Daily Archives: June 24, 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-25)


– ಡಾ.ಎನ್.ಜಗದೀಶ್ ಕೊಪ್ಪ


1924ರ ಮೇ 16 ರಂದು ಜಿಮ್ ಕಾರ್ಬೆಟ್‌ನ ತಾಯಿ ಮೇರಿ ಕಾರ್ಬೆಟ್ ತೀರಿಕೊಂಡಾಗ ಇಡೀ ನೈನಿತಾಲ್ ಪಟ್ಟಣದಲ್ಲಿ ಆ ದಿನ ಶೋಕಾಚರಣೆಯನ್ನು ಆಚರಿಸಲಾಯಿತು. ಅಲ್ಲಿನ ಆಂಗ್ಲ ಸಮುದಾಯದಲ್ಲಿ ಅತ್ಯಂತ ಹಿರಿಯ ಹಾಗೂ ಗೌರವಾನ್ವಿತ ಮಹಿಳೆಯಾಗಿದ್ದ ಮೇರಿ ಕಾರ್ಬೆಟ್ ಎಲ್ಲರ ನೋವು, ನಲಿವುಗಳಿಗೆ ಸ್ಪಂದಿಸುವ ಹೃದಯವಂತ ಮಹಿಳೆಯಾಗಿದ್ದಳು. 1857ರ ಸಿಪಾಯಿ ದಂಗೆಯಲ್ಲಿ ತನ್ನ ಪತಿಯನ್ನು ಕಳೆದುಕೊಂಡು ತನ್ನ ಮೂವರು ಮಕ್ಕಳೊಂದಿಗೆ ಆಗ್ರಾ ಕೋಟೆಯನ್ನು ಹಾರಿ ಜೀವ ಉಳಿಸಿಕೊಳ್ಳುವ ಸಲುವಾಗಿ ನೈನಿತಾಲ್ ಸೇರಿದ ಈಕೆ, ನಂತರ ಕಾರ್ಬೆಟ್‌ನ ತಂದೆ ಕ್ರಿಷ್ಟೋಪರ್‌ನನ್ನು ಮರು ವಿವಾಹವಾಗಿ, ಕಾರ್ಬೆಟ್ ಕುಟುಂಬಕ್ಕೆ ಆಧಾರಸ್ಥಂಭವಾಗಿ ನಿಂತ ದಿಟ್ಟ ಮಹಿಳೆ ಮೇರಿ. ತನ್ನ ಬದುಕಿನುದ್ದಕ್ಕೂ ಎದುರಿಸಿದ ಹೋರಾಟಗಳು, ಸಂಕಷ್ಟಗಳ ಬಗ್ಗೆ ಪೂರ್ಣ ಅರಿವಿದ್ದ ಮೇರಿ ಸದಾ ಕುಟುಂಬದ ಭದ್ರತೆ ಮತ್ತು ಭವಿಷ್ಯದ ಜೀವನದ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಳು. ಆಕೆಯ ಇಂತಹ ದೃಢನಿರ್ಧಾರದಿಂದಾಗಿ ನೈನಿತಾಲ್ ಗಿರಿಧಾಮದಲ್ಲಿ ಕಾರ್ಬೆಟ್ ಕುಟುಂಬ ಪ್ರತಿಷ್ಟಿತ ಕುಟುಂಬವಾಗಿ ಬೆಳೆಯಲು ಸಾಧ್ಯವಾಯಿತು.

ಮೇರಿಯ ಸಾವು, ಕಾರ್ಬೆಟ್ ಹಾಗೂ ಅವಿವಾಹಿತರಾಗಿ ಉಳಿದುಹೋಗಿದ್ದ, ಸಹೋದರಿ ಮ್ಯಾಗಿ ಮತ್ತು ಮಲಸಹೋದರಿ ಡೊಯಲ್ ಪಾಲಿಗೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿತು. ವಯಸ್ಸಾಗಿದ್ದ ಮೇರಿಯ ಸಾವು ನಿರಿಕ್ಷೀತವಾದರೂ, 60 ವರ್ಷದ ಡೊಯಲ್, 50 ವಯಸ್ಸಿನ ಕಾರ್ಬೆಟ್ ಮತ್ತು 52 ವರ್ಷದ ಮ್ಯಾಗಿ ಇವರೆಲ್ಲರ ಪಾಲಿಗೆ ಆ ವಯಸ್ಸಿನಲ್ಲೂ ಅಕ್ಷರಶಃ ತಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಇವರೆಲ್ಲರೂ ಅವಿವಾಹಿತರಾಗಿ ಉಳಿದುಕೊಂಡ ಕಾರಣ, ಅವರ ಬೇಕು ಬೇಡಗಳನ್ನು ಪೂರೈಸುವ ಹೊಣೆಗಾರಿಕೆ ಮೇರಿಯದಾಗಿತ್ತು. ತನ್ನ ಇಬ್ಬರು ಹೆಣ್ಣು ಮಕ್ಕಳು ವಿವಾಹವಾಗದಿದ್ದರೂ, ವಿಚಲಿತಲಾಗದ, ಆಕೆ ಅವರನ್ನು ಎಂದಿಗೂ ಅನೈತಿಕತೆಯ ಹಾದಿ ತುಳಿಯದಂತೆ ಎಚ್ಚರ ವಹಿಸಿ ಘನತೆಯಿಂದ ಬೆಳೆಸಿದ್ದಳು.

ತಾಯಿಯ ನಿಧನಾನಂತರ ನಿಧಾನವಾಗಿ ಚೇತರಿಸಿಕೊಂಡ ಕಾರ್ಬೆಟ್ ತಾನು ತನ್ನ ಕೆಲವು ಸೇವಕರೊಂದಿಗೆ ಮೌಂಟ್ ಪ್ಲೆಸೆಂಟ್ ಮೌಂಟೆನ್ ಎಂಬ ತಮ್ಮ ಕುಟುಂಬದ ಇನ್ನೊಂದು ಮನೆಯಲ್ಲಿ ವಾಸಿಸತೊಡಗಿದ. ತನ್ನಿಬ್ಬರು ಸಹೋದರಿಯರು ಗಾರ್ನಿ ಹೌಸ್ ಬಂಗಲೆಯಲ್ಲಿ ವಾಸಿಸತೊಡಗಿದರು. ಈ ನಡುವೆ ಕಾರ್ಬೆಟ್‌ಗೆ ತಾಯಿ ನಿಧನವಾದ ಒಂದು ತಿಂಗಳ ನಂತರ ವೈವಾಹಿಕ ಜೀವನದ ಬಗ್ಗೆ ಆಸಕ್ತಿ ಮೂಡತೊಡಗಿತು. ಅಕಸ್ಮಾತ್ತಾಗಿ ಅವನ ಎದೆಯೊಳೆಗೆ ಪ್ರೀತಿ ಮೊಳಕೆಯೊಡೆದು, ಅದು ಚಿಗುರುವ ಮುನ್ನವೇ ಬಾಡಿಹೋಯಿತು. ನಂತರ ಈ ಘಟನೆ ದುರಂತದಲ್ಲಿ ಅಂತ್ಯ ಕಂಡಿತು.

ಐವತ್ತು ವಯಸ್ಸಿನ ಕಾರ್ಬೆಟ್‌ಗೆ ಆ ಕಾಲದಲ್ಲಿ ವಿವಾಹವಾಗುವುದು ಕಷ್ಟದ ಸಂಗತಿಯಾಗಿರಲಿಲ್ಲ. ಬ್ರಿಟಿಷ್ ಆಳ್ವಿಕೆಯ ಆ ಸಮಯದಲ್ಲಿ ಉತ್ತರ ಭಾರತದಲ್ಲಿ ವಾಸವಾಗಿದ್ದ ಬಹುತೇಕ ಆಂಗ್ಲ ಸಮುದಾಯದ ವಿಧವೆಯರೂ, ವಿಧುರರು ಮರು ವಿವಾಹವಾಗುತ್ತಿದ್ದುದು ಸಾಮಾನ್ಯವಾಗಿತ್ತು. ವಾಸ್ತವವಾಗಿ ಕಾರ್ಬೆಟ್ ತಾಯಿ ಮೇರಿ ಕೂಡ ತನ್ನ ಮೊದಲ ಪತಿಯಿಂದ ಪಡೆದಿದ್ದ ಮೂರು ಮಕ್ಕಳ ಜೊತೆ ಕಾರ್ಬೆಟ್‌ನ ತಂದೆ ಕ್ರಿಷ್ಟೋಪರ್‌ನನ್ನು ಮದುವೆಯಾಗಿದ್ದಳು. ಕಾರ್ಬೆಟ್‌ಗೆ ಇಂತಹ ಅನೇಕ ಆಹ್ವಾನಗಳು ಬಂದರೂ ಕೂಡ ಅವನು ತಿರಸ್ಕರಿಸುತ್ತಾ ಬಂದಿದ್ದ.

ತನ್ನ ತಾಯಿಯ ಸಾವಿನ ನಂತರ ಒಂದು ತಿಂಗಳಲ್ಲೇ 19ರ ಹೆಲನ್ ಎಂಬ ಯುವತಿಯ ಮೋಹಕ್ಕೆ ಒಳಗಾಗಿ ಅವಳನ್ನು ಅಪಾರವಾಗಿ ಪ್ರೀತಿಸತೊಡಗಿದ. ಈಕೆ, ಕಾರ್ಬೆಟ್ ಸ್ನೇಹಿತನಾಗಿದ್ದ ಅರಣ್ಯಾಧಿಕಾರಿಯೊಬ್ಬನ ಹೆಂಡತಿಯ ತಂಗಿಯಾಗಿದ್ದಳು. ಹೆಲನ್ ಇಂಗ್ಲೆಂಡ್‌ನಿಂದ ತನ್ನ ತಂದೆ ತಾಯಿಯ ಜೊತೆ ಪ್ರವಾಸಕ್ಕಾಗಿ ಭಾರತಕ್ಕೆ ಬಂದಾಗ ನೈನಿತಾಲ್ ಗಿರಿಧಾಮದಲ್ಲಿದ್ದ ಅಕ್ಕನ ಮನೆಯಲ್ಲಿ ಕಾರ್ಬೆಟ್‌ನ ಪರಿಚಯ ಬೆಳೆಯಿತು. ನಂತರ ಅವನ ಜೊತೆ ಕಾಡು ಅಲೆಯುವುದು, ಮೀನು ಶಿಕಾರಿಮಾಡುವುದು, ಸಂಜೆ ವೇಳೆ, ಕ್ಲಬ್‌ನಲ್ಲಿ ಟೆನ್ನೀಸ್ ಕ್ರೀಡೆ ಹೀಗೆ ಮೂರು ತಿಂಗಳ ಇವರಿಬ್ಬರ ಒಡನಾಟ ನಿರಂತರ ಮುಂದುವರಿಯಿತು. ಹೆಲನ್‌ಳ ನಡೆ ನುಡಿಯಿಂದ ಆಕರ್ಷಿತನಾದ ಕಾರ್ಬೆಟ್‌ಗೆ ಈಕೆ ನನಗೆ ಸಂಗಾತಿಯಾಗಲು ಸೂಕ್ತ ಹೆಣ್ಣು ಮಗಳು ಎಂದು ಅನಿಸತೊಡಗಿತು. ಹೆಲೆನ್ ಕೂಡ. ಜಿಮ್ ಕಾರ್ಬೆಟ್‌ಗಿದ್ದ ಅಭಿರುಚಿ, ನೈನಿತಾಲ್ ಪಟ್ಟಣದಲ್ಲಿ ಅವನಿಗಿದ್ದ ಗೌರವ ಇವೆಲ್ಲವನ್ನು ಗಮನಿಸಿದ್ದ ಹೆಲನ್ ಮಾನಸಿಕವಾಗಿ ಅವನನ್ನು ಸ್ವೀಕರಿಸಲು ತಯಾರಿದ್ದಳು. ನೈನಿತಾಲ್‌ನ ಜನತೆ ಸಹ ಇವರಿಬ್ಬರ ಗೆಳೆತನ, ತಿರುಗಾಟ ಎಲ್ಲವನ್ನು ಗಮನಿಸಿ, ಅಂತಿಮವಾಗಿ ಜಿಮ್ ಕಾರ್ಬೆಟ್‌ಗೆ ಒಬ್ಬ ಸಂಗಾತಿ ಸಿಕ್ಕಳು ಎಂದು ಮಾತನಾಡಿಕೊಂಡರು. ಆದರೆ ಅವರೆಲ್ಲರ ನಿರೀಕ್ಷೆ ಹುಸಿಯಾಯಿತು. ಒಂದು ದಿನ ಕಾರ್ಬೆಟ್ ತನ್ನ ಗೆಳೆಯರ ಮೂಲಕ ಹೆಲನ್‌ಳನ್ನು ಮದುವೆಯಾಗುವ ಪ್ರಸ್ತಾಪವನ್ನು ಆಕೆಯ ತಂದೆ ತಾಯಿಗಳ ಮುಂದಿಟ್ಟ. ಆದರೆ, ವಯಸ್ಸಿನ ಕಾರಣಕ್ಕಾಗಿ ನೇರವಾಗಿ ಅವನ ಪ್ರಸ್ತಾಪವನ್ನು ತಿರಸ್ಕರಿಸಿದ ಆಕೆಯ ಪೋಷಕರು ಹೆಲನ್ ಜೊತೆ ಇಂಗ್ಲೆಂಡ್‌ಗೆ ತಕ್ಷಣವೇ ಹಿಂತಿರುಗಿಬಿಟ್ಟರು.

ಈ ಘಟನೆ ಮಾನಸಿಕವಾಗಿ ಕಾರ್ಬೆಟ್‌ನನ್ನು ತೀವ್ರ ಅಘಾತಕ್ಕೊಳಪಡಿಸಿತು. ಇದರಿಂದಾಗಿ ಅವನು ಹಲವು ತಿಂಗಳು ಕಾಲ ಮೌನಿಯಾಗಿಬಿಟ್ಟ. ನೋವನ್ನು ಮರೆಯಲು. ತಾಂಜೇನಿಯಾದ ಕೃಷಿತೋಟಕ್ಕೆ ತೆರಳಿ ಸ್ವಲ್ಪದಿನ ಇದ್ದು, ಆಫ್ರಿಕಾದ ಕಾಡುಗಳಲ್ಲಿ ಗೆಳೆಯರ ಜೊತೆ ಶಿಕಾರಿಯಲ್ಲಿ ತೊಡಗಿಕೊಂಡ. ಆದರೂ ಹೆಲನ್‌ಳನ್ನು ಮರೆಯಲು ಅವನಿಂದ ಸಾಧ್ಯವಾಗಲಿಲ್ಲ. ಅದೇ ವೇಳೆಗೆ ತಾಂಜೇನಿಯ ಕೃಷಿ ಪಾರ್ಮ್‌ಗೆ ಅವನ ಪಾಲುದಾರನಾಗಿದ್ದ ವಿಂದಮ್ ಕಿನ್ಯಾ ತ್ಯಜಿಸಿ, ಇಂಗ್ಲೆಂಡಿನ ತನ್ನ ಪೂರ್ವಿಕರ ಮನೆಯಲ್ಲಿ ನೆಲೆಸಿದ್ದ. ಅಂತಿಮವಾಗಿ ಹೆಲನ್ ಮುಂದೆ ತನ್ನ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ಕಾರ್ಬೆಟ್ ನೇರವಾಗಿ ಇಂಗ್ಲೇಂಡ್‌ಗೆ ತೆರಳಿದ. ವಿಂದಮ್ ಮನೆಯಲ್ಲಿದ್ದುಕೊಂಡು ಆಕೆಯನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ, ಅವನಿಗೊಂದು ಅಘಾತಕಾರಿ ಸುದ್ಧಿಯೊಂದು ಕಾದಿತ್ತು. ಎಡಿನ್‌ಬರೊ ನಗರದಲ್ಲಿ ವಾಸವಾಗಿದ್ದ ಹೆಲನ್‌ಗೆ ಆಕೆಯ ಕುಟುಂಬದವರು ವಿವಾಹ ನಿಶ್ಚಯ ಮಾಡಿ, ಸಿದ್ಧತೆಯಲ್ಲಿ ತೊಡಗಿರುವುದನ್ನು ಕಂಡು ನಿರಾಶನಾದ ಕಾರ್ಬೆಟ್, ವಾಪಸ್ ಭಾರತಕ್ಕೆ ಹಿಂತಿರುಗಿದ. ಈ ಘಟನೆಯ ನಂತರ ವಿವಾಹವಾಗುವ ವಿಚಾರವನ್ನು ಶಾಶ್ವತವಾಗಿ ಕಾರ್ಬೆಟ್ ತನ್ನ ಮನಸಿನಿಂದ ತೆಗೆದುಹಾಕಿಬಿಟ್ಟ. ಪ್ರಾಣಿ, ಪಕ್ಷಿ, ಪರಿಸರ, ಮತ್ತು ಈ ನೆಲದ ಸಂಸ್ಕೃತಿಯ ಎಳೆಯ ಮಕ್ಕಳು ಅವನ ಆರಾಧನೆಯ ಕೇಂದ್ರ ಬಿಂದುವಾದರು. ಯಾರಾದರೂ ವಿವಾಹವಾಗುವ ಪ್ರಸ್ತಾಪವನ್ನು ಕಾರ್ಬೆಟ್ ಮುಂದಿಟ್ಟರೆ, ಭಾರತವೇ ನನ್ನ ಪತ್ನಿ, ಇಲ್ಲಿನ ಈ ಮಕ್ಕಳು ನನ್ನ ಮಕ್ಕಳು ಎನ್ನುವುದರ ಮೂಲಕ ಆಹ್ವಾನವನ್ನು ನಿರಾಕರಿಸುತ್ತಿದ್ದ.

ಜಗತ್ತಿನ ಯಾವುದೇ ಧರ್ಮ, ಪುರಾಣಗಳು, ಅಥವಾ ವೇದ ಉಪನಿಷತ್ತುಗಳು ಏನೇ ಹೇಳಲಿ, ಲೌಕಿಕ ಜಗತ್ತಿನ ಮನುಷ್ಯನೊಬ್ಬ ಹಸಿವು, ಮತ್ತು ಕಾಮವನ್ನು ಗೆಲ್ಲುವುದು ಸಾಮಾನ್ಯ ಸಂಗತಿಯೇನಲ್ಲ. ಈ ಕಾರಣಕ್ಕಾಗಿ ಏನೊ? ನಮ್ಮ ಋಷಿಪುಂಗವರು ಅಂತಹ ಸಾಹಸ ಮಾಡಲಾರದೆ, ಪತ್ನಿಯರೊಡನೆ ಕಾಡಿನ ಆಶ್ರಮದಲ್ಲಿ ವಾಸವಾಗಿಬಿಟ್ಟರು. ಕಾರ್ಬೆಟ್‌ಗೆ ವಿಷಯದಲ್ಲೂ ಇಂತಹದ್ದೇ ಅನುಮಾನಗಳು ಕಂಡು ಬರುತ್ತವೆ ಆದರೆ, ಯಾವುದೇ ನಿಖರ ದಾಖಲೆಗಳು ಸಿಗುತ್ತಿಲ್ಲ. ರುದ್ರ ಪ್ರಯಾಗ ಪ್ರಾಂತ್ಯಕ್ಕೆ ಜಿಲ್ಲಾಧಿಕಾರಿಯಾಗಿ ಬಂದಿದ್ದ ಇಬ್ಸ್‌ಟನ್ ಪತ್ನಿ ಜೀನ್ ಜೊತೆ ಕಾರ್ಬೆಟ್‌ಗೆ ಸಂಬಂಧವಿತ್ತು ಎಂಬ ಅನುಮಾನಗಳು ಚರಿತ್ರೆಯಲ್ಲಿ ದಾಖಲಾಗಿವೆ. ಇಬ್ಸ್‌ಟನ್ ಕಾರ್ಯನಿಮಿತ್ತ ವಾರಗಟ್ಟಲೆ ಮನೆಯಿಂದ ಹೊರಗಿರುತ್ತಿದ್ದ ಸಮಯದಲ್ಲಿ ಜೀನ್, ದಿನಗಟ್ಟಲೆ ಹಗಲು ರಾತ್ರಿ ಎನ್ನದೆ ಕಾಡಿನಲ್ಲಿ ಶಿಕಾರಿಯ ನೆಪದಲ್ಲಿ ಕಾರ್ಬೆಟ್ ಜೊತೆ ಕಾಲ ಕಳೆಯುತ್ತಿದ್ದಳು. ಅವರಿಬ್ಬರ ನಡುವೆ ಗುಪ್ತವಾಗಿ ಪತ್ರ ವ್ಯವಹಾರ ಕೂಡ ನಡೆಯುತಿತ್ತು. ಆದರೆ, ಇವರಿಬ್ಬರ ಈ ಸಂಬಂಧ ಕೇವಲ ಭಾವನಾತ್ಮಕ ಸಂಬಂಧವೆ? ಅಥವಾ ಅದನ್ನೂ ಮೀರಿದ ದೈಹಿಕ ಆಕರ್ಷಣೆಯೆ? ಎಂಬುದರ ಬಗ್ಗೆ ಯಾವ ನಿಖರ ದಾಖಲೆಯೂ ಇಲ್ಲ. ಒಟ್ಟಾರೆ, ತನ್ನ ಪ್ರೀತಿಯ ವಿಫಲತೆಯ ನಂತರ ಕಾರ್ಬೆಟ್ ಪರಿಸರದತ್ತ ಮುಖ ಮಾಡಿ ಅದರ ರಕ್ಷಣೆಗೆ ಮುಂದಾದ. ಈವರೆಗೆ ಬಂದೂಕ ಹಿಡಿದು ಕಾಡು ಅಲೆಯುತ್ತಿದ್ದ ಕಾರ್ಬೆಟ್, ನಂತರದ ದಿನಗಳಲ್ಲಿ ಕ್ಯಾಮರಾ ಹಿಡಿದು ಕಾಡು ಅಲೆಯ ತೊಡಗಿದ.

1092 ಮತ್ತು 30 ರ ದಶಕದಲ್ಲಿ ಭಾರತದಲ್ಲಿ ಛಾಯಾಚಿತ್ರವಾಗಲಿ, ಅದರ ಬಳಕೆಯಾಗಲಿ ಹೇಳಿಕೊಳ್ಳುವಂತಹ ಪ್ರಸಿದ್ಧಿಗೆ ಬಂದಿರಲಿಲ್ಲ. ಕ್ಯಾಮರಾ ಕೂಡ ಜನಸಾಮಾನ್ಯರಿಗೆ ನಿಲುಕುತ್ತಿರಲಿಲ್ಲ. ಆದರೆ, ಕಾರ್ಬೆಟ್ ಕೊಲ್ಕತ್ತ ನಗರಕ್ಕೆ ತೆರಳಿ ಒಂದು ಸ್ಥಿರ ಚಿತ್ರ ತೆಗೆಯ ಬಹುದಾದ ಕ್ಯಾಮರಾ ಮತ್ತು 16 ಎಂ.ಎಂ.ನ ಚಲನಚಿತ್ರ ತೆಗೆಯಬಹುದಾದ ಕ್ಯಾಮರಾ ಮತ್ತು ಅವುಗಳಿಗೆ ಬೇಕಾದ ಕಪ್ಪು ಬಿಳುಪಿನ ಕಚ್ಛಾ ಫಿಲಂಗಳನ್ನು ಕೊಂಡುತಂದ. ಅಂದಿನ ದಿನಗಳಲ್ಲಿ ಬಳಕೆಯಲ್ಲಿದ್ದ  ಕ್ಯಾಮರಾಗಳಲ್ಲಿ ಜೂಂ ಲೆನ್ಸ್, ಆಗಲಿ, ಕ್ಲೋಸ್ ಅಪ್ ಚಿತ್ರ ತೆಗೆಯಬಹುದಾದ ಲೆನ್ಸ್‌ಗಳಾಗಲಿ ಇರುತ್ತಿರಲಿಲ್ಲ. ಯಾವುದೇ ಪ್ರಾಣಿಗಳ ಚಿತ್ರವನ್ನು ಹತ್ತಿರದಿಂದ ತೆಗೆಯಬೇಕಾದರೆ, ಪ್ರಾಣಿಗಳ ಹತ್ತಿರವೇ ನಿಂತು ತೆಗೆಯಬೇಕಾಗಿತ್ತು. ಹಾಗಾಗಿ ವನ್ಯಮೃಗ ಛಾಯಾಚಿತ್ರಣ ಎಂಬುದು ಅಪಾಯಕಾರಿ ಹವ್ಯಾಸವಾಗಿತ್ತು. ಅರಣ್ಯವನ್ನು, ಅಲ್ಲಿನ ಪ್ರಾಣಿಗಳ ಚಲನವಲನಗಳನ್ನು ಚೆನ್ನಾಗಿ ಅರಿತ್ತಿದ್ದ ಕಾರ್ಬೆಟ್, ನೀರಿನ ತಾಣವಿರುವ ಪ್ರದೇಶದಲ್ಲಿ ಪೊದೆಯ ಹಿಂದೆ ಅಡಗಿ ಪ್ರಾಣಿಗಳ ಚಿತ್ರಗಳನ್ನು ತೆಗೆಯುತ್ತಿದ್ದ. ಅಪಾಯಕಾರಿ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆಗಳ ಚಿತ್ರಗಳನ್ನು ತೆಗೆಯಲು ಕೆಲವೊಮ್ಮೆ ಆನೆಗಳ ಮೇಲೆ ಸವಾರಿ ಹೋಗಿ ಹತ್ತಿರದಿಂದ ತೆಗೆಯುವ ಹವ್ಯಾಸ ಬೆಳಸಿಕೊಂಡಿದ್ದ.

ಕೇವಲ ಐದಾರು ವರ್ಷಗಳಲ್ಲಿ ಬಗೆ ಬಗೆಯ ಪಕ್ಷಿಗಳು, ಪತಂಗ, ಜಿಂಕೆ, ನವಿಲು, ಸೇರಿದಂತೆ ಹುಲಿ, ಚಿರತೆ, ಸಿಂಹಗಳ ಸಾವಿರಾರು ಚಿತ್ರಗಳನ್ನು ತೆಗೆದು ದಾಖಲಿಸಿದ್ದ. ಅದೇ ರೀತಿ ಸಾವಿರಾರು ಅಡಿ ಉದ್ದದ 16 ಎಂ.ಎಂ. ನ ಚಿತ್ರೀಕರಣವನ್ನು ಮಾಡಿದ್ದ. (ಈ ಅಪರೂಪಪದ ಚಿತ್ರಗಳು ಈಗ ಲಂಡನ್ನಿನ ಬಿ.ಬಿ.ಸಿ. ಛಾನಲ್ ಸಂಗ್ರಹದಲ್ಲಿವೆ). ಚಿತ್ರಗಳ ಜೊತೆ ಜೊತೆಯಲ್ಲಿ ಪ್ರಾಣಿ ಪಕ್ಷಿಗಳ ಬದುಕನ್ನು ಸಂಗ್ರಹಿಸಿ, ಇವುಗಳ ಬಗ್ಗೆ ಕಾಲೇಜಿನಲ್ಲಿ, ಕ್ಲಬ್ಬುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ವಿದ್ಯಾರ್ಥಿ ಮತ್ತು ಜನಸಾಮಾನ್ಯರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಕಾರ್ಬೆಟ್ ರೂಢಿಸಿಕೊಂಡ. ಅತ್ಯಂತ ಹುರುಪಿನಿಂದ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕಾರ್ಬೆಟ್. ತನ್ನ ಈ ಹೊಸ ಪ್ರವೃತ್ತಿಯಿಂದಾಗಿ ನಂತರದ ದಿನಗಳಲ್ಲಿ ಅಂದರೇ, 1932ರ ವೇಳೆಗೆ ಜಗತ್ ಪ್ರಸಿದ್ದ ಅರಣ್ಯ ಸಂರಕ್ಷಕನಾಗಿ ಪ್ರಖ್ಯಾತಿ ಹೊಂದಿದ.

                                                (ಮುಂದುವರಿಯುವುದು)