“ಪ್ರಾಮಾಣಿಕ” ಸುರೇಶ್ ಕುಮಾರರೇ, ‘ತನಿಖೆ’ಗೂ, ‘ಕಾನೂನು ಸಲಹೆ’ಗೂ ವ್ಯತ್ಯಾಸವಿಲ್ಲವೆ?

 – ಶಿವರಾಮ್ ಕೆಳಗೋಟೆ

“ಎರಡು ವರ್ಷಕ್ಕೊಮ್ಮೆ ಒಂದು ಜೊತೆ ಚಪ್ಪಲಿ ಖರೀದಿಸುತ್ತಾರಂತೆ, ಅವರು ಮಂತ್ರಿ ಆಗಿದ್ದರೂ ಅವರ ಪತ್ನಿ ಸಾಮಾನ್ಯ ಪತ್ರಕರ್ತೆಯಾಗಿ ಕೆಲಸ ಮಾಡ್ತಾರಂತೆ, ಅವರ ಮಗಳು ಇವತ್ತಿಗೂ ಬಸ್ ನಲ್ಲೇ ಓಡಾಡ್ತರಂತೆ.”

ಇದಪ್ಪ ಸರಳತೆಯ ಹೊಸ ವ್ಯಾಖ್ಯಾನ. ಸದ್ಯ ಅವರ ಬಳಿ ಎಷ್ಟು ಒಳ ಉಡುಪುಗಳಿವೆ, ಎಷ್ಟು ದಿನಕ್ಕೊಮ್ಮೆ ಹೊಸ ಒಳ ಉಡುಪು ಖರೀದಿಸುತ್ತಾರೆ ಅನ್ನೋದನ್ನ ಈ ಸೋಕಾಲ್ಡ್ ಪ್ರಾಮಾಣಿಕ ಸಚಿವರ ಪಟಾಲಂ ಹೇಳಿಲ್ಲ. ಇವರು ವ್ಯಾಖ್ಯಾನಿಸುವ ಸರಳತೆ ಬಗ್ಗೆ ಒಂದು ಸಿಂಪಲ್ ಪ್ರಶ್ನೆ – ನಾಲ್ಕು ಸದಸ್ಯರ ಒಂದು ಕುಟುಂಬಕ್ಕೆ ಮೂರು ನಿವೇಶನ ಪಡೆಯೋದು ಯಾವ ಸರಳತೆ?

ಕೆಲವರು ಅವರ ದುಡ್ಡು, ಅವರ ಹೂಡಿಕೆ, ನೀವ್ಯಾಕೆ ಪ್ರಶ್ನಿಸುತ್ತೀರಿ ಎನ್ನಬಹುದು, ಆದರೆ, ಎರಡು ವರ್ಷಕ್ಕೊಮ್ಮೆ ಹೊಸ ಚಪ್ಪಲಿ ಖರೀದಿಸುತ್ತಾರೆ ಎಂದು ಹೇಳಿ ಅವರನ್ನು ಸರಳ ಜೀವಿ ಎಂದು ಬಿಂಬಿಸುವವರಿಗೆ, ಈ ಆಡಂಬರ ಮತ್ತು ಆ ವ್ಯವಸ್ಥೆಗಾಗಿ ಈ ನೆಲದ ಕಾನೂನನ್ನು ಮರೆಮಾಚುವುದು ಎಷ್ಟು ಸರಿ?

ಮಂತ್ರಿ ಸುರೇಶ್ ಕುಮಾರ್ ತಮ್ಮ ಸಮರ್ಥನೆಯಲ್ಲಿ ಪದೇ ಪದೇ ಹೇಳುತ್ತಿರುವ ಒಂದು ಮಾತು ತಾವು ಬಿಡಿಎಗೆ ಅಫಿಡವಿಟ್ಟು ಸಲ್ಲಿಸುವ ದಿನದಂದು ತಮ್ಮ ಬಳಿ ಬೇರಾವ ಆಸ್ತಿಯೂ ಇರಲಿಲ್ಲ. ನಿಜ. ಒಪ್ಪಿಕೊಳ್ಳೋಣ. ಆದರೆ ಮಂಜೂರಾದ ನಿವೇಶನ ನಿಮ್ಮ ಹೆಸರಿಗೆ ರಿಜಿಸ್ಟರ್ ಆಗುವ ಹೊತ್ತಿಗೆ ನಿಮ್ಮ ಬಳಿ ಮೂರು ನಿವೇಶನಗಳಿದ್ದವು ಅಲ್ಲವೇ, ಸಚಿವರೇ? ನಿಮ್ಮ ಆತ್ಮಸಾಕ್ಷಿಯನ್ನು ಎಲ್ಲಿ ಅಡ ಇಟ್ಟಿದ್ದಿರಿ? ನೀವು ಮೂಲತಃ ನಿವೇಶನ ಕೇಳಿದ್ದು ತಮ್ಮ ತಾಯಿ ಒಡೆತನದ ಮನೆಯನ್ನು ರಸ್ತೆ ಅಗಲೀಕರಣ ಕಾರಣಕ್ಕೆ ಒಡೆಯಬೇಕಿದೆ ಎಂಬ ಕಾರಣಕ್ಕೆ. ಆ ಮನೆ ನಿಮಗೆ ಹಿಂತಿರುಗಿ ಬಂದಾಗ, ನಿಮ್ಮ ಪ್ರಾಮಾಣಿಕತೆ, ಆತ್ಮಸಾಕ್ಷಿ, ಸರಳತೆ.. ಎಲ್ಲವನ್ನೂ ಮಾರಿಕೊಂಡಿದ್ದಿರಾ?

ಅಷ್ಟೇ ಅಲ್ಲ, ನೆಲಮಂಗಲ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿಮ್ಮ ತಾಯಿ ಮತ್ತು ಮಗಳು ಇಬ್ಬರಿಗೂ ನಿವೇಶನ ಮಂಜೂರಾಗುತ್ತದೆ. ಚುನಾವಣಾ ಆಯೋಗ ಮತ್ತು ಲೋಕಾಯುಕ್ತರಿಗೆ ಸಲ್ಲಿಸಿರುವ ತಮ್ಮ ದಾಖಲೆಗಳ ಪ್ರಕಾರ ತಾಯಿ ಮತ್ತು ಮಗಳು ಇಬ್ಬರೂ ನಿಮ್ಮ ‘ಅವಲಂಬಿತರು’, ಅರ್ಥಾತ್ ನಿಮ್ಮ ಕುಟುಂಬ ಸದಸ್ಯರು. ಒಂದು ಹೌಸಿಂಗ್ ಕೋಆಪರೇಟಿವ್ ಸೊಸೈಟಿಯಿಂದ ಒಂದೇ ಕುಟುಂಬದ ಇಬ್ಬರಿಗೆ ನಿವೇಶನ ಮಂಜೂರು ಮಾಡುವಂತಿಲ್ಲ. ಹಾಗಾದರೆ ನಿಮ್ಮ ಪ್ರಭಾವದ ಕಾರಣ ನಿಮ್ಮ ಕುಟುಂಬಕ್ಕೆ ಎರಡು ನಿವೇಶನಗಳು ಮಂಜೂರಾಯಿತೆ? ಕಾನೂನು ಸಚಿವರೆ, ನಿಮ್ಮಂತಹ ಬುದ್ಧಿವಂತ, ಜಾಣ, ಪ್ರಾಮಾಣಿಕ ಮಂತ್ರಿಗೆ ಇವೆಲ್ಲಾ ಸೂಕ್ಷ್ಮಗಳು ಅರ್ಥವಾಗಲಿಲ್ಲವೇ?

ಇಂದು ನೀವು ರಾಜೀನಾಮೆ ಹಿಂಪಡೆಯುವುದು ನಿರೀಕ್ಷಿತ. ನೀವು ಮುಖ್ಯಮಂತ್ರಿಯವರಿಗೆ ರಾಜೀನಾಮೆ ಸಲ್ಲಿಸಿ, ತಮ್ಮ ವಿರುದ್ಧ ಬಂದಿರುವ ಆರೋಪಗಳ ಬಗ್ಗೆ ತನಿಖೆಯಾಗಲಿ, ತನಿಖೆಯಲ್ಲಿ ತಾವು ‘ಮುಗ್ಧರು’ ಎಂದು ಸಾಬೀತಾಗುವವರೆಗೂ ಮಂತ್ರಿ ಪದವಿ ಬೇಡ ಎಂದಿದ್ದೀರಿ. ನಿಮ್ಮ ಮುಖ್ಯಮಂತ್ರಿ ಅಡ್ವೊಕೇಟ್ ಜನರಲ್ ರಿಂದ ‘ಕಾನೂನು ಸಲಹೆ’ ಕೇಳಿ ವರದಿ ತರಿಸಿಕೊಂಡಿದ್ದಾರೆ. ತಲೆಯಲ್ಲಿ ಲದ್ದಿ ತುಂಬಿಕೊಂಡಿರುವ ಅಥವಾ ಪೂರ್ವಗ್ರಹ ಪೀಡಿತ ಕೆಲ ಪತ್ರಕರ್ತರು ಈ ಪ್ರಕ್ರಿಯೆಯನ್ನೇ ‘ನಿಮ್ಮ ಆರೋಪಗಳ ಬಗ್ಗೆ ನಡೆಯುತ್ತಿರುವ ತನಿಖೆ’ ಎಂದು ಬಿಂಬಿಸುತ್ತಿದ್ದಾರೆ. ಕಾನೂನು ಮಂತ್ರಿ ವಿರುದ್ಧ ಬಂದಿರುವ ಆರೋಪಗಳನ್ನು ತನಿಖೆ ಮಾಡಲು ಅಡ್ವೊಕೇಟ್ ಜನರಲ್ ಗೆ ಯಾವುದೇ ಅರ್ಹತೆ ಇಲ್ಲ ಎಂಬ ಸಣ್ಣ ಮಾಹಿತಿಯೂ ಮಾಧ್ಯಮದ ಕೆಲವರಿಗೆ ಗೊತ್ತಿಲ್ಲ. ಮೇಲಾಗಿ, ಅಡ್ವೊಕೇಟ್ ಜನರಲ್ (ಎಜಿ) ಸರಕಾರದ ಪರವಾಗಿ ನ್ಯಾಯಾಲಯಗಳಲ್ಲಿ ವಾದ ಮಂಡಿಸುವ ವಕೀಲ ಅಷ್ಟೆ, ಅವರದು ತನಿಖೆ ಸಂಸ್ಥೆಯಲ್ಲ.

ಇದೇ ವರದಿಯನ್ನು ಆಧಾರವಾಗಿಟ್ಟುಕೊಂಡು ಮುಖ್ಯಮಂತ್ರಿ ನಿಮ್ಮನ್ನು ರಾಜೀನಾಮೆ ವಾಪಾಸ್ ಪಡೆಯಿರಿ ಎಂದು ಮನವಿ ಮಾಡಿದ್ದಾರೆ ಎಂದು ಮಾಧ್ಯಮದಲ್ಲಿ ಬಿತ್ತರವಾಗುತ್ತಿದೆ. ನೀವು ಒಪ್ಪಿಕೊಂಡರೆ ನಿಮ್ಮ ಬಗ್ಗೆ ಮತ್ತಷ್ಟು ಸಂಶಯಗಳು ಏಳುತ್ತವೆ. ಕಾರಣ ನೀವು ಬಯಸಿದಂತೆ ‘ಇದು ತನಿಖೆಯಲ್ಲ’. ಆ ಕಾರಣ ನೀವು ಇನ್ನೂ ‘ಮುಗ್ಧರಾಗಿ’ ಹೊರಬಂದಿಲ್ಲ. ಇಡೀ ಪ್ರಕರಣ ಒಂದು ಕಣ್ಣೊರೆಸುವ ತಂತ್ರವೆನ್ನುವುದು ವೇದ್ಯವಾಗುತ್ತದೆ. ಅಡ್ವೊಕೆಟ್ ಜನರಲ್ ನೀಡುವ ವರದಿಗಳೆಲ್ಲಾ ಸತ್ಯ, ನಿಷ್ಟಕ್ಷಪಾತ, ಕಾನೂನು ಆಧಾರಿತ ಆಗಿದ್ದೇ ಆದರೆ, ಸರಕಾರ ನ್ಯಾಯಾಲಯಗಳಲ್ಲಿ ಯಾವ ಪ್ರಕರಣದಲ್ಲೂ ಸೋಲಬಾರದಿತ್ತಲ್ಲ.

ಇದೇ ಎಜಿಗಳು ಹಿಂದೆ ಆರೋಪ ಎದುರಿಸುತ್ತಿದ್ದ ವ್ಯಕ್ತಿ ಮುಖ್ಯಮಂತ್ರಿ ಪದವಿಯಲ್ಲಿದ್ದಾಗ ಅವರನ್ನೂ ಸಮರ್ಥಿಸಿಕೊಂಡಿದ್ದಾರೆ. ಸರಕಾರಕ್ಕೆ ಬಹುಮತ ಸಾಬೀತು ಪಡಿಸಲು ಅನುಕೂಲವಾಗುವಂತೆ ಏಕಾಏಕಿ ಸದಸ್ಯರನ್ನು ಅನರ್ಹ ಮಾಡಿದ್ದ ವಿಧಾನಸಭಾ ಅಧ್ಯಕ್ಷರನ್ನೂ ಸಮರ್ಥಿಸಿಕೊಂಡಿದ್ದಾರೆ. ಅದೇ ಮುಖ್ಯಮಂತ್ರಿ ಮುಂದೆ ಪದವಿ ಕಳೆದುಕೊಳ್ಳಬೇಕಾಗಿ ಆರೋಪಿ ಪಟ್ಟ ಹೊರಬೇಕಾಯಿತು. ವಿಧಾನಸಭಾ ಅಧ್ಯಕ್ಷರ ಕ್ರಮವನ್ನು ಸುಪ್ರೀಂಕೋರ್ಟ್ ತೀಕ್ಷ್ಣವಾಗಿ ಟೀಕಿಸಿತು. (ನೀವು ಕಾನೂನು ಮಂತ್ರಿಯಾಗಿ ಇವರಿಬ್ಬರನ್ನೂ ಸಮರ್ಥಿಸಿಕೊಂಡೇ ಬಂದಿರಿ.) ಅಂತಹ ಹುದ್ದೆಯಲ್ಲಿರುವವರಿಂದ ನಿಮಗೆ ಸಮರ್ಥನೆ ಬೇಕಾ?

ನಿಮಗೆ ಮಂತ್ರಿಯಾಗಿ ಮುಂದುವರಿಯಲು ಆಸಕ್ತಿ ಇದ್ದರೆ, ರಾಜೀನಾಮೆ ಹಿಂಪಡೆಯಿರಿ. ಆದರೆ ‘ನಾನು ತನಿಖೆಯಿಂದ ನಿರಪರಾಧಿ ಎಂದು ಸಾಬೀತಾಗಿದ್ದೇನೆ, ಹಾಗಾಗಿ ರಾಜೀನಾಮೆ ಪಡೆಯುತ್ತೇನೆ’ ಎಂದು ಘೋಷಿಸಬೇಡಿ. ಆ ಮೂಲಕ ಜನರನ್ನು ಮತ್ತಷ್ಟು ಮೂರ್ಖರನ್ನಾಗಿಸುವ ಯತ್ನಬೇಡ.

11 thoughts on ““ಪ್ರಾಮಾಣಿಕ” ಸುರೇಶ್ ಕುಮಾರರೇ, ‘ತನಿಖೆ’ಗೂ, ‘ಕಾನೂನು ಸಲಹೆ’ಗೂ ವ್ಯತ್ಯಾಸವಿಲ್ಲವೆ?

  1. Basavaraj Halli

    ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾನೂನು ಸಚಿವ ಸುರೇಶ ಕುಮಾರ್ ಪ್ರಾಮಾಣಿಕತೆಯ ನಾಟಕವಾಡುತ್ತಿರುವಂತೆ ಕಂಡುಬರುತ್ತಿದೆ. ಆರ್.ಆರ್.ಎಸ್.ಎಸ್.ನ ಸಾಮೀಪ್ಯದ ಡೋಂಗಿ ಪತ್ರಕರ್ತರು ಬಿಜೆಪಿಯ ಎಂಜಲು ತಿಂದು ಈ ಕಾಲದ ಪ್ರಾಮಾಣಿಕಾತಿ ಪ್ರಾಮಾಣಿಕ ಸಚಿವ ಸುರೇಶ ಕುಮಾರ್ ಎಂದು ವಣರ್ಿಸುವುದರಲ್ಲಿ ಹೊಸತೇನಿಲ್ಲ. ಎಲ್ಲ ಚಾನೆಲ್ಗಳಲ್ಲಿ ಅಂತವರು ಅಟಕಾಯಿಸಿಕೊಂಡಿರುವಾಗ 2-30 ಸೈಟು ಹೊಡೆದವರಲ್ಲಿ ಎರಡ್ಮೂರು ಸೈಟು ಹೊಡೆದವರು ಪ್ರಾಮಾಣಿಕರೇ ?
    – ಬಸವ ಕೊಳ್ಳಿ

    Reply
  2. Anand Yadwad - Loksatta Party

    ಅರ್ಥಪೂರ್ಣವಾದ ಪ್ರಶ್ನೆಗಳನ್ನು ಎತ್ತದ್ದೀರಾ.

    ಸನ್ಮಾನ್ಯ ಮಂತ್ರಿಯವರಿಗೆ ನನ್ನದು ಒಂದು ಪ್ರಶ್ನೆ. ನೀವೆ ಹೇಳುವ ಹಾಗೆ, ನೀವು ಯಾವ ತಪ್ಪನ್ನು ಮಾಡಿಲ್ಲವೆನ್ನುವುದಾದರೆ, ಸೈಟನ್ನು ನೀವೆ ಇಟ್ಕೊಳ್ಳಿ. ಅದನ್ನ ಯಾಕ್ರೀ ವಾಪಸ್ಸು ಕೊಡತೀರಾ…?

    ನೀವು ತಪ್ಪು ಮಾಡಿಲ್ಲ ಅಂತೀರಾ, ಸೈಟು ವಾಪಸ್ಸು ಕೊಡ್ತೀರಾ, ತನಿಖಾಧಿಕಾರಿಯೆ ಅಲ್ಲದ ಸರಕಾರಿ ವಕೀಲರ ವರದಿ ನೋಡಿ ರಾಜೀನಾಮೆ ವಾಪಸ್ಸು ತಗೊಳ್ತೀರಾ…!!! ಇಷ್ಟೆಲ್ಲ ರಾಮಾಯಣ ಯಾವುದಕ್ಕಾಗಿ ಸಚಿವರೇ…?

    Reply
  3. ದೀಪಕ್ ಸಿ ಎನ್

    ಇಲ್ಲಿ ಅನೇಕ ನೈತಿಕತೆಯ ಪ್ರಶ್ನೆಗಳಿವೆ. ೧) ಮಾನ್ಯ ಸುರೇಶ್ ಕುಮಾರ್ ಅವರಿಗೆ ತಾವು ಮಾಡಿರುವ ತಪ್ಪು ಇನ್ನೊಬ್ಬರು ತೋರಿಸಿದಾಗ ಮಾತ್ರ ಅರಿವಾಗುತ್ತದೆಯೆ. ಬೇರೆಯವರು ಕಂಡು ಹಿಡಿಯುವವರೆಗೆ, ಅದು ತಪ್ಪಲ್ಲ ಹಾಗೂ ಮನಸಾಕ್ಷಿಗೆ ಒಪ್ಪಬಹುದಾಗಿರುತ್ತದೆ, ನಂತರ ಒಪ್ಪುವುದಿಲ್ಲ. ಇದೆಂತಹ ಮನಃಸಾಕ್ಷಿ. ೨) ಅವರ ತಾಯಿಯವರ ಮನೆಯು ರಸ್ತೆ ಅಗಲೀಕರಣದಿಂದ ಹೊರ ಉಳಿದು ಮರಳಿ ತಮ್ಮ ಸುಪರ್ದಿಗೆ ಬಂದಾಗ, ಜಿ-ಕೆಟಗರಿ ನಿವೇಶನದ ಅರ್ಜಿಯನ್ನು ವಾಪಸ್ ಪಡೆಯಬಹುದಿತ್ತು ಅಥವಾ ನಿವೇಶನವನ್ನೇ ವಾಪಸ್ ನೀಡಬಹುದಿತ್ತು. ರಾಜಿನಾಮೆಯ ನಾಟಕವಾಡಿ ವಾಪಸ್ ಮಂತ್ರಿ ಪದವಿಗೆ ಮರಳುವುದೆಂದರೆ, ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಾಗ, ಕಳ್ಳ ಮಾಲನ್ನು ಹಿಂತಿರುಗಿಸಿದ್ದೇನೆ, ಅಲ್ಲಿಗೆ ಅದು ಸರಿಯಾಯಿತು, ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ, ನನ್ನ ಕೆಲಸವನ್ನು ಮುಂದುವರೆಸುತ್ತೇನೆ ಎಂದ ಹಾಗೆ. ಇದು ಯಾವ ರೀತಿಯ ಪ್ರಾಮಾಣಿಕತೆ?

    ದೀಪಕ್ ಸಿ. ಎನ್.

    ಸಾರ್ವಜನಿಕ ಜೀವನದಲ್ಲಿ, ಅತಿ ಮುಖ್ಯವಾಗಿ ಬೇಕಾಗಿರುವುದು ನೈತಿಕತೆಯೆ ಹೊರತು, ತಾಂತ್ರಿಕ ಅಂಶಗಳಲ್ಲ. ಅವರು ತಾಂತ್ರಿಕವಾಗಿ ಯಾವುದೇ ತಪ್ಪು ಮಾದಿಲ್ಲದೇ ಇರಬಹುದು, ಆದರೆ ನೈತಿಕವಾಗಿ ತಪ್ಪೆಸಗಿದ್ದಾರೆ.

    Reply
  4. ವಿಕ್ರಮ ಗೂಗಲ್ಲು

    ಎಲ್ಲಾ ಸರಿ , ಆದರೆ ವರ್ತಮಾನದ ಕಣ್ಣಿಗೆ ಭಾಜಪ ದ ಮಂತ್ರಿಗಳು ಮಾತ್ರ ಯಾಕೆ ಕಾಣಿಸುತ್ತಾರೆ ? ಎಚ್ ಡಿ ಕೆ ಯಾಗಲಿ ಡಿ ಕೆ ಶಿ ಯಾಗಲಿ ಅಥವಾ ಎಸ್ಸ್ ಎಂ ಕೆ ಯಾಗಲಿ ಇಲ್ಲ ಖರ್ಗೆ , ಧರಂ ಸಿಂಗರೆಕೆ ಕಾಣುವುದಿಲ್ಲ ?

    Reply
    1. parashivamurthy

      ಪತ್ರಿಕೆಯ ಹೆಸರೇ ಹೇಳುವಂತೆ ಹಾಲಿ ರಾಜ್ಯಭಾರ ನಡೆಸುತ್ತಿರುವುದು ಭಾ.ಜ.ಪ ಸರ್ಕಾರ ಎಂಬುದನ್ನು ನೀವು ಮರೆತಿರುವಂತಿದೆ.

      Reply
  5. kariyappa

    ವಿಕ್ರಮ್ ಗೂಗಲ್ಲು ಅವರಿಗೆ ಪ್ರಶ್ನೆ: ಮೊದಲು ಹೇಳಿ, ಬಿಜೆಪಿ ಸಚಿವರ ಬಗ್ಗೆ ಬರೆದರೆ ನಿಮಗೇಕೆ ಕಸಿವಿಸಿ? ಬರೆದದ್ದರಲ್ಲಿ ತಪ್ಪಿದ್ದರೆ ಹೇಳಿ. ಒಬ್ಬರ ಬಗ್ಗೆ ಮಾತನಾಡುವಾಗ, ಮತ್ತೊಬ್ಬರನ್ನು ಹೆಸರಿಸಿ ಅವರನ್ನೇಕೆ ಬಿಟ್ಟಿರಿ ಎಂದು ಕೇಳುವುದು ಚರ್ಚೆಯನ್ನು ಮುಂದುವರಿಸುವ ಕ್ರಮ ಅಲ್ಲ. ಯಾರ ಬಗ್ಗೆ ಬರೆದಾಗಲೂ ಇಂಥಹದೊಂದು ಪ್ರಶ್ನೆ ತೆಗೆದು, ದಿಕ್ಕು ತಪ್ಪಿಸಬಹುದು. ಬಿಜೆಪಿ ಮಂತ್ರಿಗಳು ಈಗ ಅಧಿಕಾರದಲ್ಲಿದ್ದಾರೆ. ಸಹಜವಾಗಿ ಅವರು ಎಲ್ಲೆಡೆ ಹೆಚ್ಚು ಸ್ಪೇಸ್ ಗೆ ಅರ್ಹರು.

    Reply
    1. shreekanth

      Forget BJP or Congress, but when compared to all shameless politicians Mr. Suresh Kumar is a better face. We dont get a single person who is totally honest in the political arena. Hence Mr. Suresh Kumar is a better choice. If we start this witch hunting against people who are less corrupt like Suresh Kumar, we will be left with all DKS, SMK, Yeddi. So is that gonna help us in any way??

      Reply
      1. Vijaykumar N

        Shreekanth, well said. Its difficult to find the face who has a little honesty in their heart.In this context Sureshkumar is better choice. Unnecessarily people are splitting the hair in this issue.

        Reply
  6. R Satyanarayana

    ಮೊದಲನೆಯದಾಗಿ ಇಲ್ಲಿ ಎಲ್ಲರು ಅಪಾದನೆ ಮಾಡುವವರೇ ಹೊರತು ಕಾನೂನಿನ ಪಂಡಿತರಲ್ಲ.
    ಆದ ಕಾರಣ ಈ ನೆಲದ ಕಾನೂನಿಗೆ ವಿರುದ್ದವಾಗಿ ಸುರೇಶ ನಡೆದಿದ್ದಾರಾ ಇಲ್ಲವಾ ಎಂಬುದನ್ನು ಕಾನೂನಿನ ತಘ್ನರು
    ಮಾತ್ರ ವಿಶ್ಲೇಶಿಸ ಬಹುದು. ಕೇವಲ ಕೆಸರು ಎರಚುವುದೇ ಕಾಯಕ ಆಗಿರುವ ಕೆಲವರು ಪ್ರತಿಯೊಂದಕ್ಕೂ ಒಂದು ಕೊಂಕನ್ನು ಮಾಡುತ್ತಾರೆ.
    ಇಷ್ಟೆಲ್ಲಾ ಮಾತನಾಡುವ ಬದಲು ನ್ಯಾಯಾಲಯಕ್ಕೆ ಏಕೆ ಹೋಗಬಾರದು..AG ಕೊಟ್ಟ ಸರ್ಟಿಫಿಕೇಟ್ ಬಗ್ಗೆ ಪ್ರಶ್ನಿಸ ಬಾರದು??
    ನಿಮ್ಮಷ್ಟಕ್ಕೆ ನೀವೇ ಇನ್ನೊಬ್ಬರ ಪ್ರಾಮಾಣಿಕತೆ ಬಗ್ಗೆ ನಿಮಗೆ ತೋಚದಂತೆ ಬರೆಯುತ್ತೀರಲ್ಲಾ..
    ನಿಮ್ಮಗಳ ಅರ್ಹತೆ ಏನು??ನಿಮ್ಮಗಳ ಪ್ರಾಮಾಣಿಕತೆ ಎಷ್ಟು??

    Reply

Leave a Reply

Your email address will not be published. Required fields are marked *