ಸೂರಿಲ್ಲದವರ ಊರಲ್ಲಿ ಹೊಸ ಕಾನೂನು – ನಿವೇಶನ ಶಾಸಕರ ಹಕ್ಕು!!

– ಶಿವರಾಮ್ ಕೆಳಗೋಟೆ

ಕಾನೂನು ಸಚಿವ ಸುರೇಶ ಕುಮಾರ್ ಅಕ್ರಮವಾಗಿ ಬಿಡಿಎ ನಿವೇಶನ ಪಡೆದ ಸುದ್ದಿ ಬಹಿರಂಗವಾದ ನಂತರ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಡಿ.ವಿ ಸದಾನಂದಗೌಡರು ‘ಇದೇನು ಅಂತಹ ಮಹಾಪರಾಧವಲ್ಲ, ಬಿಡಿಎ ನಿವೇಶನ ಶಾಸಕರ ಹಕ್ಕು’ ಎಂದು ರಾಜೀನಾಮೆ ಒಪ್ಪಲು ನಿರಾಕರಿಸಿದ್ದಾರೆ. ರಾಜೀನಾಮೆ ಕೊಡುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟದ್ದು. ಅಂತೆಯೆ ರಾಜೀನಾಮೆ ಸ್ವೀಕರಿಸುವುದು ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟದ್ದು. ಈ ಪ್ರಕರಣದ ಮೂಲಕ ‘ಪ್ರಾಮಾಣಿಕ’ ಸಚಿವರ ಮುಖವಾಡದ ಜೊತೆಗೆ ಕೆಲವು ದೃಶ್ಯ ಮಾಧ್ಯಮ ಸಂಸ್ಥೆಗಳಲ್ಲಿನ ಪತ್ರಕರ್ತರ ‘ಸಾಚಾತನ’ವೂ ಬಯಲಾಗಿದೆ.

ಮಾಹಿತಿ ಹಕ್ಕು ಅಧಿನಿಯಮದಡಿ ಭಾಸ್ಕರನ್ ಎಂಬುವವರು ಮಾಹಿತಿ ಪಡೆದು ವಿಷಯ ಬಹಿರಂಗ ಮಾಡಿದ್ದಾರೆ. ಭಾಸ್ಕರನ್ ಅವರ ಹಿನ್ನೆಲೆ, ಉದ್ದೇಶ ಏನೇ ಇರಲಿ, ಅವರ ಬಳಿ ಇರುವ ಮಾಹಿತಿ ಎಷ್ಟರಮಟ್ಟಿಗೆ ಅಧಿಕೃತ ಎನ್ನುವುದಷ್ಟೆ ಮುಖ್ಯ. ಬಿಡಿಎ ಕಾನೂನು ಪ್ರಕಾರ ಬೆಂಗಳೂರು ಮೆಟ್ರೋಪಾಲಿಟನ್ ವ್ಯಾಪ್ತಿಯಲ್ಲಿ ಕೃಷಿ ಅಥವಾ ವಾಣಿಜ್ಯ ಭೂಮಿ ಹೊಂದಿದ ಯಾರಿಗೂ ಬಿಡಿಎ ನಿವೇಶನ ಪಡೆಯಲು ಅರ್ಹತೆ ಇಲ್ಲ. ಅರ್ಜಿದಾರರು ಬೆಂಗಳೂರು ಮೆಟ್ರೋಪಾಲಿಟನ್ ವ್ಯಾಪ್ತಿಯಲ್ಲಿ ಭೂಮಿ ಹೊಂದಿಲ್ಲ ಎಂದು ಅಫಿಡವಿಟ್ ಸಲ್ಲಿಸಲೇಬೇಕು.

ಅನೇಕರಿಗೆ ಗೊತ್ತಿರಬಹುದು, ಮಾಜಿ ಸಚಿವ ಮುಮ್ತಾಜ್ ಅಲಿ ಖಾನ್ ಇದೇ ವಿಚಾರವಾಗಿ ಬಿಡಿಎ ಸೈಟ್ ಬೇಡ ಎಂದರು. ಮುಖ್ಯಮಂತ್ರಿ ಆದೇಶದ ಮೇರೆಗೆ ಅವರಿಗೆ ನಿವೇಶನ ಮಂಜೂರಾಗಿತ್ತು. ಬಿಡಿಎ ಆಯುಕ್ತರು ಖಾನ್ ಅವರನ್ನು ಸಂಪರ್ಕಿಸಿ ಅಫಿಡವಿಟ್ ಕೊಡಿ ಎಂದರು. ಆಗ ಖಾನ್ ಅವರು ತಾನು ಹಾಗೆ ಅಫಿಡವಿಟ್ ಸಲ್ಲಿಸಲಾರೆ, ಏಕೆಂದರೆ ನಾನು ಈಗಾಗಲೇ ಬೆಂಗಳೂರಿನಲ್ಲಿ ಒಂದು ಮನೆಯ ಒಡೆಯನಾಗಿದ್ದೇನೆ ಎಂದು ಪತ್ರ ಬರೆದು ಸುಮ್ಮನಾದರು.

ಸತ್ಯ, ಪ್ರಾಮಾಣಿಕತೆಯನ್ನೇ ಉಸಿರಾಡುತ್ತೇನೆ ಅಥವಾ ಅಂತಹದೊಂದು ಇಮೇಜು ಇಟ್ಟುಕೊಂಡವರಿಗೆ ಮುಮ್ತಾಜ್ ಅಲಿ ಖಾನ್ ಉದಾಹರಣೆ ಏಕೆ ನೆನಪಾಗಲಿಲ್ಲ? ಅಮ್ಮನ ಹೆಸರಿನಲ್ಲಿದ್ದ, ಮಗಳ ಹೆಸರಿನಲ್ಲಿದ್ದ ಮನೆ/ನಿವೇಶನ ಮಾರಾಟ ಮಾಡಿ ಬಿಡಿಎ ನಿವೇಶನ ಮಂಜೂರಾದದ್ದನ್ನು ಸರಿ ಎಂದು ಸಮರ್ಥಿಸುವ ಅಗತ್ಯವೇನಿತ್ತು? ಮುಖ್ಯಮಂತ್ರಿಯಂತೂ ಈ ಪ್ರಕರಣದಲ್ಲಿ ಒಂದು ಹೆಜ್ಚೆ ಮುಂದೆ ಹೋಗಿ ‘ಬಿಡಿಎ ನಿವೇಶನ ಶಾಸಕರ ಹಕ್ಕು’ಎಂದಿದ್ದಾರೆ. ಬಿಡಿಎ ಕಾನೂನು ಅವರಿಗೆ ಗೊತ್ತಾ? ಕಾನೂನಿನ ಯಾವ ಮೂಲೆಯಲ್ಲಾದರೂ ‘ಶಾಸಕರ ಹಕ್ಕು’ಅಂತ ಇದೆಯಾ?

ನಾಡಿನ ಅನೇಕ ಸಂಸದರು, ಶಾಸಕರು ಹೀಗೆ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ. ಬೆಂಗಳೂರಿನ ಅನೇಕ ಶಾಸಕರು ವೈಯಕ್ತಿಕವಾಗಿ ಬೃಹತ್ ಬಂಗಲೆಗಳನ್ನು ಹೊಂದಿದ್ದಾಗ್ಯೂ ಬಿಡಿಎ ನಿವೇಶನಕ್ಕಾಗಿ ಅರ್ಜಿ ಹಾಕಿ ಪಡೆದಿದ್ದಾರೆ. ಚಿತ್ರದುರ್ಗದ ಸಂಸದ ಜನಾರ್ದನ ಸ್ವಾಮಿ ಕುಟುಂಬದ ಸದಸ್ಯರು ಬೆಂಗಳೂರಿನಲ್ಲಿ ಮೂರು ನಿವೇಶನಗಳನ್ನು (ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ಟಿನ ಪ್ರಕಾರ) ಇಟ್ಟುಕೊಂಡಿದ್ದರೂ ಮತ್ತೊಂದು ನಿವೇಶನವನ್ನು ಬಿಡಿಎ ಮೂಲಕ ಪಡೆದರು. ನಿಮಗೆ ನೆನಪಿರಲಿ, ಇವರ ನಿವೇಶನಗಳೆಲ್ಲವೂ ಮೂರರಿಂದ ನಾಲ್ಕು ಕೋಟಿ ರೂ ಬೆಲೆಬಾಳುವಂತಹವು, ಆದರೆ ಇವರು ಕಟ್ಟಿದ್ದು ಕೇವಲ ಎಂಟರಿಂದ ಹತ್ತು ಲಕ್ಷ ರೂ ಮಾತ್ರ! ಇಂತಹ ಕೃತ್ಯಗಳನ್ನು ಸಮರ್ಥಿಸಬೇಕೆ? ಬೆಂಗಳೂರಿನಲ್ಲಿ ಒಂದು ನಿವೇಶನ ಬೇಕು ಎಂದು ಹತ್ತಾರು ವರ್ಷಗಳಿಂದ ಅರ್ಜಿ ಹಿಡಿದು ಕಾಯುತ್ತಿರುವವರ ಪಾಡು ಕೇಳುವವರ್ಯಾರು?

ಕೆಲ ಟಿವಿ ಚಾನೆಲ್ ಆಂಕರ್‌ಗಳು ಏಕಾಏಕಿ ಸುರೇಶ್ ಕುಮಾರ್ ಸಮರ್ಥನೆಗೆ ನಿಂತಿದ್ದಂತೂ ವಿಶೇಷವಾಗಿತ್ತು. ಆರೋಪ ಬಂದಾಕ್ಷಣ ಅವರು ರಾಜೀನಾಮೆ ಕೊಟ್ಟು ಇತರರಿಗಿಂತ ಭಿನ್ನವಾಗಿದ್ದಾರೆ ಎಂದು ಅವರು ಹೊಗಳಿದರು. ಅಲ್ಲಾರೀ, ಬಿಡಿಎ ಸೈಟ್ ಪ್ರಕರಣ ಮಾಧ್ಯಮ ಮೂಲಕ ಬಹಿರಂಗ ಆಗಿದ್ದು ಅವರಿಗೆ ಬೇಸರ ಆಗಿ ರಾಜೀನಾಮೆ ಕೊಟ್ಟರಾ, ಅಥವಾ ತಮ್ಮಿಂದ ತಪ್ಪಾಗಿದೆ ಅಂತ ಅವರಿಗೆ ಮನವರಿಕೆ ಆಗಿ ರಾಜಿನಾಮೆ ನಿರ್ಧಾರ ತೆಗೆದುಕೊಂಡರಾ? ಇನ್ನೂ ಸ್ಪಷ್ಟವಾಗಿಲ್ಲ. ವಿಚಿತ್ರ ಅಂದರೆ, ಇತರ ಪಕ್ಷಗಳ ನಾಯಕರೂ ಇವರ ಬೆಂಬಲಕ್ಕೆ ನಿಂತಿದ್ದಾರೆ. ಕಾರಣ ಅವರಲ್ಲಿ ಕೆಲವರು ಇಂತಹದೇ ಮಾರ್ಗದಿಂದ ನಿವೇಶನ ಪಡೆದವರಲ್ಲವೆ?

ಕೆಲ ಆಂಕರ್‌ಗಳು ಆರ್.ಟಿ.ಐ. ಅರ್ಜಿದಾರನಿಗೆ ಕೇಳಿದ ಪ್ರಶ್ನೆಗಳು ಹೀಗಿದ್ದವು.

  • ನಿಮ್ಮ ಹಿನ್ನೆಲೆ ಏನು? ನಿಮಗೆ ಏನಾದ್ರೂ ರಾಜಕೀಯ ಉದ್ದೇಶ ಇದೆಯಾ?
  • ಎಲ್ಲಾ ಬಿಟ್ಟು ಸುರೇಶ ಕುಮಾರ್ ಬಗ್ಗೆನೇ ಯಾಕೆ ಆರೋಪ ಮಾಡ್ತೀರಿ?
  • ಮುಂದಿನ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸುವ ಹುನ್ನಾರವೆ?
  • ಈಗ ಸೈಟ್ ವಾಪಸ್ ಕೊಡ್ತೀನಿ ಅಂತ ಸುರೇಶ ಕುಮಾರ್ ಹೇಳಿದ್ದಾರಲ್ಲ, ಮತ್ತೇನು ನಿಮ್ಮದು?
  • ಹಿಂದೆ ಸಚಿವರು ಆರೋಪ ಬಂದರೆ ಸಮರ್ಥನೆ ಮಾಡಿಕೊಳ್ಳತಾ ಇದ್ರು. ಆದರೆ ಇವರು ತಕ್ಷಣ ರಾಜೀನಾಮೆ ಕೊಟ್ಟಿದ್ದಾರಲ್ಲ?

ಈ ಪ್ರಶ್ನೆಗಳೇ ಸೂಚಿಸುತ್ತಿದ್ದವು, ಅವರು ಯಾರ ಪರ ಇದ್ದರು ಎನ್ನುವುದನ್ನು.

ಭ್ರಷ್ಟಾಚಾರ ಅನ್ನೋದು ಒಪ್ಪಿತವೇ ಈ ಸಮಾಜದಲ್ಲಿ?

8 thoughts on “ಸೂರಿಲ್ಲದವರ ಊರಲ್ಲಿ ಹೊಸ ಕಾನೂನು – ನಿವೇಶನ ಶಾಸಕರ ಹಕ್ಕು!!

  1. naveen shetty

    ಉತ್ತಮ ಲೇಖನ. ಸುರೇಶ್ ಕುಮಾರ್ ತಾನೊಬ್ಬ ಸಾಚಾನಂತೆ ಮಾಧ್ಯಮದ ಮುಂದೆ ಪೊಸು ಕೊಡುತ್ತಾರೆ. ನಗರಾಭಿವೃದ್ಧಿ ಸಚಿವರು ಮಂಗಳುರಿಗೆ ಬಂದಿದ್ದಾಗ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಬೃಹತ್ತಾದ ಅಕ್ರಮ ಕಟ್ಟಡಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ನಾವು ಪ್ರಶ್ನೆ ಕೇಳಿದ್ದೆವು. ಸುರೇಶ್ ಕುಮಾರ್ ರವರು ತಕ್ಷಣ ಮಂಗಳುರು ಮಹಾನಗರ ಪಾಲಿಕೆಯ ಅಂದಿನ ಆಯುಕ್ತ ಸಮೀರ್ ಶುಕ್ಲರಿಂದ ಇಲ್ಲಿನ ಅಕ್ರಮ ಕಟ್ಟಡಗಳ ಲಿಸ್ಟ್ ಕೇಳಿದ್ದರು. ಸಮೀರ್ ಶುಕ್ಲ 29 ಅಕ್ರಮ ಕಟ್ಟಡಗಳ ಲಿಸ್ಟ್ ನೀಡಿದ್ದರು. ಲಿಸ್ಟ್ ಕೊಟ್ಟಿದ್ದು ಮಾತ್ರ ಅಲ್ಲ. ಕೆಲವೊಂದು ಅಕ್ರಮ ಮಾಲ್ಗಳನ್ನು ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದರು. ಇದಾದ ಮೂರೇ ವಾರದಲ್ಲಿ ಸಮೀರ್ ಶುಕ್ಲ ದಿಡೀರ್ ವಗರ್ಾವಣೆ ಆಗಿದ್ದರು. ಈಗಲೂ 29 ಅಕ್ರಮ ಕಟ್ಟಡಗಳು ಕಾರ್ಯಾಚರಿಸುತ್ತಿದೆ. ಇನ್ನೂ ಸುರೇಶ್ ಕುಮಾರ್ ಸಚಿವರಾಗೇ ಇದ್ದಾರೆ….

    Reply
  2. ಎಚ್. ಸುಂದರ ರಾವ್

    “ಭ್ರಷ್ಟಾಚಾರ ಅನ್ನುವುದು ಒಪ್ಪಿತವೆ ಈ ಸಮಾಜದಲ್ಲಿ”? ಹೌದು. ಬಹುಮತ ಭ್ರಷ್ಟಾಚಾರದ ಪರವಾಗಿಯೇ ಇದೆ.

    Reply
  3. vasanth

    Ramdas in Mysore also famous for Land mafia and giving false assurances for people wherever he goes. In one of the college in Mysore district he had a interaction with students. Students asked lot of questions. He asked the concerned officers to note down the questions and solve some of them within a week. It is now almost two years. None of the assurances that he made that day is addressed. Many of the BJP ministers are well known for false assurances and land grabbing.

    Reply
  4. Basavaraja Halli

    Suresh kuamar Rajiname ondu nataka. Rss na Aa yappa innestu situ nungiddano gottilla. innu Rss Patrakartaru ella channelgalalli tumbiruvaga suresh kuamara avarnnu rakshisalau mundagiruvadralli tappenilla.
    ellaru hesige moosidavare : basava kolli

    Reply

Leave a Reply to Basavaraja Halli Cancel reply

Your email address will not be published. Required fields are marked *