ ಸಾಮಾಜಿಕ ಜಾಹೀರಾತನ್ನು ತಮ್ಮ ಉತ್ಪಾದನೆಯ ಪೊಟ್ಟಣ, ಬಾಟಲ್‌ದ ಮೇಲೆಯೇ ಔಪಚಾರಿಕವಾಗಿ ಮಾಡುವುದಿದೆ. ಅದು ಶಾಸನೀಯವಾದ ಒತ್ತಡದ ಹಿನ್ನೆಲೆಯಲ್ಲಿ ಮೂಡಿ ಬಂದ ಜಾಹೀರಾತೇ ಹೊರತು ಸ್ವಯಂಪ್ರೇರಣೆಯಿಂದಲ್ಲ. ಇಂಥವರು ಮಾಡುವ ಜಾಹೀರಾತಿಗೆ ಯಾವುದೇ ಬಗೆಯ ಶಕ್ತಿಯಾಗಲೀ.. ಸತ್ವವಾಗಲೀ ಇಲ್ಲ. ಸರ್ಕಾರ ಮತ್ತು ಕೆಲ ಸರ್ಕಾರೇತರ ಸಂಸ್ಥೆಗಳು ಮಾಡುವ ಜಾಹೀರಾತುಗಳಿಗೆ ಮಾತ್ರ ಒಂದು ಮೌಲ್ಯವಿದೆ. ಪ್ರತಿಯೊಂದು ರಾಷ್ಟ್ರದ ಭವಿಷ್ಯ ಅಲ್ಲಿಯ ಯುವಕರು. ನಮ್ಮ ದೇಶದಲ್ಲಿ ಮಿಕ್ಕ ಬೇರೆ ರಾಷ್ರಗಳಿಗಿಂತಲೂ ಹೆಚ್ಚಿನ ಪ್ರಮಾಣದ ಯುವಕರಿದ್ದಾರೆ. ಪ್ರೌಢ ಶಿಕ್ಷಣದ ಹಂತದಿಂದ ಆರಂಭಿಸಿ ಉನ್ನತ ಶಿಕ್ಷಣದ ಎಲ್ಲ ಹಂತಗಳಲ್ಲಿ ಅವರ ನೋಟ್ ಬುಕ್ ಮತ್ತು ಪುಸ್ತಕಗಳ ಹಿಂಬದಿ ಕಡ್ಡಾಯವಾಗಿ ಸಾಮಾಜಿಕ ಜಾಹೀರಾತುಗಳನ್ನು ಮುದ್ರಿಸುವಂತೆ ಸರ್ಕಾರ ಒತ್ತಡ ಹೇರಬೇಕು. ಎಲ್ಲ ಮಾಧ್ಯಮ ಮೂಲಗಳಿಂದಲೂ ಈ ಬಗೆಯ ಸಾಮಾಜಿಕ ಜಾಹೀರಾತುಗಳನ್ನು ಪರಿಣಾಮಕಾರಿಯಾಗಿ, ನಿರಂತರವಾಗಿ ಪ್ರಸರಣಗೊಳಿಸಿದರೆ ಜನಮಾನಸದಲ್ಲಿ ಪರಿವರ್ತನೆಗಳನ್ನುಂಟು ಮಾಡಬಹುದು. ಈ ಬಗೆಯ ಜಾಹೀರಾತುಗಳ ಮೂಲ ಆಶಯವೂ ಅದೇ ಆಗಿದೆ… ಆಗಿರಬೇಕು.