Daily Archives: June 26, 2012

“ಪ್ರಾಮಾಣಿಕ” ಸುರೇಶ್ ಕುಮಾರರೇ, ‘ತನಿಖೆ’ಗೂ, ‘ಕಾನೂನು ಸಲಹೆ’ಗೂ ವ್ಯತ್ಯಾಸವಿಲ್ಲವೆ?

 – ಶಿವರಾಮ್ ಕೆಳಗೋಟೆ

“ಎರಡು ವರ್ಷಕ್ಕೊಮ್ಮೆ ಒಂದು ಜೊತೆ ಚಪ್ಪಲಿ ಖರೀದಿಸುತ್ತಾರಂತೆ, ಅವರು ಮಂತ್ರಿ ಆಗಿದ್ದರೂ ಅವರ ಪತ್ನಿ ಸಾಮಾನ್ಯ ಪತ್ರಕರ್ತೆಯಾಗಿ ಕೆಲಸ ಮಾಡ್ತಾರಂತೆ, ಅವರ ಮಗಳು ಇವತ್ತಿಗೂ ಬಸ್ ನಲ್ಲೇ ಓಡಾಡ್ತರಂತೆ.”

ಇದಪ್ಪ ಸರಳತೆಯ ಹೊಸ ವ್ಯಾಖ್ಯಾನ. ಸದ್ಯ ಅವರ ಬಳಿ ಎಷ್ಟು ಒಳ ಉಡುಪುಗಳಿವೆ, ಎಷ್ಟು ದಿನಕ್ಕೊಮ್ಮೆ ಹೊಸ ಒಳ ಉಡುಪು ಖರೀದಿಸುತ್ತಾರೆ ಅನ್ನೋದನ್ನ ಈ ಸೋಕಾಲ್ಡ್ ಪ್ರಾಮಾಣಿಕ ಸಚಿವರ ಪಟಾಲಂ ಹೇಳಿಲ್ಲ. ಇವರು ವ್ಯಾಖ್ಯಾನಿಸುವ ಸರಳತೆ ಬಗ್ಗೆ ಒಂದು ಸಿಂಪಲ್ ಪ್ರಶ್ನೆ – ನಾಲ್ಕು ಸದಸ್ಯರ ಒಂದು ಕುಟುಂಬಕ್ಕೆ ಮೂರು ನಿವೇಶನ ಪಡೆಯೋದು ಯಾವ ಸರಳತೆ?

ಕೆಲವರು ಅವರ ದುಡ್ಡು, ಅವರ ಹೂಡಿಕೆ, ನೀವ್ಯಾಕೆ ಪ್ರಶ್ನಿಸುತ್ತೀರಿ ಎನ್ನಬಹುದು, ಆದರೆ, ಎರಡು ವರ್ಷಕ್ಕೊಮ್ಮೆ ಹೊಸ ಚಪ್ಪಲಿ ಖರೀದಿಸುತ್ತಾರೆ ಎಂದು ಹೇಳಿ ಅವರನ್ನು ಸರಳ ಜೀವಿ ಎಂದು ಬಿಂಬಿಸುವವರಿಗೆ, ಈ ಆಡಂಬರ ಮತ್ತು ಆ ವ್ಯವಸ್ಥೆಗಾಗಿ ಈ ನೆಲದ ಕಾನೂನನ್ನು ಮರೆಮಾಚುವುದು ಎಷ್ಟು ಸರಿ?

ಮಂತ್ರಿ ಸುರೇಶ್ ಕುಮಾರ್ ತಮ್ಮ ಸಮರ್ಥನೆಯಲ್ಲಿ ಪದೇ ಪದೇ ಹೇಳುತ್ತಿರುವ ಒಂದು ಮಾತು ತಾವು ಬಿಡಿಎಗೆ ಅಫಿಡವಿಟ್ಟು ಸಲ್ಲಿಸುವ ದಿನದಂದು ತಮ್ಮ ಬಳಿ ಬೇರಾವ ಆಸ್ತಿಯೂ ಇರಲಿಲ್ಲ. ನಿಜ. ಒಪ್ಪಿಕೊಳ್ಳೋಣ. ಆದರೆ ಮಂಜೂರಾದ ನಿವೇಶನ ನಿಮ್ಮ ಹೆಸರಿಗೆ ರಿಜಿಸ್ಟರ್ ಆಗುವ ಹೊತ್ತಿಗೆ ನಿಮ್ಮ ಬಳಿ ಮೂರು ನಿವೇಶನಗಳಿದ್ದವು ಅಲ್ಲವೇ, ಸಚಿವರೇ? ನಿಮ್ಮ ಆತ್ಮಸಾಕ್ಷಿಯನ್ನು ಎಲ್ಲಿ ಅಡ ಇಟ್ಟಿದ್ದಿರಿ? ನೀವು ಮೂಲತಃ ನಿವೇಶನ ಕೇಳಿದ್ದು ತಮ್ಮ ತಾಯಿ ಒಡೆತನದ ಮನೆಯನ್ನು ರಸ್ತೆ ಅಗಲೀಕರಣ ಕಾರಣಕ್ಕೆ ಒಡೆಯಬೇಕಿದೆ ಎಂಬ ಕಾರಣಕ್ಕೆ. ಆ ಮನೆ ನಿಮಗೆ ಹಿಂತಿರುಗಿ ಬಂದಾಗ, ನಿಮ್ಮ ಪ್ರಾಮಾಣಿಕತೆ, ಆತ್ಮಸಾಕ್ಷಿ, ಸರಳತೆ.. ಎಲ್ಲವನ್ನೂ ಮಾರಿಕೊಂಡಿದ್ದಿರಾ?

ಅಷ್ಟೇ ಅಲ್ಲ, ನೆಲಮಂಗಲ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿಮ್ಮ ತಾಯಿ ಮತ್ತು ಮಗಳು ಇಬ್ಬರಿಗೂ ನಿವೇಶನ ಮಂಜೂರಾಗುತ್ತದೆ. ಚುನಾವಣಾ ಆಯೋಗ ಮತ್ತು ಲೋಕಾಯುಕ್ತರಿಗೆ ಸಲ್ಲಿಸಿರುವ ತಮ್ಮ ದಾಖಲೆಗಳ ಪ್ರಕಾರ ತಾಯಿ ಮತ್ತು ಮಗಳು ಇಬ್ಬರೂ ನಿಮ್ಮ ‘ಅವಲಂಬಿತರು’, ಅರ್ಥಾತ್ ನಿಮ್ಮ ಕುಟುಂಬ ಸದಸ್ಯರು. ಒಂದು ಹೌಸಿಂಗ್ ಕೋಆಪರೇಟಿವ್ ಸೊಸೈಟಿಯಿಂದ ಒಂದೇ ಕುಟುಂಬದ ಇಬ್ಬರಿಗೆ ನಿವೇಶನ ಮಂಜೂರು ಮಾಡುವಂತಿಲ್ಲ. ಹಾಗಾದರೆ ನಿಮ್ಮ ಪ್ರಭಾವದ ಕಾರಣ ನಿಮ್ಮ ಕುಟುಂಬಕ್ಕೆ ಎರಡು ನಿವೇಶನಗಳು ಮಂಜೂರಾಯಿತೆ? ಕಾನೂನು ಸಚಿವರೆ, ನಿಮ್ಮಂತಹ ಬುದ್ಧಿವಂತ, ಜಾಣ, ಪ್ರಾಮಾಣಿಕ ಮಂತ್ರಿಗೆ ಇವೆಲ್ಲಾ ಸೂಕ್ಷ್ಮಗಳು ಅರ್ಥವಾಗಲಿಲ್ಲವೇ?

ಇಂದು ನೀವು ರಾಜೀನಾಮೆ ಹಿಂಪಡೆಯುವುದು ನಿರೀಕ್ಷಿತ. ನೀವು ಮುಖ್ಯಮಂತ್ರಿಯವರಿಗೆ ರಾಜೀನಾಮೆ ಸಲ್ಲಿಸಿ, ತಮ್ಮ ವಿರುದ್ಧ ಬಂದಿರುವ ಆರೋಪಗಳ ಬಗ್ಗೆ ತನಿಖೆಯಾಗಲಿ, ತನಿಖೆಯಲ್ಲಿ ತಾವು ‘ಮುಗ್ಧರು’ ಎಂದು ಸಾಬೀತಾಗುವವರೆಗೂ ಮಂತ್ರಿ ಪದವಿ ಬೇಡ ಎಂದಿದ್ದೀರಿ. ನಿಮ್ಮ ಮುಖ್ಯಮಂತ್ರಿ ಅಡ್ವೊಕೇಟ್ ಜನರಲ್ ರಿಂದ ‘ಕಾನೂನು ಸಲಹೆ’ ಕೇಳಿ ವರದಿ ತರಿಸಿಕೊಂಡಿದ್ದಾರೆ. ತಲೆಯಲ್ಲಿ ಲದ್ದಿ ತುಂಬಿಕೊಂಡಿರುವ ಅಥವಾ ಪೂರ್ವಗ್ರಹ ಪೀಡಿತ ಕೆಲ ಪತ್ರಕರ್ತರು ಈ ಪ್ರಕ್ರಿಯೆಯನ್ನೇ ‘ನಿಮ್ಮ ಆರೋಪಗಳ ಬಗ್ಗೆ ನಡೆಯುತ್ತಿರುವ ತನಿಖೆ’ ಎಂದು ಬಿಂಬಿಸುತ್ತಿದ್ದಾರೆ. ಕಾನೂನು ಮಂತ್ರಿ ವಿರುದ್ಧ ಬಂದಿರುವ ಆರೋಪಗಳನ್ನು ತನಿಖೆ ಮಾಡಲು ಅಡ್ವೊಕೇಟ್ ಜನರಲ್ ಗೆ ಯಾವುದೇ ಅರ್ಹತೆ ಇಲ್ಲ ಎಂಬ ಸಣ್ಣ ಮಾಹಿತಿಯೂ ಮಾಧ್ಯಮದ ಕೆಲವರಿಗೆ ಗೊತ್ತಿಲ್ಲ. ಮೇಲಾಗಿ, ಅಡ್ವೊಕೇಟ್ ಜನರಲ್ (ಎಜಿ) ಸರಕಾರದ ಪರವಾಗಿ ನ್ಯಾಯಾಲಯಗಳಲ್ಲಿ ವಾದ ಮಂಡಿಸುವ ವಕೀಲ ಅಷ್ಟೆ, ಅವರದು ತನಿಖೆ ಸಂಸ್ಥೆಯಲ್ಲ.

ಇದೇ ವರದಿಯನ್ನು ಆಧಾರವಾಗಿಟ್ಟುಕೊಂಡು ಮುಖ್ಯಮಂತ್ರಿ ನಿಮ್ಮನ್ನು ರಾಜೀನಾಮೆ ವಾಪಾಸ್ ಪಡೆಯಿರಿ ಎಂದು ಮನವಿ ಮಾಡಿದ್ದಾರೆ ಎಂದು ಮಾಧ್ಯಮದಲ್ಲಿ ಬಿತ್ತರವಾಗುತ್ತಿದೆ. ನೀವು ಒಪ್ಪಿಕೊಂಡರೆ ನಿಮ್ಮ ಬಗ್ಗೆ ಮತ್ತಷ್ಟು ಸಂಶಯಗಳು ಏಳುತ್ತವೆ. ಕಾರಣ ನೀವು ಬಯಸಿದಂತೆ ‘ಇದು ತನಿಖೆಯಲ್ಲ’. ಆ ಕಾರಣ ನೀವು ಇನ್ನೂ ‘ಮುಗ್ಧರಾಗಿ’ ಹೊರಬಂದಿಲ್ಲ. ಇಡೀ ಪ್ರಕರಣ ಒಂದು ಕಣ್ಣೊರೆಸುವ ತಂತ್ರವೆನ್ನುವುದು ವೇದ್ಯವಾಗುತ್ತದೆ. ಅಡ್ವೊಕೆಟ್ ಜನರಲ್ ನೀಡುವ ವರದಿಗಳೆಲ್ಲಾ ಸತ್ಯ, ನಿಷ್ಟಕ್ಷಪಾತ, ಕಾನೂನು ಆಧಾರಿತ ಆಗಿದ್ದೇ ಆದರೆ, ಸರಕಾರ ನ್ಯಾಯಾಲಯಗಳಲ್ಲಿ ಯಾವ ಪ್ರಕರಣದಲ್ಲೂ ಸೋಲಬಾರದಿತ್ತಲ್ಲ.

ಇದೇ ಎಜಿಗಳು ಹಿಂದೆ ಆರೋಪ ಎದುರಿಸುತ್ತಿದ್ದ ವ್ಯಕ್ತಿ ಮುಖ್ಯಮಂತ್ರಿ ಪದವಿಯಲ್ಲಿದ್ದಾಗ ಅವರನ್ನೂ ಸಮರ್ಥಿಸಿಕೊಂಡಿದ್ದಾರೆ. ಸರಕಾರಕ್ಕೆ ಬಹುಮತ ಸಾಬೀತು ಪಡಿಸಲು ಅನುಕೂಲವಾಗುವಂತೆ ಏಕಾಏಕಿ ಸದಸ್ಯರನ್ನು ಅನರ್ಹ ಮಾಡಿದ್ದ ವಿಧಾನಸಭಾ ಅಧ್ಯಕ್ಷರನ್ನೂ ಸಮರ್ಥಿಸಿಕೊಂಡಿದ್ದಾರೆ. ಅದೇ ಮುಖ್ಯಮಂತ್ರಿ ಮುಂದೆ ಪದವಿ ಕಳೆದುಕೊಳ್ಳಬೇಕಾಗಿ ಆರೋಪಿ ಪಟ್ಟ ಹೊರಬೇಕಾಯಿತು. ವಿಧಾನಸಭಾ ಅಧ್ಯಕ್ಷರ ಕ್ರಮವನ್ನು ಸುಪ್ರೀಂಕೋರ್ಟ್ ತೀಕ್ಷ್ಣವಾಗಿ ಟೀಕಿಸಿತು. (ನೀವು ಕಾನೂನು ಮಂತ್ರಿಯಾಗಿ ಇವರಿಬ್ಬರನ್ನೂ ಸಮರ್ಥಿಸಿಕೊಂಡೇ ಬಂದಿರಿ.) ಅಂತಹ ಹುದ್ದೆಯಲ್ಲಿರುವವರಿಂದ ನಿಮಗೆ ಸಮರ್ಥನೆ ಬೇಕಾ?

ನಿಮಗೆ ಮಂತ್ರಿಯಾಗಿ ಮುಂದುವರಿಯಲು ಆಸಕ್ತಿ ಇದ್ದರೆ, ರಾಜೀನಾಮೆ ಹಿಂಪಡೆಯಿರಿ. ಆದರೆ ‘ನಾನು ತನಿಖೆಯಿಂದ ನಿರಪರಾಧಿ ಎಂದು ಸಾಬೀತಾಗಿದ್ದೇನೆ, ಹಾಗಾಗಿ ರಾಜೀನಾಮೆ ಪಡೆಯುತ್ತೇನೆ’ ಎಂದು ಘೋಷಿಸಬೇಡಿ. ಆ ಮೂಲಕ ಜನರನ್ನು ಮತ್ತಷ್ಟು ಮೂರ್ಖರನ್ನಾಗಿಸುವ ಯತ್ನಬೇಡ.