Daily Archives: June 27, 2012

ಭಟ್ಟರ ಬಂಧನ ಸುದ್ದಿಯಲ್ಲವೇ?

– ರಾಜೇಶ್ ದೇವನಹಳ್ಳಿ

ಸುವರ್ಣ ಸುದ್ದಿ ವಾಹಿನಿ ಮತ್ತು ಕನ್ನಡ ಪ್ರಭ ದಿನಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಇಂದು ಕೋರ್ಟ್ ಮುಂದೆ ಹಾಜರಾದರು. ನ್ಯಾಯಾಂಗ ನಿಂದನೆ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅವರಿಗೆ ಆರೇಳು ಬಾರಿ ಸಮನ್ಸ್ ಜಾರಿಯಾಗಿತ್ತು. ಕೊನೆಗೆ ಜಾಮೀನು ರಹಿತ ವಾರೆಂಟ್ ಜಾರಿಯಾದ ಕಾರಣ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ಕೋರ್ಟ್ ಆವರಣದಲ್ಲಿ ನಡೆದ ಗಲಭೆಗಳ ವರದಿಗೆ ಸಂಬಂಧಿಸಿದಂತೆ ಕೂಡಾ ಅವರಿಗೆ ವಾರೆಂಟ್ ಜಾರಿಯಾಗಿತ್ತು ಎಂಬ ಮಾಹಿತಿ ಇದೆ.

ಆದರೆ ಈ ಪ್ರಕರಣ ಯಾವ ಟಿವಿ ಸುದ್ದಿವಾಹಿನಿಗಳಿಗೆ ಸುದ್ದಿಯೇ ಆಗಲಿಲ್ಲ. ಯಾವುದೋ ಮೂಲೆಯಲ್ಲಿ, ವೇಶ್ಯವಾಟಿಕೆ ನಡೆಸುತ್ತಿದ್ದವರ ಬಂಧನವಾದರೆ ಹುಡುಗಿಯರ (ದೂರು ದಾಖಲಾಗುವ ಮೊದಲೇ) ಮುಖ ತೋರಿಸಿ ಅಸಹ್ಯ ಹುಟ್ಟಿಸುವ ಮಾಧ್ಯಮಗಳಿಗೆ, ಸಂಪಾದಕರೊಬ್ಬರು ಆರೋಪ ಹೊತ್ತು ನ್ಯಾಯಾಲಯದ ಮುಂದೆ ಹಾಜರಾದದ್ದು ಸುದ್ದಿಯಲ್ಲವೇ? ಕೋರ್ಟ್ ಆವರಣದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ವಕೀಲರ ಬಂಧನವಾದಾಗ ಗಂಟೆಗಟ್ಟಲೆ ವರದಿ ಮಾಡಿದ್ದು ಇವರೇ ಅಲ್ಲವೆ? ಮಾಧ್ಯಮ ಮಂದಿಗೆ ನೈತಿಕತೆ ಇದ್ದಿದ್ದರೆ ಇದನ್ನೂ ಸುದ್ದಿ ಮಾಡಬೇಕಿತ್ತು.

ಕೋರ್ಟ್ ಆವರಣದಲ್ಲಿ ಸಣ್ಣ ಪುಟ್ಟ ಮಾತಿನ ಚಕಮಕಿ ನಡೆದಿರುವ ವರದಿಗಳಿವೆ. ಪ್ರಧಾನ ಸಂಪಾದಕರಿಗೆ ಪೊಲೀಸ್ ಭದ್ರತೆ ಇತ್ತು. ಆದರೂ ಕೆಲ ವಕೀಲರು ಅವರ ವಿರುದ್ಧ ಘೋಷಣೆ ಕೂಗಿದರು.

ಪತ್ರಿಕೆಗಳು ಹೇಗೆ ವರದಿ ಮಾಡುತ್ತವೆ ಎಂದು ನಾಳೆ ನೋಡಬೇಕು.

(ಚಿತ್ರಕೃಪೆ: vbhat.in)

ಜಾತಿ ವ್ಯವಸ್ಥೆಯ ಕೊಳೆತ ಮನಸ್ಥಿತಿ ಮತ್ತು ಹೊರಬರುವ ಅನಿವಾರ್ಯ ಪರಿಸ್ಥಿತಿ

ಡಾ. ಮ.ಪು. ಪೂರ್ಣಾನಂದ

ಇತ್ತೀಚೆಗೆ ಕುಂಚಟಿಗ ಮತ್ತು ಒಕ್ಕಲಿಗ ಜಾತಿಗಳ ಬಹಿರಂಗ ಕಿತ್ತಾಟದಿಂದ ಈ ದೇಶದ ಜಾತಿ ವ್ಯವಸ್ಥೆಯ ಕೊಳೆತ ಮನಸ್ಥಿತಿಗಳ ಅನಾವರಣವಾಗಿದೆ. ಇದು ಕೇವಲ ಕುಂಚಟಿಗ ಮತ್ತು ಒಕ್ಕಲಿಗ ಜಾತಿಗಳ ಕತೆಯಷ್ಟೇ ಅಲ್ಲ ದೇಶದ ಪ್ರತಿಯೊಂದು ಜಾತಿಗಳ ಉಪಜಾತಿ, ಪರ್ಯಾಯ ಜಾತಿ, ಸಮಾನಾಂತರ ಜಾತಿಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನು ಇಲ್ಲ. ಇತ್ತೀಚೆಗೆ ಶಿವಮೊಗ್ಗದಲ್ಲಿ ತ್ರಿಮತಸ್ಥ ಬ್ರಾಹ್ಮಣರ ಸಮಾವೇಶ ಜರುಗಿತು. ಅಲ್ಲಿ ಬ್ರಾಹ್ಮಣ ಯತಿಗಳು ಬ್ರಾಹ್ಮಣರ ಒಳಜಾತಿಗಳು ಒಂದಾಗಿ ತಮ್ಮ ಅಸ್ಥಿತ್ವಕ್ಕಾಗಿ ಹೋರಾಡಲು ಕರೆಯಿತ್ತರು. ಇದು ಜಾತಿಗಳ ಧೃವೀಕರಣವೆಂದು ಗೋಚರಿಸಿತ್ತು. ಆದರೆ ಬೆಂಗಳೂರಲ್ಲಿ ಜರುಗಿದ ಕುಂಚಟಿಗರ ಸಮಾವೇಶದಲ್ಲಿ ಜಾತಿಗಳ ಛಿದ್ರೀಕರಣ ಅನಾವರಣವಾಯಿತು. ಒಂದು ಕಡೆ ಬ್ರಾಹ್ಮಣ ಒಳಜಾತಿಗಳ ಧೃವೀಕರಣ ಮತ್ತೊಂದೆಡೆ ಶೂದ್ರಜಾತಿಗಳು ಛಿದ್ರೀಕರಣ. ಸಾವಿರಾರು ವರ್ಷ ಇತಿಹಾಸವಿರುವ ಜಾತಿವ್ಯವಸ್ಥೆಯಲ್ಲಿ ಈ ವಿರೋಧಾಭಾಸಗಳು ಏಕಕಾಲಕ್ಕೆ ಘಟಿಸಿವೆ. ಇವುಗಳ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಜಾತಿಗಳ ಸ್ವಾರ್ಥದ ಪರಾಕಾಷ್ಟೆ ಎದ್ದು ಕಾಣುತ್ತದೆ.

ಹಲವಾರು ಸಾವಿರ ವರ್ಷಗಳಿಂದ ಶಿಕ್ಷಣ, ಅಧಿಕಾರ, ಸಂಪತ್ತುಗಳನ್ನು ತಮ್ಮ ಕೈವಶ ಮಾಡಿಕೊಂಡಿದ್ದ ಬ್ರಾಹ್ಮಣ ಒಳಜಾತಿಗಳು ಒಂದಾಗುತ್ತವೆ. ಆದರೆ ಕೇವಲ ನೂರು ವರ್ಷಗಳಿಂದೀಚೆಗೆ ಶಿಕ್ಷಣ, ಅಧಿಕಾರ, ಸಂಪತ್ತುಗಳ ಕಡೆ ಮುಖ ಮಾಡಿ ನಡೆಯುತ್ತಿರುವ ಶೂದ್ರ ಜಾತಿಗಳಾದ ಕುಂಚಟಿಗ ಮತ್ತು ಒಕ್ಕಲಿಗ ಜಾತಿಗಳು ಬೇರೆಯಾಗುತ್ತವೆ. ಈ ಘಟನೆಗಳು ಸ್ವಾರ್ಥಕ್ಕಾಗಿ ನಡೆದ ಜಾತಿ ವ್ಯವಸ್ಥೆಯ ಕ್ರೂರ ಆದರೆ ಸಹಜ ಕ್ರಿಯೆಗಳಾಗಿ ಕಾಣುತ್ತವೆ. ದೇಶಕ್ಕೆ ಸ್ವತಂತ್ರ ಬಂದ ನಂತರ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಕಾನೂನಿಂದ ಶಿಕ್ಷಣ, ಅಧಿಕಾರ, ಸಂಪತ್ತುಗಳ ಮೇಲಿನ ಹಿಡಿತ ಸಡಿಲ ಗೊಂಡು ಅಸ್ತಿತ್ವ ಮತ್ತು ಅಪಾಯದ ಭೀತಿಯಿಂದ ಬ್ರಾಹ್ಮಣ ಜಾತಿಗಳು ಒಂದಾದರೆ, ಮೀಸಲಾತಿಯಿಂದ ಸಿಗುವ ಶಿಕ್ಷಣ, ಅಧಿಕಾರ, ಸಂಪತ್ತುಗಳ ಮೇಲಿನ ಹಿಡಿತ ನಮ್ಮೊಳಗೇ ಉಳಿಯಲಿ ಎಂದು ಒಕ್ಕಲಿಗ ಮತ್ತು ಕುಂಚಟಿಗ ಜಾತಿಗಳು ಬೇರೆಯಾಗುತ್ತವೆ. ಈ ಎರಡೂ ಪ್ರಕ್ರಿಯೆಗಳು ತಮ್ಮ ಗುಂಪುಗಳ ಮೂಲಕ ಶಿಕ್ಷಣ, ಅಧಿಕಾರ, ಸಂಪತ್ತಿನ ಮೇಲೆ ಹಿಡಿತ ಸಾಧಿಸಿ ಅತ್ಯಂತ ಸ್ವಾರ್ಥದಿಂದ ಬದುಕುವ ಕ್ರಿಯೆಯಾಗಿ ಕಂಡು ಬರುತ್ತದೆ. ಎಲ್ಲಾ ಜಾತಿಗಳ ಪರಿಸ್ಥಿತಿಯೂ ಇದೇ ಆಗಿದೆ. ಶೋಷಿತ ಮತ್ತು ಅಸ್ಪೃಶ್ಯ ಜಾತಿಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿರಬಹುದು, ಕಾರಣ ಶಿಕ್ಷಣ, ಅಧಿಕಾರ, ಸಂಪತ್ತುಗಳ ಮೇಲೆ ಪಾರಮ್ಯ ಹೊಂದಲು ಇನ್ನೂ ಸಾಧ್ಯವಾಗಿಲ್ಲ.

ಜಾತಿ ವ್ಯವಸ್ಥೆಯೇ ಸಮಷ್ಟಿ ಪ್ರಜ್ಞೆಗೆ ದೂರವಾದ ವ್ಯವಸ್ಥೆ. ಆದರೆ ಇಂದು ಜಾತಿ, ವಾಸ್ತವ ಮತ್ತು ಸತ್ಯವಾಗಿದೆ. ಇವುಗಳ ಮಧ್ಯೆ ಸಮಸಮಾಜ ನಿರ್ಮಾಣಕ್ಕಾಗಿ ಕಂಡುಕೊಂಡ ಹಲವಾರುಮಾರ್ಗಗಳಲ್ಲಿ ಮೀಸಲಾತಿಯೂ ಕೂಡ ಒಂದು. ಇದು ಬಾಬಾಸಾಹೇಬ್ ಅಂಬೇಡ್ಕರ್‌ರವರು ಚಿಂತಿಸಿದ ಸಾಮಾಜಿಕ ನ್ಯಾಯದ ಒಂದು ತುಣುಕು. ಮೀಸಲಾತಿಯಿಂದ ದೊರಕುತ್ತಿರುವ ಸವಲತ್ತುಗಳಿಗಾಗಿ ಜಾತಿ ವಿಜಾತಿಗಳ ಪ್ರತಿಪಾದನೆ ಹೆಚ್ಚಾಗುತ್ತಿರುವುದು ಕಂಡು ಬರುತ್ತದೆ. ಈ ಕಾರಣಕ್ಕಾಗಿ ದೂರದರ್ಶಿತ್ವ ಹೊಂದಿದ್ದ ಬಾಬಾಸಾಹೇಬರು ಸಮಗ್ರ ಮತ್ತು ಸಮರ್ಪಕವಾದ ಮೀಸಲಾತಿ ಜಾರಿಯಾದ 10 ವರ್ಷಗಳ ನಂತರ ಮೀಸಲಾತಿ ತೆಗೆಯಲು ಕಾನೂನು ಮಾಡಿದ್ದರು. ಆದರೆ ಮತ್ತೆ ಜಾತಿಗಳ ಸ್ವಾರ್ಥದಿಂದ ಇಂದಿಗೂ ಮೀಸಲಾತಿ ಮುಂದುವರೆದಿದೆ. ಹಾಗೆ ಮೀಸಲಾತಿ ಕಾನೂನು ಸಮಗ್ರ, ಸಮರ್ಪಕವಾಗಿ ಜಾರಿಯಾಗಿಲ್ಲ ಎಂಬುದು ಅಷ್ಟೇ ಸತ್ಯ. ಇಷ್ಟು ದೂರ ಕ್ರಮಿಸಿದ್ದರೂ ಸಾಮಾಜಿಕ ನ್ಯಾಯ ಮತ್ತು ಸಮ ಸಮಾಜದ ಕನಸು ಮರೀಚಿಕೆಯಾಗೇ ಉಳಿದಿದೆ. ಇದು ವಿಪರ್ಯಾಸ.

ದೇಶದ ಮೂರು ಸಾವಿರಕ್ಕೂ ಮಿಗಿಲಾದ ಜಾತಿಗಳಿಗೆ ಸಮಾನವಾಗಿ ಜಾತಿ ಸಂಖ್ಯೆಗನುಗುಣವಾಗಿ ಶಿಕ್ಷಣ, ಅಧಿಕಾರ, ಸಂಪತ್ತುಗಳನ್ನು ಹಂಚಲು ಈಗಿರುವ ಮೀಸಲಾತಿ ವ್ಯವಸ್ಥೆಯಿಂದ  ಸಾಧ್ಯವಾಗಿಲ್ಲ. ಹೀಗಾಗಿ ಸದ್ಯ ದೇಶದಲ್ಲಿರುವ ಮೀಸಲಾತಿ ವ್ಯವಸ್ಥೆಯ ವರ್ಗೀಕರಣವಾದ ಪರಿಶಿಷ್ಟ ಜಾತಿ (ಎಸ್.ಸಿ) ಪರಿಶಿಷ್ಟ ಬುಡಕಟ್ಟು (ಎಸ್.ಟಿ) ಮತ್ತು ಇತರೆ ಹಿಂದುಳಿದ ಜಾತಿಗಳೆಂಬ (ಓ.ಬಿ.ಸಿ) ಮೂರು ವರ್ಗಗಳಿವೆ. ಆದರೆ ಬೆರಳಣಿಕೆ ರಾಜ್ಯಗಳಲ್ಲಿ ಓಬಿಸಿಗಳಲ್ಲೂ ವರ್ಗೀಕರಣ ಮಾಡಿದ್ದಾರೆ. ಇಂದಿನವರೆಗೂ ಮೀಸಲಾತಿಗಾಗಿ ವ್ಶೆಜ್ಞಾನಿಕವಾದ ಜಾತಿ ವರ್ಗೀಕರಣ ಸಾಧ್ಯವಾಗಿಲ್ಲ. ಇದಕ್ಕೆ ಮೂಲ ಕಾರಣ ಜಾತಿ ಆಧಾರಿತ ಜನಗಣತಿ ಆಗದೇ ಇರುವುದು ಹಾಗು ಪ್ರತಿಯೊಂದು ಜಾತಿಯ ಬಗ್ಗೆ ಕುಲ ಶಾಸ್ತ್ರೀಯ ಅಧ್ಯಯನ (Ethnographic Study) ಸಮಗ್ರವಾಗಿ ನಡೆಯದಿರುವುದು. ಈ ಕಾರಣಕ್ಕಾಗಿಯೇ ಹಲವಾರು ಮೀಸಲಾತಿ ವಿವಾದಗಳು ಉಚ್ಚ ಮತ್ತು ಸವೋಚ್ಚ ನ್ಯಾಯಾಲಯದಲ್ಲಿ ಮೀಸಲಾತಿ ವಿರುದ್ಧವಾಗಿ ತೀರ್ಪುಗಳು ಬಂದಿವೆ.

ಆಶ್ಚರ್ಯವೆಂದರೆ ಜಾತಿ ವಾಸ್ತವ ಮತ್ತು ಸತ್ಯವೆಂದು ಸಂವಿಧಾನ ಬದ್ಧವಾಗಿ ಒಪ್ಪಿಕೊಂಡಿದ್ದರೂ ಕೂಡ, ಜಾತಿ ಜನಗಣತಿ 1931 ರ ನಂತರ ನಡೆಯದೇ ಇರುವುದು ಮತ್ತು ಇದಕ್ಕಾಗಿ  ಶೋಷಿತ ಜಾತಿಗಳು ಹಪಹಪಿಸುತ್ತಿರುವುದು. ಈ ಜಾತಿ ಜನಗಣತಿ ನಡೆಯದೆ ಇರಲು ಬ್ರಾಹ್ಮಣರ ಮೇಲೆ ಸರಾಸಗಟಾಗಿ ಆರೋಪ ಹೊರಿಸುವುದು ಶೋಷಿತ ಜಾತಿಗಳ ಪರಿಪಾಠವಾಗಿದೆ. ಆದರೆ ಇದೇ ಅಂತಿಮ ಸತ್ಯವಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಇತರೆ ಹಿಂದುಳಿದ ಜಾತಿಗಳಲ್ಲಿರುವ ಪ್ರಬಲ ಮತ್ತು ದೊಡ್ಡ ಜಾತಿಗಳೂ ಪ್ರಮುಖ ಕಾರಣವಾಗಿವೆ. ಏಕೆಂದರೆ ಈಗಿರುವ ಮೀಸಲಾತಿ ವ್ಯವಸ್ಥೆಯಲ್ಲಿ ದುರ್ಬಲ ಮತ್ತು ಸಣ್ಣ ಜಾತಿಗಳ ಅವಕಾಶಗಳನ್ನು ದೊಡ್ಡ ಜಾತಿಗಳು ಕಬಳಿಸುತ್ತಿವೆ. ಈ ವ್ಯವಸ್ಥೆ ಹೀಗೆ ಇರಲು ಹವಣಿಸುತ್ತಿವೆ. ಇದು ಸ್ವಾರ್ಥದ ಫಲ ಮತ್ತು ಸಮಷ್ಟಿ ಪ್ರಜ್ಞೆಯ ಜಾಣ ಮರೆವು.

ಜಾತಿ ವರ್ಗೀಕರಣ ಸಮರ್ಪಕವಾಗಿಲ್ಲದಿರುವುದರಿಂದ ಮೀಸಲಾತಿಯ ಒಂದು ವರ್ಗದಲ್ಲಿ ಸೇರ್ಪಡೆಯಾಗುವ ನೂರಾರು ಜಾತಿಗಳಲ್ಲಿ ಸಣ್ಣ ಜಾತಿಗಳ ಅವಕಾಶಗಳನ್ನು ದೊಡ್ಡಜಾತಿಗಳು ನುಂಗಿ ನೊಣೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಒಳ ಮೀಸಲಾತಿ ಪ್ರಜ್ಞೆ ಹೆಚ್ಚಾಗಿದೆ, ಆದರೆ ದುರ್ಬಲ ಜಾತಿಗಳ ಕೂಗು ಅರಣ್ಯರೋಧನವಾಗಿದೆ. ಇದು ಕರ್ನಾಟಕ ರಾಜ್ಯದ ಹೊಲೆಯ-ಮಾದಿಗ, ಬೋವಿ-ಬೋಯಿ, ಬೇಡಜಂಗಮ-ಬುಡ್ಗಜಂಗಮ, ಮೊಗವೀರ-ಮೊಗೇರ, ಬೇಡ-ಪರಿವಾರ, ಗೊಲ್ಲ-ಕಾಡುಗೊಲ್ಲ, ಕುರುಬ-ಜೇನುಕುರುಬ, ಒಕ್ಕಲಿಗ-ಕುಂಚಟಿಗ ವಿವಾದಗಳು ಹಾಗೆ ರಾಜಸ್ಥಾನದ ಮೀನಾ-ಗುಜ್ಜಾರ ವಿವಾದ ಆಂಧ್ರಪ್ರದೇಶದ ಮಾಲ-ಮಾದಿಗ ವಿವಾದ ಇನ್ನೂ ಮುಂತಾದ ಜಾತಿ ಜಗಳಗಳು ಮೀಸಲಾತಿಯ ಸವಲತ್ತಿಗಾಗೇ ನಡೆಯುತ್ತಿರುವುದನ್ನು ಗಮನಿಸಬೇಕಾದ ಮುಖ್ಯಾಂಶ. ಈ ರೀತಿಯ ಪ್ರಶ್ನೆಗಳನ್ನು ಎತ್ತಿದರೆ ಜಾತಿ, ಧರ್ಮ, ದೇಶವನ್ನು ಒಡೆಯುವ ಕುತಂತ್ರವೆಂದು ಕೆಲವರು ಬೊಬ್ಬೆ ಹೊಡೆಯುತ್ತಾರೆ. ಈ ವಿಚಾರದಲ್ಲಿ ಆಷಾಡಭೂತಿಗಳಾಗಬಾರದು.

ಕುಂಚಟಿಗ ಮತ್ತು ಒಕ್ಕಲಿಗ ಜಾತಿ ವಿವಾದಕ್ಕೆ ಸೀಮಿತವಾಗಿ ವಿಶ್ಲೇಷಿಸಿದರೆ ಕುಂಚಟಿಗ ಜಾತಿಯು ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುವ ಜಾತಿ. ಒಕ್ಕಲಿಗರ ದೊಡ್ಡ ಬ್ಯಾನರಡಿಯಲ್ಲಿ ಕುಂಚಟಿಗರ ಹಕ್ಕುಗಳನ್ನು ಕಸಿಯುವ ಹುನ್ನಾರವೆಂದು ಕುಂಚಟಿಗರವಾದ, ಉದಾಹರಣೆಗೆ ಮಧುಗಿರಿಯಲ್ಲಿ ಅನಿತಾಕುಮಾರಸ್ವಾಮಿ ರವರು ಶಾಸಕರಾಗಿ ಹೊರ ಜಿಲ್ಲೆಯಿಂದ ಬಂದು, ಒಕ್ಕಲಿಗರ ಹೆಸರಿನಲ್ಲಿ ಗೆದ್ದು ಬರುತ್ತಾರೆ. ಆದರೆ ಆ ಭಾಗದಲ್ಲಿ ಕುಂಚಟಿಗರೇ ಬಹುಸಂಖ್ಯಾತರಾಗಿರುವಾಗ ನಮ್ಮವರೆ ಒಬ್ಬರು ಏಕೆ ಶಾಸಕರಾಗಬಾರದಿತ್ತು? ಎಂಬುದು ಕುಂಚಟಿಗರ ಪ್ರಶ್ನೆ. ಕೇಂದ್ರ ಸರ್ಕಾರದ ಮೀಸಲಾತಿ ವರ್ಗವಾದ ಓ.ಬಿ.ಸಿ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಆದರೆ ಕುಂಚಟಿಗರಿಗೆ ಹೋಲಿಸಿದರೆ ಮುಂದುವರಿದ ಗ್ರಾಮೀಣ ಒಕ್ಕಲಿಗರು ಓ.ಬಿ.ಸಿ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಇದು ಒಕ್ಕಲಿಗರ ಹೆಸರಲ್ಲಿ ಕುಂಚಟಿಗರಾದ ಅನ್ಯಾಯವೆಂದು ಭಾವಿಸಿದ್ದಾರೆ. ಇಂತಹ ಪರಿಸ್ಥಿತಿ ಎಲ್ಲಾ ಉಪಜಾತಿ ಅಥವ ಪರ್ಯಾಯ ಜಾತಿ ಅಥವ ಸಮಾನಾಂತರ ಜಾತಿಗಳಲ್ಲಿ ಕಂಡು ಬರುತ್ತದೆ. ಈ ರೀತಿಯ ಜಾತಿಗಳು ಕಸುಬು, ವೈವಾಹಿಕ ಸಂಬಂಧ, ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಸಾಮ್ಯತೆಯಿರುವ ಕಾರಣಕ್ಕೆ ಒಂದಾಗುವ ಪ್ರಕ್ರಿಯೆ ಕಳೆದ ಹಲವಾರು ವರ್ಷಗಳಿಂದ ಹೆಚ್ಚಾಗಿ ನಡೆದುಕೊಂಡು ಬಂದಿದೆ ಇದು ಆರಂಭದ ಉತ್ಸಾಹದಲ್ಲಿ ಸಮೀಕರಣದ ಸಂಧಿಗ್ಧವಾಗಿ ಕಂಡು ಬಂದರೆ, ಜಾಗೃತಿಗೊಂಡ ನಂತರ ಸಮಪಾಲಿನ ವಿಚಾರವಾಗಿ ಜಾತಿಗಳು ಬೇರೆಯಾಗುವುದು ಸಹಜವಾಗಿ ಕಂಡುಬರುತ್ತದೆ.

ಇದು ಜಾತಿ ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಉಪಜಾತಿ ಅಥವ ಪರ್ಯಾಯ ಜಾತಿ ಅಥವ ಸಮಾನಂತರ ಜಾತಿಗಳನ್ನು ಒಟ್ಟಾಗಿಸಿಕೊಳ್ಳುವ ಮೂಲಕ ಪ್ರಬಲ ಮತ್ತು ದೊಡ್ಡ ಜಾತಿಯಾಗಿ ಹೊರಹೊಮ್ಮಿ ಶಿಕ್ಷಣ, ಅಧಿಕಾರ, ಸಂಪತ್ತನ್ನು ವೃದ್ಧಿಸಿಕೊಳ್ಳುವ ಹಾಗು ಸಂಖ್ಯಾಬಲದ ಮೇಲೆ ಜಾತಿ ಪಾರಮ್ಯ ಹೊಂದುವ ತಂತ್ರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ, ದುರ್ಬಲ ಮತ್ತು ಅಲ್ಪಸಂಖ್ಯಾತ ಜಾತಿಗಳು ಕೂಡ ಜಾಗೃತಿಗೊಂಡು ತಮಗೆ ಸಮಪಾಲು ಸಿಗದೇ ಇರುವುದನ್ನು ಮನಗಂಡು ತಮ್ಮದೇ ಜಾತಿಯ ಪ್ರತ್ಯೇಕ ಅಸ್ಥಿತ್ವಕ್ಕಾಗಿ ಹೋರಾಡುವ ಮೂಲಕ ಪಾಲು ಪಡೆಯುವ ಸಹಜ ವರ್ತನೆಯಾಗಿದೆ.

ಇನ್ನು ಬ್ರಾಹ್ಮಣರ ಒಳ ಜಾತಿಗಳ ಧೃವೀಕರಣವನ್ನು ನೋಡಿದರೆ, ಮೀಸಲಾತಿ ಸವಲತ್ತಿಲ್ಲದಿರುವುದು ಮತ್ತು ಜನಸಂಖ್ಯೆಯಲ್ಲಿ ಕಡಿಮೆ ಇರುವುದರಿಂದ ಒಂದಾಗುವುದು ಅನಿವಾರ್ಯವಾಗಿದೆ. ಇದು ಬ್ರಾಹ್ಮಣರ ಅಸ್ಥಿತ್ವದ ಪ್ರಶ್ನೆಯಾಗಿದೆ. ಬಹುಶಃ ಬ್ರಾಹ್ಮಣರಿಗೂ ಮೀಸಲಾತಿ ವಿಸ್ತರಿಸಿದರೆ ಅವರಲ್ಲೂ ವಿಜಾತಿ ವಿವಾದ ಉಂಟಾಗಬಹುದು. ಆದರೆ ಸ್ವಾರ್ಥದ ಅಳತೆಗೋಲಿಟ್ಟು ನೋಡಿದರೆ ಬ್ರಾಹ್ಮಣರಲ್ಲೂ ವಿಜಾತಿ ವಿವಾದಗಳು ಉಂಟಾಗಿವೆ. ಮೈಸೂರು ಅರಸರ ಸಂಸ್ಥಾನದಲ್ಲಿ ಪ್ರಮುಖ ಹುದ್ದೆ ಹಿಡಿಯಲು ಐಯ್ಯಾಂಗಾರ್-ಹೆಬ್ಬಾರ ವಿವಾದವಾಗಿತ್ತು. ಹೆಬ್ಬಾರ ಬ್ರಾಹ್ಮಣರು ಮೀಸಲಾತಿಗಾಗಿ ಆಗ್ರಹಿಸಿದ್ದರು. ಮೇಲುಕೋಟೆಯಲ್ಲಿ V ನಾಮ ಮತ್ತು U ನಾಮ ವಿವಾದ ಕೂಡ ಐಯ್ಯಾಂಗಾರರೊಳಗೇ ಇರುವ ತೆಂಕಣ ಮತ್ತು ಬಡಗಣ ಗುಂಪುಗಳ ವಿವಾದ. ಮೇಲ್ನೋಟಕ್ಕೆ ನಾಮಗಳ ಆಕಾರಕ್ಕಾಗಿ ನಡೆಯುತ್ತಿರುವ ವಿವಾದವೆನಿಸಿದರೂ ಒಳಗಿನ ಸತ್ಯವಾಗಿ ನಾಮಗಳ ಗುಂಪಿನ ಪ್ರಾಬಲ್ಯ ಮೆರೆಯುವ ಮೂಲಕ ಸ್ವಾರ್ಥ ಕಾಪಿಟ್ಟುಕೊಳ್ಳುವುದಾಗಿದೆ. ಬ್ರಾಹ್ಮಣರಲ್ಲೆ ಸಂಕೇತಿ ಬ್ರಾಹ್ಮಣರನ್ನು ಕೀಳಾಗಿ ಕಾಣುವ ಮನಸ್ಥಿತಿ ಇಂದಿಗೂ ಬ್ರಾಹ್ಮಣ ಜಾತಿಯೊಳಗಿದೆ. ಸಂಕೇತಿ ಬ್ರಾಹ್ಮಣರು ಕೃಷಿ ಆಶ್ರಯಿಸಿದ ಜಾತಿಯಾಗಿದೆ. ಇದೆ ಸಂದರ್ಭದಲ್ಲಿ ಜಾತಿ ವ್ಯವಸ್ಥೆಯ ಸೋಜಿಗವೆಂದರೆ ಸುಶಿಕ್ಷಿತ ಮತ್ತು ಸ್ಥಿತಿವಂತ ದಲಿತ ಗಂಡಸನ್ನ ಬ್ರಾಹ್ಮಣ ಅಥವ ಮೇಲ್ಜಾತಿ ಮಹಿಳೆ ಮದುವೆಯಾದಾಗ ದಲಿತಪರವಾದಿಗಳು, ಇದು ಜಾತಿ ಸ್ಥಿತಿ ನೋಡಿ ಆದ ವಿವಾಹವಲ್ಲ, ಕೇವಲ ತಮ್ಮ ಸ್ವಾರ್ಥಕ್ಕಾಗಿ ದಲಿತನ ಸ್ಥಿತಿವಂತಿಕೆ ನೋಡಿ ಆದ ಸಂಬಂಧ ಎಂದು ವಿಶ್ಲೇಷಿಸಿದ್ದಾರೆ. ಆದರೆ ಹವ್ಯಕ ಬ್ರಾಹ್ಮಣರಲ್ಲಿ ಮದುವೆಗೆ ಹೆಣ್ಣು ಮಕ್ಕಳೇ ಸಿಗದಿರುವ ಪರಿಸ್ಥಿತಿಯಲ್ಲಿ ಹವ್ಯಕ ಬ್ರಾಹ್ಮಣ ಗಂಡಸರು ಅನಾಥಾಶ್ರಮಗಳಲ್ಲಿ ಬೆಳೆದು, ಓದಿದ, ಜಾತಿಯೇ ಗೊತ್ತಿಲ್ಲದಿರುವ ಯುವತಿಯರನ್ನು ಸರಳವಾಗಿ ವಿವಾಹಗಳಾಗುತ್ತಿರುವ ಘಟನೆಗಳು ಸಹಜವಾಗಿ ನಡೆಯುತ್ತಿವೆ. ಇದು ಮನೋವೈಜ್ಞಾನಿಕ ಚರ್ಚೆಗೆ ಒಳಗಾಗಬೇಕಿದೆ.

ಲಿಂಗಾಯಿತರಲ್ಲಿ ಎಸ್.ಬ್ರ್ಯಾಂಡ್, ಬಿ.ಬ್ರ್ಯಾಂಡ್, ಪಿ.ಬ್ರ್ಯಾಂಡ್ ಎಂದು ಸಾದರ, ಬಣಜಿಗ, ಪಂಚಮಸಾಲಿ ಲಿಂಗಾಯಿತರಲ್ಲಿ ಶಿಕ್ಷಣ, ಅಧಿಕಾರ, ಸಂಪತ್ತಿನ ಹಂಚಿಕೆ ವಿಚಾರ ಬಂದಾಗ ವಿಜಾತಿವಿವಾದಗಳಾಗಿ ಮುಂದುವರಿದಿವೆ. ಇದು ಮಠಗಳ ಸ್ಥಾಪನೆ, ಪ್ರಾಬಲ್ಯದ ಮೂಲಕ ವ್ಯಕ್ತವಾಗುತ್ತಿದೆ. ಇವರಲ್ಲೇ ಜಂಗಮರು ಶ್ರೇಷ್ಟರೆನಿಸಿಕೊಳ್ಳುತ್ತಾರೆ. ಇವರಿಗೆ ಮಠಾಧಿಪತಿಗಳಾಗುವ ಆದ್ಯತೆ ಹೆಚ್ಚಿರುತ್ತದೆ. ಆದರೆ ಲಿಂಗಾಯಿತರಲ್ಲೆ ಕೆಳ ಜಾತಿಗಳಾದ ಮಡಿವಾಳ ಲಿಂಗಾಯಿತರು, ಗಾಣಿಗಲಿಂಗಾಯಿತರು, ಅಂಬಿಗಲಿಂಗಾಯಿತರು, ಹಡಪದಲಿಂಗಾಯಿತರು ಮುಂತಾದವರಿಗೆ ಮೇಲು ಜಾತಿಯ ಲಿಂಗಾಯಿತರೊಳಗೆ ವೈವಾಹಿಕ ಸಂಬಂಧ ನಿಷಿದ್ಧವಾಗಿದೆ. ಹಾಗೆ ಜಾತಿಯೊಳಗೇ ಬೇರೆ ಬೇರೆ ಮಠಗಳಿವೆ. ಇದು ಜಾತಿವ್ಯವಸ್ಥೆಯ ಕರಾಳ ಮುಖ.

ಸ್ವತಂತ್ರ ಪೂರ್ವ ಮತ್ತು ನಂತರದ ದಿನಗಳಲ್ಲಿ ಜಾತಿಗಳು ಶ್ರೇಷ್ಟತೆಯ ವ್ಯಸನದಲ್ಲಿ ಸಿಲುಕಿ ತಮ್ಮ ಜಾತಿ ಹೆಸರನ್ನು ಉನ್ನತೀಕರಿಸುವ ಅಥವ ಸಂಸ್ಕೃತೀಕರಿಸುವ ಘಟನೆಗಳು ಕಂಡು ಬರುತ್ತವೆ. ಮೈಸೂರು ಅರಸರ ಸಂಸ್ಥಾನದ ವ್ಯಾಪ್ತಿಯಲ್ಲಿ ಜಾತಿಯಲ್ಲಿ ಬೆಸ್ತರಾಗಿದ್ದವರು ಮೈಸೂರು ಅರಸರಿಗೆ ಮನವಿ ಸಲ್ಲಿಸಿ ನಮ್ಮ ಜಾತಿ ಹೆಸರು ಕೀಳಾಗಿ ಕಾಣುತ್ತಿರುವುದರಿಂದ ಗಂಗಾಕುಲ ಅಥವ ಗಂಗಾಮತಸ್ಥರೆಂದು ಕರೆಯಬೇಕೆಂದು ಕೋರಿಕೊಳ್ಳುತ್ತಾರೆ. ಮೈಸೂರು ಅರಸರು ಅದನ್ನು ಮಾನ್ಯ ಮಾಡಿ ಆದೇಶ ಹೊರಡಿಸುತ್ತಾರೆ. ಹಾಗೆ ಕ್ಷೌರಿಕ, ಹಜಾಮ, ಹಡಪದ ಎನ್ನುವ ಜಾತಿ ಹೆಸರು ಸಂಸ್ಕೃತೀಕರಣಗೊಂಡು ಸವಿತಾ ಸಮಾಜವಾಗುತ್ತದೆ. ಆಚಾರಿಗಳು, ಬಡಗಿಗಳು ಎಲ್ಲಾ ಸೇರಿಕೊಂಡು ವಿಶ್ವಕರ್ಮ ಬ್ರಾಹ್ಮಣರಾಗುತ್ತಾರೆ. ಈಡಿಗರು ಆರ್ಯ ಈಡಿಗರೆಂದು, ಕುಂಬಾರರು ಕುಲಾಲಗುಂಡ ಬ್ರಹ್ಮಾರ್ಯ ಕುಂಬಾರರೆಂದು, ತಿಗಳರು ವಹ್ನಿಕುಲ ಕ್ಷತ್ರಿಯರೆಂದು, ಹೊಲೆಯರು ಛಲವಾದಿ ಜನಾಂಗವೆಂದು, ಮಾದಿಗರು ಅರುಂಧತಿ ಜನಾಂಗವೆಂದು ಕರೆದುಕೊಳ್ಳುತ್ತಾರೆ. ಹೀಗೆ ಹಲವಾರು ಜಾತಿಗಳು ತಮ್ಮ ಹೆಸರನ್ನು ಸಂಸ್ಕೃತೀಕರಣಗೊಳಿಸಿಕೊಂಡಿರುವುದನ್ನು ಕಾಣಬಹುದು.

ಗಾಣಿಗರು, ಉಪ್ಪಾರರು, ಬಣಜಿಗರು, ಕಮ್ಮಾರರು, ಗೆಜ್ಜಗಾರರು, ತಮ್ಮ ಜಾತಿಯ ಮುಂದೆ ಗಾಣಿಗಶೆಟ್ಟರು, ಉಪ್ಪಾರಶೆಟ್ಟರು, ಬಣಜಿಗಶೆಟ್ಟರು, ಗೆಜ್ಜಗಾರಶೆಟ್ಟರು ಎಂದು ಕರೆದುಕೊಳ್ಳುವುದು ಮತ್ತು ವ್ಯಕ್ತಿಯ ಹೆಸರಿನೊಂದಿಗೆ ಶೆಟ್ಟಿಯೆಂದು ಕರೆದುಕೊಳ್ಳುವುದು. ಅಂದರೆ ಮಹಾದೇವ-ಮಹಾದೇವ ಶೆಟ್ಟಯಾಗುತ್ತಾರೆ. ಇಲ್ಲಿ ದೊಡ್ಡ ವ್ಯಾಪಾರಿಗಳಾದ ಕೊಮಟಿವೈಶ್ಯ ಜನಾಂಗದ ಶ್ರೇಷ್ಠಿ ಪದ ಸಣ್ಣ ಸಣ್ಣ ವ್ಯಾಪಾರಿಗಳಾಗಿ ಎಣ್ಣೆ, ಉಪ್ಪು, ಬಳೆ, ಕಬ್ಬಿಣ ಮಾರುವವರಿಗೆ ಶ್ರೇಷ್ಠಿ ಪದ ಅಪಭ್ರಂಶವಾಗಿ ಶೆಟ್ಟಿ ಪದಗಳಾಗಿ ಬಳಕೆಯಾಗಿದೆ. ಹಾಗೆ ಕುರುಬರು, ಗೊಲ್ಲರು, ಕುರುಬಗೌಡ, ಗೊಲ್ಲಗೌಡರೆಂದು ಕೊಳ್ಳುವುದು ಜೊತೆಗೆ ವ್ಯಕ್ತಿಗಳ ಹೆಸರಿನೊಂದಿಗೆ ಗೌಡ ಪದವನ್ನು ಸೇರಿಸಿಕೊಳ್ಳುವ ಮೂಲಕ ಜಾತಿಗಳನ್ನ ಉನ್ನತೀಕರಿಸಿಗೊಳ್ಳುವ ಅಥವ ಸಂಸ್ಕೃತಿಕರಣಗೊಳ್ಳುವ ಕ್ರಿಯೆಯಾಗಿರುತ್ತದೆ. ಈ ಎಲ್ಲಾ ಕ್ರಿಯೆಗಳು ಸಮಸ್ತ ಜಾತಿಗಳ ಶ್ರೇಷ್ಟತೆಯ ವ್ಯಸನವಾಗಿ ಕಂಡು ಬರುತ್ತದೆ. ಇದರಿಂದ ಈ ಶೋಷಿತ ಜಾತಿಗಳ ಸಾಮಾಜಿಕ ಸ್ಥಾನಮಾನ ಯಾವುದೇ ಬದಲಾವಣೆಗೆ ಒಳಗಾಗದಿದ್ದರು, ಜಾತಿಯ ಹೆಸರನ್ನು ಸಂಸ್ಕೃತಿಕರಣಗೊಳಿಸಿಕೊಂಡು ಸಮಾಧಾನ ಪಟ್ಟಿಕೊಳ್ಳುವುದಾಗಿರುತ್ತದೆ. ಇತ್ತೀಚೆಗೆ ಸುಶಿಕ್ಷಿತ ವರ್ಗಗಳು ಜಾತಿಯಾಗಿ ಗುರುತಿಸಲ್ಪಡುತ್ತಿದ್ದ ವ್ಯಕ್ತಿ ಹೆಸರುಗಳಾದ ಗೌಡ, ನಾಯಕ, ಶೆಟ್ಟಿ, ಭಟ್ಟ, ಮುಂತಾದ ಹೆಸರುಗಳನ್ನು ಸಾಮಾಜಿಕ ಸ್ಥಾನಮಾನಕ್ಕಾಗಿ ಮರೆಮಾಚಿ ಸಂಸ್ಕೃತೀಕರಣಗೊಂಡ ಹೆಸರುಗಳನ್ನು ಇತ್ತೀಚಿನ ಶಾಲಾ ದಾಖಲಾತಿಗಳಲ್ಲಿ ಕಾಣಬಹುದು.

ಆದರೆ ಮೀಸಲಾತಿಯ ಸವಲತ್ತಿಗಾಗಿ ಜಾತಿ ಪ್ರಮಾಣಪತ್ರ ಸಲ್ಲಿಸುವವರು ಇವರೇ ಆಗಿರುತ್ತಾರೆ. ಇದು ಜಾತಿ ವ್ಯವಸ್ಥೆಯ ಮಾನಸಿಕ ಸ್ಥಿತಿ. ಜಾತಿಯನ್ನು ಉನ್ನತೀಕರಿಗೊಳ್ಳುವುದು ಅಥವ ಸಂಸ್ಕೃತೀಕರಿಸಿಗೊಳ್ಳುವುದು ಉನ್ನತ ಸಾಮಾಜಿಕ ಸ್ಥಾನಮಾನಕ್ಕಾಗಿ ಹಂಬಲಿಸುವ ಮೇಲ್ಮುಖ ಚಲನೆಯಾಗಿತ್ತು. ಆದರೆ ಮೀಸಲಾತಿಯ ಸವಲತ್ತುಗಳಿಗಾಗಿ ಇತ್ತೀಚೆಗೆ ಹಲವಾರು ಜಾತಿಗಳ ಕುಲ ಶಾಸ್ತ್ರೀಯ ಅಧ್ಯಯನದಲ್ಲಿ ಕೀಳು, ಕೆಳಜಾತಿಯ ಹೆಸರುಗಳನ್ನು ಮತ್ತು ಸಂಸ್ಕೃತಿಗಳನ್ನು ಪ್ರತಿಪಾದಿಸುವ ಮೂಲಕ ಕೆಳಮುಖ ಚಲನೆ ಕಂಡು ಬಂದಿದೆ.

ಇನ್ನೂ ನೋವಿನ ವಿಚಾರವೆಂದರೆ, ಇಂದಿಗೂ ಗುರುತಿಸದೇ ಇರುವ ಎಷ್ಟೋ ಜಾತಿಗಳು ಈ ದೇಶದಲ್ಲಿವೆ. ದಕ್ಷಿಣಕನ್ನಡ ಜಿಲ್ಲೆಯ “ಮನ್ಸ” ಎಂಬ ಜಾತಿಯಿದೆ. ಇದು “ಮನುಷ್ಯ” ಪದದ ಅಪಭ್ರಂಶವಾಗಿ ಮನ್ಸ ಆಗಿರುವ ಸಾಧ್ಯತೆಯಿದೆ. ಇದು ಅಸ್ಪೃಶ್ಯ ಜನಾಂಗವಾಗಿದೆ. ಆದರೆ ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಈ ಜಾತಿಯ ಹೆಸರು ಇಲ್ಲವಾಗಿದೆ. ಹಾಗಾಗಿ “ಮನ್ಸ” ಜಾತಿಯ ಜನರು ಆದಿದ್ರಾವಿಡ ಅಥವ ಆದಿಕರ್ನಾಟಕ ಎನ್ನುವ ತಮ್ಮದಲ್ಲದ ಜಾತಿ ಹೆಸರಿನಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ಸವಲತ್ತು ಪಡೆಯುವ ದುರ್ಗತಿ “ಮನ್ಸ” ಜಾತಿಯದಾಗಿದೆ. ಹಾಗೆ ಅಲೆಮಾರಿ ಜನಾಂಗಗಳಲ್ಲಂತೂ ಜಾತಿ ಹೆಸರೆ ಹೇಳಿಕೊಳ್ಳಲಾಗದೆ ಬದುಕುತ್ತಿರುವ ದುಸ್ಥಿತಿಯಿದೆ. ಮೈಸೂರು ಜಿಲ್ಲೆಯ ಏಕಲವ್ಯ ನಗರವೆಂಬ ಕುಗ್ರಾಮದಲ್ಲಿ ಮರಾಠಿಶಿವಾಜಿ ಎನ್ನುವ ಜಾತಿ ಜನರಿದ್ದಾರೆ, ಅವರ ಕಸುಬು ತೊಗಲುಬೊಂಬೆ ಆಡಿಸುವುದು. ಇದು ಕರ್ನಾಟಕದ ಪರಿಶಿಷ್ಟ  ಜಾತಿ ಪಟ್ಟಿಯಲ್ಲಿ ಇಲ್ಲ. ಆದರೆ ತೊಗಲುಬೊಂಬೆ ಆಡಿಸುವ ಸಮಾನಾಂತರ ಅಥವಾ ಪರ್ಯಾಯ ಜಾತಿಯಾಗಿರುವ ಶಿಳ್ಳೆಕ್ಯಾತರ ಹೆಸರಲ್ಲಿ ಮೀಸಲಾತಿಯ ಸವಲತ್ತು ಪಡೆಯಬೇಕಾಗಿದೆ. ಹೀಗೇ ಗುರುತಿಸದೇ ಇರುವ ಜಾತಿಗಳು ಅನಾಥ ಪ್ರಜ್ಞೆಯಿಂದ ನರಳುತ್ತಾ ತಮ್ಮ ಜಾತಿಗಳ ಅಸ್ಥಿತ್ವ ಮರೆತು ಸವಲತ್ತುಗಳಿಗಾಗಿ “ಜಾತಿಯಾಂತರ” ವಾಗಿದ್ದಾರೆ. ಸಮಗ್ರ ಮತ್ತು ಸಮರ್ಪಕ ಜಾತಿ ಜನಗಣತಿ ನಡೆದರೆ ಇಂತಹ ನೂರಾರು ಜಾತಿಗಳು ಸಿಗಬಹುದು. ಇತ್ತೀಚೆಗೆ ಕೇಂದ್ರ ಸರ್ಕಾರ ಆರ್ಥಿಕ, ಸಾಮಾಜಿಕ ಜಾತಿ ಜನಗಣತಿ ಸರ್ವೆ ಮಾಡುತ್ತಿದೆ. ಇದು ಸಂಪೂರ್ಣವಾಗಿ ಮುಗಿದು, ವರದಿ ತಯಾರಾಗಿ, ಸರ್ಕಾರ ಪರಿಶೀಲಿಸಿ, ಅಂಗೀಕರಿಸಿ, ಜಾರಿಗೆ ಬರಲು ಇನ್ನೆಷ್ಟು ದಶಕಗಳು ಬೇಕಾಗಬಹುದೊ, ಗೊತ್ತಿಲ್ಲ.

ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸರ ಮೌನಕ್ರಾಂತಿಯ ಫಲವಾಗಿ ದೇಶದಲ್ಲೆ ಪ್ರಪ್ರಥಮ ಹಿಂದುಳಿದ ಜಾತಿಗಳ ವರದಿ ಮತ್ತು ಶೋಷಿತ ಜಾತಿಗಳ ಬೈಬಲ್ ಎಂದೇ ಪರಿಗಣಿಸಿರುವ ಎಲ್.ಜಿ.ಹಾವನೂರ ವರದಿ ಜಾರಿಯಾದರೂ ಕೂಡ ಪರಿಪೂರ್ಣವಾಗಿರಲಿಲ್ಲ. ಅಂದಿನ ವರದಿಯಲ್ಲಿ ಹಿಂದುಳಿದ ಬುಡಕಟ್ಟುBackward tribe (B.T) ಹಿಂದುಳಿದ ಜಾತಿ-Backward caste (B.C.T) ಹಿಂದುಳಿದ ಸಮಾಜ-Backward Community (B.C.M). ವಿಶೇಷ ವರ್ಗ-Special Group (S.G) ಎಂದು ನಾಲ್ಕು ವರ್ಗೀಕರಣ ಮಾಡಿರುತ್ತಾರೆ.

ಒಂದೇ ಜಾತಿಯ ಉಪಜಾತಿ ಅಥವ ಪರ್ಯಾಯ ಜಾತಿ ಅಥವ ಸಮಾನಂತರ ಜಾತಿಗಳು ಕೆಲವು ಬಿ.ಟಿ ಪಟ್ಟಿಯಲ್ಲಿದ್ದರೆ, ಕೆಲವು ಬಿ.ಸಿ.ಟಿ ಪಟಿಯಲ್ಲಿದ್ದಾರೆ, ಉದಾಹರಣೆಗೆ ಬೆಸ್ತ,  ಗಂಗಾಕುಲ, ಗಂಗಾಮತಸ್ಥ, ಪರಿವಾರ ಮುಂತಾದ ಜಾತಿಗಳು ಬಿ.ಸಿ.ಟಿ. ಪಟ್ಟಿಯಲ್ಲಿದ್ದರೆ, ಬೆಸ್ತರ್, ಬುಂಡೆಬೆಸ್ತ, ಪರಿವಾರನಾಯಕ ಜಾತಿಗಳು ಬಿ.ಟಿ.ಪಟ್ಟಿಯಲ್ಲಿ ಗುರುತಿಸಲಾಗಿತ್ತು. ಜಾತಿ ಸರ್ವೆ ಮಾಡುವಾಗ ಯಾವುದೇ ಜಾತಿಗಳನ್ನು ತಮ್ಮ ಜಾತಿಯ ಹೆಸರೇನೆಂದು ಪ್ರಶ್ನಿಸಿದರೆ ಪ್ರತಿಯೊಬ್ಬರೂ ತಮ್ಮ ಜಾತಿಯನ್ನು ಬಹುವಚನದಲ್ಲಿ ಕರೆದುಕೊಳ್ಳುವುದು ವಾಡಿಕೆ. ಬ್ರಾಹ್ಮಣ-ಬ್ರಾಹ್ಮಣರು, ಲಿಂಗಾಯಿತ-ಲಿಂಗಾಯಿತರು, ಒಕ್ಕಲಿಗ-ಒಕ್ಕಲಿಗರು, ಗಾಣಿಗ-ಗಾಣಿಗರು, ಕುರುಬ-ಕುರುಬರು ಹೀಗೆ ಕರೆದುಕೊಳ್ಳುತ್ತಾರೆ. ಆದರೆ ಜಾತಿಯಾಗಿ, ವ್ಯಕ್ತಿಯಾಗಿ ಗುರುತಿಸುವಾಗ ಏಕವಚನ ಬಳಸಬೇಕಾಗುತ್ತದೆ. ಇದು ಸಾಮಾನ್ಯ ಜ್ಞಾನ. ಬ್ರಾಹ್ಮಣರು-ಬ್ರಾಹ್ಮಣ, ಲಿಂಗಾಯಿತರು-ಲಿಂಗಾಯಿತ, ಒಕ್ಕಲಿಗರು-ಒಕ್ಕಲಿಗ, ಗಾಣಿಗರು-ಗಾಣಿಗ, ಕುರುಬರು-ಕುರಬ, ಆಗುತ್ತಾರೆ. ಆದರೆ ಬೆಸ್ತರು-ಬೆಸ್ತ ಆಗುವ ಬದಲು ಬೆಸ್ತರ್ ಎಂದು ಗುರುತಿಸಿ ಬಹುದೊಡ್ಡ ಲೋಪವಾಗಿ ಹಾವನೂರು ವರದಿಯಲ್ಲಿ ಕಾಣುತ್ತದೆ.

ಹೀಗೆ ಹಲವಾರು ಪ್ರಮಾದಗಳನ್ನು ಪಟ್ಟಿ ಮಾಡಬಹುದು. ನಂತರದ ದಿನಗಳಲ್ಲಿ ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ, ವರದಿಗಳಲ್ಲಿ ವೈಜ್ಞಾನಿಕ ಅಂಶಗಳಿಗೆ ಒತ್ತುಕೊಟ್ಟು, ವರದಿ ನೀಡಿದ್ದರು.  ದುರಂತವೆಂದರೆ ಅವುಗಳು ಜಾರಿಯಾಗಲೇ ಇಲ್ಲ. ಕಾರಣ ಹಾವನೂರು ವರದಿಯಲ್ಲಿದ್ದ ಕೆಲವು ಮುಂದುವರಿದ ಜಾತಿಗಳನ್ನು ಕೈಬಿಡಲಾಗಿತ್ತು. ಆದರೆ ದೊಡ್ಡ, ಪ್ರಬಲ ಜಾತಿಗಳ ವಿರೋಧ ವ್ಯಕ್ತವಾಗಿತ್ತು. ಅಶಕ್ತ, ಸಣ್ಣಜಾತಿಗಳು ದನಿಯೆತ್ತಿದರೂ ಅವರ ಕೂಗು ಅರಣ್ಯರೋಧನವಾಯಿತು. ಈಗ ಕಲಸು ಮೇಲೋಗರವಾಗಿರುವ ಹಿಂದುಳಿದ ಜಾತಿಗಳ ವರ್ಗೀಕರಣವಾಗಿದೆ. ಇದು ವೀರಪ್ಪಮೊಯ್ಲಿ ಸರ್ಕಾರದ ಸಂದರ್ಭದಲ್ಲಿ ಜಾರಿಯಾಗಿ ಈಗಲೂ ಜಾಲ್ತಿಯಲ್ಲಿದೆ. ತದನಂತರ ರವಿವರ್ಮಕುಮಾರ ವರದಿಯಾಗಲಿ, ದ್ವಾರಕನಾಥ ವರದಿಯಾಗಲಿ ಜಾರಿಗೆ ಬರುವ ಯಾವ ಲಕ್ಷಣಗಳೂ ಕಂಡು ಬಂದಿಲ್ಲ.

ಈ ಜಾತಿ ವ್ಯವಸ್ಥೆಯ ಕುತೂಹಲಕರ ಅಂಶಗಳೆಂದರೆ ಜಾತಿಶೋಷಣೆ ವಿರುಧ್ಧ ಹೋರಾಡುತ್ತಿರುವ ಜಾತಿಶೋಷಿತರೆ ಕೊನೆ ಕೊನೆಗೆ ಶೋಷಕರಾಗಿ ಪರಿವರ್ತಿತರಾಗಿ ಬದಲಾಗುತ್ತಾರೆ. ಇದು ಜಾತಿ ವ್ಯವಸ್ಥೆಯಿಂದಾದ ಮನೊಸ್ಥಿತಿ. ಈ ಮಾನಸಿಕ ರೋಗಕ್ಕೆ ಮದ್ದನ್ನು ಕಂಡು ಹಿಡಿಯುವ ಕೆಲಸ ಸಾಮಾಜಿಕ ವಿಜ್ಞಾನಿಗಳಿಂದ ತುರ್ತಾಗಿ ಆಗಬೇಕಿದೆ. ಈ ತಳಸಮುದಾಯಗಳ ವಿಶೇಷ ಗುಣವೆಂದರೆ ಹಂಚಿ ತಿನ್ನುವ ಗುಣ ಲಕ್ಷಣ. ಆದರೆ ಇದು ಶಿಕ್ಷಣ, ಅಧಿಕಾರ, ಸಂಪತ್ತುಗಳಿಸುವವರೆಗೂ ಇರುತ್ತದೆ. ಗಳಿಸಿದ ನಂತರ ಕಿತ್ತು ತಿನ್ನುವ ಸ್ವಾರ್ಥ ಗುಣ ಹೆಚ್ಚಾಗಿ ಕಂಡು ಬರುತ್ತದೆ. ಈ ಮಾನಸಿಕ ಸ್ಥಿತಿಯ ಪಲ್ಲಟದ ಬಗ್ಗೆಯೂ ಮನೊವೈಜ್ಞಾನಿಕ ವಿಶ್ಲೇಷಣೆಯಾಗಬೇಕಿದೆ. ಉದಾಹರಣೆಗೆ ಪರಿಶಿಷ್ಟ ಜಾತಿಪಟ್ಟಿಗೆ ದಲಿತಬೌದ್ಧರನ್ನು ಸೇರ್ಪಡೆ ಮಾಡಲು ಹೋದಾಗ ತೀವ್ರವಾದ ವಿರೋಧ ದಲಿತ ಹಿಂದೂಗಳಿಂದ ವ್ಯಕ್ತವಾಯಿತು. ಕೊನೆಗೆ ಹಲವಾರು ವರ್ಷಗಳ ಹೋರಾಟದ ನಂತರ ಸೇರ್ಪಡೆಯಾಯಿತು. ಇತ್ತೀಚೆಗೆ ದಲಿತ ಕ್ರಿಶ್ಚಿಯನ್ರು, ದಲಿತ ಮುಸ್ಲಿಂರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡಲು ಪ್ರಯತ್ನ ನಡೆದಾಗ ದಲಿತ ಹಿಂದೂಗಳಿಂದ ತೀವ್ರ ತರವಾದ ವಿರೋಧ ವ್ಯಕ್ತವಾಗಿ, ಅದು ನೆನೆಗುದಿಗೆ ಬಿದ್ದಿದೆ.

ಹಾಗೆ ಪರಿಶಿಷ್ಟ ಬುಡಕಟ್ಟಿಗೆ ಗುಜ್ಜಾರ ಜಾತಿಯನ್ನು ಸೇರ್ಪಡೆ ಮಾಡಲು ಮೀನಾ ಜನಾಂಗ ವಿರೋಧ ಮಾಡುವುದು, ಪರಿವಾರ ಜಾತಿ ಸೇರ್ಪಡೆಗೆ ಬೇಡ ಜನಾಂಗ ವಿರೋಧ ಮಾಡುವುದು, ಹೀಗೆ ಮೀಸಲಾತಿಯ ಎಲ್ಲಾ ವರ್ಗೀಕರಣ ಪಟ್ಟಿಯಲ್ಲಿ ಈಗಾಗಲೇ ಸ್ಥಾನ ಪಡೆದ ಜಾತಿಗಳು, ಅದೇ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದ ಅರ್ಹ ಜಾತಿಗಳ ಸೇರ್ಪಡೆ ಬಂದಾಗ ವಿರೋಧಿಸುವುದು. ಇಲ್ಲಿ ಹಂಚಿ ತಿನ್ನುವ ಗುಣ ಮಾಯವಾಗಿ ಕಿತ್ತು ತಿನ್ನುವ ಲಕ್ಷಣ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ಕಾಲ ಘಟ್ಟದ ಕಳ್ಳು-ಬಳ್ಳಿಗಳಾಗಿದ್ದ ಜಾತಿಗಳೇ ಪರಸ್ಪರ ವಿರುದ್ಧ ಕಿತ್ತಾಡುವುದು. ಇಲ್ಲಿ ದೇವನೂರು ಮಹದೇವರ “ಸಂಬಜ ಅನ್ನಾದು ದೊಡ್ದುಕನ” ಎನ್ನುವ ಪದದ ಅರ್ಥವ್ಯಾಪ್ತಿಯೇನು? ಇದನ್ನು ಈ ಹೊತ್ತಿನ ಸ್ವಾರ್ಥದ ಪರಾಕಾಷ್ಟೆಯ ಸಮಾಜದಲ್ಲಿ ಅನ್ವಯಿಸುವುದು ಹೇಗೆ? ಇವೆಲ್ಲವು ಸಾಮಾಜಿಕ ಮನೋ ವಿಶ್ಲೇಷಣೆಗೆ ಒಳಗಾಗಬೇಕಾದ ಅಂಶವಾಗಿದೆ. ಸ್ವಾರ್ಥ ಬಂದಾಗ ಜಾತಿ, ರಕ್ತ ಸಂಬಂಧ ಎಲ್ಲವೂ ಗೌಣವಾಗಿ, ತೃಣ ಸಮಾನವಾಗಿ ಸ್ವಾರ್ಥ ಲಾಲಸೆಯ ಪರಾಕಾಷ್ಟೆ ಮೆರೆಯುತ್ತದೆ. ಹಾಗಾದರೆ ಬದಲಾಗ ಬೇಕಿರುವುದು ವ್ಯಕ್ತಿಯಾಗಿ ಜಾತಿ, ಸಮಾಜದ ಮನಸ್ಥಿತಿ. ಇದು ಅತ್ಯಗತ್ಯವಾಗಿದ್ದು ಸಮಷ್ಟಿ ಪ್ರಜ್ಞೆ ಬಿತ್ತುವ ಆಧ್ಯಾತ್ಮಿಕ ಆಂದೋಲನ ಬೇಕಾಗಿದೆ. ಕೇವಲ ಸಾಮಾಜಿಕ ನ್ಯಾಯದ ಪರಿಕರಗಳು, ಕಾನೂನು, ಕಾಯಿದೆಗಳಿಂದ ಸಮ ಸಮಾಜ, ಸಮಪಾಲು, ಸಮಬಾಳು ಸಾಧ್ಯವಿಲ್ಲವೆಂದು ಅರ್ಥೈಸಬಹುದು.

ಇಡೀ ಈ ಲೇಖನದ ಸಾರಾಂಶವಾಗಿ ಮೀಸಲಾತಿಯಿಂದ ಜಾತಿ ವ್ಯವಸ್ಥೆ ಮತ್ತುಷ್ಟು ಗಟ್ಟಿ ಮತ್ತು ಬಲಗೊಳ್ಳುತ್ತಿದೆ ಎಂದು ಭಾವಿಸುವ ಎಲ್ಲಾ ಲಕ್ಷಣಗಳು ಇವೆ. ಆದರೆ ಮುಳ್ಳಿನಿಂದ ಮುಳ್ಳನ್ನು ತೆಗೆಯುವ ತಂತ್ರವಾಗಿಟ್ಟುಕೊಂಡು ಶೋಷಿತ ಜಾತಿಗಳ ಸಂಘಟನೆಯ ಮೂಲಕವೇ ಜಾತಿ ವಿನಾಶಕ್ಕೆ ದಾರಿಯಾಗುತ್ತದೆ. ಇದು ದ್ವಂದ್ವ, ವಿತಂಡವಾದವೆನಿಸಬಹುದು. ಜಾತಿ ಹೆಸರಿನಲ್ಲಿ ಅದರ ಫಲಪಡೆಯುವವರು ಕೇವಲ ಆ ಜಾತಿಯೊಳಗಿನ ಕೆನೆ ಪದರದ ಜನ ಮಾತ್ರ. ಇದೇ ಜಾತಿಯ ಬಡಜನಗಳಿಗೆ ಅದರ ಫಲ ಸಿಗುವುದು ಬಹಳ ಕಡಿಮೆ. ಇವರು ಬಹುಸಂಖ್ಯಾತರಾಗಿರುತ್ತಾರೆ. ಇದು ನಮ್ಮ ಮುಂದಿರುವ ಕಹಿ ಸತ್ಯ. ಆಗ ಉಳಿದ ಫಲ ಸಿಗದ ಜಾತಿ ಬಡಜನಗಳು ಜಾತಿ ಹೆಸರಿನಿಂದ ಪ್ರಯೋಜನವಿಲ್ಲವೆಂದು ಅರಿವಾದಾಗ ಜಾತಿ ಹೆಸರಿನಿಂದ ದೂರ ಸರಿಯಲು ಅಥವ ತಿರಸ್ಕರಿಸಲು ಪ್ರಾರಂಭಿಸುತ್ತಾರೆ. ಇದು ಜಾತಿಗಳು ವರ್ಗಗಳಾಗಿ ಪರಿವರ್ತನೆಯಾಗುವ ಸಂಕ್ರಮಣ ಘಟ್ಟವಾಗಿರುತ್ತದೆ. ಹಾಗೆ ಜಾತಿ-ವಿಜಾತಿ ವಿವಾದ ಹೆಚ್ಚಾದಷ್ಟೂ ಮಾನವ ಸಹಜಗುಣವಾಗಿ ಜಾತಿಗಳ ಬಗ್ಗೆಯೇ ಹೇಸಿಗೆ, ರೇಜಿಗೆ ಹುಟ್ಟಿಸಿ ಜಾತಿ ವಿನಾಶದ ಮನಸ್ಸು ಜೊತೆಜೊತೆಗೇ ಒಡಮೂಡಬಹುದು. ಅಂತಿಮವಾಗಿ ಜಾತಿ ವಿನಾಶಕ್ಕೆ ದಾರಿಯಾಗಬಹುದು.

(ಚಿತ್ರಕೃಪೆ: ವಿವಿಧ ಮೂಲಗಳಿಂದ)