Daily Archives: June 28, 2012

ಪ್ರಗತಿಶೀಲ ಸಾಹಿತ್ಯದಲ್ಲಿ ಜನಸಾಮಾನ್ಯರ ನೋವುಗಳ ಅನಾವರಣ


-ಬಿ. ಶ್ರೀಪಾದ್ ಭಟ್


 

 

ನಾವು ಬದುಕುತ್ತಿರುವ ವರ್ತಮಾನದ ಸ್ಥಿತಿಗತಿಗಳ ಬಗೆಗೆ ನಿಮಗೆ ಅರಿವಿಲ್ಲದಿದ್ದರೆ ನೀವು ನನ್ನ ಕತೆಗಳನ್ನು ಓದಬೇಕು. ಈ ನನ್ನ ಕತೆಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ ಇಂದಿನ ವರ್ತಮಾನವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ”

– ಸಾದತ್ ಹಸನ್ ಮಂಟೋ.

 

“There was a grief I smoked
in silence, like a cigarette                                                                                                                                                                                                                                                                                                                                                                                                                                                                                                                                                                                                                                                                            only a few poems fell
out of the ash I flicked from it.”
– ಅಮೃತಾ ಪ್ರೀತಮ್.

“ಇಂಡಿಯಾದ ಸಾಹಿತ್ಯವು ವಾಸ್ತವದ ಸ್ಥಿತಿಯನ್ನು ಎದುರಿಸುವುದನ್ನು ತಪ್ಪಿಸಿಕೊಳ್ಳಲು ದಯನೀಯವಾಗಿ ಪ್ರಯತ್ನಿಸುತ್ತಿದೆ. ವಾಸ್ತವದ ಅಸಮಾನತೆಗಳನ್ನು, ಬಡತನವನ್ನು ಎದುರಿಸಲಿಕ್ಕಾಗದೆ ಆಧ್ಯಾತ್ಮದ ಮೊರೆ ಹೋಗುತ್ತಲಿದೆ. ಬದಲಾಗಿ ನಿರ್ಜಿವವಾದ, ವ್ಯತಿರಿಕ್ತವಾದ ಜಡತ್ವವನ್ನು ಪ್ರದರ್ಶಿಸುತ್ತಿದೆ. ಇದು ಹೆಚ್ಚೂ ಕಡಿಮೆ ರಕ್ತಮಾಂಸವಿಲ್ಲದ ಸ್ಥಿತಿಯಾಗಿದೆ. ಇಂತಹ ಸಂದರ್ಭದಲ್ಲಿ ಇಂಡಿಯಾದ ಹೊಸ ಬರಹಗಾರರು ತಮ್ಮ ಪ್ರಗತಿಪರ ಚಿಂತನೆಗಳ ಮೂಲಕ ಸಾಹಿತ್ಯದಲ್ಲಿ ವೈಜ್ಞಾನಿಕವಾದ ಪರಿವರ್ತನೆಗೆ ಹೆಗಲುಗೊಡಬೇಕಾಗಿದೆ. ವೈಯುಕ್ತಿಕ ಸಂಸಾರ, ಧರ್ಮ ಮತ್ತು ಜಾತಿಗಳನ್ನು ಹೊದ್ದುಕೊಂಡಿರುವ ಇಂಡಿಯಾದ ಸಾಹಿತ್ಯವನ್ನು ಪ್ರೋತ್ಸಾಹಿಸದೆ ಕೋಮುವಾದ, ಜಾತಿವಾದ ಮತ್ತು ಮನುಷ್ಯ ಮನುಷ್ಯನನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ನಾಶಪಡಿಸುವತ್ತ ಹೆಜ್ಜೆ ಇಡಬೇಕಾಗಿದೆ. ಇಂಡಿಯಾದ ಸಾಹಿತ್ಯವನ್ನು ಸಾಂಪ್ರದಾಯಿಕ ಶಕ್ತಿಗಳಿಂದ ರಕ್ಷಿಸಬೇಕಾಗಿದೆ. ಇದು ನಮ್ಮ ಸಂಘಟನೆಯ ಮೂಲ ಉದ್ದೇಶ. ಈ ಮೂಲಕ ಸಾಹಿತ್ಯವನ್ನು ಜನರ ಬಳಿಗೆ ತರಬೇಕಾಗಿದೆ. ಇಂಡಿಯಾದ ಪ್ರಗತಿಪರ ಸಾಹಿತ್ಯವು ಈ ದೇಶದ ಮೂಲಭೂತ ಕಂಟಕಗಳಾದ ಹಸಿವು ಮತ್ತು ಬಡತನ, ಸಾಮಾಜಿಕ ಹಿಂದುಳುವಿಕೆ ಮತ್ತು ರಾಜಕೀಯ ಪರಿವರ್ತನೆಗಳನ್ನು ಉದ್ದೇಶಿಸಿ ಬರೆಯಬೇಕಾಗಿದೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಎತಿಹಿಡಿಯಬೇಕಾಗಿದೆ”.

ಇದು 75 ವರ್ಷಗಳ ಹಿಂದೆ 1936 ರಲ್ಲಿ ಅಸ್ತಿತ್ವಕ್ಕೆ ಬಂದ “ಪ್ರಗತಿಪರ ಲೇಖಕರ ಚಳವಳಿ”ಯ ಮ್ಯಾನಿಫೆಸ್ಟೋದ ಸಂಕ್ಷಿಪ್ತ ಸಾರಾಂಶ. ಈ ಪ್ರಗತಿಪರ ಲೇಖಕರ ಚಳವಳಿಯಲ್ಲಿರುವ ಬಹುಪಾಲು ಲೇಖಕರು ಎಡಪಂಥೀಯ ಚಿಂತಕರಾಗಿದ್ದರು. ವಸಾಹತುಶಾಹಿಯ ವಿರೋಧಿಗಳಾಗಿದ್ದರು. ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ತಮ್ಮ ಸಾಹಿತ್ಯವನ್ನು ರಚಿಸಿದರು. ಈ ಲೇಖಕರು ಮಹಾನ್ ಕಾದಂಬರಿಕಾರ ಮುನ್ಷಿ ಪ್ರೇಮಚಂದರಿಂದ ಸ್ಪೂರ್ತಿಯನ್ನು, ಬೆಂಬಲವನ್ನು ಪಡೆದಿದ್ದರು. ಈ ಪ್ರಗತಿಪರ ಲೇಖಕರ ಚಳವಳಿಯ ಅಸ್ಥಿತ್ವವನ್ನು ಮೊದಲಿಗೆ ಘೋಷಿಸಿದವರು ಉರ್ದು ಲೇಖಕರಾದ ಅಹಮದ್ ಅಲಿ, ಮಾಮುದ್ ಜಫರ್ ಮತ್ತು ಸೈಯ್ಯದ್ ಸಾಜದ್ ಜಾಹಿರ್. ಇವರೊಂದಿಗೆ ಈ ಪ್ರಗತಿಪರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಪ್ರಮುಖ ಲೇಖಕರೆಂದರೆ ಸಾದತ್ ಹಸನ್ ಮಂಟೋ, ಅಲಿ ಜವಾದ್ ಜೈದಿ, ಫೈಜ್ ಅಹ್ಮದ್ ಫೈಜ್, ಭೀಷ್ಮ ಸಹಾನಿ, ಇಸ್ಮತ್ ಚುಗತಾಯಿ, ತನ್ವೀರ್ ಹಬೀಬ್, ಕೈಫಿ ಅಜ್ಮಿ, ಕೃಷ್ಣಚಂದರ್, ರಾಜೇಂದ್ರಸಿಂಗ್ ಬೇಡಿ, ಫಿರಕ್ ಗೋರಕ್ಪುರಿ, ಇದ್ರಿಸ್ ಇಜಾದ್, ಮುಲ್ಕರಾಜ್ ಆನಂದ್, ಕೆ.ಎ.ಅಬ್ಬಾಸ್, ಮುಂತಾದವರು.

ಇವರೆಲ್ಲ ಮನರಂಜನಾತ್ಮಕ ಸಾಹಿತ್ಯ ರಚನೆಯನ್ನು ಸಾರಾಸಗಟಾಗಿ ತ್ಯಜಿಸಿದರು. ಬದಲಾಗಿ ಕಲೋನಿಯಲ್ ಸಂದರ್ಭದಲ್ಲಿ ಬದುಕುತ್ತಿದ್ದ ಸಾಮಾನ್ಯ ಜನರ, ಮಧ್ಯಮವರ್ಗಗಳ ಬವಣೆಗಳನ್ನು, ನೋವುಗಳನ್ನು ತಮ್ಮ ಸಾಹಿತ್ಯದ ಮೂಲಧಾತುವಾಗಿ ಅಳವಡಿಸಿಕೊಂಡರು. ಇದರ ಫಲವಾಗಿ ಆ ಕಾಲಕ್ಕೆ ಜನಪ್ರಿಯವಾಗಿದ್ದ ಅತಿರಂಜಿತ, ಕಾಲ್ಪನಿಕ ಸುಂದರ ನಾಯಕ, ನಾಯಕಿರ ಮನಮೋಹಕ ಕಥೆಗಳು ಕರಗಿಹೋಗಿ ಬದಲಾಗಿ ದಿನನಿತ್ಯದಲ್ಲಿ ಕಾಣುವಂತಹ ನಮ್ಮ ನೆರೆಮನೆಯ ಹುಡುಗ, ಹುಡುಗಿಯರು, ಕಲೋನಿಯಲ್‌ನ ಕ್ರೂರತೆಗೆ ಬಲಿಯಾದ ದಂಪತಿಗಳು ಸಾಹಿತ್ಯದ ಅಕ್ಷರಗಳಲ್ಲಿ ಒಡಮೂಡತೊಗಿದರು. ಅದೂ ಅತ್ಯಂತ ಶಕ್ತಿಶಾಲಿಯಾಗಿ. ಭಾವಪೂರ್ಣವಾಗಿ, ಕೆಲವೊಮ್ಮೆ ರೋಮ್ಯಾಂಟಿಕ್ ಆಗಿಯೂ ಸಹ. ಅದರೂ ಈ ಪ್ರಗತಿಪರ ಲೇಖಕರ ಸಹಜ ಅಭಿವ್ಯಕ್ತಿಯ ಸಾಹಿತ್ಯದಲ್ಲಿ ಇಂಡಿಯಾದ ಸಂದರ್ಭದಲ್ಲಿ ಜನಸಾಮಾನ್ಯರ ಕತ್ತಲು ಬದುಕಿನ ನೋವುಗಳು ನೇರವಾಗಿ ಅನಾವರಣಗೊಂಡಿತು. ಈ ಬಿಚ್ಚುಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಆಕ್ರೋಶಕ್ಕೆ ಬದಲಾಗಿ ತಣ್ಣನೆಯ, ಮೌನವಾಗಿ ಪ್ರತಿಭಟಿಸುವ ಧೋರಣೆಯಿತ್ತು. ಆದರೆ ಆದರ್ಶವನ್ನು ಎಂದೂ ಬಿಟ್ಟುಕೊಡಲಿಲ್ಲ. ಈ ಪ್ರಗತಿಪರ ಲೇಖಕರು ಎಲ್ಲಿಯೂ ರೋಚಕತೆಗೆ ಬಲಿಯಾಗಲಿಲ್ಲ. ಎಡಪಂಥೀಯರಾಗಿದ್ದರೂ ಸಿದ್ಧಾಂತದ ಗೊಡ್ಡುತನವನ್ನು, ಮಾರ್ಕ್ಸವಾದದ ಭೌತಿಕವಾದವನ್ನು, “ಕೆಂಬಾವುಟ” ಕಾಮ್ರೇಡ್ತನವನ್ನು, “ಪಾಂಪ್ಲೆಟ್” ಘೋಷಣೆಗಳನ್ನು ಸಾಹಿತ್ಯದಿಂದ ಗಾವುದ, ಗಾವುದ ದೂರ ಇಟ್ಟಿದ್ದರು ಈ ಪ್ರಗತಿಶೀಲ ಲೇಖಕರು. ಇವರ ಈ ನೆಲದ ಜೀವಂತಿಕೆಯಿಂದಾಗಿಯೇ ಇವರ ಸಾಹಿತ್ಯದಲ್ಲಿ ತನ್ನೆಲ್ಲ ಸಹಜತೆಯೊಂದಿಗೆ ರೋಮ್ಯಾಂಟಿಸಂ ಮೈದಾಳಿತ್ತು. ಆದರೆ ಅಲ್ಲಿ ಸೌಂದರ್ಯದ ಮೀಮಾಂಸೆ ಇರಲಿಲ್ಲ. ಅಲ್ಲಿ ಮನದಾಳದ ನೋವು ಮತ್ತು ಪ್ರೀತಿ ಒಟ್ಟೊಟ್ಟಿಗೇ ಚಲಿಸುತ್ತಿದ್ದವು. ದಿಟ್ಟತೆಯ ಹೊಸ ನೋಟಗಳು ತನ್ನೆಲ್ಲ ಸಹಜತೆ ಮತ್ತು ಪ್ರಾಮಾಣಿಕತೆಯೊಂದಿಗೆ ಓದುಗರನ್ನು ಮನದಾಳಕ್ಕೆ ಲಗ್ಗೆಯಿಡುತ್ತಿದ್ದವು.

ಆದರೆ ಈ ದಿಟ್ಟತೆಯಲ್ಲಿ ಬೆಚ್ಚಿ ಬೀಳಿಸುವ, ರೋಚಕತೆಯ ಹಪಾಹಪಿತನ ಲವಲೇಶವೂ ಇರಲಿಲ್ಲ. ಉರ್ದು ಭಾಷೆಯಲ್ಲಿ ಸಾಹಿತ್ಯವನ್ನು ರಚಿಸಿದ “ಇಸ್ಮತ್ ಚುಗ್ತಾಯಿ” ಆ ಕಾಲದ ದಿಟ್ಟ ಹಾಗೂ ಸ್ತ್ರೀವಾದಿ ಬರಹಗಾರ್ತಿಯಾಗಿದ್ದರು. ಸ್ತ್ರೀ ಸಂವೇದನೆಗಳನ್ನು ತನ್ನ ಮೊನಚು ಭಾಷೆಯಲ್ಲಿ ಬರೆದ ಮೊದಲ ಉರ್ದು ಲೇಖಕಿ. 60 ವರ್ಷಗಳ ಹಿಂದೆಯೇ ಮುಸ್ಲಿಂ ಮಹಿಳೆಯರು ಬುರ್ಖಾ ತೊಡುವ ಪದ್ಧತಿಯನ್ನು ತೀವ್ರವಾಗಿ ವಿರೋಧಿಸಿದ್ದರು. ಚುಗ್ತಾಯಿ 40ರ ದಶಕದಲ್ಲಿ ಬರೆದ ತಮ್ಮ “ಲಿಹಾಫೆ” ಕಥೆಯ ಮೂಲಕ ಸಲಿಂಗಕಾಮದ ಬಗೆಗೆ ಬರೆದಿದ್ದರು. ಇದು ಸಂಪ್ರದಾಯವಾದಿಗಳಲ್ಲಿ ಎಷ್ಟೊಂದು ಕೆರಳಿಸಿತ್ತೆಂದರೆ ಈ ಪುಸ್ತಕವು ಇಂಡಿಯಾದಲ್ಲಿ ಮಾತ್ರವಲ್ಲ ದಕ್ಷಿಣ ಏಷ್ಯಾದಲ್ಲಿಯೂ ನಿಷೇದಿತಗೊಂಡಿತು. ಇವರನ್ನು ಕೋರ್ಟಗೆ ಸಹ ಎಳೆಯಲಾಯಿತು. 40ರ ದಶಕದಲ್ಲಿ ಈ 30ರ ಹರೆಯದ “ಚುಗ್ತಾಯಿ” ಕ್ಷಮೆ ಕೋರಲಿಲ್ಲ. ತಾವು ಬರೆದದ್ದನ್ನು ಸಮರ್ಥಿಸಿಕೊಂಡರು. ವಿಚಾರಣೆಯಲ್ಲಿ ಗೆಲವು ಸಾಧಿಸಿದರು. ಆದರೆ ಚುಗ್ತಾಯಿಯ ಸ್ತ್ರೀವಾದಿ ನೆಲೆಯ ಬಂಡಾಯ ನಮ್ಮ ಕಾಲದ ಲೇಖಕಿ “ತಸ್ಲೀಮ” ಅವರ ಬಂಡಾಯಕ್ಕಿಂತಲೂ ಭಿನ್ನವಾದದ್ದು. “ಇಸ್ಮತ್ ಚುಗ್ತಾಯಿ” ಅವರ ಬಂಡಾಯ ಅಪಾರ ತಿಳುವಳಿಕೆ, ಭದ್ರ ಬುನಾದಿ ಮತ್ತು ಕ್ರಿಯಾಶೀಲತೆಯಿಂದ ಕೂಡಿತ್ತು. ಇವರ ಇನ್ನೊಂದು ಕಥೆ “ಪವಿತ್ರ ಕರ್ತವ್ಯ”ದಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಯುವಕನೊಂದಿಗೆ ಓಡಿ ಹೋಗಿ ಮದುವೆಯಾಗುವ ಹಾಗೂ ತದ ನಂತರದ ವಿದ್ಯಾಮಾನಗಳ ಸುತ್ತ ಹೆಣೆಯಲ್ಪಟ್ಟದ್ದು. ಇದು “ಚುಗ್ತಾಯಿ”ಯವರ ಉತ್ತಮ ಕಥೆಗಳಲ್ಲೊಂದು. ಪಂಜಾಬ್ ಸಾಹಿತ್ಯದ ಮೊಟ್ಟ ಮೊದಲ ಆಧುನಿಕ ಲೇಖಕಿಯೆಂದು ಹೆಸರು ಪಡೆದ “ಅಮೃತಾ ಪ್ರೀತಮ್” ತನ್ನ ವೈಯುಕ್ತಿಕ ಜೀವನದ ವಿಫಲ ದಾಂಪತ್ಯವನ್ನು ಆಧರಿಸಿ ಅನೇಕ ಕಥೆಗಳನ್ನು ಬರೆದರು. ಆದರೆ ಅ ಕಥೆಗಳು ಎಂದೂ ಸ್ವಮರುಕದ, ಎಲ್ಲವನ್ನೂ ಅಬ್ಬರವಾಗಿ ಕೂಗಿ ಚೀರಿಕೊಳ್ಳುವ ಗುಣಗಳನ್ನು ಹೊಂದಿರಲಿಲ್ಲ. ಬದಲಾಗಿ ಆ ಕಥೆಗಳಲ್ಲಿ ತಣ್ಣನೆಯ ನೋವಿತ್ತು. ಈ ನೋವು ಓದುಗರಲ್ಲಿ ವಿಷಾದ ಮೂಡಿಸುತ್ತಿತ್ತು. “ಅಮೃತಾ ಪ್ರೀತಮ್” ತನ್ನ ಅನುಭವಗಳನ್ನು ಕಥೆಗಳ, ಕವನಗಳ ರೂಪದಲ್ಲಿ ಹೇಳುವಾಗ ಬಳಸುತ್ತಿದ್ದ ಅನೇಕ ರೂಪಕಗಳು ಸಂಕೀರ್ಣವಾಗಿದ್ದರೂ ತನ್ನ ಪ್ರಾಮಾಣಿಕತೆಯ ಕಾರಣದಿಂದಾಗಿಯೇ ಓದುಗರ ಪ್ರಜ್ನೆಗೆ ತಟ್ಟುತ್ತಿತ್ತು.

ಈ ಲೇಖಕಿಯ “ರಶೀದಿ ಚೀಟಿ” ಆತ್ಮಕಥೆ ಒಂದು ಮಾದರಿ ಆತ್ಮಕಥೆ. ಈಕೆಯ ಬರೆದ ನಾನು ನಾಳಿನ ತನಕ ಇರಬೇಕಾಗಿಲ್ಲ ಎನ್ನುವ ಕವನವನ್ನು ಪಂಜಾಬಿನ ಜನಪದ ಗಾಯಕರು ಹಾಡಿನ ಮೂಲಕ ಅಲ್ಲಿನ ಸಾಮಾನ್ಯ ಜನತೆಗೆ ತಲುಪಿಸಿದ್ದರು. ದೇಶ ವಿಭಜನೆಯ ಕಾಲದ ಘಟನೆಗಳ ಕುರಿತಾದ “ಪಿಂಜಾರ್” ಕಾದಂಬರಿ ಆ ವಿಭಜನೆ ಕಾಲದ ನೋವನ್ನು. ವಿದಾಯದ ವಿರಹವನ್ನು ಅತ್ಯಂತ ಶಕ್ತಿಶಾಲಿಯಾಗಿ ಕಟ್ಟಿಕೊಟ್ಟಿತು. ಗುಲ್ಜಾರ್ ಹೇಳುತ್ತಾರೆ ‘ಅಮೃತಾ ಪ್ರೀತಮ್‌ಜೀ ತಮ್ಮ ಪಂಜಾಬಿ ಕವನದ ಪುಟಗಳ ಮೂಲಕ ಇಡೀ 20ನೇ ಶತಮಾನವನ್ನು ಸಂಚರಿಸುತ್ತಾರೆ. ಸಿನಿಮಾ ರಂಗದಲ್ಲಿ ಪ್ರೇಮ ಗೀತೆಗಳನ್ನು ಬರೆಯುತ್ತಿದ್ದರೂ ಸಹ ಸಾಹಿರ್ “ಯೆ ಮೆಹಲೋ, ಯೆ ತಕ್ತೋ, ಯೆ ತಾಜೋಂಕಿ ದುನಿಯಾ, ಯೆ ದುನಿಯಾ ಅಗರ ಮಿಲ್ಭಿ ಜಾಯೆತೊ ಕ್ಯಾಹೆ, ಯೆ ದುನಿಯಾ ಅಗರ ಮಿಲ್ಭಿ ಜಾಯೆತೊ ಕ್ಯಾಹೆ”, ಎಂದು ಅತ್ಯಂತ ಧೀಮಂತಿಕೆಯಿಂದ ನಿರಾಕರಣೆಯ ಅರ್ಥಪೂರ್ಣ ಧ್ವನಿಯನ್ನು ತನ್ನ ಮರೆಯಲಾರದ ಸಾಹಿತ್ಯದ ಮೂಲಕ ವ್ಯಕ್ತಪಡಿಸುತ್ತಾನೆ. ಆ ಸಂದರ್ಭದಲ್ಲಿ ಇದು ಗಳಿಸುವ ಯಶಸ್ಸು ಬಲು ಶ್ರೇಷ್ಟವಾದದ್ದು. ಭೀಷ್ಮ ಸಹಾನಿಯವರು ತಮ್ಮ “ತಮಸ್” ಕಾದಂಬರಿಯಲ್ಲಿ ಎಲ್ಲಿಯೂ ಎಡಪಂಥೀಯ ಧೋರಣೆಗಳನ್ನು ತುರುಕುವುದಿಲ್ಲ. ಬದಲಾಗಿ ಈ ರಾಜಕೀಯ ಕಾದಂಬರಿಯಲ್ಲಿ ನೇರವಾಗಿ ಸ್ವಾಂತ್ರ್ಯಪೂರ್ವದ ರಾಷ್ಟ್ರೀಯವಾದಿ ಚಳವಳಿಗಳ ಧೋರಣೆಗಳು ಮತ್ತು ಆ ಕಾಲಘಟ್ಟದ ಒಟ್ಟೂ ವಿದ್ಯಾಮಾನಗಳನ್ನು ಅತ್ಯಂತ ಸ್ಥಿತಪ್ರಜ್ಞೆಯಿಂದ, ಮಾನವತಾವಾದಿ ಲೇಖಕನ ಜೀವಂತಿಕೆಯ ನೆಲೆಯಿಂದ ಕಟ್ಟಿಕೊಡುತ್ತಾರೆ. ಮತೀಯವಾದಿ ಆರೆಸಸ್ ಕೋಮುಗಲಭೆಗಳನ್ನು ಹುಟ್ಟು ಹಾಕುವ ದೃಶ್ಯಗಳನ್ನು ನಿರೂಪಿಸುವ ಸಂದರ್ಭದಲ್ಲೂ ಸಹ ರೋಚಕತೆಗೆ ಬಲಿಯಾಗುವುದಿಲ್ಲ.

ಭಾರತದ ವಿಭಜನೆಯ ಸಂದರ್ಭದಲ್ಲಿ ಮಹಿಳೆಯರು ಬಲತ್ಕಾರವಾಗಿ ಅಪಹರಿಸಲ್ಲಡುತ್ತಿದ್ದರು. ಅನೇಕ ತಿಂಗಳುಗಳ ನಂತರ ಎರಡೂ ರಾಷ್ಟ್ರಗಳು ಅಪಹರಣಗೊಂಡ ಮಹಿಳೆಯರನ್ನು ಬದಲಾಯಿಕೊಳ್ಳುವ ಆ ಮೂಲಕ ಈ ಮಹಿಳೆಯರನ್ನು ತಮ್ಮ ತಮ್ಮ ಗೂಡಿಗೆ ಮರಳಿ ಹೋಗುವ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದ್ದರು. ಆದರೆ ಈ ಅಮಾನವೀಯ ಪ್ರಕ್ರಿಯೆಯಲ್ಲಿ ಮಹಿಳೆ ವೈಯುಕ್ತಿಕವಾಗಿ ಅನುಭವಿಸುವ ಅವಮಾನಗಳನ್ನು, ನೋವುಗಳನ್ನು ರಾಜೇಂದ್ರಸಿಂಗ್ ಬೇಡಿಯವರು ತಮ್ಮ ಕಥೆ “ಲಾಜವಂತಿ”ಯಲ್ಲಿ ಎಲ್ಲಿಯೂ ರೋಚಕತೆಗೆ ಬಲಿಯಾಗದೆ ಶಕ್ತಿಶಾಲಿಯಾಗಿ ನಿರೂಪಿಸುತ್ತಾರೆ. ಕಡೆಗೆ ಓದುಗನಲ್ಲಿ ಉಳಿಯುವುದು ತೀವ್ರ ವಿಷಾದ ಮತ್ತು ಪಾಪ ಪ್ರಜ್ಞೆ. ಇದು ಮಂಟೋ ಕಥೆಗಳ ಸಂದರ್ಭದಲ್ಲಿಯೂ ಅಷ್ಟೇ ನಿಜ. ಈ ಸಾದತ್ ಮಂಟೋನ ಕಥೆಗಳು ಮನುಕುಲದ ದುರಂತತೆಯನ್ನು ಯಶಸ್ವಿಯಾಗಿ ದಾಖಲಿಸುತ್ತವೆ. 1932 ರಲ್ಲಿ ಅಹ್ಮದ್ ಅಲಿ ಮತ್ತು ಸಾಜ್ಜದ್ ಜಾಹೀರ್, ಮಹಮ್ಮದ್ ಜಫರ್, ರಶೀದ್ ಜಹಾನ್ ಒಟ್ಟಾಗಿ ಮೊಟ್ಟಮೊದಲ ಬಾರಿಗೆ ಸಂಪಾದಿಸುವ “ಅಂಗಾರೆ” ಕಥಾ ಸಂಕಲನದಲ್ಲಿ ಸರಳವಾಗಿ ಆದರೆ ಅರ್ಥಗರ್ಭಿತವಾಗಿ ತನ್ನ ಬಂಡಾಯವನ್ನು ಹುಲ್ಲಿನ ಗರುಕೆಯಂತೆ ಮೂಡಿಸುತ್ತಾರೆ. ಇಲ್ಲಿನ ರಾಜಕೀಯ ರ್‍ಯಾಡಿಕಲ್‌ತನವು ಯುರೋಪ್ ಮಾದರಿಯಿಂದ ಪ್ರೇರಣೆಗೊಂಡಿತ್ತು. ಆದರೆ ಈ ತಣ್ಣನೆಯ, ತೀಕ್ಷ್ಣ ಬಂಡಾಯ ಅಂದಿನ ಭಾರತ ಸರ್ಕಾರವನ್ನು ಕೆರಳಿಸುತ್ತದೆ. ಪ್ರಕಟಣೆಗೊಂಡು ಕೆಲವು ತಿಂಗಳುಗಳೊಳಗೆ  “ಅಂಗಾರೆ” ಪುಸ್ತಕವನ್ನು ಸರ್ಕಾರ ನಿಷೇಧಿಸುತ್ತದೆ. ಆದರೆ ಮೇಲಿನ ಲೇಖಕರು ಒತ್ತಡಕ್ಕೆ ಮಣಿಯದೆ “ಡಿಫೆನ್ಸ್ ಆಫ್ ಅಂಗಾರೆ” ಎನ್ನುವ ಹೇಳಿಕೆಯ ಸಂದರ್ಭದಲ್ಲಿ ಈ ಪ್ರಗತಿಪರ ಲೇಖಕರ ಸಂಘಟನೆ ಮೈದಾಳುತ್ತದೆ. ಈ ಪ್ರಗತಿಪರ ಲೇಖಕರು ಉರ್ದು ಸಾಹಿತ್ಯಕ್ಕೆ ನೀಡಿದ ಹೊಳಪು, ತಾಜಾತನ, ಸಿನಿಕತೆ ಮತ್ತು, ನೋವಿನ ಲೇಪನದ ತೀಕ್ಣ್ಷತೆ ಮತ್ತು ನೇರವಾದ ಪ್ರತಿಭಟನೆ ಎಲ್ಲವನ್ನೂ ಒಳಗೊಂಡ Intellectual touch  ಎಷ್ಟು ಶ್ರೇಷ್ಟವಾಗಿತ್ತೆಂದರೆ 75 ವರ್ಷಗಳ ನಂತರವೂ ಅದು ಇಂದಿಗೂ ತನ್ನ ಜೀವಂತಿಕೆಯನ್ನು ಕಳೆದುಕೊಂಡಿಲ್ಲ. ಕತ್ತಲ ಗರ್ಭವನ್ನು ಸೀಳಿ ಬೆಳಕಿನೆಡೆಗೆ ಪ್ರಯಾಣವನ್ನು ಬೆಳೆಸುವ ತಾತ್ವಿಕ ಮಾರ್ಗವನ್ನು ಈ ಲೇಖಕರು ನಂಬಿದ್ದರು.

ಈ ಕಾರಣಕ್ಕಾಗಿಯೇ ಇವರ ಕಥೆಗಳಲ್ಲಿ ಕಾದಂಬರಿಗಳಲ್ಲಿ, ಕವಿತೆಗಳಲ್ಲಿ, ಗಝಲ್‌ಗಳಲ್ಲಿ ಕತ್ತಲಲ್ಲಿರುವ ಹೆಣ್ಣು ಸದಾ ಕಾಲ ಬಿಡುಗಡೆಯ ಪ್ರವಾಹದಲ್ಲಿ ತನ್ನನ್ನು ತೊಡಗಿಸಿಕೊಂಡಿರುತ್ತಾಳೆ. ತುಳಿತಕ್ಕೊಳಗಾದ ರೈತ ತನ್ನ ಆತ್ಮಾಭಿಮಾನವನ್ನು ಬಿಟ್ಟುಕೊಡುವುದಿಲ್ಲ. 85 ವರ್ಷಗಳ ಹಿಂದೆ ಇಂಡಿಯಾದ ಉರ್ದು ಲೇಖಕರು ತಮ್ಮ ಸಮಾಜದ ರಾಜಕೀಯ ಸುಳಿಯೊಳಗೆ ಸಿಲುಕಿದ್ದರು. ಇದರಿಂದ ಬಿಡುಗಡೆಗೆ ಅವರು ಕಂಡುಕೊಂಡಿದ್ದು ಒಂದೇ ದಾರಿ ಅದೇ ಸಾಮಾಜಿಕ ವಿಮರ್ಶೆಯನ್ನು ಒಳಗೊಂಡ ವಾಸ್ತವವಾದಿ ಮಾರ್ಗ. ಈ ವಾಸ್ತವಾದಿವಾದಿ ಮಾರ್ಗವನ್ನು ಆ ಕಾಲಘಟ್ಟದ ಉರ್ದು ಲೇಖಕರು ಸಾಮಾಜಿಕ ಸಂಕೋಲೆಗಳಿಂದ ಬಿಡುಗಡೆಗೆ ರಹದಾರಿಯಾಗಿಯೂ ರೂಪಿಸಿಕೊಂಡರು. ಈ ಸಂದರ್ಭದಲ್ಲಿ ಸೋವಿಯತ್ ಯೂನಿಯನ್‌ನಲ್ಲಿ ಜರುಗಿದ ರಷ್ಯಾ ಕ್ರಾಂತಿ ಸಹ ಇವರ ಜಾಗೃತಾವಸ್ಥೆಯೊಳಗೆ ಬೇರು ಬಿಟ್ಟಿತು.ಈ ಉರ್ದು ಲೇಖಕರು 19ನೇ ಶತಮಾನದ ಮಿರ್ಜಾ ಗಾಲಿಬನಿಂದ ಅನುಭಾವವಾದದ ರೋಮ್ಯಾಂಟಿಸ್ಮ್‌ನ್ನು, 20ನೇ ಶತಮಾನದ ಆರಂಭದ ಇಕ್ಬಾಲ್ ಮತ್ತು ಪ್ರೇಮಚಂದ್ರಿಂದ ವಸಾಹತುಶಾಹೀ ವಿರೋದಿ, ಫ್ಯೂಡಲ್ ವಿರೋಧಿ, ಬಂಡವಾಳಶಾಹಿ ವಿರೋಧಿ ಸಾಮಾಜಿಕ ಜವಾಬ್ದಾರಿಯ ಪ್ರೇರಣೆಗಳನ್ನು ಪಡೆದುಕೊಂಡೇ ಈ ಪ್ರಗತಿಪರ ಲೇಖಕರ ಸಂಘಟನೆಯನ್ನು ರೂಪಿಸಿದರು. 40 ಮತ್ತು 50ನೇ ದಶಕಗಳಲ್ಲಿ ಅತ್ಯಂತ ಶ್ರೇಷ್ಟವೆನ್ನುಬಹುದಾದ ಸಾಹಿತ್ಯವನ್ನು ರಚಿಸಿದರು. ಆದರೆ ಇವರಲ್ಲೂ ಅನೇಕ ಬಗೆಯ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ತಲೆದೋರಿದವು. 50ರ ದಶಕದಲ್ಲಿ ಟಿಸಿಲೊಡೆದ ಈ ವಿಭಿನ್ನತೆಯ ವೈಚಾರಿಕತೆಯ ಜಗಳಗಳು ಅವರ ಜೀವಿತ ಕಾಲದವರೆಗೂ ಮುಂದುವರೆಯಿತು. ಒಂದು ಕಡೆ ಸಜ್ಜಿದ್ ಜಹೀರ್, ಅಲಿ ಸರ್ದಾರ್ ಜಫ್ರಿರವರಂತಹ ಸಿದ್ದಾಂತವಾದಿಗಳಿದ್ದರೆ ಮತ್ತೊಂದು ಕಡೆ ಇಸ್ಮತ್ ಚುಗ್ತಾಯಿ, ಮಂಟೋ (ನಂತರ ಇವರು ಪಾಕೀಸ್ತಾನಕ್ಕೆ ಹೋಗಿ ನೆಲೆಸಿದರು), ಇಫ್ರತ್, ಅಕ್ತರ್ ಹುಸೇನ್‌ರವರಂತಹ ಸೂಕ್ಷ್ಮವಾದಿ ಸಾಹಿತಿಗಳಿದ್ದರು. ಇವರ ನಡುವಿನ ಭಿನ್ನಾಭಿಪ್ರಯಗಳು ಅನೇಕ ಬಾರಿ ಸಾಹಿತ್ಯದ ಮಟ್ಟಿಗೆ, ಸೈದ್ಧಾಂತಿಕ ಬೇಧೀಯತೆಗೆ ಸೀಮಿತವಾಗಿದ್ದರೂ ಕೆಲವೊಮ್ಮೆ ವೈಯುಕ್ತಿಕ ಮಟ್ಟಕ್ಕೂ ಇಳಿದು ತೀವ್ರವಾದ ಆರೋಪ ಪ್ರತ್ಯಾರೋಪಗಳು ವ್ಯಕ್ತವಾಗುತ್ತಿದ್ದವು.

ಈ ಪ್ರಗತಿಶೀಲ ಚಳವಳಿಗೆ ನಾಂದಿ ಹಾಡಿದ ಅಹ್ಮದ ಅಲಿ ಅನೇಕ ಬಾರಿ ತಟಸ್ಥ ಧೋರಣೆಯನ್ನು ವ್ಯಕ್ತಪಡಿಸುತ್ತಿದ್ದರು. ಆದರೂ ನಮ್ಮ ಎಲ್ಲ ಪ್ರಗತಿಪರ ಸಂಘಟನೆಗಳಿಗೂ ಆದಂತೆ ಈ ಪ್ರಗತಿಶೀಲ ಸಂಘಟನೆಯು ಸಹ ಕೊನೆ ಕೊನೆಗೆ ಆದರ್ಶಗಳು ಮತ್ತು ಬದ್ಧತೆಗಳು ಒಂದೇ ಆಗಿದ್ದರೂ ವೈಯುಕ್ತಿಕ ಹಿತಾಸಕ್ತಿಗಳೇ ಮೇಲುಗೈ ಸಾಧಿಸಿದ್ದುದರ ಪರಿಣಾಮವಾಗಿ ಅನೇಕ ಬಾರಿ ವಿಘಟನೆಗಳಿಗೆ ಒಳಗಾಯಿತು. 70ರ ದಶಕದ ವೇಳೆಗೆ ಸಹಜವಾಗಿಯೇ ಹಿನ್ನೆಲೆಗೆ ಸರಿದ ಈ ಸಾಹಿತ್ಯ ಚಳವಳಿ ನಂತರ ಅವಜ್ನೆಗೆ ಈಡಾಗಿದೆ. ಇಂದು ತನ್ನ ಮೂಲ ಹೆಸರಿನೊಂದಿಗೇ ಸಂಘಟನೆ ನಡೆಸುತ್ತಿರುವ ಈ ಪ್ರಗತಿಪರ ಲೇಖಕರ ಸಂಘಟನೆಗೆ ಇಂದು ಆ 40 ಹಾಗೂ 50ರ ದಶಕಗಳ ರೋಮ್ಯಾಂಟಿಕ್ ಖದರ್ ಇಲ್ಲ, ಆ ಮುಗ್ಧ ಆದರ್ಶಗಳಿಲ್ಲ, ಆ ಇಸ್ಮತ್ ಚುಗ್ತಾಯಿ, ಮಂಟೋ, ಅಹ್ಮದ್ ಅಲಿರಂತಹವರ ವಿಕ್ಷಿಪ್ತತೆಯ, ದಿಟ್ಟತೆಯ ವ್ಯಗ್ರ ವ್ಯಕ್ತಿತ್ವವೇ ಇಲ್ಲ, ಕೆ.ಎ.ಅಬ್ಬಾಸರ ಸರಳತೆ ಇಲ್ಲ, ಅಮೃತಾ ಪ್ರೀತಂಳ ಕ್ರಿಯಾಶೀಲ ದಿಟ್ಟತೆಯ ರೋಮ್ಯಾಂಟಿಕ್ ಮಾದರಿ ಇಲ್ಲವೇ ಇಲ್ಲ. ಆದರ್ಶವನ್ನಾಧರಿಸಿದ ಸಾಹಿತ್ಯಕ್ಕೆ, ಎಡಪಂಥೀಯ ಬದ್ಧತೆಯನ್ನಾಧರಿಸಿದ ಸಾಹಿತ್ಯಕ್ಕೆ ತನ್ನದೇ ಬಗೆಯಲ್ಲಿ ಮಧುರ ರೋಮಾಂಚನವನ್ನು ತಂದು ಕೊಟ್ಟ ಈ ಲೇಖಕರು ಮತ್ತು ಲೇಖಕಿಯರ ಬಿಟ್ಟನೆಂದರೂ ಬಿಡದ ನೆನಪುಗಳು ಮಾತ್ರ ನಮ್ಮನ್ನು ಬಿಟ್ಟೂ ಬಿಡದೆ ಕಾಡುತ್ತದೆ.

ಆದರೆ ಈ ಸಾಹಿತ್ಯ ಚಳವಳಿಯ ಸೈದ್ಧಾಂತಿಕ ಧೋರಣೆಯನ್ನು ಅನುಸರಿಸಿಯೇ ನಮ್ಮಲ್ಲಿ ಹುಟ್ಟಿಕೊಂಡ ಪ್ರಗತಿಶೀಲ ಚಳವಳಿಯ ಲೇಖಕರು 40 ರಿಂದ 60ರ ದಶಕಗಳವರೆಗೂ ವಿಫುಲವಾದ ಸಾಹಿತ್ಯವನ್ನು ರಚಿಸಿದರು. ಮೇಲಿನ ಉರ್ದು ಹಾಗೂ ಹಿಂದಿ ಲೇಖಕರು ತಮ್ಮ ಹಿಂದಿನ ತಲೆಮಾರಿನ ಜಡತ್ವವನ್ನು ಟೀಕಿಸಿದಂತೆಯೇ ನಮ್ಮ ಪ್ರಗತಿಶೀಲ ಸಾಹಿತಿಗಳು ನವೋದಯದವರನ್ನು ಮಡಿವಂತಿಕೆಯ, ಕಂದಾಚಾರಿ ಸಾಹಿತಿಗಳೆಂದು ದೂಷಿಸಿಸಿದರು. ಆದರೆ ಮರಳಿ ಕಟ್ಟುವ ಹಾದಿಯಲ್ಲಿ ಉರ್ದು ಹಾಗೂ ಹಿಂದೀ ಭಾಷೆಯ ಪ್ರಗತಿಶೀಲ ಲೇಖಕರು ಸಾಧಿಸಿದ ಯಶಸ್ಸನ್ನು ನಮ್ಮ ಪ್ರಗತಿಶೀಲ ಲೇಖಕರು ಸಾಧಿಸಲಾಗಲಿಲ್ಲ. ಇದಕ್ಕೆ ಹಲವಾರು ಕಾರಣಗಳಿರಬಹುದು. ಬಲು ಮುಖ್ಯ ಕಾರಣವೆಂದರೆ ನಮ್ಮಲ್ಲಿನ ಹಿಂದೂ ಧರ್ಮದ ಅಪಾಯಕಾರಿ ಧೋರಣೆಗಳು ಮತ್ತು ವರ್ಣಾಶ್ರಮದ ಸಂಕೀರ್ಣ ನೆಲೆಗಳು ನಮ್ಮ ಪ್ರಗತಿಶೀಲ ಸಾಹಿತಿಗಳ ಗ್ರಹಿಕೆಗೆ ಆಳವಾಗಿ ತಟ್ಟಲೇ ಇಲ್ಲ. ಹೀಗಾಗಿಯೇ ಇವರು ಮಾರ್ಕ್ಸವಾದವನ್ನು ತೀರಾ ತೆಳುಮಟ್ಟದಲ್ಲಿ ಗ್ರಹಿಸಿ ಈ ಗ್ರಹಿಕೆಯನ್ನೂ ಸಹ ಸಾಹಿತ್ಯದ ಮಾದರಿಗೆ ಒಗ್ಗಿಸಿಕೊಳ್ಳುವಾಗ ಎಡವಿದರು. ಇದರ ಪರಿಣಾಮವಾಗಿ ಅನೇಕ ಬಾರಿ ತೀರ ತೆಳುವಾದ ಕೃತಿಗಳು ರಚಿತವಾದವು. ಇದರ ವಿಮರ್ಶೆಗೆ ಇದು ತಕ್ಕುದಾದ ವೇದಿಕೆಯಲ್ಲ. ಆದರೆ ಬಸವರಾಜ ಕಟ್ಟೀಮನಿಯವರ ಜರತಾರೀ ಜಗದ್ಗುರು, ಜ್ವಾಲಾಮುಖಿ, ನಿರಂಜನರ ಚಿರಸ್ಮರಣೆ, ತರಾಸು ಅವರ ಚಂದವಳ್ಳಿಯ ತೋಟ ಮುಂತಾದ ಕಾದಂಬರಿಗಳು ಇಂದಿಗೂ ತಮ್ಮ ಶ್ರೇಷ್ಟತೆಯನ್ನು ಉಳಿಸಿಕೊಂಡಿವೆ. ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ. ಇಂದಿಗೂ ನಮ್ಮನ್ನು ಕಾಡುತ್ತವೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಈ ಲೇಖಕರು ಕನ್ನಡದಲ್ಲಿ ಓದುವ ಬಲು ದೊಡ್ಡ ಓದುಗ ವಲಯವನ್ನು ಸೃಷ್ಟಿಸಿದರು. ಈ ಸಾಧನೆಯನ್ನು ಅಳೆಯಲು ಸಾಧ್ಯವೇ ಇಲ್ಲ. ಅನಕೃರವರು ತಮ್ಮ ಸೋಲರಿಯದ ಕನ್ನಡತನದ ಮೂಲಕ ಹುಟ್ಟಿಹಾಕಿದ ಕನ್ನಡ ಚಳವಳಿಯನ್ನು ಬೆಲೆ ಕಟ್ಟಲಾಗುವುದೇ ಇಲ್ಲ. ಅನಕೃ ಬಾರಿಸಿದ ಕನ್ನಡದ ಡಿಂಡಿಮದ ಆದರ್ಶವೇ ಇಂದಿಗೂ ಪ್ರಜ್ಞಾವಂತರನ್ನು ಪೊರೆಯುತ್ತಿರುವುದು. ತಮ್ಮ ಇಳಿ ವಯಸ್ಸಿನಲ್ಲಿಯೂ ನಿರಂಜನರು ಸಾಹಿತ್ಯದ ಪ್ರೀತಿಯನ್ನು ಬಿಟ್ಟುಕೊಡದೆ ವಿಶ್ವಕಥಾ ಕೋಶ ಮಾಲಿಕೆಯಲ್ಲಿ ಯುರೋಪಿನ, ಪಶ್ಚಿಮ, ಏಷ್ಯಾ, ಆಫ್ರಿಕ ರಾಷ್ಟ್ರಗಳ ಕಥೆಗಳನ್ನು ಕನ್ನಡಕ್ಕೆ ಸಂಪಾದಿಸಿ ಕೊಟ್ಟರು. 80ರ ದಶಕದಲ್ಲಿ ನಮ್ಮಂತಹ ಲಕ್ಷಾಂತರ ಜನಸಾಮಾನ್ಯರಲ್ಲಿ ಜಾಗತಿಕ ಸಾಹಿತ್ಯದ ಪರಿಚಯ ಮಾಡಿಸಿದ್ದು ಬಲು ದೊಡ್ಡ ಕನ್ನಡಮ್ಮನ ಸೇವೆ. ಈ ಪ್ರಗತಿಶೀಲ ಲೇಖಕರ ಈ ಕನ್ನಡತನ ದಶಕಗಳು ಕಳೆದರೂ ನಮ್ಮ ಗ್ರಹಿಕೆಯಿಂದ ಸ್ವಲ್ಪವೂ ಪಲ್ಲಟಗೊಂಡಿಲ್ಲ.